Tuesday, February 7, 2012

ಗೋಪಾಲಕೃಷ್ಣ ಪೈಯವರ ಕಥಾಸಾಹಿತ್ಯದ ಚಿಂತನ ಮಂಥನ

ಸಾಹಿತ್ಯದಿಂದ ಏನು ಸಿಗುತ್ತದೆ? ನಾವೇಕೆ ಸಾಹಿತ್ಯ ಓದಬೇಕು, ಯಾಕೆ ಸಾಹಿತಿಗಳು ಬರೆಯುತ್ತಾರೆ ಎನ್ನುವ ಮೂಲಭೂತ ಪ್ರಶ್ನೆಯೊಂದಿಗೇ ಆರಂಭಿಸಬಹುದು. ಯಾಕೆಂದರೆ, ಗೋಪಾಲಕೃಷ್ಣ ಪೈಯವರ ಒಂದು ಕತೆ, ‘ಈ ಬೆರಳ ಗುರುತು’ ಈ ಬಗ್ಗೇನೆ ಇದೆ. ಅದೇನಾಯಿತು ಅಂದರೆ, ನಾವು ಈ ಭೂಮಿಗೆ ಬಂದುಬಿಟ್ಟಿದ್ದೇವೆ, ಯಾಕೆ ಬಂದಿದ್ದೇವೆ ನಮಗೆ ಗೊತ್ತಿಲ್ಲ, ಸಾಯುತ್ತೇವೆ ಅದು ಗೊತ್ತು ಆದರೆ ಸತ್ತಮೇಲೆ ಏನಾಗುತ್ತೇವೋ ಅದೂ ಗೊತ್ತಿಲ್ಲ. ಮತ್ತೆ ಹೇಗೆ ಬಂದಿದ್ದೇವೆ ಎಂದರೆ, ಈ ಜಗತ್ತಿನ ನಾಟಕರಂಗದಲ್ಲಿ ನಮ್ಮ ಪಾತ್ರವೇನು, ಮಹತ್ವವೇನು, ಅವಧಿ ಎಷ್ಟು ಎನ್ನುವ ಯಾವ ಪ್ರಶ್ನೆಗೂ ಉತ್ತರ ಗೊತ್ತಿಲ್ಲದ ನಟರಾಗಿ ಬಂದಿದ್ದೇವೆ. ಅದೆಲ್ಲ ಹೋಗಲಿ ಎಂದರೆ, ಈ ನಟನ ಕೈಲಿ ಒಂದು ಸ್ಕ್ರಿಪ್ಟ್ ಕೂಡಾ ಇಲ್ಲ! ಕತ್ತಲೆ ದಾರಿ ದೂರ ಎನ್ನೋ ತರ ನಮ್ಮ ಪರಿಸ್ಥಿತಿ. ಹೇಗೆ ಬದುಕಬೇಕು, ಹೇಗೆ ಬದುಕಿದರೆ ಒಳ್ಳೆಯದು ಇತ್ಯಾದಿ ಪ್ರಶ್ನೆಗಳೆಲ್ಲಾ ಇವೆ ನಮ್ಮ ಮುಂದೆ. ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ವೇದ, ಉಪನಿಷತ್ತು, ದರ್ಶನಗಳು, ಗೀತೆ, ಪುರಾಣಗಳು, ಮಹಾಭಾರತ-ರಾಮಾಯಣ ಕೂಡಾ ಹೇಳುತ್ತಾ ಇರುವುದು ಅಥವಾ ಹುಡುಕುತ್ತಾ ಇರುವುದು ಬದುಕುವ ಶ್ರೇಷ್ಠವಾದ ಒಂದು ವಿಧಾನ ಅನ್ನೋದು ಒಂದಿದ್ದರೆ ಅದು ಯಾವುದು ಎನ್ನೋದನ್ನೇ. ಚಿತ್ತಾಲರು ಹೇಳುವ ಹಾಗೆ ಮನುಷ್ಯ ಹುಟ್ಟುತ್ತಾ ಮನುಷ್ಯನಾಗಿ ಹುಟ್ಟಿಲ್ಲ. ಅವನು ಮನುಷ್ಯನಾಗಲು ಹುಟ್ಟಿರುತ್ತಾನಷ್ಟೇ! ಹೇಗೆ ಮನುಷ್ಯ ಸೃಷ್ಟಿಸಿಕೊಂಡ ದೇವರು ಎನ್ನುವ ಪರಿಕಲ್ಪನೆ ಮನುಷ್ಯನಿಗೆ ಒಂದು ಮಾನದಂಡವೋ ಅಥವಾ ದೇವರು ಸೃಷ್ಟಿಸಿದ ಮನುಷ್ಯನೇ ದೇವರಿಗೆ ಒಂದು ಮಾನದಂಡವೋ ಹೇಳುವುದು ಕಷ್ಟವೋ ಹಾಗೆಯೇ ಇದು. ಸಾಹಿತ್ಯ ಈ ಉದ್ದೇಶವನ್ನು ಕುರಿತು ಹೊರಟಿದ್ದು, ಅದಕ್ಕಾಗಿ ಅದರ ರಚನೆ ಆಗ್ತಾ ಇರುತ್ತೆ ಮತ್ತು ಅದಕ್ಕಾಗಿ ನಾವು ಅದನ್ನ ಓದುತ್ತಾ ಇರುತ್ತೇವೆ. ಗೋಪಾಲಕೃಷ್ಣ ಪೈಯವರ ಕತೆಯಲ್ಲಿ ಬರುವ ಕೊನೆಯ ಪಾರಾ ಹೀಗಿದೆ:
 
‘ಶ್ರೀಧರನಿಗೆ ನಗು ಬಂತು. ಪೆನ್ನು ಕೆಳಗಿಟ್ಟು ಎಣ್ಣೆಯ ಪಾತ್ರೆಯಲ್ಲಿ ಐದು ಬೆರಳುಗಳೂ ಮುಳುಗುವಂತೆ ಕೈ ಹಾಕಿದ. ಕಡ್ಡಿಗೀರಿ ಬೆರಳುಗಳಿಗೆ ಬೆಂಕಿ ಹಚ್ಚಿದ. ಬೆಳಕಿನ ದೊಂದಿ ಬೆರಳುಗಳಿಂದ ಭಗಭಗನೆ ಉರಿಯತೊಡಗಿತು. ಚೈನಾ ಗಾರ್ಡನ್‌ನಲ್ಲಿ ಚಿಕನ್ ಕತ್ತರಿಸಿದ ಬೆರಳುಗಳು. ಗಾಂಧಿಬಜಾರಿನ ಇಕ್ಕಟ್ಟಿನಲ್ಲಿ ಬಾಳೆಯ ಗಿಡ ಎತ್ತಿ ಹಿಡಿದ ಬೆರಳುಗಳು, ಭಾಷಣಕ್ಕೆ ನಿಂತಾಗ V ಆಕಾರದಲ್ಲಿ ಹಿಡಿದ ಬೆರಳುಗಳು - ಮಹಾಲಿಂಗೇಶ್ವರ ದೇವರ ಮುಖಕ್ಕೆ ಹಿಡಿದ ದೀವಟಿಗೆಯಂತೆ ಉರಿಯುತ್ತಿರುವಾಗ ಹೋಗಿ ಅಪ್ಪನ ಎದುರು ನಿಂತ. ಅಪ್ಪಯ್ಯ, ನೋಡಿಲ್ಲ್ಲಿ, ಈ ಬೆರಳುಗಳಿಂದ ಹೊರಡುವ ಬೆಳಕನ್ನು, ಅದು ಬೆಳಗುವ ಆರತಿಯನ್ನು ಅಂತ ನಗುತ್ತಾ ಹೇಳಿದ.’
 
ಹೇಳಿದ್ದು ನಗುತ್ತಾ. ಸುಟ್ಟುಕೊಂಡು ಹೇಳಿದ್ದು. ಸುಡುತ್ತಿರುವ ಬೆರಳುಗಳಿಗೆ ಇತಿಹಾಸವಿದೆ, ಅನುಭವವಿದೆ, ಕತೆಯಿದೆ. ಇದು ಸಾಹಿತ್ಯ ಮತ್ತು ಸಾಹಿತ್ಯದಿಂದ ಮಾತ್ರ ಸಾಧ್ಯ ಎನ್ನುವುದು ಈ ಕಾರಣಕ್ಕೆ.
 
ಮನುಷ್ಯನ ಸಂವೇದನೆಗಳು ನಿಜವಾದವು. ಹೇಗೆ ನಿಜ ಎಂದರೆ ಸಾರ್ವತ್ರಿಕವಾಗಿ ನಿಜ. ಇದನ್ನ ನೀವು ಆತ್ಮ ಪರಮಾತ್ಮ ಪರಿಕಲ್ಪನೆಯನ್ನ ಮನಸ್ಸಿನಲ್ಲಿಟ್ಟುಕೊಂಡು ನೋಡಿದ್ರೂನು ನಿಜ. ಆತ್ಮ ಅನ್ನೋದು ಪರಮ ಆತ್ಮ ಎನ್ನುವ ಒಂದು ಆತ್ಮಗಳ ಮೊತ್ತದಿಂದ ಛಿದ್ರಗೊಂಡು ಒಂಟಿಯಾದ ವಸ್ತು ಮತ್ತು ಅದು ಪುನಃ ಪರಮ ಆತ್ಮವನ್ನು ಸೇರಿಕೊಂಡಾಗಲೇ ಇಡಿಯಾಗುತ್ತೆ ಎನ್ನುವ ತತ್ವ, ಇಲ್ಲಿ ಬಹಳಷ್ಟು ಮಂದಿ ಹಿರಿಯರೇ ಇದ್ದೀರಿ, ನನ್ನ ಮಾತು ಸ್ವಲ್ಪ ಆ ನಿಟ್ಟಿನಲ್ಲಿ ಹರಿದ್ರೆ ಕ್ಷಮಿಸಿ. ನಾನು ಕಿರಿಯರೇ ಹೆಚ್ಚಿರಬಹುದು ಎನ್ನುವ ನಿರೀಕ್ಷೆಯಲ್ಲಿ ತಯಾರಾಗಿ ಬಂದಿದ್ದೆ. ಮನುಷ್ಯನ ಆಳದ ಒಂಟಿತನ, ಒಂದಿಷ್ಟು ಪ್ರೀತಿಗಾಗಿ ಅವನ ನಿರಂತರವಾದ ಚಡಪಡಿಕೆ ಎಲ್ಲರಿಗೂ ನಿಜವಾದದ್ದು ಎನ್ನುವುದು ಗುಟ್ಟು. ಮಹಾಲಿಂಗರು ಹೇಳುವ ಹಾಗೆ ಈ ಒಂಟಿತನ ಎನ್ನುವುದು ನವ್ಯರ ಕೊಡುಗೆ ಏನಲ್ಲ. ಒಂಟಿತನ ಎನ್ನುವುದು ಅನಾದಿಯಿಂದಲೂ ಇದ್ದಿದ್ದೇ ಮತ್ತು ಮನುಷ್ಯ ನಿಜವಾಗಿಯೂ ತನ್ನ ಆಳದಲ್ಲಿ ಯಾವತ್ತಿಗೂ ಒಂಟಿಯೇ. ಇದನ್ನ ನಾವು ಕಾಣಲು ಸೋತಿದ್ದರೆ, ಭೀಷ್ಮನ ಒಂಟಿತನವನ್ನ ಅರಿಯಲು ಸೋತಿದ್ದರೆ, ಅಹಲ್ಯೆಯ ಒಂಟಿತನವನ್ನ ಕಾಣಲು ಸೋತಿದ್ದರೆ ಅಥವಾ ಊರ್ಮಿಳೆಯ ಒಂಟಿತನವನ್ನ ಕಾಣಲು ಸೋತಿದ್ದರೆ ಅದಕ್ಕೆ ಕಾರಣವಾದದ್ದು ನವ್ಯರ ಸಾಹಿತ್ಯ ಅಷ್ಟೆ. ಆದರೆ ಕಥನದಲ್ಲಿ ನಿಮಗೆ ಸಿಗುವ ಘಟನೆಗಳು ಏನಿವೆ, ಅವು ವಾಸ್ತವ, ಕಲ್ಪನೆ, ಕನಸು, ಭ್ರಮೆ ಮತ್ತು ಆಸೆಗಳ ಕಲಸು ಮೇಲೋಗರ. ಇದು ನಿಮ್ಮದೇ ಜೀವನದಲ್ಲಿ ನಡೆದಿದ್ದೇ, ಯಥಾವತ್ ಇದೇ ನಡೆಯಿತೆ ಎನ್ನುವ ಪ್ರಶ್ನೆಯೆದುರು ಈ ಗೊಂದಲ ಏನಿದೆ ಅದನ್ನು ಸ್ವತಃ ಲೇಖಕನಾದವನು ಕೂಡಾ ಅನುಭವಿಸುತ್ತಿರುತ್ತಾನೆ. ಹಾಗಿರುತ್ತ ಆತ್ಮಾನುಗತವೇ ಕಥನವೇ ಅಥವಾ ಅದು ಕೇವಲ ವೈಯಕ್ತಿಕವಾಗಿ ಮುಖ್ಯವಾದದ್ದು ಅಷ್ಟೇಯೆ ಎನ್ನುವುದು ನಿಜವಾದ ಪ್ರಶ್ನೆ. ಪ್ರತಿಯೊಬ್ಬ ಕತೆಗಾರನ ಆಳದ ಒಂಟಿತನವನ್ನು ಮೀರುವ ಬೇರೆ ಬೇರೆ ಉಪಾಯಗಳಲ್ಲಿ ಸಂಭ್ರಮ ಇರಬಹುದು, ವಿಷಾದ ಇರಬಹುದು, ನೋವಿರಬಹುದು ಅಥವಾ ಅದ್ಭುತವಾದ ಸ್ಫೂರ್ತಿಯ ಪ್ರೀತಿಯೂ ಇರಬಹುದು. ಆದರೆ ಇದೇ ಒಬ್ಬ ಸಾಹಿತಿಯ ಬರಹಗಾರಿಕೆಯ ಛಂದಸ್ಸನ್ನು ನಿರ್ಧರಿಸುತ್ತದೆ ಎನ್ನುವುದು ಸತ್ಯ. ನಮ್ಮ ಎದುರು ಮಾಸ್ತಿಯವರು ಬರೆದ ಕತೆಗಳಿವೆ. ಯಶವಂತ ಚಿತ್ತಾಲರ ಕತೆಗಳಿವೆ. ಅನಂತಮೂರ್ತಿಯವರ ಕತೆಗಳಿವೆ. ಲಂಕೇಶ್ ಬರೆದ ಕತೆಗಳಿವೆ. ತೇಜಸ್ವಿ ಬರೆದ ಕತೆಗಳಿವೆ. ಜಯಂತ್ ಕಾಯ್ಕಿಣಿಯವರು ಬರೆದ ಕತೆಗಳು, ವಿವೇಕ್ ಶಾನಭಾಗ ಅವರ ಕತೆಗಳು, ರಾಘವೇಂದ್ರ ಪಾಟೀಲರ ಕತೆಗಳು ಎಲ್ಲ ಇವೆ. ಇನ್ನು ನೀವು ಭಾರತೀಯ ಸಾಹಿತ್ಯದತ್ತ ನೋಡಿದ್ರೆ, ಅಲ್ಲಿ ವೈಕಂ ಬಶೀರ್ ಕತೆಗಳಿವೆ, ಎಂ ಟಿ ವಾಸುದೇವನ್ ನಾಯರ್, ಭೀಷ್ಮ ಸಾಹ್ನಿ, ಅಮೃತಾಪ್ರೀತಂ, ಪ್ರೇಮ್ ಚಂದ್, ಸತ್ಯಜಿತ್ ರೇ, ಉದಯ ಪ್ರಕಾಶ್, ಮೇಘನಾ ಪೇಠೆ, ಸಾದತ್ ಹಸನ್ ಮಾಂಟೋ ಕತೆಗಳೆಲ್ಲ ಇವೆ. ವಿಶ್ವ ಸಾಹಿತ್ಯ ತಗೊಂಡ್ರೆ, ಓ ಹೆನ್ರಿ, ಆಂಟನ್ ಚೆಕಾಫ್, ಕಾಫ್ಕಾ, ಕಮೂ ಎಲ್ಲ ಬಿಡಿ, ಕ್ಯಾಥರೀನ್ ಮ್ಯಾನ್ಸ್‌ಫೀಲ್ಡ್, ಪೋರ್ಟರ್, ವರ್ಜೀನಿಯಾ ವೂಲ್ಫ್, ಮಾರ್ಕ್ವೆಜ್, ಟಾಲ್‌ಸ್ಟಾಯ್ ತರದ ಕತೆಗಾರರು ಕೊಟ್ಟ ಮಾದರಿಗಳೆಲ್ಲ ಇವೆ. ಇವನ್ನೆಲ್ಲ ಒಬ್ಬ ಕತೆಗಾರ ಓದಿಕೊಂಡು, ಅವುಗಳಿಂದ ಅಷ್ಟಿಷ್ಟು ಪಡೆದುಕೊಂಡು ತನ್ನ ಕತೆಗಾರಿಕೆಯನ್ನು ಪೋಷಿಸಿಕೊಂಡಿರುತ್ತಾನೆ. ಈ ಯಾವುದೇ ಕತೆಗಾರರ ಕತೆಗಳನ್ನ ತೆಗೆದುಕೊಂಡು ನೀವು ಓದಿದರೂ ಒಂದೆರಡು ಪುಟ ಓದೋವಷ್ಟರಲ್ಲಿ ನಿಮಗೆ ಅವು ಇಂಥಾ ಲೇಖಕರದ್ದೇ ಕತೆ ಅಂತ ಗೊತ್ತಾಗಿ ಬಿಡುತ್ತದೆ. ಇದು ಆಯಾ ಲೇಖಕರ ಛಂದಸ್ಸು, ಇದು ಅವರ ವ್ಯಕ್ತಿತ್ವಕ್ಕೆ ಸಂಬಂಧಿಸಿದ್ದು, ಅವರ ಬದುಕಿಗೆ ಸಂಬಂಧಿಸಿದ್ದು, ಅವರು ಬದುಕಿ ಬಂದ ರೀತಿಗೆ ಸಂಬಂಧಿಸಿದ್ದು ಮತ್ತು ಇದು ಅವರಿಂದ ಬೇರ್ಪಡಿಸಲಾರದ್ದು ಮತ್ತು ಅದೇ ತರ ಬೇರೆ ಯಾರೂ ತಮ್ಮದು ಅಂತ ಆರೋಪಿಸಿಕೊಳ್ಳೋದಕ್ಕೆ ಅಥವಾ ಆವಾಹನೆ ಮಾಡಿಕೊಳ್ಳೋದಕ್ಕೆ ಆಗದೇ ಇರುವಂಥಾದ್ದು. ನಾನು ಬರೆಯಬಹುದಾದ್ದು ನನ್ನದೇ ಛಂದಸ್ಸಿನಲ್ಲಿ ಎನ್ನೋದು ಅಂತಿಮವಾದ ಸತ್ಯ. ಯಾಕೆ ಈ ಮಾತು ಹೇಳುತ್ತಾ ಇದ್ದೇನೆಂದರೆ, ಗೋಪಾಲಕೃಷ್ಣ ಪೈಯವರು ಇಲ್ಲಿ 1976ರಲ್ಲಿ ಎಸ್ ದಿವಾಕರ್ ಅವರ ಪರಿಚಯ, ಒಡನಾಟ ಎಲ್ಲ ದೊರಕಿದ ಮೇಲೆ ಸಾಹಿತ್ಯದ ಬಗ್ಗೆ ಹೆಚ್ಚು ಗಂಭೀರವಾಗಿ ಗಮನ ಹರಿಸಿದ್ದಾಗಿಯೂ, ಕತೆ ಬರೆಯುವ ಕಲೆಯ ಬಗ್ಗೆಯೇ ಹೆಚ್ಚು ಆಳವಾಗಿ ಚಿಂತನೆ ನಡೆಸಿದ್ದಾಗಿಯೂ ಹೇಳಿದ್ದಾರೆ. ಈ ಸಂಕಲನದಲ್ಲಿ ಇರುವ ಕತೆಗಳೆಲ್ಲಾ ಈ ಘಟ್ಟದ ನಂತರದ್ದೇ. ಗೋಪಾಲಕೃಷ್ಣ ಪೈಯವರ ಕತೆಯನ್ನು ಹೇಳುವ, ಕತೆಯನ್ನು ಬರೆಯುವ ವಿಧಾನ, ಅದನ್ನು ಹೇಳುವ ರೀತಿಯೇ ಓದುಗನ ಮೇಲೆ ಉಂಟು ಮಾಡುವ ಪರಿಣಾಮದ ಕುರಿತ ಎಚ್ಚರ ಮತ್ತು ಈ ಎಚ್ಚರದಿಂದ ಕಥನಕಲೆಯನ್ನು ಅವರು ಹೆಚ್ಚು ಗಂಭೀರವಾಗಿ ತೆಗೆದುಕೊಂಡಿದ್ದು ಈ ಮೂರು ಸಂಕಲನ ಮತ್ತು ಆಮೇಲಿನ ಕತೆಗಳನ್ನು ಓದುವಾಗ ಮತ್ತೆ ಮತ್ತೆ ಕಾಣಿಸುತ್ತಲೇ ಇರುತ್ತದೆ. ಪ್ರತೀ ಕತೆಯಲ್ಲೂ ಅವರ ಪ್ರಯೋಗಶೀಲತೆ, ಹೊಸದನ್ನು ಹೇಳುವ ಉತ್ಸಾಹ, ಹೊಸ ಬಗೆಯಲ್ಲಿ ಹೇಳುವ ಉಮೇದುಗಾರಿಕೆ ನಮಗೆ ಕಾಣಿಸುತ್ತದೆ, ನಿಜವೇ. ಆದರೆ, ಮೂಲಭೂತವಾಗಿ ಇದನ್ನೆಲ್ಲ ಮಾಡುತ್ತಿರುವ ಗೋಪಾಲಕೃಷ್ಣ ಪೈಯವರು ಅವರೇ, ಬೇರೆಯಲ್ಲ. ಅಷ್ಟರಮಟ್ಟಿಗೆ ಛಂದಸ್ಸು ಸ್ಥಿರ. ತಾತ್ವಿಕ ಆಯಾಮ ಮತ್ತು ಸಾಮಾಜಿಕ ಅರ್ಥಪೂರ್ಣತೆಯಿಲ್ಲದೇ ಇರುವ ಯಾವುದೇ ಸೃಜನಶೀಲ ಕೃತಿಯೂ ತನ್ನಷ್ಟಕ್ಕೆ ತಾನು ಶ್ರೇಷ್ಠವಾಗಲಾರದು ಅಂತ ಕರ್ವಾಲೋ ಕಾದಂಬರಿಗೆ ಹಿನ್ನುಡಿ ಬರೆಯುತ್ತಾ ಪ್ರೊ.ಜಿ.ಎಚ್.ನಾಯಕ ಅವರು ಬರೆದಿದ್ದರು. ಮನುಷ್ಯನ ಆಳದ ತುರ್ತು ಎಷ್ಟೋ ಬಾರಿ ವೈಯಕ್ತಿಕವೋ, ಆತ್ಮಕೇಂದ್ರಿತವೋ - ಇಲ್ಲಿ ಆಧ್ಯಾತ್ಮವನ್ನೂ ಸೇರಿ ಹೇಳುತ್ತಿದ್ದೇನೆ, ಆಗಿರುತ್ತದೆ. ಈ ಆದ್ಯತೆಗಳು ಎಂದಿಗಾದರೂ ಬದಲಾಗತಕ್ಕವು ಅನಿಸುವುದಿಲ್ಲ.
 
ರಾಘವೇಂದ್ರ ಪಾಟೀಲರ ಮೊದಲ ಸಂಕಲನದ ಹಿನ್ನುಡಿಯಲ್ಲಿಯೂ ಡಾ|| ಯು.ಆರ್.ಅನಂತಮೂರ್ತಿಯವರು ಬದುಕಿನಲ್ಲಿ ನಿಮ್ಮ ಆದ್ಯತೆಗಳು ಬದಲಾದಂತೆ ನಿಮ್ಮ ಸಾಹಿತ್ಯದ ಆದ್ಯತೆಗಳೂ ಹೆಚ್ಚು ಸ್ಪಷ್ಟವಾಗುತ್ತ ಹೋಗುತ್ತದೆ ಎನ್ನುವ ಅರ್ಥದಲ್ಲಿ ಬರೆದಿದ್ದಾರೆ. ಸಾಹಿತ್ಯ ನಮಗೇನು ಕೊಡುತ್ತದೆ ಎನ್ನುವ ಪ್ರಶ್ನೆಯ ಹಿನ್ನೆಲೆಯಲ್ಲಿಯೇ ಇದನ್ನು ಕೇಳಿಕೊಳ್ಳಬಹುದು. ಆದರೆ ಸಾಹಿತ್ಯದ ಆದ್ಯತೆಗಳೂ ಬದುಕಿನ ಆದ್ಯತೆಗಳೂ ಬೇರೆ ಬೇರೆಯಲ್ಲ ಮತ್ತು ಅದು ಬದಲಾಗುತ್ತ ಹೋಗುವುದಿಲ್ಲ ಎನಿಸುತ್ತದೆ. ಇದನ್ನು ಮುಂದೆ ನಡೆಯಲಿರುವ ಸಂವಾದಕ್ಕೆ ಒಂದು ಎಳೆಯಾಗಿ ತೆಗೆದುಕೊಳ್ಳಬಹುದು ಅನಿಸುತ್ತದೆ.
 
ಇಲ್ಲಿರೋ ಈ ಮೂರು ಮತ್ತಿಷ್ಟು ಸಂಕಲನದಲ್ಲಿ ಗೋಪಾಲಕೃಷ್ಣ ಪೈಯವರು ಸುಮಾರು 1969 ರಿಂದ ಬರೆದ ಕತೆಗಳಿವೆ. ಮೂವತ್ತೈದು ಕತೆಗಳಿವೆ. ಅಂದರೆ ಸುಮಾರು ನಲವತ್ತಮೂರು ವರ್ಷಗಳ ಅವಧಿಯಲ್ಲಿ ಬರೆದ ಕತೆಗಳು. ಇವುಗಳನ್ನೆಲ್ಲ ಒಂದೇ ಎಳೆಯಲ್ಲಿ ಗೋಪಾಲಕೃಷ್ಣ ಪೈಯವರ ಕತೆಗಳೆಂದರೆ ಹೀಗೇ ಎಂದು ಸರಳೀಕರಿಸಿ ಹೇಳೋದಿಕ್ಕೆ ಬರೊದಿಲ್ಲ. ಒಂದು ಕಾದಂಬರಿ ಬಗ್ಗೆ ಹೇಳೋದು ಸುಲಭ. ಹಾಗಂತ ನಾನು ಮಹಾಲಿಂಗ ಭಟ್ಟರ ಕೆಲಸ ಸುಲಭದ್ದು ಅನ್ನುತ್ತಾ ಇಲ್ಲ. ಆದ್ರೆ ಇಲ್ಲಿನ ಮೂವತ್ತೈದೂ ಕತೆಗಳು ಮುವ್ವತ್ತೈದು ಕೃತಿಗಳಿದ್ದ ಹಾಗೆ. ಹಾಗಾಗಿ ಅವುಗಳನ್ನ ಏಕಸೂತ್ರದಲ್ಲಿ ವಿವರಿಸೋದಕ್ಕೆ ಆಗೋದಿಲ್ಲ. ಅದಕ್ಕೆ ನಾನೇನು ಮಾಡ್ತೇನೆಂದ್ರೆ, ಒಟ್ಟಾರೆಯಾಗಿ ಗೋಪಾಲಕೃಷ್ಣ ಪೈಯವರ ಕತೆಗಳು ಸ್ಥೂಲವಾದ ಲಕ್ಷಣಗಳನ್ನ ಅವರ ಕೆಲವು ಕತೆಗಳ ಆಧಾರದ ಮೇಲೆ ಹೇಳಿ ಮುಗಿಸ್ತೇನೆ. ಅದು ಬಹುಷಃ ನಾನು ನನ್ನ ಕೆಲಸಕ್ಕೆ ನ್ಯಾಯ ಒದಗಿಸಬಹುದಾದ ರೀತಿ ಅಂತ ನನಗೆ ಅನಿಸುತ್ತೆ.
 
ಮೂಲಭೂತವಾಗಿ ನಾನು ಗೋಪಾಲಕೃಷ್ಣ ಪೈಯವರ ಕತೆಗಳಲ್ಲಿ ಕಂಡ ಮೂಲ ಎಳೆ ಎನ್ನೋದು ಒಂದು ಮೃತ್ಯು ಪ್ರಜ್ಞೆ ಮತ್ತೊಂದು ಪಲಾಯನ ಅಥವಾ ರಿಸೈನಿಂಗ್ ತರದ ಗುಣ. ಇಲ್ಲಿನ ಹೆಚ್ಚಿನ ಎಲ್ಲಾ ಕತೆಗಳಲ್ಲೂ ಸಾವು ಇದೆ. ಅದು ಸಾಯುತ್ತಾ ಬಿದ್ದಿರೋ ವೃದ್ಧರಿರಬಹುದು, ಆತ್ಮಹತ್ಯೆ ಇರಬಹುದು, ಕೊಲೆಯಿರಬಹುದು ಅಥವಾ ಅಪಮೃತ್ಯುವಿರಬಹುದು. ಅದೇ ತರ ಪಲಾಯನ. ಮನೆಬಿಟ್ಟು ಹೋಗೋದು ಅಥವಾ ಕಾಣೆಯಾಗೋದು, ಸನ್ಯಾಸಿಯಾಗೋದು ಈ ತರ. ಇದು ಬದುಕಿಗೆ ಹೇಳ್ತಿರೋ ವಿದಾಯ ಅಲ್ಲ. ಇಲ್ಲೇನೋ ಸರಿಯಿಲ್ಲ, ಅಪ್ಪ ಸರಿಯಿಲ್ಲ, ಅವನ ನಡವಳಿಕೆ ಸರಿಯಿಲ್ಲ, ಶೀಲ ಸರಿಯಿಲ್ಲ ಎಂದೇನೇನೋ ಕಾರಣಕ್ಕೆ ಇದು ನನಗೆ ಬೇಡ, ನಾನು ಇಲ್ಲಿಂದ ಹೋಗಿ ಬಿಡ್ತೇನೆ ಅನ್ನೋ ಭಾವಕ್ಕೂ ಸಾವಿಗೂ ಹತ್ತಿರದ ನಂಟಿದೆ. ಆದರೆ ಇದು ನಿರಾಶಾವಾದ ಅಲ್ಲ. ಇದರ ನಿಜವಾದ ಗುಟ್ಟು ಏನೆಂದರೆ, ಇದು ಅತಿಯಾದ ಜೀವನಪ್ರೀತಿಯೇ ಕಾರಣವಾಗಿ ಹುಟ್ಟಿಕೊಂಡ ಬೇಸರ ಇದು. ಯಾವುದನ್ನಾದರೂ ನೀವು ಅತಿಯಾಗಿ ಹಚ್ಚಿಕೊಂಡ್ರೆ, ಪ್ರೀತಿಸಿದ್ರೆ ಆಗ ನಿಮಗೆ ಅದನ್ನ ತಿದ್ದಬೇಕು, ಸರಿಯಿಲ್ಲದ್ದನ್ನ ಸರಿಮಾಡ್ಬೇಕು, ಇನ್ನೂ ಚೆನ್ನಾಗಿರೋ ತರ ಮಾಡ್ಬೇಕು ಅನ್ನೋ ಆಸೆಗಳೆಲ್ಲ ಸುರುವಾಗುತ್ತೆ. ಇದು ಅಂಥಾ ವ್ಯಾಮೋಹದಿಂದ ಹುಟ್ಟುವ, ಅಂಥಾ ಬದಲಾವಣೇನ್ನ ತರೋದಿಕ್ಕೆ ಸಾಧ್ಯವಾಗದೇ ಹೋದ ಹತಾಶೆಯಿಂದ ಹುಟ್ಟುವ ವೈರಾಗ್ಯ, ವಿದಾಯ ಅಥವಾ ಕೊನೆ. ಇದನ್ನ ಗೋಪಾಲಕೃಷ್ಣ ಪೈಯವರ ಕತೆಗಳಲ್ಲಿ ಮತ್ತೆ ಮತ್ತೆ ಕಾಣುತ್ತೇವೆ.
 
ಈ ನಲವತ್ತ ಮೂರು ವರ್ಷದ ಅವಧಿಯಲ್ಲಿ ಗೋಪಾಲಕೃಷ್ಣ ಪೈಯವರು ಹಲವಾರು ಬಾರಿ ತಮ್ಮ ಕತೆಗಾರಿಕೆಯ ರೀತಿ ನೀತಿಗಳನ್ನ ಬದಲಾಯಿಸಿಕೊಂಡಿದ್ದಾರೆ. ಮೊದ ಮೊದಲು ಅವರು ಕತೆಯೇ ಪ್ರಧಾನವಾಗಿರುವಂತಹ, ಒಂದು ಆರಂಭ, ಕ್ಲೈಮ್ಯಾಕ್ಸ್ ಎಲ್ಲ ಇರುವಂಥ,ಅಥವಾ ಪ್ರಶ್ನೆ- ಉತ್ತರ, ಇಂಥಾದ್ದೆ ಉತ್ತರಕ್ಕಾಗಿ ಇಂಥಾದ್ದೇ ಪ್ರಶ್ನೆ ಎನ್ನುವ ಸರಳವಾದ ತಂತ್ರ ಇರುವ ಕತೆಗಳನ್ನೇ ಬರೆದಿದ್ದರು. ಆಮೇಲೆ ಒಂಥರಾ ಕಾವ್ಯದ ಹಾಗಿರುವ, ಕತೆಗಿಂತ ಒಂದು ಸಿಚುವೇಶನ್ ಮುಖ್ಯವಾಗಿರುವ ಕತೆಗಳನ್ನ ಬರೆದರು. ಈ ನಡುವೆ ಮಾಸ್ತಿ ಮಾದರಿಯ ಕತೆಗಳನ್ನೂ ಅವರು ಬರೆದಿದ್ದಿದೆ. ನಂತರ ಪ್ರಯೋಗವೇ ಪ್ರಧಾನವಾಗಿರುವ ಇದು ಎಂಥಾ ಪ್ರೇಮವಯ್ಯಾ!, ಆಕಾಶರಾಯ, ನಾಳೆ ಬೆಳಿಗ್ಗೆ ಸೂರ್ಯ ಮೂಡುವುದಿಲ್ಲವಂತೆ, ತೇರನೆಳೆಯುತಾರ ತಂಗಿ, ಭಾಷೆಯ ಒಳಗೆ ತೂರಿಕೊಂಡ ಮನುಷ್ಯ, ಸುಮ್ಮನೇ ಕೂತಲ್ಲಿ ನೀವು ಮಾಡಿದ ಕೆಲಸ ಮುಂತಾದ ಕಥೆಗಳನ್ನ ಕೂಡ ಬರೆದಿದ್ದಾರೆ. ಅದೆಲ್ಲ ಅಲ್ಲದೆ ಬೇರೆಯೇ ತರದ ಕತೆಗಳು ಕೂಡಾ ಈ ಸಂಕಲನದಲ್ಲಿವೆ. ಅಜೆಂಡಾ ಇಲ್ಲದ, ಸಿಲೆಬಸ್ ಇಲ್ಲದ ಕತೆಗಳು ಇವು. ಇವುಗಳನ್ನ ಸುರುಮಾಡಿದಾಗ ಇವು ಎಲ್ಲಿಗೆ ತಲುಪುತ್ತವೆ ಎನ್ನುವುದು ಕತೆಗಾರನಿಗೂ ಗೊತ್ತಿರಲಿಲ್ಲವೇನೋ ಅಂತ ನಮಗೆ ಅನಿಸುವಂಥ ಕತೆಗಳು. ಕತೆಗಾರನಿಗೆ ಗೊತ್ತಿರುತ್ತೆ ಬಿಡಿ. ಜೀವನದ ನಿರ್ದಿಷ್ಟ ಘಟನೆಗಳು ತಮ್ಮೊಳಗೆ ಅಡಗಿಸಿಕೊಂಡಿರುವಂಥ ದರ್ಶನ ಏನು ಅನ್ನೋದನ್ನ ಹುಡುಕಾಡೋದಕ್ಕೆ ಹೊರಟಂಥ ಕತೆಗಳು ಇವು.
 
ತಪ್ಪು ಕತೆಯಲ್ಲಿ ಗೋಪಾಲಕೃಷ್ಣ ಪೈಯವರ ಕಥನಗಾರಿಕೆಯ ಮೂಲಭೂತವಾದ ಎರಡು ಮೂರು ತಂತ್ರಗಳನ್ನು ಗುರುತಿಸಬಹುದು. ಇದು 1970ರಲ್ಲಿ ಬರೆದ ಕತೆಯಾದರೂ ಇವತ್ತಿಗೂ ಗೋಪಾಲಕೃಷ್ಣ ಪೈಯವರ ಕತೆಗಳಲ್ಲಿ ನಾವು ಮತ್ತೆ ಮತ್ತೆ ಗುರುತಿಸಬಹುದಾದ ಕೆಲವು ಮಹತ್ವದ ಕಥನದ ನಡೆಯನ್ನು ಇದರಲ್ಲಿ ಕಾಣಬಹುದಾಗಿದೆ. ಒಂದು, ಗೋಪಾಲಕೃಷ್ಣ ಪೈಯವರ ಕತೆಗಳಲ್ಲಿ ಬರುವ ವಸ್ತುಲೋಕದ ವಿವರಗಳು. ಸಾಧಾರಣವಾಗಿ ಪಾತ್ರಗಳ ಬಗ್ಗೆ ವಿವರ, ಸಂಭಾಷಣೆ, ಮನೋಲೋಕದ ಆಗುಹೋಗುಗಳ ಬಗ್ಗೆ ವಿವರಣೆ, ಸಾಂದರ್ಭಿಕವಾದ ಇತರೆ ವಿವರಗಳು ಕತೆಯಲ್ಲಿ ಬರುತ್ತವೆ. ಆದರೆ ಗೋಪಾಲಕೃಷ್ಣ ಪೈಯವರ ಕತೆಗಳಲ್ಲಿ ಹೆಚ್ಚು ವಿವರವತ್ತಾಗಿ ಬರುವ ಲ್ಯಾಂಡ್‌ಸ್ಕೇಪ್, ಸುತ್ತಲಿನ ಜಗತ್ತಿನ ವಿದ್ಯಮಾನಗಳು, ಜನಜೀವನದ ದೈನಂದಿನಗಳ ವಿವರ ಎಲ್ಲ ಬರುತ್ತವೆ. ಇವು ಒಂದು ವಾತಾವರಣ ನಿರ್ಮಿತಿಗೆ, ಕಥಾಜಗತ್ತಿನ ಶಿಲ್ಪವು ಓದುಗನ ಮನಸ್ಸಿನಲ್ಲಿ ಪಡಿಮೂಡುವುದಕ್ಕೆ ಅಗತ್ಯವಾದ ಕ್ರಾಫ್ಟ್. ಎರಡನೆಯದಾಗಿ, ಈ ವಿವರಗಳನ್ನ ಗೋಪಾಲಕೃಷ್ಣ ಪೈಯವರು ಎಲ್ಲಿ ತರುತ್ತಾರೆ ಎನ್ನುವುದು. ಇದು ಪ್ರಜ್ಞಾಪೂರ್ವಕವೋ, ಅವರ ಕಥನಶೈಲಿಗೆ ಸಹಜವಾಗಿಯೇ ಅದು ಸಿದ್ಧಿಸಿದೆಯೋ ಅದು ಬೇರೆ ಪ್ರಶ್ನೆ. ಈ ಎಲ್ಲ ವಿವರಗಳನ್ನು ಗೋಪಾಲಕೃಷ್ಣ ಪೈಯವರು ತಮ್ಮ ಕಥಾನಕದ ನಡೆಯಲ್ಲಿ ಎಲ್ಲಿ ಮೌನವನ್ನು ಬಳಸಿಕೊಳ್ಳಲು ಬಯಸುತ್ತಾರೋ ಅಲ್ಲಿ ತರುತ್ತಾರೆ ಎನ್ನುವುದೆ ಆ ಅಂಶ. ಒಂದು pause ಬೇಕಾದಾಗ, ಪಾತ್ರಗಳ ಯೋಚನಾಲಹರಿಗೆ ಅಥವಾ ಕಥನದ ನಡೆಗೆ ಒಂದು ಮೌನದ ವಿರಾಮ, space ಬೇಕಾದಾಗಲೇ ಈ ವಿವರಗಳಿಗೆ ಗೋಪಾಲಕೃಷ್ಣ ಪೈಯವರು ಶಿಫ್ಟ್ ಆಗುತ್ತಾರೆ. ಮೂರನೆಯದಾಗಿ, ಅಂತ್ಯದಲ್ಲಿ ತರುವ ಅನಿರೀಕ್ಷಿತ ತಿರುವು ಅಥವಾ, ಲಿಫ್ಟ್. ಇದು ಸಣ್ಣಕತೆಯ ಅನಿವಾರ್ಯ ಮತ್ತು ಅತ್ಯಂತ ಸಹಜವಾಗಿ ಬಿಟ್ಟಿರುವ ಅಂಶವೆಂದು ಪರಿಗಣಿಸಲ್ಪಡುವುದಾದರೂ ಇದನ್ನ ಗೋಪಾಲಕೃಷ್ಣ ಪೈಯವರು ಎಷ್ಟೆಲ್ಲಾ ವೈವಿಧ್ಯಮಯವಾಗಿ, ಪ್ರಯೋಗಶೀಲವಾಗಿ ಮತ್ತು ಇಡೀ ಕತೆಗೆ ಸಾರ್ಥಕತೆಯನ್ನುಂಟು ಮಾಡುವ ಒಂದು ಲಿಫ್ಟ್ ಅನಿಸುವಂತೆ ಮಾಡುತ್ತಾರೆಂದರೆ, ಅದನ್ನು ನೀವು ಕತೆಗಳನ್ನು ಓದಿಯೇ ತಿಳಿದುಕೊಳ್ಳಬೇಕಾಗುತ್ತದೆ.
 
ಗತಿ (1977) ಕತೆಯನ್ನು ಸ್ವಪ್ನಸಾರಸ್ವತದ ಹಿನ್ನೆಲೆಯಲ್ಲಿಟ್ಟು ನೋಡಿದರೆ, ಈಗ, ಬೇರೆಯೇ ತರ ಕಾಣುತ್ತದೆ. ಅದಿಲ್ಲದೇ ಒಂಟಿಯಾಗಿ ಈ ಕತೆಯನ್ನಿಟ್ಟು ನೋಡಿದರೂ ಇದು ಗೋಪಾಲಕೃಷ್ಣ ಪೈಯವರ ಆರಂಭಿಕ ಕತೆಗಳಲ್ಲಿ ಹೆಚ್ಚು ಯಶಸ್ವಿಯಾದ ಕತೆಯೆಂದೇ ಅನಿಸುತ್ತದೆ. ಹಾಗೆ ನೋಡಿದರೆ ಇಲ್ಲಿ ನೇರವಾದ ಕತೆಯಿಲ್ಲ. ಇರುವ ಕತೆ ಹೆಚ್ಚು ಸಂಕೀರ್ಣವಾಗಿದೆ ಮತ್ತು ಫ್ಲ್ಯಾಶ್‌ಬ್ಯಾಕ್ ತಂತ್ರದಲ್ಲಿದೆ. ಇಲ್ಲಿ ಸಾಯುತ್ತಿರುವ ತಾಯಿಯನ್ನು ಕಾಣಲು ಬಂದ ನಿರೂಪಕನಿಗೆ ಅಣ್ಣನ ಮಗಳು ಲಲಿತೆಯ ನಿರೂಪವಿತ್ತಾದರೂ ಸಂಬಂಧ ಎಲ್ಲೋ ಇರುವ ಇಬ್ಬರು ವ್ಯಕ್ತಿಗಳ ನಡುವೆ ಕೇವಲ ಪತ್ರಗಳಲ್ಲಷ್ಟೇ ಉಳಿದು ಅಮೂರ್ತವಾಗಿರುವಾಗ ಮತ್ತು ಪ್ರತ್ಯಕ್ಷವಾಗಿ ಎದುರಾಬದುರಾದಾಗ ಉಂಟಾಗುವ ಸಾಕ್ಷಾತ್ಕಾರದಲ್ಲಿ ಮೂರ್ತವಾದಾಗ ತನ್ನ ವ್ಯಾಖ್ಯಾನ ಮತ್ತು ನೆಲೆಗಳನ್ನು ಬದಲಿಸಿಕೊಂಡಂತೆ ಕಾಣುವುದು ಕೇವಲ ಆಕಸ್ಮಿಕವಲ್ಲ. ಬದುಕಿನ ಸೂಕ್ಷ್ಮವೇ ಆಗಿದೆ. ಕತೆ ಅದನ್ನು ಹಿಡಿದಿಡುತ್ತಲೇ ತಾಯಿಯ ಈ ಕೊನೆಯ ಭೇಟಿಯನ್ನು ಕಾಣಿಸುವ ಮೊದಲೇ ಮುಗಿಯುವುದು ಗಮನಾರ್ಹವಾಗಿದೆ.
 
ಪಲಾಯನ (1970) ಕತೆ ಗಂಡ ಹೆಂಡತಿ ನಡುವಿನ ಅನುಮಾನಗಳು ಸಂಬಂಧವನ್ನು ಪ್ರಶ್ನಿಸುವ ಮತ್ತು ಈ ರೀತಿ ಪ್ರಶ್ನಿಸುತ್ತ ಸಂಬಂಧವನ್ನು ಪುನರ್ವ್ಯಾಖ್ಯಾನಿಸುವ ನೆಲೆಯ ಕತೆ. ಇಲ್ಲಿನ ನಿರೂಪಣೆ ಪುರುಷಪ್ರಜ್ಞೆಯದ್ದು ಮತ್ತು ಅದರಲ್ಲಿನ ತಣ್ಣಗಿನ ಕ್ರೌರ್ಯ ಮತ್ತು ಆತ್ಮರತಿ ಪರೋಕ್ಷವಾಗಿ ಗಂಡನ ಮನೋಗತಿಯನ್ನು ನಿಯಂತ್ರಿಸಬಲ್ಲಷ್ಟು ಗಟ್ಟಿಯಾದ ಸ್ತ್ರೀ ಪಾತ್ರದೆದುರೂ ಎದ್ದು ಕಾಣುವಂತಿದೆ. ಹಾಗೆಯೇ ಇಲ್ಲಿರುವ ಎಲ್ಲವನ್ನೂ ಬಿಟ್ಟು ಹೊರಟುಬಿಡುವ (ಆ ಮೂಲಕ ತನ್ನ ಪ್ರಾಮುಖ್ಯತೆಯನ್ನು ಒಳಗಿದ್ದೇ ಗಮನಿಸಿಕೊಂಡು ಸುಖಿಸುವ), ಪಲಾಯನವಾದಿಯಾಗಿ ಬಿಡುಗಡೆಯನ್ನು ಅನುಭವಿಸುವ, ಎಲ್ಲದರಿಂದ ತಪ್ಪಿಸಿಕೊಂಡು, ಮುಕ್ತವಾಗಿದ್ದು ಬಿಡಬೇಕೆಂಬ ತುಡಿತವನ್ನು ಕಾಣುತ್ತೇವೆ. ಆದರೆ ಇದು ಅಷ್ಟೇನೂ ನಿಜವಾದ ಬಿಡುಗಡೆಯ ಹಂಬಲವಲ್ಲ ಎನ್ನುವುದು ಸ್ಪಷ್ಟವಾಗಿಯೇ ಇದೆ. ಅನುಕೂಲಗಳನ್ನೆಲ್ಲ ಉಳಿಸಿಕೊಂಡು ಅನಾನುಕೂಲಗಳಿಂದಷ್ಟೇ ಬಿಡುಗಡೆ ಸಿಗುವುದಾದರೆ ಎನ್ನುವ ಸುಖದ ಪರಿಕಲ್ಪನೆಯೇ ಇಂಥ ಆಸೆಯ ಹಿಂದೆ ಕೆಲಸ ಮಾಡುತ್ತಿರುವುದನ್ನು ಕತೆಯ ಚೌಕಟ್ಟಿನಲ್ಲೇ ಕಾಣಬಹುದಾಗಿದೆ. belongingness ಇಲ್ಲದ, ತನ್ನದೇ ಸೃಷ್ಟಿಗೆ,ಕ್ರಿಯೆಗೆ,ಕರ್ಮಕ್ಕೆ ತಾನು ಅನ್ಯವಾಗಿ ನಿಲ್ಲುವ ಬೇಜವಾಬ್ದಾರಿಯ ಛಾಯೆ ಇದಕ್ಕಿದೆ. ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಎನ್ನುವ ಭಾವ ಕತೆಯಲ್ಲಿದ್ದರೂ ಈ ಪಲಾಯನ ಭಾವದ ಬಗ್ಗೆ ಕತೆ ಅಷ್ಟೇನೂ ಗೌರವ ಹೊಂದಿಲ್ಲ.
 
ಅರ್ಜಿ (1985) ಕತೆ ಮಾಸ್ತಿ ಕಥಾ ಪರಂಪರೆಯನ್ನು ದಟ್ಟವಾಗಿ ನೆನಪಿಸುವ ಕತೆ. ಇದು ಯಾಕೆ ಒಂದು ಒಳ್ಳೆಯ ಕತೆ ಎನಿಸುತ್ತದೆ ಎಂದು ಯೋಚಿಸಿದರೆ ಈ ಕೆಲವು ಅಂಶಗಳು ನಮ್ಮ ಗಮನಕ್ಕೆ ಬರುತ್ತವೆ. ಒಂದು, ಇಲ್ಲಿರುವುದು ಸಹಜವಾದ ಕತೆಗಾರಿಕೆ ಎನ್ನುವುದು. ಕತೆಯನ್ನು ಹೇಳುತ್ತಿರುವ ಅಹಂಕಾರ ಇಲ್ಲಿಲ್ಲ. ಕತೆಯನ್ನು ಹೇಳುವುದಕ್ಕೆ ಯಾವುದೆ ಗಿಮ್ಮಿಕ್, ತಂತ್ರ ಅಥವಾ ನಿರೂಪಣಾ ಜಾಣ್ಮೆ ಇಲ್ಲಿ ಇಲ್ಲ. ಹಾಗಾಗಿ ಸರಳವಾಗಿ, ನೇರವಾಗಿ ತೆರೆದುಕೊಳ್ಳುವ ಕತೆ ಹೆಚ್ಚು ಆಪ್ತವಾಗುತ್ತದೆ. ಎರಡನೆಯದಾಗಿ, ಈ ಕಥಾನಕಕ್ಕೆ ಇರುವ ಸಹಜವಾದ ಒಂದು ಚಂದ. ಅದು ಹಳೆಯ ಕಾಲದ ಪಾರಂಪರಿಕವಾದ ಒಂದು ಸಂಗತಿಯನ್ನು ಮತ್ತೆ ಕಟ್ಟಿಕೊಡುತ್ತಿರುವುದರಿಂದ ಅದಕ್ಕೆ ಸಹಜವಾಗಿಯೇ ಒಂದು ತಾತ್ವಿಕವಾದ ಆಯಾಮವೂ ಸಾಮಾಜಿಕ ರಿಲವನ್ಸ್ ಎನ್ನಬಹುದಾದ ಒಂದು ನೆಲೆಯೂ ನಿರ್ಮಾಣಗೊಂಡಿದೆ. ಮೂರನೆಯದಾಗಿ, ಈ ಕತೆಯ ನಡೆಯಲ್ಲಿ ಕಾಣುವ ನಿರಾಳವಾದ ಭಾವ, ನಿಧಾನಗತಿ ಮತ್ತು ಸಾವಧಾನದ ಗತಿಯಲ್ಲಿರುವ ಚಲನೆ. ಕಥೆಯನ್ನು ಹೇಳುತ್ತಿರುವ ವ್ಯಕ್ತಿಯ ವಯಸ್ಸಿಗೆ ಹೊಂದುವ ವೇಗದಲ್ಲೇ ಕತೆಯಿರುವುದು ಇದರ ಸೌಂದರ್ಯಕ್ಕೆ ಕಳೆಕೊಟ್ಟಿದೆ. ನಾಲ್ಕನೆಯದಾಗಿ ಇಲ್ಲಿನ ನಿರೂಪಣೆಯಲ್ಲೇ ಇರುವ ಆಪ್ತವಾದ ಒಂದು ನೆಲೆ. ಬರಹಗಾರ-ಓದುಗ ಸಂಬಂಧ ಇಲ್ಲಿ ಅತ್ಯುನ್ನತ ಸ್ಥರಕ್ಕೇರಿರುವುದನ್ನು ಕಾಣಬಹುದಾಗಿದೆ. ಐದನೆಯದಾಗಿ ಕತೆಯನ್ನು ಹೇಳುವ, ಕತೆ-‘ಮಾಡುವ’ ನೆಲೆಯ ಹಿನ್ನೆಲೆಯಲ್ಲಿ ಈ ಅಂಶವನ್ನು ಕಾಣಬೇಕು, ಇಲ್ಲಿನ ಕಥಾನಕಕ್ಕೆ ಒಂದು ಚಾರಿತ್ರಿಕವಾದ ಹಿನ್ನೆಲೆಯಿದೆ. ಅದು ಈ ಕತೆಗೆ ಒಂದು ಅಥೆಂಟಿಕ್ ಸ್ಪರ್ಶವನ್ನು ನೀಡಿದೆ. ಹಾಗಾಗಿ ಈ ಕತೆ ನಿರೂಪಕ ಮತ್ತು ನಿರೂಪಣೆಯನ್ನು ಮೀರಿದ ಒಂದು ಪ್ರಾಮಾಣಿಕತೆಯ ಪಸೆಯನ್ನು ಹೊಂದಿದೆ. ಇದು ನಿರೂಪಿಸಲ್ಪಟ್ಟ ಬಗೆಯಲ್ಲಿ ಉಳಿದುಕೊಂಡು ಬಂದಿರುವುದರಿಂದ, ಈ ನೆಲೆಯೇನಿದೆ, ಅದು ಕತೆಯ ಯಶಸ್ಸಿಗೆ ಕೊಡುಗೆ ನೀಡಿದೆ.

ಈ ಬೆರಳ ಗುರುತು (1995) ಕತೆಯನ್ನು ಜಯಂತ ಕಾಯ್ಕಿಣಿಯವರ ಇದ್ದಾಗ ಇದ್ಧಾಂಗದ ಜೊತೆ ತುಲನಾತ್ಮಕವಾಗಿಯೂ ಓದಬಹುದು. ಅಲ್ಲಿ ಎರಡು ಪಾತ್ರಗಳ ನಡುವಿನ ದ್ವಂದ್ವ ಅಥವಾ ಜುಗಲ್ಬಂದಿಯಾಗಿರುವುದು ಇಲ್ಲಿ ಒಂದೇ ಪಾತ್ರದ ಮೈಯಾಗಿ ಬಂದಿರುವುದು ಒಂದು ವಿಶೇಷವಾದರೆ ಅಪ್ಪ-ಮಗನ ನಡುವಿನ ಜುಗಲ್ಬಂದಿ ಕೂಡಾ ಮೈತಳೆದಿರುವುದು ಕುತೂಹಲಕರವಾಗಿದೆ. ಗೋಪಾಲಕೃಷ್ಣ ಪೈಯವರದೇ ಬೇರೆ ಯಾವ ಕತೆಯಲ್ಲೂ ಅಪ್ಪ ಮಗನ ಪಾತ್ರಗಳ ನಡುವೆ ಇಂಥ ತಾದ್ಯಾತ್ಮವಿಲ್ಲ ಅನಿಸುತ್ತದೆ. ಅವರ ಹೆಚ್ಚಿನ ಎಲ್ಲಾ ಕತೆಗಳಲ್ಲೂ ಅಪ್ಪ ಮಗನ ನಡುವೆ ಇರುವುದು ಸಂಘರ್ಷ, ಜಿದ್ದಾಜಿದ್ದಿ ಅಥವಾ ಬದ್ಧ ದ್ವೇಷ. ಆದರೆ ಈ ಕತೆಯಲ್ಲಿ ಮಾತ್ರ ಒಂದು ಬಗೆಯ ತಾದ್ಯಾತ್ಮವೂ ವಿಜಯೋತ್ಸಾಹವೂ ಇರುವುದು ವಿಶೇಷ. ಬರೆಯುವ ಕ್ರಿಯೆಯ ಸಂಭ್ರಮವನ್ನೇ ಕುರಿತ ಇಂಥ ಇನ್ನೊಂದು ಕತೆ ಬಹುಷಃ ಎಲ್ಲೂ ಇರಲಿಕ್ಕಿಲ್ಲ. ಆದರೆ ಇದ್ದಾಗ ಇದ್ಧಾಂಗ ಬದುಕುವ ಚೈತನ್ಯ ಕೊಟ್ಟಿದ್ದು, ಕೊಡುವುದು ಬರವಣಿಗೆಗೆ ಸಾಧ್ಯವೆ ಎನ್ನುವುದು ಒಂದು ಪ್ರಶ್ನೆ, ಬರವಣಿಗೆಗೆ ಮಾತ್ರ ಸಾಧ್ಯವೆ ಎನ್ನುವುದು ಎರಡನೆಯ ಪ್ರಶ್ನೆ. ಬದುಕು ಹೀಗಿರುವುದು ಮತ್ತು ಹೀಗಿದ್ದರೆ ಒಳ್ಳೆಯದು ಎಂಬುದರ ಎದುರು ನಿಲ್ಲುವ ವಾಸ್ತವ ಏನಿದೆ ಅದು ಬರವಣಿಗೆಯ distortion ಎಂದು ಪರಿಗಣಿಸಬೇಕೆ ಅಥವಾ ಸಾಹಿತ್ಯ ಬದುಕಿನ distortion ಎಂದು ಕಾಣಬೇಕೆ? ಮತ್ತು, ಈ distortion ಏನಿದೆ, ಅದೇ ಬದುಕಿನ ಚೈತನ್ಯವೆ?

ಅಂತರಂಗಕ್ಕೆ ಹಗೆ (1998) ಮತ್ತೆ ಈ ಬೆರಳ ಗುರುತು ಕತೆಯ ಉಳಿದು ಹೋದ ಭಾಗ ಅನಿಸಿದರೆ ಅಚ್ಚರಿಯೇನಿಲ್ಲ. ಮತ್ತೊಮ್ಮೆ ಗೋಪಾಲಕೃಷ್ಣ ಪೈಯವರ ಕತೆಗಳಲ್ಲಿ ಮತ್ತೆ ಮತ್ತೆ ಸುಳಿಯುವ ಚಾರ್ವಾಕನೇ ಇಲ್ಲಿಯೂ ಇದ್ದಾನೆ. ಮೇಲಿನ ಕತೆಯ ಸಂದರ್ಭದಲ್ಲಿ ನಾನೆತ್ತಿದ ಪ್ರಶ್ನೆಯನ್ನು ಹೆಚ್ಚು ಸಾಂದರ್ಭಿಕವಾಗಿಸಿದ್ದಾನೆ.

20ಡಾಲರ್ಸ್ (1999) ಕತೆ ಒಂದು ಮೂಲಭೂತ ಪ್ರಶ್ನೆಯನ್ನು ಮನಸ್ಸಿಗೆ ತರುತ್ತದೆ. ಇದು ಕಥಾನಕ ಅಥವಾ ಈ ಒಂದು ಕತೆಗೆ ಸಂಬಂಧಿಸಿದ ಪ್ರಶ್ನೆಯಲ್ಲ. ಒಂದು ಭಾವುಕ ನೆಲೆಯಿಂದ ನೋಡಿದಾಗಷ್ಟೇ ಬದುಕಿನ ಸೂಕ್ಷ್ಮ ಅನುಭವಗಳು ಸಂವೇದನೆಯನ್ನು ಮಿಡಿಸಬಹುದು, ಭಾವಕ್ಕೆ ಅರ್ಥದ ಹೊಳಹು ನೀಡಬಲ್ಲದು. ಬದುಕಿನ ಏರಿಳಿತಗಳನ್ನು ಜಡವಾಗಿ, ಸಂವೇದನಾಶೀಲತೆಯಿಲ್ಲದೇ ಕಾಣಬಹುದಾದರೆ ( ಪದೇ ಪದೇ ನಮಗೆ ಪ್ರಬುದ್ಧತೆಯ ಹೆಸರಿನಲ್ಲಿ ಇದನ್ನೇ ಉಪದೇಶಿಸಲಾಗುತ್ತೆ!) ಅಲ್ಲಿ ಸಾಹಿತ್ಯವಿಲ್ಲ. ಬದುಕಿನಲ್ಲಿ ನಮಗೆ ಎಲ್ಲರೂ ನಿರ್ಲಿಪ್ತರಾಗಲು, ಪ್ರಬುದ್ಧರಾಗಲು, ಜಾಣನಾಗಲು ಮತ್ತು ಹಾಗೆ ಮಾತ್ರಾ ಬದುಕಿನಲ್ಲಿ ಯಶಸ್ವಿಯಾಗಬಹುದು ಎಂದೇ ಕರೆ ನೀಡುತ್ತಾರೆ. ಹಾಗಾದಾಗಲೇ ನಾವು ‘ಬೆಳೆದವರು’ ಎನಿಸಿಕೊಳ್ಳುತ್ತೇವೆ. ಇಲ್ಲದಿದ್ದರೆ ಎಳಸು, ಹೆಣ್ಣಿಗ ಮತ್ತು ಜೀವನದಲ್ಲಿ ಹಿಂದೆ ಬಿದ್ದವರು ಆಗುತ್ತೇವೆ. ಆದರೆ ಸಾಹಿತ್ಯದ, ಸಂವೇದನೆಗಳ, ಪ್ರೀತಿಯ ಮತ್ತು ಕತೆಗಳ ಜಗತ್ತು ಬೇರೆ. ಅಲ್ಲಿ ಕಲ್ಲು ಕರಗುತ್ತದೆ, ಮನಸ್ಸು ಆರ್ದ್ರವಾಗುತ್ತದೆ, ಇತರರ ನೋವಿಗೆ ಮನಸ್ಸು ಮಿಡಿಯುತ್ತದೆ. ಇಲ್ಲಿ ಕೂಡಾ ವಾಸ್ತವ ಮತ್ತು ಕಥಾಲೋಕದ ನಡುವೆ ಒಂದು distortion ಇದೆ ಅನಿಸುವುದಿಲ್ಲವೆ? ಇದನ್ನು ಹೇಗೆ ಮೀರಬಹುದು? ಮೀರಲು ಸಾಧ್ಯವಾಗದೇ ಇರುವುದರಿಂದಲೇ ಇದೆಲ್ಲ ಕತೆಯಾಗುವುದೆ?

ಮೆಟ್ಟಿಲೇರುವ ಗಡಿಬಿಡಿಯಲ್ಲಿ ಕೊಡೆ ಮರೆತವನು (2000) ಬಹುಷಃ ಗೋಪಾಲಕೃಷ್ಣ ಪೈಯವರ ಶ್ರೇಷ್ಠ ಕತೆಗಳಲ್ಲಿ ಒಂದೆಂದು ಎಲ್ಲರ ಗಮನ ಸೆಳೆದಿರುವ ಕತೆ. ಈ ಕತೆ ಅದು ಕೊನೆಗೂ ಏನಾಗಿದೆಯೋ ಅದೇ ಆಗುವ ಪೂರ್ವ ನಿಯೋಜಿತ ಉದ್ದೇಶ ಇತ್ತು ಅನಿಸದೇ ಇರುವಾಗಲೂ ಅದು ಇತ್ತು ಎನ್ನುವುದು ನಿಜ! ಯಾವುದೋ ಒಂದು ದಿವ್ಯ ತಿರುವಿನಲ್ಲಿ ಇದ್ದಕ್ಕಿದ್ದ ಹಾಗೆ ನೀವೇ ನಿಲುಗನ್ನಡಿಯ ಎದುರು ನಿಂತುಬಿಟ್ಟಂತೆ ಮಾಡಿ ನಿಮಗೇ ಸಾದಾ ಮನುಷ್ಯನನ್ನು ಅವನ ಮುಗ್ಧ ನಗೆಯೊಂದಿಗೆ ಮುಖಾಮುಖಿಯಾಗಿಸಿ ನಿಮ್ಮ ಸಂಕೀರ್ಣತೆ, ಮನಸ್ಸಿನ ಗೊಂದಲ, ಹೊತ್ತ ಹೊರೆ ಮತ್ತು ನಾಗರೀಕ ಸಭ್ಯತೆಯ ಭಾರದ ಬಗ್ಗೆ ಒಮ್ಮೆಗೇ ಛೇ! ಎನ್ನಿಸಿ ಹಗುರಾಗಿಸಬಲ್ಲ ಶಕ್ತಿ ಇಂಥ ಕತೆಗಳದ್ದು. ಲಘುವಾಗೆಲೆ ಮನ, ಲಘುವಾಗೆಲೆ ಮನ, ಹಾರು ನನ್ನ ಬಿಟ್ಟೂ ಎನ್ನುವ ಪುತಿನ ಕವನದ ಸಾಲಿನಂಥ ಭಾವವನ್ನು ಬೆಚ್ಚಗೆ ಹೊದ್ದಿಸಿ ನಮ್ಮೊಳಗಿನ ಮನುಷ್ಯನನ್ನು ಜಾಗೃತಗೊಳಿಸುವ ಇಂಥ ಕತೆಗಳು ಸೂಕ್ಷ್ಮ ಸಂವೇದನೆಯನ್ನು, ಭಾವ ಜಗತ್ತಿನ ತಲ್ಲಣವನ್ನು ಹೃದಯದಲ್ಲಿ ಎಬ್ಬಿಸಿ ಬಿಡುತ್ತವೆ. ಆದರೆ ಕೊನೆಗೂ ಈ ಬರಹದಲ್ಲಿ ಬೇರೊಂದು ಕಡೆ ನಾನೆತ್ತಿದ Distortion ನ ಪ್ರಶ್ನೆ ಉಳಿದುಬಿಡುತ್ತದೆ.

2001-2005

ಹಾರುವ ಹಕ್ಕಿಯ ಗೂಡಿನ ದಾರಿ ಮೇಲ್ನೋಟಕ್ಕೇ ಇಷ್ಟವಾಗಿ ಬಿಡುವ ಕತೆಯ ಕೊನೆಯ ಎರಡು ಮೂರು ಪಾರಾಗಳು ಇಡೀ ಕತೆಗೆ ಕೊಡುವ ಅರ್ಥ ಇಲ್ಲದೇ ಇರುತ್ತಿದ್ದರೆ ಏನಾಗುತ್ತಿತ್ತು ಎಂದು ಯೋಚಿಸುತ್ತೇನೆ. ಈ ಕತೆ ಆ ಎರಡು ಮೂರು ಪಾರಾಗಳಿಲ್ಲದೇನೇ ಏನಾಗಿದೆಯೋ ಅದೇ ಅದರ ಶ್ರೇಷ್ಠತೆಯನ್ನು ನಿರ್ಧರಿಸಬೇಕು ಹೊರತು ಈ ಕೊನೆಯ ಪಾರಾಗಳಲ್ಲ. ಇಡೀ ಕತೆಯಲ್ಲಿ ಒಂದು ನಿಧಾನಗತಿಯ ಚಲನೆಯಿದೆ. ಸಾಕಷ್ಟು ವಿವರಗಳಿಂದ ಪುಷ್ಟಿಪಡೆದ ನಿಧಾನ ಇದು. ಕಥಾನಕದ ಚಲನೆ ಹಿಮ್ಮೊಗ ಚಲನೆಯದ್ದು. ಫ್ಲ್ಯಾಶ್ ಬ್ಯಾಕ್ ತಂತ್ರದ್ದು. ಹಾಗಾಗಿಯೇ ಒಂದು ಸಮಾಧಾನದ ಮನಸ್ಥಿತಿಯಲ್ಲಿ - ಇದು ಆದಿಕೇಶವಲುವಿನ ಮನಸ್ಥಿತಿಯೂ ಆಗಿರಬಹುದಾದ ರೀತಿಯಲ್ಲಿ - ನಿರೂಪಣೆಯ ಮನಸ್ಥಿತಿಯೂ ಆಗಿರಬಹುದಾದ ನೆಲೆಯಲ್ಲಿ , ಈ ಕಥಾನಕದ ಚಲನೆಯಿದೆ. ನಿರೂಪಣೆಗೆ ಇಂಥ ನಿಧಾನದ ಚಲನೆಯ ಅಗತ್ಯ ಯಾಕಿದೆ ಎನ್ನುವುದನ್ನು ಯೋಚಿಸಿ. ಇಲ್ಲಿನ ಕೇಂದ್ರ ಪಾತ್ರ ಮರಣದಂಡನೆಗೆ ಗುರಿಯಾಗಿದ್ದು ಇನ್ನೇನು ಗಲ್ಲಿನ ಕುಣಿಕೆಗೆ ಕತ್ತು ನೀಡಲಿದೆ. ಈ ಪಾತ್ರದ ಕತೆ ನಮಗೆ ಬದುಕುವುದಕ್ಕೆ ಅಗತ್ಯವಾದ ಏನೋ ಒಂದು ಮಂತ್ರವನ್ನು ನೀಡಲಿದೆ ಎಂದೆ ಇಟ್ಟುಕೊಳ್ಳೋಣ, ಅದನ್ನು ಸ್ವೀಕರಿಸಲು ಓದುಗನಲ್ಲಿ ಒಂದು ಮನೋಭೂಮಿಕೆ ನಿರ್ಮಾಣವಾಗಬೇಕಿದೆ ಕತೆಗಾರನಿಗೆ. ಹೀಗೆ ಈ ಕತೆ ಓದುಗನಿಗೆ ಆಪ್ತವಾಗಿ ಬಿಡುತ್ತದೆ. ಹಾಗೆಯೇ ಕತೆಯ ಕೊನೆ ಒಂದು ಲೀಪ್ ಪಡೆದುಕೊಳ್ಳುವುದರಿಂದ ವ್ಯಕ್ತಿಯನ್ನು ಮೀರಿ ನಿಂತು ಓದುಗನಲ್ಲಿ ಸಾರ್ಥಕ ಭಾವನೆಯನ್ನೂ ಮೂಡಿಸುತ್ತದೆ.

ಇದು ಎಂಥಾ ಪ್ರೇಮವಯ್ಯಾ!, ಆಕಾಶರಾಯ, ನಾಳೆ ಬೆಳಿಗ್ಗೆ ಸೂರ್ಯ ಮೂಡುವುದಿಲ್ಲವಂತೆ, ತೇರನೆಳೆಯುತಾರ ತಂಗಿ, ಭಾಷೆಯ ಒಳಗೆ ತೂರಿಕೊಂಡ ಮನುಷ್ಯ, ಸುಮ್ಮನೇ ಕೂತಲ್ಲಿ ನೀವು ಮಾಡಿದ ಕೆಲಸ - ಪ್ರಯೋಗವೇ ಪ್ರಧಾನವಾದ ಕತೆಗಳು. ವಿಮರ್ಶೆಯ ಅಥವಾ ಟೀಕೆ-ಟಿಪ್ಪಣಿಗಳ ಚೌಕಟ್ಟನ್ನು ಸರಳವಾಗಿ ಮೀರಿ ನೆಗೆದು ಬಿಡುವ ಈ ಕತೆಗಳನ್ನು ಸುಮ್ಮನೇ ಓದಿ ಆಸ್ವಾದಿಸುವುದು, ಕವಿತೆಗಳನ್ನು ಓದುವ ರೀತಿ, ಒಳ್ಳೆಯದು.

ಒಂದೇ ರೇಖೆಯ ಮೇಲೆ ಸೂರ್ಯ ಭೂಮಿ ಚಂದ್ರ ಕತೆಯಲ್ಲಿ ಒಂದು ವಿಲಕ್ಷಣವಾದ ಬಿಡುಗಡೆಯ ಸುಪ್ತ ಬಯಕೆ ಕೈಗೂಡುವ, ಕೈಗೂಡಿದ್ದೇ ಮನುಷ್ಯನೊಳಗಿನ ಮನುಷ್ಯ ಪೂರ್ಣಪ್ರಮಾಣದಲ್ಲಿ ಅರಳಿಕೊಂಡು ಬಿಡುವ ಸೂಕ್ಷ್ಮವಾದ ಚಿತ್ರವಿದೆ. ಈ ಕಾರಣಕ್ಕಾಗಿ ಇದು ಮಹತ್ವದ ಕತೆ. ಮೇಲ್ನೋಟಕ್ಕೆ ಜಯಂತ್ ಕಾಯ್ಕಿಣಿಯವರ ಪಮ್ಮೇಚನ ಶಿವರಾತ್ರಿ ಕತೆಯ ಪಮ್ಮೇಚನಂತೆಯೇ ಕಾಣುವ ರಮಾಕಾಂತ ಪಮ್ಮೇಚನಿಗಿಂತಲೂ ಒಂದು ಹೆಜ್ಜೆ ಹೆಚ್ಚೇ ಕನಸಿನ ಲೋಕಕ್ಕೆ ಲಗ್ಗೆ ಹತ್ತುತ್ತಾನೆ. ಪಮ್ಮೇಚನಿಗಾದರೋ ಅವನದೇ ಆದ ಊರು,ಮನೆ, ಪರಿಚಯಸ್ಥರು, ಹೆಂಡತಿ - ಇವರೆಲ್ಲರ ನಡುವೆಯೇ ನಾಟಕದ ಅಭಿನೇತ್ರಿಯ ಜೊತೆ ನದೀ ತೀರದ ಬೆಳದಿಂಗಳ ರಾತ್ರಿ ಸಾಕ್ಷಾತ್ಕಾರವಾದರೆ ಈ ರಮಾಕಾಂತನಿಗೆ ಅದು ನಾಗವ್ವನ ಮನೆಯ ಟೆರೆಸಿನ ಮೇಲೆ ಕೈಗೆಟಕುತ್ತದೆ. ಆಮೇಲೂ ಅವನ ಕನಸಿನ ದರ್ಬಾರನ್ನು ಅವನು ಕಂಪೆನಿಯ ಹಣದಲ್ಲಾದರೆ ಏನಂತೆ (ಪಮ್ಮೇಚ ಡಿಪೋದಿಂದ ತಂದ ಸರಕಾರೀ ಬಸ್ಸಿನಲ್ಲಿ ನಡೆಸುವುದಿಲ್ಲವೆ!) ಹಗಲಲ್ಲೂ ನಡೆಸುತ್ತಾನೆ ಮಾತ್ರವಲ್ಲ ಸ್ಪಷ್ಟವಾದ ಬಿಡುಗಡೆಯನ್ನೂ ತನ್ನ ಪಾಲಿಗೆ ಉಳಿಸಿಕೊಳ್ಳಬಲ್ಲವನಾಗುತ್ತಾನೆ.

ಜೂಟಾಟ ಮಾತ್ರ ನಿಜಕ್ಕೂ ಸ್ವಪ್ನಸಾರಸ್ವತವನ್ನು ಮೀರಿದ ಕಾದಂಬರಿಕಾರನೊಬ್ಬ ಗೋಪಾಲಕೃಷ್ಣ ಪೈಯವರ ಒಳಗಿದ್ದಾನೆಂಬುದನ್ನು ಶ್ರುತಪಡಿಸಿದ ಅದ್ಭುತ ಚಿತ್ರಕ ಶಕ್ತಿಯ ನಿರೂಪಣೆ. ಈ ನಿರೀಕ್ಷೆಯನ್ನು ಅವರು ಮುಂದಿನ ದಿನಗಳಲ್ಲಿ ನಿಜಗೊಳಿಸುತ್ತಾರೆಂದು ನಿರೀಕ್ಷಿಸುತ್ತಾ ನನ್ನ ಮಾತುಗಳನ್ನ ಮುಗಿಸುತ್ತೇನೆ. ಇಷ್ಟು ಹೊತ್ತು ತಾಳ್ಮೆಯಿಂದ ಕೇಳಿದ ನಿಮಗೂ, ಇಲ್ಲಿ ಮಾತನಾಡುವ ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದಗಳು, ನಮಸ್ಕಾರ.
(ಕಾಸರಗೋಡಿನಲ್ಲಿ ನಡೆದ ಪುಟ್ಟ ಸಭೆಯಲ್ಲಿ ಹಂಚಿಕೊಂಡ ಮಾತುಗಳು)

No comments: