Sunday, December 2, 2012

ಬೂದಿಯಾದ ಬದುಕು ಮತ್ತು ಮನುಷ್ಯತ್ವ

ಕಳೆದ ಆಗಸ್ಟ್ ತಿಂಗಳ ಹಿಂದೂ ಲಿಟರರಿ ರಿವ್ಯೂನಲ್ಲಿ ಶಶಿ ಬಾಳಿಗ ಎಂಬವರು ಈ ಸೈರಸ್ ಮಿಸ್ತ್ರಿಯ ಕುರಿತು ಬರೆದಿದ್ದರು ಮಾತ್ರವಲ್ಲ ಪುಟ್ಟದಾಗಿ ಸಂದರ್ಶನವನ್ನೂ ಮಾಡಿದ್ದರು. ಆಮೇಲೆ ರಂಜಿತ್ ಹೊಸಕೋಟೆಯವರೊಂದಿಗಿನ ಒಂದು ಸಂದರ್ಶನ ಕೂಡಾ ನೋಡಲು ಸಿಕ್ಕಿತು. ಈ ದಿನಗಳಲ್ಲೂ ಲೇಖಕನಾಗಿ ಜನರಿಂದ, ಪ್ರಚಾರದಿಂದ ಮತ್ತು ಜನಪ್ರಿಯತೆಯ ಹಸಿವಿನಿಂದ ತಪ್ಪಿಸಿಕೊಂಡೇ ಇರುವಂತೆ ಕಾಣಿಸಿದ ಈತನ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿತು. ಆಗಷ್ಟೇ ಇವರ ಹೊಸ ಕಾದಂಬರಿ ಕಾರ್ಪ್ಸ್ ಬೇರರ್ ಬಿಡುಗಡೆಯಾಗಿತ್ತು. ನಿಜ, ತಾನು ಅಷ್ಟೇನೂ ಪ್ರಸಿದ್ಧನಲ್ಲ ಮತ್ತು ಏಕಾಂತವನ್ನು ಇಷ್ಟಪಡುವವ ಎಂದು ನೇರವಾಗಿ ಹೇಳುವ ಈ ನಾಟಕಕಾರ ಮತ್ತು ಇಂಗ್ಲೀಷ್ ಕಾದಂಬರಿಕಾರ, ಅದೇ ಸಂದರ್ಶನದಲ್ಲಿ ತನ್ನ ಇದಕ್ಕೂ ಹಿಂದಿನ ದ ರೇಡಿಯನ್ಸ್ ಆಫ್ ಆಶಸ್ ಕಾದಂಬರಿಯನ್ನು ಯಾರಾದರೂ ಓದಿದ್ದರೇ - ಅನುಮಾನ, ಹೆಚ್ಚಿನವರ ಕಣ್ಣಿಗೇ ಅದು ಬೀಳಲಿಲ್ಲ ಎನ್ನುತ್ತಾರೆ. ಬದುಕಿನಲ್ಲಿ ತನಗೆ ಭಾವನೆಗಳು, ಸೂಕ್ಷ್ಮಸಂವೇದನೆ ಬಹುಮುಖ್ಯ ಎನ್ನುವ ಈ ಸೈರಸ್ ಮಿಸ್ತ್ರಿಯ ಮಾತುಗಳೆಲ್ಲ ಇನ್ನಷ್ಟು ಆಸಕ್ತಿ ಹುಟ್ಟಿಸಿ ಆವತ್ತೇ ಈ ಎರಡೂ ಕಾದಂಬರಿಗಳನ್ನು ತರಿಸಿಕೊಂಡು ಓದತೊಡಗಿದೆ.


ತುಂಬ ಹಿಂದೆ ನನ್ನ ಸಾಹಿತ್ಯಾಸಕ್ತ ಗೆಳೆಯರೊಬ್ಬರೊಂದಿಗೆ ಮಾತನಾಡುತ್ತ ಯಾವುದೋ ಕಾದಂಬರಿ ತುಂಬ ಇಷ್ಟವಾಯಿತು ಎಂದಾಗ ವೈಯಕ್ತಿಕ ಕಾರಣಕ್ಕೆ ಇಷ್ಟವಾಯಿತೋ ಅಥವಾ ಬೇರೆಯವರಿಗೂ ಇಷ್ಟವಾಗುವಂತಿದೆಯೋ ಎಂಬ ಪ್ರಶ್ನೆಯನ್ನು ಎದುರಿಗಿಟ್ಟಿದ್ದರು! ನನ್ನ ಮಟ್ಟಿಗಂತೂ ಸೃಜನಶೀಲ ಬರವಣಿಗೆ ಮತ್ತು ಓದು ಎರಡೂ ವೈಯಕ್ತಿಕ ನೆಲೆಯಲ್ಲೇ ಇಷ್ಟವಾಗುವಂಥವು. ಸಾರ್ವತ್ರಿಕವಾಗಿ ಹಾಗಾದಲ್ಲಿ ಅದು ಗ್ರೇಟ್ ಎನಿಸಿಕೊಳ್ಳುತ್ತದೆ. ಆದರೆ ಹಾಗೆ ಆಗದೇ ಹೋದಲ್ಲಿ ಸೋಲು ಖಂಡಿತವಾಗಿಯೂ ಅಲ್ಲ. ಸೈರಸ್ ಮಿಸ್ತ್ರಿಯ ಈ ಮೊದಲ ಕಾದಂಬರಿ ದ ರೇಡಿಯನ್ಸ್ ಆಫ್ ಆಶಸ್ ಇಷ್ಟವಾಗಿದ್ದು ಕೂಡ ಹೀಗೆಯೇ. ಆದರೆ ಅದು ವೈಯಕ್ತಿಕವನ್ನು ಮೀರಿ ತನ್ನ ಗಹನತೆಯಿಂದ ಸೆಳೆಯುವ ಕಾದಂಬರಿ.

Fiction should be "Able to move its reader at some fundamental level, to disturb and rearrange his outlook on life, perhaps even change him as a person..."
-Cyrus Mistry

ಹಣದ ಹಿಂದೆ ಹೂಡುವ ಓಟ ತೊಡಗುವುದು ಮಗು ಶಾಲೆಗೆ ಹೋಗಲು ಸುರು ಮಾಡಿದಾಗಲೇ. ಅದರ ಶಿಕ್ಷಣದಲ್ಲೇ ಅಂಥ ಒಳ ಉದ್ದೇಶದ ಘಾಟು ಅತಿಯಾಗಿರುವುದರಿಂದಲೇ ಅಧ್ವಾನಗಳು ತೊಡಗುತ್ತವೆ. ಎಲ್ಲೋ ಒಂದು ಕಡೆ ಅತ್ಯುತ್ತಮವಾದ ಮತ್ತು ಉನ್ನತವಾದ ಶಿಕ್ಷಣ, ಸಾಧ್ಯವಾದರೆ ಒಂದು ಫಾರಿನ್ ಡಿಗ್ರಿ, ಅತ್ಯುನ್ನತ ಹುದ್ದೆಗೇರುವ ಅವಕಾಶಗಳಿರುವ ನೌಕರಿ, ಅದೂ ಸಾಧ್ಯವಾದಲ್ಲಿ ಅಮೆರಿಕದಂಥ ಶ್ರೀಮಂತ(!?) ನಾಡಲ್ಲಿ - ಇದು ಆ ಓಟದ ಉದ್ದೇಶ. ನಮಗೆ ಬೇಕಿರಲಿ ಬೇಡವಿರಲಿ ಬದುಕಿನಲ್ಲಿ ಸ್ಪರ್ಧೆಯಿದೆ. ಸ್ಪರ್ಧೆಯ ನಿರ್ಣಾಯಕ ಹಂತ ಗೆಲುವು ಇಲ್ಲವೇ ಸೋಲು. ಗೆಲ್ಲ ಬಯಸುವ ಪ್ರತಿ ಎರಡನೇ ವ್ಯಕ್ತಿ ನಿಮ್ಮ ಸೋಲನ್ನೇ ಬಯಸುತ್ತಿರುತ್ತಾನೆ - ಇದು ವಾಸ್ತವ. ತ್ರೀ ಈಡಿಯಟ್ಸ್ ಸಿನಿಮಾದಲ್ಲಿ ಇಂಜಿನಿಯರಿಂಗ್ ಕಾಲೇಜಿನ ಡೈರೆಕ್ಟರ್ ವೀರೂ ಸಹಸ್ರಬುದ್ಧಿ ಹೊಸದಾಗಿ ಸೇರಿಕೊಂಡ ಮಕ್ಕಳಿಗೆ ಕೋಗಿಲೆಯೊಂದು ಕಾಗೆಯ ಗೂಡಿನಲ್ಲಿ ಕಾಗೆಯ ಮೊಟ್ಟೆಯನ್ನು ಕೆಡವಿ ಆ ಜಾಗದಲ್ಲಿ ತನ್ನ ಮೊಟ್ಟೆಯನ್ನಿಟ್ಟು ಸಂತಾನಾಭಿವೃದ್ಧಿ ಮಾಡುತ್ತದೆ ಎಂದೆಲ್ಲ ಹೇಳುವುದನ್ನು ನೆನಪಿಸಿಕೊಳ್ಳಿ. Rankನ ಆಧಾರದ ಮೇಲೆ ಬೇರೆಯವರನ್ನು ಕೆಳಕ್ಕೆ ತಳ್ಳಿ ತಾನು ಮೇಲೆದ್ದು ಏರಿ ಯಶಸ್ಸನ್ನು ದಕ್ಕಿಸಿಕೊಳ್ಳುವ ಈ ರೇಸ್-ಬದುಕಿನಲ್ಲಿ ಓಡು ಇಲ್ಲವೇ ಸೋಲು ಎಂಬುದು ಆದರ್ಶವಾಗುತ್ತದೆ. ನೀವು ಮಣ್ಣಲ್ಲಿ ಕುಳಿ ತೆಗೆದು ಆಳದಲ್ಲಿ ಹೂತ ಬೀಜವಾದರೂ ತನ್ನ ಮೊಳಕೆಯನ್ನು ಆಕಾಶಕ್ಕೆ ಚಾಚುತ್ತದೆ. ಇದು ಜೀವನ್ಮುಖೀ spirit! ಬಸವನ ಹುಳುವಿನಂತೆ ಮಣ್ಣಲ್ಲಿ ತೆವಳುವುದನ್ನು ಬಿಟ್ಟು ಗರುಡನಾಗು, ಆಕಾಶಕ್ಕೆ ಹಾರು ಎಂದು ಚಿತ್ತಾಲರು ತಮ್ಮ ಪುರುಷೋತ್ತಮ ಕಾದಂಬರಿಯ ನಾಯಕನಿಗೆ ಹೇಳಿದ್ದು ಬೇರೆ ಅರ್ಥದಲ್ಲಿ. ಜಗತ್ತು ಅದನ್ನು ಸ್ವೀಕರಿಸಿದ್ದು ಬೇರೆಯೇ ಅರ್ಥದಲ್ಲಿ. ಈ ಎರಡನೆಯ ಅರ್ಥದ ಓಟದಲ್ಲಿ ಅರ್ಥವೇ ಮುಖ್ಯ.

ಈ ಕಾದಂಬರಿಯನ್ನು ಹಲವು ಆಯಾಮಗಳಲ್ಲಿ ಗಮನಿಸುವುದು ಸಾಧ್ಯವಿದೆ. ಒಂದೊಂದಾಗಿ ಮತ್ತು ಸ್ವತಂತ್ರವಾಗಿ ಈ ಬಗೆಯ ಆಯಾಮಗಳನ್ನು ಗಮನಿಸುವುದು ಮತ್ತು ಒಟ್ಟಾರೆಯಾಗಿ ಈ ಎಲ್ಲ ಆಯಾಮಗಳನ್ನೂ ಒಳಗೊಂಡಿರುವ ಒಂದು ಕೃತಿಯಾಗಿ ಇದನ್ನು ಗಮನಿಸುವುದು ಎರಡೂ ಮುಖ್ಯ.

ಈ ಕಾದಂಬರಿಯ ಕೇಂದ್ರ ಪಾತ್ರ ಜಹಾಂಗೀರ್ ಒಬ್ಬ ಪಾರ್ಸಿ ಯುವಕ. ಕಾಮರ್ಸ್ ತೆಗೆದುಕೊಂಡು ಕೈಲಾಗದೆ ಆರ್ಟ್ಸ್‌ಗೆ ಶಿಫ್ಟ್ ಆಗಿ ಅದೂ ಹರಿಯದೆ ಕಾಲೇಜಿನಿಂದ ಡ್ರಾಪ್ ಔಟ್ ಆದ ಯುವಕ. ಇವನಲ್ಲಿ ಆ Drive ಏನಿದೆ, ಹಣದ ಹಿಂದೆ, ಯಶಸ್ಸಿನ ಹಿಂದೆ, ಒಂದು ಮಜಬೂತು ಡಿಗ್ರಿಯ ಹಿಂದೆ, ಒಂದು ಭಯಂಕರ ಡೆಸಿಗ್ನೇಶನ್ನಿನ ಹಿಂದೆ ಮತ್ತು ಕಾರು-ಬಂಗಲೆ-ಸುಂದರ ಸಿರಿವಂತ ಹೆಂಡತಿ ಮುಂತಾದವನ್ನೆಲ್ಲ ಹೊಂದುವ ‘ವರ-ಮಾನ’ದ ವರನಾಗುವುದರ ಹಿಂದೆ ಹೂಡಲೇ ಬೇಕಿರುವ ಓಟಕ್ಕೆ ಸಜ್ಜಾಗುವ, ಓಡುವ, ಹೇಗಾದರೂ ಸರಿಯೇ ದಕ್ಕಿಸಿಕೊಳ್ಳುವ drive ಏನಿದೆ, ಅದು ಇಲ್ಲ. ಒಂದು ಬಗೆಯ ಅಕಾಲ ವೃದ್ಧಾಪ್ಯದಂತೆ, ಅಭಾವ ವೈರಾಗ್ಯದಂತೆ ಇವನ ಮನಸ್ಸು ತನ್ನ ಸುತ್ತಲಿನ ಕಡುಬಡವರತ್ತ, ಗತಿಯಿಲ್ಲದ ಭಿಕ್ಷುಕರತ್ತ ಹರಿಯುತ್ತದೆ. ಅವರು ಅಷ್ಟೆಲ್ಲ ದಯನೀಯ ಸ್ಥಿತಿಯಲ್ಲಿರುತ್ತ ತಾನು ಎಸಿ ಕಾರಿನಲ್ಲಿ, ಸಾವಿರಾರು ರೂಪಾಯಿ ಬೆಲೆಬಾಳುವ ಉಲ್ಲನ್ ಸೂಟು ಬೂಟು ತೊಟ್ಟು, ಎಸಿ ಕ್ಯಾಬಿನ್ನಿನಲ್ಲಿ ಲಕ್ಷಗಟ್ಟಲೆ ಸಂಬಳ ಪಡೆಯುತ್ತ ಒಬ್ಬ ಶೋಷಕನಾಗಿ ನೆಮ್ಮದಿಯಿಂದಿರುವುದು ಸಾಧ್ಯವೇ ಇಲ್ಲವೆಂದು ತೀರ್ಮಾನಿಸಿದ್ದಾನೆ. ನಿರ್ಲಿಪ್ತಿ, ವೈರಾಗ್ಯವನ್ನು ಸಾಧಿಸುವ ಕುರಿತೇ ಅಷ್ಟೆಲ್ಲ ಕಷ್ಟಪಟ್ಟು ಹುಟ್ಟಿದಾರಭ್ಯ ನಮ್ಮ ಸಾವಿನ ತನಕ ಸತತವಾಗಿ ಉಪದೇಶಿಸುತ್ತ ಬಂದ ನಮ್ಮ ಆಧ್ಯಾತ್ಮಕ್ಕೆ ಒಂದು ಸವಾಲಿದು!

ಹಾಗೆಯೇ ಇಲ್ಲಿ ಆಧ್ಯಾತ್ಮದ ಕೊಂಚ ವಿಕೃತಗೊಂಡ ಮುಖವಾದ ಮೂಢನಂಬಿಕೆಗಳ ಒಂದು ಜಗತ್ತು ಕೂಡಾ ಅನಾವರಣಗೊಳ್ಳುತ್ತದೆ. ಸತ್ತ ಮಗುವು ಅತೀಂದ್ರಿಯ ಲೋಕದಲ್ಲಿ ಒಂದಿಷ್ಟು ಕಾಲ ಮತ್ತೆ ತನ್ನ ತಾಯಿಯ ಗರ್ಭದಲ್ಲೇ ಮರುಜನ್ಮ ತಳೆಯುವುದಕ್ಕಾಗಿ ಹಾತೊರೆದು ಕಾಯುತ್ತಿರುತ್ತದೆ ಮತ್ತು ಅದರೊಂದಿಗೆ ಸಂಪರ್ಕ ಬೆಳೆಸಿ ಅದು ಹುಟ್ಟಿ ಬರಲು ಅನುಕೂಲಕರವಾದ ಸಮಯ ತಿಳಿದುಕೊಂಡು ಅದೇ ಅವಧಿಯಲ್ಲಿ ದಂಪತಿಗಳು ಒಂದಾದರೆ ಸತ್ತ ಮಗುವಿನ ಪುನರ್ಜನ್ಮ ಸಾಧ್ಯ ಎಂದು ನಂಬಿಸಿ ಮಗುವನ್ನು ಕಳೆದುಕೊಂಡ ದುಃಖದಲ್ಲಿರುವ ತಾಯಂದಿರನ್ನು ಮೂರ್ಖರನ್ನಾಗಿಸುವ ಬಾಬಾ ಒಬ್ಬ ಈ ಕಾದಂಬರಿಯಲ್ಲಿದ್ದಾನೆ. ಹಾಗೆಯೇ ಆ ಮಗುವಿನ ಪುನರಾಗಮನದ ಹೊಂಚುವಿಕೆಯಲ್ಲಿಯೇ ಎದುರಿಗಿರುವ ಮಗನ ಮನಸ್ಥಿತಿಯೊಂದು ಭಿನ್ನವಾಗಿ ರೂಪುಗೊಳ್ಳುವ ಚಿತ್ರವೂ ಸಿಗುತ್ತದೆ. ಇದೇ ಪ್ರಕರಣ ಗಂಡ-ಹೆಂಡತಿಯರ ಮಧ್ಯೆ ವೈಮನಸ್ಯಕ್ಕೂ ಕಾರಣವಾಗುತ್ತದೆ. ಮಧ್ಯಮವರ್ಗದ ಸಂಸಾರದ ಸಣ್ಣಪುಟ್ಟ ಆಸೆ, ನಿರೀಕ್ಷೆ, ನಡವಳಿಕೆಗಳು ಎಷ್ಟೊಂದು ಸೂಕ್ಷ್ಮವಾಗಿ ಅದರೊಳಗಿನ ಸಂತುಲನವನ್ನು ಏರುಪೇರಾಗಿಸಬಹುದೆಂಬುದನ್ನು ಕಾದಂಬರಿ ಅನನ್ಯವಾಗಿ ಸೆರೆಹಿಡಿಯುತ್ತ ಹೋಗುತ್ತದೆ.

ದಿನದ ದುಡಿಮೆಗೆ ವ್ಯಯಿಸುವ ಬದಲು ಸಾಕಷ್ಟು ಸಮಯವನ್ನು ತನ್ನ ಸ್ವಂತಕ್ಕೇ ಉಳಿಸಬಲ್ಲ ಒಂದು ಪಾರ್ಟ್ ಟೈಂ ಕೆಲಸ, ಅದೂ ತನ್ನ ಕಾದಂಬರಿಕಾರನಾಗುವ ಮಹತ್ವಾಕಾಂಕ್ಷೆಗೆ ಪೋಷಕವಾಗಿರುವಂಥ ಕೆಲಸವನ್ನು ಈತ ಆರಿಸಿಕೊಂಡಿದ್ದಾನೆ. ಮಾರ್ಕೆಟಿಂಗ್ ರೀಸರ್ಚ್‌ಗೆ ಬೇಕಾದ ಸರ್ವೆಗಳನ್ನು ನಡೆಸುವುದು, ಜನರನ್ನು ಭೇಟಿಯಾಗಿ, ಅವರಿಂದ ಅಭಿಪ್ರಾಯಗಳನ್ನು ಸಂಗ್ರಹಿಸುವುದು ಇವನಿಗೆ ಇಷ್ಟ. ಬೇರೆ ಬೇರೆ ಹಿನ್ನೆಲೆಯ, ವರ್ಗದ, ವಿಭಿನ್ನ ಕೆಲಸದಲ್ಲಿರುವ ಮತ್ತು ತಮ್ಮದನ್ನು ಹೇಳಿಕೊಳ್ಳುವುದಕ್ಕೆ ಕೇಳಲು ಕಿವಿಯುಳ್ಳ ಒಂದು ಜೀವವನ್ನು ಹಾತೊರೆದು ಕಾದಿರುವ ಮಂದಿಯನ್ನು ಮಾತಿಗೆಳೆದು ಕೂರುವುದು, ಅದನ್ನು ಸರ್ವೆಯ ಉದ್ದೇಶದಾಚೆಗೂ ವಿಸ್ತರಿಸಿಕೊಳ್ಳುವುದು ಮತ್ತು ನೋಟ್ಸ್ ಮಾಡಿಕೊಳ್ಳುವುದು ಇಲ್ಲಿ ಸಹಜವಾಗಿಯೇ ಸಾಧ್ಯವಾಗುತ್ತದೆ. ಇದು ಇವನ ಒಳಜಗತ್ತನ್ನು ಪೊರೆಯುತ್ತ, ಪೋಷಿಸುತ್ತ ಹೋಗುವಂತೆಯೇ ಬದುಕಿಗೆ ಬೇಕಾದ ಕನಿಷ್ಠ ಆದಾಯವನ್ನೂ ತರುತ್ತದೆ. ಹಾಗಾಗಿ ಈತ ತನ್ನ ಮಟ್ಟಿಗೆ ಸುಖಿ. ಆದರೆ ಮೊತ್ತದಲ್ಲಿ ಇವನು ಹೆತ್ತವರ ಒಂದು ಚಿಂತೆ.

ಇವನಿಗೊಬ್ಬಳು ಪ್ರೇಯಸಿ, ಕ್ರಿಸ್ತಿನಾ. ಆಕೆ ಕ್ರಿಶ್ಚಿಯನ್ ಈತ ಪಾರ್ಸಿ ಎಂಬುದು ಮಾತ್ರ ಸಮಸ್ಯೆಯಲ್ಲ. ಅವಳಿಗೆ ತಾನು ಕಪ್ಪು, ಚಂದವಿಲ್ಲ, ಇವನೋ ಕಾಶ್ಮೀರಿ ಯುವಕನೋ ವಿದೇಶೀ ಪ್ರವಾಸಿಯೋ ಎಂಬಷ್ಟು ಬೆಳ್ಳಗೆ ಕೆಂಪುಕೆಂಪಾಗಿ ಒಬ್ಬ ಪೈಲ್ವಾನನಷ್ಟು ದೃಢಕಾಯ ಹೊಂದಿರುವ ಸುಂದರ ಯುವಕ. ಯಾವ ಬಗೆಯಲ್ಲೂ ಇವನಿಗೆ ತಾನು ಸರಿಸಾಟಿಯಾದ ಜೋಡಿಯಾಗಲಾರೆ ಎಂಬ ಕೀಳರಿಮೆ, ತಮ್ಮ ಸಂಬಂಧ ಇಂದಲ್ಲ ನಾಳೆ ಮುರಿದು ಬೀಳಲಿದೆ, ಆಳದಲ್ಲಿ ಮಹಾರಸಿಕನಾದ ಈ ಮನುಷ್ಯ ಸ್ವಲ್ಪ ತೆಳ್ಳಗೆ ಬೆಳ್ಳಗೆ ಬಳುಕುವ ಶ್ರೀಮಂತ ಯುವತಿಯ ಜಾಲಕ್ಕೆ ಬಿದ್ದದ್ದೇ ತನ್ನನ್ನು ಬಿಟ್ಟು ಹೋಗುತ್ತಾನೆ ಎಂಬುದರಲ್ಲಿ ಹಿತವಿಲ್ಲದ ವಿಶ್ವಾಸ. ಸದಾ ಅಂಥ ಚಿಂತನೆಯಲ್ಲೇ ಅತಂತ್ರಗೊಂಡ ಮನಸ್ಸಿನ ಅಸ್ಪಷ್ಟ ಭಯ, ಆತಂಕ. ಭವಿಷ್ಯದ ಚಿಂತೆಯಲ್ಲಿ ವರ್ತಮಾನವನ್ನೇ ಕೆಡಿಸಿಕೊಳ್ಳುವ ಆತುರ. ಈ ಸಂಬಂಧದ ಹಿನ್ನೆಲೆಯಲ್ಲೇ ಬಿಚ್ಚಿಕೊಳ್ಳುವ ಈಕೆಯ ತಂದೆ-ತಾಯಿಯರ ವಿಲಕ್ಷಣ ದಾಂಪತ್ಯದ ವಿವರಗಳು. ಅದನ್ನೆಲ್ಲ ನೆನಪಿಸಿಕೊಂಡು ಕೂತ ಜಹಾಂಗೀರ್ - ಜಿಂಗೊನ ಮನಸ್ಸಿನಲ್ಲೇ ಬಿಚ್ಚಿಕೊಳ್ಳುವ ಸ್ವಂತ ತಂದೆ ಬೊಮನ್ ಮತ್ತು ತಾಯಿ ಕುರ್ಶಿದ್ ಸಂಬಂಧದ ವಿವರಗಳು. ಕೊಳೆಗೇರಿಯಲ್ಲಿ ನಿಕಟರಾದ ತೀರು-ಗ್ಲೋರಿಯಾ ನಡುವಿನ ಸಂಬಂಧವೂ ಸೇರಿದಂತೆ ಇಡೀ ಕಾದಂಬರಿಯಲ್ಲಿ ಗಂಡು - ಹೆಣ್ಣು ಸಂಬಂಧದ ‘ಅಮರ-ಮಧುರ-ಪ್ರೇಮ’ದ ನಿರೀಕ್ಷೆಗಳು ಹುಸಿಯಾಗುವುದು, ಹೊರಗಿನ ವ್ಯಕ್ತಿಯ ಆಗಮನ ಮತ್ತು ಆ ವ್ಯಕ್ತಿಯ ಕುರಿತ ಅನುಮಾನಗಳೇ ಹುಟ್ಟಿಸುವ ತಲ್ಲಣಗಳು, ಅಂಥ ಅನುಮಾನಗಳೇ ಕೆಲವೊಮ್ಮೆವಿಪರೀತದ ತಿರುವುಗಳಿಗೆ ಕಾರಣವಾಗಿ ಸಂಬಂಧದ ಮತ್ತು ಮಾನವೀಯ ವಿಶ್ವಾಸದ ಕುರಿತ ನಂಬುಗೆ, ನಿರೀಕ್ಷೆಗಳೇ ಸುಳ್ಳಾಗುವುದು ನಮ್ಮನ್ನು ಕಾಡುವಂತಿದೆ. ಇಲ್ಲಿ ಕ್ರೌರ್ಯ, ತಿರಸ್ಕಾರ, ಸೇಡು ಎಲ್ಲವೂ ಮನುಷ್ಯನ ಮಾನವೀಯ ಮುಖಗಳನ್ನು ಹೇಗೆಲ್ಲ ವಿಕಾರಗೊಳಿಸಬಹುದೆಂಬುದನ್ನು ಒಂದಕ್ಕಿಂತ ಹೆಚ್ಚು ಸಂದರ್ಭದಲ್ಲಿಟ್ಟು ಹೇಳುವ ಬಗೆ ತುಂಬ ಗಹನವಾಗಿದೆ. ಅದರದೇ ಮುಂದುವರಿದ ಭಾಗವಾಗಿ ಈ ಕಾದಂಬರಿ ಇಂಥ ಅನಿವಾರ್ಯಕ್ಕೆ ಸಿಲುಕಿಕೊಂಡ ಹೆಣ್ಣು ಕಳಚಿಕೊಂಡ ಸಂಬಂಧ ಅಂತಿರಲಿ, ಗಂಡನ ಸಾವಿನಲ್ಲೂ ಒಂದು ಬಗೆಯ ಬಿಡುಗಡೆಯನ್ನು ಕಾಣುವಂಥ ವೈಚಿತ್ರ್ಯದ ಸೂಕ್ಷ್ಮವನ್ನು ಬಹುಸೂಚ್ಯವಾಗಿ ಚಿತ್ರಿಸಿದೆ.

ಮುಂಬಯಿ ನಮಗೆ ಹಲವು ವಿಧದಲ್ಲಿ ದಕ್ಕಿದೆ. ಶಿವರಾಮ ಕಾರಂತ, ವ್ಯಾಸರಾಯ ಬಲ್ಲಾಳರ ಕಾದಂಬರಿಗಳಲ್ಲಿ ಬರುವ ಮುಂಬಯಿ, ಯಶವಂತ ಚಿತ್ತಾಲರ ಮುಂಬಯಿ, ಜಯಂತ ಕಾಯ್ಕಿಣಿಯವರ ಮುಂಬಯಿ, ಹಿಂದಿ ಸಿನಿಮಾಗಳಲ್ಲಿ ನಾವು ಕಂಡ ಮುಂಬಯಿಗಳೆಲ್ಲ ನಮ್ಮ ಮನಃಪಟಲದಲ್ಲಿವೆ. ಈ ಕಾದಂಬರಿ ಮುಂಬಯಿಯ ಕೊಳೆಗೇರಿ ನಿವಾಸಿಗಳ ಚಿತ್ರವನ್ನು ಹೆಚ್ಚು ಆಳವಾಗಿ ಮತ್ತು ವಿವರವಾಗಿ ತೆರೆದಿಡುವಾಗ ಮನಸ್ಸಿಗೆ ಬರುವುದು ಸ್ಲಂ ಡಾಗ್ ಮಿಲಿಯನೇರ್ ಸಿನಿಮಾದ ಮುಂಬಯಿ. ಅಮೀರ್ ಖಾನ್ ಪತ್ನಿ ಕಿರಣ್ ಮಾಡಿದ ಧೋಬೀಘಾಟ್ ಸಿನಿಮಾದ ಮುಂಬಯಿ. ಆನಂದ ಪಟವರ್ಧನರ ಹಮಾರಾ ಶಹರ್ (ಬಾಂಬೇ ಅವರ್ ಸಿಟಿ) ಸಿನಿಮಾದ ಮುಂಬಯಿ. ಇತ್ತೀಚೆಗೆ ಬಂದ ದೀ ಗಾಂಧಿಯ ಫೋಟೋಗಳಿರುವ ರಶ್ಮಿ ಬನ್ಸಾಲ್ ಮತ್ತು ದೀಪಕ್ ಗಾಂಧಿಯ ಪುಸ್ತಕ ಪೂರ್ ಲಿಟ್ಲ್ ರಿಚ್ ಸ್ಲಂ (ಧಾರಾವಿಯ ಕುರಿತ ಕೃತಿ) ತೆರೆದಿಡುವ ಮುಂಬಯಿ. ಸ್ವಲ್ಪ ಹಿಂದಕ್ಕೆ ಹೋದರೆ ಬಹಳ ಸುದ್ದಿ ಮಾಡಿದ ಗ್ರೆಗೊರಿ ಡೇವಿಡ್ ರಾಬರ್ಟ್ಸ್‌ನ ಶಾಂತಾರಾಮ್ ಕಾದಂಬರಿಯ ಮುಂಬಯಿ.

ಕಡುಬಡವರತ್ತಲೇ ತುಡಿಯುವ ಜಿಂಗೊಗೆ ಬೀದಿ ಬದಿ ವ್ಯಾಪಾರಿಗಳೊಂದಿಗೆ, ಹೋಟೆಲುಗಳ ಮಾಣಿಗಳೊಂದಿಗೆ, ಕೊಳೆಗೇರಿಯ ದುಡಿಮೆಗಾರರೊಂದಿಗೆ ಬೆರೆಯುವುದರಲ್ಲಿ ಏನೋ ಹಿತ. ಹಾಗಾಗಿಯೇ ಇಲ್ಲಿ ದಿನವೂ ಬೇಗ ಎದ್ದು ಕಸದ ರಾಶಿಯಿಂದ ಪ್ಲಾಸ್ಟಿಕ್ ಆಯ್ದು ಮಾರಿ ಹೊಟ್ಟೆ ಹೊರೆದುಕೊಳ್ಳುವ ಮಕ್ಕಳ ಜಗತ್ತಿನಲ್ಲೂ ಇರುವ ಸ್ಪರ್ಧೆ ಮತ್ತು ನಿಗೂಢಗಳು, ಹೋಟೇಲ್ ಮಾಣಿಯಾಗಿ ಹೊಂದಿಕೊಳ್ಳುವುದರಲ್ಲೇ ಸೋರಿ ಹೋಗುವ ಮಕ್ಕಳ ಬಾಲ್ಯ, ಸಲಿಂಗಕಾಮಿಗಳ ಮತ್ತು ಕಾಮಾಟಿಪುರದ ದಲ್ಲಾಳಿಗಳು ದಬ್ಬುವ ತೊಡೆಗಳ ನಡುವೆ ನಲುಗುವ ತಾರುಣ್ಯ, ಅವರು ಕ್ರಮೇಣ ಬೀದಿಬದಿಯ ಕ್ಯಾಂಟೀನು ಇತ್ಯಾದಿ ತೊಡಗಿದಾಗ ಬರುವ ಹಫ್ತಾ ವಸೂಲಿಯ ಗೂಂಡಾಗಳು, ಅವರನ್ನು ಸಾಕುತ್ತಿರುವ ಮುಖಂಡರು ಎಲ್ಲರನ್ನೂ ಈ ವಿವರಗಳು ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತಲೇ ಹೋಗುತ್ತವೆ. ತನ್ನ ಮನೆಯ ಆಸುಪಾಸಿನಲ್ಲೇ ಅರೆನಗ್ನವಾಗಿ ಓಡಾಡಿಕೊಂಡು ಭಿಕ್ಷೆಯಲ್ಲೇ ಬದುಕುತ್ತಿದ್ದ ಒಬ್ಬ ಹೆಂಗಸಿನತ್ತ ಜಿಂಗೊಗೆ ಕುತೂಹಲ. ತನ್ನ ಕಾದಂಬರಿಯನ್ನು ಅವಳ ಬದುಕಿನ ಸುತ್ತಲೇ ಹೆಣೆಯಬಹುದೇ ಎಂಬ ಕಲ್ಪನೆ. ಅವಳನ್ನು ಮಾತನಾಡಿಸಲು ಹೋಗಿ ಅವಳ ತುಂಡರಿಸಲ್ಪಟ್ಟ ನಾಲಗೆಯನ್ನು ಕಂಡು ಕಂಗಾಲಾದವ. ಮನುಷ್ಯನ ಯಾವ ನೆಲೆಯ ಕ್ರೌರ್ಯ ಈ ಬಗೆಯ ಹಿಂಸೆಗೆ ಅವನನ್ನು ಸಿದ್ಧಗೊಳಿಸಿರಬಹುದೆಂಬ ವಿಚಾರ ತರ್ಕಕ್ಕೆ ಸಿಗದೆ ಕಂಗೆಡುವ ಸ್ಥಿತಿ. ಒಂದು ರಾತ್ರಿ ಚಂದೂ ನಡೆಸುತ್ತಿರುವ ಹಶೀಶ್-ಅಫೀಮುಗಳ ಚಿಲುಮೆ ಅಡ್ಡೆಗೆ ಬಂದ ಪೋಲೀಸ್ ಪೇದೆಯೊಬ್ಬ ಹಫ್ತಾ ವಸೂಲಿ ಮಾಡುತ್ತ ತನ್ನ ಕಣ್ಣೆದುರೇ ಅಂಗವಿಕಲ ಲಾಲೂಗೆ ಕೊಡುವ ಹಿಂಸೆಯನ್ನು ಜಿಂಗೊ ಪ್ರತಿಭಟಿಸುತ್ತಾನೆ. ಸರಿ, ಪೋಲೀಸ್ ಲಾಲೂನ್ನ ಬಿಟ್ಟು ಇವನನ್ನು ಹಿಡಿಯುತ್ತಾನೆ. ಹಾದಿಯ ನಡುವೆ ಅವನಿಗೆ ತದುಕಿ ಪಲಾಯನಗೈದ ಜಿಂಗೊ ಕೆಲ ಕಾಲ ಅಡಗಿಕೊಂಡೇ ಇರಬೇಕಾಗುತ್ತದೆ. ಆಗ ನೆಹರೂನಗರದ ಕೊಳೆಗೇರಿಯಲ್ಲಿ ಒಂದಷ್ಟು ಕಾಲ ಇರುತ್ತಾನೆ. ಅಲ್ಲಿಯ ಲಫಡಾಗಳು ನಮಗೆ ಕೊಳೆಗೇರಿಯ ಬದುಕನ್ನು, ಬವಣೆಯನ್ನು, ಅವರ ರಕ್ಷಣೆಗೆ ನಿಂತ ಎನ್.ಜಿ.ಒ ಕಾರ್ಯವೈಖರಿಯನ್ನು ಅಷ್ಟಿಷ್ಟು ಪರಿಚಯಿಸುವುದರೊಂದಿಗೇ ಅವುಗಳೊಂದಿಗೆ ಚಿತ್ರವಿಚಿತ್ರ ಬಗೆಯಲ್ಲಿ ಹೆಣೆದುಕೊಂಡ ರಾಜಕೀಯ, ಆರ್ಥಿಕ ಕಬಂಧ ಬಾಹುಗಳ ಉದ್ದ ಎಷ್ಟು ಎಂಬುದರ ಪರಿಚಯವೂ ದೊರೆಯುತ್ತದೆ.

ಹಾಗೆ ಸರ್ವೆಗಳನ್ನು ನಡೆಸುತ್ತಿದ್ದಾಗ ಪರಿಚಯವಾಗುವ ಮತ್ತು ಇಡೀ ಕಾದಂಬರಿಯ ಉದ್ದಕ್ಕೂ ಚಾಚಿಕೊಳ್ಳುವ ಇನ್ನೊಂದು ಪಾತ್ರ ಜಿಲ್ಲಾಮಾಯಿ ಅಥವಾ ಶ್ರೀಮತಿ ಗೋರಿಮಾರ್ ಎಂಬ ಮುದಿವಯಸ್ಸಿನ ಹೆಂಗಸಿನದ್ದು. ಈಕೆಯ ಬದುಕಿನುದ್ದಕ್ಕೂ ದುರಂತಗಳ ಸರಮಾಲೆಯಿದೆ. ಗಂಡ ಇವಳಿಂದ ಕಳಚಿಕೊಳ್ಳಲು ಕಾದಿದ್ದವನಂತಿದ್ದ. ಅವನು ಹಡಗುಕಟ್ಟೆಯಲ್ಲಾದ ಭೀಕರ ಸ್ಫೋಟವೊಂದರಲ್ಲಿ ಸತ್ತಿರಬಹುದು ಎಂದು ನಂಬಲಾಗಿದೆ. ಆಮೇಲೆ ಹೇಳುವವರು ಕೇಳುವವರು ಇಲ್ಲದ ಅನಾಥ ಸ್ಥಿತಿಯಲ್ಲಿ ಎರಗಿದ ಗರ್ಭಪಾತ. ಇವೆರಡೂ ಅವಳ ಮನಸ್ಸಿನ ಮೇಲೆ ಮಾಡಿರಬಹುದಾದ ಆಘಾತ ಬಹುಷಃ ಯಾರದೇ ಕಲ್ಪನೆಗೆ ನಿಲುಕದಷ್ಟು ಆಳ ಮತ್ತು ಘೋರವಾಗಿರಬೇಕು. ಶಾಲೆಯಲ್ಲಿ ಒಬ್ಬ ಪುಂಡ ಹುಡುಗನಾಗಿ, ಸಿಟ್ಟು ಬಂದರೆ ಏನೂ ಮಾಡಬಹುದಾದ ವಿವೇಚನೆಯೇ ಇಲ್ಲದ ಭಂಡ ಎನಿಸಿಕೊಂಡ, ಅವನಿಗೆ ನಿಜಕ್ಕೂ ಹೆದರುತ್ತಿದ್ದ ಮಂದಿ ಹಿಂದಿನಿಂದ ಹಿಪ್ಪೊ ಎಂದು ಕರೆಯುತ್ತಿದ್ದ ಹೋಶಿಗೋರಿಮಾರ್ ಎಂಬಾತ ಜಿಂಗೊಗೆ ಸಹಪಾಠಿ ಮತ್ತು ಇದೇ ಜಿಲ್ಲಾಮಾಯಿಯ ಸಾಕುಮಗ. ಸರಿಸುಮಾರು ಇಪ್ಪತ್ತು ವರ್ಷಗಳ ನಂತರ ಜಿಲ್ಲಾಮಾಯಿಯನ್ನು ಮುಖಾಮುಖಿಯಾದಾಗಲಷ್ಟೇ ಈ ವಿಚಾರ ಜಿಂಗೊಗೆ ತಿಳಿಯುತ್ತದೆ. ಇಂಥ ಮಕ್ಕಳಿಗೆ ಹೇಗೆ ಮುಂಬಯಿ ಫಲವತ್ತಾದ ಸ್ಥಳವಾಗಿ ಪರಿವರ್ತನೆಗೊಳ್ಳುತ್ತ ಬಂತು ಎಂಬುದನ್ನು ಅದರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನೆಲೆಗಳಲ್ಲೇ ಸೂಕ್ಷ್ಮವಾಗಿ ಚಿತ್ರಿಸುವ ಕಾದಂಬರಿ ಇದೆಂದುಕೊಂಡು ಸಹ ಇದನ್ನು ನಾವು ಗಮನಿಸುವುದು ಸಾಧ್ಯವಿದೆ. ಇಂಥ ಮಕ್ಕಳ ಮನಸ್ಸಿನ ಆಳದ ಕ್ರೌರ್ಯ, ಭಂಡತನ, ಸಂವೇದನೆಗಳೇ ಒಣಗಿ ಹೋದಂಥ ಹೃದಯಕ್ಕೆ ಮೂಲವೇನಿರಬಹುದು ಎಂಬ ಬಗ್ಗೆ ಕಾದಂಬರಿಯ ತೀರ ಕೊನೆಯ ಭಾಗದಲ್ಲಿ ಜಿಲ್ಲಾಮಾಯಿ ಕೊಡುವ ಒಂದು ಕಾರಣವಂತೂ ಎದೆ ಝಲ್ಲೆನ್ನಿಸುವಂತಿದೆ. Everything returns.

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಮತ್ತು ಅದರ ಬೆನ್ನಿಗೇ ಹುಟ್ಟಿಕೊಂಡ ಹಿಂದೂ ಮುಸ್ಲಿಂ ಗಲಭೆಯನ್ನು ರಾಜಕೀಯ ಮತ್ತು ಆರ್ಥಿಕ ಲಾಭಕ್ಕೆ ಬಳಸಿಕೊಂಡವರ ಕುತಂತ್ರ ಮತ್ತು ಕ್ರೌರ್ಯದ ಕತೆಯಾಗಿಯೂ ಈ ಕಾದಂಬರಿ ಬಿಚ್ಚಿಕೊಳ್ಳುತ್ತದೆ. ಇತ್ತೀಚೆಗಷ್ಟೇ ತೀರಿಕೊಂಡ ಶಿವಸೇನಾ ಮುಖಂಡ ಬಾಳಸಾಹೇಬ್ ಠಾಕ್ರೆಯನ್ನೇ ಹೋಲುವ ಪಾತ್ರವೊಂದು ಈ ಕಾದಂಬರಿಯಲ್ಲಿದ್ದು ಅದು ಈ ಕಾದಂಬರಿ ಪ್ರಕಟವಾದಾಗ(2006) ಮುಂಬಯಿಯಲ್ಲಿ ದೊಡ್ಡ ಗುಲ್ಲೆಬ್ಬಿಸುವ ಸಾಧ್ಯತೆಯಿತ್ತೆಂದು ಸ್ವತಃ ಸೈರಸ್ ಕೂಡ ನಿರೀಕ್ಷಿಸಿದಂತಿತ್ತು. ಹಿಂದೂಪರ ಸಂಘಟನೆಯಾಗಿ, ಮುಂಬಯಿಯಿಂದ ಎಲ್ಲಾ ‘ಹೊರಗಿನವರ’ನ್ನು ಹೊರದಬ್ಬುವ ಅಜೆಂಡಾ ಇಟ್ಟುಕೊಂಡ ಘೋರ್ಪಡೆ ಶಕ್ತಿ ಫೌಜ್ ಮುಸ್ಲಿಮರನ್ನು ಹತ್ತಿಕ್ಕಲು ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ಬಳಸಿಕೊಳ್ಳುತ್ತಿರುವಂತೆ ಮೇಲ್ನೋಟಕ್ಕೆ ಕಂಡರೂ ಅದರ ಒಳ ಉದ್ದೇಶಗಳು ಬರೇ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುವುದೋ, ಓಟ್ ಬ್ಯಾಂಕ್ ರಾಜಕಾರಣವೆಂದು ನಾವೇನನ್ನು ಕರೆಯುತ್ತೇವೋ ಅದಷ್ಟೇ ಆಗಿರುವುದಿಲ್ಲ. ಅದಕ್ಕೆ ತನ್ನ ಆರ್ಥಿಕಬಲವನ್ನು ಹೆಚ್ಚಿಸಿಕೊಳ್ಳಲು, ಮುಂಬಯಿಯಲ್ಲಿ ಸಾಧ್ಯವಾದಷ್ಟೂ ಭೂಮಿಯನ್ನು ಕಬಳಿಸುವುದು ಮುಖ್ಯವಾಗಿರುತ್ತದೆ. ಇಂಥ ಕುಟಿಲ ಕಾರಸ್ಥಾನಗಳಿಗೆ ಸುಲಭವಾಗಿ ಬಲಿಯಾಗುವುದು ಕೊಳೆಗೇರಿಗಳೇ. ಅಲ್ಲಿ ಮತೀಯ ಗಲಭೆಯನ್ನು ಸೃಷ್ಟಿಸುವುದು ಸುಲಭವಲ್ಲ. ಹೊಟ್ಟೆಪಾಡೇ ಬಗೆಹರಿಯದ ಮಂದಿಗೆ ಧರ್ಮದ ರಕ್ಷಣೆ ಅಷ್ಟೇನೂ ಆಕರ್ಷಕವಲ್ಲ. ಕೇವಲ ಮನುಷ್ಯರಾಗಿ ಬದುಕುತ್ತಿರುವ ಈ ಮಂದಿಗೆ ಕಷ್ಟಕ್ಕೆ ಒದಗುವವನು ಹಿಂದುವೋ ಮುಸ್ಲಿಮನೋ, ಕನ್ನಡಿಗನೋ ತಮಿಳನೋ ಎಂಬುದು ಮುಖ್ಯವಾಗುವುದಿಲ್ಲ. ಆದರೆ ಎರಡೂ ಪಂಗಡದ ಪಾತ್ರವನ್ನು ಇಂಥ ಸಂಘಟನೆಗಳೇ ನಿರ್ವಹಿಸಿ ಅಲ್ಲಿನ ನಿವಾಸಿಗಳ ನಿರ್ಮೂಲನ ಮಾಡುವುದು ಕಷ್ಟವೇನಲ್ಲ.

ವರ್ಗಭೇದವಿಲ್ಲದೆ ತೀರ ಕೆಳಸ್ತರದಲ್ಲಿ ಬದುಕುತ್ತಿರುವ ಮಂದಿಯಲ್ಲಿಯೂ ಸಹಜವಾಗಿದ್ದ ಪರಸ್ಪರ ಅನುಕಂಪ, ದಯೆ, ಮಾನವೀಯತೆಗಳು ಮಾಯವಾಗಿ ಸಂಘಟನೆಯ ಕ್ರೌರ್ಯ ಮತ್ತು ದಬ್ಬಾಳಿಕೆ ಮೈಗೂಡಿಸಿಕೊಟ್ಟ ದುರಹಂಕಾರ, ಧಾರ್ಷ್ಟ್ಯಗಳ ಪ್ರದರ್ಶನ, ಮನುಷ್ಯ ತನ್ನ ಸಹಜೀವಿಗೆ ತೋರುವ ಕ್ರೌರ್ಯ ರೂಢಿಯಾಗುತ್ತಿರುವುದು, ಅಂಥ ವರ್ತನೆಯೇ ಸಾಮಾನ್ಯ ಜನಜೀವನದ ಭಾಗವಾಗುತ್ತಿರುವಂತೆ ಕಾಣುವುದು ಮುಂಬಯಿ ತನ್ನ ಸಹಜವಾದ ತಾಯ್ತನದ ಗುಣವನ್ನು ಕಳೆದುಕೊಂಡು ಒರಟೊರಟಾಗಿ ಬದಲಾದ ಹಾದಿಯಾಗಿದೆ ಎಂಬುದನ್ನು ಕಾದಂಬರಿ ನೋವಿನಿಂದ ಚಿತ್ರಿಸುತ್ತದೆ. ಎಲ್ಲಾ ವಾಗ್ದಾನ, ಒಲವು, ನವಿರಾದ ನೆನಪುಗಳು, ಆಗಾಗ ಕಾಡುತ್ತಲೇ ಉಳಿದ ಅಪನಂಬಿಕೆ, ಹಾಗೆಂದು ಹೇಳಬಹುದಾದರೆ ಮಾಡಿದ ವಿಶ್ವಾಸದ್ರೋಹಗಳಾಚೆಗೂ ತಾನು ಕೊನೆಗೂ ಪ್ರೀತಿಸಿದ್ದು ಇವಳನ್ನೇ ಎಂದುಕೊಳ್ಳುವ ಜಿಂಗೊಗೆ ಕ್ರಿಸ್ತಿನಾ ತರವೇ ಮುಂಬಯಿ ಕೂಡಾ ಇನ್ನೊಬ್ಬಳು ಪ್ರೇಯಸಿ. ಅದೇ ಪ್ರೀತಿ ಮತ್ತು ವ್ಯಾಮೋಹ ಜಿಂಗೊಗೆ ಮುಂಬಯಿಯ ಕುರಿತೂ ಇದೆ. ಆದರೆ ಜಿಂಗೊ ಕಣ್ಣೆದುರೇ ಎಲ್ಲವೂ ಬದಲಾವಣೆಗೆ ತೆರೆದುಕೊಂಡಿದೆ. ಅದು ಅವನನ್ನು ಮತ್ತೆ ಗಾಢವಾದ ವಿಷಾದ, ನೋವು ಮತ್ತು ಒಬ್ಬಂಟಿತನದ ತೀರದಲ್ಲಿ ಕೈಬಿಟ್ಟಿದೆ. ಜೀವಂತ ಸುಟ್ಟು ಭಸ್ಮವಾದ ಅಸಂಖ್ಯ ಮಂದಿಯ ಮಾನವೀಯ ನೆನಪುಗಳ ಕರಕಲು ನೆನಪುಗಳಲ್ಲಿ ಕಾದಂಬರಿ ಮುಗಿದಾಗ ನಿಜಕ್ಕೂ ನೆನಪಾಗಿದ್ದು ವ್ಯಾಸರಾಯ ಬಲ್ಲಾಳರ ಮುಖ. ಅವರು ಈ ಗಲಭೆಯ ನಂತರ ಮುಂಬಯಿ ಬಿಟ್ಟುಬಂದು ಬೆಂಗಳೂರಿನಲ್ಲಿ ನೆಲೆಸಿದ್ದರು. ಮುಂಬಯಿಯ ಗಲಭೆಯನ್ನು ನೆನಪಿಸಿದಾಗಲೆಲ್ಲ ಮುಗ್ಧಮಗುವಿನಂತೆ ಗಳಗಳ ಅಳುತ್ತಿದ್ದರು. ಹೇಗಿತ್ತು ಮುಂಬಯಿಯ ಬದುಕು, ಕಣ್ಣೆದುರೇ ಹೇಗಾಗಿ ಹೋಯಿತು ಎಂದು ಹಲಬುತ್ತಿದ್ದರು. ಹಲವರು ನಮಗೆ ಮುಂಬಯಿಯನ್ನು ಕಟ್ಟಿಕೊಟ್ಟಿದ್ದಾರೆ. ಆದರೆ ಈ ಮಗ್ಗುಲನ್ನು ಕೊಟ್ಟವರು ಅಪರೂಪ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ