Monday, February 10, 2014

ಪರಿತ್ಯಕ್ತನೊಬ್ಬನ ದೇಶ-ಕಾಲ

ಕಾದಂಬರಿಯ ಮೊದಲ ಪುಟದಲ್ಲಿಯೇ ನಮಗೆ ಈ ಮೈಕೆಲ್ ತುಟಿ ಸೊಟ್ಟಗಿರುವ, ಅಪ್ಪ ಯಾರೆಂದು ಗೊತ್ತಿಲ್ಲದ, ಮನೆಗೆಲಸದಾಕೆಯ ಮಗು ಎಂಬುದು ತಿಳಿದುಬಿಡುತ್ತದೆ. ಮುಂದೆ ಈತನ ಬುದ್ಧಿಯೂ ಮಂದ ಎಂಬುದು ಅರಿವಾಗುತ್ತದೆ. ಪ್ರಖರವಾದ ರಾಜಕೀಯ ಪ್ರಜ್ಞೆಯಾಗಲಿ, ಅಂಥ ಶಿಕ್ಷಣವಾಗಲಿ ಈತನಿಗಿಲ್ಲ. ತಾಯಿಯನ್ನು ಬಿಟ್ಟರೆ ಇವನತ್ತ ಪ್ರೀತಿಯಿಂದ ನೋಡುವ ಕಣ್ಣುಗಳೇ ಜಗತ್ತಿನಲ್ಲಿ ಇಲ್ಲ. ಕಾದಂಬರಿಯ ಕೊಟ್ಟಕೊನೆಯಲ್ಲಿ ಸಿಗುವ ವೈದ್ಯನಿಗೆ ಈತನ ಬಗ್ಗೆ ಕುತೂಹಲ, ಪ್ರೀತಿ ಎಲ್ಲ ಇರುವಂತಿದೆ. ಕೆಯ ಪಯಣದ ನಡುವೆ ಸಿಗುವ ಒಬ್ಬ ಮಂದಿ ಒಬ್ಬರಿಗೊಬ್ಬರು ಒದಗಬೇಕು ಎನ್ನುತ್ತಾನೆ. ಮಿಲಿಟರಿ ಕ್ಯಾಂಪಿನಲ್ಲಿ ಕೂಡ ಕೆಗೆ ಅನುಕಂಪ, ಸಹಾಯ ಮಾಡುವ ಮಂದಿಯಿದ್ದಾರೆ. ಆದರೆ ಅದ್ಯಾವುದೂ ಅವನೊಂದಿಗೇ ಹೆಜ್ಜೆ ಹಾಕಿ ಬದುಕಿನುದ್ದಕ್ಕೂ ಬರಬಲ್ಲ ನೆರವಿನ ಜೊತೆಗಾರಿಕೆಯದ್ದಲ್ಲ. ವೈದ್ಯನ ಆಸಕ್ತಿ ಕೊಂಚ ಆಳವಾದದ್ದು. ಅವನಿಂದಲೇ ಕಾದಂಬರಿ ಉತ್ತಮ ಪುರುಷ ನಿರೂಪಣೆಗೆ ಹೊರಳಿಕೊಂಡು ವಸ್ತುಸ್ಥಿತಿಯ ಪರಿಚಯವನ್ನು ಅಷ್ಟಿಷ್ಟು ಸ್ಫುಟವಾಗಿ ಓದುಗನಿಗೆ ಒದಗಿಸಲು ನೆರವಾಗುತ್ತದೆ. ಸ್ವಯಂಕೃತ ವರ್ತನೆಯಿಂದಲೂ, ಬಾಹ್ಯ ನೋಟದಿಂದಲೂ, ಆಂತರಿಕವಾಗಿಯೂ ಕೆ ಒಬ್ಬ ಪರಿತ್ಯಕ್ತ ವ್ಯಕ್ತಿತ್ವದ ಪಾತ್ರವಾಗಿಯೇ ಸಂಪನ್ನಗೊಳ್ಳುವುದು ಹೀಗೆ.

ಕುಟ್ಸಿಯ ವೇಯಿಟಿಂಗ್ ಫರ್ ದ ಬಾರ್ಬೇರಿಯನ್ಸ್, ದ ಡಸ್ಕ್ ಲ್ಯಾಂಡ್, ಡಿಸ್ ಗ್ರೇಸ್ (ಅವಮಾನ - ಕನ್ನಡಕ್ಕೆ ಡಿ ಆರ್ ಮಿರ್ಜಿ), ಇನ್ ದ ಹಾರ್ಟ್ ಆಫ್ ದ ಕಂಟ್ರಿ, ಸ್ಲೋಮ್ಯಾನ್, ಡೈರಿ ಆಫ್ ಎ ಬ್ಯಾಡ್ ಇಯರ್ ಅಥವಾ ಈಚಿನ ದ ಚೈಲ್ಡ್‌ಹುಡ್ ಆಫ್ ಜೀಸಸ್ ಕಾದಂಬರಿಯನ್ನೇ ಗಮನಿಸಿದರೂ ನಮಗೆ ತಿಳಿದುಬರುವ ಸಂಗತಿಯೆಂದರೆ, ಬದುಕಿನಲ್ಲಿ ತೀರ ನಗಣ್ಯರಾದವರು, ಮರುಭೂಮಿಯಂಥ ಒಂದು ನಾಗರಿಕ ಜಗತ್ತಿನ ಸಂಬಂಧವನ್ನೇ ಕಡಿದುಕೊಂಡಂಥ ಪ್ರದೇಶದಲ್ಲಿ, ಅಂಥ ಪರಿಸ್ಥಿತಿಯಲ್ಲಿ ಬದುಕುವ ಅನಿವಾರ್ಯತೆಗೆ ಒಳಗಾದ ಮನುಷ್ಯ ಅನುಭವಿಸುವ ಅಪಮಾನ, ದುರ್ಗತಿ, ದುಸ್ಥಿತಿ ಮತ್ತು ಅಂಥ ಸಂದರ್ಭ, ಪರಿಸ್ಥಿತಿಗಳಲ್ಲಿ ನಲುಗುವ ಮನುಷ್ಯ ಸಂಬಂಧ, ಅವನ ಲೈಂಗಿಕತೆ, ಅವನ ಆಹಾರ ಮತ್ತು ಒಟ್ಟಾರೆಯಾಗಿ ಆ ಮನಸ್ಥಿತಿಯ ತಲ್ಲಣಗಳು ರೂಪಿಸುವ ವ್ಯಕ್ತಿತ್ವ - ಇದನ್ನೆಲ್ಲ ಭಾಷೆಯಲ್ಲಿ ಹಿಡಿದಿಡುವುದು ಕುಟ್ಸಿಯ ಪ್ರಧಾನ ಆದ್ಯತೆಯಾಗಿರುವುದನ್ನು ಕಾಣುತ್ತೇವೆ. ತೀರ ವಯಸ್ಸಾದವರು, ಅಂಗವಿಕಲರು, ವಲಸೆಯವರು, ಅರಾಜಕ ಸ್ಥಿತಿಯಲ್ಲಿ ಅತಂತ್ರರಾದವರು, ಅನಾಥರು ಹೀಗೆ ಕುಟ್ಸಿಯ ಕೇಂದ್ರ ಪಾತ್ರಗಳನ್ನು ಗಮನಿಸಿದರೆ ಕುಟ್ಸಿ ಯಾರೂ ಆಯ್ದುಕೊಳ್ಳದವರನ್ನು ಆರಿಸಿಕೊಂಡಿರುವುದು ಗಮನಕ್ಕೆ ಬರುತ್ತದೆ. ಯಾರೂ ಆಯ್ದುಕೊಳ್ಳದವರು ಎಂದರೆ ಕಾದಂಬರಿ ಬರೆಯುವ ಸಾಹಿತಿಗಳ ಆಯ್ಕೆಯನ್ನು ಕುರಿತು ಹೇಳಿದ್ದಲ್ಲ, ಸಾಮಾನ್ಯ ಮಂದಿಯಾದ ನಾವು-ನೀವು ಆಯ್ದುಕೊಳ್ಳದ ಎಂಬರ್ಥದಲ್ಲಿ.

ಭಿಕ್ಷುಕರು, ರಸ್ತೆಬದಿಯ ಹುಚ್ಚರು, ಕೊಳಕರು, ಬೀದಿಬದಿ ಕಾರ್ಮಿಕರು - ಇವರನ್ನೆಲ್ಲ ನಾವೆಷ್ಟು ಗಮನಿಸುತ್ತೇವೆ? ಇವರಿಗೆ ನಾವೇನು ಮಾಡುತ್ತೇವೆ? ಇವರಿಗೆ ನಾವೆಷ್ಟು ಸಮಯ, ಕಾಳಜಿ ನೀಡಲು ಸಿದ್ಧರಿದ್ದೇವೆ? ಇಲ್ಲಿ ನನಗೆ ಟಿ.ಕೆ.ದಯಾನಂದರ ರಸ್ತೆ ನಕ್ಷತ್ರ ಎಂಬ ಅದ್ಭುತ ಕೃತಿ ನೆನಪಾಗುತ್ತದೆ. ಕುಟ್ಸಿ ತನ್ನ ಕಾದಂಬರಿಗಳಲ್ಲಿ ಇದನ್ನು ಮಾಡುತ್ತಾರೆ. ಇದರ ಜೊತೆಗೇ ಪ್ರಾಣಿಗಳ ಬಗ್ಗೆ ಆತ ತೋರಿಸುವ ಪ್ರೀತಿ ಮತ್ತು ಕಾಳಜಿ ಕೂಡ ಅಷ್ಟೇ ಗಮನಾರ್ಹವಾದದ್ದು. ಇದು ಒಂದು ಅಂಶ.

ಎರಡನೆಯದಾಗಿ ಈ ನೋಡಲು ಆಕರ್ಷಕರಲ್ಲದ, ನಾಗರಿಕ ಮಾನದಂಡಗಳಿಗೆ ಸ್ಥೂಲನೆಲೆಯಲ್ಲಿ ಸಿಗದ ಮಂದಿ ಮಹಾಸ್ವಾಭಿಮಾನಿಗಳು, ತಮ್ಮದೇ ಆದ ಜೀವನ ದರ್ಶನವುಳ್ಳವರು, ಬೇಕು ಬೇಡಗಳಿಲ್ಲದವರು ಮತ್ತು ಅಸ್ಮಿತೆಯ ಪ್ರಜ್ಞೆಯುಳ್ಳ, ಅದಕ್ಕಾಗಿ ಸೆಣಸಬಲ್ಲ ಮಂದಿ ಎನ್ನುವುದನ್ನು ಕುಟ್ಸಿ ಮರೆಯದೇ ಚಿತ್ರಿಸುತ್ತಾರೆಂಬುದು. ಮೈಕೆಲ್ ಕೆ ಕೂಡ ತನ್ನ ಹೆಸರನ್ನು ಅಪಭ್ರಂಶಗೊಳಿಸಲು ಬಿಡುವುದಿಲ್ಲ. ಮಿಲಿಟರಿಯಿಂದ, ಪೋಲೀಸರಿಂದ, ಕೊನೆಗೆ ತಾನು ಸೇರಿಕೊಂಡ ಮನೆಯ ಮನೆತನಕ್ಕೇ ಸೇರಿದ ಬೇರೊಬ್ಬ ವ್ಯಕ್ತಿಯಿಂದಲೂ ತನ್ನ ಸ್ವಾತಂತ್ರ್ಯ ಹರಣಗೊಳ್ಳುವುದನ್ನು ಅವನು ಸಹಿಸಲಾರ, ಒಪ್ಪಿಕೊಳ್ಳಲಾರ. ತನ್ನನ್ನು ಬದುಕಿಸಲು ಇನ್ನಿಲ್ಲದಂತೆ ಯತ್ನಿಸುವ ವೈದ್ಯರಿಗೂ ಕುಟ್ಸಿ ಕೊಡುವ ಸಲಿಗೆ ಮಿತವಾದದ್ದು. ನಾನಿಲ್ಲಿ ಉಲ್ಲೇಖಿಸಿದ ಹೆಚ್ಚಿನೆಲ್ಲ ಕಾದಂಬರಿಯ ಪಾತ್ರಗಳೂ ಇಂಥ ಮನೋವೃತ್ತಿ ಬಿಂಬಿಸುವುದನ್ನು ಹೆಚ್ಚಿನ ಪ್ರಯತ್ನವಿಲ್ಲದೆ ಕಾಣಬಹುದಾಗಿದೆ.

ಮೂರನೆಯದಾಗಿ ಮತ್ತು ಮಹತ್ವಪೂರ್ಣವಾಗಿ ಕುಟ್ಸಿ ಇಂಥವರ ನಡುವಿನ ಮನುಷ್ಯ ಸಂಬಂಧಗಳ ನೆಲೆಯನ್ನು ಶೋಧಿಸುತ್ತಾರೆಂಬುದು. ಈ ಕಾದಂಬರಿಯಲ್ಲಿ ಅಂಥ ಪ್ರಯತ್ನಗಳಿಗೆ ತೀರ ಮಿತವಾದ ಅವಕಾಶವಿದೆ. ಮೈಕೆಲ್ ಕೆ ಜೊತೆ ವ್ಯವಹರಿಸುವ ಮಂದಿಯೇ ಕೈಬೆರಳೆಣಿಕೆಯದು. ತಾಯಿ, ತಾನು ಸೇರಿಕೊಂಡ ಮನೆಗೆ ಸಂಬಂಧಪಟ್ಟ ಒಬ್ಬ ವ್ಯಕ್ತಿ, ವೈದ್ಯ, ಮಿಲಿಟರಿ ಕ್ಯಾಂಪಿನ ಕೆಲವರು, ಪೋಲೀಸ್ ಮತ್ತು ಮಿಲಿಟರಿ ವ್ಯಕ್ತಿಗಳು, ತನ್ನ ಪಯಣದ ನಡುವೆ ತನಗೆ ಆಹಾರ ಮತ್ತು ವಸತಿ ನೀಡಿದ ಒಂದು ಕುಟುಂಬ, ತಾಯಿಯನ್ನು ಚಿಕಿತ್ಸೆಗೆ ಸ್ವೀಕರಿಸಿದ ಒಂದು ಆಸ್ಪತ್ರೆಯ ಕೆಲವೇ ಕೆಲವು ಸಿಬ್ಬಂದಿ. ದೇಶ ಅಂತರ್ಯುದ್ಧದಲ್ಲಿ ತೊಡಗಿದೆ. ಎಲ್ಲೆಲ್ಲೂ ಒಂದು ಬಗೆಯ ಅರಾಜಕತೆ ತಾಂಡವವಾಡುತ್ತಿದೆ. ಜನ ಒಂದೆಡೆಯಿಂದ ಇನ್ನೊಂದೆಡೆ ವಲಸೆ ಹೋಗತೊಡಗಿದ್ದಾರೆ ಮತ್ತು ಸರಕಾರ ಇದನ್ನು ನಿಯಂತ್ರಿಸಲು ಹೆಣಗುತ್ತಿದೆ. ಇಂಥ ಸಂದರ್ಭದಲ್ಲಿ ಯಾವುದೇ ದೇಶ ಎದುರಿಸಬಹುದಾದ ಆಹಾರದ ಕೊರತೆ, ಆರೋಗ್ಯ ನಿರ್ವಹಣೆಯ ಸಮಸ್ಯೆ, ರೋಗಗಳು, ಆರ್ಥಿಕ ಕುಸಿತ, ಬೆಂದ ಮನೆಯ ಗಳು ಹಿರಿಯ ಬಯಸುವ ಕುತ್ಸಿತ ಮನೋಧರ್ಮ ಎಲ್ಲ ಇಲ್ಲಿಯೂ ಇದೆ. ಇಂಥಲ್ಲಿ ಕೆ ಒಂದು ವಿಚಿತ್ರ ಕೇಸ್ ಆಗಿ ಕಂಡುಬರುವುದು ಕಾದಂಬರಿಯ ಪ್ರಧಾನ ಅಂಶ. ಇದು ಏನನ್ನು ಸೂಚಿಸುತ್ತದೆ ಎಂಬುದು ಈ ಕಾದಂಬರಿ ನಮಗೆ ಮುಖ್ಯವಾಗುವುದಕ್ಕೆ ಕಾರಣ.

ಈ ಮೈಕೆಲ್ ಕೆಗೆ ಎಲ್ಲವೂ ಪ್ರಕೃತಿಯಿಂದಲೇ ಬರಬೇಕು. ಅವನು ವೈದ್ಯರ ಬ್ರೆಡ್ಡು, ಮಾತ್ರೆಗಳನ್ನು ನಿರಾಕರಿಸುತ್ತಾನೆ. ತನಗೆ ಪರಿತ್ಯಜಿತ ಮನೆಯೊಂದರಲ್ಲಿ ಸಿಕ್ಕಿದ ಕೆಲವು ತರಕಾರಿ ಬೀಜಗಳನ್ನು ಕೊನೆತನಕ ಜತನದಿಂದ ಕಾಪಿಟ್ಟುಕೊಳ್ಳುತ್ತಾನೆ. ತಾನೊಬ್ಬ ಕೃಷಿಕ ಎಂಬ ನಿಲುವಿಗೆ ಆತ ಅಂಟಿಕೊಂಡಿದ್ದಾನೆ. ಭೂಮಿ ಕೊಡುವುದನ್ನೆಲ್ಲ ಯಾರು ಬೇಕಾದರೂ ಎಷ್ಟು ಬೇಕಾದರೂ ಬಳಸಿಕೊಳ್ಳಬಹುದು ಎಂಬ ನೀತಿ ಅವನದು. (ಇದನ್ನು ಗಣಿಗಾರಿಕೆಯಂಥ ಪ್ರಕೃತಿ-ಪ್ರರಿಸರದ ಮೇಲೆ ಮನುಷ್ಯ ನಡೆಸುವ ಕ್ರೌರ್ಯದ ನೆಲೆಯಲ್ಲಿ ಕಾಣುವ ಅಗತ್ಯ ಇಲ್ಲಿ ಇಲ್ಲ.) ಭೂಮಿ ತಾಯಿಯಿದ್ದಂತೆ. ಅದು ಪೊರೆಯುವ ಗುಣವುಳ್ಳದ್ದು. ಮಣ್ಣು ಮನುಷ್ಯನಿಗೆ ಬೇಕಾದುದನ್ನೆಲ್ಲಾ ಕೊಡಬಲ್ಲದ್ದು ಎಂಬ ಅವನ ನಂಬಿಕೆ ನಮಗೆ ಅನೇಕ ಕಡೆಗಳಲ್ಲಿ ಅರಿವಿಗಿಳಿಯುವಂತೆ ಕಾದಂಬರಿಯಲ್ಲಿನ ವಿವರಗಳಿವೆ. ಅವನು ಹಕ್ಕಿಗಳನ್ನು ಹೊಡೆದು ತಿನ್ನುತ್ತಾನೆ, ಕುರಿಮಂದೆಯಿಂದ ಒಂದು ಕುರಿಯನ್ನು ಅಮಾನುಷವಾಗಿ ಸಾಯಿಸಿ ತಿನ್ನಲಾಗದೆ ಒದ್ದಾಡುತ್ತಾನೆ, ಇರುವೆ, ಹುಳುಹುಪ್ಪಟೆಗಳನ್ನು ಹಿಡಿದು ತಿನ್ನುತ್ತಾನೆ ನಿಜ. ಆದರೆ ಬೇಯಿಸಿ ತಿನ್ನುವ ಒಂದು ಸಂಸ್ಕಾರ ಕೂಡ ಅವನಲ್ಲಿತ್ತು, ಅವನು ಬಂದಿರುವುದು ಅಂಥ ನಾಗರಿಕ ಸಮಾಜದಿಂದಲೇ. ಹಣ ಕೈಗೆ ಸಿಕ್ಕಿದಾಗ ಅದನ್ನು ಅವನು ಭೂಮಿಯಲ್ಲಿ ಹೂತಿಟ್ಟು ಗುಡ್ಡಬೆಟ್ಟಗಳನ್ನೇರಿ ಪೊಟರೆಯಲ್ಲಿ ಅಡಗಿ ಕೂರುತ್ತಾನೆ. ಇಲ್ಲೆಲ್ಲ ನಾವು ಕಾಣುವುದು ಅವನ - ಪ್ರಕೃತಿಯ ಸಂಬಂಧವನ್ನು ಮತ್ತು ನಾಗರಿಕ ಮನುಷ್ಯ ಸಮಾಜದ ಬಗ್ಗೆ ಅವನಿಗಿರುವ ತಿರಸ್ಕಾರವನ್ನು, ಭಯವನ್ನು ಮತ್ತು ಅದರಿಂದ ದೂರವಿರುವುದರಲ್ಲೇ ತನಗೆ ನೆಮ್ಮದಿಯಿದೆ ಎಂಬ ಅವನ ನಂಬಿಕೆಯನ್ನು. ಅವನಿಗೆ ತರಕಾರಿ ಬೀಜಗಳು ಸಿಕ್ಕಿದ್ದೇ ಅವನು ಕೃಷಿಕನಾಗುತ್ತಾನೆ. ಭೂಮಿಯ ಮಡಿಲಲ್ಲಿ ಹಿತವನ್ನು ಕಾಣುತ್ತಾನೆ, ಅದು ತನಗೆ ಸುಖದಾಯಕವೆಂದು ಕಂಡುಕೊಳ್ಳುತ್ತಾನೆ. ಹೇಗಾದರೂ ಮಾಡಿ ಆ ಸುಖವನ್ನು ಉಳಿಸಿಕೊಳ್ಳಲು ಬಯಸುವ, ಪ್ರಯತ್ನಿಸುವ ಅವನಿಗೆ ಇರುವ ಒಂದೇ ಒಂದು ಆಸೆಯೆಂದರೆ ಹಕ್ಕಿಯಂತೆ ಹಾರುವುದು!

ಇಲ್ಲಿ ಪುತಿನರ ಲಘುವಾಗೆಲೆ ಮನ| ಗೆಲುವಾಗೆಲೆ ಮನ| ಹಾರು ನನ್ನ ಬಿಟ್ಟೂ...ಹಾರಿ ಹರಿಯಾ ಮುಟ್ಟು|| ನೆನಪಾಗದಿರುತ್ತದೆಯೆ? ಇದು ಮೈಕೆಲ್ ಕೆ.

ಇಂಥ ವ್ಯಕ್ತಿ, ಇಂಥ ದೇಶ-ಕಾಲ ಸಂದರ್ಭವನ್ನಿಟ್ಟುಕೊಂಡು ಒಂದು ಕಾದಂಬರಿಯನ್ನು ಬರೆಯುವುದು ಸುಲಭದ ಸವಾಲಲ್ಲ. ಕುಟ್ಸಿ ಅಂಥದ್ದನ್ನು ಆಯ್ದುಕೊಳ್ಳುವುದರಲ್ಲೇ ಅದರ ವೈಶಿಷ್ಟ್ಯವಿದೆ. ಇಲ್ಲಿ ಭಾಷೆ, ತಂತ್ರ ಮತ್ತು ಕಥಾನಕ ಅಷ್ಟೇನೂ ಆಕರ್ಷಕವಾಗಿರಲು ಸಾಧ್ಯವಿಲ್ಲ. ಹಾಗೆ ನೋಡಿದರೆ ಕೆ ಮಾತನಾಡುವುದೇ ಇಲ್ಲ. ಒಂಟಿಗೊಂಡ ಮನುಷ್ಯನ ಕತೆ ಹೇಳಲು ತಂತ್ರ ಎಂಥದ್ದು? ಇನ್ನು ಕಥಾನಕದಲ್ಲಿ ಚಲನೆಯಿಲ್ಲದಿರುವುದೇ ಮೂಲಸೆಲೆ. ನೀರವವನ್ನು, ನಿಶ್ಚಲತೆಯನ್ನು, ಅದರಲ್ಲಿ ಸಾಧ್ಯವಾಗಬಹುದಾದ ಜೀವಂತಿಕೆ ಮತ್ತು ಆಶಾವಾದವನ್ನು ಓದುಗರಂತೆಯೇ ತಾನೂ ಶೋಧಿಸ ಹೊರಟ ಕತೆಗಾರ ಕುಟ್ಸಿ. ಹಾಗಾಗಿಯೇ ಈ ಇಡೀ ಕಾದಂಬರಿಯ ಕೊನೆಯ ಭಾಗ, ಕನಸೋ, ವಾಸ್ತವವೋ, ಭ್ರಮೆಯೋ, ಕಲ್ಪನೆಯೋ ಎಂಬ ತರ್ಕದ ಅಳವಿಗೆ ಮೀರಿದ ಒಂದು ಭಾಗ ಮುಖ್ಯವಾಗುತ್ತದೆ. ಇಲ್ಲಿ ಲೈಂಗಿಕತೆಯಿದೆ, ಪಾರ್ಟಿಯಿದೆ, ಕಡಲಿದೆ, ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯನ ಬದುಕಿನ ಜೀವಸೆಲೆಯಾದ ಹುಡುಗಿಯರಿದ್ದಾರೆ, ಕುಡಿಯಲು, ತಿನ್ನಲು ಬೇಕಾದಷ್ಟಿದೆ, ಪ್ರೀತಿಯಿದೆ, ನಾನಿದ್ದೇನಯ್ಯಾ ಎನ್ನುವವರಿದ್ದಾರೆ....ಇಲ್ಲಿಯೂ ಕೆ ಕನವರಿಸುವುದು ತರಕಾರಿ ಬೀಜಗಳನ್ನೆ ಎನ್ನುವುದು ಗಮನಾರ್ಹ.
ನಿಜ, ಇದೆಲ್ಲದರ ಅರ್ಥವೇನು ದೇವರೇ! ಎಂದು ಕಾರ್ನಾಡರ ಯಯಾತಿ ನಾಟಕದ ಕೊನೆಯ ಸಾಲಿನಲ್ಲಿ ಪುರು ಉದ್ಗರಿಸುವಂತೆಯೇ ಈ ಬದುಕು ನಮಗೆದುರಾಗುತ್ತದೆ, ಮತ್ತೆ ಮತ್ತೆ. ಆದರೆ ಆ ಉದ್ಗಾರದಲ್ಲೇ ಅರ್ಥವು ಮಿಂಚಿ ಮರೆಯಾದಂತೆ, ಬಾ ಹಿಡೀ ನನ್ನನ್ನು ಎಂದು ಸವಾಲೆಸೆದಂತೆಯೂ ಕಾಣುತ್ತದೆ. ಅದು ಬದುಕಿನ ಮತ್ತು ಇಂಥ ಕೃತಿಗಳ ಸೌಂದರ್ಯ ಕೂಡ.

No comments: