Saturday, March 1, 2014

ಎಸ್ ಸುರೇಂದ್ರನಾಥ್ ಕತೆಗಳು - ಒಂದು ಟಿಪ್ಪಣಿ

ಎಸ್ ಸುರೇಂದ್ರನಾಥ್ ಅವರ ಹೊಸ ಕಥಾಸಂಕಲನ ತಾಪತ್ರಯಗಳು ಇದೀಗ ಹೊರಬಂದಿದೆ. ಹೆಸರಿಗೆ ತಕ್ಕಂತೆ ಈ ಕೃತಿಯಲ್ಲಿ ಮೂರೇ ಮೂರು ಕತೆಗಳಿವೆ ಮತ್ತು ಅವು ಒಂದೊಂದೂ ಓದುಗರ ತಲೆತಾಪ ಹೆಚ್ಚಿಸಲು ಸಾಕಷ್ಟು ಎಂಬಂತಿವೆ. ಸಂಕಲನದಲ್ಲಿ ಈಗಾಗಲೇ ಜೋಗಿಯವರ ಹಲಗೆ ಮತ್ತು ಬಳಪಕ್ಕಾಗಿ ಬರೆದ, ತಮ್ಮ ಬರವಣಿಗೆಯ ಕುರಿತೇ ವಿವರಿಸುವ ಒಂದು ಲೇಖನವನ್ನು ಪ್ರವೇಶಿಕೆಯಾಗಿ ನೀಡಿರುವುದು ತುಂಬ ಔಚಿತ್ಯಪೂರ್ಣವಾಗಿದೆ.

ನಾವೆಲ್ಲ ತಿಳಿದಿರುವಂತೆ ಎಸ್ ಸುರೇಂದ್ರನಾಥ್ ಒಬ್ಬ ಅದ್ಭುತ ನಾಟಕಕಾರ, ನಿರ್ದೇಶಕ. ಸುರೇಂದ್ರನಾಥ್ ಅವರ ಕತೆಗಳ ವಿಶಿಷ್ಠತೆ ಕೇವಲ ಅವರು ಏಕಕಾಲಕ್ಕೆ ನಾಟಕಕಾರ (ನಿರ್ದೇಶಕ) ಮತ್ತು ಕತೆಗಾರ ಆಗಿರುವುದರಿಂದಷ್ಟೇ ದಕ್ಕಿರುವುದಲ್ಲ. ಎರಡೂ ಮಾಧ್ಯಮಗಳ ಬಗ್ಗೆ ಅವರ ಪ್ರಜ್ಞೆ ಅತ್ಯಂತ ನಿಖರವಾಗಿರುವುದರಿಂದ ದಕ್ಕಿರುವುದು. ಇದನ್ನು ಕೆಲವೊಂದು ಅಂಶಗಳಲ್ಲಿ ಸ್ಪಷ್ಟಪಡಿಸಿಕೊಳ್ಳುವುದು ಒಳ್ಳೆಯದು. ಮೊದಲಿಗೆ ಒಬ್ಬ ನಾಟಕಕಾರ ಪ್ರಧಾನವಾಗಿ ಗಮನ ನೀಡುವುದು ಹಿನ್ನೆಲೆ ಸಂಗೀತ ಸಹಿತವಾದ ಸಂಭಾಷಣೆ, ಆಂಗಿಕ ಚಲನೆ, ವೇಷ-ಭೂಷಣ, ಬೆಳಕಿನ ವಿನ್ಯಾಸ ಸಹಿತವಾದ ರಂಗಚಲನೆ, ನಾಟಕದ ರಂಜಕ ಅಂಶಗಳು, ರಂಗಕೃತಿಯ ಮೌಲ್ಯ ಮತ್ತು ಅದನ್ನು ಪ್ರತಿಬಿಂಬಿಸುವ ಗಮನಾರ್ಹ ಕ್ಷಣಗಳತ್ತ. ಒಬ್ಬ ಕತೆಗಾರನಿಗೆ ರಂಗಭೂಮಿಯ ಎಷ್ಟೋ ಅನುಕೂಲಗಳಿಲ್ಲ. ಹಾಗೆಯೇ ರಂಗಭೂಮಿಯ ಏಷ್ಟೋ ‘ತಾಪತ್ರಯಗಳೂ’ ಇರುವುದಿಲ್ಲ.

ಸುರೇಂದ್ರನಾಥ್ ಇಲ್ಲಿ ಏನು ಹೇಳುತ್ತಾರೆಂದರೆ, ತಮ್ಮ ಕತೆಗಳು ಹುಟ್ಟುವುದು ಪಾತ್ರಗಳಲ್ಲಿ ಎನ್ನುತ್ತಾರೆ. "ಮೊದಲು ನನಗೆ ಪಾತ್ರಗಳು ಹೊಳೆಯಬೇಕು. ಆ ಪಾತ್ರಗಳ ಚರಿತ್ರೆ ಮೊದಲು ನನಗೆ ನಿಚ್ಚಳವಾಗಿ ಕಾಣಬೇಕು. ಅಂದರೆ ಆ ಪಾತ್ರಗಳ ಪರಿಸರ, ಆ ಪಾತ್ರಗಳ ದಾಂಪತ್ಯ ಅಥವಾ ಒಂಟಿ ಜೀವನ, ಆ ಪಾತ್ರಗಳ ಬದುಕು, ತೊಳಲಾಟ, ದ್ವಂದ್ವಗಳು ನಿಚ್ಚಳವಾಗಬೇಕು.......ನನ್ನ ಪಾತ್ರಗಳ ಪರಿಚಯ, ಅವುಗಳ ಉಡುವ - ತೊಡುವ - ಉಣ್ಣುವ ವಿವರಗಳು.......ಹಿನ್ನೆಲೆ, ಅದರ ಅಭ್ಯಾಸಗಳು, ಅದರ ಚಟುವಟಿಕೆಗಳಷ್ಟೇ ಅಲ್ಲ, ಆ ಪಾತ್ರದ ದಿನಚರಿ ಕೂಡಾ.......ಅದರ ಸಾಮಾಜಿಕ ಮತ್ತು ಮಾನಸಿಕ ಭೂಮಿಕೆಗಳೂ..." ಆಮೇಲೆ ಅವರು ತಮಗೇಕೆ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪಾತ್ರಗಳೇ ಸುಲಭ, ತಮಗೇಕೆ ದಾವಣಗೆರೆಯೇ ಸುರಳೀತ, ತಮಗೇಕೆ ಸ್ಕೂಲು, ಕಾಲೇಜಿನ ಅಧ್ಯಾಪಕರುಗಳೇ ಸರಳ, ತಾವು ಕಂಡಂಥ ನಿಜ ಜೀವನದ ಪಾತ್ರಗಳಷ್ಟೇ ಸಾಧ್ಯ ಎನ್ನುವುದನ್ನೆಲ್ಲ ವಿವರಿಸಿದ್ದಾರೆ. "ಒಮ್ಮೆ ಪಾತ್ರಗಳು ಹೊಳೆದ ಮೇಲೆ ನಾನು ಕತೆಯ ಘಟನೆಗಳನ್ನು ಹುಡುಕುತ್ತಾ ಹೋಗುತ್ತೇನೆ. ನನಗೆ ಘಟನೆಗಳು ಮುಖ್ಯವಾಗುವುದಿಲ್ಲ. ಪಾತ್ರಗಳು ಮುಖ್ಯ. ಘಟನೆ, ದುರಂತಕ್ಕೆ ಮುಖಮಾಡಿ ನಿಂತ ಪಾತ್ರಗಳಿಗೆ ಒಂದು ನಿಮಿತ್ತ ಮಾತ್ರ. ನನ್ನ ಕತೆಗಳು ಆ ಪಾತ್ರಗಳ ಸುತ್ತ ಘಟಿಸಬೇಕು. ಅಂದರೆ ಅಲ್ಲಿ ಬರುವ ಘಟನೆಗಳು ಪಾತ್ರಗಳಿಂದ ಹುಟ್ಟಿಕೊಂಡಿದ್ದಾಗಿರಬೇಕೇ ಹೊರತು ಘಟನೆಗಳಿಂದ ಪಾತ್ರಗಳು ಹುಟ್ಟಿಕೊಂಡಿರಬಾರದು."

ಕುತೂಹಲಕರವೆಂದರೆ, ಇಕೊ ಎಂಬರ್ಟೊ ಎಂಬ ಪ್ರಖ್ಯಾತ ಇಟಾಲಿಯನ್ ಕಾದಂಬರಿಕಾರನೂ ತಾನು ಒಂದು ವಸ್ತು ಹೊಳೆದ ಬಳಿಕ ಕಾದಂಬರಿ ಬರೆಯುವ ಮುನ್ನ ಹೇಗೆಲ್ಲ ತಯಾರಾಗುತ್ತೇನೆಂಬ ಬಗ್ಗೆ ಬರೆದಿರುವ ಮಾತುಗಳು (Confessions of a Young Novelist) ಸುರೇಂದ್ರನಾಥರ ಮಾತುಗಳಲ್ಲಿ ಪ್ರತಿಧ್ವನಿಸುವುದು! ಈತ ತಾನು ಚಿತ್ರಿಸಲಿರುವ ಊರು, ಕಟ್ಟಡ, ಹಡಗು ಎಲ್ಲವನ್ನೂ ಸ್ವತಃ ಹುಡುಕಿಕೊಂಡು ಹೋಗಿ ನೋಡಿಬರುವುದು ಮಾತ್ರವಲ್ಲ, ಹಗಲು ಮತ್ತು ರಾತ್ರಿಯ ಬೇರೆ ಬೇರೆ ಜಾವದಲ್ಲಿ ಆ ವಾತಾವರಣ, ಆಗಸ ಹೇಗೆಲ್ಲ ಬದಲಾಗುತ್ತಿರುತ್ತದೆ ಎಂಬುದನ್ನು ಕೂಡ ಅಭ್ಯಸಿಸುತ್ತಾನೆ. ಕಾಲ್ಪನಿಕ ಊರುಕೇರಿಯಾದಲ್ಲಿ ಅದರ ನಕ್ಷೆ ಸಿದ್ಧಪಡಿಸುತ್ತಾನೆ. ಪಾತ್ರಗಳ ಚಿತ್ರವನ್ನು ಬಿಡಿಸಿ ವಿವರಗಳನ್ನು ದೃಢಪಡಿಸಿಕೊಳ್ಳುತ್ತಾನೆ. ಒಟ್ಟು ತನ್ನ ಕಾದಂಬರಿಯ ಪಾತ್ರ, ವಾತಾವರಣ, ಚರಿತ್ರೆ, ಕಾಲಾನುಕ್ರಮದ ರಾಜಕೀಯ, ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಜನರಾಡುವ ಭಾಷೆ (ಇಕೊ ಎಂಬರ್ಟೊ ಬರೆದ ಕಾದಂಬರಿಗಳು ಹೆಚ್ಚಾಗಿ ಮಧ್ಯಯುಗೀನ ಕಾಲವನ್ನೇ ಕೇಂದ್ರೀಕರಿಸಿರುವುದು ಉಲ್ಲೇಖನೀಯ) - ಹೀಗೆ ಎಲ್ಲವೂ ಆತನಿಗೆ ಆವಾಹನೆಯಾಗಬೇಕು! ಆನಂತರವೇ ಬರವಣಿಗೆ ಸುರು.

ಸುರೇಂದ್ರನಾಥ್ ಹೇಳುತ್ತಾರೆ, "ವ್ಯಂಗ್ಯ ನನ್ನ ಕತೆಗಳ ಸ್ಥಾಯೀಭಾವ. ಬಹುಶಃ ಘಟನೆಗಳನ್ನು, ಕಥಾನಕವನ್ನು ನೇರವಾಗಿ ನೋಡುವುದು ನನ್ನಿಂದ ಆಗದ ಮಾತು.....ಕೇವಲ ವ್ಯಂಗ್ಯದಲ್ಲಿ ಉಡಾಫೆ ಮಾಡುವುದು ನನ್ನ ಪ್ರಯತ್ನವಲ್ಲ. ಅದರ ಹಿಂದೆ ಒಂದು ಅವ್ಯಕ್ತ ನೋವಿನ ಅರಿವುಂಟು ಮಾಡುವುದು ನನ್ನ ಉದ್ದೇಶ." ಇದನ್ನು ನಾವು ನಿಜಕ್ಕೂ ಗಂಭೀರವಾಗಿ ಪರಿಗಣಿಸಿ ಅರ್ಥಮಾಡಿಕೊಳ್ಳಬೇಕು.

ದಾಸ್ತಾವಸ್ಕಿ(1821-1881) ಯ ನೋಟ್ಸ್ ಫ್ರಂ ದಿ ಅಂಡರ್‌ಗ್ರೌಂಡ್ ಮತ್ತು ಅನೇಕ ನೀಳ್ಗತೆಗಳು, ನಿಕೊಲಾಯ್ ಗೊಗೊಲ್ಸ್‌(1809-1852)ನ ಓವರ್ ಕೋಟ್ ಅಥವಾ ಮೂಗು, ಟಾಲ್‌ಸ್ಟಾಯ್(1828-1910) ಬರೆದ ಇವಾನ್ ಇಲಿಚ್ಯನ ಸಾವು ಸಹಿತ ಇತರ ಹಲವಾರು ಕತೆಗಳಲ್ಲಿ ಗಮನಿಸಬಹುದಾದ ಅಂಶವಿದು. ಇಲ್ಲಿನ ನಾಯಕ ಯಾವುಯಾವುದೋ ಕಾರಣಗಳಿಂದ ಒಟ್ಟಾರೆ ದೈನೇಸಿಯಾಗಿದ್ದಾನೆ ಅಥವಾ ಅವನೊಬ್ಬ ಪೆದ್ದ, ಜನರ ಗೇಲಿಗೆ ಸುಲಭವಾಗಿ ಪಕ್ಕಾಗುವ ವ್ಯಕ್ತಿ. ನಾಗರಿಕ ಜಾಯಮಾನದ ನಯ-ನಾಜೂಕು ನಾಟಕಗಳು ಅವನಿಗಿನ್ನೂ ಒಗ್ಗಿಲ್ಲ. ಅವನಲ್ಲಿ ಪಾಪಪ್ರಜ್ಞೆ ತುಸು ಹೆಚ್ಚೇ ಇದೆ. ಇದರಿಂದ ಆಗಾಗ ನಾಗರಿಕ ಸಮಾಜದ ನಿಷ್ಠುರ-ಕಟ್ಟಳೆಗೆ ಒಗ್ಗಿಕೊಳ್ಳಲಾರದೆ ಅವನೊಬ್ಬ ‘ಅನ್-ಫಿಟ್ ಎನಿಮಲ್’ ಆಗುತ್ತಿರುತ್ತಾನೆ. ಇಂಥ ಪಾತ್ರಗಳೇ ಪ್ರಧಾನ ಭೂಮಿಕೆಯಲ್ಲಿದ್ದ ನಾಟಕಗಳನ್ನು ಬರೆದ ಮೋಲಿಯೇರ್(1622-1673) (ಈತನ ಹಲವಾರು ನಾಟಕಗಳಲ್ಲಿ ಜನಪ್ರಿಯವಾದ ಮಾಮಾಮೋಶಿ ಇಲ್ಲಿ ಉಲ್ಲೇಖನೀಯ) ಕೂಡ ಇಲ್ಲಿ ಗಮನಾರ್ಹ. ದೇಶ ಮತ್ತು ಕಾಲಮಾನದ ದೃಷ್ಟಿಯಿಂದ ಕೊಂಚ ಈಚಿನವನು ಎಂಬುದನ್ನು ಬಿಟ್ಟರೆ ಸಿಂಗರ್ (1902-1991) ನ ಗಿಂಪೆಲ್ ದ ಫೂಲ್ ಕೂಡ ಇದೇ ಸಾಲಿಗೆ ಸೇರುವ ಕತೆ. ಆ ಕಾಲದಲ್ಲಿ ಬಿಡಿ, ಇವತ್ತಿಗೂ ಇಂಥ ಪಾತ್ರಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಲೇ ಇವೆ. ಕನ್ನಡದಲ್ಲಿ ನವ್ಯ ಮತ್ತು ನವ್ಯೋತ್ತರ ಸಾಹಿತ್ಯದಲ್ಲಿ ಅಪವಾದವೇ ಇಲ್ಲವೆಂಬ ಮಟ್ಟಿಗೆ ಬಹುತೇಕ ಎಲ್ಲಾ ಕತೆಗಾರರೂ ಇಂಥ ಒಂದಾದರೂ ಪಾತ್ರವನ್ನು ಸೃಷ್ಟಿಸಿದ್ದಾರೆ. ಸುರೇಂದ್ರನಾಥರು ತಮ್ಮ ಬಹುತೇಕ ಎಲ್ಲಾ ಕತೆಗಳಲ್ಲೂ ಇಂಥ ಪಾತ್ರವನ್ನು ಸೃಷ್ಟಿಸಿದ್ದಾರೆ. ಹಾಗಾಗಿ ಅವರು ಎಲ್ಲರಿಗಿಂತ ಒಂದು ಮಜಲು ಮುಂದಿದ್ದಾರೆಂದರೆ ತಪ್ಪಲ್ಲ. ಪಾಶ್ಚಾತ್ಯ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಈ ಪಾತ್ರಗಳನ್ನು ಕ್ರಿಶ್ಚಿಯನ್ ಪರಂಪರೆಯಲ್ಲಿ ಕಂಡುಕೊಂಡು ಕ್ರಿಸ್ತನೊಂದಿಗೆ ಸಮೀಕರಿಸುವುದೂ ಇದೆ. McCullers Carson (1917-1967)ಳ The Heart is a Lonely Hunter ಕಾದಂಬರಿಯ ನಾಯಕನನ್ನು, J M Coetzeeಯ The Childhood of Jesus, The Life and Time of Michael K ಮೊದಲಾದ ಕಾದಂಬರಿಗಳ ಪಾತ್ರಗಳನ್ನು ಕೂಡ ಹೀಗೆ ಕ್ರಿಸ್ತನಿಗೆ ಹೋಲಿಸಲಾಗಿದೆ. ನಾಗರಿಕತೆಯನ್ನು, ಆಡಳಿತಶಾಹಿಯನ್ನು, ಅವುಗಳ ಅಮಾನವೀಯ ನಡೆಯನ್ನು ಗೇಲಿ ಮಾಡುವ ಈ ಪಾತ್ರಗಳು ಉದಾತ್ತವಾದ ಮಾನವ ಸಹೋದರತೆಯ ಸಾಂಕೇತಿಕ ಪ್ರತಿಮೆಗಳೆಂದೂ ಪರಿಗಣಿಸಲ್ಪಟ್ಟಿರುವುದಿದೆ.

ಯಾವನೇ ಒಬ್ಬ VIPಯನ್ನು ಕೇವಲ ಮನುಷ್ಯನನ್ನಾಗಿ ಪರಿವರ್ತಿಸಿಬಿಡಲು ಸಾಧ್ಯವಿರುವುದು ಎರಡೇ ಎರಡು ಸಂಗತಿಗಳಿಗೆ. ಒಂದು ಈ ವ್ಯಂಗ್ಯಕ್ಕೆ, ಇನ್ನೊಂದು ಚಿತೆಯ ಬೆಂಕಿಗೆ. ಎಲ್ಲ ಹೀರೋಯಿಸಂ ಇಲ್ಲಿ ಶೂನ್ಯಕ್ಕಿಳಿದು ಬಿಡಬಲ್ಲದು. ಅದೇ ಕಾಲಕ್ಕೆ, ನೀವು ಯಾವನೇ ಹೊಸ ಹೀರೋನನ್ನು ಬೇಕೆಂದರೂ ಸೃಷ್ಟಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿರುತ್ತೀರಿ. ತೇಜಸ್ವಿಯವರ ನಿರೂಪಣಾ ವಿಧಾನದಲ್ಲಿ ಈ ಸಮಸ್ಯೆಯಿತ್ತು. ಸ್ವತಃ ತೇಜಸ್ವಿಯವರಿಗೇ ತೀರಾ ಭಾವನಾತ್ಮಕವಾದ, ತೀವ್ರ ಸಂವೇದನೆಯ ಒಂದು ಘಟ್ಟವನ್ನು ತಮ್ಮ ನಿರೂಪಣಾ ಕ್ರಮದಲ್ಲಿ ತರಲು ಸಾಧ್ಯವಾದೀತೇ ಇಲ್ಲವೆ ಎಂಬ ಬಗ್ಗೆ ಅನುಮಾನಗಳಿದ್ದವಂತೆ. ಇವತ್ತಿಗೂ ಹಲವರಿಗೆ ಅಂಥ ಅನುಮಾನಗಳಿವೆ. ಎಸ್.ಸುರೇಂದ್ರನಾಥ್ ಅದನ್ನು ಹೇಗೆ ನಿಭಾಯಿಸುತ್ತಾರೆಂಬುದನ್ನು ಗಮನಿಸುವುದೇ ಕುತೂಹಲಕರ.

[ಆಸಕ್ತರು ಗಮನಿಸಿ: ಓವರ್‌ಕೋಟ್ ಕತೆಯನ್ನು ಖ್ಯಾತ ವಿಮರ್ಶಕ ಟಿ.ಪಿ.ಅಶೋಕ್ ಕನ್ನಡಕ್ಕೆ ಅನುವಾದಿಸಿದ್ದಾರೆ (ಅಕ್ಷರ ಪ್ರಕಾಶನ). ಗಾರ್ಕಿಯ ಆತ್ಮಕತೆಯ ಮೂರು ಭಾಗಗಳಾದ ನನ್ನ ಬಾಲ್ಯ, ನನ್ನ ವಿಶ್ವವಿದ್ಯಾಲಯಗಳು, ಜನರ ನಡುವೆ, ಇವಾನ್ ತುರ್ಗನೇವ್ ಅವರ ತಂದೆಯರೂ ಮಕ್ಕಳೂ ಮತ್ತು ದಾಸ್ತಾವಸ್ಕಿಯ ನೀಳ್ಗತೆಗಳನ್ನು ನೇರವಾಗಿ ರಷಿಯನ್ ಭಾಷೆಯಿಂದ ಕನ್ನಡಕ್ಕೆ ತಂದ ಕೆ.ಎಲ್.ಗೋಪಾಲಕೃಷ್ಣ ರಾವ್ ಕೂಡ ತಮ್ಮ ಅಚ್ಚುಮೆಚ್ಚಿನ ಈ ನೀಳ್ಗತೆಯನ್ನು ಕನ್ನಡಕ್ಕೆ ಅನುವಾದಿಸುತ್ತಿರುವುದಾಗಿ ಹೇಳಿದ್ದು ಪ್ರಜಾವಾಣಿಯ ಸಾಹಿತ್ಯ ಪುರವಣಿಯಲ್ಲಿ (02-10-2011) ಪ್ರಕಟವಾಗಿತ್ತು. ಈ ಕತೆ ಇಂದಿಗೂ ಜಗತ್ತಿನ ನೂರು ಶ್ರೇಷ್ಠ ಕತೆಗಳಲ್ಲಿ ಸ್ಥಾನ ಪಡೆಯುವ ಕಸುವುಳ್ಳ ಕತೆ. ಹಲವರ ಕೈಯಲ್ಲಿ ನಾಟಕವಾಗಿಯೂ ಪ್ರಖ್ಯಾತ. ಈ ಕತೆಯ ಬಗ್ಗೆ ಈ ತನಕ ಬಂದಿರುವ ವಿಮರ್ಶೆ, ಪರಾಮರ್ಶನಗಳಂತೂ ಅಸಂಖ್ಯಾತ. ಎಸ್.ಸುರೇಂದ್ರನಾಥರ ಸಂಕಲನದ ಮೂರು ಕತೆಗಳಲ್ಲಿ ಒಂದು ಈ ಕತೆಯಿಂದ ಪ್ರೇರಿತ ಎಂಬುದು ಇಷ್ಟೆಲ್ಲ ವಿವರಣೆಗಳಿಗೆ ಒಂದು ಕಾರಣವಾದರೆ ಸುರೇಂದ್ರನಾಥರ ಒಟ್ಟು ಕಥಾಸಾಹಿತ್ಯದ ಮೂಲಸೆಲೆಗಳನ್ನು ಗುರುತಿಸುವುದಕ್ಕೆ ಕೂಡ ಈ ಕತೆ ಸೂಕ್ತವಾಗಿದೆ ಎಂಬುದು ಇನ್ನೊಂದು ಕಾರಣ. ಮೂಗು ಕತೆಯನ್ನು ಖ್ಯಾತ ವಿಮರ್ಶಕ ಬಿ.ಜನಾರ್ದನ ಭಟ್ ಕನ್ನಡಕ್ಕೆ ಅನುವಾದಿಸಿ ಪುಸ್ತಕ ರೂಪದಲ್ಲಿಯೂ ಪ್ರಕಟಿಸಿದ್ದಾರೆ. ಸಿಂಗರನ ಮಳ್ಳ ಗಿಂಪೆಲ್ ಕತೆಯನ್ನು ಜಯಂತ ಕಾಯ್ಕಿಣಿ ಮತ್ತು ವಿವೇಕ್ ಶಾನಭಾಗ ಜಂಟಿಯಾಗಿ ಅನುವಾದಿಸಿ ದೇಶಕಾಲ(ಸಂಚಿಕೆ 12,ಜನವರಿ-ಮಾರ್ಚ್ 2008) ದಲ್ಲಿ ಪ್ರಕಟಿಸಿದ್ದರು. ಮೋಲಿಯರ್‌ನ ಮಾಮಾಮೋಶಿ ನಾಟಕವನ್ನು ಕೆ.ವಿ.ಸುಬ್ಬಣ್ಣ ಕನ್ನಡಕ್ಕೆ ತಂದಿದ್ದು ಅದನ್ನು ಅಕ್ಷರ ಪ್ರಕಾಶನ ಪ್ರಕಟಿಸಿದೆ.]

ಸುರೇಂದ್ರನಾಥರ ವ್ಯಂಗ್ಯದಲ್ಲಿ ಕೆಲವು ಗಮನಾರ್ಹ ಅಂಶಗಳನ್ನು ಅವರು ದುಡಿಸಿಕೊಳ್ಳುವುದನ್ನು ಗಮನಿಸಲೇ ಬೇಕು. ಈ ವ್ಯಂಗ್ಯ ಪಾತ್ರದ ಆಂಗಿಕ ಚಲನೆಯ ವಿವರಗಳಲ್ಲಿ, ಆತನ ಕೊಳಕುತನದಲ್ಲಿ, ನಡಿಗೆಯ ವಿಕಾರದಲ್ಲಿ, ಒಟ್ಟಾರೆ ಮುಖದರ್ಶನ ಥಟ್ಟನೇ ಎದುರಾದ ವ್ಯಕ್ತಿಗೆ ನೀಡುವ ಒಂದು ಮುದ್ರೆ ಏನಿದೆ, ಅಂಥ ಸಂವೇದನೆಗೆ ಕಾರಣವಾಗುವುದಕ್ಕೆ ಏನೇನು ಬೇಕೋ ಅದೆಲ್ಲವೂ ಇರಬೇಕೆಂಬ ನೆಲೆಯ ವಿವರಗಳಾಗಿ ಇವು ಹೊರಹೊಮ್ಮುತ್ತದೆ ಎನ್ನುವುದು ಬಹಳ ಮುಖ್ಯ. ಒಂದು ಪಾತ್ರವನ್ನು ಅದು ನೋಡಲು ಹೇಗಿದೆ, ಅದರ ಅಲಂಕಾರ, ಬಟ್ಟೆಬರೆ, ನಡೆ-ನುಡಿ, ದೇಹದ ಸ್ವರೂಪ - ಇವುಗಳಲ್ಲಿ ಹೊರಹೊಮ್ಮುವ ವ್ಯಂಗ್ಯದಿಂದಲೇ ಆ ಪಾತ್ರವನ್ನು ಅವರು ಓದುಗರ ಮನಸ್ಸಿನಲ್ಲಿ ಕೆತ್ತಿ ನಿಲ್ಲಿಸುತ್ತಾರೆ. ಹಾಗಾಗಿ, ಇದು ಪಾತ್ರದ ಲೇವಡಿಯಲ್ಲ, ತಾನು ನೀಡುವ ವಿವರದಲ್ಲಿಯೇ ನಿರೂಪಕ ನೀಡುವ ಮನೋರಂಜನೆ, ಸ್ಥೂಲವಾಗಿ ಪನ್ ಮಾದರಿಯದ್ದು.

ಎರಡನೆಯದು ಆ ಪಾತ್ರದ ಸಣ್ಣತನ, ಮೂರ್ಖತನ, ಮುಗ್ಧತೆಯ ಪರಾಕಾಷ್ಠೆಯನ್ನು ತೋರಿಸುವಲ್ಲಿರುವ ವ್ಯಂಗ್ಯ. ಇದು ಕೊಂಚ ಹರಿತವಾದದ್ದು, ಮೊದಲನೆಯದ್ದರಷ್ಟು ನಿಷ್ಪಾಪಿಯಲ್ಲ. ನಾತಲೀಲೆಯಿರಬಹುದು, ಗುಪ್ತಸಮಾಲೋಚನೆ ಇರಬಹುದು, ಕುರುವಿನ ಗುಲಾಮ ಇರಬಹುದು, ಅಲ್ಲಿ ಆ ಪಾತ್ರ ನಮ್ಮೆದುರು ಬೆತ್ತಲೆಯಾಗಿ ಬಿಡುತ್ತದೆ ಮತ್ತು ಏಕಕಾಲಕ್ಕೆ ಬದುಕಿನ ನಗ್ನವಾಸ್ತವವನ್ನೂ ಅದರ ಕಟುವ್ಯಂಗ್ಯವನ್ನೂ ಒಟ್ಟೊಟ್ಟಿಗೇ ಕಾಣಿಸುತ್ತ ಒಂದು ದರ್ಶನವಾಗುವ ಗಾಂಭೀರ್ಯವನ್ನೂ ಇದು ಹೊಂದಿರುತ್ತದೆ. ಹಾಗಾಗಿ ಸುರೇಂದ್ರನಾಥ್ ತಮಗೆ ಕಥಾನಕವನ್ನು ನೇರವಾಗಿ ನೋಡಲು ಸಾಧ್ಯವಿಲ್ಲ ಎನ್ನುತ್ತಲೇ ಅದನ್ನು ವಕ್ರವಾಗಿ ನೋಡುವುದರಿಂದಷ್ಟೇ ಲಭ್ಯವಾಗಬಹುದಾದ ಒಂದು ನೋಟವನ್ನೂ, ದರ್ಶನವನ್ನೂ ನಮಗೆ ದಕ್ಕಿಸುತ್ತಿದ್ದಾರೆ. ಇದು ಅಪ್ರಜ್ಞಾಪೂರ್ವಕವಾಗಿ ಜರುಗುತ್ತಿಲ್ಲ. ಒಬ್ಬ ಸಮರ್ಥ ನಾಟಕಕಾರರಾದ ಸುರೇಂದ್ರನಾಥ್ ಇದನ್ನು ಸಶಕ್ತ ತಂತ್ರವಾಗಿ, ಪ್ರಜ್ಞಾಪೂರ್ವಕವಾಗಿ ದುಡಿಸಿಕೊಳ್ಳುತ್ತ ಬಂದಿದ್ದಾರೆ ಮತ್ತು ಅದರಲ್ಲಿ ಅಪೂರ್ವ ಯಶಸ್ಸನ್ನೂ ಪಡೆದಿದ್ದಾರೆ.

ವ್ಯಕ್ತವಾದದ್ದು ವ್ಯಕ್ತಿ. ಅವ್ಯಕ್ತವೆಲ್ಲವೂ ghost, ಭೂತ. ವ್ಯಕ್ತಿಯೊಂದು ವ್ಯಕ್ತವಾಗುವುದು ತನ್ನ ಮಾತು, ಹಾವ-ಭಾವ, ನಡಿಗೆ, ನಗು, ಉಡಿಗೆ-ತೊಡಿಗೆ ಇತ್ಯಾದಿ ಪ್ರದರ್ಶನಕ್ಕೆ ಸಾಧ್ಯವಿರುವ ಚರ್ಯೆ ಚಾಪಲ್ಯಗಳಿಂದಲೇ. ಪ್ರದರ್ಶನ ಎಂಬಲ್ಲೇ ಒಂದು ನಾಟಕೀಯತೆಯೂ ಇರುವುದನ್ನು ಗಮನಿಸಿ. ಪ್ರದರ್ಶಿಸುತ್ತಿರುವುದೆಲ್ಲ ಒಂದು ಬಗೆಯ ನಾಟಕವೇ. ನಮಗೆಲ್ಲರಿಗೂ ನಮ್ಮ ಒಳ್ಳೆಯ ಅಥವಾ ಸಮಾಜ ಸ್ವೀಕರಿಸುವಂಥ ಭಾಗವನ್ನಷ್ಟೇ ಪ್ರದರ್ಶಿಸಲು ಇಷ್ಟ. ಅದಕ್ಕೆ ಒಗ್ಗದ ಎಲ್ಲವನ್ನೂ ನಾವು ಅಡಗಿಸಲು ಬಯಸುತ್ತೇವೆ. ಇದು ಸಾಮಾನ್ಯ ತತ್ವ. ನಾಟಕ ಪ್ರದರ್ಶನದಲ್ಲಿ ಏನಾಗುತ್ತದೆಂದರೆ, ಈ ಅಡಗಿಸಲು ಬಯಸುವ ಅಂಶಗಳನ್ನೇ ಎತ್ತಿ ತೋರಿಸಿ (ಅದಕ್ಕಾಗಿ ವ್ಯಂಗ್ಯ, ತಮಾಷೆ ಮುಂತಾದ ತಂತ್ರಗಳನ್ನು ಬಳಸಿ) ಮನುಷ್ಯನ (ಅಂದರೆ ನನ್ನ) hidden ವ್ಯಕ್ತಿತ್ವವನ್ನು ಬೆಳಕಿಗೆ ಹಿಡಿದು ತೋರಿಸಲಾಗುತ್ತದೆ. ನನ್ನದೇ ಎಂದು ನನಗೆ ಗೊತ್ತಿದ್ದರೂ ನಾನದನ್ನು ಯಾರದ್ದೋ ಎಂಬಂತೆ ನೋಡಿ ನಕ್ಕು ಮುಗಿಸುತ್ತ ಅಂತರಂಗದ ತಲ್ಲಣಗಳಿಗೆ ಸಾಕ್ಷಿಯಾಗುತ್ತಿರುತ್ತೇನೆ. ಇದು ನಾಟಕದ ಅದ್ಭುತ ಸಾಧ್ಯತೆ. ಇದಕ್ಕಾಗಿ ನಮಗೆ ನಾಟಕ ಬೇಕು.

ಕೆಲಕಾಲದ ಹಿಂದೆ ನನ್ನೊಬ್ಬ ಸ್ನೇಹಿತರು ನನ್ನ ಬಳಿ ನಾಟಕ ಯಾಕೆ ನೋಡಬೇಕು ಎಂಬ ಗಂಭೀರ ಪ್ರಶ್ನೆಯನ್ನೆಸೆದು ಕೂತರು. ನಾವೆಲ್ಲ ಒಂದು ನಾಟಕಕ್ಕೆ ಹೊರಟಿದ್ದೆವು. ದಾರಿಯಲ್ಲಿ ನಾಟಕ ನೋಡುವುದು ಎಂಬ ಒಂದು ಕ್ರಿಯೆಯೇ ವಿಚಿತ್ರವಾದದ್ದು, ತನಗದು ಯಾಕೆ ಅಗತ್ಯ ಎಂದು ಈಗಲೂ ಅರ್ಥವಾಗಿಲ್ಲ ಎಂದುಬಿಟ್ಟರು. ತುಂಬ ಹಿಂದೆ ನಾನು ಕಾಲೇಜಿನಲ್ಲಿದ್ದಾಗ ಅದೃಷ್ಟವಶಾತ್ ನೀನಾಸಂ ಒಡನಾಡಿ ಕೆ.ಜಿ.ನಾರಾಯಣ್ ನನಗೆ ಕನ್ನಡ ಪ್ರಾಧ್ಯಾಪಕರಾಗಿದ್ದರು. ಅವರು ಆಗಾಗಲೇ ಉಡುಪಿಯ ರಥಬೀದಿ ಗೆಳೆಯರು ವೇದಿಕೆಯಲ್ಲಿ ಹಲವಾರು ನಾಟಕಗಳನ್ನಾಡಿಸಿ ಖ್ಯಾತರಾಗಿದ್ದರು. ಅವರ ಮೀಡಿಯಾ ಎಂಬ ಒಂದು ನಾಟಕದಲ್ಲಿ ಒಬ್ಬ ದುರಾಸೆಯ ದೊರೆ ವೇದಿಕೆಗೆ ಬರುತ್ತ, ಹೋಗುತ್ತ ವಿಪರೀತ ಅಳತೆಯ ದಾಪುಗಾಲುಗಳನ್ನಿಕ್ಕುತ್ತ ನಡೆಯುತ್ತಾನೆ. ಇದು ರಂಗಚಲನೆಗೆ ಸಂಬಂಧಿಸಿದ ಒಂದು ಭಾಷೆ. ನಾವು ಯಾರೂ ನಿಜ ಜೀವನದಲ್ಲಿ ಹಾಗೆ ನಡೆಯುವುದಿಲ್ಲ. ಆದರೆ ಆ ನಡಿಗೆ ಒಂದೂ ಮಾತಿಲ್ಲದೆ ಆ ರಾಜನ ವ್ಯಕ್ತಿತ್ವವನ್ನು ಚಿತ್ರಿಸಿಬಿಟ್ಟಿತ್ತು. ಇದೇ ರೀತಿ ನೀನಾಸಂನವರು ಮಿಸ್ ಸದಾರಮೆ ನಾಟಕದ ಸೆಟ್ಟಿಯ ಹಿಂಭಾಗಕ್ಕೆ ಬಟ್ಟೆಸುತ್ತಿ ವಿಪರೀತ ಬಾತುಕೊಂಡಂಥ ಅಂಡುಗಳನ್ನು ಹೊರಿಸಿ ಅವನ ವಿಚಿತ್ರ ನಡಿಗೆಯನ್ನು ಕಲ್ಪಿಸಿದ್ದು, ತಲೆದಂಡ ನಾಟಕದಲ್ಲಿ ಬಿಜ್ಜಳ ತನ್ನ ಬಂಟನ ಅಂಡಿಗೆ ಒದ್ದರೆ ನೀನು ರಾಜನಾಗಲು ಯೋಗ್ಯ ಎಂಬ ಪಂದ್ಯಕಟ್ಟುವುದು ಇತ್ಯಾದಿ. ಇಲ್ಲೇನಾಗುತ್ತದೆ ಎಂದರೆ, ಈ ರಂಗಚಲನೆ ಅಥವಾ ರಂಗಕ್ರಿಯೆ ನಾಟಕೀಯ ನೆಲೆಯದ್ದು, ವಾಸ್ತವದ್ದಲ್ಲ. ಪ್ರೇಕ್ಷಕ ಕೂಡ ತಾನು ನೋಡುತ್ತಿರುವುದು ನಾಟಕ ಎಂಬ ಅರಿವನ್ನು ಒಂದು ಕ್ಷಣ ಕೂಡ ಕಳೆದುಕೊಳ್ಳುವುದಿಲ್ಲ. ಆದರೂ ವಾಸ್ತವದ ಒಂದು ಸಂವೇದನೆಯನ್ನು ನಾಟಕೀಯ ಅತಿರೇಕದಲ್ಲಿ ‘ಕಾಣಿಸು’ಸುವುದರ ಮೂಲಕ ಅವನ ಸಂವೇದನೆಯನ್ನೂ ಗ್ರಹಿಕೆಯನ್ನೂ ಒಂದು ಮೇಲ್‌ಸ್ತರಕ್ಕೊಯ್ದು ಸಾಧಿಸುವ ಸಂವಹನ ಇದೆಯಲ್ಲ, ಇದು ನಾಟಕದ್ದು ಮತ್ತು ಕೇವಲ ನಾಟಕದ್ದು. ಸಂಭಾಷಣೆಯಲ್ಲಿ, ರಂಗಚಲನೆಯಲ್ಲಿ, ಧ್ವನಿಯಲ್ಲಿ ಹೀಗೆ ವಿವಿಧ ಸ್ತರಗಳಲ್ಲಿ, ವಿಭಿನ್ನ ರಂಗತಂತ್ರಗಳ ಮೂಲಕ ಇದನ್ನು ನಿರ್ದೇಶಕ ಸಾಧಿಸುತ್ತಾನೆ ಮತ್ತು ತನ್ಮೂಲಕ ರಂಜಿಸುತ್ತಲೇ ಪ್ರೇಕ್ಷಕನನ್ನು ಅರಿವಿನತ್ತ ಕೊಂಡೊಯ್ಯುತ್ತಾನೆ. ಪ್ರೇಕ್ಷಕನಿಗೆ ರಂಗಮಂಚವೊಂದು ಕನ್ನಡಿಯಾಗಿ ಅವನನ್ನೇ ಅವನ ನಡೆನುಡಿಯ ಅತಿರೇಕದಲ್ಲಿರಿಸಿ ಅವನಿಗೇ ಅವನ ಸತ್ಯ ಕಾಣಿಸುತ್ತದೆ. ಸುರೇಂದ್ರನಾಥ್ ತಮ್ಮ ಕತೆಗಳಲ್ಲಿ ಸಶಕ್ತವಾಗಿ ದುಡಿಸಿಕೊಂಡಿರುವ ಈ ಒಂದು ತಂತ್ರ ಅವರಿಗೆ ನಾಟಕದ ಅನುಭವದಿಂದ ದಕ್ಕಿದ್ದು. ಇದಕ್ಕಾಗಿ ವ್ಯಂಗ್ಯವನ್ನು ಸುರೇಂದ್ರನಾಥ್ ದುಡಿಸಿಕೊಳ್ಳುತ್ತಾರೆ, ಇದಕ್ಕಾಗಿ ಅವರಿಗೆ ಕಥಾನಕವನ್ನು ವ್ಯಂಗ್ಯವಿಲ್ಲದೇ ಕಾಣುವುದು ಅಸಾಧ್ಯವೆನಿಸುತ್ತದೆ. ಆದರೆ ಎಲ್ಲಾ ನಾಟಕಕಾರರಿಗೆ ಇದು ಸಾಧ್ಯವಾಗಲಿಲ್ಲ ಎಂಬುದೇ ಅವರ ಹೆಚ್ಚುಗಾರಿಕೆ. ಹಾಗೆಯೇ, ಬಾಗಲೋಡಿ ದೇವರಾಯರು ಮತ್ತು ಎಂ.ಎಸ್.ಕೆ.ಪ್ರಭು ಅವರ ಕತೆಗಳಲ್ಲಿ ಬರುವ ವ್ಯಂಗ್ಯವನ್ನು ಸುರೇಂದ್ರನಾಥ್ ಅವರ ಕತೆಗಳ ವ್ಯಂಗ್ಯದೊಂದಿಗೆ ತುಲನಾತ್ಮಕವಾಗಿಯೂ ನೋಡಿ ಇದನ್ನು ಸ್ಪಷ್ಟಗೊಳಿಸಿಕೊಳ್ಳಬಹುದು.

"ನನ್ನ ಕಾಲೇಜು ಮತ್ತು ನಂತರದ ದಿನಗಳ ಬಡತನ ಜಗತ್ತನ್ನು, ಜೀವನವನ್ನು ವ್ಯಂಗ್ಯದಿಂದ ನೋಡುವ ಧೈರ್ಯ ಕೊಟ್ಟಿರಬೇಕು ನನಗೆ. ಮಧ್ಯಮವರ್ಗದ ಬ್ರಾಹ್ಮಣ ಸಂಸಾರದ ಬಡತನ ಸಹ್ಯವಾಗುವುದು ಜೀವನವನ್ನು ವ್ಯಂಗ್ಯದಿಂದ ನೋಡಿ ನಕ್ಕಾಗ ಮಾತ್ರ........ನನ್ನ ಕತೆಗಳು ವ್ಯಂಗ್ಯದತ್ತ ಮುಖ ಮಾಡಿರಬಹುದು, ಆದರೆ ನನ್ನ ಪಾತ್ರಗಳಲ್ಲ." ಎನ್ನುತ್ತಾರೆ ಸುರೇಂದ್ರನಾಥ್. ಈ ಪಾತ್ರಗಳನ್ನು ಅವರೆಷ್ಟು ಪ್ರೀತಿಸುತ್ತಾರೆ, ಗೌರವದಿಂದ ಕಾಣುತ್ತಾರೆ ಮತ್ತು ಕಕ್ಕುಲಾತಿಯಿಂದ ಚಿತ್ರಿಸುತ್ತಾರೆ ಎನ್ನುವುದನ್ನು ಈ ಮಾತುಗಳೇ ತಿಳಿಸುತ್ತಿವೆ. ಅವರ ನಿರೂಪಣೆಯಲ್ಲಿ ಪ್ರತಿ ಪದದಲ್ಲೂ ಇದೇ ಬಗೆಯ ನೇವರಿಕೆಯಿದೆ; ಪ್ರತಿ ಪಾತ್ರವೂ, ಪ್ರತಿ ವಿವರವೂ ಅಂಥ ಪ್ರೀತಿ ಪಡೆದು ಧನ್ಯವಾಗಿದೆ. ಸೂಕ್ಷ್ಮವಾಗಿ ನೋಡಿ ಅನುಭವಿಸಿದರೆ ಇದು ಯಾರಿಗಾದರೂ ತಿಳಿಯುತ್ತದೆ. ಈ ಕಾರಣಕ್ಕೆ ಇಷ್ಟವಾಗುವ ಕತೆಗಾರ ಎಸ್.ಸುರೇಂದ್ರನಾಥ್.

ಹಾಗೆ ನಾಟಕೀಯತೆಯಿಂದ, ವ್ಯಂಗ್ಯದಿಂದ ಸಾಕಷ್ಟು ಪಡೆದುಕೊಂಡು ಬರೆಯುವ ಸುರೇಂದ್ರನಾಥ್‌ಗೆ ಭಾಷೆ ಮತ್ತು ಭಾಷೆಯೊಂದೇ ಕೈಹಿಡಿದು ನಡೆಸುವ ಪರಿಕರವಾಗಿರುವ ಈ ಸಾಹಿತ್ಯದ ಮಾಧ್ಯಮದಲ್ಲಿ ಅಷ್ಟೇ ಸವಾಲುಗಳು ಸಹಜವಾಗಿಯೇ ಎದುರಾಗುತ್ತವೆ. ಉದಾಹರಣೆಗೆ ಇಲ್ಲಿ ಅವರು ರಂಗಚಲನೆಯಿಂದಲೋ, ಬೆಳಕಿನ ವಿನ್ಯಾಸದಿಂದಲೋ, ನಟನ ನಡಿಗೆ, ಹಾವ-ಭಾವದಿಂದಲೋ, ಧ್ವನಿಯಿಂದಲೋ, ಹಿನ್ನೆಲೆಯಾಗಿ ಒದಗಿಸಬಹುದಾದ ಸಂಗೀತದಿಂದಲೋ, ಹೊಗೆ ಹಾಕಿ, ಪಟಾಕಿ ಸಿಡಿಸಿ ಕೊಡಬಹುದಾದ ‘ಟಚ್’ನಿಂದಲೋ ಸಾಧಿಸುವುದೇನಿದ್ದರೂ ಅದನ್ನು ಭಾಷೆಯಲ್ಲೇ ಮಾಡಬೇಕಿದೆ! ನೋಟ, ಶಬ್ದ, ವಾಸನೆ - ಯಾವುದನ್ನೂ ಅವರು ರಂಗಭೂಮಿಯಲ್ಲಿ ಸೃಷ್ಟಿಸಿದಂತೆ ಭಾಷೆಯಲ್ಲಿ ಸೃಷ್ಟಿಸುವುದು ಸುಲಭವಲ್ಲ. ಆದರೆ ಸುರೇಂದ್ರನಾಥ್ ತಮ್ಮ ವಿಶಿಷ್ಟವಾದ ಭಾಷೆಯಿಂದ ಅದನ್ನು ಹೇಗೆಲ್ಲ ಮಾಡುತ್ತಾರೆಂಬುದೇ ಅವರ ಕತೆಗಳ ಯಶಸ್ಸಿನ ಗುಟ್ಟು. ಗಮನವಿಟ್ಟು ನೋಡಿದರೆ ಅವರ ಕತೆಯಲ್ಲಿ ಬೆಳಕಿನ ವಿನ್ಯಾಸದ ವಿವರಗಳನ್ನು ಕಾಣುತ್ತೀರಿ. ನಡಿಗೆ ಅಥವಾ ಕೈಕಾಲು ಆಡಿಸುವ ವಿಧಾನದ ಬಗ್ಗೆ ವಿವರಗಳು ಸಿಗುತ್ತವೆ. ಮೂಗಿನಿಂದ ಇಳಿಯುವ ಸಿಂಬಳ, ಜಾರುವ ಕಚ್ಚೆಪಂಚೆ, ಹೊರಚಾಚಿಕೊಳ್ಳುವ ಹೊಟ್ಟೆ ಎಲ್ಲವೂ ಇದೀಗ ಕಣ್ಣೆದುರು ನಿಂತಂತೆ ಅವರು ಚಿತ್ರಿಸಬಲ್ಲರು. ಇನ್ನು ಅವರ ನಾತಲೀಲೆ ಓದುತ್ತ ನೀವು ಮೂಗು ಮುಚ್ಚಿಕೊಳ್ಳುವ ಸಂದರ್ಭ ಒಂದಾದರೂ ಬರದಿರದು! ಕುರು ಒಡೆದು ಕೀವು ಈಚೆ ಬರುವಾಗ ಮುಖ ಕಿವುಚದೇ ಇರುವುದು ಕಷ್ಟವಾದೀತು! ಕುಂಡೆ ಆಡಿಸುತ್ತ ಗಂಡು-ಹೆಣ್ಣು ಪಾತ್ರಗಳ ವ್ಯತ್ಯಾಸವನ್ನು ಮನಗಾಣಿಸುವ ಮಾಸ್ತರರ ಒಂದು ಚಿತ್ರ ನಿಮ್ಮ ಕಣ್ಣೆದುರು ಮೂಡದೇ ಇರಲಾರದು! ಶನಿಕಾಟದ ಅಂಗಡಿಯ ಕತ್ತಲೆ ನಿಮ್ಮನ್ನು ಮುಗ್ಗರಿಸುವಂತೆ, ಕಣ್ಣು ಕತ್ತಲಿಟ್ಟಂತೆ ಮಾಡದಿರಲಾರದು! ಇದನ್ನೆಲ್ಲ ಸಾಧಿಸುವುದು ನಿಮ್ಮ ತುಟಿಗಳ ಮೇಲೊಂದು ಮಂದಹಾಸವನ್ನು ಉಳಿಸಿಕೊಂಡೇ ಎನ್ನುವುದನ್ನು ಕೂಡ ಗಮನಿಸಿ.

ಇಷ್ಟು ಹೇಳಿದ ಮೇಲೆ ಅವರು ಹೊರಿಸಿದ ‘ತಾಪತ್ರಯಗಳ’ ಬಗ್ಗೆ ಹೊಸದಾಗಿ ಹೇಳುವುದಕ್ಕೇನೂ ಇಲ್ಲ.

ಇಲ್ಲಿನ ಮೊದಲ ಕತೆ ಭಿತ್ತಿಯಿಲ್ಲದೇ ಬರೆಯಬಹುದೇ ಚಿತ್ತಾರವ. ಲಂಕೇಶರ ಮುಸ್ಸಂಜೆ ಕಥಾ ಪ್ರಸಂಗ ಕಾದಂಬರಿಯನ್ನು ಓದಿದ್ದರೆ ಅಥವಾ ಕವಿತಾ ಲಂಕೇಶ್ ನಿರ್ದೇಶನದ ಅಕ್ಕ ಸಿನಿಮಾವನ್ನು ನೋಡಿದ್ದರೆ ಅದರಲ್ಲಿ (ಆ ಪಾತ್ರಕ್ಕಾಗಿಯೇ ಹುಟ್ಟಿಬಂದಿದ್ದರೋ ಎಂಬಂತೆ ನಟಿಸಿದ್ದ) ಏಣಗಿ ನಟರಾಜರು ನಿರ್ವಹಿಸಿದ್ದ ಸಣ್ಣೀರಪ್ಪ ಮಾಸ್ತರರ ಪಾತ್ರವನ್ನು ಯಾರೂ ಮರೆಯುವುದು ಸಾಧ್ಯವಿಲ್ಲ. ಅಲ್ಲಿ ಕರಿಯನೆಂಬ ಪಡ್ಡೆ ಹುಡುಗ ಶಾಲೆಯ ಗೋಡೆಯ ಮೇಲೆ ‘ಸಣ್ಣೀರ ಗುತ್ಯವ್ವ ಮಿಂಡ’ ಇತ್ಯಾದಿ ಬರೆದು ರಂಪವೆಬ್ಬಿಸುತ್ತಾನೆ. ಅಂಥದ್ದೇ ಒಂದು ಪ್ರಕರಣ ಈ ಕತೆಯ ಮೂಲದಲ್ಲಿದೆ. ಆದರೆ ಪ್ರಕರಣ ಎದ್ದು ಕಾಣುವಂತೆ ಸಣ್ಣದು. ಆದರೆ ಅದರ ನಾಟಕೀಯತೆ ಇರುವುದೇ ಅಲ್ಲಿನ ಬರಹಕ್ಕೆ ಸಂಬಂಧಪಟ್ಟ ಹೆಡ್ಮಾಸ್ತರು, ಮ್ಯಾನೇಜರ್ ಹಿರಣ್ಣಯ್ಯ, ಪೀಡೀಕೆ ಎಂಬ ಎಡಬಿಡಂಗಿ ಮಾಸ್ತರ್, ಪ್ರದರ್ಶನ ಪ್ರಿಯ ಜೆ‌ಎಸ್‌ಎಸ್ ಮಾಸ್ತರ್ ಮತ್ತು ಇವರ ನಡುವೆ ಸಿಕ್ಕಿಕೊಂಡ ಹೈಸ್ಕೂಲಿನ ಮಕ್ಕಳು ಒಟ್ಟಾಗಿ ಕಟ್ಟಿಕೊಡುವ ವಿದ್ಯಮಾನಗಳಲ್ಲಿ.

ಎರಡನೆಯದು ಕೋಟಲೆಯೆಂಬರು ಕೋಟು ನೀಡಿದ್ದನ್ನು, ನಿಕೊಲಾಯ್ ಗೊಗೊಲ್‌ನ ಪ್ರಸಿದ್ಧ ಓವರ್‌ಕೋಟ್ ಕತೆಯಿಂದ ಪ್ರೇರಿತವಾದ ಕತೆ. ಆದರೆ ಗೊಗೊಲ್‌ನ ಪಾತ್ರಕ್ಕೆ ಕೋಟು ಅನಿವಾರ್ಯವಾಗಿದ್ದು ಆ ದೇಶದ ಚಳಿಯ ವಾತಾವರಣಕ್ಕೆ. ಕತೆಗೆ ಕೋಟೇ ಪ್ರಧಾನ ಭೂಮಿಕೆ. ಕೋಟು ಜೀವನ್ಮರಣದ ಪ್ರಶ್ನೆಯಾಗಬೇಕಿರುವುದು ಮುಖ್ಯ. ಹಾಗಾಗಿ ಮೂಲದಲ್ಲಿ ಒಬ್ಬ ಸಾಮಾನ್ಯ ನಕಲು ಪ್ರತಿ ಮಾಡುವ ಗುಮಾಸ್ತನಾಗಿದ್ದವನನ್ನು ಇಲ್ಲಿ ಸುರೇಂದ್ರನಾಥ್ ಒಬ್ಬ ಅಯಶಸ್ವಿ ವಕೀಲನನ್ನಾಗಿಸುತ್ತಾರೆ. ಅಲ್ಲಿ ಆಡಳಿತಶಾಹಿಯ ಹುಳುಕುಗಳನ್ನು ಮುಚ್ಚಲು ಪ್ರಯತ್ನಿಸುವುದರ ಸಂಕೇತವಾಗಬಹುದಾದ ಕೋಟು ಇಲ್ಲಿ ಆ ಸಾಧ್ಯತೆಯನ್ನು ಹೊಂದಿಲ್ಲ. ಆದರೆ ಬೇರೆ ಸಮೃದ್ಧಿಯಿದೆ ಸುರೇಂದ್ರನಾಥರ ಕತೆಯಲ್ಲಿ. ಈ ಕತೆಯ ತಹಶೀಲ್ದಾರರು ಖುದ್ದು ಅನಂತಮೂರ್ತಿಯವರ ಜೊತೆ ಕೂತು ಸ್ವೀಟು-ಕಾರಾಸೇವು ತಿಂದೂ, ತಿಂದೇ ಅದನ್ನು ಪರಿಣಾಮಕಾರಿಯಾಗಿ ಮಾಡುತ್ತಾರೆ!

ಈ ಕತೆಯ ಪ್ರಧಾನ ಪಾತ್ರಗಳಲ್ಲಿ ಒಂದಾದ ಟೈಲರ್ ತುಕ್ಕೋಜಿ ನೇರವಾಗಿ ತೇಜಸ್ವಿಯವರ ತುಕ್ಕೋಜಿ ಕತೆಯಿಂದಲೂ, ಇನ್ನೊಂದು ತಹಶೀಲ್ದಾರ್ ವೆಂಕಟಕೃಷ್ಣರಾವ್ ನೇರವಾಗಿ ಯು.ಆರ್.ಅನಂತಮೂರ್ತಿಯವರ ಸಂಯೋಗ ಕತೆಯಿಂದಲೂ ನಡೆದು ಬಂದವು! ಈ ಅಂತರ್ ಸಂಬಂಧ ಎರಡು ರೀತಿಯಿಂದ ಮುಖ್ಯ. ಒಂದು, ತೇಜಸ್ವಿ ಮತ್ತು ಅನಂತಮೂರ್ತಿಯವರು ಈ ಎರಡೂ ಪಾತ್ರಗಳನ್ನು ಈಗಾಗಲೇ ಓದುಗರ ಮನಸ್ಸಿನಲ್ಲಿ ಕೆತ್ತಿ ನಿಲ್ಲಿಸಿರುವುದರಿಂದ, ಸುರೇಂದ್ರನಾಥರಿಗೆ ತಮ್ಮ ಮನಸ್ಸಿನಲ್ಲಿ ಈ ಪಾತ್ರಗಳನ್ನು ಹೊಸದಾಗಿ ಕಲ್ಪಿಸಿಕೊಂಡು ಅದರ ಎಲ್ಲ ವಿವರ ಗಮನಿಸುವ, ದಾಖಲಿಸುವ ಮತ್ತು ಓದುಗರಿಗೆ ಅದನ್ನು ಸಮರ್ಥವಾಗಿ ‘ನೀಡುವ’ ಶ್ರಮವಿಲ್ಲ. ಎರಡನೆಯದಾಗಿ, ಈ ಪಾತ್ರಗಳು ಕನ್ನಡ ಸಾಹಿತ್ಯದಲ್ಲಿ ಚಿರಸ್ಥಾಯಿಯಾಗುವ ಕಸು ಹೊಂದಿದ್ದ ಪಾತ್ರಗಳೇ ಆಗಿದ್ದಲ್ಲಿ ಮತ್ತೆ ಹಾಗೆ ಚಿರಸ್ಥಾಯಿಯಾಗಿದ್ದಲ್ಲಿ ಸುರೇಂದ್ರನಾಥರು ಒಂದು ಪರಂಪರೆಯನ್ನೇ ಮುಂದುವರಿಸಿಕೊಂಡು ಹೋಗುವ ಒಂದು ಪ್ರಯೋಗವನ್ನು ಮಾಡಿದಂತಾಗುತ್ತದೆ. ಒಂದುವೇಳೆ ಓದುಗರಿಗೆ ಈ ಪಾತ್ರಗಳು ಪರಿಚಿತವಲ್ಲದೇ ಇದ್ದರೆ ಅವರು ತೇಜಸ್ವಿಯವರ ಮತ್ತು ಅನಂತಮೂರ್ತಿಯವರ ಕತೆಗಳನ್ನು ಹುಡುಕಿಕೊಂಡು ಹೋಗುವಂತಾಗಬಹುದು. ಹಾಗೆ ಆಗದಿದ್ದರೂ ಅದರಿಂದ ಸುರೇಂದ್ರನಾಥರ ಕತೆಗೆ ನಷ್ಟವೇನಿಲ್ಲ.

ಇದು ರಷ್ಯನ್ ಕತೆ. ರಷ್ಯಾದಲ್ಲಿ ಹದಿನೆಂಟು-ಹತ್ತೊಂಬತ್ತನೆಯ ಶತಮಾನದ ಸಾಹಿತಿಗಳ ಮೇಲೆ ಸಾಹಿತ್ಯ ಕೃತಿಯೊಂದು ನೈತಿಕ ಮೌಲ್ಯವನ್ನು ಪ್ರತಿಪಾದಿಸುವ ಸಂದೇಶವನ್ನು ತನ್ನೊಡಲಲ್ಲಿ ಹೊಂದಿರಬೇಕು ಎಂಬ ಒತ್ತಡವಿತ್ತಂತೆ. ಆದರೆ ಅಂಥ ಯಾವ ಸಂದೇಶವಾದರೂ ನಿರುದ್ದಿಶ್ಯವಾಗಿಯಾದರೂ ತನ್ನ ಕತೆಯಲ್ಲಿ ಕಾಣಿಸಿಕೊಳ್ಳುವ ಅನುಮಾನಗಳಿದ್ದರೆ ತಕ್ಷಣ ಅದನ್ನು ಹೊಡೆದು ಹಾಕುವಂಥ ಕೆಚ್ಚಿನ ಕತೆಗಾರ ನಿಕೊಲಾಯ್ ಗೊಗೊಲ್ ಈ ಕತೆಯಲ್ಲಿ ಮಾಡಿರುವುದೂ ಅದನ್ನೇ. ಇಲ್ಲಿ ಸಂದೇಶಗಳಿಲ್ಲ, ಪ್ರತಿಮೆಗಳಿಲ್ಲ, ಹುದುಗಿಟ್ಟ ತಾತ್ವಿಕತೆಯಿಲ್ಲ ಎಂದಾದರೆ ಈ ಕತೆಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕೆಂಬುದೇ ನಿಜವಾದ ಸಮಸ್ಯೆಯಾಯಿತು! ಅರ್ಥವನ್ನೇ ಹುಡುಕುವವರಿಗೆ ಅದು ಸಿಗಲೂ ಬಹುದು. ಆದರೆ ಅರ್ಥದ ಬಗ್ಗೆ ತಲೆಕೆಡಿಸಿಕೊಳ್ಳದೇ ಇಲ್ಲಿನ ಚಿತ್ರಣವನ್ನು ಮನಸ್ಸಿಗಿಳಿಸಿಕೊಳ್ಳಲು, ಅನುಭವವನ್ನು ತಮ್ಮದನ್ನಾಗಿಸಿಕೊಳ್ಳಲು ಸಾಧ್ಯವಿದೆ. ಹಾಗಾಗಿಯೇ ಬಹುಷಃ ಇದು ನಾಟಕವಾಗಿಯೂ ಪ್ರಖ್ಯಾತವಾಯಿತು. ಕೆ.ವಿ.ಸುಬ್ಬಣ್ಣನವರು ನಾಟಕವೊಂದು ಅರ್ಥವಾಗಲೇ ಬೇಕೆಂದಿಲ್ಲ, ಅನುಭವವಾದರೆ ಸಾಕು ಎಂದಿದ್ದ ಮಾತು ಮರೆಯಲು ಸಾಧ್ಯವೆ? ಸುರೇಂದ್ರನಾಥ್ ಕೈಯಲ್ಲಿ ಅದೇ ಕತೆ ಕೋಟು ನೀಡಿದ್ದನ್ನು ಕೋಟಲೆಯೆಂಬರು ಎಂಬ ಹೊಸ ವ್ಯಾಖ್ಯಾನಕ್ಕೆ ಕಾರಣವಾಯಿತು. ದೈನೇಸಿತನವೊಂದು ಮಾನವೀಯ ನೆಲೆಯಲ್ಲಿ ಮನಕಲಕುವಲ್ಲಿ ಯಶಸ್ವಿಯಾಗುವ ಮಟ್ಟಿಗೆ ಮೂಲಕತೆಯ ಸೊಗಡನ್ನು ಉಳಿಸಿಕೊಂಡಿರುವ ಈ ಕತೆ ಸುರೇಂದ್ರನಾಥರ ಕೈಯಲ್ಲಿ ಇನ್ನಷ್ಟು ಆಯಾಮಗಳನ್ನು ಪಡೆದುಕೊಂಡು ಕಾಡುವ ಶಕ್ತಿಯನ್ನು ಪಡೆದಿದೆ.

ಮೂರನೆಯ ಕತೆಯೂ ನಾಟಕವಾಗಿದೆ, ಸಂಕ್ರಮಣ ಎಂಬ ಹೆಸರಿನಲ್ಲಿ ರಂಗಕ್ಕೆ ಬಂದಿದೆ. ಇಲ್ಲಿ ಮತ್ತೆ ನಮಗೆ ರಾಶೊಮನ್ ಸಿನಿಮಾದ ನೆನಪಾಗುತ್ತದೆ. ಮೊದಲು ತಂದೆಯ ಸ್ವಗತವಿದೆ. ಅವನ ಬಡತನ, ಬಾಲ್ಯ, ಯೌವನದ ಕಷ್ಟಗಳು, ಶಿಕ್ಷಣ ಮತ್ತು ದುಡಿಮೆ, ಮನೆ ಕಟ್ಟಿದ್ದು ಮುಂತಾದ ವಿವರಗಳ ಜೊತೆ ಜೊತೆಗೇನೆ ಅವನು ಮಗನ ಬಗ್ಗೆ ಹೊಂದಿರುವ ನಿಲುವುಗಳು ತೀಕ್ಷ್ಣವಾಗಿ ಪ್ರಕಟಗೊಳ್ಳುತ್ತ ಹೋಗುತ್ತವೆ. ನಂತರ ಮಗ ಮಾತನಾಡುತ್ತಾನೆ. ಆಗ ಅದುವರೆಗೂ ಅಪ್ಪನ ಮಾತುಗಳಲ್ಲಿ ನ್ಯಾಯವಿದೆ ಅನಿಸುತ್ತಿದ್ದ ನಮಗೇ ಅಪ್ಪ ಕೊಂಚ ದುಡುಕಿನವನಂತೆ, ಸಿನಿಕನಂತೆ ಕಾಣುತ್ತ ಮಗ ಹೇಳುವುದರಲ್ಲಿಯೂ ಅರ್ಥವಿದೆಯಲ್ಲವೆ ಎನಿಸತೊಡಗುತ್ತದೆ! ನಂತರ ತಾಯಿಯ ಮಾತುಗಳು. ಈಕೆಯ ಮಾತುಗಳೇನೂ ಮೊದಲ ಇಬ್ಬರ ನಿಲುವನ್ನು ಸಂತುಲಿತಗೊಳಿಸಿ ಯಾರು ಸರಿ ಯಾರು ತಪ್ಪು ಎಂದು ತೋರಿಸುವ ಉದ್ದೇಶದ್ದಲ್ಲ. ಅಂಥ ಛಾಯೆ ನುಸುಳದಂತೆ ಎಚ್ಚರವಹಿಸಿಯೇ ಇಲ್ಲಿನ ಮಾತುಗಳನ್ನು ಹೆಣೆಯಲಾಗಿದೆ. ಅದೂ ಅಲ್ಲದೆ, ಒಬ್ಬರ ಮಾತಿನಿಂದ ಇನ್ನೊಬ್ಬರ ಮಾತಿಗೆ ಹೊರಳುವಾಗ ಕಥಾನಕ ಕೂಡ ನಿರಂತರವಾಗಿ ಚಲನಶೀಲವಾಗಿರುವುದು ಇಲ್ಲಿನ ಹೆಚ್ಚುಗಾರಿಕೆ.

ಕತೆ, ಅದರ ಹೂರಣ ಏನಿದ್ದರೂ ಅದು ಸುರೇಂದ್ರನಾಥ್ ಕತೆಗಳ ವಿಚಾರದಲ್ಲಿ ಅಷ್ಟೇನೂ ಮುಖ್ಯವಾದದ್ದಲ್ಲ. ಅವರು ಪಾತ್ರವೇ ಮುಖ್ಯ ಎಂದಿರುವ ಮಾತು ಅರ್ಧಸತ್ಯದಂತೆ ಕೇಳಿಸುತ್ತದೆ. ಸುರೇಂದ್ರನಾಥ್ ಕತೆಯಲ್ಲಿ ಅವರು ನಮಗೆ ನೀಡುವ ದರ್ಶನ ಮುಖ್ಯ, ಅದನ್ನು ದಯಪಾಲಿಸುವ ವಿಧಾನ ಮುಖ್ಯ ಮತ್ತು ಅದು ಅಧ್ಯಯನಕ್ಕೆ ಯೋಗ್ಯ. ಸುರೇಂದ್ರನಾಥ್ ಅವರೊಳಗಿನ ಕತೆಗಾರ ತನ್ನ ಪ್ರಮಾಣ-ಪರಿಮಾಣಗಳನ್ನು ಅದೆಲ್ಲಿಂದಲಾದರೂ ಪಡೆದುಕೊಂಡಿರಲಿ, ತಂದಿರಲಿ, ಮತ್ತೆಲ್ಲಿಗೋ ಕೊಂಡೊಯ್ಯಲಿ, ಅವೆಲ್ಲವೂ ಒಬ್ಬ ಶ್ರೇಷ್ಠ ಕಲೆಯ ಅಭಿರುಚಿಯುಳ್ಳ ಕಲಾವಿದನಲ್ಲಿ ಇರಬೇಕೆಂದು ನಾವೆಲ್ಲ ಅಪೇಕ್ಷಿಸುವ ಅಪ್ಪಟ ಗುಣವಿಶೇಷಗಳೇ ಆಗಿವೆ ಎಂಬುದು ಮಾತ್ರ ನಿಜ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ