Wednesday, November 21, 2012

ಗುರುತು ಸಿಕ್ಕದವರ ನಡುವೆ...

ಮಿಲನ್ ಕುಂದೇರಾನ ಕಾದಂಬರಿ Identity (1998) ಕಥಾನಕಕ್ಕಿಂತ ಹೆಚ್ಚು ವೈರುಧ್ಯಮಯ ವಿಚಾರಗಳ ಒಂದು ಸರಪಳಿಯಂತಿದೆ. ಈ ಎಲ್ಲ ವಿಚಾರಗಳೂ ಮಿಲನ್ ಕುಂದೇರಾಗೆ ತುಂಬ ಇಷ್ಟವಾದ Forgetting, Memory, Identity, Death, Life, Love, Laughter, Dream, Reality ಗಳ ಸುತ್ತಲೇ ಹರಿದಾಡುತ್ತವೆ. ಇವುಗಳನ್ನೆಲ್ಲ ಏಕಸೂತ್ರದಲ್ಲಿ ನೇಯ್ದಿಡಲು ಒಂದು ಜೋಡಿಯ ದಾಂಪತ್ಯದ ಏಳುಬೀಳುಗಳ ಸರಳವಾದ ಕತೆಯಿದೆ. ಮೊದಲು ಇಲ್ಲಿ ಕುಂದೇರಾ ನಮ್ಮನ್ನು ಕಾಡುವ ಕೆಲವು ವಿಚಾರಗಳನ್ನೇ ಗಮನಿಸುವುದು ಸೂಕ್ತ.

ವ್ಯಕ್ತವಾದದ್ದು ವ್ಯಕ್ತಿ. ವ್ಯಕ್ತವಾಗದೇ ಉಳಿದದ್ದು ಅವ್ಯಕ್ತ - ಭೂತ. Ghost. ಆದರೆ ವ್ಯಕ್ತಿಯೊಬ್ಬ ವ್ಯಕ್ತನಾಗುವುದು ಯಾವುದರಿಂದ? ದೇಹ, ಮಾತು, ದೇಹದ ಭಾಷೆ ಮತ್ತು ಆಡುವ ಭಾಷೆ, ನಡವಳಿಕೆ, ವರ್ತನೆ ಇತ್ಯಾದಿ - ನಾವು ಗುರುತಿಸಬಹುದಾದ ಒಂದಿಷ್ಟು ಚರ್ಯೆಗಳಿಂದ. ಆದರೆ ಎಷ್ಟೋ ಸಲ ವ್ಯಕ್ತವಾಗುವುದು ಸುಳ್ಳಾಗಿಯೂ ಅವ್ಯಕ್ತವಾದದ್ದು ನಿಜವಾಗಿಯೂ ಇರುತ್ತದೆ!

ನಮ್ಮ ಮಾತುಗಳು ಸುಳ್ಳಾಗಿರುವುದು ಸಾಧ್ಯವಿದೆ. ಸುಳ್ಳುಗಳನ್ನು ಆಡುವುದು ಸಾಧ್ಯವಿದೆ. ಆದರೆ ಆಡದೇ ಇರುವುದು ಕಷ್ಟ. ಮೌನವಾಗಿದ್ದು ಸುಳ್ಳು ಹೇಳುವುದಕ್ಕೆ ಸಾಧ್ಯವಿಲ್ಲ ಎಂದಲ್ಲ, ಕಷ್ಟ. ನಿಜ ಹೇಳಬೇಕಾದ ಸಂದರ್ಭದಲ್ಲಿ ಮೌನವಾಗಿದ್ದರೆ ಸುಳ್ಳು ಹೇಳಿದಂತಾಗುತ್ತದೆ. ಸುಳ್ಳನ್ನು ಪ್ರತಿರೋಧಿಸದೇ ಮೌನವಾಗುಳಿದಾಗಲೂ ಸುಳ್ಳು ಹೇಳಿದಂತಾಗುತ್ತದೆ. ಆದರೆ ಈ ಎರಡೂ ಸಂದರ್ಭದಲ್ಲಿ ಒಂದು ವಿಧವಾದ active ಭಾಗವಹಿಸುವಿಕೆ ಇರುತ್ತದೆ. ಕ್ರಿಯಾಹೀನನಾಗಿ ಉಳಿಯುವುದರಿಂದ ‘ಮಾಡುವ’ ಕ್ರಿಯೆ ಇಲ್ಲಿದೆ. ಹಾಗಾಗಿ ಮಾತಿನ ಮೂಲಕ, ಬರವಣಿಗೆಯ ಮೂಲಕ ಸುಳ್ಳನ್ನು ಹೇಳುವುದಕ್ಕೆ, ಸುಳ್ಳನ್ನು ನಿಜವೆಂದು ನಂಬುವಂತೆ ಮಾಡುವುದಕ್ಕೆ ಸಾಧ್ಯವಿದೆ. ಇದರಿಂದಾಗಿ, ವ್ಯಕ್ತಿಯನ್ನು ಗುರುತಿಸುವುದಕ್ಕೆ ವ್ಯಕ್ತವಾದದ್ದು ಮಾತ್ರ ಸಾಕಾಗುವುದಿಲ್ಲ; ಆಡದೇ ಇರುವುದನ್ನೂ, ಬರೆಯದೇ ಇರುವುದನ್ನೂ ‘ಕಾಣುವುದು’ ನಮಗೆ ಸಾಧ್ಯವಾಗಬೇಕಾಗುತ್ತದೆ. ಇಲ್ಲದಿದ್ದರೆ ವ್ಯಕ್ತಿ ತಾನು ‘ಇದು’ ಎಂದು ಜಗತ್ತಿಗೆ ಏನನ್ನು ಪ್ರದರ್ಶಿಸುತ್ತಾನೋ ಅದೇ ನಿಜವಾಗಿದೆ ಎಂದು ತಿಳಿಯುತ್ತೇವೆ. ಆದರೆ ಅದು ಪ್ರದರ್ಶನ. ಸ್ನೋ, ಪೌಡರು, ಲಿಪ್‌‍ಸ್ಟಿಕ್ಕು, ಕಾಸ್ಮೆಟಿಕ್ಸು ಬಳಸಿ ಕಾಣಿಸಿದ ಮುಖ. ನಯವಾಗಿ ಶೇವ್ ಮಾಡಿ, ಸೆಂಟು ಹೊಡೆದುಕೊಂಡು, ಬಣ್ಣಬಣ್ಣದ, ತುಂಬ ಬೆಲೆಬಾಳುವ ಶರ್ಟು, ಸೂಟು-ಬೂಟು, ಟೈ ಕಟ್ಟಿ ಟ್ರಿಂ ಆಗಿ, ಜಂಟಲ್‌ಮನ್ ಆಗಿ ಕಾಣಿಸಿಕೊಳ್ಳುವ ಟ್ರಿಕ್ಕು. Presentation ಅಥವಾ ಪ್ರದರ್ಶನ.

****
ಚಿತ್ತಾಲರ ಒಂದು ಕತೆಯೋ ಕಾದಂಬರಿಯಲ್ಲಿಯೋ ಇದು ಬರುತ್ತದೆ; ಒಬ್ಬ ಸ್ನೇಹಿತನನ್ನು ಅವನ ತಂಪಾದ, ಅರೆಗತ್ತಲ ಎಸಿ ಕ್ಯಾಬಿನ್ನಿನಲ್ಲಿ ಭೇಟಿಯಾದಾಗ ಆತನಿಗೆ ಗುರುತು ಹತ್ತುವುದೇ ಇಲ್ಲ. ಅದೇ ಹೊರಬಂದು ಕಣ್ಣುಕುಕ್ಕುವ ಬೆಳಕಿನಲ್ಲಿ, ಬಿಸಿಲಿನಲ್ಲಿ ನಿಂತಿದ್ದೇ ಥಟ್ಟೆಂದು ಗುರುತು ಹತ್ತಿ ‘ಅರೆ!’ ಎನಿಸಿಬಿಡುತ್ತದೆ! ಇಲ್ಲಿ ಗುರುತು ಹತ್ತಲು ಅಥವಾ ಹತ್ತದಿರಲು ಕಾರಣವಾಗಿದ್ದು ಪ್ರದರ್ಶನದ ಗೊಂದಲವಲ್ಲ. ಪರಿಸ್ಥಿತಿ ಹುಟ್ಟಿಸಿದ ಗೊಂದಲವಿದು.
****
ಮಿಲನ್ ಕುಂದೇರಾನ ಕಾದಂಬರಿ Identity ಒಂದು ರೀತಿಯಲ್ಲಿ ಕಾದಂಬರಿಯೇ ಅಲ್ಲ ಎನಿಸಿಕೊಂಡ, ಕೆಲವೊಂದು ತಾತ್ವಿಕ ವಿಚಾರಗಳ ಚರ್ಚೆಗಾಗಿ ಒಂದೆರಡು ಪಾತ್ರಗಳನ್ನು ಸಮಯೋಚಿತವಾಗಿ ಬಳಸಿಕೊಂಡ, ಕಥಾನಕವೇ ಇಲ್ಲದ ಕೃತಿ. ಆದರೆ ಪ್ರತಿ ಪುಟದಲ್ಲಿಯೂ ತುಂಬ ಆಳವಾದ, ಸಂಕೀರ್ಣವಾದ ಮತ್ತು ಒಂದಕ್ಕೊಂದು ತದ್ವಿರುದ್ಧವಾದ ಮತ್ತು ವೈರುಧ್ಯಗಳ ನಡುವೆಯೂ ತೀರ ವಾಸ್ತವಿಕವಾದ ವಿಚಾರಗಳನ್ನು ತನ್ನ ಚಿಂತನೆಯ ತೆಕ್ಕೆಗೆ ತೆಗೆದುಕೊಳ್ಳುತ್ತಲೇ ಹೋಗುವ ಕೃತಿಯಿದು. ಬದುಕಿನಲ್ಲಿ ನಿರ್ದಿಷ್ಟವಾದ, ಗೊಂದಲವೇ ಇಲ್ಲದಂಥ ನಿಖರ ಪಾಯಿಂಟುಗಳನ್ನು ಹುಡುಕುವ ಮಂದಿಗೆ ಇಲ್ಲಿ Point ಇಲ್ಲದ್ದು ಮಹಾಕಿರಿಕಿರಿಯನ್ನು ಹುಟ್ಟಿಸಿ ಹುಚ್ಚುಕೆರಳುವಂತೆ ಮಾಡಿದರೆ ಅಚ್ಚರಿಯಿಲ್ಲ. ಕುಂದೇರಾನ ಈ ಕಾದಂಬರಿಗೆ ಬಂದ ಒಂದು ವಿಮರ್ಶೆಯಂತೂ ಇದಕ್ಕೆ ನಿದರ್ಶನವೆಂಬಂತಿದೆ! ಬದುಕಿಗೆ ಸಂಬಂಧಿಸಿದ ಎಷ್ಟೋ ವಿಚಾರಗಳಲ್ಲಿ ಪಾಯಿಂಟುಗಳಿರುವುದಿಲ್ಲ ಎಂಬ ಪಾಯಿಂಟನ್ನು ನಾವು ಕಂಡುಕೊಳ್ಳಲು ವಿಫಲರಾದರೆ ಯಾರೂ ನಮಗೆ ಸಹಾಯ ಮಾಡುವುದು ಸಾಧ್ಯವಿಲ್ಲ. ನಮನಮಗೇ ಅದು ಅರಿವಾಗದೇ ಹೋದರೆ, ನಮನಮಗೇ ಅದನ್ನು ಕಂಡುಕೊಳ್ಳುವುದು ಸಾಧ್ಯವಾಗದೇ ಹೋದರೆ, ಇನ್ನೊಬ್ಬರು ಹೇಳುವುದರಿಂದಷ್ಟೇ ಅದನ್ನು ಕಂಡುಕೊಂಡು ಬಿಟ್ಟರೆನ್ನುವುದು ಸುಳ್ಳು. ಆಗಲೂ ಅದು ಸಾಧ್ಯವಾಗುವುದಿಲ್ಲ ಎಂಬುದು ನಿರ್ವಿವಾದ.
****
ಕೆಲವೊಮ್ಮೆ ಸ್ವಲ್ಪ ಅಂತರದಿಂದ ನಮಗೆ ಯಾರನ್ನೋ ನೋಡಿ ಇನ್ಯಾರನ್ನೋ ಕಂಡಂತಾಗುವುದಿಲ್ಲವೆ? ಹುಬೇಹೂಬ್ ಒಬ್ಬರ ತರವೇ ಇನ್ನೊಬ್ಬರು ಕಂಡಿದ್ದರ ಫಲವದು. ಆದರೆ ನೀವು ನಿಜಕ್ಕೂ ನನ್ನನ್ನೇ ನೋಡಿದ್ದರೂ ನಾನು ಇನ್ಯಾವುದೋ ಕಾರಣಕ್ಕೆ ಅದು ನಾನಲ್ಲವೇ ಅಲ್ಲ ಎಂದು ಸಾಧಿಸಿದರೆ? ಅಥವಾ ನಿಜಕ್ಕೂ ಅದು ನಾನಲ್ಲದಿದ್ದಾಗ್ಯೂ ನೀವು ನಿಮ್ಮ ಕಣ್ಣುಗಳನ್ನು ಅನುಮಾನಿಸಲು ಸಿದ್ಧರಿಲ್ಲದಷ್ಟು ನನ್ನನ್ನೇ ಕಂಡಿದ್ದ ಆತ್ಮವಿಶ್ವಾಸವುಳ್ಳವರಾಗಿದ್ದರೆ! ಎರಡು ವರ್ಷಗಳಷ್ಟು ಹಿಂದೆಯೇ ಸತ್ತುಹೋದ ವ್ಯಕ್ತಿಯೊಬ್ಬನನ್ನು ನಿಜಕ್ಕೂ ನಡುಹಗಲು, ನಡುಬೀದಿಯಲ್ಲಿ ಭೇಟಿಯಾಗಿ ಮಾತನಾಡಿದ್ದರೂ ಆಮೇಲೆ ಅದನ್ನು ಯಾರೂ ನಂಬುತ್ತಿಲ್ಲ ಮತ್ತು ನಿಮ್ಮ ಬಳಿ ಅದಕ್ಕೆ ಯಾವ ಸಾಕ್ಷಿಯೂ ಇಲ್ಲ ಎಂದಾದರೆ!

ಕಣ್ಣುಗಳು ಮೋಸ ಹೋಗುತ್ತವೆ, ಮೋಸ ಮಾಡುತ್ತವೆ. ಸರಿ. ನಾವು ಒಬ್ಬರನ್ನು ಗುರುತಿಸುವುದು ಬರೇ ಕಣ್ಣಿನಿಂದಲ್ಲವಲ್ಲ. ಕುರುಡರು ಕೂಡಾ ಕೆಲವರನ್ನು ಗುರುತಿಸಬಲ್ಲರು. ಸೊ, ಗ್ರಹಿಕೆಯ ವಿಧಾನಗಳು ಹಲವಿವೆ. ಆ ಒಂದೊಂದೇ ವಿಧಾನಗಳು ಹೇಗೆ ಮೋಸ ಮಾಡಬಹುದು ಎನ್ನುವುದನ್ನು ಕಾದಂಬರಿ ಹಂತಹಂತವಾಗಿ ಕೈಗೆತ್ತಿಕೊಳ್ಳುತ್ತದೆ, ಒಂದೊಂದೇ ಇಂದ್ರಿಯಗಳ ಮೇಲೆ ನಮಗಿರುವ ಅತಿ ವಿಶ್ವಾಸವನ್ನು ತರ್ಕಕ್ಕೆ ಹಚ್ಚುತ್ತದೆ.
****
ಎಸ್.ದಿವಾಕರರ ಒಂದು ಕವನ/ಕತೆಯಿದೆ. ಅವರ ಖ್ಯಾತ ಕತೆ ‘ಕ್ರೌರ್ಯ’ದ ಒಂದು ಪಾತ್ರವಾದ ಪ್ರೊಫೆಸರ್ ತಿರುಚ್ಚೆಂದೂರ್ ಶ್ರೀನಿವಾಸ ರಾಘವನ್ ಅವರು ಒಂದು ದಿನ ಬೆಳಗ್ಗೆ ಹತ್ತುಗಂಟೆ ಹೊತ್ತಿಗೆ ಕನ್ನೆಮರ ಲೈಬ್ರರಿಯ ಕತ್ತಲೆ ಕವಿದ ಕೋಣೆಗಳೊಳಗೆ ಆಳ್ವಾರುಗಳ ಪಾಶರುಗಳಿಗೆ ಬರೆಯಲಾದ ಹಳೆಯ ಟೀಕುಳ್ಳ ಗ್ರಂಥವೊಂದನ್ನು ಹುಡುಕಲು ಹೋದವರು ಕೊನೆಗೂ ಅದು ಸಿಕ್ಕಿ ಹೊರಗೆ ಬಂದವರೆ ಗರಬಡಿದವರಂತೆ ನಿಂತು ಬಿಡುತ್ತಾರೆ. ಕಾರಣ, ಅವರು ಲೈಬ್ರರಿಯೊಳಗೆ ಹೋಗುವಾಗ ಹೊರಗೆ ನಿಲ್ಲಿಸಿ ಹೋಗಿದ್ದ ಜಗತ್ತನ್ನೇ ಯಾರೋ ಕದ್ದೊಯ್ದಿದ್ದಾರೆ! ಹಿಂದೆ ತಿರುಗಿ ನೋಡಿದರೆ ನಿರೀಕ್ಷಿಸಿದ್ದಂತೆ ಲೈಬ್ರರಿಯೂ ಮಾಯ! ಈ ಕತೆಯ ಹೆಸರು ‘ಜಗವೇ ಮಾಯ’.

ಮಂದಿ ಕಳೆದು ಹೋಗುತ್ತಾರೆ. ಓಡಿ ಹೋಗುವವರು, ನಾಪತ್ತೆಯಾದವರು, ನಿಗೂಢವಾಗಿ ಕಣ್ಮರೆಯಾದವರು, ಭೂಗತರಾದವರು ಇತ್ಯಾದಿ. ಕಲ್ಪಿಸಿಕೊಳ್ಳಿ, ಸಂಜೆ ಮನೆಗೆ ಹೋಗಿ ಕದತಟ್ಟಿದಾಗ ಮಡದಿ, ಮಕ್ಕಳು, ವಯಸ್ಸಾದ ತಂದೆ ಯಾ ತಾಯಿ ಅಥವಾ ಇಬ್ಬರೂ ಇದ್ದಕ್ಕಿದ್ದಂತೆ ನಾಪತ್ತೆಯಾಗಿ ವಾರಗಟ್ಟಲೆ ಎಲ್ಲಿಗೆ ಹೋಗಿದ್ದಾರೆ, ಏನಾದರು ಎಂಬುದೇ ಗೊತ್ತಾಗದ ಸ್ಥಿತಿ ಬಂದುಬಿಟ್ಟರೆ! ಎಷ್ಟು ಮಂದಿ ಹೀಗಾಗಿದ್ದಾರೆ. ಶಾಲೆಗೆಂದು, ಪೇಟೆಗೆಂದು ಹೋದವರು ಮರಳುವುದೇ ಇಲ್ಲ. ಹಾಗೆಂದು ಅವರ ಕತೆಯೇನೂ ಮುಗಿದಿಲ್ಲ. ನಾವು ನಿರಂತರವಾಗಿ, ನಾವೇ ಕತೆಯಾಗುವವರೆಗೆ ಅವರು ಎಂದಾದರೂ ತಿರುಗಿ ಬಂದಾರೆಂದು ಕಾಯುತ್ತಿರಬೇಕು, ಅಷ್ಟೆ. ಬೇರೆ ದಾರಿಯೇ ಇಲ್ಲದಂತೆ ಮಾಡಿ ಹೋದವರು ಅವರು. ನ್ಯೂಯಾರ್ಕಿನ ಟ್ರೇಡ್ ಸೆಂಟರ್ ಪತನವಾದ ನಂತರವೂ ತಮ್ಮವರು ಮರಳಿ ಬರಬಹುದೆಂದು ಕಾದವರು ಎಷ್ಟು ಮಂದಿಯಿಲ್ಲ?

ಡರ್‌ನಾ ಮನಾ ಹೆ ಎಂಬ ಒಂದು ಸಿನಿಮಾದಲ್ಲಿ ಒಬ್ಬ apple ಮಾರುತ್ತಿರುತ್ತಾನೆ. ಭಯಂಕರವಾದದ್ದು ಏನೆಂದರೆ, ಈ apple ತಿಂದವರೆಲ್ಲ ಮರುದಿನ ಬೆಳಿಗ್ಗೆ ತಾವೇ ಸ್ವತಃ apple ಆಗಿ ಬಿಟ್ಟಿದ್ದಾರೆ! ಇಡೀ ಊರಿನಲ್ಲಿ ಈ apple ಮಾರುವವನು ಮತ್ತು ತಿನ್ನದೇ ಉಳಿದ ಶಿಲ್ಪಾಶೆಟ್ಟಿ ಇಬ್ಬರನ್ನು ಬಿಟ್ಟರೆ ಉಳಿದವರೆಲ್ಲ appleಗಳಾಗಿ ಬಿಟ್ಟಿದ್ದಾರೆ! ಬೇಕಾ ಈ ಯಾಪ್ಪಲ್ಲು!!
****
ಕನಸುಗಳು ಬೀಳುತ್ತವೆ. ಎಂಥ ತನ್ಮಯತೆಯನ್ನುಂಟು ಮಾಡುತ್ತವೆ ಈ ಕನಸುಗಳು. ಇವತ್ತಿನ ದಿನಕ್ಕೆ, ನಿನ್ನೆಯದೇನೋ ವಿಷಯಕ್ಕೆ ಸಂಬಂಧಿಸಿದ ಕನಸುಗಳು ಬಿದ್ದಾಗಲೂ ಇಪ್ಪತ್ತು-ಮುವ್ವತ್ತು ವರ್ಷಗಳಷ್ಟು ಹಿಂದೆ ವಾಸವಿದ್ದ ಯಾವುದೋ ಮನೆಯಲ್ಲಿದ್ದಂತೆ ಅದೆಲ್ಲ ನಡೆಯುತ್ತದೆ, ಕನಸಿನಲ್ಲಿ. ಧಡಕ್ಕನೆ ಎದ್ದು ನೋಡಿದರೆ ಕನಸು! ಕನಸಿನಲ್ಲಿ ನನ್ನದೆ ಹೆಣಕ್ಕೆ ಬಿಳಿಬಟ್ಟೆ ತೊಡಿಸಿ ಜಗಲಿಯಲ್ಲಿ ಮಲಗಿಸಿದ್ದಾರೆ, ಹೆಂಡತಿ ಅಳುತ್ತಿದ್ದಾಳೆ, ಭಟ್ಟರು ದರ್ಬೆ, ತಂಬಿಗೆ ಹುಡುಕುತ್ತಿದ್ದಾರೆ. ಇನ್ನೇನು ನಾರಾಯಣ, ನಾರಾಯಣ ಎನ್ನುತ್ತ ಚಟ್ಟ ಎತ್ತಿದರು ಎನ್ನುವಾಗ ಧಡಕ್ಕನೆ ಎದ್ದರೆ ಮಲಗಿದ್ದು ಹಾಸಿಗೆ ಮೇಲಷ್ಟೇ, ಎಲ್ಲ ಕನಸು! ಕನಸು ಎಂದು ಗೊತ್ತಾದಾಗ ಎಂಥದೋ ಸಮಾಧಾನ, ಸರಿಯೇ. ಆದರೆ ಅದಕ್ಕೆ ಸ್ವಲ್ಪ ಹೊತ್ತು ತಗಲುತ್ತದೆ. ಆ ತಲ್ಲಣದ, ಆತಂಕದ ಸ್ಥಿತಿಯಿದೆಯಲ್ಲ, ಅದು ನಿಜ ತಾನೆ! ಅಷ್ಟು ಹೊತ್ತು ಅದು ವರ್ತಮಾನವನ್ನು ಸುಳ್ಳಾಗಿಸಿದ್ದು ನಿಜ ತಾನೆ? ಹಾಗಾದರೆ ಕನಸು ಸುಳ್ಳೆ? ಸುಳ್ಳನ್ನು ಅಷ್ಟೊಂದು ತನ್ಮಯತೆಯಿಂದ ಬದುಕುವಂತೆ ಮಾಡಿದ್ದು ಏನು!

ಹತ್ತು ಹನ್ನೆರಡು ವರ್ಷಗಳಿಂದ ಕೋಮಾದಲ್ಲಿರುವವರ ಕತೆ ತೆಗೆದುಕೊಳ್ಳಿ. ಮುನ್ನಾ ಭಾಯ್ ಎಂಬಿಬಿಎಸ್ ಸಿನಿಮಾದಲ್ಲಿ ಕೋಮಾದಲ್ಲಿರುವ ಒಬ್ಬ ವ್ಯಕ್ತಿಯಿದ್ದಾನಲ್ಲ. ಹಾಗೆಯೇ ಮೊನ್ನೆ ಮೊನ್ನೆ ಬಂದ Staying Alive ಸಿನಿಮಾದಲ್ಲಿ ಕೂಡಾ ಒಬ್ಬಳು ಕೋಮಾದಲ್ಲಿ ವರ್ಷಾನುಗಟ್ಟಲೆ ಕಳೆಯುವ ಪಾತ್ರವಿದೆ. ಅವಳನ್ನು ಗಂಡ ನಿದ್ದೆಯಲ್ಲಿರುವವಳನ್ನು ನೋಡಿಕೊಂಡಷ್ಟೇ ಅಕ್ಕರೆಯಿಂದ ನೋಡಿಕೊಳ್ಳುತ್ತಿರುತ್ತಾನೆ. ಇವರಿಗೆ ನಮ್ಮ ಮಾತು, ಸಾನ್ನಿಧ್ಯವೆಲ್ಲವೂ ಕೆಲವೊಮ್ಮೆ ಅತ್ಯಂತ ಸ್ಪಷ್ಟವಾಗಿ ಮತ್ತು ಕೆಲವೊಮ್ಮೆ ಅಸ್ಪಷ್ಟವಾಗಿ ಅರಿವಾಗುತ್ತದಂತೆ. ಆದರೆ ನಮಗೆ ಹಾಗನ್ನಿಸುವಂತೆ ಅವರಲ್ಲಿ ಯಾವುದೇ ಸ್ಪಂದನವಿರುವುದಿಲ್ಲ ಅಷ್ಟೆ. ಕೆಲವೊಮ್ಮೆ ವೈದ್ಯರೂ ಅದನ್ನು ದೃಢೀಕರಿಸುವುದಿಲ್ಲವಂತೆ! ಅದೊಂದು ತರದ ಕನಸಿನ ಬದುಕು. ನಾವೇ ಕೋಮಾದಲ್ಲಿ ಒಂದಷ್ಟು ವರ್ಷ ಇರುವುದಾದರೆ.....
****
ಊಟ ಮಾಡುವ ಹೊತ್ತಲ್ಲಿ ಹಸಿವಿಲ್ಲದಿದ್ದರೆ, ಪ್ರೇಮ ಮಾಡಬೇಕಾದ ಸಮಯದಲ್ಲಿ ಮನಸ್ಸು ಸರಿಯಿಲ್ಲದಿದ್ದರೆ, ಮಜಾ ಉಡಾಯಿಸಲು ಹಮ್ಮಿಕೊಂಡ ಪಾರ್ಟಿಯಲ್ಲಿ ನಿಮ್ಮನ್ನು ಇನ್ನೇನೋ ಕೊರೆಯುತ್ತಿದ್ದರೆ ಅದನ್ನೆಲ್ಲ ವಿವರಿಸಲು ಕೂಡಾ ನಿಮ್ಮಿಂದ ಆಗುತ್ತಿಲ್ಲ ಎನಿಸಿದರೆ ಎಷ್ಟು ಕಷ್ಟ! ಬಲವಂತದಿಂದ ವಿವರಿಸಲು ಹೊರಟಿರೋ, ಹೊರಗೆ ಬರುವುದೆಲ್ಲಾ ಸುಳ್ಳೇ. ಯಾಕೆಂದರೆ, ಆಗಿನ್ನೂ ನಿಜ ಏನೆಂದು ನಿಮಗೇ ಸರಿಯಾಗಿ ಗೊತ್ತಿರುವುದಿಲ್ಲವಲ್ಲ. ಕೊನೆಗೆ ಹಾಗೆ ಅವರಿವರಿಗೆ ಹೇಳಿಕೊಂಡ ಕಾರಣಗಳನ್ನೇ ನೀವೂ ನಂಬತೊಡಗಿ.....
****
ಪ್ರೀತಿಸಿದ ಹುಡುಗಿ ದೂರವಾಗುತ್ತಾಳೆ. ಅವಳ ಮದುವೆ ನಿಮ್ಮ ಕಣ್ಣೆದುರೇ ನಡೆದು ಹೋಗುತ್ತದೆ. ಹೊತ್ತು ಹೆತ್ತು ಸಾಕಿ ಸಲಹಿದ ಕೂಸು ಏನು ಮಾಡಿದರೂ ಬದುಕದೇ ತಾಯಿಯ ಮಡಿಲಲ್ಲೇ ಕೊನೆಯುಸಿರೆಳೆದು ತಣ್ಣಗಾಗುತ್ತದೆ. ನೀವು ಅಷ್ಟೊಂದು ಪ್ರೀತಿಸಿ ಸಾಕಿದ ನಾಯಿಯನ್ನು ಹುಚ್ಚು ನಾಯಿ ಕಡಿದ ಅನುಮಾನಕ್ಕೆ ಕೊಲ್ಲಬೇಕಾಗುತ್ತದೆ. ಮತ್ತು ಈ ದುಃಖವನ್ನೆಲ್ಲ ಮರೆಯಲು ನಮಗೆ ಸಲಹೆ ನೀಡುತ್ತಾರೆ. ದುಃಖವನ್ನು ಮರೆಯಬೇಕು ಮತ್ತು ಹೊಸದಾಗಿ ಬದುಕಲು ಸಿದ್ಧರಾಗಬೇಕು. ಮರೆಯಬೇಕು. ಮರೆಯುವುದು ಹೇಗೆ? ಮತ್ತು ಇನ್ನೂ ಕೆಲವನ್ನು ಮರೆಯದಿರುವುದು ಹೇಗೆ!!
****
ದಿನವೂ ಬಸ್ಸಿನಲ್ಲಿ ಆ ಹುಡುಗಿಯನ್ನು ನೋಡುತ್ತೇನೆ. ಚೆನ್ನಾಗಿದ್ದಾಳೆ. ಅವಳ ಬಿಳೀ ಮೈಗೆ ಒಪ್ಪುವ ಗಾಢ ವರ್ಣದ ಬಟ್ಟೆಯನ್ನೇ ತೊಡುತ್ತಾಳೆ, ತುಂಬ ಎಚ್ಚರಿಕೆಯಿಂದ ಕೂದಲು ಬಾಚಿ ಕಟ್ಟುತ್ತಾಳೆ, ಡ್ರೆಸ್ಸಿಗೆ ಹೊಂದುವಂತೆ ಕಿವಿಯ ಓಲೆಗಳನ್ನು, ತಲೆಯ ಕ್ಲಿಪ್ಪುಗಳನ್ನು ದಿನವೂ ಬದಲಿಸುತ್ತಾಳೆ, ಹಣೆಯ ಬಿಂದಿ ಕೂಡಾ ದಿನಕ್ಕೊಂದು ತರ. ಬ್ಯಾಗು ಕೂಡ ಬದಲಿಸುತ್ತಿರುವಂತೆ ಚಪ್ಪಲಿಯೂ ಮ್ಯಾಚಿಂಗ್ ಇರುವಂತೆ ನಿತ್ಯ ಬದಲು. ಅಷ್ಟಾಗಿಯೂ ಗಂಭೀರ ವದನೆ, ತಾನಾಯಿತು ತನ್ನ ಜಗತ್ತಾಯಿತು. ಮೆಲ್ಲನೇ ನಡೆಯುತ್ತಾಳೆ. ನಕ್ಕಾಗ ಹುಚ್ಚು ಹಿಡಿಯುವಷ್ಟು ಇಷ್ಟವಾಗುತ್ತಾಳೆ. ಮತ್ತೆ ಕೆಲವು ದಿನಗಳ ನಂತರ ಅವಳೂ ನನ್ನನ್ನು ಗಮನಿಸುತ್ತಾಳೆ. ದಿನವೂ ನಮ್ಮಿಬ್ಬರ ದೃಷ್ಟಿ ಆಗಾಗ ಪರಸ್ಪರ ಸವರಿಕೊಂಡು ಹೋಗುವುದು ಸುರುವಾಗುತ್ತದೆ.

ಮತ್ತೆ ನಮ್ಮ ಮದುವೆಯಾಗಿದೆ ಈಗ. ಎರಡು ವರ್ಷವಾಯಿತು. ಒಂದು ಪುಟ್ಟ ಕೂಸೂ ಇದೆ. ಅವಳಂತೂ ಇಪ್ಪತ್ತನಾಲ್ಕು ಗಂಟೆ ಆ ಕೂಸಿನ ಆರೈಕೆಯಲ್ಲೇ ಇರುತ್ತಾಳೆ. ಅದೂ ಆಗಾಗ ಗಲೀಜು ಮಾಡಿಕೊಳ್ಳುತ್ತಲೇ ಇರುತ್ತದೆ. ಈಗೆಲ್ಲ ನಾವು ಪರಸ್ಪರ ಹಾಗೆ ನೋಡಿಕೊಳ್ಳುವುದೆಂದೇ ಇಲ್ಲ.

ಬಸ್ಸಿನಲ್ಲಿ ಬೀರುತ್ತಿದ್ದ ಆ ನೋಟ ಅವಳನ್ನು ಮತ್ತು ನನ್ನನ್ನು ಸಮಷ್ಠಿಯಿಂದ, ನಮ್ಮಿಬ್ಬರನ್ನು ಬಿಟ್ಟು ಉಳಿದ ಇಡೀ ಜಗತ್ತಿನಿಂದ ನಮ್ಮನ್ನು ಬೇರ್ಪಡಿಸುತ್ತದಲ್ಲವೆ, ಕೆಲವೇ ಕೆಲವು ಕ್ಷಣಗಳ ಮಟ್ಟಿಗಾದರೂ. ಆದರೆ ತೀರ ಮೊದಲಿಗೆ, ಅವಳಿನ್ನೂ ನಾನು ಅವಳನ್ನು ಹಾಗೆ ಗಮನಿಸುವುದನ್ನು ಸ್ವೀಕರಿಸಿ ತಾನೂ ಸ್ಪಂದಿಸುವುದಕ್ಕೆ ಸುರುಮಾಡುವುದಕ್ಕೂ ಸ್ವಲ್ಪ ಹಿಂದೆ, ಹಾಗಿರುವುದಿಲ್ಲ. ಅವಳು ಜಗತ್ತಿನ ಜೊತೆಗೇ ತನ್ನನ್ನು ತಾನು ಗುರುತಿಸಿಕೊಂಡು ನನ್ನತ್ತ ಸಿಡುಕು ಮೋರೆ ಮಾಡುತ್ತಾಳೆ. ಮತ್ತು ನಾನು ಹಾಗೆ ಸಿಂಡರಿಸಿಕೊಂಡ ಮುಖ ಕಂಡ ತಕ್ಷಣವೇ ನನ್ನ ಜಗತ್ತಿಗೆ ವಾಪಾಸ್ ಓಡಿಬರುತ್ತೇನೆ! ಪ್ರೀತಿ ನಮ್ಮನ್ನು ಜಗತ್ತಿನಿಂದ ಬೇರೆಯೇ ಒಂದು entity ಮಾಡಿಬಿಡುವುದೆ?
****
ಪ್ರೇಮಿ ಕೈ ತಪ್ಪಿ ಹೋಗಬಹುದು. ಹೆಂಡತಿ ತನ್ನನ್ನು ಬಿಟ್ಟು ಬೇರೆ ಯಾರಲ್ಲಿಯೋ ಆಸಕ್ತಿ ತಳೆಯಬಹುದು. ಅಮ್ಮ ಸತ್ತು ಹೋಗಬಹುದು. ಶಾಲೆಗೆ ಹೋದ ಮಗು ವಾಪಾಸ್ ಮನೆಗೆ ಬರದೇ ಹೋದರೆ! ಆಫೀಸಿಗೆ ಹೋದ ಮಗ/ಗಂಡ ಅಪಘಾತದಲ್ಲಿ ಅಥವಾ ಹಾರ್ಟ್ ಅಟ್ಯಾಕ್ ಆಗಿ ಸತ್ತರೆ? ಹೌದು. ಈಗ, ಇವತ್ತು ನಮ್ಮೊಂದಿಗೇ ಇರುವ ವ್ಯಕ್ತಿಯ ಬಗ್ಗೆ ಕೂಡಾ ಹೀಗೆ ಕಲ್ಪಿತ ವಿರಹವನ್ನು ಅನುಭವಿಸಬಹುದು! ವರ್ಷಾನುಗಟ್ಟಲೆ ದುಬಾಯಿಯಲ್ಲಿ ದುಡಿಯುತ್ತಿರುವ (ಹಾಗೆಂದು ದೃಢವಾಗಿ ನಂಬಿರುವುದರಿಂದ) ಗಂಡ ಇರುವ ಎಷ್ಟು ಮಂದಿ ಹೆಂಗಸರು ಇಲ್ಲಿ ದಿನಕಳೆಯುತ್ತಿಲ್ಲ? ನಾಸ್ಟಾಲ್ಜಿಯಾ ಎದುರಿರುವ ಸಂಗತಿಯ ಕುರಿತೇ ಸುರುವಾಗುವುದು ಸಾಧ್ಯವಿದೆ! ಎದುರಿಗಿಲ್ಲದ ಸಂಗತಿಯ ಬಗ್ಗೆಯಂತೂ....
****
ಸಂಬಂಧಗಳು ಯಾಕೆ ಬೇಕು? ನೆನಪುಗಳನ್ನು ಅನುಕ್ರಮದಲ್ಲಿ ನೆನಪಿಸಲಿಕ್ಕೆ! ಅವರು ಕನ್ನಡಿಯಿದ್ದಂತೆ. ನಾವು ಮರೆಯಬಾರದ್ದನ್ನು ನೆನಪಿಸುತ್ತಾರೆ ಅವರು. ಹಾಗೆಯೇ ನೆನಪುಗಳಿಂದ ನಾವು ನಮ್ಮನ್ನು ಕಂಡುಕೊಳ್ಳಲು, ನಾವು ನಾವೇ ಆಗಿರಲು ಸಾಧ್ಯವಾಗುವಂತೆ ಅವರೇ ನೋಡಿಕೊಳ್ಳುತ್ತಾರೆ. ನೆನಪುಗಳಿಲ್ಲದೆ ಹೋದರೆ? ನಮಗೆ ನೆನಪಿಲ್ಲದ ನಾವು, ನಮ್ಮ ಗತಕಾಲ, ಎರಡೂ ಸರಳವಾಗಿ ನಾವಲ್ಲ! ನಮಗೆ ನೆನಪಿರುವ ನಾವಷ್ಟೇ ನಾವು! ಹಾಗೆ ಕೆಲವೊಮ್ಮೆ ಬೇರೆಯವರಿಗೆ ನೆನಪಿರುವ ನಮ್ಮ ಸಂಗತಿಗಳು ನಮಗೆ ಏನೇ ಮಾಡಿದರೂ ನೆನಪಾಗುವುದಿಲ್ಲವಲ್ಲ? ಆಗ ಅವರ ನಾವು ಮತ್ತು ನಮ್ಮ ನಾವು ಬೇರೆ ಬೇರೆಯಾಗಿ ಬಿಡುತ್ತದೆ. ಅವೆರಡೂ ಒಂದೆ ಆಗಬೇಕೆಂದರೆ ನೆನಪುಗಳು ಚಿರಂತನವಾಗಿರಬೇಕಾಗುತ್ತದೆ. ಹಾಗೆ ನೆನಪುಗಳು ಚಿರಂತನವಾಗಿರಬೇಕಾದರೆ ಸಂಬಂಧಗಳನ್ನು ಸಮೃದ್ಧವಾಗಿ, ನಿರಂತರವಾಗಿ ಉಳಿಸಿಕೊಂಡು, ಬೆಳೆಸಿಕೊಂಡು ಬರಬೇಕಾಗುತ್ತದೆ. ಸಂಬಂಧಗಳು ಬೇಕಿರುವುದೆ ಅದಕ್ಕೆ.
****
ನಿಮಗೆ ಗೊತ್ತೆ, ಗರ್ಭಾಶಯದಲ್ಲಿರುವ ಭ್ರೂಣ ಕೂಡ ಮುಷ್ಟಿಮೈಥುನ ಮಾಡಿಕೊಳ್ಳುತ್ತದಂತೆ! ಅಂದರೆ ಲೈಂಗಿಕತೆ ಎಂಬುದು ಎಲ್ಲಿಂದ ಸುರುವಾಗುತ್ತದೋ ನೋಡಿ. ಅದು ಮುಖ್ಯವಲ್ಲ, ಅದಕ್ಕಿಂತ ಮುಖ್ಯವಾದದ್ದು, ಈ ಜನ ಉಪಗ್ರಹಗಳು, ವೆಬ್ ಕ್ಯಾಮುಗಳು, ಸಿಸಿ ಕ್ಯಾಮರಗಳು, ಬಟ್ಟೆ ಅಂಗಡಿಯ ಟ್ರಯಲ್ ರೂಮಿನೊಳಗೆ ಅಡಗಿಸಿಟ್ಟ ಕ್ಯಾಮರಾಗಳು, ಇಂಟರ್‌ನೆಟ್ ಕುಕ್ಕೀಸು, ಎಟಿಎಮ್ಮಿನೊಳಗೆ ಸ್ಕ್ಯಾನರು, ಮೊಬೈಲ್ ಫೋನಿನ ಕ್ಯಾಮರಾ ಎಂದೆಲ್ಲ ನಮ್ಮ ತಲೆ ಮೇಲೆ, ಕಾಲ ಕೆಳಗೆ, ಬೆಡ್ ರೂಮಿನೊಳಗೆ, ಬಾತ್‌ರೂಮಿನ ಒಳಗೆ ಏನು ನಡೆಯುತ್ತದೆ ಎಂದು ಕಂಡುಕೊಳ್ಳುವುದೆಲ್ಲ ಆಯಿತು, ಕೊನೆಗೆ ಗರ್ಭಾಶಯದೊಳಗೆ ಭ್ರೂಣ ಕೂಡಾ ತನ್ನಪಾಡಿಗೆ ತಾನಿರಲು ಬಿಟ್ಟಿಲ್ಲವಲ್ಲ! ಯಾರು ಯಾರದ್ದೋ ಗೋರಿಯೊಳಗಿನಿಂದ ಸತ್ತು ವರ್ಷಗಳೇ ಕಳೆದ ತಲೆಬುರುಡೆ, ಅಸ್ತಿಪಂಜರವನ್ನೆಲ್ಲ ಎತ್ತಿ ತೆಗೆದು ಅದರ ಅಪ್ಪ ಅಮ್ಮ ಯಾರು, ಅದರ ಮಗ ಮಗಳು ಯಾರು ಎಂದು ಶೋಧಿಸುವ ಕಾಲ ಬೇರೆ ಬಂದಿದೆ. ಈ ಕಣ್ಣುಗಳಿಂದ ಮರೆಯಾಗಿ ಬದುಕಲು ಸಾಧ್ಯವಿರುವ ಯಾವುದಾದರೂ ತಾವಿದೆಯೆ ಜಗತ್ತಿನಲ್ಲಿ? ಹುಟ್ಟುವ ಮೊದಲು ಅಥವಾ ಸತ್ತ ಮೇಲಾದರೂ....? ಸದಾ ನಿಮ್ಮನ್ನು ಯಾರೋ ಎಲ್ಲಿಂದಲೋ ಗಮನಿಸುತ್ತಲೇ ಇರುತ್ತಾರೆಂಬ ಭಾವನೆ ಕಾಡತೊಡಗಿದರೆ ಬದುಕು/ಸಾವು ಹೇಗೆ ಸಹ್ಯವಾದೀತು?
****
ಕೊನೆಗೂ ಮನುಷ್ಯನ Identity ಇರುವುದು ಅವನ ಕಣ್ಣಿನ ಪಾಪೆಗಳಲ್ಲಿ ಎಂದು ಗೊತ್ತಾಗಿದೆ. ತಮಾಷೆ ಎಂದರೆ ಮನುಷ್ಯ ಪ್ರತೀ ಐದು - ಹತ್ತು ಸೆಕೆಂಡಿಗೆಲ್ಲ ಅದನ್ನು ರೆಪ್ಪೆಗಳಿಂದ ಮುಚ್ಚಿಕೊಳ್ಳುತ್ತ, ಸ್ವಚ್ಛಗೊಳಿಸುತ್ತ ಇರಬೇಕಾಗಿದೆಯಲ್ಲ. ಹಾಗೆ ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಏನೇನಾಗುವುದಿಲ್ಲ! ಪ್ರೊಫೆಸರ್ ತಿರುಚ್ಚೆಂದೂರ್ ಶ್ರೀನಿವಾಸ ರಾಘವನ್ ತಮ್ಮ ಜಗತ್ತನ್ನೇ ಕಳೆದುಕೊಂಡರು! ಎದುರಿಗಿದ್ದ ವ್ಯಕ್ತಿ apple ಆಗಿ ಬಿಡಬಹುದು! ನೀವು ಅವರ ಅಥವಾ ಅವರು ನಿಮ್ಮ ಗುರುತೇ ಮರೆತು ಬಿಡಬಹುದು!!
****
ಇಲ್ಲಿ ನಮ್ಮ ಅಸ್ತಿತ್ವ ಎನ್ನುವುದೇ ಕಾಲದೊಂದಿಗಿನ ನಿರಂತರವಾದ ಒಂದು ಸಂಘರ್ಷವಿದ್ದಂತೆ. ಕಾಲವನ್ನು ಹಾಯುವುದೆ ಬಹುಮುಖ್ಯ ಸಮಸ್ಯೆ. ನಮ್ಮ ಶಿಕ್ಷಣ, ಉದ್ಯೋಗ, ಪ್ರೇಮ, ಲೈಂಗಿಕತೆ, ಮನರಂಜನೆಯ ನೂರು ಬಗೆಯ ತೊಡಗಿಕೊಳ್ಳುವಿಕೆ, ಆಧ್ಯಾತ್ಮ ಎಲ್ಲವೂ ಈ ಕಾಲಯಾಪನೆಯ ವಿವಿಧ ಮಾರ್ಗೋಪಾಯಗಳಷ್ಟೇ. ಏನೂ ಇಲ್ಲದಿದ್ದರೆ ಮಾತನಾಡಿ. ಪಚಪಚಪಚಪಚ ಮಾತನಾಡಿ. ಸಮಯ ಹೋಗುವುದು ಮುಖ್ಯ. ಒಬ್ಬರೇ ಇರುವವರು ಕೂಡಾ ಕೊನೆಗೆ ಮೌನ ತಾಳಲಾಗದೆ ಹಂ! ದೇವಾ! ಅಮ್ಮಾದೇವ್ರೆ ಎನ್ನುವುದಿಲ್ಲವೆ? ಕಾಲವನ್ನು ಕಳೆಯುವುದಕ್ಕೆ ನೀವೇನು ಮಾಡುತ್ತೀರೋ ಅದೇ ನೀವು!!
****
ಈಗ ಸ್ಥೂಲವಾಗಿ ಇಲ್ಲಿನ ಕತೆ ಹೇಳುತ್ತೇನೆ. ಅವಳು ಗಂಡನನ್ನು ಬಿಟ್ಟು ಬಂದು ಈಗ ಇವನೊಂದಿಗಿದ್ದಾಳೆ. ಆ ದಾಂಪತ್ಯದಲ್ಲಿ ಹುಟ್ಟಿದ ಅವಳ ಮಗು ಇದ್ದಕ್ಕಿದ್ದಂತೆ ಅಸುನೀಗಿದಾಗ ಅ ನೋವು ಮರೆಯಲು ಮತ್ತೊಂದು ಮಗು ಹೊಂದುವುದೇ ‘ಉಪಾಯ’ ಎಂದು ಮತ್ತೆ ಮತ್ತೆ ಒತ್ತಡ ಹಾಕಿದಾಗ ಅವಳಿಗದನ್ನು (ಸತ್ತ ಮಗುವನ್ನು) ಮರೆಯುವುದು ಬೇಡವಾಗಿ ಗಂಡನನ್ನೇ ತೊರೆದವಳು ಆಕೆ.

ಈ ಇಬ್ಬರಿಗೂ ಒಂದು ಸಮಸ್ಯೆಯಿದೆ. ಅವಳು ನಾಲ್ಕು ವರ್ಷಕ್ಕೆ ಇವನಿಗಿಂತ ದೊಡ್ಡವಳು. ತನಗೆ ವಯಸ್ಸಾಗಿದೆ, ಯಾರೂ(ಗಂಡಸರು) ಗಮನಿಸದಷ್ಟು ಅನಾಕರ್ಷಕವಾಗಿದ್ದೇನೆ ಎಂಬ ಕೊರಗು. ಅವನೂ ತನ್ನನ್ನು ತೊರೆದು ಹೋದರೆ ಎಂಬ ಭಯವಿರಬಹುದು ಇದರ ಆಳದಲ್ಲಿ, ಗೊತ್ತಿಲ್ಲ. ಅವನಿಗೆ ಅವಳು ಒಂದೊಂದು ಸಲ ಒಂದೊಂದು ತರ ಕಾಣಿಸುತ್ತಾಳೆ ಮತ್ತು ಅನೇಕ ಬಾರಿ ಅವನು ಅವಳು ಎಂದುಕೊಂಡು ಬೇರೆ ಯಾರನ್ನೋ ಗುರುತಿಸಿ ಪೇಚಿಗೆ ಸಿಕ್ಕಿದ್ದಾನೆ. ಅವನಿಗೂ ಅವಳು ತನ್ನಿಂದ ದೂರವಾದರೆ ಎಂಬ ಭಯವಿದೆ. ಅದಕ್ಕಾಗಿ ಅವನು ಏನು ಮಾಡಲೂ ಸಿದ್ಧನಿರುವ ಪ್ರೇಮಿ. ಅವನ ಸಂಪಾದನೆ ಅವಳ ಐದನೇ ಒಂದರಷ್ಟು ಮತ್ತು ಅವನು ಸದ್ಯ ಇರುವುದೇ ಅವಳ ಪ್ಲ್ಯಾಟಿನಲ್ಲಿ. ಅವಳ ಹೊರತು ತನಗೆ ಅಸ್ತಿತ್ವವೇ ಇಲ್ಲ ಎಂದು ಹೇಳಿಕೊಳ್ಳುವ ಅವನು ಆರ್ಥಿಕ ಅಸ್ತಿತ್ವ ಎನ್ನುತ್ತಿದ್ದಾನೇನೊ ಎನಿಸುತ್ತದೆ. ಇಷ್ಟರ ಮೇಲೆ ಅವಳು ತನಗೆ ಎರಡು ಮುಖಗಳಿವೆ, ಆಫೀಸಿನಲ್ಲಿ ನೌಕರಿ ಮಾಡುತ್ತ ತಾನು ತೊಟ್ಟುಕೊಳ್ಳುವ ಮುಖವೇ ಬೇರೆ, ಹೀಗೆ ನಿನ್ನೊಂದಿಗಿರುವಾಗ ಕಾಣಿಸುವ ನನ್ನ ಮುಖವೇ ಬೇರೆ ಎಂದು ಅವನನ್ನು ಮತ್ತಷ್ಟು ಹೆದರಿಸುತ್ತಾಳೆ. ಕೊನೆಗೆ ಅವನಿಗೆ ಅವಳ ಮುಖಗಳು ಬರೇ ಎರಡೇ ಎನ್ನುವ ಅನುಮಾನ ಬೇರೆ ಸುರುವಾಗುತ್ತದೆ. (ಕತ್ತಲೆಗೆ ಹತ್ತೆ ತಲೆ!) ಅವಳಲ್ಲಿ ಜೀವನೋತ್ಸಾಹ ತುಂಬಲು ಈ ಹೊಸಗಂಡ ಅವಳಿಗೆ ಅನಾಮಿಕ ಪ್ರೇಮಪತ್ರಗಳನ್ನು ಬರೆಯತೊಡಗುತ್ತಾನೆ. ಅವಳು ಅದನ್ನು ಗಂಡನಿಂದ ಅಡಗಿಸಿಟ್ಟು ಆ ಗುಪ್ತಗಾಮಿಗೆ ಸ್ಪಂದಿಸ ತೊಡಗುತ್ತಾಳೆ. ಒಂದು ಬಗೆಯಲ್ಲಿ ಅವಳು ಗಂಡನೇ ಒದಗಿಸಿಕೊಟ್ಟ ಪರಪುರುಷನ ಕನಸಿನಲ್ಲಿ ವಿಹರಿಸುವುದನ್ನು ಗಂಡನೆದುರಿಗೇ ಮಾಡುತ್ತಾಳೆ ಮತ್ತು ಕೊನೆಗೂ ಇದೆಲ್ಲ ಗಂಡನದೇ ಕರಾಮತಿ ಎಂದು ತಿಳಿದಾಗ ಅವನು ತನ್ನನ್ನು ದಾಂಪತ್ಯದಲ್ಲಿ ನಿಷ್ಠೆಯಿಲ್ಲದವಳೆಂದು ಸಿಕ್ಕಿ ಹಾಕಿಸಿ, ವಯಸ್ಸಿನ ಕಾರಣಕ್ಕೆ ತನ್ನನ್ನು ತೊರೆಯುವುದಕ್ಕೆ ಇದನ್ನೆಲ್ಲ ಮಾಡಿದ ನೀಚ ಎಂದುಕೊಳ್ಳುತ್ತಾಳೆ. ಅವನೋ ಅವಳು ಅಗೋಚರ ಪ್ರೇಮಿಯ ಕಲ್ಪನೆಯಲ್ಲಿ ಸುಖಿಸುವುದನ್ನು ಕಂಡು ಅಬ್ಬಾ ಹೆಣ್ಣೇ ಎಂದು ಈರ್ಷ್ಯೆ, ಅಸಹ್ಯ ಎಲ್ಲ ಪಟ್ಟುಕೊಳ್ಳಲು ತಯಾರಾಗುತ್ತಾನೆ! ಪರಿಣಾಮ ಮುನಿಸು, ವೈಮನಸ್ಯ, ಪರಿತ್ಯಾಗ ಮತ್ತು ವಿರಹ.

ಹಾಗೆ ಸಿಟ್ಟಿನಿಂದ ಅವನಿಗೆ ತಾನು ಲಂಡನ್ನಿಗೆ ಹೋಗುತ್ತಿದ್ದೇನೆಂದು ಸುಳ್ಳೇ ಹೇಳಿ ಗೆಳತಿಯರು ಸಿಕ್ಕಿದ್ದರಿಂದ ನಿಜಕ್ಕೂ ಲಂಡನ್ನಿಗೇ ಹೋದ ಅವಳು ಅಲ್ಲಿ ಯಾರನ್ನೋ ಭೇಟಿಯಾಗಲು ಹೋಗಿ ಅಗೋಚರ ನಗ್ನವ್ಯಕ್ತಿಗಳೇ ತುಂಬಿರುವ ಒಂದು ಫ್ಲ್ಯಾಟಿನಲ್ಲಿ ಪೂರ್ತಿ ನಗ್ನಳಾಗಿ ಸಿಕ್ಕಿಹಾಕಿಕೊಳ್ಳುತ್ತಾಳೆ. ಅವಳು ಅಲ್ಲಿಂದ ಹೊರ ಹೋಗದಂತೆ ಅಲ್ಲಿನ ಬಾಗಿಲುಗಳಿಗೆ ಪಟ್ಟಿ ಹೊಡೆದು ಅವುಗಳನ್ನೆಲ್ಲ ಶಾಶ್ವತವಾಗಿ ಮುಚ್ಚಿಬಿಡುತ್ತಾರೆ. ಅವಳ ಹಿಂದೆಯೇ ಲಂಡನ್ನಿಗೆ ಬಂದ ಅವನು ಅದೇ ಫ್ಲ್ಯಾಟಿನ ಕೆಳಗೆ ನಿಂತು ಅವಳನ್ನು ಕಾಪಾಡಲು ಪ್ರಯತ್ನಿಸಿದರೂ ಅಲ್ಲಿನ ಮಂದಿ ಅವನನ್ನು ಕತ್ತು ಹಿಡಿದು ಅಲ್ಲಿಂದ ಹೊರದಬ್ಬುತ್ತಾರೆ. ಲಂಡನ್ನಿನಿಂದ ವಾಪಾಸ್ಸು ಪ್ಯಾರಿಸ್ಸಿಗೆ ಬರುವುದಕ್ಕೆ ಸಾಲುವಷ್ಟೇ ಹಣ ಕಿಸೆಯಲ್ಲಿರುವ ಅವನು ಒಂದು ಸ್ಯಾಂಡ್‌ವಿಚ್ ತಿನ್ನುವುದಕ್ಕೂ ಹಣವಿಲ್ಲದೆ, ಹೋಟೆಲಿನ ರೂಮಿಗೂ ಕಾಸಿಲ್ಲದೆ ಸುರಿಯುತ್ತಿರುವ ಮಳೆಯಲ್ಲೇ, ಲಂಡನ್ನಿಗೆ ಚಳಿಗೆ ಸುರುಟಿಕೊಳ್ಳುತ್ತಾನೆ.

ಇದುವರೆಗೂ ನೀವು ಓದಿದ ಕತೆಯಿದೆಯಲ್ಲ, ಇದು ನಿಜವಲ್ಲ. ಎಲ್ಲಿಯೋ ಇದರಲ್ಲಿ ಕನಸು ಸುರುವಾಗಿದೆ. ಎಲ್ಲಿ ಎಂಬುದು ಈ ಕಾದಂಬರಿಯ ನಿರೂಪಕನಿಗೂ ಗೊತ್ತಿಲ್ಲ. ಅದನ್ನು ನೀವೇ ಗುರುತಿಸಿ, ಸಾಧ್ಯವಾದರೆ. ಕಾದಂಬರಿಯ ಕೊನೆಯಲ್ಲಿ ಅವರಿಬ್ಬರೂ ರಾತ್ರಿ ಹಾಸುಗೆಯ ಮೇಲೆ ಮಲಗಿದ್ದಾರೆ, ಅವಳ ತಲೆ ಅವನ ಹರವಾದ ಎದೆಯ ಮೇಲೆ ವಿಶ್ರಮಿಸಿದೆ. ಕಣ್ಣು ರೆಪ್ಪೆ ಮುಚ್ಚಿದರೆ ಎಲ್ಲಿ ಅವನು ಒಂದು ಹುಳುವಾಗಿ (ಕಾಫ್ಕಾ) ಬದಲಾಗುತ್ತಾನೋ ಎಂಬ ಭಯದಲ್ಲಿ ಅವಳಿದ್ದಾಳೆ. ಅವನಿಗೂ ಅಂಥದ್ದೇ ಭಯವಿದೆ. ಹಾಗಾಗಿ ಅವರು ಇನ್ನುಮುಂದೆ ರಾತ್ರಿ ಹೊತ್ತು ದೀಪ ಆರಿಸದೇ ಮಲಗುವ ಸಂಕಲ್ಪ ತೊಡುತ್ತಾರೆ. ಕಣ್ಣಿನ ರೆಪ್ಪೆಯನ್ನು ಏನು ಮಾಡುತ್ತಾರೆ, ಮಾಹಿತಿಯಿಲ್ಲ.

ಇದನ್ನು ಕಾದಂಬರಿಯೆಂದು ನಾವು-ನೀವು ಒಪ್ಪಬಹುದು ಅಥವಾ ಒಪ್ಪದಿರಬಹುದು. ಅದು ಮುಖ್ಯವಲ್ಲ. ಏನೆಂದುಕೊಂಡು ಓದಿದರೂ ಪರವಾಗಿಲ್ಲ, ಯಾಕೆಂದರೆ, ಈ ಪುಟ್ಟ ಕೃತಿಯ ಓದು ನಮಗೆ ಕೊಡುವ ಶ್ರೀಮಂತವಾದ ಒಳನೋಟಗಳಿಂದಾಗಿ ಈ ಓದು ಖಂಡಿತಕ್ಕೂ ವ್ಯರ್ಥವಲ್ಲ ಎನ್ನುವುದು ಮುಖ್ಯ.

No comments: