Monday, November 12, 2012

ಹುಣಿವಿ ಚಂದಿರನ ಹೆಣಾ ಬಂತು ಮುಗಿಲಾಗ ತೇಲತಾ ಹಗಲ!

ಒಂದು ಕಾದಂಬರಿ ಬದುಕನ್ನು ಸಮಗ್ರವಾಗಿ ಗ್ರಹಿಸಬೇಕು ಮತ್ತು ಅದನ್ನು ಆ ಎಲ್ಲ ಸಮಗ್ರತೆಯೊಂದಿಗೇ ಓದುಗನಿಗೆ ಕಟ್ಟಿಕೊಡಬೇಕು ಎನ್ನುವುದನ್ನು ಒಪ್ಪುವುದಾದರೆ, ಜೋಸೆಫ್ ಓ ನೀಲ್ ಅವರ ನೆದರ್ಲ್ಯಾಂಡ್ ಕಾದಂಬರಿ ನಿಮಗೆ ಇಷ್ಟವಾಗುತ್ತದೆ. ಒಂದು ದೇಶದಲ್ಲಿ ಇಡೀ ಜಗತ್ತೇ ತಲ್ಲಣಗೊಳ್ಳುವಂಥ ದುರಂತವೊಂದು ನಡೆಯುತ್ತದೆ. ಸಾವಿರಾರು ಮಂದಿ ಸಾಯುತ್ತಾರೆ. ಒಬ್ಬರನ್ನು ಒಬ್ಬರು ಅನುಮಾನದಿಂದಲೇ ಕಾಣುವಂಥ ಸ್ಥಿತಿ, ಮನುಷ್ಯ ಮನುಷ್ಯರ ನಡುವೆ ಸಹಜ ವ್ಯವಹಾರ ಕಷ್ಟವಾದ ಸ್ಥಿತಿ ನಿರ್ಮಾಣವಾಗುತ್ತದೆ ಮತ್ತು ಇದೆಲ್ಲ ತಿಳಿಗೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತದೆ. ಆ ಒಂದು ಸಂಕ್ರಮಣ ಕಾಲಘಟ್ಟದಲ್ಲಿ ಆ ದೇಶದವರೇ ಎದುರಿಸುವ ಒಂದು ಪರಿಸ್ಥಿತಿಗೂ ಹೊರಗಿನವರು ಅದೇ ಸಂದರ್ಭದಲ್ಲಿ ಎದುರಿಸುವ ಪರಿಸ್ಥಿತಿಗೂ ಸಹಜವಾಗಿಯೇ ವ್ಯತ್ಯಾಸಗಳಿರುತ್ತವೆ. ಉದ್ಯೋಗನಿಮಿತ್ತವೋ, ಪ್ರವಾಸಕ್ಕೆ ಬಂದೋ ಸಿಕ್ಕಿಹಾಕಿಕೊಂಡವರ ಸ್ಥಿತಿ ಒಂದು ತರವಾದರೆ ಅಲ್ಲೇ ನೆಲೆಯಾದವರ ಸಮಸ್ಯೆ ಇನ್ನೊಂದು ತರ. ಅದರಲ್ಲೂ ಆ ದೇಶದ ಪ್ರಜೆಯನ್ನು ಮದುವೆಯಾಗಿ ಮಕ್ಕಳನ್ನೂ ಪಡೆದವರಿದ್ದರೆ ಅವರ ಮತ್ತು ಅವರ ಮಕ್ಕಳ ಸಮಸ್ಯೆಗಳು ಇನ್ನೊಂದೆ ಬಗೆಯಾಗಿರುತ್ತವೆ. ಆ ದೇಶಕ್ಕೆ ಹೊರಗಿನವರಾದ ಮಂದಿ ಸಾಂಸಾರಿಕ ಚೌಕಟ್ಟಿನಲ್ಲಿ ದಂಪತಿಗಳ ನಡುವೆ ಮತ್ತು ಮಕ್ಕಳ ನಡುವೆ, ನಂತರ ಹತ್ತಿರದ ಸಂಬಂಧಿಕರೂ ಒಳಗೊಳ್ಳುವ ಕೌಟುಂಬಿಕ ನೆಲೆಯಲ್ಲಿ, ಸಮಾಜದ ಸಂದರ್ಭದಲ್ಲಿ ಎದುರಿಸಬೇಕಾಗಿ ಬರುವ ತಲ್ಲಣಗಳು, ಸಂಕಟಗಳು ಹೇಗೆಲ್ಲ ಇರಬಹುದು ಎನ್ನುವುದರ ಸುತ್ತ ಮತ್ತು ಒಟ್ಟಾರೆಯಾಗಿ ಈ ಎಲ್ಲ ಸಂಬಂಧಗಳ ಅನಿರೀಕ್ಷಿತ ಪಲ್ಲಟವನ್ನು ವೈಯಕ್ತಿಕವಾಗಿ ಮುಖಾಮುಖಿಯಾಗುವ ಪಾತಳಿಯನ್ನು ವಿಶ್ಲೇಷಿಸುವುದು ಕುತೂಹಲಕರ ಒಳನೋಟಗಳನ್ನು ನೀಡುತ್ತದೆ. ಇಂಥ ಅನೇಕ ಕೃತಿಗಳು ಅಮೆರಿಕದಲ್ಲಿ, ಟ್ರೇಡ್ ಸೆಂಟರ್ ಪತನದ ನಂತರದಲ್ಲಿ ಅದನ್ನೇ ಕೇಂದ್ರವಾಗಿಟ್ಟುಕೊಂಡು ಬಂದಿವೆ. ಅವುಗಳಲ್ಲಿ ಪೆನ್/ಫಾಲ್ಕನರ್ ಪ್ರಶಸ್ತಿ ಪಡೆದ, ನ್ಯೂಯಾರ್ಕ್ ಟೈಮ್ಸ್ ಪುಸ್ತಕ ಪರಾಮರ್ಶನದಲ್ಲಿ ವರ್ಷದ ಶ್ರೇಷ್ಠ ಕೃತಿಯೆಂದು ಪರಿಗಣಿಸಲ್ಪಟ್ಟ ಮತ್ತು ತನ್ನ ಭಾಷೆಗಾಗಿ ಬಹಳಷ್ಟು ಹೊಗಳಿಸಿಕೊಂಡ ಕಾದಂಬರಿ ಓ ನೀಲ್‌ ಬರೆದ ನೆದರ್ಲ್ಯಾಂಡ್. ಇದು ಪ್ರಕಟವಾದದ್ದು 2008ರಲ್ಲಿ.


ಇಲ್ಲಿನ ನಿರೂಪಕ ಹ್ಯಾನ್ಸ್ ಒಬ್ಬ ಆರ್ಥಿಕ ತಜ್ಞ. ಮೂಲತಃ ನೆದರ್ಲ್ಯಾಂಡ್‌ನವನಾದ ಈತನ ಪತ್ನಿ ಮೂಲತಃ ಬ್ರಿಟನ್ ಪ್ರಜೆ. ಒಟ್ಟಿನಲ್ಲಿ ಇವರು ಸದ್ಯಕ್ಕೆ ನೆಲೆನಿಂತ ಅಮೆರಿಕಕ್ಕೆ ಹೊರಗಿನವರು. ಹಾಗೆಯೇ ಈ ಕಾದಂಬರಿಯ ಇನ್ನೊಂದು ಪ್ರಮುಖ ಅಥವಾ ‘ನಾಯಕ’ ಪಾತ್ರ ಚಕ್ ರಾಮ್‌ಕಿಸೂನ್ ಕೂಡ ಟ್ರಿನಿದಾದ್‍ನವನು. ಇಲ್ಲಿಯೇ ಗಮನಿಸಬೇಕಾದ್ದು, ಇವತ್ತು ಅಮೆರಿಕಕ್ಕೆ ನಿಜವಾದ insider ಯಾರೂ ಇರುವಂತೆ ಕಾಣುವುದಿಲ್ಲ ಎಂಬುದನ್ನು. ಹೊಟ್ಟೆಪಾಡಿಗೆ ನ್ಯೂಯಾರ್ಕ್ ಸಿಟಿ ಸೇರಿಕೊಂಡ ಇವರನ್ನು ತಲ್ಲಣಗೊಳಿಸಿರುವುದು 9/11 ದುರ್ಘಟನೆ. ಭಯ, ಆತಂಕ ಅಥವಾ ಮುಂದೇನೋ ಎನ್ನುವ ಪ್ರಶ್ನೆ ಕೇವಲ ಆರ್ಥಿಕ ನೆಲೆಗಟ್ಟಿನದಾಗಿ ಉಳಿಯುವುದಿಲ್ಲ. ಅದು ಅದುವರೆಗೆ ಸ್ಥಾಪಿತವಾಗಿದ್ದ ಮನುಷ್ಯ ಸಂಬಂಧಗಳನ್ನೇ ಹೊಸದಾಗಿ ವ್ಯಾಖ್ಯಾನಿಸುವ ಕ್ರೌರ್ಯವನ್ನು, ಅಪಸ್ವರವನ್ನು, ಅಸಹ್ಯವೂ ಅಮಾನವೀಯವೂ ಆದ ಒಂದು ಅನಿವಾರ್ಯವನ್ನು ಸೃಷ್ಟಿಸಿದೆ.


ಇಲ್ಲಿ ವಾಸ್ತವವಾಗಿ ಕಥಾನಕದ ಹಂದರ ಇರುವುದು ಹ್ಯಾನ್ಸ್ ಮತ್ತು ಆತನ ಪತ್ನಿ-ಮಗನ ಸಂಬಂಧಗಳು, ಚಕ್ ರಾಮ್‌ಕಿಸೂನ್‌ನ ವ್ಯವಹಾರ, ಸಂಬಂಧಗಳು, ಕ್ರಿಕೆಟ್ ಮತ್ತು ನಿಗೂಢವಾದ ಅವನ ಸಾವು - ಇವುಗಳ ಸುತ್ತ! ಯಾವ ಕಾದಂಬರಿಕಾರನಿಗಾದರೂ ಈ ಗಂಡು ಹೆಣ್ಣು ಸಂಬಂಧಗಳು, ಲೈಂಗಿಕತೆ, ವಿರಸ ಮತ್ತು ಹೌದೂ ಅಲ್ಲ ಎಂಬಂತೆ ಹುಟ್ಟಿಕೊಳ್ಳುವ ಬಿರುಕು ಮಾತಲ್ಲಿ ಸ್ಪಷ್ಟವಾಗಲಾರದೇ ಒದ್ದಾಡುತ್ತ - ದೂರವಾಗುತ್ತಿರುವ ಭಾವವೊಂದು ಕಾರಣದ ಬೇರುಗಳನ್ನು ಬಿಟ್ಟುಕೊಡದೆಯೇ ಸತಾಯಿಸುತ್ತ - ಕೊನೆಗೊಮ್ಮೆ ತೀರ ತಡವಾಗಿ ಮುಖಕ್ಕೆ ರಾಚಿದಂತೆ ತನ್ನ ನೀಚ ಹಲ್ಲುಗಳನ್ನು ತೋರಿಸಿ ಘಟಸ್ಫೋಟಕ್ಕೆ ಕಾರಣವಾಗುವಾಗಲೂ ಕರುಳಕುಡಿಯ ಸೆಳೆತಗಳು ಹುಟ್ಟಿಸುವ ಸೂಕ್ಷ್ಮವಾದ ಸಂವೇದನೆಗಳ ನೆಲೆಯೇ ಅವನ ಪೂರ್ತಿ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಸವಾಲಿಗೊಡ್ಡಲು ಸಾಕು. ಇದರೊಂದಿಗೇ ಸಮಕಾಲೀನ ರಾಜಕೀಯ-ಆರ್ಥಿಕ ಸಂಘರ್ಷವನ್ನು ಕಥಾನಕದ ಎಳೆಯೊಂದಿಗೇ ಓದುಗನ ಲವಲವಿಕೆಯನ್ನು ಕೆಡಿಸದೇ ನೇಯುವುದು ದೊಡ್ಡ ಸವಾಲು. ಇದನ್ನು ಮಾಡುವಾಗಲೂ ಜೋಸೆಫ್ ಓ’ನೀಲ್ ಕೊಲೆ, ಸುಲಿಗೆ, ಜೂಜು ಮತ್ತು ಭೂಗತ ಜಗತ್ತಿನ ರೋಚಕತೆಯನ್ನು ತನ್ನ ಕಾದಂಬರಿಯ ಆಕರ್ಷಣೆಗೆ ಬಳಸಿಕೊಳ್ಳುವುದಿಲ್ಲ ಎನ್ನುವುದನ್ನು ಮರೆಯಬಾರದು, ಅಂಥ ವಿಪುಲ ಅವಕಾಶಗಳಿದ್ದರೂ. 

ಕಾದಂಬರಿಯ ಉದ್ದಕ್ಕೂ ದುರ್ಘಟನೆಯ ಛಾಯೆಯನ್ನು ಅತ್ಯಂತ ಸಂಯಮದಿಂದ ಕಾಯ್ದುಕೊಂಡು ಬಂದಿರುವುದೇ ಈ ಕಾದಂಬರಿಯ ನಿಜವಾದ ಯಶಸ್ಸು ನಿರ್ಧರಿಸಿದ ಅಂಶ ಎನ್ನಬೇಕು. ಇದಕ್ಕೆ ಓ’ನೀಲ್‌ಗೆ ಸಹಾಯ ಮಾಡಿದ ಅಂಶಗಳು ಮೂರು. ಒಂದು ಸ್ವತಃ ಜೋಸೆಫ್ ಓ’ನೀಲ್‌ನ ‘outsider' ಅನುಭವಗಳು. ಈತ ಹುಟ್ಟಿದ್ದು (1964) ಐರ್ಲ್ಯಾಂಡಿನಲ್ಲಿ. ಬೆಳೆದಿದ್ದು, ಓದಿದ್ದು ಎಲ್ಲ ಮೊಂಜಾಬಿಕ್, ದಕ್ಷಿಣ ಆಫ್ರಿಕಾ, ಇರಾನ್, ಟರ್ಕಿ ಮತ್ತು ಹೊಲ್ಯಾಂಡ್‌ಗಳಲ್ಲಿ. ಸದ್ಯ ನ್ಯೂಯಾರ್ಕಿನಲ್ಲಿ ಸಂಸಾರ ಸಮೇತ ಬದುಕುತ್ತಿರುವ ಓ’ನೀಲ್‌ಗೆ ಅಮೆರಿಕ ಹಾಯ್ದುಹೋದ ತಲ್ಲಣವನ್ನು ಸೂಕ್ಷ್ಮವಾಗಿ ಗಮನಿಸಲು ಇದು ಸಹಕಾರಿಯಾಗಿತ್ತು. ಎರಡನೆಯದು, ಕಾದಂಬರಿಯ ಮೂರು ಕೇಂದ್ರ ಪಾತ್ರಗಳು ಮೂರು ದೇಶಗಳಿಗೆ ಸಂಬಂಧಿಸಿದವು ಎಂಬುದು. ಓ’ನೀಲ್ ಕಾದಂಬರಿಯಲ್ಲಿ ಅಮೆರಿಕದವರೇ ಆಗಿ ಕಾಣಿಸಿಕೊಳ್ಳುವ ಹಲವರಿದ್ದಾರೆ, ಕಾದಂಬರಿಯ ರಂಗಭೂಮಿಯೇ ನ್ಯೂಯಾರ್ಕ್ ಮತ್ತು ಬ್ರಿಟನ್. ಆದರೆ ಮುಖ್ಯಪಾತ್ರಗಳೆಲ್ಲವೂ ಈಗಾಗಲೇ ಹೇಳಿರುವಂತೆ ಅರೆ-ಅಮೆರಿಕನ್. ಇನ್ನು ಮೂರನೆಯದು, ತುಂಬ ಜಾಣತನದ ತಾಂತ್ರಿಕ ಪ್ರಯೋಗವಾಗಿ ಓ’ನೀಲ್ ಇಲ್ಲಿ ಕ್ರಿಕೆಟ್ ಕುರಿತ ಸುದೀರ್ಘ ವಿದ್ಯಮಾನವೊಂದನ್ನು ತಂದಿರುವುದು! ನಮಗೆಲ್ಲ ತಿಳಿದೇ ಇರುವಂತೆ ಅಮೆರಿಕದಲ್ಲಿ ಕ್ರಿಕೆಟ್ ಇವತ್ತಿಗೂ ನೆಲೆಯಾದ ಕ್ರೀಡೆಯಲ್ಲ. ಆದರೆ ಬ್ರಿಟನ್ನಿನದೇ ಒಂದು ವಿಸ್ತೃತ ಅಂಗದಂತಿರುವ ಅಮೆರಿಕನ್ ಗಣರಾಜ್ಯದಲ್ಲಿ ಕ್ರಿಕೆಟ್ ಇವತ್ತಿಗೂ ಹೊರಗೇ ನಿಂತಂತೆ ಇರುವುದರಲ್ಲೇ ಏನೋ ಒಂದು ವಿಪರ್ಯಸವಿರುವಂತಿದೆ. ಇಲ್ಲಿ ಟಿನಿದಾದ್‌ನಿಂದ ಬಂದ ರಾಮ್‌ಕಿಸೂನ್ ಕ್ರಿಕೆಟ್ ಪುನರುಜ್ಜೀವನ ಪ್ರಕ್ರಿಯೆಯಲ್ಲಿ ತನ್ನನ್ನೇ ತಾನು ಯಾವಮಟ್ಟ ತೊಡಗಿಸಿಕೊಂಡಿದ್ದಾನೆಂದರೆ ಅವನು ಅಲ್ಲಿನ ಅಮೆರಿಕನ್ ಮತ್ತು ಅಮೆರಿಕನ್ನೇತರ ಮನಸ್ಸುಗಳ ಅಧ್ಯಯನವನ್ನೇ ಕ್ರಿಕೆಟ್ ಮೂಲಕ ನಡೆಸುತ್ತಿರುತ್ತಾನೆ! ಕ್ರಿಕೆಟ್ ಮೂಲಕ ವಿಶ್ವಮಾನವ ಸೌಹಾರ್ದ ಮತ್ತು ಶಾಂತಿ ಸ್ಥಾಪನೆಯ ಕನಸಿದೆ ಅವನಲ್ಲಿ!

ಹಾಗೆ ನೋಡಿದರೆ ಕಾರಣವನ್ನೇನೂ ಸ್ಪಷ್ಟವಾಗಿ ತಿಳಿಸದೆ ದೂರವಾದ, ಅಥವಾ ಅದನ್ನಾದರೂ ಕಂಡುಕೊಳ್ಳುವಲ್ಲಿ ಸ್ವತಃ ಸೋತವನಂತೆ ಕಾಣುವ ಹ್ಯಾನ್ಸ್ ಹೆಂಡತಿ ದೂರವಾದದ್ದೇ ಬಳಲಿದಂತಾಗಿದ್ದಾನೆ. ಹೆಂಡತಿಗಾಗಿ ಇವನಿನ್ನೂ ಹಂಬಲಿಸುತ್ತಿದ್ದಾನೆ. ಈ ಹಂಬಲಿಕೆಯೇ ಚಕ್ ಜೊತೆ ಒಂದು ವಿಲಕ್ಷಣವಾದ ಸಂಬಂಧ ಬೆಸೆದುಕೊಳ್ಳಲು ಕಾರಣವಾದಂತಿದೆ. ಈ ಮೇಲ್ನೋಟಕ್ಕೆ ಕ್ರಿಕೆಟಿಗನಂತೆ ಕಾಣುವ ಚಕ್‌ನದ್ದು ನೂರು ಬಗೆಯ ವ್ಯವಹಾರ, ಏನೋ ನಿಗೂಢತೆ. ಇನ್ನೊಂದು ನೆಲೆಯಿಂದ ಎಲ್ಲವೂ ಅಮೆರಿಕದಲ್ಲಿ ಕ್ರಿಕೆಟ್ಟಿಗೊಂದು ಗಟ್ಟಿಯಾದ ನೆಲೆಯನ್ನು ಒದಗಿಸಿಕೊಡುವ ಒಂದೇ ಉದ್ದೇಶದತ್ತ ಮುಖಮಾಡಿದ ಪ್ರಯತ್ನಗಳಾಗಿ ಕಾಣಿಸುತ್ತದೆ. ಅದಕ್ಕಾಗಿಯೇ ಇನ್ನಿಲ್ಲದ ಅಪಾಯವನ್ನು ಮೈಮೇಲೆಳೆದುಕೊಳ್ಳುತ್ತಿರುವಂತೆ ಕಾಣುವ ಈ ಮಹಾ ಲವಲವಿಕೆಯ, ಜೀವಂತಿಕೆಯ ಮತ್ತು ಎದೆಗಾರಿಕೆಯ ಮನುಷ್ಯ ಅದನ್ನು ಶಾಂತಿಸ್ಥಾಪನೆಯ ಒಂದೇ ಒಂದು ಮತ್ತು ಪರಿಪಕ್ವವಾದ ಸಾಧ್ಯತೆ ಎಂದೇ ಬಲವಾಗಿ ನಂಬಿದ್ದಾನೆ. ಕಾನೂನು, ಕಟ್ಟುಕಟ್ಟಳೆಗಳ ಮುಳ್ಳಿನ ಬೇಲಿಯನ್ನು ತನ್ನ ಘನೋದ್ದೇಶಗಳಿಗಾಗಿ ಹೇಗೆ ಸರಿಸಿಕೊಳ್ಳಬೇಕೆಂಬುದನ್ನು ಬಲ್ಲ ಚಾಣಕ್ಯನಂತಿರುವ ಚಕ್ ಬಲಿಯಾಗುವುದು ಮಾತ್ರ ತನ್ನದೇ ಶಿಷ್ಯನಿಂದ! ಇಡೀ ಕಾದಂಬರಿಯ ಜೀವಕೇಂದ್ರದಂತಿರುವ ಚಕ್ ಎಲ್ಲೋ ಒಂದು ಕಡೆ ಅಮೆರಿಕದ ಅಸಹಾಯಕತೆಯನ್ನೂ, ಕನಸುಗಾರಿಕೆಯನ್ನೂ, ಹಣದ ಥೈಲಿಯ ಮೋಹಕತೆಯನ್ನೂ ಮತ್ತದರ ದುರಂತವನ್ನೂ ಅನ್ಯತ್ರ ಅಸಾಧ್ಯವೆಂಬಂತೆ ಸಾಂಕೇತಿಸುತ್ತಿದ್ದಾನೆ ಅನಿಸಿದರೆ ಅಚ್ಚರಿಯೇನಿಲ್ಲ. ಅಚ್ಚರಿಯೇನಿದ್ದರೂ ಜೋಸೆಫ್ ಓ’ನೀಲ್ ಅದನ್ನೆಲ್ಲ ಕಾದಂಬರಿಯ ಚೌಕಟ್ಟಿನೊಳಗೇ ತಂದು ಕೂರಿಸಿರುವ ಮಾಯಕತೆಯ ಬಗ್ಗೆ ಮಾತ್ರವೇ!

ಇಲ್ಲಿ ಜೋಸೆಫ್ ಓ’ನೀಲ್ ಕೂಡ ಬೇರೆ ಕೆಲವು ಕಾದಂಬರಿಕಾರರಂತೆಯೇ ಅಮೆರಿಕದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಕೊಂಚ ಹೆಚ್ಚೇ ವಿವರವಾಗಿ ತರುತ್ತಾನೆ. ಇದರಲ್ಲೇ ಓ’ನೀಲ್ ತನ್ನ ಕಾದಂಬರಿಯ ಕಥಾನಕದ ಓಟಕ್ಕೆ ಅಗತ್ಯವಾದ ಎಷ್ಟೆಲ್ಲ ಅಂಶಗಳನ್ನು ದುಡಿಸಿಕೊಳ್ಳುತ್ತಾನೆಂಬುದನ್ನು ಒಂದು ಪುಟ್ಟ ಉದಾಹರಣೆಯೆಂಬಂತೆ ಗಮನಿಸಬಹುದು. ಒಂದು, ಹ್ಯಾನ್ಸ್ ಮತ್ತು ರಾಮ್‌ಕಿಸೂನ್ ಸಂಬಂಧ ಗಾಢವಾಗಲು ಇದು ಕಾರಣವಾಗುತ್ತದೆ. ಬಹುಷಃ ಹ್ಯಾನ್ಸ್ ತನ್ನ ಪತ್ನಿ ಅದಾಗಲೇ ಬ್ರಿಟನ್ನಿಗೆ ಹಾರಿ ಹೋಗದೇ ಜೊತೆಗೇ ಇರುತ್ತಿದ್ದರೆ ರಾಮ್‍ಕಿಸೂನ್ ಬಳಿ ನಿಕಟವಾಗುವುದು ಸಾಧ್ಯವಾಗುತ್ತಿರಲಿಲ್ಲ. ಒಂಟಿತನದ ನೋವನ್ನು ಮರೆಯಲು ಹುಡುಕಿಕೊಂಡು ಹೋದ, ಪಡೆದ ಮತ್ತು ಆತುಕೊಂಡ ಸಂಬಂಧದಂತಿದೆ ಇದು. ಇನ್ನೊಂದು, ಇಂಥ ಲೈಸೆನ್ಸ್ ಪಡೆಯುವಂಥ ಪ್ರಕ್ರಿಯೆಗಳಲ್ಲೆಲ್ಲ ರಾಮ್‌ಕಿಸೂನ್‌ ಅನುಸರಿಸುವ ಹಾದಿ ನೇರವಾದದ್ದಲ್ಲ. ಅದರಲ್ಲಿ ಸಮಯ ಹಾಳುಮಾಡುತ್ತ ಕೂರಲು ಅವನಿಗೆ ಪುರುಸೊತ್ತಿದ್ದರಲ್ಲವೆ? ಹಾಗಾಗಿ ಇಲ್ಲಿ ಅಮೆರಿಕನ್ ಸರಕಾರೀ ಯಂತ್ರದ ಭ್ರಷ್ಟತೆ ಅನಾವರಣಗೊಳ್ಳುವುದು ಸಾಧ್ಯವಾಗಿದೆ. ಅದೇ ಕಾಲಕ್ಕೆ ಚಕ್ ರಾಮ್‌ಕಿಸೂನ್‌ನ ರಾಮ-ಕೃಷ್ಣ ಎರಡೂ ರೂಪಗಳು ಹ್ಯಾನ್ಸ್‌ಗೆ ಕಾಣಿಸತೊಡಗುವುದೂ ಕೂಡ ಇಲ್ಲಿಯೇ. ಅಮೆರಿಕನ್ ಲಂಚಗುಳಿತನದ ಹಾದಿಗಳ ಅರಿವಿರುವುದು, ಹೊರಗಿನವನಾಗಿಯೂ ಈತ ಅದನ್ನು ಪೋಷಿಸುತ್ತಿರುವುದು ಹಾಗಿರಲಿ. ಸ್ವತಃ ಹ್ಯಾನ್ಸ್‌ಗೇ ಅರಿವಾಗದಂತೆ, ಈಗಾಗಲೇ ಚೆನ್ನಾಗಿ ಡ್ರೈವ್ ಮಾಡಬಲ್ಲ ಪರಿಣತಿಯುಳ್ಳ, ಬರೇ ಅಮೆರಿಕನ್ ಲೈಸೆನ್ಸ್ ಕೂಡ ಇದ್ದರೆ ಒಳ್ಳೆಯದು ಎಂಬ ಕಾರಣಕ್ಕೆ ಅದಕ್ಕಾಗಿ ಪ್ರಯತ್ನಿಸುತ್ತಿರುವ ಹ್ಯಾನ್ಸ್‌ನ್ನು ಈತ ತನ್ನ ಬಿಟ್ಟಿ ಸೇವೆಯ ಡ್ರೈವರ್ ಎಂಬಂತೆ ಬಳಸಿಕೊಳ್ಳುತ್ತಿರುತ್ತಾನೆ! ಹಾಗೆ ಚಕ್ ರಾಮ್‌ಕಿಸೂನನ ಡ್ರೈವರನಂತೆ ಅವನನ್ನು ಅಲ್ಲಿಂದಿಲ್ಲಿಗೆ ಕೊಂಡೊಯ್ಯುತ್ತಿರುವಾಗಲೇ ಹ್ಯಾನ್ಸ್‌ಗೆ ಈ ಮನುಷ್ಯನ ನಿಗೂಢ ವ್ಯವಹಾರಗಳ ಕತ್ತಲ ಲೋಕವೊಂದು ಅಷ್ಟಿಷ್ಟು ಕಾಣಿಸಿಕೊಳ್ಳುವುದು ಕೂಡ. ಈ ತಂತ್ರದ ಗಟ್ಟಿಗತನವನ್ನು ತಿಳಿದುಕೊಳ್ಳಲು ಇಷ್ಟು ಸಾಲದೆ?

ಇದೇ ರೀತಿ ಇಡೀ ಕಾದಂಬರಿ ಸಾಂಸಾರಿಕ ನೆಲೆಗಟ್ಟಿನಲ್ಲಿ ಮುಂದುವರಿಯುತ್ತ ಆರ್ಥಿಕ ರಂಗವನ್ನು ಚರ್ಚಿಸುತ್ತದೆ. ಆರ್ಥಿಕ ವಿಚಾರಗಳ ಬಗ್ಗೆ ಮಾತನಾಡುವಾಗಲೇ ಕ್ರಿಕೆಟ್ ಬಗ್ಗೆ ಚರ್ಚಿಸುತ್ತದೆ. ಕ್ರಿಕೆಟ್ ಸ್ಟೇಡಿಯಂ ಕಟ್ಟಲು, ಅಂತರ್ರಾಷ್ಟ್ರೀಯ ಟೂರ್ನಿ ಆಯೋಜಿಸಲು ಅಮೆರಿಕದ ನೆಲ, ಹಣ ಎಲ್ಲ ಅಗತ್ಯವಿದೆ. ಅದೇ ಹೊತ್ತಿಗೆ, ಕ್ರಿಕೆಟ್ ಎಂದರೆ ಮನಸ್ಥಿತಿ, ಕ್ರಿಕೆಟ್ ಮನುಷ್ಯರನ್ನು ಹತ್ತಿರ ತರುವ ಮಾಯಾತಂತ್ರ, ಕ್ರಿಕೆಟ್ ಎಂದರೆ ವಿಶ್ವಶಾಂತಿ! ವಿಶ್ವಶಾಂತಿಯ ಅಗತ್ಯ ಹುಟ್ಟಿದ್ದು ಸೆಪ್ಟೆಂಬರ್ ಹನ್ನೊಂದರ ದುರ್ಘಟನೆಯ ನೆರಳಲ್ಲೇ. ಅಲ್ಲೇ ಆರ್ಥಿಕ ಸ್ಥಿತ್ಯಂತರಗಳ ಮೂಲವೂ ಇದೆ. ಕುಸಿದಿದ್ದು ಬರೇ ಟ್ರೇಡ್ ಸೆಂಟರ್ ಅಲ್ಲ, ಅಮೆರಿಕದ ಆರ್ಥಿಕತೆಯ ಬೇರುಗಳೆ ಅದರಿಂದ ಅಲ್ಲಾಡಿದವು. ಅಲ್ಲಾಡಿದ್ದು ಆರ್ಥಿಕ ಬೇರುಗಳಷ್ಟೇ ಅಲ್ಲ, ಅದರಿಂದ ಮಂದಿಯ ಉದ್ಯೋಗ, ಜೀವಭೀತಿ, ಅತಂತ್ರ ಸ್ಥಿತಿ ಎಲ್ಲವೂ ಪ್ರಭಾವಿತವಾದವು. ಸಂಸಾರಗಳು ಪುಟ್ಟ ಭೂಕಂಪಕ್ಕೆ ಸಿಕ್ಕ ವ್ಯವಸ್ಥೆಗಳಂತೆ ಕಂಪಿಸಿದವು, ಮಕ್ಕಳ ಬದುಕು ಅಲ್ಲಡಿತು. ಎಲ್ಲವನ್ನೂ ಒಂದು ತೆಕ್ಕೆಯಲ್ಲಿ ಹಿಡಿಯುವುದು ಜೋಸೆಫ್ ಓ’ನೀಲ್ ತರದ ಕೆಲವೇ ಕಾದಂಬರಿಕಾರರಿಗೆ ಅದೃಷ್ಟವಶಾತ್ ಒಲಿಯಿತು.

ಇಷ್ಟೆಲ್ಲ ತಲೆಕೆಡಿಸಿಕೊಳ್ಳದೇನೆ ಇಡೀ ಕಾದಂಬರಿಯನ್ನು ಅದರ ಸುಂದರ ಇಂಗ್ಲೀಷ್‌ಗಾಗಿಯೇ ಓದಿದರೂ ಓದಬಹುದು. ಗಂಡ - ಹೆಂಡತಿ ಮತ್ತು `ಮತ್ತೊಬ್ಬ’ನ ಕತೆಯಾಗಿಯೂ ಓದಬಹುದು. ಚಕ್ ರಾಮಕಿಸೂನ್ ತರದ ವರ್ಣರಂಜಿತ ವ್ಯಕ್ತಿಗಳು ತಮ್ಮ ಪರಿಧಿಯ ಮೇಲೆ ತಿಳಿದೋ ತಿಳಿಯದೆಯೋ ಕೂತ ಅನ್ಯ ವ್ಯಕ್ತಿಗಳನ್ನು ಕೇಂದ್ರಕ್ಕೆ ಸೆಳೆದುಕೊಳ್ಳಲು ಸಾಧ್ಯವಾಗುವ ಅವರ ವಿಲಕ್ಷಣ ಆಕರ್ಷಣೆ ಮತ್ತು ಅಂಥವರ ಬದುಕಿನ ಬಹುಮುಖಿ ಆಯಾಮಗಳ ಕುರಿತ ಕುತೂಹಲಗಳಿಗಾಗಿಯೇ ಓದಿಕೊಳ್ಳಬಹುದು. ಆದರೆ ಹೇಗೆ ಓದಿದರೂ ಅದರ ಸಮಗ್ರತೆಯೇ ನಿಮ್ಮನ್ನು ಕೊನೆಗೂ ಬೆಚ್ಚಿಬೀಳಿಸುವುದು ಎನ್ನುವುದು ಸತ್ಯ.


(ಈ ಲೇಖನದ ಆಯ್ದ ಭಾಗ ಹಿಂದೆ ವಿಜಯ ನೆಕ್ಸ್ಟ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.)

No comments: