Sunday, May 27, 2012

ನೋಟ ಶೂನ್ಯ ಮಾತು ಮೌನ, ಓ ಮನಸೇ ನಿನ್ನ ಆ ನೋವೇನು ನುಡಿಸು!


Difficult Pleasures ಹೆಸರು ತುಂಬ ಧ್ವನಿಪೂರ್ಣವಾಗಿದೆ. ಹಾಗೆಯೇ ಈ ಸಂಕಲನದ ಎಲ್ಲ ಹದಿಮೂರು ಕತೆಗಳೂ ಒಂದಲ್ಲಾ ಒಂದು ಬಗೆಯಲ್ಲಿ ಮನಸ್ಸಿನ ಆಳದ ಸೂಕ್ಷ್ಮ ವಿಪ್ಲವಗಳನ್ನೇ ಚಿತ್ರಿಸುತ್ತಿವೆ. ಈ ಕತೆಗಳು ಮನುಷ್ಯನ ಮನಸ್ಸು ವಿಷಣ್ಣತೆಯಲ್ಲಿ ಅದ್ದಿ ತೆಗೆದಂತೆ, ವಿವರಿಸಲಾಗದ, ಬೆಟ್ಟು ಮಾಡಿ ತೋರಿಸಲಾಗದ ನೋವಿನಿಂದ ಆರ್ತವಾಗಿರುವುದರ ಚಿತ್ರವನ್ನೇ ಕಟ್ಟಿಕೊಡುತ್ತವೆ. ಆದರೂ ದಾಸ್ತಾವಸ್ಕಿಯಷ್ಟು ಇವು ನಮ್ಮನ್ನು ಅಸ್ವಸ್ಥಗೊಳಿಸುವುದಿಲ್ಲ. ಈ ಕಥಾಲೋಕದ ವಿವರಗಳು ದಟ್ಟವಾದಷ್ಟೂ ಈ ಗುಪ್ತಗಾಮಿನಿಯಂಥ ಎದೆಯ ಅಳಲು ಇನ್ನಷ್ಟು ಮತ್ತಷ್ಟು ಆಳವಾಗಿ ನಿಮ್ಮನ್ನು ಕಲಕುತ್ತದೆ, ಆದರೆ ಈ ಕತೆಗಳು ಯಾವೊಂದು ಮೌನದೊಂದಿಗೆ ನಮ್ಮನ್ನು ಬಿಟ್ಟುಬಿಡುತ್ತವೆಯೋ ಅಲ್ಲಿ ಒಂದು ಹಿತವಿರುವುದನ್ನು ನೀವೂ ಕಂಡುಕೊಳ್ಳುವುದು ಸುಳ್ಳಲ್ಲ. ಆ ನೋವು ಇನ್ನೆಲ್ಲೋ ನಿಮ್ಮದೇ ನೋವಿನೊಂದಿಗೆ ತಳುಕು ಹಾಕಿಕೊಂಡು ನಿಮ್ಮನ್ನೂ ಕಥಾಲೋಕಕ್ಕೆ ಸೆಳೆದೊಯ್ದು ಬದುಕಿನ ಈ ವೈಚಿತ್ರ್ಯದ ಕುರಿತೇ ನೀವು ಧೇನಿಸುವಂತೆ ಮಾಡುತ್ತದೆ. ನೋವು ಮನುಷ್ಯನಿಗೆ ಜೀವನದರ್ಶನವನ್ನೀಯುವ, ಅವನನ್ನು ಮಾಗಿಸುವ, ಹಣ್ಣಾಗಿಸುವ ಚಿಕಿತ್ಸಕ ವಸ್ತುವಾದರೂ ಯಾರೂ ಅದನ್ನು ತಾವಾಗಿಯೇ ಆಹ್ವಾನಿಸುವುದಿಲ್ಲ. ಅದರಲ್ಲೂ ಮನಸ್ಸಿನ ತುಮುಲ, ದ್ವಂದ್ವ, ತೊಳಲಾಟ, ಸಂಕಟ, ನಿರಂತರವಾದ ಅಳಲು ಹೊತ್ತುಕೊಳ್ಳುವುದು ಕಷ್ಟ. ಹೊತ್ತುಕೊಂಡು ನೀಗುವುದು, ನಿಭಾಯಿಸುವುದು ಕಷ್ಟ ಮಾತ್ರವಲ್ಲ ಅನೇಕ ದುರ್ಬಲ ಮನಸ್ಸುಗಳು ಆತ್ಮಹತ್ಯೆ, ಪಲಾಯನ, ಅಮಲು ಪದಾರ್ಥಗಳಿಗೆ ಶರಣಾಗುವುದು ಇತ್ಯಾದಿಗಳಿಗೆ ಮನಸ್ಸು ಹರಿಯಬಿಡುವುದು ಇಂಥಲ್ಲೇ. ಆದರೆ ಇದನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಯಾವುದೆ ಬಗೆಯ ಪಲಾಯನಕ್ಕೆಡೆಗೊಡದೆ ಧೈರ್ಯದಿಂದ ಎದುರಿಸಿ ಬದುಕನ್ನು ಅರಿಯುವ ದಿಟ್ಟತನವನ್ನು ಆಯ್ದುಕೊಳ್ಳುವುದು ಕಷ್ಟಕರವಾದದ್ದು. ಈ ಸಂಕಲನದ ಪಾತ್ರಗಳು, ಕತೆಗಳು ಮಾಡುವುದು, ಮಾಡಲು ಪ್ರಯತ್ನಿಸುವುದು ಇದನ್ನು. ಹಾಗಾಗಿಯೇ ಈ ಕತೆಗಳಲ್ಲಿ ಇರುವ ಜೀವನ ಪ್ರೀತಿ, ಜೀವನ್ಮುಖೀ ಧೋರಣೆ ಮತ್ತು ಜೀವ ಸೆಲೆ ಮುಖ್ಯವಾಗುತ್ತದೆ. ಎಲ್ಲೋ ಒಂದೆಡೆ ಯಾಕೆ ಈ ಲೇಖಕಿ ಜೀವನದ ಉಲ್ಲಾಸ, ಸಂತೋಷ, ಉತ್ಸಾಹ ತುಂಬಿದ, ಚೈತನ್ಯಪೂರ್ಣವಾದ, ಪ್ರಮಾಣಿಕವೂ ನಿಷ್ಕಲ್ಮಶವೂ ಆದ ಪ್ರೀತಿ - ಈ ಮುಖವನ್ನು ಅದೆಷ್ಟೇ ಕ್ಷಣಭಂಗುರವಾದುದಾದರೂ, ಗುರುತಿಸುತ್ತಿಲ್ಲ, ಯಾಕೆ ಎಲ್ಲೆಡೆಯೂ ಇದು ಇಷ್ಟೇ ಎಂಬಂತೆ ನೋವಿಗೇ ಮುಖವೊಡ್ಡುತ್ತಾರೆ ಎಂದು ಅನಿಸಿದರೂ, ಈ ಕತೆಗಳ ಓದು ನಮ್ಮನ್ನು ಅಷ್ಟೇನೂ ಉಲ್ಲಸಿತವಾದ, ಉತ್ಸಾಹಿತರನ್ನಾಗಿಸುವ, ಬದುಕಿನ ಬಗ್ಗೆ, ಸಂಬಂಧಗಳ ಬಗ್ಗೆ, ದಕ್ಕಿದ ಪ್ರೀತಿಯ ಬಗ್ಗೆ ಭರವಸೆಯನ್ನು ತಾಳುವಂತೆ ಉತ್ತೇಜಿಸುವುದಿಲ್ಲವಾದಾಗ್ಯೂ, ಚಿರಂತನವಾದ ಮತ್ತು ಸತ್ಯವಾದ ಜೀವನದರ್ಶನವೊಂದರತ್ತ ಈ ಮನಸ್ಥಿತಿಯು ನಮ್ಮನ್ನು ನಡೆಸುತ್ತಿದೆ, ಅಂಥ ಒಂದಕ್ಕೆ ಮಾನಸಿಕವಾಗಿ ಸಜ್ಜಾಗಿಸುತ್ತಿದೆ ಎನ್ನುವುದು ಸತ್ಯ. ಅರಿವಿನೊಂದಿಗೆ, ಪ್ರಜ್ಞೆಯೊಂದಿಗೆ ಜೀವನದ ಸಂತಸವನ್ನು, ಸೌಂದರ್ಯವನ್ನು, ಸುಖವನ್ನು ಆಸ್ವಾದಿಸುವುದು ಶ್ರಮವಾಗಬಾರದು, ಹೊರೆಯಾಗಬಾರದು, ಕಷ್ಟವೆನಿಸಬಾರದು. Difficult Pleasures ನಮ್ಮನ್ನು Difficult ಅಲ್ಲದ Pleasures ಕಂಡುಕೊಳ್ಳುವುದರತ್ತ ನಡೆಸುವಂತಾಗಬೇಕು.

ಈ ಸಂಕಲನದ ಅತ್ಯುತ್ತಮ ಕತೆಗಳನ್ನು (ನನ್ನ ಅನಿಸಿಕೆಯಲ್ಲಿ) ಮೊದಲು ಎತ್ತಿಕೊಳ್ಳುತ್ತ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ಚೆನ್ನಾಗಿರುತ್ತದೆ. Banerjee and Banerjee ಕತೆಯ ಬ್ಯಾನರ್ಜಿ ಒಬ್ಬ economist. ವಾರ-ತಿಂಗಳು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿರುವವನು. Research, Survey, Analysis ಮತ್ತು ಮುಂತಾದ ಅಂಥವೇ ಮಹತ್ಕಾರ್ಯಗಳಲ್ಲಿ ಅದೇ ಜೀವ ಅದುವೇ ಜೀವನ ಎಂಬಂತೆ ಕಳೆದುಹೋದವನು. ಪ್ರಸ್ತುತ ಇಡೀ ಜಗತ್ತು ಒಂದು ಪುಟ್ಟ ಮಾರ್ಕೆಟ್ ಆಗಿ ಬದಲಾಗಿರುವುದರ ಉತ್ತಮ ಅಂಶಗಳನ್ನೇ ಕುರಿತು ಅಧ್ಯಯನ ನಡೆಸುತ್ತಿದ್ದಾನೆ. ಇವನಿಗೊಬ್ಬ ಅಣ್ಣನಿದ್ದಾನೆ. ದಿಪಿನ್ ಬ್ಯಾನರ್ಜಿ ಎಂಬ ಆತ ಎಂಜಿನೀರ್ ಆಗಲೆಂದು ಸ್ವೀಡನ್ನಿಗೆ ಬಂದು ಬೇಕಂತಲೇ ಏನೋ ಸಂಥಿಂಗ್ ಆಗುವುದರ ಬದಲು, ನಾಗರಿಕ ಜಗತ್ತಿಗೆ ಅನಿವಾರ್ಯ ಅಗತ್ಯವಾದ ಡೆಸಿಗ್ನೇಶನ್ನು, ಸಂಬಳ, ಅಂತಸ್ತುಗಳ ಜಗತ್ತಿಗೆ ಥೂ ಎಂದು ಸಶಬ್ದ ಉಗಿದು, ಅಂಥ ಎಲ್ಲ ಸಂಪನ್ನ ಮಾರ್ಗಗಳನ್ನು ಬಿಟ್ಟುಕೊಟ್ಟು, ಡ್ರೈವರು, ಶಾಪಿಂಗ್ ಮಾಲ್‌ನ ಎಟೆಂಡೆಂಟ್ ಮುಂತಾದ ಸಣ್ಣಪುಟ್ಟ ನೌಕರಿಗಳಲ್ಲಿ ‘ಏನೂ ಅಲ್ಲ’ ಆಗಲು ಪ್ರಯತ್ನಿಸುತ್ತ ಸಾಹಿತ್ಯ ಓದುವವನು. ಒಬ್ಬ ತನ್ನ ಅಂತರಂಗಕ್ಕೆ ಒಂದು ಧ್ವನಿಯಿರಬಹುದೆಂಬುದನ್ನೇ ಅಲ್ಲಗಳೆದು ಕಿವುಡಾಗಿ ನಿಂತವನು. ಇನ್ನೊಬ್ಬ ಒಂದು ಜೀವದ ಅದೇ ಅಂತರಂಗದ ಧ್ವನಿಯು ಇನ್ನೊಂದು ಜೀವವನ್ನು ತಲುಪುವ ತಂತುವೂ ಕೂಡಾ ಈ ಜಗತ್ತಿನಲ್ಲಿ ಸಶಕ್ತ ಮಿಡಿಯುತ್ತಿರುವುದೆಂದು ನಂಬಿದವನು. ಎಲ್ಲೋ ಭೇಟಿಯಾದಾಗ ಆಧುನಿಕ ಮನುಷ್ಯನ ಅರ್ಥಹೀನ, ಅರ್ಥಶೂನ್ಯ ಮತ್ತು ವ್ಯರ್ಥ ಪ್ರಯಾಸಗಳ ಬಗ್ಗೆ ಚುರುಕಾಗಿ-ಚುಟುಕಾಗಿ ಮಾತನಾಡುತ್ತ ಕೊನೆಗೊಂದು ದಿನ ಸಂತುಲಿತವೂ ಸಮತೋಲಿತವೂ ಆದ ಸ್ವಸ್ಥ ಮನಸ್ಸಿನಿಂದ ಆತ್ಮಹತ್ಯೆ ಮಾಡಿಕೊಂಡು ಜಗತ್ತಿನ ಜಂಜಡದಿಂದ ನೀಗಿಕೊಂಡವನು. ಈತನ ಬದುಕಿನಲ್ಲೂ ಹೀಗೆ ಬಂದು ಹಾಗೆ ಹೋದ ಮದುವೆ ಮತ್ತು ವಿಚ್ಛೇದನಕ್ಕೆ ಗೌರವ ಪ್ರವೇಶವಷ್ಟೇ. ದಿಪಿನ್ ಬ್ಯಾನರ್ಜಿಯ ಅತ್ತೆಗೆ ಅವನು ಅರ್ಥವಾದಂತಿದೆ. ಅವಳ ಜೊತೆ ಹೆಂಡತಿ ದೂರವಾದ ಮೇಲೂ ಆಗಾಗ ಅಣಬೆ ಸಂಗ್ರಹಿಸಲು ಕಾಡಿಗೆ ಹೊರಡುತ್ತಿದ್ದ ದಿಪಿನ್ ತರವೇ ಅವನ ತಮ್ಮನೂ ಇರಬಹುದೆಂಬ ಮೂಢನಂಬಿಕೆಯಿಂದ ಅವಳು ಬ್ಯಾನರ್ಜಿಯನ್ನು ಕರೆದೊಯ್ಯುತ್ತಾಳೆ. ಆದರೆ ಬ್ಯಾನರ್ಜಿಯ ಅಸ್ವಾಸ್ಥ್ಯ ಅಲ್ಲಿದ್ದಷ್ಟೂ ಹೊತ್ತು ಹೆಚ್ಚುತ್ತ ಹೋಗುತ್ತದೆ. ಸತ್ತ ಅಣ್ಣ ಸಾಯುತ್ತ ತನಗಾಗಿ ಬಿಟ್ಟು ಹೋದ ‘ಅತಿ ಮಹತ್ವ’ದ ವಸ್ತುವಿಗಾಗಿಯಷ್ಟೇ ತನ್ನ ಅತ್ಯಮೂಲ್ಯ ಕೆಲಸವನ್ನು ಬಿಟ್ಟುಕೊಟ್ಟು ಇದ್ದಕ್ಕಿದ್ದಂತೆ ಹೊರಟು ಬಂದಿರುವ ಅವನಲ್ಲಿ ವ್ಯವಧಾನವಿಲ್ಲ. ಕೊನೆಗೂ ದಿಪಿನ್ ತನಗೆಂದು ಬಿಟ್ಟು ಹೋಗಿರುವುದು ಒಂದು ರಟ್ಟು ಹರಿದಿರುವ ಹಳೆಯ ಕಾದಂಬರಿ ಎಂದು ತಿಳಿದಾಗ ನಿಜಕ್ಕೂ ಸಿಟ್ಟಿನಿಂದ ಕಂಪಿಸುವ ಈತನಿಗೆ ದಿಪಿನ್ ಹೇಳಿದ "Atleast I can talk to him" "......Atleast I can talk to him through the books" ಎಂದಿದ್ದು ತಕ್ಷಣಕ್ಕೆ ಅರಿವಿಗಿಳಿಯುವುದಿಲ್ಲ. ಕತೆಯ ಕೊನೆಯಲ್ಲಿ ಅವನ ಕಣ್ಣಿಗೆ ಬೀಳುವ ಕಾದಂಬರಿಯ ಒಂದು ಸಾಲು ಈ ಕತೆಯ ಕೊನೆಯ ವಾಕ್ಯವೇ ಆಗಿರುವುದು ಸಾಂಕೇತಿಕವಾಗಿದೆ. ಆ ವಾಕ್ಯ:

Certainly we shall all rise again, certainly we shall see each other and shall tell each other with joy and gladness all that has happenned!"

ಹೌದು, ಅದು The Brothers Karamazov. ಮತ್ತೆ ದಾಸ್ತಾವಸ್ಕಿ!

ಈಗ ಈ ಕೊನೆಯ ವಾಕ್ಯದ ಮೂರು ತುಂಡುಗಳನ್ನು ಮತ್ತೊಮ್ಮೆ ಮನಸ್ಸಿನಲ್ಲಿಟ್ಟುಕೊಳ್ಳಿ, ಮುಂದೆ ಎಂದಾದರೂ ಈ ತುಂಡುಗಳ ಮಹತ್ವವನ್ನೇ ಕುರಿತು ಯೋಚಿಸಿ.
1. with joy and gladness
2. shall see each other
3. all that has happenned

Immanuel Kant in Shillong ನನಗೆ ಇಷ್ಟವಾದ ಇನ್ನೊಂದು ಕತೆ. ಪತ್ನಿ ಮಾಯಾ ತೀರಿಕೊಂಡ ಬಳಿಕ ಅವಳ ನೆನಪುಗಳಲ್ಲಿ ಸಾಂಗತ್ಯವನ್ನು ಸಾನ್ನಿಧ್ಯವನ್ನು ಸಂಬಂಧವನ್ನು ಬದುಕುತ್ತಿರುವವನಂತಿರುವ ನಿರೂಪಕ ಒಬ್ಬ ಫಿಲಾಸಫಿ ಪ್ರೊಫೆಸರ್. ಈತನಿಗೆ Kant ಬಗ್ಗೆ ಇರುವ obcession ಮಟ್ಟದ ಒಲವು ತಾತ್ವಿಕವಾದ ಒಂದು ಸವಾಲಿಗೊಡ್ಡಲ್ಪಡುವುದು ಇಲ್ಲಿನ ಕೇಂದ್ರ ಎಳೆ. ಆದರೆ ಕತೆ ಅದಷ್ಟೇ ಆಗಿ ಉಳಿಯುವ ಬೆಳೆಯುವ ಮಿತಿಯನ್ನಿಟ್ಟುಕೊಂಡಿಲ್ಲ. Kant's categorical Imperative, the singular principle on the basis of which all human beings must hope to act - ಇಲ್ಲಿ ಮುಖ್ಯವಾಗಿ ನಿಕಷಃಕ್ಕೊಡ್ಡಲ್ಪಟ್ಟ imperative. Act only on that maxim through which you can; at the same time, will that it should be a universal law.

ತಮಾಷೆಯೆಂದರೆ ಒಬ್ಬ ವಿದ್ಯಾರ್ಥಿಗೆ ಕಡಿಮೆ ಅಂಕ ಹಾಕುವುದರ ಮೂಲಕ ಅವನ ಭವಿಷ್ಯ ಪಡೆದ ಆಕೃತಿಗೆ ಶಿಕ್ಷಕ ಹೊಣೆಗಾರನಾಗುತ್ತಾನೆ ಅಥವಾ ಆಗುವುದಿಲ್ಲ ಎಂಬ ಬಗ್ಗೆ Kantನ ಈ universal law ತತ್ವ ಏನೆನ್ನುತ್ತದೆ ಎಂಬ ಜಿಜ್ಞಾಸೆಯೆದುರು universal law ಇದೇ ಎಂದು ನಿರ್ದಿಷ್ಟ ಪಡಿಸುವವರು ಯಾರು ಮತ್ತು ಅವರು ಹೇಗೆ ಅದನ್ನು ನಿರ್ಧರಿಸುವ ಯೋಗ್ಯತೆ ಪಡೆದುಕೊಂಡರು ಎನ್ನುವ ಪ್ರಶ್ನೆಯಿದೆ. ಅಂಥವರು transcendental self ಆಗಿರಬೇಕು ಮತ್ತು ಆಗಿರುವವರಿಗಷ್ಟೇ Kant ನ ಮಾತುಗಳು ಸಂಬಂಧಿಸಿವೆ ಎಂದು ಭಾವಿಸುವುದಾದರೆ ಅದು ತಾನಲ್ಲ ಎಂದುಕೊಳ್ಳುವುದು ಪಲಾಯನವಾದವೂ ಆಗಬಹುದಲ್ಲವೆ? ನಾನೇ ಯಾಕೆ ನಾನೊಬ್ಬ ಅಂಥ ಸಾರ್ವತ್ರಿಕವಾದ ಸಮಷ್ಠಿಯ ಹಿತಚಿಂತನೆಯ ನೆಲೆಯಲ್ಲೇ ನನ್ನ ಕ್ರಿಯೆಯ ಆಯ್ಕೆಯನ್ನು ಮಾಡುವ ಜವಾಬ್ದಾರಿಯಿಂದ ನುಣುಚಿಕೊಳ್ಳಬೇಕು? ಕತೆ ಈ ಎಲ್ಲ ಜಿಜ್ಞಾಸೆಗಳನ್ನು ಎತ್ತುತ್ತಲೇ ಏನನ್ನೂ ಕುರಿತಿಟ್ಟು ಹೇಳುತ್ತಿಲ್ಲ ಅಥವಾ ಒಂದು ತಾತ್ವಿಕ ನಿಲುವನ್ನು ನಮಗೆ ಕೊಡುತ್ತಿಲ್ಲ.

ಆತ್ಮಹತ್ಯೆಗಳಲ್ಲಿ ಇಂಥ ಜಿಜ್ಞಾಸೆ ಹೆಚ್ಚು ಸ್ಪಷ್ಟವಾಗಿ ಮತ್ತು ತೀವ್ರವಾಗಿ ನಮ್ಮನ್ನು ಕಾಡುತ್ತದೆ. ತನ್ನ ಜೀವ ಮತ್ತು ಬದುಕನ್ನೇ ಬೇಡವೆಂದು ಸತ್ತುಬಿಟ್ಟ ವ್ಯಕ್ತಿ ಬದುಕಿರುವ ನಮ್ಮೆಲ್ಲರ ಎದುರು ಬಿಸುಟಿರುತ್ತಾನೆ. ಬದುಕಿ ಉಳಿದ ನಾವು ನಮ್ಮಿಂದಾಗಿ ಅಥವಾ ನಾವೆಲ್ಲ ಇರುವ ಈ ಜಗತ್ತು ಈ ವ್ಯಕ್ತಿಗೆ ಬೇಡವಾಗಿ ಬಿಟ್ಟುದಕ್ಕೆ ಹೊಣೆಗಾರರೆಂಬಂತೆ ವಿಷಾದದಿಂದ ತಲೆತಗ್ಗಿಸಿ ನಿಲ್ಲಬೇಕಿದೆ ಆ ಶವದ ಎದುರು. ಬೆಳಿಗ್ಗೆ ಚಹ ಕುಡಿಯುತ್ತ ಪೇಪರ್ ಓದುವಾಗಲೂ ಎಳೆಯ ಜೀವವೊಂದು ಹೀಗೆ ನಮ್ಮ ಮುಖಕ್ಕೇ ಎಸೆದ ಬದುಕಿನೆದುರು ತಪ್ಪದೇ ನಮಗಾಗುವ ಅನುಭವವಿದು. ಆತ್ಮಹತ್ಯೆ ಮತ್ತು ಪರೀಕ್ಷೆಯ ಅಂಕಗಳೆರಡನ್ನೂ ಅಷ್ಟಿಷ್ಟು ಸೇರಿಸಿಕೊಂಡಂತಿರುವ ಒಂದು ಸನ್ನಿವೇಶ 3Ediots ಸಿನಿಮಾದಲ್ಲಿದೆ. ಇಂಜಿನಿಯರಿಂಗ್ ವಿದ್ಯಾರ್ಥಿ ಜಾಯ್ ಎಂಬಾತನ ಆತ್ಮಹತ್ಯೆ ಮತ್ತು ಅದರ ಉತ್ತರದಾಯಿತ್ವ ಅದು ಹೇಗೆ ತನ್ನದಾಗುತ್ತದೆ ಎಂದು ಪ್ರಶ್ನಿಸುವ ಕಾಲೇಜಿನ ಡೀನ್ ವೀರೂ ಸಹಸ್ರಬುದ್ಧಿಯನ್ನು ನೆನೆಯಿರಿ.

It is not for you and me to individually decide what is right and wrong for everyone ಎನ್ನುವ ವಾದವಿದೆ ಇಲ್ಲಿ. Why are you so scared to take responsibility ಎಂಬ ಪ್ರಶ್ನೆಯಿದೆ.

ಕಡಿಮೆ ಅಂಕ ಹಾಕಿದ್ದಕ್ಕೆ ಶಿಕ್ಷಕನನ್ನು ಹುಡುಗರು ರಾತ್ರಿ ಹೊತ್ತು ಕಾದು ನಿಂತು ಬೆದರಿಸುತ್ತಾರೆ. ಒಬ್ಬನಂತೂ ಚಾಕು ಹೊರತೆಗೆದು ನಿಲ್ಲುತ್ತಾನೆ. ಆನಂತರದ ದಿನಗಳಲ್ಲಿ ಈ ಪ್ರೊಫೆಸರ್ ಶಿಲ್ಲಾಂಗ್ ಬಿಟ್ಟು ಬೇರೆಲ್ಲಿಗೋ ಹೋಗುತ್ತಾನೆ, ತನ್ನದೇ ಆದ ಕಾರಣಗಳಿಗಾಗಿ. ಇದೆಲ್ಲ ನಡೆದು ಎಷ್ಟೋ ವರ್ಷಗಳ ನಂತರ ಅವರಲ್ಲೊಬ್ಬ ಅದೇ ಪ್ರೊಫೆಸರ್‌ನನ್ನು ಅದೇ ಊರಿನಲ್ಲಿ ಭೇಟಿಯಾಗುವುದು ಕತೆಯ plot. ಬೆದರಿಸಿದ ಹುಡುಗ ತಾವು ಬೆದರಿಸಿದ್ದಕ್ಕೇ ಪ್ರೊಫೆಸರ್ ಊರುಬಿಟ್ಟ ಎಂದು ತಿಳಿದು ಅರ್ಧ ಹೆಮ್ಮೆಯಲ್ಲಿಯೂ ಅರ್ಧ ಪಾಪಪ್ರಜ್ಞೆಯಲ್ಲೂ ಇದ್ದರೆ ಪ್ರೊಫೆಸರ್ ಅದೊಂದು ಸಂಗತಿಯೇ ಅಲ್ಲ ಎಂಬಂತೆ ತಾನು ಊರು ಬಿಟ್ಟ ಕಾರಣಗಳನ್ನು ವಿವರಿಸುತ್ತಿದ್ದರೆ ಈ ಹುಡುಗನಲ್ಲಿ ಗೊಂದಲ, ಅವಮಾನ, ಅಸಮಾಧಾನ. ಮೊದಲು ಪಾಪಪ್ರಜ್ಞೆಯ ಹಿಂದಿದ್ದ ಭಾವ ಅಹಂ ಹೊರತು ಇನ್ನೇನಲ್ಲ ಎನ್ನುವುದು ಪ್ರೊಫೆಸರ್ ಗಮನಕ್ಕೆ ಬರುತ್ತದೆ. ಮತ್ತೀಘ ಆ ಒಣಹೆಮ್ಮೆ ಮತ್ತು ಪಾಪಪ್ರಜ್ಞೆಗಳ ಹಿಂದಿದ್ದ ಸ್ವಪ್ರತಿಷ್ಠೆಗೆ ಪೆಟ್ಟಾದುದಕ್ಕಷ್ಟೇ ಈ ನೋವು ಎನ್ನುವುದೂ ತಿಳಿಯುತ್ತದೆ. ಮನುಷ್ಯನ ಭಾವ - ಬುದ್ಧಿ - ಮಾತುಗಳ ನಡುವಿನ ಅಂತರವನ್ನು ಹಿಡಿಯುವ ಸಾವಧಾನ ಗಮನಸೆಳೆಯುತ್ತದೆ.

ಇದೊಂದು ತಾತ್ವಿಕ ನೆಲೆಯಲ್ಲಿಯೂ ಉತ್ತಮ ಕತೆ. ತಾಂತ್ರಿಕವಾಗಿಯೂ ಇದನ್ನು ನೇಯ್ದ ನೇಯ್ಗೆ, ನಿರೂಪಣೆಯ ಹದ ಮತ್ತು ಚಂದಕ್ಕಾಗಿಯೂ ಉತ್ತಮ ಕತೆ. ಇಡೀ ಕತೆಯ ಶಿಲ್ಪ, ಆಕೃತಿ ಮತ್ತು ನಿರೂಪಣೆ ಇಷ್ಟವಾಗುವ ಕತೆ. ಅಂದ ಹಾಗೆ, ಸಂಕಲನದ ಹೆಸರಿಗೆ ಕಾರಣವಾದ Difficult Pleasures ಎಂಬ ಶಬ್ದ ಈ ಕತೆಯಲ್ಲೇ ಬರುತ್ತದೆ! It's such a pleasure - talking.

For Love or Water ಕತೆ ಅಂಥ ಏಕಸೂತ್ರದ ಕಥಾನಕವನ್ನಾಗಲೀ, ಸರಳವಾದ ನಿರೂಪಣೆಯಾಗಲೀ ಇರುವ ಕತೆಯಲ್ಲ. ಆದರೂ ಈ ಕತೆ ತನ್ನ ಮಹತ್ವಾಕಾಂಕ್ಷೆಯನ್ನು ತಲುಪುವ ಬಗೆ ಸ್ವಲ್ಪ ಭಿನ್ನ ನೆಲೆಯದ್ದು. ಮಿಸ್ಟರ್ ಭಟ್ಕಳನ ಬಾಡಿಗೆದಾರರಾಗಿ ನಿಂತ ಇಬ್ಬರು ಎಳೆಯ ಮೆಡಿಕಲ್ ಸ್ಟೂಡೆಂಟ್ಸ್ ಮಿನಿ ಮತ್ತು ನಿರೂಪಕಿ ಪ್ರೇಮದಲ್ಲಿ ಬೀಳುವ ಬಗ್ಗೆ ವಿಭಿನ್ನ ನಿಲುವು ಉಳ್ಳವರು. ಬೆಂಗಳೂರಿನ ಭೂಪಸಂದ್ರದ ಮಿಸ್ಟರ್ ಭಟ್ಕಳನಿಗೆ ಉತ್ತರ ಕನ್ನಡದ ಸುದ್ದಿ ಸುಮಾಚಾರಗಳ ಕುರಿತಿರುವ ಅಭಿಮಾನ-ಸೆಳೆತ ಬೆಂಗಳೂರಿನ ಮೇಲೆ ಇಲ್ಲ. ಎಳೆ ಹುಡುಗಿಯರ ತೆವಲಿನ ಮುದುಕ ಎಡ್ವಿನ್ ಡೊಮಿನಿಕ್, ಮಿನಿಯ ಪ್ರೇಮ ಮತ್ತು ಬರಾನ್ ಎಂಬಾತನ ಇರಾನಿ ಪ್ರೇಮ, ಭಟ್ಕಳನ ಭಟ್ಕಳ ಪ್ರೇಮಗಳೆಲ್ಲವೂ ಅದು ಹೇಗೋ ಭೂಪಸಂದ್ರದ ನೀರಿನ ಸಮಸ್ಯೆಗೆ ತೆಕ್ಕೆ ಹಾಕಿಕೊಂಡಂತಿರುವುದು ವಿಚಿತ್ರವಾದರೂ ನಿಜ! ಹಾಗೆಯೇ ಆ ನೀರಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಇರುವ ವಿಲಕ್ಷಣ ಮಾರ್ಗೋಪಾಯಗಳಂತೆಯೇ ಈ ಪ್ರೇಮದ ಮಾರ್ಗವೂ ತಿರುವು ತೆಗೆದುಕೊಳ್ಳುವ ಸಾಧ್ಯತೆಗಳನ್ನು ಉಳಿಸಿಕೊಂಡೇ ಇರುತ್ತದೆಂಬ ಸತ್ಯವೂ. ಎರಡು ಎಳೆ ಜೀವಗಳ ನಡುವಿನ ಅನುಬಂಧ ಕೂಡಾ ಅಗೋಚರ ಅನಿರೀಕ್ಷಿತ ತಂತುಗಳಿಗೆ ಜೋತುಬಿದ್ದು ಸರಳ ಮನಸ್ಸುಗಳ ಹಿಡಿತಕ್ಕೆ ಸಿಗದೆ ನುಣುಜಿಕೊಂಡು ಆಘಾತ ನೀಡುವಂತಿರುವುದು ನಿರೂಪಕಿಯ ಸಂವೇದನೆಯಾಗುವುದು ಕತೆ.

Hanging On like Death ಕತೆ ತನ್ನ ಮಾಯಕತೆಯಿಂದಲೂ ತನ್ನ ಅದ್ಭುತ ಕೊನೆಯಿಂದಲೂ ಕಲಕುವಂತಿದೆ. ಸರಿಸುಮಾರು ಈ ಸಂಕಲನದ ಎಲ್ಲಾ ಕತೆಗಳಂತೆಯೇ ಇಲ್ಲಿಯೂ ಕಥಾನಕ ತೆರೆದುಕೊಳ್ಳುವುದು ಒಂದು ಸನ್ನಿವೇಶದ ನಡುವಿನಲ್ಲಿ. Good House Keeping ಕತೆಯ ಅಯನಾ ಬೆಂಗಳೂರಿನ ಅಪಾರ್ಟ್‌ಮೆಂಟಿನಲ್ಲಿ ಕೂತು ಇನ್ನಷ್ಟೇ ಜೋಡಿಸಬೇಕಾದ ಸಾಮಾನುಗಳ ಖಾಲಿ ಮನೆಯಲ್ಲಿ ಕೂತು (ಖಾಲಿ ಮನಸ್ಸಿನಿಂದಲೂ) ಧೇನಿಸುತ್ತಿದ್ದಾಳೆ. The Big Picture ನಲ್ಲಿ Mrs Ali ವಿಮಾನಯಾನದಲ್ಲಿದ್ದಾಳೆ, ಗಲಿಬಿಲಿಗೊಂಡಿದ್ದಾಳೆ. Immanuel Kant in Shillong ಕೂಡಾ ಭೂತ-ವರ್ತಮಾನಗಳ ತೂಗುಯ್ಯಾಲೆಯಲ್ಲಿ ಹಿಂದಕ್ಕೂ ಮುಂದಕ್ಕೂ ತುಯ್ಯುವಂತೆ ನಡುಘಟ್ಟದ ಆರಂಭವನ್ನು ಹೊಂದಿದೆ. Banerjee and Banerjee, The History of Touch ಮತ್ತು Birds ಕತೆಗೂ ಅಂಥವೇ ಹಂದರವಿದೆ. Fairytale on 12th Main ಕತೆಯಂತೂ ಕಾಲವನ್ನೇ ಸುಳ್ಳಾಗಿಸುವ ವಿಭ್ರಮಗೊಳಿಸುವ ತಂತ್ರವನ್ನು ಹೊಂದಿದೆ. ಮತ್ತೆ ಇಲ್ಲಿ ಕೂಡಾ Wild Things ಮತ್ತು Birds ಕತೆಗಳಲ್ಲಿರುವಂತೆ ಪುಟ್ಟ ಹುಡುಗನಿದ್ದಾನೆ. ಅವನ ಸೀಮಿತ ಬುದ್ಧಿಯ ಗ್ರಹಿಕೆಯೇ ಕತೆಯ ನಿರೂಪಣೆಯ ಗ್ರಹಿಕೆಯಾಗಿದ್ದರೂ ಕತೆಯೇನೂ ಉತ್ತಮಪುರುಷ ನಿರೂಪಣೆಯಲ್ಲಿಲ್ಲ. ಇಲ್ಲಿ ತೆರೆದುಕೊಳ್ಳುವ ಜಗತ್ತು ಬಾಲಜಗತ್ತು. ನೀಲ್‌ನ ತಂದೆ ಸಂಕಲನದ ಹೆಚ್ಚಿನ ಕೇಂದ್ರಪಾತ್ರಗಳಂತೆ ಒಂಟಿಜೀವ. ಹೆಂಡತಿ ಬಿಟ್ಟು ಹೋಗಿದ್ದಾಳೆ. ಹಾಗೆ ಹಲವು ಬಾರಿ ಟೆಂಪರರಿಯಾಗಿ ಬಿಟ್ಟು ಹೋದವಳು ಈ ಬಾರಿ ಮರಳಿ ಬರುವುದು ಅನುಮಾನವೆಂದು ಪುಟ್ಟ ನೀಲ್‌ಗೂ ಅರಿವಾಗಿರುವಂತೆ ಕಾಣುತ್ತದೆ. ಆದರೂ ಸಂಜೆ ಇರುವ ತನ್ನ ಶಾಲಾ ಕಾರ್ಯಕ್ರಮದಲ್ಲಿ ತಾನು ವೇದಿಕೆಯಲ್ಲಿರುವುದನ್ನು ಕಾಣಲು ಅವಳು ಬಂದರೂ ಬರಬಹುದೆಂಬ ಅವನ ಆಸೆ ಇನ್ನೂ ತುಣುಕು ಜೀವ ಇಟ್ಟುಕೊಂಡಿದೆ. ಪುಟ್ಟ ನೀಲ್‌ಗೆ ಕನ್ನಡಕವಿಲ್ಲದೆ ಏನೂ ಕಾಣದು. ಒಮ್ಮೆ ಮಳೆ ಸುರಿಯುವಾಗ ಬಿದ್ದು ಕೈಮುರಿದುಕೊಂಡ ಅಪ್ಪ ಆಮೇಲೆಂದೂ ಮಳೆಯಲ್ಲಿ ಹೊರಗೆ ಹೊರಡುವುದಿಲ್ಲ ಎನ್ನುವುದನ್ನು ಬಲ್ಲ ನೀಲ್ ಸಂಜೆ ಹೊತ್ತಿಗೆ ಮಳೆ ನಿಲ್ಲುವ ಬಗ್ಗೆ ಆತಂಕಿತನಾಗಿದ್ದಾನೆ. ಅವನ ಆತಂಕಗಳ ಪಟ್ಟಿ ಸ್ವಲ್ಪ ದೊಡ್ಡದೇ ಇದೆ ಪಾಪ. ಅಮ್ಮ, ಅಪ್ಪ, ಮಳೆ, ಸಂಜೆ ವೇದಿಕೆಯ ಮೇಲೆ ಕಾಣಿಸಿಕೊಳ್ಳಲಿರುವುದು, ಅಮ್ಮ ಬಂದಾಳೇ, ಅಪ್ಪ ಮಳೆಯಿಂದಾಗಿ ಬರದಿದ್ದರೆ, ಕಾರ್ಯಕ್ರಮದ ಹೊಣೆಹೊತ್ತ ಬ್ರದರ್ ಜೇಕಬ್‌ನ ಸಿಟ್ಟು-ಸಿಡುಕು ಹೀಗೆ ಒಂದೆರಡಲ್ಲ. ಈ ಎಲ್ಲವೂ ಸೇರಿ ನಿರೂಪಣೆಗೇ ಮೆತ್ತಿರುವ ಒಂದು ಮೋಡ ಮುಸುಕಿದ ಕಗ್ಗತ್ತಲ ಆತಂಕಿಂತ ಬಣ್ಣದ ವಿಷಣ್ಣ ಭಾವವೇ ಈ ಕತೆಯ ಕೇಂದ್ರ. ಉಳಿದ ಕತೆಗಳಂತಲ್ಲದೆ ಈ ಕತೆಯ ಕೊನೆಯ ಒಂದು ವಿಲಕ್ಷಣ ಸನ್ನಿವೇಶ ಎಂಥವರನ್ನೂ ಅಲ್ಲಾಡಿಸಿಬಿಡುವಷ್ಟು ತೀವ್ರ ಸಂವೇದನೆಗಳನ್ನು ಉದ್ದೀಪಿಸಿಬಲ್ಲ ತಣ್ಣನೆಯ ಕ್ರೌರ್ಯವನ್ನು ಹೊಂದಿದೆ!

The History of Touch ಕತೆಯಲ್ಲಿರುವ ತಿರುವು-ಸಂಕೀರ್ಣತೆಯನ್ನು ಮೀರಿ ಮನಸೆಳೆಯುವ ನಿರೂಪಣೆಯ ಹದದಿಂದಲೂ ವಸ್ತುವಿನ ಸೂಕ್ಷ್ಮದಿಂದಲೂ ಗಮನಸೆಳೆಯುತ್ತದೆ. ಪಾಪ-ಪುಣ್ಯದಂಥ ಕರ್ಮಸಿದ್ಧಾಂತದ ಜಿಜ್ಞಾಸೆ, ಕುಷ್ಠರೋಗದ ಮನಸ್ಥಿತಿಯಲ್ಲಿ ಸ್ಪರ್ಶದ ನೆನಪುಗಳಲ್ಲಿ ಪ್ರೀತಿಗಾಗಿ ಹಂಬಲಿಸುವ ಹಪಹಪಿಕೆ, Extra marital ಸಂಬಂಧದ ತುಮುಲಗಳ ಭೂತಕಾಲ ಎಲ್ಲವನ್ನೂ ಒಂದೇ ಬಿಂದುವಿನಲ್ಲಿ ರೇಖೆ ಎಳೆದು ಜೋಡಿಸ ಬಯಸುವ ಈ ಕತೆಗೆ ಎದುರಾಗುವ ದೊಡ್ಡ ಸವಾಲೇ ನಿರೂಪಣಾ ತಂತ್ರ. ಇಲ್ಲಿ ಮತ್ತದೇ ಹಳೆಯ ತಂತ್ರವಿದೆ. ಆತ್ಮೀಯ ಜೀವವೊಂದರ ಜೊತೆಗಿನ ಸಂದರ್ಶನ ಮಾದರಿಯ ‘ಮಾತು-ಕತೆ’. ಸ್ಪರ್ಶದ ನಿರೀಕ್ಷೆಯನ್ನು, ತಹತಹವನ್ನು ಕೇಂದ್ರಪ್ರಜ್ಞೆಯಾಗಿಸಲು ಪ್ರಯತ್ನಿಸುವಲ್ಲಿ ಇಂಥ ತಂತ್ರ ವಾಚ್ಯ ನೆಲೆಯನ್ನು ಹೀಗೆ ಅನಿವಾರ್ಯವಾಗಿ ಆಯ್ದುಕೊಂಡಿದ್ದೇ ತನ್ನ ಧ್ವನಿಶಕ್ತಿಯನ್ನು ಬಿಟ್ಟುಕೊಟ್ಟು ಪೇಲವವಾದಂತೆ ತೀವ್ರತೆಯನ್ನು ಕಳೆದುಕೊಳ್ಳುವುದು ಸಹಜವಾದದ್ದು.

ಈ ಎರಡು ಕತೆಗಳ ನೆಲೆಯಲ್ಲೇ ಒಂದು ಚಿತ್ರದಂತೆ ಮನಸ್ಸಿನಲ್ಲಿ ಮೂಡಿ ನಿಲ್ಲುವ Birds ಕತೆ ನಿರೂಪಣೆಯ ಹದದಿಂದ ಮುಖ್ಯವಾಗುವ ಕತೆ. ಅನುಮಾನಗಳಲ್ಲಿ ಹುಟ್ಟಿ ಕೊನೆಯಲ್ಲಿ ಸಾಕ್ಷಾತ್ಕಾರಗೊಳ್ಳುವ ಸತ್ಯದತ್ತ ನಿಧಾನವಾಗಿ ಸಾಗುವ ಈ ಕತೆ ತನ್ನ ಕೊನೆಯಿಂದ ಜಿಜ್ಞಾಸೆಗಳಿಗೆ ಕಾರಣವಾಗುವುದಾದರೂ ಈ ಕತೆಯ ಮಹತ್ವವಿರುವುದೇ ಈ ಕತೆಯ ನಿರೂಪಣಾ ಹದಕ್ಕಾಗಿ. ಇದೊಂದು ಅಧ್ಯಯನ ಯೋಗ್ಯ ನಿರೂಪಣಾ ತಂತ್ರವನ್ನು ಹೊಂದಿರುವ ಕತೆ. ಇಲ್ಲಿನ ವಸ್ತು ಸಂಕೀರ್ಣವಾದದ್ದು. Hanging On like Death ಕತೆಯ ಪುಟ್ಟ ನೀಲ್ ತರವೇ ಇಲ್ಲಿ ಸಮೀರ್ ಇದ್ದಾನೆ. ಇವನಿಗೂ ತಾಯಿಯಿಲ್ಲ ಮತ್ತು ಅದಿನ್ನೂ ಏನೆಂಬುದು ಅಷ್ಟು ಸ್ಪಷ್ಟವಾಗಿ ಈ ಮಗುವಿನ ಪ್ರಜ್ಞೆಗೆ ನಿಲುಕಿಲ್ಲ. ಈ ಸಮೀರ್ ಅಮೆರಿಕದಲ್ಲಿ ಹುಟ್ಟಿ ಬೆಳೆದವ. ತಂದೆ ತಾಯಿ ಭಾರತೀಯರಾದರೂ ಈಗ ತಾಯಿ ಸತ್ತಿದ್ದಾಳೆ. ತಾಯಿಯ ಚಿತಾಭಸ್ಮ ಸಹಿತ ಅಪ್ಪನೊಂದಿಗೆ ಭಾರತಕ್ಕೆ ಬಂದಿರುವ ಈ ಪುಟ್ಟ ಸಮೀರನಿಗೆ ಅಪ್ಪ ತನ್ನನ್ನು ಇಲ್ಲೇ, ತಾಯಿಯ ತವರಲ್ಲಿ ಬಿಟ್ಟು ಹೋಗಲಿದ್ದಾನೆ ಎಂಬುದು ತಿಳಿದಿಲ್ಲ. ಅದು ಚೂರುಚೂರಾಗಿ ತಿಳಿದು ಬರುವುದು ಕಥಾನಕದ ನಡೆಯ ನಿಧಾನದಲ್ಲೇ ಸಂಭವಿಸುತ್ತದೆ. ವಿಚಿತ್ರವೆಂದರೆ ಇದನ್ನು ಎರಡು ರೀತಿ ವಿಭಿನ್ನವಾದ ನೆಲೆಗಳಲ್ಲಿ ನೋಡಬಹುದಾದ ಸಾಧ್ಯತೆಯನ್ನು ಕತೆ ತೆರೆದೇ ಇರಿಸುವ ಬಗೆ. ಒಂದು, ಈ ಪರಿತ್ಯಾಗ, ಸಮೀರನ ಮುಗ್ಧ ನೆಲೆಯಿಂದ ನೋಡಿದರೆ ಒಂಥರಾ ಕ್ರೌರ್ಯ, ಅನ್ಯಾಯದ ಹಾಗೆಲ್ಲ ಕಾಣಿಸುವುದು ಸಾಧ್ಯ. ಸಮೀರನ ತಾಯಿ ಬದುಕಿದ್ದರೆ ಇಂಥ ಒಂದು ದಿನ, ಸಂದಿಗ್ಧ ಸಮೀರನ ಬಾಳಲ್ಲಿ ಬರುತ್ತಿರಲಿಲ್ಲವೇನೊ ಅನಿಸುವುದು. ತಂದೆ ಈ ಮಗನಿಂದ ಕಳಚಿಕೊಂಡು ಅಮೆರಿಕದಲ್ಲಿ ಆರಾಮಾಗಿರಲು ಬಯಸುವ ಸ್ವಾರ್ಥಿಯಾಗಿದ್ದಾನೆ ಎನ್ನುವುದು ಇದರ ಕಟುಮುಖ. ಇನ್ನೊಂದು ದೃಷ್ಟಿಯೂ ಸಾಧ್ಯ. ಮಗನ ಬಗ್ಗೆ ಸಾಕಷ್ಟು ಗಮನ, ಸಮಯ ನೀಡಲಾಗದ ಅನಿವಾರ್ಯ ಸ್ಥಿತಿಯಲ್ಲಿ ಪತ್ನಿಯನ್ನು ಕಳೆದುಕೊಂಡ ತಂದೆ ಅವಳ ತವರ ಸಹಾಯ ಪಡೆಯುವುದು ತೀರ ವಿಪರ್ಯಾಸಕರವೇನಲ್ಲ. ಅಕ್ಕಪಕ್ಕದ ಊರಿನಲ್ಲೋ, ಒಂದೇ ಊರಿನಲ್ಲೋ ಇದ್ದಾಗ ತೀರ ಸಹಜವಾಗಿ ಕಾಣಬಹುದಾದ ಒಂದು ಕ್ರಿಯೆ ಭರತ-ಅಮೆರಿಕದ ದೂರದಿಂದ ಬೇರೆಯೇ ತರ ಕಾಣಿಸುತ್ತದೆಯಲ್ಲವೆ ಎನ್ನುವುದು ಸತ್ಯ. ಅಲ್ಲದೆ ಅಕಸ್ಮಾತ್ ಈ ಪುಟ್ಟ ಸಮೀರ ಅಮೆರಿಕಕ್ಕಿಂತ, ಅಪ್ಪನ ಸಾಂಗತ್ಯಕ್ಕಿಂತ ಹೆಚ್ಚು ತಾಯಿಯ ತವರನ್ನೇ ಹಚ್ಚಿಕೊಂಡಿದ್ದರೆ, ಇಷ್ಟಪಟ್ಟಿದ್ದರೆ ಆಗಲೂ ಈ ಚಿತ್ರ ಬೇರೆಯೇ ತರ ಕಾಣಿಸುವುದು ಸಾಧ್ಯವಿತ್ತು. ಕತೆ ಬದುಕಿನ ಈ ವೈಚಿತ್ರ್ಯವನ್ನು ನಿರ್ದಿಷ್ಟವಾಗಿ ಗೆರೆಯೆಳೆದು ಕೊರೆದು ಅಳಿಸಿ ಹಾಕದೇ ಉಳಿಸಿಕೊಂಡೇ ನೇಯಲ್ಪಟ್ಟಿರುವುದು ಕತೆಯ ಬಗ್ಗೆ ಮೆಚ್ಚುಗೆ ಮೂಡಿಸುತ್ತದೆ. ಅದೇ ಸಮಯಕ್ಕೆ ಸಮೀರನ ನೋವು ವಿಶೇಷವೆನಿಸದೇ ಹೋಗುವುದರಿಂದ ಇಲ್ಲಿನ ವಸ್ತುವಿವರ ಮತ್ತು ಕಥಾಜಗತ್ತಿನ ವಿವರಗಳು ಮೂಡಿಸುವ ಒಟ್ಟಾರೆ ಚಿತ್ರದ ಸೌಂದರ್ಯಕ್ಕಾಗಿ ಮಾತ್ರ ಕತೆ ಮುಖ್ಯವಾಗುತ್ತದೆ.

Good Housekeeping ಕತೆಯಲ್ಲಿನ ಕಾವ್ಯಾತ್ಮಕ ಲಯ, ವಾಚ್ಯಕ್ಕೆ ಹೋಗದೆಯೆ, ಹೆಚ್ಚು‘ಹೇಳದೆಯೇ ಬಹಳಷ್ಟನ್ನು ಕಾಣಿಸುವ’ ಸಶಕ್ತ ತಂತ್ರ ವಿಶೇಷ ಗಮನ ಸೆಳೆಯುತ್ತದೆ. ಹೆಚ್ಚು ಗಹನವಾದ ಈ ಕತೆ ಏಕಕಾಲಕ್ಕೆ ಗಂಡು-ಹೆಣ್ಣು ಸಂಬಂಧ, ಸಾಹಿತ್ಯ ಮಾತು-ಶಬ್ದಗಳ ತೆವಲಿಗೆ ಸಿಲುಕಿ ರಾಜಕೀಯ ನೆಲೆಯ ಒಂದು ಸರಕಷ್ಟೇ ಆಗಿ ‘ಬಳಸಲ್ಪಡುವ’ ಮಟ್ಟಕ್ಕೆ ಬಂದಿರುವುದು ಮತ್ತು ಮನುಷ್ಯ-ಮನಸ್ಸು-ಮನೆ ಮೂರರ ಶಿಸ್ತು-ನೆಮ್ಮದಿ ಮತ್ತು ಸ್ವಾಸ್ಥ್ಯ ಕೊನೆಗೂ ಇರುವುದು ಪ್ರೀತಿಯನ್ನು ಒಪ್ಪಿಕೊಳ್ಳುವುದರಲ್ಲೇ ಹೊರತು ಅದರಿಂದ ನುಣುಚಿಕೊಳ್ಳುತ್ತ ಹೋಗುವುದರಲ್ಲಿ ಇಲ್ಲ ಎಂಬುದನ್ನು ನವಿರಾಗಿ ಮತ್ತು ಪರೋಕ್ಷವಾಗಿ ಬಿಂಬಿಸುವ ಉತ್ತಮ ಕತೆಯಿದು. ವಸ್ತುವಿಗೆ ತಕ್ಕುದಾದ ತಂತ್ರ ಮತ್ತು ನಿರೂಪಣಾ ನೇಯ್ಗೆಯಿಂದ ಕತೆ ಹಿತವಾದ ಓದನ್ನು ಸಾಧ್ಯವಾಗಿಸುತ್ತದೆ. ಸ್ವಲ್ಪಮಟ್ಟಿಗೆ Banerjee and Banerjee ಕತೆಯ ಶಿಲ್ಪವೇ ಇಲ್ಲಿ ಬಳಕೆಯಾಗಿದೆ ಎನ್ನಬಹುದಾದರೂ ಒಟ್ಟಾರೆ ಸೌಂದರ್ಯದಲ್ಲಿ ಬ್ಯಾನರ್ಜಿ ಕತೆ ಹೆಚ್ಚು ಸಹಜವಾಗಿದೆ. Good Housekeeping ನ ತಾರಾ ಜೋನ್ ಕತೆ, ಅಯನಾ-ಜಾಕ್ ಕತೆ, ಜಂಗಮ ಬದುಕಿನ ವಿವರಗಳು ಇಡಿಕ್ಕಿರಿಸಿದಂತೆ ಕತೆಯನ್ನು ಸ್ವಲ್ಪ ಭಾರವಾಗಿಸಿವೆ. ಆದರೆ ಕತೆಯ ವ್ಯಾಪ್ತಿಯ ನೆಲೆಯಲ್ಲಿ ಬಹುಷಃ ಈ ಬಗೆಯ ಚಲನೆ ಮತ್ತು ವಿವರಗಳು ಕತೆಯ ಒಟ್ಟಾರೆ ನಿಲುವಿನತ್ತ ಚಲಿಸಲು ಓದುಗನಲ್ಲಿ ಬೇಕಾದ ಒಂದು ಮಾನಸಿಕ ಸಿದ್ಧತೆಗೆ ಅಗತ್ಯವಾದ pitch ನಿರ್ಮಿಸಲು ಸಹಾಯಕವಾಗಿವೆಯೇ ಅನಿಸುತ್ತದೆ.

Eye in the Sky ಕತೆ ಬಹಳಷ್ಟನ್ನು ಹಿಡಿದಿಟ್ಟುಕೊಂಡಿರುವ ಮೌನ ಹೆಪ್ಪುಗಟ್ಟಿದಂತಿರುವ ವಾಚಾಳಿ ಕತೆ! ಜೆಸಿಮ್-ಡಾನ್ ದಂಪತಿಗಳ ನಡುವೆ ಏನೂ ಬಿರುಕಿಲ್ಲ. ಹ್ಹ! ಇದೆಂಥಾ ದರಿದ್ರ ಸಮಜಾಯಿಸಿ! ವಾಟರ್‌ಮೆಲನ್ ತಿನ್ನುವಾಗ ಸೊರ್ರಸೊರ್ರ ಎಂದು ಶಬ್ದ ಮಾಡುತ್ತಾಳೆಂದು ಸಿಡಿಮಿಡಿಗೊಂಡ ಗಂಡನ ಮೇಲೆ ಕೊಂಕು ಮಾತ್ತೆಸೆದು ಬೈಸಿಕೊಂಡು ಮನೆಯಿಂದ ಹೊರಬಿದ್ದ ಡಾನ್‌ಗೆ ಹೀಗೆ ಮನಸ್ಸು ಕೆಟ್ಟಾಗ ಗೊತ್ತುಗುರಿಯಿಲ್ಲದ ವಾಕಿಂಗ್ ಸಮಾಧಾನ ನೀಡುತ್ತದೆ. ಜೊತೆಯ ಜೀವ ತಿನ್ನುವ, ನಗುವ, ಬೆರಳು ತೀಡುವ ರೀತಿ ನೀತಿ ಇತ್ಯಾದಿಗಳೆಲ್ಲ ವಕ್ರವಾಗಿ ಕಾಣಿಸಲು ಸುರುವಾಗುವುದು ಮತ್ತು ಇಷ್ಟವಾಗಿ ಕಾಣಿಸುವುದು ಬೇರೆ ಬೇರೆ ಹಂತಗಳೆಂದು ಎಲ್ಲರಿಗೂ ಗೊತ್ತು ಮತ್ತು ಅದು ಅಷ್ಟೇ ಆಗಿರುವುದಿಲ್ಲ ಎನ್ನುವುದೂ ಆಯಾ ಜೀವಗಳಿಗೆ ಗೊತ್ತಿರುತ್ತದೆ. ಡಾನ್‌‌ಗೂ ಗೊತ್ತು. ಹಾಗಾಗಿ ಈ ಬಾರಿ ಹೊರಬಿದ್ದವಳು ಏನೋ ವಿಪರೀತಕ್ಕಿಟ್ಟುಕೊಂಡ ಹಾಗೆ ಸುಮ್ಮನೇ ಗೋವಾದ ಬಸ್ಸು ಹತ್ತಿ ಕೂತು ಊರೇ ಬಿಡುತ್ತಾಳೆ. ಊರುಬಿಟ್ಟ ಮಾತ್ರಕ್ಕೆ ಮನಸ್ಸಿನಿಂದ ತಪ್ಪಿಸಿಕೊಳ್ಳಲಾಗುತ್ತದೆಯೆ? ಮನುಷ್ಯರಿಂದ ತಪ್ಪಿಸಿಕೊಳ್ಳಬಹುದು ಆದರೆ ಮನಸ್ಸಿನಿಂದ ತಪ್ಪಿಸಿಕೊಳ್ಳಲಾಗದು ಎನ್ನುತ್ತಾರಲ್ಲ ಕಾರ್ನಾಡರು ‘ಯಯಾತಿ’ ನಾಟಕದಲ್ಲಿ! ಕತೆಯ ಆರಂಭದಲ್ಲೇ ಗೋವಾದ ಕೋಚ್ ಹತ್ತಿ ಕೂತ ಡಾನ್ ಸುತ್ತ ಇರುವ ನಿರೂಪಣೆಯ ಮುಂದಿನ ವಿವರಗಳೆಲ್ಲಾ ಬಸ್ಸಿನಲ್ಲಿದ್ದ ಹುಡುಗರು, ಗೋವಾದ ಹೋಟೆಲಿನಲ್ಲಿ ತುಂಬಿರುವ ಬೇರೆ ಪ್ರವಾಸಿಗಳ ಸಂಭಾಷಣೆ, ಮೋಜು ಗದ್ದಲಗಳ ಕುರಿತೇ ಇದ್ದರೂ ಅವೆಲ್ಲಾ ಡಾನ್ ಮನಸ್ಸಿನ ಗೊಂದಲ, ತುಮುಲ ಮತ್ತು ಮಾತಿನಲ್ಲಿ ಇಳಿದು ಬರಲಾರದ ಬೇರಿಲ್ಲದ ಬೇಸರದ ಆಳವನ್ನೇ ಹಾಡುತ್ತವೆ. ಎಲ್ಲಾದರೂ ಓಡಿ ಹೋಗಬೇಕು ಅನಿಸುವ ಅದೇ ಭಾವವಿಲ್ಲಿ ಕೆಲಸ ಮಾಡಿದೆ, ನಿಜವೇ. ಆದರೆ ಏನು ಆ ನೋವು, ಬೇಸರ, ತಳಮಳ ಎಂದರೆ ಏನೂ ಇಲ್ಲ, ನಿಜಕ್ಕೂ!! ನೋಟದಲ್ಲಿ ಏನನ್ನೂ ನೋಡುತ್ತಿಲ್ಲ, ಶೂನ್ಯ. ಮನಸ್ಸಿನಲ್ಲಿ ಯಾವ ಯೋಚನೆಯೂ ಇಲ್ಲದ ಭಾರ, ಮೌನ. ಮನಸ್ಸಿನ ಈ ಶಬ್ದವಿಲ್ಲದ ನೋವನ್ನು ನುಡಿಸಬೇಕು ಅಷ್ಟೇ!

ಕತೆಯಿದನ್ನು ಮಾಡಲು ಕೈ ಹಚ್ಚಿರುವುದೇ ಈ ಕತೆ ಇಷ್ಟವಾಗಲು ಸಾಕಷ್ಟು ಕಾರಣವಾಯಿತು. ಡಾನ್‌ಳ ಟೆಂಪರರಿ ನಾಪತ್ತೆ, ಗೈರು ಬರೇ ಪಲಾಯನದಂತಾಗಿ ಬಿಡುವುದು, ಅವಳಿಗೆ ಅದೇನೂ ಹೊಸದೇ ಮುಕ್ತಿಪಥವನ್ನು ತೆರೆಯದೇ ಕೈಬಿಡುವುದು ಒಮ್ಮೆ ಎಲ್ಲಿಗಾದರೂ ಓಡಿಹೋಗಬೇಕು ಅಂದುಕೊಳ್ಳುತ್ತ ಅದೇ ಬದುಕನ್ನು ಸೆರೆಯಲ್ಲಿರುವವರಂತೆ ಬದುಕುತ್ತ ಬಂದ ನಮ್ಮೆಲ್ಲರಿಗೂ ಇರುವ ಮಿತಿಯಂತೆ ಕಣ್ಣು ಕುಕ್ಕುತ್ತದೆ.

ಆಧುನಿಕ ಜಗತ್ತಿನ ಥಳಕು ಬಳುಕಿನ ಹೈಟೆಕ್ ಜೀವನದ ಮಗ್ಗುಲನ್ನು ಕಾಣಿಸುವ Saturday Night ಮತ್ತು Wild Things ಮಹತ್ವಾಕಾಂಕ್ಷೆಯ ಅಭಿಲಾಶೆಯಿದ್ದೂ ವಸ್ತುವಿಗೇ ಜೋತುಬಿದ್ದ ಮಿತಿಯನ್ನು ಮೀರಲು ಸಾಧ್ಯವಾಗಿಲ್ಲ. ಹಾಗೆಯೇ Revolutions ಮತ್ತು The Big Picture ಓದುಗರಿಗೇ ಬಿಟ್ಟುಬಿಡುವ ಹೊಳಹುಗಳು ವಿಶೇಷವಾದ ಗುರುತ್ವವನ್ನಾಗಲೀ ದರ್ಶನವಾಗುವ ಕಸುವನ್ನಾಗಲೀ ಪಡೆದಿಲ್ಲ. ಆ ಬಗೆಯಲ್ಲಿ ವಸ್ತುವಿನ ಮಿತಿಯನ್ನು ತಂತ್ರದಿಂದಲೇ ಮೀರುವ ತುಡಿತ ಈ ಕತೆಗಳಲ್ಲಿದ್ದರೂ ಅವು ತಮ್ಮ ಒಡಲಲ್ಲಿ ಅಂಥ ಧಾರಣಾಶಕ್ತಿಯನ್ನು ಹೊಂದಿಲ್ಲ. The Big Picture ಕತೆ ಮಿಸೆಸ್ ಅಲಿ ಎಂಬ ವಿಧವೆ ಚಿತ್ರಕಲಾವಿದೆಯನ್ನು ಕುರಿತಿದ್ದು. ಈಕೆ ಹೆಸರು ಗಳಿಸುವ, ಹಣ ಗಳಿಸುವ ಅಥವಾ ಹೊರ ಜಗತ್ತಿನಿಂದ ಏನನ್ನಾದರೂ ನಿರೀಕ್ಷಿಸಿ ಚಿತ್ರ ರಚಿಸಿದಾಕೆಯಲ್ಲ. ಪತಿಯ ಸಾವಿನ ನಂತರ ಹುಟ್ಟಿಕೊಂಡಿರಬಹುದಾದ ಒಂದು ಶೂನ್ಯವನ್ನು ಹೀಗೆ ತುಂಬಿಕೊಳ್ಳುವ ಪ್ರಯತ್ನವೋ ಎಂಬಂತೆ ತನಗಾಗಿ ತನ್ನಷ್ಟಕ್ಕೆ ಚಿತ್ರ ರಚಿಸಿರಬಹುದು ಹೆಚ್ಚೆಂದರೆ. ಆಕಸ್ಮಿಕವಾಗಿ ಫ್ರಿಡಾ ಎಂಬಾಕೆಯ ಕಣ್ಣಿಗೆ ಈಕೆಯ ರಚನೆಗಳು ಬಿದ್ದು ವಿದೇಶದಲ್ಲಿ ಆಯೋಜಿಸಲ್ಪಟ್ಟ ಒಂದು ಚಿತ್ರಕಲಾ ಪ್ರದರ್ಶನಕ್ಕೆ ತನ್ನ ಚಿತ್ರಗಳನ್ನು ಕಳುಹಿಸಲು-ತಾನೂ ಭಾಗವಹಿಸಲು ಮುಜುಗರದಲ್ಲೇ ಒಪ್ಪಿಕೊಂಡಾಕೆ. ಈ ಒಪ್ಪಿಗೆ, ಭಾಗವಹಿಸುವಿಕೆ, ಮೊದಲ ವಿಮಾನಪ್ರಯಾಣ ಯಾವುದೂ ಈಕೆಯ ಸರಳ ವ್ಯಕ್ತಿತ್ವಕ್ಕೆ, ಜೀವಕ್ಕೆ ಸುಲಭವಾಗಿ ಒಗ್ಗುತ್ತಿಲ್ಲ. ಈ ಒಗ್ಗಿಕೊಳ್ಳದ, ಒಗ್ಗಿಸಿಕೊಳ್ಳುವ ಹಂತದ ಚಿತ್ರಣವಿದೆ ಈ ಕತೆಯಲ್ಲಿ. ಅದನ್ನು ಅಂಜುಂ ಹಸನ್ ಸಾಧಿಸುವ ರೀತಿ ಅಧ್ಯಯನ ಯೋಗ್ಯವಾಗಿದೆ. ಕಥಾಜಗತ್ತಿನ ವಿಸ್ತರಣೆಯ ಪ್ರಕ್ರಿಯೆ ಕೂಡಾ ಗಮನಸೆಳೆಯುತ್ತದೆ. Fairytale on 12th Main ಒಂದು ಅಸಂಗತ ಜಗತ್ತನ್ನು ಕನಸು ವಾಸ್ತವ ಭ್ರಮೆಗಳ ನೆಲೆಯಲ್ಲಿ ಚಿತ್ರಿಸುತ್ತ ತೆರೆದಿಡಲು ಬಯಸುವ ಜಗತ್ತಿನಲ್ಲೂ ಇದೇ ಸಂಕಲನದ Saturday Night ಕತೆ ಹೇಳದೇ ಬಿಟ್ಟ ಹೊಸತೇ ಎನಿಸುವ ಏನೂ ಕಾಣಿಸುವುದಿಲ್ಲ.

ಬರವಣಿಗೆ, ಪ್ರಕಟನೆ ಎಲ್ಲವೂ ಸುಲಭ ಮತ್ತು ತತ್‌ಕ್ಷಣ ಸಾಧ್ಯವೆನಿಸುವಂಥ ವಿಭ್ರಮಿತ ಸ್ಥಿತಿಯಲ್ಲಿ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಿ ಬರೆಯುವ ಒಬ್ಬೊಬ್ಬ ಬರಹಗಾರನ ಕೃತಿಯನ್ನೂ ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಪರಿಸ್ಥಿತಿಯಿದೆ. ಒಳ್ಳೆಯ ಓದನ್ನು ದಯಪಾಲಿಸಬಲ್ಲ ಒಂದೊಂದು ಕೃತಿಯೂ ಅಭಿರುಚಿಯುಳ್ಳ ಓದುಗರ ಸಂಭ್ರಮಕ್ಕೆ ಕಾರಣವಾಗುತ್ತದೆ. Difficult Pleasures ಅಂಥ ಒಂದು ಪುಸ್ತಕ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ