Monday, November 26, 2012

ಚಾರ್‌ಮಿನಾರ್ - ಜಯಂತ್ ಕಥಾಲೋಕದ ಹಳತು ಹೊಸತರ ಸಂಕ್ರಮಣ

ಜಯಂತರ ಕತೆಗಳ ಬಗ್ಗೆ ಹೊಸದಾಗಿ ಹೇಳುವುದೇನಿದೆ ಎನಿಸುವ ಹೊತ್ತಿಗೇ ಇವುಗಳ ಬಗ್ಗೆ ಚರ್ಚಿಸಬೇಕಾದ ಸಂದರ್ಭವಿದೆ. ಒಂದು, ಈಚೆಗೆ ನನ್ನ ಕತೆಗಾರ ಸ್ನೇಹಿತರೊಬ್ಬರು ಸಿಕ್ಕಿದ್ದರು. ಅವರು ಆಗಷ್ಟೇ ಯಾವುದೋ ಒಂದು ಕಥಾಸ್ಪರ್ಧೆಯ ತೀರ್ಪುಗಾರರಾಗಿ ಬಹುಮಾನಿತ ಕತೆಗಳನ್ನು ಆರಿಸಿ ಸುಸ್ತಾಗಿದ್ದರು. ಕೇಳಿದರೆ ಎಲ್ಲಾ ಹಿರಿಯ ಕತೆಗಾರ/ಬರಹಗಾರರಂತೆಯೇ ಹೊಸ ತಲೆಮಾರಿನ ಕತೆಗಾರರಲ್ಲಿ ಜೀವನಾನುಭವವನ್ನು ಕತೆಯಾಗಿಸುವ ಕೌಶಲದ ಕುರಿತು ಇರುವ ನಿರ್ಲಕ್ಷ್ಯ, ಬರೆಯುವುದು ಸುಲಭ ಎನಿಸಿಬಿಟ್ಟಿರುವ ಮನೋಧರ್ಮ, ಕ್ರಾಫ್ಟ್ ಇದ್ದರೆ ಸತ್ವಶಾಲಿಯಾದ ಕಥನವಿಲ್ಲ, ಕಥನವಿದ್ದರೆ ಅದನ್ನು ಹೇಳಬೇಕಾದ ಪಾತಳಿಯ ಕುರಿತು ಸ್ಪಷ್ಟತೆಯಿಲ್ಲ ಮುಂತಾಗಿ ನಿರಾಸೆಯನ್ನು ವ್ಯಕ್ತಪಡಿಸಿದರು. ಇದನ್ನು ಹಲವರು ಹೇಳಿದ್ದಾರೆ, ಹೇಳುತ್ತಿರುತ್ತಾರೆ ಎನ್ನಿ. ಹೆಚ್ಚೂಕಮ್ಮಿ ಕನ್ನಡದಲ್ಲಿ ಈಗ ಕಸಕಡ್ಡಿ ಜೊಳ್ಳು ಬರಹಗಳೇ ಪ್ರಕಟವಾಗುವುದು ಹೆಚ್ಚಾಗಿ ಓದಲೇ ಬೇಕಾದ ಪುಸ್ತಕ ಬರುತ್ತಿದೆಯೇ ಎನ್ನುವುದೇ ಅನುಮಾನ ಎನ್ನುವವರೂ, ಇಷ್ಟೊಂದು ಪುಸ್ತಕಗಳು ಪುಕ್ಕಟೆ ಬಂದು ಬೀಳುತ್ತಿವೆ ಮಾರಾಯ, ಒಂದಾದರೂ ಓದಬೇಕು ಅನಿಸುವ ಮಟ್ಟದಲ್ಲಿಲ್ಲ, ಇದನ್ನೆಲ್ಲ ಏನು ಮಾಡಲಿ ಮಹರಾಯ ಎಂದು ಅಲವತ್ತು ಕೊಂಡ ಖ್ಯಾತ ಲೇಖಕರೂ; ಹೊಸ ತಲೆಮಾರಿನ ಕತೆಗಾರರಲ್ಲಿ ಜೀವನಾನುಭವವೇ ಇಲ್ಲ, ಅವರು ಇನ್ನೊಬ್ಬರು ಬರೆದಿದ್ದನ್ನೇ ಓದಿಕೊಂಡು ತಮ್ಮದನ್ನು ಬರೆಯುತ್ತಿದ್ದಾರೆ ಎಂದವರೂ (ನನ್ನನ್ನು ‘ಓದುಗ’ನೊಬ್ಬ ‘ಬರಹಗಾರ’ನಾಗುವ ಸಾಮಾಜಿಕ ಸಾಧ್ಯತೆಗೆ ಸೂಕ್ತ ಉದಾಹರಣೆ ಎಂದು ಕರೆದ ಫಣಿರಾಜ್ ಲೇಖನ ದೇಶಕಾಲದ ವಿಶೇಷಾಂಕದಲ್ಲಿದೆ.) ಇದ್ದಾರೆ. ನಾನಿಲ್ಲಿ ಮೊದಲಿಗೆ ಹೇಳಿದ ನನ್ನ ಸ್ನೇಹಿತರು ಇನ್ನೂ ಒಂದು ಮಾತನ್ನು ಹೇಳಿದರು. ಹೆಚ್ಚಿನ ಕತೆಗಾರರು ಜಯಂತ್ ಕಾಯ್ಕಿಣಿಯವರ ಕಥಾಶೈಲಿಯಿಂದ ಪ್ರಭಾವಿತರಾಗಿರುವುದು ಎದ್ದು ಕಾಣುವಂತಿದ್ದರೂ ಜಯಂತರ ಕತೆಗಳ ಆಶಯ, ತಂತ್ರ, ಶೈಲಿ, ಅಂತರ್ಗತವಾಗಿ ಅವರಿಗೆ ದಕ್ಕಿರುವ ಲಯ ಎಲ್ಲದರ ಕೊಡುಗೆಯಿಂದ ಅವರು ಬರೆದಿದ್ದು ಅದ್ಭುತವಾಗಿ ಮೂಡಿಬರುವುದರ ಹಿಂದೆ ಇರುವ ಒಂದು ಹದ ಏನಿದೆ ಅದನ್ನು ಅರಿಯಲು ಸೋತಿರುವುದರಿಂದ ಅವುಗಳೆಲ್ಲಾ ಪೂರ್ ಕಾಪಿಗಳಾಗಿ ಬಿಟ್ಟಿವೆ.

ಎರಡು, ನನ್ನ ಇನ್ನೊಬ್ಬ ಕಾದಂಬರಿಕಾರ ಕತೆಗಾರ ಸ್ನೇಹಿತರು ಈಚೆಗೆ ಜಯಂತ್ ತಮ್ಮ ಕತೆಗಳನ್ನು ತಿದ್ದಿ ತೀಡಿ ಮಾಡುವುದನ್ನು ಬಿಟ್ಟೇ ಬಿಟ್ಟಿದ್ದಾರೆ ಎಂದಿದ್ದರು. ಸ್ವತಃ ಜಯಂತ್ ತುಂಬ ಹಿಂದೆಯೇ ನಾನು ಅವರ ಒಂದು ಕತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾಗ ‘ಸದ್ಯದ ಸ್ಥಿತಿಯಲ್ಲಿ ನಾನು ಕತೆಗಳನ್ನು ನಿಂತು ಬರೆಯುತ್ತಿದ್ದೇನೆ ಮಾರಾಯ, ಕೂತು ಬರೆದರೆ ಸರಿಹೋದೀತು, ಅದಕ್ಕೆ ಬೇಕಾದ ಸಮಯ, ವ್ಯವಧಾನ ಈಗ ಕಷ್ಟವಾಗಿದೆ’ ಎಂದಿದ್ದರು. ಆದರೆ ನಾನು ಕಂಡಂತೆ ನಿಂತು ಬರೆದಾಗಲೂ ಜಯಂತ್ ಅದ್ಭುತ ಕತೆಗಳನ್ನು ಬರೆದವರು. ಇನ್ನು ಕೂತು ಬರೆದರೆ ಅವು ಏನಾಗಿರುತ್ತಿದ್ದವೋ ಎನಿಸುತ್ತದೆ, ಇರಲಿ.

ಹೊಸ ತಲೆಮಾರಿಗೆ ಮಾದರಿಯಂತೆ ಒದಗಬಲ್ಲ ಕತೆಗಾರರು ಎಂದರೆ ಮತ್ತದೇ ಜಯಂತ್, ವಿವೇಕ್, ಪಾಟೀಲ್ ಕಾಣಿಸುತ್ತಾರೆಯೇ ಹೊರತು ಆ ನಂತರದ ತಲೆಮಾರಿನಲ್ಲಿ ನಿಯಮಿತವಾದ ಒಂದು ಹದವನ್ನು ಕಾಯ್ದುಕೊಂಡು, ಬರೆದಿದ್ದರಲ್ಲಿ ಅತ್ಯುತ್ತಮ ಎನಿಸುವ ಕತೆಗಳನ್ನಷ್ಟೇ ಆಯ್ದು ಪ್ರಕಟಿಸುವ ಸಂಯಮ ತೋರಿಸಿ, ನಿರಂತರವಾಗಿ ಬರೆಯುತ್ತ ಬಂದ ಮತ್ತು ಹಾಗೆ ನೆಲೆಗೊಂಡ ಕತೆಗಾರರು ಕಾಣುತ್ತಿಲ್ಲ.

ಈ ಎಲ್ಲ ಹಿನ್ನೆಲೆಯಲ್ಲಿ ಜಯಂತರ ಹೊಸ ಕಥಾಸಂಕಲನ ‘ಚಾರ್‌ಮಿನಾರ್’ ನ ಕತೆಗಳನ್ನು ಜಯಂತ್ ಮಾದರಿಯ ಅಧ್ಯಯನಕ್ಕೆ ಬಳಸಿಕೊಳ್ಳುವ ಅಗತ್ಯ ಹೆಚ್ಚಿದೆ.

ಮೊದಲಿಗೆ ನೇರವಾಗಿ ಈ ಸಂಕಲನದ ಹೆಸರಿಗೇ ಕಾರಣವಾದ ನೀಳ್ಗತೆ ‘ಚಾರ್‌ಮಿನಾರ್’ ಕುರಿತೇ ಮಾತನಾಡೋಣ.

ಇಲ್ಲಿ ಬರುವ ಪಾತ್ರಗಳೆಲ್ಲ ಅಪ್ಪಟ ಜಯಂತ್ ಜಗತ್ತಿನವೇ. ಅಷ್ಟರ ಮಟ್ಟಿಗೆ ಜಯಂತರ ಹಿಂದಿನ ಕತೆಗಳ ಜೊತೆ ಒಂದು ಕಳ್ಳುಬಳ್ಳಿ ಸಂಬಂಧ ಈ ಕತೆಗೂ ಇದೆ! ಆದರೆ ಇಲ್ಲಿ ಜಯಂತ್ ಸಾಧಿಸಿದ ಲಂಘನ ನಿಜಕ್ಕೂ ಗಮನಾರ್ಹವಾದದ್ದು. ಸಣ್ಣಕತೆಗಳ ಮಟ್ಟಿಗೆ ಎಲ್ಲೋ ಜಯಂತ್ ರಿಪೀಟ್ ಆಗ್ತಿದ್ದಾರೇನೋ ಎಂಬ ಮಾತು ಅಲ್ಲಲ್ಲಿ ಸ್ನೇಹಿತರ ಬಳಗದಲ್ಲಿ ಅನುಮಾನದ ಸ್ತರದಲ್ಲೇ ಕೇಳಿಬರುತ್ತಿದ್ದುದು ನಿಜವೇ. ಆದರೆ ಚಾರ್‌ಮಿನಾರ್ ಕತೆಯ ಮೂಲಕ ಜಯಂತ್ ತಮ್ಮಲ್ಲಿನ ಕತೆಗಾರಿಕೆಯ ಕುಸುರಿಕಲೆಯ ನೈಪುಣ್ಯವಾಗಲೀ, ತಾವು ಹೇಳಬೇಕಿರುವ ಕತೆಗಳ ಉಗ್ರಾಣವಾಗಲೀ ಇಷ್ಟೇ - ಇದೇ ಎನ್ನುವ ಚೌಕಟ್ಟಿಗೆ ಸಿಗುವುದಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ನಿರ್ದಿಷ್ಟ ಘಟ್ಟದಲ್ಲಿ ಒಂದು ಜಂಪ್ ಕತೆಗಾರನಲ್ಲಿ ನಿರೀಕ್ಷಿಸುತ್ತೇವೋ ಅಥವಾ ಕತೆಗಾರನಿಗೇ ಏಕತಾನತೆ ಕಾಡಿ ತನ್ನನ್ನು ತಾನು ಮೀರುವ ಹಂಬಲ ಬರುತ್ತದೋ ಗೊತ್ತಿಲ್ಲ. ಜಯಂತರಲ್ಲಿ ಅದು ಈಗ ಆಗಿದೆ, ಅವಧಿಗೆ ಮುನ್ನವೇ ಎಂಬಂತೆ ಆಗಿದೆ.

ನೈಋತ್ಯ ಗಾಂವಕರ ಮತ್ತು ಪುನರ್ವಸು ಎಲ್ಲಿ ಈ ಕತೆ ಮುಗಿಯುವುದರೊಳಗೆ ಬದುಕಿನ ಜಂಜಡಗಳ ಒತ್ತಡದಲ್ಲಿ (‘ಕ್ಷುದ್ರ ದೈನಂದಿನ’ಗಳಲ್ಲಿ ಮುಳುಗಿ) ತಮ್ಮೆಲ್ಲ ಸಮಾಜ ಸೇವೆಯ ‘ಹುಚ್ಚು’ಗಳಿಂದ ಮುಕ್ತರಾಗುವ ಹಂಬಲಕ್ಕೆ ಪಕ್ಕಾಗುತ್ತಾರೋ ಎಂಬ ಒಂದು ಭಯ ಕತೆಯ ಉದ್ದಕ್ಕೂ ನಮ್ಮನ್ನು ಕಾಡುತ್ತಿರುತ್ತದೆ, ಬಹುಷಃ ಎಲ್ಲರನ್ನೂ. ಹಾಗಾಗದೆ, ನೈಋತ್ಯ ಕೋಳಿ ಹಿಡಿಯುವವನಂತೆ ಮೆಲ್ಲಗೆ ಆ ತೂಕ ನೋಡಿಕೊಳ್ಳುತ್ತಿರುವ ಪೋರನನ್ನು ಸಮೀಪಿಸಿದ ರೀತಿ ನೀಡುವ ನೆಮ್ಮದಿಯಲ್ಲೇ ಜಯಂತ್ ಟಚ್ ಇದೆ.

ನಾವು ಬೆಚ್ಚಗೆ ಮನೆಯೊಳಗೆ ಹೆಂಡತಿ, ಮಕ್ಕಳು, ಸೈಟು, ಬ್ಯಾಂಕ್ ಸಾಲ, ಕಾರು ಎಂದೆಲ್ಲ ಚಿಂತೆ ಹತ್ತಿಸಿಕೊಂಡು ಆ ಮರೀಚಿಕೆಯಾಗಿರುವ ನೆಮ್ಮದಿಯ ಬೆನ್ನುಹತ್ತಿರುವಾಗಲೂ ನೈಋತ್ಯ ನಮ್ಮ ಹಾಗೆ ಆಗುವುದನ್ನು ಬಯಸುವುದಿಲ್ಲ ಎಂಬುದೇ ನಮ್ಮೊಳಗಿನ ಕ್ರೌರ್ಯ ಆಗಿದ್ದರೂ ಅದನ್ನು ಬಿಡಲಾರದ ಅಂಟು ನಮ್ಮದು. ಅದು ಅವನಂಥ ಹೃದಯವಂತನನ್ನು ಸೋಕದಿರಲಿ ಎಂಬ ಪ್ರಾರ್ಥನೆಯಲ್ಲಿ ಒಳ್ಳೆಯತನವಿದೆಯೆ ಕ್ರೌರ್ಯವಿದೆಯೆ ಎಂಬುದಂತೂ ಈ ಕತೆಯನ್ನು ಓದಿ ಮುಗಿಸಿದ ಮೇಲೂ ನಮ್ಮನ್ನು ಬಾಧಿಸುತ್ತಲೇ ಇರುವ ಪ್ರಶ್ನೆ. ಜಯಂತ್ ಟಚ್ಚುಗಳು ಬಹುಕಾಲ ಕಾಡಬಲ್ಲ ಛಾಯೆಯಾಗಿ ಮನಸ್ಸನ್ನಾವರಿಸುವುದು ಹೀಗೆ.

ಹೇಮಚಂದ್ರ ಸ್ವತಂತ್ರವಾಗಿ, ನೈಋತ್ಯನ ಗೆಳೆಯನಾಗಿ ಮತ್ತು ಅವನ ಈಸ್ಟ್ ಗೋದಾವರಿಯ ಜೊತೆ, ಮಕ್ಕಳ ಜೊತೆ, ಅವನದೇ ಅಪ್ಪನ ಜೊತೆ ಮನಸ್ಸಲ್ಲಿ ಮೂಡುವ ರೀತಿಯ ಬಹುಮುಖೀ ಆಯಾಮಗಳು ಅನನ್ಯವಾಗಿವೆ. ಈ ಪಾತ್ರ ಒಂದು ಅದ್ಭುತ ಸೃಷ್ಟಿ. (‘ಇದ್ದಾಗ ಇದ್ಧಾಂಗ’ ಕತೆಯ ಆನಂದನ ಗೆಳೆಯ ಪಬ್ಬೂ, ‘ದಿಗಂಬರ’ದ ಗೌತಂ-ಒಬ್ರಿ, ‘ಪಾರ್ಟ್‍ನರ್’ ಕತೆಯ ರೂಂ ಮೇಟ್, ‘ಬಾವಿಯೊಳಗೊಂದು ಬಾಗಿಲು’ ಕತೆಯ ರಾಂಲಾಲ್ ಎಲ್ಲ ನೆನಪಾದರೂ ಇವನು ಅವರಾರ ಹಾಗೂ ಅಲ್ಲ ಎಂಬುದೂ ಒಂದು ಹೆಚ್ಚುಗಾರಿಕೆ.) ಒಬ್ಬನೇ ವ್ಯಕ್ತಿ ಒಳಗಿನಿಂದ, ಆಳದಲ್ಲಿ ತನ್ನದೇ ಬಿರುಕುಗಳಲ್ಲಿ ವಿಹ್ವಲನಾಗಿದ್ದರೂ ಹೊರಜಗತ್ತಿನ ಅಗತ್ಯಗಳಿಗೆ ತಕ್ಕಂತೆ ಸಂತುಲಿತ ಚರ್ಯೆ ತೋರಿಸುತ್ತ ನಿಭಾಯಿಸುವ ರೀತಿ ಕೂಡ ಸರಳವಲ್ಲ. ಅವನಲ್ಲಿ ಸುಪ್ತವಾಗಿ ನೈಋತ್ಯನಿರುವುದು ಕಾಣುತ್ತದೆ. ಒಬ್ಬ ಕಿಷ್ನ ಹೇಗೆ ಅವನ ಕನಸು ಮನಸುಗಳಲ್ಲಿ ಊರಿಕೊಂಡಿದ್ದಾನೆಯೋ ಹಾಗೆಯೆ ಒಬ್ಬ ವೃದ್ಧ ಕೂಡ ಊರಿಕೊಂಡಿರುವುದು ಅವನ ‘ನೆಕ್ಕುವ ನಾಲಿಗೆಯಂಥ ಮುಂಗಾಲಿಗಳ’ ಸ್ಕಾರ್ಪಿಯೋದ ಜೊತೆಯಲ್ಲೆ ನಮ್ಮ ಗೋಚರಕ್ಕೆ ಬರುತ್ತದೆ! ಆ ಕ್ರಿಷ್ನ, ನೈಋತ್ಯ ಹಿಡಿಯುವ ಪ್ರತಿಯೊಬ್ಬ ವಿಜಯನಗರದ ವೀರಪುತ್ರರ ಪ್ರತಿನಿಧಿಯಂತಿದ್ದಾನೆ. (ಮತ್ತೆ ಕೃಷ್ಣದೇವರಾಯನಲ್ಲವೆ ವಿಜಯನಗರದ ವೀರಪುತ್ರರ ಪ್ರತಿನಿಧಿ?) ಆ ವೃದ್ಧ ಕತೆಯಲ್ಲಿ ಬರುವ ಮೂವರು ವೃದ್ಧರಲ್ಲಿ ಯಾರೊಬ್ಬರೂ ಆಗುವಂತಿದ್ದಾರೆ. ಅವನ ನೆಕ್ಕುವ ನಾಲಿಗೆಯ ಸ್ಕಾರ್ಪಿಯೋ ಮದುವೆ ಮನೆಯೆದುರು ನಿಂತ ಯಂತ್ರದ ನಮಸ್ಕಾರದಿಂದ ಹಿಡಿದು ಎನ್‍ಕ್ಯಾಶ್ ಆಗದ ಅಪರಿಚಿತರವರೆಗಿನ ಗಡಿರೇಖೆಗಳನ್ನು ಧ್ವನಿಸುವ ಯಾವುದೂ ಇದ್ದೀತು.

ಅಮೆರಿಕದಲ್ಲೂ ಭಾರತದಲ್ಲೂ ಶೋಪೀಸ್ ಆಗುವ ಕ್ರಿಷ್ನ್ ಇಡೀ ಕತೆಯಲ್ಲಿ ಹರಡಿಕೊಳ್ಳುವುದು ಕೂಡ ನೈಋತ್ಯನ ಕಾಯಕದ ಒಳಸುಳಿಯ ಹಲವು ಪಾತಳಿಗಳನ್ನು ಎಷ್ಟು ಚೆನ್ನಾಗಿ ಸೂಚಿಸುವಂತಿದೆ!

ರುದ್ರಪಾದದ ಕಡಲದಂಡೆಯಲ್ಲಿ ಸೌದೆತುಂಡು ಹಿಡಿಯುವ ಹುಡುಗರು, ನಾಲ್ಕೂ ದಿಕ್ಕಿಗೆ ತೆರೆದ ಚಾರ್‌ಮಿನಾರ್ (‘ನಾಕೂ ಕಡೆ ಕಡಲು, ಕುಡಿಯಲು ಹನಿಯಿಲ್ಲ!’), ಗುಂತಕಲ್ ಸ್ಟೇಶನ್, ಚುಡೀಬಜಾರಿನಲ್ಲಿರುವ ಸನ್ಮತಿಯ ಪುಟ್ಟ ಬಳೆಗಳು, ನೈಋತ್ಯನ ನೀಲಿ ಜೀನ್ಸ್ (ಶಬ್ದತೀರ!), ಪುನರ್ವಸುವಿನ ಪ್ರಾರ್ಥನೆಯ ಸಂದರ್ಭದ ‘ಭೋಸುಡೀ’, ಚೀನೀ ಡಿಸೈನ್‍ನ ನೇಲ್ ಕಟರ್, ಹೇಮಚಂದ್ರನ ಡ್ರೈವರನ ಪ್ರೊಫೆಶನಲಿಸಂ, ಬುದ್ಧನ ಪ್ರತಿಮೆಯ ಕೈ.... ಎಲ್ಲವೂ ಬರಿಯ ಶಬ್ದಗಳಾಗದೆ, ಒಂದೊಂದು ಜಗತ್ತನ್ನೇ ಪ್ರತಿನಿಧಿಸುವ ಧ್ವನಿತರಂಗಗಳಾಗಿ ಪರಿವರ್ತನೆಯಾಗುವುದು ಜಯಂತರ ಕಥಾಲೋಕದಲ್ಲಿ ಮಾತ್ರ ಸಾಧ್ಯ. ಹಾಗೆ ಜಯಂತರ ಚಾರ್‌ಮಿನಾರ್ ಕಿಲಿಯಡಿಸ್ಕೋಪ್ ಮಾತ್ರವೇ ನೀಡಬಹುದಾದಂಥ ಒಂದು ರೋಮಾಂಚನದ ಸಾಧ್ಯತೆಗಳನ್ನು ತನ್ನೊಡಲಿನಲ್ಲೇ ಹಿಡಿದಿಟ್ಟುಕೊಂಡಿದೆ.

ಯಾವುದೋ ಅಂತರಾಷ್ಟೀಯ ವಿಮಾನ ನಿಲ್ದಾಣದ ವಿರಾಮದಂಗಳದಲ್ಲಿ ಅಪ್ಪನ ಹಾಗೇ ಕಾಣುವ ವೃದ್ಧರೊಬ್ಬರು ಒಬ್ಬರೇ, ಯಾರದೇ ಸಾಂತ್ವನದ ಕಕ್ಷೆಯಾಚೆ, ಉಕ್ಕಿ ಉಕ್ಕಿ ಅಳುತ್ತಿದ್ದುದನ್ನು ನೋಡಿದವನೇ ವಿದೇಶದಿಂದ ಮರಳುವ ಹೇಮಚಂದ್ರನ ಅಪ್ಪ ಮನೆಬಿಟ್ಟು ಹೋಗುವುದು ಒಂದು ಸ್ತರದ ವಾಸ್ತವ. ರೋಮಿಯೋ ಒಬ್ಬನ ಆತ್ಮಹತ್ಯೆಯ ಯತ್ನದಲ್ಲಿ ಹಾಲಿನ ಕ್ಯಾನು ಕಟ್ಟಿಕೊಂಡು ಸೈಕಲ್ ಮೇಲೆ ಹೋಗುತ್ತಿದ್ದ ಮುದುಕ ಸಾಯುವುದು ಇನ್ನೊಂದು ಸ್ತರದ ವಾಸ್ತವ. ಆದರೆ ಸರಳವಾಗಿ ಅದನ್ನು ಹೇಳುವ ಡ್ರೈವರನ ನಿರಾಳತೆ ತನ್ನ ಅಪ್ಪನ ಬರುವಿಕೆಯ ಹಾದಿ ಕಾಯುತ್ತಿರುವ ಹೇಮಂತನಿಗೆ ಸಾಧ್ಯವಾಗದಿರುವುದು, ರುದ್ರಪಾದದಲ್ಲಿರುವ ನೈಋತ್ಯನ ವೃದ್ಧ ತಂದೆ ತಾಯಿಯ ಚಿತ್ರ ನಮ್ಮಲ್ಲಿ ಮೂಡಿಸುವ ಭಾವ ಮತ್ತು ಕೈ ಎತ್ತಿದ ಬುದ್ಧನ ಪ್ರತಿಮೆ - ಇಲ್ಲಿ ಜಯಂತ್ ಮುಟ್ಟಿದ್ದೆಲ್ಲವೂ ಮನದಲ್ಲಿ ರಿಂಗಣಿಸುತ್ತ ಉಳಿಯುವ ಶಕ್ತಿಪಡೆದಿದೆ.

ನೈಋತ್ಯನನ್ನೂ ಕಾಡುವ ನಿರರ್ಥಕತೆ ನಮ್ಮನ್ನು ಕಂಗಾಲುಗೊಳಿಸದಿರಲು ಸಾಧ್ಯವೆ? ಅದು ಹಲವು ಬಗೆಯಲ್ಲಿ ಕಾಡುತ್ತದೆ. ಮತ್ತೆ ಮನೆಗೆ ಮರಳಿದ ಹುಡುಗರ ಸಂಕಟಗಳು ಒಂದು ಬಗೆ. ಅವರ ಮನೆಯವರ ತಲ್ಲಣಗಳು ಇನ್ನೊಂದು ಬಗೆ. ಹುಡುಗರ ಹುಚ್ಚು ಸಾಹಸ ಮತ್ತು ಅದರೊಂದಿಗೇ ಇರುವ ಆಸೆ ಇನ್ನೊಂದು ಬಗೆ. ಯಾರೊಬ್ಬರೂ ನೈಋತ್ಯನನ್ನು ಒಮ್ಮೆಯಾದರೂ ನೆನಪಿಸಿಕೊಂಡು ಬರಲಿಲ್ಲ ಎನ್ನುವುದರ ಜೊತೆಗೇ ಆ ಭೋಸುಡೀ ಶಬ್ದ ಇನ್ನೂ ಕಿವಿಯೊಳಗೆ ಕೂತು ಭಯ ಹುಟ್ಟಿಸುತ್ತಿದೆ. ಗಾಂಧಿ ಕೊಲೆಯಾದ ದಿನ ದೇಶದ ಅಸಂಖ್ಯಾತ ಮಂದಿ ಹೀಗೆಯೇ ಅಸಹಾಯಕರಾಗಿ ಮರುಗಿರಬೇಕು.

ಇಡೀ ಕತೆಯಲ್ಲಿ ಬೇಡದ ಒಂದು ಸಾಲೂ ಇಲ್ಲ. ಇರಬೇಕಿತ್ತು ಅನಿಸುವ ಇಲ್ಲದೇ ಹೋದ ಒಂದು ಸಾಲೂ ಇಲ್ಲ. ಅಷ್ಟು ಅಚ್ಚುಕಟ್ಟಾಗಿದೆ ಅದು. ಚಾರ್‌ಮಿನಾರ್ ಜಯಂತ್ ಇದುವರೆಗೆ ಬರೆದ ಕತೆಗಳಲ್ಲೆ ಶೇಷ್ಠವಾದ ಕತೆ.

ಸಂಕಲನದ ಮೊದಲ ಕತೆ ‘ಮಧುಬಾಲಾ’ ಪ್ರಜಾವಾಣಿ ದೀಪಾವಳಿ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಕತೆ. ಸಾಹಿತ್ಯಿಕವಾಗಿ ಇದು ಜಯಂತರ ಮಹತ್ವದ ಕತೆಗಳಲ್ಲೊಂದಾದ ‘ಒಪೆರಾ ಹೌಸ್’ ಕತೆಯ ಸಾಲಿಗೇ ಸೇರುವ ಉತ್ತಮ ಕತೆ. ಅಷ್ಟೇ ಯಶಸ್ವಿಯಾದ ಲವಲವಿಕೆಯ ಕತೆ. ಮನುಷ್ಯ ಸಂಬಂಧದ, ಪ್ರೇಮದಂಥ ಭಾವನೆಯ ಸಾಚಾತನದ ಬಗ್ಗೆಯೇ, (ಭ್ರಮೆ ಮತ್ತು ವಾಸ್ತವಗಳ ನಡುವಿನ ತೆರೆ ತೀರ ತೆಳ್ಳಗಾದ ಸ್ಥಿತಿಯ ಎಳೆ ಕತೆಯ ಉದ್ದಕ್ಕೂ ಮಿಡಿಯುತ್ತಿರುವುದನ್ನು ಗಮನಿಸಿ) ಹುಟ್ಟುವ ಅಮೂರ್ತವೂ, ಇನ್ನೂ ಭಾಷೆಯಲ್ಲಿ ಸ್ಪಷ್ಟಗೊಂಡಿರದ್ದೂ ಆದ ನಮ್ಮ ನಿಮ್ಮೆಲ್ಲರ ಅಂತರಾಳದ ಆಳದಲ್ಲಷ್ಟೇ ಕಲಕಿದ ಒಂದು ನೋವನ್ನು ಈ ಕತೆ ಕವನವಾಗಿಸಿದೆ. ಒಂದರ್ಥದಲ್ಲಿ ಇದು ಜಯಂತ್‌ ಅವರಿಗೆ ಸರಳವಾಗಿ ಸಿದ್ದಿಸಿದ್ದು. ಏಕೆಂದರೆ ಇದು ನಾನು ಕಂಡಂತೆ ಜಯಂತರ ವ್ಯಕ್ತಿತ್ವದ ಛಂದಸ್ಸು ಎಂದೇ ಹೇಳಬಹುದಾದ ಸಂಗತಿ. ಯಾರೇ ಆಗಲಿ, ನಮ್ಮ ನಮ್ಮ ವ್ಯಕ್ತಿತ್ವಕ್ಕೆ ಸಲ್ಲದ್ದನ್ನು, ನಾವು ಮೂಲಭೂತವಾಗಿ ಏನು ಆಗಿಲ್ಲವೋ ಅದನ್ನು ಬರೆಯಲು ಸಾಧ್ಯವಿಲ್ಲ. ಸಾಹಿತ್ಯ ಈ ಕಾರಣಕ್ಕಾಗಿಯೇ ಫಾರ್ಮುಲಾಗಳಿಗೆ ಸಿಕ್ಕಿಕೊಳ್ಳುವುದಿಲ್ಲ.

ಸಿ ಎನ್ ರಾಮಚಂದ್ರ ಜಯಂತರ ಕತೆಗಳ ಬಗ್ಗೆ ಬರೆಯುತ್ತ ಒಂದು ಕಡೆ ಹೇಳಿದ್ದರು, "ಇವು ಒಂದು ಅನಿರೀಕ್ಷಿತ ಆಶಯ/ವರ್ತನೆ/ಭಾವನೆ ಇವುಗಳ ಸುತ್ತ ಕಟ್ಟಿದ ಸಿದ್ಧಮಾದರಿಯ ಕತೆಗಳಾಗಿವೆ. ಇವುಗಳು ಆ ಕೇಂದ್ರಾಶಯ/ವರ್ತನೆ/ಭಾವನೆಯತ್ತ ಅಕ್ಕಪಕ್ಕ ನೋಡದೆ ಉಸಿರುಗಟ್ಟಿ ಓಡುತ್ತವೆ."

ಜಯಂತರ ಕತೆಗಳನ್ನು ಒಂದೊಂದಾಗಿ ನೋಡುತ್ತ ಬಂದರೆ ಮೇಲಿನ ಮಾತಿನಲ್ಲಿ ಹುರುಳಿಲ್ಲ ಎಂದೇ ಅನಿಸಿದರೂ ‘ಮಧುಬಾಲಾ’ ಕತೆಯನ್ನು ಪ್ರಜಾವಾಣಿಯ ದೀಪಾವಳಿ ಸಂಚಿಕೆ ಪ್ರಸ್ತುತ ಪಡಿಸಿದ ರೀತಿಯಲ್ಲೇ ಶ್ರೀ ಸಿ.ಎನ್.ರಾಮಚಂದ್ರ ಏನನ್ನು ಹೇಳುತ್ತಿದ್ದಾರೆಂಬುದು ನನ್ನಂಥವರ ಮನಸ್ಸಿಗೆ ಇಳಿಯುವಂತಿತ್ತು. ಅಲ್ಲಿ ಮಧುಬಾಲಾ ಕತೆಯ ಪ್ರಮುಖವಾದ ಒಂದು ಘಟ್ಟ, ಯಾವುದು ಅನಿರೀಕ್ಷಿತವಾಗಿ ಓದಿಗೆ ದಕ್ಕಿದರೆ ಎಂಥಾ ಪರಿಣಾಮವನ್ನು ಓದುಗನಲ್ಲಿ ಉಂಟುಮಾಡಬಹುದಿತ್ತೋ ಅದನ್ನು ಹೈಲೈಟ್ಸ್ ಆಗಿ ಕಾಣಿಸಿಬಿಟ್ಟಿದ್ದರು! ಹೀಗೆ ಇಡೀ ಕತೆಯ ಅಂತರಾತ್ಮವನ್ನು ಕೊನೆಯ ಒಂದು ಪಾರಾಕ್ಕೆ ಜೋಡಿಸುವ ತಪ್ಪು(?) ಮಾಡುವುದು ಬರೇ ಅದು ಕೊನೆಯ ಪಾರಾ ಆಗಿದ್ದರಿಂದಲೆ? ಅಥವಾ ಆ ನಿಷ್ಪಾಪಿ ಅಂತ್ಯದಲ್ಲಿ ನಾವೇ ಕತೆಯ ಉದ್ದೇಶವೆಲ್ಲ ಇದೆ ಎಂದು ಅಂದುಕೊಳ್ಳುವುದರಲ್ಲೆ? ಅದಕ್ಕೆ ಕಾರಣ ಸಣ್ಣಕತೆ ತನ್ನ ಕೊನೆಯಲ್ಲೇ ತನ್ನನ್ನು ಅನಾವರಣ ಮಾಡಿಕೊಳ್ಳುವುದು ಎಂಬ ಸ್ಥಾಪಿತ ಸಿದ್ಧಾಂತದಿಂದಿರಬಹುದೆ? ಈ ಬಗ್ಗೆ ಯೋಚಿಸಬೇಕು. ಜಯಂತರ ಕತೆಗಳ ಆತ್ಮ ಅವರ ಇಂಥ ಪಂಚ್ ಲೈನಿನಲ್ಲೋ, ಕತೆಯ ಅಂತ್ಯದಲ್ಲೋ ಕೆನೆಗಟ್ಟಿಕೊಂಡಿರುವುದಿಲ್ಲ. ಅದು ಇಡೀ ಕತೆಯ ದೇಹಕ್ಕೆ ಕಣ್ಣು ಬಿಡಿಸಿದಂತಿರುತ್ತದೆ. ಆದರೆ ಹೀಗೆ ಹೇಳುವಾಗ ಆ ಕಣ್ಣಿಗೇ ಬೆರಳಿಟ್ಟು ಪರೀಕ್ಷಿಸಲು ಹೊರಡುವುದು ಅಭಿರುಚಿಯ ಪ್ರಶ್ನೆಯಾಗಿ ಬಿಡುತ್ತದೆ.

ಸಂಕಲನದ ಎರಡನೆಯ ಕತೆ ‘ಅಭಂಗ ಅಭಿಸಾರ’ ಒಂದು ನವಿರಾದ ಸ್ನೇಹದ ಕಂಪಿನ ಕರೆಯನ್ನು ಓಗೊಡುವ ಬಗೆಯದ್ದು, ಸಂಬಂಧ ಮತ್ತು ಅದರ ನೆನಪು ಹೇಗೆ ಮನುಷ್ಯನನ್ನು ಜೀವಂತಗೊಳಿಸುತ್ತಿರುತ್ತದೆ ಎನ್ನುವುದನ್ನು ‘ಅದು ಜೀವಕ್ಕೆ ಒಳ್ಳೆಯದು’ ಎಂಬ ರೂಪಕದಲ್ಲಿ ಹಿಡಿದಿಡುವಂಥದ್ದು.

ಈ ಕತೆಯನ್ನು ಓದಲು ಆರಂಭಿಸಿದಾಗ ಜಯಂತ್ ಕಾಯ್ಕಿಣಿಯವರು ಈ ಅಭಂಗ, ಅಭಿಸಾರ ಎಂಬೆಲ್ಲ ಮುದ್ದಾದ ಆದರೆ ಅಷ್ಟೇ ಅಸಂಗತವೆನ್ನಿಸುವ ಹೆಸರುಗಳಿಂದಲೇ ನಮ್ಮನ್ನು ಸಮ್ಮೋಹನಕ್ಕೆ ಸೆಳೆಯದಂತೆ ಎಚ್ಚರಿರುತ್ತ, ಸಿಂಧದುರ್ಗದ ಶಾಲೆಯಲ್ಲಿ ಬರೇ ಎರಡು ವರ್ಷ ಒಟ್ಟಿಗೆ ಕಲಿತದ್ದೇ ಯೌವನವೆಲ್ಲ ಕನವರಿಸುವಂಥ ಒಂದು ಗಾಢ ಭಾವಕ್ಕೆ ಕಾರಣವಾದೀತೆ ಎಂಬ ಅನುಮಾನಕ್ಕೆ ಪುಷ್ಟಿಕೊಡುತ್ತ ಇದ್ದೆ. ಹಳೆಯ ಗೆಳೆಯನನ್ನು ಅರಸಿ ಬಂದವ ಕೊನೆಗೂ ಆತನನ್ನು ಸೇರದಿದ್ದರೂ ಅಲ್ಲಿ ಅದೇ ನವಿರಾದ ಮತ್ತು ಇದೀಗ ಅರಳುತ್ತಿರುವ ಹೂವಿನ ಮೇಲೆ ಕೂತ ಮುಂಜಾವಿನ ಇಬ್ಬನಿಯಷ್ಟೇ ತಾಜಾ ಎನಿಸುವ ಸಂಬಂಧ ಇದೆ ಮಾತ್ರವಲ್ಲ ಅದರ ಅನುಭೂತಿ ಕೂಡ ಈ ಇಬ್ಬರಲ್ಲೂ ಇದೆ. ಮದುವೆ ಮಂಟಪದಲ್ಲಿ ಮದುಮಗನಾಗಿ ನಿಂತ ಅಭಿಸಾರ ಇದ್ದಕ್ಕಿದ್ದಂತೆ ತನ್ನನ್ನೇ ತಾನು ಮರೆತವನಂತೆ ಚೆಲ್ಲಾಪಿಲ್ಲಿಯಾಗಿ ಹಾರಿಹೋದ, ಪಣಜಿಯ ಹಳೇ ಕಾರೇರ್ ಬಸ್ಸುಗಳಲ್ಲಿ ಪಯಣಿಸಿ ಕಲೆ ಹಾಕಿಕೊಂಡಿದ್ದ ಬಣ್ಣಬಣ್ಣದ ತಿಕೇಟುಗಳನ್ನು ಅವರಿವರ ಕಾಲ ನಡುವಿಂದ, ಕಾರ್ಪೆಟ್ಟಿನ ತಾಟಿನಿಂದ ಹೆಕ್ಕತೊಡಗಿದಂತೆ ಯಾರೋ ಒಬ್ಬರು 'ಫ್ಯಾನ್ ನಿಲ್ಲಿಸೀ' ಎನ್ನುತ್ತಾರಲ್ಲ, ಅವರಿಗೆ ಮತ್ತು ಅವರ ಕಾಳಜಿಯನ್ನು ಗ್ರಹಿಸಬಲ್ಲವರಿಗೆ ಮಾತ್ರ ಇದು ದಕ್ಕುತ್ತದೆ.
ಹಾಗಾಗಿಯೇ ಅಭಿಸಾರ ಪಣಜಿಗೆ ಹೋಗುತ್ತಾನೆ. ಅಲ್ಲಿ ಅಭಂಗ ಭೆಟ್ಟಿಯಾಗಬಹುದು ಅಂತೇನೂ ಅಲ್ಲ. ಅಭಂಗನ ನೆರಳು ಬಿದ್ದಿರಬಹುದಾದ ಪಣಜಿಯ ನೆಲದಲ್ಲಿ ನಿಂತರೆ, ನಿಂತು ಖಾಲಿ ಬೀದಿಯನ್ನು, ಮಾಂಡೋವಿಯಲ್ಲಿ ಸುಮ್ಮನೇ ಲಂಗರು ಬಿಟ್ಟು ನಿಂತಲ್ಲೆ ತೇಲುತ್ತಿರುವ ದೋಣಿಗಳನ್ನು, ನಿಂತಲ್ಲೆ ನಿದ್ದೆಹೋಗಿ ಓಡಾಡುತ್ತಿರುವ ಲಾಂಚುಗಳನ್ನು ಕಾಣುತ್ತಿದ್ದರೆ ಅಭಂಗನ ಸಾನ್ನಿಧ್ಯ ದಕ್ಕಿದಂತಾಗಬಹುದು ಎಂಬ ನಿರೀಕ್ಷೆಯಿಂದ. ಇಷ್ಟೇ ಕತೆ. ಆದರೆ ಈ ಕತೆಯ ‘ಕಂಪನ ವಿಸ್ತಾರ’ ಒಂದು ಕವನದಂತೆ, ಹೇಳಿರುವುದನ್ನು ಮೀರಿ ಹೇಳದೇ ಉಳಿದುದರ ಜೊತೆ ಹೆಚ್ಚು ಸಾಂಗತ್ಯವನ್ನು ಹೊಂದಿದ್ದು, ಓದುಗರ ಭಾವಕೋಶವನ್ನು ಮೀಟುತ್ತದೆ, ನಮ್ಮನ್ನು ಇನ್ನಷ್ಟು ಮನುಷ್ಯರನ್ನಾಗಿಸುತ್ತದೆ. ಒಂದು ಒಳ್ಳೆಯ ಕತೆ ಇದಕ್ಕಿಂತ ಹೆಚ್ಚಿನದ್ದನ್ನು ಸಾಧಿಸಬೇಕೆಂದು ಅನಿಸುವುದಿಲ್ಲ. ಅದು ನಮ್ಮೊಳಗಿನ ಮನುಷ್ಯನನ್ನು ಜೀವಂತಗೊಳಿಸಿದರೆ, ಮರಗಟ್ಟುತ್ತಿರುವ ಭಾವಕೋಶಗಳನ್ನು ಅಷ್ಟಿಷ್ಟು ಜೀವಂತಗೊಳಿಸಿದರೂ ಸಾರ್ಥಕ್ಯವನ್ನು ಪಡೆಯುತ್ತದೆ.

ಸಂಕಲನದ ಮೂರನೆಯ ಕತೆ ‘ನೀರು’. ಆದರೆ ಇದಕ್ಕೂ ಇತ್ತೀಚಿನ ಕಾವೇರಿ ನೀರಿನ ಕುರಿತ ವಿವಾದಗಳಿಗೂ, ಗಲಭೆಗಳಿಗೂ ಸಂಬಂಧವಿಲ್ಲ. ಅಷ್ಟೇಕೆ, ನೀರು ಇಲ್ಲಿ ಮಾನವೀಯ ಪ್ರೀತಿಯ ದ್ಯೋತಕವಾಗಿಯೂ, ಹಣದ ಜೊತೆ ಸಂವಾದಿಯಾಗಿ ನಿಲ್ಲುವ ವಸ್ತುವಾಗಿಯೂ ಕತೆಯ ಓಟದೊಂದಿಗೇ ಸುಪ್ತವಾಗಿ ಚಕಮಕಿಯಾಡುವುದೇ ಈ ಕತೆಯ ಹೆಚ್ಚುಗಾರಿಕೆ.

ತಮ್ಮ ಈಚಿನ ಕತೆಗಳಲ್ಲಿ ಜಯಂತರು ಮನುಷ್ಯರ ನಡುವಿನ ಆರ್ದ್ರ ಭಾವನೆಗಳನ್ನು ಅಸಂಗತವೆನಿಸುವ ಪರಿಸರದಲ್ಲಿ ಜಾಗೃತಗೊಳಿಸಿ ಓದುಗನನ್ನು ಅನಿರೀಕ್ಷಿತವಾಗಿ ಅಂಥ ಮೃದುಭಾವಗಳಿಗೆ ಸಜ್ಜಾಗಿಸುವ ತಂತ್ರ ಬಳಸುತ್ತಿದ್ದಾರೆ ಅನಿಸುತ್ತದೆ. ಜಯಂತರ ಎಲ್ಲಾ ಕತೆಗಳ ಪ್ರಮುಖ ಕಾಳಜಿಯಾದ ಮನುಷ್ಯನ ಆಳದ ಹೃದಯವಂತಿಕೆ, ಮನುಷ್ಯ ಸಂಬಂಧಗಳಲ್ಲಿ ನಂಬುಗೆ, ವಿಶ್ವಾಸಗಳನ್ನು ಗಟ್ಟಿಗೊಳಿಸುವ ಸೂಕ್ಷ್ಮ ಭಾವಜಗತ್ತು ಮತ್ತು ಕ್ಷುದ್ರ ದೈನಂದಿನಗಳಲ್ಲೂ ಜಿಲ್ಲೆಂದು ಚಿಮ್ಮುವ ಮಾನವೀಯ ಸೆಲೆಯ ನವಿರು ಇಲ್ಲಿಯೂ ಕೆಲಸ ಮಾಡಿದೆ.

ಇಲ್ಲಿ ಪ್ರಮುಖವಾಗಿ ಎರಡು ಸವಾಲುಗಳನ್ನು ಜಯಂತರು ಎದುರಿಸಬೇಕಾಗುತ್ತದೆ.

ಮೊದಲನೆಯದಾಗಿ ಸೃಜನಶೀಲ ಸ್ತರದಲ್ಲಿ ಇದನ್ನು ನಿಭಾಯಿಸುವುದು ಸರಳವಾದ ಸವಾಲೇನೂ ಅಲ್ಲ. ಯಾಕೆಂದರೆ ಇಲ್ಲಿ ಮತ್ತೆ ಎರಡು ಬಗೆಯ ದ್ವಂದ್ವ ಕಾಡಬಹುದು. ಒಂದು, ಕತೆಗಾರನ ಆಂತರಿಕ ಪ್ರಾಮಾಣಿಕತೆ, ಮಾನವ ಪ್ರೀತಿ ಸ್ವಲ್ಪವೇ ಕುಸಿದರೂ ಕತೆಗಾರ ಇಂಥದನ್ನು ಬರೆಯಲಾರ ಎಂಬುದು. ತಾನು ಬದುಕುತ್ತಿರುವ ಕಟು ವಾಸ್ತವ ನೆರಳಿನಂತೆ ಜೊತೆಗಿರುತ್ತ, ಹೆಜ್ಜೆಹೆಜ್ಜೆಗೂ ತುಳಿಯಲು ಬಯಸುವ ಸಹಚರಿಗಳ ನೆನಪು ಕಾಡದಂತೆ, ಮನಸ್ಸು ಕಹಿಯಾಗದಂತೆ, ಜಗತ್ತನ್ನೇ ಪ್ರೀತಿಸುವ ಗುಣವನ್ನು, ಔದಾರ್ಯವನ್ನು ಮುಕ್ಕಾಗದಂತೆ ಕಾಯ್ದಿಟ್ಟುಕೊಂಡು ನಗರ ಜೀವನದ ನಡುವೆಯೂ ಭಾವನೆಗಳ ಮಾರ್ದವವನ್ನು ಉಳಿಸಿಕೊಳ್ಳಲು ಸಾಧ್ಯವಾದರೆ ಮಾತ್ರ ಕತೆಗಾರ ತನ್ನ ಸೃಜನಶೀಲ ಸೃಷ್ಟಿಯಲ್ಲೂ ಇಂಥದನ್ನು ಪ್ರಾಮಾಣಿಕವಾಗಿ ಕಾಣಿಸಬಲ್ಲ, ಇಲ್ಲವಾದಲ್ಲಿ ಇಲ್ಲ. ಕಥನದ ಅಥೆಂಟಿಸಿಟಿ ಎರಡನೆಯದು. ಕತೆಗಾರ ತನ್ನ ಅನುಭವ ದೃವ್ಯಗಳಿಂದಲೇ ತನ್ನ ಕಥಾನಕದ ಜಗತ್ತನ್ನು ಕಟ್ಟಿಕೊಳ್ಳಬೇಕಾಗುವುದರಿಂದ ಇಲ್ಲಿ ಇಷ್ಟೇ ಕೃತಕತೆ ಇಣುಕಿದರೂ ಕತೆಯ ಹಂದರವೇ ಟೊಳ್ಳಾಗಿ ಬಿಡುತ್ತದೆ, ಉದ್ದೇಶ ಕೇವಲ ನಾಟಕೀಯವಾಗುತ್ತದೆ. ಆದರೆ ಇದೇ ಕಾರಣಕ್ಕೆ ವಾಸ್ತವವನ್ನೇ ಯಥಾವತ್ ಕಥಾನಕದಲ್ಲಿ ತಂದುಬಿಡುವುದೇ ಒಬ್ಬ ಕತೆಗಾರ ಅಥೆಂಟಿಸಿಟಿಯನ್ನು ಸಾಧಿಸಬಹುದಾದ ಮಾರ್ಗವಲ್ಲ. ಕತೆಗಾರ ವಾಸ್ತವವನ್ನು ಅದರ ನಿಷ್ಠುರ ಮತ್ತು ನಿಯತಿಬದ್ಧ ಮಟ್ಟದಿಂದ ಮೇಲೆತ್ತಿ ಅದನ್ನು ಕತೆಯಾಗಿಸಿ ರಂಜಿಸುತ್ತಲೇ ಸತ್ಯದತ್ತ ಓದುಗನನ್ನು ಒಯ್ಯಲಾರದೇ ಹೋದಲ್ಲಿ ವಾಸ್ತವದ ಚಿತ್ರ ಒಂದು ಪತ್ರಿಕಾವರದಿಗಿಂತ ಹೆಚ್ಚಿನ ಮೌಲ್ಯ ಪಡೆದುಕೊಳ್ಳುವುದಿಲ್ಲ. ಬದುಕುತ್ತಿರುವ ವಾಸ್ತವ ಕಥಾನಕದ ‘ಕಲ್ಪಿತ ವಾಸ್ತವ’ಕ್ಕೆ ತದ್ವಿರುದ್ದ ಬಗೆಯದಾಗಿರುತ್ತ, ತನ್ನ ಕತೆಯ ಉದ್ದೇಶ ತನ್ನ ಸುತ್ತಲಿನ ಜಗತ್ತಿನಿಂದ ಮರೆಯಾಗುತ್ತಿರುವ ಮೌಲ್ಯಗಳನ್ನು ಚಿತ್ರಿಸುವುದಾಗಿರುವಾಗ ಜಯಂತ್ ಈ ಸವಾಲುಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲಕರ.

ಎರಡನೆಯದಾಗಿ ಇವತ್ತಿನ ಮನುಷ್ಯ ಸಂದರ್ಭದಲ್ಲಿ ನಾವು ಕಾಣುತ್ತಿರುವ, ದಿನನಿತ್ಯ ಬದುಕುತ್ತಿರುವ ವಾಸ್ತವ ತದ್ವಿರುದ್ಧವಾಗಿರುವಾಗ ಎರಡು ಬಗೆಯ ಕತೆಗಳನ್ನು ನಾವು ನಿರೀಕ್ಷಿಸಬಹುದಾಗಿದೆ. ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಮತ್ತು ದಲಿತ ಹಾಗೂ ನವ್ಯೋತ್ತರ ಕಥನ ಪರಂಪರೆಗಳನ್ನು ಕೇವಲ ವಿಷಯ ಸ್ಪಷ್ಟತೆಗಾಗಿಯಷ್ಟೇ ಅವುಗಳ ವಿಭಿನ್ನಸ್ತರಗಳಲ್ಲಿ ಗಮನಿಸಿ ಇಂಥ ಮಾತು ಹೇಳುತ್ತಿರುವುದು. ನಮ್ಮ ಸಾಹಿತ್ಯ ಪರಂಪರೆ ವಾಸ್ತವಕ್ಕೆ ಅಥವಾ ಅದು ಯಾವುದರತ್ತ ಸಾಗುತ್ತಿದೆ ಎಂದು ಕಲ್ಪಿಸಲಾಗುತ್ತದೋ ಅದಕ್ಕೆ ಪ್ರತಿಸ್ಪಂದಿಸಿದಾಗಲೆಲ್ಲ ಪ್ರಸ್ತುತ ವಾಸ್ತವವನ್ನು ವಿರೋಧಿಸುವಂಥ ಕೃತಿಗಳನ್ನು ಮತ್ತು ಅಂಥ ಸುಪ್ತ ವಿರೋಧ ಬಯಸುವ ಒಂದು ಪರಿಸ್ಥಿತಿಯನ್ನು ಚಿತ್ರಿಸುವ ಕೃತಿಗಳನ್ನು ಕೊಡುತ್ತ ಬಂದಿದೆ ಎನ್ನಬಹುದು. ಒಂದು ಪ್ರತಿರೋಧದ, ಕೊಂಚ ಹದ ತಪ್ಪಿದರೆ ಸಿನಿಕತನದ್ದಾಗಿಬಿಡುವ, ಗಟ್ಟಿ ಸ್ವರದ ಕಥಾನಕಗಳು. ಇನ್ನೊಂದು ಇಲ್ಲದ ಜಗತ್ತನ್ನು, ಕನಸಿನ ಜಗತ್ತನ್ನು ಉದ್ದೀಪಿಸುವ ಮಂದ್ರ ಸ್ಥಾಯಿಯ ಕಥಾನಕಗಳು. ಮೊದಲನೆಯದು ಕ್ಷಿಪ್ರ ಪರಿಣಾಮಕಾರಿ ಎನಿಸಿದರೂ ಬಹುಪಾಲು ಅಂಥ ಸಾಹಿತ್ಯ ಟುಸ್ಸೆನಿಸಿದ್ದು ಈಗ ಇತಿಹಾಸ, ಅಲ್ಲವೇ. ಹಾಗಾಗಿ ಎರಡನೆಯ ಮಾರ್ಗ ಹೆಚ್ಚು ಪರಿವರ್ತನಶೀಲ ಎನ್ನಬಹುದೇನೋ. ಆದರೆ ಇದೂ ಅತಿಗೆ ಹೋದರೆ ಅದೇ ಒಂದು ಮಿತಿಯಾಗಿ ಬಿಡಬಹುದಲ್ಲವೇ ಎನಿಸುತ್ತಿರುವಾಗ ಜಯಂತ್ ಚಾರ್‌ಮಿನಾರ್‌ನಂಥ ಕತೆ ಬರೆದರು. ಇದನ್ನು ಗಮನಿಸಬೇಕು. ಸಮಕಾಲೀನ ಕತೆಗಳನ್ನು ಗಮನಿಸುವಾಗ ಮತ್ತು ಸಮಕಾಲೀನ ಕತೆಗಳು ಎದುರಿಸುವ ಸವಾಲುಗಳನ್ನು ಗಮನಿಸುವಾಗಲೂ ಬಹುಷಃ ಈ ಅಂಶಗಳೆಲ್ಲ ಮುಖ್ಯವಾಗುತ್ತವೆ ಎನಿಸುತ್ತದೆ.

ಮುಂಬಯಿಯ ಮಳೆ, ನೆರೆ ಮತ್ತು ಅದು ಸೃಷ್ಟಿಸಿದ ಅತಂತ್ರ ಸ್ಥಿತಿ ಎಲ್ಲರಿಗೂ ಗೊತ್ತು. ಆದರೆ ಅದು ಕತೆಯಲ್ಲಿ ಜಾಗೃತಗೊಳಿಸುವ ಮಾನವೀಯ ಮೌಲ್ಯಗಳು ವ್ಯಾಪಾರೀಕರಣದ ಹಿನ್ನೆಲೆಯಲ್ಲೇ ಬಂದಿರುವುದು ಗಮನಿಸಬೇಕಾದ ಅಂಶ.

ನೀರನ್ನು ಮಾರಿ ಹಣ ಮಾಡುವುದರ ಬಗ್ಗೆ ತನ್ನ ಆಳದಲ್ಲೇ ದ್ವಂದ್ವಗಳಿದ್ದ ಸಂತೋಷನ್ ಸದ್ಯ ಇನ್ನು ಆರು ತಿಂಗಳಲ್ಲಿ ಮದುವೆಯಾಗಲಿರುವ ತನ್ನ ಮೊಮ್ಮಗಳ ಮದುವೆಯನ್ನು ನೋಡುವವರೆಗಾದರೂ ತಾನು ಬದುಕಿರಬೇಕೆಂದು ಹಪಹಪಿಸುವವ. ಯಾವಾಗಲೂ ಡಾಕ್ಟರ್ ಭೇಟಿಗೆ ಮುಂಬಯಿಗೆ ಬರುವಾಗ ಜೊತೆ ನೀಡುತ್ತಿದ್ದ ಮಗಳಾಗಲೀ, ಅಳಿಯನಾಗಲೀ ಈ ಬಾರಿ ಅವನ ಜೊತೆ ಇಲ್ಲ. ಸಹಪ್ರಯಾಣಿಕನಷ್ಟೇ ಆದ ಚಂದ್ರಹಾಸನೂ, ಟ್ಯಾಕ್ಸಿ ಡ್ರೈವರ್ ಕುಂಜವಿಹಾರಿಯೂ, ಕಾಂಚೂ ಬೆಹನೂ ಮತ್ತು ಹಣ್ಣು ಹಂಚುವ ಸ್ವಯಂ ಸೇವಕರೂ ಈಗ ಅವನ ಬಂಧುಗಳು. ಕಾಂಚೂ ಬೆಹನಳ ಮಕ್ಕಳು ಕೊಡುವ ನೀರನ್ನು ಕುಡಿಯಲು ಚಂದ್ರಹಾಸನಿಗೆ ಅಳುಕಾಗುತ್ತದೆ. ನೀರು ಮಾರುವ ಸಂತೋಷನ್ ಅದರಲ್ಲಿ ಅಮೃತದ ಸವಿ ಅನುಭವಿಸುತ್ತಾನೆ.

ಬಿಸ್ಲೇರಿ ಮಾರುವ ಬನಿಯಾ ಹಣಕ್ಕೆ ಆಸೆಪಟ್ಟು ಎಲ್ಲಾ ಬಾಟಲುಗಳನ್ನೂ ಮಾರಲು ಒಪ್ಪುವುದಿಲ್ಲ. ನೀನೊಬ್ನೇ ಏನಪಾ ಸಿಕ್ಕಿ ಹಾಕಿಕೊಂಡೋನು? ಇದು ದುಡ್ಡುಗಳಿಸೋ ಸಮಯಾನೇನಪ್ಪಾ ಎನ್ನುತ್ತಾನೆ ಬನಿಯಾ.

ಅಮಿತಾಭನ ಆರೋಗ್ಯಕ್ಕಾಗಿ ಸಾವಿರಾರು ಕಿಲೋಮೀಟರ್ ಸೈಕಲ್ ತುಳಿದು ಗಂಗಾ ಯಮುನಾ ಸಂಗಮದ ನೀರನ್ನು ಬಿಂದಿಗೆಯಲ್ಲಿ ತರುವ ಅನಾಮಿಕ ಅಭಿಮಾನಿ ಇದ್ದಾನಿಲ್ಲಿ. ಪೆಪ್ಸಿಯಲ್ಲಿ ಪೆಸ್ಟಿಸೈಡ್ ಇರುವುದರಿಂದ ಅದನ್ನೇ ಕುಡಿದು ಕುಡಿದು ಸಾಯಬಹುದೇ, ಹಾಗೆ ಸತ್ತು ಒಮ್ಮೆಗೇ ಅಮ್ಮನ ಕಷ್ಟ ಕೊನೆಗಾಣಿಸಬಹುದೇ ಎಂದು ತರ್ಕಿಸುವ ಎಂಟು ವರ್ಷದ ಪೋರನೂ ಇದ್ದಾನೆ ಇಲ್ಲಿ. ಇಲ್ಲಿ ಬರುವ ಗಂಗೆ, ಬಿಸ್ಲೇರಿ, ಪೆಪ್ಸಿ, ಬಾಲಿವುಡ್, ಎಲ್ಲವೂ ಒಂದಲ್ಲ ಒಂದು ಬಗೆಯಲ್ಲಿ ವ್ಯಾಪಾರೀಕರಣಕ್ಕೆ ಪಕ್ಕಾದುವೇ. ಆದರೆ ಅಲ್ಲೇ ಮಾನವ ಪ್ರೀತಿ, ಸಹಜ ಅಭಿಮಾನ, ಅನ್ಯರ ನೋವಿಗೆ ಸ್ಪಂದಿಸುವ ಕಳಕಳಿ ಅರಳಿರುವುದನ್ನೂ ಕಾಣುವ ಕಣ್ಣು ಮುಖ್ಯವಾಗುತ್ತದೆ.

ಜಯಂತರು ಅನುದ್ದಿಶ್ಯ ಈ ಚಿತ್ರಗಳನ್ನು ಸಹಜವೆಂಬಂತೆ ಒಂದೇ ಕತೆಯಲ್ಲಿ ತರಬಲ್ಲರು. ಇದು ಜಯಂತರ ಹೆಚ್ಚುಗಾರಿಕೆ. ಹಾಗಾಗಿ ಅವರ ಕತೆಗಳದ್ದೂ ಆಗಿರುವಂಥದ್ದು. ಎಲ್ಲದ್ದಕ್ಕಿಂತ ಮುಖ್ಯವಾದದ್ದೇನೆಂದರೆ, ಇದು ಜಯಂತರ ವ್ಯಕ್ತಿತ್ವದಲ್ಲೇ ಇರುವ ಅಂಶವಾಗಿರುವುದು. ಇದು ಜಯಂತರ ವ್ಯಕ್ತಿತ್ವದ ಛಂದಸ್ಸಾಗಿರುವಂಥದ್ದು. ಇದನ್ನು ಕಾಪಿ ಮಾಡಲು ಬರುವುದಿಲ್ಲ.

ನಾಲ್ಕನೆಯ ಕತೆ ‘ಅಲ್ಪವಿರಾಮ’. ತಂದೆಯ ಅಕಾಲಿಕ ಸಾವಿನಿಂದ ಇದ್ದಕ್ಕಿದ್ದಂತೆ ಹೆಗಲೇರಿತು ಎನಿಸುವ ಮನೆಯ ನಿರ್ವಹಣೆಯ ಜವಾಬ್ದಾರಿ ಪ್ರಜ್ಞೆ ಹುಟ್ಟಿಸುವ ತಲ್ಲಣಗಳು ಕೇವಲ ಒಬ್ಬ ವ್ಯಕ್ತಿಯದ್ದಾಗಿ ಉಳಿಯದೆ ಈ ಬದಲಾವಣೆ ಇಡೀ ಸಂಸಾರದ ಬೇರೆ ಬೇರೆ ಸದಸ್ಯರನ್ನು ತಟ್ಟುವ ಬಗೆ ಇಲ್ಲಿ ಚಿತ್ರಿತವಾಗಿದೆ. ಅದು ಹೇಗೆಲ್ಲ ಅಭಿವ್ಯಕ್ತಿ ಪಡೆಯುತ್ತದೆ, ಬದಲಾದ ಆರ್ಥಿಕ ಕೇಂದ್ರ ಮತ್ತು ಜವಾಬ್ದಾರಿಯ ಗುರುತ್ವ ಅಣ್ಣ-ತಂಗಿ ಮತ್ತು ತಾಯಿ ನಡುವಿನ ಸಂಬಂಧಗಳ ಮೇಲೆ ಏನೇನು ಪರಿಣಾಮ ಬೀರುತ್ತವೆ ಎನ್ನುವುದು ಕತೆಯ ಒಂದು ಹಂತ. ಸಂಬಂಧಗಳು ನಿಂತ ನೆಲೆಯ ವ್ಯಾಖ್ಯಾನವನ್ನೇ ಬದಲಿಸುವ ಮಟ್ಟದಲ್ಲಿ ಇದು ಪ್ರಭಾವಶಾಲಿಯಾಗುವುದು ಯಾಕೆ ಮತ್ತು ಹೇಗೆ ಎಂಬ ಎರಡೂ ಪ್ರಶ್ನೆಗಳು ಈ ಕತೆಯ ಚೌಕಟ್ಟಿನ ಹೊರಗಿನ ಪ್ರಶ್ನೆಗಳಾದರೂ ಕತೆಯ ಓದಿನಿಂದಲೇ ಹುಟ್ಟುವ ಪ್ರಶ್ನೆಗಳು. ಆದರೆ ಜಯಂತ್ ಎಂದಿನಂತೆ ವಸ್ತು ಸ್ಥಿತಿಯ ನವಿರಾದ ಎಳೆಗಳನ್ನು ಚಿತ್ರಿಸುವತ್ತ ಗಮನನೀಡುತ್ತಾರೆಯೇ ವಿನಃ ಅದರ ಮನಶ್ಶಾಸ್ತ್ರೀಯ ನೆಲೆಯ ವಿಶ್ಲೇಷಣೆಯನ್ನಾಗಲೀ, ಸ್ತ್ರೀಸ್ವಾತಂತ್ರ್ಯದಂಥ ಇಶ್ಯೂಗಳ ಜಿಜ್ಞಾಸೆಯನ್ನಾಗಲೀ, ಸಾಧನೆಯ ಹುಮ್ಮಸ್ಸು ಮತ್ತು ಸೆಂಟಿಮೆಂಟ್ಯಾಲಿಟಿಯ ನಡುವಿನ ಬಿಕ್ಕಟ್ಟುಗಳನ್ನಾಗಲೀ ಮುಂಚೂಣಿಗೆ ಒಡ್ಡುವುದಿಲ್ಲ. ತಾಯಿ-ಅಣ್ಣ ಮತ್ತು ತಂಗಿ ಮೂವರೂ ತಂದೆಯ ಸಾವಿನ ನಂತರದ ಅವಧಿಯಲ್ಲಿ ಅನುಭವಿಸುತ್ತ ಇರುವಂತೆ ಕಾಣಿಸುವ ಒಂದು ಬಗೆಯ ಉಸಿರುಗಟ್ಟಿಸುವ, ಇಲ್ಲೇನೋ ಸರಿಯಿಲ್ಲ ಎನ್ನಿಸುವ, ಯಾವುದೋ ಚಡಪಡಿಕೆಯ ಸ್ಥಿತಿಯನ್ನು ಜಯಂತ್ ಅನನ್ಯವಾಗಿಯೇ ದೈನಿಕ ವಿವರಗಳಲ್ಲಿ ಹಿಡಿದಿಟ್ಟಿದ್ದಾರೆ, ಅನುಮಾನವಿಲ್ಲ. ಆದರೆ ಈ ಕತೆಯ ರಿಕ್ಕಿಯ ಮನಸ್ಸಿನಲ್ಲೇನಿದೆ, ವೈಖರಿಯಾಗಿ ಟೀವಿಯಲ್ಲಿ ನ್ಯೂಸ್ ರೀಡರ್ ವೈಖರಿಯಲ್ಲಿ ಕಾಣಿಸಿಕೊಳ್ಳುವ ಬೇಬಿಯ ಮನಸ್ಸಿನಲ್ಲಾಗಲೀ ಏನಿದೆ ಎಂಬ ಹೊಳಹು ಸ್ಪಷ್ಟವಾಗಿ ಓದುಗನಿಗೆ ದಕ್ಕುವುದಿಲ್ಲ. ದಕ್ಕಲೇಬೇಕೆಂಬ ಹಠದಿಂದಲ್ಲ; ಹೀಗೆ ದಕ್ಕದಂತಿರಿಸುವ ತಂತ್ರದ ಕೊಡುಗೆ ಒಟ್ಟು ಕತೆಯ ಬಂಧ ಮತ್ತು ಉದ್ದೇಶಗಳ ಹಿನ್ನೆಲೆಯಲ್ಲಿ ಏನು ಎಂಬ ಕಾರಣಕ್ಕೆ ಇದು ಮುಖ್ಯ. ಎಲ್ಲ ಸಂಸಾರಗಳಲ್ಲೂ ಒಂದಲ್ಲಾ ಒಂದು ಹಂತದಲ್ಲಿ ಆರ್ಥಿಕ ಕೇಂದ್ರಗಳು ಪಲ್ಲಟಗೊಳ್ಳುವುದು, ವಿಕೇಂದ್ರೀಕೃತವಾಗುವುದು, ಗುರುತ್ವ ಕಳೆದುಕೊಳ್ಳುವುದು ಅಥವಾ ಹೆಚ್ಚಿನ ಗುರುತ್ವ ಪಡೆದುಕೊಳ್ಳುವುದು ಇತ್ಯಾದಿ ಘಟಿಸುತ್ತಲೇ ಇರುತ್ತದೆ. ಹಾಗೆಯೇ ಜವಾಬ್ದಾರಿ ಕೇಂದ್ರಗಳು ಸಂಸಾರದ ಘನತೆ-ಗೌರವ-ಮರ್ಯಾದೆ-ಸಾಮಾಜಿಕ ಸ್ಥಾನಮಾನ ಇತ್ಯಾದಿ ಹೆಸರುಗಳಲ್ಲಿ ಇತರ ಸದಸ್ಯರ ನಡೆನುಡಿ, ರೀತಿನೀತಿಗಳನ್ನು ನಿಯಂತ್ರಿಸುವುದೂ ಎಲ್ಲಾ ಸಂಸಾರಗಳಲ್ಲೂ ಇರುವಂಥದ್ದೇ. ಅದು ಅರ್ಥವಾಗುವಂಥದ್ದು ಮತ್ತು ಸೂಕ್ಷ್ಮವಾದದ್ದು ಕೂಡ ಹೌದು. ಆದಾಗ್ಯೂ ಇಂಥ ಪ್ರಕ್ರಿಯೆಗಳಲ್ಲಿ ವಿಶೇಷವಾದ subtle ಚಲನೆಗಳೇನೂ ಇರುವುದಿಲ್ಲ. ಎಲ್ಲರಿಗೂ ಎಲ್ಲರೂ ಖುಲ್ಲಾಂಖುಲ್ಲ ಗೊತ್ತಿರುವ ವ್ಯಕ್ತಿಗಳೇ ಆಗಿರುತ್ತ ಅವರ ರೀತಿನೀತಿಗಳಲ್ಲಾಗುವ ಅತಿಸೂಕ್ಷ್ಮ ಬದಲಾವಣೆಗಳೂ ಕೂಡ ತಕ್ಷಣವೇ ಗುರುತಿಸಲ್ಪಡುತ್ತವೆ ಮಾತ್ರವಲ್ಲ ಅವುಗಳ ಅರ್ಥವ್ಯಾಪ್ತಿಯೂ ಕಣ್ಣಿಗೆ ಹೊಡೆದು ಕಾಣುವಂತಿರುತ್ತವೆ. ಹಾಗಾಗಿ ಇಲ್ಲಿನ ತಾಯಿ ಮತ್ತು ಮಗನ ಪಾತ್ರಗಳ ಒಳ ಉಬ್ಬಸದಲ್ಲಿ ಕೊಂಚ ಅಸಹಜವಾದದ್ದು ಇರುವಂತೆ ಕಾಣಿಸುತ್ತದೆ. ವಿಶೇಷತಃ ತಾಯಿ ಮತ್ತು ಅಣ್ಣ ಇಬ್ಬರೂ ಬೇಬಿಯನ್ನು ಇದೆಲ್ಲದರಿಂದ ಹೊರಗಿಡುವ ಬಗೆಯಲ್ಲೇ ಇದು ಎದ್ದು ಕಾಣುವಂತಿರುವುದು ಇಂಥ ಅನ್ನಿಸಿಕೆಗೆ ಕಾರಣವಾಗುತ್ತದೆ. ಹಾಗೆಯೇ ಇಲ್ಲಿ ಇದ್ದುದರಲ್ಲಿ ತಂಗಿ ಬೇಬಿಯೇ ಸರಳ ಮತ್ತು ನೇರವಾಗಿ ಕಾಣಿಸುವುದೇಕೆಂದರೆ ಅವಳಲ್ಲಿ ಈ ಒಳ ಉಬ್ಬಸವೇ ಇಲ್ಲ ಎನ್ನುವುದರಿಂದಲೇ. ಅವಳೊಮ್ಮೆ ನೇರವಾಗಿ ನೀನೇಕೆ ಮೊದಲಿನ ಹಾಗಿರಬಾರದು ಎಂದು ಅಣ್ಣನನ್ನು ಪ್ರಶ್ನಿಸುತ್ತಾಳೆ ಕೂಡ. ಎಲ್ಲಿಯೋ ಒಂದು ಕಡೆ ಓದುಗನಲ್ಲೂ ಇದೇ ಪ್ರಶ್ನೆ ಮೂಡಿದರೆ ಆಶ್ಚರ್ಯವಿಲ್ಲವಲ್ಲ. ಆದರೆ ಕತೆಯ ಚೌಕಟ್ಟಿನೊಳಗೆ ಈ ಪ್ರಶ್ನೆ ರಿಕಿಯನ್ನಾಗಲೀ ಅವನ ತಾಯಿಯನ್ನಾಗಲೀ ಕಾಡುವುದೇ ಇಲ್ಲ. ಇಷ್ಟೇ ಮುಖ್ಯವಾದ ಇನ್ನೊಂದು ವಿಚಾರವೆಂದರೆ ಇಡೀ ಕತೆಯಲ್ಲಿ ಎಲ್ಲಿಯೂ ಈ ಒಳ ಉಬ್ಬಸದೊಂದಿಗೆ ಸತ್ತ ವ್ಯಕ್ತಿಯ ಕುರಿತ ಹಂಬಲಿಕೆ, ಸಾವು ತಂದ ಅಸಹಾಯಕತೆಗಳ ನೆರಳಿಲ್ಲದಿರುವುದು. ಬೇಬಿಯಲ್ಲಿ ಮಾತ್ರ ಅಪ್ಪ ಇದ್ದಿದ್ದರೆ ಹೀಗೆ ಒಬ್ಬಳನ್ನೇ ಬಸ್ಸಿನಲ್ಲಿ ಕೂರಿಸಿ ಕಳಿಸುತ್ತಿರಲಿಲ್ಲ ಎನ್ನುವಂಥ ನೆನಪುಗಳ ನೆರಳಿದೆ. ಹೀಗೆ ಒಂದು ಸಹಜವಾದ ಪಾತ್ರದೊಂದಿಗೆ ಇನ್ನೆರಡು ಅಸಹಜವಾದ ಪಾತ್ರಗಳನ್ನಿಟ್ಟು ಕತೆಯನ್ನು ರೂಪಿಸುವಾಗಲೂ ಅಸಹಜವಾದ ಪಾತ್ರಗಳ ಅಸಹಜತೆಯು convincing ಆಗದೇ ಹೋದರೆ ಅಥವ ಅದು convincing ಎನಿಸಿಕೊಳ್ಳಲು ಏದುಸಿರು ಬಿಡತೊಡಗಿದರೆ ಅದರಲ್ಲಿನ ನಾಟಕೀಯತೆ ಹೆಚ್ಚಾಗಿಬಿಡುತ್ತದೆ. ಈ ಪ್ರಕ್ರಿಯೆಯಲ್ಲಿ ಈ ಕತೆ ಸಂಕಲನದ ಇತರ ಕತೆಗಳ ಮಟ್ಟಕ್ಕೆ ತೃಪ್ತಿಯನ್ನೀಯುವುದಿಲ್ಲ.

ಐದನೆಯ ಕತೆ ‘ಕೋಮಲ ಗಾಂಧಾರ’. ಇದು ಹೆಚ್ಚು ಗಂಭೀರವಾದ ವಸ್ತುವನ್ನು ಆಯ್ದುಕೊಂಡಿದೆ. ಹೆಸರು ಇಲ್ಲಿ ಕೇಂದ್ರದಲ್ಲಿರುವ ಭೂಮಿಕೆ. ಸಿನಿಮಾದಲ್ಲಿ ಪಾತ್ರ ಗಿಟ್ಟಿಸಲು ಬಂದ ಕೇತಕಿ ಅಲ್ಲಿನ ಆಡಿಶನ್‌ಗಾಗಿ ಕೋಮಲಾ ಪಾತ್ರಧಾರಿಯಾಗುವುದು, ಜೀವನದಲ್ಲಿ ಏನೋ ‘ಹೆಸರು’ ಮಾಡಬೇಕೆಂದುಕೊಂಡು (ಇದೂ ಕಡವಾಗಿ ತಂದ ವಿಷನ್!) ಚಲನಚಿತ್ರ ಸೇರಬಂದ ಇನ್ನೊಬ್ಬ ಅಭ್ಯರ್ಥಿ, ಅವನ ಮಾತು ಮಾತಿಗೆ ಎಕ್ಚುವಲೀ ಎಂದು ಸೇರಿಸುವ ಅಭ್ಯಾಸ, ಹೆಸರು ಕೇಳಿದರೆ ಅವನೆಲ್ಲಿ ‘ಎಕ್ಚುವಲೀ ನನ್ನ ಹೆಸರು...’ ಎಂದು ಸುರುಮಾಡುತ್ತಾನೋ ಎಂದು ಹೆದರುವ ಕೇತಕಿ, ‘ಹೆಸರು’ ಮಾಡದೇ ಸೇವೆ ಸಲ್ಲಿಸಬೇಕೆಂದು ದುಡಿದ ಮಾಸ್ತರ್ ಒಬ್ಬರ ಹೆಸರನ್ನು ರಸ್ತೆಗೆ ಇರಿಸಿಯೂ ಅದರ ಮೇಲೆ ಅಸಂಖ್ಯ ಪೋಸ್ಟರುಗಳನ್ನು ಹಚ್ಚಿ ‘ಹೆಸರು’ ಮರೆಮಾಡುವ ಮಂದಿ, ಹೆಸರೇ ಇಲ್ಲದ ಕೆಲವು ಪಾತ್ರಗಳ ಜೊತೆಗೇ ತನ್ನನ್ನು ಕೋಮಲ ಎಂದೇ ಪರಿಚಯಿಸಿಕೊಳ್ಳುವ ಕೇತಕಿ, ಕೋಮಲಾನ್ನ ಕೋಕಿಲಾ ಎಂದು ಕರೆಯುವ, ತನ್ನೊಳಗೆ ತನ್ನನ್ನು ಬಿಟ್ಟರೆ ಬೇರೆ ಯಾರಿಗೂ ಜಾಗವಿಲ್ಲದಂತಿರುವ ಗಾಂಧಾರ ಪಾತ್ರಧಾರಿ...ಎಲ್ಲ ಇದ್ದೂ ಕತೆಯಲ್ಲಿ ಕೇಂದ್ರವೆನಿಸುವ ಪಾತ್ರ ‘ಅಶೋಕವನದಲ್ಲೇ ಮುದುಕಿಯಾಗಿಬಿಟ್ಟಂತೆ’ ಕೂತ ಸೀತೆಯಂತೆ ಕಾಣುವ ತೇಜಸ್ವೀ ಮಹಿಳೆ ಮತ್ತು ಅವಳು ಚುಟುಕಾಗಿ ಹೇಳುವ ಕತೆಯೇ.

ಇದರಾಚೆ ನಗರವೇ ರಸ್ತೆ ಅಗಲೀಕರಣ ಮತ್ತು ಕಟ್ಟಡಗಳ ನಿರಂತರ ಕಾಮಗಾರಿಯ ನಡುವೆ ಅಪರಿಚಿತವಾಗಿ ಬೆಳೆಯುತ್ತಿರುವುದನ್ನು ಸೂಕ್ಷ್ಮವಾಗಿ ಮತ್ತು ಅಷ್ಟೇ ತೀವ್ರವಾಗಿ ತಟ್ಟುವ ವಿವರಗಳಲ್ಲಿ ತರಲಾಗಿದೆ. ಇದೇ ಮೊದಲ ಬಾರಿಗೆಂಬಂತೆ ಜಯಂತ್ ಈ ಕತೆಯಲ್ಲಿ ಸ್ವಲ್ಪ ಹೆಚ್ಚೇ ಒಪೀನಿಯನ್ ಕೊಡುವ ಕೆಲಸ ಮಾಡಿದ್ದಾರೆ. ಕೇತಕಿಯ ಮೂಲಕ ಇದನ್ನು ಮಾಡುತ್ತಿರುವಾಗಲೂ ನಮಗೆ ಜಯಂತ್ ಧ್ವನಿ ಕೇಳಿದಂತಾಗುವುದು ನನ್ನೊಬ್ಬನ ಸಮಸ್ಯೆಯಲ್ಲ.

ಆದರೂ ಈ ಕತೆ ಮನಸ್ಸನ್ನು ತಟ್ಟುವುದು ಕೊನೆಯ ಮೂರು ಪುಟಗಳ ಅಪ್ಪಟವೂ ತಾಜಾವೂ ಆಗಿ ಮೂಡಿಬಂದ ವಾಸ್ತವಿಕ ವಿದ್ಯಮಾನವೊಂದರ ವಿವರಗಳಲ್ಲೇ ಎನ್ನುವುದು ಕತೆಯ ಶಕ್ತಿ ಮತ್ತು ಮಿತಿ ಎರಡನ್ನು ಕೂಡಾ ಕಾಣಿಸುವ ಸಂಗತಿ.

ಆರನೆಯ ಕತೆ ‘ಒಳಾಂಗಣ’. ಒಂದು ಮನೆಯನ್ನು ಚಿತ್ರೀಕರಣಕ್ಕೆ ಬಿಟ್ಟುಕೊಟ್ಟ ನಡುವಯಸ್ಕ ದಂಪತಿಗಳ ವಿಭಿನ್ನ ತಲ್ಲಣಗಳನ್ನು - ಆಂತರಿಕವಾದ ತಲ್ಲಣಗಳು ಒಂದು ಪಾತಳಿಯಲ್ಲೂ, ಕಣ್ಣೆದುರಿನ ವರ್ತಮಾನದ ಜಗತ್ತು ಹುಟ್ಟಿಸುವ ತಲ್ಲಣಗಳು ಇನ್ನೊಂದು ಪಾತಳಿಯಲ್ಲೂ ಕಾಡಿಸುತ್ತಲೇ ಇರುವಾಗಿನ ಚಿತ್ರ ಇಲ್ಲಿದೆ. ದೂರದ ಪಟ್ಟಣದಲ್ಲಿ ನೆಲೆಯಾದ ಮಗ, ಅವನ ಹೆಂಡತಿ (ಸೊಸೆ) ಮತ್ತು ಏನೋ ಒಂದು ತಂತು ಮಿಡಿದಂತೆ ಸೆಳೆಯುತ್ತಿರುವ ಮೊಮ್ಮಗು - ದೂರವಾಗುತ್ತಿರುವ ಅಸ್ಪಷ್ಟ ಆತಂಕ, ಭಯ ಎಲ್ಲ ಇವರ ಆಳದಲ್ಲಿದೆ. ಚಿತ್ರೀಕರಣಕ್ಕೆ ಬಂದ ತಂಡ ಇವರ ಪ್ರೀತಿಯ ಮನೆಯನ್ನು ಹಿಗ್ಗಾಮುಗ್ಗ ಎಳೆದಾಡಿದಂತೆ ಕಂಡಾಗ ಹುಟ್ಟುವ ತಲ್ಲಣಗಳೂ ಕಣ್ಣೆದುರಿನ ವಾಸ್ತವವಾಗಿ ಎದುರಿಗೇ ಇವೆ. ಊರಿನ ಜಾತ್ಯಸ್ಥರು, ಸಂಬಂಧಿಕರು ಮತ್ತಿತರರ ನಡುವೆ ಮನೆಗಿರುವ ಲವ್-ಹೇಟ್ ಸಂಬಂಧ ಈ ಚಿತ್ರೀಕರಣ ಸಂದರ್ಭದಲ್ಲಿ ಮೀಟುವ ಸೂಕ್ಷ್ಮಗಳೂ ಒಂದಿಷ್ಟಿವೆ. ಇದೆಲ್ಲದರ ನಡುವೆ ಓದುಗ ಸ್ಪರ್ಶಿಸಬೇಕಾದ ಒಂದು ಖಾಲಿ ಬಿಟ್ಟ ಜಾಗವಿದೆ. ಹೇಳಿರುವುದರ ಮೇಲೆ ಕಾಲೂರಿ ನಿಂತಾಗ ಕಾಣಿಸಬೇಕಾದ ಆ ಹೇಳದೇ ಇರುವುದು ಇಲ್ಲಿ ಹೇಗೆ ಮತ್ತು ಯಾವ ಅನುಭೂತಿ ನೀಡುತ್ತದೆ ಎನ್ನುವುದು ಪ್ರಶ್ನೆ. ಅನುಭವ ಅನುಭಾವವಾಗುವ ಕಾವ್ಯಾನುಸಂಧಾನದ ವಿಚಾರವಿದು. ಆದರೆ ‘ಅಭಂಗ ಅಭಿಸಾರ’ ದ ಮಾಯಕತೆ ಇಲ್ಲಿ ಅಷ್ಟೇ ಮುದ್ದುಮುದ್ದಾಗಿ ಕವಿಯುವುದಿಲ್ಲ. ಒಂದು, ಮಗ-ಸೊಸೆ ಮತ್ತು ಮೊಮ್ಮಗ ದೂರದಲ್ಲಿರುವುದು ಒಂದು ಸೂಕ್ಷ್ಮಾನುಭೂತಿಯ ಕತೆಗಾರನಷ್ಟೇ ಕಾಣಬಹುದಾದ, ಚಿತ್ರಿಸಬಹುದಾದ, ಇನ್ನೂ ಭಾಷೆಗಿಳಿಯದೇ ಮೌನದಲ್ಲುಳಿದಿರುವ ಅನುಭವವಲ್ಲ. ಅದೀಗ ರಣರಣ ಬಿಸಿಲಿನಷ್ಟೇ ನಿಷ್ಠುರವಾಗಿ ಅನುಭವಕ್ಕಿಳಿದು, ಭಾಷೆಯಲ್ಲಿ ಸವಕಲಾದ ಅನುಭೂತಿ. ಹಾಗಾಗಿ ಭಗೀರಥ ಗಾಂವಕಾರ್ ಮತ್ತು ನಿರ್ಮಲರ ತಲ್ಲಣದಲ್ಲಿ ಓದುಗ ಬೆರಗಾಗಬಹುದಾದ ಏನೂ ಇಲ್ಲದಿರುವುದು ಇದಕ್ಕೆ ಕಾರಣ.

ಏಳನೆಯ ಕತೆ ‘ಬಣ್ಣದ ಬಾನುಲಿ’ ಒಂದು ನುಡಿಚಿತ್ರದಂತಿರುವ ಕತೆ. ಇಲ್ಲಿ ಕಥಾನಕವೇನಿಲ್ಲ. ತದಡಿಯ ನೆನಪುಗಳಲ್ಲಿ, ಅಲ್ಲಿ ಕಳೆದ, ಕಳೆದುಕೊಂಡ ಬಾಲ್ಯದಲ್ಲಿ ಒಡನಾಡಿದ ಹುಡುಗಿಯೊಬ್ಬಳ ನವಿರು ನೆನಪುಗಳಲ್ಲಿ ಮುಳುಗುವ ಬಣ್ಣದೊಂದಿಗೆ ಒಂದಲ್ಲಾ ಒಂದು ಬಗೆಯ ಸಖ್ಯವನ್ನಿಟ್ಟುಕೊಂಡು ಇದೀಗ ಅದೇ ಹೊಟ್ಟೆಪಾಡಾಗಿರುವ ರುಕ್ಮಾಂಗದನ ಕತೆಯಿದು. ನೆನಪು, ಕನಸು, ಭ್ರಮೆ ಮತ್ತು ವಾಸ್ತವಗಳ ವಿಭಿನ್ನ ಬಣ್ಣಗಳು ಕಲಸಿ ಹೋದಂತೆ ರುಕ್ಮಾಂಗದನ ಸದ್ಯದ ಬದುಕು ಕಂಡರೂ ಅವನು ಕತ್ತಲಿನಿಂದ ಬೆಳಕಿನೆಡೆಗೆ ಹೊರಟಂತೆ, ಬಿದ್ದಲ್ಲಿಂದ ಎದ್ದು ಮೇಲೇರುವ ವಿದ್ಯಮಾನದೊಂದಿಗೆ ಕತೆ ಮುಗಿಯುತ್ತದೆ.

ಈ ಸಂಕಲನದಲ್ಲೇ ಜಯಂತರ ಶ್ರೇಷ್ಠ ಕತೆಗಳ ಸಾಲಿಗೆ ಸೇರುವ ‘ಚಾರ್‌ಮಿನಾರ್’ ಮತ್ತು ‘ನೀರು’ ಇರುವುದು, ಜಯಂತರ ಕಥಾಜಗತ್ತಿನ ಒಂದು ಮುಖ್ಯ ಅಂಗವಾದ ಭಾವಕೋಶವನ್ನು ಮೀಟುವ ಬಗೆಯ ಕತೆಗಳ ಪ್ರಾತಿನಿಧಿಕ ಅಭಿವ್ಯಕ್ತಿಯಾಗಿ ಗೆದ್ದ ‘ಮಧುಬಾಲಾ’, ‘ಅಭಂಗ ಅಭಿಸಾರ’ದಂಥ ಕತೆಗಳೂ ಇರುವುದು, ನನ್ನ ಗ್ರಹಿಕೆಯಲ್ಲಿ ಅಂಥ ಕತೆಯಾಗಿ ಸೋತ ‘ಅಲ್ಪವಿರಾಮ’ ಮತ್ತು ‘ಒಳಾಂಗಣ’ ಕೂಡ ಇರುವುದು, ಹಾಗೆಯೇ ನುಡಿಚಿತ್ರದ ಮಾದರಿಯಲ್ಲಿರುವ ‘ಬಣ್ಣದ ಬಾನುಲಿ’ ಲಭ್ಯವಿರುವುದು ಮತ್ತು ‘ಚಾರ್‌ಮಿನಾರ್’ ಹಾಗೂ ‘ನೀರು’ ಕತೆಗಳಷ್ಟೇ ನಿರ್ದಿಷ್ಟವಾಗಿ ವರ್ತಮಾನದ ಒಂದು ಕಥಾಹಂದರದ ನೇಯ್ಗೆಯಲ್ಲಿ ಭಾವಕೋಶವನ್ನು ಮೀಟುತ್ತಲೇ ಸಾಮಾಜಿಕ ಮತ್ತು ತಾತ್ವಿಕ ಆಯಾಮವನ್ನು ತನ್ನ ಚೌಕಟ್ಟಿನಲ್ಲಿ ಒಳಗೊಂಡು ಮೈತಳೆದ ‘ಕೋಮಲ ಗಾಂಧಾರ’ದಂಥ ಕತೆಯೂ ಸೇರಿರುವುದು ಹೊಸ ಕತೆಗಾರರಿಗೂ, ಸುಮ್ಮನೇ ಕತೆಗಳನ್ನು ಓದಲು ಇಷ್ಟಪಡುವ ನನ್ನಂಥವರಿಗೂ ಈ ಸಂಕಲನವನ್ನು ಮಹತ್ವದ ಸಂಕಲನವನ್ನಾಗಿಸಿದೆ.

(ಈ ಬರಹದ ಆಯ್ದ ಭಾಗ ಚುಕ್ಕುಬುಕ್ಕು ವೆಬ್‌ಸೈಟಿನಲ್ಲಿ ಈ ಹಿಂದೆ ಕಾಣಿಸಿಕೊಂಡಿದೆ.) 

1 comment:

ಚಿನ್ಮಯ ಭಟ್ said...

ಧನ್ಯವಾದಗಳು ಸರ್...
ಓದಿಲ್ಲ ಖಂಡಿರ ಚಾರ್ ಮಿನಾರ್ ತಂದು ಓದುತ್ತೇನೆ...ಓದುವುದು ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ನಿಮ್ಮ ಬ್ಲಾಗ್ ಉತ್ತಮ ಕೆಲಸ ಮಾಡುತ್ತಿದೆ..ನಮ್ಮಂಥಹ ಎಲ್ ಬೋರ್‍ಡುಗಳಿಗೆ ಮಾರ್ಗದರ್ಶನ ಮಾಡುತ್ತಿದೆ....

ನಿರಂತರವಾಗಿರಲಿ ಈ ಪ್ರಕ್ರೀಯೆ ...ಧನ್ಯವಾದಗಳು...
ನಮಸ್ತೆ