Thursday, February 7, 2013

ನಾನು ಅವನಲ್ಲ, ಬೇರೆ...

ಡಾ.ಪಿ.ವಿ.ನಾರಾಯಣ ಅವರು ಕನ್ನಡಕ್ಕೆ ಅನುವಾದಿಸಿರುವ ಹತ್ತು ಜಗತ್ಪ್ರಸಿದ್ಧ ಕತೆಗಳ ಈ ಪುಸ್ತಕದ ಹೆಸರು 'ಸಾವಿನ ಸುತ್ತ'. ಹೆಸರೇ ಹೇಳುವಂತೆ ಸಾವು ಬೇರೆ ಬೇರೆ ಸೃಜನಶೀಲ ಮನಸ್ಸುಗಳನ್ನು ಕಾಡಿ, ಅವು ಅವರ ಕತೆಗಳಲ್ಲಿ ಬೇರೆ ಬೇರೆ ಆಯಾಮಗಳಲ್ಲಿ ಕಾಣಿಸಿಕೊಂಡಿರುವುದನ್ನೇ ಎಳೆಯಾಗಿ ಹಿಡಿದು ಈ ಎಲ್ಲ ಹತ್ತು ಕತೆಗಳನ್ನು ಒಂದೆಡೆ ಪೋಣಿಸಲಾಗಿದೆ.

ಮೃತ್ಯುಪ್ರಜ್ಞೆ ಎಂಬುದು ಯಾರನ್ನೂ ಬಿಟ್ಟಿಲ್ಲವಾದರೂ, ಅದು ಅನುಕ್ಷಣ ನಮ್ಮ ಇಹವನ್ನು, ಅದರಲ್ಲೂ ನಮ್ಮ ಭಾರತದ ಮಟ್ಟಿಗೆ ಸ್ವಲ್ಪ ಅತಿಯಾಗಿಯೇ ಆವರಿಸಿದಂತಿದ್ದರೂ, ದಾರ್ಶನಿಕರು, ಆಧ್ಯಾತ್ಮಿಕರು ಮತ್ತು ಕವಿ-ಸಾಹಿತಿಗಳು ಸಾವಿನ ಕುರಿತೇ ಧೇನಿಸುವುದು ಸ್ವಲ್ಪ ಹೆಚ್ಚೇ ಇರಬಹುದು. ಕನ್ನಡದ ಮಟ್ಟಿಗಂತೂ ಮೃತ್ಯುಪ್ರಜ್ಞೆಯ ಉಲ್ಲೇಖದ ಜೊತೆಗೇ ನೆನಪಾಗುವ ಹೆಸರು ಯಶವಂತ ಚಿತ್ತಾಲರದೇ.

ಇಲ್ಲಿನ ಹತ್ತು ಕತೆಗಳಲ್ಲಿ ಕೆಲವು ಕತೆಗಳಂತೂ ಈಗಾಗಲೇ ಸಾಕಷ್ಟು ಖ್ಯಾತವಾದ ಅಥವಾ ಹಲವರಿಂದ ಕನ್ನಡಕ್ಕೆ ಅನುವಾದಗೊಂಡಿರುವ ಅಥವಾ ಮೂಲದಲ್ಲಾದರೂ ಸಾಹಿತ್ಯಾಸಕ್ತರೆಲ್ಲರೂ ಓದಿರಬಹುದಾದ ಕತೆಗಳೇ. ಉದಾಹರಣೆಗೆ 278 ಪುಟಗಳಲ್ಲಿ 78 ಪುಟಗಳನ್ನು ಆವರಿಸಿರುವ ಇವಾನ್ ಇಲಿಚ್ಯನ ಸಾವು (ಟಾಲ್‌ಸ್ಟಾಯ್, ಬೇರೆ ಅನುವಾದಗಳು :ಕೆ.ಎಲ್.ಗೋಪಾಲಕೃಷ್ಣ ರಾವ್, ಓ.ಎಲ್. ನಾಗಭೂಷಣಸ್ವಾಮಿ), ಫಾಕ್ನರ್ ಬರೆದ ಎ ರೋಸ್ ಫರ್ ಎಮಿಲಿ (ಇನ್ನೊಂದು ಅನುವಾದ ಎಸ್.ದಿವಾಕರ್) ಅಥವಾ ಕ್ಯಾಥರೀನ್ ಮ್ಯಾನ್ಸ್‌ಫೀಲ್ಡ್‌ರ ಗಾರ್ಡನ್ ಪಾರ್ಟಿ.

ಹಾಗೆಯೇ ಡಿ.ಎಚ್ ಲಾರೆನ್ಸ್, ಸ್ಯಾಲಿಂಜರ್, ಟಾಗೋರ್ ಇವರನ್ನೆಲ್ಲ ಕನ್ನಡಿಗರು ಅಷ್ಟಿಷ್ಟು ಓದಿಕೊಂಡೇ ಇದ್ದಾರೆ. ಉಳಿದಂತೆ ಜೇಮ್ಸ್ ಜಾಯ್ಸ್, ವಿಲ್ಲ ಕ್ಯಾದರ್, ಶೆರ್‌ವುಡ್ ಅಂಡರ್‌ಸನ್ ಮತ್ತು ಕೇಟ್ ಚಾಪಿನ್ ಬರೆದ ಕತೆಗಳಿವೆ. ವಿಚಿತ್ರವೆಂದರೆ, ಇಂಥ ಪುಸ್ತಕಗಳಲ್ಲಿ ಸಾಧಾರಣವಾಗಿ ಇರುವ ಮತ್ತು ನಾವು ನಿರೀಕ್ಷಿಸುವ ಮೂಲ ಲೇಖಕರ ಕುರಿತ ಯಾವುದೇ ವಿವರ, ಟಿಪ್ಪಣಿಗಳಿಲ್ಲದಿರುವುದು. ಹಾಗೆಯೇ, ಇಲ್ಲಿನ ಅನುವಾದವನ್ನು ಡಾ.ಪಿ.ವಿ.ನಾರಾಯಣ ಅವರೇ ಮಾಡಿರಬಹುದು ಎಂದು ಹಾಗೆ ನಮೂದಾಗಿರುವುದರಿಂದ ನಂಬಬೇಕು, ಅಷ್ಟೆ.

ವಿಲ್ಲ ಕ್ಯಾದರಳ ಒಂದು ಕತೆ, ಎ ಡೆತ್ ಇನ್ ದ ಡೆಸರ್ಟ್, ಯಾಕೋ ನನ್ನನ್ನು ತುಂಬ ಕಾಡಿದ ಕತೆ. ಇಲ್ಲಿ ತದ್ರೂಪಿ ಅಣ್ಣತಮ್ಮಂದಿರಿದ್ದಾರೆ. ಅಣ್ಣ ತುಂಬ ಖ್ಯಾತ ಸಂಗೀತಗಾರ, ಪಿಯಾನೋ ವಾದಕ. ತಮ್ಮ ಖ್ಯಾತನಲ್ಲ, ಸಾಧಾರಣ ವ್ಯಕ್ತಿ. ಇದು ಈ ತಮ್ಮನ ಕತೆ. ತಮ್ಮನನ್ನು ಅಣ್ಣನೆಂದೇ ತಪ್ಪು ತಿಳಿಯುವ ಮಂದಿ ಇರುವಂತೆ ಇವನಲ್ಲೇ ಅಣ್ಣನನ್ನು ಕಂಡುಕೊಂಡು, ತಮ್ಮ ಮನಸ್ಸಿನ ಯಾವುದಕ್ಕೋ ಸಾಂತ್ವನ ಕಂಡುಕೊಳ್ಳುವವರೂ ಇದ್ದಾರೆ. ಇವನು ಎಲ್ಲಿಯೂ ತಪ್ಪುಗಂಟಾಗದಂತೆ, ಮೊದಲೇ ತಾನು ಅಣ್ಣನಲ್ಲ, ತಮ್ಮ ಎಂದು ಹೇಳಿಯೇ ಅಂಥವರ ಜೊತೆ ವ್ಯವಹರಿಸುವವನು. ಆದರೂ ಈ ತಮ್ಮನ ಮನಸ್ಸು ಇಂಥದ್ದಕ್ಕೆಲ್ಲ ಹೇಗೆ ಸ್ಪಂದಿಸುತ್ತಿರಬಹುದು? ನಮ್ಮನ್ನೇ ಇನ್ಯಾರೋ ಎಂದು ತಿಳಿದು, ಅವರ ಖ್ಯಾತಿಗೆ, ಅವರ ಸಾಧನೆಗೆ ಸಲ್ಲಬೇಕಾದುದನ್ನು, ಅವರ ಮೇಲಿರುವ ಅಭಿಮಾನವನ್ನು ನಮ್ಮ ಮೇಲೆ ಸುರಿದು ಕೊನೆಗೆ ನಾವು ಅವರಲ್ಲ, ಇನ್ಯಾರೋ ಎಂದು ತಿಳಿದಾಗ ಅವರ ಪೆಚ್ಚು ಮೊಗದೆದುರು ನಾವು ಅನುಭವಿಸುವ ಅವಮಾನ...ಅದು ಅಷ್ಟು ಸರಿಯಾದ ಶಬ್ದವಲ್ಲ, ಆ ಭಾವ, ಏನದು!

ವಿವೇಕ ಶಾನಭಾಗರ ಇನ್ನೂ ಒಂದು ಕಾದಂಬರಿಯಲ್ಲಿ, ಮತ್ತೊಬ್ಬನ ಕತೆ ಹಾಗೂ ಥೂ ಕೃಷ್ಣ ಕತೆಗಳಲ್ಲಿ ಮತ್ತೀಗ ಬಿಡುಗಡೆಯಾಗಿರುವ ಹೊಸ ಸಂಕಲನದ ನಿರ್ವಾಣ ಕತೆಯಲ್ಲೂ ಇಂಥದೇ ಎಳೆಗಳಿವೆ. ಪ್ರತಿಬಾರಿಯೂ ವಿಭಿನ್ನವಾಗಿ, ಬೇರೆಯೇ ಸತ್ಯದತ್ತ ನಮ್ಮನ್ನು ನಡೆಸುತ್ತ ಹೋಗುವ ಕಾದಂಬರಿ/ಕತೆಗಳಿವು. ಇಷ್ಟೆಲ್ಲ ಬಗೆಯಲ್ಲಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಅಸ್ಮಿತೆಯೇ ಪ್ರಶ್ನೆಯಾಗುವಂಥ ಕತೆಗಳನ್ನು ಹೆಣೆದ ವಿವೇಕ್ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತಾರೆ. ವಿಲ್ಲ ಕ್ಯಾದರ್ ಕತೆಯ ತಮ್ಮ ಬೇರೆಯೇ ಬಗೆಯಲ್ಲಿ ನಮ್ಮನ್ನು ಕಲಕುತ್ತಾನೆ.

ಇವನು ತಾರುಣ್ಯದಲ್ಲೇ ಅತೀವವಾಗಿ ಪ್ರೀತಿಸಿದ ಹುಡುಗಿ ಒಲಿಯುವುದು ಅಣ್ಣನಿಗೆ. ಅಣ್ಣನ ಜೊತೆಗೇ ಒಂದಷ್ಟು ಕಾಲ ಜೊತೆಯಾಗಿ ದುಡಿದು, ದೇಶ ವಿದೇಶ ಸುತ್ತಿ ಈಗ ಯಾವುದೋ ಕಾಯಿಲೆಯಿಂದ ಇನ್ನೇನು ಸಾಯಲಿದ್ದಾಳೆ. ವಿಷಯ ತಿಳಿದ ಇವನ ಮನಸ್ಸು ತಡೆಯುವುದಿಲ್ಲ. ಆದರೆ...

ಅವಳ ಅನುರಾಗವಿರುವುದು ಅಣ್ಣನ ಮೇಲೆ. ಈಗಲೂ, ಸಾಯುವ ಕೊನೆಯ ದಿನಗಳಲ್ಲಿಯೂ ಅವಳು ಹಂಬಲಿಸುತ್ತಿರುವುದು ಅಣ್ಣನ ಸಾನ್ನಿಧ್ಯ, ಸಂಪರ್ಕ, ಸ್ನೇಹ, ಸಂಬಂಧ! ಅದು ಇವನಿಗೂ ಗೊತ್ತು. ಆದರೆ ಇವನಿಗೆ ಅವಳ ಮೇಲಿರುವುದು ಸ್ವಂತದ್ದೇ ಪ್ರೇಮ! ಅದೇ ಕಾಲಕ್ಕೆ ಇವನಲ್ಲಿ ಅವಳು ಕಾಣುತ್ತಿರುವುದು ಇವನನ್ನಲ್ಲ, ಬದಲಿಗೆ ಇವನ ಅಣ್ಣನನ್ನು. ಅಲ್ಲವೇನೋ, ತಮ್ಮನಾದ ತನ್ನನ್ನೂ ಇಷ್ಟಪಟ್ಟಿದ್ದಳೆಂಬಂತೆ ಆಡುತ್ತಿರುವಳಲ್ಲ! ಒಮ್ಮೊಮ್ಮೆ, ತನಗೆ ಈಗ ಸಿಗಲಾರದಷ್ಟು ಬ್ಯುಸಿಯಾಗಿರುವ, ಖ್ಯಾತನಾಗಿರುವ, ಲಕ್ಷಾಂತರ ಅಭಿಮಾನಿಗಳ ಕಣ್ಮಣಿಯಾಗಿ ದೂರವಾದಂತಿರುವ ಅಣ್ಣನ ನಿರೀಕ್ಷೆಯಿರಲಾರದು, ತನ್ನನ್ನೇ ಒಪ್ಪಿಕೊಂಡಿರುವಳೇನೋ ಎನಿಸುತ್ತದೆ! ಆದರೆ ತನಗೆ ಅನಿಸುತ್ತಿರುವುದು ನಿಜವಲ್ಲ, ಇದು ವಿಧಿ ಬಗೆದ ಮೋಸ, ಬರೇ ತನ್ನ ರೂಪ ಎರಚಿದ ಮಂಕುಬೂದಿ ಎಂಬುದು ಕೂಡ ಗೊತ್ತಿರುತ್ತದೆ. ಹೀಗೂ ಹಾಗೂ ಅನಿಸುವುದು ಇದ್ದೇ ಇರುತ್ತದೆ. ಇವನೇ ಅಣ್ಣನಿಗೆ ತಾರು ಹೊಡೆದು ಇವಳಿಗಾಗಿ ಅವನಿಂದ ಪತ್ರವೊಂದನ್ನು ಬರೆಸುತ್ತಾನೆ. ಅವಳಿಗೆಷ್ಟು ಖುಶಿ ಅದರಿಂದ!
ತಿಳಿಯದಿರುವುದೆ ಆಗಲಾದರೂ ಈ ಪ್ರೇಮ? ಇನ್ನೇನು ಸಾಯಲಿದ್ದಾಳೆ ಎಂಬಂತಿರುವ ಈಕೆಗಾಗಿಯೇ ಅವನು ಎಲ್ಲ ಕೆಲಸಗಳನ್ನೂ ಬಿಟ್ಟು ಇವಳ ಭೇಟಿಗೆ ದಿನವೂ ಬರತೊಡಗುತ್ತಾನೆ. ದಿನವೂ ಅವಳ ಹಾಸಿಗೆಯ ಹತ್ತಿರ ಕೂತು ಅವಳ ಸಾವನ್ನು ಸಹ್ಯವಾಗುವಂತೆ ಮತ್ತು ಅವಳ ಆ ದಿನಗಳನ್ನು ತಕ್ಕಮಟ್ಟಿಗೆ ಖುಶಿಯ ಸ್ತರಕ್ಕೊಯ್ಯುತ್ತಾನೆ. ಆದರೆ ಅವಳ ಸಾವೇ ಇವನ ಬದುಕಿಗೂ ಅಂತ್ಯವಲ್ಲವಲ್ಲ. ಇವನು ಉಳಿದೆಲ್ಲಾ ಮೌನವನ್ನು ತಾನೇ ಹೊದ್ದುಕೊಂಡು ಹಾದಿ ಸಾಗಬೇಕಲ್ಲ. ಇದು ಕತೆಯ ಪಲ್ಲವಿ.

ಆದರೆ ಇಡೀ ಕತೆಯಲ್ಲಿ ಸಾವಿನ ಚರ್ಚೆ ಬಿಡಿ, ನೋವಿನ ಮಾತೂ ಇಲ್ಲ. ಸಾಕಷ್ಟು ದೀರ್ಘವಾದ ಈ ಕತೆಯ ನಿರೂಪಣೆಯ ಲಯ, ಓದುಗನ ಆಸಕ್ತಿ ಕುಂದದಂತೆ ಅದನ್ನು ಜೀವಂತವಾಗಿರಿಸಿಕೊಂಡ ವಿಧಾನ, ಇಡೀ ಕತೆಯ ಶರೀರದಲ್ಲಾಗಲೀ, ಅದರ ಅಂತ್ಯದಲ್ಲಾಗಲೀ ಯಾವುದೇ ಭಾವನಾತ್ಮಕ ಅಬ್ಬರಗಳಿಲ್ಲದೇನೆ ಇಲ್ಲಿನ ಸಂವೇದನೆಗಳನ್ನು ನಿಭಾಯಿಸಿದ ರೀತಿ ನಿಜಕ್ಕೂ ಸಾರ್ಥಕ ಭಾವವನ್ನು ತರುತ್ತದೆ.

ಕತೆಯ ಆರಂಭದಲ್ಲಿ ಇವನು ತನ್ನನ್ನು ತಪ್ಪಾಗಿ ತಿಳಿಯಲಾಗಿದೆ ಎಂದು ಕೊಡುವ ಅದೇ ಟಿಪಿಕಲ್ ಪರಿಚಯದೊಂದಿಗೇ ಕತೆಯ ಮುಕ್ತಾಯವೂ ಇರುವುದು ತುಂಬ ಧ್ವನಿಪೂರ್ಣವಾಗಿದೆ. ಒಂದು ಬಗೆಯಲ್ಲಿ ನೋಡಿದರೆ, ಇಡೀ ಬದುಕನ್ನು ತಾನು ತಮ್ಮನೇ ಅಣ್ಣನೇ ಎಂದು ಜಗತ್ತಿಗೆ ಮತ್ತೆ ಮತ್ತೆ ಸ್ಪಷ್ಟಪಡಿಸಿಕೊಂಡೇ ಬದುಕಬೇಕಾಗಿ ಬಂದ ಈ ಮನುಷ್ಯನಿಗೆ ತಾನು ಯಾರು ಎಂಬ ಪ್ರಶ್ನೆ ಎಷ್ಟೆಲ್ಲ ಬಗೆಯಲ್ಲಿ ಕಾಡಿರಬಹುದು!

ತಾನು ಅಷ್ಟೆಲ್ಲ ಪ್ರೀತಿಸಿದ್ದ ಹುಡುಗಿಯ ಕೊನೆಯನ್ನು ಕಣ್ಣೆದುರೇ ಕಂಡು, ಊರಿಗೆ ಹೊರಟು ನಿಂತವ ರೈಲು ಹತ್ತುವ ಮುನ್ನ ಎದುರಿಸುವ, ಕತೆಯ ಅಂತ್ಯ ನೋಡಿ:

.....ಅತ್ಯಂತ ಅನಿರೀಕ್ಷಿತ ಸ್ಥಳದಲ್ಲಿ ಅವನ ಕಡೆ ಧಾವಿಸಿದಳು, ಆಶ್ಚರ್ಯ ಸಂತೋಷಾತಿರೇಕದಿಂದ ಗವಸು ಹಾಕಿದ್ದ ತನ್ನ ಕೈಗಳಿಂದ ಅವನ ತೋಳನ್ನು ಹಿಡಿದೆಳೆದಳು.

"ಅಯ್ಯೋ ದೇವರೇ, ಏಡ್ರಿಯನ್ಸ್, ಪ್ರೀತಿಯ ಗೆಳೆಯ" ಎಂದು ಜೋರಾಗಿ ಭಾವವಶಳಾಗಿ ಕೂಗಿದಳು.

"ದಯವಿಟ್ಟು ಕ್ಷಮಿಸಿ ಮೇಡಂ, ನನ್ನನ್ನ ನೀವು ಏಡ್ರಿಯನ್ಸ್ ಹಿಲ್‌‍ಗಾರ್ಡ್ ಅಂತ ತಪ್ಪು ತಿಳಿದಿರೋ ಹಾಗೆ ಕಾಣುತ್ತೆ. ನಾನು ಅವನ ತಮ್ಮ" ಎಂದ ಶಾಂತನಾಗಿ, ಖಿನ್ನಳಾದ ಆ ಗಾಯಕಿಯಿಂದ ತಿರುಗಿ ತನ್ನ ಗಾಡಿಯ ಕಡೆ ಧಾವಿಸುತ್ತ.

(ಸಪ್ನ ಬುಕ್‌ ಹೌಸ್‌ ಪ್ರಕಟಿಸಿರುವ ಈ ಪುಸ್ತಕದ ಬೆಲೆ ೧೭೦ ರೂ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ