Tuesday, February 18, 2014

ಚೈತ್ರ ವೈಶಾಖ ವಸಂತ - ಒಂದು ಟಿಪ್ಪಣಿ

ಜೋಗಿಯವರ ಚೈತ್ರ ವೈಶಾಖ ವಸಂತ ಕಾದಂಬರಿಯನ್ನೋದಿದ ಬಳಿಕ ಹಲವಾರು ವೈರುಧ್ಯಮಯ ವಿಚಾರಗಳು ತಲೆಯಲ್ಲಿ ಸುತ್ತತೊಡಗಿದ್ದಾವೆ.

ಈ ಕಾದಂಬರಿಯ ಪುರಂದರನಂತೆಯೇ ಅನುಭವವನ್ನು ಕತೆಯಾಗಿಸಿ ಹೇಳಬಲ್ಲ ಜೋಗಿಯವರು ಕೇವಲ ಕತೆಗಾಗಿ ಒಂದು ಕತೆಯನ್ನೋ ಕಾದಂಬರಿಯನ್ನೋ ಓದಲು ಬಯಸದವರಿಗೂ ಸಾಕಷ್ಟು ಗ್ರಾಸ ಒದಗಿಸಬಲ್ಲ ಕೃತಿಗಳನ್ನೆ ಕೊಡುತ್ತ ಬಂದಿದ್ದಾರೆ. ಇಲ್ಲಿ ಕೂಡ ಮೇಲ್ನೋಟಕ್ಕೆ ಕತೆ ಹೇಳುವುದಷ್ಟೇ ಗುರಿ ಎಂಬಂತೆ ಬರೆದರೂ ಅದಷ್ಟೇ ಅವರ ಗಮ್ಯವಲ್ಲ. ಹಾಗಾಗಿ ಈ ಕಾದಂಬರಿಯಲ್ಲಿ ಜೋಗಿಯವರು ಗಮನಿಸಲು, ಶೋಧಿಸಲು ಹೊರಟಿದ್ದೇನನ್ನು ಎಂಬ ಬಗ್ಗೆ ಯೋಚಿಸುವಂತೆ ಮಾಡುತ್ತಾರೆ. ಚೈತ್ರ ವೈಶಾಖ ವಸಂತ ಹೇಗೆ ಋತುಮಾನದ ಬದಲಾವಣೆಯನ್ನು ತನ್ನ ಸಾಲಿನಲ್ಲಿರಿಸಿಕೊಂಡಿದೆಯೋ ಈ ಕಾದಂಬರಿಯಲ್ಲಿಯೂ ಅಂಥ ಆಯಾಮಗಳ ಚಲನೆಯಿದೆ. ಕತೆಯಾಚೆ, ಓದಿನಾಚೆ ಬೆಳೆಯುವ ಗುಣವುಳ್ಳ, ಕಸುವುಳ್ಳ ಈ ಕಾದಂಬರಿ ತನ್ನ ಓದಿನಾಚೆಗೂ ನಮಗೆ ದಕ್ಕಬೇಕಿದ್ದರೆ ವಿಶ್ಲೇಷಣೆಯ ವ್ಯಾಯಾಮ ಅಗತ್ಯವಿದೆ.

ಈ ಕಾದಂಬರಿಯ ಬ್ಲರ್ಬ್‌ನಲ್ಲಿ ಕವನವಿದೆ. ಕವನ ಕೂಡ ವೈರುಧ್ಯಗಳನ್ನು ತನ್ನ ಗರ್ಭದಲ್ಲಿರಿಸಿಕೊಂಡಿರುವುದರಿಂದ ಇದು 'ಒಂದು' ಕವನವಲ್ಲ ಎನಿಸಿದೆ. ನದಿಯೊಂದು ಕಡಲನ್ನು ಸೇರಿ 'ಇಲ್ಲ'ವಾಗುವುದೆ ಅಥವಾ ಕಡಲಾಗುವುದೇ ಅಥವಾ ಕಡಲಿಗೆ 'ನದಿಯ ನೆನಪಿನ ಹಂಗು' ಉಳಿಯುವುದೆ, ಅಥವಾ ಅದು ಕೊರಗಾಗಿ ಉಳಿಯುವುದೆ, ಉಳಿದರೆ ಎಷ್ಟು ಕಾಲ ಎನ್ನುವುದೆಲ್ಲ ಜಿಜ್ಞಾಸೆ. ಹರಿವ ನೀರು ಒಂದು ಬಂಡೆಯನ್ನು ಸವರಿಕೊಂಡು ಹೋಗುತ್ತದಲ್ಲ, ಆ ಬಂಡೆ ಕಾಲಾಂತರದಲ್ಲಿಯೂ ಅದೇ ಬಂಡೆಯಾಗಿ ಉಳಿದಿರುತ್ತದೆಯೆ, ಆ ನೀರು ಕಾಲಾಂತರದಲ್ಲೂ ಅದೇ ನೀರೆ ಎಂಬ ಪ್ರಶ್ನೆಯನ್ನೊಮ್ಮೆ ಕೇಶವ ಮಳಗಿಯವರು ಎತ್ತಿದ್ದರು, ತಮ್ಮದೊಂದು ಪ್ರಸಿದ್ಧ ಕತೆಯಲ್ಲಿ. ಜೋಗಿಯವರು ಕೂಡ ಇಲ್ಲಿ ನದಿ ಮತ್ತು ಕಡಲಿನ ರೂಪಕವನ್ನಿಟ್ಟು ಎರಡು ಜೀವಗಳ ಸಾನ್ನಿಧ್ಯ, ಸಾಂಗತ್ಯ ಮತ್ತು ಸಾಮೀಪ್ಯಗಳ ನಡುವಿನ ಗೆರೆಗಳನ್ನು ಸ್ಪಷ್ಟಗೊಳಿಸಲು ಅಥವಾ ಅದರ ಅಸ್ಪಷ್ಟತೆಯನ್ನು ಗಮನಿಸಲು ಪ್ರಯತ್ನಿಸುತ್ತಾರೆ.

ಅದೇ ಕಾಲಕ್ಕೆ ಜೋಗಿಯ ಮನುಷ್ಯನಲ್ಲಿ ಯೇಟ್ಸ್ ಹೇಳುವ ಸಂತನ ಧ್ಯಾನ ಮತ್ತು ವ-ಸಂತದಂಥ ಬೋದಿಲೇರನ ಮೋಹವಿದೆ. ಇವುಗಳ ನಡುವೆಯೇ ಅವನ/ಳ ಬದುಕು ಅರಳಬೇಕಿದೆ, ಆಳದ ಸಂತತನವೂ, ಚೈತ್ರದ ಚಿಗುರು, ವೈಶಾಖದ ಉಕ್ಕು ಸೇರಿ ವಸಂತದ ಚೈತ್ಯನ್ಯ ತುಂಬಬೇಕಿದೆ. ಮುಂದೆ ವರುಣಸೂಕ್ತವನ್ನೂ ಅಗ್ನಿಕಾರ್ಯವನ್ನೂ ಜೊತೆಗಿಡುತ್ತಾರೆ ಜೋಗಿ. ಅಡಿಗರ 'ಡಾಕ್ಟರರು ನರ್ಸುಗಳು ಹೆರಿಗೆಮನೆಯೊಳಹೊರಗೆ| ಅವರ ಬೆನ್ನಿಗೆ ಸದಾ ನಾಲ್ಕು ಮಂದಿ|ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬಾ ಅಗ್ಗ| ಜಾತಕರ್ಮದಿ ನಿರತ ಪುರೋಹಿತ ಭಟ್ಟ ಅಪರಪ್ರಯೋಗದಲಿ ಪಾರಂಗತ' ಸಾಲುಗಳನ್ನು ನೆನಪಿಸುವಂತಿರುವ ಈ ಸಾಲುಗಳು ಅದೇ ಕಾಲಕ್ಕೆ ಕಾರ್ನಾಡರ ಅಗ್ನಿ ಮತ್ತು ಮಳೆ ನಾಟಕವನ್ನೂ, ಮಹಾಸ್ವಾರ್ಥಿಯಾದ ಇಂದ್ರ ಮತ್ತು ಮೋಸಕ್ಕೆ ಬಲಿಯಾಗುವ ವಿಶ್ವರೂಪ ಪ್ರತಿನಿಧಿಸುವ ಬ್ರಹ್ಮ ಮತ್ತು ಮದ್ಯದ ಕಲಬೆರಕೆಯನ್ನೂ ನೆನಪಿಸುತ್ತವೆ. (ಆಸಕ್ತರು ದೇವುಡು ಅವರ ಮಹಾಕ್ಷತ್ರಿಯ ಕಾದಂಬರಿಯನ್ನು ಗಮನಿಸಬಹುದು.)ಸಾವಿನ ಪ್ರಸ್ತಾಪವೇಕೆಂದರೆ ಅಕಾಲದಲ್ಲಿ ದಿವಂಗತನಾಗುವ ಇಂಗಿತವೊಂದು ಇಲ್ಲಿ ಸೇರಿಕೊಂಡಿರುವುದರಿಂದ. ಆದರೂ ಕವನ ಒಂದು 'ಇಡಿ'ಯಾದ ಭಾವಸ್ಫುರಣೆಯಾಗಿ ಮನಸ್ಸಿಗಿಳಿಯದೆ ಚೂರುಗಳಾಗಿ ಆತಂಕವನ್ನು ಹುಟ್ಟಿಸುತ್ತದೆ. ಬದುಕು ಇರುವುದೇ ಹಾಗಾದಲ್ಲಿ ಅದನ್ನು ಒಪ್ಪಿಕೊಳ್ಳಬೇಕು ಅಷ್ಟೆ. ಕಲೆ ಅದನ್ನು ಅವಾಸ್ತವಿಕವಾಗಿ ಸುಂದರಗೊಳಿಸುವುದರಿಂದ ಸಂಪನ್ನವಾಗುವುದೆ?

ಇನ್ನು ಕಾದಂಬರಿಗೆ ಬರಬಹುದು. ಮೇಲ್ನೋಟಕ್ಕೆ ಇದು ಗ್ರಹಿಣಿಯೊಬ್ಬಳ ಆಳದ ತುಮುಲಗಳು. ಹೆಣ್ಣನ್ನು ಚೆನ್ನಾಗಿ ಅರಿತಿದ್ದೇನೆಂದು ತೋರಿಸಿಕೊಳ್ಳಲು ಇಷ್ಟಪಡುವ ಗಂಡು ನಿಜಕ್ಕೂ ಶೋಷಕನೆ, ಪೋಷಕನೆ ಎಂಬ ಸಂಗತಿ ಇತ್ಯರ್ಥವಾಗುವುದು ಹೇಗೆ? ಜಗತ್ತಿಗೆಲ್ಲ ಆಧ್ಯಾತ್ಮ ಬೋಧಿಸುವ ಗುರೂಜಿಯೊಬ್ಬರು, ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿಯೊಬ್ಬರು, ಭ್ರಷ್ಟಾಚಾರಿಗಳ ಬಣ್ಣಬಯಲು ಮಾಡುತ್ತಿದ್ದ ಪತ್ರಿಕೆಯೊಂದರ ಸಂಸ್ಥಾಪಕ ಸಂಪಾದಕರೊಬ್ಬರು, ಪಿಎಚ್‌ಡಿ ವಿದ್ಯಾರ್ಥಿಗಳ ಮಾರ್ಗದರ್ಶಕ ಉಪನ್ಯಾಸಕರೊಬ್ಬರು ತಮ್ಮ ಸಹೋದ್ಯೋಗಿಯನ್ನು, ವಿದ್ಯಾರ್ಥಿನಿಯನ್ನು ಶೋಷಿಸಲು ಮುಂದಾಗುತ್ತಾರೆಂದರೆ ಮನುಷ್ಯ ಮೂಲಭೂತವಾಗಿ ಪ್ರಾಣಿ ಮಾತ್ರವಲ್ಲ ಭೂತದಂಥ ಪ್ರಾಣಿ ಕೂಡ ಎಂದು ತಿಳಿಯಲು ಕಾರಣಗಳಿವೆ ಎಂದಾಗುತ್ತದೆ. ಆದರೆ ಇದರಲ್ಲೇ ಇರುವ ತಮಾಷೆ ನೋಡಿ.

ಒಂದು ಪ್ರಾಣಿ ತನ್ನದೇ ಪ್ರವರ್ಗದ ಇನ್ನೊಂದು ಪ್ರಾಣಿಯನ್ನು ಪೀಡಿಸುವುದು ಆಹಾರಕ್ಕಾಗಿ, ತನ್ನ ಜಾಗ(ವಸತಿ)ದ ರಕ್ಷಣೆಗಾಗಿ ಮತ್ತು ಲೈಂಗಿಕತೆಗಾಗಿ ಮಾತ್ರ. ಉಳಿದಂತೆ ಅದು ತಿನ್ನುವುದು, ಹಿಂಸಿಸುವುದು ಎಲ್ಲ ಬೇರೆ ಪ್ರವರ್ಗದ ಪ್ರಾಣಿಯನ್ನೇ. ಮನುಷ್ಯನಂತೆ ಬೇರೆ ಪ್ರಾಣಿಯ ಹಾಲನ್ನು ಕೂಡ ಪ್ರಾಣಿಗಳು ಬೆಳೆದ ಮೇಲೆ ಕುಡಿಯುವುದಿಲ್ಲ. ಹೀಗಿರುತ್ತ ಮನುಷ್ಯ ಮನುಷ್ಯನನ್ನು ಲಿಂಗ, ಬಣ್ಣ, ದೇಶ, ಜಾತಿ, ಧರ್ಮ ಎಂದೆಲ್ಲ ಪೀಡಿಸುತ್ತ ಬಂದಿರುವುದಕ್ಕೆ ಅವನ ಉಗಮದಷ್ಟೇ ಹಳೆಯ ಚರಿತ್ರೆಯಿದೆ. ಮನುಷ್ಯನ ಬಗ್ಗೆ ಆಡುವಾಗ ಅವನ ಎನ್ನುತ್ತೇವೆ. ಆದರೆ ಅವನಲ್ಲಿರುವ ಎಲ್ಲ ನೀಚತನವೂ ಅವಳಲ್ಲಿಯೂ ಇರಬಾರದು ಎಂಬ ನಿಯಮವಿಲ್ಲ. ಈ ಮಾತನ್ನು ಸ್ತ್ರೀಸಮಾನತೆಯ ನಿಟ್ಟಿನಲ್ಲೇ ಇರುವ ಮಾತೆಂದು ಹೇಳುವುದರಲ್ಲಿ ಗಂಡಿನ ಕ್ರೌರ್ಯ ಖಂಡಿತವಾಗಿಯೂ ಇದೆ. ಆದರೆ ಅದಕ್ಕೆ ಅಂಥವೇ ಕಾರಣಗಳೂ ಇದ್ದೇ ಇವೆ ಎಂಬುದನ್ನು ಮರೆಯಬಾರದು.

ಇಲ್ಲಿ ಹೇಳಿದ ಲಿಂಗ, ಬಣ್ಣ, ದೇಶ, ಜಾತಿ, ಧರ್ಮ ಎಂಬೆಲ್ಲ ಲೇಬಲ್ಲುಗಳು ಮೊದಲು ಅಗತ್ಯವಾಗಿದ್ದು ಪಟ್ಟಭದ್ರರಿಗೆ. ರಾಜಕೀಯ ನೇತಾರರು, ಧಾರ್ಮಿಕ ನೇತಾರರು ಮುಂತಾದವರಿಗೆ. ಆದರೆ ಇವತ್ತು ಮಾರ್ಕೆಟ್ ಕೇಂದ್ರಿತ ಜೀವನಶೈಲಿ ಎಲ್ಲಿಯ ತನಕ ಬಂದಿದೆ ಎಂದರೆ ಈ ಗ್ಯಾಂಗ್ ರೇಪುಗಳನ್ನು ಕೂಡ ಕೆಲವೊಂದು ಮಂದಿ ವ್ಯಾಪಾರಕ್ಕೆ ಬಳಸಿಕೊಳ್ಳತೊಡಗಿದ್ದಾರೆ. ನಿಮ್ಮ ಸಂಸ್ಥೆಗಳಿಗೇ ಬಂದು ಇವರು ಸೆಕ್ಷುವಲ್ ಹೆರಾಸ್‌ಮೆಂಟ್ ಬಗ್ಗೆ 'ಅರಿವು' ಮೂಡಿಸುವ ಕ್ಲಾಸ್‌ ತೆಗೆದುಕೊಳ್ಳುತ್ತಾರೆ. ಇದೆಲ್ಲ ಎಷ್ಟು ಅಸಹ್ಯವಾಗಿದೆ ಎನ್ನುವ ಅರಿವು ನಮ್ಮಲ್ಲಿ ಮೂಡಿದರೆ ಒಳ್ಳೆಯದು. ಪುರುಷನ ಶೋಷಕ ಗುಣ, ಅವನ ಲೈಂಗಿಕ ಪಿಪಾಸೆ, ದೈಹಿಕ-ಮಾನಸಿಕ ಕ್ರೌರ್ಯ ಇದಾವುದೂ ಬಂಡವಾಳವಾಗಿ ಬಳಸಲ್ಪಡುವುದು ಹೇಯ.

ಜೋಗಿಯವರ ಕಾದಂಬರಿಯ ಒಂದು ಪ್ರಧಾನ ಪಾತ್ರ ಇಂಥ ಸ್ತ್ರೀವಿಮೋಚನೆಯ ಗುತ್ತಿಗೆ ಹಿಡಿದ ಅಂಕಣಕಾರ್ತಿ ಶಕುಂತಲಾ ನಾಯರ್. ಇವಳ ಮಾತುಗಳೆಲ್ಲ ಹೌದು ಹೌದು ಅನಿಸುವಂತಿರುವ ಮನಸ್ಥಿತಿಯಲ್ಲಿ ಇವಳನ್ನು ನಂಬಬೇಕೆ ಬೇಡವೆ ಎಂಬ ಗೊಂದಲಕ್ಕೆ ಬೀಳುವ ವೈಶಾಲಿಗೆ ತನ್ನ ತಾಯಿ, ಆಸ್ಟ್ರೇಲಿಯಾದಲ್ಲಿರುವ ಗೆಳತಿ, ಓರಗೆಯ ಕೆಲವು ಹೆಂಗಸರು ಮತ್ತು ಪುರಂದರನೆಂಬ ಒಂದು ಪಾತ್ರ ಒದಗಿಸುವ ಆಯಾಮಗಳೇ ದುರಂತದಿಂದ ಕಾಪಾಡುತ್ತ ಇವೆ. ಒಮ್ಮೆ ಮಾತ್ರ ವೈಶಾಲಿಗೆ ಈಕೆ ದುಷ್ಟ ಮನಸ್ಸಿನ, ನೆಗೇಟಿವ್ ಧೋರಣೆಗಳ ಮನೆಹಾಳಿ ಎಂದೂ ಅನಿಸುತ್ತದೆ. ಆದರೆ ತೀರ ನೊಂದು ಒಂಟಿಗೊಂಡ ಭಾರ ಕ್ಷಣಗಳಲ್ಲಿ ಶಕುಂತಲಾ ನಾಯರ್ ಮಾತುಗಳು ವಿಕ್ಸ್ ವೆಪೊರಬ್‌ನಂತೆ ಸಾಂತ್ವನ ಕೂಡ ನೀಡುತ್ತದೆ. ಜೋಗಿಯವರು ಇಲ್ಲಿ ತರುವ ತಾಯಿ, ಗೆಳತಿ, ಓರಗೆಯ ಸ್ತ್ರೀಯರು ಮತ್ತು ಪುರಂದರ - ಈ ಪ್ಯಾಟರ್ನ್ ಗಮನಿಸಲು ಯೋಗ್ಯವಾಗಿದೆ.

ಎಲ್ಲರ ತಾಯಿಯಂತೆಯೇ ಈ ತಾಯಿ ಪುರುಷ ಪಾರಮ್ಯವನ್ನು ಒಪ್ಪಿಕೊಂಡು ಅದರಲ್ಲೇ ನೆಮ್ಮದಿಯನ್ನು ಕಂಡುಕೊಂಡು ಬದುಕಿದಾಕೆ. ಅದರ ನೋವೇನೆಂಬುದನ್ನು ಆಕೆ ಬಲ್ಲಳು. ಹಾಗಾಗಿ ತನ್ನ ಜಮಾನಾದ ಬೇರೆ ಹೆಂಗಸರ ಬಗ್ಗೆ ಆಡುವಾಗ ಅವರು ಜೀವನದಲ್ಲಿ ತುಂಬ ಕಷ್ಟಪಟ್ಟವರು ಎಂಬ ಮಾತು ಆಕೆಯ ಬಾಯಲ್ಲಿ ಬರುತ್ತದೆ. ಇದೊಂದು ತರ ತನ್ನದೇ ನೋವನ್ನು ಬೇರೆಯವರ ಬದುಕಿನಲ್ಲಿ ಕಂಡು ತೋರುವ ಸ್ವಾನುಕಂಪದಂತೆ. ಆಸ್ಟ್ರೇಲಿಯಾದಲ್ಲಿರುವ ವೈಶಾಲಿಯ ಗೆಳತಿಯ ಬಗ್ಗೆಯೂ ಈ ತಾಯಿ ಆಡುವ ಮಾತು ಇಂಥವೇ ಎಂಬುದನ್ನು ಗಮನಿಸಿ. ಆದರೆ ಆ ಗೆಳತಿ ವೈಶಾಲಿಯ ಜೊತೆ ಬೇರೆಯೇ ಆಗಿ ಕಾಣಿಸುತ್ತಾಳೆ. ಈ ಗೆಳತಿಯೊಂದಿಗೆ ವೈಶಾಲಿಗೆ ಏನೋ ಒಂದು ಬಗೆಯ ಸಾಂತ್ವನ ಪ್ರಾಪ್ತಿಯಾಗುತ್ತಿರುತ್ತದೆ. ಅಪಾರ್ಟ್‌ಮೆಂಟಿನ ಇನ್ನಿಬ್ಬರು, ರಾಧಿಕಾ ಮತ್ತು ಮಂಗಳಾ ಪರಸ್ಪರ ವಿರುದ್ಧ ಧ್ರುವಗಳಂತೆ ಇರುವವರು. ಒಬ್ಬಳು ಪಾಸಿಟಿವ್ ದೃಷ್ಟಿಕೋನವುಳ್ಳವಳು ಮತ್ತೊಬ್ಬಳು ನೆಗೇಟಿವ್ ದೃಷ್ಟಿಕೋನದವಳು ಎಂಬಂತೆ ಮೇಲ್ನೋಟಕ್ಕೆ ಕಾಣಿಸಿದರೂ ಅವರೊಂದಿಗಿನ ಸೀಮಿತ ಒಡನಾಟದಲ್ಲಿ ಇಂಥ ಗ್ರಹಿಕೆ ಕೂಡ ತಪ್ಪಿರಬಹುದೆಂಬ ಸತ್ಯವನ್ನು ಜೋಗಿ ಕಾಣಿಸಿದ್ದಾರೆ. ಒಟ್ಟಾರೆಯಾಗಿ ವೈಶಾಲಿಯ ಬದುಕು, ಅವಳ ಚಿಂತನೆ ಮತ್ತು ಅವಳ ಮನಸ್ಸಿನ ಏರುಪೇರುಗಳಿಗೆ ಕಾರಣವಾಗುವ, ಗ್ರಾಸ ಒದಗಿಸುವ ಸದ್ಯದ ಕಥಾನಕದ ಘಟನಾವಳಿಗಳು ಎಲ್ಲವೂ ವೈಶಾಲಿಯ ಗಂಡ ಶರತ್ ಸೇರಿದಂತೆ ಒಟ್ಟು ಆರು ಪಾತ್ರಗಳ ಪಾತಳಿಯಲ್ಲಿ ಶೋಧಿಸಲ್ಪಡುತ್ತ ಹೋಗುತ್ತವೆ.

ಶೋಷಣೆಯ ಜೊತೆಗೇ ಇಲ್ಲಿ ಗಂಡು-ಹೆಣ್ಣು ಸಂಬಂಧದ ಜಿಜ್ಞಾಸೆಯೂ ಇದೆ. ಪ್ರಧಾನವಾಗಿ ಎಸ್.ಎಲ್.ಭೈರಪ್ಪನವರ ಅಂಚು ಮತ್ತು ತಂತು ಕಾದಂಬರಿಗಳನ್ನು, ಸ್ವಲ್ಪಮಟ್ಟಿಗೆ ದೂರಸರಿದರು ಕಾದಂಬರಿಯನ್ನು ನೆನಪಿಸಿಕೊಂಡರೆ ನನ್ನ ಮಾತು ಹೆಚ್ಚು ಸ್ಪಷ್ಟವಾಗುತ್ತದೆ. ಯಾವುದೇ ಸಂಬಂಧ ಅದು ನಿಂತ ಪಾತಳಿಯನ್ನೇ ಪ್ರಶ್ನಿಸುವ ಹಂತಕ್ಕೆ ಹೋದರೆ ಅಲ್ಲಿ ಮತ್ತೆ ಉಳಿಯುವುದೆಲ್ಲ ಪ್ರಶ್ನೆಗಳೇ. ವಿಚಿತ್ರವೆಂದರೆ ಯಾವುದೇ ಆಯ್ಕೆಯಿಲ್ಲದ ನಮ್ಮ ತಂದೆ, ತಾಯಿ, ಒಡಹುಟ್ಟಿನ ಸಂಬಂಧಗಳ ಬಗ್ಗೆ ನಾವು ಯೋಚಿಸುವ ಪಾತಳಿಯೇ ಬೇರೆ, ಆಯ್ಕೆ ಎಂದುಕೊಂಡು ತೊಡಗುವ ಸಂಬಂಧವಾದ ಗಂಡ-ಹೆಂಡತಿ-ಪ್ರೇಯಸಿಯ ಸಂಬಂಧದ ಬಗ್ಗೆ ನಾವು ಯೋಚಿಸುವ ಪಾತಳಿಯೇ ಬೇರೆ. ನಿಷ್ಠುರ ಅರ್ಥದಲ್ಲಿ ಮೊದಲಿನ ಸಂಬಂಧಗಳಿಗೆ ಕೋರ್ಟು ಅನುಮೋದಿಸುವ ಡೈವೋರ್ಸ್ ಎಂಬುದೇ ಇಲ್ಲ. ಎರಡನೆಯದಕ್ಕೆ ಇದೆ.

ಹಾಗೆಯೇ ಹೆಚ್ಚಿನ ಎಲ್ಲ ವಿಶ್ವಾಸ, ಅನುಮಾನ, ಭರವಸೆ ಮತ್ತು ವಂಚನೆಯ ಭಾವನೆಗಳ ವಿಚಾರದಲ್ಲೂ ಈ ಸಂಬಂಧಗಳು ನಿಲ್ಲುವ ಪಾತಳಿ ವಿಭಿನ್ನವೇ. ಅಪವಾದಗಳಿಲ್ಲವೆಂದಲ್ಲ, ಕಡಿಮೆ. ಶಕುಂತಲಾ ನಾಯರ್‌‌ಗಳು ಬಳಸಿಕೊಳ್ಳುವ ಸಂದರ್ಭಗಳು ಕೂಡ ಎರಡನೆಯವೇ ಹೊರತು ಮೊದಲಿನವಲ್ಲ. ಅಂಚು ಕಾದಂಬರಿಯಲ್ಲಿ ಗಂಡನಿಂದ ದೂರವಾದವಳು ಇನ್ನೊಬ್ಬ ತರುಣ ಇಂಜಿನಿಯರ್ ಬದುಕಿನಲ್ಲಿ ಪ್ರವೇಶ ಬಯಸುವ, ಹಿಂಜರಿಯುವ, ತನ್ನ ಅಹಂ, ಸ್ವಾಭಿಮಾನ, ಇಗೊಗಳಿಗೂ, ಭಾವನಾತ್ಮಕ ಸಂವೇದನೆಗಳಿಗೂ ನಡುವೆ ಹುಟ್ಟುವ ಸಂಘರ್ಷದಲ್ಲಿಯೇ ಬಸವಳಿಯುವ ಚಿತ್ರ ಸಿಕ್ಕಿದರೆ ತಂತು ಕಾದಂಬರಿಯಲ್ಲಿ ದೂರ ನಿಂತು ತಮ್ಮ ತಮ್ಮ ಬದುಕನ್ನು ಸ್ವತಂತ್ರವಾಗಿಯೇ ರೂಪಿಸಿಕೊಳ್ಳುವತ್ತ ಗಮನ ನೀಡುವ ದಂಪತಿಗಳಿಂದ ಮಕ್ಕಳ ಬದುಕಿನ ಮೇಲೂ ಆಗುವ ಪರಿಣಾಮಗಳ ಸಂಕೀರ್ಣವಾದ ಚಿತ್ರವಿದೆ.

ತಂತು ಕಾದಂಬರಿಯ ಚೌಕಟ್ಟು ಮತ್ತು ಆಯಾಮ ಗಂಡು-ಹೆಣ್ಣು ಸಂಬಂಧದ ಎಲ್ಲೆಯನ್ನು ಮೀರಿ ಹರಿದರೂ ಅದರ ಕೇಂದ್ರ ಅದೇ. ದೂರ ಸರಿದರು ಕಾದಂಬರಿ ಮದುವೆಗೂ ಮುನ್ನ ನಮ್ಮಲ್ಲಿ ಸಾಮಾನ್ಯವಾಗಿ ಇರುವ ಸಮಾನ ಮನಸ್ಕತೆ, ಸಮಾನ ಅಭಿರುಚಿ, ಅರ್ಥಮಾಡಿಕೊಳ್ಳುವ ಸಾಮರ್ಥ್ಯ-ಮನೋಧರ್ಮ ಇತ್ಯಾದಿಗಳ ಬಗ್ಗೆ ಇರುವ ಕಲ್ಪನೆ, ಭ್ರಮೆ, ನಿರೀಕ್ಷೆಗಳನ್ನು ವಾಸ್ತವದ ನಿಷ್ಠುರತೆಗೆ ಸಾಣೆ ಹಿಡಿದು ಉಜ್ಜುವ ಕಾದಂಬರಿ. ಜೋಗಿಯವರ ವೈಶಾಲಿ-ಶರತ್ ದಾಂಪತ್ಯ ಈ ಎಲ್ಲಾ ಎಳೆಗಳನ್ನೂ ಸೂಕ್ಷ್ಮವಾಗಿ ತನ್ನೊಡಲಿನಲ್ಲಿ, ಗರ್ಭದಲ್ಲಿ ಹೊತ್ತ ಕಾದಂಬರಿ.
ಇಲ್ಲಿ ಶಕುಂತಲಾ ನಾಯರಳಷ್ಟೇ ಪ್ರಧಾನವಾದ ಇನ್ನೊಂದು ಪಾತ್ರ ಪುರಂದರನದ್ದು. ಬಾಲ್ಯದಲ್ಲಿ ಪಕ್ಕದ ಮನೆ ಹುಡುಗನಾಗಿ ಒದಗಿದವ ಸ್ನೇಹಿತನಂತೆ ಕಾಣುವ, ಪ್ರೇಮಿಯಾಗಿ ಕಲ್ಪನೆಗೆ ಎಟುಕಲು ತವಕಿಸುವ, ವಯಸ್ಸಿನಲ್ಲಿ ವೈಶಾಲಿಗಿಂತ ಮೂರು ವರ್ಷ ಚಿಕ್ಕವನೆಂದು ನಮಗೆ ತಿಳಿಸಿಬಿಡುವ ಜೋಗಿಯ ಹುನ್ನಾರದಡಿ ಅದಲ್ಲ, ಇದಲ್ಲ ಎಂದಷ್ಟೇ ಆಗಿ ಉಳಿಯುತ್ತಾನೆ. ನಿಜಕ್ಕೂ ಅವನು ಏನು ಎಂಬುದು ನಮಗೆ ಮುಖ್ಯವಾಗುವುದಾದರೆ ಜೋಗಿ ಉದ್ದೇಶಿಸುವ ದರ್ಶನವೊಂದು ಓದುಗನಿಗೆ ಅಲ್ಲೇ ದಕ್ಕಿಬಿಡುವಂತಿದೆ. ಹಾಗಾಗಿ, ಚಿಟ್ಟೆಯಾಗಿ, ದುಂಬಿಯಾಗಿ, ಪತಂಗವಾಗಿ ಇಚ್ಛಾನುವರ್ತಿ ಸಂಚಾರಿಯಾಗಿಬಿಟ್ಟ ಮಾಯಕದ ಪುರಂದರ ಇಡೀ ಕಾದಂಬರಿಗೆ ಒದಗಿಸುವ ಆಯಾಮಗಳು ಒಂದಕ್ಕಿಂತ ಒಂದು ರೋಚಕವಾದವು. ಮೊದಲಿಗೆ ಇವನು ವೈಶಾಲಿ ಆಯ್ದುಕೊಂಡ ಬದುಕಿಗೇ ಒಂದು ಪರ್ಯಾಯವನ್ನು ಕಾಣಿಸಬಲ್ಲ ವ್ಯಕ್ತಿಯಾಗಿ ಕಾಡುತ್ತಾನೆ. ಇದು ಬಾಲ್ಯದಲ್ಲಿ ತೆಂಗಿನ ಮರದಿಂದ ಬಿದ್ದು ಸತ್ತ ಸೋಮಪ್ಪನ ಪ್ರಕರಣದಿಂದ ಹೀಗೆ. ಶರತ್ ಮತ್ತು ಶರತ್ ಒದಗಿಸಿದ ಬದುಕಿಗೆ ಚಾಚಿಕೊಂಡ ಈ ಪರ್ಯಾಯ ಕೇವಲ ಅಷ್ಟೇ ಆಗಿ ಉಳಿಯುವುದಿಲ್ಲ. ಪರ್ಯಾಯ ಕೂಡ ಶಾಶ್ವತವಾಗಿ ಉಳಿಯುವಂಥ ಬಾಗಿಲಲ್ಲ. ಅದು ಒಮ್ಮೊಮ್ಮೆ ಶಾಶ್ವತವಾಗಿ ಮುಚ್ಚಿಕೊಳ್ಳುವ ಬಾಗಿಲು.

ಶರತ್ ನೆರಳಿನಲ್ಲಿ ತನ್ನ ಬದುಕು ನರಳುತ್ತಿದೆ ಎಂಬ ಪ್ರಜ್ಞೆಯನ್ನು ವೈಶಾಲಿಗೆ ದಯಪಾಲಿಸುವ ಶಕುಂತಲಾ ನಾಯರ್ ಚಿಂತನೆಯಲ್ಲಿ ಪುರಂದರನಿಗೆ ಸ್ಥಳವಿಲ್ಲ. ಈ ಪುರಂದರ ಬಾಲ್ಯದಲ್ಲಿನ ವಾಸ್ತವದಲ್ಲಿಯೂ, ಸದ್ಯದ ಮಾಯಾಜಾಲದಲ್ಲೂ ವೈಶಾಲಿಯ ನೆರಳಿನಲ್ಲಿರುವ ಪ್ರಜ್ಞೆ. ಅವನು ವೈಶಾಲಿಯ ಕಲ್ಪನೆ, ಆಸೆ, ನಿರೀಕ್ಷೆಗಳಿಗೆ ತಕ್ಕಂತೆ ರೇಗಿಸುವ, ಹಂಗಿಸುವ, ತಮಾಷೆ ಮಾಡುವ ಆದರೆ ಎಲ್ಲದರಲ್ಲೂ ವೈಶಾಲಿಯ ಮನಸ್ಸು ನಿರ್ಮಿಸಿಕೊಟ್ಟ ಚೌಕಟ್ಟಿನೊಳಗೇನೆ ಸಲ್ಲುವ, ನಿಲ್ಲುವ ಪಾತ್ರ. ಈ ಪಾತ್ರವನ್ನು ವೈಶಾಲಿ ಶೋಷಿಸುತ್ತಿಲ್ಲವೆ ಎಂಬ ಪ್ರಶ್ನೆಯನ್ನು ಓದುಗ ಕೇಳಿಕೊಳ್ಳಬೇಕು. ಅದು ಯಾಕೆ ವೈಶಾಲಿ ಈ ಪುರಂದರನ ಜೊತೆ ಪ್ರೇಮವನ್ನು ಕಲ್ಪಿಸಿದಂತೆ ಪ್ರಣಯವನ್ನು ಕಲ್ಪಿಸುವುದಿಲ್ಲವೋ ಆಶ್ಚರ್ಯ.

ಹಾಗೆಯೇ, ವೈಶಾಲಿ ಮತ್ತು ಭಾವನಾ ಮಾತನಾಡಿಕೊಳ್ಳುವಾಗಲೂ ಕೆಲವಂಶಗಳನ್ನು ಗಮನಿಸಬೇಕು. ಒಂದು ಕಡೆ ಶರತ್‌ನ ಗಂಡಸುತನದ ಚರ್ಚೆಯಿದೆ. ಇದೆಲ್ಲ ತಮಾಷೆ ಮತ್ತು ಜಾಲಿ ಡೇಸ್ ಮಾತುಕತೆಗಳು. ಆದರೂ ಇಂಥವೇ ಮಾತುಗಳು ಗಂಡಸರ ಸರ್ಕಲ್ಲಿನಲ್ಲಿ ಹೆಂಡಂದಿರ ಬಗ್ಗೆ ಆಡಲ್ಪಟ್ಟಾಗ ಹೇಗಿರುತ್ತದೆ ಊಹಿಸಿ. ಅವೇ ಮಾತುಗಳು ಶಕುಂತಲಾ ನಾಯರಳ ಪ್ರವಚನದಲ್ಲಿ ಪಡೆದುಕೊಳ್ಳುವ ಓಘ ಮತ್ತು ಆ ಓಘದಲ್ಲಿ ಅವೇ ಮಾತುಗಳು ಪ್ರತಿಬಿಂಬಿಸಬಹುದಾದ ಗಂಡಸಿನ 'ಬುದ್ಧಿ' ಕಲ್ಪಿಸಿ. ಇಂಥ ಕಾಂಟ್ರಾಸ್ಟ್‌ನಿಂದ ಕಾದಂಬರಿಯ ಈ ಭಾಗವನ್ನು ವಿನಾಯಿತಿಗೊಳಪಡಿಸಬೇಕೆಂಬ ನಿರೀಕ್ಷೆ ಜೋಗಿಯವರಿಗಿಲ್ಲ ಎಂಬುದು ಸ್ಪಷ್ಟ. ಜೋಗಿಯವರು ಇಲ್ಲಿ ಚಿತ್ರಿಸುವ ನಟಿಯೊಬ್ಬಳ ಪಾತ್ರ ಈ ಕಾದಂಬರಿಯ ಸೆರಗಿನಲ್ಲಿ ನೆರಳಿನಂತೆ ಬಂದು ಹೋದರೂ ಅದಕ್ಕೆ ಅದರದ್ದೇ ಆದ ವಿಶಿಷ್ಟ ಉದ್ದೇಶವಂತೂ ಇದ್ದೇ ಇದೆ.

ಆದರೆ, ಜೋಗಿಯವರು ಇಂಥ ಭಾಗಗಳನ್ನು ಅಲ್ಲಲ್ಲಿ ತರುವ ಕ್ಯಾಶುವಲ್ ಆದ ರೀತಿಯೇನಿದೆ, ಅದು ಇಂಥ ಉದ್ದೇಶಗಳ ಈಡೇರಿಕೆಗೆ ಬೇಕಾದಷ್ಟು ಸುಪುಷ್ಟವಾಗಿಲ್ಲ ಎಂಬುದನ್ನು ಉಪೇಕ್ಷಿಸುವಂತಿಲ್ಲ. ಇಂಥಲ್ಲಿ ಜೋಗಿಯವರು ಒಂದು pause ನಿರ್ಮಿಸಬೇಕು ಎಂದು ಮತ್ತೆ ಮತ್ತೆ ತೀವ್ರವಾಗಿ ಅನಿಸುತ್ತಿರುತ್ತದೆ. ಭಾಷೆಯನ್ನು ಬಳಸಿಕೊಂಡು ಎಲ್ಲವನ್ನೂ ಭಾಷೆಯಲ್ಲಿಯೇ ಹೇಳಬೇಕಾದ ಬರಹಗಾರ ಈ pauseನ್ನು ಕೂಡಾ ಭಾಷೆಯಲ್ಲೇ ಕಟ್ಟಬೇಕಾಗುತ್ತದೆ ಮತ್ತು ಅದು ಹೇಗೆಂಬುದು ಜೋಗಿಯವರಿಗೆ ಚೆನ್ನಾಗಿ ಗೊತ್ತು.

ಒಳ್ಳೆಯ ಕತೆಯನ್ನು ಬಯಸುವ ಓದುಗರಿಗೆ ಖಂಡಿತವಾಗಿಯೂ ಕಾದಂಬರಿ ಅದನ್ನು ನೀಡುತ್ತಿದೆ. ಹಾಗಾಗಿ ಕಾದಂಬರಿಯ ಮುಖ್ಯ ಮುದ್ದೆಗೆ ನಾನು ಕೈ ಹಾಕುತ್ತಿಲ್ಲ. ಗೃಹಿಣಿಯೊಬ್ಬಳ ಏಕಾಂತ ಅವಳಲ್ಲಿ ಹುಟ್ಟಿಸುವ ತಲ್ಲಣಗಳು, ಆತಂಕಗಳು, ಬದುಕಿನ ಆಯ್ಕೆಗಳ (ಪರ್ಯಾಯಗಳ) ಕುರಿತ ಅನುಮಾನಗಳು ಎಲ್ಲರಿಗೂ, ಗಂಡಸರಿಗೂ ಸಾಮಾನ್ಯವಾಗಿ ಇರುವಂಥವೇ ಆದರೂ ಶಕುಂತಲಾ ನಾಯರ್ ಥರದ ಮಂದಿ ಬೇರೆ ಬೇರೆ ಮುಖವಾಡಗಳಲ್ಲಿ ಅಂಥ ಮನಸ್ಥಿತಿಯನ್ನು ಬಳಸಿಕೊಳ್ಳುವುದು ಒಳಿತಿಗೋ ಕೆಡುಕಿಗೋ ಎಂಬುದು ಕೂಡ ತಿಳಿಯದಂಥ ಒಂದು ಸ್ಥಿತಿ ಇರುವುದು ನಿಜ.

ಅವು ಈ ಗೃಹಿಣಿಯರು ನಿತ್ಯವೂ ನೋಡುವ ಧಾರಾವಾಹಿಗಳಿರಬಹುದು, ಹೆಚ್ಚಿನವರು ನಂಬುವ ಜ್ಯೋತಿಷಿಗಳಿರಬಹುದು, ಬದುಕುವುದನ್ನು ಕಲಿಸುವ ಗುರೂಜಿಗಳಿರಬಹುದು, ಇಂಥ ಕನ್ಸಲ್ಟಂಟೆಂಟುಗಳೋ, ಅಂಕಣಕಾರರೋ, ಕೌನ್ಸೆಲ್ಲರುಗಳೋ ಆಗಿರಬಹುದು. ಈ ಎಲ್ಲ ಮುಖವಾಡಗಳೂ ನಂಬಿಕೆ-ಅಪನಂಬಿಕೆಗಳ ನಡುವೆ ನಾವು ಓಲಾಡುವಂತೆ ಮಾಡುವಲ್ಲಿ, ನಮ್ಮದೇ ವಿವೇಕ, ವಿವೇಚನೆಗಳಿಗೆ ದಕ್ಕಬಹುದಾದ ಸರಳ ವಿಚಾರಗಳಿಗೂ ನಮಗೆ ನಾವೇ ಅನ್ಯರಾಗುವಂತೆ ಮಾಡುವಲ್ಲಿ, ಈ ಅನ್ಯರ ಮಾತಿನ ಮೋಡಿಗೆ ವಿವಶರಾಗಿ ಒಂದು ಬಗೆಯ ವಿಸ್ಮೃತಿಗೆ ತುತ್ತಾಗುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಿರುವುದು ದೈನಂದಿನ ಸತ್ಯ.
ಆದರೆ ದೈನಂದಿನ ಸತ್ಯಗಳಲ್ಲಿ ಅದಾಗಿ ಕಣ್ಣಿಗೆ ಬೀಳದಂಥವು ಇದ್ದರೆ ಮಾತ್ರ ಅವು ಕತೆಯಾಗಿ, ಕಾದಂಬರಿಯಾಗಿ ಯಶಸ್ವಿಯಾಗುತ್ತವೆ. ಯಾಕೆಂದರೆ, ದೈನಂದಿನ ಸತ್ಯಗಳಲ್ಲಿ ಹುದುಗಿರುವ ಒಳನೋಟಗಳನ್ನು ಸಾಹಿತ್ಯ ನಮಗೆ ಕರುಣಿಸುವ ಅದ್ಭುತ ಶಕ್ತಿಯನ್ನು ಹೊಂದಿದೆ. ಒಂದು ವಸ್ತು (ಕತೆ) ನಾಟಕವಾಗಬೇಕಿದ್ದರೆ ಅದರ ಆತ್ಮದಲ್ಲೇ ನಾಟಕೀಯವಾದ ಸಂಥಿಂಗ್ ಇರಬೇಕು ಎನ್ನುತ್ತಿದ್ದರು ಲಂಕೇಶ್. ನಮ್ಮ ಎಸ್ ಸುರೇಂದ್ರನಾಥ್ ಕತೆಗಳನ್ನು ಗಮನಿಸಿದರೆ ಇದು ತಿಳಿಯುತ್ತದೆ. ಅವರ ಕತೆಗಳಲ್ಲಿ ಎಷ್ಟೊಂದು ನಾಟಕೀಯವಾದದ್ದು ತುಂಬಿರುತ್ತದೆ ನೋಡಿ.

ಅದೇ ತರ ಒಂದು ವಸ್ತು (ಕತೆ) ಕತೆಯಾಗಿ ಮೂಡಬೇಕಾದರೆ ಅದು ನಾವು ನಮ್ಮ ದೈನಂದಿನಗಳಲ್ಲಿ ಇದ್ದ ಹಾಗೇ ನೋಡುವಾಗ ನಮ್ಮ ಮನಸ್ಸಿಗೆ ಹೊಳೆಯದೇ ಹೋದದ್ದನ್ನು ಹೊಳೆಯಿಸುವಂತಿರಬೇಕು. ಜೋಗಿಯಂಥವರ ಬರವಣಿಗೆಗೆ ಹೊಸ ಹೊಸ ಸವಾಲುಗಳು ಒಡ್ಡಲ್ಪಡುತ್ತಿರುವುದೇ ಇಲ್ಲಿ. ಸಮಕಾಲೀನ ವಸ್ತುವನ್ನು ಆರಿಸಿಕೊಂಡು ಬರೆಯಬೇಕಾದ ಒತ್ತಡದಲ್ಲಿ ಇದನ್ನು ಜೋಗಿ ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ನಾವು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಾಗುತ್ತದೆ. ಪುರಂದರನಂಥ ಒಂದು ಪಾತ್ರ, ಶಕುಂತಲಾ ನಾಯರ್ ಥರದ ಒಂದು ಪಾತ್ರ ಇಲ್ಲಿ ಅವರಿಗೆ ರೂಪಕಗಳಾಗಿ ಒದಗಿಬಂದ ಬಗೆಯೇ ಒಂದು ಸೋಜಿಗ.

ಹೀಗೆಲ್ಲ ಚರ್ಚಿಸುವಾಗಲೇ ಅನಿಸುವ ಇನ್ನೊಂದು ಮಾತೆಂದರೆ, ಪ್ರೆಸೆಂಟೇಶನ್ನಿನ ಕೃತಕತೆ ಜೋಗಿಯವರಿಗೆ ಇಷ್ಟವಿಲ್ಲದಿರಬಹುದು, ಅವರಿಗೇನಿದ್ದರೂ ನೇರವಾಗಿ ಹೇಳಿ ಬಿಡುವುದೇ ಇಷ್ಟವಿರಬಹುದು ಎಂಬುದು. ತಂತ್ರ, ಪ್ರೆಸೆಂಟೇಶನ್, ನಿರೂಪಣಾ ವಿಧಾನ, ಪ್ರಯೋಗಶೀಲತೆ ಎಲ್ಲ ವಾಸ್ತವವನ್ನು ಮರೆಮಾಚುವ ವಿಂಡೋಶೋ ಎಂಬ ವಾದ ಕೂಡ ಸಾಧ್ಯ. ಬದುಕು ಇರುವುದೇ ಹಾಗಾದಲ್ಲಿ ಅದನ್ನು ಒಪ್ಪಿಕೊಳ್ಳಬೇಕು ಅಷ್ಟೆ. ಕಲೆ ಅದನ್ನು ಅವಾಸ್ತವಿಕವಾಗಿ ಸುಂದರಗೊಳಿಸುವುದರಿಂದ ಸಂಪನ್ನವಾಗುವುದೆ? ಎಂದು ಆರಂಭದಲ್ಲಿಯೇ ಹೇಳಿದ್ದು ಇಂಥ ಕಾರಣಕ್ಕೆ. ಇಲ್ಲಿ ಒಂದೆಡೆ ವಿಶ್ಲೇಷಣೆಯಿಂದ ಸುಖ ಹಾಳಾಗುತ್ತದೆ ಎಂಬ ಮಾತು ಬರುತ್ತದೆ.

ಕಮಲಹಾಸನ್ ಸಾಗರ್ ಸಂಗಮ್ ಸಿನಿಮಾದಲ್ಲಿ ಎತ್ತಿ ತೋರಿಸುವ ನೃತ್ಯಾಭಿವ್ಯಕ್ತಿಯಲ್ಲಿನ ಕೊರತೆಗಳು ಅವನ ಇಗೋ ಪೋಷಿಸುತ್ತವೆಯೇ ಹೊರತು ಸಂಪನ್ನ ಕಲಾಪ್ರದರ್ಶನದ ಸಮೃದ್ಧಿಯ ಕಡೆಗೆ ಅವನಿಗಿರುವ ತುಡಿತವನ್ನಲ್ಲ ಎನ್ನುವ ಮಾತೂ ಕಾದಂಬರಿಯಲ್ಲಿ ಬರುತ್ತದೆ. ಜೋಗಿಯವರ ಕಾದಂಬರಿಯನ್ನು ವಿಶ್ಲೇಷಿಸುವುದಕ್ಕೆ ಹೊರಟಾಗಲೂ ಈ ಮಾತುಗಳ ನೆಲೆಯನ್ನು ಪೂರ್ತಿಯಾಗಿ ಮರೆತು ಹೊರಡುವಂತಿಲ್ಲ. ಅಪರೂಪಕ್ಕೆ ಮಾಡಿದ ತಿಂಡಿ ಸೂಪರ್ ಎಂಬಂತಿದ್ದೂ ಮಾಡಿದ್ದು ತೀರ ಕಡಿಮೆ ಬಿದ್ದರೆ ಹುಟ್ಟುವ ಪೆಚ್ಚು ಅನುಭವಿಸಿದವರಿಗೇ ಗೊತ್ತು! ಜೋಗಿಯವರನ್ನು ಓದುವಾಗೆಲ್ಲ ಮತ್ತೆ ಮತ್ತೆ ನನಗೆ ಜೋಗಿಯ ಅವಸರ ಕಾಡಿದೆ. ಹಾಗೆಯೇ ಅವರ ಹೊಸ ಪುಸ್ತಕಕ್ಕೆ ಮನಸ್ಸು ಕಾದಿದೆ.

No comments: