Tuesday, October 8, 2013

ಜುಂಪಾ ಲಾಹಿರಿಯ ‘ದ ಲೋಲ್ಯಾಂಡ್‌’

ಜುಂಪಾ ಲಾಹಿರಿಯ ಹೊಸ ಕಾದಂಬರಿ `ದ ಲೋಲ್ಯಾಂಡ್' ಕೂಡ ಇವರ ಹಿಂದಿನ ಕತೆ, ಕಾದಂಬರಿಗಳಂತೆಯೇ ಸಾಂಸಾರಿಕ ಬದುಕಿನ ಚಿತ್ರಣ, ಮನುಷ್ಯ ಸಂಬಂಧಗಳ ಜಂಜಾಟ ಮತ್ತು ಏಕಾಂಗಿತನದ ನೋವನ್ನು ಗಾಢವಾಗಿ ಕಟ್ಟಿಕೊಡುತ್ತದೆ.
ಭಾವುಕ ಓದುಗರ ಮನಸ್ಸು ಹೃದಯ ಕಲಕಿ ಬಿಡುವಷ್ಟು ಸಶಕ್ತವಾದ ಭಾಷೆ ಮತ್ತು ಸನ್ನಿವೇಶಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಜುಂಪಾಲಾಹಿರಿಯ ಬರವಣಿಗೆಯ ಶಕ್ತಿ ಮತ್ತು ಮಿತಿ ಎರಡೂ ಇದೇ ಎನಿಸುವಷ್ಟು ಇವರ The Namesake (ಕಾದಂಬರಿ), Interpreter of Maladies (ಕಥಾಸಂಕಲನ) ಮತ್ತು Unaccustomed Earth (ಕಥಾಸಂಕಲನ) ಕೃತಿಗಳ ಸಾಲಿನಲ್ಲೇ ಈ The Lowland ಕಾದಂಬರಿಯೂ ಇದೆ.

ಈ ಕಾದಂಬರಿ ನಿಶ್ಚಯವಾಗಿಯೂ ಸಾಕಷ್ಟು ಕಷ್ಟ, ಶ್ರಮ ಮತ್ತು ಅಧ್ಯಯನದಿಂದ ಮೂಡಿಬಂದಿದೆ ಮಾತ್ರವಲ್ಲ ಅವರ ಇದುವರೆಗಿನ ಎಲ್ಲಾ ಕೃತಿಗಳಿಗಿಂತ ಹೆಚ್ಚು ಶ್ರೇಷ್ಠವಾದ ಕೃತಿ ಕೂಡಾ ಆಗಿದೆ. ಈ ಕಾದಂಬರಿ ಈ ಬಾರಿಯ(2013) ಮ್ಯಾನ್ ಬುಕರ್ ಪ್ರಶಸ್ತಿಯ ಅರ್ಹತಾಪಟ್ಟಿಯನ್ನೂ ಸೇರಿದೆ.

ಕಾದಂಬರಿಯ ಕೆಲವು ಗಮನಾರ್ಹ ಅಂಶಗಳ ಒಂದು ಟಿಪ್ಪಣಿ ಇಲ್ಲಿದೆ.

ಮೊದಲಿಗೆ, ಇದರ ಕ್ರಾಫ್ಟ್. ಇದನ್ನು ನಿರೂಪಿಸಿದ ರೀತಿ, ಕತೆಯನ್ನು ಹೆಣೆದ ಬಗೆ, ಅದರ ವಿವರಗಳ ಸಾಂದ್ರತೆ, ಒಟ್ಟಾರೆ ಕಾದಂಬರಿಯ ವಿನ್ಯಾಸ ಅಥವಾ ತಂತ್ರ ತುಂಬ ಚೆನ್ನಾಗಿದೆ. ಅದ್ಭುತ ಎಂಬ ಸವಕಲು ಶಬ್ದವನ್ನು ಬಳಸದೇ ಹೇಳುವುದಾದರೆ ಜುಂಪಾ ಲಾಹಿರಿ ತಮ್ಮ ಬರವಣಿಗೆಯ ಅನುಭವ, ಕೌಶಲ ಮತ್ತು ಹಂದರದ ಯೋಜನೆಯ ಶಕ್ತಿಯನ್ನು ಪರೀಕ್ಷೆಗೊಡ್ಡಿ ಇದನ್ನು ಸಿದ್ಧಪಡಿಸಿದ್ದಾರೆನ್ನಿಸುವುದರಲ್ಲಿ ಅನುಮಾನವಿಲ್ಲ.

ಈಗಾಗಲೇ ಕೋಲ್ಕತಾ ನಗರವನ್ನು ಓದುಗರ ಅನುಭವಕ್ಕಿಳಿಸಬಲ್ಲಷ್ಟು ಸಶಕ್ತ ವಿವರಗಳಲ್ಲಿ ಅದನ್ನು ಕಟ್ಟಿಕೊಟ್ಟ ಅಮಿತಾವ್ ಘೋಷ್ ಜೊತೆ ಹೋಲಿಸಬಹುದಾದಷ್ಟು ಸಾಂದ್ರ ವಿವರಗಳಲ್ಲಿ ಈ ಕಾದಂಬರಿ ಜೀವ ತಳೆದಿದೆ. ಇಡೀ ಕಾದಂಬರಿಯ ಶೇಕಡಾ 90ರಷ್ಟು ಭಾಗ ನಡೆಯುವುದು ಭಾರತದಿಂದ ಹೊರಗೆ, ಅಮೆರಿಕೆಯ ಒಂದು ದ್ವೀಪದಲ್ಲಿ. ಆದರೆ ಅದರ ಕೇಂದ್ರ ಕೊಲ್ಕತಾದ ಲೋಲ್ಯಾಂಡ್.

ಕೆಲವೊಂದು ನಿಟ್ಟಿನ ಸಾಮ್ಯತೆ ಕೂಡ ಈ ಲೋಲ್ಯಾಂಡ್ ಮತ್ತು ರೋಡ್ಸ್ ಐಲ್ಯಾಂಡ್ ನಡುವೆ ಇರುವುದು ಇನ್ನೊಂದು ಅಂಶ. ಹಾಗೆಯೇ ಇಲ್ಲಿ ಕುಟುಂಬದ ಒಳಗೆ ಮತ್ತು ಹೊರಗೆ ಸಂಸಾರ, ಮದುವೆ, ಮಗು ಮುಂತಾದುವುಗಳ ವಿಚಾರದಲ್ಲಿ ಸಿಗುವ ಪರಿಪ್ರೇಕ್ಷ್ಯಗಳು ಮುಖ್ಯವಾಗುತ್ತವೆ. ಕಥನದಲ್ಲೂ ಕನಸು, ಕಲ್ಪನೆ, ಭ್ರಮೆ ಮತ್ತು ನೆನಪುಗಳನ್ನು ಬಳಸಿಕೊಂಡಿರುವ ಬಗೆ ಗಮನಸೆಳೆಯುತ್ತದೆ.

ಎರಡನೆಯದಾಗಿ, ಇಲ್ಲಿನ ದಟ್ಟವಾದ ಭಾವನಾತ್ಮಕ ಸಂವೇದನೆಗಳ ಚಿತ್ರಣದಲ್ಲಿರುವ ಒಂದು ಅಥೆಂಟಿಸಿಟಿ. ಸ್ವತಃ ಅನುಭವಿಸಿದ್ದಲ್ಲದೇ ನಮ್ಮದಾಗಲಾರದ ಸೂಕ್ಷ್ಮ ಸಂವೇದನೆಗಳನ್ನು ಬರವಣಿಗೆಗೆ ಇಳಿಸುವುದು ಮತ್ತು ಅದನ್ನು ಓದುವ ಓದುಗನಿಗೂ ಓದುತ್ತಿರುವಾಗಲೇ ನಾಟುವಂತೆ, ಅವನನ್ನು ಕಾಡಬಲ್ಲಷ್ಟು ತೀವ್ರವಾಗಿ ಕಟ್ಟಿಕೊಡುವುದು ತುಂಬ ತ್ರಾಸದ ಕೆಲಸ. ಇದನ್ನು ಅತ್ಯಂತ ಸಂಯಮದಿಂದ ಜುಂಪಾ ಲಾಹಿರಿ ನಿರ್ವಹಿಸುತ್ತಾರೆ. ಇದೊಂದು ಬಗೆಯಲ್ಲಿ ಜೀವವನ್ನೇ ಹಿಂಜಿದಂತೆ. ಕವಿ ಎಂ.ಗೋಪಾಲಕೃಷ್ಣ ಅಡಿಗರು ನಮ್ಮ ಕತೆಗಾರ ಕೆ.ಸದಾಶಿವರ ಕುರಿತು ಬರೆದ 'ನಮ್ಮ ಸದಾಶಿವ' ಕವಿತೆಯ ಸಾಲುಗಳು ನೆನಪಾಗುತ್ತವೆ.
ಕಥೆ ಬರೆದನಂತೆ - ಕತೆಯೇನು ಮಣ್ಣು - ತನ್ನೆದೆಯ
ಖಂಡ ಖಂಡ ಕತ್ತರಿಸಿ ಕಿತ್ತು ಹಿಡಿದು ಹಿಂಡಿ ಹಿಂಡಿ
ಭಟ್ಟಿಯಿಳಿಸಿದ ತೊಟ್ಟು ತೊಟ್ಟು;
ನಾಗಾಲೋಟದಲ್ಲು ಅಲ್ಲಲ್ಲಿ ತಡೆತಡೆದು ಕೆತ್ತಿರುವ ತಳದ ಗುಟ್ಟು.


ಮನುಷ್ಯ ಸಂಬಂಧಗಳು ನಿಂತ, ಸಡಿಲಗೊಳ್ಳುವ, ಸ್ಫೋಟಗೊಂಡು ಬಿರುಕು ಬಿಡುವ ಪ್ರಕ್ರಿಯೆಗಳನ್ನು ಗಮನಿಸಿ. ನಮ್ಮ ಅಸಮಾಧಾನ, ಅಸಹನೆ, ಸಿಡುಕು, ರೋಷ, ಕ್ಷಣದ ಪಿತ್ಥ ಎಲ್ಲವೂ ತನ್ನ ಮೂಲಭೂತ ಲಕ್ಷಣಗಳನ್ನು ಬಿಟ್ಟುಕೊಡುವುದಿಲ್ಲ. ಆಗಾಗ ಅಷ್ಟಿಷ್ಟು ಹೆಚ್ಚು-ಕಡಿಮೆಯಾದರೂ ಸ್ವ-ಭಾವವೆಂಬುದು ಬಿಟ್ಟು ಹೋಗುವುದಿಲ್ಲ. ಆದರೆ ನಿಶ್ಚಯವೂ, ಅನಿರೀಕ್ಷಿತವೂ, ಅಂತಿಮವೂ ಆದ ಸಾವು ಒಂದಿದೆಯಲ್ಲ, ಅದು ಕಾಯುತ್ತಿರುವುದು ಗಮನಕ್ಕೆ ಬಂದಾಗ ಎಲ್ಲವೂ ಅದರ ಹಿನ್ನೆಲೆಯಲ್ಲಿ ಭಿನ್ನವಾಗಿ ಕಾಣಿಸತೊಡಗುತ್ತದೆ.

ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿಕೊಳ್ಳುವವರಿಗೆ ಖಾಯಂ ಆಗಬಹುದಾದ ಅಗಲುವಿಕೆ ಕೂಡ ಸಾಕಾಗುತ್ತದೆ. ಮನುಷ್ಯನಿಗೆ ಪ್ರೀತಿ ಎಂಬುದು, ಸ್ವೀಕಾರ ಎಂಬುದು, ನೀನು ಒಬ್ಬಂಟಿಯಲ್ಲ ಎನ್ನಬಲ್ಲ ಒಂದು ಜೀವದ ಜೊತೆ ನೀಡುವ ಭರವಸೆಯೆಂಬುದು ಎಷ್ಟು ಮುಖ್ಯ ಎಂಬ ಅರಿವು ಕೊಡುವ ಪ್ರಜ್ಞೆ ಮತ್ತು ಅದರಿಂದ ಹುಟ್ಟುವ ಸಂವೇದನೆ ಹೇಗಿರುತ್ತದೆ ಎಂಬುದನ್ನು ಜುಂಪಾ ಇಲ್ಲಿ ಮತ್ತೆ ಮತ್ತೆ, ಮೇಲಿಂದ ಮೇಲೆ, ವಿಭಿನ್ನ ಸಂದರ್ಭಗಳಲ್ಲಿ, ವ್ಯಕ್ತಿಗಳ ನಡುವೆ ಮತ್ತು ಸಂಬಂಧಗಳ ಮಧ್ಯೆ ಚಿತ್ರಿಸುತ್ತ ಹೋಗುತ್ತಾರೆ.
ತನಗೆ ಯಾರೂ ಇಲ್ಲ, ತನಗೆ ಏನೂ ಬೇಡ, ತಾನು ಯಾರಿಗೂ ಬೇಡ, ತಾನಿಲ್ಲ ಎಂದರೆ ಏನೂ ವ್ಯತ್ಯಾಸವಾಗುವುದಿಲ್ಲ ಎಂಬ ನೋವು ಹೆಪ್ಪುಗಟ್ಟಿ ಸತ್ತು ಬಿಡಬೇಕು ಎನಿಸುವ ಒಂದು ವಿಕೃತ ಮನಸ್ಥಿತಿಯಲ್ಲಿ ಸಾಯುವುದಕ್ಕೂ ಒಲ್ಲದ ಒಂದು ಮನಸ್ಥೈರ್ಯ, ವಿವೇಕ ಮತ್ತು ನಿರ್ಲಿಪ್ತಿಯುಳ್ಳ ಮನುಷ್ಯನನ್ನು ಕಾಡುವ ಪ್ರಶ್ನೆ; ಮನುಷ್ಯನನ್ನು ಕೊನೆಗೂ ಈ ಬದುಕಿಗೆ ಅಂಟಿಸಿಡುವ ಚೈತನ್ಯ ಯಾವುದು ಎಂಬುದೇ. ಅದು ಪ್ರೀತಿ, ಅದು ಹೆಣ್ಣು, ಅದು ಗರ್ಭಸುಖ. ಕಾದಂಬರಿಯ ಉದ್ದಕ್ಕೂ ನಾವು ಮುಖಾಮುಖಿಯಾಗುವುದು ಇದನ್ನು.

ಮೂರನೆಯದಾಗಿ, ಜುಂಪಾ ಲಾಹಿರಿಯ ಬರವಣಿಗೆಯ ಬಗ್ಗೆ ನನ್ನದೊಂದು ತಕರಾರಿತ್ತು. ಗುಡ್‌ರೀಡಿಂಗ್.ಕಾಮ್‌ನ ಜೆಸ್ಸಿಕಾ ಎಂಬಾಕೆ ತಾವು ಜುಂಪಾ ಲಾಹಿರಿಯವರ ಸಂದರ್ಶನ ಮಾಡಲಿದ್ದೇವೆ, ಆ ಸಂದರ್ಭ ಕೇಳಲು ಅರ್ಹವೆನಿಸುವ ಪ್ರಶ್ನೆಗಳೇನಾದರೂ ಇದ್ದಲ್ಲಿ ಓದುಗರು ತಮಗೆ ಕಳುಹಿಸಬಹುದು ಎಂದು ಕೇಳಿಕೊಂಡಿದ್ದರು. ಆಗ ನಾನು ಕಳಿಸಿದ್ದ ಪ್ರಶ್ನೆ ಈ ತಕರಾರಿನ ಸ್ವರೂಪವನ್ನು ಕಾಣಿಸುವುದರಿಂದ ಅದನ್ನೇ ಇಲ್ಲಿ ಕೊಟ್ಟಿದ್ದೇನೆ.

ಜುಂಪಾ ಲಾಹಿರಿಯವರನ್ನು ಭಾರತದ ಇತರ ಇಂಗ್ಲೀಷ್ ಬರಹಗಾರರೊಂದಿಗೆ ಗಮನಿಸುವಾಗ ನಮಗೆ ಎದ್ದು ಕಾಣುವ ಒಂದು ಅಂಶವೆಂದರೆ, ಜುಂಪಾ ಅವರ ಪಾತ್ರಗಳು ಕೊಂಚ ಹೆಚ್ಚು ಭಾವುಕವಾದ, ಸೂಕ್ಷ್ಮಸಂವೇದಿಯಾದ ಮತ್ತು ಅಂತರಂಗವನ್ನೇ ಹೆಚ್ಚು ನೆಚ್ಚಿಕೊಂಡ ಪಾತ್ರಗಳು ಎಂಬುದು. ಭಾರತದಿಂದ ಹೊರಗೆ ನೆಲೆ ಕಂಡುಕೊಂಡ ಭಾರತೀಯ ಇಂಗ್ಲೀಷ್ ಬರಹಗಾರರ ಮಟ್ಟಿಗೆ ಇದು ಕೊಂಚ ವೈಶಿಷ್ಟ್ಯಪೂರ್ಣವಾದದ್ದು ಎನಿಸುತ್ತದೆ. ಭಾರತದ ಕಥನಕ್ರಿಯೆ ಯಾವತ್ತೂ ಸಾಂಸಾರಿಕ ಚೌಕಟ್ಟನ್ನೇ ನೇರವಾಗಿ ಅಥವಾ ಪರೋಕ್ಷವಾಗಿ, ಅವಲಂಬಿಸಿದ್ದು ಎಂಬ ಸಾರ್ವತ್ರೀಕರಣದಾಚೆಗೂ ಇದು ನಿಜ.

ಯಾಕೆಂದರೆ ನಾನು ಈ ಸಾರ್ವತ್ರೀಕರಣವನ್ನೇ ಜುಂಪಾ ಅವರ ಕಥನಕ್ರಿಯೆಗೂ ಅನ್ವಯಿಸುತ್ತಿರುವುದಲ್ಲ ಇಲ್ಲಿ. ನಾನು ಕೊಂಚ ಭಿನ್ನವಾದ ಲಕ್ಷಣದ ಕುರಿತು ಹೇಳುತ್ತಿದ್ದೇನೆ. ಇತರ ಭಾರತೀಯ ಇಂಗ್ಲೀಷ್ ಬರಹಗಾರರು ತಮ್ಮ ತಮ್ಮ ಪ್ರಕಾಶಕರ ಅಥವಾ ಸಾಹಿತ್ಯಿಕ ದಲ್ಲಾಳಿಗಳ ಮರ್ಜಿಗೆ ಅನುಗುಣವಾಗಿಯೋ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅರ್ಥಪೂರ್ಣವಾಗುವ ಹುಮ್ಮಸ್ಸಿನಲ್ಲಿಯೋ ಹೇಗಾದರೂ ಮಾಡಿ ತಮ್ಮ ಕೃತಿಯನ್ನು ಹೆಚ್ಚು ಸಮಾಜಮುಖಿ, ಜಾಗತಿಕವಾಗಿ ರಿಲೆವಂಟ್ ಎನಿಸುವಂತೆ ಕಟ್ಟಲು ಯತ್ನಿಸುತ್ತಿರುವಾಗಲೇ, ಜುಂಪಾ ಅವರು ಮೂಲಭೂತವಾದ ಮಾನವೀಯ ಸೆಲೆಗಳಲ್ಲಿ, ಮನುಷ್ಯ ಸಂಬಂಧಗಳಲ್ಲಿ, ವ್ಯಕ್ತಿಗತ ನೆಲೆಯ ಅಂತರಂಗದ ಅಗತ್ಯ ಮತ್ತು ನಿರೀಕ್ಷೆಗಳನ್ನು ಪೋಷಿಸುತ್ತ ತಮ್ಮ ಪಾತ್ರಗಳನ್ನು ಚಿತ್ರಿಸುವಲ್ಲಿ ತೃಪ್ತರಾಗಿರುವುದು ಕಂಡುಬರುತ್ತದೆ.


ಪೂರ್ಣಚಂದ್ರ ತೇಜಸ್ವಿಯವರ ಪ್ರಸಿದ್ಧ ಕರ್ವಾಲೋ ಕಾದಂಬರಿಗೆ ಸುದೀರ್ಘವಾದ ಒಂದು ಹಿನ್ನುಡಿ ಬರೆಯುತ್ತ ಖ್ಯಾತ ವಿಮರ್ಶಕ ಪ್ರೊ.ಜಿ.ಎಚ್.ನಾಯಕ ಅವರು 'ಒಂದು ಕೃತಿ ಸಾಮಾಜಿಕ ಅರ್ಥಪೂರ್ಣತೆ ಮತ್ತು ತಾತ್ವಿಕ ಆಯಾಮ ಎರಡನ್ನೂ ಹೊಂದಿರದೇ ಇದ್ದಲ್ಲಿ ಅದು ಎಷ್ಟೇ ಕಲಾತ್ಮಕವಾಗಿದ್ದರೂ ಶ್ರೇಷ್ಠ ಕಲಾಕೃತಿ ಎನ್ನಿಸಿಕೊಳ್ಳಲಾರದು' ಎಂಬರ್ಥದ ಮಾತುಗಳನ್ನು ಬರೆದಿದ್ದರು. ಹೀಗೆ ಹೇಳುವಾಗ ನಾನು ಯಾವುದೇ ಸಿಲೆಬಸ್ ಅಥವಾ ಸಿದ್ಧಾಂತಕ್ಕನುಗುಣವಾಗಿ ಒಂದು ಸಾಹಿತ್ಯ ಕೃತಿ ರೂಪುಗೊಳ್ಳಬೇಕೆಂದು ವಿಧಿಸುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಲೇ ಬೇಕು. ಇವತ್ತು ಕನ್ನಡದಲ್ಲೇ ಸೃಷ್ಠಿಯಾಗುತ್ತಿರುವ ಸಾಹಿತ್ಯ ಹೆಚ್ಚು ಮುಕ್ತವಾದ, ವಾಸ್ತವವಾದಿಯಾದ ಮತ್ತು ಅಜೆಂಡಾಗಳಿಂದ ಕಳಚಿಕೊಂಡ ಸಾಹಿತ್ಯ ಎನ್ನುವುದನ್ನು ಮರೆಯುವಂತಿಲ್ಲ. ಆದಾಗ್ಯೂ ಪ್ರಶ್ನೆಯಿದೆ.

ಜುಂಪಾ ಲಾಹಿರಿಯವರು ಸ್ವತಃ ತಮ್ಮನ್ನು ತಮ್ಮೊಂದಿಗಿನ ಇತರ ಸಹ ಬರಹಗಾರರ ಕಾಳಜಿ ಮತ್ತು ಧ್ಯೇಯೋದ್ದೇಶಗಳೊಂದಿಗೆ ಹೇಗೆ ಗುರುತಿಸಿಕೊಳ್ಳುತ್ತಾರೆ?

ಈ ಕಾದಂಬರಿಯ ಬಗ್ಗೆ ಮಾತನಾಡುತ್ತ ಅನೇಕರು ಇದೊಂದು ರಾಜಕೀಯ ಕಾದಂಬರಿ, ನಕ್ಸಲೈಟ್ಸ್ ಮೂವ್‌ಮೆಂಟ್ ಕುರಿತ ಕಾದಂಬರಿ ಎಂದೆಲ್ಲ ಹೇಳಿದ್ದಾರೆ. ಈ ಕಾದಂಬರಿಗೆ ಆ ಬಗೆಯ ಒಂದು ಸಾಮಾಜಿಕ-ತಾತ್ವಿಕ ನೆಲೆಗಟ್ಟಿದೆ ಎನ್ನಲಾಗುತ್ತಿದೆ.
ಇದೆ ಎಂದೇ ಭಾವಿಸೋಣ. ಆದರೆ ಎದ್ದು ಕಾಣುವುದು ಸಾಂಸಾರಿಕ ಚೌಕಟ್ಟಿನೊಳಗಿನ, ಮನುಷ್ಯ ಸಂಬಂಧಗಳ ನಡುವಿನ ಸಂವೇದನೆಗಳು, ಸೂಕ್ಷ್ಮಗಳು ಮತ್ತು ಸಂಘರ್ಷಗಳು ಹೇಗೆ ಯಾವತ್ತೂ ಆ ಕುಟುಂಬದ ಯಾವೊಬ್ಬ ವ್ಯಕ್ತಿಯ ವೈಯಕ್ತಿಕ ನೆಲೆಯ ವಿದ್ಯಮಾನವಷ್ಟೇ ಆಗಿ ಉಳಿದು ಬಿಡುವುದಿಲ್ಲ, ಅದು ವ್ಯಕ್ತಿಯ ಅತ್ಯಂತ ಸನಿಹದ ಅನೇಕರು ಸೇರಿದಂಥ ಒಂದು ವಲಯವನ್ನು ಬೇರೆ ಬೇರೆ ಬಗೆಯಲ್ಲಿ ಕಾಡುತ್ತ, ಕಲಕುತ್ತ, ತಲ್ಲಣಗಳನ್ನೆಬ್ಬಿಸುತ್ತ ಹೋಗುತ್ತದೆ ಎಂಬುದೇ. ಇದನ್ನು ಕೂಡ ಜುಂಪಾ ಲಾಹಿರಿ ಕೊಂಚ ಅತಿರೇಕಕ್ಕೆ ಒಯ್ದು ಕಟ್ಟಿದ ಒಂದು ಚಿತ್ರಣವೇ ಇಲ್ಲಿದೆ.

ಯಾಕೆ ಅತಿರೇಕ ಎಂಬುದನ್ನು ವಿವರಿಸಬೇಕು. ಒಬ್ಬ ವ್ಯಕ್ತಿಯ ಸಾವು ಹಲವು ವ್ಯಕ್ತಿಗಳನ್ನು ಜೀವಂತ ನರಕಕ್ಕೆ ತಳ್ಳುತ್ತ, ಅವರ ಜೀವಸೆಲೆಯ ಚೈತನ್ಯವನ್ನೇ ಹೀರಿ ಬರಡಾಗಿಸುತ್ತ, ಬದುಕು-ಭವಿಷ್ಯವನ್ನೆಲ್ಲ ಕಬಳಿಸಬೇಕಾದ ಸಂದರ್ಭ - otherwise - ಇಲ್ಲ. ಬದುಕಿಗೆ ತನ್ನದೇ ಆದ ಒಂದು ಚಲನಶೀಲ 'ಗತಿ' ಇದೆ. ಅದು ತನ್ನ 'ರಿದಂ' ಅನ್ನು ಕಾಯ್ದುಕೊಳ್ಳಲು ಅಗತ್ಯವಾದ ತನ್ನದೇ ಸಾಯತಗಳನ್ನು ಕೂಡ ಹೊಂದಿದೆ. ಇಲ್ಲದಿದ್ದಲ್ಲಿ ಬದುಕು ಯಾವತ್ತೂ ತಾನು ಕಂಡ ಸಾವುಗಳಿಂದ ಮುಕ್ತಗೊಂಡು ಮುಂದಕ್ಕೆ ಹರಿಯುತ್ತಿರಲಿಲ್ಲ. ಅದು ಅಲ್ಲೇ ನಿಂತ ನೀರಾಗಿ ಕೊಳೆತು ನಾರುವುದೇ (ಲೋಲ್ಯಾಂಡಿನಲ್ಲಿ ಎರಡು ಹೊಂಡಗಳಿವೆ. ಮಳೆಗಾಲದಲ್ಲಿ ಇಡೀ ಲೋಲ್ಯಾಂಡಿನ ತುಂಬ ನೀರು ನಿಂತಾಗ ಇವು ಒಂದೇ ಅಗಿಬಿಡುತ್ತವೆ.

ವೈಶಾಖದಲ್ಲಿ ಲೋಲ್ಯಾಂಡ್ ಒಣಗಿಕೊಂಡು ಈ ಎರಡು ಹೊಂಡಗಳಲ್ಲಿ ಮಾತ್ರವೇ ನೀರು ನಿಂತಿರುವ ಚಿತ್ರ ಕೂಡ, ಇಬ್ಬರು ಸಹೋದರರ ಕತೆ ಹೇಳುವ ಈ ಕಾದಂಬರಿಯಲ್ಲೊಂದು ರೂಪಕದಂತಿದೆ.) ಅದರ ಕರ್ಮ ಎನಿಸಿಕೊಳ್ಳುತ್ತಿತ್ತು. ಆದರೆ ಹಾಗಾಗುವುದಿಲ್ಲ. ಅದು ಪ್ರಕೃತಿಯಲ್ಲ. ಅದು ಸಹಜವಲ್ಲ. ಅದು ಸ್ವಾಭಾವಿಕವೂ ಅಲ್ಲ. ಅಪವಾದದಂಥ ಪಾತ್ರಗಳನ್ನು ಆಯ್ದುಕೊಂಡು ಜುಂಪಾ ಲಾಹಿರಿ ತಮ್ಮ ಕಾದಂಬರಿಯನ್ನು ಹೆಣೆದಿದ್ದಾರೆ.

ಹಾಗೆ ಮಾಡುವುದರಿಂದ (ಅಂದರೆ, ಅಂಥ ಅತಿರೇಕಕ್ಕೊಯ್ದೇ ನಿಕಷಕ್ಕೊಡ್ಡುವ ಸವಾಲನ್ನೆತ್ತಿಕೊಂಡು), ಅವರು ರಾಜಕೀಯ ಕಾದಂಬರಿಯೊಂದನ್ನು ಕಟ್ಟಿಕೊಡುವಲ್ಲಿ, ನಕ್ಸಲೈಟ್ಸ್ ಮೂವ್‌ಮೆಂಟ್ ಬಗ್ಗೆ ಹೇಳುವಂಥ ಒಂದು ಕಾದಂಬರಿಯನ್ನು ನಮಗೆ ಕೊಡುವಲ್ಲಿ ಅಥವಾ ಮನುಷ್ಯ ಸಂಬಂಧಗಳ ವ್ಯಕ್ತಿಗತ ಭಾವನಾತ್ಮಕ ಸಂವೇದನೆಗಳಾಚೆ ಚಾಚಿಕೊಂಡ ಸಾಮಾಜಿಕ-ತಾತ್ವಿಕ ಆಯಾಮವುಳ್ಳ ಕೃತಿಯೊಂದನ್ನು ರಚಿಸುವಲ್ಲಿ ಯಶಸ್ವಿಯಾದರೇ ಎಂಬ ಪ್ರಶ್ನೆಯನ್ನು ಸದ್ಯಕ್ಕೆ ಹಾಗೆಯೇ ಬಿಟ್ಟು ಬೇರೆ ಸಂಗತಿಯತ್ತ ಗಮನ ಹರಿಸಬಹುದು.

ಕಾದಂಬರಿಯ 259ನೆಯ ಪುಟದಲ್ಲಿ ಬರುವ ಉಲ್ಲೇಖ ಹೀಗಿದೆ:

Years ago, Dr Grant had helped her to put what she felt into words. She'd told Bela that the feelings would ebb but never fully go away. It would form part of her landscape, wherever she went. She said that her mother's absence would always be present in her thoughts. She told Bela that there would never be an answer for why she'd gone.
Dr Grant was right, the feeling no longer swallow her. Bela lives on its periphery, she takes it in at a distance. The way her grandmother, sitting on a terrace in Tollygunge, used to spend her days overlooking a lowland, a pair of ponds.

(ಇಲ್ಲಿನ absence would always present ಮತ್ತು a pair of ponds ಶಬ್ದಗಳಿಗೆ ಕಾದಂಬರಿಯ ಚೌಕಟ್ಟಿನಲ್ಲಿರುವ ಕಾವ್ಯಾತ್ಮಕ ಆಯಾಮವನ್ನು ಇಲ್ಲಿ ಚರ್ಚಿಸುವುದಿಲ್ಲ; ಕತೆಯನ್ನು ಹೇಳದೆ ಅದು ಅರ್ಥವಾಗುವಂತಿಲ್ಲ ಎಂಬ ಕಾರಣಕ್ಕೆ.)

ಈ ಮಾತುಗಳನ್ನು ಯಾರ ಪರವಾಗಿ ನಿರೂಪಿಸಲಾಗಿದೆಯೋ, ಆ ವ್ಯಕ್ತಿ, ಬೇಲಾ ತನ್ನ ತಾಯಿ ಮತ್ತು ಅಜ್ಜಿ ಇಬ್ಬರ ಕುರಿತೂ ತಿಳಿದುಕೊಂಡಿರುವುದು ಅರ್ಧಂಬರ್ಧ. ಅದು ಹಾಗಿರಲಿ, ಸ್ವತಃ ತನ್ನ ಬಗ್ಗೆಯೇ ಆಕೆಗೆ ಇಂಥದ್ದೇ ತಪ್ಪು ತಿಳುವಳಿಕೆ ಇರುವಂತಿದೆ. ಕಳೆದು ಕೊಂಡಿದ್ದರ ಕುರಿತ ಭಾವನಾತ್ಮಕ ತೊಳಲಾಟ ಕ್ರಮೇಣ ತನ್ನ ತೀವ್ರತೆಯನ್ನು ಕಳೆದುಕೊಳ್ಳುತ್ತದೆ, ಆದಾಗ್ಯೂ ಅದು ಪೂರ್ತಿಯಾಗಿ ಅಳಿಸಿ ಹೋಗಿರುವುದಿಲ್ಲ. ಮನಸ್ಸಿನ ಪಾತಳಿಯ ಮೇಲೆ ಅದು ಅಚ್ಚೊತ್ತಿ ನಿಂತು ವ್ಯಕ್ತಿತ್ವದ ಭಾಗವೇ ಆಗಿಬಿಡುತ್ತದೆ ಎನ್ನುವ ಮನಶ್ಶಾಸ್ತ್ರಜ್ಞೆಯ ಮಾತು ಒಂದು ಸೀಮಿತ ನೆಲೆಯ ಸತ್ಯ.

ಬದುಕಿನಲ್ಲಿ ನಮಗೆ ಬಿದ್ದ ಪೆಟ್ಟುಗಳು, ಆದ ಅವಮಾನ, ಎದುರಿಸಿದ ಸೋಲು, ಆತ್ಮೀಯರ ಸಾವು, ಅನುಭವಿಸಿದ ಕಷ್ಟನಷ್ಟಗಳು ಎಲ್ಲವೂ ನಮ್ಮ ಮನಸ್ಸಿನ ಮತ್ತು ವ್ಯಕ್ತಿತ್ವದ ಮೇಲೆ ಮಾಡುವ ಪರಿಣಾಮಗಳು ಸತ್ಯ. ಆದರೆ ಅಷ್ಟೇ ಸತ್ಯವಾದ ಇನ್ನೊಂದೆಂದರೆ, ನಮ್ಮ ಮನಸ್ಸು ಮಾಗಿದಂತೆಲ್ಲ ಅದು ಮತ್ತೆ ಮತ್ತೆ ಕಹಿ ಘಟನೆಗಳು ಊರಿದಲ್ಲೆಲ್ಲ ಮೂಡಿದ ಹೆಜ್ಜೆ ಗುರುತುಗಳನ್ನು ಉಜ್ಜಿಉಜ್ಜಿ ಅಳಿಸಿ, ಮನಸ್ಸನ್ನು ಮತ್ತೆ ಹೊಚ್ಚ ಹೊಸ ಕನ್ನಡಿಯಂತೆ ಬೆಳಗಿಸಿಡಲು ಕೂಡಾ ಪ್ರಯತ್ನಿಸುತ್ತಲೇ ಇರುತ್ತದೆ ಎಂಬುದು.

ಯಾಕೆಂದರೆ, ನಮಗೆ ಗೊತ್ತು, ಎಲ್ಲರೂ ಹಾಗಿರುವುದಿಲ್ಲ, ಎಲ್ಲಾ ಸಂದರ್ಭಗಳೂ ಹಾಗೆಯೇ ಇರುವುದಿಲ್ಲ. ಅನುಭವ ನಮ್ಮನ್ನು ಬೆಳೆಸಬೇಕು, ಬದಲಿಗೆ ಅನುಭವಕ್ಕೆ ಕಾರಣವಾದ ಯಾವುದೋ ಹಳೆಯ ಅಚ್ಚಿಗೆ ನಮ್ಮನ್ನು ಹೊಂದಿಸಿ ನಮ್ಮ ವ್ಯಕ್ತಿತ್ವವನ್ನೇ ಕುಗ್ಗಿಸಬಾರದು. ಆ ಪ್ರಯತ್ನದಲ್ಲಿ ಎಷ್ಟು ಯಶಸ್ವಿಯಾಗುತ್ತೇವೋ. ಸೋಲುತ್ತೇವೋ ಎಂಬುದಕ್ಕಿಂತ ಅಂಥ ಪ್ರಯತ್ನವೂ ಕೂಡ ಬದುಕಿನ ಸಹಜ ಪ್ರಕ್ರಿಯೆ ಎಂಬಂತೆ ನಡೆಯುತ್ತಿರುತ್ತದೆ ಎನ್ನುವುದು ಮುಖ್ಯ

ನಾವು ಮತ್ತೆ ಮತ್ತೆ ಮೋಸ ಹೋಗುತ್ತೇವೆ, ಪ್ರತಿ ಬಾರಿ ಬೇರೆಯೇ ವ್ಯಕ್ತಿಯಿಂದ ಎಂಬ ಸಮಾಧಾನವಿರುತ್ತದೆ. ನಾವು ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತೇವೆ, ಪ್ರತಿ ಬಾರಿಯೂ ಹೊಸ ತಪ್ಪುಗಳನ್ನು ಎಂಬ ಹೆಮ್ಮೆಯಿರುತ್ತದೆ. ಕೊನೆಗೂ ಮನುಷ್ಯರನ್ನು ನಂಬದ ಸ್ಥಿತಿಗೆ ತಲುಪುವ ಬಗ್ಗೆ ಕಳವಳವನ್ನೇ ಹೊಂದಿರುತ್ತೇವೆ. ಆತ್ಮಹತ್ಯೆಗೆ ನಿರ್ಧರಿಸುವ ಗೌರಿ ಮತ್ತು ಮತ್ತೆ ತನ್ನ ತಾಯಿಗೆ ಪತ್ರ ಬರೆಯುವ ಔದಾರ್ಯ ತೋರಿಸುವ ಬೇಲಾ ಇಬ್ಬರೂ ಈ ಕಾದಂಬರಿಯ ಚೌಕಟ್ಟಿನಲ್ಲೇ ಇದನ್ನು ಸಮರ್ಥಿಸುತ್ತಾರೆ.
ಆದರೆ, ಒಂದು ಸಾವಿನ ಕಾರಣದಿಂದ ಐದಾರು ಮಂದಿ ಶಾಶ್ವತವಾಗಿ ನರಕ ಅನುಭವಿಸುವ, 40-50 ವರ್ಷಗಳ ಕಾಲಾವಧಿಯಲ್ಲಿಯೂ ಅದೇ ನಕಾರಾತ್ಮಕ ಭಾವದಿಂದ ತೊಳಲಾಡುವ ಚಿತ್ರಣಕ್ಕೇ ಒತ್ತು ಕೊಟ್ಟು ನಿರೂಪಿಸುವ ಕಾದಂಬರಿ ಕೊಂಚ ಅಸಹಜವಾಗಿದೆ ಎನಿಸುತ್ತದೆ.

ಆದಾಗ್ಯೂ ಇದು ಕಾದಂಬರಿ. ಇಲ್ಲಿ ಸಹಜ-ಅಸಹಜ, ಸಂಭಾವ್ಯ-ಅಸಂಭವನೀಯ, ತಾರ್ಕಿಕ-ಅತಾರ್ಕಿಕ ಎಂಬೆಲ್ಲ ಚರ್ಚೆಗಿಂತ ಮುಖ್ಯವಾಗುವುದು ಕೊನೆಗೂ ಇಂಥ ಸನ್ನಿವೇಶ ಚಿತ್ರಣದಿಂದ ಒಂದು ಕಾದಂಬರಿ ಹೇಳಬಯಸುವುದೇನನ್ನು ಮತ್ತು ಅದನ್ನು ಹೇಳುವಲ್ಲಿ ಅದು ಯಶಸ್ವಿಯಾಗಿದೆಯೇ ಎಂಬುದೇ. ಈ ಕಾದಂಬರಿಯ ಬಗ್ಗೆ ಸ್ವತಃ ಜುಂಪಾ ಲಾಹಿರಿ ಹೇಳಿರುವುದು ಇದನ್ನು:
'ಈ The Lowland ಕಾದಂಬರಿ 1950,60ರ ದಶಕದಲ್ಲಿ, ಕೋಲ್ಕತಾದಲ್ಲಿ ಹುಟ್ಟಿದ ಇಬ್ಬರು ಸಹೋದರ ಕುರಿತಾಗಿದೆ. ಇವರಲ್ಲಿ ಒಬ್ಬ 1960ರ ಸುಮಾರಿಗೆ ನಕ್ಸಲೈಟ್ ಚಳುವಳಿಯತ್ತ ಸೆಳೆಯಲ್ಪಡುತ್ತಾನೆ ಮತ್ತು ಇನ್ನೊಬ್ಬ ಅಮೆರಿಕಕ್ಕೆ ಹೋಗುತ್ತಾನೆ. ನನ್ನ ಕೃತಿಯು ಈ ಪರಸ್ಪರ ವೈರುಧ್ಯದ ಆಯ್ಕೆಯಿಂದಾದ ಪರಿಣಾಮಗಳನ್ನು ಚಿತ್ರಿಸುತ್ತದೆ. 1970ರ ಸುಮಾರಿಗೆ ಕೋಲ್ಕತಾದಲ್ಲಿ ಪಾರಾಮಿಲಿಟರಿ ದಳದಿಂದ ತನ್ನ ಹೆತ್ತವರು ಮತ್ತು ಸಂಬಂಧಿಗಳೆದುರೇ ಹತ್ಯೆಯಾದ, ನಕ್ಸಲೈಟ್ ಚಟುವಟಿಕೆಗಳಲ್ಲಿ ತೊಡಗಿದ್ದರೆನ್ನಲಾದ ಇಬ್ಬರು ಸಹೋದರರ ದಾರುಣ ಅಂತ್ಯವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವಾಗಿ ನಾನಿದನ್ನು ಬರೆಯಬೇಕಾಯಿತು.

ಈ ಕಾದಂಬರಿ, ಒಂದು ಕುಟುಂಬದ ಭವಿಷ್ಯದ ತಲೆಮಾರುಗಳ ಮೇಲೆ ಅದರ ಭೂತಕಾಲ ಬೀರುವ ಪರಿಣಾಮಗಳನ್ನು ಕುರಿತು, ತಂದೆ ಮತ್ತು ತಾಯ್ತನ ಎಂದರೇನು ಮತ್ತು ತಂದೆಯಾಗುವುದು, ತಾಯಿಯಾಗುವುದು ಎಂದರೇನು ಎಂಬುದರ ಕುರಿತು, ಹಿಂಸೆ - ಭೌತಿಕ ಮತ್ತು ಕುಟುಂಬ ಹಾಗೂ ಸಂಬಂಧಗಳ ನಡುವೆ ಕಾಣಿಸುವ ಮಾನಸಿಕ ಹಿಂಸೆಯ ಕುರಿತು, ಪ್ರೀತಿಯ ಕುರಿತು, ಕಳೆದುಕೊಳ್ಳುವುದರ ಕುರಿತು, ಮನುಷ್ಯ ಮನುಷ್ಯರ ಮತ್ತು ಸಂಬಂಧಗಳ ನಡುವಿನ ದೂರ ಎಂಬುದರ ಕುರಿತು, ಅಗಲುವಿಕೆಯ ಕುರಿತು, ನಿಷ್ಠೆಯ ಕುರಿತು, ವಂಚನೆಯ ಕುರಿತು.'
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ