Saturday, February 1, 2014

ಒಂದು ಹನಿ ಪ್ರೀತಿಗಾಗಿ...

ಕೆಲವೊಂದು ಪುಸ್ತಕಗಳನ್ನು ಓದಿ ಮುಗಿಸಿದ ಬಳಿಕ ಆ ಪಾತ್ರಗಳು, ಅವು ಜೀವಿಸುತ್ತಿದ್ದ ಊರು, ವಾತಾವರಣಗಳ ಗುಂಗಿನಿಂದ ಹೊರಬರುವುದಕ್ಕೇ ಮನಸ್ಸಾಗುವುದಿಲ್ಲ. ಇನ್ನಷ್ಟು ಮತ್ತಷ್ಟು ಆ ಲೋಕದಲ್ಲೇ ಇದ್ದು ಬಿಡಲು ಮನಸ್ಸು ಹಾತೊರೆಯುತ್ತದೆ. ಸಾಧ್ಯವಿದ್ದಿದ್ದರೆ ಅದೇ ಜಗತ್ತಿನಲ್ಲಿ ನಾವೂ ಹೋಗಿ ಸೆಟ್ಲ್ ಆಗಬಹುದಿತ್ತು ಎಂಬ ಮಟ್ಟಿಗೆ ಇಂಥ ಮೋಹ ಆವರಿಸುತ್ತದೆ. ತೇಜಸ್ವಿಯವರನ್ನು ಓದಿದಾಗ, ಲಾರಾ ಇಂಗಲ್ಸ್ ಪುಸ್ತಕಗಳನ್ನು ಓದಿದಾಗ, ಭೈರಪ್ಪನವರ ಕೆಲವು ಕಾದಂಬರಿಗಳನ್ನು ಓದಿದಾಗ ನನಗೆ ಹೀಗಾಗಿದ್ದಿದೆ. ಕಾರಂತರ ಕಾದಂಬರಿಗಳನ್ನು ಓದುವಾಗ ಅದೇ ಊರು ಕೇರಿಗಳಲ್ಲಿ ಓಡಾಡಿದವನಾಗಿ ನೆನಪುಗಳು ದಟ್ಟೈಸಿ ಆ ಕಾದಂಬರಿ ಲೋಕದೊಂದಿಗೆ ಏನೋ ಒಂದು ಸಂಬಂಧ ಏರ್ಪಟ್ಟ ಖುಶಿಯಿಂದ ಹಿಗ್ಗುತ್ತೇನೆ. ಈಗ ಓದಿ ಮುಗಿಸಿದ ಮಕ್ಯುಲರ್ಸ್ ಕರ್ಸನ್ (1917-1967) ಕಾದಂಬರಿ ದ ಹಾರ್ಟ್ ಈಸ್ ಎ ಲೋನ್ಲಿ ಹಂಟರ್ ನನ್ನನ್ನು ಹಲವು ವಿಧವಾಗಿ ಕಾಡುತ್ತಿದೆ.

ಇಲ್ಲಿನ ಕೇಂದ್ರ ಪಾತ್ರ ಸಿಂಗರ್. ಈತನ ಗೆಳೆಯ ಅಂಟೆನಾಪೌಲ್ಸ್. ಇಬ್ಬರೂ ಬ್ರಹ್ಮಚಾರಿಗಳು, ಕಿವುಡ ಮತ್ತು ಮೂಗರು, ಜೊತೆಯಾಗಿ ಒಂದೇ ಮನೆಯಲ್ಲಿ ವಾಸಿಸುತ್ತ ದುಡಿಯುತ್ತಿರುವವರು. ಅಂಟೆನಾಪೌಲ್ಸ್‌ನ ವರ್ತನೆಯಲ್ಲಿ ಕೊಂಚ ಅತಿರೇಕದ ಚಿಹ್ನೆಗಳು ಕಾಣಿಸಿಕೊಂಡು, ಕ್ರಮೇಣ ಪೋಲೀಸ್ ಪ್ರಕರಣಗಳು ಹೆಚ್ಚಿದಾಗ ಅವನನ್ನು ಚಿಕಿತ್ಸೆಗಾಗಿ ಮನೋರೋಗಿಗಳ ಕೇಂದ್ರಕ್ಕೆ ವರ್ಗಾಯಿಸುವುದು ಅನಿವಾರ್ಯವಾಗುತ್ತದೆ. ಸಿಂಗರ್‌ಗೆ ತನ್ನ ಗೆಳೆಯನನ್ನು ಬಿಟ್ಟಿರಲಾಗದಷ್ಟು ಪ್ರೀತಿ, ಕಾಳಜಿ ಮತ್ತು ಮೋಹ. ಈ ವಿರಹವನ್ನು ಸಹಿಸಲಾರದವನಾಗಿ ಆಗಾಗ ಆಸ್ಪತ್ರೆಗೆ ಹೋಗುವುದು, ಗೆಳೆಯನಿಗೆ ಇಷ್ಟವಾದ ಚಾಕೊಲೆಟ್ಸ್, ಸಿಹಿತಿಂಡಿ, ಉಡುಗೊರೆಗಳನ್ನು ಒಯ್ಯುವುದು, ಅವನೊಂದಿಗೆ ಎಷ್ಟು ಸಾಧ್ಯವೋ ಅಷ್ಟೂ ಹೊತ್ತು ಇದ್ದು, ಮೂಕಭಾಷೆಯಲ್ಲೇ ಮಾತನಾಡಿ ರಂಜಿಸುವುದು ಇದನ್ನೆಲ್ಲ ಮಾಡಿದರೂ ಸಮಾಧಾನವಿಲ್ಲ. ಅವನಿಗೆಂದು ಹಲವಾರು ಪತ್ರಗಳನ್ನು ಬರೆದು ಪೋಸ್ಟ್ ಮಾಡದೆ ಉಳಿಸಿಕೊಂಡಿರುತ್ತಾನೆ. ಬೆರಳುಗಳನ್ನು ತನ್ನಷ್ಟಕ್ಕೇ ಆಡಿಸುತ್ತ ಸ್ವಗತದಂಥ ಸಂಭಾಷಣೆಯಲ್ಲಿ ಗೆಳೆಯನ ಜೊತೆ ಮಾತನಾಡುತ್ತಿರುತ್ತಾನೆ. ಪೌಲ್ಸ್ ತನ್ನೊಂದಿಗೇ ಇದ್ದಷ್ಟು ಕಾಲ ಸಿಂಗರ್‌ಗೆ ಬೇರೆ ಯಾರೂ ಸ್ನೇಹಿತರಿರಲಿಲ್ಲ. ಸಿಂಗರನ ಮಾತುಕತೆಯೆಲ್ಲವೂ ಅವನೊಂದಿಗೆ. ಸಿಂಗರ್‌ಗೆ ಇಷ್ಟವಾದ ಚೆಸ್ ಆಟವೂ ಅವನೊಂದಿಗೇ. ಅವನು ಆಡಲು ನಿರಾಕರಿಸಿದಾಗ ಅವನ ಪಾತ್ರವನ್ನು ತಾನೇ ನಿರ್ವಹಿಸುತ್ತ ಆಡಿದರೂ ಅದು ಪರೋಕ್ಷವಾಗಿ ಪೌಲ್ಸ್ ಜೊತೆಗೇನೆ. ಡ್ಯೂಟಿಗೆ ಹೋಗುವುದು, ವಾಪಾಸು ಬರುವುದು ಎಲ್ಲವೂ ಪೌಲ್ಸ್ ಜೊತೆಗೆ. ಈಗ ಗೆಳೆಯನಿಲ್ಲದೇ ಅವನ ಬದುಕಿನಲ್ಲಿ ಬಹುದೊಡ್ಡ ಶೂನ್ಯವೊಂದು ಆವರಿಸಿಬಿಟ್ಟಿದೆ. ಸಿಂಗರ್ ಆ ಮನೆಯನ್ನು ಬಿಟ್ಟು ತನ್ನ ವಾಸ್ತವ್ಯವನ್ನು ಬೇರೊಂದೆಡೆಗೆ ಬದಲಾಯಿಸಿ ಬಿಡುತ್ತಾನೆ.

ಅಲ್ಲಿ ಅವನ ಬದುಕಿಗೆ ಪರಿಚಯವಾಗುವ ಗೆಳೆಯರು ಪ್ರಮುಖವಾಗಿ ನಾಲ್ವರು. ಮನೆ ಬಾಡಿಗೆಗಿತ್ತ ಮನೆಯೊಡತಿಯ ಮಗಳು ಮಿಕ್ ಕೆಲ್ಲಿ, ತಿಂಡಿ ತೀರ್ಥಕ್ಕೆ ಆಶ್ರಯಿಸಿದ ಕೆಫೆಯ ಮಾಲೀಕ ಬಿಫ್ ಬ್ರಾನನ್, ಅಲ್ಲಿಯೇ ಪರಿಚಿತನಾದ ವಿಚಿತ್ರವೆನಿಸುವ ವ್ಯಕ್ತಿ ಜಾಕ್ ಬ್ಲೌಂಟ್, ಊರಿನ ಆಫ್ರಿಕನ್-ಅಮೆರಿಕನ್ ವೈದ್ಯ ಕೋಪ್ಲ್ಯಾಂಡ್.

ಮನೆಯೊಡತಿಯ ಪತಿ ವಿಲ್ಬರ್ ಕೆಲಿ ಕಾಲುಗಳನ್ನು ಕಳೆದುಕೊಂಡು, ಅಕಾಲದಲ್ಲಿ ನಿರುದ್ಯೋಗಿಯಾಗಿ ಸದ್ಯ ಮನೆಯಲ್ಲೇ ಕೈಗಡಿಯಾರಗಳ ರಿಪೇರಿ ಕೆಲಸ ಮಾಡುತ್ತ ಅಷ್ಟಿಷ್ಟು ಸಂಪಾದಿಸುತ್ತಿದ್ದಾನೆ. ಅವನಿಗೆ ಮಿಕ್ ಅಲ್ಲದೆ ಬೇರೆ ಮಕ್ಕಳಿದ್ದಾರೆ. ಸಂಸಾರ ದೊಡ್ಡದು, ಖರ್ಚು ಹೆಚ್ಚು, ನಿಭಾಯಿಸುವಲ್ಲಿ ಹೆಣಗುತ್ತಿರುವುದೇ ಅವನ ಜಾಯಮಾನವಾಗಿಬಿಟ್ಟಿದೆ. ಮಗಳು ತರುಣಿ, ಅತ್ತ ಹುಡುಗಾಟ ಬಿಟ್ಟಿಲ್ಲ ಇತ್ತ ಯೌವನ ಕಾಲಿಟ್ಟಿಲ್ಲ. ಸಂಗೀತದ, ದೇಶ ವಿದೇಶ ಸುತ್ತುವ, ಸಂಶೋಧನೆ ಮಾಡುವ, ಇನ್ನೂ ಏನೇನೋ ಮಾಡುವ ಆಸೆ, ಕನಸು, ಹವಣಿಕೆ. ಸಿಂಗರ್ ಮೇಲೆ ಪ್ರೀತಿ, ಪಕ್ಕದ ಮನೆ ಹುಡುಗ ಹ್ಯಾರಿ ಮೇಲೆ ಆಸೆ. ಆದರೆ ಅವಳಲ್ಲಿ ಅಪಾರ ನಿರಾಸೆಯ ಕಡಲನ್ನೇ ಬಿಟ್ಟು ಹೋಗುವ ಈ ಇಬ್ಬರೂ ಅವಳಲ್ಲಿ ಅದುವರೆಗೆ ಕಂಡಿರದ ಗಾಂಭೀರ್ಯವನ್ನೂ ಚಿಂತನೆಯನ್ನೂ ಸುರು ಹಚ್ಚಿ ಹೋದಂತಿದೆ.

ಬಿಫ್ ಬ್ರಾನನ್ ಕೆಫೆ ನಡೆಸುತ್ತಾನೆ. ಹಗಲೆಲ್ಲ ಕೆಫೆಯನ್ನು ಅವನ ಹೆಂಡತಿ ಅಲಿಸ್ ನೋಡಿಕೊಂಡರೆ ರಾತ್ರಿಯೆಲ್ಲ ಬಿಫ್‌ನ ಪಾಳಿ. ಕೆಫೆ ನಡೆಸುತ್ತಿದ್ದರೂ ಅವನಿಗೆ ಬದುಕಿನಲ್ಲಿ ಹಣವೇ ಎಲ್ಲ ಅಲ್ಲ. ನಡುರಾತ್ರಿಯ ಬಳಿಕ ಗಿರಾಕಿಗಳಿಲ್ಲದಿದ್ದರೂ ರಾತ್ರಿಯೆಲ್ಲ ಕೆಫೆ ತೆರೆದಿಡುವುದಕ್ಕೆ ಅವನದೇ ತರ್ಕವಿದೆ. ಹಣವಿಲ್ಲದ ವಿಲಕ್ಷಣ ಗಿರಾಕಿ ಜಾಕ್ ಬ್ಲೌಂಟ್‌ನನ್ನು ಸೇರಿಸಿಕೊಳ್ಳಬೇಡ ಎಂದು ಹೆಂಡತಿ ಪದೇ ಪದೇ ಹೇಳಿದರೂ ಬಿಫ್ ಕೇಳುವುದಿಲ್ಲ. ಗಂಡ ಹೆಂಡಿರ ನಡುವೆ ಅಜಗಜಾಂತರವಿದೆ. ಇದ್ದಕ್ಕಿದ್ದಂತೆ ಕಾಯಿಲೆ ಉಲ್ಬಣಿಸಿ ಅರ್ಧಗಂಟೆಯಲ್ಲಿ ತೀರಿಕೊಳ್ಳುವ ಹೆಂಡತಿಯ ನೆನಪುಗಳು ಬಿಫ್‌ನನ್ನು ಕಾಡತೊಡಗುವುದು ವಿಚಿತ್ರ ಬಗೆಯಲ್ಲಿ. ಬದುಕಿನ ಬಗ್ಗೆ ಅವನು ಪ್ರಶ್ನೆಗಳನ್ನು ಕೇಳಿಕೊಳ್ಳತೊಡಗುವುದು ಇಲ್ಲಿಯೇ.

ಜಾಕ್ ಬ್ಲೌಂಟ್ ವಿಚಿತ್ರ ವ್ಯಕ್ತಿ. ಉದ್ಯೋಗವನ್ನು ಅರಸಿ ಈ ಊರಿಗೆ ಬಂದ ಆತನಿಗೆ ಉದ್ಯೋಗವೇ ಎಲ್ಲವೂ ಅಲ್ಲ. ಬದುಕು ದೊಡ್ಡದು, ಸಂಪಾದನೆ ಅದರ ಒಂದಾನೊಂದು ಅಗತ್ಯವಷ್ಟೇ ಎಂದು ಬಲ್ಲವನಾತ. ಪೇಟೆಯಲ್ಲಿ ಗಿರಿಗಿಟ್ಟಿ ಸುತ್ತುವ ಕುದುರೆ, ತೊಟ್ಟಿಲುಗಳ ಯಂತ್ರವನ್ನು ನಿರ್ವಹಿಸುವ ಕೆಲಸಕ್ಕೆ ಸೇರುತ್ತಾನೆ. ಅಲ್ಲಿ ನೂರು ಬಗೆಯ ರಾಜಕೀಯ, ಪುಂಡರ ಗಲಾಟೆ, ತಕರಾರು. ಬಿಳಿಯ-ಕರಿಯ ಘರ್ಷಣೆ, ಫ್ಯಾಸಿಸಂ-ನಾಜಿಸಂ ತಕರಾರುಗಳು. ಹಿಟ್ಲರ್ ಇಲ್ಲಸಲ್ಲದ ಕಿಡಿಗೇಡಿತನಗಳನ್ನೆಲ್ಲ ಹಚ್ಚಿಟ್ಟುಕೊಂಡು ಯುದ್ಧ ಸುರುವಾಗಿದೆ. ಆದರೆ ಇದೆಲ್ಲದರಿಂದ ಮುಕ್ತವಾಗಿದ್ದುಕೊಂಡು ಮನುಷ್ಯರ ಮಟ್ಟದಲ್ಲಿ ಯೋಚಿಸಬಲ್ಲ ಜಾಕ್ ಹೆಚ್ಚಿನವರಿಗೆ ಅರ್ಥವಾಗುವುದಿಲ್ಲ. ಅದಕ್ಕೆ ಈತನ ವಿಪರೀತ ಕುಡಿತದ ಚಟ ಕೂಡಾ ಕಾರಣವೆಂದರೆ ಸುಳ್ಳಲ್ಲ.

ವೈದ್ಯನಾದ ಕೋಪ್ಲ್ಯಾಂಡ್ ಕರಿಯ. ತನ್ನವರ ಮೇಲೆ ಬಿಳಿಯರು ಎಸಗುತ್ತಿರುವ ಅನ್ಯಾಯ, ಅಕ್ರಮ, ತರತಮ ನೀತಿಗಳ ವಿರುದ್ಧ ಸಿಡಿಯುವ ಬಡಬಾನಲವನ್ನು ಎದೆಯಲ್ಲೇ ಮುಚ್ಚಿಟ್ಟುಕೊಂಡು ತನ್ನವರ ಏಳ್ಗೆಗಾಗಿ ಸದಾಕಾಲ ಚಿಂತಿಸುತ್ತ, ದುಡಿಯುತ್ತ ಆದರ್ಶದ ಕನಸುಗಳನ್ನು ಹೊತ್ತ ವ್ಯಕ್ತಿಯೀತ. ತನ್ನ ಮಕ್ಕಳನ್ನು ಏನೇನೋ ಮಾಡಬೇಕೆಂದಿದ್ದ. ವೈದ್ಯ, ಇಂಜಿನಿಯರ್, ಲಾಯರ್...ಮತ್ತವರು ತನ್ನವರ ಹಿತಕ್ಕಾಗಿ, ವಿಶ್ವದ ಎಲ್ಲ ಕರಿಯರ ಹಕ್ಕುಗಳಿಗಾಗಿ ಹೋರಾಡುತ್ತಾರೆ, ಅವರನ್ನು ಶಿಕ್ಷಣ, ಉದ್ಯೋಗ, ಸಮಾನತೆ ಎಲ್ಲದರಲ್ಲೂ ಪರಿಪೂರ್ಣರನ್ನಾಗಿಸುತ್ತಾರೆ...ಎಂದೆಲ್ಲ ಕನಸು ಕಂಡಿದ್ದ. ಆದರೆ ಅದೆಲ್ಲ ಅವನ ಕಣ್ಮುಂದೆಯೇ ಮಣ್ಣುಗೂಡುವುದನ್ನು ಕಂಡಿದ್ದಾನೆ. ಹೆಂಡತಿ ಇವನ ಆದರ್ಶ, ಕನಸು, ಹಠದ ಎದುರು ನಿಲ್ಲಲಾಗದೆ ಮಕ್ಕಳೊಂದಿಗೆ ತವರು ಸೇರಿ ಅಲ್ಲಿಯೇ ಸತ್ತಿದ್ದಾಳೆ. ಇವನಿಗೀಗ ನಡುವಯಸ್ಸು. ದ್ವೇಷ ಮತ್ತು ಭಯದಿಂದ ದೂರಾಗಿದ್ದ ಮಕ್ಕಳಿಗೆ ಮುದಿ ತಂದೆಯ ಬಗ್ಗೆ ಅನುಕಂಪವಿದೆ, ಆದರೆ ಪ್ರೀತಿಯಿಲ್ಲ. ಕೋಪ್ಲ್ಯಾಂಡ್ ಎದುರು ಬರೇ ಮುರಿದುಬಿದ್ದ ಕನಸುಗಳಿವೆ. ಅವನಲ್ಲಿ ಮತ್ತೆ ಎದ್ದು ನಿಲ್ಲುವ ಛಾತಿಯಿದೆ, ಆಶಾವಾದವಿದೆ. ಆದರೆ ಅದಕ್ಕೆಲ್ಲ ಬೇಕಾದ ಸಾಮರ್ಥ್ಯ ಕುಸಿದಿದೆ.

ಈ ನಾಲ್ವರೂ ಒಂದಲ್ಲಾ ಒಂದು ಬಗೆಯಿಂದ ಸಿಂಗರ್ ಜೊತೆಗೆ ಸ್ನೇಹಸಂಬಂಧ ಬೆಳೆಸಿಕೊಳ್ಳುತ್ತಾರೆ. ಅವನನ್ನು ಆಗಾಗ ಭೇಟಿಯಾಗುತ್ತಾರೆ. ಕಿವುಡನೂ ಮೂಗನೂ ಆದ ಆತನ ಮುಂದೆ ತಮ್ಮ ತಮ್ಮ ಹೃದಯದ ಗೋಳುಗಳನ್ನು, ಕನಸು, ಆಸೆಗಳನ್ನು ಬಿಚ್ಚಿಡುತ್ತಾರೆ. ಅವುಗಳಲ್ಲಿ ಬಹುಪಾಲು ತನಗೆ ಅರ್ಥವಾಗದಿದ್ದರೂ ಸಿಂಗರ್ ಎಲ್ಲವನ್ನೂ ಮನಸ್ಸಿಟ್ಟು ಕೇಳಿಸಿಕೊಳ್ಳುತ್ತಾನೆ, ಎದುರಿನ ವ್ಯಕ್ತಿಯ ತುಟಿಯ ಚಲನೆಯನ್ನೇ ಹಿಂಬಾಲಿಸಿ ಅವರ ಮಾತುಗಳ ನಿಶ್ಶಬ್ದವನ್ನು ಹಿಡಿಯಲು ಇನ್ನಿಲ್ಲದಂತೆ ಯತ್ನಿಸುತ್ತಾನೆ. ಇದಕ್ಕಾಗಿಯೇ ಎಲ್ಲರಿಗೂ ಪ್ರಿಯನಾತ. ಮಿಕ್ ಕೆಲ್ಲಿಗಾಗಿ ರೇಡಿಯೋ ಕೊಂಡು ತರುತ್ತಾನೆ. ಕೋಪ್ಲ್ಯಾಂಡ್‌ಗಾಗಿ ಓಡಾಡುತ್ತಾನೆ. ಜಾಕ್ ಬ್ಲೌಂಟ್ ಕುಡಿದು ಬಿದ್ದು ಗಾಯಗೊಂಡಾಗ ತಾನೇ ತನ್ನ ರೂಮಿಗೆ ಕರೆತಂದು ಶುಶ್ರೂಶೆ ಮಾಡುತ್ತಾನೆ. ಬಿಫ್ ಕೂಡಾ ಸಿಂಗರ್ ಈ ಎಲ್ಲರ ಖಾಸಾ ದೇವರಾಗಿಬಿಟ್ಟಿರುವುದನ್ನು ಮೆಚ್ಚುಗೆ ಮತ್ತು ಪ್ರೀತಿಯಿಂದ ಗಮನಿಸುತ್ತಾನೆ. ತಮಾಷೆಯೆಂದರೆ ಯಾವತ್ತೂ ಈ ನಾಲ್ವರು ಒಟ್ಟಾಗಿ ಸಿಂಗರ್ ಎದುರು ಸೇರುವುದಿಲ್ಲ ಎನ್ನುವುದು! ಒಮ್ಮೆ ಮಾತ್ರ ಅದು ಸಂಭವಿಸಿದರೂ ಯಾರೂ ಮುಕ್ತವಾಗಿ ಮಾತನಾಡದ, ಬೆರೆಯದ, ಅಲ್ಲಿಂದ ಪಾರಾಗಲಿಕ್ಕೇ ಕಾಯುತ್ತ ಉಳಿಯುವ ಸಮಾಗಮವಾಗಿಬಿಡುತ್ತದೆ! ಅಂದರೆ ಈ ನಾಲ್ವರಿಗೂ ಸಿಂಗರ್ ಜೊತೆ ಇರುವುದು ಅಂತರಾತ್ಮನ ಸಂಬಂಧ ಮಾತ್ರ. ಅದು ಪಿಸುನುಡಿಯಲ್ಲಿ, ಆತ್ಮಿಕ ಸಂಭಾಷಣೆಯಲ್ಲಿ ತೊಡಗುವುದಕ್ಕಷ್ಟೇ ಸಾಧ್ಯವುಳ್ಳ ಸಂಬಂಧ. ಪ್ರಿಯಕರ-ಪ್ರೇಯಸಿಯರ ನಡುವಿನ ಸಂಬಂಧದಂತೆ, ತೀರ ಖಾಸಗಿಯಾದದ್ದು.

ಆದರೆ, ಈ ಎಲ್ಲ ನಾಲ್ವರೂ ಪರಸ್ಪರ ಬೇರೆಡೆ ಸೇರಿದಾಗ ಮುಕ್ತವಾಗಿ ಮಾತನಾಡುತ್ತಾರೆ, ಚರ್ಚಿಸುತ್ತಾರೆ! ಬಿಫ್ ಜೊತೆ ಮಿಕ್, ಜಾಕ್ ಬೆರೆಯುತ್ತಾರೆ, ಮಾತನಾಡುತ್ತಾರೆ. ಜಾಕ್ ಕೂಡ ಕೋಪ್ಲ್ಯಾಂಡ್ ಜೊತೆ ಚರ್ಚೆಗಿಳಿಯುತ್ತಾನೆ. ಕರಿಯ ಎಂಬ ಒಂದೇ ಕಾರಣಕ್ಕೆ ಕೋಪ್ಲ್ಯಾಂಡ್ ಕೆಫೆಯೊಳಕ್ಕೆ ಬರಲಾರನೆಂಬುದು ನಿಜವಾದರೂ ಉಳಿದಂತೆ ಎಲ್ಲರಿಗೂ ಎಲ್ಲರ ಜೊತೆ ಮಾತನಾಡಲು ವಿಷಯಗಳಿವೆ, ಅಂಥ ಸಮಾಗಮಗಳಿವೆ. ಮತ್ತು ಇದರಿಂದಲೇ ನಮಗೆ ಇವರೆಲ್ಲ ಸಿಂಗರ್ ಜೊತೆ ಏನು ಮಾತನಾಡಿಯಾರೆಂಬ ಹೊಳಹುಗಳು ಸಿಗುವುದು ಕೂಡ. ಬಹುಷಃ ‘ಅನ್ಯ’ನಾದ ಕೋಪ್ಲ್ಯಾಂಡ್ ವಿಚಾರದಲ್ಲಿ ಇದು ಸ್ವಲ್ಪ ಕಷ್ಟವಾಗಿದೆ. ಹಾಗಾಗಿಯೂ ಇಲ್ಲಿ ಆತನ ಮಗಳು ಪೋರ್ಷಿಯಾ, ಮಗ ವಿಲಿಯಂ ಮುಂತಾದವರೆಲ್ಲ ಬರುವುದು ಅನಿವಾರ್ಯವಾಗಿದೆ.

ಈ ಕಾದಂಬರಿ ತನ್ನ ಅರ್ಥ, ಉದ್ದೇಶ, ಆಕೃತಿಗಳಲ್ಲಿ ಏನೇ ಆಗಿರಲಿ, ಹೇಗೇ ಇರಲಿ, ಅದು ಮುಖ್ಯವಾಗುವುದು ಅದು ಕೆತ್ತಿ ಇರಿಸುವ ಪಾತ್ರಗಳ ಮತ್ತು ಆ ಊರಿನ ಚಿತ್ರಣದಲ್ಲಿರುವ ಜೀವಂತಿಕೆಯಿಂದ. ಒಂದು ಮೂಡಿಗೆರೆ, ಕೆಸರೂರು, ಮಾಲ್ಗುಡಿ, ಸಾಧನಕೇರಿ, ನವಿಲೆಸರ, ಹನೇಹಳ್ಳಿ ಇಲ್ಲಿ ಒಡಮೂಡಿ ಬಂದ ಪರಿ ನಿಜಕ್ಕೂ ಮನಮೋಹಕ. ಹಾಗೆಯೇ ಮಾತಿಲ್ಲದ, ಕತೆಯಿಲ್ಲದ ಮೌನಿ ಸಿಂಗರ್ ನಮ್ಮನ್ನು ದಿನಗಟ್ಟಲೆ ಕಾಡುವುದು ಖಚಿತ. ಕರ್ಸನ್ ಮಕ್ಯುಲರ್ಸ್ ಬರವಣಿಗೆಯ ಲಯ, ವಿನ್ಯಾಸ, ವಿವರಗಳ ಬಳಕೆಯಲ್ಲಿನ ಎಚ್ಚರ ಇವು ಓದುಗನ ಮನಸ್ಸನ್ನು ಸೂರೆಗೊಳ್ಳದೇ ಇರುವುದು ಸಾಧ್ಯವಿಲ್ಲ. "ಕಾದಂಬರಿಯ ಮೂಲತತ್ವವನ್ನು ಸ್ಥೂಲವಾಗಿ ಹೇಳುವುದಾದರೆ ಅದು ಮನುಷ್ಯನ ಅಂತರಂಗದ ಒಬ್ಬಂಟಿತನದ ವಿರುದ್ಧ ಅವನು ಹೂಡುವ ಬಂಡಾಯ ಮತ್ತು ತನ್ನನ್ನು ತಾನು ಎಷ್ಟು ಸಾಧ್ಯವೋ ಅಷ್ಟು ಪರಿಪೂರ್ಣವಾಗಿ ತೆರೆದಿಟ್ಟುಕೊಳ್ಳುವ ಪ್ರಯತ್ನವೇ ಆಗಿದೆ." ಎನ್ನುವ ಕರ್ಸನ್, ಇಡೀ ಕಾದಂಬರಿಯಲ್ಲಿ ಎಲ್ಲಿಯೂ ಅಂತರಂಗದ ತೊಳಲಾಟಗಳನ್ನು, ಮನಸ್ಸಿನ ಏರಿಳಿತಗಳನ್ನು ಚರ್ಚಿಸುವುದಿಲ್ಲ, ವಿವರಿಸುವುದಿಲ್ಲ ಅಥವಾ ಅವುಗಳ ಭಾಷ್ಯಕ್ಕೆ ತೊಡಗುವುದಿಲ್ಲ. ಅಷ್ಟೇಕೆ, ಇಂಥವನ್ನೆಲ್ಲ ಸಾಧಿಸಲು ಸಾಮಾನ್ಯವಾಗಿ ಬರಹಗಾರರು ಬಳಸಿಕೊಳ್ಳುವ ಗತಕಾಲ ಚರಿತ್ರೆಗೂ ಆಕೆ ಇಳಿಯುವುದಿಲ್ಲ. ಆಕೆಯದೇನಿದ್ದರೂ ‘ಇಲ್ಲಿ ಮತ್ತು ಈಗ’ ವಿಧಾನದ ನಿರೂಪಣೆ. ಚರಿತ್ರೆಯಲ್ಲಿ, ಗತಕಾಲದಲ್ಲಿ ಆಕೆಗೆ ಆಸಕ್ತಿಯಿಲ್ಲ. ಮಾತಿಲ್ಲದ, ಶಬ್ದವಿಲ್ಲದ ಜಗತ್ತಿನ ಸಿಂಗರ್ ಬೆರಳುಗಳನ್ನಾಡಿಸುತ್ತಲೇ ಸಂಭಾಷಣೆಯನ್ನು ಸಾಧಿಸಬೇಕು ಮತ್ತು ನಿರೂಪಣೆ ಅದನ್ನು ಭಾಷೆಯಲ್ಲಿ ಹಿಡಿಯುವಾಗಲೇ ಅದರ ‘ಮೂಕತನ’ವನ್ನು ಕಳೆದುಕೊಳ್ಳದೇ ಮೂರ್ತವಾಗಬೇಕು!

ಇಲ್ಲಿನ ನಿರೂಪಣೆಯಲ್ಲಿ ಲೈಂಗಿಕ ಆಯಾಮವೊಂದನ್ನು ಕಂಡುಕೊಂಡವರಿದ್ದಾರೆ, ಅದನ್ನು ವಿವರಿಸುವ ವಿಮರ್ಶೆ, ಪರಾಮರ್ಶನಗಳು ಬಂದಿವೆ. ವಿವೇಕ್ ಶಾನಭಾಗರ ಆರಂಭಿಕ ಕತೆಗಳಲ್ಲಿ ಒಂದು ಮಾತು ಬರುತ್ತದೆ; ವ್ಯಕ್ತಿಯೊಬ್ಬ ಲೈಂಗಿಕತೆಗೆ ತೆರೆದುಕೊಳ್ಳುವ ವಿಧಾನದಲ್ಲಿಯೇ ಅವನು ಬದುಕಿಗೆ ಹೇಗೆ ತೆರೆದುಕೊಳ್ಳುತ್ತಾನೆಂಬುದರ ಹೊಳಹುಗಳಿರುತ್ತವೆ ಎಂಬರ್ಥದ ಮಾತು. ಕುತೂಹಲಕರ ಅಲ್ಲವೆ? ವ್ಯಕ್ತಿಯೊಬ್ಬ ಮುಷ್ಠಿಮೈಥುನದಲ್ಲಿ ತೊಡಗಿದ್ದಾನೆಯೇ, ಆತ ಸಲಿಂಗಕಾಮಿಯೇ, ಪರಪತ್ನಿಪ್ರಿಯಕರನೇ ಎಂಬುದೆಲ್ಲ ಯಾವಾಗ ಮುಖ್ಯ? ಕತೆ ಕಾದಂಬರಿಯ ಪಾತ್ರವೊಂದರ ಲೈಂಗಿಕತೆ ಹೇಗಿದ್ದರೂ, ಯಾವ ಬಗೆಯದ್ದಾಗಿದ್ದರೂ ಕತೆ-ಕಾದಂಬರಿಯಲ್ಲಿ ಅದನ್ನು ತರುವುದರಿಂದ ಕೊನೆಗೂ ಕತೆ-ಕಾದಂಬರಿಕಾರ ಏನನ್ನು ಹೇಳಲು ಹೊರಟಿದ್ದಾನೆಯೋ ಅದಕ್ಕೆ ಆ ವಿವರ ಪ್ರಧಾನವಾಗಿ ಕಾರಣವಾಗಿದ್ದರೆ ಮಾತ್ರ. ಅಂಥ ಜೀವನಕ್ರಮವೇ ಒಂದು ವ್ಯಕ್ತಿತ್ವವನ್ನು ರೂಪಿಸಿದೆ ಎಂಬ ಭ್ರಮೆಗೆ ನಾವು ತುತ್ತಾದಾಗ ನಡೆಯುವುದೆಲ್ಲವೂ ಅದರ ಬೈಪ್ರಾಡಕ್ಟ್ ಎಂಬಂತೆ ಕಾಣುತ್ತದೆ. ಆದರೆ ಬದುಕು ಹಾಗೇನೂ ಇರುವುದಿಲ್ಲ. ಅದು ಇಂಥ ಹಲವು ಹತ್ತು ಸಂಗತಿಗಳ ಸಂಕೀರ್ಣ ರೂಪಕವಾಗಿರುವಾಗ, ಲೈಂಗಿಕತೆ ಒಬ್ಬನ ವ್ಯಕ್ತಿತ್ವದಲ್ಲಿ ಎಷ್ಟೇ ಪ್ರಮುಖ ಅಂಶವಾಗಿದ್ದಾಗ್ಯೂ ಅದನ್ನು isolate ಮಾಡಿ ನೋಡುವ ಕ್ರಮವೇ ರೋಗಗ್ರಸ್ತವಾದದ್ದು. ಕೊನೆಗೂ ಅವನ ಬದುಕು, ಸಾಧನೆ, ತರ್ಕ ಮತ್ತು ತತ್ವ ಮುಖ್ಯವೇ ಹೊರತು ಅವನು ಎಲ್ಲಿ ಮಲಗಿದ, ಹೇಗೆ ಮಲಗಿದ, ಯಾರೊಂದಿಗೆ ಎನ್ನುವ just one among the many ಪೂರಕ ವಿಚಾರವಲ್ಲ. ಹಾಗಾಗಿ ಇಲ್ಲಿ ಸಿಂಗರ್-ಪೌಲ್ಸ್-ಮಿಕ್-ಹ್ಯಾರಿ ಮುಂತಾದವರ ಮುಷ್ಠಿಮೈಥುನದ ವಿವರಗಳು, ಮೂಕ ಭಾಷೆಗಾಗಿ ಅವರು ಕೈಯನ್ನು ಬಳಸುವ ವಿವರದೊಂದಿಗೆ ತಳುಕು ಹಾಕಿಕೊಂಡಿರುವ ಒಂದು ‘ಎರಡಲುಗಿನ’ ನಿರೂಪಣೆಯನ್ನು ಗಮನಿಸಿ ನೋಡಲು ನಾನು ಹೋಗಿಲ್ಲ, ಅದು ಅಲ್ಲಲ್ಲಿ ಹೌದೋ ಅಲ್ಲವೋ ಎಂಬಷ್ಟು ಅರಿವಿಗೆ ಬರುತ್ತದೆ, ಎಂಬುದರಾಚೆ. ಕಾದಂಬರಿಯಲ್ಲಿ ಅದು ಇದೆ, ಯಾಕಾಗಿ ಇದೆ, ಅದರ ರಿಲವನ್ಸ್ ಏನು ಎಂದರೆ ಉತ್ತರವಿಲ್ಲ.

ಹಾಗೆಯೇ ಈ ಕಾದಂಬರಿ ಊರಿನ ಮತ್ತು ಕೆಲವು ಪಾತ್ರಗಳ ಡಾಕ್ಯುಮೆಂಟರಿಯಾಗುವುದಕ್ಕೂ ಸೃಜನಾತ್ಮಕ ಕಲಾಕೃತಿಯಾಗುವುದಕ್ಕೂ ಏಕಕಾಲಕ್ಕೆ ಯತ್ನಿಸುತ್ತ ಎರಡೂ ಆಗದೇ ಸೋತಿತಲ್ಲಾ ಎನ್ನುವವರೂ ಇದ್ದಾರೆ. ದಕ್ಷಿಣ ಅಮೆರಿಕೆಯ ಒಂದು ನಗರದ ಡಾಕ್ಯುಮೆಂಟರಿಯೂ ಕೂಡ ಅದರ ಸೃಜನಾತ್ಮಕ ಅಭಿವ್ಯಕ್ತಿಯಲ್ಲಿ ನಮಗೆ ಆಪ್ತವಾಗಿಯೇ ಸೇರುವುದರಿಂದ ಈ ನಿಟ್ಟಿನ ವಾದವೂ ಅಷ್ಟೇನೂ ಮಹತ್ವವುಳ್ಳದ್ದಲ್ಲ ಎನ್ನಬಹುದು.

ಇನ್ನು ಈ ಕಾದಂಬರಿಯ ಓದು ಕೇವಲ ಗುಂಗು ಹಚ್ಚುವ ವಿವರಗಳಾಚೆ ನಮಗೇನಾದರೂ ಕೊಡುವುದು ಇದೆಯೇ ಎಂಬ ಪ್ರಶ್ನೆಯೂ ಇದೆ. ಯಾಕೆಂದರೆ, ಇವತ್ತು ಸುಂದರವಾದ ಭಾಷೆ, ಅಚ್ಚುಕಟ್ಟಾದ ವಿವರಗಳು, ಗೊತ್ತೇ ಇಲ್ಲದ ಒಂದು ಜಗತ್ತಿನ ಕಥಾನಕ ಎಲ್ಲವೂ ವಿಶೇಷ ಎನಿಸದ ಕಾಲಮಾನದಲ್ಲಿ ನಾವಿದ್ದೇವೆ. ಇವೆಲ್ಲ ಇವೆ, ಸರಿ, ಸೊ ವಾಟ್ ಎಂಬ ಪ್ರಶ್ನೆಯಿದು. ನಾನಿಲ್ಲಿ ವಿವರಿಸಿದ್ದು ಈ ಕಾದಂಬರಿಯ ಸೆಟ್ಟಿಂಗ್ ಮತ್ತು ಅದೇ ಕಾಲಕ್ಕೆ ಕಾದಂಬರಿಯ ಕಥಾನಕದ ಒಂದು ಅಂಶ ಕೂಡ. ಇವು ಒಂದನ್ನು ಬಿಟ್ಟು ಇನ್ನೊಂದಿಲ್ಲ ಎಂಬಂತಿರುವ ನಿರೂಪಣೆ ಇಲ್ಲಿನದು. ಆದರೂ ಕಾದಂಬರಿ ಓದುತ್ತ ಓದುತ್ತ, ಅಥವಾ ಇಡೀ ಕಾದಂಬರಿಯನ್ನು ಓದಿ ಮುಗಿಸಿದ ಬಳಿಕವಾದರೂ ನಮ್ಮನ್ನು ಕಾಡುವ ಪ್ರಶ್ನೆಗಳಿದ್ದೇ ಇವೆ.

ಮನುಷ್ಯ ಏನನ್ನಾದರೂ ಮಾಡುತ್ತಿರುತ್ತಾನೆ, ಸಂಪಾದಿಸುತ್ತಾನೆ, ಖರ್ಚು ಮಾಡುತ್ತಾನೆ, ಮಾತನಾಡುತ್ತಾನೆ, ಸ್ನೇಹ, ಪ್ರೇಮ, ಜಗಳ, ಚರ್ಚೆ, ಗೌಜುಗದ್ದಲ ಎಲ್ಲ ಮಾಡುತ್ತಾನೆ. ದಿನ ಕಳೆಯುತ್ತದೆ, ವಾರ, ತಿಂಗಳು, ವರ್ಷ ಕಳೆಯುತ್ತವೆ ಮತ್ತು ಕಾಯಿಲೆಗಳು ಬರುತ್ತವೆ, ಮುದಿಯಾಗುತ್ತಾನೆ, ಸಾವು ಬಂದು ಬಾಗಿಲಲ್ಲಿ ನಿಂತು ಜೊತೆಗೆ ಬರುವಂತೆ ಕರೆಯತೊಡಗುತ್ತದೆ. ಆದರೆ ಮನುಷ್ಯ ಇದನ್ನೆಲ್ಲ ಯಾಕೆ ಮಾಡುತ್ತಾನೆ, ಯಾಕೆ? ಹಾಗೆ ನೋಡಿದರೆ ಈ ಪೌಲ್ಸ್ ಏನು ಸಂಬಂಧವೆ, ಒಡಹುಟ್ಟಿದವನೆ? ಅವನೂ ಮೂಕ-ಕಿವುಡ ಎನ್ನುವುದನ್ನು ಬಿಟ್ಟರೆ ಇನ್ನೇನಿಲ್ಲ. ಜೊತೆಯಾಗಿ ಒಂದೆಡೆ ಬದುಕುತ್ತಿದ್ದವರು. ಅವನಿಗಾಗಿ ಸಿಂಗರ್ ಯಾಕೆ ಜೀವ ಕೊಡಬೇಕು? ಮಿಕ್ ಯಾರು? ಅವಳಿಗಾಗಿ ಯಾಕೆ ಸಿಂಗರ್ ಮಿಡಿಯುತ್ತಾನೆ? ಕಾಲು ಮತ್ತು ಉದ್ಯೋಗ ಎರಡನ್ನೂ ಅಕಾಲದಲ್ಲಿ ಕಳೆದುಕೊಂಡು ಅಸಹಾಯಕನಾಗಿಬಿಟ್ಟ ಕೆಲ್ಲಿ ತನ್ನ ಬಡತನದಲ್ಲಿ ಸಾಲದು ಎಂಬಂತೆ ಒಂದರ ಮೇಲೊಂದರಂತೆ ಬೀಳುವ ಆರ್ಥಿಕ ಏಟುಗಳ ನೆರಳಿನಲ್ಲಿ ಬದುಕನ್ನು ಹೇಗೆ ಕಾಣಬೇಕು? ಮಿಕ್‌ಳ ಹರೆಯ, ಉತ್ಸಾಹ, ಸಂಗೀತದ ಮೋಹ, ಗಂಡಿನ ಪ್ರೀತಿಯ, ಕಾಮದ ದಾಹದ ಉತ್ಕಟತೆಯ ನೆರಳಲ್ಲಿ ಅದೇ ಬದುಕು ಕಾಣುವ ಬಗೆ ಹೇಗೆ ಭಿನ್ನ ಮತ್ತು ಭಿನ್ನವಲ್ಲ? ಬಿಫ್ ತನ್ನ ಪತ್ನಿ ಸತ್ತ ಬಳಿಕ ಅವಳು ಬಳಸುತ್ತಿದ್ದ ಡಿಯೊಡ್ರಂಡ್, ಶಾಂಪೂ ಎಲ್ಲ ಆಘ್ರಾಣಿಸಿ, ಅವಳ ನೆನಪುಗಳಲ್ಲಿ ಬದುಕನ್ನು ಯಾಕೆ ಅರ್ಥದ ತರ್ಕದ ಸಾಣೆಗೆ ಹಿಡಿಯುತ್ತಾನೆ? ಜಾಕ್ ಬ್ಲೌಂಟ್‌ನಂಥ ನಿರ್ವಿಕಾರಿ ನಿರ್ಲಿಪ್ತ ಕುಡುಕನೊಬ್ಬನಿಗೂ ಇನ್ನು ಈ ಊರು ತನಗೆ ಬೇಡ ಎಂದುಕೊಳ್ಳುವಷ್ಟು ಆತ ಇಲ್ಲಿ ಅಂಟಿಸಿಕೊಂಡ ನಂಟುಗಳು ಅವನಿಗೆ ಯಾಕೆ ಮುಖ್ಯವಾಗಬೇಕು? ಕೋಪ್ಲ್ಯಾಂಡ್ ತನ್ನ ಜೀವನದುದ್ದಕ್ಕೂ ನಡೆಸಿದ ಹೋರಾಟವನ್ನು, ತಪಸ್ಸನ್ನು, ಆದರ್ಶವನ್ನು, ಅದಕ್ಕೆ ತಾನು ತೆತ್ತ ಬೆಲೆಯನ್ನು- ಈಗ ಕಾಡುವ ದೇಹದ ನಿಶ್ಶಕ್ತಿಯಲ್ಲಿ, ತನ್ನ ರಕ್ತ ಮಾಂಸ ಹಂಚಿಕೊಂಡು ಈ ಜಗತ್ತಿಗೆ ಬಂದ, ಈಗಲೂ ತನ್ನೆದುರು ದೈನ್ಯವಾಗಿ ನಿಂತ ಮಗ-ಮಗಳ ಎದುರು, ಆ ತನ್ನದೇ ಸಂಬಂಧಗಳ ನೋವು-ಯಾತನೆಗಳ ಎದುರಿನ ತನ್ನ ನಿಸ್ಸಹಾಯಕ ಘಳಿಗೆಯಲ್ಲಿ, ತನ್ನ ವೃದ್ಧಾಪ್ಯದಲ್ಲಿ ಹೇಗೆ ಕಾಣುತ್ತಾನೆ?

ಈ ಕಾದಂಬರಿಯ ಮೂಲ ಹೆಸರು ಮ್ಯೂಟ್ ಎಂದಿತ್ತಂತೆ. ಮ್ಯೂಟ್ ಎಂದರೆ ಒಂದರ್ಥದ ಮೌನ, ನಿರ್ಜೀವತೆ. ಅದು ವ್ಯಕ್ತಿಗೂ, ಸಮಾಜಕ್ಕೂ, ಸ್ಥಿತಿಗೂ ಏಕಕಾಲಕ್ಕೆ ಅನ್ವಯವಾಗಬಲ್ಲ ಅನ್ವರ್ಥ ಗುಣವುಳ್ಳ ಹೆಸರು. ಆದರೆ ಪ್ರಕಾಶಕರ ಒತ್ತಡದಿಂದ ಕಾವ್ಯಾತ್ಮಕವಾದ ಹೆಸರು ಕಾದಂಬರಿಗೆ ಅನಿವಾರ್ಯವಾಯಿತು. ದ ಹಾರ್ಟ್ ಈಸ್ ಎ ಲೋನ್ಲಿ ಹಂಟರ್. ಮನುಷ್ಯ ತನ್ನ ಬದುಕಿನುದ್ದಕ್ಕೂ ದೇವರನ್ನು ನಂಬುತ್ತ, ಅನುಮಾನಿಸುತ್ತ, ನಂಬದಿರಲು ಪ್ರಯತ್ನಿಸುತ್ತ, ನಂಬುವುದಕ್ಕೆ ಸೋಲುತ್ತ ಪಡುವ ಪಡಿಪಾಟಲಿನಂತೆಯೇ ಪ್ರೀತಿ ಅವನನ್ನು ಕಾಡುತ್ತದೆ. ಅದು ಇದ್ದಲ್ಲಿ ಇಲ್ಲದಂತೆಯೂ, ಇಲ್ಲದಲ್ಲಿ ಇರಬೇಕೆಂತಲೂ ಅವನು ತನ್ನದೇ ನಿರೀಕ್ಷೆಗಳ ಗಾಯಗಳನ್ನು ಹೊತ್ತು ತೊಳಲುತ್ತಿರುತ್ತಾನೆ, ಸಾಯುವ ತನಕವೂ. ಹಳೆಯ ಪ್ರೀತಿ ಕ್ರಮೇಣ ಬರ್ಡನ್ ಎನಿಸುತ್ತದೆ, ಹೊಸ ಪ್ರೀತಿಗೆ ಕಾತರಿಸುತ್ತಾನೆ. ಆದರೆ ಇಲ್ಲಿ ಸಿಂಗರ್‌ಗೆ ಯಾಕೆ ಯಾವತ್ತೂ ತನ್ನ ಗೆಳೆಯ, ಮಾನಸಿಕವಾಗಿ ಅಸ್ವಸ್ಥನಾದಾಗಲೂ ಬರ್ಡನ್ ಅನಿಸಲಿಲ್ಲ? ಕೋಪ್ಲ್ಯಾಂಡ್‌ಗೆ ಯಾಕೆ ಸಾಂಸಾರಿಕವಾಗಿ ಮುರಿದ ಬದುಕು, ಮುದಿತನದ ಎದುರು ತನ್ನ ಹೋರಾಟ, ಸೇವೆ ಎಲ್ಲ ನಿರರ್ಥಕ ಅನಿಸುವುದಿಲ್ಲ?

ಒಂದರ್ಥದಲ್ಲಿ ಭಾವನೆಗಳೆಲ್ಲ ಭ್ರಮೆಗಳೇ. ಅವು ಕ್ಷಣಭಂಗುರ ಎಂಬರ್ಥದಲ್ಲಿ. ಆಕಾಶದಲ್ಲಿ ತೇಲಿ ಸಾಗುವ ಮೋಡಗಳಂತೆ ಅವು ಹೆಚ್ಚು ಹೊತ್ತು ಅದೇ ಆಕಾರ, ಸಾಂದ್ರತೆ, ಗಾತ್ರ ಯಾವುದನ್ನೂ ಘನೀಕೃತವಾಗಿಯೇ ಉಳಿಸಿಕೊಳ್ಳಲಾರವು. ಆದರೂ ನಮಗೆ ಅಮರ ಮಧುರ ಪ್ರೇಮದ ವ್ಯಾಮೋಹ ಬಿಡುವುದಿಲ್ಲ. ಬದುಕಿಗೆ ಅಗತ್ಯವಾದ, ಸಾವಿಗೆ ಅಗತ್ಯವಿಲ್ಲದ ಪ್ರೇಮಕ್ಕಾಗಿ, ಅದರ ಅಮರತ್ವಕ್ಕಾಗಿ ಮನುಷ್ಯ ಸಾಯುವುದಕ್ಕೂ ಸಿದ್ಧನಾಗುವುದು ಒಂದು ಕಡೆಯಿಂದ ನೋಡಿದರೆ ತಮಾಷೆಯಾಗಿಯೂ ಇನ್ನೊಂದು ಕಡೆಯಿಂದ ಅದ್ಭುತವಾಗಿಯೂ ಕಾಣುತ್ತದೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಮನಸ್ಸಿನ ಬಹುಷಃ ಜೀವನದ ಧರ್ಮ/ಕರ್ಮ. ಹಾಗಾಗಿ ಈ ಹೆಸರು ಕೂಡ ಅನ್ವರ್ಥವೇ. ಒಟ್ಟಾರೆ ಒಂದು ಬದುಕಿನ ವಿರಾಟ್ ದರ್ಶನವನ್ನೀಯುವ, ಸಮರ್ಥವಾಗಿ ಈಯುವ ಯಾವುದೇ ಕಲಾಕೃತಿಯ ಪರಿಪಕ್ವತೆ ಈ ಕಾದಂಬರಿಗಿದೆ. ನಂಬುವುದಕ್ಕೇ ಕಷ್ಟವಾಗುವ ಒಂದು ಸಂಗತಿಯೇನೆಂದರೆ, ಈ ಕಾದಂಬರಿಯನ್ನು ಬರೆದಾಗ(1940) ಮಕ್ಯುಲರ್ಸ್ ಕರ್ಸನ್‌ಗೆ ಕೇವಲ ಇಪ್ಪತ್ತಮೂರು ವರ್ಷ ವಯಸ್ಸು ಎಂಬುದು!

No comments: