Saturday, November 17, 2012

ಕಪ್ಪೆ ನುಂಗಿದ ಹುಡುಗ : ಶ್ರೀನಿವಾಸ ವೈದ್ಯರ ಹೊಸ ಕಥಾಸಂಕಲನ

ಶ್ರೀನಿವಾಸ ವೈದ್ಯರ ‘ಅಗ್ನಿಕಾರ್ಯ’ ಮತ್ತು ‘ಮನಸುಖರಾಯನ ಮನಸು’ ಕೃತಿಗಳ ಬಗ್ಗೆ ಬರೆದ ಮಾತುಗಳನ್ನು ಮತ್ತೊಮ್ಮೆ ಮೆಲುಕು ಹಾಕಿ ಈ ಸಂಕಲನದ ಕತೆಗಳ ಬಗ್ಗೆ ಬರೆಯಲು ಕೂತರೆ ಬೆನ್ನುಡಿಯ ಜಯಂತ್ ಕಾಯ್ಕಿಣಿಯವರ ಮಾತುಗಳೇ ಕಿವಿಯಲ್ಲಿ ಗುಂಯ್ ಗುಡುವಂತೆ ಕಾಡುತ್ತವೆ. "ಬರವಣಿಗೆ ಎಂದರೆ ಸೋದ್ದಿಶ್ಯವಾದ ಒಂದು ಬಹಿರಂಗ ಬೌದ್ಧಿಕ ಕಸರತ್ತು ಅಥವಾ ತೀರ ಖಾಸಗಿಯಾದ ಒಂದು ಆತ್ಮಶೋಧದ ಗೀಳು ಎಂಬ ಎರಡೂ ಅತಿರೇಕಗಳ ಹಂಗು ಕಳಚಿಕೊಂಡು" ; "ಅಂತರಂಗ-ಬಹಿರಂಗ, ವ್ಯಕ್ತಿ-ಸಮಾಜ ಎಂದೆಲ್ಲ ಕಾಲ್ಪನಿಕ ಗಡಿರೇಖೆಗಳನ್ನು ಹಾಕಿಕೊಳ್ಳದೇ ಒಟ್ಟಂದದಲ್ಲಿ ಸಮಾಜವನ್ನು.....ಅನುಭವಿಸಿದ ಈ ಜೀವಿಯ ಬರವಣಿಗೆಯಲ್ಲಿ..." - ಈ ಮಾತುಗಳೆಲ್ಲ ಶ್ರೀನಿವಾಸ ವೈದ್ಯರ ಕತೆಗಾರಿಕೆ ಬಲ್ಲ ಯಾರಾದರೂ ಒಪ್ಪತಕ್ಕವೇ. ಆದರೆ, ಎಲ್ಲ ಲೇಖಕರಂತೆಯೇ ಪ್ರಧಾನವಾಗಿ ತಮ್ಮ ಬಾಲ್ಯದ ಅನುಭವಗಳನ್ನು, ಆನಂತರದಲ್ಲಿ ವೃತ್ತಿಜೀವನದ ಮತ್ತು ಇತರೆ ಜೀವನಾನುಭವಗಳನ್ನು ಆಧಾರವಾಗಿ ನೆಚ್ಚಿಕೊಂಡು, ಅವುಗಳೇ ಮೂಲಧಾತುವಾಗುಳ್ಳ ಒಂದು ಅಥೆಂಟಿಕ್ ಜಗತ್ತನ್ನು ತಮ್ಮ ಕಥಾನಕಕ್ಕೆ ಬಳಸಿಕೊಳ್ಳುವ ಶ್ರೀನಿವಾಸ ವೈದ್ಯರು ಧಾರವಾಡದ ಭಾಷೆಯ ತನ್ನೆಲ್ಲ ಸೊಗಡನ್ನು ಕೂಡಾ ಅಷ್ಟೇ ಮಟ್ಟಿಗೆ ಅವಲಂಬಿಸಿರುವ ಬರಹಗಾರ. ಹಾಗಾಗಿ ಶ್ರೀನಿವಾಸ ವೈದ್ಯರ ಕತೆಗಳ ಪ್ರಮುಖ ಆಕರ್ಷಣೆಯೇ ಅವುಗಳ ಅಥೆಂಟಿಸಿಟಿ ಮತ್ತು ಭಾಷೆ. ಇದು ವೈದ್ಯರಿಗೂ ತಿಳಿದೇ ಇರುವುದರಿಂದ, ಇವೇ ತಮ್ಮ ಮಿತಿಗಳಾಗದ ಹಾಗೆ ಎಚ್ಚರವಹಿಸಬೇಕೆನ್ನುವ ಅರಿವೂ ಅವರಿಗಿರುವುದು ನಿಜ ಮತ್ತು ಸಹಜವೇ. ಇದನ್ನು ನಾವು ಮರೆಯಲಾಗದು.

ಮೇಲೆ ಹೇಳಿದ ಕಾರಣಗಳಿಗಾಗಿಯೇ, ಶ್ರೀನಿವಾಸ ವೈದ್ಯರ ಕತೆಗಳಲ್ಲಿ ಕಥಾನಕವೇ ಪ್ರಧಾನವಾಗುವ ಮತ್ತು ಅದು ಹೊಸದಾಗಿರುವ ಅಗತ್ಯ ಕೂಡಾ ಹೆಚ್ಚುತ್ತದೆ. ಯಾರೂ ತಮ್ಮ ಕಾಲದ ಧಾರವಾಡವನ್ನೋ, ಜೀವನ ಶೈಲಿಯನ್ನೋ ಮತ್ತೂ ಮತ್ತೂ ಹೇಳುತ್ತಿದ್ದರೆ, ಅದನ್ನು ಎಷ್ಟೇ ಆಕರ್ಷಕವಾಗಿ ಹೇಳುತ್ತಿದ್ದರೂ ಒಂದು ಹಂತದ ನಂತರ ಅದರಲ್ಲಿ ಪುನರಾವೃತ್ತಿಯೇ ಹೆಚ್ಚಾಗಿ ಕೇಳುವವರಿಗೆ ಅಚ್ಚರಿ, ವಿಸ್ಮಯ ಉಂಟುಮಾಡಬಲ್ಲ, ಮನರಂಜಿಸಬಲ್ಲ ಶಕ್ತಿಯನ್ನು ಅದು ಕಳೆದುಕೊಳ್ಳುತ್ತದೆ. ಸಣ್ಣಕತೆಯೊಂದು ಸದಾಕಾಲ ನಿರೂಪಣೆ ಮತ್ತು ಭಾಷೆಯನ್ನೇ ನೆಚ್ಚಿಕೊಂಡು ಇರಲಾಗುವುದಿಲ್ಲ. ಹಾಗೆ ಕಥಾನಕ ಮತ್ತು ಕತೆಯನ್ನು ಹೇಳುವ ಹೊಸ ಹೊಸ ತಂತ್ರಗಳು ಸಹಜವಾಗಿಯೇ ಮುಖ್ಯವಾಗುತ್ತದೆ. ಇಲ್ಲಿ ಮತ್ತೆ ಬರುವ ಪ್ರಶ್ನೆ ಎಂಥಾ ಕಥಾನಕ? ಶ್ರೀನಿವಾಸ ವೈದ್ಯರ ಅಥೆಂಟಿಸಿಟಿ ಒಡ್ಡುವ ಪ್ರಧಾನ ಸವಾಲೆಂದರೆ, ಅವರ ಅಥೆಂಟಿಕ್ ಜಗತ್ತಿನ ಕಾಲಮಾನಕ್ಕೆ ಹೊಂದುವ ಕಥಾನಕವನ್ನಷ್ಟೇ ಅವರು ಅಲ್ಲಿಂದ ಎತ್ತಿ ತಂದು ನಮಗೆ ಹೇಳಬಹುದಾಗಿದೆ ಎಂಬ ಮಿತಿಯೇ. ಸಮಕಾಲೀನ ಯುವಕರ ಶೈಲಿ, ನಾಗರಿಕತೆಯ ಹೆಸರಿನ ಹಗಲುವೇಷಗಳನ್ನೆಲ್ಲ ಅವರು ಅವರ ಜಮಾನಾದ ಕಣ್ಣುಗಳಿಂದಲೇ ಕಂಡು ಹಿತವಾದ ಲೇವಡಿಯಲ್ಲಿ ತೇಲಿಸಬಹುದೇ ವಿನಃ ಅದನ್ನೇ ಅಥೆಂಟಿಕ್ ಆದ ತಮ್ಮ ಕಥಾನಕದ ಕಥಾಜಗತ್ತನ್ನಾಗಿಸಿಕೊಳ್ಳಲಾರರು. ಸಾಧ್ಯವೇ ಇಲ್ಲವೆಂದಲ್ಲ, ಸಾಧ್ಯವಾಗಬಹುದಾದ ವಿದ್ಯಮಾನವೇ.

ಇದನ್ನೇ ಇವತ್ತು ಹಿರಿಯ ಕತೆಗಾರರು ತಮಗಿಂತ ಕಿರಿಯ ಮತ್ತು ಉದಯೋನ್ಮುಖ ಸಾಹಿತಿಗಳ ಸಂದರ್ಭದಲ್ಲಿ ‘ಕಂಫರ್ಟ್ ಝೋನ್’ ನಿಂದ ಹೊರಬಂದು ಬರೆಯಿರಿ, ನಿಮ್ಮದೇ ಸ್ವಾನುಭವವನ್ನು ಬಳಸಿಕೊಂಡು ಹೇಳುವಾಗ ನೀವು ಕಾಣದೇ ಇರುವ ಜಗತ್ತಿಗೆ ಲಗ್ಗೆಯಿಟ್ಟು ನಿಮ್ಮದೇ ಮಿತಿಗಳನ್ನು ‘ಮೀರು’ವುದಕ್ಕೆ ಪ್ರಯತ್ನಿಸಿ ಎಂದೆಲ್ಲ ಉಪದೇಶ ನೀಡುತ್ತಿರುವುದು. ಆದರೆ ನಿಜಕ್ಕೂ ಹಾಗೆ ಮಾಡಿದಾಗ ಅದು ಸೋದ್ದಿಶ್ಯವಾದ ಬೌದ್ಧಿಕ ಕಸರತ್ತು ಆಗಿಬಿಡುವುದಿಲ್ಲವೆ ಎನ್ನುವುದು ಪ್ರಶ್ನೆ. ಯಾಕೆಂದರೆ, ಈ ಸಂಕಲನದಲ್ಲಿ ಶ್ರೀನಿವಾಸ ವೈದ್ಯರು ಖಂಡಿತವಾಗಿ ತಮ್ಮ ಮಿತಿಗಳ ಬಗ್ಗೆ ಸ್ಪಷ್ಟ ಅರಿವುಳ್ಳ ಮತ್ತು ತಾವು ಬರೇ ತಮ್ಮ ಜೀವನದ ರಸಮಯ ಪ್ರಕರಣಗಳನ್ನು ಹೇಳುತ್ತಿಲ್ಲ, ಸೃಜನಶೀಲವಾದ ಒಂದು ಸಣ್ಣಕತೆಯ ನಿರ್ದಿಷ್ಟ ಪ್ರಕಾರದಲ್ಲಿ ಅದಕ್ಕೆ ಹೊಂದುವಂತೆ ಬರೆಯುತ್ತಿದ್ದೇನೆ ಎಂಬ ಪ್ರಜ್ಞೆಯುಳ್ಳವರು ಎನ್ನುವುದನ್ನು ಸಾಬೀತುಪಡಿಸುವಂಥ ಪ್ರಯತ್ನಗಳನ್ನು ಮಾಡಿದ್ದಾರೆ. ವೇಶ್ಯೆಯೊಬ್ಬಳ ಕುರಿತ ಕತೆಯಾದ ‘ಕೆಲವಂ ಬಲ್ಲವರಿಂದ’, ಕಾರ್ಪೊರೇಟ್ ಜಗತ್ತಿನ ಕುರಿತ ಕತೆಯಾದ ‘ಉದ್ಯೋಗಪರ್ವ’, ವಿವಾಹೇತರ ಸಂಬಂಧದ ಎಡವಟ್ಟುಗಳನ್ನು ಜೀರ್ಣಿಸಿಕೊಳ್ಳಲಾರದವನೊಬ್ಬನ ಕತೆಯಾದ ‘ಕಪ್ಪೆನುಂಗಿದ ಹುಡುಗ’ - ಕತೆಗಳಲ್ಲಿ ಸ್ಪಷ್ಟವಾಗಿ ಶ್ರೀನಿವಾಸ ವೈದ್ಯರ ಕತೆಗಳ ದೇಶ-ಕಾಲ ಬದಲಾಗುತ್ತಿರುವುದನ್ನು ಕಾಣಬಹುದಾಗಿದೆ. ಅದರಲ್ಲಿ ಅವರು ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದಾರೆ ಅಥವಾ ಮತ್ತೆ ತಮ್ಮದೇ ಜಮಾನಕ್ಕೆ ಆತುಕೊಳ್ಳುವುದು ಅವರಿಗೆ ಅನಿವಾರ್ಯವಾಗಿದೆ ಎನ್ನುವುದು ಬೇರೆಯೇ ಪ್ರಶ್ನೆ. ಆದಾಗ್ಯೂ ‘ಕಬಡ್ಡಿ ಕಬಡ್ಡಿ’ ಕತೆಯಲ್ಲಿ ಮತ್ತದೇ ತಬರನ ಕತೆಯ ನೆರಳು ಇರುವುದು, ‘ತರಬೇತಿಯ ದಿನಗಳು’ ಕತೆಯಲ್ಲಿ ೨೯೭ ರೂಪಾಯಿ ಸಂಬಳದ ಸರಕಾರೀ ಕಾರಕೂನನ ಕತೆಯೇ ಇರುವುದು ಗಮನಿಸಬೇಕು.

ಇದನ್ನು ನಾನು ಒಂದು ದೋಷವೆಂದೋ, ವೈದ್ಯರ ಸಮೃದ್ಧ ಅನುಭವ ಪ್ರಪಂಚದ ಅದ್ಭುತವೆಂದೋ ಎತ್ತಿ ಆಡುತ್ತಿಲ್ಲ. ಎಲ್ಲಾ ಕತೆಗಾರರೂ ಕತೆ ಹೇಳುವಲ್ಲಿ ಸಂದು ಹೋದ ಕಾಲವನ್ನೇ ಕಥಾನಕದ ಭೂಮಿಕೆಯಾಗಿ ಬಳಸಿಕೊಂಡಿರುವುದನ್ನು ನಾವೆಲ್ಲರೂ ಬಲ್ಲೆವು. ಶೇಕಡಾ 99.99ರಷ್ಟು ಕಥಾನಕಗಳು ಸಂದು ಹೋದ ಕಾಲವನ್ನೇ ಕುರಿತವುಗಳೆಂಬುದು ನಿಜ. ಹೀಗೆ ನಾವು ಕಥಾಜಗತ್ತನ್ನು ಪ್ರವೇಶಿಸಿದಾಗೆಲ್ಲ ‘ಭೂತ’ ಕಾಲವನ್ನೇ ಬದುಕುತ್ತಿರುತ್ತೇವೆ. ಈಗಾಗಲೇ ಭೂತಕಾಲಕ್ಕೆ ಸಂದು ಹೋದ ಲೇಖಕರನ್ನು ಓದುವಾಗ ಇನ್ನೂ ಇನ್ನೂ ಹಿಂದಿನ ಕಾಲಕ್ಕೆ ಸಲ್ಲುತ್ತೇವೆ. ಹಾಗಾಗಿ ಎಷ್ಟು ಹಿಂದಿನ ಕಥಾಜಗತ್ತಿಗೆ ನಮ್ಮ ಪ್ರವೇಶವನ್ನು ಈ ಕತೆಗಳು ನಿರ್ದೇಶಿಸುತ್ತವೆ ಎನ್ನುವುದು ಮುಖ್ಯವಾಗುವುದು ಇಲ್ಲಿ. ಆದಾಗ್ಯೂ ಕತೆಯ ಸಮಕಾಲೀನತೆಯ ಪ್ರಶ್ನೆಯೇನೂ ಇದಲ್ಲ. ನನ್ನ ಪ್ರಶ್ನೆಯಿರುವುದು ಒಬ್ಬ ಲೇಖಕ ತನ್ನ ಜೀವನಾನುಭವಗಳಿಗೆ ನಿಷ್ಠನಾಗಿದ್ದು (ತನ್ನ ಕಥಾಜಗತ್ತಿನ ಅಥೆಂಟಿಸಿಟಿಯನ್ನು ಬಿಟ್ಟುಕೊಡದೆ) ಕತೆಯನ್ನು ಹೇಳುವಾಗ(ಬರೆಯುವಾಗ), ಜೀವನಾನುಭವಕ್ಕೆ ಕಥಾನಕದ ಚೌಕಟ್ಟನ್ನು ತೊಡಿಸುವ ಪ್ರಕ್ರಿಯೆಯಲ್ಲಿ ಬಳಸುವ ‘ಕಲ್ಪಿತ ವಾಸ್ತವ’ವೆಂಬುದೇನಿದೆ ಅದು ಎದುರಿಸುವ ಕಾಲದ ಸಮಸ್ಯೆಯನ್ನು ಶ್ರೀನಿವಾಸ ವೈದ್ಯರು ಎದುರಿಸುವ ವಿಧಾನ, ಅಲ್ಲಿ ಎದುರಿಸುವ ಸವಾಲುಗಳು ಮತ್ತು ಅದರ ತಾರ್ಕಿಕ ಅಗತ್ಯ- ಇವುಗಳನ್ನು ಕುರಿತದ್ದು. ಇಲ್ಲಿ ಜಯಂತರ ಮಾತುಗಳು ಸಾಂದರ್ಭಿಕವಾಗಿ ಮುಖ್ಯವಾಗುತ್ತವೆ. ಆದರೆ, ಅಂಥ ಅಗತ್ಯವೇ ಶ್ರೀನಿವಾಸ ವೈದ್ಯರಿಗೆ ಕಾಣಿಸಿಲ್ಲವೆಂದಾದಲ್ಲಿ ಅವರ ಬರವಣಿಗೆ ‘ಸೋದ್ದಿಶ್ಯವಾದ ಒಂದು ಬಹಿರಂಗ ಬೌದ್ಧಿಕ ಕಸರತ್ತು’ ಎನಿಸಿಕೊಳ್ಳದೇ ಇರಲು ಅರ್ಹವಾಗುತ್ತದೆಯೇ ಹೊರತು ಅನ್ಯಥಾ ಆಗುವುದಿಲ್ಲ. ಇನ್ನು ಇದು, ಬರವಣಿಗೆ, ಶ್ರೀನಿವಾಸ ವೈದ್ಯರಿಗೆ ಖಾಸಗಿಯಾದ ಆತ್ಮಶೋಧದ ಹಾದಿಯೂ ಆಗಿದೆಯೆ ಇಲ್ಲವೆ ಎನ್ನುವ ಪ್ರಶ್ನೆ ಇದೆ. ಆದರೆ ಅದು ಇಲ್ಲಿ,ಈಗ, ಅಷ್ಟೇನೂ ಪ್ರಸ್ತುತವಲ್ಲ ಎಂದು ಬಿಟ್ಟುಬಿಟ್ಟಿದ್ದೇನೆ.

ಈ ಸಂಕಲನದ ಮೊದಲ ಕತೆ ‘ಕೆಲವಂ ಬಲ್ಲವರಿಂದ....’ ಕಾಲಮಾನದ ದೃಷ್ಟಿಯಿಂದ ಸ್ವಾತಂತ್ರ್ಯದ ಹೊಸತರಲ್ಲಿರುವ ದೇಶದ್ದು. ಪುಟ್ಯಾ ಎಂಬ ಪೋರನನ್ನು ಕೇಂದ್ರದಲ್ಲಿಟ್ಟುಕೊಂಡು ಅವನು ಹನ್ನೊಂದು ಹನ್ನೆರಡರ ಅಡನಾಡಿ ವಯಸ್ಸಿನಿಂದ ಮೆಟ್ರಿಕ್ ತನಕದ ವಯೋಮಾನದಲ್ಲಿ, ಬಾಲ್ಯ ಕ್ರಮೇಣ ಪೊರೆಕಳಚಿ ತಾರುಣ್ಯದ ಅಂಚಿನ ತಲ್ಲಣಗಳನ್ನು ಹಾಯುವ ಕಾಲದ್ದು. ಆದರೆ ಕತೆ ಮತ್ತು ಮೇಲ್ನೋಟದ ತಂತ್ರ ಎರಡೂ ಹಳೆಯದಾಗಿದ್ದರೂ ಕಥಾನಕದ ನಿರೂಪಣಾ ಕ್ರಮದಲ್ಲಿ ಹೊಸತನವಿದೆ. ಊರಿನ ಒಬ್ಬ ತರುಣಿಯ ಕುರಿತ ಹುಡುಗರ ಕುತೂಹಲದಲ್ಲಿ ಇಷ್ಟಿಷ್ಟೇ ತೆರೆದುಕೊಳ್ಳುವ ಆಕೆಯ ಬದುಕು ಕೊನೆಗೂ ಬೆಲೆವೆಣ್ಣಿನ ತಾಪತ್ರಯಗಳತ್ತ ಹೌದೋ ಅಲ್ಲವೋ ಎಂಬಷ್ಟೇ ಬೆಟ್ಟು ಮಾಡಿ ಮುಗಿಯುವಂಥದ್ದು. ಢಾಳಾಗಿ ಒಡೆದು ಕಾಣುವಂತೆ ಇದೇ ಕತೆಯನ್ನು ನಿರಂಜನರ ‘ಕೊನೆಯ ಗಿರಾಕಿ’ ಹೇಳಿದೆ. ವೈದ್ಯರದೋ ಅತ್ಯಂತ ನವಿರಾದ ನಿರೂಪಣೆ. ಪರಿಣಾಮದಲ್ಲಿ ನೇರ ಮತ್ತು ಆಳ. ಪುಟ್ಯಾನ ತಾಯಿ ಅವಳನ್ನು ಬಾಗಿಲಲ್ಲೇ ನಿಲ್ಲಿಸಿಕೊಂಡು ಆಕೆಯ ಇತ್ಯೋಪರಿಯನ್ನು ವಿಚಾರಿಸಿಕೊಳ್ಳುವ ಕುಹಕ, ವ್ಯಂಗ್ಯ, ತಿರಸ್ಕಾರ ಎಲ್ಲ ಬೆರೆತ ಪ್ರಶ್ನಾವಳಿಯ ರೀತಿಯನ್ನು ವೈದ್ಯರು ಏಕಮುಖೀ ಸಂಭಾಷಣೆಯನ್ನಷ್ಟೇ ಬಳಸಿರುವ ಬಗೆಯಲ್ಲೇ ಅವಳ ಮೌನವಾದ ನೋವು ಹೆಪ್ಪುಗಟ್ಟಿದಂತಿರುವುದು ಗಮನಾರ್ಹವಾದ ಒಂದು ತಂತ್ರವಾಗಿದೆ.

ಧಾರವಾಡದ ಸೊಗಡಿನಿಂದ, ಬಾಲ್ಯ ಕಾಲದ ಚಿತ್ರಕ ವಿವರಗಳಿಂದ ಕತೆ ಶ್ರೀಮಂತವಾಗಿರುವುದರಿಂದ ಅದನ್ನೇ ತನ್ಮಯತೆಯಿಂದ ಮೆಚ್ಚಿಕೊಳ್ಳಬೇಕೊ ಅಥವಾ ಕಥಾನಕದ ಚೌಕಟ್ಟಿನಲ್ಲಿ ಕೊಂಚ ಅತಿಯಾದ ವಾಚಾಳಿತನದಿಂದ ಈ ಕತೆ ಸೊರಗಿದೆ ಎನ್ನಬೇಕೊ ಗೊಂದಲವಾಗುವಂತಿದೆ. ಯಾಕೆಂದರೆ, ಬಾಲಕರನ್ನು, ತಾರುಣ್ಯಕ್ಕೆ ಹೊರಳುತ್ತಿರುವ ಹುಡುಗರನ್ನು ಬಳಸಿಕೊಂಡು ಕತೆ ಹೇಳುವ ತಂತ್ರ ಹೊಸದೇನಲ್ಲ. ಅದಕ್ಕಿಂತ ಮುಖ್ಯವಾಗಿ ಇಲ್ಲಿ ಕೆಲಸ ಮಾಡುತ್ತಿರುವ ನಿರೂಪಕ ಪ್ರಜ್ಞೆ ಪುಟ್ಟನದ್ದಲ್ಲ. ನಿರೂಪಕ ಪುಟ್ಟನ ಪಾತಳಿಯಿಂದಲೇ ಕತೆಯನ್ನು ಹೇಳುತ್ತಿರುವುದರಿಂದ ಎಲ್ಲಿ ಬೇಕೊ ಅಲ್ಲಿ ಸೂಚ್ಯವಾಗಿ ಹೇಳಿರುವುದನ್ನು ಬಿಟ್ಟರೆ ಕತೆಯ ನೆಲೆ ಪ್ರೌಢ ನಿರೂಪಣೆಯಲ್ಲೇ ಇದೆ. ಹಾಗಾಗಿ ಈ ಹುಡುಗರು ಅರೆ ಲೈಂಗಿಕ ಜಗತ್ತಿಗೆ ಇಷ್ಟಿಷ್ಟಾಗಿ ತೆರೆದುಕೊಳ್ಳುತ್ತಿರುವ ಬಗೆಯ ಚಿತ್ರಣ ಮತ್ತು ಅದಕ್ಕೆ ಇರುವ ಹಿರಿಯ ತಲೆಮಾರಿನ ಈರ್ಷ್ಯೆ ಬೆರೆತ ಪ್ರತಿರೋಧ ಒಂದು ಕಡೆಯಿಂದ ವಿಜೃಂಭಿಸುತ್ತಿರುವಾಗಲೇ ಇವರೆಲ್ಲರ ಕೌತುಕತೆ, ಕಾಮುಕತೆ ಮತ್ತು ಕಲ್ಪನೆಗಳಿಗೆ ಕೇಂದ್ರಬಿಂದುವಾದ ‘ಆಕೆ’ ಮೌನವಾಗಿ ಅನುಭವಿಸುವ ನೋವು - ಎರಡನ್ನೂ ಸಂಧಿಸುವ ಒಂದು ಬಿಂದುವಿನಲ್ಲಿ ಕತೆ ಘನೀಭವಿಸುವುದನ್ನು ಅನಗತ್ಯವಾದ ಕೆಲವೊಂದು ವಿವರಗಳು ಮಂದವಾಗಿಸಿವೆ. ಕೆಲವು ಪೂರಕ ವಿದ್ಯಮಾನಗಳು ತೀರ ಸುತ್ತೀ ಬಳಸಿ ‘ಆಕೆ’ಯ ತನಕ ಚಾಚಿಕೊಳ್ಳುವುದರಿಂದಲೂ ಈ ರೀತಿ ಆಗಿರಬಹುದೆನ್ನಿಸುತ್ತದೆ. ಕ್ಲಾರಾಳ ಕತೆ, ದೇಣಗಿ ಎತ್ತುವ ವಿದ್ಯಮಾನದ ವಿವರಗಳು ಕೊನೆಗೂ ಕತೆಯ ಪ್ರಧಾನ ಎಳೆಗೆ ನೀಡುವ ಕಾಣ್ಕೆಯ ನಿಟ್ಟಿನಿಂದ ಇದನ್ನು ಗಮನಿಸಿದರೆ ಇವು ಎಷ್ಟು ಒಜ್ಜೆಯಾಗಿವೆ ಎಂಬುದು ತಿಳಿಯುತ್ತದೆ. ಒಟ್ಟಾರೆಯಾಗಿ ಮನಸ್ಸಿನಲ್ಲಿ ನಿಲ್ಲುವುದು ವೈದ್ಯರ ಕಥಾಜಗತ್ತಿನ ಸೊಗಸಾದ ವಿವರಗಳೇ ಹೊರತು ‘ಆಕೆ’ ಅಲ್ಲ ಎಂಬುದು ನಿಜ!

ಎರಡನೆಯ ಕತೆ ‘ಉದ್ಯೋಗ ಪರ್ವ’ ಕಾರ್ಪೊರೇಟ್ ಜಗತ್ತಿನ ಹಾವೇಣಿ ಆಟದಲ್ಲಿ ಇನ್ನಷ್ಟು ಮತ್ತಷ್ಟು ಮೇಲೇರುವ, ಕೆರಿಯರ್ ಉನ್ನತಿಗೊಯ್ಯುವ, ಬದುಕಿನಲ್ಲಿ ಮೇಲಕ್ಕೇರುವ ಒಂದು ಓಟದಲ್ಲಿ ಮಾನವ ಸಂಬಂಧಗಳು, ಭಾವನಾತ್ಮಕ ಸಂವೇದನೆಗಳು ಗೌಣವಾಗುವ, ನೈತಿಕ ಮೌಲ್ಯಗಳೆಂದು ಒಂದು ತಲೆಮಾರು ನಂಬಿಕೊಂಡು ಬಂದ ಆದರ್ಶಗಳು ಮಣ್ಣುಗೂಡುವ ಚಿತ್ರವಿದೆ, ವೈದ್ಯರ ಎಂದಿನ ಸಹಜ ವ್ಯಂಗ್ಯ ವೈನೋದಿಕ ಧಾಟಿಯಲ್ಲಿ. ಹಾಗಾಗಿ ಇಲ್ಲಿ ಹೊಸತೇ ಆದ ಕಥಾವಸ್ತುವೇನಿಲ್ಲ. ಚಿತ್ತಾಲರ ‘ಶಿಕಾರಿ’ಯಿಂದ ತೊಡಗಿ ಈಚಿನ ಸಾಫ್ಟ್‌ವೇರ್ ಉದ್ಯೋಗದ ಗೋಳುಗಳ ತನಕ ಇದು ಹರಿದು ಬಂದಿರುವಂಥದೇ. ಕೊನೆಯ ಒಂದೆರಡು ಪ್ಯಾರಾಗಳಲ್ಲಿ ಶ್ರೀನಿವಾಸ ವೈದ್ಯರು ಧಾರವಾಡ ಕನ್ನಡಕ್ಕೆ ಹೊರಳಿದ್ದು ಬಿಟ್ಟರೆ ಇಡೀ ಕತೆಯ ನಿರೂಪಣೆ ಗ್ರಾಂಥಿಕ ಕನ್ನಡದಲ್ಲೇ ಇದೆ. ಹಾಗಾಗಿ ಇಲ್ಲಿ ವೈದ್ಯರಿಗೆ ತನ್ನ ಓದುಗರಲ್ಲಿ ಅಚ್ಚರಿ, ವಿಸ್ಮಯ ಹುಟ್ಟಿಸಲು ಉಳಿದಿರುವುದೆಲ್ಲ ಮನುಷ್ಯ ತನ್ನ ಆಳದಲ್ಲಿ ಎಂಥಾ ನೀಚತನವನ್ನು, ಸುಳ್ಳನ್ನು, ಪೊಳ್ಳು ವ್ಯಕ್ತಿತ್ವವನ್ನು, ಕ್ರೌರ್ಯವನ್ನು ಅಡಗಿಸಿಟ್ಟುಕೊಂಡಿರಬಲ್ಲ ಎಂಬಂಥ ವಿದ್ಯಮಾನದ ಅನಾವರಣವೊಂದೇ. ಇಂಥದ್ದರ ಕಡೆ ಕತೆಯ ಗಮನವೆಲ್ಲ ಕೇಂದ್ರೀಕೃತವಾಗುವುದರಿಂದ ವೈದ್ಯರ ಕತೆಗಳಲ್ಲಿ ಇನ್ನೆಲ್ಲೂ ಕಾಣದ ಒಂದು ಬಗೆಯ ನಿಷ್ಠುರ, ಜಡ ಧೋರಣೆಯ ನಿರೂಪಣೆಯಿದೆ. ಕಥಾನಕದ ಚಾಕಚಕ್ಯತೆಯ ನಡೆಯ ಕಡೆಗೇ, ಅದರ ಒಳಗೊಳಗಿನ ವರ್ತುಲಗಳನ್ನು ತೆರೆಯುತ್ತ ಹೋಗುವುದರತ್ತಲೇ ಹೆಚ್ಚು ಗಮನವಿದೆ. ಹಾಗಾಗಿ ಕಥಾನಕದ ನಡೆಯಲ್ಲಿ ಒಂದು ಅಸಹಜ ವೇಗವಿದೆ. ಪ್ರಾಯೋಗಿಕವಾಗಿ ಇಲ್ಲಿಯೇ ವೈದ್ಯರು ತಮ್ಮ ಚೌಕಟ್ಟುಗಳನ್ನು ಮೀರಲು ಯತ್ನಿಸಿರುವುದರ ಲಕ್ಷಣಗಳನ್ನು ತೋರಿರುವುದರಿಂದ ಈ ಕತೆಗೆ ಒಂದು ಮಹತ್ವವಿದೆ.

ಮೂರನೆಯ ಕತೆ ‘ಕಬಡ್ಡಿ... ಕಬಡ್ಡಿ’ ಮೇಲ್ನೋಟಕ್ಕೆ ತಬರನ ಕತೆಯ ಗೋಳನ್ನೇ ಹೊಸದಾಗಿ ಹೇಳುತ್ತಿದೆ. ಶಿರಹಟ್ಟಿ ಮಾಸ್ತರರು ಪೆನ್‌‌ಶನ್ ಸ್ಯಾಂಕ್ಷನ್ ಆಗದ ಟೆನ್‌ಶನ್ನಿನಲ್ಲಿದ್ದಾರೆ. ಅವರು ತಮ್ಮ ಅಮೆರಿಕದಲ್ಲಿರುವ ಇಬ್ಬರು ಮಕ್ಕಳ ವಿಚಾರವಾಗಿಯೂ ಚಿಂತಿತರಾಗಿದ್ದಾರೆ. ಸಾಲದಿದ್ದರೆ ಅವರ ಹಾಸಿಗೆ ಹಿಡಿದಿರುವ ಪತ್ನಿಯ ಅಸ್ತಮಾ ದಿನದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೂ ಆಕೆಗೆ ತನ್ನ ತಂಗಿಯ ಜೊತೆ ಹಿಂದಿನಿಂದಲೂ ಬಂದ ಅಂತಸ್ತಿನ ಒಂದು ಜಿದ್ದು ಇನ್ನೂ ಜೀವಂತವಾಗಿದೆ. ಇಷ್ಟರ ಮೇಲೆ ಅವರು ಕೈಹಾಕಿದ ಮನೆಕಟ್ಟುವ ಕೆಲಸ ಅರ್ಧಕ್ಕೆ ನಿಂತಿದ್ದು ತೀವ್ರ ಹಣಕಾಸಿನ ಮುಗ್ಗಟ್ಟಿನಲ್ಲಿದ್ದಾರೆ. ಬಾಡಿಗೆ, ಕಿರಾಣಿ ಅಂಗಡಿಯ ಬಾಕಿಗಳೆಲ್ಲ ಅವರನ್ನು ಹಗಲು ರಾತ್ರಿ ಕಂಗೆಡಿಸುತ್ತಿವೆ. ಈ ಎಲ್ಲ ತಾಪತ್ರಯಗಳ ನಡುವೆ ಅವರ ಪ್ರೋಸ್ಟೇಟ್ ಆಪರೇಶನ್ ಕೂಡ ಮುಂದೂಡಲ್ಪಟ್ಟಿದೆ. ಮಾಸ್ತರರಿಗೆ ಇತ್ತೀಚೆಗೆ ಸಿಟ್ಟು ಬರುವುದು ಹೆಚ್ಚಾಗಿದೆ. ಇಂಥ ಹಿನ್ನೆಲೆಯಲ್ಲಿ ಅವರು ‘ಯಶಸ್ವೀ’ ಸಹೋದ್ಯೋಗಿ ಸಾಲಿಮಠ ಸರ್ ಜೊತೆ ಒಂದು ಮದುವೆಗೆ ಹೊರಡುತ್ತಾರೆ.

ಆದರೆ ಇಡೀ ಕತೆಯ ಆತ್ಮವಿರುವುದು ಈ ಯಾವ ಸಂಗತಿಗಳಲ್ಲೂ ಅಲ್ಲ ಎನ್ನುವುದೇ ವೈದ್ಯರ ವೈಶಿಷ್ಟ್ಯ. ನಿಜಕ್ಕಾದರೆ ಇದೇ ವೈದ್ಯರ ನೈಜ ಕಥಾಜಗತ್ತಿನ ಒಂದು ಉತ್ತಮ ಉದಾಹರಣೆ ಎನಿಸುತ್ತದೆ. ಇಲ್ಲಿ ಶಿರಹಟ್ಟಿ ಮಾಸ್ತರರಿಗೆ ‘ಖಾಸಗೀ ಆತ್ಮಶೋಧದ ಗೀಳೇ’ನೂ ಇಲ್ಲ ನಿಜವೇ. ಆದರೆ ಬದುಕಿನಲ್ಲಿ ಅವರು ಎದುರಿಸುತ್ತಿರುವ ತಲ್ಲಣಗಳನ್ನು ಗಮನಿಸಿ. ಈ ತಲ್ಲಣಗಳ ನಡುವೆ ಶ್ರೀನಿವಾಸ ವೈದ್ಯರು ನೀಡುವ ಪರೋಕ್ಷ ವಿವರಗಳಲ್ಲೇ ಒಂದು ಬಗೆಯ ಆತ್ಮಶೋಧ ನಡೆಯುತ್ತಿರುತ್ತದೆ. ತಾವು ‘ನಿನ್ನೆಯ ಸ್ವಂತದ ಪ್ರಪಂಚಕ್ಕೆ ಇಂದು ಆಗಲೇ ಪರಕೀಯರಾಗುತ್ತಿರುವುದು’ ಅವರಿಗೆ ವೇದ್ಯವಾಗಿದೆ. ಗುರಪ್ಪನಂಥ ಮನುಷ್ಯ ಹೆಗಲ ಮೇಲೆ ಕೈ ಹಾಕಲು ಬರುವುದು ಅವರನ್ನು ಕುಗ್ಗಿಸಿದೆ. ಬಾಯಿಗೆ ಬರುವ ಬೋ...ಮಗ ಅವರನ್ನು ಇನ್ನಷ್ಟು ಕುಬ್ಜರನ್ನಾಗಿಸುವುದೇ ವಿನಾ ಇನ್ನೇನಿಲ್ಲ. ‘ಪರವಾಗಿಲ್ಲ, ನಿಧಾನಕ್ಕೆ ಕೊಡಿ’ ಎನ್ನುವ ಸಾಲಗಾರರ ಔದಾರ್ಯವೇ ಶಿರಹಟ್ಟಿ ಮಾಸ್ತರರಿಗೆ ನುಂಗಲಾರದ ಉಗುಳಲಾರದ ಹಿಂಸೆಯಾಗಿದೆ! ಚಹ ಪುಡಿ ಮುಗಿದು ಇದ್ದಿದ್ದರಲ್ಲೇ ಮಾಡಿದ ಚಹ ಕುಡಿವ ಹೆಂಡತಿಯ ಕಣ್ಣುಗಳಲ್ಲೇ ಶಿರಹಟ್ಟಿ ಮಾಸ್ತರರ ನಿಡುಗಾಲದ ಅಪಮಾನವೆಲ್ಲ ಮಡುಗಟ್ಟಿದಂತಿದೆ. ಇಲ್ಲೆಲ್ಲ ಅವರ ಅಂತರ್ಮಥನಕ್ಕೆ ಒದಗುವ ಸ್ನೇಹಮಯಿ ಜೊತೆಗಾರರೆಂದರೆ ಸರಿಯಾಗಿ ಹೆರೆದುಕೊಳ್ಳದ್ದರಿಂದ ಉಳಿದು ಹೋದ ಕೆನ್ನೆಯ ಮೇಲಿನ ಮೋಟುಗಳು! ಮಾಸ್ತರರ ಏಕಾಕಿತನವನ್ನು ಸೂಚಿಸುವ ಈ ರೀತಿಯಲ್ಲೇ ಅವರ ಆತ್ಮಶೋಧದ ಹೊಳಹುಗಳೆಲ್ಲ ಅಡಗಿವೆ. ಆದರೆ ಸಹಜವಾಗಿಯೇ ಆ ಆತ್ಮಶೋಧ ಫಿಲಾಸಪಿಯ, ಸಿದ್ಧಾಂತ-ವೇದಾಂತಗಳ ಮಾತುಗಳಲ್ಲಿ ಬರಬೇಕಾದ್ದಿಲ್ಲ. ಬದುಕಿನ ಅರ್ಥಹೀನತೆ, ಅರ್ಥಶೂನ್ಯತೆ ಮತ್ತು ನಿರರ್ಥಕತೆಯನ್ನು ಮಾತುಗಳಲ್ಲಿ ಹೇಳುವುದು ಏನು ಉಳಿದಿದೆ? ಆದರೆ ಅದರ ಸಂದಿಯಲ್ಲೇ ಹುಟ್ಟಿಕೊಳ್ಳುವ ಸಣ್ಣದೊಂದು ಆಶಾವಾದವಿದೆಯಲ್ಲ, ಅಲ್ಲೇ ಬದುಕು ಮತ್ತೆ ಚಿಗುರಿಕೊಳ್ಳಲು ಸದಾ ಕಾದಿರುತ್ತದೆ ಎನ್ನುವುದು ಎಷ್ಟು ನಿಜವೋ ಅಷ್ಟೇ ನಿಜವಾದದ್ದು ಇದು ಪ್ರೇರೇಪಿಸುವ ಆತ್ಮಶೋಧವೂ ಕೂಡ. ಶ್ರೀನಿವಾಸ ವೈದ್ಯರ ಅನೇಕ ಕತೆಗಳಲ್ಲಿ ವಯೋವೃದ್ಧರ ಹಿನ್ನೋಟವಿದೆ. ಬದುಕು ಸುಖದ ಸುಪ್ಪತ್ತಿಗೆಯೂ ಅಲ್ಲ, ಕಷ್ಟ ಕಾರ್ಪಣ್ಯಗಳ ಮುಳ್ಳಿನ ಹಾಸಿಗೆಯೂ ಅಲ್ಲ. ಅಲ್ಲಿ ಎರಡೂ ಯಾವುದೋ ಒಂದು ಹದದಲ್ಲಿ ಬೆರೆತು ಹಿತವಾದ ನೋವನ್ನು ಕೊಡುತ್ತಿರುವಂಥದ್ದು. ಇದೇ ಆ ಅಂತರ್ಮಥನದ ಲಯ. ಅದರಿಂದ ಹುಟ್ಟುವುದೇನು ಎಂಬುದು ಅಮುಖ್ಯ. ಅದೊಂದು ನೀರವ, ಸ್ತಬ್ಧ ಕ್ಷಣ ಅಷ್ಟೇ. ಅದನ್ನು ಹಿಡಿಯುವುದು ವೈದ್ಯರ ಕಥಾಜಗತ್ತಿನ ಹೆಚ್ಚುಗಾರಿಕೆ.

‘ಕಪ್ಪೆನುಂಗಿದ ಹುಡುಗ’ ಕತೆ ಎರಡು ಸ್ತರದಲ್ಲಿ ತೆರೆದುಕೊಳ್ಳುತ್ತದೆ. ಮೊದಲಿಗೆ ಅದು ಅರವತ್ತು ರೂಪಾಯಿಯ ಚೆಕ್ಕನ್ನು ಆರುನೂರು ಎಂದು ತಿದ್ದಿ ಪೋರ್ಜರಿ ಕೇಸಿನಲ್ಲಿ ಸಿಕ್ಕಿಕೊಂಡ ಒಬ್ಬ ನಿರ್ಲಿಪ್ತ ಹುಡುಗನದ್ದು. ಅವನು ಸಿಕ್ಕಿಬಿದ್ದಾಗಲೂ, ಪೋಲೀಸರು ಹಿಡಿದೊಯ್ದಾಗಲೂ, ಕೋರ್ಟಿಗೆ ಹಾಜರಾದಾಗಲೂ, ಕೈಕೋಳ ತೊಟ್ಟು ಕೂತ ಅವನಿಗೆ ತಾಯಿ ಚಿಕನ್ನಿನ ತುಂಡುಗಳನ್ನು ತಿನ್ನಿಸುವಾಗಲೂ ಅವನಲ್ಲಿ ಯಾವುದೇ ಭಾವಸಂಚಾರವಿಲ್ಲ. ಹಾಗಾಗಿ ಕಂಕಿಂ ಎನ್ನದ ಈ ಹುಡುಗ ಕಪ್ಪೆ ನುಂಗಿದ ಹುಡುಗ. ಇಂಥವನನ್ನು ಕೊನೆಗೂ ಹಿಡಿದು ಹಾಕಿದ ಸಂಭ್ರಮದಲ್ಲಿರುವ ಬ್ಯಾಂಕ್ ಸಿಬ್ಬಂದಿಯ ನಡುವೆ ಕೇಂದ್ರವಾಗಿರುವ ಮ್ಯಾನೇಜರ್ ರಮಾಕಾಂತ ಮತ್ತೆ ‘ಉದ್ಯೋಗಪರ್ವ’ ಕತೆಯ ಕಾರ್ಪೊರೇಟ್ ಹಾವೇಣಿಯಾಟದಲ್ಲಿ ನುರಿತ ಆಸಾಮಿ. ನಿಧಾನವಾಗಿ ಮತ್ತು ಅಷ್ಟೇ ತಾಂತ್ರಿಕ ಎಚ್ಚರದೊಂದಿಗೆ ಹಂತಹಂತವಾಗಿ ಬಿಚ್ಚಿಕೊಳ್ಳುವ ಕತೆ ಇವನ ವಿವಾಹೇತರ ಸಂಬಂಧವೊಂದು ಬಿಗಡಾಯಿಸಿದ ಸಂಗತಿಯ ಸುತ್ತ ಹೆಣೆದುಕೊಂಡಿದೆ. ತಮಾಷೆಯೆಂದರೆ, ಕೆಲಕಾಲದಿಂದ ಮುಂಬಯಿಯಿಂದ ದೂರದಲ್ಲಿರುವ ಈತನಿಗೇ ಮುಂಬಯಿಯಲ್ಲಿ ತನ್ನ ಗುಟ್ಟು ಹೇಗೆ ಬಯಲಾಯಿತು, ಎಷ್ಟು ಬಯಲಾಯಿತು, ಯಾರಿಂದ ಬಯಲಾಯಿತು ಎಂಬೆಲ್ಲದರ ವಿವರಗಳು ಗೊತ್ತಿಲ್ಲದಿರುವುದರಿಂದ, ಅದು ಬೇರೆ ಬೇರೆ ಬಗೆಯಲ್ಲಿ ಅನಿರೀಕ್ಷಿತವಾಗಿ ಮುಖಕ್ಕೆ ರಾಚಿದಾಗ ಬಾಯ್ತೆರೆಯಲಾರದ ಕಪ್ಪೆ ನುಂಗಿದ ಹುಡುಗ ಈತನೇ ಆಗಿಬಿಡುವುದು!

ಈ ಎರಡು ಸ್ತರಗಳ ನಡುವೆ ಒಂದು ಕುತೂಹಲಕರ ವಿದ್ಯಮಾನದ ಚಿತ್ರಣವಿದೆ. ಅದು ಸಮನ್ಸ್ ಕೊಡಲು ಬಂದ ಒಬ್ಬ ಕಾನ್ಸಟೇಬಲ್ಲನ ಆಗಮನವನ್ನು ಪುಟ್ಟ ಹಳ್ಳಿಯೊಂದರ ಜನ ತಪ್ಪಾಗಿ ಭಾವಿಸಿ ನಡೆದುಕೊಳ್ಳುವ ರೀತಿಯಲ್ಲಿದೆ. ಈ ಮುಗ್ಧ ಮಂದಿ ಅವನು ಬಂದಿರುವುದು ಬ್ಯಾಂಕಿನ ಮ್ಯಾನೇಜರ್ ‘ತಿಂದಿರುವುದ’ರಿಂದ ‘ಹಿಡಿದು’ ಕೊಂಡೊಯ್ಯಲು ಎಂದೇ ತಿಳಿದಿರುತ್ತಾರೆ. ಪೋಲೀಸನೇ ಇಪ್ಪತ್ತು ರೂಪಾಯಿ ಇಸಿದುಕೊಂಡು ರಮಾಕಾಂತರಿಗೆ ಸೆಲ್ಯೂಟ್ ಹೊಡೆದು ಮರಳಿದಾಗ ನಿರಾಶರಾದ ಮಂದಿ ‘ಸಾಮೀಲಾಗ್ಯಾನ ಕಾಣತೈತಿ’ ಎಂದು ಸಮಾಧಾನಪಟ್ಟುಕೊಳ್ಳುತ್ತಾರೆ! ಈ ಪುಟ್ಟ ಚಿತ್ರದಲ್ಲೇ ಸಮಾಜ ಇನ್ನೊಬ್ಬರ ವೈಯಕ್ತಿಕ ವಿಚಾರದಲ್ಲಿ (ವಿವಾಹೇತರ ಸಂಬಂಧ) ತಳೆಯುವ ಅನಗತ್ಯ ಆಸಕ್ತಿ, ತೂರಿ ಬಿಡುವ ಅನುದ್ದಿಶ್ಯ ಕೊಂಕು-ಕುಹಕ ಮತ್ತು ಅಂಥದ್ದೇನೂ ಇಲ್ಲವೆಂದರೆ ಅವರಿಗಾಗುವ ನಿರಾಶೆ - ಎಲ್ಲವನ್ನೂ ಶ್ರೀನಿವಾಸ ವೈದ್ಯರು ಅದ್ಭುತವಾಗಿ ಸಂಯೋಜಿಸಿದ್ದಾರೆ.

ಈ ಕತೆಯಲ್ಲಿ ಶ್ರೀನಿವಾಸ ವೈದ್ಯರು ಸ್ಪಷ್ಟವಾಗಿಯೇ ‘ಸೋದ್ದಿಶ್ಯವಾದ ಬೌದ್ಧಿಕ ಕಸರತ್ತನ್ನು’ ಅತ್ಯಂತ ಸೃಜನಶೀಲ ನೆಲೆಯಲ್ಲಿ ಅಷ್ಟೇ ಸಹಜವಾಗಿ ಸಾಧಿಸಿದ್ದಾರೆ ಎನಿಸುತ್ತದೆ. ಇಂಥ ಒಂದು, ತನ್ನ ಮಿತಿಯನ್ನು ತಾನೇ ಮೀರಿ ತನ್ನ ಸೃಜನಶೀಲ ಸಾಧ್ಯತೆಗಳನ್ನು ಕಂಡುಕೊಳ್ಳುವ ಸಾಹಸವನ್ನು ಕತೆಗಾರ ಮಾಡಬೇಕಿರುವುದು ಅತ್ಯಂತ ಅಗತ್ಯವೆಂದೂ ಕಾಣುತ್ತದೆ.

ಸಂಕಲನದ ಕೊನೆಯ ಕತೆ ‘ತರಬೇತಿಯ ದಿನಗಳು’ ಮತ್ತೆ ಭಾರತ-ಚೀನಾ ಯುದ್ಧದ ದಿನಗಳಿಗೆ ಹೊರಳುತ್ತದೆ. ಬಹಳ ಮಟ್ಟಿಗೆ ಇದು ಈ ಸಂಕಲನದ ಮೊದಲ ಕತೆ ‘ಕೆಲವಂ ಬಲ್ಲವರಿಂದ...’ದ ಎರಡನೆಯ ಅಧ್ಯಾಯ ಎಂದುಕೊಂಡರೂ ಸರಿಹೊಂದುವಂತಿದೆ. ಕಾಲೇಜು ದಿನಗಳಲ್ಲಿ ಹೌದೋ ಅಲ್ಲವೋ ಎಂಬ ಅನುಮಾನಗಳಲ್ಲೇ ಹುಟ್ಟಿ ಅಲ್ಲಿಯೇ ನಿಂತು ಹೋದ ಒಂದು ನವಿರಾದ ಪ್ರೇಮಪ್ರಕರಣವಿದೆ. ಅದು ಮುಂದೆ ಆಗಾಗ ಮನಸ್ಸಿಗೆ ಹಿಡಿಸಿದ ಹುಡುಗಿಯರ ಜೊತೆಜೊತೆಗೇ ನೆನಪಾಗುತ್ತ ಉಳಿದರೂ, ಅತ್ತ ಯಾವುದೇ ನಿಷ್ಠೆಗೆ ಬದ್ಧವಾಗದೆ, ಸಂಪರ್ಕ ಉಳಿಸಿಕೊಂಡು ಸಂಬಂಧ ಬೆಳೆಸಿಕೊಳ್ಳುವಷ್ಟರ ಮಟ್ಟಕ್ಕೆ ಪಕ್ವವಾಗದೇ ಕೇವಲ ಒಂದು ಪ್ರೇಮಭಾವದ ಪ್ರತಿಮೆಯಷ್ಟೇ ಆಗಿ ಉಳಿದುಬಿಡುತ್ತದೆ. ಈ ನಿರಾಶೆ, ಬದುಕಿನಲ್ಲಿ ಕಳೆದುಕೊಂಡ ಇಂಥವೇ ಇನ್ನಷ್ಟು ಅವಕಾಶಗಳ ಜೊತೆ ಒಂದಾಗಿ ನಿಂತು ಕಾಡಲು ಹವಣಿಸುವಂತಿರುವಾಗಲೇ ಎಲ್ಲದರಿಂದ ಕಳಚಿಕೊಂಡಂತೆ ಮುಂಬಯಿಗೆ ಮರಳುವ ಗೋಪಾಲನ ಕತೆ ಇದು. ಇದರ ಯಶಸ್ಸೆಲ್ಲವೂ ಶ್ರೀನಿವಾಸ ವೈದ್ಯರ ಎಂದಿನ ಲವಲವಿಕೆಯ ವಿವರಗಳಿಗೆ, ಧಾರವಾಡದ ಭಾಷೆಗೆ ಮತ್ತು ಇಲ್ಲಿನ ಚಿತ್ರಕ ವಿವರಗಳ ಶಕ್ತಿಗೆ ಸಲ್ಲಬೇಕು.

ಈ ಸಂಕಲನದ ಮಹತ್ವವಿರುವುದು ಶ್ರೀನಿವಾಸ ವೈದ್ಯರ ಕತೆಗಳೆಂದರೆ ಧಾರವಾಡ ಕನ್ನಡದ ಸೊಗಡಿನಲ್ಲಿ ಅರಳುವ ಪಕ್ವ ಜೀವನಾನುಭವದ, ಹಳೆಯ ನೆನಪುಗಳ ಹೂರಣವುಳ್ಳ ನುಡಿಚಿತ್ರಗಳು ಎನ್ನುವ ಬ್ರಾಂಡ್ ಸ್ಥಾಯಿಯಾಗದಂತೆ ಶ್ರೀನಿವಾಸ ವೈದ್ಯರು ಕೈಗೊಂಡ ಕೆಲವು ಯಶಸ್ವೀ ಪ್ರಯೋಗಗಳಲ್ಲಿ ಮತ್ತು ಅವರ ಕಥನಶೈಲಿಯ ಜೀವಂತಿಕೆಯಲ್ಲಿ.

No comments: