Friday, November 23, 2012

ಈ ನರಕದಿಂದ ಮುಕ್ತಿಯಿಲ್ಲವೇ!

ಮಿಲನ್ ಕುಂದೇರಾನ ಈ ಕಾದಂಬರಿ 1969ರಲ್ಲಿ ಬರೆದಿದ್ದು. ಮೊದಲಿಗೆ ಇದರ ಹೆಸರು ದ ಏಜ್ ಆಫ್ ಲಿರಿಕ್ಸ್ ಎಂದೇನೋ ಆಗುವುದಿತ್ತಂತೆ. ಈಗಿರುವ ಹೆಸರಂತೂ ಲೈಫ್ ಈಸ್ ಎಲ್ಸ್‌ವೇರ್. ಬದುಕು ಸದಾ ‘ಇಲ್ಲಿ ಮತ್ತು ಈಗ’ ಇಲ್ಲದೆ ಇನ್ನೊಲ್ಲೊ ಇರುವಂತೆಯೇ ಕಾಣುವುದು ಇರುವುದರೊಂದಿಗೆ ತೃಪ್ತಿಯಿಂದಿದ್ದು ಬಿಡಲಾರದ, ಇರದುದರೆಡೆಗೆ ತುಡಿವುದೇ ಜೀವನ ಎಂದು ಒಪ್ಪಿಕೊಂಡಿರುವ ಮನುಷ್ಯನ ಅನಿವಾರ್ಯ ಕರ್ಮವೇ ಇರಬಹುದು.

ಜೆರೊಮಿಲ್ ಎಂಬ ಒಬ್ಬ ಅಪ್ರಬುದ್ಧ ಎಂದೂ ಅನಿಸಬಹುದಾದ ಹುಡುಗನನ್ನು ಕವಿ ಕವಿ ಎಂದು ಅರ್ಧ ವ್ಯಂಗ್ಯವೋ ಬರಿಯ ತಮಾಷೆಯೊ ತಿಳಿಯದ ಒಂದು ಧ್ವನಿಯಲ್ಲಿ ಮತ್ತು ಅರ್ಧ ಗಂಭೀರವಾಗಿ ವಿವರಿಸುತ್ತ ಸಾಗುವ ಈ ಕಾದಂಬರಿಯ ಪರ್ಯಾಯ ಕೇಂದ್ರ ಈ ಕವಿಯ ತಾಯಿ. ಈ ತಾಯಿ ಮತ್ತು ಮಗನ ನಡುವಿನ ಮೋಹ, ಪ್ರೇಮ ಮತ್ತು ಇದೆಲ್ಲದರ ಅತಿಯಿಂದಾಗಿ ಒಬ್ಬರ ಹಿಡಿತದಿಂದ ಒಬ್ಬರು ನುಣುಚಿಕೊಳ್ಳಲು ನಡೆಸುವ ಮತ್ತು ಸೋಲುವ ಪ್ರಯತ್ನಗಳ ಒಂದು ನಿರಂತರ ಪ್ರಕ್ರಿಯೆ ಕಾದಂಬರಿಯ ಒಂದು ಪದರದ ಪ್ರಮುಖ ವಿಷಯ.


ಮತ್ತೆ ಎಂದಿನಂತೆ ಮನುಷ್ಯ ಸಂಬಂಧಗಳ ಗೋಟಾಳೆ. ಜೆರೊಮಿಲ್ ತಾಯಿ-ತಂದೆ, ಆ ತಂದೆಯ ಗುಪ್ತ ಸಂಬಂಧ, ತಾಯಿಯ ಪ್ರೇಮ ಸಾಹಸ ಮತ್ತು ಅದರಲ್ಲಿನ ವ್ಯರ್ಥ ಸಂಘರ್ಷಗಳು ಮುಖ್ಯವಾದಷ್ಟೇ ಜೆರೊಮಿಲ್‌ನ ಲೈಂಗಿಕ ಸಾಹಸಗಳು ಮತ್ತು ಅವನವೇ ಆದ ಇನ್ನಿತರ ಕೆಲವು ವಿಶಿಷ್ಟ ಸಂಘರ್ಷಗಳು ಇವೆಲ್ಲ ಕಾದಂಬರಿಯ ಎರಡನೆಯ ಪ್ರಮುಖ ಪದರ. ಇದರಲ್ಲಿ ಒಬ್ಬ ಪೇಂಟರ್ ಮತ್ತು ಕೊನೆಯ ಒಂದೆರಡು ಅಧ್ಯಾಯಗಳಲ್ಲಷ್ಟೇ ಕಾಣಿಸಿಕೊಳ್ಳುವ ಒಬ್ಬ ಮಿಲಿಟರಿ ವ್ಯಕ್ತಿಯ ಪಾತ್ರಗಳೂ ಬಂದವು.

ಕವಿ-ಕವಿತ್ವ ಮತ್ತು ಕವಿಯ ಕವಿತ್ವದ ಜೊತೆಗೆ ಅವನ ವ್ಯಕ್ತಿತ್ವದ ವಿಕಸನದ ಪ್ರಕ್ರಿಯೆಗೆ ಒಂದು ಅವಿನಾಭಾವ ಸಂಬಂಧ ಇದೆ ಎಂದು ನಂಬುವ ಮಿಲನ್ ಕುಂದೇರಾನ ವಿಚಾರಗಳ ಮಂಡನೆ ಕಾದಂಬರಿಯ ಮೂರನೆಯ ಪ್ರಮುಖ ಪದರ. ಇದನ್ನು ಕುರಿತೇ ಈಚೆಗೆ ಕೆರವಾನ್ ಪತ್ರಿಕೆಯಲ್ಲಿ ಒಂದು ವಿಸ್ತೃತವಾದ ಲೇಖನ (ಬರೆದವರು ಅಂಜುಂ ಹಸನ್) ಪ್ರಕಟವಾಗಿದ್ದು ಆಸಕ್ತರು ಅದನ್ನು ಇಲ್ಲಿ ಗಮನಿಸಬಹುದು: http://www.caravanmagazine.in/books/going-nowhere-always

ಕಾದಂಬರಿಯ ಎರಡನೆಯ ಅಧ್ಯಾಯದಲ್ಲೇ ಹಠಾತ್ ಎಂಬಂತೆ ತೊಡಗುವ ಕ್ಸೇವಿಯರ್ ಎಂಬಾತನ ಕನಸು-ಭ್ರಮೆ-ವಾಸ್ತವ ಮತ್ತು ಅತಾರ್ಕಿಕ -ಎಲ್ಲವೂ ಆಗಿ ಕಾಣಿಸುವ ಒಂದು ಕತೆ ಒಟ್ಟು ಏಳು ಅಧ್ಯಾಯಗಳಿರುವ ಈ ಕಾದಂಬರಿಯ ಕೊನೆಯ ಎರಡು ಅಧ್ಯಾಯಗಳಲ್ಲಿ ನಿಚ್ಚಳವಾಗಿ ಹಾಗೂ ನಡುವಿನಿಂದ ಹದವಾಗಿ ಇಡೀ ಕಾದಂಬರಿಗೆ ಕೊಡುವ ಹೊಸದೇ ಆದ ಅರ್ಥಗಳು, ಒಳನೋಟಗಳು, ತಾಂತ್ರಿಕವಾಗಿ ನಮ್ಮನ್ನು ಸೆಳೆಯುವುದು ಕಾದಂಬರಿಯ ನಾಲ್ಕನೆಯ ಒಂದು ಆಯಾಮವಾಗಿ ಪ್ರಮುಖವಾಗಿದೆ.

ಆರನೆಯ ಅಧ್ಯಾಯದಲ್ಲಿ ನಿರೂಪಕನೇ ತಾನು ಈ ಕಾದಂಬರಿಯನ್ನು ಯಾರ ಮೇಲೆ ಕೇಂದ್ರೀಕರಿಸಿದ್ದರಿಂದ ಅದು ಹೀಗಾಯಿತು, ಇನ್ಯಾರ ಮೇಲೋ ಕೇಂದ್ರೀಕರಿಸಿದ್ದರೆ ಇನ್ನೇನೋ ಆಗುತ್ತಿತ್ತು. ಇದನ್ನು ನಾನು ಸಾವಿನಿಂದ ತೊಡಗಿ ಹಿಮ್ಮುಖವಾಗಿ ಸಾಗುತ್ತಿರುವುದರಿಂದ ಈಚಿನ ವರ್ಷಗಳಿಗೆ ಹೆಚ್ಚು ಪುಟಗಳೂ, ಆರಂಭಿಕ ಹದಿನೈದು ವರ್ಷಗಳಿಗೆ ಒಂದೇ ಅಧ್ಯಾಯವೂ ಇದೆ, ಇದು ನೆನಪುಗಳು ಹೆಚ್ಚಿದ್ದಾಗ ನಿಧಾನ ಮತ್ತು ನೆನಪುಗಳಿಲ್ಲದಾಗ ವೇಗ ಸಹಜವಾದದ್ದು, ಇದಕ್ಕೆ ತದ್ವಿರುದ್ಧವಾದ ನೋಟ ಕೂಡ ಸಾಧ್ಯವಿತ್ತು ಎಂದೆಲ್ಲ ಸ್ವಲ್ಪ ವಿವರಿಸುವುದಿದೆ. ಕುಂದೇರಾ ತನ್ನ Slowness ಕಾದಂಬರಿಯಲ್ಲಿಯೂ ಇಂಥ ಮಾತನ್ನು ಹೇಳುತ್ತಾನೆ:

In existential mathematics, that experience takes the form of two basic equations: the degree of slowness is directly proportional to the intensity of memory; the degree of speed is directly proportional to the intensity of forgetting.
(Slowness: page 34-35)

ಮಿಲನ್ ಕುಂದೇರಾ ತನ್ನ ಕಾದಂಬರಿಯನ್ನು ಬೇರೆ ಬೇರೆ ಹಿನ್ನೆಲೆ, ಪರಿಸ್ಥಿತಿಯಲ್ಲಿರುವ ಪಾತ್ರಗಳನ್ನು ರಂಗಕ್ಕೆ ತರುವುದರ ಮೂಲಕ, ತಮಾಷೆ ಅಥವಾ ತಿಳಿಹಾಸ್ಯ ಬೆರೆತ ವ್ಯಂಗ್ಯದ ಮೂಲಕ, ಮಾಂತ್ರಿಕ ವಾಸ್ತವಿಕತೆಯಂಥ ತಂತ್ರದ ಮೂಲಕ, ಇತಿಹಾಸ ಮತ್ತು ಸಾಹಿತ್ಯವನ್ನು ಕಾದಂಬರಿಯ ‘ಸ್ಥಿತಿ’ಯ ಜೊತೆ ಸಂತುಲಿತಗೊಳಿಸುತ್ತ, ಮನುಷ್ಯನ ವರ್ತನೆಯನ್ನು ಮೂಲಭೂತವಾಗಿ ಗಂಡು-ಹೆಣ್ಣು ಸಂಬಂಧಗಳ ನೆಲೆಯಲ್ಲಿ ಬೆಳೆಸುತ್ತ ಸತ್ಯಶೋಧನಕ್ಕಿಳಿಯುವುದು ಎಲ್ಲರಿಗೂ ಗೊತ್ತು. ಈ ಕಾದಂಬರಿಯಲ್ಲಿಯೂ ಅದನ್ನು ಕಾಣುತ್ತೇವೆ.

ಇಷ್ಟನ್ನು ಹೇಳಿದರೆ ಕಾದಂಬರಿಯ ಸಂಕೀರ್ಣ ಹಂದರದ ಪರಿಚಯವಂತೂ ಸಿಕ್ಕಂತಾಗುವುದು. ಆದರೆ ಅದು ಯಾಕೆ ಮತ್ತು ಹೇಗೆ ಕಾಡುತ್ತದೆ ಎಂಬುದನ್ನಂತೂ ಹೇಳಿದಂತಾಗಲಿಲ್ಲ. ಹಾಗೆ ನೋಡಿದರೆ ಇದು, ಈ ಕಾದಂಬರಿ ಬೇರೆ ಬೇರೆಯವರನ್ನು ಬೇರೆ ಬೇರೆ ರೀತಿಗಳಲ್ಲಿ ಕಾಡುವ ಸಾಧ್ಯತೆಯಿದೆ ಅನಿಸುತ್ತದೆ!

ಮೊತ್ತ ಮೊದಲಿಗೆ ಇಲ್ಲಿನ ಕೆಲವು ಪ್ರೇಮಗಳು ಎಷ್ಟೊಂದು ಅಪಕ್ವ ನೆಲೆಯಿಂದ ರೂಪುಗೊಂಡಿರುತ್ತವೆ ಎನ್ನುವುದನ್ನೇ ಗಮನಿಸಿದರೆ ಎಲ್ಲಾ ಪ್ರೇಮಗಳೂ ಇದೇ ರೀತಿಯಿರಬಹುದಲ್ಲವೆ ಎಂಬ ಆಘಾತಕಾರಿ ಅನಿಸಿಕೆ ಬರುತ್ತದೆ. ಆದರೆ ಮನಸ್ಸು ಅಂಥ ಒಂದು ವಿದ್ಯಮಾನವನ್ನೇ ವಾಸ್ತವವೆಂದು ಒಪ್ಪಿಕೊಳ್ಳಲು ಕಷ್ಟಪಡುತ್ತ ಕಹಿಸತ್ಯವನ್ನು ಕಂಡು ನುಂಗಲಾಗದೆ ಉಗುಳಲಾಗದೆ ಸಂಘರ್ಷಕ್ಕೊಳಗಾಗುವುದು ಕೂಡ ನಿಜ. ಜೆರೊಮಿಲ್‌ನ ತಾಯಿ ತಾನು ಗರ್ಭವತಿಯಾಗಲು ಕಾರಣನಾದವನೆಂದು ಬೊಟ್ಟಿಟ್ಟು ಮದುವೆ ಮಾಡಿಕೊಂಡ ಇಂಜಿನಿಯರ್ ಈ ಹುಡುಗಿಯನ್ನು ನಿಜಕ್ಕೂ ಪ್ರೀತಿಸಿದ್ದನೊ ಇಲ್ಲವೊ, ಮದುವೆಯ ನಂತರವಂತೂ ಸುಪ್ತವಾಗಿ ದ್ವೇಷಿಸುತ್ತಾನೆ ಅನಿಸುತ್ತದೆ. ತಾನು ಬಲಿಪಶುವಾದೆ ಎಂಬ, ತನ್ನನ್ನು ಬಳಸಿಕೊಳ್ಳಲಾಗಿದೆ ಎಂಬ, ತನ್ನ ತಪ್ಪಿಗೆ ವಿಪರೀತದ ಶಿಕ್ಷೆಯಾಯಿತು ಎಂಬ ಮನೋಭಾವ ಅವನನ್ನು ಎಂದಿಗೂ ಬಿಟ್ಟು ಹೋದಂತಿಲ್ಲ. ಆದರೆ ಇದು ಬಹಳಷ್ಟು ಕಾಲದವರೆಗೆ ಜೊರೊಮಿಲ್‌ನ ತಾಯಿಗೆ ಅರಿವಾಗುವುದಿಲ್ಲ ಎಂಬುದೇ ವಿಶೇಷ. ಹೀಗೆ ಘಟಿಸಿದ ಮದುವೆಯ ಜೋಡಿಗಳ ವಿವಾಹಪೂರ್ವ ಸಂಬಂಧದ ಫಲ ಈ ಕವಿ ಜೆರೊಮಿಲ್. ಜೆರೊಮಿಲ್‌ನ ತಾಯಿಗೆ ತನ್ನ ಮೊದಲ ಗರ್ಭ ಉಳಿಸಿಕೊಳ್ಳುವುದು ಸಾಧ್ಯವಾಗುತ್ತದೆ, ಅದಕ್ಕೆ ಕಾರಣನಾದವನನ್ನೇ ಮದುವೆಯಾಗುವುದು ಸಾಧ್ಯವಾಗುತ್ತದೆ ಆದರೆ ಬದುಕಿನಲ್ಲಿ ಕೈಹಿಡಿದವನ ಪ್ರೀತಿ ಪಡೆಯುವುದು ಮಾತ್ರ ಸಾಧ್ಯವಾಗುವುದೇ ಇಲ್ಲ. ಆದರೆ ಅವಳು ಕೆಟ್ಟ ಹೆಂಡತಿಯೇನಲ್ಲ. ಒಂದೇ ಒಂದು ಬಾರಿ ಅವಳ ಬದುಕು ಕವಲೊಡೆಯುವುದರಲ್ಲಿದ್ದು ಮಗನ ಚಿತ್ರಕಲಾ ಶಿಕ್ಷಕನೊಬ್ಬನೊಂದಿಗೆ ಸಂಬಂಧವೇರ್ಪಟ್ಟರೂ ಅದನ್ನು ನಿಭಾಯಿಸಲು-ನಿರ್ವಹಿಸಲು ಬೇಕಾದ ಮನೋಧರ್ಮವೇ ಇಲ್ಲದ ಆಕೆ ಅದನ್ನು ಬೆಳೆಯಗೊಡದೆ ಶ್ರೇಷ್ಠಳಾಗಲು ಹೊರಟ ಮೂರ್ಖಳಾಗುತ್ತಾಳೆ ಅಥವಾ ಮುಂದೊಂದು ದಿನ ತನ್ನ ಗಂಡನೂ ‘ಸಾಚಾ’ ಅಗಿರಲಿಲ್ಲ ಎಂಬುದು ತಿಳಿದುಬಂದಾಗ ಮೂರ್ಖಳಾದೆ ಎಂದು ಹಲಬುತ್ತಾಳೆ! ತೀರ ವ್ಯಂಗ್ಯವಾಗಿ ಇದನ್ನೆಲ್ಲ ನೋಡಬೇಕಾದ್ದೇನೂ ಇಲ್ಲ. ಸದ್ಯಕ್ಕೆ ನಾವೂ ಈ ಪಾತ್ರಗಳ ತರ ಇಲ್ಲ ಎನ್ನುವುದು ಅಥವಾ ನಾವೂ ಅಂಥ ಸಾಧ್ಯತೆಗಳಿಗೆಲ್ಲ ತೆರೆದುಕೊಂಡ ವ್ಯಕ್ತಿಗಳಾಗಿ ಬಿಡಲಿಲ್ಲವಲ್ಲ ಸಧ್ಯ! - ಎಂಬುದೇ ನಮ್ಮ ಹೆಚ್ಚುಗಾರಿಕೆಯಾಗಬೇಕಾದ್ದಿಲ್ಲ.

ಬಹಳ ಮುದ್ದಿನಿಂದ ಬೆಳೆಸಲ್ಪಡುವ ಈ ಜೆರೊಮಿಲ್ ಎಂಬ ಮಗು, ಶಾಲೆಗೆ ಹೋಗುವ ಮೊದಲೇ ಅದು ಆಡಿದ್ದೆಲ್ಲ ಕಾವ್ಯವೋ, ಭಾರೀ ಒಳನೋಟಗಳಿರುವ ನುಡಿಯೋ ಎಂಬಂತೆ ಅಜ್ಜ-ಅಜ್ಜಿ ಮತ್ತು ತಾಯಿ ಪ್ರತಿಸ್ಪಂದಿಸುತ್ತಾರೆ. ಇದೇನೂ ಅಸಹಜವೂ ಅಲ್ಲ, ನಾವು ನೀವು ಮಾಡದೇ ಬಿಟ್ಟ ಸಂಗತಿಯೂ ಅಲ್ಲ. ಇಲ್ಲೇ ಚಿತ್ರಕಾರನೊಬ್ಬ ಮಗುವಿನ ಚಿತ್ರಗಳಿಗಿಂತಲೂ ಅದರ ತಾಯಿಯನ್ನು ಮೆಚ್ಚಿಸುವುದಕ್ಕೇ ಆ ಮಗು ಬಿಡಿಸಿದ ಚಿತ್ರಗಳು ಅದರ ‘ಒಳಜಗತ್ತನ್ನು’ ಕಾಗದದ (ಕ್ಯಾನ್‌ವಾಸ್) ಮೇಲೆ ಮೂಡಿಸುವ ತುಡಿತ ಎಂದು ಬಿಟ್ಟಿರುತ್ತಾನೆ. ಆದರೆ ಈ ಮಗು ಶಾಲೆಗೆ ಹೋದಾಗ ಮುಖಾಮುಖಿಯಾಗುವ ಸತ್ಯ ಕುತೂಹಲಕರವಾಗಿದೆ ಮಾತ್ರವಲ್ಲ ಬೆಳೆದವರಾದ ನಮಗೂ ಬಿಸಿಮುಟ್ಟಿಸುವಂತಿದೆ:

And how did Jaromil's inner world continue to expand?

No much; the schoolwork that had come so easily to him in the elementary grades became much more difficult in high school, and in that dullness the glory of the inner world disappeared. The teacher spoke of pessimistic books that saw the here and now merely as misery and ruin, which made his maxim that life is like weeds seem shamefully trite. Jaromil was no longer at all convinced that everything he thought and felt was solely his, as if all ideas had always existed in a definitive form and could only be borrowed as from a public library. But who then was he? What could his own self really consist of? He bent over that self in order to peer into it, but all he could find was the reflection of himself bending over himself to peer into that self.... (ಪುಟ 27)

ಈ ಚಿತ್ರಕಾರನ ಬಳಿ ಕಲೆಯನ್ನು ಕಲಿಯಲು ಹೋಗುವ ಜೆರೊಮಿಲ್ ಒಂದರ್ಥದಲ್ಲಿ ಇಲ್ಲಿ ತನ್ನ ಅಭಿರುಚಿಯ ಮೊದಲ ಪಾಠಗಳನ್ನು ಕಲಿಯುತ್ತಾನೆ. ಆದರೆ ಇದೇ ಚಿತ್ರಕಾರನ ಚಪಲಕ್ಕೆ ಬಲಿಯಾಗುವ ಜೆರೊಮಿಲ್‌ನ ತಾಯಿಯ ಮನಸ್ಥಿತಿ ಮಾತ್ರ ತರ್ಕಕ್ಕೆ ಸಿಗದಂತಿರುವುದು ಕುತೂಹಲಕರವಾಗಿದೆ. ಮೊದಲು, ಗಂಡ ತನ್ನನ್ನು ನಿಜಕ್ಕೂ ಪ್ರೀತಿಸುತ್ತಿಲ್ಲ ಎಂಬುದು ತಿಳಿದಿದ್ದಾಗ ಈ ಸಂಬಂಧದ ಬಗ್ಗೆ ಅಂಥ ಗಿಲ್ಟ್ ಇಲ್ಲದೇ ಅದನ್ನು ಮತ್ತೆ ಮತ್ತೆ ಬಯಸುವ ಈಕೆ ಒಮ್ಮೆ ತನಗೆ ವಿಪರೀತ ಸೌಖ್ಯವಿಲ್ಲದೇ ಮಲಗಿದಾಗ ಗಂಡ ತೋರಿಸಿದ ಕಾಳಜಿಯ ಎದುರು ಕರಗುತ್ತಾಳೆ. ತಾನು ತಪ್ಪು ಮಾಡಿದೆ ಎಂದು ಹಲಬುತ್ತಾಳೆ, ತನ್ನೊಳಗೇ. ಇದರ ಜೊತೆಗೇ ಈಕೆಗೆ ತನ್ನ ಸೊಂಟ ವಿಪರೀತ ದಪ್ಪವಾಗಿರುವುದರ ಬಗ್ಗೆ ನಾಚಿಕೆಯಿದೆ. ಚಿತ್ರಕಾರನೊಂದಿಗೆ ನಗ್ನವಾಗಿರುವಾಗಲೂ ಅವನು ಅದನ್ನು ನೋಡದ ಹಾಗೆ ಎಚ್ಚರಿಕೆವಹಿಸುತ್ತಾಳೆ, ಅದು ಅವನ ಕಣ್ಣಿಗೆ ಬೀಳಬಾರದೆಂದೇ ಬಯಸುತ್ತಾಳೆ. ಈ ಎರಡನ್ನೂ ಮೀರಿ ಈ ಸಂಬಂಧ ಅವಳಿಗೆ ಒಂದು ಬಗೆಯ ಹೊರೆಯಾಗಿಯೇ ಉಳಿಯುವುದು ಮುಖ್ಯವಾಗುತ್ತದೆ. ಅವಳದನ್ನು ಸುಖವೆಂದು ತಿಳಿಯಲಾರಳು. ಅದರಲ್ಲಿ ಅವಳಿಗೆ ಅಂಥ ಸಂತೋಷವೂ ಇಲ್ಲ. ಅವಳದನ್ನು ಹೇಗೋ ನಿಭಾಯಿಸುತ್ತಿರುವವಳಂತೆ ಒದ್ದಾಡುತ್ತಿರುತ್ತಾಳೆ. ಕೊನೆಗೂ ಏನೇನೊ ಒಂದಿಷ್ಟು ಒಣ ವೇದಾಂತ ಹೇಳಿ, ಪತ್ರವೊಂದನ್ನು ಬರೆದು ಅದರಿಂದ ಕಳಚಿಕೊಳ್ಳುತ್ತಾಳೆ ಕೂಡ. ಆದರೆ ಮುಂದೆ ಎಷ್ಟೋ ವರ್ಷಗಳ ಬಳಿಕ ತನ್ನ ಗಂಡನಿಗೇ ಒಬ್ಬಳು ಪ್ರೇಯಸಿಯಿದ್ದಳು ಮತ್ತು ಅವಳು ಯಹೂದಿಯಾಗಿದ್ದು ಜರ್ಮನ್ ಆಕ್ರಮಿತ ಪ್ರದೇಶದಲ್ಲಿದ್ದ ಅವಳನ್ನು ಕದ್ದುಮುಚ್ಚಿ ಹೋಗಿ ನೋಡುತ್ತಿದ್ದ ಈತ ಒಮ್ಮೆ ಸಿಕ್ಕಿಬಿದ್ದು ಇನ್ನಿಲ್ಲವಾದ ಎಂಬ ಸತ್ಯ ತಿಳಿದಾಗ ಅವಳಿಗೆ ನೆನಪಾಗುವುದು ಚಿತ್ರಕಾರನೊಂದಿಗಿನ ಸಂಬಂಧದ ಬಗ್ಗೆ ತಾನು ‘ವಿನಾಕಾರಣ’ ಅನುಭವಿಸಿದ ಗಿಲ್ಟ್! ಹೇಳಲಾಗದ ಭಾವತೀವ್ರತೆಯಲ್ಲಿ ಅವಳು ಕಣ್ಣೀರು ಮಿಡಿಯುತ್ತಾಳೆ. ಅಷ್ಟುಮಾತ್ರವಲ್ಲ, ಅವಳು ಮತ್ತೆ ಅದೇ ಚಿತ್ರಕಾರನ ಅಪಾರ್ಟ್‌ಮೆಂಟಿಗೆ ಹೋಗುತ್ತಾಳೆ. ಆದರೆ ಅಷ್ಟರಲ್ಲಿ ಈಕೆಯ ಗೊಂದಲಿತ ಮನಸ್ಸನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿದ್ದ ಆತ ಇವಳಲ್ಲಿ ಆಸಕ್ತಿಯನ್ನೇ ಕಳೆದುಕೊಂಡಂತೆ ನಡೆದುಕೊಳ್ಳುತ್ತಾನೆ.

ಎರಡನೆಯ ಅಧ್ಯಾಯದ ಕ್ಸೇವಿಯರ್ ಎಂಬ ಒಂದು ಪಾತ್ರದ ಪ್ರೇಮ, ಸಾಹಸ, ಮಿಂಚಿನಂತೆ ಸಂಚರಿಸುವ ವೇಗ ಮತ್ತು ಅವನದೇ ಆದ ಒಂದು ಜೀವನದೃಷ್ಟಿ ಮತ್ತು ಆ ನಿಟ್ಟಿನಿಂದ ಹಾಗೆ ಕಾಣದಿದ್ದರೂ ಉಳಿದವರ ನಿಟ್ಟಿನಿಂದ ಮೋಸ-ಕ್ರೌರ್ಯ ಮತ್ತು ಅವಕಾಶವಾದಿತನದಂತೆಲ್ಲ ಕಾಣುವ ನಡವಳಿಕೆಗಳು ಇಡೀ ಕಾದಂಬರಿ ಮುಂದೆ ಸಾಗಲಿರುವ ಕಥಾನಕದ ನಡೆಯನ್ನು ಸಂಕ್ಷಿಪ್ತವಾಗಿ ಹೇಳುವುದಕ್ಕೇ ಇರುವಂತಿದೆ. ಅಥವಾ ಇನ್ನೊಂದೇ ರೀತಿ ಯೋಚಿಸುವುದಾದರೆ, ಮಿಲನ್ ಕುಂದೇರಾನ ತಂತ್ರವಾದ ಒಂದು ಪಾತ್ರದ ಕತೆಯನ್ನು ಇನ್ನೊಂದು ಪಾತ್ರದ ಬದುಕಿನಲ್ಲಿ ಮುಂದುವರಿಸುವ ಅಥವಾ ಪುನರಾವೃತ್ತಿಯಾಗಿಸುವ ಮತ್ತು ಹಾಗೆ ಮಾಡಿ ಒಂದು ಪಾತ್ರಕ್ಕೆ ಅಲ್ಲಿಯೇ ಒಂದು ವಿಧದ ಕಾಂಟ್ರಾಸ್ಟ್ ಒದಗಿಸಿ ಬದುಕನ್ನು, ಸತ್ಯವನ್ನು ಶೋಧಿಸುವ ಅದೇ ತಂತ್ರ ಇಲ್ಲಿ ಈ ಬಗೆಯಲ್ಲಿ ನಿಂತಿದೆ ಎಂದೂ ಹೇಳಬಹುದು. ಯಾಕೆಂದರೆ, ಇಲ್ಲಿ ಬರುವ ಅನೇಕ ಪಾತ್ರಗಳನ್ನು ಅಥವಾ ಅವುಗಳ ಛಾಯೆಯನ್ನು ನಾವು ಮುಂದಿನ ಅಧ್ಯಾಯಗಳಲ್ಲಿ ಮುಖಾಮಮುಖಿಯಾಗುತ್ತೇವೆ. ಕ್ಸೇವಿಯರ್ ಒಮ್ಮೊಮ್ಮೆ ಜೆರೊಮಿಲ್ ತರ ಕಂಡರೆ ಒಮ್ಮೊಮ್ಮೆ ಅವನ ಎದುರಿನ ಪಾತ್ರವಾಗಿ ಕಾಣಿಸುವುದು ಅರಿವಿಗೆ ಬರುತ್ತದೆ. ಕ್ಸೇವಿಯರ್‌ಗೆ ಸಿಕ್ಕಿದ ಹುಡುಗಿಯರು ಜೆರೊಮಿಲ್‌ನ ಬದುಕಿನಲ್ಲಿ ಕಾಣಿಸಿಕೊಳ್ಳುವ ಹುಡುಗಿಯರಂತೆಯೂ ಕಾಣಿಸುತ್ತಾರೆ. ಈ ನಿಟ್ಟಿನಿಂದ ಬದುಕಿನಲ್ಲಿ ವ್ಯಕ್ತಿಯಾಗಲೀ, ಘಟನೆಗಳಾಗಲೀ ಮುಖ್ಯವಲ್ಲ ಎಂತಲೂ, ಕೇವಲ ವಿಷಯ (ಸತ್ಯ) ಮಾತ್ರವೇ ಮುಖ್ಯವೆಂತಲೂ, ಅದನ್ನು ಶೋಧಿಸಲು ನಾವು ವ್ಯಕ್ತಿನಿಷ್ಠತೆಯನ್ನೂ, ವಸ್ತುನಿಷ್ಠತೆಯನ್ನೂ ಮೀರಿ ನೋಡಲು ಕಲಿಯಬೇಕೆಂದೂ ಅರ್ಥವಾಗುತ್ತದೆ.

ಜೆರೊಮಿಲ್‌ನ ಪ್ರೌಢಪ್ರಾಯದ ಸಮಸ್ಯೆಗಳು ಇದೆಲ್ಲಕ್ಕಿಂತ ಗಂಭೀರವಾಗಿರುವಂತಿವೆ. ಅವು ಮುಖ್ಯವಾಗಿ ಮೂರು. ಒಂದು ಅವನ ಅಮ್ಮನ ಮಡಿಲಿನ ನೆರಳಿನಿಂದ ಪೂರ್ತಿಯಾಗಿ ಪಾರಾಗಿ ‘ಗಂಡಸಾ’ಗುವುದು ಅವನಿಗೆ ದುಸ್ತರವಾಗಿ ಬಿಡುವಷ್ಟು ಆವರಿಸಿಕೊಳ್ಳುವ ಅಮ್ಮ. ಇನ್ನೊಂದು ಹೆಣ್ಣಿನ ಮುಖದಂತೆಯೂ, ಮಗುವಿನ ಕಳೆಯಿಂದಲೂ ಕೂಡಿದ ಅವನ ಮುಖದಿಂದಾಗಿ ವಯಸ್ಸಾಗಿದ್ದರೂ ಅವನನ್ನು ಯುವಕ ಎಂದು ಪರಿಗಣಿಸದ ಗೆಳೆಯರು, ಮುಖ್ಯವಾಗಿ ಹುಡುಗಿಯರು. ಕೊನೆಯದಾಗಿ ಒಬ್ಬ ಹುಟ್ಟುಕವಿಯಾದ ಅವನ ಸಾಹಿತ್ಯಿಕ ಸಮಸ್ಯೆಗಳು. ಇಸಂಗಳ ಗೋಳುಗಳು, ಅನುಕರಣೆಯ ಭಯಗಳು, ವಿಮರ್ಶಕರ ನಿರೀಕ್ಷೆಗಳು ಮತ್ತು ಸಮಕಾಲೀನತೆಯ ಒತ್ತಡಗಳು ಎಂದು ಇವನ್ನು ಗುರುತಿಸಬಹುದು.

ಅಮ್ಮನ ಛಾಯೆ ಮತ್ತು ಮಗುವಿನ ಕಳೆ ಎರಡನ್ನೂ ವಿವರಿಸುವಾಗ ಕುಂದೇರಾ ಒಂದು ಹೊಸ ತಂತ್ರವನ್ನು ಅನುಸರಿಸುತ್ತಾನೆ. ಒಂದು ಈ ರೀತಿ ತಾಯಿಯ ಸೆರಗಿನಿಂದ ಪೂರ್ತಿಯಾಗಿ ಬಿಡಿಸಿಕೊಳ್ಳಲಾರದೇ ಹೋದ ಖ್ಯಾತರ ರೆಫರೆನ್ಸ್ ತರುವುದು. ಇನ್ನೊಂದು ಅದೇ ಹಿನ್ನೆಲೆಯಲ್ಲಿ ಜೆರೊಮಿಲ್‍ ಜೊತೆ ಸೂತ್ರಧಾರನ ನೆಲೆಯಿಂದ ಮಾತನಾಡುತ್ತ ಓದುಗನಿಗೆ ಒಂದು ವಿಧವಾದ ಸಾಮಿತಿಯನ್ನು ನಿರ್ಮಿಸುವುದು. ಇದನ್ನು ಕವಿ ಜೆರೊಮಿಲ್‌ ವಿಚಾರದಲ್ಲಿಯೂ ಮಾಡುತ್ತಾನೆ ಕುಂದೇರಾ. ಇದರಿಂದಲೇ ಈ ಕವಿಯನ್ನು ಒಮ್ಮೆ ಹಾಸ್ಯಮಾಡುತ್ತಿರುವಂತೆ, ಒಮ್ಮೆ ನಿಜಕ್ಕೂ ಅವನ ಪ್ರತಿಭೆಗೆ ಮೆಚ್ಚಿದಂತೆ ಮತ್ತು ಕೆಲವೊಮ್ಮೆ ಜೆರೊಮಿಲ್‌ನನ್ನಿಟ್ಟುಕೊಂಡು ಒಂದು ಕಾಲಘಟ್ಟದ ಎಲ್ಲಾ ಕವಿಗಳಿಗೆ ಮಂಗಳಾರತಿ ಎತ್ತುತ್ತಿರುವಂತೆ ಕಂಡರೆ ಅಚ್ಚರಿಯೇನಿಲ್ಲ.

(Ah, my boy, you'll never rid yourself of that feeling. You are guilty, you are guilty! Every time you leave the house you will sense behind you a reproachful look that will shout out to you to come back! You will walk in the world like a dog on a long leash! And even when you are far away you will always feel the contact of the collar on the nape of your neck! Even when you are with women, even when you are in bed with them, there will be a long leash attached to your neck, and somewhere far away your mother will be holding the other end and feeling through the spasmodic movements of the cord the obscene movements to which you have abandoned yourself!)

"Mama, please don't be angry, Mama, please forgive me!" He is now timidly kneeling at her bedside and caressing her wet cheeks.

(Charles Baudelaire, you'll be forty and still afraid of your mother!)

And Mama puts off forgiving him in order to feel as long as possible the touch of his fingers on her skin. (ಪುಟ 102)

ಮತ್ತೆ ಇಲ್ಲಿಯೇ ಕ್ಸೇವಿಯರ್‌ನ ನೆರಳನ್ನೂ ತರುತ್ತಾನೆ ಕುಂದೇರಾ. ತಾಯಿಯ ನೆರಳು ಮಗನ ಮೇಲೆ ಚಾಚಿಕೊಂಡೇ ಇರುವುದಕ್ಕೆ ತಾಯಿ ನಿಜಕ್ಕೂ ಬದುಕಿರಬೇಕಾದ ಅಗತ್ಯ ಕೂಡಾ ಇಲ್ಲ ಎನ್ನುತ್ತಲೇ ಪೂರ್ತಿಯಾಗಿ ಆವರಣದೊಳಗೇ ಬರುವ ವಿವರಗಳನ್ನು ಗಮನಿಸಿ:

(This is something that could never have happened to Xavier, because Xavier has no mother, and no father either, and not having parents is the first precondition of freedom.

But please understand, it's not a matter of losing one's parents. Gerard de Nerval's mother died when he was a newborn, and yet he lived his whole life under the hypnotic gaze of her wonderful eyes.

Freedom does not begin where parents are rejected or buried, but where they do not exist:

Where man is brought into the world without knowing by whom.
Where man is brought into the world by an egg thrown into a forest.
Where man is spat out on the ground by the sky and puts his feet on the world without feeling gratitude.)
(ಪುಟ 102)

1948ರ ನಂತರದ ಆರಂಭಿಕ ಕೆಲವು ವರ್ಷಗಳಲ್ಲಿ, ಕಮ್ಯುನಿಸಂ ಪ್ರಭಾವ ಹಬ್ಬುತ್ತಿದ್ದ ಅವಧಿಯಲ್ಲಿ ಜೆರೊಮಿಲ್ ಕ್ರಾಂತಿಯ ಪ್ರಭಾವಕ್ಕೆ ಸಹಜವಾಗಿಯೇ ಒಳಗಾದವನು. ಆದರೆ ಮೇ 1ರ ಸಮಾರಂಭಕ್ಕೆ ಅವನು ಆರಿಸಿದ ಕೆಲವು ಸ್ಲೋಗನ್ನುಗಳನ್ನು ಪಾರ್ಟಿಯ ಹಿರಿಯ ಮತ್ತು ಅನುಭವಿ ನಾಯಕರು ತಿರಸ್ಕರಿಸುತ್ತಾರೆ ಮಾತ್ರವಲ್ಲ ಸ್ವತಃ ಜೆರೊಮಿಲ್‌ಗಾದರೂ ಅವು ಏನನ್ನು ಹೇಳುತ್ತಿವೆ ಎಂಬುದು ಸ್ಪಷ್ಟವಿದೆಯೇ ಎಂದು ಅವುಗಳನ್ನು ಒಂದೊಂದಾಗಿ ಪ್ರಶ್ನಿಸಲಾಗುತ್ತದೆ. ಇದಿಲ್ಲಿ ಒಬ್ಬ ಯುವಕವಿಯ ಪಾಡು. ಜೆರೊಮಿಲ್‌ನ ಸ್ಲೋಗನ್ ಗಮನಿಸಿ:

Dream is reality.
Cancel churches.
Death to lukewarm.
Power to the imagination.
Revolution in love.

ಆದರೆ ಆ ಹೊತ್ತಿಗಾಗಲೇ ಕಮ್ಯುನಿಸಂ ಒಂದು ಆಯ್ಕೆಯಾಗಿ ಒದಗಿದ್ದಾಗಿರದೇ ಅದೊಂದೇ ಆಯ್ಕೆಯಾಗಿ ಹೇರಲ್ಪಟ್ಟಿದ್ದಾಗಿತ್ತೆಂಬುದು ಒಂದು ಭಾಗದ ಜನರಿಗೆ ವಿಸ್ಮೃತಿಯಾಗಿದ್ದರೆ ಇನ್ನೊಂದು ಭಾಗದ ಜನ ಒಳಗೊಳಗೇ ವಿರೋಧಿಸುತ್ತಿದ್ದರೂ ಅವರ ನೈಜ ಕಾಳಜಿಯನ್ನು ಅನುಮಾನದಿಂದಲೇ ನೋಡುವ ಸ್ಥಿತಿಯಿತ್ತು. ಇಂಥ ಪರಿಸ್ಥಿತಿಯಲ್ಲಿ ಜೆರೊಮಿಲ್‌ನ ಕಮ್ಯುನಿಸಂ ಸ್ಪಷ್ಟವಾದ ಹಾದಿಯೇನೂ ಆಗಿರಲಿಲ್ಲ ಎನ್ನುವುದು ಮುಖ್ಯ.

But we never know at the present moment whether reality is a dream or a dream is reality; the students who lined up with their placards at the university came gladly, but they also knew that they risked trouble if they stayed away. In Prague the year 1949 marked for Czech students a curious transition during which a dream was already no longer only a dream; their shouts of jubilation were still voluntary but already compulsory. (ಪುಟ 149)

ಜೊತೆಯಾಗಿರುವ ಇಬ್ಬರು ಹುಡುಗಿಯರಲ್ಲಿ ನೋಡಲು ಸುಂದರವಾಗಿದ್ದ ಒಬ್ಬಳನ್ನು ಹೊಂಚುಹಾಕಿ ಕಾದು, ಒಲಿಸಿಕೊಳ್ಳಲು ಇನ್ನಿಲ್ಲದಂತೆ ಮನಸ್ಸಿನಲ್ಲೇ ಮಂಡಿಗೆ ತಿಂದು ಕೊನೆಗೂ ಕಾರ್ಯತಃ ಏನನ್ನಾದರೂ ಮಾಡಲು ಈ ಮಗು ಮುಂದಾದಾಗ ಇವನು ಸಿಕ್ಕಿಹಾಕಿಕೊಳ್ಳುವುದು ಇವನಿಗೆ ಸ್ವಲ್ಪವೂ ಇಷ್ಟವಾಗದಿದ್ದ ಇನ್ನೊಬ್ಬಳ ಕೈಯಲ್ಲಿ. ಚಂದದವಳು ಮದುವೆಯಾಗಿ ಹೊರಟು ಹೋಗಿರುತ್ತಾಳೆ. ಈ ಹುಡುಗಿಯಾದರೂ ಇವನನ್ನು ಇಕ್ಕಳದಲ್ಲಿ ಹಿಡಿದಂತೆ ಹಿಡಿದುಕೊಳ್ಳುತ್ತಾಳೆ! ತಮಾಷೆಯೆಂದರೆ ತನ್ನ ಗುಟ್ಟನ್ನು ಬಿಟ್ಟುಕೊಡುವ ಎದೆಗಾರಿಕೆ ಕೂಡ ಇಲ್ಲದವನಂತೆ ಈ ಹುಡುಗಿಗೇ ಜೆರೊಮಿಲ್ ತನ್ನನ್ನು ಒಪ್ಪಿಸಿಕೊಂಡು ಬಿಡುತ್ತಾನೆ. ತೀರ ಅಪ್ರಾಮಾಣಿಕವಾಗಿ ತಾನು ಬಯಸಿದ್ದೇ ಈ ಹುಡುಗಿಯನ್ನು ಎಂದು ಸ್ವತಃ ತಾನೂ ನಂಬುವುದಕ್ಕೆ ಸಿದ್ಧನಾಗುತ್ತಾನೆ! ಮನಸ್ಸು ಪರಿಪೂರ್ಣವಾಗಿ ಸ್ವೀಕರಿಸಲೊಲ್ಲದ ಇವಳನ್ನು ಒಪ್ಪಿಕೊಳ್ಳಲು, ತನ್ನ ಅಭಿರುಚಿಗೆ ಇವಳ ದೇಹ, ಬುದ್ಧಿ ಇತ್ಯಾದಿಗಳನ್ನು ಒಗ್ಗಿಸಿಕೊಳ್ಳಲು ಏನೇನೋ ಸ್ವಯಂ ಸಮ್ಮೋಹನಾಸ್ತ್ರಗಳನ್ನು ಬಳಸುತ್ತಾನೆ. ಅಷ್ಟಿಷ್ಟು ಯಶಸ್ವಿಯಾದಂತೆಯೂ ಕಾಣಿಸುತ್ತಾನೆ. ಕೊನೆಗೆ ಅಮ್ಮನನ್ನು ಒಪ್ಪಿಸಲು ಇನ್ನಷ್ಟು ಒದ್ದಾಡುತ್ತಾನೆ. ಈ ಎಲ್ಲ ಒದ್ದಾಟಗಳಲ್ಲಿ ನವಿರಾದ ಪ್ರೇಮವಾಗಲೀ, ಉತ್ಕಟ ಕಾಮವಾಗಲೀ ಇಲ್ಲದೆ ಸಂಬಂಧ ಬಳಲುತ್ತದೆ. ಇಷ್ಟೆಲ್ಲ ಆದ ಮೇಲೆ ತಾನು ನಂಬಿದ ಇಸಂಗಾಗಿ ಆ ಹುಡುಗಿಯ ಬದುಕು-ಭವಿಷ್ಯಗಳನ್ನು ಬಲಿಕೊಡುವುದರೊಂದಿಗೆ ತನ್ನ ಮುಗ್ಧ ಮತ್ತು ಮೂರ್ಖ ನೆಲೆಗಳನ್ನು ನಮಗೆ ಕಾಣಿಸಿ ಬೆಚ್ಚಿಬೀಳಿಸುತ್ತಾನೆ.

ಮಿಲಿಟರಿ, ಪೋಲೀಸು ಮತ್ತು ಇಸಂಗಳ ಹುಚ್ಚು ಮೋಹ ಹೇಗೆ ಮೂರ್ಖ ನಡೆಗಳನ್ನು ಕನಿಷ್ಠ ಆ ಕಾಲಕ್ಕೆ ಬದ್ಧವಾಗಿ ನೋಡುವಾಗ ಸಹಜವೆಂಬಂತೆ ಕಾಣಿಸುವುದೋ ಹಾಗೆಯೇ ದೇಶ ವಿಷಮ ಪರಿಸ್ಥಿತಿಯಲ್ಲಿರುವಾಗ ಅನುದ್ದಿಶ್ಯ ಮಾಡುವ ತಮಾಷೆ, ನಾಟಕ ಮತ್ತು ಸುಳ್ಳು ಹೇಗೆ ಈ ಮೂರ್ಖರ ಕೈಯಲ್ಲಿ ಕ್ರೂರ ತಿರುವುಗಳಿಗೆ ಕಾರಣವಾಗಬಹುದೆಂಬ ಒಂದು ಚಿತ್ರ ಅನಾವರಣಗೊಳ್ಳುವುದು ಕಾದಂಬರಿಯ ಕೊನೆಗಾದರೂ ಕ್ಸೇವಿಯರ್ ಮೂಲಕ ನಮಗೆ ಅಂಥ ಹೊಳಹುಗಳು ದಕ್ಕಿರುತ್ತವೆ ಮಾತ್ರವಲ್ಲ ಸ್ವತಂತ್ರವಾಗಿಯೂ ಜೆರೊಮಿಲ್‌ನ ನಡೆ ನಮಗೆ ಕಾಣಿಸುವುದು ಅದನ್ನೇ.

ಇಸಂನ ಪ್ರಭಾವ ಮತ್ತು ಬೌದ್ಧಿಕವಾಗಿ ಶ್ರೇಷ್ಠಮಟ್ಟದ್ದನ್ನೇ ಬರೆಯುವ ಗುರಿ ಇವುಗಳಿಂದ ತಾನು ಮತ್ತು ತನ್ನ ಕವಿತೆ ಕ್ರಮೇಣ ಜನಸಾಮಾನ್ಯರಿಂದ ದೂರವಾಗುತ್ತದೆ ಎಂಬ ಪ್ರಜ್ಞೆ ಜೆರೊಮಿಲ್‌ನಲ್ಲಿ ಹುಟ್ಟುವುದು ಬೌದ್ಧಿಕವಾಗಿ ಜೆರೊಮಿಲ್ನತಷ್ಟು ಸಾಹಿತ್ಯದ ಬಗ್ಗೆ ಅರಿವಿಲ್ಲದ ಈ ಹುಡುಗಿಯೊಂದಿಗಿನ ಪ್ರೇಮದಿಂದಲೇ. ತಾನು ಬರೆಯುತ್ತಿರುವುದು ಈ ಹುಡುಗಿಯನ್ನು ಅದೂ ಅವಳನ್ನೇ ಕುರಿತು ಬರೆದ ಕವನವೂ ಕೂಡ ಅವಳನ್ನು ತಲುಪುತ್ತಿಲ್ಲ ಎಂಬುದರ ಅರಿವು ಇದನ್ನು ಮಾಡುತ್ತದೆ. ಹಾಗೆಯೇ ಅವಳ ದೇಹವನ್ನು ವೈದ್ಯ ಕೂಡ ನಗ್ನವಾಗಿ ಕಾಣಬಾರದು ಎಂದು ಬಯಸುವ ಅಥವಾ ವಿಧಿಸುವ ಜೆರೊಮಿಲ್‌ಗೆ ತನ್ನ ದೇಶದ ಕಾನೂನಿನಡಿ ತನ್ನ ನಿರೀಕ್ಷೆ ಅಸಹಜ ಮತ್ತು ಅಸಾಧ್ಯವಾದುದೆಂಬ ಅರಿವು ಜೀರ್ಣವಾಗುವುದಿಲ್ಲ. ಅದೇ ರೀತಿ ತನ್ನನ್ನು ಮತ್ತು ತನ್ನ ಕವಿತೆಗಳನ್ನು ಸದಾ ಸ್ವೀಕೃತ ಮನೋಭಾವದಿಂದ ಗುರುತಿಸುವ ಮತ್ತು ಹೊಗಳುವ ಒಂದು ವ್ಯಕ್ತಿಯ ಅಗತ್ಯವನ್ನು ಜೆರೊಮಿಲ್ ಮೀರುವುದು ಸಾಧ್ಯವಾಗುವುದಿಲ್ಲ. ಅದು ಅವನಿಗೆ ಬಾಲ್ಯದ ಗೆಳೆಯನ ರೂಪದಲ್ಲಿ ಸಿಗುತ್ತದೆ. ಈಗ ಒಬ್ಬ ಮಿಲಿಟರಿ ಪೋಲಿಸ್ ಆಗಿದ್ದು ಅವನಿರುವ ವ್ಯವಸ್ಥೆ ಪ್ರಭುತ್ವಕ್ಕೆ ವಿರುದ್ಧವಾಗಿರುವವರನ್ನು, ಕದ್ದು ದೇಶ ಬಿಟ್ಟು ಓಡುತ್ತಿರುವವರನ್ನು ಗುರುತಿಸಿ ಶಿಕ್ಷಿಸುವುದಕ್ಕೆ ಕಾದಿರುತ್ತದೆ. ಇದೇ ವ್ಯವಸ್ಥೆಗೆ ಜೆರೊಮಿಲ್ ತನ್ನ ಪ್ರೇಯಸಿಯನ್ನು ಅನಗತ್ಯವಾಗಿ ಒಪ್ಪಿಸಿ ಅವಳ ಬದುಕು ಭವಿಷ್ಯವನ್ನು ಶಾಶ್ವತವಾಗಿ ಹಾಳುಗೆಡಹುವುದು ಕ್ರೂರ ವಿಪರ್ಯಾಸದಂತೆ ಕಾಣುತ್ತದೆ.

ಕಾದಂಬರಿಯ ಕಥಾನಕ ಕೊನೆಯ ಎರಡು ಅಧ್ಯಾಯಗಳಲ್ಲಿ ಬೇರೆಯೇ ನೆಲೆಗಳಲ್ಲಿ ಮುಂದುವರಿಯುತ್ತದೆ. ಅದೇನಿದ್ದರೂ ಇಡೀ ಕಾದಂಬರಿ ಎತ್ತುವ ಕೆಲವು ಪ್ರಶ್ನೆಗಳಿವೆ. ಸಹಜವಾಗಿಯೇ ಇವು ಓದುಗ ತನ್ನನ್ನೇ ತಾನು ಕೇಳಿಕೊಳ್ಳಬೇಕಾದ ಮತ್ತು ತನ್ನ ಉತ್ತರವನ್ನು ತನಗೆ ತಾನೇ ಕಂಡುಕೊಳ್ಳಬೇಕಾದ ಪ್ರಶ್ನೆಗಳೇ, ಸರಿ.

ಇಸಂ ಮತ್ತು ಪ್ರೇಮದ ನಡುವಿನ ಸಂಘರ್ಷ ಈ ಮಟ್ಟದಲ್ಲಿರುವುದು ಸಾಧ್ಯವೇ? ಯಾವ ಅಂತರದಲ್ಲಿ ಈ ಮಟ್ಟದ ಇಸಂ ಪ್ರೇಮ ಅಸಂಗತವಾಗಿ ಕಾಣುತ್ತದೆ ಎಂಬ ಪ್ರಶ್ನೆಯಿದೆ. ತೀರ ವರ್ತಮಾನದಲ್ಲಿ ದೇಶಪ್ರೇಮ, ಪ್ರಭುತ್ವ ಮತ್ತು ದೇಶಕ್ಕಾಗಿ ಪ್ರಾಣವನ್ನೇ ನೀಡುವುದು, ನೆಚ್ಚಿನ ಸಿನಿಮಾನಟ ಸತ್ತಾಗ ತಾವೂ ಸಾಯುವುದು, ಬೆಂಕಿಕೊಟ್ಟುಕೊಳ್ಳುವುದು ಇತ್ಯಾದಿ ಹೇಗೆ ಕಾಣುವುದೋ ಅವೆಲ್ಲ ಕೊಂಚ ಕಾಲಾನಂತರ ಮತ್ತು ಆಯಾ ದೇಶದ ಹೊರಗೆ ಎಂಬ ಒಂದು ಅಂತರದಿಂದ ಹಾಗೆಯೇ ಕಾಣುವುದಿಲ್ಲ ಎಂಬುದನ್ನು ಒಪ್ಪುವುದಾದರೆ ಮಾತ್ರ ಈ ಪ್ರಶ್ನೆ ಸಂಗತವೆನಿಸುತ್ತದೆ. ಹಾಗೆಯೇ ಧಾರ್ಮಿಕ ಮೂಲಭೂತವಾದಿತ್ವಕ್ಕೂ ಇದನ್ನೇ ಅನ್ವಯಿಸಬಹುದು. ಮರ್ಯಾದಾ ಹತ್ಯೆಯ ಹಿನ್ನೆಲೆಗೂ ಅನ್ವಯಿಸಬಹುದು. ಬುದ್ಧನ ಪ್ರತಿಮೆಯನ್ನು ಧ್ವಂಸಗೊಳಿಸುವ ತಾಲಿಬಾನಿ ಪಡೆಗಳ ವರ್ತನೆ ಕೂಡಾ ಕಾಲ ಮತ್ತು ದೇಶದ ಅಂತರ ಸಾಧ್ಯವಾದಾಗ ಕಾಣುವುದೇ ಬೇರೆ ರೀತಿ, ಅಲ್ಲೇ ಅವರಲ್ಲೇ ಒಬ್ಬರಾಗಿದ್ದಾಗ ಕಾಣುವುದೇ ಬೇರೆ ರೀತಿ ಇರುತ್ತದೆ ಎಂಬುದನ್ನು ಒಪ್ಪಿದರೆ ಮಾತ್ರ ಈ ಪ್ರಶ್ನೆ ಸಂಗತವಾಗುತ್ತದೆ.

ಪೊಸೆಸಿವ್‌ನೆಸ್ ಎನ್ನುತ್ತೇವಲ್ಲ ಅದು ಮತ್ತು ಪ್ರೇಮ ಒಂದು ತಕ್ಕಡಿಯಲ್ಲಿ; ತಾಯಿ ಮತ್ತು ಮಗನ ನಡುವಿನ ಬಂಧ ಪರಸ್ಪರ ಜಿದ್ದಾಜಿದ್ದಿನ ಮಟ್ಟದ ‘ನೀನು ನನಗೇ ಬೇಕು’ ಭಾವವಾಗುವುದು ಇನ್ನೊಂದು ತಕ್ಕಡಿಯಲ್ಲಿ - ಇಟ್ಟು ನೋಡುವಾಗ ಅದು ಅಪ್ರಬುದ್ಧ ನೆಲೆ ಎನ್ನುವುದಾದರೆ ಪ್ರೇಮಭಾವಕ್ಕೆ ಅದು ತಾಯಿ ಮಗನ ನಡುವಿನದ್ದಾಗಲಿ,ಪ್ರಿಯಕರ-ಪ್ರಿಯತಮೆಯ ನಡುವಿನದ್ದೇ ಆಗಿರಲಿ ಅದಕ್ಕೆ ಪ್ರಬುದ್ಧನೆಲೆ ಎನ್ನಬಹುದಾದ ನೆಲೆಯೂ ಒಂದಿದೆಯೆ ಮತ್ತು ಇದ್ದರೆ ಅದು ಕೇವಲ ಕಾಲ್ಪನಿಕವಿದ್ದೀತೆ ಎಂಬ ಪ್ರಶ್ನೆಯಿದೆ.

ಕವಿಭಾವವೆಂಬುದು ಒಂದು ಅಪ್ರಬುದ್ಧ ಮನಸ್ಸಿನ ಘಟ್ಟವೆ ಎಂಬುದು ಹೆಚ್ಚು ಗಹನವಾದ ಪ್ರಶ್ನೆಯೇ. ಕುಂದೇರಾ ತನ್ನ The Curtain ಕೃತಿಯಲ್ಲಿ ಈ ಕುರಿತು ಹೆಚ್ಚು ವಿವರವಾದ ಮಾತುಗಳನ್ನು ಬರೆದಿದ್ದಾನೆ. ಮೊದಲು ಹೆಗೆಲ್‌ನ ಮಾತುಗಳನ್ನು ಉದ್ಧರಿಸುತ್ತಾನೆ:

The content of lyric poetry, Hegel says, is the poet himself; he gives voice to his inner world so as to stir in his audience the feelings, the states of mind he experiences. And even if the poet treats `objective' themes, external to his own life, "the great lyric poet will very quickly move away from them and end up drawing the portrait of himself" ("stellt sich selber dar") (The Curtain: Page 88)
.................
..................
.....................

I have long seen youth as the lyrical age, that is, the age when the individual, focused almost exclusively on himself, is unable to see, to comprehend, to judge clearly the world around him. If we start with that hypothesis (necessarily schematic, but which, as a schema, I find accurate), then to pass from immaturity to maturity is to move beyond the lyrical attitude.

If I imagine the genesis of a novelist in the form of an exemplary tale, a `myth', that genesis looks to me like a conversion story: Saul becoming Paul; the novelist being born from the ruins of his lyrical world.
(The Curtain: Pages 88-89)

ಬರಹಗಾರ ಸ್ವ-ಕೇಂದ್ರಿತನಾಗಿದ್ದಾಗ ಕವಿತೆ ಅವನ ಮೆಚ್ಚಿನದ್ದಾಗುತ್ತದೆ ಮತ್ತು ಕ್ರಮೇಣ ಅವನು ಜಗತ್ತಿನ ಕೇಂದ್ರ ತಾನಲ್ಲ, ತಾನು ಎಂಬುದೇ ಮುಖ್ಯವಾದ ಮುದ್ದೆಯಲ್ಲ, ತಾನು ಒಂದು ಸಮಾಜದ ಸಣ್ಣ ಅಂಶ ಎಂಬ ಅರಿವು ಹೆಚ್ಚಿದಂತೆಲ್ಲ ಕವಿತೆಯಿಂದ ಹೆಚ್ಚು ಪ್ರಬುದ್ಧವಾದ (!?) ಪ್ರಕಾರಗಳಿಗೆ ಅಂದರೆ ಗದ್ಯ,ಕತೆ-ಕಾದಂಬರಿಗಳಿಗೆ ಸರಿಯುತ್ತಾನೆ ಎಂಬ ನಿಲುವು ಸರಿಯೆ? ನಿಮಗೆಲ್ಲ ಗೊತ್ತಿರುವಂತೆ ಕವಿತೆ ಎಂಬುದು ಒಂದು (format) ಪ್ರಕಾರವಾಗಿ ಮತ್ತು ಒಂದು (content) ಲಯವಾಗಿ ಗದ್ಯದಲ್ಲೂ ಇರುವ ವಸ್ತು. ಅದು ಕವಿಯ ವ್ಯಕ್ತಿತ್ವ ಬೆಳವಣಿಗೆಯೊಂದಿಗೆ ತಳುಕು ಹಾಕಿ ನೋಡುವುದು ಎಷ್ಟು ಸರಿ ಎಂಬುದು ಪ್ರಶ್ನೆ. ಮಿಲನ್ ಕುಂದೇರಾ ಇದನ್ನು ಇತಿಹಾಸದೊಂದಿಗೆ ಸಮೀಕರಿಸಿ ಹೇಳುತ್ತಿರುವುದಾದರೂ ಜೆರೊಮಿಲ್‌ನ ಕಾಲ, ಇಪ್ಪತ್ತನೆಯ ಶತಮಾನದ ಮೊದಲರ್ಧದವರೆಗಿನ ಕಾಲಾವಧಿಯ ಕವಿಗಳ ಕುರಿತಾಗಿಯಷ್ಟೇ ಎಂದುಕೊಂಡರೂ ಪ್ರಶ್ನೆಯನ್ನು ಇವತ್ತಿಗೂ ಎತ್ತಬಹುದು ಎಂದು ತಿಳಿಯುತ್ತೇನೆ. ನಿಮಗೆಲ್ಲ ನೆನಪಿರುವಂತೆ ಡಾ||ಯು.ಆರ್.ಅನಂತಮೂರ್ತಿಯವರು ಎಸ್ ಎಲ್ ಭೈರಪ್ಪನವರ ವಿವಾದಾತ್ಮಕ ಕಾದಂಬರಿ ಆವರಣದ ಬಗ್ಗೆ ಮಾತನಾಡುತ್ತ ಭೈರಪ್ಪನವರ ಕಾದಂಬರಿಯಲ್ಲಿ ಪೊಯೆಟ್ರಿಯಿಲ್ಲ, there is absolutely no poetry ಎಂದಿದ್ದರು. ಕವಿಮನಸ್ಸು ಎಂದು ನಾವು ಹೇಳುವಾಗ ಭಾವುಕತೆ, ಸೂಕ್ಷ್ಮಸಂವೇದಿ ಮನಸ್ಸು ಎಂಬುದನ್ನು ಸಮೀಕರಿಸುವುದೇ ಇಲ್ಲ ಎಂದೇನಲ್ಲ. ಅದರೆ ಕವಿಮನಸ್ಸು ಎಂಬುದು ಅಷ್ಟೇ ಅಲ್ಲ ಅಲ್ಲವೆ? ಇಸಂಗಳ ಹಿಂದೆಯೇ ಬಹುದೂರ ಹೋಗಿ ಸಿಲೆಬಸ್ ಬದ್ಧ ಕವಿತೆಗಳನ್ನು ಬರೆದವರು ಆಮೇಲೆ ಎಲ್ಲಿಗೆ ಸಂದರು ಎಂಬುದು ಎಲ್ಲರಿಗೂ ಗೊತ್ತೇ ಇದೆ. ರಮ್ಯವಾದ ಜಗತ್ತನ್ನೇ ಕುರಿತು ಹಾಡುತ್ತಿರುವ ಕವಿತೆಗಳು, ಭಾವತೀವೃತೆಯನ್ನೇ ನೆಚ್ಚಿದ ಭಾವ-ಗೀತೆಗಳು ಮತ್ತು ಆನಂತರದ ಬಂಡಾಯ, ದಲಿತ ಕವನಗಳು ಎಲ್ಲವನ್ನೂ ಮನಸ್ಸಿಗೆ ತಂದುಕೊಂಡು ಈ ಪ್ರಶ್ನೆಯನ್ನು ನೋಡಬಹುದು. ನಮ್ಮ ಜಾನಪದ ಗೀತೆಗಳು, ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ ಮುಂತಾದವರ ವಚನಗಳು, ದಾಸರ ಕೀರ್ತನೆಗಳು ಕೂಡಾ ನಮ್ಮ ಮನಸ್ಸಿಗೆ ಇಲ್ಲಿ ಬರಬೇಕು. ಮತ್ತು ಮಹಾನ್ ಕಾವ್ಯಗಳನ್ನು ಬರೆದ ಪಂಪಾದಿ ಕವಿಗಳನ್ನು ನೆನೆಯದೇ ಪ್ರಶ್ನೆಯನ್ನು ಮುಖಾಮುಖಿಯಾಗುವುದಕ್ಕಾದೀತೆ? ಸ್ವಕೇಂದ್ರಿತ, ಭಾವುಕ ಮತ್ತು ಅಪ್ರಬುದ್ಧ ಬರಹಗಾರ ಸುರುಮಾಡುವುದೇ ಕವಿತೆಗಳಿಂದ ಎನ್ನುವುದಾದರೆ ಸ್ವಂತದ ನೋವುಗಳನ್ನೇ ಕತೆಯಾಗಿಸಿ ಬರೆದ ಉದಯೋನ್ಮುಖ ಮತ್ತು ಅದರಲ್ಲೆ ಅಸ್ತೋನ್ಮುಖರೂ ಆದ ಕತೆಗಾರರನ್ನು ಎಲ್ಲಿಡುವುದು!

Life is Elsewhere ಕಾದಂಬರಿ ಎತ್ತುವ ಮೂಲಪ್ರಶ್ನೆಗಳು ಇವಲ್ಲದೇ ಇರಬಹುದು. ಅಪ್ರಬುದ್ಧ ಮನಸ್ಸುಗಳ ಪೊಸೆಸಿವ್‌ನೆಸ್, ಪ್ರೇಮ, ಕಾಮ, ನೈತಿಕತೆ, ಪಾಪಪ್ರಜ್ಞೆ, ಕವಿತೆ ಮತ್ತು ಸದಾ ಏನೋ ಅಸುಖದ ಭಾವದಲ್ಲಿ ಇನ್ನೇನನ್ನೋ ಹುಡುಕುತ್ತಲೇ ಕಳೆಯುವ ಅಸ್ವಾಸ್ಥ್ಯ (ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ...) ಇವೇ ಕೇಂದ್ರವಾಗಿರುವ ಈ ಕಾದಂಬರಿ ಒಟ್ಟಾರೆಯಾಗಿ ಮನುಷ್ಯನ ದುರಂತ ಮತ್ತು ಕ್ಷುದ್ರತೆಯನ್ನೇ ತೋರಿಸುವುದಲ್ಲದೆ ಅವನು ಅದನ್ನು ಮೀರಬಹುದಾದ ಮಾರ್ಗಗಳನ್ನು ಮುಚ್ಚಿರುವ ನಿರಾಶಾವಾದಿ presumption ನೊಂದಿಗೇ ವಿರಮಿಸುತ್ತದೆ.

2 comments:

ಚಿನ್ಮಯ ಭಟ್ said...

ಧನ್ಯವಾದಗಳು ಸರ್..ಮೊದಲ ಬಾರಿ ನಿಮ್ಮ ಬ್ಲಾಗಿಗೆ ಬಂದೆ....
ನಾನು ಕಾದಂಬರಿ ಓದುವುದೇ ಕಡಿಮೆ..ಓದಿದರೂ ಕನ್ನಡವೇ...
ಇಲ್ಲಿ ಒಂದಿಷ್ಟು ಹೊಸ ಮಾಹಿತಿ ಪಡೆದೆ..

ಚೆನ್ನಾಗಿತ್ತು..ಬರಹ...
ಬೇರೆ ಭಾಷೆಯದನ್ನೂ ಓದಬೇಕೆನಿಸುತ್ತಿದೆ..
ಬರೆಯುತ್ತಿರಿ..
ನಮಸ್ತೆ

ನರೇಂದ್ರ ಪೈ said...

ಥ್ಯಾಂಕ್ಯೂ ಚಿನ್ಮಯ್. ನನ್ನ ಬರಹಗಳನ್ನು ಯಾರಾದರೂ ಓದುತ್ತಾರೆಂದೇ ನಾನು ಭಾವಿಸಿಲ್ಲ, ನಿಮ್ಮ ಕಾಮೆಂಟ್ ನೋಡಿ ನಿಜಕ್ಕೂ ಖುಶಿಯಾಯ್ತು. ನೀವಿನ್ನೂ ಗಮನಿಸಿಲ್ಲವೆಂದಾದಲ್ಲಿ ದಯವಿಟ್ಟು ಚುಕ್ಕುಬುಕ್ಕು ವೆಬ್ ಸೈಟನ್ನು ಒಮ್ಮೆ ಗಮನಿಸಿ, ಚೆನ್ನಾಗಿದೆ. ನನ್ನ ಒಂದು ಲೇಖನವೂ ಅಲ್ಲಿದೆ. http://www.chukkubukku.com/