Tuesday, October 8, 2013

ಜುಂಪಾ ಲಾಹಿರಿಯ ‘ದ ಲೋಲ್ಯಾಂಡ್‌’

ಜುಂಪಾ ಲಾಹಿರಿಯ ಹೊಸ ಕಾದಂಬರಿ `ದ ಲೋಲ್ಯಾಂಡ್' ಕೂಡ ಇವರ ಹಿಂದಿನ ಕತೆ, ಕಾದಂಬರಿಗಳಂತೆಯೇ ಸಾಂಸಾರಿಕ ಬದುಕಿನ ಚಿತ್ರಣ, ಮನುಷ್ಯ ಸಂಬಂಧಗಳ ಜಂಜಾಟ ಮತ್ತು ಏಕಾಂಗಿತನದ ನೋವನ್ನು ಗಾಢವಾಗಿ ಕಟ್ಟಿಕೊಡುತ್ತದೆ.
ಭಾವುಕ ಓದುಗರ ಮನಸ್ಸು ಹೃದಯ ಕಲಕಿ ಬಿಡುವಷ್ಟು ಸಶಕ್ತವಾದ ಭಾಷೆ ಮತ್ತು ಸನ್ನಿವೇಶಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಜುಂಪಾಲಾಹಿರಿಯ ಬರವಣಿಗೆಯ ಶಕ್ತಿ ಮತ್ತು ಮಿತಿ ಎರಡೂ ಇದೇ ಎನಿಸುವಷ್ಟು ಇವರ The Namesake (ಕಾದಂಬರಿ), Interpreter of Maladies (ಕಥಾಸಂಕಲನ) ಮತ್ತು Unaccustomed Earth (ಕಥಾಸಂಕಲನ) ಕೃತಿಗಳ ಸಾಲಿನಲ್ಲೇ ಈ The Lowland ಕಾದಂಬರಿಯೂ ಇದೆ.

ಈ ಕಾದಂಬರಿ ನಿಶ್ಚಯವಾಗಿಯೂ ಸಾಕಷ್ಟು ಕಷ್ಟ, ಶ್ರಮ ಮತ್ತು ಅಧ್ಯಯನದಿಂದ ಮೂಡಿಬಂದಿದೆ ಮಾತ್ರವಲ್ಲ ಅವರ ಇದುವರೆಗಿನ ಎಲ್ಲಾ ಕೃತಿಗಳಿಗಿಂತ ಹೆಚ್ಚು ಶ್ರೇಷ್ಠವಾದ ಕೃತಿ ಕೂಡಾ ಆಗಿದೆ. ಈ ಕಾದಂಬರಿ ಈ ಬಾರಿಯ(2013) ಮ್ಯಾನ್ ಬುಕರ್ ಪ್ರಶಸ್ತಿಯ ಅರ್ಹತಾಪಟ್ಟಿಯನ್ನೂ ಸೇರಿದೆ.

ಕಾದಂಬರಿಯ ಕೆಲವು ಗಮನಾರ್ಹ ಅಂಶಗಳ ಒಂದು ಟಿಪ್ಪಣಿ ಇಲ್ಲಿದೆ.

ಮೊದಲಿಗೆ, ಇದರ ಕ್ರಾಫ್ಟ್. ಇದನ್ನು ನಿರೂಪಿಸಿದ ರೀತಿ, ಕತೆಯನ್ನು ಹೆಣೆದ ಬಗೆ, ಅದರ ವಿವರಗಳ ಸಾಂದ್ರತೆ, ಒಟ್ಟಾರೆ ಕಾದಂಬರಿಯ ವಿನ್ಯಾಸ ಅಥವಾ ತಂತ್ರ ತುಂಬ ಚೆನ್ನಾಗಿದೆ. ಅದ್ಭುತ ಎಂಬ ಸವಕಲು ಶಬ್ದವನ್ನು ಬಳಸದೇ ಹೇಳುವುದಾದರೆ ಜುಂಪಾ ಲಾಹಿರಿ ತಮ್ಮ ಬರವಣಿಗೆಯ ಅನುಭವ, ಕೌಶಲ ಮತ್ತು ಹಂದರದ ಯೋಜನೆಯ ಶಕ್ತಿಯನ್ನು ಪರೀಕ್ಷೆಗೊಡ್ಡಿ ಇದನ್ನು ಸಿದ್ಧಪಡಿಸಿದ್ದಾರೆನ್ನಿಸುವುದರಲ್ಲಿ ಅನುಮಾನವಿಲ್ಲ.

ಈಗಾಗಲೇ ಕೋಲ್ಕತಾ ನಗರವನ್ನು ಓದುಗರ ಅನುಭವಕ್ಕಿಳಿಸಬಲ್ಲಷ್ಟು ಸಶಕ್ತ ವಿವರಗಳಲ್ಲಿ ಅದನ್ನು ಕಟ್ಟಿಕೊಟ್ಟ ಅಮಿತಾವ್ ಘೋಷ್ ಜೊತೆ ಹೋಲಿಸಬಹುದಾದಷ್ಟು ಸಾಂದ್ರ ವಿವರಗಳಲ್ಲಿ ಈ ಕಾದಂಬರಿ ಜೀವ ತಳೆದಿದೆ. ಇಡೀ ಕಾದಂಬರಿಯ ಶೇಕಡಾ 90ರಷ್ಟು ಭಾಗ ನಡೆಯುವುದು ಭಾರತದಿಂದ ಹೊರಗೆ, ಅಮೆರಿಕೆಯ ಒಂದು ದ್ವೀಪದಲ್ಲಿ. ಆದರೆ ಅದರ ಕೇಂದ್ರ ಕೊಲ್ಕತಾದ ಲೋಲ್ಯಾಂಡ್.

ಕೆಲವೊಂದು ನಿಟ್ಟಿನ ಸಾಮ್ಯತೆ ಕೂಡ ಈ ಲೋಲ್ಯಾಂಡ್ ಮತ್ತು ರೋಡ್ಸ್ ಐಲ್ಯಾಂಡ್ ನಡುವೆ ಇರುವುದು ಇನ್ನೊಂದು ಅಂಶ. ಹಾಗೆಯೇ ಇಲ್ಲಿ ಕುಟುಂಬದ ಒಳಗೆ ಮತ್ತು ಹೊರಗೆ ಸಂಸಾರ, ಮದುವೆ, ಮಗು ಮುಂತಾದುವುಗಳ ವಿಚಾರದಲ್ಲಿ ಸಿಗುವ ಪರಿಪ್ರೇಕ್ಷ್ಯಗಳು ಮುಖ್ಯವಾಗುತ್ತವೆ. ಕಥನದಲ್ಲೂ ಕನಸು, ಕಲ್ಪನೆ, ಭ್ರಮೆ ಮತ್ತು ನೆನಪುಗಳನ್ನು ಬಳಸಿಕೊಂಡಿರುವ ಬಗೆ ಗಮನಸೆಳೆಯುತ್ತದೆ.

ಎರಡನೆಯದಾಗಿ, ಇಲ್ಲಿನ ದಟ್ಟವಾದ ಭಾವನಾತ್ಮಕ ಸಂವೇದನೆಗಳ ಚಿತ್ರಣದಲ್ಲಿರುವ ಒಂದು ಅಥೆಂಟಿಸಿಟಿ. ಸ್ವತಃ ಅನುಭವಿಸಿದ್ದಲ್ಲದೇ ನಮ್ಮದಾಗಲಾರದ ಸೂಕ್ಷ್ಮ ಸಂವೇದನೆಗಳನ್ನು ಬರವಣಿಗೆಗೆ ಇಳಿಸುವುದು ಮತ್ತು ಅದನ್ನು ಓದುವ ಓದುಗನಿಗೂ ಓದುತ್ತಿರುವಾಗಲೇ ನಾಟುವಂತೆ, ಅವನನ್ನು ಕಾಡಬಲ್ಲಷ್ಟು ತೀವ್ರವಾಗಿ ಕಟ್ಟಿಕೊಡುವುದು ತುಂಬ ತ್ರಾಸದ ಕೆಲಸ. ಇದನ್ನು ಅತ್ಯಂತ ಸಂಯಮದಿಂದ ಜುಂಪಾ ಲಾಹಿರಿ ನಿರ್ವಹಿಸುತ್ತಾರೆ. ಇದೊಂದು ಬಗೆಯಲ್ಲಿ ಜೀವವನ್ನೇ ಹಿಂಜಿದಂತೆ. ಕವಿ ಎಂ.ಗೋಪಾಲಕೃಷ್ಣ ಅಡಿಗರು ನಮ್ಮ ಕತೆಗಾರ ಕೆ.ಸದಾಶಿವರ ಕುರಿತು ಬರೆದ 'ನಮ್ಮ ಸದಾಶಿವ' ಕವಿತೆಯ ಸಾಲುಗಳು ನೆನಪಾಗುತ್ತವೆ.
ಕಥೆ ಬರೆದನಂತೆ - ಕತೆಯೇನು ಮಣ್ಣು - ತನ್ನೆದೆಯ
ಖಂಡ ಖಂಡ ಕತ್ತರಿಸಿ ಕಿತ್ತು ಹಿಡಿದು ಹಿಂಡಿ ಹಿಂಡಿ
ಭಟ್ಟಿಯಿಳಿಸಿದ ತೊಟ್ಟು ತೊಟ್ಟು;
ನಾಗಾಲೋಟದಲ್ಲು ಅಲ್ಲಲ್ಲಿ ತಡೆತಡೆದು ಕೆತ್ತಿರುವ ತಳದ ಗುಟ್ಟು.


ಮನುಷ್ಯ ಸಂಬಂಧಗಳು ನಿಂತ, ಸಡಿಲಗೊಳ್ಳುವ, ಸ್ಫೋಟಗೊಂಡು ಬಿರುಕು ಬಿಡುವ ಪ್ರಕ್ರಿಯೆಗಳನ್ನು ಗಮನಿಸಿ. ನಮ್ಮ ಅಸಮಾಧಾನ, ಅಸಹನೆ, ಸಿಡುಕು, ರೋಷ, ಕ್ಷಣದ ಪಿತ್ಥ ಎಲ್ಲವೂ ತನ್ನ ಮೂಲಭೂತ ಲಕ್ಷಣಗಳನ್ನು ಬಿಟ್ಟುಕೊಡುವುದಿಲ್ಲ. ಆಗಾಗ ಅಷ್ಟಿಷ್ಟು ಹೆಚ್ಚು-ಕಡಿಮೆಯಾದರೂ ಸ್ವ-ಭಾವವೆಂಬುದು ಬಿಟ್ಟು ಹೋಗುವುದಿಲ್ಲ. ಆದರೆ ನಿಶ್ಚಯವೂ, ಅನಿರೀಕ್ಷಿತವೂ, ಅಂತಿಮವೂ ಆದ ಸಾವು ಒಂದಿದೆಯಲ್ಲ, ಅದು ಕಾಯುತ್ತಿರುವುದು ಗಮನಕ್ಕೆ ಬಂದಾಗ ಎಲ್ಲವೂ ಅದರ ಹಿನ್ನೆಲೆಯಲ್ಲಿ ಭಿನ್ನವಾಗಿ ಕಾಣಿಸತೊಡಗುತ್ತದೆ.

ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿಕೊಳ್ಳುವವರಿಗೆ ಖಾಯಂ ಆಗಬಹುದಾದ ಅಗಲುವಿಕೆ ಕೂಡ ಸಾಕಾಗುತ್ತದೆ. ಮನುಷ್ಯನಿಗೆ ಪ್ರೀತಿ ಎಂಬುದು, ಸ್ವೀಕಾರ ಎಂಬುದು, ನೀನು ಒಬ್ಬಂಟಿಯಲ್ಲ ಎನ್ನಬಲ್ಲ ಒಂದು ಜೀವದ ಜೊತೆ ನೀಡುವ ಭರವಸೆಯೆಂಬುದು ಎಷ್ಟು ಮುಖ್ಯ ಎಂಬ ಅರಿವು ಕೊಡುವ ಪ್ರಜ್ಞೆ ಮತ್ತು ಅದರಿಂದ ಹುಟ್ಟುವ ಸಂವೇದನೆ ಹೇಗಿರುತ್ತದೆ ಎಂಬುದನ್ನು ಜುಂಪಾ ಇಲ್ಲಿ ಮತ್ತೆ ಮತ್ತೆ, ಮೇಲಿಂದ ಮೇಲೆ, ವಿಭಿನ್ನ ಸಂದರ್ಭಗಳಲ್ಲಿ, ವ್ಯಕ್ತಿಗಳ ನಡುವೆ ಮತ್ತು ಸಂಬಂಧಗಳ ಮಧ್ಯೆ ಚಿತ್ರಿಸುತ್ತ ಹೋಗುತ್ತಾರೆ.
ತನಗೆ ಯಾರೂ ಇಲ್ಲ, ತನಗೆ ಏನೂ ಬೇಡ, ತಾನು ಯಾರಿಗೂ ಬೇಡ, ತಾನಿಲ್ಲ ಎಂದರೆ ಏನೂ ವ್ಯತ್ಯಾಸವಾಗುವುದಿಲ್ಲ ಎಂಬ ನೋವು ಹೆಪ್ಪುಗಟ್ಟಿ ಸತ್ತು ಬಿಡಬೇಕು ಎನಿಸುವ ಒಂದು ವಿಕೃತ ಮನಸ್ಥಿತಿಯಲ್ಲಿ ಸಾಯುವುದಕ್ಕೂ ಒಲ್ಲದ ಒಂದು ಮನಸ್ಥೈರ್ಯ, ವಿವೇಕ ಮತ್ತು ನಿರ್ಲಿಪ್ತಿಯುಳ್ಳ ಮನುಷ್ಯನನ್ನು ಕಾಡುವ ಪ್ರಶ್ನೆ; ಮನುಷ್ಯನನ್ನು ಕೊನೆಗೂ ಈ ಬದುಕಿಗೆ ಅಂಟಿಸಿಡುವ ಚೈತನ್ಯ ಯಾವುದು ಎಂಬುದೇ. ಅದು ಪ್ರೀತಿ, ಅದು ಹೆಣ್ಣು, ಅದು ಗರ್ಭಸುಖ. ಕಾದಂಬರಿಯ ಉದ್ದಕ್ಕೂ ನಾವು ಮುಖಾಮುಖಿಯಾಗುವುದು ಇದನ್ನು.

ಮೂರನೆಯದಾಗಿ, ಜುಂಪಾ ಲಾಹಿರಿಯ ಬರವಣಿಗೆಯ ಬಗ್ಗೆ ನನ್ನದೊಂದು ತಕರಾರಿತ್ತು. ಗುಡ್‌ರೀಡಿಂಗ್.ಕಾಮ್‌ನ ಜೆಸ್ಸಿಕಾ ಎಂಬಾಕೆ ತಾವು ಜುಂಪಾ ಲಾಹಿರಿಯವರ ಸಂದರ್ಶನ ಮಾಡಲಿದ್ದೇವೆ, ಆ ಸಂದರ್ಭ ಕೇಳಲು ಅರ್ಹವೆನಿಸುವ ಪ್ರಶ್ನೆಗಳೇನಾದರೂ ಇದ್ದಲ್ಲಿ ಓದುಗರು ತಮಗೆ ಕಳುಹಿಸಬಹುದು ಎಂದು ಕೇಳಿಕೊಂಡಿದ್ದರು. ಆಗ ನಾನು ಕಳಿಸಿದ್ದ ಪ್ರಶ್ನೆ ಈ ತಕರಾರಿನ ಸ್ವರೂಪವನ್ನು ಕಾಣಿಸುವುದರಿಂದ ಅದನ್ನೇ ಇಲ್ಲಿ ಕೊಟ್ಟಿದ್ದೇನೆ.

ಜುಂಪಾ ಲಾಹಿರಿಯವರನ್ನು ಭಾರತದ ಇತರ ಇಂಗ್ಲೀಷ್ ಬರಹಗಾರರೊಂದಿಗೆ ಗಮನಿಸುವಾಗ ನಮಗೆ ಎದ್ದು ಕಾಣುವ ಒಂದು ಅಂಶವೆಂದರೆ, ಜುಂಪಾ ಅವರ ಪಾತ್ರಗಳು ಕೊಂಚ ಹೆಚ್ಚು ಭಾವುಕವಾದ, ಸೂಕ್ಷ್ಮಸಂವೇದಿಯಾದ ಮತ್ತು ಅಂತರಂಗವನ್ನೇ ಹೆಚ್ಚು ನೆಚ್ಚಿಕೊಂಡ ಪಾತ್ರಗಳು ಎಂಬುದು. ಭಾರತದಿಂದ ಹೊರಗೆ ನೆಲೆ ಕಂಡುಕೊಂಡ ಭಾರತೀಯ ಇಂಗ್ಲೀಷ್ ಬರಹಗಾರರ ಮಟ್ಟಿಗೆ ಇದು ಕೊಂಚ ವೈಶಿಷ್ಟ್ಯಪೂರ್ಣವಾದದ್ದು ಎನಿಸುತ್ತದೆ. ಭಾರತದ ಕಥನಕ್ರಿಯೆ ಯಾವತ್ತೂ ಸಾಂಸಾರಿಕ ಚೌಕಟ್ಟನ್ನೇ ನೇರವಾಗಿ ಅಥವಾ ಪರೋಕ್ಷವಾಗಿ, ಅವಲಂಬಿಸಿದ್ದು ಎಂಬ ಸಾರ್ವತ್ರೀಕರಣದಾಚೆಗೂ ಇದು ನಿಜ.

ಯಾಕೆಂದರೆ ನಾನು ಈ ಸಾರ್ವತ್ರೀಕರಣವನ್ನೇ ಜುಂಪಾ ಅವರ ಕಥನಕ್ರಿಯೆಗೂ ಅನ್ವಯಿಸುತ್ತಿರುವುದಲ್ಲ ಇಲ್ಲಿ. ನಾನು ಕೊಂಚ ಭಿನ್ನವಾದ ಲಕ್ಷಣದ ಕುರಿತು ಹೇಳುತ್ತಿದ್ದೇನೆ. ಇತರ ಭಾರತೀಯ ಇಂಗ್ಲೀಷ್ ಬರಹಗಾರರು ತಮ್ಮ ತಮ್ಮ ಪ್ರಕಾಶಕರ ಅಥವಾ ಸಾಹಿತ್ಯಿಕ ದಲ್ಲಾಳಿಗಳ ಮರ್ಜಿಗೆ ಅನುಗುಣವಾಗಿಯೋ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅರ್ಥಪೂರ್ಣವಾಗುವ ಹುಮ್ಮಸ್ಸಿನಲ್ಲಿಯೋ ಹೇಗಾದರೂ ಮಾಡಿ ತಮ್ಮ ಕೃತಿಯನ್ನು ಹೆಚ್ಚು ಸಮಾಜಮುಖಿ, ಜಾಗತಿಕವಾಗಿ ರಿಲೆವಂಟ್ ಎನಿಸುವಂತೆ ಕಟ್ಟಲು ಯತ್ನಿಸುತ್ತಿರುವಾಗಲೇ, ಜುಂಪಾ ಅವರು ಮೂಲಭೂತವಾದ ಮಾನವೀಯ ಸೆಲೆಗಳಲ್ಲಿ, ಮನುಷ್ಯ ಸಂಬಂಧಗಳಲ್ಲಿ, ವ್ಯಕ್ತಿಗತ ನೆಲೆಯ ಅಂತರಂಗದ ಅಗತ್ಯ ಮತ್ತು ನಿರೀಕ್ಷೆಗಳನ್ನು ಪೋಷಿಸುತ್ತ ತಮ್ಮ ಪಾತ್ರಗಳನ್ನು ಚಿತ್ರಿಸುವಲ್ಲಿ ತೃಪ್ತರಾಗಿರುವುದು ಕಂಡುಬರುತ್ತದೆ.


ಪೂರ್ಣಚಂದ್ರ ತೇಜಸ್ವಿಯವರ ಪ್ರಸಿದ್ಧ ಕರ್ವಾಲೋ ಕಾದಂಬರಿಗೆ ಸುದೀರ್ಘವಾದ ಒಂದು ಹಿನ್ನುಡಿ ಬರೆಯುತ್ತ ಖ್ಯಾತ ವಿಮರ್ಶಕ ಪ್ರೊ.ಜಿ.ಎಚ್.ನಾಯಕ ಅವರು 'ಒಂದು ಕೃತಿ ಸಾಮಾಜಿಕ ಅರ್ಥಪೂರ್ಣತೆ ಮತ್ತು ತಾತ್ವಿಕ ಆಯಾಮ ಎರಡನ್ನೂ ಹೊಂದಿರದೇ ಇದ್ದಲ್ಲಿ ಅದು ಎಷ್ಟೇ ಕಲಾತ್ಮಕವಾಗಿದ್ದರೂ ಶ್ರೇಷ್ಠ ಕಲಾಕೃತಿ ಎನ್ನಿಸಿಕೊಳ್ಳಲಾರದು' ಎಂಬರ್ಥದ ಮಾತುಗಳನ್ನು ಬರೆದಿದ್ದರು. ಹೀಗೆ ಹೇಳುವಾಗ ನಾನು ಯಾವುದೇ ಸಿಲೆಬಸ್ ಅಥವಾ ಸಿದ್ಧಾಂತಕ್ಕನುಗುಣವಾಗಿ ಒಂದು ಸಾಹಿತ್ಯ ಕೃತಿ ರೂಪುಗೊಳ್ಳಬೇಕೆಂದು ವಿಧಿಸುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಲೇ ಬೇಕು. ಇವತ್ತು ಕನ್ನಡದಲ್ಲೇ ಸೃಷ್ಠಿಯಾಗುತ್ತಿರುವ ಸಾಹಿತ್ಯ ಹೆಚ್ಚು ಮುಕ್ತವಾದ, ವಾಸ್ತವವಾದಿಯಾದ ಮತ್ತು ಅಜೆಂಡಾಗಳಿಂದ ಕಳಚಿಕೊಂಡ ಸಾಹಿತ್ಯ ಎನ್ನುವುದನ್ನು ಮರೆಯುವಂತಿಲ್ಲ. ಆದಾಗ್ಯೂ ಪ್ರಶ್ನೆಯಿದೆ.

ಜುಂಪಾ ಲಾಹಿರಿಯವರು ಸ್ವತಃ ತಮ್ಮನ್ನು ತಮ್ಮೊಂದಿಗಿನ ಇತರ ಸಹ ಬರಹಗಾರರ ಕಾಳಜಿ ಮತ್ತು ಧ್ಯೇಯೋದ್ದೇಶಗಳೊಂದಿಗೆ ಹೇಗೆ ಗುರುತಿಸಿಕೊಳ್ಳುತ್ತಾರೆ?

ಈ ಕಾದಂಬರಿಯ ಬಗ್ಗೆ ಮಾತನಾಡುತ್ತ ಅನೇಕರು ಇದೊಂದು ರಾಜಕೀಯ ಕಾದಂಬರಿ, ನಕ್ಸಲೈಟ್ಸ್ ಮೂವ್‌ಮೆಂಟ್ ಕುರಿತ ಕಾದಂಬರಿ ಎಂದೆಲ್ಲ ಹೇಳಿದ್ದಾರೆ. ಈ ಕಾದಂಬರಿಗೆ ಆ ಬಗೆಯ ಒಂದು ಸಾಮಾಜಿಕ-ತಾತ್ವಿಕ ನೆಲೆಗಟ್ಟಿದೆ ಎನ್ನಲಾಗುತ್ತಿದೆ.
ಇದೆ ಎಂದೇ ಭಾವಿಸೋಣ. ಆದರೆ ಎದ್ದು ಕಾಣುವುದು ಸಾಂಸಾರಿಕ ಚೌಕಟ್ಟಿನೊಳಗಿನ, ಮನುಷ್ಯ ಸಂಬಂಧಗಳ ನಡುವಿನ ಸಂವೇದನೆಗಳು, ಸೂಕ್ಷ್ಮಗಳು ಮತ್ತು ಸಂಘರ್ಷಗಳು ಹೇಗೆ ಯಾವತ್ತೂ ಆ ಕುಟುಂಬದ ಯಾವೊಬ್ಬ ವ್ಯಕ್ತಿಯ ವೈಯಕ್ತಿಕ ನೆಲೆಯ ವಿದ್ಯಮಾನವಷ್ಟೇ ಆಗಿ ಉಳಿದು ಬಿಡುವುದಿಲ್ಲ, ಅದು ವ್ಯಕ್ತಿಯ ಅತ್ಯಂತ ಸನಿಹದ ಅನೇಕರು ಸೇರಿದಂಥ ಒಂದು ವಲಯವನ್ನು ಬೇರೆ ಬೇರೆ ಬಗೆಯಲ್ಲಿ ಕಾಡುತ್ತ, ಕಲಕುತ್ತ, ತಲ್ಲಣಗಳನ್ನೆಬ್ಬಿಸುತ್ತ ಹೋಗುತ್ತದೆ ಎಂಬುದೇ. ಇದನ್ನು ಕೂಡ ಜುಂಪಾ ಲಾಹಿರಿ ಕೊಂಚ ಅತಿರೇಕಕ್ಕೆ ಒಯ್ದು ಕಟ್ಟಿದ ಒಂದು ಚಿತ್ರಣವೇ ಇಲ್ಲಿದೆ.

ಯಾಕೆ ಅತಿರೇಕ ಎಂಬುದನ್ನು ವಿವರಿಸಬೇಕು. ಒಬ್ಬ ವ್ಯಕ್ತಿಯ ಸಾವು ಹಲವು ವ್ಯಕ್ತಿಗಳನ್ನು ಜೀವಂತ ನರಕಕ್ಕೆ ತಳ್ಳುತ್ತ, ಅವರ ಜೀವಸೆಲೆಯ ಚೈತನ್ಯವನ್ನೇ ಹೀರಿ ಬರಡಾಗಿಸುತ್ತ, ಬದುಕು-ಭವಿಷ್ಯವನ್ನೆಲ್ಲ ಕಬಳಿಸಬೇಕಾದ ಸಂದರ್ಭ - otherwise - ಇಲ್ಲ. ಬದುಕಿಗೆ ತನ್ನದೇ ಆದ ಒಂದು ಚಲನಶೀಲ 'ಗತಿ' ಇದೆ. ಅದು ತನ್ನ 'ರಿದಂ' ಅನ್ನು ಕಾಯ್ದುಕೊಳ್ಳಲು ಅಗತ್ಯವಾದ ತನ್ನದೇ ಸಾಯತಗಳನ್ನು ಕೂಡ ಹೊಂದಿದೆ. ಇಲ್ಲದಿದ್ದಲ್ಲಿ ಬದುಕು ಯಾವತ್ತೂ ತಾನು ಕಂಡ ಸಾವುಗಳಿಂದ ಮುಕ್ತಗೊಂಡು ಮುಂದಕ್ಕೆ ಹರಿಯುತ್ತಿರಲಿಲ್ಲ. ಅದು ಅಲ್ಲೇ ನಿಂತ ನೀರಾಗಿ ಕೊಳೆತು ನಾರುವುದೇ (ಲೋಲ್ಯಾಂಡಿನಲ್ಲಿ ಎರಡು ಹೊಂಡಗಳಿವೆ. ಮಳೆಗಾಲದಲ್ಲಿ ಇಡೀ ಲೋಲ್ಯಾಂಡಿನ ತುಂಬ ನೀರು ನಿಂತಾಗ ಇವು ಒಂದೇ ಅಗಿಬಿಡುತ್ತವೆ.

ವೈಶಾಖದಲ್ಲಿ ಲೋಲ್ಯಾಂಡ್ ಒಣಗಿಕೊಂಡು ಈ ಎರಡು ಹೊಂಡಗಳಲ್ಲಿ ಮಾತ್ರವೇ ನೀರು ನಿಂತಿರುವ ಚಿತ್ರ ಕೂಡ, ಇಬ್ಬರು ಸಹೋದರರ ಕತೆ ಹೇಳುವ ಈ ಕಾದಂಬರಿಯಲ್ಲೊಂದು ರೂಪಕದಂತಿದೆ.) ಅದರ ಕರ್ಮ ಎನಿಸಿಕೊಳ್ಳುತ್ತಿತ್ತು. ಆದರೆ ಹಾಗಾಗುವುದಿಲ್ಲ. ಅದು ಪ್ರಕೃತಿಯಲ್ಲ. ಅದು ಸಹಜವಲ್ಲ. ಅದು ಸ್ವಾಭಾವಿಕವೂ ಅಲ್ಲ. ಅಪವಾದದಂಥ ಪಾತ್ರಗಳನ್ನು ಆಯ್ದುಕೊಂಡು ಜುಂಪಾ ಲಾಹಿರಿ ತಮ್ಮ ಕಾದಂಬರಿಯನ್ನು ಹೆಣೆದಿದ್ದಾರೆ.

ಹಾಗೆ ಮಾಡುವುದರಿಂದ (ಅಂದರೆ, ಅಂಥ ಅತಿರೇಕಕ್ಕೊಯ್ದೇ ನಿಕಷಕ್ಕೊಡ್ಡುವ ಸವಾಲನ್ನೆತ್ತಿಕೊಂಡು), ಅವರು ರಾಜಕೀಯ ಕಾದಂಬರಿಯೊಂದನ್ನು ಕಟ್ಟಿಕೊಡುವಲ್ಲಿ, ನಕ್ಸಲೈಟ್ಸ್ ಮೂವ್‌ಮೆಂಟ್ ಬಗ್ಗೆ ಹೇಳುವಂಥ ಒಂದು ಕಾದಂಬರಿಯನ್ನು ನಮಗೆ ಕೊಡುವಲ್ಲಿ ಅಥವಾ ಮನುಷ್ಯ ಸಂಬಂಧಗಳ ವ್ಯಕ್ತಿಗತ ಭಾವನಾತ್ಮಕ ಸಂವೇದನೆಗಳಾಚೆ ಚಾಚಿಕೊಂಡ ಸಾಮಾಜಿಕ-ತಾತ್ವಿಕ ಆಯಾಮವುಳ್ಳ ಕೃತಿಯೊಂದನ್ನು ರಚಿಸುವಲ್ಲಿ ಯಶಸ್ವಿಯಾದರೇ ಎಂಬ ಪ್ರಶ್ನೆಯನ್ನು ಸದ್ಯಕ್ಕೆ ಹಾಗೆಯೇ ಬಿಟ್ಟು ಬೇರೆ ಸಂಗತಿಯತ್ತ ಗಮನ ಹರಿಸಬಹುದು.

ಕಾದಂಬರಿಯ 259ನೆಯ ಪುಟದಲ್ಲಿ ಬರುವ ಉಲ್ಲೇಖ ಹೀಗಿದೆ:

Years ago, Dr Grant had helped her to put what she felt into words. She'd told Bela that the feelings would ebb but never fully go away. It would form part of her landscape, wherever she went. She said that her mother's absence would always be present in her thoughts. She told Bela that there would never be an answer for why she'd gone.
Dr Grant was right, the feeling no longer swallow her. Bela lives on its periphery, she takes it in at a distance. The way her grandmother, sitting on a terrace in Tollygunge, used to spend her days overlooking a lowland, a pair of ponds.

(ಇಲ್ಲಿನ absence would always present ಮತ್ತು a pair of ponds ಶಬ್ದಗಳಿಗೆ ಕಾದಂಬರಿಯ ಚೌಕಟ್ಟಿನಲ್ಲಿರುವ ಕಾವ್ಯಾತ್ಮಕ ಆಯಾಮವನ್ನು ಇಲ್ಲಿ ಚರ್ಚಿಸುವುದಿಲ್ಲ; ಕತೆಯನ್ನು ಹೇಳದೆ ಅದು ಅರ್ಥವಾಗುವಂತಿಲ್ಲ ಎಂಬ ಕಾರಣಕ್ಕೆ.)

ಈ ಮಾತುಗಳನ್ನು ಯಾರ ಪರವಾಗಿ ನಿರೂಪಿಸಲಾಗಿದೆಯೋ, ಆ ವ್ಯಕ್ತಿ, ಬೇಲಾ ತನ್ನ ತಾಯಿ ಮತ್ತು ಅಜ್ಜಿ ಇಬ್ಬರ ಕುರಿತೂ ತಿಳಿದುಕೊಂಡಿರುವುದು ಅರ್ಧಂಬರ್ಧ. ಅದು ಹಾಗಿರಲಿ, ಸ್ವತಃ ತನ್ನ ಬಗ್ಗೆಯೇ ಆಕೆಗೆ ಇಂಥದ್ದೇ ತಪ್ಪು ತಿಳುವಳಿಕೆ ಇರುವಂತಿದೆ. ಕಳೆದು ಕೊಂಡಿದ್ದರ ಕುರಿತ ಭಾವನಾತ್ಮಕ ತೊಳಲಾಟ ಕ್ರಮೇಣ ತನ್ನ ತೀವ್ರತೆಯನ್ನು ಕಳೆದುಕೊಳ್ಳುತ್ತದೆ, ಆದಾಗ್ಯೂ ಅದು ಪೂರ್ತಿಯಾಗಿ ಅಳಿಸಿ ಹೋಗಿರುವುದಿಲ್ಲ. ಮನಸ್ಸಿನ ಪಾತಳಿಯ ಮೇಲೆ ಅದು ಅಚ್ಚೊತ್ತಿ ನಿಂತು ವ್ಯಕ್ತಿತ್ವದ ಭಾಗವೇ ಆಗಿಬಿಡುತ್ತದೆ ಎನ್ನುವ ಮನಶ್ಶಾಸ್ತ್ರಜ್ಞೆಯ ಮಾತು ಒಂದು ಸೀಮಿತ ನೆಲೆಯ ಸತ್ಯ.

ಬದುಕಿನಲ್ಲಿ ನಮಗೆ ಬಿದ್ದ ಪೆಟ್ಟುಗಳು, ಆದ ಅವಮಾನ, ಎದುರಿಸಿದ ಸೋಲು, ಆತ್ಮೀಯರ ಸಾವು, ಅನುಭವಿಸಿದ ಕಷ್ಟನಷ್ಟಗಳು ಎಲ್ಲವೂ ನಮ್ಮ ಮನಸ್ಸಿನ ಮತ್ತು ವ್ಯಕ್ತಿತ್ವದ ಮೇಲೆ ಮಾಡುವ ಪರಿಣಾಮಗಳು ಸತ್ಯ. ಆದರೆ ಅಷ್ಟೇ ಸತ್ಯವಾದ ಇನ್ನೊಂದೆಂದರೆ, ನಮ್ಮ ಮನಸ್ಸು ಮಾಗಿದಂತೆಲ್ಲ ಅದು ಮತ್ತೆ ಮತ್ತೆ ಕಹಿ ಘಟನೆಗಳು ಊರಿದಲ್ಲೆಲ್ಲ ಮೂಡಿದ ಹೆಜ್ಜೆ ಗುರುತುಗಳನ್ನು ಉಜ್ಜಿಉಜ್ಜಿ ಅಳಿಸಿ, ಮನಸ್ಸನ್ನು ಮತ್ತೆ ಹೊಚ್ಚ ಹೊಸ ಕನ್ನಡಿಯಂತೆ ಬೆಳಗಿಸಿಡಲು ಕೂಡಾ ಪ್ರಯತ್ನಿಸುತ್ತಲೇ ಇರುತ್ತದೆ ಎಂಬುದು.

ಯಾಕೆಂದರೆ, ನಮಗೆ ಗೊತ್ತು, ಎಲ್ಲರೂ ಹಾಗಿರುವುದಿಲ್ಲ, ಎಲ್ಲಾ ಸಂದರ್ಭಗಳೂ ಹಾಗೆಯೇ ಇರುವುದಿಲ್ಲ. ಅನುಭವ ನಮ್ಮನ್ನು ಬೆಳೆಸಬೇಕು, ಬದಲಿಗೆ ಅನುಭವಕ್ಕೆ ಕಾರಣವಾದ ಯಾವುದೋ ಹಳೆಯ ಅಚ್ಚಿಗೆ ನಮ್ಮನ್ನು ಹೊಂದಿಸಿ ನಮ್ಮ ವ್ಯಕ್ತಿತ್ವವನ್ನೇ ಕುಗ್ಗಿಸಬಾರದು. ಆ ಪ್ರಯತ್ನದಲ್ಲಿ ಎಷ್ಟು ಯಶಸ್ವಿಯಾಗುತ್ತೇವೋ. ಸೋಲುತ್ತೇವೋ ಎಂಬುದಕ್ಕಿಂತ ಅಂಥ ಪ್ರಯತ್ನವೂ ಕೂಡ ಬದುಕಿನ ಸಹಜ ಪ್ರಕ್ರಿಯೆ ಎಂಬಂತೆ ನಡೆಯುತ್ತಿರುತ್ತದೆ ಎನ್ನುವುದು ಮುಖ್ಯ

ನಾವು ಮತ್ತೆ ಮತ್ತೆ ಮೋಸ ಹೋಗುತ್ತೇವೆ, ಪ್ರತಿ ಬಾರಿ ಬೇರೆಯೇ ವ್ಯಕ್ತಿಯಿಂದ ಎಂಬ ಸಮಾಧಾನವಿರುತ್ತದೆ. ನಾವು ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತೇವೆ, ಪ್ರತಿ ಬಾರಿಯೂ ಹೊಸ ತಪ್ಪುಗಳನ್ನು ಎಂಬ ಹೆಮ್ಮೆಯಿರುತ್ತದೆ. ಕೊನೆಗೂ ಮನುಷ್ಯರನ್ನು ನಂಬದ ಸ್ಥಿತಿಗೆ ತಲುಪುವ ಬಗ್ಗೆ ಕಳವಳವನ್ನೇ ಹೊಂದಿರುತ್ತೇವೆ. ಆತ್ಮಹತ್ಯೆಗೆ ನಿರ್ಧರಿಸುವ ಗೌರಿ ಮತ್ತು ಮತ್ತೆ ತನ್ನ ತಾಯಿಗೆ ಪತ್ರ ಬರೆಯುವ ಔದಾರ್ಯ ತೋರಿಸುವ ಬೇಲಾ ಇಬ್ಬರೂ ಈ ಕಾದಂಬರಿಯ ಚೌಕಟ್ಟಿನಲ್ಲೇ ಇದನ್ನು ಸಮರ್ಥಿಸುತ್ತಾರೆ.
ಆದರೆ, ಒಂದು ಸಾವಿನ ಕಾರಣದಿಂದ ಐದಾರು ಮಂದಿ ಶಾಶ್ವತವಾಗಿ ನರಕ ಅನುಭವಿಸುವ, 40-50 ವರ್ಷಗಳ ಕಾಲಾವಧಿಯಲ್ಲಿಯೂ ಅದೇ ನಕಾರಾತ್ಮಕ ಭಾವದಿಂದ ತೊಳಲಾಡುವ ಚಿತ್ರಣಕ್ಕೇ ಒತ್ತು ಕೊಟ್ಟು ನಿರೂಪಿಸುವ ಕಾದಂಬರಿ ಕೊಂಚ ಅಸಹಜವಾಗಿದೆ ಎನಿಸುತ್ತದೆ.

ಆದಾಗ್ಯೂ ಇದು ಕಾದಂಬರಿ. ಇಲ್ಲಿ ಸಹಜ-ಅಸಹಜ, ಸಂಭಾವ್ಯ-ಅಸಂಭವನೀಯ, ತಾರ್ಕಿಕ-ಅತಾರ್ಕಿಕ ಎಂಬೆಲ್ಲ ಚರ್ಚೆಗಿಂತ ಮುಖ್ಯವಾಗುವುದು ಕೊನೆಗೂ ಇಂಥ ಸನ್ನಿವೇಶ ಚಿತ್ರಣದಿಂದ ಒಂದು ಕಾದಂಬರಿ ಹೇಳಬಯಸುವುದೇನನ್ನು ಮತ್ತು ಅದನ್ನು ಹೇಳುವಲ್ಲಿ ಅದು ಯಶಸ್ವಿಯಾಗಿದೆಯೇ ಎಂಬುದೇ. ಈ ಕಾದಂಬರಿಯ ಬಗ್ಗೆ ಸ್ವತಃ ಜುಂಪಾ ಲಾಹಿರಿ ಹೇಳಿರುವುದು ಇದನ್ನು:
'ಈ The Lowland ಕಾದಂಬರಿ 1950,60ರ ದಶಕದಲ್ಲಿ, ಕೋಲ್ಕತಾದಲ್ಲಿ ಹುಟ್ಟಿದ ಇಬ್ಬರು ಸಹೋದರ ಕುರಿತಾಗಿದೆ. ಇವರಲ್ಲಿ ಒಬ್ಬ 1960ರ ಸುಮಾರಿಗೆ ನಕ್ಸಲೈಟ್ ಚಳುವಳಿಯತ್ತ ಸೆಳೆಯಲ್ಪಡುತ್ತಾನೆ ಮತ್ತು ಇನ್ನೊಬ್ಬ ಅಮೆರಿಕಕ್ಕೆ ಹೋಗುತ್ತಾನೆ. ನನ್ನ ಕೃತಿಯು ಈ ಪರಸ್ಪರ ವೈರುಧ್ಯದ ಆಯ್ಕೆಯಿಂದಾದ ಪರಿಣಾಮಗಳನ್ನು ಚಿತ್ರಿಸುತ್ತದೆ. 1970ರ ಸುಮಾರಿಗೆ ಕೋಲ್ಕತಾದಲ್ಲಿ ಪಾರಾಮಿಲಿಟರಿ ದಳದಿಂದ ತನ್ನ ಹೆತ್ತವರು ಮತ್ತು ಸಂಬಂಧಿಗಳೆದುರೇ ಹತ್ಯೆಯಾದ, ನಕ್ಸಲೈಟ್ ಚಟುವಟಿಕೆಗಳಲ್ಲಿ ತೊಡಗಿದ್ದರೆನ್ನಲಾದ ಇಬ್ಬರು ಸಹೋದರರ ದಾರುಣ ಅಂತ್ಯವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವಾಗಿ ನಾನಿದನ್ನು ಬರೆಯಬೇಕಾಯಿತು.

ಈ ಕಾದಂಬರಿ, ಒಂದು ಕುಟುಂಬದ ಭವಿಷ್ಯದ ತಲೆಮಾರುಗಳ ಮೇಲೆ ಅದರ ಭೂತಕಾಲ ಬೀರುವ ಪರಿಣಾಮಗಳನ್ನು ಕುರಿತು, ತಂದೆ ಮತ್ತು ತಾಯ್ತನ ಎಂದರೇನು ಮತ್ತು ತಂದೆಯಾಗುವುದು, ತಾಯಿಯಾಗುವುದು ಎಂದರೇನು ಎಂಬುದರ ಕುರಿತು, ಹಿಂಸೆ - ಭೌತಿಕ ಮತ್ತು ಕುಟುಂಬ ಹಾಗೂ ಸಂಬಂಧಗಳ ನಡುವೆ ಕಾಣಿಸುವ ಮಾನಸಿಕ ಹಿಂಸೆಯ ಕುರಿತು, ಪ್ರೀತಿಯ ಕುರಿತು, ಕಳೆದುಕೊಳ್ಳುವುದರ ಕುರಿತು, ಮನುಷ್ಯ ಮನುಷ್ಯರ ಮತ್ತು ಸಂಬಂಧಗಳ ನಡುವಿನ ದೂರ ಎಂಬುದರ ಕುರಿತು, ಅಗಲುವಿಕೆಯ ಕುರಿತು, ನಿಷ್ಠೆಯ ಕುರಿತು, ವಂಚನೆಯ ಕುರಿತು.'
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Monday, September 23, 2013

ನಿಜ ಮತ್ತು ನಿಜವಾದ ನಿಜದ ನಡುವೆ

ಜೆ.ಎಂ.ಕೂಟ್ಜೆಯ ಹೊಸ ಕಾದಂಬರಿ ‘ದ ಚೈಲ್ಡ್‌ಹುಡ್ ಆಫ್ ಜೀಸಸ್’ ಜಗತ್ತಿನ ಬೇರೆ ಬೇರೆ ಭಾಗಗಳಿಂದ ವಿಭಿನ್ನ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. ತಾಯಿಯಿಂದ ಅಕಸ್ಮಾತ್ ಬೇರೆಯಾಗಿಬಿಟ್ಟ ಒಂದು ಕೂಸನ್ನು ಮರಳಿ ತಾಯಿಯ ಬಳಿ ಸೇರಿಸಲು ಪ್ರಯತ್ನಿಸುವ ನಿರಾಶ್ರಿತನೊಬ್ಬನ ಪಾಡು ಇಲ್ಲಿದೆ ಎಂಬುದು ಸರಳವಾಗಿ ಕಾದಂಬರಿಯ ಬಗ್ಗೆ ಹೇಳಬಹುದಾದ ಮಾತು. ಆದರೆ ಈ ಸರಳತೆ ಮತ್ತು ಅದು ಕೆದಕುತ್ತಿದೆ ಎಂದು ನಾವು ಅನುಮಾನಿಸುವ ಆಳವೇ ಈ ಕಾದಂಬರಿಯ ತಾಂತ್ರಿಕ ಗುಟ್ಟು ಮತ್ತು ಯಶಸ್ಸನ್ನು ನಿರ್ಣಯಿಸುವ ಮಾತು.

ಮೊದಲಿಗೆ ಜೀಸಸ್ ಹೆಸರು ಕಾದಂಬರಿಯ ಹೆಸರಿನಲ್ಲೇ ಇರುವುದರಿಂದ ಸಹಜವಾಗಿಯೇ ಇದು ಕ್ರಿಶ್ಚಿಯನ್ ಮತದ ಬಗ್ಗೆ ಅಥವಾ ಜೀಸಸ್ ಬಗ್ಗೆ ಏನಾದರೂ ಹೇಳುತ್ತಿದೆಯೇ ಎಂಬಂಥ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ ಹೆಸರಿನಲ್ಲಿ ಬಿಟ್ಟರೆ ಉಳಿದಂತೆ ಇಡೀ ಕಾದಂಬರಿಯಲ್ಲಿ ಎಲ್ಲಿಯೂ ಜೀಸಸ್ ಅಥವಾ ಕ್ರಿಶ್ಚಿಯಾನಿಟಿಯ ಕುರಿತ ಕತೆಯಾಗಲಿ, ಚರ್ಚೆಯಾಗಲೀ ಇಲ್ಲ. ಇಲ್ಲ ಎಂಬುದರಿಂದಲೇ ಇನ್ನಷ್ಟು ಕೌತುಕ, ಚರ್ಚೆ.

ಕೂಟ್ಜೆಯ ಕಾದಂಬರಿ ಎಂದರೆ ಅದೊಂದು ಬಗೆಯ ಮನಶ್ಶಾಸ್ತ್ರೀಯ ವ್ಯಾಯಾಮ ಕೂಡ. ಸೀಮಿತ ಅರ್ಥದಲ್ಲಿ ಕೂಟ್ಜೆ ಕೂಡ ತನ್ನ ಕಾದಂಬರಿಯಲ್ಲಿ ಒಂದು ತಾತ್ವಿಕ ನಿಲುವನ್ನು ಪ್ರಶ್ನಿಸುತ್ತ, ಅದರ ವಿಭಿನ್ನ ಆಯಾಮಗಳನ್ನು ಮಂಡಿಸುತ್ತ, ಅದನ್ನು ಹಲವು ಮಗ್ಗುಲಲ್ಲಿ ವಿಶ್ಲೇಷಿಸುವುದಕ್ಕಾಗಿಯೇ ಎಂಬಂತೆ ಅದನ್ನು ಒಂದು ನಿರ್ದಿಷ್ಟ 'ಸ್ಥಿತಿ'ಯ ಪಾತ್ರಗಳ ಬದುಕಿನಲ್ಲಿ ಶೋಧಿಸುತ್ತ ಹೋಗುವುದನ್ನು ಕಾಣುತ್ತೇವೆ.

ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಕೂಟ್ಜೆ ತನ್ನದಾದ ಒಂದು ಸಿದ್ಧಾಂತದ ಪ್ರತಿಪಾದನೆಗೆ ಈ ಮಾರ್ಗವನ್ನು ಬಳಸಿಕೊಳ್ಳುವುದಲ್ಲ; ಬದಲಿಗೆ, ಸಿದ್ಧಾಂತವನ್ನೇ ಒರೆಗೆ ಹಚ್ಚುತ್ತ ಅದು ವಿಧಿಸುವ ಮಿತಿಗಳಿಂದ ತಾನು ಮತ್ತು ತನ್ನ ಓದುಗರು ಮುಕ್ತರಾಗುವತ್ತ ಸಾಗುವುದಕ್ಕೆ ಈ ಮಾರ್ಗವನ್ನು ಬಳಸಿಕೊಳ್ಳುತ್ತಾನೆ ಎನ್ನುವುದೇ. ಈ ಕಾದಂಬರಿಯಲ್ಲಿಯೂ ಅದೇ ಬಗೆಯ ನಡೆ ಇದೆ ಮತ್ತು ಹಾಗಾಗಿಯೇ ಕೆಲವರು ಇದು ನಮ್ಮನ್ನು ಎಲ್ಲಿಗೂ ತಲುಪಿಸುತ್ತಿಲ್ಲವಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಕಾದಂಬರಿಯ ಕಥಾನಕ ಮತ್ತು ವಿವರಗಳು, ಮಾತುಕತೆ ಎಲ್ಲದರಲ್ಲೂ ಎದ್ದು ಕಾಣುವ ಸರಳತೆ ಮತ್ತು ಎಲ್ಲ ಸರಿ, ನೀವು ಹೇಳುತ್ತಿರುವುದೇನು ಎಂಬ ಪ್ರಶ್ನೆಗೆ ಇದಂಇತ್ಥಂ ಎಂಬ ಉತ್ತರವಿಲ್ಲದಿರುವುದು ಬಹುಷಃ ಇದಕ್ಕೆ ಕಾರಣ. ಆದರೆ ಅದು ಈ ಕಾದಂಬರಿ ರಚನೆಯ ತಂತ್ರಗಾರಿಕೆ ಎಂಬುದನ್ನು ಕಂಡುಕೊಳ್ಳದಿದ್ದರೆ ನಾವು ತಪ್ಪಿಬೀಳುವ ಸಾಧ್ಯತೆಯಿದೆ.
ಉದಾಹರಣೆಗೆ ದ ಅಬ್ಸರ್ವರ್ ಪತ್ರಿಕೆಯಲ್ಲಿ ಪ್ರಕಟವಾದ ವಿಮರ್ಶೆಯನ್ನು ಗಮನಿಸಿದರೆ, ಬೆಂಜಮಿನ್ ಮಾರ್ಕೊವಿಟ್ಸ್ ಸ್ವತಃ ಯೀನಸ್ ಒಬ್ಬ ಒಳ್ಳೆಯ ತಾಯಿಯಲ್ಲ, ಮಗುವನ್ನು ಅತಿಮುದ್ದು ಮಾಡಿ ಕೆಡಿಸುತ್ತಾಳೆ ಎಂಬರ್ಥದ, ತಾವೇ ತೀರ್ಮಾನ ಕೊಡುವಂಥ ಮಾತುಗಳನ್ನು ಬರೆದಿದ್ದಾರೆ. ಸ್ವತಃ ಕಾದಂಬರಿಕಾರನಿರಲಿ, ಕಾದಂಬರಿಯೊಳಗಿನ ಪಾತ್ರವೇ ಯೀನಸ್ ವರ್ತನೆಯನ್ನು ನಾವು ನೋಡಬೇಕಾದ/ನೋಡಬಹುದಾದ ಬೇರೊಂದು ದೃಷ್ಟಿಕೋನದ ಸಾಧ್ಯತೆಗೆ ನಮ್ಮ ಕಣ್ಣುಗಳನ್ನು ತೆರೆಸಲು ಪ್ರಯತ್ನಿಸುತ್ತಿದೆಯೇ ಹೊರತು ಯಾವುದೇ ತೀರ್ಮಾನಗಳನ್ನು ನಮ್ಮೆದುರು ಇಡುತ್ತಿಲ್ಲ.
ಒಟ್ಟು ಕಾದಂಬರಿಯ ಕುರಿತು ಅಂತಿಮವೆನ್ನಬಹುದಾದ ಮಾತುಗಳಿಲ್ಲ ಇಲ್ಲಿ, ಬದಲಿಗೆ ಒಂದು ಸೀಮಿತ ನೆಲೆಯಲ್ಲಿ ಹೇಳುವ ಮಾತು, ಪ್ರತಿಯೊಬ್ಬ ಓದುಗ ತನ್ನದೇ ನೆಲೆಯಿಂದ ಪ್ರಶ್ನಿಸಿಕೊಂಡು ಕಂಡುಕೊಳ್ಳಬೇಕಾದ ಸತ್ಯದತ್ತ ಇದೊಂದು ಪ್ರಯಾಣವಾಗಿದೆ.

ನಿರ್ದಿಷ್ಟ 'ಸ್ಥಿತಿ'ಯ ಪಾತ್ರದ ಬಗ್ಗೆ ಹೇಳಿದೆ. ಇದಂತೂ ಕೂಟ್ಜೆಯ ಕಾದಂಬರಿಯಲ್ಲಿ ಪುನರಾವರ್ತನೆಯಾಗುತ್ತಿರುವಂತಿದೆ. Disgrace, Summertime, Slowman, Dairy of a Bad year ಹೀಗೆ ಹಲವಾರು ಕಾದಂಬರಿಗಳಲ್ಲಿ ನಾವು ಮತ್ತೆ ಮತ್ತೆ ಕಾಣುವುದು ಒಬ್ಬ ನಿರ್ಲಿಪ್ತ ಭಾವದ ಎಂದೆನ್ನಿಸುವ, ವಯಸ್ಸಾದವನಂತೆ ವರ್ತಿಸುವ, 45-50ರ ನಡುವಿನ ಯಾವ ವಯಸ್ಸಿನವನೂ ಆಗಿರಬಹುದಾದ ಮತ್ತು ಸದಾ 60-70ರ ನಡುವಿನ ಯಾವ ವಯಸ್ಸಿಗೂ ಸೇರಬಹುದಾದವನಂತೆಯೇ ವರ್ತಿಸುವ ವ್ಯಕ್ತಿಯನ್ನು.

ಹಾಗೆಯೇ ಕೂಟ್ಜೆಯ ಹೆಚ್ಚಿನ ಕಾದಂಬರಿಗಳ ಕೇಂದ್ರ ಪಾತ್ರ ಒಂದು ಬಗೆಯ Outsider ಪಾತ್ರ. ಅವನು ಎಲ್ಲರಂತಿದ್ದೂ ಎಲ್ಲರೊಳಗೊಂದಾಗಲಾರ. ನಿಮ್ಮೊಡನಿದ್ದೂ ನಿಮ್ಮಂಥವನಲ್ಲ. ಅದು ದೇಶ, ಕಾಲ ಮತ್ತು ಭಾಷೆಯ ಮೂಲಕ ಹುಟ್ಟಿಕೊಂಡಂಥ ಭಿನ್ನತೆಯೇ ಆಗಬೇಕಿಲ್ಲ. ಕೆಲವೊಮ್ಮೆ ಅಕಾರಣ ಅವನೊಬ್ಬ 'ಅನ್ಯ'ನಾಗಿಯೇ ಉಳಿಯಬಲ್ಲಂಥ ಪಾತ್ರಗಳೇ ನಮಗೆ ಮತ್ತೆ ಮತ್ತೆ ಎದುರಾಗುತ್ತವೆ. The Childhood of Jesus ನಲ್ಲಂತೂ ದೇಶ-ಭಾಷೆ ಮತ್ತು ಹಿನ್ನೆಲೆ ಎಲ್ಲ ನಿಟ್ಟಿನಿಂದಲೂ ಅವನೊಬ್ಬ ಅನ್ಯ. ಈತ ಪ್ರಬುದ್ಧ, ಮುಕ್ತ ವಿಚಾರಧಾರೆಯುಳ್ಳವ, ಕೆಲವೊಮ್ಮೆ ಶಾಕಿಂಗ್ ಆದ ಫಿಲಾಸಫಿಯನ್ನು ಮುಖಕ್ಕೆ ಹಿಡಿಯುವವ, ಸ್ತ್ರೀಸಂಗಾಸಕ್ತ, ಒಬ್ಬಂಟಿ ಮತ್ತು ಏಕಾಂತಕ್ಕಾಗಿಯೂ ಹೊಸ ಸಂಬಂಧಕ್ಕಾಗಿಯೂ ಏಕಕಾಲಕ್ಕೆ ಹಾತೊರೆಯುವ ವ್ಯಕ್ತಿ.
ಫಿಲಾಸಫಿ ಹೇಗಿರಬೇಕು ಎಂಬುದಕ್ಕೆ ಈ ಕಾದಂಬರಿಯ ಸೈಮನ್ ಹೇಳುವ ಮಾತು ಕೇಳಿ, "The kind that shakes one. That changes one's life." ಹೀಗಾಗಿ ಈ ವಯೋವೃದ್ಧನಲ್ಲದಿದ್ದರೂ ನಡುವಯಸ್ಸಿನಲ್ಲಿ ಅನುಭವದ ಭಾರಕ್ಕೆ ಬಳಲಿ ವಯಸ್ಸಾದವನಂತಿರುವ ವ್ಯಕ್ತಿ ಹೆಣ್ಣಿನ ಸಂಗಕ್ಕೆ, ಲೈಂಗಿಕತೆಗೆ ಹಾತೊರೆಯುವುದು ನಮಗೆ ರೂಪಕದಂತೆ ಕಾಣಿಸಿದರೆ ಅದು ಕೊಡುವ ಅರ್ಥವೇ ಬೇರೆ, ದೈಹಿಕ ತೆವಲು ಎನಿಸಿದರೆ ಕೊಡುವ ಅರ್ಥವೇ ಬೇರೆ. ಈ ಎರಡರ ನಡುವಿನದು ಈ ಹಸಿವು.
The Childhood of Jesus ಕಾದಂಬರಿಯಲ್ಲೂ ಈ ಕುರಿತ ಚರ್ಚೆಯಿದೆ. ಹೆಣ್ಣು-ಗಂಡು, ದೇಹ ಮತ್ತು ಮನಸ್ಸು, ಸಂಬಂಧ ಇತ್ಯಾದಿಗಳ ಜಿಜ್ಞಾಸೆ. ಮನುಷ್ಯ ಸಂಬಂಧಗಳು ಪಕ್ವಗೊಳ್ಳುವುದು ಸಾನ್ನಿಧ್ಯ, ಸಾಂಗತ್ಯ, ಸಾಮೀಪ್ಯದ ಜೊತೆಗೆ ಹೆಣ್ಣು-ಗಂಡಿನ ಸಂಸರ್ಗದಿಂದಲೂ ಎಂಬುದು ಬರೇ ನಾವಂದುಕೊಂಡಿದ್ದರಿಂದ ನಮಗನಿಸುವ ನಿಜವೇ ಅಥವಾ ನಿಜಕ್ಕೂ ನಿಜವೇ ಎಂಬ ಪ್ರಶ್ನೆ. ಇಲ್ಲಿ ಅನಾ ಮತ್ತು ಎಲೆನಾ ವಿಭಿನ್ನವಾಗಿ ಈ ಪ್ರಶ್ನೆಯನ್ನು, ಅದಕ್ಕೆ ಅವರವರು ಕಂಡುಕೊಂಡಿರುವ ಉತ್ತರಗಳ ಹಿಂದಿನ ನಿಲುವು ಮತ್ತು ತಾತ್ವಿಕತೆಯನ್ನು ನಿಕಷಕ್ಕೊಡ್ಡುತ್ತಾರೆ.

ಇಡೀ ಕಾದಂಬರಿಯ boiling point ಎಂದು ಕರೆಯಬಹುದಾದ ಕೇಂದ್ರವೊಂದು ಇರುವುದಾದರೆ ಅದು ಇದೇ, ಬರೇ ನಿಜವೇ ಅಥವಾ ನಿಜಕ್ಕೂ ನಿಜವೇ ಎಂಬ ಪ್ರಶ್ನೆ. ಈ ಜಗತ್ತಿನಲ್ಲಿ ಇದ್ದಕ್ಕಿದ್ದಂತೆ ತಾಯಿಯ ಗರ್ಭದಿಂದ ಕಳಚಿಕೊಂಡು ಭೂಮಿಗೆ ಬಿದ್ದ ನಾವು ಪ್ರಜ್ಞೆ ವಿಕಾಸಗೊಂಡಂತೆಲ್ಲ ಯಾರು ನಮ್ಮ ಅಪ್ಪ, ಯಾರು ನಮ್ಮ ಅಮ್ಮ ಎಂಬಲ್ಲಿಂದಲೇ ತೊಡಗಿ, ತಂಗಿ, ಅಣ್ಣ, ತಮ್ಮ, ಇತರ ಸಂಬಂಧಿಕರು, ದೇವರು, ಪದ್ಧತಿ, ಸಂಪ್ರದಾಯ, ರೀತಿ-ನೀತಿ ಎಲ್ಲವನ್ನೂ ಯಾರೋ ಹೇಳಿದ್ದನ್ನು 'ನಂಬುತ್ತ', ಒಪ್ಪಿ ಸ್ವೀಕರಿಸುತ್ತ, ಆಚರಿಸುತ್ತ ಬಂದಿರುವುದೇ ಹೊರತು ಅದು ನಿಜಕ್ಕೂ ನಿಜವೇ ಎಂಬ ಪ್ರಶ್ನೆಯೆದುರು ನಿಂತಿದ್ದು ಕಡಿಮೆ.
ಇಲ್ಲಿ ಆಕಸ್ಮಿಕವಾಗಿ ಬೋಟಿನಲ್ಲಿ ಪ್ರಯಾಣಿಸುತ್ತಿದ್ದಾಗ ತನ್ನ ತಾಯಿಯಿಂದ ಬೇರೆಯಾದ ಒಂದು ನಾಲ್ಕೈದು ವರ್ಷದ ಮಗು ಅಲ್ಲಿಯೇ ತನ್ನ ತಂದೆ-ತಾಯಿಯರ ಬಗ್ಗೆ ಅಷ್ಟಿಷ್ಟಾದರೂ ಮಾಹಿತಿ ನೀಡಬಹುದಾಗಿದ್ದ ಒಂದು ಕಾಗದವನ್ನೂ ಕಳೆದುಕೊಂಡು ಕಾದಂಬರಿಯ ಪ್ರಧಾನ ಪಾತ್ರ ಸೈಮನ್ ಕೈ ಸೇರುತ್ತದೆ. ಈ ಮಗುವಿಗಾಗಲೀ, ಸ್ವಯಂಪ್ರೇರಣೆಯಿಂದ ಅದರ ಹೊಣೆ ಹೊತ್ತುಕೊಳ್ಳುವ ಸೈಮನ್‌ಗಾಗಲೀ ಅದರ 'ನಿಜವಾದ' ತಂದೆ-ತಾಯಿ ಯಾರೆಂದು ಗೊತ್ತಿಲ್ಲ. ಆದರೂ ಆ ತಾಯಿಯನ್ನು ಹುಡುಕಿ ಮತ್ತೆ ಮಗುವನ್ನು ಅದರ ತಾಯಿಯ ಬಳಿಗೆ ಸೇರಿಸುವ ವಿಶ್ವಾಸ ಸೈಮನ್‌ನದು.

ಈಗ ಕೇಳಿ, ಈ ಮಗು ಮತ್ತು ಸ್ವತಃ ಸೈಮನ್ ನಿರಾಶ್ರಿತರ ಶಿಬಿರಕ್ಕೆ ಸೇರಲು ಎಲ್ಲಿಂದಲೋ ಬಂದವರು, ನಿಜಕ್ಕೂ ಹಿಂದು-ಮುಂದಿಲ್ಲದ ಅನಾಥರು. ಇವರು ತಲುಪಿದ ಶಿಬಿರ ಮತ್ತು ತದನಂತರ ಬದುಕು ಪ್ರಾರಂಭಿಸಿದ ಊರು ಒಂದು ವಿಚಿತ್ರವಾದ ಊರು. ಬೇಕಿದ್ದರೆ ಇದು ಇವರು ಸತ್ತು, ಸತ್ತ ಮೇಲೆ ಸೇರಿಕೊಂಡ ತಾಣದ ರೂಪಕವೆಂಬಂತೆ ಗ್ರಹಿಸುವುದಕ್ಕೂ ಅವಕಾಶವನ್ನು ತೆರೆದೇ ಇಡುವಂಥ ಊರು. ಇಲ್ಲಿ ಬಸ್ಸಿಗೆ ಹಣಕೊಡಬೇಕಿಲ್ಲ. ಆಹಾರ ಕೂಡ ಕೆಲವೊಮ್ಮೆ ಪುಕ್ಕಟೆ ಮತ್ತು ತೀರಾ ನಿಕೃಷ್ಟ ಮೌಲ್ಯಕ್ಕೆ ಲಭ್ಯ. ಜನ ತೀರಾ ಒಳ್ಳೆಯವರು. ಮಾಂಸ ಕೂಡ ತಿನ್ನದವರು.

ಕ್ರಿಸ್ತನಂತೆಯೇ ಬ್ರೆಡ್ ಮತ್ತು ನೀರಿನಲ್ಲಿ ತೃಪ್ತರಾಗುವ, ಜಿಹ್ವಾ ಚಪಲವಿಲ್ಲದ ಮಂದಿ. ಜಿಹ್ವಾ ಚಪಲವೇಕೆ, ಇವರಲ್ಲಿ ಯಾವ ಚಪಲವೂ ಇಲ್ಲವೆನ್ನಬಹುದು! ಸೈಮನ್ ಒಮ್ಮೆ ಕೆರಳಿ ಗೊಣಗುತ್ತಾನೆ, "It is bloodless. Everyone I meet is so decent, so kindly, so well intentioned. No one swears or gets angry. No one gets drunk.... How can that be, humanly speaking? Are you lying, even to yourselves?"

ಇಲ್ಲಿರುವುದು ಸದ್ಭಾವನೆ ಮತ್ತು ಸದಾಶಯ. ಆದರೆ ಸಂವೇದನೆಯಿಲ್ಲ ಎನಿಸುವುದಿಲ್ಲವೆ? ಅನಿಸುತ್ತದೆ. ದೈಹಿಕ ಸಂಬಂಧ ಗಂಡು-ಹೆಣ್ಣನ್ನು ಮತ್ತಷ್ಟು ನಿಕಟಗೊಳಿಸುತ್ತದೆ, ಅದು ದೇಹಭಾಷೆಯಾಗಿ ಎರಡು ಜೀವಗಳ ಮಧ್ಯೆ ನೇರ ಸಂವಹನವನ್ನೇರ್ಪಡಿಸುತ್ತದೆ ಎಂದೆಲ್ಲ ಸೈಮನ್ ಹೇಳತೊಡಗಿದರೆ ಒಬ್ಬಳು 'ನನಗೆ ಗೊತ್ತಿತ್ತು, ನಿನ್ನ ಉದ್ದೇಶವೆಲ್ಲ ಅದೇ, ನಾನು ಮಾತ್ರ ಯಾವತ್ತೂ ಮೈಮುಟ್ಟಲು ಬಿಡುವವಳಲ್ಲ' ಎಂದರೆ ಇನ್ನೊಬ್ಬಳು, 'ಬಾ, ನಿನಗೆ ಅದೇ ಬೇಕಿದ್ದರೆ ತೆಗೆದುಕೊ (ಖಂಡವಿದೆಕೊ, ಮಾಂಸವಿದೆಕೊ), ಆದರೆ ಅಷ್ಟಕ್ಕೆ ದೊಡ್ಡದೊಡ್ಡ ಫಿಲಾಸಫಿ ಕೊರೆಯುವ ಅಗತ್ಯವಿಲ್ಲ, ಅದನ್ನೆಲ್ಲ ನಾನು ನಂಬುವವಳಲ್ಲ' ಎನ್ನುತ್ತಾಳೆ. ಅನುಭವಿಸಲು ಬಯಸಿದ್ದು ಅನುಭವಕ್ಕೆ ದಕ್ಕದೇ ಬರೇ ದೇಹಕ್ಕೆ ಮಾತ್ರ ಸೋಕುತ್ತದೆ.

ಅಂದರೇನು, ಈ ಜನಕ್ಕೆ ರುಚಿಯಿಲ್ಲ, ಅಭಿರುಚಿಯಿಲ್ಲ, ಸಂವೇದನೆಗಳಿಲ್ಲ ಮತ್ತು ಹಾಗೆಂದು ದ್ವೇಷಿಸುವುದಕ್ಕೆ ಕೂಡ ಅಗತ್ಯವೆನಿಸುವ ಕನಿಷ್ಠ ಕೆಟ್ಟತನವಿಲ್ಲ ಎಂದರೇನಿದು ಈ ಲೋಕವೇ, ಅಪರಲೋಕವೇ ಎನಿಸುವುದಿಲ್ಲವೆ? ಇಲ್ಲಿ ನೆನಪುಗಳಿಗೆ ಸ್ಥಾನವಿಲ್ಲ. ಮೊಟ್ಟಮೊದಲಿಗೆ ತಾನು ಈ ಹುಡುಗನ ತಾಯಿಯನ್ನು ಹುಡುಕಬೇಕಿದೆ ಎಂದಾಗಲೇ ಅವನಿಗೆ ಸಿಗುವ ಸಲಹೆ ಇದೇ. ಹಳೆಯದನ್ನೆಲ್ಲ ಮರೆತುಬಿಡು, ಹೊಸ ಬದುಕು ಆರಂಭಿಸು. ಬೇಕಿದ್ದರೆ ಮದುವೆಯಾಗು, ಹುಡುಗನಿಗೊಬ್ಬಳು ತಾಯಿ ಸಿಗುತ್ತಾಳೆ. ಆದರೆ ಅವನ 'ನಿಜವಾದ' ತಾಯಿ ಇಲ್ಲಿ ಸಿಗುವುದಿಲ್ಲ. ಯಾಕೆಂದರೆ ಇಲ್ಲಿ ಎಲ್ಲರೂ ತಮ್ಮ ಹಳೆಯ ನೆನಪುಗಳಿಂದ ಶಾಶ್ವತವಾಗಿ ಕಳಚಿಕೊಂಡಿದ್ದಾರೆ, ನೀನೂ ಆದಷ್ಟೂ ಬೇಗ ಕಳಚಿಕೊ. ಆದರೆ ಸೈಮನ್ ಹೇಳುವುದೇನು, ನೆನಪುಗಳಿಂದ ಕಳಚಿಕೊಂಡರೂ, ಸ್ಮೃತಿಯಲ್ಲೇ ಮುಳುಗಿದ್ದು ಅದ್ದಿ ಅದ್ದಿ ಮೇಲೆದ್ದು ಬಂದಿರುವ ದೇಹ ನೆನಪುಗಳ ನೆನಪುಗಳಿಂದ ಮುಕ್ತಗೊಳ್ಳುವುದು ಸಾಧ್ಯವಿಲ್ಲ! ಇವನ ತಾಯಿಯ ಬಗ್ಗೆ ತನಗೇನೇನೂ ತಿಳಿಯದಿದ್ದರೂ, ತನಗೆ ಗೊತ್ತಿದೆ, ಅವಳನ್ನೊಮ್ಮೆ ಕಂಡಿದ್ದೇ ತನಗೆ ಅವಳೇ ಇವನ ತಾಯಿ ಎಂಬುದು ಗೊತ್ತಾಗಿ ಬಿಡುತ್ತದೆ!

ಇದನ್ನು ತರ್ಕಕ್ಕೆ ಒಡ್ಡುವುದು ಸಾಧ್ಯವಿಲ್ಲ. ಒಳತೋಟಿ, ಅಂತಃಪ್ರಜ್ಞೆ, ಅಂತರಾತ್ಮ ಏನೆಂದು ಕರೆದರೂ ಅದೆಲ್ಲವೂ ಬುರುಡೆ ಎಂದು ಎಲೆನಾ ತೊಳೆದು ಬಿಡುತ್ತಾಳೆ. 'ಅನಿಸುತಿದೆ ಯಾಕೋ ಇಂದು| ನನಗಾಗೇ ಬಂದವಳೆಂದು|' - ಎಂದು ಪ್ರೇಮಕ್ಕೆ ಬಿದ್ದ ಎರಡು ಮೂರು ವರ್ಷಗಳಲ್ಲಿ ಜ್ಞಾನೋದಯಗೊಂಡವರು, ಏನೋ ಅಂತಃಪ್ರಜ್ಞೆ ಹೇಳಿತೆಂದು ಜೂಜಿಗಿಳಿದು ಬೀದಿ ಪಾಲಾದವರು - ಹೀಗೆ ಎಲೆನಾ ವಾಸ್ತವವನ್ನು ತೆರೆದಿಡುತ್ತಾಳೆ. ಆದರೆ ಯಾವುದು ವಾಸ್ತವ? ವಾಸ್ತವವೇ ನಿಜವಾದ ವಾಸ್ತವವೇ ಅಥವಾ ಅದು ಬರೇ ಅಂದುಕೊಂಡ ವಾಸ್ತವವೇ?!

ಇದೇ ನೆಲೆಯ ಇನ್ನೊಂದು ಚರ್ಚೆಯೂ ಈ ಕಾದಂಬರಿಯಲ್ಲಿದೆ. ಮಗ್ಗುಲು ಇದೇ ಆದರೆ ಅದನ್ನು ನೋಡುವ ಆಯಾಮ ಬೇರೆ. ಒಮ್ಮೆ ಅಪಾರ್ಟ್‌ಮೆಂಟಿನಲ್ಲಿ ಟಾಯ್ಲೆಟ್ಟಿನ ಪೈಪಿನ ತೂಬು ಕಟ್ಟಿಕೊಂಡು ಸೈಮನ್ ಅದನ್ನು ಬಿಡಿಸುವ ಕೆಲಸಕ್ಕಿಳಿಯಬೇಕಾಗುತ್ತದೆ. ಅಲ್ಲಿ ಕಟ್ಟಿಕೊಂಡು ನಾರುತ್ತಿರುವ ಮಲ ಯಾರದ್ದು ಎಂಬ ಪ್ರಶ್ನೆ ಬರುವುದಿಲ್ಲ. ಮಲ ಎಂಬುದು ಮಲ ಅಷ್ಟೇ. ಒಮ್ಮೆ ಅದು ಸಮಷ್ಟಿಯ ಮಲದೊಂದಿಗೆ ಬೆರೆತಿದ್ದೇ ತನ್ನತನವನ್ನು ಕಳೆದುಕೊಂಡು ಬರೇ ಮಲವಷ್ಟೇ ಆಗಿ ಬಿಡುತ್ತದೆ. ಹಾಗಾಗಿ ಮಲ ಇವಳದ್ದು, ಅವನದ್ದು ಎಂಬ ಭಾವನೆ ಇದ್ದಾಗಲಷ್ಟೇ ಅದು ಕೊಳಕು. ಒಮ್ಮೆ ಯಾರದ್ದೂ ಅಲ್ಲ ಆಗಿದ್ದೇ ಅದರ ಕೊಳಕುತನವೂ ಅಷ್ಟರಮಟ್ಟಿಗೆ ಕಡಿಮೆಯಾಯಿತು.

ಇಲ್ಲಿ ಅನಾ ಎಂಬವಳು ಒಮ್ಮೆ ಈ ಹುಡುಗ ಮತ್ತು ಸೈಮನ್ ಇಬ್ಬರನ್ನೂ ಕೊಳಕು ವಸ್ತು ಎಂಬಂತೆ ನಡೆಸಿಕೊಂಡಿದ್ದು ನೆನಪಾಗುತ್ತದೆ. ಹಾಗೆಯೇ ಸೌಂದರ್ಯದ ಬಗ್ಗೆ. ಸೈಮನ್ ತನ್ನ ದೈಹಿಕ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕಾಗಿ, ಅಂಥ ಸವಲತ್ತು ಒದಗಿಸುವ ಒಂದು ಕ್ಲಬ್ಬಿನ ಸದಸ್ಯನಾಗಲು ಹೊರಡುತ್ತಾನೆ. ಅಲ್ಲಿ ಅರ್ಜಿ ಭರ್ತಿ ಮಾಡುತ್ತ ಅವನು ತನ್ನ ನಿರೀಕ್ಷೆ ಅಥವಾ ಅಗತ್ಯ ಅಥವಾ ಹಪಹಪಿಕೆ ಏನೆಂಬುದನ್ನು ಬರೆಯಬೇಕಾಗುತ್ತದೆ.

ಸೌಂದರ್ಯದ ಬಗ್ಗೆ, ಸಾಂಗತ್ಯದ ಬಗ್ಗೆ ಕೊಂಚ ಕಾವ್ಯಮಯವಾಗಿ ಬರೆಯುತ್ತಾನೆ. ಆದರೆ ಸಂವೇದನೆಗಳನ್ನು ಪುರಸ್ಕರಿಸಿ ಗೊತ್ತಿಲ್ಲದ ಊರಿನಲ್ಲಿ ಸೈಮನ್‌ಗೆ ಸಂಗಾತಿ ಸಿಗುವುದೇ ಇಲ್ಲ. ಹಾಗೆಯೇ ಎಲೆನಾ ಬಗ್ಗೆ ಸೈಮನ್‌ಗೆ ಆಕರ್ಷಣೆಯಿಲ್ಲ. ಕೊಂಚ ಎದ್ದು ಕಾಣುವ ಹಲ್ಲುಗಳ ಮತ್ತು ಎದ್ದು ಕಾಣದ ಅಂಗಾಂಗಗಳ ಎಲೆನಾ ಅವನನ್ನು ಉತ್ತೇಜಿಸುವುದಿಲ್ಲ. ಆದರೂ ದೈಹಿಕ ಸಂಪರ್ಕ ಸಾಧ್ಯವಾಗುವುದು ಅವಳೊಂದಿಗೇ. ಎಲ್ಲವೂ ನಿಯಮಬದ್ಧವಾಗಿ, ಅಚ್ಚುಕಟ್ಟಾಗಿ, ಯೋಜಿಸಿದಂತೆಯೇ ಸಾಗುವುದು ಒಂದು ಆದರ್ಶದ, ಅಪೇಕ್ಷೆಯ ಬಗೆಯಾದರೆ ಹುಡುಗನ ಹಠಮಾರಿತನ, ಪೆದ್ದುತನ, ಕಸವನ್ನೆಲ್ಲ ಸಂಗ್ರಹಾರ್ಹವೆಂದು ತಿಳಿದು ಮನೆಯೊಳಗೆ ಕೂಡಿಟ್ಟು ಮ್ಯೂಸಿಯಂ ಮಾಡುವ ಚಾಳಿ ಅಂಥ ಆಸೆಗಳಿಗೆ ತಣ್ಣೀರು ಸುರಿಯುತ್ತಿರುತ್ತದೆ.

ಇಲ್ಲೆಲ್ಲಾ ಕಾದಂಬರಿಕಾರ ಒಡ್ಡುವ ಪರಿಪ್ರೇಕ್ಷ್ಯಗಳು ಕಾದಂಬರಿಯ ಮೂಲ ಉದ್ದೇಶಕ್ಕೆ ಪೂರಕವಾಗಿ ಬರುತ್ತವೆ. ಯಾವುದು ಮಲ, ಯಾವುದು ಸೌಂದರ್ಯ, ಯಾವುದು ಅಚ್ಚುಕಟ್ಟು ಮತ್ತು ಅದರ ತದ್ವಿರುದ್ಧವಾದುದು ಏನು ಮತ್ತು ಯಾವುದರ ಹಿನ್ನೆಲೆಯಲ್ಲಿ ಎಂಬುದು ಜಿಜ್ಞಾಸೆ. ಎಲ್ಲವೂ ನಾವದನ್ನು ಹೇಗೆ ನೋಡುತ್ತೇವೆ ಎಂಬುದರ ಮೇಲೆಯೇ ನಿಶ್ಚಯವಾಗುತ್ತದೆಯೇ ಅಥವಾ ನಾವದನ್ನು ಹಾಗೆ ನೋಡುವುದಕ್ಕೇ ಪ್ರೇರೇಪಿಸುವಂಥದ್ದು ಅದರಲ್ಲೇ ಇದೆಯೇ ಎಂಬ ಪ್ರಶ್ನೆಯನ್ನು ಹೊಸದಾಗಿ ಎತ್ತಬೇಕಿದೆ ಎಂಬುದು ಆಶಯ.

ನಾವು ಹುಟ್ಟಿನಿಂದ ನಮ್ಮ ಮನಸ್ಸಿನಲ್ಲಿ, ಸ್ಮೃತಿಯಲ್ಲಿಯೂ, ಕಟ್ಟಿಕೊಂಡು ಬಂದ ಒಂದು ಜಗತ್ತು ಆಧಾರಶೂನ್ಯವಾದದ್ದೇ? ನಮ್ಮ ನಂಬುಗೆಗಳು, ಇವರೇ ನಮ್ಮ ತಾಯಿ-ತಂದೆ ಎಂಬಂಥ ಮೂಲಭೂತ ಗ್ರಹಿಕೆಗಳಿಂದ ಹಿಡಿದು, ನಮ್ಮ ಭಾಷೆ, ನಮ್ಮ ಗಣಿತ, ನಮ್ಮ ವಿಜ್ಞಾನ, ನಮ್ಮ ದೃಷ್ಟಿ ಮತ್ತು ನೋಟ ಎಲ್ಲವೂ ಒಂದು ಮಗ್ಗುಲಲ್ಲಿ ಪೂರ್ವಾಗ್ರಹವಷ್ಟೇ ಆಗಿರುವುದು ಸಾಧ್ಯವಿಲ್ಲವೆ? ನಿಜವಾದ ನಿಜ ಬೇರೆಯೇ ಇರಬಹುದಾದ ಸಾಧ್ಯತೆಯೊಂದನ್ನು ಪೂರ್ತಿಯಾಗಿ ನಿರಾಕರಿಸಲು ನಿಮಗೇನಿದೆ ಆಧಾರ? ನಿಮಗೇನಿದೆ ಹಕ್ಕು?

ಸೈಮನ್ ಇವಳೇ ಅವಳು, ಈ ಹುಡುಗನ ತಾಯಿ ಎಂದಿದ್ದೇ, ಅವಳೂ ನಿಜ, ಇವನೇ ನನ್ನ ಮಗ, ನನ್ನ ಬಾಳಿನ ದೀಪ ಎಂದು ಬಿಡುತ್ತಾಳಲ್ಲ, ಇಬ್ಬರಿಗೂ ಏನು ಏಕಕಾಲಕ್ಕೆ ಹುಚ್ಚು ಹಿಡಿದಿರಬಹುದೆ? ಇದು ಪ್ರಶ್ನೆ. ಸಹಜವಾಗಿಯೇ ಆಕೆ ಕನ್ಯೆ, ಯಾವ ಕೂಸನ್ನೂ ಹಡೆದವಳಲ್ಲ. ಆದರೂ ಸಾಕ್ಷಾತ್ ಕನ್ಯೆ ಮೇರಿಯಂತೆ ಅವಳು ಇವನ ತಾಯಿ. ಇವನು ಅವನ ಅಪ್ಪನಲ್ಲ. ಆದರೂ ಅಪ್ಪನಂತೆಯೇ ಎಲ್ಲವನ್ನೂ ನಿರ್ವಹಿಸುತ್ತಾನೆ. ಇವರಿಬ್ಬರೂ ದಂಪತಿಗಳಲ್ಲ, ಯಾವತ್ತೂ ಒಟ್ಟಿಗೆ ಸಂಸಾರ ಮಾಡಿದವರಲ್ಲ, ಜೊತೆಗೆ ಮಲಗಿದವರಲ್ಲ. ಆದರೂ ಅವಳು ಅವನೊಂದಿಗೆ ಎಷ್ಟೋ ವರ್ಷಗಳ ಗಂಡ ಹೆಂಡಿರಂತೆ ಕಚ್ಚಾಡುತ್ತಾಳೆ.
ಹುಡುಗ ಒಂದು ವಿಚಿತ್ರ. ಹಾಗಾಗಿಯೇ ಇಲ್ಲಿ ನಿಜ ಮತ್ತು 'ನಿಜವಾದ ನಿಜ'ದ ಸಂದಿಗ್ಧಗಳೆಲ್ಲ ಮತ್ತಷ್ಟು ಗಾಢವೂ ಆಳವೂ ಆಗಿ ಬಿಡುತ್ತವೆ. ಇವನು ಹೊಸತೇ ಆದ ಒಂದು ಸಿದ್ಧಾಂತವನ್ನು ಒಡ್ಡುತ್ತಾನೆ. ಒಂದು ಆದ ನಂತರ ಎರಡು. ನಂತರ ಮೂರು, ನಾಲ್ಕು ಹೀಗೆ ಬರುತ್ತವೆ. ಆದರೆ ಒಂದು ಮತ್ತು ಎರಡರ ನಡುವೆ, ಅಥವಾ ಎರಡು ಮತ್ತು ಮೂರರ ನಡುವೆ ಅಥವಾ ಎರಡು ಮತ್ತು ನಾಲ್ಕರ ನಡುವೆ ಏನಿದೆ ಸಂಬಂಧ?

ನಾವು ಹುಟ್ಟಿನಿಂದ ಇದೆ ಎಂದೇ ಅಂದುಕೊಂಡು ಬಂದ ಸಂಬಂಧವನ್ನು ಒಂದು ಕ್ಷಣ ಮರೆತುಬಿಟ್ಟು ಯೋಚಿಸಿ. ಒಂದು ಹಣ್ಣು ಮತ್ತು ಅದರ ಪಕ್ಕ ಇನ್ನೊಂದು ಹಣ್ಣು ಇರಿಸಿದಾಗ ಎರಡು ಹಣ್ಣು ಯಾಕಾಗಬೇಕು? ಒಂದು ಹಣ್ಣು ಮತ್ತು ಒಂದು ಹಣ್ಣು ಯಾಕೆ ಅಲ್ಲ? ಸಂಖ್ಯೆಗಳ ನಡುವೆ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರವನ್ನು ಸಂಕಲ್ಪಿಸಿದ್ದು ಯಾರು? ಅದನ್ನು ಬಿಟ್ಟು ಬೇರೇನನ್ನೋ ಸಂಕಲ್ಪಿಸುವುದು ನಿಮಗೇಕೆ ಸಾಧ್ಯವಾಗಲಿಲ್ಲ? ಅಂದರೆ ಪೂರ್ವನಿರ್ದೇಶಿತ ಹಾದಿಯಲ್ಲಿ ಸಾಗಿದ್ದು, ನೀವು, ಹಣ್ಣುಗಳಲ್ಲ, ಅಂಕಿಗಳಲ್ಲ! ಹುಡುಗ ಹೇಳುತ್ತಾನೆ, ಒಂದು ಮತ್ತು ಎರಡರ ನಡುವೆ ಕಂದಕವಿದೆ, ಬಿದ್ದು ಹೋದೀರೀ, ಎಚ್ಚರ!
ನಿಜವೆಂದರೆ ನಿಜವೆಂದೇ ಈತ ನಂಬುವ ಡಾನ್ ಕಿಕ್ಸೋಟನ ಸಾಹಸದ ಕತೆಗಳು, ಮ್ಯಾಜಿಕ್ ಮತ್ತು ಜಾದೂಗಾರರ ಕುರಿತ ಅವನ ಅತೀವ ಆಸಕ್ತಿ, ಓದುವುದನ್ನಾಗಲೀ, ಗಣಿತವನ್ನಾಗಲೀ ಕಲಿಸುವುದಕ್ಕೇ ಸಾಧ್ಯವಿಲ್ಲದಂಥ ವಿಚಿತ್ರ ಪ್ರಭೃತಿ ಈತ ಎಂದು ಶಿಕ್ಷಕರು ಕೈಚೆಲ್ಲಲು ಕಾರಣನಾದವನೇ ಇದ್ದಕ್ಕಿದ್ದಂತೆ ಪಟಪಟನೆ ಓದುವುದು-ಬರೆಯುವುದೂ ಮಾಡಿ ನೀಡುವ ಶಾಕ್ ಎಲ್ಲವೂ ಇವನನ್ನು ಅತ್ತ ವಿಶೇಷ ಕಾಳಜಿ ಅಗತ್ಯವುಳ್ಳ ಮಗು ಎಂಬಂತೆಯೂ ಇತ್ತ ಇವನೊಬ್ಬ ಅವಧೂತನೋ, ಮಹಾನ್ ಪ್ರತಿಭಾನ್ವಿತನೋ ಎನಿಸುವಂತೆಯೂ ಮಾಡುವಾಗಲೇ ನಿಜವಾದ ನಿಜ ಯಾವುದು ಎಂಬ ಅದೇ ತೂಗುಗತ್ತಿಯಂಥ ಪ್ರಶ್ನೆ ನೆತ್ತಿಯ ಮೇಲೆ ತೂಗಾಡುತ್ತಲೇ ಇರುತ್ತದೆ. ಇವನಿಗೆ ಇತರರನ್ನು ಪ್ರಭಾವಿಸುವ ಒಂದು ಅತೀಂದ್ರಿಯ ಶಕ್ತಿಯೇನಾದರೂ ಇರಬಹುದೇ ಅಥವಾ ಅದು ಬರೇ ಮುದ್ದಾದ ಮಗುವಿಗೆ ಮರುಳಾಗುವ ಮಂದಿ ವರ್ತಿಸುವ ಬಗೆಯಷ್ಟೇ ಇರಬಹುದೆ? ಹುಡುಗ ಆಗಾಗ ಸುಳ್ಳು ಹೇಳಿ ಶಿಕ್ಷಕರ, ಹಿರಿಯರ ಹಾದಿ ತಪ್ಪಿಸಿ ಮಜಾ ತೆಗೆದುಕೊಳ್ಳುತ್ತಾನೆಂದು ಭಾವಿಸಿದ ಶಿಕ್ಷಕ ಇವನಿಗೆ 'ನಾನು ನಿಜವನ್ನೇ ಹೇಳುತ್ತೇನೆ' ಎಂದು ಬರೆಯಲು ಹೇಳಿದರೆ ಹುಡುಗ "ನಾನೇ ಸತ್ಯ" ಎಂದು (ಸತ್ಯದ/ಸುಳ್ಳಿನ) ತಲೆಯ ಮೇಲೆ ಹೊಡೆದಂತೆ ಬರೆಯುತ್ತಾನೆ!

ಕೂಟ್ಜೆ ಇಲ್ಲಿ ಕ್ರಿಸ್ತನನ್ನು ತಮಾಷೆ ಮಾಡುತ್ತಿದ್ದಾನೆಯೆ? ನಾವು ಇಂಥ ಒಂದು ಪ್ರಶ್ನೆಯನ್ನು ಅವಶ್ಯ ಕೇಳಿಕೊಳ್ಳಬೇಕು. ಅದೂ ಡುಂಢಿಯ ವಿವಾದ ಇನ್ನೂ ಹಸಿಬಿಸಿಯಾಗಿಯೇ ಇರುವಾಗ. ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್‌ನ ಆಗಸ್ಟ್ 31ರ ಸಂಚಿಕೆಯಲ್ಲಿ The Uses and Abuses of Allegory ಎಂಬ ಲೇಖನದಲ್ಲಿ ಬರುವ ಮಾತುಗಳನ್ನು ಗಮನಿಸಿ:

In one lengthy section, Simon reads David chapters of "Don Quixote", from which astute readers will pick out parallels between the deluded knight errant and the life of Jesus. It feels much like a literary essay.
Mr Coetzee is formidable thinker, and his writing doesn't carry the strident, evangelical tone of atheist apologias like, for instance, Philip Pullman's "The Good Man Jesus and the Scoundrel Christ" (2010). Yet by proposing to explain Jesus as a coddled fantasist among people hungry to make leaps of faith, he is being pointedly controversial. The allegory has a rich history as a form of salvational storytelling, from John Bunyan to Dante to the New Testament, where Jesus himself preached parables. Mr Coetzee's attempted subversion seems, in contrast, as bloodless as the placid city he invents.

ಅವಧೂತತನ ಮತ್ತು ಹುಚ್ಚಿನ ನಡುವೆ ಒಂದು ಸೂಕ್ಷ್ಮವಾದ ಗೆರೆಯಷ್ಟೇ ಇರುವುದೆಂದು ಅನುಮಾನಿಸುವುದು (ಯಾಕೆಂದರೆ ನಿಜವಾದ ನಿಜ ನಮಗಿನ್ನೂ ತಿಳಿದೇ ಇಲ್ಲವಾಗಿರಬಹುದಾದ್ದರಿಂದ) ಕೂಡ ವಿವಾದಕ್ಕೆ ಗುರಿಯಾಗಬಹುದಾದ್ದು ಸಹಜವೇ. ಆದರೆ ಸತ್ಯದ ಅನ್ವೇಷಣೆಯೇ ಮುಖ್ಯವಾದವರಿಗೆ ಅದೆಲ್ಲ ಜಿಜ್ಞಾಸೆ ಮುಖ್ಯವಾಗುವುದಿಲ್ಲ. ಅದು ಹಾದಿಯ ಎಡರು ತೊಡರುಗಳು ಮಾತ್ರ; ಗುರಿಯಲ್ಲ ಎಂಬ ಅರಿವು ಅಂಥವರನ್ನು ಮುನ್ನೆಡೆಸುತ್ತದೆ. ಅಲ್ಲದೆ ಇಲ್ಲಿ ಬರುವ ಡಾನ್ ಕಿಕ್ಸೋಟ್ ಕೂಡ ಸರ್ವಾಂಟೀಸನ ಕೃತಿಯಲ್ಲ, ಅದರ ಲೇಖಕ ಕೂಡ ಕಲ್ಪಿತ ಪಾತ್ರ!

ಈ ಹುಡುಗನಿಗೆ ಕ್ರಮಬದ್ಧವಾದ ಮತ್ತು ರೂಢಿಗತವಾದ ಶಿಕ್ಷಣವನ್ನು ಒದಗಿಸುವುದು ಕೊನೆಗೂ ಸಾಧ್ಯವಾಗುವುದಿಲ್ಲ. ಶಾಲೆಯಲ್ಲಿ ಈ ಹುಡುಗನಿಗೆ ವಿಶೇಷ ನಿಗಾ ಅಗತ್ಯವಿದೆ ಎಂಬ ಕಾರಣವನ್ನೊಡ್ಡಿ ಅವನನ್ನು ಅವನಂಥವರಿಗಾಗಿಯೇ ಇರುವ ವಿಶೇಷ ಶಾಲೆಗೆ ಸೇರಿಸಲು ತೀರ್ಮಾನಿಸಲಾಗುತ್ತದೆ. ಸಂಬಳ ಕೊಡಲು ಬಂದವನ ಮೇಲೆ ಹಲ್ಲೆ ಮಾಡಿ, ಅವನ ಹಣದ ಪೆಟ್ಟಿಗೆಯಿಂದ ಹಣ ಲಪಟಾಯಿಸಿ, ಅವನದೇ ಸೈಕಲನ್ನು ಕೂಡ ಕದ್ದು ಪರಾರಿಯಾದವನ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಂಡ, ಪೋಲೀಸರು ಕಾರ್ಯಾಚರಣೆಗಿಳಿದ ವಿವರಗಳು ಬರುವುದಿಲ್ಲ. ಆದರೆ ಶಾಲೆಗೆ ಕಳುಹಿಸದ ಹೆತ್ತವರಿಗೆ/ಪೋಷಕರಿಗೆ ಕಾನೂನಿನ ತೊಡಕುಗಳು ಹುಟ್ಟಿಕೊಂಡು, ಕೋರ್ಟು, ಕಾನೂನು, ಪೋಲೀಸು ಎಲ್ಲ ಕಾರ್ಯಾಚರಣೆಗಿಳಿಯುತ್ತವೆ ಇಲ್ಲಿ. ಹಾಗಾಗಿ ಒಮ್ಮೆ ವಲಸೆಹಕ್ಕಿಗಳಾಗಿ ನಿರಾಶ್ರಿತ ಶಿಬಿರಕ್ಕೆ ಬಂದ ಇದೇ ಮಂದಿ, ಕಾದಂಬರಿ ಮುಗಿಯುವ ಹೊತ್ತಿಗೆ ಮತ್ತೆ ನಿರಾಶ್ರಿತರಾಗಿದ್ದಾರೆ, ಅನಾಥರಾಗಿದ್ದಾರೆ. ಕಾದಂಬರಿ ಸುರುವಾಗುವುದು ಒಂದು ವಿಲಕ್ಷಣವಾದ ಮಾತಿನಿಂದ. ಕೊನೆ ಕೂಡ ಅದೇ ಮಾತಿನಿಂದ ಆಗುವುದು ಗಮನಾರ್ಹ.

"We are new arrivals, and we are looking for somewhere to stay." ನಾವು ಈ ಜಗತ್ತಿಗೆ ಬಂದಿದ್ದು ಕೂಡ ಹೆಚ್ಚೂಕಡಿಮೆ ಹೀಗೆಯೇ ಅಲ್ಲವೆ!

ಇದೇ ರೀತಿ ಕಾದಂಬರಿಯಲ್ಲಿ ಆಗಾಗ ಸೈಮನ್ ಆಡುವ ಮಾತುಗಳು, ಅದರ ಅಂತರಾರ್ಥ ಉಳಿದವರಿಗೆ ತಿಳಿಯದೇ ಗೊಂದಲವಾಗುತ್ತಿರುತ್ತದೆ. ಇದಕ್ಕೆ ಬರೇ ಭಾಷೆ ಕಾರಣವಾಗಿರದೇ, ಹಿಂದಿನ ನೆನಪುಗಳಿಗೆಲ್ಲ ತಿಲಾಂಜಲಿಯನ್ನಿತ್ತಿರುವ ನಿವಾಸಿಗಳು ಮತ್ತು ಸೈಮನ್ ನಡುವೆ ಇರುವ ಅಂತರ ಹೆಚ್ಚು ಕಾರಣವಾಗಿರುತ್ತದೆ. ಸೈಮನ್‌ನ ಯೋಚನಾ ಲಹರಿಯ ಜಾಡು ಕೂಡ ಉಳಿದವರಿಗೆ ಅನೂಹ್ಯವೇ. ಹಾಗಾಗಿ ಒಮ್ಮೆ ಹಡಗುಕಟ್ಟೆಯಲ್ಲಿ ಮೇಲ್ವಿಚಾರಕನಾಗಿರುವ ಅಲ್ವಾರೊ ಸಹಜವಾಗಿ ಆಡಿದ ಮಾತು ಸೈಮನ್‍ಗೆ ಜೀರ್ಣವಾಗುವುದಿಲ್ಲ. ಅವನು ತಮಾಷೆ ಮಾಡುತ್ತಿಲ್ಲವಷ್ಟೇ ಎಂದು ಸೈಮನ್ ತನ್ನನ್ನೆ ತಾನು ಕೇಳಿಕೊಳ್ಳುವಂತಾಗುತ್ತದೆ. ಮತ್ತೆ, ಸ್ವಲ್ಪ ಹೊತ್ತಿನ ಬಳಿಕ ಅವನು ತನಗೆ ತಾನೇ ಹೇಳಿಕೊಳ್ಳುತ್ತಾನೆ, "If it is a joke," he thinks, "it is a very deep joke."

ಈ ಕಾದಂಬರಿಯ ಮಟ್ಟಿಗೂ ಈ ಮಾತು ನಿಜವೇ ಎನ್ನುತ್ತದೆ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾದ ಒಂದು ವಿಮರ್ಶೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Monday, July 1, 2013

ಅಜ್ಞಾತನೊಬ್ಬನ ಆತ್ಮಚರಿತ್ರೆ

ನನ್ನ ಸಾಹಿತಿ ಮಿತ್ರರ ಜೊತೆ ಮಾತನಾಡುವಾಗ ಮತ್ತೆ ಮತ್ತೆ ಹೊಗಳಿಸಿಕೊಂಡ ಕಾದಂಬರಿ ಕೃಷ್ಣಮೂರ್ತಿ ಹನೂರು ಅವರ ‘ಅಜ್ಞಾತನೊಬ್ಬನ ಆತ್ಮಚರಿತ್ರೆ’. ಹನೂರರ ‘ಕೇರಿಗೆ ಬಂದ ಹೋರಿ’, ‘ಕತ್ತಲಲ್ಲಿ ಕಂಡ ಮುಖ’ ಮತ್ತು ‘ಕಳೆದ ಮಂಗಳವಾರ ಮುಸ್ಸಂಜೆ’ ಕಥಾಸಂಕಲನಗಳಿಗಾಗಿ ತುಂಬ ಪ್ರಯತ್ನಿಸಿದರೂ ವರ್ಷಗಟ್ಟಲೆ ಅದು ಎಲ್ಲಿಯೂ ಸಿಗಲಿಲ್ಲ. ಆಗಲೇ ನನಗೆ ತಿಳಿದಿದ್ದು, ಹನೂರರ ಅತ್ಯುತ್ತಮ ಕೃತಿಗಳಲ್ಲಿ ಬಾರೋ ಗೀಜಗ ಎಂಬ ಕಾದಂಬರಿ ಕೂಡ ಸೇರಿದೆ ಎಂದು. ಆದರೆ ಅವು ಯಾವುದೂ ಕೊನೆಗೂ ನನಗೆ ಸಿಗಲಿಲ್ಲ ಮತ್ತು ನಾನು ಅವುಗಳನ್ನು ಓದಿಲ್ಲ. ಹಾಗಿರುತ್ತ ಬಿಡುಗಡೆಯಾದ ಅವರ ಹೊಸ ಕಾದಂಬರಿಯ ಬಗ್ಗೆ ಸಹಜವಾಗಿಯೇ ನನ್ನಲ್ಲಿ ಕುತೂಹಲವಿತ್ತು. ಎಚ್.ಎಸ್.ಶಿವಪ್ರಕಾಶ್ ಮತ್ತು ನರಹಳ್ಳಿ ಬಾಲಸುಬ್ರಹ್ಮಣ್ಯರಂಥ, ನಾವೆಲ್ಲ ಗೌರವಿಸುವ ಮಹತ್ವದ ಬರಹಗಾರರಿಂದ ಕಾದಂಬರಿಯನ್ನು ಇನ್ನಿಲ್ಲದಂತೆ ಉತ್ಪ್ರೇಕ್ಷಿಸಿ ಪ್ರಶಂಸಿಸುವ ಎರಡು ಬರಹಗಳೂ ಪ್ರಜಾವಾಣಿಯಲ್ಲಿ ಕಾಣಿಸಿಕೊಂಡವು. ನಂತರ ವಿಜಯಕರ್ನಾಟಕದಲ್ಲಿಯೂ (ಲೇಖಕರ ಹೆಸರು ಮರೆತಿದೆ) ಒಂದು ಲೇಖನ ಬಂತು. ಗಾಂಧಿ ಬಜಾರ್ ಪತ್ರಿಕೆಯಲ್ಲಿ ಡಾ|| ಜಿ ಎನ್ ಉಪಧ್ಯರು ಇನ್ನಿಲ್ಲದಂತೆ ಹೊಗಳಿ ಬರೆದರು. ವಿಜಯವಾಣಿಯಲ್ಲಿ ಎಸ್.ವಿಜಯಶಂಕರರ ಲೇಖನ ಸರಣಿ ಬಂತು. ಪ್ರಕಟನೆಯ ಬೆನ್ನಿಗೇ ಕಸಾಪ ಕೊಡಮಾಡುವ ಒಂದು ದತ್ತಿ ಪ್ರಶಸ್ತಿ ಕೂಡ ಈ ಕೃತಿಗೆ ದಕ್ಕಿತು. ಆದರೆ ಇವೆಲ್ಲವುಗಳಿಂದ ಬಹುಷಃ ಅತಿಯಾದ ನಿರೀಕ್ಷೆ ಹುಟ್ಟಿಸಿದ್ದರಿಂದಲೋ ಏನೋ ಕಾದಂಬರಿಯ ಓದು ಮಾತ್ರ ನನ್ನಲ್ಲಿ ತೀರ ನಿರಾಸೆ ಹುಟ್ಟಿಸಿತು.

ಈ ಕಾದಂಬರಿ ಹೊರಬರುತ್ತಲೇ ವಿಶೇಷ ಪ್ರಶಂಸೆ, ಹೊಗಳಿಕೆ ಇತ್ಯಾದಿಗಳ ರತ್ನಗಂಬಳಿಯೇ ಹಾಸಲ್ಪಟ್ಟಿದ್ದು ವಿಶೇಷವೇ. ಎಷ್ಟೋ ಉತ್ತಮ ಕೃತಿಗಳು ಬಂದ ಸುದ್ದಿ ಕೂಡ ಕನ್ನಡಿಗರಿಗೆ ಸಿಗದೇ ಅವು ಕಣ್ಮರೆಯಾಗುವುದು ಹೊಸತೇ ಆದ ವಿದ್ಯಮಾನವೇನಲ್ಲವಲ್ಲ. ಕೇಶವ ಮಳಗಿಯವರ ಅಂಗದ ಧರೆಯ ಬಗ್ಗೆ ಸ್ವತಃ ಎಚ್ ಎಸ್ ಶಿವಪ್ರಕಾಶ್ ಹೇಳಿರುವುದು ಒಪ್ಪತಕ್ಕ ಮಾತೇ. ಆದರೂ ‘ಅಜ್ಞಾತನೊಬ್ಬನ ಆತ್ಮಚರಿತ್ರೆ’ಯ ವಿಷಯದಲ್ಲಿ ನನಗೊಂದು ಗಂಭೀರವಾದ ಅನುಮಾನವಿದೆ. ಬೆನ್ನುಡಿ ಬರೆದ ಗಿರೀಶ ಕಾರ್ನಾಡರಾದಿಯಾಗಿ ಈ ಕಾದಂಬರಿಯನ್ನು ಪ್ರಶಂಸಿದ ಮಹನೀಯರೆಲ್ಲ ನಿಜಕ್ಕೂ ಇದನ್ನು ಓದಿರಬಹುದೆ? ಗಾಂಧಿಬಜಾರಿನಲ್ಲಂತೂ ಡಾ.ಜಿ.ಎನ್.ಉಪಾಧ್ಯರು ಈ ಕಾದಂಬರಿಯನ್ನು ಹಿಗ್ಗಾಮುಗ್ಗಾ ಹೊಗಳಿರುವ ರೀತಿಯೇ ಭಯಹುಟ್ಟಿಸುವಂತಿದೆ! ಇಲ್ಲಿನ ಬಹುತೇಕ ವಾಕ್ಯಗಳೆಲ್ಲ ‘ಬಹುಹೃದ್ಯವಾಗಿ ಪಡಿಮೂಡಿದೆ, ಕಂಗೊಳಿಸುತ್ತದೆ, ನಾನಾ ಆಯಾಮಗಳನ್ನು ಹೊಂದಿದೆ, ಶ್ಲಾಘನೀಯ ಯತ್ನ ಇಲ್ಲಿ ನಡೆದಿದೆ, ಕಲಾತ್ಮಕ ಯತ್ನ ಇಲ್ಲಿ ಮಿಂಚಿದೆ, ಚೆನ್ನಾಗಿ ದುಡಿಸಿಕೊಂಡಿದ್ದಾರೆ, ಉಜ್ವಲ ಕಾದಂಬರಿ, ಚೇತೋಹಾರಿಯಾಗಿದೆ, ಯಾರೂ ತಲೆದೂಗಲೇ ಬೇಕು, ಉತ್ಕೃಷ್ಟ ಕಾದಂಬರಿ’ ಎಂದೇ ಕೊನೆಗೊಳ್ಳುತ್ತವೆ. ಇಂಥ ಮಾದರಿ ವಾಕ್ಯಗಳಿಗಾಗಿ ಈ ಲೇಖನವೇ ಒಂದು ಆಕರವಾಗಿ ನಿಲ್ಲುವಂತಿದೆಯಾದರೂ ಕಾದಂಬರಿಯನ್ನು ಓದಿದರೆ ಎಂಥಾ ಪೇಲವ ಕೃತಿಯೊಂದು ಹೀಗೆಲ್ಲ ಹೊಗಳಿಸಿಕೊಳ್ಳುತ್ತಿರುವುದರ ಹಿಂದಿರುವ ಕಾರ್ಯತಂತ್ರವೇ ಅನುಮಾನಕ್ಕೆಡೆಮಾಡುತ್ತದೆ.

ಈ ಕಾದಂಬರಿ ತನ್ನ ಕಥಾನಕದ ಅಥೆಂಟಿಸಿಟಿಗಾಗಿ ಏನೇನು ಕಸರತ್ತು ನಡೆಸಿದರೂ ಇಲ್ಲಿನ ಕಥಾನಕದಲ್ಲಿ ಹೊಸತೇನೂ ಇಲ್ಲ. ಸುಲೇಮಾನ್ ಸಾಬರ ಮನೆಯಲ್ಲಿರುವ ಹಳೆಯ ದಫ್ತರು, ಅದನ್ನು ಪ್ರತಿಮಾಡಿದ ಗಮಕದ ಗಣಪಯ್ಯ, ಸಂತನ ಸಮಾಧಿ ಮಂಟಪ ಯಾವುದೂ ನಮ್ಮಲ್ಲಿ ಹುಟ್ಟಿಸುವ ನಿರೀಕ್ಷೆಗಳನ್ನು ಕಾದಂಬರಿ ಸಫಲಗೊಳಿಸುವುದಿಲ್ಲ. ಬೆನ್ನುಡಿ - ಮುನ್ನುಡಿಗಳ ಹಿನ್ನೆಲೆಯಲ್ಲಿ ನಾವು ಸಹಜವಾಗಿಯೇ ನಿರೀಕ್ಷಿಸುವಂಥ ಗಹನವಾದದ್ದೇನೂ ಇಲ್ಲಿನ ಕಥಾನಕದಲ್ಲಿ ಇಲ್ಲ. ಹಾಗೆ ನೋಡಿದರೆ ಇಲ್ಲಿ ಯಾವುದೇ ಒಂದು ಗಟ್ಟಿಯಾದ ಕಥಾನಕ ಕೂಡ ಇಲ್ಲ. ದಳವಾಯಿಗಳು, ಸೈನಿಕರು ನಡೆಸುತ್ತಿದ್ದ ದೌರ್ಜನ್ಯಗಳಿಗೆ ಒತ್ತು ನೀಡಿ, ಇವರು ಹೆಂಗಸರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು ಎನ್ನುವುದನ್ನು ಚಿತ್ರಿಸುವುದರಲ್ಲೇ ತಣ್ಣಗಾಗುವ ಇದು ಟಿಪ್ಪೂ ಕಾಲದ್ದು, ಜಾನಪದ ಅಧ್ಯಯನದ ಮೂಲದ್ದು ಎಂಬುದೆಲ್ಲ ಅನಗತ್ಯ ಮತ್ತು ಹಾದಿತಪ್ಪಿಸುವ ಲೇಬಲ್‌ಗಳಷ್ಟೇ.

ಈ ಕಾದಂಬರಿಯನ್ನು ಓದುವಾಗ ನಿಶ್ಚಯವಾಗಿಯೂ ಬೇರೆ ಬೇರೆ ಕಾರಣಗಳಿಗಾಗಿ ತರಾಸುರವರ ದುರ್ಗಾಸ್ತಮಾನ, ಮಾಸ್ತಿಯವರ ಚಿಕವೀರ ರಾಜೇಂದ್ರ ಮತ್ತು ಚೆನ್ನಬಸವನಾಯಕ, ಶಂಕರ ಮೊಕಾಶಿಯವರ ಅವಧೇಶ್ವರಿ, ಎಸ್ ಎಲ್ ಭೈರಪ್ಪನವರ ಸಾರ್ಥ, ಕಂಬಾರರ ಶಿಖರಸೂರ್ಯದ ನೆನಪು ಮೂಡುವುದು ನಿಜ. ಆದರೆ ಇಂಥ ಕಾದಂಬರಿಗಳ ಸಾಲಿನಲ್ಲೇ ಇರುವಂತೆ ಫೋಸು ಕೊಡುವ ಈ ಕಾದಂಬರಿ ಮಾತ್ರ ಅವುಗಳ ಎದುರು ತೀರಾ ಎಳಸಾದ ಪ್ರಯತ್ನದಂತೆ ಕಾಣಿಸುತ್ತದೆ.

ಮೊದಲಿಗೆ ಇಲ್ಲಿ ಧರ್ಮಕಲಹವೇರ್ಪಟ್ಟಲ್ಲಿಗೆ ದಳವಾಯಿ ಹೊರಡುವಾಗ (ಪುಟ 42) ಅಮಾವಾಸ್ಯೆಯಿದ್ದರೆ, ಮರುದಿನ (ಪುಟ 70) ‘ಆಕಾಶದಲ್ಲಿ ಚೆಲ್ಲಿ ಸೂಸುವ ಬೆಳದಿಂಗಳು’ ಸಿಗುತ್ತದೆ. ಪುಟ 197ರಲ್ಲಿ ಅದು ಅಮಾವಾಸ್ಯೆಯೇ ಎಂದು ಮತ್ತೊಮ್ಮೆ ಉಲ್ಲೇಖಿಸಲ್ಪಟ್ಟಿದೆ.

ಮೊದಲಿನಿಂದಲೂ ಪಕ್ಕೆಯಲ್ಲಿ ಕತ್ತಿ ತಿವಿದು ಆದ ಗಾಯವಾಗಿಯೇ ಇದ್ದಿದ್ದು 190ನೇ ಪುಟಕ್ಕೆ ಬರುವಷ್ಟರಲ್ಲಿ ಕಿಬ್ಬೊಟ್ಟೆಗಾದ ಗಾಯವಾಗಿ ಬಿಡುತ್ತದೆ ಮತ್ತು ಇದೇ ಗಾಯ ಕೀವಾಗಿ ಅದು ಆತನ ಸಾವಿಗೂ ಕಾರಣವಾದಂತಿದೆ.

ಇದೆಲ್ಲ ಹೋಗಲಿ ಎಂದರೆ ಈ ದಳವಾಯಿ ಹೈದರಾಲಿಯ ಸೈನ್ಯದಲ್ಲಿ ಸಿಪಾಯಿಯಾಗಿ ಸೇರಿದ್ದು ಮದುವೆಯಾದ ನಂತರ. ಅದುವರೆಗೂ ಆತ ಒಬ್ಬ ನಿರುದ್ಯೋಗಿ. ಆದರೆ ಮದುವೆಗೂ ಮೊದಲೇ ದಳವಾಯಿಯಾಗಿ ಕಂದಾಯ ವಸೂಲಿಗೆ ಹೋಗಿ ಒಬ್ಬ ಸುಂದರಿಯನ್ನು ಹಾರಿಸಿಕೊಂಡು ಬಂದ ಕತೆಯನ್ನೂ ಇದೇ ದಳವಾಯಿ ಹೇಳುತ್ತಿದ್ದಾನೆ. ಮಾತ್ರವಲ್ಲ, ಅದುವರೆಗೆ ಹಾಗೆ ತಂದು ಮಡಗಿ ಆಮೇಲಾಮೇಲೆ ಕೊಂದು ಹಾಕಿದ ಯಾವ ಹೆಂಗಸೂ ಈ ಥರದ ಆಟ ಕಟ್ಟಲಿಲ್ಲವಲ್ಲ ಎಂದೂ ನೆನಪಿಸಿಕೊಳ್ಳುತ್ತಾನೆ. ಅಂದರೆ ಇವನು ಹಾಗೆ ಹೊತ್ತು ತಂದಿರಿಸಿಕೊಂಡ - ಕೊಂದ ರಖಾವುಗಳಲ್ಲಿ ಇವಳು ಮೊದಲನೆಯವಳೇನೂ ಅಲ್ಲ. ಇಲ್ಲಿ ಆಗಲೇ ಅವನು ದಳವಾಯಿಯಾಗಿದ್ದಾನೆ ಮತ್ತು ತನ್ನ ಕೈಕೆಳಗಿನ ಸಿಪಾಯಿಯ ಸುಪರ್ದಿಯಲ್ಲೇ ಅವಳನ್ನು ಇರಿಸುತ್ತಾನೆ. ಆದರೂ ಅವಳ ಒತ್ತಾಯದ ಹೊರತಾಗಿಯೂ ಅವಳನ್ನು ಮದುವೆಯಾಗುವುದಿಲ್ಲ ಯಾಕೆಂದರೆ ಅವನು ಅಪ್ಪ ನೋಡಿದ ಹುಡುಗಿಯನ್ನೇ ಮದುವೆಯಾಗಲಿರುವವನು! ಈಕೆಯ ಕತೆಯ ಉತ್ತರಾರ್ಧವೂ ಕಾದಂಬರಿಯ ಚೌಕಟ್ಟನ್ನು ಸೇರಿಕೊಂಡಿದೆಯಾದರೂ ಇಂಥ ಸೇರ್ಪಡೆಯಿಂದ ಕೃತಿಗಾದ ಲಾಭವೇನು, ಅದು ಕೃತಿಗೆ ಕೊಟ್ಟ ಘನತೆಯೇನು ಎಂದರೆ ಅಷ್ಟು ಆಶಾದಾಯಕವಾದ ಉತ್ತರವೇನೂ ಸಿಗುವುದಿಲ್ಲ.

ತನ್ನ ಏಳೆಂಟು ಮಂದಿ ಹೆಂಡಿರನ್ನು ಕಳೆದುಕೊಂಡ ವಿಧುರ ಅಪ್ಪನನ್ನು ಈ ದಳವಾಯಿ ಇನ್ನಿಲ್ಲದಂತೆ ದ್ವೇಷಿಸುತ್ತಾನೆ ಮತ್ತು ಪ್ರತಿಯೊಂದರಲ್ಲೂ ಅವನನ್ನು ವಿರೋಧಿಸುತ್ತಾನೆ! ಆದರೆ ಅಪ್ಪ ಹೇಳಿದವಳನ್ನು ಮದುವೆಯಾಗುವ ಆದರ್ಶದಿಂದ ತನಗೊಲಿದವಳನ್ನು ಕೀಳುಗೈದು ತಿರಸ್ಕರಿಸುತ್ತಾನೆ. ಈತ ಯಾವಾಗ ಮದುವೆಯಾದ, ಯಾವಾಗ ಸಿಪಾಯಿಯಾಗಿ ಸೇರಿದ ಮತ್ತು ಯಾವಾಗ ದಳವಾಯಿಯಾದ ಎನ್ನುವಲ್ಲೇ ಬಹುಷಃ ಕಾದಂಬರಿಕಾರರಿಗೆ ಸಿಕ್ಕಿದ ‘ದಫ್ತರು’ ಸ್ಪಷ್ಟವಿಲ್ಲ! ಹಾಗಾಗಿ ಓದುಗರೂ ಗೊಂದಲಕ್ಕೆ ಬೀಳುವುದು ತಪ್ಪುವುದಿಲ್ಲ.

ಕಾದಂಬರಿಯ ಸಣ್ಣಪುಟ್ಟ ವಿವರಗಳಲ್ಲಿ ನುಸುಳಿಕೊಳ್ಳುವ ತಪ್ಪುಗಳು ಮತ್ತು ಎಡವಟ್ಟುಗಳು ಒಟ್ಟಾರೆಯಾಗಿ ಕೃತಿ ಓದುಗನಿಗೆ ಕಟ್ಟಿ ಕೊಡುವ ಜೀವನಾನುಭವ, ಬದುಕಿನ ಕುರಿತ ಒಳನೋಟ ಮತ್ತು ದರ್ಶನಗಳು ಎಂದು ಕರೆಯುವ ಅನುಭಾವ - ಎಲ್ಲವೂ ಗಾಢವಾಗಿದ್ದರೆ ಗೌಣವಾಗುತ್ತವೆಯೇನೊ. ಆದರೆ ಈ ಕೃತಿ ಆ ಮಟ್ಟಕ್ಕೇರುವುದಿಲ್ಲ. ಓದುಗನಿಗೆ ಅಕ್ಷರಗಳಲ್ಲಿ ಸತ್ಯವಾಗಬೇಕಾದ ಅನುಭವ ‘ಹೌದು ಹೌದು’ ಅನಿಸದೇ ಎಡವಟ್ಟುಗಳೇ ಕಾಣಿಸ ತೊಡಗಿದರೆ ಕೃತಿಯ ಬಗ್ಗೆ ಗೌರವ-ಪ್ರೀತಿ ಎರಡೂ ಮೂಡುವುದು ಕಷ್ಟವಾಗುತ್ತದೆ. ಅಂಥಾ ಕಾದಂಬರಿಯೊಂದು ಹದವಾಗಿ ಹೊಗಳಿಸಿಕೊಂಡರೆ ತಕರಾರಿಲ್ಲ. ನಮ್ಮ ಸ್ನೇಹಿತರು, ಗೌರವಕ್ಕೆ-ಅಭಿಮಾನಕ್ಕೆ ಪಾತ್ರರಾದವರು ಬರೆದುದನ್ನು ಹಾಗೆ ಉತ್ತೇಜಿಸುವುದು ಸಹಜವಾದದ್ದೇ. ಹೊಸಬರ ವಿಚಾರದಲ್ಲಿ ಅಂಥ ಔದಾರ್ಯ ಕೂಡ ಉಚಿತವೇ. ಆದರೆ ಕಾದಂಬರಿಯ ಕೊನೆಯಲ್ಲಿ ಕೃಷ್ಣಮೂರ್ತಿ ಹನೂರರ ಬಗ್ಗೆ ಇರುವ ವಿವರವಾದ ‘ಪರಿಚಯ’, ಇವರ ಈ ಕಾದಂಬರಿಯ ಬಗ್ಗೆ ಬಂದಿರುವ ಘಟಾನುಘಟಿಗಳ ಪ್ರಶಂಸೆಯ ಸುರಿಮಳೆ ಮತ್ತು ಪ್ರಶಸ್ತಿಯ ಹಿನ್ನೆಲೆಯಲ್ಲಿ ಅನಿಸಿದ್ದನ್ನು ಹೇಳದೇ ಉಳಿಯುವುದು ಕೂಡ ಅಕ್ಷಮ್ಯವಾಗುತ್ತದೆ. ಅಲ್ಲದೆ, ಇದುವರೆಗೆ ಈ ಕೃತಿಯ ಕುರಿತು ಬಂದಿರುವ ಎಲ್ಲಾ ಅಭಿಪ್ರಾಯಗಳೂ ಏಕಮುಖವಾಗಿಯೇ ಇರುವುದು ಇನ್ನೊಂದು ವಿಶೇಷ! ಇಷ್ಟೆಲ್ಲ ಹೊಗಳಿಸಿಕೊಂಡ ಕನ್ನಡ ಕಾದಂಬರಿಯೇ ನಿರಾಶಾದಾಯಕವೆನಿಸಿದರೆ ಅಂಥ ಓದುಗ ಕನ್ನಡ ಸಾಹಿತ್ಯವೆಂದರೇ ಇಷ್ಟು ಎಂದುಕೊಳ್ಳುವುದಂತೂ ಖಂಡಿತ. ಹಾಗೆಯೇ ಪ್ರಾಮಾಣಿಕವಲ್ಲದ ಮಾತುಗಳಿಂದ ಒಂದು ಕೃತಿಯ ಪರ ವಕಾಲತ್ತು ವಹಿಸುವವರ ಬಗ್ಗೆ ಎಚ್ಚರವಹಿಸುವ ಮನಸ್ಥಿತಿಯೂ ಭಾವೀ ಓದುಗರಲ್ಲಿ ಮೂಡುವುದು ಖಚಿತ!

ಇಲ್ಲಿರುವುದು ಸುಲಿಗೆ, ಹಾದರ, ಕ್ರೌರ್ಯ ಮತ್ತು ಆ ಕುರಿತ ಉತ್ತಮ ಪುರುಷ ನಿರೂಪಣೆಯಲ್ಲಿ ಎಡವಿದ ಬರವಣಿಗೆ. ಉತ್ತಮ ಪುರುಷ ನಿರೂಪಣೆಗೇ ಕೆಲವೊಂದು ಮಿತಿಗಳು ಅನಿವಾರ್ಯವಾಗಿ ಅಂಟಿಕೊಂಡೇ ಇರುತ್ತವೆ. ಇದನ್ನು ಸ್ವಲ್ಪಮಟ್ಟಿಗೆ ತೊಡೆದು ಹಾಕುವ ಪ್ರಯತ್ನ ಕಾದಂಬರಿಯಲ್ಲಿದೆ. ಇದೇ ಸತ್ಯವಿರಲಾರದು, ಇದಕ್ಕೆಲ್ಲ ಇನ್ನೊಂದು ಮುಖವಿರಬಹುದು, ಅದು ವ್ಯತಿರಿಕ್ತವಾಗಿಯೂ ಇರಬಹುದೆಂಬ ಎಚ್ಚರ ಇಲ್ಲಿದೆ. ಹಾಗೆಯೇ ಸಂತನಲ್ಲದ ವ್ಯಕ್ತಿಯ ಸಾವು ಆತನಿಗೆ ಹೊರಿಸಿದ ಸಂತಪದವಿ ಮತ್ತು ತದನಂತರದ ರಾಜಕಾರಣ ನಿಶ್ಚಯವಾಗಿಯೂ ತುಂಬ ಗೌರವ ಮೂಡಿಸುವ ಆಯಾಮಗಳನ್ನು ಸೂಚಿಸುತ್ತಿದೆ. ಆದರೆ ಇಷ್ಟರಿಂದಲೇ ಕಾದಂಬರಿಯೊಂದು ಶ್ರೇಷ್ಠ ಕಲಾಕೃತಿಯಾಗಿ ಬಿಡುವುದಿಲ್ಲ. ಯಾಕೆಂದರೆ, ಒಂದೇ ವ್ಯಕ್ತಿತ್ವದ ಪರಸ್ಪರ ತಾಳಮೇಳವಿಲ್ಲದ, ದ್ವಿಧಾಭಾವದಲ್ಲಿ ಸಂತುಲನವಿಲ್ಲದೆ ಹೋಳಾದಂತಿರುವ ಚಿತ್ರಣ ದಳವಾಯಿಯ ಪಾತ್ರದ್ದು. ಒಂದು ಕಡೆ ಅವನು ಸುಲಿದು ತಿನ್ನುವವ, ಕಾಮುಕ, ಭ್ರಷ್ಟ, ಶೋಷಕ ಮತ್ತು ಹಿಂಸಾಪ್ರಿಯ ಕ್ರೂರ ರಕ್ಕಸ. ಇನ್ನೊಂದೆಡೆ ತನ್ನದೇ ಅಧಃಪತನದ ಕತೆಯನ್ನು ಹೇಳುವ, ಒಳ್ಳೆಯದು ಕೆಟ್ಟದು ಏನೆಂದು ಬಲ್ಲ, ಆಧ್ಯಾತ್ಮಕ್ಕೆ ತುಡಿಯುವ, ಹಿಂಸೆಗೆ ಮರುಗುವ ಪ್ರಬುದ್ಧ, ಮಾಗಿದ ಜೀವ! ಈ ಎಡಬಿಡಂಗಿತನದ ನಡುವಣ ಪರಿವರ್ತನೆಯ ಹಂತದ ಪ್ರಕ್ರಿಯೆಯೇ ಮಂಗಮಾಯ. ಕುದುರೆಯಿಂದ ಬಿದ್ದು ಗಾಯಗೊಂಡದ್ದೇ ಕಾರಣ ಎಂದು ಬೇಕಿದ್ದರೆ ನಂಬಬಹುದು. ಈ ನಿರೂಪಣೆಯ ಹಂತವೂ ಒಂದಿರಬೇಕಲ್ಲವೆ, ಆ ಹಂತದಿಂದ ಹಿಮ್ಮೊಗವಾಗಿ ಕಥಾನಕ ಹರಿಯುವುದಾದರೆ ಇದು ವ್ಯಕ್ತಿಕೇಂದ್ರಿತ ಪಶ್ಚಾತ್ತಾಪದ ಹುಯಿಲೋ ಅಥವಾ ಒಂದು ಕಾಲಘಟ್ಟದ ಎಲ್ಲಾ ಅಧಿಕಾರಿ ವರ್ಗದವರ ಅಧಪತನದ ಚಿತ್ರಣವೋ? ಕಾದಂಬರಿಕಾರರು ಹೇಳಿಕೊಂಡಿರುವ ‘ಮೂವತ್ತು ವರ್ಷಗಳ ಜಾನಪದ ಸಂಬಂಧದ ಐತಿಹಾಸಿಕ ಸಂಗತಿಗಳನ್ನು ಕಥೆ, ದಂತಕತೆಗಳನ್ನು ಸೃಜನಶೀಲ ಬರೆಹ ರೂಪದಲ್ಲಿ ಇರಿಸಬೇಕೆನಿಸಿತು’ ಎಂಬ ಅವರ ಆಶಯ ಇಲ್ಲಿ ಈಡೇರಿದ ಲಕ್ಷಣಗಳಿಲ್ಲ. ಇದ್ದರೆ ಬಹು ನಿರೀಕ್ಷಿತವಾದ ಅಂಥ ಒಂದು ಸಾರ್ಥಕ ಭಾವ ಓದುಗರಿಗೂ ದಕ್ಕಬೇಕಲ್ಲವೆ?

ಹಾಗೆಯೇ ಇವನ ಮತ್ತು ಇವನ ಅಪ್ಪನ ಸಂಬಂಧ. ಅದು ಯಾವಾಗ ವಿದ್ವೇಷಕ್ಕಿಳಿಯುವುದೋ, ಯಾವಾಗ ಕಳ್ಳುಬಳ್ಳಿ ಸಂಬಂಧದ ಲಯ ಹಿಡಿದು ಮಿಡಿಯುವುದೋ ದೇವರೇ ಬಲ್ಲ! ಇಂಥದ್ದೇ ವ್ಯಕ್ತಿತ್ವದ ಇವನ ಅಪ್ಪನ ಕತೆಯೂ ಇಲ್ಲಿದೆಯಾದರೂ ಅದು ಯಾವುದೇ ಬಗೆಯಲ್ಲಿ ದಳವಾಯಿಯ ಪಾತ್ರಕ್ಕೆ ಒಂದು ಪರಿಪ್ರೇಕ್ಷ್ಯವನ್ನು ಒಡ್ಡುವ ಸಶಕ್ತ ಪಾತ್ರವಾಗದೇ ಕೇವಲ ಪಡಿಯಚ್ಚಾಗಿಯೇ ಉಳಿದು ಬಿಡುತ್ತದೆ. ಇವನು ಎಗರಿಸಿಕೊಂಡು ಬಂದ ಧೀರೆಯ ಕತೆಯೂ ಪಡೆದುಕೊಳ್ಳಬಹುದಾಗಿದ್ದ ಒಂದು ಉನ್ನತ ಮಜಲಿಗೇರದೆ, ಸಾಮಾನ್ಯ ಪಾತ್ರವಾಗಿ, ಬರೇ ಬಾಯಿಬಡುಕಿಯಾಗುವುದರಲ್ಲೇ ತನ್ನೆಲ್ಲಾ ಪ್ರತಿರೋಧದ ರಂಗನ್ನು ಕಾಣಿಸಿ ತಣ್ಣಗಾಗುವುದಕ್ಕೇ ತೃಪ್ತವಾಗಿದೆ. ಹೆಚ್ಚೆಂದರೆ ಈಕೆ ಮನಸ್ಸಿನ ಅಗತ್ಯಕ್ಕೋ ದೇಹದ ಅಗತ್ಯಕ್ಕೋ ಇನ್ಯಾರೊಂದಿಗೋ ಓಡಿಹೋಗಿ ತನ್ನಷ್ಟಕ್ಕೆ ತಾನು ಮಜವಾಗಿದ್ದ ಹೆಣ್ಣಲ್ಲ, ದಿಟ್ಟೆ ಎನಿಸುವುದರಾಚೆ ಈ ಪಾತ್ರ ಬೆಳೆಯುವುದಿಲ್ಲ. ಇಂಥ ಚಿತ್ರಣದ ಹಿಂದಿರುವ ಮನೋಧರ್ಮದ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ, ಅಲ್ಲವೆ? ಅಷ್ಟಿಷ್ಟು ಅವರಿವರ ಕತೆಯೂ ಇಲ್ಲಿದ್ದು ಅವು ಪುಟ ತುಂಬಿಸುವುದರಾಚೆ ಕಾದಂಬರಿಯ ಶ್ರೀಮಂತಿಕೆಗೆ ಕಾರಣವಾಗುವ ಮಟ್ಟದಲ್ಲಿಲ್ಲ.

ಒಬ್ಬ ನುರಿತ ಲೇಖಕನ ಸೃಜನಶೀಲ ಕೃತಿಯಾಗಿ ಭಾಷೆ, ತಂತ್ರ, ಕಥಾನಕದ ನಡಿಗೆ, ಓದಿಸಿಕೊಳ್ಳುವ ಗುಣ ಮತ್ತು ಆಶಯದಲ್ಲಿ ಖಂಡಿತವಾಗಿಯೂ ಇದು ಕೆಟ್ಟ ಕಾದಂಬರಿಯಲ್ಲ. ಆದರೆ ಓದಲೇ ಬೇಕಾದ ಒಂದು ಅತ್ಯುತ್ತಮ ಕಾದಂಬರಿಯೂ ಇದಲ್ಲ ಎನ್ನುವುದು ನನ್ನ ಅನಿಸಿಕೆ.

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Wednesday, April 24, 2013

ಚೇತೋಹಾರಿ ಓದಿನ, ಹೊಸತನದ ‘ನೀಲಿಗ್ರಾಮ’

ವಿ.ಆರ್.ಕಾರ್ಪೆಂಟರ್ ಅವರ ಹಿಂದಿನ ಕಾದಂಬರಿ 'ಅಪ್ಪನ ಪ್ರೇಯಸಿ' ಓದಿದವರಿಗೆ ನೀಲಿಗ್ರಾಮದ ವಸ್ತು ವಿನ್ಯಾಸ ಮತ್ತು ಕಥಾನಕದ ಬೆಳವಣಿಗೆಯ ವಿಷಯದಲ್ಲಿ ಕಾರ್ಪೆಂಟರ್ ಅವರು ಸಾಧಿಸಿದ ಪ್ರಗತಿ ಕಣ್ಣಿಗೆ ಹೊಡೆದು ಕಾಣಿಸದಿರದು. 'ಅಪ್ಪನ ಪ್ರೇಯಸಿ'ಯಲ್ಲಿ ಕಾದಂಬರಿ ತೊಡಗುವುದೇ ನಿರೂಪಕ ತನ್ನ ಕಾಣೆಯಾದ ಅಪ್ಪನನ್ನು ಹುಡುಕಿ ಹೊರಟಲ್ಲಿಂದ.

'ನೀಲಿಗ್ರಾಮ'ದಲ್ಲಿಯೂ ಆರಂಭ ಇಂಥ ಒಂದು ಹುಡುಕಾಟದಿಂದಲೇ. 'ಅಪ್ಪನ ಪ್ರೇಯಸಿ'ಯ ನಿರೂಪಕನ ಬದುಕು ಸಾಕಷ್ಟು ಸಂಕೀರ್ಣವಾಗಿದೆ. ಅವನ ಉದ್ಯೋಗ, ಪ್ರೇಮ, ಸಾಂಸಾರಿಕ ತಾಪತ್ರಯಗಳು ಮತ್ತು ಒಡನಾಟದ ಗೆಳೆಯರು, ಜಗಳ ಹೊಡೆದಾಟಗಳು ಒಂದು ಸ್ತರದಲ್ಲಿಯೂ, ನಿರೂಪಕ ಚಿತ್ರಿಸುತ್ತ ಹೋಗುವ ಅಪ್ಪನ ಪಾತ್ರದ ಸಂಕೀರ್ಣತೆಗಳು ಇನ್ನೊಂದು ಸ್ತರದಲ್ಲಿಯೂ ಕಾದಂಬರಿಯನ್ನು ನೇಯುತ್ತವೆ; ಮತ್ತು ಈ ಪಯಣ ತುಂಬ ಆಪ್ತವೂ, ವಿವರಗಳಲ್ಲಿ ಪುಷ್ಟವೂ ಆಗಿದ್ದು ಅಥೆಂಟಿಕ್ ಆದ ಒಂದು ಹೊಸ ಜಗತ್ತನ್ನು ತೆರೆದು ತೋರಿಸುವ ಕಾದಂಬರಿಕಾರನೊಬ್ಬನ ಆಗಮನದ ಭರವಸೆಯನ್ನು ಹುಟ್ಟಿಸುವಂತಿತ್ತು.

ಆದರೆ ದಿಡೀರನೇ ಮುಕ್ತಾಯಕ್ಕೆ ಬಂದುಬಿಡುವ ಕಾದಂಬರಿ ಓದುಗನನ್ನು ನಡುದಾರಿಯಲ್ಲೇ ಕೈಬಿಟ್ಟ ಅನುಭವದೊಂದಿಗೆ ದೂರವಾಗಿತ್ತು. ಇಲ್ಲಿ ಅಪ್ಪನ ಪ್ರಣಯ ಮತ್ತು ಮಗನ ಮೊದಲ ಪ್ರೇಮದಂಥ ನವಿರಾದ ಒಂದು ಭಾವನೆಗಳ ನಡುವಣ ಅವ್ಯಕ್ತ ಮುಖಾಮುಖಿ ಸಂಬಂಧದ, ತಲೆಮಾರಿನ, ಊರ ಇನ್ನಷ್ಟು ಮಂದಿಯ ಜೀವನ ದೃಷ್ಟಿಯ ಪಾತಳಿಗಳ ಮೂಲಕ ನಮಗೆ ಪ್ರಸ್ತುತ ಪಡಿಸಲ್ಪಡುವುದಾದರೂ ಆ ಕಾದಂಬರಿಯ ಮುಕ್ತಾಯ, ಅಲ್ಲಿಂದ ವಸ್ತು ಪಡೆಯಬಹುದಾಗಿದ್ದ/ಬೇಕಿದ್ದ ಬೆಳವಣಿಗೆ ಮತ್ತು ಆ ಮೂಲಕ ಕೃತಿಗೆ ದಕ್ಕಬೇಕೆನಿಸುವ/ದಕ್ಕ ಬಹುದಾಗಿದ್ದ ಆಕೃತಿ ಪರಿಪೂರ್ಣಗೊಂಡ ಭಾವ ಓದುಗನಲ್ಲಿ ಮೂಡುವುದು ಕಷ್ಟಕರವಿತ್ತು.

ಹೊಳಹುಗಳನ್ನಷ್ಟೇ ಕಾಣಿಸಿ ಮುಗಿಯುವ ಕವನದ ಶೈಲಿ ಕಾರ್ಪೆಂಟರ್ ಅವರ ಎರಡನೆಯ ಕಾದಂಬರಿಯಲ್ಲಿಯೂ ಮುಂದುವರಿದಿದೆ, ಆದರೆ ಹೆಚ್ಚು ಕಲಾತ್ಮಕವಾದ ಭಂಗಿಯಲ್ಲಿ, ತಾಂತ್ರಿಕ ನೈಪುಣ್ಯದೊಂದಿಗೆ ಎನ್ನುವುದು ಮುಖ್ಯ. ಹೆಚ್ಚೆಂದರೆ ನಾಲ್ಕು ಗಂಟೆಗಳಲ್ಲಿ ಓದಿಸಿಕೊಂಡು ಕೊನೆಮುಟ್ಟಿಸುವ ಈ ಕಾದಂಬರಿ ಆರಂಭದಲ್ಲೇ ನಮ್ಮನ್ನು ಒಂದು ಫ್ಯಾಂಟಸಿಯ ಜಗತ್ತಿನ ಆಳವಿಲ್ಲದ ಕಂದಕಕ್ಕೆ ತಳ್ಳಿಬಿಡುತ್ತದೆ. ಅಲ್ಲಿ ತೆರೆದುಕೊಳ್ಳುವ ನೀಲಿಗ್ರಾಮದ ಚಿತ್ರ ಒಂದು ಭ್ರಮೆಯೆಂದರೆ ಭ್ರಮೆ, ನಿಜವೆಂದರೆ ನಿಜ ಮಾದರಿಯದ್ದು.

ಆದರೆ ಇಲ್ಲಿ ಎರಡೂ ಜಗತ್ತುಗಳಿವೆ. ಒಂದು ನಾವು ಸತ್ಯವೆಂದುಕೊಂಡ, ಶಂಕರಾಚಾರ್ಯರಂಥ ದಾರ್ಶನಿಕರು ಮಿಥ್ಯೆ ಎಂದು ಕರೆದ ನಮಗೆಲ್ಲ ಕಾಮನ್ ಆದ ಜಗತ್ತು. ಇದನ್ನು ವಾಸ್ತವವೆನ್ನುತ್ತೇವೆ. ಇನ್ನೊಂದು ವಿ.ಆರ್.ಕಾರ್ಪೆಂಟರ್ ಸೃಷ್ಟಿಸಿದ ಅವರಿಗಷ್ಟೇ ಅದರ ಆಳ-ಅಗಲ ಗೊತ್ತಿರುವ ಅವರದೇ ಆದ ಜಗತ್ತು. ಅದನ್ನು ಕಾಲ್ಪನಿಕ ಜಗತ್ತು ಎಂದುಕೊಳ್ಳಬಹುದು.
ಆದರೆ ನಮ್ಮ ವಾಸ್ತವಿಕ ಜಗತ್ತಿನ ಮಿಥ್ಯೆ ಮತ್ತು ಈ ಕಾಲ್ಪನಿಕ ಜಗತ್ತಿನ ಸತ್ಯಗಳ ಮುಖಾಮುಖಿಯಾಗುವ ಒಂದು edge ಇದೆಯಲ್ಲ ಅದೇ ಯಾವಾಗಲೂ ಇಂಥ ಮಾಂತ್ರಿಕ ವಾಸ್ತವವನ್ನು ಚಿತ್ರಿಸುವ ಕಾದಂಬರಿಗಳ ಜೀವ ಚೈತನ್ಯವನ್ನು ನಿರ್ಧರಿಸುವ ಪ್ರಧಾನ ಅಂಶವಾಗಿರುತ್ತದೆ, ಅಂಥ ತಂತ್ರದ ಆಶಯವನ್ನು ಕಾಣಿಸುವ ಕುರುಹಾಗಿರುತ್ತದೆ. ಫ್ಯಾಂಟಸಿಯನ್ನು ಒಂದು ತಂತ್ರವಾಗಿ ಬಳಸಿಕೊಂಡು ಕತೆ ಹೇಳುವ ಕಾರ್ಪೆಂಟರ್ ಆ ಮೂಲಕ ಕಾಣಿಸ ಬಯಸುವುದೇನನ್ನು ಎಂಬುದೇ ಇಲ್ಲಿ ಬಹುಮುಖ್ಯವಾಗುವ ಪ್ರಶ್ನೆ.

ಹಾಗಾಗಿ ಕಾದಂಬರಿಯನ್ನು ಓದುತ್ತಿದ್ದಂತೆ ಇಲ್ಲಿನ ವಿವರಗಳಲ್ಲಿ ಇಡೀ ಕಾದಂಬರಿಯ ಮೂಲಸೂತ್ರಕ್ಕೆ ಬೇರೆ ಬೇರೆ ಆಯಾಮಗಳಲ್ಲಿ ಧ್ವನಿಯಾಗಬಲ್ಲ ಮತ್ತು ಸಂವಾದಿಯಾದ ನೆಲೆಯನ್ನು ತೆರೆದು ತೋರಿಸಲಿರುವ ವಿವರಗಳು ಮತ್ತು ಕಾದಂಬರಿಗೆ ಅಗತ್ಯವಾದ ಒಂದು ವಾತಾವರಣವನ್ನು ನಿರ್ಮಿಸುವುದಕ್ಕಾಗಿಯಷ್ಟೇ ಬರುವ ವಿವರಗಳು ಯಾವುವು ಎಂಬ ಬಗ್ಗೆ ಸಹಜವಾಗಿಯೇ ಕುತೂಹಲ ತೊಡಗುತ್ತದೆ.
ಅಂಥವುಗಳ ಕುರಿತೆಲ್ಲ ವಿಶೇಷವಾಗಿ ತಲೆಕೆಡಿಸಿಕೊಳ್ಳದೆ ಸುಮ್ಮನೇ ಓದುತ್ತ ಹೋಗುವಾಗಲೂ ಮನಸ್ಸಿನ ಒಂದು ಪಾತಳಿಯಲ್ಲಿ ಅವುಗಳೆಲ್ಲ ದಾಖಲಾಗುವ ವಿಶಿಷ್ಟ ಕ್ರಮ ಒಂದಿರುತ್ತದೆ. ಈ ಸುಖಕ್ಕಾಗಿಯೇ ನಮಗೆ ಇಂಥ ಫ್ಯಾಂಟಸಿಯನ್ನು ನೆಚ್ಚಿಕೊಂಡ ಕತೆಗಳು, ಕಾದಂಬರಿಗಳು ಹೆಚ್ಚು ಇಷ್ಟವಾಗುವುದೇನೊ!

ಹಾಗೆಯೇ, ಇಲ್ಲಿನ ವಾಸ್ತವಿಕ ಜಗತ್ತಿನ ವಿವರಗಳು ತರ್ಕಕ್ಕೆ, ಕಾರ್ಯಕಾರಣ ಸಂಬಂಧಗಳಿಗೆ ಬದ್ಧವಾಗಿರುವ ಅನಿವಾರ್ಯ ಕೂಡಾ ಹೆಚ್ಚೇ ಇರುತ್ತದೆ. ಯಾಕೆಂದರೆ, ಕಾಲ್ಪನಿಕ ಜಗತ್ತಿನ ಏನನ್ನೂ ನಾವು ಪ್ರಶ್ನಿಸುವಂತಿಲ್ಲ, ಹಾಗಲ್ಲ ಹೀಗೆ ಎಂದು ವಾದಿಸುವಂತಿಲ್ಲ. ಅದು ಸಂಪೂರ್ಣವಾಗಿ ಕಾದಂಬರಿಕಾರನ ಸ್ವಾತಂತ್ರ್ಯಕ್ಕೆ ಸೇರಿದ್ದು.

ಹಾಗಾಗಿ ಅದರಿಂದ ಹೊರಗೆ, ಈ ಕಡೆ ವಾಸ್ತವ ಜಗತ್ತಿನ ವಿದ್ಯಮಾನಗಳು ಹೆಚ್ಚು ಸ್ಪಷ್ಟವಿರಬೇಕಾಗುತ್ತದೆ. ಆದರೆ ವಿ.ಆರ್.ಕಾರ್ಪೆಂಟರ್ ಅವರ ನೀಲಿಗ್ರಾಮ ಕಾದಂಬರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ವಾಸ್ತವಿಕ ಜಗತ್ತಿನಲ್ಲೂ ಸಂಭವನೀಯವಾಗಿಯೇ ಇರುವಂಥ ಮಿಥ್ಯಾವಕಾಶವನ್ನು ಬಹುಸಮರ್ಥವಾಗಿ ಬಳಸಿಕೊಳ್ಳುತ್ತದೆ. ಇದರಿಂದಾಗಿಯೇ ವಾಸ್ತವಿಕ ಜಗತ್ತಿನ ಮಿಥ್ಯೆ ಮತ್ತು ಕಾಲ್ಪನಿಕ ಜಗತ್ತಿನ ಸತ್ಯಗಳ ನಡುವಿನ ಸಂಯುಕ್ತ ಭಾಗ ಇಲ್ಲಿ ಇನ್ನಷ್ಟು ಮೊನಚಾಗುವುದು ಸಾಧ್ಯವಾಗಿದೆ. ಸಾಹಿತ್ಯಾಸಕ್ತರು ಇದನ್ನು ಸ್ವಲ್ಪ ವಿವರವಾಗಿ, ಸೂಕ್ಷ್ಮವಾಗಿ ಗಮನಿಸ ಬೇಕಾದ ಅಗತ್ಯವಿದೆ.

ವಿ.ಆರ್.ಕಾರ್ಪೆಂಟರ್ ಅವರ ಕಾದಂಬರಿಯ ಕೇಂದ್ರಪಾತ್ರವೇ ಹೆಣ್ಣು. ಅದು ಗಮ್ಯ ಎಲ್ಲಿ ಎಂಬ ಬಗ್ಗೆ ಸ್ಪಷ್ಟವಿಲ್ಲದೇ ಹೊರಟ ಒಂದು ಪ್ರಯಾಣದ ಇಬ್ಬರು ಪ್ರಯಾಣಿಕರ ತಾಯಿ. ಈ ವಿಲಕ್ಷಣ ಪಯಣವೇ ಚಿತ್ತಾಲರ 'ಪಯಣ' ಕತೆಯ ಪ್ರಯಾಣವನ್ನು ಸೂಚಿಸುವಂತಿದ್ದರೂ ಇದಕ್ಕಿಂತ ಹೆಚ್ಚು ಪ್ರಖರವಾಗಿ ಮೇಲೆ ಹೇಳಿದ ವಾಸ್ತವ ಜಗತ್ತಿನಲ್ಲೇ ವಾಸ್ತವ ಮತ್ತು ಭ್ರಾಮಕ ಅಂಶಗಳ overlapping ಕಾಣಿಸಿಕೊಳ್ಳುವುದು ಈ ತಾಯಿಯ ಪಾತ್ರಚಿತ್ರಣದಲ್ಲೇ. ಅದರಲ್ಲಿಯೇ ವಿ.ಆರ್.ಕಾರ್ಪೆಂಟರ್ ಒಂದು ಮಾಯಕತೆಯನ್ನು ಸೃಷ್ಟಿಸಿಬಿಡುವ ಪರಿಯನ್ನು ಗಮನಿಸಿ:

'ಅಪ್ಪ ಅಮ್ಮನ ವಿಚಾರವಾಗಿ ತೆಗೆದುಕೊಂಡ ನಿರ್ಧಾರ ನಮ್ಮನ್ನು ತೀವ್ರವಾಗಿ ಕಲಕಿತ್ತು. ಅಮ್ಮ ಅಪ್ಪನಿಗೆ ವಿಧೇಯಳಾಗಿರಲಿಲ್ಲ ನಿಜ. ಆದರೆ ಅವಳು ವ್ಯಭಿಚಾರಿಣಿಯಲ್ಲ! ತನಗೆ ಇಷ್ಟ ಬಂದವರನ್ನು ಹಾಸಿಗೆಗೆ ಎಳೆಯುತ್ತಿದ್ದಳು. ಆದರೆ ಎಂದೂ ಕೂಡ ಸಿಕ್ಕಸಿಕ್ಕವರ ಸಂಗ ಬಯಸುತ್ತಿರಲಿಲ್ಲ. ಮೈಗೆ ಹಿಡಿಸಿದವರಿಗೆ ಮಾತ್ರವೇ ತನ್ನ ದೇಹವನ್ನು ಹಂಚುತ್ತಿದ್ದಳು. ಆದರೆ ಎಂದೂ ತನ್ನ ದೇಹವನ್ನು ಬಿಕರಿಗೆ ಇಟ್ಟವಳಲ್ಲ. ಅಲ್ಲದೇ ಅಪ್ಪನಿಗೆ ವಿರುದ್ಧವಾದ ಮಾನವೀಯ ಹೃದಯದವಳಾಗಿದ್ದಳು.' (ಪುಟ 18)

'ತೋಳದ ಬೇಟೆಗೆ ಹೋಗಿದ್ದ ಅಪ್ಪ ಅಂದು ಎಂದಿನ ರೂಢಿಗತ ಅವಧಿಗಿಂತಲೂ ಮುಂಚಿತವಾಗಿಯೇ ಮನೆಗೆ ಬಂದ. ಎಂದಿನಂತೆ ಅಂದೂ ಕೂಡ ಅಪ್ಪ ಜಾಸ್ತಿಯೇ ಕುಡಿದಿದ್ದ. ಕಬ್ಬು ಅರೆಯುವ ಆಲೆಮನೆಯಲ್ಲಿ ಅಮ್ಮ ಮೇಲ್ವಿಚಾರಕನ ಜೊತೆ ಚಕ್ಕಂದಕ್ಕೆ ಬಿದ್ದಿದ್ದಳು.' (ಪುಟ 102)

'ಅಮ್ಮನ ಚಂಚಲ ಸ್ವಭಾವವನ್ನು ಚೆನ್ನಾಗಿ ಅಧ್ಯಯನ ಮಾಡಿದ್ದ ಕಾನಿ ಅವಳನ್ನು ಇಡಿಯಾಗಿ ಆವರಿಸಿಕೊಂಡ. ಅವಳೂ ಕೂಡ ಅವನನ್ನು ಇನ್ನಿಲ್ಲದಂತೆ ಮೋಹಿಸತೊಡಗಿದ್ದಳು. ಒಂದು ದಿನ ಅವಳ ಕಣ್ಣಿಗೆ ಕಾನಿ ಬೀಳದಿದ್ದರೆ ಚಡಪಡಿಸುತ್ತಿದ್ದಳು. ಅವಳ ದೇಹ ಕಂಪಿಸುತ್ತಿತ್ತು. ಮಾತುಗಳು ತೊದಲುತ್ತಿದ್ದವು. ಅವರು ಪ್ರತಿಬಾರಿಯೂ ಇದೇ ಮೊದಲ ಬಾರಿಗೆ ಸೇರುತ್ತಿರುವ ಪ್ರಣಯಿಗಳಂತೆ ಸೇರುತ್ತಿದ್ದರು. ಕಾನಿ ಬರುವುದಕ್ಕೆ ಮೊದಲೇ ಅಮ್ಮ ಅನೇಕ ಗಂಡಸರನ್ನು ಬೆಸೆದುಕೊಂಡಿದ್ದರೂ, ಅವನು ಅವಳ ಹೃದಯದಲ್ಲಿ ವಿಶೇಷ ಸ್ಥಾನ ಗಿಟ್ಟಿಸಿದ್ದ.' (ಪುಟ 129)

ಇಲ್ಲಿನ ಇನ್ನೊಂದು ವೈರುಧ್ಯವೆಂದರೆ, ಹೀಗೆ ಉತ್ಕಟವಾಗಿ ಕಾನಿಯ ಮೋಹಕ್ಕೆ ಬಿದ್ದ ಅದೇ ಹೆಣ್ಣು ಅದೇ ಕಾಲಕ್ಕೆ ಮೇಲ್ವಿಚಾರಕನ ಜೊತೆಗೂ ಅಂಥದ್ದೇ ಸಂಬಂಧವನ್ನಿಟ್ಟುಕೊಂಡಿರುವುದು. ಹಾಗಾಗಿ ಮೇಲ್ವಿಚಾರಕ ಸಿಕ್ಕಿಬಿದ್ದು ಪ್ರಾಣ ಕಳೆದುಕೊಂಡಾಗ ಈಕೆ ಕಾನಿಯನ್ನು ಯಾಚಿಸುತ್ತಾಳೆ. ಹಲವರೊಂದಿಗೆ ಲೈಂಗಿಕ ಸಂಬಂಧವನ್ನಿಟ್ಟುಕೊಂಡ ಗಂಡು ಪಾತ್ರಗಳನ್ನು ನಾವು ಬಲ್ಲೆವು. ಅಂಥ ಗೃಹಿಣಿಯೊಬ್ಬಳನ್ನು ಇಲ್ಲಿ ಭೇಟಿಯಾಗುತ್ತೇವೆ.
ಅಂಥ ಗಂಡು ಪಾತ್ರಗಳಾದರೂ ಏಕಕಾಲಕ್ಕೆ ಹಲವರ ಜೊತೆ ಲೈಂಗಿಕತೆಗೆ ಮೀರಿದ ಸಂಬಂಧವನ್ನು ಬೆಳೆಸಿರುವ ಪ್ರಸಂಗ ಅಪರೂಪ. ಇಲ್ಲಿ ಈಕೆ ಏಕಕಾಲಕ್ಕೆ ಕಾಮವಷ್ಟೇ ಅಲ್ಲದ ಒಂದು ವಿಶಿಷ್ಟ ಪಾತಳಿಗೆ ತನ್ನೆಲ್ಲಾ ಸಂಬಂಧಗಳನ್ನು ಒಯ್ಯಬಲ್ಲ ಮನೋಧರ್ಮವನ್ನು ಹೊಂದಿರುವುದು ಕಾಣುತ್ತೇವೆ ಮಾತ್ರವಲ್ಲ ಅದನ್ನು ಅವಳು ನೈತಿಕ ಗೊಂದಲಗಳಾಗಲೀ, ಅಂತರಂಗದ ಪಾಪಪ್ರಜ್ಞೆಯ ಕೀಳಿರಿಮೆಗಳಾಗಲೀ ಇಲ್ಲದೇನೆ ಪ್ರಾಮಾಣಿಕ ಜೀವಿಯಾಗಿ ನಿಭಾಯಿಸುತ್ತಿರುವುದು ಕಾಣಿಸುತ್ತದೆ.

ಆದಾಗ್ಯೂ ವಿ.ಆರ್.ಕಾರ್ಪೆಂಟರ್ ಇದನ್ನು ವಿಶ್ಲೇಷಿಸುವ ಅಥವಾ ವಿಮರ್ಶಿಸುವ ನೆಲೆಗೆ ಕಾದಂಬರಿಯನ್ನು ಒಯ್ಯುವುದಿಲ್ಲ. ಈ ಹೆಣ್ಣು ಏಕಕಾಲದಲ್ಲಿ ಪತ್ನಿ, ಮೋಹಿನಿ, ತಾಯಿ ಮತ್ತು ಯಜಮಾನಿಯಾಗಿದ್ದೂ ತನ್ನವೇ ವಿಭಿನ್ನ ಸಂಬಂಧಗಳ ಜೊತೆಗೆ ಯಾವುದೇ ಮುಖಾಮುಖಿಯ ಕಷ್ಟಗಳಿಗೆ ಒಡ್ಡಲ್ಪಡುವುದಿಲ್ಲ. ಅವರೇ ನಿರ್ಮಿಸಿದ ಕಾಲ್ಪನಿಕ ಜಗತ್ತಿನ ಚೌಕಟ್ಟಿನಲ್ಲಿ ಇರುವಂತೆ ಇಲ್ಲಿಯೂ ಅದು ಇರುವುದು ಹಾಗೆ ಮತ್ತು ಹಾಗೆ ಅಷ್ಟೆ. ಇದು ಹೇಗೆ ಕಾದಂಬರಿಯ ಪ್ಲಸ್ ಪಾಯಿಂಟ್ ಆಗಿದೆಯೋ ಅಷ್ಟೇ ಮೈನಸ್ ಪಾಯಿಂಟ್ ಕೂಡ ಆಗುವುದು ಸಾಧ್ಯವಿದೆ. ಆ ನಿಟ್ಟಿನಲ್ಲಿ ಕಾದಂಬರಿ ಅಷ್ಟಿಷ್ಟು ತೆರೆದುಕೊಂಡಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ.

ಒಬ್ಬ ವಿಕೃತಕಾಮಿಯ ಬೇಟೆಯಷ್ಟೇ ಈ ಕಾದಂಬರಿಯ ವಸ್ತುವಿನ ಸಾಧ್ಯತೆಯಾಗಿ ಕಾಣುವುದಿಲ್ಲ. ಇಲ್ಲಿ ಈ ವಿಕೃತಕಾಮಿ ತನ್ನ ಸಹೋದರನೊಂದಿಗೆ ಸೇರಿ ನಿರ್ಮಿಸುವ ನೀಲಿಗ್ರಾಮದ (ಇದರ ಹೈಟೆಕ್ ಅಭಿವೃದ್ಧಿ ವಿಶೇಷ ಗಮನಕ್ಕೆ ಅರ್ಹವಾಗಿದೆ!) ರೀತಿ ರಿವಾಜುಗಳಲ್ಲಿ ಸಂತಾನೋತ್ಪತ್ತಿಗೆ ವಿಶೇಷವಾದ ಮಹತ್ವವಿದೆ. ಒಂದೆಡೆ ಬೇರೆ ಜಗತ್ತಿನಿಂದ ಜನರನ್ನು ಅನಾಮತ್ತು ತಂದು ಸೇರಿಸಿಕೊಳ್ಳುವ ಪ್ರಕ್ರಿಯೆ ನಡೆದಿರುವಂತೆಯೇ ಇತ್ತ ಹೆಚ್ಚು ಹೆಚ್ಚು ಸಂತಾನೋತ್ಪತ್ತಿಯನ್ನು ಪ್ರಚೋದಿಸಲಾಗುತ್ತಿದೆ. ತನ್ನ ದೇಶವನ್ನು ಬಲಿಷ್ಠಗೊಳಿಸುವ ಪರಿಕ್ರಮವನ್ನಾಗಿ ಇದನ್ನು ರಾಜ ಪರಿಗಣಿಸಿದ್ದಾನೆ. ಇದಕ್ಕಾಗಿ ನಾಲ್ಕು ವರ್ಷ ಪ್ರಾಯದ ಮಕ್ಕಳನ್ನು ಲೈಂಗಿಕ ಕ್ರಿಯೆಗೆ ಸಜ್ಜುಗೊಳಿಸುವ ಪ್ರಕ್ರಿಯೆ ಕೂಡಾ ನಡೆದಿದೆ!

ಎಲ್ಲಿಗೆ ಬಂದಿದ್ದೇವೆ, ಯಾಕಾಗಿ ಬಂದಿದ್ದೇವೆ, ಇದು ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ಗೊತ್ತಿಲ್ಲದೆ ಕಂಗಾಲಾಗುವಂತೆಯೇ ಇಲ್ಲಿಂದ ಯಾವತ್ತೂ ಪಾರಾಗಲಾರೆವೇನೋ ಎಂಬ ಒಂದು ಅನಿಶ್ಚಿತತೆಯೂ ಇಲ್ಲಿ ಇರುವುದು ಈ ಫ್ಯಾಂಟಸಿಗೆ ಹೆಚ್ಚಿನ ಗುರುತ್ವವನ್ನು ಒದಗಿಸುವಾಗಲೇ ಒಂದು ಬಗೆಯ ಪಾರಮಾರ್ಥಿಕ ಪಾತಳಿಯನ್ನೂ ಕಟ್ಟಿಕೊಡುವುದು ಸುಳ್ಳಲ್ಲ. ಪ್ರಯಾಣದಲ್ಲೇ ಒದಗುವ ಈ ಭಾವ ಕಾದಂಬರಿಯ ಉದ್ದಕ್ಕೂ ಕಾಪಿಟ್ಟುಕೊಂಡು ಬಂದಿದೆ.

ಒಂದೆಡೆ ಇಂಥ ಲೈಂಗಿಕ ಪಿಪಾಸೆ, ಅಧಿಕಾರಗ್ರಹಣದ ತಂತ್ರಗಳನ್ನು ಕಾಣಿಸುವಾಗಲೇ ಕಾದಂಬರಿ ರೆಸಾರ್ಟ್ ತರದ ಆಧುನಿಕ ಜೀವನಶೈಲಿಯ ವಿಪರ್ಯಾಸಗಳನ್ನು ಕೂಡ ಟಚ್ ಮಾಡುತ್ತದೆ. ಆದರೆ ನಿರಾಸೆಯ ಮಾತೆಂದರೆ ಇಂಥ ಮಹತ್ವದ ಆಯಾಮಗಳು ತೆರೆದುಕೊಳ್ಳಬಹುದಾಗಿದ್ದ ಹೆಚ್ಚಿನೆಲ್ಲಾ ಕಡೆ ಮಹತ್ವಾಕಾಂಕ್ಷೆಯ ಕೊರತೆ ಎದ್ದು ಕಾಣುವಂತೆ ಬರೇ 'ಟಚಿಂಗ್' ಇದೆ, ನಾಟುವಂತೆ ಊರಿಕೊಳ್ಳುವ ವ್ಯವಧಾನವಿಲ್ಲ.

ಎಲ್ಲೋ ಒಂದಿಷ್ಟು ಇಷ್ಟವಾಗುವ ಈ ನಿರುದ್ದಿಶ್ಯ ಚಲನೆ ಇನ್ನೆಲ್ಲೊ ಅತೃಪ್ತಿಯನ್ನು ಉಳಿಸುವುದು ನಿಜ. ಕಾರ್ಪೆಂಟರ್ ಸಾಧಿಸಿದ ಹದ ಸರಿಯೆ, ನಮ್ಮ ನಿರೀಕ್ಷೆಯ ಮಾನದಂಡಗಳೇ ತಪ್ಪೆ ಎಂಬ ಪ್ರಶ್ನೆಯನ್ನು ಎತ್ತುವುದು ಸುಲಭ, ನಿಭಾಯಿಸುವುದು ಕಷ್ಟ.

ನಮ್ಮ ವಿಮರ್ಶಕರು ಒಂದು ಒಳ್ಳೆಯ ಕೃತಿಯ ಬಗ್ಗೆ ಕೊಂಚ ಉದಾರವಾಗಿ ಮಾತನಾಡುವ ಅಗತ್ಯ ಇರುವಾಗಲೂ ಅದರಲ್ಲಿ ಅದಿಲ್ಲ ಇದಿಲ್ಲ ಎಂಬ ಇಲ್ಲಗಳನ್ನೇ ಆರಿಸಿ ತೆಗೆದು ಏನಾದರೂ ಅಪಸ್ವರವನ್ನು ಹುಟ್ಟಿಸುವ ಖಯಾಲಿಗೆ ಬಿದ್ದಿದ್ದಾರೆ, ಹಾಗೆ ಮಾಡದೇ ಇದ್ದರೆ ಎಲ್ಲಿ ತಮ್ಮ ವಿಮರ್ಶಕ ಕ್ರೆಡಿಬಿಲಿಟಿಗೆ ಧಕ್ಕೆಯಾದೀತೋ ಎಂಬ ಭಯಕ್ಕೆ ಬಿದ್ದು ಏನಾದರೂ ಒಂದಿಷ್ಟು ಕೊರತೆಗಳತ್ತ ಬೆಟ್ಟು ಮಾಡಿ ತೋರಿಸುವ ಶಾಸ್ತ್ರ ಮಾಡದೇ ಮುಗಿಸುವುದಿಲ್ಲ ಎಂಬ ಅಷ್ಟೇನೂ ಸುಳ್ಳಲ್ಲದ ಆರೋಪವಿದೆ. ಆದರೆ ನಾನು ಎತ್ತುತ್ತಿರುವ ಅನುಮಾನಗಳು ನನ್ನ ಅನುಮಾನಗಳೇ ಹೊರತು ತೀರ್ಮಾನಗಳಲ್ಲ.

ಫ್ಯಾಂಟಸಿ ಮತ್ತು ವಿಧಿ ಎರಡೂ ನಮ್ಮ ವಾಸ್ತವಿಕ ಬದುಕಿನ ಸಿದ್ಧ ತತ್ವ, ಅರ್ಥ, ರೀತಿ-ನೀತಿ ಮತ್ತು ಸಾಮಾಜಿಕ ಚೌಕಟ್ಟಿನೊಳಗೇ ಒಂದು ತಥಾಕಥಿತ ಆಯಾಮವನ್ನು ಸೃಷ್ಟಿಸಿದ ಕಾದಂಬರಿಗಳನ್ನಷ್ಟೇ ನಾವು ಕಾಣುತ್ತ (ನಿರೀಕ್ಷಿಸುತ್ತ) ಬಂದಿರುವುದರಿಂದ ಹೀಗಾಗುತ್ತಿದೆಯೆ? ಮಾರ್ಕ್ವೆಜ್‌ನ ನೂರು ವರ್ಷಗಳ ಏಕಾಂತದಲ್ಲಾಗಲೀ, ಕುಂದೇರಾನ ಕೆಲವು ಕಾದಂಬರಿಗಳ ಕನಸು-ಫ್ಯಾಂಟಸಿ-ಭ್ರಾಂತಿಗಳ ಕಲಸುಮೇಲೋಗರಕ್ಕಾಗಲಿ ಅನ್ವಯಿಸಿ ಇದನ್ನು ನೋಡಬೇಕೆನಿಸಿತ್ತದೆ.

ಒಂದು ಕವನ ಬರೇ ಹೊಳಹುಗಳನ್ನಷ್ಟೇ ತೋರಿಸಿ ಮುಗಿದುಬಿಡುವಾಗ ನಾವದನ್ನು ಅದು ನಮ್ಮೆದುರು ನೂರಾರು ಅರ್ಥಗಳ ಕಿಟಕಿಯಲ್ಲಿ ನೋಡುವ ಸಾಧ್ಯತೆಗಳನ್ನು ತೆರೆದಿರಿಸಿದ ಕಾರಣಕ್ಕೇ ಅದನ್ನು ಮೆಚ್ಚಿಕೊಳ್ಳುತ್ತೇವೆ. ನಾಟಕದ ಒಂದು ಪಠ್ಯ ಬೇರೆ ಬೇರೆ ನಿರ್ದೇಶಕರ ಕೈಗಳಲ್ಲಿ, ಕಲ್ಪನೆಯಲ್ಲಿ ಬೇರೆ ಬೇರೆ ಬಗೆಯ ರಂಗಸಜ್ಜಿಕೆ, ರಂಗ ಚಲನೆ, ರಂಗ ಪರಿಕಲ್ಪನೆ, ನಟರ ವೇಷಭೂಷಣ, ಅವರು ಧ್ವನಿಗೆ, ಕತ್ತಲೆ ಬೆಳಕುಗಳಿಗೆ, ಹಿನ್ನೆಲೆ ಸಂಗೀತ/ಧ್ವನಿಗೆ ಕೊಡುವ ಮೆರುಗಿನಲ್ಲಿಯೇ ಇನ್ನೇನೋ ಆಗಿ ಮೂಡಿಬರುವುದನ್ನು ಗಮನಿಸಿದ್ದೇನೆ.

ಕೇವಲ ಹೆಜ್ಜೆ ಹಾಕುವ ವಿಧಾನದಲ್ಲಿಯೇ ಒಂದು ಪಾತ್ರದ ಧೂರ್ತತನವನ್ನೋ, ದುರಾಶೆಯನ್ನೋ ಕಾಣಿಸಲು ಸಾಧ್ಯವಿದೆಯೆ ಎಂಬ ಅಚ್ಚರಿಯೊಂದಿಗೇ ಮೀಡಿಯಾದಂಥ ನಾಟಕವನ್ನು (ನಿರ್ದೇಶನ: ಕೆ.ಜಿ.ನಾರಾಯಣ) ಕಂಡು ಬೆರಗಾಗಿದ್ದಿದೆ. ಆದರೆ ಕಾದಂಬರಿಯೊಂದು ಅಂಥ ಅರ್ಥಪ್ರಪಂಚದ ಸಾಧ್ಯತೆಗಳನ್ನು ಹಾಗೆಯೇ ತೆರೆದಿಟ್ಟು ಮುಗಿಯಬಹುದೇ? ಇಲ್ಲಿ ಕಾರ್ಪೆಂಟರ್ ಅವರ ನಿಲುವು-ನಿರೀಕ್ಷೆಗಳು ಮುಖ್ಯವಾಗುತ್ತವೆ.

ಅದೇನಿದ್ದರೂ ಜಡ್ಡುಗಟ್ಟಿದಂತೆ ಹಳೆಯ ಕತೆಗಳನ್ನೇ ಹೊಸ ದೇಶ-ಕಾಲಗಳ ವೇಷದಲ್ಲಿ ಓದುವ ಅನಿವಾರ್ಯವಿದ್ದಾಗ ಹೊಸತನವೇ ಇಲ್ಲದ ಕಾದಂಬರಿಗಳ ನಡುವೆ ಇಂಥದ್ದೊಂದು ಕಾದಂಬರಿ ಬಂದಿರುವುದು ನಿಜಕ್ಕೂ ಖುಶಿಯ ಸಂಗತಿ. ಚೇತೋಹಾರಿಯಾದ ಒಂದು ಓದನ್ನು, ಓದಿನ ಕಾಲಕ್ಕೆ ಹೆಚ್ಚೇನೂ ಬೌದ್ಧಿಕ ಲಗ್ಗೇಜ್ ಹೊರಿಸದೇ ದಯಪಾಲಿಸುವ ಈ ಕಾದಂಬರಿ ಇಷ್ಟವಾಗುತ್ತದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Thursday, February 7, 2013

ನಾನು ಅವನಲ್ಲ, ಬೇರೆ...

ಡಾ.ಪಿ.ವಿ.ನಾರಾಯಣ ಅವರು ಕನ್ನಡಕ್ಕೆ ಅನುವಾದಿಸಿರುವ ಹತ್ತು ಜಗತ್ಪ್ರಸಿದ್ಧ ಕತೆಗಳ ಈ ಪುಸ್ತಕದ ಹೆಸರು 'ಸಾವಿನ ಸುತ್ತ'. ಹೆಸರೇ ಹೇಳುವಂತೆ ಸಾವು ಬೇರೆ ಬೇರೆ ಸೃಜನಶೀಲ ಮನಸ್ಸುಗಳನ್ನು ಕಾಡಿ, ಅವು ಅವರ ಕತೆಗಳಲ್ಲಿ ಬೇರೆ ಬೇರೆ ಆಯಾಮಗಳಲ್ಲಿ ಕಾಣಿಸಿಕೊಂಡಿರುವುದನ್ನೇ ಎಳೆಯಾಗಿ ಹಿಡಿದು ಈ ಎಲ್ಲ ಹತ್ತು ಕತೆಗಳನ್ನು ಒಂದೆಡೆ ಪೋಣಿಸಲಾಗಿದೆ.

ಮೃತ್ಯುಪ್ರಜ್ಞೆ ಎಂಬುದು ಯಾರನ್ನೂ ಬಿಟ್ಟಿಲ್ಲವಾದರೂ, ಅದು ಅನುಕ್ಷಣ ನಮ್ಮ ಇಹವನ್ನು, ಅದರಲ್ಲೂ ನಮ್ಮ ಭಾರತದ ಮಟ್ಟಿಗೆ ಸ್ವಲ್ಪ ಅತಿಯಾಗಿಯೇ ಆವರಿಸಿದಂತಿದ್ದರೂ, ದಾರ್ಶನಿಕರು, ಆಧ್ಯಾತ್ಮಿಕರು ಮತ್ತು ಕವಿ-ಸಾಹಿತಿಗಳು ಸಾವಿನ ಕುರಿತೇ ಧೇನಿಸುವುದು ಸ್ವಲ್ಪ ಹೆಚ್ಚೇ ಇರಬಹುದು. ಕನ್ನಡದ ಮಟ್ಟಿಗಂತೂ ಮೃತ್ಯುಪ್ರಜ್ಞೆಯ ಉಲ್ಲೇಖದ ಜೊತೆಗೇ ನೆನಪಾಗುವ ಹೆಸರು ಯಶವಂತ ಚಿತ್ತಾಲರದೇ.

ಇಲ್ಲಿನ ಹತ್ತು ಕತೆಗಳಲ್ಲಿ ಕೆಲವು ಕತೆಗಳಂತೂ ಈಗಾಗಲೇ ಸಾಕಷ್ಟು ಖ್ಯಾತವಾದ ಅಥವಾ ಹಲವರಿಂದ ಕನ್ನಡಕ್ಕೆ ಅನುವಾದಗೊಂಡಿರುವ ಅಥವಾ ಮೂಲದಲ್ಲಾದರೂ ಸಾಹಿತ್ಯಾಸಕ್ತರೆಲ್ಲರೂ ಓದಿರಬಹುದಾದ ಕತೆಗಳೇ. ಉದಾಹರಣೆಗೆ 278 ಪುಟಗಳಲ್ಲಿ 78 ಪುಟಗಳನ್ನು ಆವರಿಸಿರುವ ಇವಾನ್ ಇಲಿಚ್ಯನ ಸಾವು (ಟಾಲ್‌ಸ್ಟಾಯ್, ಬೇರೆ ಅನುವಾದಗಳು :ಕೆ.ಎಲ್.ಗೋಪಾಲಕೃಷ್ಣ ರಾವ್, ಓ.ಎಲ್. ನಾಗಭೂಷಣಸ್ವಾಮಿ), ಫಾಕ್ನರ್ ಬರೆದ ಎ ರೋಸ್ ಫರ್ ಎಮಿಲಿ (ಇನ್ನೊಂದು ಅನುವಾದ ಎಸ್.ದಿವಾಕರ್) ಅಥವಾ ಕ್ಯಾಥರೀನ್ ಮ್ಯಾನ್ಸ್‌ಫೀಲ್ಡ್‌ರ ಗಾರ್ಡನ್ ಪಾರ್ಟಿ.

ಹಾಗೆಯೇ ಡಿ.ಎಚ್ ಲಾರೆನ್ಸ್, ಸ್ಯಾಲಿಂಜರ್, ಟಾಗೋರ್ ಇವರನ್ನೆಲ್ಲ ಕನ್ನಡಿಗರು ಅಷ್ಟಿಷ್ಟು ಓದಿಕೊಂಡೇ ಇದ್ದಾರೆ. ಉಳಿದಂತೆ ಜೇಮ್ಸ್ ಜಾಯ್ಸ್, ವಿಲ್ಲ ಕ್ಯಾದರ್, ಶೆರ್‌ವುಡ್ ಅಂಡರ್‌ಸನ್ ಮತ್ತು ಕೇಟ್ ಚಾಪಿನ್ ಬರೆದ ಕತೆಗಳಿವೆ. ವಿಚಿತ್ರವೆಂದರೆ, ಇಂಥ ಪುಸ್ತಕಗಳಲ್ಲಿ ಸಾಧಾರಣವಾಗಿ ಇರುವ ಮತ್ತು ನಾವು ನಿರೀಕ್ಷಿಸುವ ಮೂಲ ಲೇಖಕರ ಕುರಿತ ಯಾವುದೇ ವಿವರ, ಟಿಪ್ಪಣಿಗಳಿಲ್ಲದಿರುವುದು. ಹಾಗೆಯೇ, ಇಲ್ಲಿನ ಅನುವಾದವನ್ನು ಡಾ.ಪಿ.ವಿ.ನಾರಾಯಣ ಅವರೇ ಮಾಡಿರಬಹುದು ಎಂದು ಹಾಗೆ ನಮೂದಾಗಿರುವುದರಿಂದ ನಂಬಬೇಕು, ಅಷ್ಟೆ.

ವಿಲ್ಲ ಕ್ಯಾದರಳ ಒಂದು ಕತೆ, ಎ ಡೆತ್ ಇನ್ ದ ಡೆಸರ್ಟ್, ಯಾಕೋ ನನ್ನನ್ನು ತುಂಬ ಕಾಡಿದ ಕತೆ. ಇಲ್ಲಿ ತದ್ರೂಪಿ ಅಣ್ಣತಮ್ಮಂದಿರಿದ್ದಾರೆ. ಅಣ್ಣ ತುಂಬ ಖ್ಯಾತ ಸಂಗೀತಗಾರ, ಪಿಯಾನೋ ವಾದಕ. ತಮ್ಮ ಖ್ಯಾತನಲ್ಲ, ಸಾಧಾರಣ ವ್ಯಕ್ತಿ. ಇದು ಈ ತಮ್ಮನ ಕತೆ. ತಮ್ಮನನ್ನು ಅಣ್ಣನೆಂದೇ ತಪ್ಪು ತಿಳಿಯುವ ಮಂದಿ ಇರುವಂತೆ ಇವನಲ್ಲೇ ಅಣ್ಣನನ್ನು ಕಂಡುಕೊಂಡು, ತಮ್ಮ ಮನಸ್ಸಿನ ಯಾವುದಕ್ಕೋ ಸಾಂತ್ವನ ಕಂಡುಕೊಳ್ಳುವವರೂ ಇದ್ದಾರೆ. ಇವನು ಎಲ್ಲಿಯೂ ತಪ್ಪುಗಂಟಾಗದಂತೆ, ಮೊದಲೇ ತಾನು ಅಣ್ಣನಲ್ಲ, ತಮ್ಮ ಎಂದು ಹೇಳಿಯೇ ಅಂಥವರ ಜೊತೆ ವ್ಯವಹರಿಸುವವನು. ಆದರೂ ಈ ತಮ್ಮನ ಮನಸ್ಸು ಇಂಥದ್ದಕ್ಕೆಲ್ಲ ಹೇಗೆ ಸ್ಪಂದಿಸುತ್ತಿರಬಹುದು? ನಮ್ಮನ್ನೇ ಇನ್ಯಾರೋ ಎಂದು ತಿಳಿದು, ಅವರ ಖ್ಯಾತಿಗೆ, ಅವರ ಸಾಧನೆಗೆ ಸಲ್ಲಬೇಕಾದುದನ್ನು, ಅವರ ಮೇಲಿರುವ ಅಭಿಮಾನವನ್ನು ನಮ್ಮ ಮೇಲೆ ಸುರಿದು ಕೊನೆಗೆ ನಾವು ಅವರಲ್ಲ, ಇನ್ಯಾರೋ ಎಂದು ತಿಳಿದಾಗ ಅವರ ಪೆಚ್ಚು ಮೊಗದೆದುರು ನಾವು ಅನುಭವಿಸುವ ಅವಮಾನ...ಅದು ಅಷ್ಟು ಸರಿಯಾದ ಶಬ್ದವಲ್ಲ, ಆ ಭಾವ, ಏನದು!

ವಿವೇಕ ಶಾನಭಾಗರ ಇನ್ನೂ ಒಂದು ಕಾದಂಬರಿಯಲ್ಲಿ, ಮತ್ತೊಬ್ಬನ ಕತೆ ಹಾಗೂ ಥೂ ಕೃಷ್ಣ ಕತೆಗಳಲ್ಲಿ ಮತ್ತೀಗ ಬಿಡುಗಡೆಯಾಗಿರುವ ಹೊಸ ಸಂಕಲನದ ನಿರ್ವಾಣ ಕತೆಯಲ್ಲೂ ಇಂಥದೇ ಎಳೆಗಳಿವೆ. ಪ್ರತಿಬಾರಿಯೂ ವಿಭಿನ್ನವಾಗಿ, ಬೇರೆಯೇ ಸತ್ಯದತ್ತ ನಮ್ಮನ್ನು ನಡೆಸುತ್ತ ಹೋಗುವ ಕಾದಂಬರಿ/ಕತೆಗಳಿವು. ಇಷ್ಟೆಲ್ಲ ಬಗೆಯಲ್ಲಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಅಸ್ಮಿತೆಯೇ ಪ್ರಶ್ನೆಯಾಗುವಂಥ ಕತೆಗಳನ್ನು ಹೆಣೆದ ವಿವೇಕ್ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತಾರೆ. ವಿಲ್ಲ ಕ್ಯಾದರ್ ಕತೆಯ ತಮ್ಮ ಬೇರೆಯೇ ಬಗೆಯಲ್ಲಿ ನಮ್ಮನ್ನು ಕಲಕುತ್ತಾನೆ.

ಇವನು ತಾರುಣ್ಯದಲ್ಲೇ ಅತೀವವಾಗಿ ಪ್ರೀತಿಸಿದ ಹುಡುಗಿ ಒಲಿಯುವುದು ಅಣ್ಣನಿಗೆ. ಅಣ್ಣನ ಜೊತೆಗೇ ಒಂದಷ್ಟು ಕಾಲ ಜೊತೆಯಾಗಿ ದುಡಿದು, ದೇಶ ವಿದೇಶ ಸುತ್ತಿ ಈಗ ಯಾವುದೋ ಕಾಯಿಲೆಯಿಂದ ಇನ್ನೇನು ಸಾಯಲಿದ್ದಾಳೆ. ವಿಷಯ ತಿಳಿದ ಇವನ ಮನಸ್ಸು ತಡೆಯುವುದಿಲ್ಲ. ಆದರೆ...

ಅವಳ ಅನುರಾಗವಿರುವುದು ಅಣ್ಣನ ಮೇಲೆ. ಈಗಲೂ, ಸಾಯುವ ಕೊನೆಯ ದಿನಗಳಲ್ಲಿಯೂ ಅವಳು ಹಂಬಲಿಸುತ್ತಿರುವುದು ಅಣ್ಣನ ಸಾನ್ನಿಧ್ಯ, ಸಂಪರ್ಕ, ಸ್ನೇಹ, ಸಂಬಂಧ! ಅದು ಇವನಿಗೂ ಗೊತ್ತು. ಆದರೆ ಇವನಿಗೆ ಅವಳ ಮೇಲಿರುವುದು ಸ್ವಂತದ್ದೇ ಪ್ರೇಮ! ಅದೇ ಕಾಲಕ್ಕೆ ಇವನಲ್ಲಿ ಅವಳು ಕಾಣುತ್ತಿರುವುದು ಇವನನ್ನಲ್ಲ, ಬದಲಿಗೆ ಇವನ ಅಣ್ಣನನ್ನು. ಅಲ್ಲವೇನೋ, ತಮ್ಮನಾದ ತನ್ನನ್ನೂ ಇಷ್ಟಪಟ್ಟಿದ್ದಳೆಂಬಂತೆ ಆಡುತ್ತಿರುವಳಲ್ಲ! ಒಮ್ಮೊಮ್ಮೆ, ತನಗೆ ಈಗ ಸಿಗಲಾರದಷ್ಟು ಬ್ಯುಸಿಯಾಗಿರುವ, ಖ್ಯಾತನಾಗಿರುವ, ಲಕ್ಷಾಂತರ ಅಭಿಮಾನಿಗಳ ಕಣ್ಮಣಿಯಾಗಿ ದೂರವಾದಂತಿರುವ ಅಣ್ಣನ ನಿರೀಕ್ಷೆಯಿರಲಾರದು, ತನ್ನನ್ನೇ ಒಪ್ಪಿಕೊಂಡಿರುವಳೇನೋ ಎನಿಸುತ್ತದೆ! ಆದರೆ ತನಗೆ ಅನಿಸುತ್ತಿರುವುದು ನಿಜವಲ್ಲ, ಇದು ವಿಧಿ ಬಗೆದ ಮೋಸ, ಬರೇ ತನ್ನ ರೂಪ ಎರಚಿದ ಮಂಕುಬೂದಿ ಎಂಬುದು ಕೂಡ ಗೊತ್ತಿರುತ್ತದೆ. ಹೀಗೂ ಹಾಗೂ ಅನಿಸುವುದು ಇದ್ದೇ ಇರುತ್ತದೆ. ಇವನೇ ಅಣ್ಣನಿಗೆ ತಾರು ಹೊಡೆದು ಇವಳಿಗಾಗಿ ಅವನಿಂದ ಪತ್ರವೊಂದನ್ನು ಬರೆಸುತ್ತಾನೆ. ಅವಳಿಗೆಷ್ಟು ಖುಶಿ ಅದರಿಂದ!
ತಿಳಿಯದಿರುವುದೆ ಆಗಲಾದರೂ ಈ ಪ್ರೇಮ? ಇನ್ನೇನು ಸಾಯಲಿದ್ದಾಳೆ ಎಂಬಂತಿರುವ ಈಕೆಗಾಗಿಯೇ ಅವನು ಎಲ್ಲ ಕೆಲಸಗಳನ್ನೂ ಬಿಟ್ಟು ಇವಳ ಭೇಟಿಗೆ ದಿನವೂ ಬರತೊಡಗುತ್ತಾನೆ. ದಿನವೂ ಅವಳ ಹಾಸಿಗೆಯ ಹತ್ತಿರ ಕೂತು ಅವಳ ಸಾವನ್ನು ಸಹ್ಯವಾಗುವಂತೆ ಮತ್ತು ಅವಳ ಆ ದಿನಗಳನ್ನು ತಕ್ಕಮಟ್ಟಿಗೆ ಖುಶಿಯ ಸ್ತರಕ್ಕೊಯ್ಯುತ್ತಾನೆ. ಆದರೆ ಅವಳ ಸಾವೇ ಇವನ ಬದುಕಿಗೂ ಅಂತ್ಯವಲ್ಲವಲ್ಲ. ಇವನು ಉಳಿದೆಲ್ಲಾ ಮೌನವನ್ನು ತಾನೇ ಹೊದ್ದುಕೊಂಡು ಹಾದಿ ಸಾಗಬೇಕಲ್ಲ. ಇದು ಕತೆಯ ಪಲ್ಲವಿ.

ಆದರೆ ಇಡೀ ಕತೆಯಲ್ಲಿ ಸಾವಿನ ಚರ್ಚೆ ಬಿಡಿ, ನೋವಿನ ಮಾತೂ ಇಲ್ಲ. ಸಾಕಷ್ಟು ದೀರ್ಘವಾದ ಈ ಕತೆಯ ನಿರೂಪಣೆಯ ಲಯ, ಓದುಗನ ಆಸಕ್ತಿ ಕುಂದದಂತೆ ಅದನ್ನು ಜೀವಂತವಾಗಿರಿಸಿಕೊಂಡ ವಿಧಾನ, ಇಡೀ ಕತೆಯ ಶರೀರದಲ್ಲಾಗಲೀ, ಅದರ ಅಂತ್ಯದಲ್ಲಾಗಲೀ ಯಾವುದೇ ಭಾವನಾತ್ಮಕ ಅಬ್ಬರಗಳಿಲ್ಲದೇನೆ ಇಲ್ಲಿನ ಸಂವೇದನೆಗಳನ್ನು ನಿಭಾಯಿಸಿದ ರೀತಿ ನಿಜಕ್ಕೂ ಸಾರ್ಥಕ ಭಾವವನ್ನು ತರುತ್ತದೆ.

ಕತೆಯ ಆರಂಭದಲ್ಲಿ ಇವನು ತನ್ನನ್ನು ತಪ್ಪಾಗಿ ತಿಳಿಯಲಾಗಿದೆ ಎಂದು ಕೊಡುವ ಅದೇ ಟಿಪಿಕಲ್ ಪರಿಚಯದೊಂದಿಗೇ ಕತೆಯ ಮುಕ್ತಾಯವೂ ಇರುವುದು ತುಂಬ ಧ್ವನಿಪೂರ್ಣವಾಗಿದೆ. ಒಂದು ಬಗೆಯಲ್ಲಿ ನೋಡಿದರೆ, ಇಡೀ ಬದುಕನ್ನು ತಾನು ತಮ್ಮನೇ ಅಣ್ಣನೇ ಎಂದು ಜಗತ್ತಿಗೆ ಮತ್ತೆ ಮತ್ತೆ ಸ್ಪಷ್ಟಪಡಿಸಿಕೊಂಡೇ ಬದುಕಬೇಕಾಗಿ ಬಂದ ಈ ಮನುಷ್ಯನಿಗೆ ತಾನು ಯಾರು ಎಂಬ ಪ್ರಶ್ನೆ ಎಷ್ಟೆಲ್ಲ ಬಗೆಯಲ್ಲಿ ಕಾಡಿರಬಹುದು!

ತಾನು ಅಷ್ಟೆಲ್ಲ ಪ್ರೀತಿಸಿದ್ದ ಹುಡುಗಿಯ ಕೊನೆಯನ್ನು ಕಣ್ಣೆದುರೇ ಕಂಡು, ಊರಿಗೆ ಹೊರಟು ನಿಂತವ ರೈಲು ಹತ್ತುವ ಮುನ್ನ ಎದುರಿಸುವ, ಕತೆಯ ಅಂತ್ಯ ನೋಡಿ:

.....ಅತ್ಯಂತ ಅನಿರೀಕ್ಷಿತ ಸ್ಥಳದಲ್ಲಿ ಅವನ ಕಡೆ ಧಾವಿಸಿದಳು, ಆಶ್ಚರ್ಯ ಸಂತೋಷಾತಿರೇಕದಿಂದ ಗವಸು ಹಾಕಿದ್ದ ತನ್ನ ಕೈಗಳಿಂದ ಅವನ ತೋಳನ್ನು ಹಿಡಿದೆಳೆದಳು.

"ಅಯ್ಯೋ ದೇವರೇ, ಏಡ್ರಿಯನ್ಸ್, ಪ್ರೀತಿಯ ಗೆಳೆಯ" ಎಂದು ಜೋರಾಗಿ ಭಾವವಶಳಾಗಿ ಕೂಗಿದಳು.

"ದಯವಿಟ್ಟು ಕ್ಷಮಿಸಿ ಮೇಡಂ, ನನ್ನನ್ನ ನೀವು ಏಡ್ರಿಯನ್ಸ್ ಹಿಲ್‌‍ಗಾರ್ಡ್ ಅಂತ ತಪ್ಪು ತಿಳಿದಿರೋ ಹಾಗೆ ಕಾಣುತ್ತೆ. ನಾನು ಅವನ ತಮ್ಮ" ಎಂದ ಶಾಂತನಾಗಿ, ಖಿನ್ನಳಾದ ಆ ಗಾಯಕಿಯಿಂದ ತಿರುಗಿ ತನ್ನ ಗಾಡಿಯ ಕಡೆ ಧಾವಿಸುತ್ತ.

(ಸಪ್ನ ಬುಕ್‌ ಹೌಸ್‌ ಪ್ರಕಟಿಸಿರುವ ಈ ಪುಸ್ತಕದ ಬೆಲೆ ೧೭೦ ರೂ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ