Wednesday, July 11, 2012

ಅನುಪಮಾ ಪ್ರಸಾದ್ ಅವರ ‘ಕರವೀರದ ಗಿಡ’

ಅನುಪಮಾ ಪ್ರಸಾದ್ ಅವರ ಎರಡನೆಯ ಕಥಾಸಂಕಲನ ‘ಕರವೀರದ ಗಿಡ’ ಈ ಬಾರಿಯ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿಗೆ ಪಾತ್ರವಾಗಿದೆ. ಮೂಲತಃ ಉತ್ತರಕನ್ನಡದ ಸಿರ್ಸಿಯವರಾದ ಅನುಪಮಾ ಬೆಳೆದಿದ್ದು ಉಜಿರೆಯಲ್ಲಿ. ಸದ್ಯ ಕಾಸರಗೋಡು ಜಿಲ್ಲೆಯ ಪೆರ್ಣೆಯಲ್ಲಿ ವಾಸಿಸುತ್ತಿದ್ದಾರೆ. ಮೊದಲ ಕಥಾಸಂಕಲನ ಚೇತನಾಕ್ಕೆ ಕೊಡಗಿನ ಗೌರಮ್ಮ ದತ್ತಿನಿಧಿ ಪ್ರಶಸ್ತಿಯನ್ನು ಪಡೆದಿದ್ದ ಇವರ ಪ್ರಸ್ತುತ ‘ಕರವೀರದ ಗಿಡ’ ಕಥಾಸಂಕಲನಕ್ಕೂ ಮುಂಬೆಳಕು ಸಾಹಿತ್ಯ ಪ್ರಶಸ್ತಿ ದಕ್ಕಿತ್ತು. ಈ ಸಂಕಲನ ಎಂ.ವ್ಯಾಸ ದಂಪತಿಗೆ ಅರ್ಪಿತವಾಗಿದ್ದು ಜಿ.ಪಿ.ಬಸವರಾಜು ಅವರ ಪರಿಚಯಾತ್ಮಕ ಮುನ್ನುಡಿಯಿದೆ.

ಈ ಕತೆಗಳನ್ನು ಓದಿದಾಗ ಮೊತ್ತಮೊದಲಿಗೆ ಇವರು ಭಾಷೆಯನ್ನು ಉಪಯೋಗಿಸುವ ರೀತಿ, ಕತೆಯ ಹಿಂದಿನ ಉದ್ದೇಶ ಮತ್ತು ಕಥನಕಲೆಯ ಮೂಲ ಗುಣಗಳನ್ನು ಇವರು ದುಡಿಸಿಕೊಳ್ಳುವ ರೀತಿ ಗಮನಸೆಳೆಯುತ್ತದೆ. ಇಲ್ಲಿರುವ ಒಟ್ಟು ಹತ್ತು ಕತೆಗಳಲ್ಲಿ ವಸ್ತು-ಶೈಲಿ ಮತ್ತು ಜೀವನ ದೃಷ್ಟಿಯ ಅಭಿವ್ಯಕ್ತಿ ಕ್ರಮದಲ್ಲಿ ಸಾಕಷ್ಟು ವೈವಿಧ್ಯತೆಯಿದ್ದು ಈ ಕತೆಗಾರ್ತಿಯ ಕತೆಗಳ ಬಗ್ಗೆ ಭರವಸೆಯೊಂದು ಮೂಡುತ್ತದೆ.

ಸಂಕಲನದ ಮೊದಲ ಕತೆ ಕರವೀರದ ಗಿಡ ತುಂಬ ಸೂಕ್ಷ್ಮ ಸಂವೇದನೆಗಳಿಂದ ಕೂಡಿದ್ದು ಈ ಕತೆಯ ಕೆಲವೊಂದು ಆಯಾಮಗಳನ್ನು ಬೇರೆಯಾಗಿಯೇ ಗಮನಿಸಿದರೆ ತುಂಬ ಮನಃಕಲಕುವಂತಿದೆ. ಈ ಕತೆ ತಿಂಗಳು ಮಾಸಪತ್ರಿಕೆಯ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿದೆ ಎನ್ನುವುದರಲ್ಲೇ ಈ ಕತೆಯಲ್ಲಿ ಸಾಕಷ್ಟು ಉತ್ತಮ ಅಂಶಗಳಿರುವುದರ ಬಗ್ಗೆ ಅನುಮಾನವಿಲ್ಲ. ಆದರೆ ತಾಂತ್ರಿಕವಾಗಿ ಈ ಕತೆಯ ತಂತ್ರ, ಒಂದು ಬಗೆಯ ಪ್ರಶ್ನೆ-ಉತ್ತರಗಳ ಮೂಲಕ ಗತವನ್ನು ನಿರೂಪಣೆಗೆ ಒಗ್ಗಿಸಿದ ರೀತಿಯಿದೆಯಲ್ಲ, ಅದು ಅಷ್ಟೊಂದು ಹಿತಾನುಭವ ನೀಡುವುದಿಲ್ಲ. ಈ ಬಗ್ಗೆ ಮುಂದೆ ಸ್ವಲ್ಪ ವಿವರವಾಗಿ ಗಮನಿಸಬಹುದು ಅನಿಸುತ್ತದೆ.

ಎರಡನೆಯ ಕತೆ ಸೆಲೆ ಸಣ್ಣ ಕತೆಯ ವ್ಯಾಪ್ತಿಗೆ ಮೀರಿದ ಸಂಕೀರ್ಣತೆಯನ್ನು ಹೊಂದಿದೆ. ಗಪ್ಪತಿ ಹೆಗಡೆ-ರಾಮುಕಾಕ ಮತ್ತು ಫರ್ನಾಂಡಿಸ್ ಮೂವರು ಪ್ರತಿನಿಧಿಸುವ ಮೌಲ್ಯ ಮತ್ತು ಜೀವನದೃಷ್ಟಿ ಒಂದು ಆಯಾಮದಲ್ಲಿ ಮುಖ್ಯವಾದರೆ, ವೃದ್ಧಾಪ್ಯ, ವಯೋಮಾನಕ್ಕೆ ಸಹಜವಾದ ಮಗ ಮತ್ತು ಸೊಸೆಯ ಭಿನ್ನ ನೆಲೆಗಳು, ಬದುಕಿನ ಮುಸ್ಸಂಜೆಯಲ್ಲಿರುವವರ ಹಳ್ಳಿಯ ವ್ಯಾಮೋಹ- ಇವು ಇನ್ನೊಂದು ಆಯಾಮದಲ್ಲಿ ಮಹತ್ವ ಪಡೆದಿವೆ. ಇದನ್ನು ಮೀರಿ ವಿಧವೆಗೆ ಹುಟ್ಟಿದವನು ಎಂಬ ಆರೋಪ-ಅವಮಾನ ಒಂದು ಜೀವವನ್ನು ಅದರ ಬದುಕನ್ನು ಆವರಿಸುವ ಬಗೆ, ದಾಯಾದಿತನದ ಆಸ್ತಿ ಜಗಳ ಮತ್ತು ಪ್ರತಿಷ್ಠೆಯ ಜಿದ್ದು ಈ ಕತೆಯ ಚೌಕಟ್ಟಿನಲ್ಲಿ ಕೇಂದ್ರವಾಗಲು ಹಾತೊರೆದಿವೆ. ಬಹುಷಃ ಒಂದು ನೀಳ್ಗತೆಯಾಗಿಯೋ ಕಿರುಕಾದಂಬರಿಯಾಗಿಯೋ ಚಾಚಿಕೊಂಡಿದ್ದರೆ ಹೆಚ್ಚು ನಿಧಾನವಾಗಿ ಮತ್ತು ಸತ್ವಯುತವಾಗಿ ಕಥಾನಕ ಬಿಚ್ಚಿಕೊಳ್ಳಲು ಸಾಧ್ಯವಾಗುತ್ತಿತ್ತು ಅನಿಸುತ್ತದೆ. ಈಗ ಹಾಗಾಗಿಲ್ಲ ಎಂದೇನೂ ಅಲ್ಲ. ಆದರೆ, ಸಣ್ಣಕತೆಯ ಪರಿಣಾಮಕಾರತ್ವಕ್ಕೆ ಕಥಾವಸ್ತು ಕಥಾನಕ ಮುಂದುವರಿದಂತೆಲ್ಲ ಮೊನಚಾಗಿ ಏಕಮುಖ ಪಡೆಯುವುದು ಕ್ರಮ. ಅದರ ಹರಹು ವಿಶಾಲಗತಿಯನ್ನು ಪಡೆಯುತ್ತ ಹೋದರೆ ಒಟ್ಟು ಚೌಕಟ್ಟೇನಿದೆ ಅದರ ಮೊನಚು ಕಡಿಮೆಯಾಗಿ ವಸ್ತು ಅಸ್ಪಷ್ಟವಾಗುತ್ತದೆ. ಅಂಥ ನಡೆಯಿರುವ ಕಥಾನಕಕ್ಕೆ ನೀಳ್ಗತೆ ಅಥವಾ ಕಿರುಕಾದಂಬರಿಯ ಗಾತ್ರ ಸೂಕ್ತ ಯಾಕೆಂದರೆ ಅಲ್ಲಿ ಹೆಚ್ಚು ವಿವರಗಳನ್ನು ತರಲು ಕತೆಗಾರನಿಗೆ ಅವಕಾಶ ಸಿಗುವುದರಿಂದ ಒಟ್ಟಾರೆ ಪಾತ್ರನಿರ್ಮಿತಿ ಮತ್ತು ಕಥಾಜಗತ್ತಿನ ಶಿಲ್ಪಕ್ಕೆ ಹೆಚ್ಚು ಪುಷ್ಟಿ ಸಿಗುತ್ತದೆ ಮತ್ತು ಒಂದು ಸಣ್ಣಕತೆಗಿಂತ ಹೆಚ್ಚಿನ ಆಯಾಮಗಳನ್ನು, ಪದರಗಳನ್ನು ಒಂದು ಕಾದಂಬರಿ ತನ್ನ ಗರ್ಭದಲ್ಲಿ ಧರಿಸುವುದು ಒಪ್ಪಿತವೂ ಆಗಿದೆ. ಆದರೆ ಸಣ್ಣಕತೆ ಕೇಂದ್ರಕ್ಕೆ ಹೆಚ್ಚು ಅಂಟಿಕೊಳ್ಳುವುದು ಅದರ ಗಾತ್ರ ಮತ್ತು ಉದ್ದೇಶಿತ ಪರಿಣಾಮದ ದೃಷ್ಟಿಯಿಂದ ಅಗತ್ಯವಾಗುತ್ತದೆ.
ಮೂರನೆಯ ಕತೆ ಅನಾವರಣ ಕತೆಯ ಚಂದಕ್ಕೆ, ಅದರ ಆಶಯಕ್ಕೆ ಮತ್ತು ಕಥಾನಕ ಚಿತ್ರಿಸಲ್ಪಟ್ಟ ವಿವರಗಳಿಗೆ ಮತ್ತು ಕಥಾನಕದ ವೇಗವೇನಿದೆ ಅದಕ್ಕೆ ಮೆಚ್ಚುಗೆಯಾಗುವ ಕತೆ. ಆದರೆ ಇಲ್ಲಿ ಆತ್ಮಹತ್ಯೆಯ ವೈಭವೀಕರಣವಾದಂತಿಲ್ಲವೆ ಎನ್ನುವ ಪ್ರಶ್ನೆಯನ್ನು ಇದು ಓದುಗನಲ್ಲಿ ಉಳಿಸಿದರೆ ಆಶ್ಚರ್ಯವಿಲ್ಲ.ನಾಲ್ಕನೆಯ ಕತೆ ಪರ್ವ ಸುಂದರ ಕತೆ. ಈ ಕತೆಯ ಆಳ ಮತ್ತು ವಿವರಗಳಲ್ಲಿ ಕತೆಗಾರ್ತಿ ಈ ಕತೆಯ ಕಥಾಜಗತ್ತನ್ನು ನಿಜವಾಗಿಸಿದ ರೀತಿ ಮನಸ್ಸನ್ನು ಸೆಳೆಯುವಂತಿದೆ. ಆದರೆ ಈ ಸಂಕೀರ್ಣ ವಸ್ತುವಿನ ಸಂಕೀರ್ಣ ಆಯಾಮಗಳನ್ನು ಪರಿಪೂರ್ಣವಾಗಿ ಕತೆ ಗ್ರಹಿಸುತ್ತಿಲ್ಲ ಅನಿಸುತ್ತದೆ. ಪೌರೋಹಿತ್ಯ ಅಥವಾ ಉನ್ನತ ಶಿಕ್ಷಣ ಮತ್ತು ಅದರೊತ್ತಿಗೇ ಇರುವಂತೆ ಅನಿಸುವ ಆಧುನಿಕ ಜೀವನ ಶೈಲಿಯ ಸೆಳೆತ- ಸಾಮಾಜಿಕ ಸಮಸ್ಯೆಯಾಗಿ ಇದು ಹೇಗೆ ಮುಖ್ಯವಾಗುತ್ತದೆ ಎನ್ನುವುದನ್ನು ಕತೆ ಅಷ್ಟಾಗಿ ಪರಿಗಣಿಸುತ್ತಿಲ್ಲ. ನಂಬಿಕಸ್ತ ಆಳುತನದ ಪರ್ವ ಕೂಡಾ ‘ಹೌದು ಹೌದು’ ಅನಿಸುವಷ್ಟು ಗಟ್ಟಿತನವನ್ನು ಹೊಂದಿಲ್ಲ ಅನಿಸುವಾಗಲೂ ಇದೊಂದು ಉತ್ತಮ ಕತೆಯೆನ್ನುವುದರಲ್ಲಿ ಎರಡು ಮಾತಿಲ್ಲ.

ಐದನೆಯ ಕತೆ ಹೋಳಿ ನೇರವಾಗಿ ಸ್ತ್ರೀಮತವನ್ನು ಕುರಿತಾಗಿಯೇ ಇದೆ. ಆದರೆ ಬಹುಷಃ ಇದುವರೆಗೆ ಯಾರೂ ಈ ಮಹಿಳಾ ಸ್ವಾತಂತ್ರ್ಯ ಅಥವಾ ಹಕ್ಕನ್ನು ಕುರಿತು ವ್ಯಕ್ತಪಡಿಸದೇ ಇರುವ ಒಂದು ಆಯಾಮವನ್ನಿಟ್ಟುಕೊಂಡು ಅನುಪಮಾ ಈ ವಸ್ತುವನ್ನು ಬಳಸಿಕೊಂಡಿರುವುದು ಇದರ ಹೆಚ್ಚುಗಾರಿಕೆ. ಹೆಣ್ಣು ಅನುಭವಿಸಿಕೊಂಡು ಬಂದಿರುವ ಮತ್ತು ಎದುರಿಸುತ್ತಲೇ ಇರುವ ಪ್ರತ್ಯಕ್ಷ ಮತ್ತು ಪರೋಕ್ಷ ದಬ್ಬಾಳಿಕೆಯನ್ನು ಪ್ರತಿರೋಧಿಸುವ ನೆಲೆಗಳು ಯಾವ ರೀತಿಯಲ್ಲೂ ಮಗಳಿಗಾದ ಅನ್ಯಾಯಕ್ಕೆ ಸಂಬಂಧಿಸಿರದೇ ಇರುವುದು ಸ್ವಲ್ಪಮಟ್ಟಿಗೆ ಕತೆಯ ಮೊನಚು ಕಡಿಮೆ ಮಾಡಿದೆ. ಅಕಸ್ಮಾತ್ ಇದು (ಮಗಳಿಗಾದ ಆಘಾತ) ಮೈಥಿಲಿಯ ಹೋರಾಟಕ್ಕೆ ಒಂದು ಗುಂಪು ತೋರಿಸಿದ ಪ್ರತಿಕ್ರಿಯೆ ಆಗಿದ್ದರೆ ಆಗ ಅದು ಬೇರೆಯೇ ವಸ್ತುವಾಗುತ್ತಿತ್ತು, ಆದರೆ ಇಲ್ಲಿ ಮಗಳಿಗಾದ ಆಘಾತಕ್ಕೆ ನೇರವಾಗಿ ಮೈಥಿಲಿಯ ಜೀವನದೃಷ್ಟಿಯೇ ಕಾರಣ ಎಂದಾಗಲೀ, ಅವಳ ಸ್ತ್ರೀಪರ ನಿಲುವು-ಹೋರಾಟಗಳ ಅಥವಾ ಅವಳ ಒಟ್ಟಾರೆ ಚಟುವಟಿಕೆಗಳ ನೇರ ಫಲಶ್ರುತಿ ಎಂದಾಗಲೀ ಅನಿಸದೇ ಹೋಗುವುದರಿಂದ ಮೈಥಿಲಿಯ ಮಾನಸಿಕ ಸಂಘರ್ಷಕ್ಕೆ ಹೆಚ್ಚು ಗಟ್ಟಿಯಾದ ವೇದಿಕೆ ರೂಪುಗೊಂಡಿಲ್ಲ ಅನಿಸುತ್ತದೆ. ಹೀಗಾಗಿ ಇಲ್ಲಿ ಸಮಾಜಮುಖಿಯಾಗಿ ಸ್ತ್ರೀ ವಿಮೋಚನೆಯ ಪ್ರಯತ್ನವನ್ನು ಮುಂದುವರಿಸುವುದು ಅಥವಾ ಮಗಳಿಗಾದ ಅನ್ಯಾಯವೇ ಹೆತ್ತ ತಾಯಿಗೆ ಮುಖ್ಯವೆನಿಸಿದ ನೆಲೆಯಿಂದ ಗ್ರಹಿಣಿಯಷ್ಟೇ ಆಗಿ ಉಳಿದು ತೆಪ್ಪಗಿದ್ದು ಬಿಡುವುದು ಎರಡರ ಮಧ್ಯೆ ಇದೆ ಎಂದು ಬಿಂಬಿಸಲಾಗಿರುವ ತಾಕಲಾಟಕ್ಕೆ ಸಾಧ್ಯವಿದ್ದ ಒಂದು ಘನತೆಯಾಗಲಿ ಗುರುತ್ವವಾಗಲಿ ದಕ್ಕಿಲ್ಲ ಅನಿಸುತ್ತದೆ. ಆದಾಗ್ಯೂ ಕತೆ ಸಹಜವಾಗಿಯೇ ಮುಖ್ಯವಾಗುತ್ತದೆ. ಸ್ತ್ರೀವಿಮೋಚನೆಯ ಪ್ರಯತ್ನಗಳನ್ನು ಮತ್ತು ಹೆಣ್ಣುಮಕ್ಕಳ ಸ್ವಚ್ಛಂದವಾದ ಸಹಜ ನಡವಳಿಕೆಯನ್ನು ನಾವು ನೋಡುವ ದೃಷ್ಟಿಕೋನದ ಬಗ್ಗೆ ಕತೆ ಹೆಚ್ಚು ತೀಕ್ಷ್ಣವಾದ ಒಂದು ಬೆಳಕನ್ನು ಚೆಲ್ಲಿರುವುದಂತೂ ನಿಜ.

ಆರನೆಯ ಕತೆ ಆತ್ಮಸಂಗಾತ ಕೂಡ ಚೆನ್ನಾಗಿದೆ, ಈಚೆಗೆ ಉದಯವಾಣಿ ದಿನಪತ್ರಿಕೆಯ ಒಂದು ಅಂಕಣದಲ್ಲಿ ಎಳೆಯ ಹುಡುಗಿಯೊಬ್ಬಳು ವಿವಾಹ ಬಾಹಿರ/ವಿವಾಹೇತರ ಸಂಬಂಧಗಳ ಬಗ್ಗೆ ಬರೆಯುತ್ತ, ಇವತ್ತು ಅನೇಕ ವೈವಾಹಿಕ ಸಂಬಂಧಗಳು ಟೊಳ್ಳು ಆಚರಣೆಯಷ್ಟೇ ಆಗಿ ಉಳಿದಿರುವುದನ್ನೂ, ಸಾಕಷ್ಟು ಮಂದಿ ಕಣ್ಣಾಮುಚ್ಚಾಲೆಯಲ್ಲಿ ತೊಡಗಿದ್ದರೂ ಪ್ರಾಮಾಣಿಕವಾದ ಕೆಲವೇ ಸಂಬಂಧಗಳೂ ಅಲ್ಲಿ ಇಲ್ಲಿ ಇರುವುದಾಗಿಯೂ ಬರೆದಿದ್ದಳು. ಇಡೀ ಬರಹದಲ್ಲಿ ನನಗೆ ಎದ್ದು ಕಂಡ ಗೊಡ್ಡುತನವೆಂದರೆ ಪರಂಪರಾನುಗತವಾಗಿ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿರುವ ಒಂದು ಸನಾತನಿ ಭಾವನೆಯನ್ನೇ ಈ ಹುಡುಗಿ ವೈಭವೀಕರಿಸುವ ರೀತಿ, ಮನಸ್ಸು ಪವಿತ್ರ ಆದರೆ ದೇಹ ಕೊಳಕು. ಮಾನಸಿಕ ಪ್ರೀತಿ ಅದು ವಿವಾಹದ ಚೌಕಟ್ಟಿನ ಒಳಗಿದ್ದರೂ, ಒಂದು ವೇಳೆ ಅದರ ಹೊರಗೇ ಇದ್ದರೂ ಅದು ಪವಿತ್ರ; ಆದರೆ ಅದು ದೈಹಿಕ ಸಂಬಂಧವಾಗುವ ನೆಲೆಯನ್ನು ತಲುಪಿದರೆ ಆಗ ಅದು ಅಪವಿತ್ರ ಎನ್ನುವ ಅರ್ಥವಿಲ್ಲದ ಆದರೆ ಮೇಲ್ನೋಟಕ್ಕೆ ಸರಿ ಎನ್ನಿಸಿ ಬಿಡುವ ಒಂದು ನಿಲುವು. ಸಮಾಜದ ಸ್ವಾಸ್ಥ್ಯಕ್ಕಾಗಿ ಅದನ್ನು ಪ್ರತಿಪಾದಿಸುವುದಿದ್ದರೆ ಅದನ್ನು ಹಾಗೆ ಹೇಳಿಯೇ ಪ್ರತಿಪಾದಿಸುವುದು ಹೆಚ್ಚು ಸಮರ್ಥನೀಯವಾದದ್ದು, ಸೂಕ್ತವಾದದ್ದು. ಅದನ್ನು ಬಿಟ್ಟು ಈ ಮನಸ್ಸು ಪವಿತ್ರ ದೇಹ ಅಪವಿತ್ರ ಎನ್ನುವುದು ಎರಡನ್ನೂ ಅವಿನಾಭಾವದಿಂದ ಪಡೆದುಕೊಂಡಿರುವ ಮನುಷ್ಯನ ಮನೋಸ್ವಾಸ್ಥ್ಯ ಮತ್ತು ದೇಹ-ಮನಸ್ಸು ಎರಡನ್ನೂ ಸೃಷ್ಟಿಸಿ ಮನುಷ್ಯನಿಗಿತ್ತಿರುವ ದೈವ (ಅಂಥದ್ದೇನಾದರೂ ಇದೆ ಎಂದು ನಂಬುವುದಾದರೆ) ದ ಮೇಲೆ ಅದೇ ಮನುಷ್ಯನಿಗಿರುವ ಶೃದ್ಧೆ ಎರಡನ್ನೂ ಅನುಮಾನಿಸಬೇಕಾಗುತ್ತದೆ. ಈ ಕತೆಯ ಸಂದರ್ಭದಲ್ಲಿ ಈ ವಿಚಾರ ನೆನಪಾಗಲು ಕಾರಣವೇನೆಂದರೆ, ಈ ಆತ್ಮಸಂಗಾತ, ಮನೋಸಂಗಾತಗಳು ಪವಿತ್ರ ಎನ್ನುವಲ್ಲಿಯೇ ಅದು ದೈಹಿಕವಲ್ಲದ್ದರಿಂದ ಎನ್ನುವ ಷರಾ ಒಂದು ಇರುವಂತಿದೆ ಅನಿಸಿದ್ದರಿಂದ. ಹೆಚ್ಚು ಸ್ಪಷ್ಟವಾಗಿ ಹೇಳುವುದಾದರೆ, ಇಲ್ಲಿ ಸರೋಜಮ್ಮನ ಗಂಡ ಮತ್ತು ಚಿದಾನಂದ ರಾಯರ ಪತ್ನಿ ಇಬ್ಬರೂ ಅಥವಾ ಇಬ್ಬರಲ್ಲಿ ಒಬ್ಬರು ಸಾಯದೇ ಉಳಿದಿದ್ದರೂ ಕತೆಯ ಚೌಕಟ್ಟಿನಲ್ಲಿ ರೂಪುಗೊಳ್ಳುವ ಸಂಬಂಧ ಅನೈತಿಕವಾಗಿಬಿಡುತ್ತಿತ್ತು ಅಲ್ಲವೆ? ಅಥವಾ, ಇವರಿಬ್ಬರಿಗೂ ವಯಸ್ಸಾಗಿರದೇ ತೀರ ಎಳೆಯ ಪ್ರಾಯವಾಗಿದ್ದರೂ ವಸ್ತು ಬೇರೆ ದಿಕ್ಕಿಗೆ ಹೊರಳುವುದು ಅನಿವಾರ್ಯವಾಗುತ್ತಿತ್ತು ಅಲ್ಲವೆ? ಶುದ್ಧಕ್ಕಾಗಿಯೇ ಇಲ್ಲಿ ಆತ್ಮವನ್ನು ಮತ್ತು ಈ ವಿಧುರ-ವಿಧವೆ ದಂಪತಿಗಳ ಒಂಟಿತನವನ್ನೂ ಆರೋಪಿಸಿದಂತೆ ಇದೆ ಅಲ್ಲವೆ? ಇದು ಕತೆಯನ್ನು ಅದು ಹೇಗಿದೆಯೋ ಹಾಗೆಯೇ ನೋಡುವ ಶಿಸ್ತನ್ನು ಬಿಟ್ಟು ನಡೆಸಿದ ಜಿಜ್ಞಾಸೆ, ಕತೆಗೆ ನೇರವಾಗಿ ಸಂಬಂಧಿಸಿಲ್ಲ. ಆದರೂ ಇಂಥ ಜಿಜ್ಞಾಸೆಗಳನ್ನು ಇಂಥ ಅಂಕಣ, ಕತೆಗಳು ಎತ್ತುತ್ತವೆ, ಕತೆಗಾರ ಇಂಥವುಗಳಿಗೆ ಮುಖಾಮುಖಿಯಾಗಬೇಕಾಗುತ್ತದೆ, ಹಾಗೆ ಮುಖಾಮುಖಿಯಾಗಿಯೇ ವಾಸ್ತವವನ್ನು ಕತೆಗಾರ ನಿಕಷಃಕ್ಕೊಡ್ಡಿ ಹೊಸ ದರ್ಶನವನ್ನು ಸತ್ಯವನ್ನು ಕಂಡುಕೊಳ್ಳಬೇಕಾಗುತ್ತದೆ, ಕಾಣಿಸಬೇಕಾಗುತ್ತದೆ. 


ಒಂದು ಉದಾಹರಣೆಯಾಗಿ ಇಲ್ಲಿ ಸೋಮನಾಥ ಸೇನ್‌ರ ಚೊಚ್ಚಲ ಲೀಲಾ ಸಿನಿಮಾವನ್ನು ಗಮನಿಸಬಹುದು. ಇಲ್ಲಿ ಪತಿ-ಪತ್ನಿಯರಾದ ಜೈ ಮತ್ತು ಚೈತಾಲಿ ಇಬ್ಬರೂ ಬೇರೆಯಾಗಿಯೂ ಸ್ನೇಹಿತರಂತಿದ್ದಾರೆ ಮತ್ತು ಅವರವರು ಬೇರೆ ಸಂಗಾತಿಗಳನ್ನೂ ಕಂಡುಕೊಂಡಿದ್ದಾರೆ. ಅವರ ಮಗ ಕ್ರಿಸ್ ಎಂದು ಕರೆಯಿಸಿಕೊಳ್ಳಲು ಇಷ್ಟಪಡುವ ಕೃಷ್ಣ ತನ್ನ ತಾಯಿಯ ವಯಸ್ಸಿನ, ತಾಯಿಯದೇ ಸ್ನೇಹಿತೆಯಂತಿರುವ ಲೀಲಾಳ ಮೋಹಪಾಶಕ್ಕೆ ಬಿದ್ದಿದ್ದಾನೆ. ಚೈತಾಲಿಯ ವಿವಾಹೇತರ ಸಂಬಂಧವನ್ನು ವಿರೋಧಿಸಿ ಬೇರೆ ನಿಲ್ಲುವ ಮಗನಿಗಾಗಿಯೇ ಚೈತಾಲಿ ತನ್ನ ಸಂಬಂಧವನ್ನು ಬಿಟ್ಟುಕೊಡಬಲ್ಲಳು. ತನ್ನ ಆತ್ಮಸಂಗಾತಿಯಂತಿರುವ ಕವಿ, ಚಿಂತಕ ನಷಾದ್‌ಗಾಗಿ ಲೀಲಾ ಕೃಷ್ಣನನ್ನು ತೊರೆಯಬಲ್ಲಳು. ಆದರೆ ಅವರು ಈ ಮಿಲನ ಮತ್ತು ವಿದಾಯಗಳ ನಡುವೆ ಮುಖಾಮುಖಿಯಾಗುವ ಸಂಘರ್ಷ ಇಲ್ಲಿ ಮುಖ್ಯವಾಗುತ್ತದೆ, ಹೊಸ ಹೊಳಹುಗಳನ್ನು ತೆರೆದಿಡುತ್ತದೆ. ಹೇಳಬೇಕಾದ ಮುಖ್ಯವಾದ ಮಾತೆಂದರೆ ಸೇನ್ ಈ ಸಿನಿಮಾವನ್ನು ಭಾರತೀಯ ವ್ಯಕ್ತಿಗಳನ್ನು ಕೇಂದ್ರೀಕರಿಸಿಯೂ ಚಿತ್ರೀಕರಿಸುವುದು ಅಮೆರಿಕಾದ ವಾತಾವರಣದಲ್ಲಿ ಎಂಬುದು. ಇಲ್ಲಿನ ಎಲ್ಲವೂ, ಹೆಸರುಗಳು, ದೇಶ,ವಸ್ತು ಮತ್ತು ಸಂಬಂಧದ ತ್ರಿಕೋನಗಳು ಪ್ರಯೋಗಾತ್ಮಕವಾಗಿರುವುದನ್ನು ಗಮನಿಸಿ.

ಏಳನೆಯ ಕತೆ ಹೋಳಿಗೆ ಒಂದು ಪುಟ್ಟ ಮಗುವಿನ ಮುಗ್ಧ ಮಾತೇ ಮೂಲವಾಗಿ ಹುಟ್ಟಿರಬಹುದಾದ ಕತೆ. ಸಣ್ಣಕತೆ ಪಂಚ್‌ಲೈನಿಗೇ ಸೀಮಿತವಾಗಿ ಬಿಟ್ಟರೆ ಕಷ್ಟ. ಈ ಕತೆಗೆ ಒಳ್ಳೆಯ ಶಿಲ್ಪವಿದೆ, ಕಟ್ಟಡ ಆಕರ್ಷಕವಾಗಿದೆ. ಆದರೆ ಕತೆ ಸಿದ್ಧ ಮಾದರಿಯನ್ನು ಮೀರಿ ಬೆಳೆಯಲು, ಹೆಚ್ಚಿನ ಒಂದು ಗಮ್ಯವನ್ನು ಕಲ್ಪಿಸಿಕೊಂಡು ತನ್ನ ಶಿಲ್ಪ ಮತ್ತು ಆಕೃತಿಯನ್ನು ದುಡಿಸಿಕೊಳ್ಳಲು ಮನಸ್ಸು ಮಾಡಿಲ್ಲ.


ಎಂಟನೆಯ ಕತೆ ಮಚ್ಚೆ ಕೆಲವೊಂದು ಕಾರಣಗಳಿಗಾಗಿ ಮೊದಲ ಕತೆ ಕರವೀರದ ಗಿಡ ಕತೆಯನ್ನೇ ಹೋಲುವಂತಿದೆ. ಅಲ್ಲಿ ಹೆಣ್ಣು ಜೀವವೊಂದು ತನ್ನ ನೋವನ್ನು ತೋಡಿಕೊಳ್ಳುತ್ತಿದ್ದರೆ ಇಲ್ಲಿ ಒಂದು ಗಂಡು ಜೀವ ಸರಿಸುಮಾರು ಅದೇ ಕೆಲಸವನ್ನು ಮಾಡುತ್ತಿದೆ. ಎರಡೂ ಕಡೆ ಬಳಕೆಯಾಗಿರುವ ತಂತ್ರ ಕೂಡಾ ಸರಿಸುಮಾರು ಒಂದೇ. ಈ ಬಗ್ಗೆಯೇ ಸ್ವಲ್ಪ ಹೇಳಬೇಕೆನಿಸಿರುವುದರಿಂದ ಕೊನೆಯಲ್ಲಿ ಆ ಬಗ್ಗೆ ಬರೆಯುತ್ತೇನೆ. ಒಂಭತ್ತನೆಯ ಇರುಳ ಹಾದಿಯಲ್ಲಿ ಕತೆಯ ತಂತ್ರ ಮಾತ್ರ ಬೇರೆಯಾಗಿದೆ. ಇಲ್ಲಿ ಅದು ಸ್ವಗತದಲ್ಲಿ ನಿವೇದಿಸಿಕೊಳ್ಳುತ್ತಿದೆ. ಹತ್ತನೆಯ ಕತೆಯಲ್ಲಿ ದ್ರೌಪದಿಯನ್ನು ಮುಸ್ಸಂಜೆ ಮಾತನಾಡಿಸುತ್ತಿದೆ ಎನ್ನುವ ನಿರೂಪಣೆಯ ತಾಂತ್ರಿಕ ವೈವಿಧ್ಯವನ್ನು ಹೊರತು ಪಡಿಸಿದರೆ ಮತ್ತೆ ಈ ‘ಹೇಳಿಕೊಳ್ಳುವ’ ತಂತ್ರದ ಪುನರಾವೃತ್ತಿಯೇ ಕಾಣಿಸುತ್ತದೆ. ಆದರೆ ಉಳಿದಿಬ್ಬರ ಅಳಲನ್ನು ಗಮನಿಸಿದರೆ ದ್ರೌಪದಿಯ ನಿವೇದನೆ ಅಥವಾ ಆತ್ಮಾನುಸಂಧಾನ ಹೆಚ್ಚು ವಾಸ್ತವವಾದಿ ನೆಲೆಯಲ್ಲಿದ್ದು ಭಾವುಕವಾದ ಆತ್ಮಸಲ್ಲಾಪದ ಅಪಾಯದಿಂದ ಪಾರಾಗಿದೆ.

ಒಟ್ಟಾರೆಯಾಗಿ ಅನುಪಮಾ ಪ್ರಸಾದ್ ಅವರ ಕರವೀರದ ಗಿಡ ಕಥಾಸಂಕಲನವನ್ನು ಗಮನಿಸಿ ಹೇಳಬೇಕಾದ ಎರಡು ಮಾತುಗಳಿವೆ.

ಮೊದಲನೆಯದಾಗಿ, ಒಂದು ಜೀವದ ನೋವು, ಅಳಲು, ಮನಸ್ಸಿನ ತೊಳಲಾಟ ಮಾತುಗಳಾಗಿ ಅಂದರೆ ಇನ್ನೊಂದು ಜೀವದೊಂದಿಗಿನ ಮಾತುಗಳಾಗಿ ಅಥವಾ ಕೆಲವೊಮ್ಮೆ ತನ್ನೊಂದಿಗೇ ತಾನು ಆಡಿಕೊಂಡಂಥ ಸ್ವಗತದ ರೂಪದಲ್ಲಿ ಬರುವಾಗ- ಬರುವ ಕಲ್ಪನೆಯನ್ನು ಒಬ್ಬ ಬರಹಗಾರ ಅಕ್ಷರ ಮಾಧ್ಯಮದಲ್ಲಿ ಅಭಿವ್ಯಕ್ತಿಸುವ ಪ್ರಕ್ರಿಯೆ ಏನಿದೆ ಅಲ್ಲಿಯೇ ಅವನ ಅಗ್ನಿಪರೀಕ್ಷೆಯೂ ನಡೆಯುವುದು ಖಂಡಿತ. ಇದು ಸರಳವಾದ ಸಂಗತಿಯಲ್ಲ. ನಮ್ಮ ಮಹತ್ವದ ಲೇಖಕರನ್ನು ತೆಗೆದುಕೊಂಡರೆ ಅವರು ಈ ಆತ್ಮರತಿಯನ್ನು, ತನ್ನ ಬಗ್ಗೆ ತಾನು ಹೇಳಿಕೊಳ್ಳುವ, ಬೇರೆಯವರಿಗೆ ತನ್ನನ್ನು ಸ್ಪಷ್ಟಪಡಿಸುವ, ತನ್ನನ್ನೇ ವಿವರಿಸುವ, ತನ್ನ ಗತವನ್ನು ಇನ್ನೊಬ್ಬರೆದುರು ಸಮರ್ಥಿಸುವ ಸಂದರ್ಭವನ್ನೇ ಬಿಟ್ಟುಕೊಟ್ಟು ಬರೆದಿರುವುದನ್ನು ಕಾಣುತ್ತೇವೆ. ಬಹುಷಃ ಹೀಗೆ ಹೇಳುವಾಗ ನಿಮಗೆ ನೆನಪಾಗಬಹುದಾದ ಸಾಹಿತಿಯೆಂದರೆ ಚಿತ್ತಾಲ. ಶಿಕಾರಿಯಾದಿಯಾಗಿ ಮನುಷ್ಯನ ಆಂತರಿಕ ತೊಳಲಾಟವನ್ನೇ ಕುರಿತು ಇವರು ಬರೆದಿಲ್ಲವೆ ಅನಿಸಬಹುದು. ಚಿತ್ತಾಲರ ನಾಯಕರೂ ಕೂಡಾ ಆತ್ಮರತಿಯ ಆರೋಪವನ್ನು ಹೊತ್ತವರೇ. ನಾಗಪ್ಪನಾಗಲಿ, ಪುರುಷೋತ್ತಮನಾಗಲಿ ಇದರಿಂದ ಪೂರ್ತಿಯಾಗಿ ಮುಕ್ತರಲ್ಲ. ಆದರೆ ಚಿತ್ತಾಲರ ಕೃತಿಗಳು ತನ್ನ ಬಗ್ಗೆ ತಾನೇ ಹೇಳಿಕೊಳ್ಳುವುದಕ್ಕೇ ಮೀಸಲಾದ ನಾಯಕರನ್ನು ಮೀರಿ ಬೆಳೆಯುವ ಕಸು ಮತ್ತು ಹರಹು ಹೊಂದಿವೆ ಎನ್ನುವುದನ್ನು ಮರೆಯಲಾಗದು. ಉಳಿದಂತೆ ನವ್ಯರ ಕಾಲದ ತೇಜಸ್ವಿ, ಲಂಕೇಶ, ಅನಂತಮೂರ್ತಿಯವರಾಗಲಿ, ಆನಂತರದ ತಲೆಮಾರಿನ ಮಹತ್ವದ ಕತೆಗಾರರಾದ ಖಾಸನೀಸ, ರಾಘವೇಂದ್ರ ಪಾಟೀಲ, ಆಲನಹಳ್ಳಿ ಮುಂತಾದವರಾಗಲಿ, ಇವರ ನಂತರದ ವಿವೇಕ ಶಾನಭಾಗ, ಜಯಂತ ಕಾಯ್ಕಿಣಿ, ಅಮರೇಶ ನುಗಡೋಣಿ ಮುಂತಾದವರಾಗಲಿ ಎಲ್ಲಿಯೂ ಈ ಅಲವತ್ತುಕೊಳ್ಳುವ ಮಾದರಿಯ ಪಾತ್ರಗಳನ್ನು ಸೃಷ್ಟಿಸಿಲ್ಲ ಎನ್ನುವುದನ್ನು ಗಮನಿಸಿದರೆ ಸಣ್ಣಕತೆಯನ್ನು ನನ್ನಂಥ ಅನೇಕ ಕತೆಗಾರರು ಬಳಸಿಕೊಳ್ಳುತ್ತಿರುವ ವ್ಯಾಪ್ತಿಯೇ ತುಂಬ ಸೀಮಿತವಾಗಿರುವಂತೆ ಕಾಣಿಸುತ್ತದೆ. ಇದು ವಸ್ತು ಮತ್ತು ವಿವರಗಳ ಆಯ್ಕೆಯಲ್ಲಿ ಗಮನಿಸಬೇಕಾದ ಮಹತ್ವದ ಸಂಗತಿ ಎಂದು ನಾನು ಅಂದುಕೊಂಡಿದ್ದೇನೆ.

ಎರಡನೆಯದಾಗಿ, ಯಾವುದೇ ಕಲೆಯ ಅಭಿವ್ಯಕ್ತಿ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ನಡೆಯುವ ಸಂಯೋಗ, ತೀರ ಆಳವಾದ ಮತ್ತು ಸೂಕ್ಷ್ಮವಾದ ಸಂವೇದನೆಗೆ ಒಂದು ವಿಶಿಷ್ಟವೂ ಪರೋಕ್ಷವೂ ಆದ ಅಭಿವ್ಯಕ್ತಿಯನ್ನು ಕಲ್ಪಿಸುವುದು. ಈ ಅಭಿವ್ಯಕ್ತಿ ನೇರ, ಸ್ಪಷ್ಟ, ಗಟ್ಟಿ ಇತ್ಯಾದಿಯೆಲ್ಲ ಆಗಬಾರದು. ಅದು ಸೂಚ್ಯ, ಮಂದ್ರ, ಪರೋಕ್ಷ ಮತ್ತು ಹೇಳಿಯೂ ಹೇಳದ ಹಾಗಿರಬೇಕು. ಆಗ ಅದು ಕಲಾತ್ಮಕವಾದ ಸ್ತರವನ್ನು ತಲುಪುತ್ತದೆ. ಇಲ್ಲವಾದರೆ ಅದು ಒರಟಾದ ಮತ್ತು ಕ್ಲೀಷೆಯ ಸ್ತರದಲ್ಲಿ ಅಭಿವ್ಯಕ್ತಿ ಪಡೆದು ಒಟ್ಟಾರೆ ಕೃತಕವಾಗಿ ಅಸಹ್ಯ ಹುಟ್ಟಿಸುತ್ತದೆ. ಅಭಿವ್ಯಕ್ತಿಯಂತೂ ಇಲ್ಲಿ ಸಿಗುತ್ತದೆ. ಆದರೆ ಅದು ಸಿಗುತ್ತದೆ ಎನ್ನುವಷ್ಟು ಸ್ಥಿರವಾಗಿ ಘಟಿಸಬಾರದು. ಅಂದರೆ, ಅದನ್ನು ಕಲ್ಪಿಸುವುದಷ್ಟೇ ಕಲೆಯ ಕೆಲಸವಾಗಬೇಕು. ಕೊನೆಗೂ ಇಲ್ಲಿ ದಕ್ಕುವುದು ಕಲ್ಪನೆಯ ಸ್ತರ. ಹಾಗಾಗಿ ಅದು ಇನ್ನಷ್ಟು ಸೂಕ್ಷ್ಮವಾಗಿಯೇ ಸಂವೇದನೆಗಳನ್ನು ಮರುಸೃಷ್ಟಿಗೊಳಿಸುವ ನವಿರಾದ ಕಸುಬುಗಾರಿಕೆಯಾಗಬೇಕೇ ಹೊರತು ಆ ಸಂವೇದನೆಗಳನ್ನು ಭಾಷೆಯಲ್ಲಿ ಹಿಡಿದು ಇನ್ನಷ್ಟು ಸ್ಪಷ್ಟಗೊಳಿಸುವ, ನಿಖರಗೊಳಿಸುವ, ಇದೇ ಅದು ಎಂದು ಸಾಕ್ಷಿ ಸಮೇತ ಸಾಬೀತು ಮಾಡುವ ಧಾರ್ಷ್ಟ್ಯವಾಗಬಾರದು. ಹಾಗೆ ಅಭಿವ್ಯಕ್ತಿಯನ್ನು ಕಲ್ಪಿಸುವುದು ಕಲೆ. ಬರೇ ಅಭಿವ್ಯಕ್ತಿ ಕಲೆಯಲ್ಲ, ವರ್ತಮಾನ ಪತ್ರಿಕೆಯ ವರದಿಯಾಗುತ್ತದೆ. ಕಥಾನಕದ ಒಂದು ಚೌಕಟ್ಟು ಈ ವ್ಯತ್ಯಾಸವನ್ನು ಮೀರಲು ಸಹಾಯ ಮಾಡಬಹುದು ಆದರೆ ಕತೆಯನ್ನು ಶ್ರೇಷ್ಠ ಕಲೆಗಾರಿಕೆಯ ಸ್ತರಕ್ಕೆ ಏರಿಸುವಷ್ಟು ಶಕ್ತಿಯಿಲ್ಲ ಅದಕ್ಕೆ. ಕಥಾನಕದ ಮಿತಿಯದು. ನಾನು ಮೇಲೆ ಹೇಳಿದ ಕತೆಗಾರರನ್ನೇ ಗಮನಿಸಿದರೂ ಅವರ ಸಣ್ಣಕತೆಗಳು ಒಂದು ಪೂರ್ಣಪ್ರಮಾಣದ ಕತೆಯನ್ನು ಬಿಟ್ಟುಕೊಟ್ಟು ಬಹಳ ಕಾಲವಾಗಿರುವುದನ್ನು ಗಮನಿಸಬಹುದು.


ನಾನು ಕತೆಗಳನ್ನು ಬರೆದ ಕ್ರಮವೇ ತಪ್ಪಾಗಿತ್ತು. ನನ್ನ ಜೀವನದ ಅನುಭವಗಳು ಸೂಚ್ಯವಾಗಿ ನನಗೆ ಕಲಿಸಬಯಸಿದ ಪಾಠಗಳೇನಿರಬಹುದು, ಈ ವಿದ್ಯಮಾನದ-ಘಟನೆಯ ಅರ್ಥ ವಿಶಾಲವ್ಯಾಪ್ತಿಯಲ್ಲಿ ಏನಿರಬಹುದು ಎಂದು ನನ್ನ ದಿನಚರಿಯಲ್ಲಿ ನಾನು ನಡೆಸುತ್ತ ಬಂದ ಹುಡುಕಾಟವನ್ನೇ ಮುಂದೆಂದೋ ಓದಿದಾಗ ನನಗೇ ಆಕರ್ಷಕವೆನ್ನಿಸಿ ನಾನು ಅದನ್ನೆಲ್ಲ ನನ್ನ ಕತೆಗಳಲ್ಲಿ ತಂದೆ. ಅಕ್ಷರ ಮೋಹ ತೊಡಿಸುವ ಭ್ರಮೆಯ ಮಾಯಾಜಾಲವಿದು. ನಮ್ಮ ಅನೇಕ ಕತೆಗಾರರು ನನ್ನಂತೆಯೇ ಇದರಲ್ಲೇ ಕಳೆದು ಹೋದ ಉದಾಹರಣೆಗಳು ನಮ್ಮೆದುರಿಗಿವೆ. ಸೂಕ್ಷ್ಮವಾದ ಅನುಭವವನ್ನು ಅಕ್ಷರದಲ್ಲಿ ಸ್ಪಷ್ಟಗೊಳಿಸುವುದು ಕತೆಗಾರನ ಕೆಲಸವಾಗಬಾರದು, ಆ ಸೂಕ್ಷ್ಮವನ್ನು ಅಷ್ಟೇ ನವಿರಾಗಿ ಓದುಗನಿಗೆ ದಾಟಿಸುವುದಷ್ಟೇ ಅವನ ಕಲೆಯಾಗಬೇಕು. ನಾನು ಮಾಡಿದ ಅದೇ ತಪ್ಪನ್ನು ಬೇರೆ ಕತೆಗಾರರು ಮಾಡಬಾರದೆಂಬುದಷ್ಟೇ ಇದನ್ನು ಇಲ್ಲಿ ಹೇಳಿರುವುದರ ಉದ್ದೇಶ. ನನ್ನ ಕಥಾಸಂಕಲನ, ಕನಸುಗಳೇ ಮರಳಿಬನ್ನಿ ಕುರಿತು ಬರೆಯುತ್ತ ಶಕುಂತಲಾ ಕಿಣಿಯವರು ಈ ಬಗ್ಗೆ ಬರೆಯುತ್ತಾರೆಂಬುದು ನನ್ನ ನಿರೀಕ್ಷೆಯಾಗಿತ್ತು. ಕತೆಗಾರ ಎಲ್ಲಿ ಕಾಲು ಜಾರುತ್ತಿದ್ದಾನೆಂಬುದನ್ನು ಸ್ಪಷ್ಟವಾಗಿ ಕಾಣಬಲ್ಲವರು ಓದುಗರೇ. ಅದನ್ನು ಓದುಗರು ಬಾಯ್ಬಿಟ್ಟು ಹೇಳುವುದು ಕತೆಗಾರನಿಗೆ ಮಾಡುವ ನಿಜವಾದ ಸಹಾಯ. ಪ್ರಶಂಸೆ, ಪ್ರಶಸ್ತಿಗಳಲ್ಲಿ ನಾವು ಕಳೆದು ಹೋಗದಂತೆ ಅದು ನಮ್ಮನ್ನು ಕಾಪಾಡುವುದು.

ಅನುಪಮಾ ಪ್ರಸಾದ್‌ರಂಥ ಕತೆಗಾರರು ಇನ್ನಷ್ಟು ಅತ್ಯುತ್ತಮವಾದ ಕತೆಗಳನ್ನು ಬರೆಯಬಲ್ಲವರು. ಅವರಲ್ಲಿ ಅದಕ್ಕೆ ಬೇಕಾದ ಸಾವಧಾನ, ಸೂಕ್ಷ್ಮವಾಗಿ ಗಮನಿಸುವ ತಾಳ್ಮೆ ಮತ್ತು ಸಮಯವಿದೆ. ಅವರಿಂದ ಹಲವಾರು ಕತೆಗಳು ಬರಲಿ, ಅವು ಕನ್ನಡ ಕಥಾಜಗತ್ತನ್ನು ಶ್ರೀಮಂತಗೊಳಿಸಲಿ ಎಂದು ಹಾರೈಸುತ್ತ ಅವರನ್ನು ಅಭಿನಂದಿಸುತ್ತೇನೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ