Wednesday, April 24, 2013

ಚೇತೋಹಾರಿ ಓದಿನ, ಹೊಸತನದ ‘ನೀಲಿಗ್ರಾಮ’

ವಿ.ಆರ್.ಕಾರ್ಪೆಂಟರ್ ಅವರ ಹಿಂದಿನ ಕಾದಂಬರಿ 'ಅಪ್ಪನ ಪ್ರೇಯಸಿ' ಓದಿದವರಿಗೆ ನೀಲಿಗ್ರಾಮದ ವಸ್ತು ವಿನ್ಯಾಸ ಮತ್ತು ಕಥಾನಕದ ಬೆಳವಣಿಗೆಯ ವಿಷಯದಲ್ಲಿ ಕಾರ್ಪೆಂಟರ್ ಅವರು ಸಾಧಿಸಿದ ಪ್ರಗತಿ ಕಣ್ಣಿಗೆ ಹೊಡೆದು ಕಾಣಿಸದಿರದು. 'ಅಪ್ಪನ ಪ್ರೇಯಸಿ'ಯಲ್ಲಿ ಕಾದಂಬರಿ ತೊಡಗುವುದೇ ನಿರೂಪಕ ತನ್ನ ಕಾಣೆಯಾದ ಅಪ್ಪನನ್ನು ಹುಡುಕಿ ಹೊರಟಲ್ಲಿಂದ.

'ನೀಲಿಗ್ರಾಮ'ದಲ್ಲಿಯೂ ಆರಂಭ ಇಂಥ ಒಂದು ಹುಡುಕಾಟದಿಂದಲೇ. 'ಅಪ್ಪನ ಪ್ರೇಯಸಿ'ಯ ನಿರೂಪಕನ ಬದುಕು ಸಾಕಷ್ಟು ಸಂಕೀರ್ಣವಾಗಿದೆ. ಅವನ ಉದ್ಯೋಗ, ಪ್ರೇಮ, ಸಾಂಸಾರಿಕ ತಾಪತ್ರಯಗಳು ಮತ್ತು ಒಡನಾಟದ ಗೆಳೆಯರು, ಜಗಳ ಹೊಡೆದಾಟಗಳು ಒಂದು ಸ್ತರದಲ್ಲಿಯೂ, ನಿರೂಪಕ ಚಿತ್ರಿಸುತ್ತ ಹೋಗುವ ಅಪ್ಪನ ಪಾತ್ರದ ಸಂಕೀರ್ಣತೆಗಳು ಇನ್ನೊಂದು ಸ್ತರದಲ್ಲಿಯೂ ಕಾದಂಬರಿಯನ್ನು ನೇಯುತ್ತವೆ; ಮತ್ತು ಈ ಪಯಣ ತುಂಬ ಆಪ್ತವೂ, ವಿವರಗಳಲ್ಲಿ ಪುಷ್ಟವೂ ಆಗಿದ್ದು ಅಥೆಂಟಿಕ್ ಆದ ಒಂದು ಹೊಸ ಜಗತ್ತನ್ನು ತೆರೆದು ತೋರಿಸುವ ಕಾದಂಬರಿಕಾರನೊಬ್ಬನ ಆಗಮನದ ಭರವಸೆಯನ್ನು ಹುಟ್ಟಿಸುವಂತಿತ್ತು.

ಆದರೆ ದಿಡೀರನೇ ಮುಕ್ತಾಯಕ್ಕೆ ಬಂದುಬಿಡುವ ಕಾದಂಬರಿ ಓದುಗನನ್ನು ನಡುದಾರಿಯಲ್ಲೇ ಕೈಬಿಟ್ಟ ಅನುಭವದೊಂದಿಗೆ ದೂರವಾಗಿತ್ತು. ಇಲ್ಲಿ ಅಪ್ಪನ ಪ್ರಣಯ ಮತ್ತು ಮಗನ ಮೊದಲ ಪ್ರೇಮದಂಥ ನವಿರಾದ ಒಂದು ಭಾವನೆಗಳ ನಡುವಣ ಅವ್ಯಕ್ತ ಮುಖಾಮುಖಿ ಸಂಬಂಧದ, ತಲೆಮಾರಿನ, ಊರ ಇನ್ನಷ್ಟು ಮಂದಿಯ ಜೀವನ ದೃಷ್ಟಿಯ ಪಾತಳಿಗಳ ಮೂಲಕ ನಮಗೆ ಪ್ರಸ್ತುತ ಪಡಿಸಲ್ಪಡುವುದಾದರೂ ಆ ಕಾದಂಬರಿಯ ಮುಕ್ತಾಯ, ಅಲ್ಲಿಂದ ವಸ್ತು ಪಡೆಯಬಹುದಾಗಿದ್ದ/ಬೇಕಿದ್ದ ಬೆಳವಣಿಗೆ ಮತ್ತು ಆ ಮೂಲಕ ಕೃತಿಗೆ ದಕ್ಕಬೇಕೆನಿಸುವ/ದಕ್ಕ ಬಹುದಾಗಿದ್ದ ಆಕೃತಿ ಪರಿಪೂರ್ಣಗೊಂಡ ಭಾವ ಓದುಗನಲ್ಲಿ ಮೂಡುವುದು ಕಷ್ಟಕರವಿತ್ತು.

ಹೊಳಹುಗಳನ್ನಷ್ಟೇ ಕಾಣಿಸಿ ಮುಗಿಯುವ ಕವನದ ಶೈಲಿ ಕಾರ್ಪೆಂಟರ್ ಅವರ ಎರಡನೆಯ ಕಾದಂಬರಿಯಲ್ಲಿಯೂ ಮುಂದುವರಿದಿದೆ, ಆದರೆ ಹೆಚ್ಚು ಕಲಾತ್ಮಕವಾದ ಭಂಗಿಯಲ್ಲಿ, ತಾಂತ್ರಿಕ ನೈಪುಣ್ಯದೊಂದಿಗೆ ಎನ್ನುವುದು ಮುಖ್ಯ. ಹೆಚ್ಚೆಂದರೆ ನಾಲ್ಕು ಗಂಟೆಗಳಲ್ಲಿ ಓದಿಸಿಕೊಂಡು ಕೊನೆಮುಟ್ಟಿಸುವ ಈ ಕಾದಂಬರಿ ಆರಂಭದಲ್ಲೇ ನಮ್ಮನ್ನು ಒಂದು ಫ್ಯಾಂಟಸಿಯ ಜಗತ್ತಿನ ಆಳವಿಲ್ಲದ ಕಂದಕಕ್ಕೆ ತಳ್ಳಿಬಿಡುತ್ತದೆ. ಅಲ್ಲಿ ತೆರೆದುಕೊಳ್ಳುವ ನೀಲಿಗ್ರಾಮದ ಚಿತ್ರ ಒಂದು ಭ್ರಮೆಯೆಂದರೆ ಭ್ರಮೆ, ನಿಜವೆಂದರೆ ನಿಜ ಮಾದರಿಯದ್ದು.

ಆದರೆ ಇಲ್ಲಿ ಎರಡೂ ಜಗತ್ತುಗಳಿವೆ. ಒಂದು ನಾವು ಸತ್ಯವೆಂದುಕೊಂಡ, ಶಂಕರಾಚಾರ್ಯರಂಥ ದಾರ್ಶನಿಕರು ಮಿಥ್ಯೆ ಎಂದು ಕರೆದ ನಮಗೆಲ್ಲ ಕಾಮನ್ ಆದ ಜಗತ್ತು. ಇದನ್ನು ವಾಸ್ತವವೆನ್ನುತ್ತೇವೆ. ಇನ್ನೊಂದು ವಿ.ಆರ್.ಕಾರ್ಪೆಂಟರ್ ಸೃಷ್ಟಿಸಿದ ಅವರಿಗಷ್ಟೇ ಅದರ ಆಳ-ಅಗಲ ಗೊತ್ತಿರುವ ಅವರದೇ ಆದ ಜಗತ್ತು. ಅದನ್ನು ಕಾಲ್ಪನಿಕ ಜಗತ್ತು ಎಂದುಕೊಳ್ಳಬಹುದು.
ಆದರೆ ನಮ್ಮ ವಾಸ್ತವಿಕ ಜಗತ್ತಿನ ಮಿಥ್ಯೆ ಮತ್ತು ಈ ಕಾಲ್ಪನಿಕ ಜಗತ್ತಿನ ಸತ್ಯಗಳ ಮುಖಾಮುಖಿಯಾಗುವ ಒಂದು edge ಇದೆಯಲ್ಲ ಅದೇ ಯಾವಾಗಲೂ ಇಂಥ ಮಾಂತ್ರಿಕ ವಾಸ್ತವವನ್ನು ಚಿತ್ರಿಸುವ ಕಾದಂಬರಿಗಳ ಜೀವ ಚೈತನ್ಯವನ್ನು ನಿರ್ಧರಿಸುವ ಪ್ರಧಾನ ಅಂಶವಾಗಿರುತ್ತದೆ, ಅಂಥ ತಂತ್ರದ ಆಶಯವನ್ನು ಕಾಣಿಸುವ ಕುರುಹಾಗಿರುತ್ತದೆ. ಫ್ಯಾಂಟಸಿಯನ್ನು ಒಂದು ತಂತ್ರವಾಗಿ ಬಳಸಿಕೊಂಡು ಕತೆ ಹೇಳುವ ಕಾರ್ಪೆಂಟರ್ ಆ ಮೂಲಕ ಕಾಣಿಸ ಬಯಸುವುದೇನನ್ನು ಎಂಬುದೇ ಇಲ್ಲಿ ಬಹುಮುಖ್ಯವಾಗುವ ಪ್ರಶ್ನೆ.

ಹಾಗಾಗಿ ಕಾದಂಬರಿಯನ್ನು ಓದುತ್ತಿದ್ದಂತೆ ಇಲ್ಲಿನ ವಿವರಗಳಲ್ಲಿ ಇಡೀ ಕಾದಂಬರಿಯ ಮೂಲಸೂತ್ರಕ್ಕೆ ಬೇರೆ ಬೇರೆ ಆಯಾಮಗಳಲ್ಲಿ ಧ್ವನಿಯಾಗಬಲ್ಲ ಮತ್ತು ಸಂವಾದಿಯಾದ ನೆಲೆಯನ್ನು ತೆರೆದು ತೋರಿಸಲಿರುವ ವಿವರಗಳು ಮತ್ತು ಕಾದಂಬರಿಗೆ ಅಗತ್ಯವಾದ ಒಂದು ವಾತಾವರಣವನ್ನು ನಿರ್ಮಿಸುವುದಕ್ಕಾಗಿಯಷ್ಟೇ ಬರುವ ವಿವರಗಳು ಯಾವುವು ಎಂಬ ಬಗ್ಗೆ ಸಹಜವಾಗಿಯೇ ಕುತೂಹಲ ತೊಡಗುತ್ತದೆ.
ಅಂಥವುಗಳ ಕುರಿತೆಲ್ಲ ವಿಶೇಷವಾಗಿ ತಲೆಕೆಡಿಸಿಕೊಳ್ಳದೆ ಸುಮ್ಮನೇ ಓದುತ್ತ ಹೋಗುವಾಗಲೂ ಮನಸ್ಸಿನ ಒಂದು ಪಾತಳಿಯಲ್ಲಿ ಅವುಗಳೆಲ್ಲ ದಾಖಲಾಗುವ ವಿಶಿಷ್ಟ ಕ್ರಮ ಒಂದಿರುತ್ತದೆ. ಈ ಸುಖಕ್ಕಾಗಿಯೇ ನಮಗೆ ಇಂಥ ಫ್ಯಾಂಟಸಿಯನ್ನು ನೆಚ್ಚಿಕೊಂಡ ಕತೆಗಳು, ಕಾದಂಬರಿಗಳು ಹೆಚ್ಚು ಇಷ್ಟವಾಗುವುದೇನೊ!

ಹಾಗೆಯೇ, ಇಲ್ಲಿನ ವಾಸ್ತವಿಕ ಜಗತ್ತಿನ ವಿವರಗಳು ತರ್ಕಕ್ಕೆ, ಕಾರ್ಯಕಾರಣ ಸಂಬಂಧಗಳಿಗೆ ಬದ್ಧವಾಗಿರುವ ಅನಿವಾರ್ಯ ಕೂಡಾ ಹೆಚ್ಚೇ ಇರುತ್ತದೆ. ಯಾಕೆಂದರೆ, ಕಾಲ್ಪನಿಕ ಜಗತ್ತಿನ ಏನನ್ನೂ ನಾವು ಪ್ರಶ್ನಿಸುವಂತಿಲ್ಲ, ಹಾಗಲ್ಲ ಹೀಗೆ ಎಂದು ವಾದಿಸುವಂತಿಲ್ಲ. ಅದು ಸಂಪೂರ್ಣವಾಗಿ ಕಾದಂಬರಿಕಾರನ ಸ್ವಾತಂತ್ರ್ಯಕ್ಕೆ ಸೇರಿದ್ದು.

ಹಾಗಾಗಿ ಅದರಿಂದ ಹೊರಗೆ, ಈ ಕಡೆ ವಾಸ್ತವ ಜಗತ್ತಿನ ವಿದ್ಯಮಾನಗಳು ಹೆಚ್ಚು ಸ್ಪಷ್ಟವಿರಬೇಕಾಗುತ್ತದೆ. ಆದರೆ ವಿ.ಆರ್.ಕಾರ್ಪೆಂಟರ್ ಅವರ ನೀಲಿಗ್ರಾಮ ಕಾದಂಬರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ವಾಸ್ತವಿಕ ಜಗತ್ತಿನಲ್ಲೂ ಸಂಭವನೀಯವಾಗಿಯೇ ಇರುವಂಥ ಮಿಥ್ಯಾವಕಾಶವನ್ನು ಬಹುಸಮರ್ಥವಾಗಿ ಬಳಸಿಕೊಳ್ಳುತ್ತದೆ. ಇದರಿಂದಾಗಿಯೇ ವಾಸ್ತವಿಕ ಜಗತ್ತಿನ ಮಿಥ್ಯೆ ಮತ್ತು ಕಾಲ್ಪನಿಕ ಜಗತ್ತಿನ ಸತ್ಯಗಳ ನಡುವಿನ ಸಂಯುಕ್ತ ಭಾಗ ಇಲ್ಲಿ ಇನ್ನಷ್ಟು ಮೊನಚಾಗುವುದು ಸಾಧ್ಯವಾಗಿದೆ. ಸಾಹಿತ್ಯಾಸಕ್ತರು ಇದನ್ನು ಸ್ವಲ್ಪ ವಿವರವಾಗಿ, ಸೂಕ್ಷ್ಮವಾಗಿ ಗಮನಿಸ ಬೇಕಾದ ಅಗತ್ಯವಿದೆ.

ವಿ.ಆರ್.ಕಾರ್ಪೆಂಟರ್ ಅವರ ಕಾದಂಬರಿಯ ಕೇಂದ್ರಪಾತ್ರವೇ ಹೆಣ್ಣು. ಅದು ಗಮ್ಯ ಎಲ್ಲಿ ಎಂಬ ಬಗ್ಗೆ ಸ್ಪಷ್ಟವಿಲ್ಲದೇ ಹೊರಟ ಒಂದು ಪ್ರಯಾಣದ ಇಬ್ಬರು ಪ್ರಯಾಣಿಕರ ತಾಯಿ. ಈ ವಿಲಕ್ಷಣ ಪಯಣವೇ ಚಿತ್ತಾಲರ 'ಪಯಣ' ಕತೆಯ ಪ್ರಯಾಣವನ್ನು ಸೂಚಿಸುವಂತಿದ್ದರೂ ಇದಕ್ಕಿಂತ ಹೆಚ್ಚು ಪ್ರಖರವಾಗಿ ಮೇಲೆ ಹೇಳಿದ ವಾಸ್ತವ ಜಗತ್ತಿನಲ್ಲೇ ವಾಸ್ತವ ಮತ್ತು ಭ್ರಾಮಕ ಅಂಶಗಳ overlapping ಕಾಣಿಸಿಕೊಳ್ಳುವುದು ಈ ತಾಯಿಯ ಪಾತ್ರಚಿತ್ರಣದಲ್ಲೇ. ಅದರಲ್ಲಿಯೇ ವಿ.ಆರ್.ಕಾರ್ಪೆಂಟರ್ ಒಂದು ಮಾಯಕತೆಯನ್ನು ಸೃಷ್ಟಿಸಿಬಿಡುವ ಪರಿಯನ್ನು ಗಮನಿಸಿ:

'ಅಪ್ಪ ಅಮ್ಮನ ವಿಚಾರವಾಗಿ ತೆಗೆದುಕೊಂಡ ನಿರ್ಧಾರ ನಮ್ಮನ್ನು ತೀವ್ರವಾಗಿ ಕಲಕಿತ್ತು. ಅಮ್ಮ ಅಪ್ಪನಿಗೆ ವಿಧೇಯಳಾಗಿರಲಿಲ್ಲ ನಿಜ. ಆದರೆ ಅವಳು ವ್ಯಭಿಚಾರಿಣಿಯಲ್ಲ! ತನಗೆ ಇಷ್ಟ ಬಂದವರನ್ನು ಹಾಸಿಗೆಗೆ ಎಳೆಯುತ್ತಿದ್ದಳು. ಆದರೆ ಎಂದೂ ಕೂಡ ಸಿಕ್ಕಸಿಕ್ಕವರ ಸಂಗ ಬಯಸುತ್ತಿರಲಿಲ್ಲ. ಮೈಗೆ ಹಿಡಿಸಿದವರಿಗೆ ಮಾತ್ರವೇ ತನ್ನ ದೇಹವನ್ನು ಹಂಚುತ್ತಿದ್ದಳು. ಆದರೆ ಎಂದೂ ತನ್ನ ದೇಹವನ್ನು ಬಿಕರಿಗೆ ಇಟ್ಟವಳಲ್ಲ. ಅಲ್ಲದೇ ಅಪ್ಪನಿಗೆ ವಿರುದ್ಧವಾದ ಮಾನವೀಯ ಹೃದಯದವಳಾಗಿದ್ದಳು.' (ಪುಟ 18)

'ತೋಳದ ಬೇಟೆಗೆ ಹೋಗಿದ್ದ ಅಪ್ಪ ಅಂದು ಎಂದಿನ ರೂಢಿಗತ ಅವಧಿಗಿಂತಲೂ ಮುಂಚಿತವಾಗಿಯೇ ಮನೆಗೆ ಬಂದ. ಎಂದಿನಂತೆ ಅಂದೂ ಕೂಡ ಅಪ್ಪ ಜಾಸ್ತಿಯೇ ಕುಡಿದಿದ್ದ. ಕಬ್ಬು ಅರೆಯುವ ಆಲೆಮನೆಯಲ್ಲಿ ಅಮ್ಮ ಮೇಲ್ವಿಚಾರಕನ ಜೊತೆ ಚಕ್ಕಂದಕ್ಕೆ ಬಿದ್ದಿದ್ದಳು.' (ಪುಟ 102)

'ಅಮ್ಮನ ಚಂಚಲ ಸ್ವಭಾವವನ್ನು ಚೆನ್ನಾಗಿ ಅಧ್ಯಯನ ಮಾಡಿದ್ದ ಕಾನಿ ಅವಳನ್ನು ಇಡಿಯಾಗಿ ಆವರಿಸಿಕೊಂಡ. ಅವಳೂ ಕೂಡ ಅವನನ್ನು ಇನ್ನಿಲ್ಲದಂತೆ ಮೋಹಿಸತೊಡಗಿದ್ದಳು. ಒಂದು ದಿನ ಅವಳ ಕಣ್ಣಿಗೆ ಕಾನಿ ಬೀಳದಿದ್ದರೆ ಚಡಪಡಿಸುತ್ತಿದ್ದಳು. ಅವಳ ದೇಹ ಕಂಪಿಸುತ್ತಿತ್ತು. ಮಾತುಗಳು ತೊದಲುತ್ತಿದ್ದವು. ಅವರು ಪ್ರತಿಬಾರಿಯೂ ಇದೇ ಮೊದಲ ಬಾರಿಗೆ ಸೇರುತ್ತಿರುವ ಪ್ರಣಯಿಗಳಂತೆ ಸೇರುತ್ತಿದ್ದರು. ಕಾನಿ ಬರುವುದಕ್ಕೆ ಮೊದಲೇ ಅಮ್ಮ ಅನೇಕ ಗಂಡಸರನ್ನು ಬೆಸೆದುಕೊಂಡಿದ್ದರೂ, ಅವನು ಅವಳ ಹೃದಯದಲ್ಲಿ ವಿಶೇಷ ಸ್ಥಾನ ಗಿಟ್ಟಿಸಿದ್ದ.' (ಪುಟ 129)

ಇಲ್ಲಿನ ಇನ್ನೊಂದು ವೈರುಧ್ಯವೆಂದರೆ, ಹೀಗೆ ಉತ್ಕಟವಾಗಿ ಕಾನಿಯ ಮೋಹಕ್ಕೆ ಬಿದ್ದ ಅದೇ ಹೆಣ್ಣು ಅದೇ ಕಾಲಕ್ಕೆ ಮೇಲ್ವಿಚಾರಕನ ಜೊತೆಗೂ ಅಂಥದ್ದೇ ಸಂಬಂಧವನ್ನಿಟ್ಟುಕೊಂಡಿರುವುದು. ಹಾಗಾಗಿ ಮೇಲ್ವಿಚಾರಕ ಸಿಕ್ಕಿಬಿದ್ದು ಪ್ರಾಣ ಕಳೆದುಕೊಂಡಾಗ ಈಕೆ ಕಾನಿಯನ್ನು ಯಾಚಿಸುತ್ತಾಳೆ. ಹಲವರೊಂದಿಗೆ ಲೈಂಗಿಕ ಸಂಬಂಧವನ್ನಿಟ್ಟುಕೊಂಡ ಗಂಡು ಪಾತ್ರಗಳನ್ನು ನಾವು ಬಲ್ಲೆವು. ಅಂಥ ಗೃಹಿಣಿಯೊಬ್ಬಳನ್ನು ಇಲ್ಲಿ ಭೇಟಿಯಾಗುತ್ತೇವೆ.
ಅಂಥ ಗಂಡು ಪಾತ್ರಗಳಾದರೂ ಏಕಕಾಲಕ್ಕೆ ಹಲವರ ಜೊತೆ ಲೈಂಗಿಕತೆಗೆ ಮೀರಿದ ಸಂಬಂಧವನ್ನು ಬೆಳೆಸಿರುವ ಪ್ರಸಂಗ ಅಪರೂಪ. ಇಲ್ಲಿ ಈಕೆ ಏಕಕಾಲಕ್ಕೆ ಕಾಮವಷ್ಟೇ ಅಲ್ಲದ ಒಂದು ವಿಶಿಷ್ಟ ಪಾತಳಿಗೆ ತನ್ನೆಲ್ಲಾ ಸಂಬಂಧಗಳನ್ನು ಒಯ್ಯಬಲ್ಲ ಮನೋಧರ್ಮವನ್ನು ಹೊಂದಿರುವುದು ಕಾಣುತ್ತೇವೆ ಮಾತ್ರವಲ್ಲ ಅದನ್ನು ಅವಳು ನೈತಿಕ ಗೊಂದಲಗಳಾಗಲೀ, ಅಂತರಂಗದ ಪಾಪಪ್ರಜ್ಞೆಯ ಕೀಳಿರಿಮೆಗಳಾಗಲೀ ಇಲ್ಲದೇನೆ ಪ್ರಾಮಾಣಿಕ ಜೀವಿಯಾಗಿ ನಿಭಾಯಿಸುತ್ತಿರುವುದು ಕಾಣಿಸುತ್ತದೆ.

ಆದಾಗ್ಯೂ ವಿ.ಆರ್.ಕಾರ್ಪೆಂಟರ್ ಇದನ್ನು ವಿಶ್ಲೇಷಿಸುವ ಅಥವಾ ವಿಮರ್ಶಿಸುವ ನೆಲೆಗೆ ಕಾದಂಬರಿಯನ್ನು ಒಯ್ಯುವುದಿಲ್ಲ. ಈ ಹೆಣ್ಣು ಏಕಕಾಲದಲ್ಲಿ ಪತ್ನಿ, ಮೋಹಿನಿ, ತಾಯಿ ಮತ್ತು ಯಜಮಾನಿಯಾಗಿದ್ದೂ ತನ್ನವೇ ವಿಭಿನ್ನ ಸಂಬಂಧಗಳ ಜೊತೆಗೆ ಯಾವುದೇ ಮುಖಾಮುಖಿಯ ಕಷ್ಟಗಳಿಗೆ ಒಡ್ಡಲ್ಪಡುವುದಿಲ್ಲ. ಅವರೇ ನಿರ್ಮಿಸಿದ ಕಾಲ್ಪನಿಕ ಜಗತ್ತಿನ ಚೌಕಟ್ಟಿನಲ್ಲಿ ಇರುವಂತೆ ಇಲ್ಲಿಯೂ ಅದು ಇರುವುದು ಹಾಗೆ ಮತ್ತು ಹಾಗೆ ಅಷ್ಟೆ. ಇದು ಹೇಗೆ ಕಾದಂಬರಿಯ ಪ್ಲಸ್ ಪಾಯಿಂಟ್ ಆಗಿದೆಯೋ ಅಷ್ಟೇ ಮೈನಸ್ ಪಾಯಿಂಟ್ ಕೂಡ ಆಗುವುದು ಸಾಧ್ಯವಿದೆ. ಆ ನಿಟ್ಟಿನಲ್ಲಿ ಕಾದಂಬರಿ ಅಷ್ಟಿಷ್ಟು ತೆರೆದುಕೊಂಡಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ.

ಒಬ್ಬ ವಿಕೃತಕಾಮಿಯ ಬೇಟೆಯಷ್ಟೇ ಈ ಕಾದಂಬರಿಯ ವಸ್ತುವಿನ ಸಾಧ್ಯತೆಯಾಗಿ ಕಾಣುವುದಿಲ್ಲ. ಇಲ್ಲಿ ಈ ವಿಕೃತಕಾಮಿ ತನ್ನ ಸಹೋದರನೊಂದಿಗೆ ಸೇರಿ ನಿರ್ಮಿಸುವ ನೀಲಿಗ್ರಾಮದ (ಇದರ ಹೈಟೆಕ್ ಅಭಿವೃದ್ಧಿ ವಿಶೇಷ ಗಮನಕ್ಕೆ ಅರ್ಹವಾಗಿದೆ!) ರೀತಿ ರಿವಾಜುಗಳಲ್ಲಿ ಸಂತಾನೋತ್ಪತ್ತಿಗೆ ವಿಶೇಷವಾದ ಮಹತ್ವವಿದೆ. ಒಂದೆಡೆ ಬೇರೆ ಜಗತ್ತಿನಿಂದ ಜನರನ್ನು ಅನಾಮತ್ತು ತಂದು ಸೇರಿಸಿಕೊಳ್ಳುವ ಪ್ರಕ್ರಿಯೆ ನಡೆದಿರುವಂತೆಯೇ ಇತ್ತ ಹೆಚ್ಚು ಹೆಚ್ಚು ಸಂತಾನೋತ್ಪತ್ತಿಯನ್ನು ಪ್ರಚೋದಿಸಲಾಗುತ್ತಿದೆ. ತನ್ನ ದೇಶವನ್ನು ಬಲಿಷ್ಠಗೊಳಿಸುವ ಪರಿಕ್ರಮವನ್ನಾಗಿ ಇದನ್ನು ರಾಜ ಪರಿಗಣಿಸಿದ್ದಾನೆ. ಇದಕ್ಕಾಗಿ ನಾಲ್ಕು ವರ್ಷ ಪ್ರಾಯದ ಮಕ್ಕಳನ್ನು ಲೈಂಗಿಕ ಕ್ರಿಯೆಗೆ ಸಜ್ಜುಗೊಳಿಸುವ ಪ್ರಕ್ರಿಯೆ ಕೂಡಾ ನಡೆದಿದೆ!

ಎಲ್ಲಿಗೆ ಬಂದಿದ್ದೇವೆ, ಯಾಕಾಗಿ ಬಂದಿದ್ದೇವೆ, ಇದು ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ಗೊತ್ತಿಲ್ಲದೆ ಕಂಗಾಲಾಗುವಂತೆಯೇ ಇಲ್ಲಿಂದ ಯಾವತ್ತೂ ಪಾರಾಗಲಾರೆವೇನೋ ಎಂಬ ಒಂದು ಅನಿಶ್ಚಿತತೆಯೂ ಇಲ್ಲಿ ಇರುವುದು ಈ ಫ್ಯಾಂಟಸಿಗೆ ಹೆಚ್ಚಿನ ಗುರುತ್ವವನ್ನು ಒದಗಿಸುವಾಗಲೇ ಒಂದು ಬಗೆಯ ಪಾರಮಾರ್ಥಿಕ ಪಾತಳಿಯನ್ನೂ ಕಟ್ಟಿಕೊಡುವುದು ಸುಳ್ಳಲ್ಲ. ಪ್ರಯಾಣದಲ್ಲೇ ಒದಗುವ ಈ ಭಾವ ಕಾದಂಬರಿಯ ಉದ್ದಕ್ಕೂ ಕಾಪಿಟ್ಟುಕೊಂಡು ಬಂದಿದೆ.

ಒಂದೆಡೆ ಇಂಥ ಲೈಂಗಿಕ ಪಿಪಾಸೆ, ಅಧಿಕಾರಗ್ರಹಣದ ತಂತ್ರಗಳನ್ನು ಕಾಣಿಸುವಾಗಲೇ ಕಾದಂಬರಿ ರೆಸಾರ್ಟ್ ತರದ ಆಧುನಿಕ ಜೀವನಶೈಲಿಯ ವಿಪರ್ಯಾಸಗಳನ್ನು ಕೂಡ ಟಚ್ ಮಾಡುತ್ತದೆ. ಆದರೆ ನಿರಾಸೆಯ ಮಾತೆಂದರೆ ಇಂಥ ಮಹತ್ವದ ಆಯಾಮಗಳು ತೆರೆದುಕೊಳ್ಳಬಹುದಾಗಿದ್ದ ಹೆಚ್ಚಿನೆಲ್ಲಾ ಕಡೆ ಮಹತ್ವಾಕಾಂಕ್ಷೆಯ ಕೊರತೆ ಎದ್ದು ಕಾಣುವಂತೆ ಬರೇ 'ಟಚಿಂಗ್' ಇದೆ, ನಾಟುವಂತೆ ಊರಿಕೊಳ್ಳುವ ವ್ಯವಧಾನವಿಲ್ಲ.

ಎಲ್ಲೋ ಒಂದಿಷ್ಟು ಇಷ್ಟವಾಗುವ ಈ ನಿರುದ್ದಿಶ್ಯ ಚಲನೆ ಇನ್ನೆಲ್ಲೊ ಅತೃಪ್ತಿಯನ್ನು ಉಳಿಸುವುದು ನಿಜ. ಕಾರ್ಪೆಂಟರ್ ಸಾಧಿಸಿದ ಹದ ಸರಿಯೆ, ನಮ್ಮ ನಿರೀಕ್ಷೆಯ ಮಾನದಂಡಗಳೇ ತಪ್ಪೆ ಎಂಬ ಪ್ರಶ್ನೆಯನ್ನು ಎತ್ತುವುದು ಸುಲಭ, ನಿಭಾಯಿಸುವುದು ಕಷ್ಟ.

ನಮ್ಮ ವಿಮರ್ಶಕರು ಒಂದು ಒಳ್ಳೆಯ ಕೃತಿಯ ಬಗ್ಗೆ ಕೊಂಚ ಉದಾರವಾಗಿ ಮಾತನಾಡುವ ಅಗತ್ಯ ಇರುವಾಗಲೂ ಅದರಲ್ಲಿ ಅದಿಲ್ಲ ಇದಿಲ್ಲ ಎಂಬ ಇಲ್ಲಗಳನ್ನೇ ಆರಿಸಿ ತೆಗೆದು ಏನಾದರೂ ಅಪಸ್ವರವನ್ನು ಹುಟ್ಟಿಸುವ ಖಯಾಲಿಗೆ ಬಿದ್ದಿದ್ದಾರೆ, ಹಾಗೆ ಮಾಡದೇ ಇದ್ದರೆ ಎಲ್ಲಿ ತಮ್ಮ ವಿಮರ್ಶಕ ಕ್ರೆಡಿಬಿಲಿಟಿಗೆ ಧಕ್ಕೆಯಾದೀತೋ ಎಂಬ ಭಯಕ್ಕೆ ಬಿದ್ದು ಏನಾದರೂ ಒಂದಿಷ್ಟು ಕೊರತೆಗಳತ್ತ ಬೆಟ್ಟು ಮಾಡಿ ತೋರಿಸುವ ಶಾಸ್ತ್ರ ಮಾಡದೇ ಮುಗಿಸುವುದಿಲ್ಲ ಎಂಬ ಅಷ್ಟೇನೂ ಸುಳ್ಳಲ್ಲದ ಆರೋಪವಿದೆ. ಆದರೆ ನಾನು ಎತ್ತುತ್ತಿರುವ ಅನುಮಾನಗಳು ನನ್ನ ಅನುಮಾನಗಳೇ ಹೊರತು ತೀರ್ಮಾನಗಳಲ್ಲ.

ಫ್ಯಾಂಟಸಿ ಮತ್ತು ವಿಧಿ ಎರಡೂ ನಮ್ಮ ವಾಸ್ತವಿಕ ಬದುಕಿನ ಸಿದ್ಧ ತತ್ವ, ಅರ್ಥ, ರೀತಿ-ನೀತಿ ಮತ್ತು ಸಾಮಾಜಿಕ ಚೌಕಟ್ಟಿನೊಳಗೇ ಒಂದು ತಥಾಕಥಿತ ಆಯಾಮವನ್ನು ಸೃಷ್ಟಿಸಿದ ಕಾದಂಬರಿಗಳನ್ನಷ್ಟೇ ನಾವು ಕಾಣುತ್ತ (ನಿರೀಕ್ಷಿಸುತ್ತ) ಬಂದಿರುವುದರಿಂದ ಹೀಗಾಗುತ್ತಿದೆಯೆ? ಮಾರ್ಕ್ವೆಜ್‌ನ ನೂರು ವರ್ಷಗಳ ಏಕಾಂತದಲ್ಲಾಗಲೀ, ಕುಂದೇರಾನ ಕೆಲವು ಕಾದಂಬರಿಗಳ ಕನಸು-ಫ್ಯಾಂಟಸಿ-ಭ್ರಾಂತಿಗಳ ಕಲಸುಮೇಲೋಗರಕ್ಕಾಗಲಿ ಅನ್ವಯಿಸಿ ಇದನ್ನು ನೋಡಬೇಕೆನಿಸಿತ್ತದೆ.

ಒಂದು ಕವನ ಬರೇ ಹೊಳಹುಗಳನ್ನಷ್ಟೇ ತೋರಿಸಿ ಮುಗಿದುಬಿಡುವಾಗ ನಾವದನ್ನು ಅದು ನಮ್ಮೆದುರು ನೂರಾರು ಅರ್ಥಗಳ ಕಿಟಕಿಯಲ್ಲಿ ನೋಡುವ ಸಾಧ್ಯತೆಗಳನ್ನು ತೆರೆದಿರಿಸಿದ ಕಾರಣಕ್ಕೇ ಅದನ್ನು ಮೆಚ್ಚಿಕೊಳ್ಳುತ್ತೇವೆ. ನಾಟಕದ ಒಂದು ಪಠ್ಯ ಬೇರೆ ಬೇರೆ ನಿರ್ದೇಶಕರ ಕೈಗಳಲ್ಲಿ, ಕಲ್ಪನೆಯಲ್ಲಿ ಬೇರೆ ಬೇರೆ ಬಗೆಯ ರಂಗಸಜ್ಜಿಕೆ, ರಂಗ ಚಲನೆ, ರಂಗ ಪರಿಕಲ್ಪನೆ, ನಟರ ವೇಷಭೂಷಣ, ಅವರು ಧ್ವನಿಗೆ, ಕತ್ತಲೆ ಬೆಳಕುಗಳಿಗೆ, ಹಿನ್ನೆಲೆ ಸಂಗೀತ/ಧ್ವನಿಗೆ ಕೊಡುವ ಮೆರುಗಿನಲ್ಲಿಯೇ ಇನ್ನೇನೋ ಆಗಿ ಮೂಡಿಬರುವುದನ್ನು ಗಮನಿಸಿದ್ದೇನೆ.

ಕೇವಲ ಹೆಜ್ಜೆ ಹಾಕುವ ವಿಧಾನದಲ್ಲಿಯೇ ಒಂದು ಪಾತ್ರದ ಧೂರ್ತತನವನ್ನೋ, ದುರಾಶೆಯನ್ನೋ ಕಾಣಿಸಲು ಸಾಧ್ಯವಿದೆಯೆ ಎಂಬ ಅಚ್ಚರಿಯೊಂದಿಗೇ ಮೀಡಿಯಾದಂಥ ನಾಟಕವನ್ನು (ನಿರ್ದೇಶನ: ಕೆ.ಜಿ.ನಾರಾಯಣ) ಕಂಡು ಬೆರಗಾಗಿದ್ದಿದೆ. ಆದರೆ ಕಾದಂಬರಿಯೊಂದು ಅಂಥ ಅರ್ಥಪ್ರಪಂಚದ ಸಾಧ್ಯತೆಗಳನ್ನು ಹಾಗೆಯೇ ತೆರೆದಿಟ್ಟು ಮುಗಿಯಬಹುದೇ? ಇಲ್ಲಿ ಕಾರ್ಪೆಂಟರ್ ಅವರ ನಿಲುವು-ನಿರೀಕ್ಷೆಗಳು ಮುಖ್ಯವಾಗುತ್ತವೆ.

ಅದೇನಿದ್ದರೂ ಜಡ್ಡುಗಟ್ಟಿದಂತೆ ಹಳೆಯ ಕತೆಗಳನ್ನೇ ಹೊಸ ದೇಶ-ಕಾಲಗಳ ವೇಷದಲ್ಲಿ ಓದುವ ಅನಿವಾರ್ಯವಿದ್ದಾಗ ಹೊಸತನವೇ ಇಲ್ಲದ ಕಾದಂಬರಿಗಳ ನಡುವೆ ಇಂಥದ್ದೊಂದು ಕಾದಂಬರಿ ಬಂದಿರುವುದು ನಿಜಕ್ಕೂ ಖುಶಿಯ ಸಂಗತಿ. ಚೇತೋಹಾರಿಯಾದ ಒಂದು ಓದನ್ನು, ಓದಿನ ಕಾಲಕ್ಕೆ ಹೆಚ್ಚೇನೂ ಬೌದ್ಧಿಕ ಲಗ್ಗೇಜ್ ಹೊರಿಸದೇ ದಯಪಾಲಿಸುವ ಈ ಕಾದಂಬರಿ ಇಷ್ಟವಾಗುತ್ತದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ