Saturday, February 25, 2012

ಮರಳುಗಾಡಿನಲ್ಲಿ ಜೀವಸೆಲೆಯ ಹುಡುಕಾಟ

ವಿ.ಎಸ್.ನೈಪಾಲ್ ಕಾದಂಬರಿಗಳಷ್ಟೇ ಪ್ರವಾಸೀ ಅನುಭವಗಳನ್ನೂ ಬರೆದಿದ್ದಾರೆ. ಹಾಗೆಯೇ, ಅವರು ಕೃತಿಗಳಿಂದ ಖ್ಯಾತರಾಗಿರುವಷ್ಟೇ ವಿವಾದಗಳಿಂದಲೂ ಖ್ಯಾತರು ಎನ್ನುವುದು ಕೂಡ ನಿಜವೇ. ಆದರೆ ನೈಪಾಲರ ಹೇಳಿಕೆಗಳು ಅಥವಾ ನಿಲುವುಗಳನ್ನು ಪೂರ್ಣಪ್ರಮಾಣದಲ್ಲಿ ಗ್ರಹಿಸಲು, ಅವು ಯಾವ ಹಿನ್ನೆಲೆ ಅಥವಾ ನೆಲೆಯಿಂದ ಹೊರಟಂಥವು ಎನ್ನುವುದನ್ನು ಅರಿತುಕೊಳ್ಳಲು ಅವರ ಬರಹಗಳನ್ನು ಓದಬೇಕಾಗುತ್ತದೆ. ಉದಾಹರಣೆಗೆ ಈ The Masque of Africa ಕೃತಿಯನ್ನು ಓದಿದ ಮೇಲೆ ಬಹುಷಃ ನಮಗೆ ನೈಪಾಲರ ಧಾರ್ಮಿಕ ಮೂಲಭೂತವಾದಿತ್ವ ಹೆಚ್ಚು ಅರ್ಥವಾಗಬಹುದು, ಸ್ಫುಟವಾಗಬಹುದು ಅನಿಸುತ್ತದೆ. ಈ ಕೃತಿ ನಮಗೆ ಆಫ್ರಿಕಾದ ಉಗಾಂಡ, ಘಾನ, ನೈಜೀರಿಯಾ, ಐವರಿ ಕೋಸ್ಟ್, ಗಾಬನ್ ಮತ್ತು ದಕ್ಷಿಣ ಆಫ್ರಿಕಾದ ಮೂಲವಾಸಿಗಳಲ್ಲಿದ್ದ, ಹೊರಗಿನಿಂದ ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮದ ಹೇರಿಕೆಯಾಗುವುದಕ್ಕೂ ಮೊದಲು ಇದ್ದ ಧಾರ್ಮಿಕ ನಂಬುಗೆಗಳು, ಆಚರಣೆಗಳು, ವಿಧಿವಿಧಾನಗಳನ್ನು ಕುರಿತು ಹೇಳುವಾಗಲೇ ನೈಪಾಲ್‌ರ ದೃಷ್ಟಿಕೋನ, ಇಷ್ಟಾನಿಷ್ಟಗಳ ಪರಿಚಯವನ್ನೂ ಕೊಡುವುದರಿಂದ ಈ ಮನುಷ್ಯ ಯಾಕೆ ಒಂದು ನಿರ್ದಿಷ್ಟ ನಿಲುವನ್ನು ಇಲ್ಲಿ ತಗೆದುಕೊಳ್ಳುತ್ತಿದ್ದಾರೆ ಎನ್ನುವುದು ಕೂಡ ಅರ್ಥವಾಗುತ್ತದೆ. ಬಹುಷಃ ಇದಿಲ್ಲದೇ ಹೋದಾಗ ನಮಗೆ ನೈಪಾಲ್ ಹೇಳಿಕೆಗಳು ಬೇರೆಯೇ ಆದ ಹಿನ್ನೆಲೆಯಲ್ಲಿ (ನಮ್ಮ ನಮ್ಮದೇ ಪೂರ್ವಾಗ್ರಹಗಳ ಹಿನ್ನೆಲೆಯಲ್ಲಿ ಎನ್ನೋಣವೆ?) ಕಾಣುವುದು ಸಾಧ್ಯವಿದೆ.

ಈ ಕೃತಿಯಲ್ಲಿ ನಮಗೆ ಸಿಗುವ ಆಫ್ರಿಕಾ ವಿಶೇಷವಾದ ಒಂದು ವಿಸ್ಮಯವನ್ನೋ, ಆಶ್ಚರ್ಯವನ್ನೋ ಉಂಟುಮಾಡದಿರುವುದಕ್ಕೆ ಇರುವ ಮುಖ್ಯ ಕಾರಣವೇನೆಂದರೆ, ಇಲ್ಲಿ ನಾವು ಕಾಣುವ ಸಣ್ಣತನ, ಕೊಳಕು, ಢಾಂಭಿಕತೆ, ಪುಢಾರಿತನ ಅಥವಾ ದೊಡ್ಡಸ್ತಿಕೆಗಳೆಲ್ಲವೂ ನಮಗೆ pure Indian ಅಂತಲೂ ಅನಿಸುವುದೇ ಹೊರತು ಇನ್ನೇನಲ್ಲ! ಆದಾಗ್ಯೂ ನೈಪಾಲ್‍ಗೆ ಅದು ಮುಖ್ಯವಾದ ಸಂದರ್ಭಗಳು ಮನುಷ್ಯನ ಮೂಲಭೂತ ಅವಸ್ಥೆಯನ್ನು ಕುರಿತು ಹೇಳುವುದರಿಂದ ನಮಗೆ ಕುತೂಹಲಕರವಾಗಿಯೇ ಕಾಣುವುದು ಸುಳ್ಳಲ್ಲ. ಇಲ್ಲಿ ಗಮನ ಸೆಳೆದ ಕೆಲವು ಸಂಗತಿಗಳತ್ತ ಮಾತ್ರ ಮಾತನಾಡಿ ಅದು ನಿಮ್ಮಲ್ಲಿ ಈ ಕೃತಿಯ ಬಗ್ಗೆ ಆಸಕ್ತಿ ಮೂಡಿಸಿದಲ್ಲಿ ಇಡೀ ಕೃತಿಯನ್ನು ನೀವು ಓದುವಂತಾಗಲಿ ಎಂದಷ್ಟೇ ಬಯಸುತ್ತೇನೆ.

ಮಹಾನ್ ಸರ್ವಾಧಿಕಾರಿಯಾಗಿ ಮೆರೆದ ಒಬ್ಬ ದೊರೆ, ಆಗರ್ಭ ಶ್ರೀಮಂತಿಕೆಯಲ್ಲಿ ಮುಳುಗಿ ತೇಲಿದ ಕುಟುಂಬ ಕ್ರಮೇಣ ಬೇರೆಯವರ ತುತ್ತಾಗಿ, ಕುಟುಂಬವೇ ನಿರ್ಗತಿಕವಾಗುವ ಪರಿಸ್ಥಿತಿಯಲ್ಲಿದ್ದರೆ ಆ ಕುಟುಂಬದ ಗತವೈಭವದ ಹಿನ್ನೆಲೆ ನೋವು ನೀಡುವ ನೆನಪಷ್ಟೇ ಆಗಿಬಿಡುತ್ತದೆ. ಈ ಹಂತದಲ್ಲಿ ಕ್ರಮೇಣ ನಾಶವಾಗುವ ಅನೇಕಾನೇಕ ವಿಧಿವಿಧಾನಗಳು, ಸಂಭ್ರಮದ ಆಚರಣೆಗಳು, ನಡವಳಿಕೆಗಳು ಕೂಡ ನೋವು ಸಂಕಟದ ನೆನಪುಗಳಾಗಿ ಬಿಡುತ್ತವೆ. ಹಬ್ಬದ ದಿನ ಸತ್ತ ಮನೆಮಗುವಿನ ನೆನಪಿನಂತೆ ಈ ದುಃಖ ನಿರಂತರವಾದದ್ದು. ಹಾಳುಬಿದ್ದ ಜಮೀನ್ದಾರಿ ಮನೆತನಗಳ ಬಗ್ಗೆ ನಾವೆಲ್ಲ ಅಷ್ಟಿಷ್ಟು ಬಲ್ಲೆವು. ಇಲ್ಲಿ ನೈಪಾಲ್ ಆಫ್ರಿಕಾದ ದೊರೆಗಳ ಸಮಾಧಿಸ್ಥಳಗಳ ಬಗ್ಗೆ ಹೇಳುವಾಗಲೂ ಅವು ನೆನಪಾಗುತ್ತವೆ. ಈಗಲೂ ಸಂಪತ್ತು, ಅಧಿಕಾರ ಇರುವ ಮನೆತನಗಳ ಹಿರಿಯರ ಸಮಾಧಿಸ್ಥಳಗಳಿಗೆ ದೊರಕುವ ಆರೈಕೆ, ಮೇಲ್ವಿಚಾರಣೆ, ಸವಲತ್ತು ಎಂಥದ್ದು ಎನ್ನುವುದನ್ನು ಕಂಡುಬಂದ ನೈಪಾಲ್‌ಗೆ ಮುಳುಗುತ್ತಿರುವ ಕುಟುಂಬದ ಹಿರಿಯ ದೊರೆಗಳ ಸಮಾಧಿಸ್ಥಳಗಳು ಒದಗಿಸುವ ವೈರುಧ್ಯ ಮುಖ್ಯವಾಗುತ್ತದೆ.

There isn't the money for that now; and it is strange that rituals which would once have seemed necessary and vital, serving what was divine, beyond money, have to be disregarded when there is no money. (ಪುಟ 20)

ಮನುಷ್ಯ ಸಂಬಂಧಗಳೂ ಹೀಗೆಯೇ ಅಲ್ಲವೆ? ನಮ್ಮ ಅನೇಕಾನೇಕ ಸಾಮಾಜಿಕ-ಧಾರ್ಮಿಕ ಕಟ್ಟುಕಟ್ಟಳೆಗಳು, ರೀತಿ-ನೀತಿ, ರಿವಾಜುಗಳು ಕೂಡಾ ಹೀಗೆಯೇ ಅಲ್ಲವೆ? ಆದರೂ ಎಲ್ಲ ಸರಿಯಿದ್ದಾಗ ನಾವು ಅವುಗಳಿಗಾಗಿ ಎಂಥಾ ಬಿಗಿಪಟ್ಟು ಹಿಡಿಯುತ್ತೇವಲ್ಲವೆ? ಈ ಹಿನ್ನೆಲೆಯಲ್ಲಿ ನೋಡುವಾಗ ಎಲ್ಲವೂ ಅರ್ಥಹೀನ, ವೇಸ್ಟ್ ಅನಿಸುವುದಿಲ್ಲವೆ? ಆದರೂ ಎಲ್ಲ ಸರಿಯಿದ್ದಾಗ ಅವುಗಳಲ್ಲೇ ನಾವು ಜೀವನದ ಅರ್ಥಪೂರ್ಣತೆಯನ್ನೂ ಕಂಡುಕೊಳ್ಳುತ್ತಿರುವುದು ಕೂಡ ನಿಜವಲ್ಲವೆ!

ನೈಪಾಲ್ ಒಬ್ಬ ಕವಯತ್ರಿಯನ್ನು ಮಾತನಾಡಿಸುತ್ತಾರೆ. ನಲವತ್ತರ ಹರಯದ ಅವಳು ತನ್ನ ತಂದೆ, ಅಜ್ಜ ಎಲ್ಲರನ್ನೂ ಕಳೆದುಕೊಂಡು, ಅಂತರ್ಯುದ್ಧ ಮತ್ತು ವಸಾಹತುಶಾಹಿಯ ದಮನಕಾರೀ ನೀತಿಯಡಿ ತನ್ನ ಭಾಷೆ, ಧರ್ಮ, ಸಂಸ್ಕೃತಿ ಎಲ್ಲವೂ ಹಾಯ್ದುಬಂದ ಘೋರವನ್ನು ಹೊತ್ತುಕೊಂಡೇ ಇರುವಂತೆ ಕಾಣುತ್ತಾಳೆ. ಮೇಲ್ನೋಟಕ್ಕೆ ದ್ವಂದ್ವ, ಗೊಂದಲ ಮತ್ತು ಅರ್ಥಹೀನ ಮೂಲಭೂತವಾದವಾಗಿಯೂ ಕಾಣಬಹುದಾದ ಇಂಥ ಅನೇಕರು ಇಲ್ಲಿ ನಮಗೆ ಸಿಗುತ್ತಾರೆ. ಇವರ ಮಾತುಗಳು ಹೊರಗಿನಿಂದ ಪ್ರವೇಶಿಸುವವರ ಗ್ರಹಿಕೆಗಳಿಗೆ ನಿಲುಕಿಯೂ ನಿಲುಕುವುದಿಲ್ಲ ಎನ್ನುವ ಎಚ್ಚರ ಪ್ರವಾಸಿಯಲ್ಲಿರುವುದು ಮೇಲು. ನೈಪಾಲ್ ಇವರ ಮನಸ್ಥಿತಿಯನ್ನು ಒಂಥರಾ ದೀರ್ಘಕಾಲೀನ ಕಾಯಿಲೆಗೆ ಕ್ರಮೇಣ ಒಗ್ಗಿಕೊಂಡವರ ಹೋಲಿಕೆಯನ್ನಿತ್ತಿರುವುದು ಗಮನಸೆಳೆಯುತ್ತದೆ.

I did not, after this, ask her about African history, the oral tradition and myth. There was obviously no special African way of dealing with, neutralising, a bad history or a bad present. It seemed more likely that it was like dealing with a very long illness. It announced itself one day, and you dreamt then of walking up well one morning. Gradually then you sank into it, and you lost your idea of quick return of health and wholeness. You made your peace, so to speak, with your illness; and the time began to pass. You began to live in this half-and-half way. It became all you knew; it became life.
(ಪುಟ 33)

ಬೆಕ್ಕುಗಳ ಬಗ್ಗೆ ಮಹಾ ಒಲವಿರುವ ನೈಪಾಲ್‌ಗೆ ಆಫ್ರಿಕಾದ ಉದ್ದಕ್ಕೂ ಪ್ರೇತ ಪ್ರತೀಕಗಳೆಂದೇ ಪರಿಗಣಿಸಲ್ಪಡುವ ಬೆಕ್ಕುಗಳಿಗೆ ಒದಗುವ ದಯನೀಯ ಸಾವನ್ನು ಕಂಡೇ ಮನಕಲಕಿ ಹೋಗಿರಬೇಕು. ಸಾಲದಿದ್ದರೆ ಇಲ್ಲಿ ಅದೊಂದು ಸ್ವಾದಿಷ್ಟ ಆಹಾರ! ಬೆಕ್ಕನ್ನು ‘ಸರಿಯಾಗಿ’ ಕೊಲ್ಲುವ ವಿಧಾನದ ಬಗ್ಗೆಯೇ ಇಲ್ಲಿ ಚರ್ಚೆಯಿದೆ! ಚೀಲದಲ್ಲಿ ಅದನ್ನು ಕಟ್ಟಿ ಕುದಿಯುವ ನೀರಿನಲ್ಲಿ ಮುಳುಗಿಸಿ ಕೊಲ್ಲುವುದು ಇದುವರೆಗೆ ಕಂಡುಕೊಂಡ ವಿಧಾನಗಳಲ್ಲೇ ಹೆಚ್ಚು ಸಂಸ್ಕರಿತ ವಿಧಾನವೆಂದು ಹೇಳಲಾಗಿದೆ. ಈ ರೀತಿ ಕೊಂದ ಬೆಕ್ಕಿನ ಚರ್ಮ ಸುಲಿದು ಮಾಂಸ ಬೇರ್ಪಡಿಸುವುದು ಕೂಡಾ ಸುಲಭವಂತೆ. ತಾನು ಪ್ರವಾಸ ಹೋಗುವ ದೇಶದ ಬಗ್ಗೆ, ಸ್ಥಳದ ಬಗ್ಗೆ ಪೂರ್ವಭಾವಿಯಾಗಿ ಏನೂ ಓದಿಕೊಳ್ಳದೆ ತೆರೆದ ಮನಸ್ಸನ್ನಿಟ್ಟುಕೊಂಡು ಹೊರಡುವುದಾಗಿ ಹೇಳುವ ನೈಪಾಲ್ ಇಲ್ಲಿ ಸ್ಪೇಕೆ ಎಂಬಾತ ಹತ್ತೊಂಭತ್ತನೇ ಶತಮಾನದ ಕೊನೆಯ ಭಾಗದಲ್ಲಿ ಉಗಾಂಡಾದ ಕುರಿತು ಬರೆದ ಹಲವಾರು ಉಲ್ಲೇಖಗಳನ್ನು ನೀಡುತ್ತಾರೆ. ಬೆಕ್ಕುಗಳ ಬಗ್ಗೆಯೂ ಇಂಥ ಒಂದು ಉಲ್ಲೇಖವನ್ನು ನೀಡಿದ್ದಾರೆ. ಒಂದು ಕಡೆ ಆತ ಒಂದು ಬೆಕ್ಕನ್ನು ತಕ್ಷಣಕ್ಕಾದರೂ ಸಾವಿನಿಂದ ಪಾರು ಮಾಡಲೆಂದೇ ಅದನ್ನು ತಿನ್ನಲು ಬಯಸಿದವನಿಂದ ಹಣಕೊಟ್ಟು ಖರೀದಿಸಿದ ಪ್ರಸಂಗವಿದೆ. ಹೋಟೆಲೊಂದರಲ್ಲಿ ನೈಪಾಲ್ ಕೂಡ ಅಳಿದುಳಿದು ಸಾವಿಗೆ ಹತ್ತಿರವಾಗಿರುವ ಒಂದು ಬೆಕ್ಕಿನ ಮರಿಗೆ ಹಾಲು ಸಿಗುವಂತೆ ಮಾಡಿ ಸ್ವಲ್ಪ ಸಮಾಧಾನಪಟ್ಟುಕೊಳ್ಳುತ್ತಾರೆ. ಅದೊಂದು ಹೇಗೋ ಡ್ರೈನ್ ಪೈಪಿನ ಸಂದಿನಲ್ಲಿ ಜೀವವುಳಿಸಿಕೊಂಡಿತ್ತಂತೆ. ಇನ್ನೊಂದು ಕಡೆ ಸಮಾಧಿಸ್ಥಳದಲ್ಲೇ ಕಾಣಿಸಿದ ಅದೃಷ್ಟಹೀನ ಬೆಕ್ಕಿನ ಮರಿಯೊಂದನ್ನು ಉಳಿಸುವುದು ಸುತ್ತಲಿನ ಪ್ರಭಾವಶಾಲೀ ಮತ್ತು ಕಟ್ಟಾ ನಂಬಿಕಸ್ತರ ಮೇಲ್ಗೈಯಿಂದಾಗಿ ಸಾಧ್ಯವಾಗುವುದೇ ಇಲ್ಲ. ಇದು ದಿನಗಟ್ಟಲೆ ನೈಪಾಲರ ಪಾಪಪ್ರಜ್ಞೆಯನ್ನು ಕಾಡುತ್ತಲೇ ಉಳಿಯುತ್ತದೆ.

ಈ ನೆಲದ್ದೇ ಆದ ಒಂದು ದೈವಭೀತಿ, ಅದನ್ನು ನಾವು ನಮ್ಮ ಅನುಕೂಲಕ್ಕಾಗಿ ಧರ್ಮ ಎಂದು ಕರೆಯುವುದಾದರೆ ಅದೇನಿದೆಯೊ ಅದರ ಬಗ್ಗೆ ನೈಪಾಲ್‌ಗೆ ವಿಶೇಷ ಒಲವು. ಅವರ ಒಲವು ಒಬ್ಬ ಶೃದ್ಧಾಳುವಿನದ್ದಲ್ಲ, ಕುತೂಹಲಿಯದ್ದು. ಯಾವುದೇ ಒಂದು ನೆಲದ ಧರ್ಮವೇನಿದೆ, ಅದು ಮನುಷ್ಯನ ಮೂಲಭೂತ ಸ್ವಭಾವವನ್ನು ನಮಗೆ ತೋರಿಸುತ್ತದೆ ಎನ್ನುತ್ತಾರವರು. ಯಾವ ಮಾಯಕತೆ ನಮ್ಮನ್ನು ಇಷ್ಟೆಲ್ಲಾ ಆಧುನಿಕತೆ, ರಾಜಕೀಯ-ಆರ್ಥಿಕ ದಬ್ಬಾಳಿಕೆ-ಮೇಲಾಟಗಳನ್ನೂ ಮೀರಿ ಆ ಮೂಲ ದೈವೀಕ ಪ್ರಜ್ಞೆಗೆ ಕಟ್ಟಿಹಾಕಿದೆ ಎಂದರೆ ಅದು ಭೀತಿಯೇ ಇರಬೇಕೆನ್ನುತ್ತಾರೆ ನೈಪಾಲ್. `The fear was real, not affected, and I felt it was this, rather than ideas of beauty and history and culture (as some people said), that was keeping the past and all the old gods close.' (ಪುಟ 95) ಇದು ಎಷ್ಟು ಕುತೂಹಲಕರವಾಗಿದೆ ಎನ್ನುವುದಕ್ಕೆ ಇದನ್ನು ಓದಿ:

A Lagos city councillor said to me, `Even the pastor of the church will go very quietly, if he can, to the traditional priest and the shrine. Let me tell you: the average African is very afraid of the pagan, and the pagan is there. Muslims and Christians practice forgiveness and cannot harm you. In the pagan religion there is no forgiveness. It is a tit-for-that religion. Three are rules you have to follow very strictly, and if you go against then you either die or go mad. They punish swiftly and they stick to it. They adhere to what the priests in the shrines or the gods demand. So you see it has a strong hold.' (ಪುಟ 95)

ಬೆಕ್ಕುಗಳಂತೆಯೇ ಪೋಲೋ ಕ್ಲಬ್ಬುಗಳಿಂದ ಪರಿತ್ಯಕ್ತಗೊಂಡ ಕುದುರೆಗಳು ಹೊಟ್ಟೆಗಿಲ್ಲದೆ ಬಿಸಿಲು ಮಳೆಯೆನ್ನದೆ ಸಿಕ್ಕಲ್ಲಿ ಅಲೆಯುತ್ತಾ ಸಾಯುವ ದಾರುಣತೆಯ ಬಗ್ಗೆಯೂ ನೈಪಾಲ್ ಬರೆದಿದ್ದಾರೆ. ದನಗಳ ಬಗ್ಗೆ ಮುಂದೆ ವಿವರವಾಗಿಯೇ ಗಮನಿಸುವುದಿದೆ. ಈ ಕುದುರೆಗಳು ಹೀಗೆ ಹತಾಶವಾಗಿ ಸಾವಿನ ಹಾದಿಯತ್ತ ಕಾಲೆಳೆಯುವುದನ್ನು ಪ್ರತಿದಿನವೂ ತನ್ನ ಕಣ್ಣೆದುರೇ ಕಾಣುತ್ತ ಸಹಿಸಲಾಗದೆ ಯುರೋಪಿಯನ್ ರಾಜತಾಂತ್ರಿಕನ ಹೆಂಡತಿಯೊಬ್ಬಳು ಅವುಗಳನ್ನು ಗುಂಡಿಟ್ಟು ಕೊಲ್ಲುತ್ತಿದ್ದಳಂತೆ! ಇದು ಅಂಥ ಕುದುರೆಗಳ ಮಟ್ಟಿಗೆ ಇದ್ದುದರಲ್ಲೇ ಮಾನವೀಯ ಕಾರ್ಯ ಎನ್ನುತ್ತಾನೆ ನೈಪಾಲರ ಒಬ್ಬ ಸ್ನೇಹಿತ. ತಾನು ಭೇಟಿಯಾದವರಲ್ಲಿ ಪ್ರಾಣಿಗಳ ಬಗ್ಗೆ ಪ್ರೀತಿಯಿದ್ದ ಒಬ್ಬನೇ ಒಬ್ಬ ನೈಜೀರಿಯನ್ ಅದೆಸಿನಾ ಎಂಬಾತ ಎನ್ನುವ ನೈಪಾಲ್ ಈ ಕುತೂಹಲಕರ ವ್ಯಕ್ತಿಯ ಬಗ್ಗೆ, ಅವನ ಜೀವನಗಾಥೆಯ ಬಗ್ಗೆ ಮತ್ತು ಅವನ ಒಡನಾಟದ ಬಗ್ಗೆ ಬಹಳ ವಿವರವಾಗಿ ಬರೆದಿದ್ದಾರೆ. ಅದಕ್ಕಾಗಿಯಾದರೂ ಈ ಪುಸ್ತಕವನ್ನು ತಪ್ಪದೇ ಓದಬೇಕು ಎಂದಷ್ಟೇ ಇಲ್ಲಿ ಸೂಚಿಸುತ್ತೇನೆ.

ಕುಮಾಸಿ ಎಂಬ ಒಂದು ಪುಟ್ಟ ನಗರದ ಬಗ್ಗೆ ನೈಪಾಲ್ ನೀಡುವ ವಿವರ ತುಂಬ ಸುಂದರವಾಗಿದೆ. ಇಲ್ಲಿ ನಡುರಾತ್ರಿ ತಲುಪುವ ಇವರು ಮತ್ತು ಇವರ ಸ್ನೇಹಿತರಿಗೆ ಸರಿಯಾದ ಮಾರ್ಗ ತಿಳಿಯದೆ, ತಂಗಬೇಕಾದ ವಸತಿ ಸಿಗದೆ ಏನೇನೋ ತಾಪತ್ರಯಗಳು ಎದುರಾಗುತ್ತವೆ. ಬೆಳಿಗ್ಗೆ ಎದ್ದು ನೋಡಿದಾಗ ಆ ಸ್ಥಳ ಇನ್ನಷ್ಟು ಪರಿಚಿತ-ಅಪರಿಚಿತ ಭಾವನೆಗಳ ಕಲಸುಮೇಲೋಗರದಂತೆ ಕಣ್ಣಿಗೆ ಮುದ ನೀಡುತ್ತದೆ. ಬ್ರಿಟಿಷ್ ವಸಾಹತುಶಾಹಿಯ ಎಲ್ಲಾ ಚಹರೆಗಳನ್ನು ಇನ್ನೂ ಉಳಿಸಿಕೊಂಡ ಒಂದು ಪುಟ್ಟ ಹಳ್ಳಿಯಂತೆ ಕಾಣುವ ಈ ಜಾಗ ಮಾಲ್ಗುಡಿಯನ್ನು ನೆನಪಿಸಿದರೆ ಅಚ್ಚರಿಯಿಲ್ಲ. ಹಾಗೆಯೇ ನೈಪಾಲರ ವಿವರಣೆಯಲ್ಲಿ ಸಹಜವಾಗಿ ಎಂಬಂತೆ ಮೈತಳೆದು ನಿಲ್ಲುವ ಸಾಮಾಜಿಕ ವೈರುಧ್ಯಗಳು ಕೂಡಾ ನಮ್ಮ ಗಮನ ಸೆಳೆಯುತ್ತವೆ. ಇಲ್ಲಿನ ಸಂತೆಮಾಳದ ವಿವರ ಓದಿ:

It was a hilly, up and down town, in the great heat fatiguing to explore, but with oddities that were all its own: a street of coffin-makers in the bazaar area, with the painted coffins - grey, white, lilac, silver and gold - pushed out on to the pavements and creating a festive effect (abolishing the idea of grief, introducing the idea of shopping, and suggesting at the same time one kind of plot possibility for a thriller writer). Begging women had their own area in the market, and that too was cheerful. Below bright parasols the women (packed a little too tightly) sat on little stools with their begging cups, avoiding eye-contact with the alms-givers, who moved among them in a matter-of-fact way; so the business of giving and receiving involved no strain.

Richmond said (though I couldn't understand why he brought in Islam here) that Islam encouraged people to give alms, and so there had to be alms-receivers.
(ಪುಟ 172)

ಇಸ್ಲಾಂ ದಾನ-ಧರ್ಮವನ್ನು ಉತ್ತೇಜಿಸುವುದರಿಂದ ಭಿಕ್ಷೆ ಬೇಡುವವರ ಅಗತ್ಯವೂ ಹುಟ್ಟಿಕೊಳ್ಳುತ್ತದೆ ಎನ್ನುವಾಗ ರಿಚಮಂಡ್, ಹೆಸರಿನಿಂದಲೇ ತಿಳಿಯುವಂತೆ ಒಬ್ಬ ಕ್ರಿಶ್ಚಿಯನ್ ಮತ್ತು ವಿದೇಶಿ, ಆಫ್ರಿಕಾಕ್ಕೆ. ಆತ ಇದರೊಳಕ್ಕೆ ಯಾಕೆ ಇಸ್ಲಾಂನ್ನು ಎಳೆದು ತಂದನೋ ಅರ್ಥವಾಗಿಲ್ಲ ಎನ್ನುವ ನೈಪಾಲ್ ಮಾತಿನ ಶೈಲಿ ಮತ್ತು ತಣ್ಣಗಿನ ಧ್ವನಿಯನ್ನು ಅದೇ ಮೇಲಿನ ಪಾರಾ ಓದಿದ ಬೆನ್ನಿಗೇ ಓದುವಾಗ ಮೆಚ್ಚದಿರಲು ಸಾಧ್ಯವೆ! ಇಡೀ ಪುಸ್ತಕ ಇಂಥ ಪಂಚ್‌ಗಳನ್ನು ಹೊಂದಿದ್ದು ಈ ಓದು ಮುದ ನೀಡುವಂತಿದೆ. ದ ಹಿಂದೂ ಪತ್ರಿಕೆಯಲ್ಲಿ ಬಂದ ವಿಮರ್ಶೆ ಅನಾಸಕ್ತ ಪ್ರವಾಸಿಗನ ಟಿಪ್ಪಣಿ ಎಂದು ಈ ಕೃತಿಯ ಬಗ್ಗೆ ಹೇಳಿರುವುದು ಈ ನೆಲೆಯಲ್ಲಿ ಅಚ್ಚರಿ ಹುಟ್ಟಿಸುತ್ತದೆ.

ಮಾಂಸಕ್ಕಾಗಿ ದನ, ಕುರಿ ಮತ್ತು ಆಡುಗಳ ನಿರಂತರ ಹತ್ಯೆಯನ್ನು ಸಹಿಸಲಾಗದೇ ನೈಪಾಲ್ ನೀಡುವ ಭಾವುಕ ಟಿಪ್ಪಣಿ ಯಾರನ್ನಾದರೂ ಕಲಕುವಂತಿದೆ. ಇಡೀ ಆಫ್ರಿಕಾದಲ್ಲಿ ಇಂಥ ಕ್ರೌರ್ಯವನ್ನು, ಅದು ಬೆಕ್ಕು, ಕುದುರೆ ಅಥವಾ ಆನೆ ಯಾವುದರ ಮಾಂಸಕ್ಕಾಗಿಯೇ ಇರಲಿ, ಉದ್ದಕ್ಕೂ ಕಾಣುತ್ತ ಬೆಚ್ಚುವ ನೈಪಾಲ್ ಹೀಗೆ ಬರೆಯುತ್ತಾರೆ:

The land is full of cruelty which is hard for the visitor to bear. From the desert countries to the north long-horned cattle are sent for slaughter here in big ramshackle trucks, cargoes of misery, that bump along the patched and at times defective autoroute to Abidjan, to the extensive abattoir area near the docks. And there in trampled and vile black earth these noble creatures, still with dignity, await their destiny in the smell of death, with sometimes a calf, all alone, without a mother, finding comfort of a sort in sleep, a little brown circle on the dirty ground, together with the beautiful goats and sheep assembled for killing. The ground around the abattoir goes on and on. When sights like this meet the eyes of simple people every day there can be no idea of humanity, no idea of grandeur. (ಪುಟ 213)

ಐವರಿ ಕೋಸ್ಟ್‌ನ ಸಂಜೆಗಳನ್ನು ಬಾವಲಿಗಳು ಅದ್ಭುತ ದೃಶ್ಯ ವೈಭವವನ್ನಾಗಿಸುವ ಕುರಿತು ಬರೆಯುತ್ತ ಹಲವಾರು ಕುತೂಹಲಕರ ಸಂಗತಿಗಳನ್ನು ನೈಪಾಲ್ ಬರೆಯುತ್ತಾರೆ. ಒಂದು ಮಿಲಿಯನ್ ಬಾವಲಿಗಳೇ ಆಗಸವನ್ನು ಮುಚ್ಚಿಬಿಡಲು ಸಾಕೆನ್ನಿಸುವಾಗಲೇ ಇಲ್ಲಿ ಪ್ರಕೃತಿ ನಾಲ್ಕೈದು ಮಿಲಿಯನ್ ಬಾವಲಿಗಳನ್ನು ಬಾನಿಗೆ ತೂರಿಬಿಟ್ಟಿದೆ ಎನ್ನುತ್ತಾರವರು. ತಮ್ಮ ಪಂಗಡ ಅಥವಾ ಬುಡಕಟ್ಟಿನ ಪವಿತ್ರ ವಸ್ತುವಲ್ಲದಿದ್ದರೆ ಈ ಪ್ರಕೃತಿ ಒದಗಿಸಿದ ಏನನ್ನೇ ಆದರೂ ಸರಿ ತಿನ್ನುವವರಾದ ಆಫ್ರಿಕನ್ನರು ಈ ಬಾವಲಿಗಳನ್ನೂ ಬಿಟ್ಟಿಲ್ಲ ಎನ್ನುತ್ತ ಈ ಬಾವಲಿಗಳನ್ನು ಹೊಡೆದುರುಳಿಸುವ, ಹೆಕ್ಕುವ ಮತ್ತು ಸಾಧಾರಣಕ್ಕೆ ಬೇಯಲೊಪ್ಪದ ಅವುಗಳನ್ನು ಬೇಯಿಸುವ ಕಷ್ಟಗಳ ಬಗ್ಗೆಯೇ ಹೆಚ್ಚು ಚಿಂತಿತರೆನ್ನುತ್ತಾರೆ.

It might have been thought that with all that flying some hundreds of bats would have dropped dead every evening and fallen from the sky to a grateful people. But no one had seen such a thing, a bat dead on the ground. And I was told by someone (perhaps not an expert) that when bats had to die they did not show themselves, but hid away, being in this like cats, who could leave their houses and go away to die.

This however, was a luxury few of the cats of the Ivory Coast could enjoy. No cats wandered the streets here. Cats were eaten; they were part of the bounty of Nature, and they could be reared to be killed. `Like chickens,' the youngish man said, and the comparison amused him.

.........

The thought of this everyday kitchen cruelty made everything else in the Ivory Coast seem unimportant.
(ಪುಟ 214)

ಆಫ್ರಿಕನ್ ವಾಮಾಚಾರ ಅಥವಾ ಆ ತರದ್ದೆಂದು ಹೇಳಬಹುದಾದ ಕೆಲವು ಆಚರಣೆಗಳ ಪ್ರಾತ್ಯಕ್ಷಿಕೆಯನ್ನು ನೋಡಲು, ಆ ಬಗ್ಗೆ ತಿಳಿಯಲು ತಮ್ಮ ಪ್ರವಾಸದುದ್ದಕ್ಕೂ ನೈಪಾಲ್ ಪ್ರಯತ್ನಿಸುತ್ತಲೇ ಇರುತ್ತಾರೆ. ಒಂದು ರೀತಿಯಲ್ಲಿ ಇಡೀ ಕಥನವೇ ಆ ಬಗೆಯ ಪ್ರಯತ್ನಗಳ ಸುತ್ತಲೇ ಹೆಣೆಯಲ್ಪಟ್ಟಿದೆ ಎನ್ನಬೇಕು. ಆದರೆ ಹೆಚ್ಚಾಗಿ ನೈಪಾಲ್ ಜೊತೆಗಿರುವವರು ಅದು ಹೇಗೋ ಕ್ರಿಶ್ಚಿಯನ್ನರು. ಆಫ್ರಿಕಾದಲ್ಲಿ ಕ್ರಿಶ್ಚಿಯನ್ - ಇಸ್ಲಾಂ ಧರ್ಮಗಳೆರಡೂ ತಮ್ಮೆಲ್ಲಾ ವೈರುಧ್ಯ ಮತ್ತು ನೇರ ಸಂಘರ್ಷಗಳ ಜೊತೆಜೊತೆಗೇ ರೂಢಿಯಲ್ಲಿದ್ದರೂ ನೆಲದ ಧರ್ಮ ಎಂದು ಏನನ್ನು ಈ ಹಿಂದೆಯೇ ಹೇಳಲಾಗಿದೆಯೋ ಅಂಥದ್ದರ ನೆರಳಾಗಿ ಬಂದ ಆಚರಣೆಗಳು, ನಂಬಿಕೆಗಳು ಪೂರ್ತಿಯಾಗಿ ಮರೆಯಾಗಿಲ್ಲ. ಸಾಕಷ್ಟು ಮಂದಿ ಸ್ಥಳೀಯ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಜನರೂ ಕೂಡ ಅದು ತಮ್ಮ ಹೊಸ ಧರ್ಮದ್ದೇ ಅವಿಚ್ಛಿನ್ನ ಭಾಗವೋ ಎಂಬಂತೆ ಅವುಗಳಿಗೆ ಬದ್ಧರಾಗಿ ನಡೆದುಕೊಂಡು ಬಂದಿರುವುದು ಮತ್ತು ಅದು ಅವರಲ್ಲಿ ಯಾವುದೇ ವಿರೋಧಾಭಾಸದ ದ್ವಂದ್ವವನ್ನು (ಅವರ ಮಟ್ಟಿಗೆ) ಹುಟ್ಟಿಸದೇ ಇರುವುದು ಕುತೂಹಲಕರ. ಆದರೆ ಹೊರಗಿನಿಂದ ಬಂದ ಕ್ರಿಶ್ಚಿಯನ್ನರ ಕತೆ ಹಾಗಲ್ಲವಲ್ಲ. ಒಂದೆರಡು ಕಡೆ ನೈಪಾಲರ ಜೊತೆಗಾತಿ ನಿಕೊಲೆಗೆ ಈ ‘ಧರ್ಮ’ ಸಂಕಟ ಪ್ರಾಪ್ತವಾಗುವುದನ್ನು ನೈಪಾಲ್ ತಮಾಷೆಯಾಗಿ ವಿವರಿಸುತ್ತಾರೆ. ನಿಕೊಲೆ ಎಷ್ಟು ಆರ್ತವಾಗಿ ಮೇರಿಯನ್ನೋ ಜೀಸಸ್‌ನನ್ನೋ ಪ್ರಾರ್ಥಿಸುತ್ತಾಳೆಂದರೆ, ಅವಳು ಪರೋಕ್ಷವಾಗಿ ಆಫ್ರಿಕನ್ ವಾಮಾಚಾರವನ್ನು, ಅದರ ಶಕ್ತಿಯನ್ನು ಪೂರ್ತಿಯಾಗಿ ಒಪ್ಪಿಕೊಂಡವರು ಮಾತ್ರಾ ಈ ರೀತಿ ಭಯಬೀಳಬೇಕಾಗಿದೆಯಲ್ಲದೆ ಅದರಲ್ಲಿ ಲವಲೇಶವೂ ವಿಶ್ವಾಸವಿಲ್ಲದವರು ಸಹಜವಾಗಿರಬಹುದು ಎನ್ನುವುದನ್ನೇ ಮರೆತುಬಿಟ್ಟಿದ್ದಾಳೆನ್ನುವುದನ್ನು ಇದು ಕಾಣಿಸುತ್ತದೆ ಎನ್ನುತ್ತಾರೆ ನೈಪಾಲ್. ಹಾಗೆಯೇ ಇನ್ನೊಂದೆಡೆ ಇವರು ವಾಮಾಚಾರದ ಪ್ರಯೋಗವನ್ನು ಪ್ರತ್ಯಕ್ಷ ಅನುಭವಿಸುವ ಅವಕಾಶವನ್ನು ಅರ್ಧದಲ್ಲೇ ಕೈ ಬಿಟ್ಟು ವಾಪಾಸ್ಸಾದಾಗ ನಿಕೊಲೆಗೆ ತನ್ನ ಕ್ರಿಶ್ಚಿಯನ್ ದೇವತೆಗಳ ಮೇಲೆ ಮತ್ತು ತನ್ನ ಪ್ರಾರ್ಥನೆಗೆ ಅವರು ಓಗೊಡುತ್ತಾರೆನ್ನುವ ಬಗ್ಗೆ ಇನ್ನೂ ವಿಶ್ವಾಸ ಬಲಿತಿರಬಹುದು ಎನ್ನುತ್ತಾರೆ!

ಎಂಮೆ ಓಂಡೊ ಎಂಬಾಕೆ ವಿವರಿಸುವ ಅರಣ್ಯ ಸಖ್ಯದ ವಿವರ ವಿವರವಾದ ಸೂಕ್ಷ್ಮ್ಸ ಸಂವೇದಿ ವಿವರಗಳು ಈ ಕೃತಿಯ ಇನ್ನೊಂದು ಮಹತ್ವದ ನೆಲೆ. ಅರಣ್ಯನಾಶ ಆಫ್ರಿಕಾದಲ್ಲಿ ಕೂಡ ನಿರಂತರವಾಗಿ ನಡೆದೇ ಇದೆ. ಅದು ಪೂರ್ತಿಯಾಗಿ ಇಲ್ಲಿನ ಅರಣ್ಯಗಳನ್ನು ಬೋಳಿಸಿಬಿಡಬಹುದೆಂಬ ಭೀತಿಯನ್ನು ಜನ ಇನ್ನೂ ಮುಂಗಾಣದಿದ್ದರೂ ಅದಕ್ಕೆ ಹೆಚ್ಚಿನ ಕಾಲವೇನೂ ತಗಲದು ಎನ್ನುವುದು ವಾಸ್ತವ. ಇದೀಗ ಅಲ್ಲಲ್ಲಿ ಅರಣ್ಯಸಂರಕ್ಷಣೆಯ ಮಹತ್ವ ಮತ್ತು ಅಗತ್ಯವನ್ನು ಕೆಲವರಾದರೂ ಕಂಡುಕೊಂಡಿದ್ದಾರೆ, ಅವರದೇ ನೆಲೆಯಲ್ಲಿ ಮತ್ತು ನೆಲೆಯಿಂದ. ಮೂಲನಿವಾಸಿಗಳಂತಿರುವ ಪಿಗ್ಮಿಗಳು ಕಾಡಿನಲ್ಲಿದ್ದೇ ಸಾಧಿಸಿದ ಆಧ್ಯಾತ್ಮಿಕ ಮತ್ತು ಔಷಧೀಯ ಜ್ಞಾನಸಂಪತ್ತು ಬಹುತೇಕ ಪೂರ್ತಿಯಾಗಿ ನಶಿಸಿ ಹೋಗಿರುವ ಈ ಅಂತಿಮಘಟ್ಟದಲ್ಲಿ ಅದನ್ನು ಹೇಗಾದರೂ ಸಾಧ್ಯವಿರುವಷ್ಟನ್ನಾದರೂ ಕಾಪಾಡಿಕೊಂಡು ಬರಲು ಸಾಧ್ಯವೇ ಎನ್ನುವ ಕುರಿತು ಭಾವುಕ ನೆಲೆಯಲ್ಲಾದರೂ ಗಂಭೀರವಾದ ಚಿಂತನೆ ನಡೆಯುತ್ತಿದೆ ಎನ್ನುವುದಕ್ಕೆ ಈಕೆಯ ಮಾತುಗಳೇ ಸಾಕ್ಷಿ. ಮರಗಳಿಂದ, ಅವುಗಳ ಸಮಷ್ಟಿ ಕೊಡುವ ಸಂಕೇತಗಳಿಂದ ಮನುಷ್ಯ ತಿಳಿದುಕೊಳ್ಳಬೇಕಾದ್ದಿದೆ, ಅವು ಆಧ್ಯಾತ್ಮಿಕ ಗುಟ್ಟುಗಳನ್ನು ತಮ್ಮಲ್ಲಿ ಅನಾದಿಯಿಂದಲೂ ಬಚ್ಚಿಟ್ಟುಕೊಂಡಿರುವ ಜೀವಂತ ದೇವತೆಗಳು. ನೀವು ಮೌನದಲ್ಲಿ ಕಾಡಿನಲ್ಲಿ ಏಕಾಂತವಾಗಿ ಕಳೆಯಲು ಸಿದ್ಧರಿದ್ದರೆ ಕಾಡು ನಿಮಗೆ ಬಿಟ್ಟುಕೊಡಲು ಸಿದ್ಧವಿರುವ ಅಸಂಖ್ಯ ಸತ್ಯಗಳನ್ನು ತಿಳಿದು ಬೆಚ್ಚಿ ಬೀಳುತ್ತೀರಿ. ಜೀವನವನ್ನು ಅದರ ಸಮಗ್ರತೆಯಲ್ಲಿ ಮತ್ತು ಪರಿಪೂರ್ಣವಾಗಿ ಅರಿತುಕೊಳ್ಳಬೇಕೆಂದರೆ ನೀವು ಕಾಡಿಗೇ ಹೋಗಬೇಕು. ಕೊನೆಗೂ ಮನುಷ್ಯ ಕಾಡಿನಿಂದಲೇ ಬಂದವನು ಮತ್ತು ಕಾಡಿಗೇ ಸಲ್ಲಬೇಕಾದವನು ಹೊರತು ಈ ಸದ್ದುಗದ್ದಲದ ಗೊಂದಲಪುರವಾಗಿರುವ ನಾಡಿಗಲ್ಲ ಎನ್ನುವ ವಿಚಾರಧಾರೆಯೇ ಇಲ್ಲಿ ನಿಮಗೆ ಸಿಗುತ್ತ ಹೋಗುತ್ತದೆ. ಕಾಡು ಮನುಷ್ಯನಿಗೆ ನಿಜವಾದ ಶಕ್ತಿಯನ್ನು, ಧೀಃಶಕ್ತಿಯನ್ನು, ಜ್ಞಾನವನ್ನು, ಆರೋಗ್ಯವನ್ನು, ಸಮೃದ್ಧಿ ಮತ್ತು ನೆಮ್ಮದಿಯನ್ನು ನೀಡಬಹುದಾದ ಏಕೈಕ ತಾಣ ಎನ್ನುವುದನ್ನು ಅನುಭವಿಸಿದ ನೆಲೆಯಿಂದಲೇ ವಿವರಿಸಬಲ್ಲ ಇವರ ಮಾತುಗಳನ್ನು ಏನೋ ಯೋಗ, ಸಿದ್ಧಿ ಇತ್ಯಾದಿಗಳ ಕೋರ್ಸು ನಡೆಸುವ ಆಧ್ಯಾತ್ಮಿಕ ಗುರುಗಳ ಪ್ರಚಾರದ ಉಪನ್ಯಾಸದಂತೆ ಉಡಾಫೆಯಿಂದ ಕಾಣಲಾಗುವುದಿಲ್ಲ.

ಪುಟ 274ರಲ್ಲಿ ನೈಪಾಲ್ ಇನ್ನೊಂದು ಕುತೂಹಲಕರ ವಿಚಾರವನ್ನು ನಮ್ಮ ಜಿಜ್ಞಾಸೆಗೆ ಒಡ್ಡುತ್ತಾರೆ. ಚರಿತ್ರೆ ಅಥವಾ ಇತಿಹಾಸಕ್ಕೆ ಕಟ್ಟಡಗಳು, ಸ್ಥಳದ ಗುರುತುಗಳು ಬೇಕು. ಒಂದು ಪೊದೆ ಅಥವಾ ಸಾಗರಕ್ಕೆ ಚರಿತ್ರೆಯಿಲ್ಲ, ಇತಿಹಾಸವಿಲ್ಲ. ಬೆಳಕು ಮತ್ತು ಶಾಖ ಇತಿಹಾಸವನ್ನು ಸುಟ್ಟು ನಾಶಮಾಡಿ ಬಿಟ್ಟಿರುತ್ತದೆ ಎನ್ನುವುದನ್ನು ಅಚ್ಚರಿ ಮತ್ತು ವಿಷಾದದಿಂದಲೇ ಅವರು ಗಮನಿಸುತ್ತಾರೆ. Dr Schweitzer ಎಂಬೊಬ್ಬ ಮಿಷನರಿ ವೈದ್ಯನ ಸ್ಮಾರಕವನ್ನು ನೋಡಲು ಹೋದವರು 1893-1895ರ ಕಾಲಾವಧಿಯಲ್ಲಿ ಗಾಬನ್‌ಗೆ ಬಂದಿದ್ದ ಮೇರಿ ಕಿಂಗ್‌ಸ್ಲೇ ಬರೆದ ಒಂದು ಕೃತಿಯನ್ನು ಉಲ್ಲೇಖಿಸುತ್ತ ಆಕೆ ಬರೆದ Dr Nassavu ಎಂಬಾತನ ಕತೆಯನ್ನು ಸೂಕ್ಷ್ಮವಾಗಿ ತೆರೆದಿಡುತ್ತಾರೆ. 1915ರಲ್ಲಿ ಗಾಬನ್‌ಗೆ ಬಂದಿಳಿದ Dr Schweitzer ಈ ಇಬ್ಬರ ನಡುವೆ ನಿಲ್ಲಲಾರದಷ್ಟು ಅಮುಖ್ಯವಾಗುವ ವ್ಯಕ್ತಿತ್ವ ಎನ್ನುತ್ತಲೇ ಇಬ್ಬರ ಸ್ಮಾರಕಗಳನ್ನೂ ತುಲನಾತ್ಮಕವಾಗಿ ಕಾಣುವ ನೈಪಾಲ್ ಹೊಸದೊಂದು ಸತ್ಯವನ್ನು ಇಲ್ಲಿ ತೆರೆದಿಡುತ್ತಾರೆ. ಇದೇ ಕೆಲಸವನ್ನು ಬೇರೆಯೇ ಒಂದು ಆಯಾಮವನ್ನಿಟ್ಟುಕೊಂಡು ಅವರು ಈ ಪುಸ್ತಕದ ಆರಂಭದಲ್ಲೇ ಇಬ್ಬರು ಅಳಿದ ದೊರೆಗಳ ಸಮಾಧಿಸ್ಥಳಗಳ ಸದ್ಯದ ಅವಸ್ಥೆ-ವ್ಯವಸ್ಥೆಗಳ ಬಗ್ಗೆ ಹೇಳುತ್ತ ಮಾಡಿದ್ದಾರೆ. ಇಲ್ಲಿ ಪ್ರಸಿದ್ಧಿ, ಇತಿಹಾಸ ಮತ್ತು ಸ್ಮಾರಕ ಯಾರಿಗೆ, ಯಾಕೆ ಮತ್ತು ಹೇಗೆ ರೂಪುಗೊಳ್ಳಬಹುದು ಎನ್ನುವುದರ ಬಗ್ಗೆ ಹೊಸಬೆಳಕು ಚೆಲ್ಲುತ್ತಾರೆ.

ವರ್ಣಸಂಕರ, ಧರ್ಮಸಂಕರ, ದೇಶ-ಭಾಷೆ-ಸಂಸ್ಕೃತಿ ಮತ್ತು ಚರ್ಮದ ಬಣ್ಣ ಎನ್ನುವ ನೆಲೆಯಲ್ಲೂ ವರ್ಣಸಂಕರವನ್ನು ಅನುಭವಿಸಿದ ದೇಶಗಳ ಉಪಖಂಡವಿದು ಆಫ್ರಿಕಾ. ಬಿಳಿಯ ಆಫ್ರಿಕನ್ ಮತ್ತು ಕಪ್ಪು ವರ್ಣದ non-African ಗಳ ಸಂಕಟವನ್ನು ನಾವು ಹೆಚ್ಚಾಗಿ ಕಾಣುವುದಿಲ್ಲ. ಇಲ್ಲೊಬ್ಬಳು ಫಾತಿಮಾ ಎಂಬಾಕೆ ಇದ್ದಾಳೆ. ಈಕೆ coloured ಎಂದು ತನ್ನನ್ನು ತಾನು ಗುರುತಿಸಿಕೊಳ್ಳಬೇಕಾಗಿದೆ. ಇದಕ್ಕೆ ಎರಡು ಅರ್ಥಗಳಿವೆಯಂತೆ, ಸೌತ್ ಆಫ್ರಿಕಾದಲ್ಲೇ. ಒಂದು ಮೇಲ್ನೋಟಕ್ಕೇ ಕಾಣುವ ಅರ್ಥವಾದರೆ ಇನ್ನೊಂದು ಅವಹೇಳನಕಾರಿಯಾದ್ದು. ಇಲ್ಲಿ ಬರುವ ಫಾತಿಮಾ ಈ ಎರಡನೆಯ ಅರ್ಥದ ಏಟಿಗೆ ಹೇಗೆಲ್ಲ ಬಲಿಯಾಗುತ್ತಾಳೆಂದರೆ ಅವಳ ಕತೆಯನ್ನು ಅವಳ ಬಾಯಲ್ಲೇ ಕೇಳುವುದು ಲೇಸು. ಅವಳ ಕತೆಯನ್ನು ಮುಗಿಸುತ್ತ ನೈಪಾಲ್ ಹೀಗೆನ್ನುತ್ತಾರೆ:

I had wanted, when I began this book, to stay away from politics and race, to look below those themes for the core of African belief. But rather like Fathima looking for identity, I felt stymied in South Africa and saw that here race was all in all; that race ran as deep as religion elsewhere.
(ಪುಟ 288)

ಕುಟುಂಬದಲ್ಲಿ ಒಬ್ಬ ಸತ್ತಾಗ ದನವನ್ನೋ ಆಡನ್ನೋ ಕೊಂದು ( ಹೇಗೆ ಕೊಲ್ಲುವುದು ಎನ್ನುವುದನ್ನು ಹೇಳಲೇ ಬೇಕು - ಅದು ಸಹಿಸಲಾರದ ನೋವಿನಿಂದ ಆರ್ತವಾಗಿ ಕೂಗಿ ಕೂಗಿ ಮೊರೆಯಿಡುವಂತೆ ಮಾಡಿಯೇ ಕೊಲ್ಲುವುದಂತೆ. ಯಾಕೆಂದರೆ, ಅದರ ಕೂಗು ಸತ್ತವನ ಆತ್ಮಕ್ಕೆ ತಲುಪಬೇಕಂತೆ. ತಲುಪಲು ಸಾಲುವಷ್ಟು ಅದನ್ನು ಕೂಗಿಸುವುದರಲ್ಲೇ ಈ ಕೊಲ್ಲುವ ವಿಧಿಯ ಮಹತ್ವ ಅಡಗಿದೆ ಎಂದು ಬೇರೆ ಹೇಳಬೇಕಿಲ್ಲವಲ್ಲ!) ಅದರ ಚರ್ಮವನ್ನು ಸತ್ತವನ ದೇಹಕ್ಕೆ ಸುತ್ತುವುದು ಒಂದು ವಿಧಿ, ದಕ್ಷಿಣ ಆಫ್ರಿಕಾದಲ್ಲಿ. ಫಾತಿಮಾ ಬಳಿ ಹೇಗೆ ಮಂದಿ ಬದಲಾಗುತ್ತಿದ್ದಾರೆ ಈ ಆಧುನಿಕ ಯುಗದಲ್ಲಿ ಎಂದು ನೈಪಾಲ್ ಕೇಳಬಯಸುತ್ತಾರೆ. ಸಿಗುವ ಉತ್ತರದಿಂದ ಅಷ್ಟೇನೂ ತೃಪ್ತಿಪಟ್ಟುಕೊಳ್ಳುವ ಸ್ಥಿತಿಯಿಲ್ಲದ್ದನ್ನು ಗ್ರಹಿಸುವ ನೈಪಾಲ್ ಬೆಕ್ಕು, ಕುದುರೆಗಳು ಬೇರೆಡೆಯಲ್ಲಿ ಮೂಡಿಸಿದ ಭಾವದಲ್ಲೇ, ಅದೇ ರಕ್ತಸಿಕ್ತ ಕ್ರೌರ್ಯವನ್ನೇ ಕಂಡಂತೆ ಮೌನವಾಗುತ್ತಾರೆ.

ಪುಸ್ತಕದ ಕೊನೆಯ ಭಾಗದಲ್ಲಿ ಕೆಲವೊಂದು ಸಂದರ್ಶನಗಳನ್ನೇ ಪ್ರಧಾನವಾಗಿ ಕೊಡಲಾಗಿದೆ. ಪುಸ್ತಕದುದ್ದಕ್ಕೂ ನೈಪಾಲ್ ಹಲವರನ್ನು ಭೇಟಿಯಾಗಿ, ಅವರಿಂದ ವಿಷಯ ಸಂಗ್ರಹಿಸುತ್ತ ಹೋಗುತ್ತಿರುತ್ತಾರಾದರೂ ವಿವರಗಳಲ್ಲಿ ನಮಗೆ ಸಂದರ್ಶನದ ಛಾಯೆ ಅಷ್ಟಾಗಿ ಒಡೆದು ಕಾಣುವುದಿಲ್ಲ. ಆದರೆ ಕೊನೆಯ ಭಾಗದಲ್ಲಿ ವಿಚಾರಗಳೇ ಹೆಚ್ಚಾಗಿ ತುಂಬಿರುವುದರಿಂದ ಇವು ಸಂದರ್ಶನದ ಮಾದರಿಯಲ್ಲೇ ಇವೆ. ಕೊಲಿನ್ ಎಂಬಾತ ಅರೆ ಆಫ್ರಿಕನ್. ಆಫ್ರಿಕಾದಲ್ಲೇ ಬಾಲ್ಯವನ್ನು ಕಳೆದಾತ, ಆಫ್ರಿಕನ್ ಸ್ನೇಹಿತರನ್ನು ಹೊಂದಿರುವಾತ. ಪ್ರಸ್ತುತದಲ್ಲಿ ಒಂದು ವಿಧವಾದ ಭೀತಿಯಡಿ ಇಲ್ಲಿ ಬದುಕುತ್ತಿರುವುದಾಗಿ ಹೇಳುತ್ತಾನೆ. ನೈಪಾಲರಂತೆ ಈತನೂ ಪ್ರಾಣಿಗಳನ್ನು ಪ್ರೀತಿಯಿಂದ ಕಾಣಲಾರದ ಮಂದಿ, ಅವುಗಳನ್ನು ಕ್ರೌರ್ಯದಿಂದಲೇ ನಡೆಸಿಕೊಂಡಿರುವ ಮಂದಿಯಲ್ಲಿ ಸುಪ್ತವಾಗಿರುವ ಹಿಂಸೆ ಮತ್ತು ಕ್ರೌರ್ಯ ತನ್ನನ್ನು ಭಯಭೀತನನ್ನಾಗಿಯೂ ಹತಾಶನನ್ನಾಗಿಯೂ ಮಾಡುತ್ತಿದೆ ಎನ್ನುತ್ಟಾನೆ. ಸೈನಿಕ ತರಬೇತಿ ಮತ್ತು ಕಡ್ಡಾಯ ಮಿಲಿಟರಿ ಸೇವೆಯ ನಂತರವೂ ಜನಜೀವನದ ಕ್ರೌರ್ಯದ ಬಗ್ಗೆ ಈತನಲ್ಲಿ ಭೀತಿಯಿದೆ. ಸೈನ್ಯದಲ್ಲೂ ಮಾನವೀಯ ಸೆಲೆಯಿರುವ ಸಾಕಷ್ಟು ಮಂದಿಯನ್ನು ಕಂಡೆನಾದರೂ ಆಫ್ರಿಕಾದಲ್ಲಿ ಒಬ್ಬ ಬಿಳಿಯನಾಗಿರುವುದೇ ಸುಲಭದಲ್ಲಿ ತೀರಿಸಲಾಗದ ಋಣಭಾರದಲ್ಲಿ ಬದುಕುತ್ತಿರುವಂತೆ ಎನ್ನುತ್ತಾನೆ.

ಈ ಸಮಾಜದಲ್ಲಿ ಏನಾದರೂ ಸಾಧ್ಯವಿದೆಯೆನಿಸುವುದೇ ಎಂದು ಫಿಲಿಪ್ ಎಂಬ ಇನ್ನೊಬ್ಬನಲ್ಲಿ ಪ್ರಶ್ನಿಸುವ ನೈಪಾಲ್ ಪಡೆಯುವ ಉತ್ತರ ಗಹನವಾಗಿದೆ. ಸಂಭವನೀಯತೆಯನ್ನು ನಾವು ಮಾನವೀಯತೆಯಲ್ಲಿ ವಿಶ್ವಾಸವಿರಿಸುವ ಮೂಲಕವಷ್ಟೇ ನಿರೀಕ್ಷಿಸಬಹುದಾಗಿದೆ ಎನ್ನುತ್ತಾನೆ. ಈತ ಹೆಚ್ಚು ನೆಲದ ನೆಲೆಯ ಮಾತುಗಳನ್ನು ಆಡುತ್ತಾನೆ ಎನಿಸುತ್ತದೆ, ಆದರ್ಶ, ತತ್ವಗಳನ್ನು ಜನಜೀವನದ ನೆಲೆಗೆ ತಂದು ನೋಡಬಲ್ಲ ನೋಟವೊಂದು ಈತನಿಗೆ ದಕ್ಕಿದಂತಿದೆ. ಈತನ ಮಾತುಗಳನ್ನೇ ಕೇಳಿ:

Philip said, `At the moment American consumerism is consuming us - malls, long streets and cars to drive everywhere. It is very ironic. I have become more reclusive because I don't like what I see in the city. There is a climate of fear, and I have seen what it is to live in a city without fear. When I go to Europe I see what a big city can be - small shops, people walking, a street culture. Not everyone is in a mall and they are not driving everywhere. I still try to walk into town some days, because I cannot live in a car all day, and if I cannot do this then I will have to leave. There is a move to reclaim our city and areas in it where the whites simply moved out. They moved because of fear.'
(ಪುಟ 307-308)

ಜೋಸೆಫ್ ಎಂಬ ಝುಲು ಮೂಲಭೂತವಾದಿಯೊಬ್ಬನ ಜೊತೆ ನೈಪಾಲ್ ಮಾತನಾಡುತ್ತಾರೆ. ಭಾಷಣಪ್ರಿಯನಂತೆ ಕಾಣುವ ಈತ ತಮ್ಮ ದೇಶದ ಮೂಲಭಾಷೆ, ಸಂಸ್ಕೃತಿ, ರೀತಿ-ನೀತಿ, ಧರ್ಮ ಮತ್ತು ಕಟ್ಟುಕಟ್ಟಳೆಗಳ ಬಗ್ಗೆ ಪುಂಖಾನುಪುಂಖವಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಗುತ್ತಿಗೆದಾರನ ಧ್ವನಿಯಲ್ಲೇ ಮಾತನಾಡುತ್ತಾನೆ. ಬಹುಪತ್ನಿತ್ವದ ವಿರುದ್ಧ ಮಾತನಾಡುವವರ ವಿರುದ್ಧ ಹರಿಹಾಯುವ ಈತ ನಮ್ಮಲ್ಲಿ ಹದಿನಾರು ಹೆಣ್ಣುಗಳಿಗೆ ಒಬ್ಬ ಗಂಡು ಇರುವ ಸ್ಥಿತಿಯಿರುತ್ತ ಅದು ಹೇಗೆ ಬಹುಪತ್ನಿತ್ವ ತಪ್ಪು ಎನ್ನುತ್ತೀರಿ ಎಂದು ಪ್ರಶ್ನಿಸುತ್ತಾನೆ. ಇಂಥವರ ಸಮರ್ಥನೆ, ವಾದದ ಮೊಂಡುತನ ಮತ್ತು ತಾವು ಹೇಳುತ್ತಿರುವುದನ್ನು ತಾವು ಬಲವಾಗಿ ನಂಬಿದವರಂತೆ ಕಾಣಿಸಿಕೊಳ್ಳುವ ಹುಂಬತನ ಹೇಗಿರುತ್ತದೆ ಎನ್ನುವುದಕ್ಕೆ ಈ ಕೆಳಗಿನ ಭಾಗವನ್ನು ಗಮನಿಸುವುದು ಅಗತ್ಯ. ಅದನ್ನು ಯಥಾವತ್ ಇಲ್ಲಿ ಉದ್ಧರಿಸಿದ್ದೇನೆ. ಇದನ್ನು ನಮ್ಮದೇ ದೇಶದ ಮೂಲಭೂತವಾದಿಗಳ ವಾದದ ವೈಖರಿ ಮತ್ತು ವೈಚಾರಿಕತೆಯ ಜೊತೆಗೆ ತುಲನಾತ್ಮಕವಾಗಿ ಗಮನಿಸಿಕೊಳ್ಳಬೇಕು ಎನ್ನುವುದಷ್ಟೇ ಉದ್ದೇಶ:

It was possible, putting everything together, to understand why he was thought to be a Zulu traditionalist, and why he had such a hold on the young. A poorly educated person from township, knowing no history and having hardly any idea of his place in the world, would be given something to hold on to, and Joseph's special style would make it attractive.

He was fierce about the need to sacrifice cows and goats in the traditional way; the animal rights people had to stay away. `They make a noice only when low - or middle income people do it. You should see when a big wig does it. He does not hide it, and everyone comes in cars, limos and helicopters to be part of the ritual. When we slaughter a goat we have to stab it in the side many times to get the bad omen to go. Look at my body. It is full of scars. It is not child abuse. A witchdoctor came and cut me with a razor blade and then rubbed and filled the cut with the ashes of a snake. It is our way. And I must, as a traditional man, cut or slaughter a cow in our way. Why do you want the animal to be slaughtered in another way which you think is more humane? First of all, the animal which is to be sacrificed belongs to the ancestor, and so it has to alert the ancestor by crying out loud. I am sick of black people censoring or condemning our culture. They are doing it because they are so diluted. They do not know who they are and what the rituals mean. I question Christianity right down to its roots. Who are they to say that we must do these things in a hygienic way? We will arrive there ourselves. Do we go and film their circumcisions? Why do they come here and pay poor people to allow them to film their sacred rituals? They, the Christians, created apartheid and they enslaved my people despite the Bible. I practise the old ways. I go to the townships to slaughter the animal, and if the ritual is very complicated then I will go to my ancestral village. I have my shrines and I worship there.'
(ಪುಟ 312)

ಈ ಪುಸ್ತಕ ಮುಗಿಯುವುದು ರಿಯಾನ್ ಮಲಾನ್ ಎಂಬಾತನ ಮಹತ್ವದ ಕೃತಿ My Traitor's Heart ನ ಉಲ್ಲೇಖ, ಆ ಕಾದಂಬರಿಯ ಸಂಕ್ಷಿಪ್ತ ಕತೆ ಮತ್ತು ಇಲ್ಲಿ ಅದರ ಸಾಂದರ್ಭಿಕ ಮಹತ್ವ ಏನು ಎಂಬುದರ ಸೂಕ್ಷ್ಮ ಸೂಚನೆಯೊಂದಿಗೆ. ಆಫ್ರಿಕಾದ ಈ ಇಡೀ ಸಂಚಾರ ಅದರ ಅಂತ್ಯದಲ್ಲಿ ನೈಪಾಲರಲ್ಲಿ ಹುಟ್ಟಿಸಿದ ಒಂದು ವಿಷಾದಭಾವವೇನಿದೆ, ಅದರಿಂದ ಆಶಾವಾದದತ್ತ ಹೊರಳಬಹುದಾದ ಸಾಧ್ಯತೆಯೊಂದಿರುವುದಾದರೆ ಅದು ಎಲ್ಲಿ ಎನ್ನುವ ಹುಡುಕಾಟಕ್ಕೆ ಈ ಕೃತಿ My Traitor's Heart ತನ್ನಲ್ಲಿ ಏನೋ ಒಂದು ಉತ್ತರವನ್ನು ಅಡಗಿಸಿಟ್ಟುಕೊಂಡಂತೆ ನೈಪಾಲರಿಗೆ ಕಂಡಿದೆ. ಕೃತಿ ಕಾಣಿಸುವಂತೆ ಕಾಣುವ ಮಾರ್ಗದ ಕುರಿತ ಜಿಜ್ಞಾಸೆಯಲ್ಲಿಯೇ ನೈಪಾಲರ ಈ ಪುಸ್ತಕವೂ ಮುಗಿಯುತ್ತದೆ. ಆ ಕೊನೆಯ ಪಾರಾ ಬಹಳಷ್ಟನ್ನು ಹೇಳಿಯೂ ಏನನ್ನೂ ಹೇಳದಂತಿದೆ. ಅದನ್ನಿಲ್ಲಿ ಕಾಣಿಸಿ ಈ ಬರಹವನ್ನು ಮುಗಿಸುವುದು ಇದ್ದುದರಲ್ಲಿಯೇ ಅತ್ಯುತ್ತಮ ವಿಧಾನವೆನ್ನಿಸುತ್ತದೆ.

This is the resolution of this marvellous book. It is not easy to accept. Creina is so much finer than the louts who exploit her. Perhaps the problem is that `love' is not defined. Without that definition it is hard to follow Creina when she tells Rian Malan, `I think you will know what I mean if I tell you love is worth nothing untill it has tested by its own defeat.' It may even be that in this parable the writer is finding a way of saying something more difficult: that after apartheid a resolution is not really possible until the people who wish to impose themselves on Africa violate some essential part of their being.

No comments: