Saturday, November 10, 2012

ಭಾರತೀಯ ಇಂಗ್ಲೀಷ್ ಸಾಹಿತ್ಯ

ಕೆಲವು ವರ್ಷಗಳ ಹಿಂದೆ ನನ್ನ ಕೆಲವು ಸಾಹಿತಿ ಮಿತ್ರರ ಜೊತೆಗಿದ್ದಾಗ ಅವರು ಹೀಗೇ ಮಾತನಾಡಿಕೊಳ್ಳುವುದನ್ನು ಸುಮ್ಮನೇ ನಿಂತು ಕೇಳಿಸಿಕೊಂಡಿದ್ದೆ. ತಾತ್ಪರ್ಯವಿಷ್ಟೇ, ನಾವು ಕನ್ನಡದಲ್ಲಿ ಬರೆಯುತ್ತಿರುವುದನ್ನೆಲ್ಲ ಇಂಗ್ಲೀಷಿನಲ್ಲಿ ಬರೆದಿದ್ದರೆ ಇಷ್ಟು ಹೊತ್ತಿಗೆ ಜೀವನಕ್ಕೆ ಸಾಲುವಷ್ಟು ಹಣ ಮಾಡಿರುತ್ತಿದ್ದೆವು ಎಂಬುದು. ನನ್ನ ಇನ್ನೊಬ್ಬ ಸಾಹಿತಿ ಮಿತ್ರರು ಒಂದು ಪತ್ರಿಕೆಗೆ ಅಂಕಣ ಬರೆಯುವ ಕೋರಿಕೆ ಬಂದಾಗ ಇಂತಿಷ್ಟೇ ಕೊಡಬೇಕು ಎಂದು ಡಿಮ್ಯಾಂಡ್ ಮಾಡಿದರಂತೆ. ಕೇಳಿದಾಗ, ನೀವು ಗಬ್ಬುಗಬ್ಬಾಗಿ ಬರೆಯೋ ‘ಆ’ ಅವರಿಗೇ ಅಷ್ಟು ಕೊಡುತ್ತೀರಿ, ಹಾಗಿರುವಾಗ ನನಗ್ಯಾಕೆ ಇಷ್ಟೂ ಕೊಡಬಾರದು ಎಂದು ದಬಾಯಿಸಿದರಂತೆ. ಗಬ್ಬುಗಬ್ಬಾಗಿ ಬರೆಯೋ ‘ಅವರು’ ಒಬ್ಬ ಭಾರತೀಯ ಇಂಗ್ಲೀಷ್ ಲೇಖಕ, ಇರಲಿ. ಇವೆರಡೂ ಪ್ರಕರಣಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿಯಾಗಿದ್ದರೆ ಈ ಮೂರನೆಯದನ್ನು ನನ್ನ ಹಿರಿಯ ಸಾಹಿತಿ ಮಿತ್ರರೊಬ್ಬರು ಹೇಳಿದ್ದು. ಇವರು ಅಮೆರಿಕದಲ್ಲಿದ್ದವರು. ತುಂಬ ನಯವಿನಯದ ಮನುಷ್ಯ. ಸದ್ಯ ಭಾರತದಲ್ಲೇ ನೆಲೆಯಾಗಿದ್ದರೂ ಇನ್ನೂ ಸರಿಯಾಗಿ ಇಲ್ಲಿನವರ ಮರ್ಜಿಯನ್ನು ಹಿಡಿಯುವಲ್ಲಿ ಸಫಲರಾಗಿಲ್ಲ ಎಂದೇ ಪ್ರತಿಬಾರಿ ಭೇಟಿಯಾದಾಗಲೂ ಅನಿಸುತ್ತಿರುತ್ತದೆ. ಇವರು ಒಂದು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದರಂತೆ, ಅಲ್ಲಿ ನಮ್ಮ ಒಬ್ಬ ಪ್ರಖ್ಯಾತ ಲೇಖಕರು ಭಾಷಣ ಮಾಡುತ್ತ ತಮ್ಮ ಇಂಥಾ ಕೃತಿಯೇನಾದರೂ ಇಂಗ್ಲೀಷಿನಲ್ಲಿ ಬಂದಿದ್ದರೆ ಖಂಡಿತ ನೊಬೆಲ್ ಪ್ರಶಸ್ತಿ ಪಡೆದುಕೊಳ್ಳುತ್ತಿತ್ತು, ಈ ಕೃತಿಗೆ ಈ ಬಹುಮಾನ ಬರದೇ ಹೋಗಿದ್ದರೆ ಬರೆಯುವುದನ್ನೇ ಬಿಟ್ಟು ಬಿಡುತ್ತೇನೆಂದು ಪ್ರತಿಜ್ಞೆ ಮಾಡಿದ್ದೆ ಎಂದೆಲ್ಲ ಅಲವತ್ತು ಕೊಂಡರಂತೆ. ಇಷ್ಟಕ್ಕೇ ನನ್ನ ಸಜ್ಜನ ಮಿತ್ರ ದಂಗುಬಡಿದು ಹೋಗಿದ್ದರು.


ನಮ್ಮವರ ಇಂಗ್ಲೀಷ್ ಮೋಹ ಇವತ್ತು ನಿನ್ನೆಯದಲ್ಲ. ಆದರೆ ಸಾಹಿತಿಗಳ ಈ ಇಂಗ್ಲೀಷ್ ಮೋಹ ಸ್ವಲ್ಪ ಹೆಚ್ಚು ಆಳವಾದದ್ದು ಮತ್ತು ವಿಶೇಷ ‘ಅರ್ಥ’ ಇರುವಂಥಾದ್ದು! ಪ್ರಸಿದ್ಧಿಯ ತೆವಲು ಇಲ್ಲದ ಸಾಹಿತಿ ಬಹುಷಃ ಇಲ್ಲವೆಂದೇ ಹೇಳಬಹುದೇನೊ. ಅಂಥಾದ್ದರಲ್ಲಿ ಅಂತರ್ರಾಷ್ಟ್ರೀಯ ಪ್ರಸಿದ್ಧಿ ಹೆಚ್ಚು ಆಕರ್ಷಕವಲ್ಲವೆ? ಅಮೆರಿಕದ ಅಕ್ಕ ಸಮ್ಮೇಳನಕ್ಕೆ ಆಹ್ವಾನಿಸಲ್ಪಡಬೇಕು ಎಂದು ಆಸೆಪಟ್ಟು ಪ್ರಯತ್ನಿಸುತ್ತಿರುವ ಸಾಹಿತಿಗಳಿಗೆ ಕೊರತೆಯಿದೆಯೆ? ತಮ್ಮ ಕಾದಂಬರಿ ಇಂಗ್ಲೀಷಿಗೆ ಅನುವಾದಗೊಳ್ಳಬೇಕು ಎಂದು ಆಸೆಪಡದ ಸಾಹಿತಿ ಇರಬಹುದೆ? ಕಾಲ ಬದಲಾಗಿದೆ. ಬಡ ಶಾಲಾ ಮೇಷ್ಟ್ರುಗಳೇ ಸಾಹಿತ್ಯ ಬರೆಯುತ್ತಿದ್ದ ಕಾಲ ಹೋಯಿತು. ಬರೆದು ಬದುಕುವ ಸವಾಲು ಸ್ವೀಕರಿಸಿದ್ದ ಕಾರಂತರ ಜಮಾನದ ‘ಶ್ರೀಮಾನ್ ಸಾಹಿತಿ’ಯನ್ನು ಕೇಳುವವರೇ ಇಲ್ಲ ಇವತ್ತು. ಸಾಹಿತಿಗೆ ಭರ್ಜರಿಯಾದ ಹುದ್ದೆ, ಡೆಸಿಗ್ನೇಶನ್ ಇಲ್ಲದಿದ್ದಲ್ಲಿ ಸಾಹಿತಿಯೆನಿಸಿಕೊಳ್ಳುವುದಕ್ಕೇ ಸಾಧ್ಯವಿಲ್ಲದ ಪರಿಸ್ಥಿತಿ ಬಂದಿದೆ. ಹೀಗಿರುವಾಗ ಕಾಲಮಾನಕ್ಕೆ ತಕ್ಕ ಚಿಂತನೆ, ಆಸೆ, ಪ್ರಯತ್ನ ತಪ್ಪಲ್ಲ. ಆದರೆ ಅದು ಸಾಹಿತ್ಯವನ್ನು ಎಲ್ಲಿಗೆ ತಲುಪಿಸಿದೆ ಅಥವಾ ಸೃಷ್ಟಿಯಾಗುತ್ತಿರುವ ಸಾಹಿತ್ಯದ ಗುಣಮಟ್ಟದ ಮೇಲೆ ಇದೆಲ್ಲದರಿಂದಾಗಿ ಏನು ಪರಿಣಾಮವಾಗಿದೆ ಮತ್ತು ಅದು ಅಪೇಕ್ಷಣೀಯವಾದ ಬೆಳವಣಿಗೆಯೇ ಎಂಬುದು ಮುಖ್ಯಪ್ರಶ್ನೆ.

ಸುರೇಶ್ ಕೊಹ್ಲಿ ಈಚೆಗೆ ಸುಮಾರು ಒಂದು ಗಂಟೆ ಕಾಲಾವಧಿಯ ಒಂದು ಡಾಕ್ಯುಮೆಂಟರಿ ತರದ ಚಲನಚಿತ್ರವನ್ನು ತಯಾರಿಸಿದ್ದಾರೆ. ಅದರ ಹೆಸರು ದ ಮ್ಯಾಜಿಕಲ್ ರಿಯಲಿಸಂ ಎಂಡ್ ಆಫ್ಟರ್. 1981-2011 ಅವಧಿಯ, ಸಲ್ಮಾನ್ ರಶ್ದಿಯ ಮಿಡ್ ನೈಟ್ಸ್ ಚಿಲ್ಡ್ರನ್ ನಂತರದ ಭಾರತೀಯ ಇಂಗ್ಲೀಷ್ ಸಾಹಿತ್ಯದ ಒಂದು ನಿಟ್ಟಿನ ಪುನರಾವಲೋಕನ ಇದರ ಉದ್ದೇಶ. ಹಲವು ಮಿತಿಗಳ ನಡುವೆ ಇದೊಂದು ಉತ್ತಮ ಪ್ರಯತ್ನವೆಂದೇ ಹೇಳಬೇಕು.

ಭಾರತೀಯ ಇಂಗ್ಲೀಷ್ ಸಾಹಿತ್ಯವೆಂದರೆ ಹಲವು ಅರ್ಥಗಳನ್ನು ಕೊಡುವಂಥ ಕಾಲ ಬಂದಿದೆ. ಒಂದು, ಭಾರತೀಯ ಪ್ರಜೆ (ಅವನು ಸದ್ಯ ಜಗತ್ತಿನ ಯಾವ ಮೂಲೆಯಲ್ಲೇ ಸೆಟ್ಲ್ ಆಗಿರಲಿ) ಬರೆದಿದ್ದೆಲ್ಲವೂ ಇದರಲ್ಲಿ ಬಂತು. ಇನ್ನೊಂದು ಭಾರತೀಯನೊಬ್ಬ ಬರೆದ ಭಾರತದ ಕುರಿತಾಗಿರುವ ಸಾಹಿತ್ಯವೇ ಬೇರೆ, ಕೆನಡಾದ, ದುಬಾಯಿಯ, ಲಂಡನ್ನಿನ, ಸಿಡ್ನಿಯ ಪರಿಸರವನ್ನು ಕೇಂದ್ರದಲ್ಲಿಟ್ಟುಕೊಂಡು ಅಲ್ಲಿನ ಭಾಷೆ, ಸಂಸ್ಕೃತಿ, ಸಮಸ್ಯೆ, ಜೀವನ ಕುರಿತು ಬರೆದ ಸಾಹಿತ್ಯವೇ ಬೇರೆ. ಅದೂ ಈ ವಿಶಾಲವ್ಯಾಪ್ತಿಯ ಭಾರತೀಯ ಇಂಗ್ಲೀಷ್ ಸಾಹಿತ್ಯದಲ್ಲಿ ಸೇರಿದೆ. ತಮಾಷೆಯೆಂದರೆ, ಭಾರತದ ಬಗ್ಗೆ ತೀರ ಅಲ್ಪಸ್ವಲ್ಪ ತಿಳುವಳಿಕೆಯಿರುವ, ಜೀವಮಾನದ ಬಹುಮುಖ್ಯ ಅವಧಿಯನ್ನು ಭಾರತದ ಹೊರಗೇ ಕಳೆದ ಮಂದಿ ಕೇವಲ ಭಾರತೀಯ ಮೂಲದವರು ಎಂಬ ಕಾರಣಕ್ಕೆ ಮತ್ತು ಭಾರತದ ಕುರಿತೂ ತಮ್ಮ ತಲೆಯಲ್ಲಿರುವುದನ್ನೇ ನಂಬಿ ಬರೆದಿದ್ದಾರೆಂಬ ಕಾರಣಕ್ಕೆ ಭಾರತೀಯ ಲೇಖಕರು ಎನಿಸಿಕೊಳ್ಳುವುದು. ಇದಕ್ಕಿಂತ ತಮಾಷೆಯಾದ ಸಂಗತಿ ಭಾರತದಲ್ಲೇ ತಮ್ಮ ಜೀವಮಾನವನ್ನು ಕಳೆದವರು ಹೋಗೀ ಹೋಗಿ ಇಂಗ್ಲೀಷಿನಲ್ಲಿಯೇ ಯಾಕೆ ಬರೆದರು ಎಂಬ ಮೂಲಪ್ರಶ್ನೆ. ಅದು ಹೆಚ್ಚೂ ಕಡಿಮೆ ಈ ಲೇಖನದ ಆರಂಭದಲ್ಲಿ ಉಲ್ಲೇಖಿಸಿದಂಥ ಸಂಗತಿಗಳತ್ತಲೇ ಬಂದು ನಿಲ್ಲುತ್ತದೆ. ಗ್ಲೋಬಲ್ ಆಗುವುದು, ಗ್ಲೋಬಲ್ ಅನಿಸಿಕೊಳ್ಳುವುದು, ಬುಕರ್, ಪುಲಿಟ್ಜರ್, ನೊಬೆಲ್ ಇತ್ಯಾದಿ ಗೆಲ್ಲುವುದು...

ಈಚೆಗೆ ಹಿಂದೂ ಪತ್ರಿಕೆಯೂ ಒಂದು ಅವಾರ್ಡ್ ಕೊಡುವುದನ್ನು ಸುರುಮಾಡಿದ ಮೇಲೆ, ಜೈಪುರದ ಸಾಹಿತಿಗಳ ‘ಹಬ್ಬ’ ಹೆಚ್ಚು ಹೆಚ್ಚು ಪ್ರಚಾರಕ್ಕೆ ಬಂದ ಮೇಲೆ, ಭಾರತೀಯ ಇಂಗ್ಲೀಷ್ ಸಾಹಿತ್ಯವನ್ನು ಭಾರತದ ಓದುಗರೂ ಗಮನಿಸುವುದು ಹೆಚ್ಚಾಗಿದೆ! ಈ ಪ್ರಕ್ರಿಯೆಯ ನಿಜವಾದ ಚಾಲನೆ ಅರುಂಧತಿ ರಾಯ್ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದಾಗಲೇ ಸುರುವಾಗಿದ್ದು ಎಂಬುದು ನಿರ್ವಿವಾದ. ಸಲ್ಮಾನ್ ರಶ್ದಿ, ನೈಪಾಲ್ ಎಲ್ಲ ನಿಜವಾಗಿಯೂ ನಮ್ಮವರು ಎಂದು ಅನಿಸುತ್ತದೆಯೆ? ಆನಂತರ ಕಿರಣ್ ದೇಸಾಯಿ, ಅರವಿಂದ ಅಡಿಗ ಮುಂತಾದವರು ಜನ ಕಣ್ಣರಳಿಸಿ ನೋಡುವಂತೆ ಮಾಡಿದ ಮೇಲೆಯೇ ನಿಜಕ್ಕೂ ಅಮಿತಾವ್ ಘೋಷ್ ತರದ ಲೇಖಕರತ್ತವೂ ನಮ್ಮ ಗಮನ ಹರಿಯುವಂತಾಗಿದ್ದು ವಿಪರ್ಯಾಸಕರವಾದರೂ ನಿಜ. ಇಲ್ಲದಿದ್ದಲ್ಲಿ ಆರ್.ಕೆ ನಾರಾಯಣ್ ಜೊತೆ ಇನ್ನೂ ಒಂದಿಷ್ಟು ಕಾಲ ಕಳೆಯುತ್ತಿದ್ದೆವೇನೊ.

ಇವತ್ತು ಭಾರತೀಯ ಇಂಗ್ಲೀಷ್ ಸಾಹಿತ್ಯ ಎಂದರೆ ಕಣ್ಣಿಗೆ ಕುಕ್ಕುವುದು ಯುವಪಡೆಯೇ ಹೊರತು ಅಮಿತಾವ ಘೋಷ್, ವಿಕ್ರಮ್ ಸೇಥ್, ಕಿರಣ್ ನಗರ್ಕರ್, ಶಶಿ ದೇಶಪಾಂಡೆಯವರಂಥ ಹಳೆಯದಾಗಿ ಬಿಟ್ಟಿರುವ ತಲೆಮಾರಿಗೆ ಸೇರಿದವರಲ್ಲ. ಅರುಂಧತಿ ರಾಯ್, ಕಿರಣ್ ದೇಸಾಯಿ ತರದ ಲೇಖಕರು ಕೂಡಾ ಹಳಬರು ಈಗ. ಈಗೇನಿದ್ದರೂ ಶಶಿ ತರೂರ್, ರಾನಾ ದಾಸ್ ಗುಪ್ತ, ಅರವಿಂದ ಅಡಿಗ, ಮನು ಜೋಸೆಫ್, ಅಂಜುಂ ಹಸನ್, ರಾಹನ್ಟನ್ ಮಿಸ್ತ್ರಿ ಮತ್ತು ಇಂಥ ನೂರಾರು ಯುವಕರ ಒಂದು ಪೀಳಿಗೆಯೇ ಎದ್ದು ಕಾಣುತ್ತದೆ. ಮಂದಿಯ ಹೆಸರು ಒತ್ತಟ್ಟಿಗಿರಲಿ, ಈ ಸಾಹಿತ್ಯ ಏನಾಗಿದೆ, ಹೇಗಿದೆ ಎಂಬ ಬಗ್ಗೆ ಗಮನ ಹರಿಸಿದರೆ ಎದುರಾಗುವುದು ಒಂದು ದೊಡ್ಡ ನಿರಾಸೆಯೆಂದೇ ಹೇಳಬೇಕು.

ಕನ್ನಡದಲ್ಲಿ ಲಭ್ಯವಿರುವ ಕನ್ನಡೇತರ ಭಾರತೀಯ ಭಾಷೆಯ ಸಾಹಿತ್ಯವನ್ನು ಓದಿದರೆ ವ್ಯತ್ಯಾಸಗಳು ಎದ್ದು ಕಾಣುವಂತಿವೆ. ನ್ಯಾಶನಲ್ ಬುಕ್ ಟ್ರಸ್ಟ್ ಕೃಪೆಯಿಂದ ಮತ್ತು ಈಚೆಗೆ ಸಾಗರೋಪಾದಿಯಲ್ಲಿ ಬಂದಿರುವ ಅನುವಾದ ಸಾಹಿತ್ಯದ ಕೃಪೆಯಿಂದ ನಾವು ಸುಲಭವಾಗಿ ತಮಿಳು, ತೆಲುಗು, ಮರಾಠಿ, ಹಿಂದಿ, ಗುಜರಾಥಿ, ಬಂಗಾಳಿ, ಮಲಯಾಳಂ, ಪಂಜಾಬಿ ಸಾಹಿತ್ಯವನ್ನು ಕನ್ನಡದಲ್ಲಿ ವಿಪುಲವಾಗಿಯೇ ಓದಿಕೊಳ್ಳುವುದಕ್ಕೆ ಅವಕಾಶವಿದೆ. ತದನಂತರದಲ್ಲಿ ನಾವು ಭಾರತೀಯ ಇಂಗ್ಲೀಷ್ ಸಾಹಿತ್ಯವನ್ನು ಓದಿದರೆ ಅಲ್ಲಿ ನಮಗೆ ಸಿಗುವ ಭಾರತ ಅಸ್ತಿತ್ವದಲ್ಲೇ ಇಲ್ಲದ ಒಂದು ಕಪೋಲ ಕಲ್ಪಿತ ಭಾರತ ಎನ್ನುವ ಅನುಭವವಾದಲ್ಲಿ ಅಚ್ಚರಿಯೇನಿಲ್ಲ. ವಸ್ತುಸ್ಥಿತಿ ಇರುವುದೇ ಹಾಗೆ. ಆದರೆ ಈ ಮಾತಿಗೆ ಅಪವಾದಗಳಿವೆ ಮತ್ತು ಅವು ಕೊಂಚ ಹಳೆಯ ತಲೆಮಾರಿಗೆ ಸೇರಿದವರ ಅಥವಾ ಸೇರುತ್ತಿರುವವರ ಕೃತಿಗಳೇ ಹೊರತು ಹೊಸ ತಲೆಮಾರಿನವರ ಕೃತಿಗಳಲ್ಲ. ಯಾಕೆ ಹೀಗಾಯಿತು ಎನ್ನುವುದನ್ನು ಕೊಂಚ ಯೋಚಿಸಿದರೆ ಹೊಳೆಯುತ್ತದೆ.

ಈ ಲೇಖಕರ ಉದ್ದೇಶ ಗ್ಲೋಬಲ್ ಆಗುವುದೇ ಹೊರತು ತಮ್ಮ ಅನುಭವವನ್ನು, ತಮಗೆ ಹೇಳಬೇಕಿರುವುದನ್ನು ಹೇಳುವುದಲ್ಲವೇ ಅಲ್ಲ. ಇಂಗ್ಲೀಷಿನಲ್ಲಿ ಬರೆಯುವುದು ಮುಖ್ಯ, ತಾವು ಬರೆಯುತ್ತಿರುವುದು ಗ್ಲೋಬಲ್ ರೀಡರ್ಸ್‌ಗೆ ಮತ್ತು ಹಾಗಾಗಿ ಅದು ಅಂತರ್ರಾಷ್ಟ್ರೀಯ ಮಾನದಂಡಗಳಿಗೆ ಬದ್ಧವಾಗಿರಬೇಕಾದ್ದು ಕೂಡ ಬಹಳ ಮುಖ್ಯ. ಇಲ್ಲವಾದಲ್ಲಿ ನಿಮ್ಮ ಏಜೆಂಟ್ ಅದನ್ನು ಕಸದ ಬುಟ್ಟಿಗೆ ಹಾಕುತ್ತಾನೆ! ಈ ಏಜೆಂಟ್ ನಿಮ್ಮ ಕೃತಿಯನ್ನು ಪಾಸ್ ಮಾಡಬೇಕಾದರೆ ಅದು ಹುಟ್ಟುವ ಮೊದಲೇ ಕೂಸು ಹೇಗಿರಬೇಕು, ಅದರ ಮೂಗು ಎಷ್ಟುದ್ದ ಇರಬೇಕು, ಲಿಂಗ ಯಾವುದಿರಬೇಕು, ಎಷ್ಟು ಕೆಜಿ ತೂಗಬೇಕು, ಯಾವ ಯಾವ ಅಂಗಾಂಗ ಎಷ್ಟೆಷ್ಟು ಕೊಬ್ಬಿರಬೇಕು ಎಂದು ವಿಧಿಸಿರುತ್ತಾನೆ. ಕೆಲವೊಮ್ಮೆ ನಿಮ್ಮ ಪ್ರಕಾಶಕರು ಇದರ ಆಧಾರದ ಮೇಲೆಯೇ ನಿಮಗೆ ಸಂಭಾವನೆಯನ್ನು ಕೂಡ ಕೊಟ್ಟಿರುತ್ತಾರೆ. ಈಗ ಅದನ್ನು ಹೆರುವುದಷ್ಟೇ ನಿಮ್ಮ ಸೃಜನಶೀಲ ಸವಾಲು!

ದೊಡ್ಡ ದೊಡ್ಡ ಮಾತುಗಳು, ಡಯಲೆಕ್ಟುಗಳು, ಪುಸ್ತಕ ಬಿಡುಗಡೆ (ಲಾಂಚಿಂಗ್)ಸಮಾರಂಭಗಳು, ಗುಂಡು ಪಾರ್ಟಿಗಳು, ಗೆಟ್ ಟುಗೆದರ್‌ಗಳು, ವಿಮರ್ಶೆಗಳು, ಅವಾರ್ಡುಗಳು ಮತ್ತು ಡಿಸ್ಕೌಂಟ್ ಸೇಲುಗಳು. ಸುರೇಶ್ ಕೊಹ್ಲಿಯ ಸಿನಿಮಾದ ಉದ್ದಕ್ಕೂ ಕಾಣುವುದು ಸರಿಸುಮಾರು ಇದೇ. ಕೃತಿಗಳಲ್ಲಿ ಜೀವರಸವಿದೆಯೇ ಎಂಬ ಮಾತಿಗೆ ತೊಂಭತ್ತು ಶೇಕಡಾದಷ್ಟು ನಿರಾಶೆಯೇ ಉತ್ತರ.

ಭಾಷೆ, ಸಂಸ್ಕೃತಿ ಮತ್ತು ಜನ - ದೇಶಾತೀತವಾಗಿ ಬೆರೆಯುವುದು, ಕಲೆಯುವುದು, ಓಡಾಡುವುದು ಎಲ್ಲ ಸುರುವಾಗಿ ಬಿಟ್ಟಿರುವುದೇ ಭಾರತೀಯ ಇಂಗ್ಲೀಷ್ ಸಾಹಿತ್ಯಕ್ಕೆ ಹೊಸ ಹೆಬ್ಬಾಗಿಲನ್ನು ತೆರೆದಿದೆ ಎನ್ನುವುದು ಸೀಮಿತ ನೆಲೆಯ ನಿಜವೆನ್ನಿಸುತ್ತದೆ. ಇದು ಮೇಲ್ನೋಟಕ್ಕೆ ಕಾಣುವಷ್ಟು ನಿಜವೇ ಆಗಿದ್ದರೆ ಕನ್ನಡದಲ್ಲೆ ಬರೆಯುತ್ತ ಬಂದಿದ್ದರೂ ಉದ್ಯೋಗ ನಿಮಿತ್ತವೋ ಇನ್ನೊಂದೋ ಗ್ಲೋಬಲ್ ಆಗಿರುವ ಮಂದಿ, ಸಾಹಿತಿಗಳು ಯಾಕೆ ಹೊಸ ಬಗೆಯ, ನೆಲೆಯ ಸಾಹಿತ್ಯವನ್ನು ಕೊಡುವುದು ಸಾಧ್ಯವಾಗಲಿಲ್ಲ? ನಮ್ಮ ಬಾಗಲೋಡಿ, ಡಾ||ಯು.ಆರ್. ಅನಂತಮೂರ್ತಿ, ಶರ್ಮ, ಕಾರ್ನಾಡ್, ಚಿತ್ತಾಲ, ತಿರುಮಲೇಶ್ ಸಾಕಷ್ಟು ಕಾಲ ವಿದೇಶದಲ್ಲಿ ನೆಲೆಸಿದವರೇ, ಅಲ್ಲಿ ಶಿಕ್ಷಣ, ಅಧ್ಯಾಪನ ಮಾಡಿದವರೇ. ಎ.ಕೆ.ರಾಮಾನುಜನ್ ಅವರನ್ನು ಬಿಟ್ಟರೆ ಕನ್ನಡ ಸಾಹಿತ್ಯಕ್ಕೆ ಇಲ್ಲೇ ಬದುಕು ಸವೆಸಿದ ಲಂಕೇಶ್, ತೇಜಸ್ವಿ ತರದವರು ಕೊಡಲಾರದೇ ಹೋದ, ತೀರ ಹೊಸತೇ ಆದ ಚಮಕ್ ನೀಡಿದವರು ಬೇರೆ ಯಾರೂ ಕಾಣುವುದಿಲ್ಲ.

ನಾವು ನಮಗಾಗಿಯೇ ಬರೆದುಕೊಂಡಿದ್ದು ಇದೆಯಲ್ಲ, ಅದೇ ಕೊನೆಗೂ ನಿಲ್ಲುವುದು ಮತ್ತು ಮುಖ್ಯವಾಗುವುದು ಎನ್ನುತ್ತಾರೆ ಪ್ರಮುಖ ಪ್ರಕಾಶಕರಲ್ಲೊಬ್ಬರಾದ ಕಾರ್ತಿಕಾ ವಿ.ಕೆ. ಅರುಂಧತಿ ರಾಯ್ ಇದನ್ನೇ ಮಾಡಿದರು ಮತ್ತು ಭಾರತದತ್ತಲೇ ತಿರುಗಿ ತನ್ನ ಅನುಭವವನ್ನು ಮತ್ತು ತನಗೆ ಹೇಳಬೇಕಿರುವುದನ್ನು ಬರೆದರು, ಹಾಗಾಗಿಯೇ ಅದರಲ್ಲಿ ಮುಖ್ಯವಾದದ್ದು ಇತ್ತು. ಅದನ್ನು ಎಲ್ಲರೂ ಮುಕ್ತವಾಗಿ ಸ್ವೀಕರಿಸಿದರು ಎನ್ನುತ್ತಾರೆ ಇವರು.

ಅರುಂಧತಿ ರಾಯ್ ಕೂಡ ಇಷ್ಟೇ ಮುಖ್ಯವಾದ ಮಾತುಗಳನ್ನಿಲ್ಲಿ ಆಡಿದ್ದಾರೆ. ಇವತ್ತು ಭಾರತೀಯ ಇಂಗ್ಲೀಷ್ ಸಾಹಿತ್ಯಕ್ಕೆ ಕೂಡಾ ಮಾರ್ಕೆಟ್ ಮುಖ್ಯವಾಗಿದೆ. ಅದು ಸಾಹಿತಿಯ ಸೃಜನಶೀಲ ವೃತ್ತಿಯಲ್ಲಿ ಮೂಗು ತೂರಿಸುತ್ತಿದೆ. ಇದೆಲ್ಲ ಎಂಥಾ ಸದ್ದು ಗದ್ದಲ ಎಬ್ಬಿಸುತ್ತಿದೆ ಎಂದರೆ ಅಂತರ್ರಾಷ್ಟ್ರೀಯ ನೆಲೆಯಲ್ಲಿ ಬರೆಯುವುದು ಎಂಬುದೆ ಒಂದು ಕಾರ್ಪೊರೇಟ್ ಆಕ್ಟಿವಿಟಿ ಆಗಿಬಿಟ್ಟಿದೆ. ಇದು ತಾನು ಬರೆಯುವಾಗ ಹೀಗಿರಲಿಲ್ಲ ಮತ್ತು ತಾನು ಬರೆಯ ತೊಡಗಿದ ಕಾಲದಲ್ಲಿ ಕಾದಂಬರಿಗಳನ್ನು ಉತ್ಪಾದಿಸುವ ಒಂದು ಕಾರ್ಖಾನೆ ತೆರೆಯುವ ಉದ್ದೇಶವೇನೂ ತನಗೆ ಇದ್ದಿದ್ದಿಲ್ಲ. ಆದರೆ ಇವತ್ತು ನಿಜಕ್ಕೂ ಬರುತ್ತಿರುವ ಕಾದಂಬರಿಗಳನ್ನು, ಕಾದಂಬರಿಕಾರರನ್ನು ಗಮನಿಸಿದರೆ ನಿರಾಶೆಯಾಗುತ್ತದೆ ಯಾಕೆಂದರೆ ಅವರಲ್ಲಿ ಯಾರೂ ಈ ದೇಶದಲ್ಲಿ ನಿಜಕ್ಕೂ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಕನಿಷ್ಠ ಅರಿವನ್ನೂ ಉಳ್ಳವರಲ್ಲ. ಅವರು ತೀರಾ ಮೇಲುಸ್ತರದಲ್ಲಿಯೆ ಎಲ್ಲವನ್ನೂ ತೇಲಿಸಿಕೊಂಡು ಹೋಗುತ್ತಿರುವಂತಿದೆ ಎನ್ನುತ್ತಾರೆ ಅವರು.

ಜೈಪುರದ ಲಿಟರರಿ ಫೆಸ್ಟಿವಲ್ ಬಗ್ಗೆ ಮಾತನಾಡುತ್ತ ಲಿಟ್-ಫೆಸ್ಟ್‌ಗಳ ಆಯೋಜಕರಲ್ಲೊಬ್ಬರಾದ ಸಂಜಯ್ ರಾಯ್ ಹೇಳುತ್ತಾರೆ, ಅಲ್ಲಿ ನಾಲ್ಕೇ ದಿನಗಳಲ್ಲಿ ಏನಿಲ್ಲವೆಂದರೂ ಮುವ್ವತ್ತೇಳು ಲಕ್ಷ ಮೌಲ್ಯದ ಪುಸ್ತಕಗಳು ಖರ್ಚಾಗುತ್ತವೆ, ಇದು ಒಂದು ಪುಟ್ಟ ಪಟ್ಟಣದಲ್ಲಿ ಒಂದು ತಿಂಗಳ ವ್ಯಾಪಾರಕ್ಕೆ ಸಮಾನವಾದದ್ದು ಎನ್ನುತ್ತಾರೆ. ಲೇಖಕನ ಮಾತುಗಳನ್ನು ಕೇಳಿ, ಅವನ ಕಾಳಜಿಯನ್ನು ಅರಿತು, ಅವನು ಬರೆದ ಪುಸ್ತಕವನ್ನು ಕೊಳ್ಳುವುದು ಇದೆಯಲ್ಲ, ಅದು ಯಾವುದೆ ಮಾರ್ಕೆಟಿಂಗ್ ತಂತ್ರದಿಂದ, ವಿಮರ್ಶೆಯಿಂದ ಸಾಧ್ಯವಿಲ್ಲದ ಒಂದು ವಿನೂತನವಾದ ಪ್ರಕ್ರಿಯೆ ಎನ್ನುತ್ತಾರೆ ಅವರು. ಯಾರಾದರೂ ಒಪ್ಪತಕ್ಕ ಮಾತೇ.

ಸಾಹಿತ್ಯ ಎಂಬುದು ಇವತ್ತು ಒಂದು ಲೈಫ್ ಸ್ಟೈಲ್ ಉಕ್ತಿಯಾಗಿದೆ, ಮೊದಲಿನಂತೆ ಒಬ್ಬ ವ್ಯಕ್ತಿಯ ಅನುಭವವಾಗಿಯೋ, ವ್ಯಕ್ತಿಗತ ಏಕಾಂತದ ಅಗತ್ಯವಾಗಿಯೋ ಅದು ಉಳಿದಿಲ್ಲ ಎನ್ನಲಾಗುತ್ತದೆ. ಈ ಮಾತಿನ ಬಣ್ಣಗಾರಿಕೆಗೆ ಮರುಳಾಗದಿದ್ದರೆ ಇದೆಲ್ಲದರ ಟೊಳ್ಳುತನ ನಮಗೆ ಗೊತ್ತಾಗುತ್ತದೆ. ಓದು ಯಾವಾಗಲೂ ಸಾಮಾಜಿಕ ಪ್ರಕ್ರಿಯೆಯಾಗಿರಲೇ ಇಲ್ಲ. ಹಾಗೇನಾದರೂ ಆಗಿದ್ದರೆ ಅದು ಈಗಲ್ಲ, ಹಿಂದೆ ನಮ್ಮಲ್ಲಿ ಪುರಾಣ ಪ್ರವಚನ, ಕಾವ್ಯವಾಚನ, ಗಮಕಿಗಳ ವಾಚನ ಎಲ್ಲ ನಡೆಯುತ್ತಿತ್ತಲ್ಲ ಅಲ್ಲಿ ಮತ್ತು ಇವತ್ತಿಗೂ ಇಲ್ಲೆಲ್ಲ ಇರುವ ತಾಳಮದ್ದಲೆಯಂಥವೇ ಕೆಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲೇ ಹೊರತು ಜೈಪುರದ ಲಿಟರರಿ ಫೆಸ್ಟಿವಲ್ ಮೂಲಕ ಸಾಧ್ಯವಾಗುತ್ತಿರುವ ಹೊಸ ಸಂಗತಿಯಾಗಿ ಅಲ್ಲ.

ಈ ಚಲನಚಿತ್ರದಲ್ಲಿ ಗಮನಸೆಳೆದ ಇನ್ನೊಂದು ಸಂಗತಿಯೇನೆಂದರೆ ಕೊನೆಯ ಭಾಗದಲ್ಲಿ ಮಾತನಾಡಿದ ಸಾಹಿತಿ ಮತ್ತು ವಿಮರ್ಶಕ ಫಾರೂಕ್ ಧೋಂಡಿ ಹೇಳಿರುವ ಕೆಲವು ಮಾತುಗಳು. ಇವರು ಹೇಳುತ್ತಾರೆ ಭಾರತದಲ್ಲಿ ನಿಮಗೆ ಮೂರು ಸಂಗತಿಗಳು ದೊರೆಯುತ್ತವೆ. ಒಂದು, ತೀರಾ ಸಂಕೀರ್ಣವಾದ ಒಂದು ಸಮಾಜವ್ಯವಸ್ಥೆ. ಇದನ್ನು ಅರ್ಥ ಮಾಡಿಕೊಳ್ಳುವುದೇ ಅಸಾಧ್ಯ ಎಂಬಷ್ಟರ ಮಟ್ಟಿಗೆ ಇದು ಸಂಕೀರ್ಣವಾಗಿದೆ. ಎರಡನೆಯದು ಒಂದು ಬಗೆಯ ಪೊಳ್ಳು ಆಧ್ಯಾತ್ಮ. ಮತ್ತು ಮೂರನೆಯದಾಗಿ, ತೀರಾ ಸುಭದ್ರ ನೆಲೆಗಟ್ಟನ್ನು ಹೊಂದಿರುವ ಒಂದು ಕುಟುಂಬ ವ್ಯವಸ್ಥೆ. ಇದು ಸಂಕೀರ್ಣವಾದ ವ್ಯಕ್ತಿಗತ ಮತ್ತು ಸಾಮಾಜಿಕ ನೆಲೆಗಳನ್ನು ಅರ್ಥೈಸಿಕೊಳ್ಳುವುದಕ್ಕೆ ನೆರವಾಗುವಂಥ ಒಂದು ನೆಲೆಯನ್ನು ವ್ಯಕ್ತಿಗೂ (ಸಾಹಿತಿಗೂ) ಒದಗಿಸುತ್ತದೆ. ಹಾಗಾಗಿ ಇಲ್ಲಿ ತೀರ ಸ್ಕೆಚೀ ರಾಜಕೀಯ ಹಂದರವುಳ್ಳ ಕಾದಂಬರಿಗಳು ಬಂದರೂ ಅಂತಿಮವಾಗಿ ಅವು ಕೌಟುಂಬಿಕ ನೆಲೆಗಟ್ಟಿಗೇ ಅಂಟಿಕೊಳ್ಳುವುದು ಗಮನಕ್ಕೆ ಬರುತ್ತದೆ ಎನ್ನುತ್ತಾರವರು. ಇದರ ಹೊರತಾಗಿ ಬರೆಯುವುದಕ್ಕೂ, ಕಾದಂಬರಿ ಬರೆಯುವುದಕ್ಕೆ ಬೇಕಾಗುವಷ್ಟು ಭಾರತದ ಕುರಿತ ವಿಷಯವೂ ಈ ಲೇಖಕರ ಬಳಿ ಇಲ್ಲ ಎಂದೂ ಅವರು ಸೇರಿಸುತ್ತಾರೆ. ಇದೇ ರೀತಿ ಸ್ಥಳೀಯ ಪ್ರಭಾವಗಳೇ ಸಾಹಿತಿಗೆ ಮುಖ್ಯವಾದ ಪ್ರಚೋದನೆಗಳನ್ನು ಒದಗಿಸುತ್ತದೆ ಎನ್ನುವವರಲ್ಲಿ ಮನು ಜೋಸೆಫ್ ಕೂಡಾ ಇದ್ದಾರೆ.

ಕಿರಣ್ ನಗರ್ಕರ್, ಸೈರಿಸ್ ಮಿಸ್ತ್ರಿ, ಅರವಿಂದ ಅಡಿಗ, ಜುಂಪಾ ಲಾಹಿರಿ, ಅಂಜುಂ ಹಸನ್ ಮುಂತಾದ ಅನೇಕರು ಇಲ್ಲಿ ಕಾಣಿಸಿಕೊಂಡಿಲ್ಲ. ಮಾತನಾಡಿದ ಅಮಿತಾವ ಘೋಷ್, ವಿಕ್ರಂ ಸೇಥ್, ಉಪಮನ್ಯು ಮುಂತಾದವರು ಅರ್ಥಪೂರ್ಣವಾದ, ಮುಖ್ಯ ಎನಿಸುವ ಮಾತುಗಳನ್ನೇನೂ ಆಡಿಲ್ಲ. ಭಾರತೀಯ ಭಾಷೆಯಲ್ಲಿ ಬರುತ್ತಿರುವ ಭಾರತೀಯ ಸಾಹಿತ್ಯ ಮತ್ತು ಇಂಗ್ಲೀಷಿನಲ್ಲಿ ಬರುತ್ತಿರುವ ಭಾರತೀಯ ಸಾಹಿತ್ಯ ಎರಡರ ತೌಲನಿಕ ಅಧ್ಯಯನ, ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ ನಡೆಯಬೇಕಿದ್ದೂ ನಡೆದಿಲ್ಲದಿರುವುದು ಅಪೂರ್ಣತೆಯ ಭಾವವನ್ನು ಮನದಲ್ಲಿ ಉಳಿಸುವ ಇನ್ನೊಂದು ಅಂಶ.

No comments: