Thursday, October 11, 2012

ನಗು ಮತ್ತು ಮರೆಯುವುದರ ಕುರಿತು

ಗಂಡು ಹೆಣ್ಣು ಸಂಬಂಧದ ಬಿಗಿ ಸಡಿಲ ತಂತುಗಳ, ಸಂಕಟ ಉನ್ಮಾದಗಳ ವಿದ್ಯಮಾನಕ್ಕಿಂತ ಕಳೆದು ಹೋದ ಎಳೆಗಳ ಕುರಿತ ವಿಶ್ಲೇಷಣೆಯೇ ಇಲ್ಲಿ ಪ್ರಾಧಾನ್ಯ ಪಡೆದಿದೆ. ತಾನು ದೈಹಿಕ-ಮಾನಸಿಕ ಪ್ರೇಮಕ್ಕೆ ಅವಲಂಬಿತನಾಗಿದ್ದ ದಿನಗಳಲ್ಲಿ ಬರೆದಿದ್ದ ಪ್ರೇಮಪತ್ರಗಳನ್ನು ಮರಳಿ ಪಡೆಯಲು ಬಯಸುವ ಪ್ರಸ್ತುತ ತೀಕ್ಷ್ಣವಾದ ಪೋಲೀಸ್ ಕಣ್ಗಾವಲಿನಲ್ಲಿರುವ ಬರಹಗಾರ.


ಪೆರುಗ್ವೆಯಿಂದ ಕಣ್ತಪ್ಪಿಸಿಕೊಂಡು ಬಂದ ವಿದೇಶಿ ನಿರಾಶ್ರಿತೆ ತಮೀನಾ ಅಕಾಲದಲ್ಲಿ ವಿದೇಶಿ ನೆಲದಲ್ಲಿ ಗಂಡನನ್ನು ಕಳೆದುಕೊಂಡು ತಬ್ಬಲಿಯಾದಾಕೆ ಮಾತ್ರವಲ್ಲ ವರ್ತಮಾನದಲ್ಲಿಯೂ ಭೂತಕಾಲಕ್ಕೆ ಸಂದು ಹೋದ ಗಂಡನನ್ನೇ ಬದುಕುತ್ತ ಬಂದವಳು. ಈಗ ಇವಳು ಇದ್ದಕ್ಕಿದ್ದಂತೆ ತನ್ನ ದಾಂಪತ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡಬಲ್ಲ, ತಾನು ಬಹು ಹಿಂದೆ ಬರೆದಿಟ್ಟ ನೋಟ್ ಬುಕ್ಕುಗಳಿಗಾಗಿ ತಹತಹಿಸುತ್ತಿದ್ದಾಳೆ. ಇವರು ಓಡಿ ಬರುವಾಗ ಅವುಗಳನ್ನೆಲ್ಲ ಪೆರುಗ್ವೆಯಲ್ಲೆ ಬಿಟ್ಟು ಬಂದಿದ್ದಾರೆ. ಈಗಲೂ ಟಪ್ಪಾಲಿನಲ್ಲಿ ಅವನ್ನೆಲ್ಲ ತರಿಸಿಕೊಳ್ಳುವುದು ಅಪಾಯಕರ. ಹೋಗಿ ತರುವವರಿಲ್ಲ, ಅಲ್ಲಿಂದ ಬರುವವರಿಲ್ಲ. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಅಲ್ಲಿ ಪೆರುಗ್ವೆಯಲ್ಲಿ ಇವಳ ಅತ್ತೆ ಅವುಗಳನ್ನೆಲ್ಲ ತೆರೆದು ನೋಡಿರಬಹುದೆಂಬ ಸಕಾರಣವಾದ ಸಂಶಯ ಇವಳನ್ನು ಕುಂಡೆ ಸುಟ್ಟ ಬೆಕ್ಕಿನಂತೆ ಮಾಡಿಬಿಟ್ಟಿದೆ. ಅತ್ತೆಯ ಊರಲ್ಲೇ ಇರುವ ಇವಳ ಅಪ್ಪ ಮನಸ್ಸು ಮಾಡಿದರೆ ಅವುಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಬಲ್ಲ, ಬಟ್ ಮನಸ್ಸು ಮಾಡುತ್ತಿಲ್ಲ. ಇಲ್ಲೊಬ್ಬ ತಾನು ಹೋಗಿ ತರಲೆ ಎನ್ನುವವನ ನಿಜವಾದ ಆಸಕ್ತಿ ತಮೀನಾಳ ದೇಹ ಮಾತ್ರ.

ಇನ್ನೊಬ್ಬ ಗುರುತು ಪರಿಚಯವಿಲ್ಲದಾತ ಎಕಾಎಕಿ ಇವಳನ್ನು ಭಾರವಿಲ್ಲದ ಹೊರೆಯಿಲ್ಲದ ಜಗತ್ತಿಗೆ ಕರೆದೊಯ್ಯುವುದಾಗಿ ಹೇಳಿ ಅಸಂಗತ ಜಗತ್ತೊಂದಕ್ಕೆ ತಲುಪಿಸಿ ಬಿಡುತ್ತಾನೆ. ಆ ದ್ವೀಪದಲ್ಲಿ ಬರೇ ಮಕ್ಕಳಷ್ಟೇ ಇದ್ದಾರೆ. ಅಲ್ಲಿಂದ ಹೊರಗೆ ಹೋಗುವ ಮಾರ್ಗವೇ ಇಲ್ಲ. ತಪ್ಪಿಸಿಕೊಂಡು ಹೋಗುವ ಒಂದು ಅವಕಾಶ ಸಿಕ್ಕಿದ್ದೇ ನೀರಿಗೆ ಹಾರಿದ ಇವಳು ಒಂದಿಡೀ ಇರುಳು ಅರ್ಧ ಹಗಲು ಹೊಳೆಯಲ್ಲಿ ಈಜುತ್ತಲೇ ಕಳೆಯುತ್ತಾಳೆ. ಆದರೆ ಆ ನಂತರ ತಿರುಗಿ ನೋಡಿದರೆ ತಮೀನಾ ತಾನಿನ್ನೂ ಬಿಟ್ಟು ಬಂದ ದಡದಿಂದ ಕೆಲವೇ ಮೀಟರ್ ದೂರದಲ್ಲಿ ಈಜುತ್ತಿರುವುದನ್ನು ಕಂಡುಕೊಂಡು ಸ್ತಂಭಿತಳಾಗುತ್ತಾಳೆ! ಹಾಗೆ ಮುಕ್ತಿಯಿಲ್ಲದಂತೆ ಸಿಕ್ಕಿಕೊಂಡ ದ್ವೀಪದಲ್ಲಿ ತಮೀನಾ ಒಬ್ಬಳೇ ಪ್ರೌಢ ದೇಹ ಇರುವಾಕೆ. ಅವರೊಂದಿಗೆ ಆಡುವ, ಅವರಂತೆ ಬದುಕುವ ಅನಿವಾರ್ಯಕ್ಕೆ ಸಿಲುಕುವ ತಮೀನಾ ಗತಕಾಲದ ನೆನಪುಗಳೊಂದಿಗೆ ಬದುಕುವ ತನ್ನ ದಿನಚರಿಯಿಂದ ಮುಕ್ತಿ ಪಡೆಯುವಾಗಲೇ ಬಾಲ್ಯದ ನೆನಪುಗಳಿಗೆ ಅನಿವಾರ್ಯವಾಗಿ ಸಿಲುಕಿದಂತಿದೆ.

ನೆನಪುಗಳು ಯಾಕೆ ಕಾಡುತ್ತವೆ? ಅದಕ್ಕೆ ಅಮರ ಮಧುರ ಪ್ರೇಮ ಎನ್ನುತ್ತೇವಲ್ಲ, ಅದು ಕಾರಣವೆ? ಹಾಗಿದ್ದರೆ ದ್ವೀಪದಲ್ಲಿ ಸಿಕ್ಕಿಕೊಂಡ ತಮೀನಾಗೆ ಯಾಕೆ ತಪ್ಪಿಯೂ ತನ್ನ ಗಂಡ, ಪ್ರೇಮಪತ್ರಗಳು, ನೋಟ್‌ಬುಕ್ಕುಗಳು ನೆನಪಾಗುವುದೇ ಇಲ್ಲ! ಹಾಗಿದ್ದರೆ ವರ್ತಮಾನದಿಂದ ತಪ್ಪಿಸಿಕೊಳ್ಳುವುದಕ್ಕೇ ಮನುಷ್ಯ ಭೂತಕಾಲವನ್ನು ಮತ್ತೆ ತನ್ನ ಮನಸ್ಸಿನಲ್ಲೇ ಬದುಕುವುದಕ್ಕೆ ಪ್ರಯತ್ನಿಸುತ್ತಾನೆಯೆ? ತಮೀನಾ ಸಿಕ್ಕಿಬಿದ್ದಲ್ಲಿ ವರ್ತಮಾನವೇ ಭೂತಕಾಲವಾಗಿಬಿಟ್ಟಿತ್ತಲ್ಲ! ಬಾಲ್ಯದ ಭೂತಕಾಲ ಮತ್ತು ಯೌವನದ ಭೂತಕಾಲ ಮುಂತಾಗಿ ಹಲವು ಭೂತಕಾಲಗಳಿದ್ದು ಅವುಗಳಲ್ಲಿ ಆಯ್ಕೆ ಸಾಧ್ಯವೆಂದಾದರೆ ತನಗೆ ಬೇಕಿಲ್ಲದ ಯಾವುದನ್ನೋ ಮರೆಯುವುದಕ್ಕೆ ಕೂಡಾ ಮನುಷ್ಯ ಪ್ರಯತ್ನಿಸುತ್ತಾನಲ್ಲವೆ? ಹಾಗಿದ್ದರೆ ಅನಪೇಕ್ಷಿತವಾದ ಭೂತಕಾಲವನ್ನು ಮರೆಯುವುದಕ್ಕೆ ಇನ್ನೊಂದು ಅಪೇಕ್ಷಿತವೆನಿಸುವ ಅಥವಾ ಕಂಪೇರೇಟಿವ್ಲಿ ಸಹ್ಯವಾದ ಭೂತಕಾಲವನ್ನು ಅವನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿದ್ದಾನೆನ್ನುವುದಾದರೆ ಇಲ್ಲಿ ಮುಖ್ಯವಾದದ್ದು ವರ್ತಮಾನವೆ ಭೂತಕಾಲವೆ ಎನ್ನುವ ಹೊಸ ಪ್ರಶ್ನೆಯೇ ಏಳುವುದಲ್ಲವೆ? ವರ್ತಮಾನದಿಂದ ಮನುಷ್ಯ ಮುಕ್ತಿ ಬಯಸುವುದಕ್ಕೂ ನಮ್ಮ ಆಧುನಿಕಯುಗದ ಮನಶ್ಶಾಸ್ತ್ರದ ಗುರುಗಳು ವರ್ತಮಾನದಲ್ಲಿರಿ, ಇಲ್ಲಿ ಮತ್ತು ಈಗ ನಿಮಗೆ ಮುಕ್ತಿ ಎನ್ನುವುದಕ್ಕೂ ಸಂಬಂಧವಿರಲೇ ಬೇಕಲ್ಲವೆ?

ನಡುವೆ ಸಂಬಂಧವಿಲ್ಲದ್ದು ಎಂಬಂತೆ ಕಾಣುವ ಆದರೆ ಒಂದಿಲ್ಲೊಂದು ಬಗೆಯಲ್ಲಿ ತಮೀನಾ ಕತೆಗೇ ಸಂಬಂಧಿಸಿದ್ದು ಎಂದು ನಿರೂಪಕ ವಿವರಿಸುವ ಇನ್ನೂ ಹಲವರಿದ್ದಾರೆ. ಇವರೆಲ್ಲರಲ್ಲೂ ಸಮಾನವಾದದ್ದು ಏನು ಎಂದರೆ ಗಂಡು-ಹೆಣ್ಣು ಸಂಬಂಧ, ಸೆಕ್ಸ್, ಸೆಕ್ಸ್ ಲೆಸ್ ಲವ್, ಲವ್ ಲೆಸ್ ಸೆಕ್ಸ್ ಮತ್ತು ಲವ್. ಕಾದಂಬರಿ ತನ್ನ ತೆಕ್ಕೆಯೊಳಗೆ ತೆಗೆದುಕೊಳ್ಳುವ ಇನ್ನೆರಡು ಮಹತ್ವದ ಅಂಶಗಳು ನೆನಪು ಮತ್ತು ಮರೆವು. ಅಥವಾ ನಾನು ಹೇಳುತ್ತಿರುವುದು ಉಲ್ಟಾ ಕೂಡ ನಿಜವಿದ್ದೀತು, ಅಂದರೆ, ಸತ್ತ ನೆನಪುಗಳನ್ನು ಹದ್ದಿನಂದದಿ ತಂದು ಎನ್ನ ಮನದಂಗಳಕೆ ಹಾಕದಿರು ಎಂದು ಕವಿ ಮೊರೆಯಿಟ್ಟ ಹಾಗೆಯೇ ಕಾಡುವ ನೆನಪುಗಳು ಮತ್ತು ಮನುಷ್ಯನ ವಿಚಿತ್ರ ಮರೆಗುಳಿತನ ಎರಡನ್ನೂ ಗಂಡು ಹೆಣ್ಣು ಸಂಬಂಧದ ನೆಲೆಯಲ್ಲಿ ಹುಡುಕುವುದೆ ಕಾದಂಬರಿಯ ಮೂಲನೆಲೆಯಿದ್ದೀತು. ಇದ್ದೀತು ಯಾಕೆಂದರೆ ಕಾದಂಬರಿಯನ್ನು ಸಮಗ್ರವಾಗಿ ಏಕಸೂತ್ರದಲ್ಲಿ ಗ್ರಹಿಸುವುದೇ ಸಾಧ್ಯವಿಲ್ಲದಂಥ ಒಂದು ಚದುರಿದ ಚಿತ್ರಗಳ ಚೌಕಟ್ಟು ಇಲ್ಲಿದೆ.

ಕಾದಂಬರಿಗೆ ಕೇಂದ್ರ ಮುಖ್ಯ ಎನ್ನುವ ಪಮುಖ್, ಇವತ್ತಿನ ದಿನ ಕಾದಂಬರಿ, ಕತೆ, ಪ್ರಬಂಧ ಎಂಬೆಲ್ಲ ಫಾರ್‌ಮೇಟ್‌ಗಳೇ ಔಟ್ ಆಫ್ ಡೇಟ್ ಎನ್ನುವ ಆಧುನಿಕ ಸಾಹಿತಿ ಮಿತ್ರರು, ಕಾದಂಬರಿಯೊಂದು ಏನಾದರೂ ಹೇಳಲೇ ಬೇಕೆಂಬ ರೂಲೇ ಇಲ್ಲವೆಂದು ಅತಿರಥ ಮಹಾರಥಿಗಳೇ ಬಹಳ ಹಿಂದೆಯೇ ಬರೆದಿದ್ದಾರೆಂದು ಸಮರ್ಥನೆಗಿಳಿಯುವವರು ಮತ್ತು ಜೀವನಾನುಭವವನ್ನು ತೋಡಿಕೊಳ್ಳುವುದರಾಚೆಗೆ ತಮಗೆ ಯಾವುದೇ ತಂತ್ರ ಅಥವಾ ಫಾರ್ಮ್‌‍ಗಳ ಹಂಗೇ ಇಲ್ಲ ಎಂದು ಕಡ್ಡಿತುಂಡು ಮಾಡಿದವರಂತೆ ಹೇಳಿ ವಿಮರ್ಶಕರ ಕಸರತ್ತುಗಳನ್ನೆಲ್ಲ ಝಾಡಿಸಿದ ಕಾರಂತರು - ಇವರನ್ನೆಲ್ಲ ಸ್ಮೃತಿಯಲ್ಲಿರಿಸಿಕೊಂಡೇ ಮಿಲನ್ ಕುಂದೇರಾನ ಒಮ್ಮೆ ಓದಿದರೆ ಇಷ್ಟೆಂದು ದಕ್ಕಿಬಿಡಲು ಸುಲಭದಲ್ಲಿ ಒಪ್ಪದ ಕಾದಂಬರಿಗಳನ್ನು ಗಮನಿಸುವಾಗ ಇದೆಲ್ಲ ತೀರ ವೈಯಕ್ತಿಕವಾಗಿರಿಸಿಕೊಂಡರೇ ಒಳ್ಳೆಯದೆನ್ನಿಸುತ್ತದೆ. ಓದುವುದು, ಓದಿದ ಖುಶಿಯನ್ನು ಹಂಚಿಕೊಳ್ಳುವುದು, ಓದಿದ್ದು ದಕ್ಕಿತು ಅನಿಸದೇ ಇದ್ದಾಗ ಮತ್ತೆ ಓದುವುದು ಅಥವಾ ಬರೆಯುತ್ತ ಅರ್ಥ ಮಾಡಿಕೊಳ್ಳಲು ಹೆಣಗುವುದು ಮತ್ತು ಹಾಗೆ ಹೆಣಗಿದ್ದನ್ನೆಲ್ಲ ಇಲ್ಲಿ ಬ್ಲಾಗಿನಲ್ಲಿ ಕಾಣಿಸುವುದು ಆಗಾಗ ಕ್ರಾಶ್ ಆಗುವ ಹಾರ್ಡ್ ಡಿಸ್ಕ್‌ನ ದೃಷ್ಟಿಯಿಂದ ಒಳ್ಳೆಯ ಅಭ್ಯಾಸ ಅಷ್ಟೇ!!!

ಈ ಕಾದಂಬರಿಯಲ್ಲಿ ಒಂದು ಕಡೆ ನಿರೂಪಕ ಹೇಳುತ್ತಾನೆ, ಈ ಇಡೀ ಕಾದಂಬರಿ ಬೇರೆ ಬೇರೆ ಪಾತ್ರಗಳ ಕತೆಯನ್ನು ಹೇಳುತ್ತಿದ್ದರೂ ಅವೆಲ್ಲವೂ ಒಂದಿಲ್ಲಾ ಒಂದು ರೀತಿಯಲ್ಲಿ ನನ್ನ ಕಥಾನಾಯಕಿ ತಮೀನಾಳ ಕತೆಯನ್ನೇ ಹೇಳುತ್ತಿವೆ ಮತ್ತು ಅವು ಬೇರೆ ಬೇರೆಯಾಗಿ ಕಂಡರೂ ಅವುಗಳಲ್ಲಿ ಸಮಾನವಾದದ್ದು ಇದೆ ಮತ್ತು ಅದು ತಮೀನಾಳ ಬದುಕಿಗೆ ಸಂಬಂಧಿಸಿದ್ದಾಗಿದೆ ಎಂದು. ಹಾಗಾಗಿ ಇದು ತಮೀನಾ ಕುರಿತ ಕಾದಂಬರಿ ಅಥವಾ ಹಾಗಲ್ಲದ ಎಲ್ಲ ಸಂದರ್ಭಗಳಲ್ಲೂ ತಮೀನಾ ಓದಲೆಂದು ಬರೆದ ಕಾದಂಬರಿ! ಆದರೆ ಈ ಮಾತು ಮಿಲನ್ ಕುಂದೇರಾನ ಕಾದಂಬರಿಯನ್ನು ಕುರಿತಾಗಿಯೇ ಇದೆ ಎಂದು ತಿಳಿಯದ ಹಾಗೆ ನಾಲ್ಕನೆಯ ಅಧ್ಯಾಯದ ಆರಂಭದಲ್ಲಿಯೇ ನಿರೂಪಕ ಹೇಳುತ್ತಾನೆ, ನಾನು ನನ್ನ ಕಾಲ್ಪನಿಕ ಪಾತ್ರವನ್ನು, ಒಬ್ಬ ಅದ್ವಿತೀಯ ನಾಯಕಿಯನ್ನು ಸೃಷ್ಟಿಸುತ್ತಿದ್ದೇನೆ ಎಂದು. ಹೀಗೆ ಕಾದಂಬರಿಯೊಳಗಿನ ಕಾದಂಬರಿಗೂ ಈ ಅಂತರ್ ಸಂಬಂಧವನ್ನು ಸೀಮಿತಗೊಳಿಸಿಕೊಳ್ಳಬಹುದು ಅಥವಾ ಮಿಲನ್ ಕುಂದೇರಾನ ಕಾದಂಬರಿಯೊಳಗಿನ ಬೇರೆ ಬೇರೆ ಕಾದಂಬರಿಗಳಿಗೂ (!) ಈ ಅಂತರ್ ಸಂಬಂಧದ ವ್ಯಾಪ್ತಿಯನ್ನು ಸಕಾರಣ ಪರಿಕಲ್ಪಿಸಬಹುದು. ಅದು ಕುಂದೇರಾ ಟಚ್.

ಎಲ್ಲ ಕುಂದೇರಾ ಕಾದಂಬರಿಗಳಂತೆಯೇ ಕತೆ-ಕಥಾನಕ ಅಮುಖ್ಯವಾಗುವ ನೆಲೆಗಟ್ಟೇ ಈ ಕಾದಂಬರಿಯದೂ ಆಗಿರುವುದರಿಂದ ಕತೆಯನ್ನು ಮೇಲ್ನೋಟದ ಗ್ರಹಿಕೆಗೆ ಒಳಪಡಿಸುತ್ತ ಸಾಗುವುದರಿಂದ ಒಟ್ಟು ಚಿತ್ರವೊಂದು ದಕ್ಕಿದರೆ ಅದರ ಅರ್ಥಪೂರ್ಣತೆಯನ್ನು ಮನಸ್ಸು ಗ್ರಹಿಸುವ ಮತ್ತು ಕಾದಂಬರಿಕಾರನ ನೆಲೆಯಿಂದ ಓದುಗನ ಕುರಿತ ನಿರೀಕ್ಷೆಯ ಬಗ್ಗೆ ನಾವು ಸ್ವಲ್ಪ ಅರಿಯಬಹುದೇನೊ ಅನಿಸುತ್ತದೆ.

ಫೆಬ್ರವರಿ 1948ರಲ್ಲಿ ಕಮ್ಯುನಿಸ್ಟ್ ನಾಯಕ ಕ್ಲೆಮೆಂಟ್ ಬರಾಕ್ ಅರಮನೆಯ ಬಾಲ್ಕನಿಯಿಂದ ತನ್ನ ಬೆಂಬಲಿಗರನ್ನು ಅಭಿನಂದಿಸುವ ಒಂದು ಪುಟ್ಟ ಘಟನೆ ಈ ಕಾದಂಬರಿಯ ಕೆಲವು ಅಧ್ಯಾಯಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಕ್ರಾಂತಿ, ಇಸಂಗಳ ಜಿದ್ದಾ ಜಿದ್ದಿ, ರಷ್ಯಾದ ಅತಿಕ್ರಮಣ, ದಬ್ಬಾಳಿಕೆ ಮತ್ತು ಪೆರುಗ್ವೆ ಸ್ವತಃ ತನ್ನತನವಿಲ್ಲದ, ತನ್ನದೇ ಭಾಷೆ-ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ವಿಸ್ಮೃತಿಯನ್ನು ಹಾಯುತ್ತಿರುವ ಕಾಲಘಟ್ಟದ ಚಿತ್ರವನ್ನು ಕೊಡುವ ಘಟನೆಯಿದೆಂಬಂತೆ ಇಲ್ಲಿ ಚಿತ್ರಿತವಾಗಿದೆ. ಆವತ್ತು ಕ್ಲೆಮೆಂಟ್ ಜೊತೆಗಿದ್ದ, ತನ್ನ ಹ್ಯಾಟನ್ನೇ ಕ್ಲೆಮೆಂಟ್‌ನ ತಲೆಯ ಮೇಲಿರಿಸಿದ ಕ್ಲೆಮೆಂಟಿಸ್‌ನನ್ನು ನಾಲ್ಕೇ ವರ್ಷಗಳಲ್ಲಿ ಗಲ್ಲಿಗೇರಿಸಲಾಗುತ್ತದೆ. ಆನಂತರದ ಕ್ಲೆಮೆಂಟ್‌ನ ಎಲ್ಲ ಭಾವಚಿತ್ರಗಳಿಂದ ಅತ್ಯಂತ ಕೌಶಲಪೂರ್ಣವಾಗಿ ಕ್ಲೆಮೆಂಟಿಸ್ ಚಿತ್ರವನ್ನು ಅಳಿಸಿ ತೆಗೆಯಲಾಗುತ್ತದೆ. ಹೀಗೆ ಚರಿತ್ರೆಯೊಂದು ಸಂಭವಿಸುತ್ತದೆ ಮತ್ತು ಅದನ್ನು ಕಾಲಕ್ಕೆ ತಕ್ಕಂತೆ ಅಳಿಸುವುದು-ಉಳಿಸುವುದು-ಬೆಳೆಸುವುದು ನಡೆಯುತ್ತಿರುತ್ತದೆ. ಇದು ಇಸಂಗಳು ಬದಲಾದಾಗಲೂ, ಆಕ್ರಮಣ ಮಾಡುವ ದೇಶಗಳು ಬದಲಾದಾಗಲೂ ಯಥಾವತ್ ನಡೆಯುವುದು ಮನುಷ್ಯನ ತೆವಲನ್ನಷ್ಟೇ ತೋರಿಸುತ್ತದೆಯೇ ಹೊರತು ಇಸಂಗಳು ಮತ್ತು ದೇಶ-ಪ್ರಭುತ್ವಗಳ ಸ್ವಭಾವವನ್ನಲ್ಲ. ಇಸಂಗಳು, ಧರ್ಮ, ದೇಶ ಎಲ್ಲವೂ ಮನುಷ್ಯ ತೊಟ್ಟುಕೊಳ್ಳಬಹುದಾದ,ಕಳಚಿ ಎಸೆಯಬಹುದಾದ ಮತ್ತು ಬೇರೊಂದನ್ನು ಕೂಡ ತೊಟ್ಟುಕೊಳ್ಳಬಹುದಾದ ಸಂಗತಿಗಳಷ್ಟೇ ಎಂಬುದನ್ನು ಒಪ್ಪಿಕೊಳ್ಳಲು ಕೊಂಚ ಕಷ್ಟವಾದರೂ ನಿಜ ಅದೇ.

ಮೊದಲ ಅಧ್ಯಾಯವನ್ನು ಮೆರ್ರಿಕ್ ಮತ್ತು ಆತನ ಗತಕಾಲದ ಪ್ರೇಯಸಿ ದ್ಸೆನಾ ಆವರಿಸಿದ್ದಾರೆ. ಮೆರ್ರಿಕ್ ತಾನು ನಂಬಿದ ತತ್ವಕ್ಕೆ ಬದ್ಧನಾಗಿ ಉಳಿದಿದ್ದರಿಂದ ಸೇನೆಯ ಕಣ್ಗಾವಲಿನಲ್ಲಿದ್ದಾನೆ ಮತ್ತು ಯಾವ ಕ್ಷಣದಲ್ಲೂ ಸೆರೆಯಾಗಬಹುದಾದ ವ್ಯಕ್ತಿಯಾಗಿ ಒಂದು ವಲಯದ ಹೀರೋ ಕೂಡಾ ಆಗಿದ್ದಾನೆ. ಆದರೆ ಅವನಿಗೆ ಬಹಿರಂಗದ ಬೆಂಬಲಿಗರು ಇರುವ ಸಾಧ್ಯತೆಗಳಿಲ್ಲ. ಈ ಹಂತದಲ್ಲಿ ತನ್ನ ಪ್ರೇಯಸಿಗೆ ತಾನು ಹಿಂದೆ ಬರೆದ ಪ್ರೇಮಪತ್ರಗಳನ್ನೆಲ್ಲ ವಾಪಾಸು ಪಡೆಯುವ ಒಂದು ತುಡಿತ ಅವನಲ್ಲಿ ಸುರುವಾಗಿದೆ. ಮತ್ತು ಅದು ಅಷ್ಟು ಸುಲಭವಾಗಿ ಕೈಗೂಡಬಹುದಾದ ಒಂದು ಆಸೆಯಂತೂ ಅಲ್ಲ. ಇಬ್ಬರ ನಡುವೆ ಈಗ ಪ್ರೀತಿಗಿಂತ ಹೆಚ್ಚು ಜಿದ್ದೇ ಇರುವಂತಿದೆ. ಪತ್ರ ಕೊಡದೇ ಇರುವುದರಿಂದ ಮೆರ್ರಿಕ್ ಮನಸ್ಸಿಗೆ ಹಿಂಸೆಯಾಗುವುದಾದರೆ ದ್ಸೆನಾ ಅವುಗಳೆಲ್ಲ ಯಾವತ್ತೋ ಸುಟ್ಟು ಹೋಗಿವೆ ಎಂಬ (ಸುಳ್ಳು ಕೂಡಾ ಆಗಿರಬಹುದಾದ) ಸತ್ಯವನ್ನು ಹೇಳಬಲ್ಲವಳು. ಎಂದಿಗೂ ಅವುಗಳನ್ನು ನಿನಗೆ ಕೊಡಲಾರೆ ಎಂದು ಸ್ಪಷ್ಟವಾಗಿ ಹೇಳುವ ದ್ಸೆನಾ ಮತ್ತು ಮೆರ್ರಿಕ್ ನಡುವೆ ಇದ್ದ, ನಿಭಾಯಿಸಲ್ಪಟ್ಟ ಪ್ರೇಮದ ನೆಲೆ ಮತ್ತು ನಿಲುವುಗಳಾದರೂ ಎಂಥವು ಎಂಬ ಬಗ್ಗೆ ಕುತೂಹಲಕರ ಮತ್ತು ವಿಲಕ್ಷಣವಾದುದರಿಂದಲೇ ಒಳನೋಟಗಳನ್ನು ನೀಡಬಲ್ಲಂಥ ವಿವರಗಳು ಈ ಅಧ್ಯಾಯದಲ್ಲಿವೆ. ಅವುಗಳನ್ನು ದಯವಿಟ್ಟು ನೀವೇ ಓದಿಕೊಳ್ಳಿ.

ಎರಡನೆಯ ಅಧ್ಯಾಯಕ್ಕೆ ಬಂದರೆ ಅಲ್ಲಿರುವ ಕತೆ ಮೂವರು ಹೆಂಗಸರು ಎಂದು ಹೇಳಬಹುದಾದ ಹೆಣ್ಣುಗಳದ್ದು ಮತ್ತು ಒಬ್ಬ ಗಂಡಸಿನದ್ದು. ಒಬ್ಬಳು ತಾಯಿ, ಒಬ್ಬಳು ಹೆಂಡತಿ ಮತ್ತೊಬ್ಬಳು ಪ್ರೇಯಸಿ. ವಿಚಿತ್ರವೆಂದರೆ ಪ್ರೇಯಸಿ ಮತ್ತು ಹೆಂಡತಿ ಇಬ್ಬರೂ ಪರಸ್ಪರ ಗಳಸ್ಯ ಕಂಠಸ್ಯ ಗೆಳತಿಯರು, ಏಕಕಾಲಕ್ಕೆ ಇಲ್ಲಿನ ಗಂಡನ್ನು ಮೈಮೇಲೆ ಬಿಟ್ಟುಕೊಳ್ಳಬಲ್ಲವರು ಮತ್ತು ಸ್ವತಃ ತಾವೇ ಹಾಸಿಗೆಯಲ್ಲಿ ಸಂಬಂಧ ಬೆಳೆಸುವುದರ ಬಗ್ಗೆ ಇದೀಗ ಯೋಚಿಸಲಾರಂಭಿಸಿದವರು. ಇಲ್ಲೊಂದು ನೆರಳಿನ ಪಾತ್ರವೂ ಇದೆ. ಅದು ನೋರಾ ಎಂಬಾಕೆ. ಇವಳನ್ನು ಈ ಅಧ್ಯಾಯದ ನಾಯಕ ಕರೆಲ್ ಕೇವಲ ನಾಲ್ಕು ವರ್ಷದವನಿರುವಾಗ ನಗ್ನಳಾಗಿ ನೋಡಿದ ನೆನಪನ್ನು ಉಳಿಸಿಕೊಂಡಿದ್ದಾನೆ. ತಾಯಿಯ ಸಮಕಾಲೀನಳಾಗಿದ್ದರೂ ಈರ್ಷ್ಯೆ ಮತ್ತು ಅಸೂಯೆಗಳ ಸಂಬಂಧ ಅವರಿಬ್ಬರನ್ನೂ ಆಗಲೇ ದೂರವಾಗಿಸಿತ್ತು. ಈ ನೋರಾಳ ನೆನಪು ಬರಲು ಕಾರಣ ಮರ್ಕೆತಾಳ ಗೆಳತಿಯೂ ಆಗಿರುವ ಕರೆಲ್‌ನ ಪ್ರೇಯಸಿ ಇವಾ. ಇಬ್ಬರಲ್ಲಿ ಇರುವ ಹೋಲಿಕೆ. ತಾನು ನಾಲ್ಕುವರ್ಷದವನಿರುವಾಗ ನೋಡಿದ ನೋರಾಳ ಆ ದೇಹದ ನೆನಪು ಹತ್ತು ವರ್ಷದ ಮಗನಿರುವ ಕರೆಲ್‌ನಲ್ಲಿ ಲೈಂಗಿಕ ಉದ್ರೇಕವನ್ನು ಉಂಟುಮಾಡಬಹುದಾದಷ್ಟು, ತಾರಕರತಿಯ ಅನುಭವಕ್ಕೊಯ್ಯುವಷ್ಟು ತೀವ್ರವಾಗಿರುವುದು ಇಲ್ಲಿ ಮುಖ್ಯ. ಇಲ್ಲಿ ನೆನಪು ಮುಖ್ಯ ಎಂಬ ಕಾರಣಕ್ಕೆ. ಕಾಲ ಮುಖ್ಯವಾಗುವುದಿಲ್ಲ ಎಂಬ ಕಾರಣಕ್ಕೆ.

ಬಹುತೇಕ ದೂರದೃಷ್ಟಿಯನ್ನು ಕಳೆದುಕೊಂಡಿರಬಹುದಾದ ಮುದುಕಿ ತಾಯಿ ಗಡಿಕಲ್ಲುಗಳನ್ನು ತಪ್ಪಾಗಿ ದೂರದಿಂದ ಕಾಣುತ್ತಿರುವ ಪುಟ್ಟಪುಟ್ಟ ಮನೆಗಳಿರಬಹುದೆಂಬ ಭ್ರಮೆಯಿಂದ ಅದ್ಯಾವ ಹಳ್ಳಿ ಎಂದು ಕೇಳಿದವಳು. ಕಾಲವನ್ನು ಮರೆತು ತಾನು ಕಾಲೇಜಿನಲ್ಲಿ ಹಾಡಿದ್ದನ್ನು ಹೈಸ್ಕೂಲಿನಲ್ಲಿ ಎಂದು ನೆನಪಿಸಿಕೊಂಡವಳು ನಿಜವೇ. ಒಂದು ಕಾಲದ ಅಂತರ ಇನ್ನೊಂದು ದೃಷ್ಟಿಯಿಂದಾಗಿ ಉಂಟಾದ ದೇಶದ ಅಂತರ. ತಾಯಿಗೆ ನೆನಪುಗಳನ್ನು ಸರಿಪಡಿಸಿಕೊಳ್ಳುವುದು, ತನಗೆ ವಯಸ್ಸಾದರೂ ಕಾಲಪ್ರಜ್ಞೆ ಕುಂಠಿತವಾಗಿಲ್ಲ ಎಂಬುದನ್ನು ಸಾಬೀತು ಪಡಿಸುವುದು ಮುಖ್ಯವೆನಿಸುತ್ತದೆ ಎಂಬುದೇ ಒಂದು ವಿಶೇಷ.

ಅದೇ ಕಾಲದ ಅಂತರ ಮತ್ತು ಅದೇ ದೃಷ್ಟಿಯಿಂದುಂಟಾದ ದೇಹದ ಹೋಲಿಕೆ ಹುಟ್ಟಿಸಿದ ಸಂವೇದನೆ ಕರೆಲ್‌ನಲ್ಲಿ ಈಗ ಇವತ್ತು ಉದ್ರೇಕ ಹುಟ್ಟಿಸಬಲ್ಲದು ಮತ್ತು ಆ ಭೂತಕಾಲದ ನೋರಾ ನೆನಪಿನಲ್ಲಿ ಇನ್ಯಾರನ್ನೋ ಭೋಗಿಸುತ್ತ ಅವಳನ್ನೇ ಭೋಗಿಸುತ್ತಿರುವ ಕಲ್ಪನಾತೀತ ಭ್ರಮೆಯಲ್ಲಿ ಅವನು ಸುಖಿಸಬಲ್ಲ! ಕಾಲ, ನೆನಪು ಮತ್ತು ಅವುಗಳಿಗೆ ಸ್ಪಂದಿಸುವ ಮನಸ್ಸು ಯಾವ ತರ್ಕ, ನಿಯಮ, ವಿವರಣೆಗಳಿಗೆ ಸಲ್ಲುತ್ತದೆ ಹೇಳಿ!

ಇಷ್ಟರ ಆಚೆ ಇಲ್ಲಿ ತಾಯಿ ಮಗನ ಮತ್ತು ಅತ್ತೆ ಸೊಸೆಯ ಸಂಬಂಧಗಳು ಕಾಲಾಂತರದಲ್ಲಿ ಮರುವ್ಯಾಖ್ಯಾನಗೊಂಡ ವಿವರಗಳಿವೆ. ಕರೆಲ್‌ನ ಲೈಂಗಿಕ ಸಾಹಸಗಳ ವಿವರಗಳಿವೆ. ಗಂಡ ಕದ್ದು ಮುಚ್ಚಿ ಇನ್ಯಾವಳ ಜೊತೆಗೋ ಡೇಟಿಂಗ್ ಫಿಕ್ಸ್ ಮಾಡುತ್ತಿರುವುದರ ಸೂಚನೆ ಪಡೆದ ಹೆಂಡತಿ ಅನುಭವಿಸುವ ವಿಚಿತ್ರ ತಳಮಳಗಳ ಚರ್ಚೆಯಿದೆ. ಈ ಹಿನ್ನೆಲೆಯಲ್ಲಿಯೇ ಬಿಚ್ಚಿಕೊಳ್ಳುವ ಅವರ ಪ್ರೇಮದ ಕಥಾನಕವಿದೆ. ಎಲ್ಲವನ್ನೂ ಸಂತುಲಿತಗೊಳಿಸುತ್ತಿರುವ ಇವಾಳ ವಿಲಕ್ಷಣ ನೀತಿ ನಿಯಮಗಳ ಲೈಂಗಿಕತೆಯಿದೆ. ಮತ್ತು ಈ ಇವಾಗೂ ಸಂವಾದಿಯಾದ ಇನ್ನೊಂದು ಪಾತ್ರ ಕಾದಂಬರಿಯ ಕೊನೆಯ ಅಧ್ಯಾಯದಲ್ಲಿ ನಮ್ಮನ್ನು ಎದುರಾಗಲಿದೆ.

ಮೂರನೆಯ ಅಧ್ಯಾಯದಲ್ಲಿ ಮಿಲನ್ ಕುಂದೇರಾ ಸ್ವತಃ ಈ ಭಾಗವನ್ನು ವಿವರಿಸುತ್ತಿರುವುದು ನಮಗೆ ತಿಳಿಯುತ್ತದೆ. ಅದಕ್ಕಿಂತ ಮುಖ್ಯವಾಗಿ ಈ ಅಧ್ಯಾಯ ಅದು ಹೇಗೋ ಇಡೀ ಕಾದಂಬರಿಯನ್ನು ಒಂದೇ ತಂತುವಿನಲ್ಲಿ ಬಂಧಿಸುವ ಎಳೆಗಳನ್ನು ತನ್ನೊಡಲಲ್ಲಿ ಇರಿಸಿಕೊಂಡಿರುವುದರ ಅನುಭವ ಈಗ, ಎರಡನೆಯ ಬಾರಿಗೆ ಕಾದಂಬರಿಯನ್ನು ಓದುತ್ತಿರುವಾಗ ಆಗುತ್ತದೆ!

ಬಾಲಮಿತ್ರದಲ್ಲಿ ಬರುತ್ತಿದ್ದ ಯಾವುದೋ ಒಂದು ಧಾರಾವಾಹಿಯೊಂದು ನೆನಪಾಗುತ್ತಿದೆ. ಸರಿಸುಮಾರು ನಮ್ಮ ಬೇತಾಳ ಮತ್ತು ರಾಜಾ ವಿಕ್ರಮಾದಿತ್ಯನ ಕತೆಯಂತೆಯೇ ಈ ಕತೆಯಲ್ಲಿ ಒಬ್ಬ ರಾಜ ಹಲವಾರು ಮಂದಿ ರಾಜಕನ್ಯೆಯರನ್ನು ಒಂದು ಮರದಡಿ ಕೂರಿಸಿಕೊಂಡು ಒಂದೊಂದೇ ಕತೆ ಹೇಳುತ್ತಾನೆ ಮತ್ತು ಪ್ರತೀ ಕತೆಯ ಕೊನೆಗೂ ಒಬ್ಬಳು ರಾಜಕುಮಾರಿ ಯಾವುದೋ ಒಂದು ಕಾಡುಪ್ರಾಣಿಯಾಗಿ ಕಾಡಿನೊಳಕ್ಕೆ ಓಡಿ ಹೋಗುವುದರೊಂದಿಗೆ ಕತೆಯು ಮುಗಿಯುತ್ತಿತ್ತು. ಹೆಸರು ಮರೆತೇ ಹೋಗಿದೆ. ಇಲ್ಲಿ Eugene Ionesco ನ ಒಂದು ನಾಟಕ Rhinoceros ಕುರಿತ ಒಂದು ಪ್ರಕರಣವಿದೆ. ನಾಟಕದಲ್ಲಿ ಒಂದು ಪಾತ್ರ ಇನ್ನೊಂದು ಪಾತ್ರದ ಅನುಕರಣೆಯ ಚಟಕ್ಕೆ ಬಿದ್ದು ಒಂದರಂತೆ ಇನ್ನೊಂದು ಖಡ್ಗಮೃಗವಾಗುತ್ತ ಹೋಗುವ ಕತೆಯಿದೆಯಂತೆ. ಇದೊಂದು ತಮಾಷೆಯಾಗಿ ನೋಡಬೇಕಾದ, ಸಾಂಕೇತಿಕವಷ್ಟೇ ಆದ ಪ್ರಕ್ರಿಯೆ ಎಂದು ಕಂಡುಕೊಂಡ ಫ್ರಾನ್ಸ್‌ನಲ್ಲಿ ಕಲಿಯುತ್ತಿರುವ ಅಮೆರಿಕೆಯ ಇಬ್ಬರು ಸಹೋದರಿಯರು ನಾಟಕವನ್ನು ತರಗತಿಯಲ್ಲಿ ವಿವರಿಸುತ್ತಲೇ ಅಪಹಾಸ್ಯಕ್ಕೆ ತುತ್ತಾಗಿ, ತಮ್ಮ ನೆಚ್ಚಿನ ಶಿಕ್ಷಕಿಯೂ ತಮ್ಮನ್ನು ಅಪಹಾಸ್ಯ ಮಾಡಿದಳೇ ಎಂಬ ನೋವಿನಲ್ಲಿ ಹೃದಯವನ್ನೇ ಕಳೆದುಕೊಂಡ ಹೊತ್ತಲ್ಲೇ ಇದ್ದಕ್ಕಿದ್ದ ಹಾಗೆ ‘ಪುಷ್ಪಕವಿಮಾನವೊಂದು ಆಕಾಶದಿಂದ ಕೆಳಗಿಳಿದು ಬಂದು ಅವರು ಮೂವರನ್ನೂ ಅದರಲ್ಲಿ ಕುಳ್ಳಿರಿಸಿಕೊಂಡು ಎಲ್ಲರೂ ನೋಡನೋಡುತ್ತಿರುವಂತೆಯೇ ಆಕಾಶಕ್ಕೇರಿ ಮಾಯವಾಗುತ್ತದೆ’ ಎಂಬಂಥದ್ದೇ ಅಂತ್ಯವಿದೆ.

ಇಲ್ಲಿನ ಅಪಹಾಸ್ಯದ ನಗುವನ್ನೇ ನೋಡಿ. ಈ ನಗುವಿನಲ್ಲಿ ಮೂಲಭೂತವಾಗಿ ಪೈಶಾಚಿಕವಾದದ್ದೇನೋ ಇದೆ. ಜಗತ್ತಿನಲ್ಲಿ ದೈತ್ಯಶಕ್ತಿ ಮತ್ತು ದೈವಶಕ್ತಿ ಎರಡೂ ಸಮಾನ ಪ್ರಮಾಣದಲ್ಲಿದೆ. ಇಲ್ಲವಾದಲ್ಲಿ ಮನುಷ್ಯನ ಬದುಕೇ ದುರಂತವಾಗುವುದರಲ್ಲಿ ಸಂಶಯವಿಲ್ಲ ಎಂಬ ಕಾರಣಕ್ಕಾದರೂ ನಾವು ಈ ಸಮಾನತೆಯನ್ನು ಇದೆ ಎಂದು ಭಾವಿಸಬಹುದು. ಹಾಗಾಗಿ ಪೈಶಾಚಿಕ ನಗುವಿಗೆ ಸಮಾನವಾದ ದೈವಿಕವಾದ ನಗುವೂ ಇರಬೇಕಾಗುವುದೆಂದು ಅಪಹಾಸ್ಯಕ್ಕೆ ಗುರಿಯಾದ ದೈವವೂ ನಗಲು ಪ್ರಯತ್ನಿಸುತ್ತದೆ. ಆದರೆ ಈ ನಗುವೇ ಹಾಸ್ಯಾಸ್ಪದವಾಗಿರುತ್ತದೆ ಎಂಬುದನ್ನು ಪುನಃ ಹೇಳಬೇಕಾಗಿಲ್ಲ. ಹೆಡ್ಮಾಸ್ತರರ ಹತ್ತಿರ ಬೈಸಿಕೊಂಡು ಹೊರಬರುವ ಹುಡುಗ, ಬಾಸ್ ಬಳಿ ಉಗಿಸಿಕೊಂಡು ಕ್ಯಾಬಿನ್ನಿನಿಂದ ಹೊರಬರುವ ನೌಕರ ಒಳಗೆ ಅಂಥಾದ್ದೇನಾಗಲಿಲ್ಲ ಎಂದು ಹೊರಗಿನವರನ್ನೆಲ್ಲ ನಂಬಿಸಲು ಮುಖದ ಮೇಲೆಳೆದುಕೊಳ್ಳುವ ನಗುವನ್ನು ನೆನೆದುಕೊಳ್ಳಿ, ಈ ದೈವೀಕ ನಗು ಹಾಗೆಯೇ ಇರುತ್ತದೆ ಮತ್ತು ಅದನ್ನು ಕಂಡು ಪೈಶಾಚಿಕ ನಗು ಇನ್ನೂ ಹೆಚ್ಚುವುದಂತೆ! ಸಹಜವಲ್ಲವೆ!! ಅಂತೂ ಸಮಾನತೆಯ ಅಗತ್ಯದಿಂದ ದೈವವೂ ಬಾಯಿ ತೆರೆದುಕೊಂಡು ನಕ್ಕಂತೆ ಸದ್ದು ಹೊರಡಿಸುತ್ತದೆ, ಇತ್ತ ಪೈಶಾಚಿಕ ನಗು ಅಟ್ಟಹಾಸದಿಂದ ಮೆರೆಯುತ್ತದೆ. ಕೊನೆಗೆ ಏನಾಗುತ್ತದೆಂದರೆ ಇವತ್ತು ಆಗಿರುವಂತೆ ನಮಗೆ ಯಾವುದು ಯಾವ ನಗು, ಯಾವುದು ಒರಿಜಿನಲ್, ಯಾವುದು ಯಾವುದರ ಅಣಕ, ಯಾವುದು ಯಾವುದರ ಪೂರ್ ಕಾಪಿ, ಯಾವುದು ಯಾವುದರ ಅನುಕರಣೆ ಒಂದೂ ತಿಳಿಯದ ಸ್ಥಿತಿ ನಿರ್ಮಾಣವಾಗುತ್ತದೆ.

ಉಷ್ಟ್ರಪಕ್ಷಿಯ ಬಗ್ಗೆ ನಿಮಗೆ ಗೊತ್ತು. ಇದರ ಹೆಸರಿನಲ್ಲೇ ಸತ್ಯವನ್ನು ಎದುರಿಸಲಾರದವ ಎನ್ನುವ ಅರ್ಥವಿದೆ,ಇರಲಿ. ಈ ಪಕ್ಷಿಯೂ ನಮ್ಮ ಕೆಂಬೂತಕ್ಕೂ ಕೆಲವು ಹೋಲಿಕೆಗಳಿವೆ, ಮನುಷ್ಯರನ್ನು ಕಂಡರೆ ಅಡಗಿಕೊಳ್ಳುವ, ಹಾರಲಾರದ ಗುಣಗಳಲ್ಲಿ. ಒಮ್ಮೆ ತಮೀನಾ ಮತ್ತು ಹ್ಯೂಗೋ ಒಂದು ಪಾರ್ಕಿಗೆ ಹೋದಾಗ ಅಲ್ಲಿ ಆರು ಉಷ್ಟ್ರಪಕ್ಷಿಗಳನ್ನು ಕಾಣುತ್ತಾರೆ. ಅವೆಲ್ಲವೂ ಬಂಧನದಲ್ಲಿರುವ ಮತ್ತು ಸ್ವರವನ್ನೇ ಕಳೆದುಕೊಂಡು ಮೂಕವಾಗಿರುವ ಪಕ್ಷಿಗಳಾದರೂ ತಮೀನಾಳ ಬಳಿ ಏನೋ ಹೇಳುವುದಕ್ಕೆಂಬಂತೆ ಕತ್ತುದ್ದ ಮಾಡಿ, ಮೂಕವಾಗಿಯೇ ಬಾಯಿ ತೆರೆದು ಮುಚ್ಚಿ ಮಾತನಾಡಲು ಇನ್ನಿಲ್ಲದ ಯತ್ನ ನಡೆಸುತ್ತಿರುವಂತೆ ಮತ್ತು ಹೇಳಲೇ ಬೇಕಾದ್ದನ್ನು ಹೇಳಲಾಗದ ಸಂಕಟವನ್ನು ಹೇಗೆ ಮೀರುವುದೆಂದೇ ತಿಳಿಯದಾದವರಂತೆ ಇವರನ್ನೇ ಪಾರ್ಕಿನುದ್ದಕ್ಕೂ ತಮ್ಮ ಬಲೆಯಾಚೆಯಿಂದ ಹಿಂಬಾಲಿಸಿಕೊಂಡೇ ಬರುವುದು ಹೇಗಿರುತ್ತದೆಂದರೆ ತಮೀನಾ ಅದನ್ನು ಕಾಣಲಾರದೆ ಅಸ್ವಸ್ಥಳಾಗಿಬಿಡುತ್ತಾಳೆ. ಮತ್ತಿದು ತಮೀನಾಗೆ ಏನೋ ಶಕುನದಂತೆ, ತನ್ನ ಪತ್ರಗಳು ಮತ್ತು ತನ್ನ ನೋಟ್ ಬುಕ್ಕುಗಳಿಗೆ ಸಂಬಂಧಿಸಿದ ಶಕುನವೇ ಇರಬೇಕೆಂಬಂತೆ ಇದೆಲ್ಲ ಕಾಡತೊಡಗುತ್ತದೆ.

ಹಾಗೆಯೇ ಇಲ್ಲೊಂದು ಕಡೆ ಮಿಲನ್ ಕುಂದೇರಾ ಥಾಮಸ್ ಮನ್ನ್ ತನ್ನ ಕಾದಂಬರಿಯೊಂದರಲ್ಲಿ ಮೌನವನ್ನು ಸೃಷ್ಟಿಸಿ, ಆ ಮೌನದಲ್ಲಿ ನೀವು ಯಾವುದೋ ಒಂದು ಭಾವವನ್ನು ಅನುಭವಿಸುವಂತೆ ಮಾಡುವುದಕ್ಕಾಗಿಯೇ ಒಂದು ವಿಲಕ್ಷಣ ಶಬ್ದವನ್ನು ಹುಟ್ಟಿಸಿದ ತಂತ್ರದ ಬಗ್ಗೆ ಬರೆದಿರುವುದು ಕುತೂಹಲಕರವಾಗಿದೆ. ಬೇಸಿನ್‌ನಲ್ಲಿ ಕೈಯ ಉಂಗುರವೊಂದು ಬಿದ್ದು ಹುಟ್ಟಿಸುವ faint, clear, metallic tone to create silence ಕುರಿತಾಗಿದೆ ಇದು.

ಅದೇ ರೀತಿ ಇಲ್ಲಿ ಇನ್ನೊಂದು ವಿಲಕ್ಷಣ ವಿದ್ಯಮಾನವನ್ನೂ ಕುಂದೇರಾ ತರುತ್ತಾನೆ. ಒಬ್ಬ ಬರಹಗಾರನ ಮಟ್ಟಿಗೆ ಅವನು ಬರೆದಿದ್ದು ಮತ್ತು ಸೃಷ್ಟಿಸಿರುವುದು ಒಂದು ಜೀವಂತ ಜಗತ್ತು. ಮತ್ತು ಅದರಿಂದಾಗಿ ಅವನ ಅಸ್ತಿತ್ವವನ್ನು ಅಸ್ಮಿತೆಯನ್ನು ಅವನು ಸಾಧಿಸಿರುತ್ತಾನೆ. ಅವನ ಮಟ್ಟಿಗೆ ಅವನ ಅಸ್ತಿತ್ವ ಮತ್ತು ಅಸ್ಮಿತೆಯಿರುವುದೇ ಅವನ ಬರವಣಿಗೆಯ ಸಾಕ್ಷಿಯಾದ ಅವನ ಕೃತಿಯಲ್ಲಿ. ಆದರೆ ಮಾಧ್ಯಮಗಳು ಅವನು ನಿಜಕ್ಕೂ ಬದುಕಿದ್ದಾನೆಯೇ ಇಲ್ಲವೇ ಎನ್ನುವುದನ್ನು ಸಿದ್ಧಪಡಿಸುವುದು ಇವತ್ತಿನ ನಮ್ಮ ತಲೆಮಾರಿನ ವಾಸ್ತವ. ಮಾಧ್ಯಮಗಳಿಂದಾಗಿ ಇವತ್ತು ಸಾಹಿತ್ಯ ಎಂದರೆ ಕೆಲವೇ ವ್ಯಕ್ತಿಗಳು ನಮಗೆ ನೆನಪಾಗುವಂತಿದೆ. ಮಾಧ್ಯಮಗಳಲ್ಲಿ ಇಲ್ಲದ ಬರಹಗಾರರು ಇಲ್ಲ. ಅವರು ಸತ್ತಿದ್ದಾರೆ ಇಲ್ಲವೇ ಹುಟ್ಟಿಯೇ ಇಲ್ಲ ಎಂಬುದು ಈ ಹೊಸ ವಾಸ್ತವವಾಗಿದೆ. ಹೀಗಾಗಿ ನವ್ಯ ಎಂದರೆ, ಬಂಡಾಯ ಎಂದರೆ, ಹೊಸ ತಲೆಮಾರಿನ ಸಾಹಿತಿ ಎಂದರೆ ನಿಮಗೆ ನಿರ್ದಿಷ್ಟವಾದ ಕೆಲವೇ ವ್ಯಕ್ತಿಗಳು ನೆನಪಾಗುತ್ತಾರೆ ಮತ್ತು ಉಳಿದವರೆಲ್ಲಾ ಆ ಕ್ಷಣಕ್ಕೆ ಅಸ್ತಿತ್ವದಲ್ಲೇ ಇಲ್ಲವಾಗಿ ಬಿಡುತ್ತಾರೆ. ಇದೊಂದು ಮಾಂತ್ರಿಕ ವಾಸ್ತವದಂತೆಯೇ ಮತ್ತು ಒಂದರ್ಥದಲ್ಲಿ ಅದಕ್ಕಿಂತಲೂ ಹೆಚ್ಚಿನದ್ದಾದ ವಾಸ್ತವ. ಹಾಗೆಯೇ ಒಬ್ಬ ಸಾಹಿತಿ ನಿಮಗೆ ಓದಲು ಕೊಟ್ಟ ಪುಸ್ತಕವನ್ನೋ ಕತೆಯನ್ನೋ ನೀವು ಕೊನೆಗೂ ಓದಿಲ್ಲ ಎಂದಾದರೆ ಅವನಿಗೆ ಆಗುವ ಅನುಭವ ಇದೇ. ನಿಮ್ಮ ಮಟ್ಟಿಗೆ ಅವನು ಸತ್ತಂತೆಯೇ ಆಗಿಬಿಡುತ್ತಾನೆ ಅಥವಾ ನೀವು ಅವನನ್ನು ‘ಅಕ್ಷರಶಃ’ ಕೊಂದಿರುತ್ತೀರಿ!

ಕಾದಂಬರಿಯ ಐದನೆಯ ಭಾಗ ಸಾಹಿತಿಗಳಿಗೆ ಸಾಹಿತ್ಯ-ಸಾಹಿತಿ ಕುರಿತ ಚರ್ಚೆಗಾಗಿ ಮತ್ತು ಪ್ರೀತಿ-ಕಾಮಗಳ ಒಂದು ವಿಲಕ್ಷಣ ಸಂಬಂಧ ನೀಡುವ ಒಳನೋಟಗಳಿಗಾಗಿ ಹಾಗೂ ಕುಂದೇರಾ ವಿವರಿಸುವ ಭಾಷಾಂತರಕ್ಕೆ ದಕ್ಕದ litost ಎಂಬ ಶಬ್ದಕ್ಕಾಗಿ ಕುತೂಹಲಕರವಾದ ಅಧ್ಯಾಯ. ಕ್ರಿಸ್ತಿನಾ ಎಂಬ ಮುವ್ವತ್ತರ ವಿವಾಹಿತೆ, ಒಂದು ಮಗುವಿನ ತಾಯಿ ಮತ್ತು ಒಬ್ಬ ರಜೆಯಲ್ಲಿ ಹಳ್ಳಿಗೆ ಬಂದ ಹುಡುಗನ ನಡುವಿನ ಪ್ರೇಮ ಪ್ರಕರಣ ಇಲ್ಲಿದೆ. ಕ್ರಿಸ್ತಿನಾ ತನ್ನ ಗಂಡ (ಮಾಂಸದ ವ್ಯಾಪಾರಿ)ನಲ್ಲದೇ ಇನ್ನೊಬ್ಬ ಮೆಕ್ಯಾನಿಕ್ ಜೊತೆ ಕೂಡ ಲೈಂಗಿಕ ಸಂಬಂಧವನ್ನಿಟ್ಟುಕೊಂಡಿದ್ದವಳಾದರೂ ಈ ಹುಡುಗನ ಜೊತೆ ಲೈಂಗಿಕತೆಗೆ ಅವಕಾಶವನ್ನೇ ಕೊಡುವುದಿಲ್ಲ. ಇವಳ ಜೊತೆ ಹುಡುಗ ಸಾಹಿತ್ಯದ ಬಗ್ಗೆ, ಕವಿತೆಯ ಬಗ್ಗೆ ಮಾತನಾಡುತ್ತ, ತನ್ನ ಲೈಂಗಿಕ ಅಭೀಪ್ಸೆಗಳನ್ನು ಯಶಸ್ವಿಯಾಗಿ ತೀರಿಸಿಕೊಳ್ಳದೇ ನಗರಕ್ಕೆ ಹೊರಟು ಹೋಗುತ್ತಾನೆ. ಈ ಹುಡುಗನಿಗೆ ತನ್ನದೇ ಸಹಪಾಠಿಯೊಬ್ಬಳೊಡನೆ ಇದ್ದ ಸಂಬಂಧ ಮುರಿದುಬಿದ್ದಿದೆ. ಕ್ರಿಸ್ತಿನಾಗಾದರೂ ತನ್ನ ಮತ್ತು ಈ ಹುಡುಗನ ಸಂಬಂಧದ ಬಗ್ಗೆ ಸ್ಪಷ್ಟವಾದ ನಿಲುವುಗಳಿವೆ. ಅದರಲ್ಲಿ ಲೈಂಗಿಕತೆಗೆ ಅವಕಾಶವಿಲ್ಲವೆಂದು ಅವಳೇ ವಿಧಿಸಿಕೊಂಡಿರುವುದಕ್ಕೆ ಎರಡು ಕಾರಣಗಳಿವೆ. ಒಂದು ದೈಹಿಕವಾದದ್ದು, ಹೆರಿಗೆಯ ಸಮಯದಲ್ಲಾದ ತೊಂದರೆಯಿಂದ ಮತ್ತೊಮ್ಮೆ ಗರ್ಭ ಧರಿಸಿದರೆ ಪ್ರಾಣಾಪಾಯವಿದೆಯೆಂದು ಅವಳಿಗೆ ವೈದ್ಯರು ಎಚ್ಚರಿಸಿದ್ದಾರೆನ್ನುವುದು ಆ ಕಾರಣ. ಇನ್ನೊಂದು ಸ್ವಲ್ಪ ಕುತೂಹಲಕರವಾದದ್ದು. ಬೌದ್ಧಿಕ ನೆಲೆಯಲ್ಲಿ ನಿಂತಿರುವ ಈ ಒಂದು ಪ್ರೇಮಪ್ರಸಂಗವನ್ನು ಸಂಭೋಗದ ಮಟ್ಟಕ್ಕೆ ಇಳಿಸುವುದಕ್ಕೆ ಬಿಡಬಾರದು ಎಂಬುದು ಅವಳ ಸಂಕಲ್ಪ. ಲೈಂಗಿಕ ಸಂಬಂಧ ಅವಳಿಗೆ ಹೊಸದಲ್ಲ. ಹುಡುಗನಿಗೂ ಕ್ರಿಸ್ತಿನಾ ಆ ಮಟ್ಟಿಗೆ ಅನಿವಾರ್ಯಳಲ್ಲ. ಹಾಗಿರುತ್ತ ಅವಳ ನಿಲುವು ಸ್ಪಷ್ಟವಾಗಿಯೇ ಇದೆ. ಆದರೆ ಕ್ರಿಸ್ತಿನಾ ಒಮ್ಮೆ ಇವನಿಗಾಗಿಯೇ ನಗರಕ್ಕೆ ಬಂದು ಇವನ ಜೊತೆ ಒಂದು ರಾತ್ರಿ ನಿಂತಾಗಲಂತೂ ಹುಡುಗನಿಗೆ ಕಣ್ಣಿಗೆ ಕಟ್ಟುವ ಕನಸು ಲೈಂಗಿಕತೆಯದ್ದು ಮಾತ್ರ. ಆ ರಾತ್ರಿ ಇವನು ಮಹಾನ್ ಸಾಹಿತಿಗಳ ಜೊತೆ ಪುಟ್ಟ ‘ಸಾಹಿತ್ಯ ಸಂಜೆ’ಯಲ್ಲಿ ಭಾಗವಹಿಸಿ ಅಲ್ಲಿ ನಡೆದ ಚರ್ಚೆಯನ್ನು ಕಾದಂಬರಿಯ ತೆಕ್ಕೆಗೆ ತರುವುದೇ ಈ ಅಧ್ಯಾಯದ ಇನ್ನೊಂದು ಮಗ್ಗುಲು.

ಈ ಚರ್ಚೆಯಲ್ಲಿ ಭಾಗವಹಿಸುವ ಎಲ್ಲರಿಗೂ ಗೋಥೆ, ವಾಲ್ಟೇರ್, ಲರ್ಮನಟಾವ್, ಪೆಟ್ರಾರ್ಕ್ ಮುಂತಾದ ಪ್ರಖ್ಯಾತ ಸಾಹಿತಿಗಳ ಹೆಸರುಗಳನ್ನು ಹಚ್ಚಿಯೇ ಇದೆಲ್ಲ ತೊಡಗುವುದು ತಮಾಷೆಯಾಗಿದೆ ಮತ್ತು ಸಾಂಕೇತಿಕವೂ ಆಗಿದೆ. ಇಲ್ಲಿನ ಮುಖ್ಯವಾದ ಪ್ರಸಂಗಗಳು ಎರಡು. ಒಂದು ಗಂಡು ಹೆಣ್ಣಿನ ಸಂಬಂಧದ ಕುರಿತ ಚರ್ಚೆ ಮತ್ತು ಅದರ ವಿಶ್ಲೇಷಣೆ. ಇನ್ನೊಂದು ಸಾಹಿತಿಯ ಮತ್ತು ಸಾಹಿತ್ಯದ ಕುರಿತ ಮಾತುಕತೆ.

ಪೆಟ್ರಾರ್ಕ್ ಇಲ್ಲೊಂದು ಕತೆ ಹೇಳುತ್ತಾನೆ. ಇದನ್ನು ಕತೆ, ಕಲ್ಪನೆ ಎಂದೆಲ್ಲ ಅವನನ್ನು ಜರಿಯುವವರು ಅಲ್ಲಿಯೇ ಇದ್ದರೂ ಅವನು ಅದನ್ನು ನಿಜಕ್ಕೂ ನಡೆದ ಘಟನೆಯೆಂದೇ ಹೇಳಿಕೊಳ್ಳುತ್ತಾನೆ. ಸರಳವಾಗಿ ಅದು ಅವನ ಕವನಗಳನ್ನು ಓದಿ ಹುಚ್ಚಾಗಿ ಅವನೊಂದಿಗೆ ಪ್ರೇಮಭಿಕ್ಷೆಯನ್ನು ಬೇಡಿ ಬಂದ ಒಬ್ಬ ಅಭಿಮಾನಿ ಹುಡುಗಿಯನ್ನು ಅವನು ತನ್ನ ‘ಅತ್ಯಂತ ಸುಂದರಿ’ ಮತ್ತು ‘ಪ್ರೀತಿಯ’ ಹೆಂಡತಿಯ ಜೊತೆ ನಿಭಾಯಿಸಿದ ಕತೆ. ಲರ್ಮನಟಾವ್ ಕೆಲವು ಇಟ್ಯಾಲಿಕ್ ಫಾಂಟಿನ ಮಾತುಗಳನ್ನಾಡುವುದು ಕುತೂಹಲಕರವಾಗಿದೆ! ಈ ಸಾಹಿತಿಗಳು ‘ಸೂಕ್ಷ್ಮ’ ಮನಸ್ಸಿನವರೇ ಅಲ್ಲವೆ, ಸಾಹಿತಿಯ ‘ಅಭಿಮಾನ’ ಎಂದರೆ ನಿಜಕ್ಕೂ ಏನು, ಇತ್ಯಾದಿ.

ಒಬ್ಬ ಸಾಹಿತಿ ಬರೆದಿದ್ದನ್ನು ಯಾವ ಓದುಗನೂ ಯಥಾವತ್ ತಿಳಿದುಕೊಳ್ಳುವುದು ಸಾಧ್ಯವೇ ಇಲ್ಲ. ಅದರ ಯಥಾವತ್ ಎಂಬುದು ಬರೆದವನಿಗಷ್ಟೇ ದಕ್ಕಿರುತ್ತದೆ. ಈ ಪ್ರಜ್ಞೆಯೇ ಒಬ್ಬ ಸಾಹಿತಿಯ ತನ್ನ ಕುರಿತೇ ತನಗಿರುವ ಆಳದ ಅಭಿಮಾನಕ್ಕೆ ಕಾರಣವಾಗಿರುತ್ತದಂತೆ. ಇಲ್ಲಿನ ಇನ್ನೂ ಕೆಲವು ಮಾತುಗಳನ್ನು ಯಥಾವತ್ ಕೊಡುತ್ತೇನೆ:
........because to understand is to merge and to identify with. That is the secret of poetry. We consume ourselves in the beloved woman, we consume ourselves in the idea we believe, we burn in the landscape we are moved by." (ಪುಟ 199)

"Laughter, on the other hand," Petrarch went on, "is an explosion that tears us away from the world and throws us back into our own cold solitude. Joking is a barrier between men and the world. Joking is the enemy of love and poetry. that's why I tell you yet again, and want you to keep in mind: Boccaccio doesn't understand love. Love can never be laughable. Love has nothing in common with laughter." ( ಪುಟ199)

ಅಪಹಾಸ್ಯದ ನಗುವಿನ ಕುರಿತು ಹೇಳುತ್ತ ದೈವ ಮತ್ತು ದೈತ್ಯರ ನಡುವೆ ನಡೆಯುವ ಪೈಪೋಟಿಯ ಬಗ್ಗೆ ಮೂರನೇ ಅಧ್ಯಾಯದಲ್ಲಿ ಒಂದು ನಿಟ್ಟಿನ ವಿವರಗಳು ಈಗಾಗಲೇ ಬಂದಿವೆ. ಇಲ್ಲಿ ಮತ್ತೆ ನಗೆಯ ಬಗ್ಗೆ ಬಂದಿರುವ ಮಾತುಗಳನ್ನು ಗಮನಿಸುತ್ತಲೇ ಮಿಲನ್ ಕುಂದೇರಾನ ಇನ್ನೊಂದು ಕಾದಂಬರಿಯ ಹೆಸರು Laughable Loves ಎಂದೇ ಇರುವುದನ್ನು ಕೂಡ ಗಮನಿಸಬಹುದು!

ಸಾಹಿತಿಗಳ ಮಾತು-ಕ್ರಿಯೆಗಳ ನಡುವಿನ ಅಂತರವನ್ನು ಅವರ ಆದರ್ಶ-ಹುಂಬತನ, ಖ್ಯಾತಿಯ ಹಪಹಪಿಕೆ ಮತ್ತು ಸಣ್ಣತನ, ಬಡಾಯಿ ಮತ್ತು ಪುಕ್ಕಲುತನ, ಔದಾರ್ಯ ಮತ್ತು ರಾಜಕೀಯಗಳಲ್ಲಿ ಎಲ್ಲವನ್ನೂ ಅಷ್ಟಿಷ್ಟು ಕಾಣಿಸುವ ಈ ಅಧ್ಯಾಯ ಕೊನೆಗೂ ಮುಗಿಯುವುದು ಕ್ರಿಸ್ತಿನಾ ಜೊತೆ ಮಲಗಲಾರದೆ, ಪ್ರೀತಿಸಿದವಳನ್ನು ಉಳಿಸಿಕೊಳ್ಳಲಾರದೆ, ತನ್ನ ಮೆಚ್ಚಿನದ್ದಾದ ಸಾಹಿತ್ಯದಲ್ಲಿ ಶಾಂತಿ ಕಂಡುಕೊಳ್ಳಲಾರದೆ litost ಭಾವದಲ್ಲೇ ಉಳಿದು ಹೋಗುವ ಹುಡುಗನೊಂದಿಗೇ.

ಆರನೆಯ ಅಧ್ಯಾಯದಲ್ಲಿ 1948ರ ಕಮ್ಯುನಿಸ್ಟ್ ಅಧಿಕಾರಗ್ರಹಣದ ಸಂದರ್ಭವನ್ನೇ ಮತ್ತೆ ಉಲ್ಲೇಖಿಸುತ್ತ 1969-1971ರ ತನಕ ಬರುವ ನಿರೂಪಕ ಈ ಅವಧಿಯಲ್ಲಿ ದೇಶ ತನ್ನ ಭಾಷೆ, ಸಂಸ್ಕೃತಿ, ಇತಿಹಾಸ, ನೆನಪು ಎಲ್ಲವನ್ನೂ ಕಳೆದುಕೊಳ್ಳುತ್ತಲೇ ಬಂದಿರುವುದನ್ನು ವಿವರಿಸುತ್ತಾನೆ. 1621 ನಲ್ಲಿ ಜೆಸೂಯಿಟ್ಸ್ ಕ್ರಾಂತಿಯನ್ನು ಹತ್ತಿಕ್ಕುವ ನೆವದಲ್ಲಿ ಮಾಡಿದ್ದಕ್ಕಿಂತ ಹೆಚ್ಚಿನ ಹಾನಿಯನ್ನು ‘ಪ್ರೆಸಿಡೆಂಟ್ ಆಫ್ ಫರ್‌ಗೆಟಿಂಗ್’ ಮಾಡಿರುವುದಾಗಿ ಹೇಳುತ್ತಾನೆ. ಆಸ್ಟ್ರಿಯಾ-ಹಂಗೆರಿ ಆಡಳಿತಾವಧಿ, ಆನಂತರದ ಜರ್ಮನ್ ಅತಿಕ್ರಮಣ, ಪ್ರತಿಯೊಂದೂ ತನ್ನ ದೇಶವನ್ನು ಭೂತಕಾಲವೇ ಇಲ್ಲದಂತೆ ಮಾಡುವಲ್ಲಿ ಯಶಸ್ವಿಯಾದುದನ್ನು ಒಂದು ಯಾಂತ್ರಿಕ ಪ್ರಕ್ರಿಯೆಯೊ ಎಂಬಂತೆ ವಿವರಿಸುವಲ್ಲಿಯೂ ಭಯ ಹುಟ್ಟುವುದು ಸಹಜ. ಇಲ್ಲಿಯೇ ಮುಂದೆ ನಿರೂಪಕನ ತಂದೆ ತನ್ನ ಭಾಷಾಶಕ್ತಿಯನ್ನೇ ಕಳೆದುಕೊಂಡು, ಹೇಳಬೇಕನಿಸಿದ್ದನ್ನು ಹೇಳಲು ಶಬ್ದಗಳೇ ನೆನಪಾಗದೆ ಕಂಗಾಲಾಗಿ ಬರೇ ‘That's strange' ಎನ್ನುವಷ್ಟಕ್ಕೇ ಬಾಯಿಕಟ್ಟಿಕೊಂಡಿರಬೇಕಾದ ಒಂದು ಸ್ಥಿತಿಯನ್ನು ವಿವರಿಸುತ್ತಾನೆ. ಇಲ್ಲಿ ಯಾವುದಕ್ಕೆ ಯಾವುದು ಪ್ರತಿಮಾ ವಿಧಾನವನ್ನು ಬಳಸಿಕೊಳ್ಳುತ್ತಿದೆಯೋ ನೀವೇ ನಿರ್ಧರಿಸಿ! ನಾಲ್ಕನೆಯ ಅಧ್ಯಾಯದಲ್ಲಿ ತಮೀನಾಳ ಬಳಿ ಏನನ್ನೋ ಹೇಳುವುದಕ್ಕೆಂಬಂತೆ ಎಲ್ಲಿ ಹೋದರಲ್ಲಿಗೆ ಹಿಂಬಾಲಿಸಿ ಬರುವ ಆರು ಉಷ್ಟ್ರಪಕ್ಷಿಗಳ ಮೂಕಭಾಷೆಯನ್ನು ನೀವು ಮರೆತಿಲ್ಲವಲ್ಲ!

ಇಲ್ಲಿಯೇ ಸಂಗೀತದ ಉದಾಹರಣೆಯನ್ನೂ ಕಾದಂಬರಿ ಬಳಸಿಕೊಳ್ಳುತ್ತದೆ.

Pascal says that man lives between the abyss of the infinitely large and the abyss of the infinitely small. The voyage of variations leads into that other infinitude, into the infinite diversity of the interior world lying hidden in all things.

Beethoven thus discovered in variations another area to be explored. His variations are a new `invitation to the voyage.'

Variation form is the form in which concentration is brought to its maximum; it enables the composer to speak only of essentials, to go straight to the core of the matter. A theme for variations often consists of no more than sixteen measures. Beethoven goes inside those sixteen measures as if down a shaft leading into the interior of the earth.

The voyage into that other infinitude is no less adventurous than the voyage of the epic. It is how the physicist penetrates into the wondrous depths of the atom. With every variation Beethoven moves farther and farther away from the initial theme, which resembles the last variation as little as a flower its image under a microscope.

Man knows he cannot embrace the universe with its suns and stars. Much more unbearable is for him to be condemned to lack the other infinitude, that infinitude near at hand, within reach. Tamina lacked the infinitude of her love, I lacked Papa, and all of us are lacking in our work because in pursuit of perfection we go toward the core of the matter but never quite get to it.

That the infinitude of the exterior world escapes us we accept as natural. But we reproach ourselves until the end of our lives for lacking that other infinitude. We ponder the infinitude of the stars but are unconcerned about the infinitude our papa has within him.

It is not surprising that in his later years variations became the favorite form for Beethoven, who knew all too well (as Tamina and I know) that there is nothing more unbearable than lacking the being we loved, those sixteen measures and the interior world of their infinitude of possibilities.
(ಪುಟ 225-226-227)

ಈ ಕಾದಂಬರಿಯೂ ಇಂಥದ್ದೇ ಮಂದ್ರ-ತಾರಕಗಳ ಒಂದು ವಿನ್ಯಾಸವನ್ನು ಅನುಸರಿಸುತ್ತಿದೆ ಎನ್ನುತ್ತಾನೆ ನಿರೂಪಕ. ಇದು ಕೂಡಾ ಒಂದು ಕೇಂದ್ರವನ್ನು ಹಿಡಿಯಲು ಯತ್ನಿಸುತ್ತಿರುವ ಪಯಣವೇ. ಇಲ್ಲಿ ಬರುವ ಬೇರೆ ಬೇರೆ ವ್ಯಕ್ತಿಗಳ ಕತೆ ಎಲ್ಲವೂ ತಮೀನಾಳ ಕುರಿತಾಗಿದೆ ಅಥವಾ ತಮೀನಾಗಾಗಿ ಇದೆ. ಯೋಚನೆಗಳ ಒಳರಚನೆಗಳನ್ನು, ಅಂತಃರಚನೆಗಳನ್ನು, ಅವು ಒಂದನ್ನು ಒಂದು ಸಂಧಿಸುವುದನ್ನು ಗಮನಿಸುವುದಕ್ಕಾಗಿಯೇ ಸುರುಹಚ್ಚಿಕೊಂಡ ಪಯಣವಿದು ಎನ್ನುತ್ತಾನೆ ನಿರೂಪಕ. ಇಷ್ಟನ್ನು ಹೇಳಿದ ಮೇಲೆ ತಮೀನಾ ಈ ಮೊದಲೇ ವಿವರಿಸಿದ ತನ್ನ ಕೊನೆಯ ಪಯಣಕ್ಕೆ ಸಿದ್ಧಳಾಗುತ್ತಾಳೆ, ಸುತ್ತಲೂ ನೀರಿನಿಂದಾವೃತವಾದ ಒಂದು ದ್ವೀಪದಲ್ಲಿ ಬಂಧಿಯಾಗುತ್ತಾಳೆ, ಆ ದ್ವೀಪದಲ್ಲಿ ಮಕ್ಕಳನ್ನು ಬಿಟ್ಟರೆ ಬೇರೆ ಯಾರೂ ಇರುವುದಿಲ್ಲ ಮತ್ತು ಅಲ್ಲಿಂದ ತಪ್ಪಿಸಿಕೊಂಡು ಬರುವ ಪ್ರಯತ್ನದಲ್ಲೇ ಅಪ್ರತಿಮ ಈಜುಗಾತಿಯಾದ ಆಕೆ ಜಲಸಮಾಧಿಯಾಗುತ್ತಾಳೆ. ಈ ಅಧ್ಯಾಯದ ಹೆಸರು The Angels. ತಮೀನಾಳನ್ನು ಅಲ್ಲಿಗೆ ಕರೆದೊಯ್ದ ಯುವಕನ ಹೆಸರು Raphael. ಹೀಬ್ರೂ ಪಂಥದ ಒಂದು ಅಶ್ವಿನಿದೇವತೆಯಂಥ angel ಹೆಸರಿದು.

ಈ ಕಾದಂಬರಿಯ ಕೊನೆಯ ಮತ್ತು ಏಳನೆಯ ಅಧ್ಯಾಯಕ್ಕೆ ಜಾನ್ ಕೇಂದ್ರಬಿಂದು. ಇಲ್ಲಿ ಒಂದು ರೀತಿ ಎಲ್ಲವನ್ನೂ ಪರಾಕಾಷ್ಠೆಗೊಯ್ದೇ ಸತ್ಯವನ್ನು ಶೋಧಿಸುವ ರಿಸ್ಕ್ ತೆಗೆದುಕೊಂಡಂತಿದೆ ಮಿಲನ್ ಕುಂದೇರಾ. ಈ ಅಧ್ಯಾಯದಲ್ಲಿ ಕಾಮದ ಮತ್ತು ಕಾಮರಾಹಿತ್ಯದ ಚರ್ವಿತ ಚರ್ವಣವೇ ಇದೆ. ಬೇಕಿದ್ದೂ ಸಾಧ್ಯವಾಗದ ಕಾಮ, ಅಸಹ್ಯ ಹುಟ್ಟಿಸುವ ಕಾಮ ಮತ್ತು ಭಯ ಹುಟ್ಟಿಸುವ ಕಾಮ ಮತ್ತು ಕಾಮದ ಅರಿವಿಲ್ಲದ ಕಾಮರಾಹಿತ್ಯದ ಒಂದೊಂದು ಮುಖವನ್ನು ಇಲ್ಲಿ ಕಾಣಲು ಸಾಧ್ಯವಾಗುವಂತೆ ಇದನ್ನು ಹೆಣೆಯಲಾಗಿದೆ.

ಜಾನ್‌ನ ಪ್ರೇಯಸಿ ಎಡ್ವಿಗೆ ಜೊತೆ ಇವನ ಪ್ರೇಮ ಮತ್ತು ಕಾಮ ಕೂಡ ವಿಲಕ್ಷಣ ಬಗೆಯದ್ದೇ. ಎಡ್ವಿಗೆ ಜೊತೆ ಜಾನ್ ಸಂಬಂಧ ಒಂದು ರೀತಿಯಲ್ಲಿ ಐದನೆಯ ಅಧ್ಯಾಯದ ಕ್ರಿಸ್ತಿನಾ ಮತ್ತು ಹುಡುಗನ ಸಂಬಂಧಕ್ಕೆ ಸಂವಾದಿಯಾದದ್ದು.

He loved her as an intelligent, faithful, irreplaceable friend, not as a mistress. But it was impossible to separate mistress from friend. (ಪುಟ 266)

ಎಲ್ಲ ಇದ್ದೂ ಏನೋ ಇಲ್ಲದಂತನ್ನಿಸುವ ಈ ಸಂಬಂಧದ ಬಗ್ಗೆ ಜಾನ್ ಪ್ರಶ್ನೆಗಳನ್ನೆತ್ತಲಾರ, ಅದನ್ನು ಮುಕ್ತವಾಗಿಸಿಕೊಳ್ಳಲಾರ. ಏನೋ ಒಂದು ಬಗೆಯ ಅಲಿಖಿತ ನಿರ್ಬಂಧಕ್ಕೊಳಪಟ್ಟವನಂತೆ ಈ ಸಂಬಂಧಕ್ಕೊಳಪಟ್ಟ ಜಾನ್ ಅದರಿಂದ ಮುಕ್ತಿಯನ್ನೇನೂ ಬಯಸುತ್ತಿಲ್ಲ. ಅದನ್ನು ಕೊಂಚವೂ ಯಾವಕಡೆಗೂ ಬಾಗಿಸಿ, ತಿರುಗಿಸಿ, ಚೆಲ್ಲಾಟವಾಡಿ ಸುಲಲಿತಗೊಳ್ಳುವುದಕ್ಕೆ ಏನೇನೋ ತೊಡಕುಗಳಿವೆಯೆಂಬಂತೆ ಚಡಪಡಿಸುತ್ತಿರುವವನ ಸ್ಥಿತಿ ಇವನದು. ಆದರೆ ಈ ಸಂಬಂಧ ಒಂದು ವಿಚಿತ್ರ ರೀತಿಯಲ್ಲಿ ಸರಿಹೋಗುವುದು, ಅದು ಅದರ ಪರಿಪಕ್ವ ನೆಲೆಯಲ್ಲಿ ನೆಲೆಗೊಳ್ಳುವುದು ಸಾಧ್ಯವಾಗುವುದು ಕುತೂಹಲಕರ.

ನಲ್ವತ್ತೈದು ವರ್ಷದ ಜಾನ್ ಕೊನೆಗೂ ದೇಶ ಬಿಟ್ಟು ಹೋಗುವ ನಿರ್ಧಾರ ಕೈಗೊಂಡಿದ್ದರಲ್ಲಿ ಈ ಮೇಲಿನದ್ದರ ಪಾಲು ಎಷ್ಟಿದೆ ಎಂದು ಹೇಳುವುದು ಕಷ್ಟ. ಇದಕ್ಕೆ ಹಕ್ಕಿಗಳ ವಲಸೆಯನ್ನು ಸಂವಾದಿಯಾಗಿ ಕೊಡುವ ಕಾದಂಬರಿಕಾರ ಅದೇ ರೀತಿ ಜಾನ್‌ನ ಪ್ರೀತಿಯ ಕಾದಂಬರಿ Daphins and Chloe? ಯನ್ನು ಕುರಿತೂ ಹೇಳುತ್ತಾನೆ. ಈ ಕಾದಂಬರಿ ತೀರ ಚಿಕ್ಕ ಪ್ರಾಯದ ಇಬ್ಬರು ಮಕ್ಕಳು, ಗಂಡು-ಹೆಣ್ಣು ಪರಸ್ಪರ ಪ್ರೀತಿಯನ್ನು, ಅದಮ್ಯವಾದ ಪ್ರೀತಿಯನ್ನು ಆದರೆ ಅದರ ಅಭಿವ್ಯಕ್ತಿಗೆ ತಕ್ಕ ಆಂಗಿಕ ಸಮೃದ್ಧಿ (ವಯೋಮಾನದಿಂದಾಗಿ)ಯಾಗಲೀ, ಮನೋಧರ್ಮವಾಗಲೀ (ತಮಗೇನಾಗುತ್ತಿದೆ ಎಂಬುದರ ಪೂರ್ಣಪ್ರಮಾಣದ ಅಂದಾಜಿಲ್ಲದಿರುವುದರಿಂದ) ಇಲ್ಲದೇ ಅನುಭವಿಸುವ ಸಂಕಟವನ್ನು ವಿವರಿಸುತ್ತದೆ!

ಇಲ್ಲಿ ಹೆನ್ನಾ ಎಂಬ ಅಪ್ರತಿಮ ಸುಂದರಿಯಾದ ನಟಿಯೊಬ್ಬಳಿದ್ದಾಳೆ. ಇವಳಿಗೆ ಪಾಸರ್ ಎಂಬ ಜಾನ್‌ನ ಗೆಳೆಯನ ಮೇಲೆ ಅದಮ್ಯವಾದ ಪ್ರೀತಿ, ಅಭಿಮಾನ. ಕ್ಯಾನ್ಸರಿನಿಂದಾಗಿ ತನ್ನ ಪುರುಷತ್ವವನ್ನೇ ಕಳೆದುಕೊಂಡ, ಇನ್ನೇನು ಈಗಲೋ ಆಗಲೋ ಸಾಯಬಹುದಾದ ಸ್ಥಿತಿಯಲ್ಲಿರುವ (ಈ ಅಧ್ಯಾಯದ ಹೆಸರು border) ಈ ವ್ಯಕ್ತಿಯ ಜೊತೆ ಇವಳ ಸಾಂಗತ್ಯ, ಪ್ರೇಮ. ಈ ಸಂಬಂಧದಲ್ಲೂ ಕಾಮ ಅನಿವಾರ್ಯವಾಗಿ ಗೈರು.

ಕ್ಲೆವಿಸ್ ಕುಟುಂಬದ ಸುತ್ತ ಕತೆ ಯಾಕೆ ಹರಿಯುತ್ತದೆ ಎಂದರೆ ಈ ಪಾಸರ್ ಮತ್ತು ಕ್ಲೆವಿಸ್ ಕುಟುಂಬಕ್ಕೆ ನಂಟಿದೆ ಮತ್ತು ಹೆನ್ನಾ ಪಾಸರ್ ಜೊತೆ ಕ್ಲೆವಿಸ್ ಕುಟುಂಬದ ಜೊತೆ ಕೆಲಕಾಲ ಕಳೆದು ಬಂದಿರುತ್ತಾಳೆ. ಜಾನ್ ಈ ಕುಟುಂಬದ ಒಂದು ಕಲೆಯುವಿಕೆಯಲ್ಲಿ ಸ್ವತಃ ಬೆರೆತ ಸಂದರ್ಭದಲ್ಲೇ ಹೆಂಗಸರು, ಹೆಣ್ಣುಮಕ್ಕಳು, ಯುವತಿಯರು ತಮ್ಮತಮ್ಮ ಎದೆಯನ್ನು ಮುಚ್ಚಿಕೊಳ್ಳಬೇಕೆ ಬೇಡವೆ ಎಂಬ ಬಗ್ಗೆ ಟೀವಿಯ ಒಂದು ಚಾನೆಲ್‌ನಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿರುತ್ತದೆ. ಇಲ್ಲಿ ಬಗೆಬಗೆಯ ವಯೋಮಾನದ ಸ್ತ್ರೀಯರು ತಮ್ಮತಮ್ಮ ಎದೆ ಮುಚ್ಚಿಕೊಳ್ಳುವುದರ ಸಾಧಕ ಬಾಧಕಗಳು ಚರ್ಚೆಗೆ ಬರುವಂತೆಯೇ ಬಗೆಬಗೆಯ ವಿನ್ಯಾಸದ ಮತ್ತು ವಯೋಮಾನದ ಮೊಲೆಗಳು ಬತ್ತಲೆಯಾಗಿರುವುದರ ಅಥವಾ ಮುಚ್ಚಿಕೊಂಡಿರುವುದರ ಸಾಧಕ ಬಾಧಕಗಳು ಕೂಡಾ ಚರ್ಚೆಗೆ ಬರುತ್ತವೆ. ಮುಖ್ಯ ಇಲ್ಲಿ ಸೌಂದರ್ಯ ಪ್ರಜ್ಞೆ ಎಂಬುದು ಕೂಡಾ ಕೆಲಸ ಮಾಡುವ ನೆಲೆ ವಿಭಿನ್ನವಾದದ್ದು. ಅಂದರೆ, ಹುಡುಗಿಯರು ತೆರೆದೆದೆಯ ಎದೆಗಾರ್ತಿಯಾರಾಗುವುದು ಗಂಡಸು ನೋಡಲಿ ಎಂದೇ ಅಲ್ಲ! ಬೇಕಿದ್ದರೆ ನೋಡಿಕೊಳ್ಳಲಿ ಎಂದೂ ಅಲ್ಲ! ನೋಡಿದರೆ ನೋಡಲಿಯಲ್ಲ ಅಂತಲೂ ಅಲ್ಲ! ಅದು ತಮ್ಮ ಸ್ವಾತಂತ್ರ್ಯವನ್ನು, ಹಕ್ಕನ್ನು, ತಮ್ಮ ಸಹಜ ಸೌಂದರ್ಯವನ್ನು ಮುಚ್ಚಿಕೊಳ್ಳದಿರುವ ಎದೆಗಾರಿಕೆಯನ್ನು ಸೂಚಿಸುತ್ತದೆಂಬ ಪ್ರಜ್ಞೆಯಿಂದ ಎಂದಾದಲ್ಲಿ ನೀವಿದನ್ನು ಸರಿ, ಆಗಬೇಕಾದ್ದೇ ಎನ್ನುತ್ತೀರಾ ಅಥವಾ ವಿರೋಧಿಸುತ್ತೀರಾ ಎಂಬ ಪ್ರಶ್ನೆ ಗಹನವಾದುದೇ ಆಗಿಬಿಡುತ್ತದೆ!

Jan said to himself: At the beginning of one's erotic life, there is arousal without climax, and at the end there is climax without arousal. (ಪುಟ 278)

ಇಲ್ಲಿ ಲೈಂಗಿಕತೆಯ ಭಾವನಾತ್ಮಕ ಅಂಶಗಳು ಮತ್ತು ತಾಂತ್ರಿಕ ಅಂಶಗಳು - ಎರಡನ್ನೂ ಒಂದರಿಂದ ಇನ್ನೊಂದನ್ನು ಮುಕ್ತಗೊಳಿಸಿ ನೋಡುವ ಒಂದು ಪುಟ್ಟ ಯತ್ನವಿದೆ. ಅದು producing the little explosion which was the meaning and goal of everything ನೆಲೆಯ ಒಬ್ಬ ಹುಡುಗಿಯ ಜೊತೆ ಜಾನ್‌ನ ಹೆಣಗಾಟವನ್ನು ವಿವರಿಸುತ್ತದೆ. ಇನ್ನೊಂದು ಪ್ರಕರಣ ಒಬ್ಬ ಒಪೆರಾ ಡೈರೆಕ್ಟರ್ ಕುರಿತದ್ದು. ಅವನು ತನ್ನ ಪ್ರದರ್ಶನದ ನೃತ್ಯಗಾತಿಯರನ್ನು ರಿಹರ್ಸಲ್ ವೇಳೆಯಲ್ಲಿ ಪೂರ್ತಿ ನಗ್ನರಾಗಿರುವಂತೆ ನೋಡಿಕೊಳ್ಳುತ್ತಿದ್ದನಂತೆ. ಇದಕ್ಕೆ ಕಾರಣ ಅವರ ಚಲನೆಯನ್ನು ನಿರ್ದಿಷ್ಟವಾಗಿ ನಿರ್ದೇಶಿಸುವುದಕ್ಕೆ ಅನುಕೂಲವಾಗಲೆಂದು ಅವರ ಗುದದ್ವಾರದಲ್ಲಿ ಕೆಳಮುಖವಾಗಿ ಪೆನ್ಸಿಲ್ ಹುದುಗಿಸುವ ಕ್ರಮವನ್ನು ಅವನು ಅನುಸರಿಸುತ್ತಿದ್ದನಂತೆ! ಅವನೆಂದೂ ಆ ಹುಡುಗಿಯರನ್ನು ಮುಟ್ಟಿರದಿದ್ದರೂ ಈ ಅಸಹ್ಯ ಮತ್ತು ಶೋಷಕ ಕ್ರಮಕ್ಕಾಗಿ ಅವನು ಕೆಲಸಬಿಟ್ಟು ದೇಶಬಿಟ್ಟು ಹೋಗಬೇಕಾಯಿತಂತೆ. Disgrace!

ಇಷ್ಟರ ಮೇಲೆ ಸಾಂಘಿಕವಾದ ಲೈಂಗಿಕ ಮನೋರಂಜನೆ (ಸಾಮೂಹಿಕ ಲೈಂಗಿಕತೆ ಎಂಬ ಶಬ್ದ ಇನ್ನೇನನ್ನೋ ನೆನಪಿಸುವುದಲ್ಲವೆ?!)ಯನ್ನೇ ಕಸುಬಾಗಿಸಿಕೊಂಡ ಬಾರ್ಬರಾ ಮನೆಗೆ ಜಾನ್ ಕೊಡುವ ಒಂದು ಭೇಟಿಯ ಚಿತ್ರವೂ ಇಲ್ಲಿದೆ. ಪ್ರತಿಷ್ಠೆಗೆ ಕುಂದು ಎಂಬ ಕಾರಣಕ್ಕೆ ಅಲ್ಲಿಗೆ ಹೋಗದಿದ್ದ ಜಾನ್ ಇದೀಗ ಶಾಶ್ವತವಾಗಿ ಅಮೆರಿಕಕ್ಕೆ ಹಾರಲಿದ್ದೇನೆಂಬ ಧೈರ್ಯದಿಂದ ಇಲ್ಲಿಗೆ ಕಾಲಿಡುವ ಮನಸ್ಸು ಮಾಡುವುದು ಕೂಡ (ಎಡಿಗ್ವೇಯ ಹಿನ್ನೆಲೆಯಲ್ಲಿಯೇ) ಅರ್ಥಪೂರ್ಣವಾಗಿದೆಯಲ್ಲವೆ? ನಮ್ಮ ಶಿಸ್ತು, ಸಭ್ಯತೆ, ನಿಷ್ಠೆ ಮತ್ತು ನೀತಿ ಎಲ್ಲವೂ ಉಳಿದವರಿಗಾಗಿ ರೂಢಿಸಿಕೊಂಡಿದ್ದು ಎಂಬುದೇ ಅಂತಿಮ ಸತ್ಯವೆ?

The woman he had loved most (he was thirty at the time) would tell him (he was nearly in despair when he heard it) that she held on to life by a thread. Yes, she did want to live, life gave her great joy, but she also knew that her "I want to live" was spun from the threads of a spiderweb. It takes so little, so infinitely little, for someone to find himself on the other side of the border, where everything - love, convictions, faith, history - no longer has meaning. The whole mystery of human life resides in the fact that it is spent in the immediate proximity of, and even in direct contact with, that border, that it is separated from it not by kilometers but by barely a millimeter. (ಪುಟ 281)

ಸಿಗಬಹುದಾಗಿದ್ದ ಅಥವಾ ಹಾಗನ್ನಿಸಿದ ಆದರೆ ಆ ಕ್ಷಣಕ್ಕೆ ದಕ್ಕಿಸಿಕೊಳ್ಳಲು ಅಗತ್ಯವಾದ ಏನೋ ಉಕ್ಕಿಬರದೆ ಬಿಟ್ಟುಬಿಟ್ಟ ಮತ್ತು ಇನ್ನೆಂದೋ ಹಾಗೆ ಮಾಡಿದ ಬಗ್ಗೆ ಹಪಹಪಿಸಿದ ಹೆಣ್ಣು-ಗಂಡು ಸಂಬಂಧಗಳ ಬಗ್ಗೆಯೂ ಇಲ್ಲಿದೆ. ಅಂಥ ಸಂಬಂಧ ಹೆಚ್ಚು ಕಾಡುವಂಥದ್ದು ಎಂಬುದು ಎಲ್ಲರಿಗೂ ಗೊತ್ತಿರುವಂಥಾದ್ದೇ. ಇಲ್ಲೇ ಬರುವ ಮಾತು ಹೆಣ್ಣು ಅಂಥ ನೋಟಗಳ ಎದುರು ನಾವು ತಿಳಿದುಕೊಂಡಷ್ಟು ಅಬಲೆಯೇನಾಗಿರುವುದಿಲ್ಲ ಎಂಬುದು.

The carpenter is the hammer's master, yet it is the hammer that has the advantage over the carpenter, because a tool knows exactly how it should be handled, while the one who handles it can only know approximately how. (ಪುಟ 286)

ಇಲ್ಲಿ ಹೇಳಿದ ಬಾರ್ಬರ್ ಒಮ್ಮೆ ಪಾಸ್ಕಲ್‌ನನ್ನು ಹೇಗೆ ಗೇಲಿ ಮಾಡುತ್ತಾರೆಂದರೆ, ಅವನೆದುರೇ ಅವಳು ಮತ್ತು ಇನ್ನಿಬ್ಬರು ಹುಡುಗಿಯರು ಬಟ್ಟೆಯನ್ನೆಲ್ಲಾ ಕಳಚಿಬಿಟ್ಟು ನಿಲ್ಲುತ್ತಾರೆ. ಸ್ವತಃ ಪಾಸ್ಕಲ್‌ಗೂ ನಗ್ನನಾಗಲು ಹೇಳುತ್ತಾಳೆ. ಬಾರ್ಬರಾ ಜಗತ್ತಿನಲ್ಲಿ ಅವಳೇ ಬಾಸ್. ಅವಳ ಮನೆಗೆ ಹೋದವರು ಅವಳ ಆಜ್ಞಾಪಾಲಕರಾಗಿರ ಬೇಕಾಗುತ್ತದೆ. ಪಾಸ್ಕಲ್ ಹುಡುಗಿಯರ ಜೊತೆ ಛಾನ್ಸ್ ಸಿಕ್ಕರೆ ಇರಲಿ ಎಂದೇ ಬಟ್ಟೆ ಕಳಚುತ್ತಾನೆ. ಬಾರ್ಬರಾ ಒಂದು ಅಲಾರ್ಮ್ ಗಡಿಯಾರ ಹಿಡಿದು, ಸರಿಯಾಗಿ ಅರವತ್ತು ಸೆಕೆಂಡ್ಸ್ ಒಳಗೆ ‘ತಯಾರಾಗದಿದ್ದರೆ’ ಬಾಯ್ಮುಚ್ಚಿಕೊಂಡು ಹೊರಟು ಹೋಗಬೇಕು ಎಂದು ಆಜ್ಞಾಪಿಸುತ್ತಾಳೆ. ನಗೆಪಾಟಲಿಗೀಡಾಗಿ ಹೊರದಬ್ಬಲ್ಪಡುತ್ತಾನೆ ಪಾಸ್ಕಲ್. ಇದು ಹ್ಯಾಮರ್ ತಾನೇ ಕಾರ್ಪೆಂಟರ್ ನ ಜಾಗವನ್ನು ನಿರ್ದೇಶಿಸುವ ರೀತಿ! ಆದರೆ ಯೌವನದಲ್ಲಿ ಮತ್ತು ಆರೋಗ್ಯದಿಂದಿರುವಾಗ ಪಾಸ್ಕಲ್ ಇಂಥದೇ ಆಟವನ್ನು ಹುಡುಗಿಯರ ಜೊತೆ ಆಡಿದವನೇ ಎಂಬುದು ಜಾನ್‌ಗೆ ಗೊತ್ತು.

ಈ ಪಾಸ್ಕಲ್ ಕುರಿತ ಚರ್ಚೆಯಲ್ಲಿಯೇ ಜಾನ್ ಮತ್ತು ಎಡ್ವಿಗೆ ನಡುವಿನ ಸಂಬಂಧ ಒಂದು ವಿಲಕ್ಷಣ ಬಗೆಯಲ್ಲಿ ಸ್ಪಷ್ಟಗೊಳ್ಳುವುದು ಮತ್ತು ಅವರಿಬ್ಬರೂ ಪರಿಪಕ್ವವಾದ ಒಂದು ನೆಲೆಯಲ್ಲಿ ತಮ್ಮ ಸಂಬಂಧವನ್ನು ಕಂಡುಕೊಳ್ಳುವುದು ಸಾಧ್ಯವಾಗುವುದೇ ಒಂದು ವಿಚಿತ್ರ. ದೈಹಿಕ ಪ್ರೇಮವನ್ನು ಗಂಡುಹೆಣ್ಣು ಸಂಬಂಧದಲ್ಲಿ ಎಲ್ಲಿಡುತ್ತೀರಿ ಎಂಬುದರ ಮೇಲೆಯೇ ಗಂಡು ಹೆಣ್ಣಿನ ನಡುವೆ ಕಾಮವೆನ್ನುವುದು ಹಿಂಸೆಯೇ, ಶೋಷಣೆಯೇ, ಅಧಿಕಾರ ಸ್ಥಾಪನೆಯೇ ಅಥವಾ ನಾವೆಲ್ಲ ಅಂದುಕೊಂಡಂತೆ ಪ್ರೀತಿಯೇ ಎಂಬುದೀಗ ನಿಜವಾದ ಪ್ರಶ್ನೆ. ಇದಕ್ಕೆ ಕಾದಂಬರಿ ಕೊಡುವ ಉತ್ತರವಿಲ್ಲ. ನಿಮಗೆ ನೀವು ನೀವು ನಿಮಗೇ ಕೊಟ್ಟುಕೊಳ್ಳುವ ಉತ್ತರ ಮುಖ್ಯವಾಗುವುದು ಕೊನೆಗೂ.

ಇದೇ ಬಾರ್ಬರಾ ಮನೆಗೆ ಹೋಗುವ ಜಾನ್ ಅಲ್ಲಿ ನಕ್ಕಿದ್ದರಿಂದ (ಕಾದಂಬರಿಯ ಹೆಸರು The book of Laughter and Forgetting) ಪಾಸ್ಕಲ್ ತರವೇ ಹೊರದಬ್ಬಿಸಿಕೊಳ್ಳುತ್ತಾನೆ! ಅಮೆರಿಕಕ್ಕೆ ಹೊರಟು ಹೋಗುವ ಮುನ್ನ ಕಡಲ ಕಿನಾರೆಗೆ ಜೊತೆಯಾಗಿ ಹೋಗುವ ಜಾನ್ ಮತ್ತು ಎಡಿಗ್ವೇ ಅಲ್ಲಿ ಸರಿಸುಮಾರು ಎಲ್ಲರೂ ನಗ್ನರಾಗಿಯೇ ಇರುವುದನ್ನು ಕಂಡು ಇದು Daphin's Island ಎಂದುಕೊಳ್ಳುತ್ತಾರೆ. ಕಾದಂಬರಿ ಮರೆತಂತಿದ್ದರೂ ನಮಗಂತೂ ಮಕ್ಕಳ ದ್ವೀಪದಲ್ಲಿದ್ದ ತಮೀನಾ ಇಲ್ಲಿ ಮತ್ತೊಮ್ಮೆ ನೆನಪಾಗುವುದು ಬಹುಷಃ ಕಾದಂಬರಿ ಬಯಸಿದ ಅತ್ಯಂತ ಸಹಜವಾದ ಅಂತ್ಯವಿದ್ದೀತು!

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ