Monday, July 1, 2013

ಅಜ್ಞಾತನೊಬ್ಬನ ಆತ್ಮಚರಿತ್ರೆ

ನನ್ನ ಸಾಹಿತಿ ಮಿತ್ರರ ಜೊತೆ ಮಾತನಾಡುವಾಗ ಮತ್ತೆ ಮತ್ತೆ ಹೊಗಳಿಸಿಕೊಂಡ ಕಾದಂಬರಿ ಕೃಷ್ಣಮೂರ್ತಿ ಹನೂರು ಅವರ ‘ಅಜ್ಞಾತನೊಬ್ಬನ ಆತ್ಮಚರಿತ್ರೆ’. ಹನೂರರ ‘ಕೇರಿಗೆ ಬಂದ ಹೋರಿ’, ‘ಕತ್ತಲಲ್ಲಿ ಕಂಡ ಮುಖ’ ಮತ್ತು ‘ಕಳೆದ ಮಂಗಳವಾರ ಮುಸ್ಸಂಜೆ’ ಕಥಾಸಂಕಲನಗಳಿಗಾಗಿ ತುಂಬ ಪ್ರಯತ್ನಿಸಿದರೂ ವರ್ಷಗಟ್ಟಲೆ ಅದು ಎಲ್ಲಿಯೂ ಸಿಗಲಿಲ್ಲ. ಆಗಲೇ ನನಗೆ ತಿಳಿದಿದ್ದು, ಹನೂರರ ಅತ್ಯುತ್ತಮ ಕೃತಿಗಳಲ್ಲಿ ಬಾರೋ ಗೀಜಗ ಎಂಬ ಕಾದಂಬರಿ ಕೂಡ ಸೇರಿದೆ ಎಂದು. ಆದರೆ ಅವು ಯಾವುದೂ ಕೊನೆಗೂ ನನಗೆ ಸಿಗಲಿಲ್ಲ ಮತ್ತು ನಾನು ಅವುಗಳನ್ನು ಓದಿಲ್ಲ. ಹಾಗಿರುತ್ತ ಬಿಡುಗಡೆಯಾದ ಅವರ ಹೊಸ ಕಾದಂಬರಿಯ ಬಗ್ಗೆ ಸಹಜವಾಗಿಯೇ ನನ್ನಲ್ಲಿ ಕುತೂಹಲವಿತ್ತು. ಎಚ್.ಎಸ್.ಶಿವಪ್ರಕಾಶ್ ಮತ್ತು ನರಹಳ್ಳಿ ಬಾಲಸುಬ್ರಹ್ಮಣ್ಯರಂಥ, ನಾವೆಲ್ಲ ಗೌರವಿಸುವ ಮಹತ್ವದ ಬರಹಗಾರರಿಂದ ಕಾದಂಬರಿಯನ್ನು ಇನ್ನಿಲ್ಲದಂತೆ ಉತ್ಪ್ರೇಕ್ಷಿಸಿ ಪ್ರಶಂಸಿಸುವ ಎರಡು ಬರಹಗಳೂ ಪ್ರಜಾವಾಣಿಯಲ್ಲಿ ಕಾಣಿಸಿಕೊಂಡವು. ನಂತರ ವಿಜಯಕರ್ನಾಟಕದಲ್ಲಿಯೂ (ಲೇಖಕರ ಹೆಸರು ಮರೆತಿದೆ) ಒಂದು ಲೇಖನ ಬಂತು. ಗಾಂಧಿ ಬಜಾರ್ ಪತ್ರಿಕೆಯಲ್ಲಿ ಡಾ|| ಜಿ ಎನ್ ಉಪಧ್ಯರು ಇನ್ನಿಲ್ಲದಂತೆ ಹೊಗಳಿ ಬರೆದರು. ವಿಜಯವಾಣಿಯಲ್ಲಿ ಎಸ್.ವಿಜಯಶಂಕರರ ಲೇಖನ ಸರಣಿ ಬಂತು. ಪ್ರಕಟನೆಯ ಬೆನ್ನಿಗೇ ಕಸಾಪ ಕೊಡಮಾಡುವ ಒಂದು ದತ್ತಿ ಪ್ರಶಸ್ತಿ ಕೂಡ ಈ ಕೃತಿಗೆ ದಕ್ಕಿತು. ಆದರೆ ಇವೆಲ್ಲವುಗಳಿಂದ ಬಹುಷಃ ಅತಿಯಾದ ನಿರೀಕ್ಷೆ ಹುಟ್ಟಿಸಿದ್ದರಿಂದಲೋ ಏನೋ ಕಾದಂಬರಿಯ ಓದು ಮಾತ್ರ ನನ್ನಲ್ಲಿ ತೀರ ನಿರಾಸೆ ಹುಟ್ಟಿಸಿತು.

ಈ ಕಾದಂಬರಿ ಹೊರಬರುತ್ತಲೇ ವಿಶೇಷ ಪ್ರಶಂಸೆ, ಹೊಗಳಿಕೆ ಇತ್ಯಾದಿಗಳ ರತ್ನಗಂಬಳಿಯೇ ಹಾಸಲ್ಪಟ್ಟಿದ್ದು ವಿಶೇಷವೇ. ಎಷ್ಟೋ ಉತ್ತಮ ಕೃತಿಗಳು ಬಂದ ಸುದ್ದಿ ಕೂಡ ಕನ್ನಡಿಗರಿಗೆ ಸಿಗದೇ ಅವು ಕಣ್ಮರೆಯಾಗುವುದು ಹೊಸತೇ ಆದ ವಿದ್ಯಮಾನವೇನಲ್ಲವಲ್ಲ. ಕೇಶವ ಮಳಗಿಯವರ ಅಂಗದ ಧರೆಯ ಬಗ್ಗೆ ಸ್ವತಃ ಎಚ್ ಎಸ್ ಶಿವಪ್ರಕಾಶ್ ಹೇಳಿರುವುದು ಒಪ್ಪತಕ್ಕ ಮಾತೇ. ಆದರೂ ‘ಅಜ್ಞಾತನೊಬ್ಬನ ಆತ್ಮಚರಿತ್ರೆ’ಯ ವಿಷಯದಲ್ಲಿ ನನಗೊಂದು ಗಂಭೀರವಾದ ಅನುಮಾನವಿದೆ. ಬೆನ್ನುಡಿ ಬರೆದ ಗಿರೀಶ ಕಾರ್ನಾಡರಾದಿಯಾಗಿ ಈ ಕಾದಂಬರಿಯನ್ನು ಪ್ರಶಂಸಿದ ಮಹನೀಯರೆಲ್ಲ ನಿಜಕ್ಕೂ ಇದನ್ನು ಓದಿರಬಹುದೆ? ಗಾಂಧಿಬಜಾರಿನಲ್ಲಂತೂ ಡಾ.ಜಿ.ಎನ್.ಉಪಾಧ್ಯರು ಈ ಕಾದಂಬರಿಯನ್ನು ಹಿಗ್ಗಾಮುಗ್ಗಾ ಹೊಗಳಿರುವ ರೀತಿಯೇ ಭಯಹುಟ್ಟಿಸುವಂತಿದೆ! ಇಲ್ಲಿನ ಬಹುತೇಕ ವಾಕ್ಯಗಳೆಲ್ಲ ‘ಬಹುಹೃದ್ಯವಾಗಿ ಪಡಿಮೂಡಿದೆ, ಕಂಗೊಳಿಸುತ್ತದೆ, ನಾನಾ ಆಯಾಮಗಳನ್ನು ಹೊಂದಿದೆ, ಶ್ಲಾಘನೀಯ ಯತ್ನ ಇಲ್ಲಿ ನಡೆದಿದೆ, ಕಲಾತ್ಮಕ ಯತ್ನ ಇಲ್ಲಿ ಮಿಂಚಿದೆ, ಚೆನ್ನಾಗಿ ದುಡಿಸಿಕೊಂಡಿದ್ದಾರೆ, ಉಜ್ವಲ ಕಾದಂಬರಿ, ಚೇತೋಹಾರಿಯಾಗಿದೆ, ಯಾರೂ ತಲೆದೂಗಲೇ ಬೇಕು, ಉತ್ಕೃಷ್ಟ ಕಾದಂಬರಿ’ ಎಂದೇ ಕೊನೆಗೊಳ್ಳುತ್ತವೆ. ಇಂಥ ಮಾದರಿ ವಾಕ್ಯಗಳಿಗಾಗಿ ಈ ಲೇಖನವೇ ಒಂದು ಆಕರವಾಗಿ ನಿಲ್ಲುವಂತಿದೆಯಾದರೂ ಕಾದಂಬರಿಯನ್ನು ಓದಿದರೆ ಎಂಥಾ ಪೇಲವ ಕೃತಿಯೊಂದು ಹೀಗೆಲ್ಲ ಹೊಗಳಿಸಿಕೊಳ್ಳುತ್ತಿರುವುದರ ಹಿಂದಿರುವ ಕಾರ್ಯತಂತ್ರವೇ ಅನುಮಾನಕ್ಕೆಡೆಮಾಡುತ್ತದೆ.

ಈ ಕಾದಂಬರಿ ತನ್ನ ಕಥಾನಕದ ಅಥೆಂಟಿಸಿಟಿಗಾಗಿ ಏನೇನು ಕಸರತ್ತು ನಡೆಸಿದರೂ ಇಲ್ಲಿನ ಕಥಾನಕದಲ್ಲಿ ಹೊಸತೇನೂ ಇಲ್ಲ. ಸುಲೇಮಾನ್ ಸಾಬರ ಮನೆಯಲ್ಲಿರುವ ಹಳೆಯ ದಫ್ತರು, ಅದನ್ನು ಪ್ರತಿಮಾಡಿದ ಗಮಕದ ಗಣಪಯ್ಯ, ಸಂತನ ಸಮಾಧಿ ಮಂಟಪ ಯಾವುದೂ ನಮ್ಮಲ್ಲಿ ಹುಟ್ಟಿಸುವ ನಿರೀಕ್ಷೆಗಳನ್ನು ಕಾದಂಬರಿ ಸಫಲಗೊಳಿಸುವುದಿಲ್ಲ. ಬೆನ್ನುಡಿ - ಮುನ್ನುಡಿಗಳ ಹಿನ್ನೆಲೆಯಲ್ಲಿ ನಾವು ಸಹಜವಾಗಿಯೇ ನಿರೀಕ್ಷಿಸುವಂಥ ಗಹನವಾದದ್ದೇನೂ ಇಲ್ಲಿನ ಕಥಾನಕದಲ್ಲಿ ಇಲ್ಲ. ಹಾಗೆ ನೋಡಿದರೆ ಇಲ್ಲಿ ಯಾವುದೇ ಒಂದು ಗಟ್ಟಿಯಾದ ಕಥಾನಕ ಕೂಡ ಇಲ್ಲ. ದಳವಾಯಿಗಳು, ಸೈನಿಕರು ನಡೆಸುತ್ತಿದ್ದ ದೌರ್ಜನ್ಯಗಳಿಗೆ ಒತ್ತು ನೀಡಿ, ಇವರು ಹೆಂಗಸರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು ಎನ್ನುವುದನ್ನು ಚಿತ್ರಿಸುವುದರಲ್ಲೇ ತಣ್ಣಗಾಗುವ ಇದು ಟಿಪ್ಪೂ ಕಾಲದ್ದು, ಜಾನಪದ ಅಧ್ಯಯನದ ಮೂಲದ್ದು ಎಂಬುದೆಲ್ಲ ಅನಗತ್ಯ ಮತ್ತು ಹಾದಿತಪ್ಪಿಸುವ ಲೇಬಲ್‌ಗಳಷ್ಟೇ.

ಈ ಕಾದಂಬರಿಯನ್ನು ಓದುವಾಗ ನಿಶ್ಚಯವಾಗಿಯೂ ಬೇರೆ ಬೇರೆ ಕಾರಣಗಳಿಗಾಗಿ ತರಾಸುರವರ ದುರ್ಗಾಸ್ತಮಾನ, ಮಾಸ್ತಿಯವರ ಚಿಕವೀರ ರಾಜೇಂದ್ರ ಮತ್ತು ಚೆನ್ನಬಸವನಾಯಕ, ಶಂಕರ ಮೊಕಾಶಿಯವರ ಅವಧೇಶ್ವರಿ, ಎಸ್ ಎಲ್ ಭೈರಪ್ಪನವರ ಸಾರ್ಥ, ಕಂಬಾರರ ಶಿಖರಸೂರ್ಯದ ನೆನಪು ಮೂಡುವುದು ನಿಜ. ಆದರೆ ಇಂಥ ಕಾದಂಬರಿಗಳ ಸಾಲಿನಲ್ಲೇ ಇರುವಂತೆ ಫೋಸು ಕೊಡುವ ಈ ಕಾದಂಬರಿ ಮಾತ್ರ ಅವುಗಳ ಎದುರು ತೀರಾ ಎಳಸಾದ ಪ್ರಯತ್ನದಂತೆ ಕಾಣಿಸುತ್ತದೆ.

ಮೊದಲಿಗೆ ಇಲ್ಲಿ ಧರ್ಮಕಲಹವೇರ್ಪಟ್ಟಲ್ಲಿಗೆ ದಳವಾಯಿ ಹೊರಡುವಾಗ (ಪುಟ 42) ಅಮಾವಾಸ್ಯೆಯಿದ್ದರೆ, ಮರುದಿನ (ಪುಟ 70) ‘ಆಕಾಶದಲ್ಲಿ ಚೆಲ್ಲಿ ಸೂಸುವ ಬೆಳದಿಂಗಳು’ ಸಿಗುತ್ತದೆ. ಪುಟ 197ರಲ್ಲಿ ಅದು ಅಮಾವಾಸ್ಯೆಯೇ ಎಂದು ಮತ್ತೊಮ್ಮೆ ಉಲ್ಲೇಖಿಸಲ್ಪಟ್ಟಿದೆ.

ಮೊದಲಿನಿಂದಲೂ ಪಕ್ಕೆಯಲ್ಲಿ ಕತ್ತಿ ತಿವಿದು ಆದ ಗಾಯವಾಗಿಯೇ ಇದ್ದಿದ್ದು 190ನೇ ಪುಟಕ್ಕೆ ಬರುವಷ್ಟರಲ್ಲಿ ಕಿಬ್ಬೊಟ್ಟೆಗಾದ ಗಾಯವಾಗಿ ಬಿಡುತ್ತದೆ ಮತ್ತು ಇದೇ ಗಾಯ ಕೀವಾಗಿ ಅದು ಆತನ ಸಾವಿಗೂ ಕಾರಣವಾದಂತಿದೆ.

ಇದೆಲ್ಲ ಹೋಗಲಿ ಎಂದರೆ ಈ ದಳವಾಯಿ ಹೈದರಾಲಿಯ ಸೈನ್ಯದಲ್ಲಿ ಸಿಪಾಯಿಯಾಗಿ ಸೇರಿದ್ದು ಮದುವೆಯಾದ ನಂತರ. ಅದುವರೆಗೂ ಆತ ಒಬ್ಬ ನಿರುದ್ಯೋಗಿ. ಆದರೆ ಮದುವೆಗೂ ಮೊದಲೇ ದಳವಾಯಿಯಾಗಿ ಕಂದಾಯ ವಸೂಲಿಗೆ ಹೋಗಿ ಒಬ್ಬ ಸುಂದರಿಯನ್ನು ಹಾರಿಸಿಕೊಂಡು ಬಂದ ಕತೆಯನ್ನೂ ಇದೇ ದಳವಾಯಿ ಹೇಳುತ್ತಿದ್ದಾನೆ. ಮಾತ್ರವಲ್ಲ, ಅದುವರೆಗೆ ಹಾಗೆ ತಂದು ಮಡಗಿ ಆಮೇಲಾಮೇಲೆ ಕೊಂದು ಹಾಕಿದ ಯಾವ ಹೆಂಗಸೂ ಈ ಥರದ ಆಟ ಕಟ್ಟಲಿಲ್ಲವಲ್ಲ ಎಂದೂ ನೆನಪಿಸಿಕೊಳ್ಳುತ್ತಾನೆ. ಅಂದರೆ ಇವನು ಹಾಗೆ ಹೊತ್ತು ತಂದಿರಿಸಿಕೊಂಡ - ಕೊಂದ ರಖಾವುಗಳಲ್ಲಿ ಇವಳು ಮೊದಲನೆಯವಳೇನೂ ಅಲ್ಲ. ಇಲ್ಲಿ ಆಗಲೇ ಅವನು ದಳವಾಯಿಯಾಗಿದ್ದಾನೆ ಮತ್ತು ತನ್ನ ಕೈಕೆಳಗಿನ ಸಿಪಾಯಿಯ ಸುಪರ್ದಿಯಲ್ಲೇ ಅವಳನ್ನು ಇರಿಸುತ್ತಾನೆ. ಆದರೂ ಅವಳ ಒತ್ತಾಯದ ಹೊರತಾಗಿಯೂ ಅವಳನ್ನು ಮದುವೆಯಾಗುವುದಿಲ್ಲ ಯಾಕೆಂದರೆ ಅವನು ಅಪ್ಪ ನೋಡಿದ ಹುಡುಗಿಯನ್ನೇ ಮದುವೆಯಾಗಲಿರುವವನು! ಈಕೆಯ ಕತೆಯ ಉತ್ತರಾರ್ಧವೂ ಕಾದಂಬರಿಯ ಚೌಕಟ್ಟನ್ನು ಸೇರಿಕೊಂಡಿದೆಯಾದರೂ ಇಂಥ ಸೇರ್ಪಡೆಯಿಂದ ಕೃತಿಗಾದ ಲಾಭವೇನು, ಅದು ಕೃತಿಗೆ ಕೊಟ್ಟ ಘನತೆಯೇನು ಎಂದರೆ ಅಷ್ಟು ಆಶಾದಾಯಕವಾದ ಉತ್ತರವೇನೂ ಸಿಗುವುದಿಲ್ಲ.

ತನ್ನ ಏಳೆಂಟು ಮಂದಿ ಹೆಂಡಿರನ್ನು ಕಳೆದುಕೊಂಡ ವಿಧುರ ಅಪ್ಪನನ್ನು ಈ ದಳವಾಯಿ ಇನ್ನಿಲ್ಲದಂತೆ ದ್ವೇಷಿಸುತ್ತಾನೆ ಮತ್ತು ಪ್ರತಿಯೊಂದರಲ್ಲೂ ಅವನನ್ನು ವಿರೋಧಿಸುತ್ತಾನೆ! ಆದರೆ ಅಪ್ಪ ಹೇಳಿದವಳನ್ನು ಮದುವೆಯಾಗುವ ಆದರ್ಶದಿಂದ ತನಗೊಲಿದವಳನ್ನು ಕೀಳುಗೈದು ತಿರಸ್ಕರಿಸುತ್ತಾನೆ. ಈತ ಯಾವಾಗ ಮದುವೆಯಾದ, ಯಾವಾಗ ಸಿಪಾಯಿಯಾಗಿ ಸೇರಿದ ಮತ್ತು ಯಾವಾಗ ದಳವಾಯಿಯಾದ ಎನ್ನುವಲ್ಲೇ ಬಹುಷಃ ಕಾದಂಬರಿಕಾರರಿಗೆ ಸಿಕ್ಕಿದ ‘ದಫ್ತರು’ ಸ್ಪಷ್ಟವಿಲ್ಲ! ಹಾಗಾಗಿ ಓದುಗರೂ ಗೊಂದಲಕ್ಕೆ ಬೀಳುವುದು ತಪ್ಪುವುದಿಲ್ಲ.

ಕಾದಂಬರಿಯ ಸಣ್ಣಪುಟ್ಟ ವಿವರಗಳಲ್ಲಿ ನುಸುಳಿಕೊಳ್ಳುವ ತಪ್ಪುಗಳು ಮತ್ತು ಎಡವಟ್ಟುಗಳು ಒಟ್ಟಾರೆಯಾಗಿ ಕೃತಿ ಓದುಗನಿಗೆ ಕಟ್ಟಿ ಕೊಡುವ ಜೀವನಾನುಭವ, ಬದುಕಿನ ಕುರಿತ ಒಳನೋಟ ಮತ್ತು ದರ್ಶನಗಳು ಎಂದು ಕರೆಯುವ ಅನುಭಾವ - ಎಲ್ಲವೂ ಗಾಢವಾಗಿದ್ದರೆ ಗೌಣವಾಗುತ್ತವೆಯೇನೊ. ಆದರೆ ಈ ಕೃತಿ ಆ ಮಟ್ಟಕ್ಕೇರುವುದಿಲ್ಲ. ಓದುಗನಿಗೆ ಅಕ್ಷರಗಳಲ್ಲಿ ಸತ್ಯವಾಗಬೇಕಾದ ಅನುಭವ ‘ಹೌದು ಹೌದು’ ಅನಿಸದೇ ಎಡವಟ್ಟುಗಳೇ ಕಾಣಿಸ ತೊಡಗಿದರೆ ಕೃತಿಯ ಬಗ್ಗೆ ಗೌರವ-ಪ್ರೀತಿ ಎರಡೂ ಮೂಡುವುದು ಕಷ್ಟವಾಗುತ್ತದೆ. ಅಂಥಾ ಕಾದಂಬರಿಯೊಂದು ಹದವಾಗಿ ಹೊಗಳಿಸಿಕೊಂಡರೆ ತಕರಾರಿಲ್ಲ. ನಮ್ಮ ಸ್ನೇಹಿತರು, ಗೌರವಕ್ಕೆ-ಅಭಿಮಾನಕ್ಕೆ ಪಾತ್ರರಾದವರು ಬರೆದುದನ್ನು ಹಾಗೆ ಉತ್ತೇಜಿಸುವುದು ಸಹಜವಾದದ್ದೇ. ಹೊಸಬರ ವಿಚಾರದಲ್ಲಿ ಅಂಥ ಔದಾರ್ಯ ಕೂಡ ಉಚಿತವೇ. ಆದರೆ ಕಾದಂಬರಿಯ ಕೊನೆಯಲ್ಲಿ ಕೃಷ್ಣಮೂರ್ತಿ ಹನೂರರ ಬಗ್ಗೆ ಇರುವ ವಿವರವಾದ ‘ಪರಿಚಯ’, ಇವರ ಈ ಕಾದಂಬರಿಯ ಬಗ್ಗೆ ಬಂದಿರುವ ಘಟಾನುಘಟಿಗಳ ಪ್ರಶಂಸೆಯ ಸುರಿಮಳೆ ಮತ್ತು ಪ್ರಶಸ್ತಿಯ ಹಿನ್ನೆಲೆಯಲ್ಲಿ ಅನಿಸಿದ್ದನ್ನು ಹೇಳದೇ ಉಳಿಯುವುದು ಕೂಡ ಅಕ್ಷಮ್ಯವಾಗುತ್ತದೆ. ಅಲ್ಲದೆ, ಇದುವರೆಗೆ ಈ ಕೃತಿಯ ಕುರಿತು ಬಂದಿರುವ ಎಲ್ಲಾ ಅಭಿಪ್ರಾಯಗಳೂ ಏಕಮುಖವಾಗಿಯೇ ಇರುವುದು ಇನ್ನೊಂದು ವಿಶೇಷ! ಇಷ್ಟೆಲ್ಲ ಹೊಗಳಿಸಿಕೊಂಡ ಕನ್ನಡ ಕಾದಂಬರಿಯೇ ನಿರಾಶಾದಾಯಕವೆನಿಸಿದರೆ ಅಂಥ ಓದುಗ ಕನ್ನಡ ಸಾಹಿತ್ಯವೆಂದರೇ ಇಷ್ಟು ಎಂದುಕೊಳ್ಳುವುದಂತೂ ಖಂಡಿತ. ಹಾಗೆಯೇ ಪ್ರಾಮಾಣಿಕವಲ್ಲದ ಮಾತುಗಳಿಂದ ಒಂದು ಕೃತಿಯ ಪರ ವಕಾಲತ್ತು ವಹಿಸುವವರ ಬಗ್ಗೆ ಎಚ್ಚರವಹಿಸುವ ಮನಸ್ಥಿತಿಯೂ ಭಾವೀ ಓದುಗರಲ್ಲಿ ಮೂಡುವುದು ಖಚಿತ!

ಇಲ್ಲಿರುವುದು ಸುಲಿಗೆ, ಹಾದರ, ಕ್ರೌರ್ಯ ಮತ್ತು ಆ ಕುರಿತ ಉತ್ತಮ ಪುರುಷ ನಿರೂಪಣೆಯಲ್ಲಿ ಎಡವಿದ ಬರವಣಿಗೆ. ಉತ್ತಮ ಪುರುಷ ನಿರೂಪಣೆಗೇ ಕೆಲವೊಂದು ಮಿತಿಗಳು ಅನಿವಾರ್ಯವಾಗಿ ಅಂಟಿಕೊಂಡೇ ಇರುತ್ತವೆ. ಇದನ್ನು ಸ್ವಲ್ಪಮಟ್ಟಿಗೆ ತೊಡೆದು ಹಾಕುವ ಪ್ರಯತ್ನ ಕಾದಂಬರಿಯಲ್ಲಿದೆ. ಇದೇ ಸತ್ಯವಿರಲಾರದು, ಇದಕ್ಕೆಲ್ಲ ಇನ್ನೊಂದು ಮುಖವಿರಬಹುದು, ಅದು ವ್ಯತಿರಿಕ್ತವಾಗಿಯೂ ಇರಬಹುದೆಂಬ ಎಚ್ಚರ ಇಲ್ಲಿದೆ. ಹಾಗೆಯೇ ಸಂತನಲ್ಲದ ವ್ಯಕ್ತಿಯ ಸಾವು ಆತನಿಗೆ ಹೊರಿಸಿದ ಸಂತಪದವಿ ಮತ್ತು ತದನಂತರದ ರಾಜಕಾರಣ ನಿಶ್ಚಯವಾಗಿಯೂ ತುಂಬ ಗೌರವ ಮೂಡಿಸುವ ಆಯಾಮಗಳನ್ನು ಸೂಚಿಸುತ್ತಿದೆ. ಆದರೆ ಇಷ್ಟರಿಂದಲೇ ಕಾದಂಬರಿಯೊಂದು ಶ್ರೇಷ್ಠ ಕಲಾಕೃತಿಯಾಗಿ ಬಿಡುವುದಿಲ್ಲ. ಯಾಕೆಂದರೆ, ಒಂದೇ ವ್ಯಕ್ತಿತ್ವದ ಪರಸ್ಪರ ತಾಳಮೇಳವಿಲ್ಲದ, ದ್ವಿಧಾಭಾವದಲ್ಲಿ ಸಂತುಲನವಿಲ್ಲದೆ ಹೋಳಾದಂತಿರುವ ಚಿತ್ರಣ ದಳವಾಯಿಯ ಪಾತ್ರದ್ದು. ಒಂದು ಕಡೆ ಅವನು ಸುಲಿದು ತಿನ್ನುವವ, ಕಾಮುಕ, ಭ್ರಷ್ಟ, ಶೋಷಕ ಮತ್ತು ಹಿಂಸಾಪ್ರಿಯ ಕ್ರೂರ ರಕ್ಕಸ. ಇನ್ನೊಂದೆಡೆ ತನ್ನದೇ ಅಧಃಪತನದ ಕತೆಯನ್ನು ಹೇಳುವ, ಒಳ್ಳೆಯದು ಕೆಟ್ಟದು ಏನೆಂದು ಬಲ್ಲ, ಆಧ್ಯಾತ್ಮಕ್ಕೆ ತುಡಿಯುವ, ಹಿಂಸೆಗೆ ಮರುಗುವ ಪ್ರಬುದ್ಧ, ಮಾಗಿದ ಜೀವ! ಈ ಎಡಬಿಡಂಗಿತನದ ನಡುವಣ ಪರಿವರ್ತನೆಯ ಹಂತದ ಪ್ರಕ್ರಿಯೆಯೇ ಮಂಗಮಾಯ. ಕುದುರೆಯಿಂದ ಬಿದ್ದು ಗಾಯಗೊಂಡದ್ದೇ ಕಾರಣ ಎಂದು ಬೇಕಿದ್ದರೆ ನಂಬಬಹುದು. ಈ ನಿರೂಪಣೆಯ ಹಂತವೂ ಒಂದಿರಬೇಕಲ್ಲವೆ, ಆ ಹಂತದಿಂದ ಹಿಮ್ಮೊಗವಾಗಿ ಕಥಾನಕ ಹರಿಯುವುದಾದರೆ ಇದು ವ್ಯಕ್ತಿಕೇಂದ್ರಿತ ಪಶ್ಚಾತ್ತಾಪದ ಹುಯಿಲೋ ಅಥವಾ ಒಂದು ಕಾಲಘಟ್ಟದ ಎಲ್ಲಾ ಅಧಿಕಾರಿ ವರ್ಗದವರ ಅಧಪತನದ ಚಿತ್ರಣವೋ? ಕಾದಂಬರಿಕಾರರು ಹೇಳಿಕೊಂಡಿರುವ ‘ಮೂವತ್ತು ವರ್ಷಗಳ ಜಾನಪದ ಸಂಬಂಧದ ಐತಿಹಾಸಿಕ ಸಂಗತಿಗಳನ್ನು ಕಥೆ, ದಂತಕತೆಗಳನ್ನು ಸೃಜನಶೀಲ ಬರೆಹ ರೂಪದಲ್ಲಿ ಇರಿಸಬೇಕೆನಿಸಿತು’ ಎಂಬ ಅವರ ಆಶಯ ಇಲ್ಲಿ ಈಡೇರಿದ ಲಕ್ಷಣಗಳಿಲ್ಲ. ಇದ್ದರೆ ಬಹು ನಿರೀಕ್ಷಿತವಾದ ಅಂಥ ಒಂದು ಸಾರ್ಥಕ ಭಾವ ಓದುಗರಿಗೂ ದಕ್ಕಬೇಕಲ್ಲವೆ?

ಹಾಗೆಯೇ ಇವನ ಮತ್ತು ಇವನ ಅಪ್ಪನ ಸಂಬಂಧ. ಅದು ಯಾವಾಗ ವಿದ್ವೇಷಕ್ಕಿಳಿಯುವುದೋ, ಯಾವಾಗ ಕಳ್ಳುಬಳ್ಳಿ ಸಂಬಂಧದ ಲಯ ಹಿಡಿದು ಮಿಡಿಯುವುದೋ ದೇವರೇ ಬಲ್ಲ! ಇಂಥದ್ದೇ ವ್ಯಕ್ತಿತ್ವದ ಇವನ ಅಪ್ಪನ ಕತೆಯೂ ಇಲ್ಲಿದೆಯಾದರೂ ಅದು ಯಾವುದೇ ಬಗೆಯಲ್ಲಿ ದಳವಾಯಿಯ ಪಾತ್ರಕ್ಕೆ ಒಂದು ಪರಿಪ್ರೇಕ್ಷ್ಯವನ್ನು ಒಡ್ಡುವ ಸಶಕ್ತ ಪಾತ್ರವಾಗದೇ ಕೇವಲ ಪಡಿಯಚ್ಚಾಗಿಯೇ ಉಳಿದು ಬಿಡುತ್ತದೆ. ಇವನು ಎಗರಿಸಿಕೊಂಡು ಬಂದ ಧೀರೆಯ ಕತೆಯೂ ಪಡೆದುಕೊಳ್ಳಬಹುದಾಗಿದ್ದ ಒಂದು ಉನ್ನತ ಮಜಲಿಗೇರದೆ, ಸಾಮಾನ್ಯ ಪಾತ್ರವಾಗಿ, ಬರೇ ಬಾಯಿಬಡುಕಿಯಾಗುವುದರಲ್ಲೇ ತನ್ನೆಲ್ಲಾ ಪ್ರತಿರೋಧದ ರಂಗನ್ನು ಕಾಣಿಸಿ ತಣ್ಣಗಾಗುವುದಕ್ಕೇ ತೃಪ್ತವಾಗಿದೆ. ಹೆಚ್ಚೆಂದರೆ ಈಕೆ ಮನಸ್ಸಿನ ಅಗತ್ಯಕ್ಕೋ ದೇಹದ ಅಗತ್ಯಕ್ಕೋ ಇನ್ಯಾರೊಂದಿಗೋ ಓಡಿಹೋಗಿ ತನ್ನಷ್ಟಕ್ಕೆ ತಾನು ಮಜವಾಗಿದ್ದ ಹೆಣ್ಣಲ್ಲ, ದಿಟ್ಟೆ ಎನಿಸುವುದರಾಚೆ ಈ ಪಾತ್ರ ಬೆಳೆಯುವುದಿಲ್ಲ. ಇಂಥ ಚಿತ್ರಣದ ಹಿಂದಿರುವ ಮನೋಧರ್ಮದ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ, ಅಲ್ಲವೆ? ಅಷ್ಟಿಷ್ಟು ಅವರಿವರ ಕತೆಯೂ ಇಲ್ಲಿದ್ದು ಅವು ಪುಟ ತುಂಬಿಸುವುದರಾಚೆ ಕಾದಂಬರಿಯ ಶ್ರೀಮಂತಿಕೆಗೆ ಕಾರಣವಾಗುವ ಮಟ್ಟದಲ್ಲಿಲ್ಲ.

ಒಬ್ಬ ನುರಿತ ಲೇಖಕನ ಸೃಜನಶೀಲ ಕೃತಿಯಾಗಿ ಭಾಷೆ, ತಂತ್ರ, ಕಥಾನಕದ ನಡಿಗೆ, ಓದಿಸಿಕೊಳ್ಳುವ ಗುಣ ಮತ್ತು ಆಶಯದಲ್ಲಿ ಖಂಡಿತವಾಗಿಯೂ ಇದು ಕೆಟ್ಟ ಕಾದಂಬರಿಯಲ್ಲ. ಆದರೆ ಓದಲೇ ಬೇಕಾದ ಒಂದು ಅತ್ಯುತ್ತಮ ಕಾದಂಬರಿಯೂ ಇದಲ್ಲ ಎನ್ನುವುದು ನನ್ನ ಅನಿಸಿಕೆ.

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ