Monday, June 30, 2014

ಕಲಕಬಲ್ಲ ಕಥಾನಕ: ವನಜಮ್ಮನ ಸೀಟು

ಒಂದು ಅದ್ಭುತವಾದ ಕಾದಂಬರಿಯಾಗಿ ರೂಪು ತಳೆಯುತ್ತಿದೆ ಎಂಬ ಆಶಾವಾದ ಮತ್ತು ನಿರೀಕ್ಷೆಗಳನ್ನು ಹುಟ್ಟಿಸುವ, ಕಾದಂಬರಿಯ ಕೊನೆ ಕೊನೆಯ ವರೆಗೂ ಅದನ್ನು ಹಾಗೆಯೇ ಹಿಡಿದಿಟ್ಟುಕೊಂಡು ಪೊರೆಯುವ ಈ ಕೃತಿ ಕೊನೆಗೂ ಅತೃಪ್ತಿಯನ್ನು ಉಳಿಸುತ್ತದೆ. ಹಾಗೆಂದ ಮಾತ್ರಕ್ಕೆ ಈ ಕಥಾನಕದ ಭಾವೀ ಓದುಗನನ್ನು ನಾನು ತಡೆಯುತ್ತಿಲ್ಲ, ಉತ್ತೇಜಿಸುತ್ತಿದ್ದೇನೆ. ಅದು ಹೀಗೆ:

ಹೆಣ್ಣು ಏನಾದರೂ ಹೊಸತನ್ನು ಅಥವಾ ಅಪರೂಪದ್ದನ್ನು ಮಾಡಲು ಹೊರಟರೆ, ಹಾಗೆ ಹೊರಡುವ ಮುನ್ನ ಅವಳು ಅದಕ್ಕೆ ತನ್ನ ಹಿರಿಯರಿಂದ, ಕೆಲವೊಮ್ಮೆ ಕಿರಿಯರಿಂದಲೂ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಇದು ಕಾಲಾತೀತವಾಗಿ ನಿಂತ ಸತ್ಯ ಮತ್ತು ನಮ್ಮೆಲ್ಲಾ ಸಭ್ಯ, ಶಿಷ್ಟ, ಪ್ರಬುದ್ಧ ಫೋಸುಗಳಾಚೆ ಇದನ್ನು ನಾವೂ ನೀವೂ ನಮ್ಮ ನಮ್ಮ ಮನೆಗಳಲ್ಲಿ ವಿಧ್ಯುಕ್ತವಾಗಿ ಆಚರಿಸುತ್ತ ಬಂದಿರುವುದು ಕೂಡ ಅಷ್ಟೇ ಸತ್ಯ. ನಾವು ಎಂದರೆ ಇಲ್ಲಿ ಗಂಡಸು ಮತ್ತು ಹೆಂಗಸು ಇಬ್ಬರೂ ಬಂದೆವು. ಅವಳು ಅದನ್ನೆಲ್ಲ ಧಿಕ್ಕರಿಸಿ ತಾನು ಮಾಡಬೇಕೆಂದಿರುವುದನ್ನು ಮಾಡಲು ಹೊರಟರೆ ಅದನ್ನು ಹೇಗೆ ಮಣಿಸಬೇಕೆಂಬುದೂ ನಮಗೆ ಗೊತ್ತು. ಅವಳು ಹಾಗೆ ಹೊರಟಾಗಲೆಲ್ಲ ಸಮಾಜದ ಸಿದ್ಧಮಾದರಿಯ ಹೆಣ್ಣಿನೆದುರು ಅವಳು ವಿಲಕ್ಷಣವಾಗಿಯೇ ಕಾಣಿಸಿಕೊಳ್ಳುವುದರಿಂದ ಮತ್ತು ಇಡೀ ಸಮಾಜ ಸಿದ್ಧಮಾದರಿಯನ್ನೇ ಗುಪ್ತವಾಗಿ ಬಯಸುತ್ತ, ಪೊರೆಯುತ್ತ ಅದೇ ಆರೋಗ್ಯಕರ ಎಂದು ಭಾವಿಸುವುದರಿಂದ ಅಂಥ ಹೆಣ್ಣು ಯಶಸ್ಸು ಕಾಣುವುದು ಕಡಿಮೆಯೇ. ಇದರ ಜೊತೆಜೊತೆಗೇ ನಾವು ಮರೆಯಬಾರದ ಒಂದು ಸಂಗತಿಯೆಂದರೆ, ಶತಶತಮಾನಗಳಿಂದ ಹೆಣ್ಣಿಗೆ ಸಿಕ್ಕ ಅವಕಾಶ ಮತ್ತು ಪ್ರೋತ್ಸಾಹ ಅಷ್ಟಕ್ಕಷ್ಟೇ ಆಗಿರುವುದರಿಂದ ಸಹಜವಾಗಿಯೇ ಅವಳಲ್ಲಿ ಈ ಹತಾರಗಳನ್ನೆಲ್ಲ ಎದುರಿಸುವ ಚಾಣಾಕ್ಷತನವೂ ಮುಕ್ಕಾಗಿರುತ್ತದೆ ಎನ್ನುವುದು. ಇದರಿಂದಾಗಿ ಅವಳು ಒಂದೋ ಬಹುಬೇಗ ಸೋಲೊಪ್ಪಿಕೊಳ್ಳುತ್ತಾಳೆ ಅಥವಾ ರಾಜೀಸೂತ್ರಕ್ಕೆ ಒಗ್ಗಿಕೊಳ್ಳುತ್ತಾಳೆ ಅಥವಾ ಮೇಲೆ ಹೇಳಿದಂಥ ಗುಣಲಕ್ಷಣಗಳ ಒಂದು ಸಮಾಜಕ್ಕೆ ಅಪ್ರಸ್ತುತವಾಗಿ ಬಿಡುತ್ತಾಳೆ.

ವನಜಮ್ಮನ ಸೀಟು ಕಾದಂಬರಿಯಲ್ಲಿ ಉಮಾರಾವ್ ಈ ಎಲ್ಲ ಅಂಶಗಳನ್ನೂ ಸೂಕ್ಷ್ಮವಾಗಿ ಗುರುತಿಸುತ್ತ ತಮ್ಮ ಕಥಾನಕವನ್ನು ಹೆಣೆಯುತ್ತಾರೆ. ಅವರು ಸಮುದಾಯವನ್ನು, ಅದರ ವಿಭಿನ್ನ ಸ್ತರಗಳನ್ನು, ಅಂತಸ್ತು, ವರ್ಗ, ಪ್ರಭೇದ, ಮನೋಧರ್ಮಗಳ ಸಹಿತ ತಮ್ಮ ಕೃತಿಯ ಚೌಕಟ್ಟಿನೊಳಕ್ಕೆ ಅತ್ಯಂತ ಸಹಜವಾಗಿ ತರಬಲ್ಲರು. ಮನುಷ್ಯನ ದ್ವಂದ್ವವನ್ನು, ತನ್ನದೇ ಅಂತಃಸ್ಸತ್ವದ ಎದುರು ತಲೆತಗ್ಗಿಸದೇ ಇರಲಾರದ ಅವನ ಆತ್ಮದ ಕುಹಕವನ್ನು, ವಿರೋಧ ಸಾಧ್ಯವಾಗದ ಷಂಡತನವನ್ನು ರೂಪಕವಾಗಿಯೂ ವಸ್ತುಸ್ಥಿತಿಯಾಗಿಯೂ ನಮಗೆ ತೋರಬಲ್ಲರು. ವನಜಮ್ಮನ ನಾಜೂಕು ನಿಲುವು, ಸಾಮಾಜಿಕ ಕಟ್ಟುಪಾಡುಗಳ ಗಡಿರೇಖೆಗಳ ಸ್ಪಷ್ಟವಾದ ಅರಿವು ಮತ್ತು ತನ್ನದೇ ಸ್ವಂತದ ಯುಕ್ತಾಯುಕ್ತ ಪ್ರಜ್ಞೆ ಅಚ್ಚರಿ ಹುಟ್ಟಿಸುವಾಗಲೇ ಇದೆಲ್ಲವೂ ಸಂಘರ್ಷಕ್ಕೆ ಬೆನ್ನಿಕ್ಕುವ ತಂತ್ರವೂ ಇರಬಹುದಲ್ಲವೆ ಎನಿಸುವಾಗಲೂ ಆ ಪಾತ್ರದ ಚೌಕಟ್ಟಿನಲ್ಲಿ ಈ ಬಗೆಯ ನಿರ್ವಹಣೆ ನಮ್ಮ ಮೆಚ್ಚುಗೆಗೆ ಪಾತ್ರವಾಗುತ್ತದೆ ಕೂಡ. ವನಜಾ ಇಡೀ ಕಾದಂಬರಿಯ ಕಥಾನಕದ ನಡೆಯುದ್ದಕ್ಕೂ ಸಿದ್ಧಗೊಳ್ಳುತ್ತ ಹೋಗುವ ಗಮ್ಯ ಕೊನೆಗೂ ವೈಯಕ್ತಿಕ ತುರ್ತಿನದ್ದಷ್ಟೇ ಆಗಿರಬಹುದು, ತಪ್ಪೇನಿಲ್ಲ. ಆದರೆ ಅದಕ್ಕೆ ಒಂದು ಸಾಮಾಜಿಕ ಮುಖವೂ ಇರುವುದು ಸುಳ್ಳಲ್ಲ ಮತ್ತು ಅದರಿಂದಾಗಿಯೇ ನಮಗೆ ಈ ಕಾದಂಬರಿ ಪ್ರಸ್ತುತವಾಗುವುದು ಎಂಬ ನೆಲೆಯ ಮೇಲೆ ಕೆಲವೊಂದು ಅಂಶಗಳನ್ನು ಮುಂದೆ ಚರ್ಚಿಸಿದ್ದೇನೆ.

ವನಜಮ್ಮನ ಪಾತ್ರದಂತೆಯೇ ಈ ಕಾದಂಬರಿಯ ಇತರ ಕೆಲವು ಮುಖ್ಯಪಾತ್ರಗಳೂ ರಕ್ತಮಾಂಸ ಸಹಿತ ನಮ್ಮ ಅನುಭವಕ್ಕೆ ದಕ್ಕುತ್ತ ಅವು ನಮಗೆ ನಿಜವಾಗುವಲ್ಲಿ ಕೆಲವು ತೊಡಕುಗಳಿವೆ ಎಂಬುದು ನಿಜ. ಇಲ್ಲಿ ನಮಗೆ ವನಜ ಅಥವಾ ಶಾಮಸುಂದರನ ಇಡೀ ಒಂದು ದಿನ ಹೇಗೆ ಕಣ್ಣಿಗೆ ಕಟ್ಟುವುದಿಲ್ಲವೋ ಹಾಗೆಯೇ ಆ ವ್ಯಕ್ತಿತ್ವಗಳೂ ಇಡಿಯಾಗಿ ದಕ್ಕುವುದಿಲ್ಲ. ಗೋದಮ್ಮ, ಸೇತುಮಾಧವನಂಥ ಪಾತ್ರಗಳು ಸ್ಕೆಚೀ ಆಗಿ ಉಳಿದರೆ ನಷ್ಟವೇನಿಲ್ಲ. ಅವು ಒಂದು ಬಗೆಯ ಸ್ಟಿರಿಯೋ ಟೈಪ್, ಮಿಡಿಯೊಕರ್ ಪಾತ್ರಗಳು. ಆದರೆ ಇಡೀ ಕಾದಂಬರಿಯ ಕೇಂದ್ರದಲ್ಲಿರುವ ವನಜಾ ಪಾತ್ರ ಹಾಗಲ್ಲ. ಕಟ್ ಶಾಟ್‌ ಮಾದರಿಯಲ್ಲಿ ಇವರ ಚಟುವಟಿಕೆಯ ಸೀನ್‌ಗಳನ್ನು ತೋರಿಸುತ್ತ ಹೋಗುವ ಮುನ್ನ ನಮಗೆ ಅವರು ಇಡಿಯಾಗಿ "ಹೌದು" ಆಗಬೇಕಾಗುತ್ತದೆ. ವನಜಾ ನಿಲುವು, ನಿರ್ಧಾರ, ನಡೆ ಎಲ್ಲವೂ ಹಟಾತ್ ಎಂಬಂತೆ ಘಟಿಸುವುದರಲ್ಲಿರುವ ಅನಿರೀಕ್ಷಿತಕ್ಕೆ ಬೆರಗಾಗುವುದನ್ನೇ ಮೆಚ್ಚಿಕೊಳ್ಳುವುದು ಸಾಧ್ಯ, ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಹಾಗೆಯೇ ಶ್ಯಾಮಸುಂದರನ ಸ್ಥಿತಿಯಲ್ಲಿ ಗಂಡನೊಬ್ಬನ ದ್ವಂದ್ವ, ತುಮುಲ, ತಿಕ್ಕಾಟಗಳು - ಅವುಗಳ ಬಗ್ಗೆ ಸ್ತ್ರೀಮತಕ್ಕೆ ಎಂಥ ತಿರಸ್ಕಾರವೇ ಬೇಕಾದರೂ ಇರಲಿ, ಅದನ್ನು ಕಾದಂಬರಿಯ ಚೌಕಟ್ಟಿನ ಹೊರಗಿಟ್ಟು ನೋಡಲು ಸಾಧ್ಯವಿಲ್ಲ. ಈ ಅಂಶದತ್ತ ಕೊಂಚ ಹೆಚ್ಚಿನ ಗಮನ ಅಗತ್ಯವಿತ್ತೆನಿಸಿದರೂ ಇವತ್ತಿನ ಜಾಯಮಾನದ ಕಾದಂಬರಿಯಾಗಿ ಅದನ್ನು ಸಹಿಸಬಹುದು ಅಥವಾ ಸಹಿಸಬೇಕೇನೊ.

ಹದಿನಾಲ್ಕು ವರ್ಷದ ಪ್ರಮೀಳಾ ಪಕ್ಕದ ಮನೆಯ ವಿಲ್ಸನ್‌ನನ್ನೇ ಮದುವೆಯಾಗುತ್ತೇನೆ ಎಂದು ದೃಢವಾಗಿ ನಿಲ್ಲುವುದಕ್ಕೆ ಕಾರಣಳಾಗುವ ವನಜಾ, ಸಂಪತ್ತು ಕಾಣೆಯಾಗಿದ್ದಾನೆಯೇ ಅಥವಾ ಕೊಲೆಯಾಗಿದ್ದಾನೆಯೇ ಎಂಬ ಬಗ್ಗೆ ಆಕೆ ತನ್ನ ಲಾಯರ್ ಪತಿಯ ಎದುರು ಎತ್ತುವ ಪ್ರಶ್ನೆ, ಕೆರೆಹಳ್ಳಕ್ಕೆ ಭೇಟಿಕೊಟ್ಟು ಅಲ್ಲಿನ ಬದುಕು ಬವಣೆಗಳ ಬಗ್ಗೆ ಅದೇ ಊರಿನ ಮಂದಿ ಅಸಡ್ಡೆ ತೋರುತ್ತಿರುವುದರ ಬಗ್ಗೆ ಪ್ರಶ್ನಿಸುತ್ತಲೇ ತಾನು ತನ್ನಿಂದಾದುದನ್ನು ಮಾಡಲು ಮುಂದಾಗುವ ಅವಳ ದಿಟ್ಟತನ, ಮೂಢನಂಬಿಕೆಗಳನ್ನು ಪೊರೆಯುವ ಶಂಕರಿಯೊಂದಿಗಿನ ಜಗಳ, ನಾಟಕದ ಅಭಿನೇತ್ರಿ ಮನೋನ್ಮಣಿಯ ಹಿನ್ನೆಲೆಯ ಕುರಿತು ಅವಳಿಗಿರುವ ಕಕ್ಕುಲಾತಿ, ಗಂಡನಿಗಿಲ್ಲದ ಛಾತಿ ತೋರಿಸಿ ತಾನೇ ಕಾರ್ ಡ್ರೈವಿಂಗ್ ಕಲಿಯುವ ಅವಳ ಮನೋಧಾರ್ಡ್ಯ - ಇವೆಲ್ಲವೂ ವನಜಳನ್ನು ಕಾಣಿಸುವಾಗಲೇ ಸಮುದಾಯವನ್ನು ಕಾಣಿಸುತ್ತಿರುತ್ತದೆ ಮಾತ್ರವಲ್ಲ ಕಾದಂಬರಿಯ ತಾಂತ್ರಿಕ ಅಗತ್ಯಗಳನ್ನೂ ಪೊರೆಯುತ್ತಿರುತ್ತದೆ ಎಂಬುದೇ ಇಲ್ಲಿನ ಕ್ರಾಫ್ಟ್ ಬಗ್ಗೆ ಹುಟ್ಟುವ ಮೆಚ್ಚುಗೆಗೆ ಕಾರಣವಾಗುತ್ತದೆ. ಉದಾಹರಣೆಗೆ ಇಲ್ಲಿನ ನಾಟಕದ ಪಾತ್ರ ಒಂದು ಹಂತದಲ್ಲಿ ವನಜಾಳನ್ನು ನಾಟಕದ ಎಸ್ಕೇಪಿಸಂನಿಂದ ಪೊರೆದರೆ ಇನ್ನೊಂದು ಹಂತದಲ್ಲಿ ಅಭಿನೇತ್ರಿಯ ಕತೆಯಲ್ಲಿ ವನಜಾಳ ಕತೆಯ ನೆರಳುಗಳು ಹರಿದಾಡುತ್ತವೆ. ರಂಗನನ್ನು ಮತ್ತೊಬ್ಬ ಸಂಪತ್ತುವಾಗಿಸಬೇಕೆ ಅಥವಾ ಅವನನ್ನು ಹಾಗೆಯೇ ಬಿಡಬೇಕೆ ಅಥವಾ ಮನೋರೋಗತಜ್ಞರಿಗೊಪ್ಪಿಸಬೇಕೆ ಎಂಬಲ್ಲಿ ಹಲವು ಸ್ತರಗಳ, ವೈರುಧ್ಯಗಳು ಕಾಡುತ್ತವೆ. ಕೆರೆಹಳ್ಳದ ಸಮಸ್ಯೆಗಳಂತೂ ಕಾದಂಬರಿಗೆ ಮಾತ್ರವಲ್ಲ, ಕಾದಂಬರಿಕಾರರಿಗೇ ಒಡ್ಡಿದ ಸವಾಲು ಸಣ್ಣದಲ್ಲ. ಆದರೆ ಅವರದನ್ನು ಅರ್ಧದಲ್ಲೇ ಕೈಬಿಟ್ಟಿರುವುದು ಸ್ವಾರಸ್ಯಕರವಾಗಿದೆ. ಸಮುದಾಯದ ಸಮಸ್ಯೆಗಳಿಗೇ ಇಲ್ಲಿನ ವನಜಾ ಹೆಚ್ಚು ಹೆಚ್ಚು ಮುಖಾಮುಖಿಯಾಗುವ ಸಂದರ್ಭದಲ್ಲಿ ಆ ಸಮುದಾಯದ ಅನಿವಾರ್ಯ ಘಟಕಗಳತ್ತ ಕಾದಂಬರಿ ಮೌನವಹಿಸಿರುವುದು ಈ ಮಾತಿಗೆ ಕಾರಣ.

ಬಹುಷಃ ಅಲ್ಲಿಯೇ ಈ ಕಾದಂಬರಿ ಹುಟ್ಟಿಸುವ ಅತೃಪ್ತಿಯ ಬೀಜಗಳಿವೆ. ಈ ರೀತಿಯಾಗಿ ಒಂದು ಸಮಾಜವನ್ನು, ಮಾನವನ ಮೂಲಭೂತ ಸ್ವಭಾವವನ್ನು ತಮ್ಮ ಕಾದಂಬರಿಯ ಚೌಕಟ್ಟಿನಲ್ಲಿ ಹಿಡಿದಿಡುವ ಉಮಾರಾವ್ ಸಮುದಾಯದ ಸಮಸ್ಯೆಗಳಿಗೆ ಪೂರ್ತಿಯಾಗಿ ಮುಖಾಮುಖಿಯಾಗುವುದನ್ನು ಉದ್ದೇಶಪೂರ್ವಕವಾಗಿಯೇ ತಪ್ಪಿಸುತ್ತಾರೆ. ಹಾಗೆ ಈ ಕಾದಂಬರಿಯಲ್ಲಿ ಖಡಾಖಂಡಿತವಾಗಿ ರಾಜಕೀಯ ಆಯಾಮಗಳೇ ಇಲ್ಲ. ಸಮಾಜ-ಸಮುದಾಯವಿದ್ದು ಅಲ್ಲಿ ರಾಜಕೀಯವಿಲ್ಲ, ಮಾಧ್ಯಮಗಳಿಲ್ಲ, ಪ್ರಭುತ್ವವಿಲ್ಲ ಮತ್ತು ಯಾವುದೇ ಸಂಘಟನೆಗಳಿಲ್ಲ. ಬೆಂಗಳೂರಿನಿಂದ ಐವತ್ತು ಕಿಲೊಮೀಟರ್ ಅಂತರದಲ್ಲಿರುವ ಒಂದು ಹಳ್ಳಿಯ, ಹೆಚ್ಚು ಕಡಿಮೆ ಇಪ್ಪತ್ತು ವರ್ಷಗಳ ಹಿಂದಿನದ್ದಷ್ಟೇ ಆಗಿರಬಹುದಾದ ಕತೆಯನ್ನು ಹೇಳುತ್ತಿರುವ ಕಾದಂಬರಿಯಿದು ಎಂಬ ಅಂಶವನ್ನೂ ಗಮನಿಸಬೇಕು. ಪೋಲೀಸ್ ಎಂಬ ಶಬ್ದ ವನಜಾ ಬಾಯಲ್ಲಿ ಎರಡು ಮೂರು ಬಾರಿ ಬರುತ್ತದೆಯಾದರೂ, ತನ್ನ ಪತಿಯೇ ಲಾಯರ್ ಆಗಿದ್ದರೂ ಇಲ್ಲಿನ ಸಮಾಜದಲ್ಲಿ ಅದರ ಅನಿವಾರ್ಯ ಅಂಗಗಳಾದ ರಾಜಕೀಯ, ಸಾಮಾಜಿಕ ಮತ್ತು ವರ್ಗೀಯ ಘಟಕಗಳೇ ಇಲ್ಲ. ಹಾಗಾಗಿ ಕೆರೆಹಳ್ಳದ ಕೆಳವರ್ಗದವರಲ್ಲಿ ಯಾವುದೇ ಸಂಘಟನೆಯಾಗಲೀ, ನಾಯಕರಾಗಲೀ, ಅದರ ರಾಜಕೀಯ ಮುಖಗಳಾಗಲೀ ನಮಗೆ ಕಾಣಿಸದ ಒಂದು ವೈಕಲ್ಯ ಎದ್ದು ಕಾಣುತ್ತದೆ. ಹಾಗೆಯೇ ಇಲ್ಲಿ ರಾಜಮ್ಮ ನಡೆಸುವ ಅನಧಿಕೃತ ಮಹಿಳಾಮಂಡಲವೇ ಏಕೈಕ ಸಂಘಟನೆ. ಸಮಾಜದ್ದು, ಸಂಸಾರದ್ದು, ದಾಂಪತ್ಯದ್ದು ಮತ್ತು ವೈಯಕ್ತಿಕದ್ದು ಎಂಬ ನೆಲೆಯಲ್ಲೇ ವನಜಾ ತನ್ನ ಸುತ್ತಲಿನ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತಾಳೆ ಮತ್ತು ಅಷ್ಟಿಷ್ಟು ಮಾತ್ರ ತೊಡಗಿಕೊಳ್ಳುತ್ತಾಳೆ ಎಂದು ಒಪ್ಪಿಕೊಂಡರೂ ಕಾದಂಬರಿಯ ಹೊರಗೂ ಚಾಚಿಕೊಳ್ಳುವ ಈ ಪ್ರಶ್ನೆ ಪ್ರಸ್ತುತವೇ ಆಗಿ ಉಳಿಯುತ್ತದೆ. ಬಹುಷಃ ಇಲ್ಲಿ ರಾಜಕೀಯ ನೇತಾರರ, ಕೆಳವರ್ಗದ ಸಮುದಾಯವನ್ನು ಪ್ರತಿನಿಧಿಸುವ ನಾಯಕರ ಮತ್ತು ಸ್ತ್ರೀವಾದಿ ಸಂಘಟನೆಯ ಘಟಕಗಳಿಗೆ, ಅವು ಯಾವ ಮಟ್ಟದಲ್ಲಿಯೇ ಇರಲಿ, ಅವು ಇದ್ದು ಅವುಗಳಿಗೆ ವನಜಾ ಮುಖಾಮುಖಿಯಾಗುವಂತಿದ್ದರೆ ಬಹುಷಃ ಕಾದಂಬರಿ ಮತ್ತಷ್ಟು ಅಥೆಂಟಿಕ್ ಆಗಿ ರೂಪುಗೊಳ್ಳುತ್ತಿತ್ತು ಮಾತ್ರವಲ್ಲ ಅದರ ಹಾಗೂ ವನಜಾಳ ಸಾಧ್ಯತೆಗಳು ಮತ್ತಷ್ಟು ವಿಸ್ತೃತವಾಗುತ್ತಿದ್ದವೋ ಏನೊ. ಹಾಗಾಗದೆ ಅವಳು "ಲೇಡಿಸ್ ಓನ್ಲಿ" ತಿರುವಿಗೆ ಹೊರಳಿಕೊಂಡು ಕಾದಂಬರಿ ಮುಗಿಯುವುದು ಕೃತಕವೆನಿಸುವುದು ಮಾತ್ರವಲ್ಲ, ಒಮ್ಮೆಗೇ ಕಾದಂಬರಿಯು ನೆಟ್ಟ ಬೀಜರೂಪಿ ಆಶಯಕ್ಕೆ ಕತ್ತರಿಯಿಟ್ಟಂತೆಯೂ ಕಾಣುತ್ತದೆ.

ಹಾಗಾಗಿ ಇದನ್ನು ಮತ್ತಷ್ಟು ಚೆನ್ನಾಗಿ, ಸುಪುಷ್ಟವಾಗಿ ಮತ್ತು ಹೆಚ್ಚು ಮಹತ್ವಾಕಾಂಕ್ಷೆಯ ಕೃತಿಯಾಗಿ ನಿಲ್ಲಿಸಬಹುದಾಗಿತ್ತು ಎನಿಸುವುದು ಸುಳ್ಳಲ್ಲ. ಅಂಥ ರೂಹು, ಕ್ಷಮತೆಯುಳ್ಳ ವಸ್ತು ಉಮಾ ಅವರಿಗೆ ದಕ್ಕಿತ್ತು. ಸ್ಪಷ್ಟವಾಗಿಯೇ ಅವರು ಅದರ ಹರಹು ಹಾಗೆ ಚಾಚಿಕೊಳ್ಳಬಹುದೆಂಬುದನ್ನೂ ಕಂಡುಕೊಂಡಿದ್ದರು. ಮಾತ್ರವಲ್ಲ ಅದನ್ನು ಹಾಗೆ ವಿಸ್ತರಿಸಿಕೊಂಡು ದುಡಿಸಿಕೊಳ್ಳಬಲ್ಲ ಶಕ್ತಿಯಿದ್ದ ಕಾದಂಬರಿಕಾರ್ತಿಯನ್ನು ಕೂಡ ಇಲ್ಲಿ ಕಾಣುತ್ತೇವೆ. ಮನುಷ್ಯನ ಮತ್ತು ಸಮುದಾಯದ ಸೂಕ್ಷ್ಮಗಳನ್ನು ಅದ್ಭುತವಾಗಿ ಗ್ರಹಿಸುವ ಮತ್ತು ಅಷ್ಟೇ ಸೂಕ್ಷ್ಮವಾಗಿಯೂ, ಕಲಾತ್ಮಕವಾಗಿಯೂ ಅಕ್ಷರದಲ್ಲಿ ಹಿಡಿದಿಡಬಲ್ಲ ಛಾತಿಯೂ ಉಳ್ಳ ಉಮಾ ರಾವ್ ಸ್ವತಃ ಒಂದಿಷ್ಟು ಅವಸರ, ಅಸಡ್ಡೆಗಳಿಂದ ಕೃತಿಗೆ ಕೊಡಬೇಕಾದ ಪೋಷಣೆ ನೀಡದೆ ಹೋದುದರಿಂದ ಕಾದಂಬರಿ ಅವರದೇ ನಿರ್ಲಕ್ಷ್ಯಕ್ಕೆ ತುತ್ತಾಗಿದೆ ಎನಿಸುತ್ತದೆ.

ಕೇವಲ ಐವತ್ತಮೂರು ಪುಟಗಳಲ್ಲಿ ಮುಗಿದುಬಿಡುವ ಈ ಪುಟ್ಟ ಕಾದಂಬರಿ ಬೃಹತ್ ಕಾದಂಬರಿಗಳು ಸಾಧಿಸಲು ವಿಫಲವಾದ ಒಂದು ಮನೋಭೂಮಿಕೆಯನ್ನೂ, ತಲ್ಲಣಗಳನ್ನೂ ಹುಟ್ಟಿಸಬಲ್ಲಷ್ಟು ಸಶಕ್ತವಾಗಿದ್ದು ಓದುಗರ ಮೆಚ್ಚುಗೆಗೆ ಪಾತ್ರವಾಗುತ್ತದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Thursday, June 26, 2014

ಎಸ್ ದಿವಾಕರ್ ಅವರ ಕತೆಗಳು : ಒಂದು ಮರುಓದು

ಎಸ್ ದಿವಾಕರ್ ಬರೆದಿರುವುದೆಲ್ಲ ಎರಡು ಕಥಾಸಂಕಲನಗಳು, ಒಂದು ಕವನ ಸಂಕಲನ ಮತ್ತು ಮೂರು ಪ್ರಬಂಧ ಸಂಕಲನಗಳು. ಇವಿಷ್ಟರಿಂದಲೇ ಅತ್ಯುತ್ತಮವಾದವುಗಳನ್ನು ಆಯುವುದು ಎಂದರೇನು ಎಂಬ ಪ್ರಶ್ನೆ ಎದುರಾಗಿದ್ದು ನಿಜ. ಇದಕ್ಕೆ ಎರಡು ಮುಖಗಳು. ಒಂದು ಎಸ್ ದಿವಾಕರ್ ಬರೆದಿರುವುದೇ ಕಡಿಮೆ ಎನ್ನುವುದು. ಇನ್ನೊಂದು ಬರೆದು ಪ್ರಕಟಿಸಿರುವುದೆಲ್ಲ ಅತ್ಯುತ್ತಮವಾದ್ದನ್ನು ಮಾತ್ರವೇ ಎನ್ನುವುದು. ಎರಡೂ ಸತ್ಯವೇ. ಆದರೆ ನನಗೆ ಮುಖ್ಯವೆನಿಸಿದ್ದು ಅವರ ಕತೆಗಳು, ಕವನಗಳು ಮತ್ತು ಪ್ರಬಂಧಗಳನ್ನು ಆಯುವಲ್ಲಿ ಆಯಾ ಪ್ರಕಾರದಲ್ಲಿ ಎಸ್ ದಿವಾಕರ್ ಅವರ ಬರವಣಿಗೆಯ ವೈಶಿಷ್ಟ್ಯವನ್ನು ಸೂಚಿಸುವಂಥವುಗಳನ್ನೇ ಒಂದೆಡೆ ಸಂಕಲಿಸುವುದು. ಅದೇ ಕಾಲಕ್ಕೆ ಅವರು ಅನುವಾದಕ್ಕೆ ಆರಿಸಿಕೊಂಡ ಪಠ್ಯದಲ್ಲಿ ಅವರ ಅನುವಾದದ ವೈಶಿಷ್ಟ್ಯವನ್ನು ಸೂಚಿಸಬಲ್ಲ ಕೆಲವು ಆಯ್ದ ಭಾಗವನ್ನು ಕೂಡ ಜೊತೆಗಿಟ್ಟುಕೊಂಡು ಎಸ್ ದಿವಾಕರ್ ಅವರ ಇದುವರೆಗಿನ ಸಾಹಿತ್ಯದತ್ತ ಒಂದು ಅಧ್ಯಯನದ ದೃಷ್ಟಿ ಬೀರಲು ಸಾಧ್ಯವಾಗುವಂಥ ಮಾದರಿಯೊಂದನ್ನು ನಿರ್ಮಿಸಿಕೊಳ್ಳುವುದು. ಹೀಗೆ ಮಾಡುವಾಗ ಸಾಧ್ಯವಿರುವ ಮಟ್ಟಿಗೆ ಕನ್ನಡದ ಸಹಲೇಖಕರ ಸಾಹಿತ್ಯದೊಂದಿಗೆ ಎಸ್ ದಿವಾಕರರ ಕೃತಿಗಳ ಅನುಸಂಧಾನವನ್ನೂ ಸಾಧಿಸುವುದು. ಹೊಸತಲೆಮಾರಿಗೆ ಅವರನ್ನು ಪರಿಚಯಿಸಬಲ್ಲಂಥ ಒಂದು ಕೃತಿಯನ್ನು ಈ ಬಗೆಯಾಗಿ ರೂಪಿಸುವುದಕ್ಕೆ ಮಾಡಿದ ಪ್ರಯತ್ನ ಇದು.

ಉದಾಹರಣೆಗೆ, ಅವರ ಕತೆಗಳಲ್ಲಿ ಅವರು 1. ವಿವರಗಳಿಗೆ ನೀಡುವ ಮಹತ್ವ ಮತ್ತು ಅದನ್ನು ಕಥಾನಕದ ಚೌಕಟ್ಟಿನಲ್ಲಿ ಕೂರಿಸುವ ಬಗೆಯನ್ನೇ ವಿಶೇಷವಾಗಿ ಸೂಚಿಸುವ ಒಂದು ಕತೆ (‘ದಾರಿ ನೂರಾರುಂಟು ಬೆಳಕಿನರಮನೆಗೆ’) 2. ಒಂದು ಸಂವೇದನೆಯನ್ನು ಸೃಜಿಸಬಲ್ಲ ಕವಿಭಾವ ಪ್ರತಿಮಾ ಪುನರ್ ಸೃಷ್ಟಿ ಪ್ರಕ್ರಿಯೆಯಲ್ಲಿ ಅವರು ಸಫಲರಾದ ಕತೆಗಳಲ್ಲಿ ಒಂದು (‘ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ’) 3. ಅವರ ಪ್ರಯೋಗಶೀಲತೆಯ ತುಡಿತದ ಸ್ಪರ್ಶವನ್ನಷ್ಟೇ ಮಾಡಬಲ್ಲ ಕೆಲವು ಕತೆಗಳು ( ‘ಉಚ್ಛಾಟನೆ’, ‘ದ್ವಂದ್ವ’, ‘ದಾರಿಯಲ್ಲಿ’) 4. ವಸ್ತುವೈವಿಧ್ಯಕ್ಕೆ ಅವರು ಕೊಡುವ ಮಹತ್ವವನ್ನು ಎತ್ತಿತೋರಿಸಬಲ್ಲ ಕತೆಗಳು (‘ಹರಕೆ’, ‘ಪೆಟ್ಟಿಗೆ’, ‘ಜಗನ್ನಾಥ’) ಮತ್ತು 5. ತಾಂತ್ರಿಕವಾಗಿ ಮತ್ತು ತಾತ್ವಿಕವಾಗಿ ಅವರು ವಸ್ತುವನ್ನು ನಿರ್ವಹಿಸುವ ವಿಧಾನವನ್ನು ಮನಗಾಣಿಸಬಲ್ಲ ಕತೆಗಳು (‘ಕ್ರೌರ್ಯ’, ‘ಉಚ್ಛಾಟನೆ’, ‘ಜಗನ್ನಾಥ’) - ಇವುಗಳನ್ನು ಹೆಚ್ಚು ಶ್ರಮವಿಲ್ಲದೆ ಗುರುತಿಸಿಕೊಳ್ಳಬಹುದಾದಂಥ ಅತ್ಯುತ್ತಮ ಕತೆಗಳನ್ನು ಒಂದೆಡೆ ಕಾಣಿಸುವುದು.

‘ಕ್ರೌರ್ಯ’ ಕತೆ ಎಷ್ಟು ಜನಪ್ರಿಯವೆಂದರೆ, ಎಸ್ ದಿವಾಕರ್ ಎಂದರೇ ‘ಕ್ರೌರ್ಯ’ ಕತೆ ಎಂಬಷ್ಟು. ಆದರೆ ಇದು ಒಂದು ಕಾಲಕ್ಕೆ ತುಂಬ ಆಪ್ಯಾಯಮಾನವೆನಿಸಿದರೂ ಬೆಳೆಯುತ್ತಿರುವ ಕತೆಗಾರನಿಗೆ ಇಂಥ ಬ್ರಾಂಡುಗಳಿಂದ ಅನ್ಯಾಯವಾಗುವುದೇ ಹೆಚ್ಚು. ಇವತ್ತು ನಾವು ದಿವಾಕರರನ್ನೇ ಕೇಳಿದರೆ ಅವರು ‘ಕ್ರೌರ್ಯ’ ಕತೆಯನ್ನು ಕಟುವಾಗಿಯೇ ವಿಮರ್ಶಿಸುತ್ತಾರೆ. ಅದರಲ್ಲಿ subtle ಆಗಿರಬೇಕಿದ್ದೆಲ್ಲವೂ ಢಾಳಾಗಿ ಕಣ್ಣಿಗೆ ಹೊಡೆಯುವಂತಿದೆಯಲ್ಲಯ್ಯಾ, ಅದು ಹೇಗೆ ಒಳ್ಳೆಯ ಕತೆ ಎಂದು ನಮ್ಮನ್ನೇ ದಬಾಯಿಸಿಬಿಡುವ ದಿವಾಕರ್ ತಮ್ಮ ಕೃತಿಯೊಂದಿಗೆ ಇರಿಸಿಕೊಂಡಿರುವ ಈ ಆರೋಗ್ಯಕರ ಅಂತರ ಅನುಕರಣೀಯ. ಅಪಾಂಗಿತ ಜವ್ವನೆಯೊಬ್ಬಳ ಮೌನ ನೀರವ ಕ್ಷಣಗಳೇ ತುಂಬಿದ ಸುದೀರ್ಘ ಬದುಕನ್ನು ಕತೆಗಳಲ್ಲಿ ಅದ್ಭುತವಾಗಿ ಕಟ್ಟಿಕೊಡುವ ಹಲವು ಕತೆಗಳು ಕನ್ನಡದಲ್ಲಿವೆ. ಜಯಂತ ಕಾಯ್ಕಿಣಿಯವರ ‘ಅಪರೂಪ’, ಅನುಜಯಾ ಎಸ್ ಕುಮಟಾಕರ್ ಅವರ ‘ಪೊಕ್ಕಿ’ ಮತ್ತು ಜುಂಪಾ ಲಾಹಿರಿಯವರ ‘The Treatment of Beebi Haldar’ ಇಲ್ಲಿ ಉಲ್ಲೇಖನೀಯ. ದಿವಾಕರರ ಅಲಮೇಲು ಬದುಕಿನುದ್ದಕ್ಕೂ ಎದುರಿಸುತ್ತ ಬಂದಿರುವುದು ತಿರಸ್ಕಾರವನ್ನು, ಅವಳಿಗೆ ದತ್ತವಾದ, ಅವಳೆಂದರೆ ಪ್ರೀತಿಯಿಲ್ಲದ ಜಗತ್ತನ್ನು, ಅವಳತ್ತ ಎಲ್ಲಬಗೆಯ ನಿರ್ಲಕ್ಷ್ಯವನ್ನು. ಆದರೆ ದಿವಾಕರ್ ಇದನ್ನೆಲ್ಲ ವಿವರಗಳಲ್ಲಿ ಸೆಲಬ್ರೇಟ್ ಮಾಡುವುದಿಲ್ಲ ಎನ್ನುವುದನ್ನು ಗಮನಿಸಿ. ಕತೆಯ ಕೊನೆಯ ಒಂದು ಪುಟ್ಟ ಕ್ಷಣದಲ್ಲೇ ಎಲ್ಲವೂ ಓದುಗನಿಗೆ ವೇದ್ಯವಾಗಿ ಬಿಡುತ್ತದೆ. ಕತೆಯ ಹೃದಯ, ಆತ್ಮ ಎಲ್ಲವೂ ಇರುವ ಸಂದಿಗ್ಧ ಕ್ಷಣವನ್ನು ದಿವಾಕರ್ ಹೇಗೆ ಭಾಷೆಯಲ್ಲಿ ಹಿಡಿದುಕೊಡುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಇಲ್ಲಿ ಕತೆಯ ಆರಂಭದಲ್ಲಿಯೇ ದುರಂತ ಸಂಭವಿಸಿದೆ. ಹಾಗಾಗಿ ಕತೆಗೆ ಯಾವುದೇ ಕ್ಲೈಮ್ಯಾಕ್ಸ್ ಕಡೆಗೆ ಧಾವಿಸುವ ತುರ್ತಿಲ್ಲ ಮತ್ತು ಸಣ್ಣಕತೆಯ ಅಗತ್ಯವಾದ ಅಂಥ ಒಂದು ಗಮ್ಯದ ಆಕರ್ಷಣೆಯೂ ಇಲ್ಲ. ಆದರೆ ದುರಂತವನ್ನು ದುರಂತವಾಗಿಸುವ ಹೊಣೆಗಾರಿಕೆಯಿದೆ ಮತ್ತು ಅದನ್ನು ಕೊನೆಗೂ ಎಂಥ ದುರಂತವನ್ನಾಗಿಸುತ್ತಾರೆ ಎನ್ನುವುದರಲ್ಲಿ ಅವರ ನಿಜವಾದ ಸವಾಲಿದೆ. ಕತೆ ಇದನ್ನು ಸ್ವಯಂ ತಾನೇ ಎತ್ತಿಕೊಂಡ ಸವಾಲಿದು. ಇದನ್ನು ಕತೆಗಾರ ನಿಭಾಯಿಸಬೇಕಿದೆ ಮತ್ತು ಎಸ್.ದಿವಾಕರರ ಕತೆಗಾರಿಕೆಯ ಎಲ್ಲ ನೈಪುಣ್ಯ ನಮಗೆ ಕಾಣಿಸುವುದು ಇಲ್ಲಿ.

‘ಕ್ರೌರ್ಯ’ ಕತೆಯ ಮುಗ್ಧ ನಿರ್ಮಲ ಮನಸ್ಸಿನ ಅಲಮೇಲುವನ್ನಾಗಲೀ ದಿವಾಕರರ ಕತೆಗಳಲ್ಲಿ ನಾವು ಮತ್ತೆ ಮತ್ತೆ ಕಾಣುವ ವೃದ್ಧ ತಮಿಳು ದಂಪತಿಗಳನ್ನೋ, ವಿಧವೆಯರನ್ನೋ, ವಿಧುರರನ್ನೋ ಆಗಲಿ ಓದುಗ ಎಂದೂ ಮರೆಯುವುದು ಸಾಧ್ಯವಿಲ್ಲ. ಅಷ್ಟೇ ದಟ್ಟವಾಗಿ ನಮ್ಮ ಮನಸ್ಸನ್ನು ಆವರಿಸುವುದು ದಿವಾಕರರ ಕತೆಗಳಲ್ಲಿ ವಿವರ ವಿವರವಾಗಿ ಮೈದಾಳುವ ಹಳೆಯ ಕಾಲದ ಮನೆಗಳು, ಆ ಮನೆಗಳಲ್ಲಿ ಕಾಣಸಿಗುವ ಅಪರೂಪದ ಪಳೆಯುಳಿಕೆಯಂಥ ವಸ್ತುಗಳು, ಫೋಟೋಗಳು ಇತ್ಯಾದಿ. ನೊಬೆಲ್ ವಿಜೇತ ತುರ್ಕಿಯ ಕಾದಂಬರಿಕಾರ ಪಮುಕ್ ಇಂಥವೇ ವಸ್ತುವಿವರಗಳಿಂದ ಮನುಷ್ಯನ ಸ್ಮೃತಿಯನ್ನು, ನೆನಪನ್ನು ಮತ್ತು ತನ್ಮೂಲಕ ಕಾಲವನ್ನು reconstruct ಮಾಡಿ ಮನುಷ್ಯ ಸಂಬಂಧಗಳಿಗೂ, ಅವನ ಸಂವೇದನೆಗಳಿಗೂ ಸೇತುವೆ ನಿರ್ಮಿಸುವಂಥ ಪ್ರಯೋಗಶೀಲ ಕಾದಂಬರಿಗಳನ್ನು, ಪುಸ್ತಕಗಳನ್ನು ಬರೆದಿರುವುದು ಇಲ್ಲಿ ಉಲ್ಲೇಖನೀಯ. ಎಸ್.ದಿವಾಕರ್ ತಮ್ಮ ಪ್ರಬಂಧಗಳಲ್ಲಿ ಕಾಣಿಸುವ ಅಂತರ್ ಸಂಬಂಧ, ಕವನಗಳಲ್ಲಿ ಒಂದರೊಂದಿಗೆ ಇನ್ನೊಂದು ಪ್ರತಿಮೆಯನ್ನು ಅಕ್ಕಪಕ್ಕ ಇರಿಸಿ ಸೃಜಿಸುವ ಅನುಭವ ವಿಶೇಷ, ಕತೆಗಳ ವಿಶಿಷ್ಟ ವಿವರಗಳಲ್ಲಿ ತರುವ ವಸ್ತುವಿಶೇಷಗಳಿಂದಲೇ ಸಾಧ್ಯವಾಗಿಸುವ ಸಂವೇದನೆ ಗಮನಾರ್ಹವಾಗಿದೆ.

‘ದಾರಿ ನೂರಾರುಂಟು ಬೆಳಕಿನರಮನೆಗೆ’ ಮತ್ತು ‘ಎಲ್ಲಬಲ್ಲವರಿಲ್ಲ ಈ ಊರಿನಲ್ಲಿ’ ನನ್ನ ಅಚ್ಚುಮೆಚ್ಚಿನ ಕತೆಗಳು. ‘ದಾರಿ ನೂರಾರುಂಟು ಬೆಳಕಿನರಮನೆಗೆ’ ಕತೆಯ ಮಣ್ಣಾರ್‌ಗುಡಿ ಕೋದಂಡಪಾಣಿ ಬದುಕುತ್ತಿರುವ ಮನೆ, ಆತನ ಮನಸ್ಸಿನ ಗಡಿಯಾರದಲ್ಲಿ ನಿಂತೇ ಹೋಗಿರುವ ಕಾಲ ಮತ್ತು ಸ್ಮೃತಿಗಳು ಒಂದಕ್ಕೊಂದು ಪೂರಕವಾಗಿವೆ. ಎಪ್ಪತ್ತು ವರ್ಷಗಳ ಹಿಂದಿನದನ್ನು ಯಥಾವತ್ತಾಗಿ ನೆನಪಿಸಿಕೊಳ್ಳಬಲ್ಲ ಕೋದಂಡಪಾಣಿಗೆ ಅವೇ ನೆನಪುಗಳು ವರ್ತಮಾನಕ್ಕೆ ಬರಲು, ಚಾಚಿಕೊಳ್ಳಲು ಮಾತ್ರ ನಿರಾಕರಿಸುವುದು ವಿಚಿತ್ರ. ನಮಗೆಲ್ಲರಿಗೂ ಆಪ್ತವಾದ ಒಂದು ಕಾಲಮಾನ ನಮ್ಮದೇ ಬದುಕಿನಲ್ಲಿ ಇದ್ದೇ ಇರುತ್ತದೆ. ಅದರೊಂದಿಗೆ ನಾವು ನಿಂತುಬಿಡುವುದು ಹೇಗೆ ದುರಂತಕ್ಕೆ ಕಾರಣವಾಗಬಹುದೋ ಹಾಗೆಯೇ ಅದು ನಮ್ಮ ವರ್ತಮಾನಕ್ಕೆ ಚಾಚಿಕೊಂಡ ಬಗೆಯನ್ನು ಗುರುತಿಸಿಕೊಳ್ಳುವ, ಸಮರ್ಥಿಸಿಕೊಳ್ಳುವ ಛಾತಿಯನ್ನು ಹೊಂದಿರದೇ ಇರುವುದು ಕೂಡ ದುರಂತವೇ.

ಮೂಕಿಚಿತ್ರಗಳ ಉಚ್ಛ್ರಾಯದ ದಿನಗಳಲ್ಲಿಯೇ ನಿಂತು ಹೋದಂತಿರುವ ಕೋದಂಡಪಾಣಿಗೆ ಜಯಮಣಿಯ ಪ್ರಶ್ನೆಗಳು ವಿಚಿತ್ರವೆನಿಸುವಂತೆಯೇ ಜಯಮಣಿಗೆ ತಾನು ಕಾಲದ ಸವಾಲನ್ನು ಎದುರಿಸುತ್ತಿರುವ ಅರಿವಾಗಿ ಬೆವರುತ್ತದೆ. ತಾನು ಬಹುವಾಗಿ ಮೆಚ್ಚಿ ಪ್ರೀತಿಸಿದ್ದ ಹುಡುಗಿ ಎಲ್ಲೋ ವಿಧವೆಯಾಗಿ, ಮುದುಕಿಯಾಗಿ ಸಾಯುವ ಹಂತದಲ್ಲಿರುವಾಗಲೂ ಪ್ರೇಮಪತ್ರಗಳನ್ನು ಬರೆದು ಅವರಿವರ ಮೂಲಕ ತಲುಪಿಸುತ್ತಿದ್ದ ಕೋದಂಡಪಾಣಿಗೆ ಕೊನೆಗೂ ವರ್ತಮಾನಕ್ಕೆ ಮತ್ತು ವಾಸ್ತವಕ್ಕೆ ಸಂಬಂಧ ಕಲ್ಪಿಸುವ ಎಳೆಯೊಂದು ಪ್ರಾಪ್ತವಾಗುವುದು ‘ಅಮ್ಮಾಳ್ ಎರಂದುಪೋನಾರ್’ ಎಂಬ ವಾರ್ತೆಯೇ ಆಗುವುದು ವಿಪರ್ಯಾಸ. ಆಗ ಕೋದಂಡಪಾಣಿ, ತಾವು ಸಮೃದ್ಧವೆಂದು ಬಗೆದಿದ್ದ ಭೂತಕಾಲ ಹೀಗೆ ಇದ್ದಕ್ಕಿದ್ದಂತೆ ಶೂನ್ಯವಾಗುವುದನ್ನು ಮುಖಾಮುಖಿಯಾಗುತ್ತಾರೆ. ಈ ಶೂನ್ಯ ಸೂಚಿಸುವ ಕತ್ತಲೆಯೇ ಮುವ್ವತ್ತೊಂಭತ್ತು ವರ್ಷಗಳ ಬಳಿಕ ಮತ್ತೆ ಪೀಟರ್ಸ್ ರೋಡಿನ ಒಂದು ಮನೆಯ ಮರಗತವಲ್ಲಿಯನ್ನು ಹುಡುಕಿಕೊಂಡು ಹೊರಡುವುದು ಮತ್ತು ವರ್ತಮಾನವನ್ನು ಕೊನೆಗೂ ತೆರೆದ ಬೀದಿಯಲ್ಲೇ ಮುಖಾಮುಖಿ ಎದುರಿಸುವುದು ಅನಿವಾರ್ಯವಾಗಿಸಿದಂತಿದೆ. ಸಹಜವಾಗಿಯೇ ಈ ಭೂತ ಮತ್ತು ವರ್ತಮಾನ ಸಂಧಿಸುವ ಸಂಕ್ರಮಣ ಘಟ್ಟ ತುಂಬ ವಿಭ್ರಾಂತಮಯವಾಗಿ ಬಿಡುತ್ತದೆ. ಕಸದಲ್ಲಿ ಸಿಕ್ಕ ಬಲೂನಿನಂಥ ವಸ್ತು ಅದ್ಯಾವ ಮರೆವಿನಲ್ಲಿ ತಮ್ಮ ಕಿಸೆಯನ್ನು ಸೇರಿತೆನ್ನುವುದು ಕೂಡ ತಿಳಿಯದ ಕೋದಂಡಪಾಣಿ ಅದನ್ನೇ ತಮ್ಮ ಬಳಿ ಬಂದ ನಾಲ್ಕು ವರ್ಷದ ಹುಡುಗನಿಗೆ ತೆಗೆದುಕೊಡಲು ಮುಂದಾಗುವ ಕ್ಷಣದಲ್ಲಿ ಬದುಕಿನ ಗಡಿಯಾರ ಮತ್ತೆ ಟಿಕ್ ಟಿಕ್ ಸದ್ದು ಸುರುಹಚ್ಚಿಕೊಂಡಂತಿದೆ.

Time Present and Time Past are both perhaps present in Time Future and Time Future contained in Time Past" ಎಂದ ಟಿ ಎಸ್ ಎಲಿಯಟ್ಟನ ಮಾತು ಇಲ್ಲಿ ನೆನಪಾಗುತ್ತದೆ. Umberto Eco ಬರೆದ ‘The Mysterious Flame of Queen Loana’ ಓದಿದವರಿಗೆ ಈ ಮರೆವಿನ ವಸ್ತು ಹೇಗೆಲ್ಲ ಕತೆ-ಕಾದಂಬರಿಗಳಲ್ಲಿ ಹಾದು ಹೋಗಿದೆ ಎಂಬುದು ಕುತೂಹಲಕರ ಅಧ್ಯಯನಕ್ಕೆ ವಸ್ತುವಾದೀತು. ಶ್ರೀಧರ ಬಳಗಾರರ ‘ಒಂದು ಫೋಟೋದ ನೆಗೆಟಿವ್’ ಕತೆ ಕೂಡ ವೆಂಕಟಪ್ಪನ ವಿಚಿತ್ರ ಮರೆವಿನ ಸುತ್ತ ಇದೆ. ಅಲ್ಲಿ ತಮ್ಮ ತಮ್ಮದೇ ಕಾರಣಗಳಿಗಾಗಿ ಕ್ಷಣದ ಮಟ್ಟಿಗೆ ಅವರನ್ನು ಈ ‘ಕಾಲ’ಕ್ಕೆ ಎಳೆದು ತರಲು ಪ್ರಯತ್ನಿಸುವ ಸಂಬಂಧಿಕರ ಪ್ರಯತ್ನವೂ ಸೇರಿದಂತೆ ಮರೆವೇ ಒಂದು ಪ್ರತಿಮೆಯಾಗಿ ಹೇಳುವ ಸತ್ಯಗಳು ನಮ್ಮನ್ನು ತಲ್ಲಣಗೊಳಿಸುವಂತಿವೆ.

ಹೀಗೆ ಕಾಲದೊಂದಿಗೆ ಹೆಜ್ಜೆ ಹಾಕದಿರಲು ಬಯಸಿಯೋ ಬಯಸದೆಯೋ ನಿರ್ಧರಿಸಿದ ಪಾತ್ರಗಳು ಎಸ್ ದಿವಾಕರರ ಕತೆಗಳಲ್ಲಿ ನಮಗೆ ಮತ್ತೆ ಮತ್ತೆ ಎದುರಾಗುವುದೊಂದು ಸೋಜಿಗ. ದಿವಾಕರರ ಹಲವಾರು ಕತೆಗಳಲ್ಲಿ ಅವರು ಮರುಗಭೂಪತಿಯಾಗಿ, ಅಹಲ್ಯಾಬಾಯಿಯಾಗಿ, ರುಕ್ಮಿಣಮ್ಮನೋ, ಜಾನಕಮ್ಮನೋ ಆಗಿ ಮತ್ತೆ ಮತ್ತೆ ಕಾಣಿಸಿಕೊಳ್ಳುವುದು ಗಮನಿಸಬಹುದು. ‘ಕ್ರೌರ್ಯ’ ಕತೆಯ ಪ್ರೊಫೆಸರ್ ತಿರುಚ್ಚೆಂದೂರ್ ಶ್ರೀನಿವಾಸ ರಾಘವಾಚಾರ್ಯರು ಕೂಡ ನಮಗೆ ಮತ್ತೆ ‘ಜಗವೇ ಮಾಯ’ ಕವನದಲ್ಲಿಯೂ, ‘ಬೆದರಿಕೆ’ ಎಂಬ ಕತೆಯಲ್ಲಿಯೂ ಎದುರಾಗುತ್ತಾರೆ. ದಿವಾಕರರ ಒಬ್ಬ ಅಹಲ್ಯಾಬಾಯಿ, ಕೋದಂಡಪಾಣಿಯ ಜೀವನಕ್ರಮದ ಆಯ್ಕೆ ಏನಿದೆ, ಅದರ ಹಿಂದೆ ದಾರುಣವಾದ ಕಹಿಯಿದೆ. ಈ ಜೀವನ ವಿಮುಖಿಯಾದ, ಜೀವ ವಿರೋಧಿಯಾದ ಮತ್ತು ಜೀವನಪ್ರೀತಿ ಕಳೆದುಕೊಂಡ ಹಂತದ ಕತೆಯನ್ನು ನಿಂತ ನೀರಿನಂಥ ಬದುಕನ್ನು ವಿವರಗಳಲ್ಲಿ ಹೇಳುವುದು ಕಷ್ಟ. ಇವರಿಗೆ ಬದುಕು ಅರ್ಥಹೀನವೂ, ನಿರರ್ಥಕವೂ ಅನಿಸಿದ ಮೇಲೆಯೇ ಹೀಗೆ ಇದ್ದೂ ಸತ್ತಂತೆ ಬದುಕುವುದು ಸಾಧ್ಯವಾಗಿರಬೇಕು. ಈ ಕತೆಗಳನ್ನು ಓದುತ್ತಿರುವಂತೆಲ್ಲ ಅಹಲ್ಯಾಬಾಯಿಯನ್ನು, ರುಕ್ಮಿಣಮ್ಮನನ್ನು ಅಥವಾ ಜಾನಕಮ್ಮನನ್ನು ಹೊರಳುದಾರಿಯೊಂದು ಇದಿರುಗೊಳ್ಳುವುದು ಸಾಧ್ಯವೇ ಇರಲಿಲ್ಲವೆ ಎಂಬ ಹಳಹಳಿಕೆ ಓದುಗನನ್ನು ಕಾಡದಿರಲು ಸಾಧ್ಯವೇ ಇಲ್ಲ. ಅದಕ್ಕೆ ಕಾರಣ ಎಸ್ ದಿವಾಕರರ ನಿರೂಪಣಾ ಕೌಶಲ್ಯ.

ಕಟು ವಾಸ್ತವದ Factual ವಿವರಗಳನ್ನು ಕೊಡುತ್ತಲೇ ಒಬ್ಬ ಸಾಮಾನ್ಯ ನೋಡುಗನ (ಸಾಧಾರಣವಾಗಿ ಅದೇ ಊರಿನ, ಕೇರಿಯ ಮಂದಿ) ಲಘುಧಾಟಿಯೂ ಸಮಾನಾಂತರವಾಗಿ ಉಳಿಯುವಂತೆ ನಿಭಾಯಿಸುವ ಈ ಎರಡು ಪಾತಳಿಯ ನಿರೂಪಣೆ ಇಲ್ಲಿರುವುದರಿಂದಲೇ ಈ ಕತೆಗಳು ವಸ್ತುವಿನ ಜಡತ್ವದ ಭಾರವಿಲ್ಲದೆ, ಕಥಾನಕದಲ್ಲಿ ತಾಟಸ್ಥ್ಯವಿಲ್ಲದಂತೆ ಲವಲವಿಕೆಯಿಂದ ಆಕರ್ಷಕವಾಗಿರಲು ಸಾಧ್ಯವಾಗಿದೆ. ಎಸ್. ಸುರೇಂದ್ರನಾಥರ ‘ನಾತಲೀಲೆ’ ಕಥಾಸಂಕಲನದ ಕಪ್ಪು ಹೊಗೆಹಿಡಿದ ಮನೆಯೊಳಗಿನ ಗೊಡ್ಡು ವೈದಿಕ ಕರ್ಮಠ ಸೀತಾರಾಮ ಶಾಸ್ತ್ರಿಗಳು (‘ಕುರುವಿನ ಗುಲಾಮ’), ಮಾರುತಿರಾವ್ ತುಕಾರಾಮ್ ಗಾಢವೇ (‘ನಾತಲೀಲೆ’), ಶ್ರೀಪತಿ ತೆರಗುಂಡಿ (‘ಮಾತು ಮಾತಿಂದೇ ಅವನ ಕೊಂದಿಹರು’), ಮದನಪಲ್ಲಿ ಭವಾನಿಶಂಕರ ಬೋಧರಾಯ ಸುಬ್ರಮಣ್ಯ ಶರ್ಮ ಮತ್ತು ಅವನ ಹೆಂಡತಿ ಅನುಸೂಯ (‘ಗುಪ್ತಸಮಾಲೋಚನೆ’), ಅಶೋಕ ಹೆಗಡೆಯವರ ‘ಒಂದು ತಗಡಿನ ಚೂರು’ ಕಥಾಸಂಕಲನದ ಉಮಾಪತಿ ಮತ್ತು ವೆಂಕಟಸುಬ್ಬಯ್ಯ ರಾಮೋಜಿ ಬಾಳಾ (‘ದೂರ ಸಮುದ್ರದ ಕಾಡು’), ವೆಂಕಟಸುಬ್ಬಯ್ಯ (‘ಪಿ.ಎಚ್.ಡಿ ಮತ್ತು ಗಡಿಯಾರ ಗೋಪುರದ ಇತಿಹಾಸವು’) ಮುಂತಾದ ಪಾತ್ರಗಳನ್ನು ಇಲ್ಲಿ ನೆನೆಯಬಹುದು. ಇವರುಗಳು ಅನುಸರಿಸುವ ಲಘು ವೈನೋದಿಕ ವ್ಯಂಗ್ಯ ಧಾಟಿಯನ್ನು ಎಸ್. ದಿವಾಕರ್ ಪೂರ್ತಿಯಾಗಿ ಅನುಸರಿಸುವುದಿಲ್ಲವಾದರೂ ದಿವಾಕರರ ಕತೆಯ ನಿರೂಪಣೆ ಕೂಡ ಇದನ್ನೆಲ್ಲ ಲಘುವಾಗಿಯೂ ನೋಡಬಹುದಾದ ಒಂದು ಆಯಾಮವನ್ನು ಬಿಟ್ಟುಕೊಡದೇ ಗಂಭೀರಗತಿಯಲ್ಲೇ ಸಾಗುವುದು ಗಮನಾರ್ಹ.

‘ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ’ ಕತೆಯ ಅಹಲ್ಯಾಬಾಯಿ ಮತ್ತು ಅವಳ ಮಗಳು ಕಮಲಾ ‘ಕ್ರೌರ್ಯ’ ಕತೆಯ ಅಲಮೇಲುವಿನಂತೆಯೇ ಬಹುಕಾಲ ನಮ್ಮ ನೆನಪಿನಲ್ಲಿ ನಿಂತು ಬಿಡುತ್ತಾರೆ. ವಿಲಿಯಂ ಫಾಕ್ನರನ ‘A Rose for Emily’ ಕತೆಯನ್ನು ನೆನಪಿಸುವ ಈ ಕತೆಯ ನಿರೂಪಣೆ ಒಂದು ಹಂತದ ನಂತರ ಸ್ವಲ್ಪ ಭಾಗ ಅಹಲ್ಯಾಬಾಯಿಯ ಸ್ವಗತದ ಧಾಟಿಯಲ್ಲೂ, ಉಳಿದರ್ಧ ಜನಾರ್ದನನ ಮಾತುಗಳಲ್ಲಿಯೂ ಇರುವುದು ಗಮನಾರ್ಹ. ಇದರಿಂದಾಗಿ ನಮಗೆ ಅಹಲ್ಯಾಬಾಯಿಯ ಮಾತುಗಳನ್ನೂ, ಊರ ಹೊರಗಿನ ಕೊಂಡಿಯಾದ ಜನಾರ್ದನನ ಮಾತುಗಳನ್ನೂ ಕೇಳಿಸಿಕೊಂಡು ಗ್ರಹಿಕೆಯನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಅನುಭವಿಸುತ್ತಿರುವವನಿಗೂ, ಅದನ್ನು ದೂರದಿಂದ ನೋಡುತ್ತಿರುವವನಿಗೂ ಇರುವ ಸಂವೇದನೆಗಳ ವ್ಯತ್ಯಾಸವನ್ನೂ ಗುರುತಿಸಲು ಇಲ್ಲಿ ಸಾಧ್ಯವಾಗಿದೆ. ಹಾಗಾಗಿ, ‘ಕತೆ’ಯಾಗಿ ಅನುಭವವನ್ನು ‘ಓದು’ತ್ತಿರುವ ಓದುಗನೊಬ್ಬ ಮಾನವೀಯ ಸಂವೇದನೆಯಿಂದ ಕತೆಯ ಪಾತ್ರಗಳನ್ನು ತಲುಪಲು ಈ ತಂತ್ರ ಸಹಕಾರಿಯಾಗಿದೆ. ಅಹಲ್ಯಾಬಾಯಿಯ ಕತೆ ‘ಮುಗಿಯದಾಸೆಯ ಬಾಗಿಲು’ ಕತೆಯಲ್ಲಿ ಮುಂದುವರಿಯುತ್ತದೆ. ಆ ಕತೆ ಈ ಸಂಗ್ರಹದಲ್ಲಿ ಇಲ್ಲ.

‘ಅನಾಥರು’, ‘ಇತಿಹಾಸ’, ‘ನೆಲೆ’, ‘ಬಿಳಿಯ ಹೂಗಳ ಕವಿತೆ’, ‘ನನಗೂ ನಿನಗೂ ಅಂಟಿದ ನಂಟು’, ‘ಅಂತರಾಳದಲ್ಲಿ ನಿಂತ ನೀರು’ ಮುಂತಾದ ಇನ್ನೂ ಕೆಲವು ಅತ್ಯುತ್ತಮ ಕತೆಗಳನ್ನು ಕೈಬಿಡುವಾಗ ಆಯ್ಕೆಯ ಕಷ್ಟಗಳು ಕಾಡಿವೆ. ಆದರೆ ಯಾವುದನ್ನು ಆರಿಸಿದ್ದರೂ ಅತ್ಯುತ್ತಮವಾದ ಕೆಲವನ್ನು ಕೈಬಿಟ್ಟ ಸಂಕಟ ಉಳಿದೇ ಉಳಿಯುತ್ತಿತ್ತು. ಹಾಗಾಗಿ ಈ ಕತೆಗಳ ಓದು ಇನ್ನುಳಿದ ಕತೆಗಳತ್ತ ಓದುಗರನ್ನು ಸೆಳೆಯಲಿ ಎಂದು ಬಯಸಿ ಆಯ್ಕೆಯನ್ನು ಮುಗಿಸಬೇಕಾಯಿತು.

ಕತೆಗಾರರಾಗಿ ಎಸ್ ದಿವಾಕರ್ ಮಹಾ ಪ್ರಯೋಗಶೀಲರು. ಅವರ ಪ್ರಯೋಗಶೀಲತೆಯ ಬಗ್ಗೆ ಅವರು ಸ್ವತಃ ತಮ್ಮ ಸಂದರ್ಶನದಲ್ಲಿ ವಿವರಿಸಿದ್ದಾರೆ. ಅವರ ಪ್ರಯೋಗಶೀಲತೆಯನ್ನು ಯಾವುದೇ ಹೊಸತನ್ನು ಜನ ಮೊದಲಬಾರಿಗೆ ಸ್ವೀಕರಿಸುವಾಗ ಹೇಗೆ ಸ್ವೀಕರಿಸುತ್ತಾರೋ ಹಾಗೆಯೇ ಕನ್ನಡದ ಓದುಗರು ತರಹೇವಾರಿಯಾಗಿ ಸ್ವೀಕರಿಸಿದ್ದಾರೆಂಬುದು ಕೂಡ ನಿಜ. ಪ್ರಯೋಗಶೀಲತೆಯಿಂದ ಒಳ್ಳೆಯದಾಯಿತೆ ಕೆಟ್ಟದಾಯಿತೆ ಎಂಬುದಕ್ಕಿಂತ ಅಂಥ ಪ್ರಯತ್ನಗಳಿಂದ ತೆರೆದುಕೊಳ್ಳುವ ಹೊಸ ದಾರಿಗಳು ನಮಗೆ ತಿಳಿಯುತ್ತವೆ ಮಾತ್ರವಲ್ಲ, ತಿಳಿಯುವುದರಿಂದಲೇ ಅವುಗಳ ಯಶಸ್ಸು, ಸೋಲು ಅನುಭವಕ್ಕೆ ಬರುತ್ತದೆ. ನಡೆಯುವವರು ಎಡವಬಹುದೇ ಹೊರತು ನಿಂತೇ ಉಳಿದವರಲ್ಲ. ‘ದಾರಿಯಲ್ಲಿ’ ಕತೆ ಅಂಥ ಒಂದು ಪ್ರಯೋಗಶೀಲತೆಯ ಮಾದರಿ. ಇದು ಸ್ಲಾವೋಮೀರ್ ಮ್ರೋಸೆಕ್‌ ಪ್ರೇರಿತ ಕತೆ. ‘ಉಚ್ಛಾಟನೆ’, ‘ದ್ವಂದ್ವ’ ಮತ್ತು ‘ಜಗನ್ನಾಥ’ - ಈ ಮೂರೂ ಕತೆಗಳು ಎಸ್.ದಿವಾಕರ ಪ್ರಯೋಗಶೀಲತೆಯ ವಿಭಿನ್ನ ಮಾದರಿಗಳಾಗಿವೆ.

ಸಂದೇಶ ವಾಹಕರ, ಸಂದೇಶದ ಕುರಿತಾಗಿಯೇ ಇರುವ ಈ ‘ದಾರಿಯಲ್ಲಿ’ ಎಂಬ ಕತೆಯಲ್ಲಿ ಟೆಲಿಗ್ರಾಫ್ ತಂತಿಗಳು, ಕಂಬಗಳು ಇಲ್ಲ. ಮನುಷ್ಯರೇ ಶಿಸ್ತಾಗಿ ದಾರಿಯುದ್ದಕ್ಕೂ ಒಂದು ನಿಶ್ಚಿತ ಅಂತರದಲ್ಲಿ ನಿಂತು ಒಬ್ಬರನ್ನೊಬ್ಬರು ಆಲಿಸಿ ಸಂದೇಶವನ್ನು ಗಟ್ಟಿಯಾಗಿ ಒದರುತ್ತಾರೆ. ಸಂದೇಶ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೀಗೆ ಚಲಿಸುತ್ತದೆ. ತಮಾಷೆಯೆಂದರೆ, ಸುದ್ದಿ ಯಾರದ್ದು, ಯಾರನ್ನು ತಲುಪಬೇಕಾಗಿದೆ ಎಂಬುದೇ ನಿಗೂಢ. ಬಹುಷಃ ಅದು ಎಲ್ಲರಿಗೂ ತಲುಪಿದರೆ ಕೊನೆಗೂ ತಲುಪಲೇ ಬೇಕಾದ ವ್ಯಕ್ತಿಯನ್ನೂ ತಲುಪಿಯೇ ತಲುಪುತ್ತದೆ ಎಂಬ ಚಿಂತನೆಯ ಮೇಲೇ ಈ ವ್ಯವಸ್ಥೆ ನಿಂತಂತಿದೆ! ಆದರೆ ಹೀಗೆ ಬದುಕಿನ ಸೂಕ್ಷ್ಮಗಳೆಲ್ಲ ಉದ್ಘೋಷಣೆಯಾಗುವುದು ಸರಿಯೇ, ತಪ್ಪೇ ಎಂಬ ಪ್ರಶ್ನೆಗಳನ್ನೆಲ್ಲ ಖಾಸಗಿತನವಿಲ್ಲದ ಇಂಟರ್ನೆಟ್, ಹಾದಿಯುದ್ದಕ್ಕೂ ಕಾಲಿಗೆ ತೊಡರುವ ಮೊಬೈಲ್ ಫೋನುಗಳ ಕಾಲಮಾನದಲ್ಲಿ ನಾವು ಹೊಸದಾಗಿ ಕೇಳಿಕೊಳ್ಳಬಹುದು.

‘ಉಚ್ಛಾಟನೆ’ ಕತೆ ಮೇಲ್ನೋಟಕ್ಕೆ ನಮ್ಮ ಮನಸ್ಸಿನ ಸುಪ್ತ ಆಸೆಗಳನ್ನು, ಕನಸುಗಳನ್ನು ಮತ್ತು ಕಳ್ಳ ನಿರೀಕ್ಷೆಗಳನ್ನು ಕೇಂದ್ರದಲ್ಲಿರಿಸಿಕೊಂಡ ಕತೆ. ನಾವು ಇದುವರೆಗೂ ಕತ್ತಲಲ್ಲಿ ಮತ್ತು ಮನಸ್ಸಿನೊಳಗೇ ಅದುಮಿ ಅಡಗಿಸಿಟ್ಟ ನಮ್ಮದೇ ವ್ಯಕ್ತಿತ್ವವೊಂದು ಕನ್ನಡಿಯೆದುರು ನಿಂತಾಗ ಮೂರ್ತವಾಗಿ ಕಾಣಿಸುವಂತೆ ಈ ಕತೆ ಮಾಡುತ್ತದೆ. ಅಂಥ ವ್ಯಕ್ತಿತ್ವ ನಮ್ಮದೇ ರೂಪ ಹೊಂದಿ, ಕಣ್ಣೆದುರೇ ಓಡಾಡಲು ತೊಡಗಿ ಎಲ್ಲಿ ನಮ್ಮ ಮಾನ ಮರ್ಯಾದೆಯನ್ನೆಲ್ಲ ಬೀದಿಯಲ್ಲಿ ಹರಾಜಿಗಿಡುವುದೋ ಎಂಬ ಆತಂಕವನ್ನು ಹುಟ್ಟಿಸುವಷ್ಟು ಕತೆ ತೀವ್ರವಾಗಿದೆ. ವಿ.ಎಸ್.ನೈಪಾಲರ ‘Half a Life’, ವಿವೇಕ ಶಾನಭಾಗರ ‘ಇನ್ನೂ ಒಂದು’, ‘ಮತ್ತೊಬ್ಬನ ಸಂಸಾರ’ ಮುಂತಾದ ಕೆಲವು ಕತೆಗಳು, ಎಸ್. ಸುರೇಂದ್ರನಾಥರ ‘ನಾ ತುಕಾರಾಂ ಅಲ್ಲ’ ನಾಟಕ, ಎಂ.ಎಸ್. ಶ್ರೀರಾಮರ ‘ಶಾರದಾ ಮೇಡಂ ಅಬ್ಸೆಂಟು’ ಕತೆ ಇಂಥ ತಂತ್ರ ಬಳಸಿಕೊಂಡಿರುವುದನ್ನು ಕಾಣಬಹುದು. ‘ನೀನಾನಾದ್ರೆ ನಾನೀನೇನಾ’ (ಷೇಕ್ಸ್‌ಪಿಯರನ ‘ಕಾಮೆಡಿ ಆಫ್ ಎರರ‍್ಸ್’ ನಾಟಕದಿಂದ ಪ್ರೇರಿತಗೊಂಡ ಎಸ್.ಸುರೇಂದ್ರನಾಥರ ಒಂದು ನಾಟಕದ ಹೆಸರು) ಎಂಬ ಸವಾಲೊಡ್ಡಿ ಪಾತ್ರಗಳ ಅಸ್ಮಿತೆಯನ್ನು ಗೊಂದಲಕ್ಕೊಡ್ಡಿ ತನ್ಮೂಲಕವೇ ವ್ಯಕ್ತಿಯಿಂದ ವಿಷಯವನ್ನು ಮುಕ್ತಗೊಳಿಸಿ ಹೊಸ ಒಳನೋಟವನ್ನು ದಕ್ಕಿಸಲು ಹವಣಿಸುವ ರಚನೆಗಳಿವು.

‘ಜಗನ್ನಾಥ’ ಕತೆ ಇನ್ನೊಂದು ಬಗೆಯ ಪ್ರಯೋಗಶೀಲತೆಯನ್ನು ಹೊಂದಿದೆ. ಎಸ್.ದಿವಾಕರರ ‘ಚೋಮ’ ಕತೆಯ ಚೋಮ ಶಿವರಾಮ ಕಾರಂತರ ‘ಚೋಮನದುಡಿ’ ಕಾದಂಬರಿಯಿಂದ ಇಳಿದು ಬಂದು ಇಡೀ ಕಾದಂಬರಿ ಬೇರೆ ಬೇರೆ ಬಗೆಯಲ್ಲಿ ಹೊರಳಿಕೊಂಡು ಬೇರೆ ಬೇರೆ ಬಗೆಯ ಆರು ಕಾದಂಬರಿಗಳಾಗಬಹುದು ಎಂಬುದನ್ನೇ ಸೂಚಿಸುವುದಕ್ಕೆ ಕಾರಣವಾಗುತ್ತಾನೆ. ಇಲ್ಲಿ ‘ಜಗನ್ನಾಥ’ ಯು.ಆರ್.ಅನಂತಮೂರ್ತಿಯವರ ‘ಭಾರತೀಪುರ’ ಕಾದಂಬರಿಯಿಂದ ಇಳಿದು ಬಂದವನು. ‘ಭಾರತೀಪುರ’ ಓದಿದವರಿಗೆ ಆ ಕಾದಂಬರಿಯ ಅಂತ್ಯದಲ್ಲಾಗುವ ವಿಪರ್ಯಾಸಕರ ಘಟನೆ ನೆನಪಿರಬಹುದು. ಗರ್ಭಗುಡಿಯ ಲಿಂಗ ಉದ್ಭವ ಲಿಂಗವಲ್ಲ ಎಂದು ಸಾಬೀತು ಮಾಡಲು ಲಿಂಗವನ್ನು ಪಾಣಿಪೀಠದಿಂದ ಅಗೆದು ತೆಗೆದು ಪಾಪನಾಶಿನಿ ಹೊಂಡದಲ್ಲೆಸೆದು ಬರುವ ಗಣೇಶನ ಉದ್ದೇಶವೇನೋ ಮಂಜುನಾಥನ ಕಬಂಧ ಬಾಹುಗಳಿಂದ ಪಾರಾಗುವುದು, ಮುಕ್ತನಾಗುವುದು. ಹೀಗೆ ‘ದೇವರು ಸತ್ತು ಹೋದ’ ಎಂದು ಘೋಷಿಸಿ ಏಕಕಾಲಕ್ಕೆ ದಲಿತರನ್ನೂ ಬ್ರಾಹ್ಮಣರನ್ನೂ ದೇವರ ಗುಲಾಮಗಿರಿಯಿಂದ ಪಾರು ಮಾಡುವ ಉದ್ದೇಶವೇ ಅವನದ್ದು. ಆದರೆ ನಡೆಯುವುದೇ ಬೇರೆ. ದಲಿತರು ದೇವಸ್ಥಾನದೊಳಕ್ಕೆ ಪ್ರವೇಶಿಸಿದರೂ ಅವರಿಗೆ ದೇವರ ದರ್ಶನ ಸಿಗಬಾರದು ಎಂದೇ ಮಹಾಮಹಿಮನಾದ ಮಂಜುನಾಥನ ಭಂಟ ಭೂತರಾಯನೇ ಗಣೇಶನ ಮೈಮೇಲೆ ಬಂದು ಹೀಗೆಲ್ಲ ಮಾಡಿಸಿ, ಮೈಲಿಗೆಯಾಗದ ಹಾಗೆ ಪಾಣಿಪೀಠದಿಂದ ಮಾಯವಾಗಿಬಿಟ್ಟ ಎಂಬ ಭಕ್ತವೃಂದದ ತರ್ಕ ನಿಲ್ಲುತ್ತದೆ! ಈ ಕತೆಯ ಜಗನ್ನಾಥನನ್ನು ಎಸ್.ದಿವಾಕರ್ ಅಂತಹುದೇ ಇನ್ನೊಂದು ವಿಪರ್ಯಾಸಕ್ಕೆ ಗುರಿಮಾಡುವುದರಿಂದ ಅವನೊಳಗಿನ ದ್ವಂದ್ವವನ್ನು ಎಷ್ಟೊಂದು ಕಲಾತ್ಮಕವಾಗಿ ಚಿತ್ರಿಸುತ್ತಾರೆಂಬುದನ್ನು ಕತೆ ಓದಿಯೇ ತಿಳಿದುಕೊಳ್ಳಬೇಕು!

‘ದ್ವಂದ್ವ’ ಎಂಬ ಕತೆಯೂ ಕೂಡ ಪ್ರಯೋಗವನ್ನೇ ಉಸಿರಾಡುತ್ತಿರುವ ಉತ್ತಮ ಕತೆಗಳಲ್ಲೊಂದು. ಇಲ್ಲಿ ಕತೆಗಾರನ ಕತೆ ಮತ್ತು ಅವನು ಬರೆಯುತ್ತಿರುವ ಕತೆ ಎರಡನ್ನೂ ಕತೆಗಾರ ಜೊತೆಜೊತೆಯಾಗಿ ಹೇಳುತ್ತಿದ್ದಾನೆ. ಒಂದು ದಪ್ಪಕ್ಷರಗಳಲ್ಲಿ ಕಾಣಿಸಿಕೊಂಡರೆ ಇನ್ನೊಂದು ಸಾದಾ ಅಕ್ಷರಗಳಲ್ಲಿದೆ. ಕತೆಗಾರ ತನ್ನದೇ ಬದುಕನ್ನು ಕತೆಯಾಗಿಸಿ ಬರೆಯುವಾಗ ವಾಸ್ತವ ಮತ್ತು ಕಲ್ಪನೆಯ ನಡುವೆ ತುಯ್ಯುತ್ತಿರುತ್ತಾನೆ. ಹಾಗೆಯೇ, ನಿರ್ದಿಷ್ಟು ಆರಂಭ ಮತ್ತು ಅಂತ್ಯಗಳನ್ನು ಗುರುತಿಸಲಾಗದಂತೆ ಚಾಚಿಕೊಂಡಿರುವ ಕತೆಗಾರನ ಬದುಕಿನಿಂದ ಒಂದು ಅನುಭವದ ತುಣುಕನ್ನು ಕತೆಯಾಗಿಸುವಾಗ ಅವನು ಅದರ ಆಕೃತಿಯ ಬಗ್ಗೆ, ಆರಂಭ-ಅಂತ್ಯ-ಕ್ಲೈಮ್ಯಾಕ್ಸ್ ಎಂದೆಲ್ಲ ಯೋಚಿಸಬೇಕಾಗುತ್ತದೆ. ವಸ್ತು ಎಂಬುದು ಮುಖ್ಯವಾಗುತ್ತದೆ. ತಂತ್ರ, ತಾತ್ವಿಕತೆ ಎಲ್ಲ ಅಗತ್ಯವಾಗುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ನಿಕಷಕ್ಕೊಡ್ಡಲ್ಪಡುವುದು ಕತೆಗಾರನ ವೈಯಕ್ತಿಕ ಬದುಕಿನ ಪ್ರಾಮಾಣಿಕತೆಗೆ ಆತ ಬರೆಯುವ ಕತೆಯಲ್ಲೇನು ಸ್ಥಾನ ಎಂಬುದು. ‘ದ್ವಂದ್ವ’ ಕತೆ ಏನನ್ನೂ ವಾಚ್ಯವಾಗಿ ಹೇಳದೆ ಮುಗಿಯುತ್ತದೆ. ಇಲ್ಲಿ ಕತೆಗಾರನ ಕತೆಯನ್ನು ಹೇಳುತ್ತಿರುವ ವ್ಯಕ್ತಿ, ನಿರೂಪಕನಂತೆ ಕಾಣಿಸಿಕೊಳ್ಳುವ ವ್ಯಕ್ತಿ ಯಾರು, ನಿರೂಪಣೆಯ ಪ್ರಜ್ಞೆ ಯಾವುದು ಎಂಬುದನ್ನು ಕೂಡ ಅಸ್ಪಷ್ಟವಾಗಿ ಉಳಿಸಿರುವುದು ಕತೆಯ ಧ್ವನಿಶಕ್ತಿಯನ್ನು ಹೆಚ್ಚಿಸಿದೆ.

ಪಂಡಿತ ಪರಮೇಶ್ವರ ಹೆಗಡೆಯವರಿಗೆ ಅರ್ಪಿತಗೊಂಡಿರುವ ‘ಪೆಟ್ಟಿಗೆ’ ಕತೆ ಒಂದು ವಿಶಿಷ್ಟವಾದ ಕತೆ. ಪ್ರಯೋಗಶೀಲತೆಯನ್ನು ಹೊಂದಿದ್ದೂ ಒಂದು ಬಗೆಯ ಶುದ್ಧ ಮ್ಯಾಜಿಕಲ್ ರಿಯಲಿಸಂನ ಉದಾಹರಣೆಯಾಗಿ ನಿಲ್ಲುವ ಕತೆಯಿದು. ಎಸ್.ದಿವಾಕರರ ಬಹಳಷ್ಟು ಕತೆಗಳು ಮ್ಯಾಜಿಕಲ್ ರಿಯಲಿಸಂ ಎಂದು ನಾವಿಂದು ಗುರುತಿಸುವ, ನಮ್ಮ ಜಾನಪದ ಕತೆಗಳ ಕಾಲಕ್ಕೇ ನಮ್ಮಲ್ಲಿದ್ದ ತಂತ್ರವನ್ನು ಉಪಯೋಗಿಸಿಕೊಂಡಿವೆ. ಆದರೆ ಕಲ್ಪನೆ, ಕನಸು, ಭ್ರಮೆ, ಹುಚ್ಚು ಮತ್ತು ಮಾಯಾಜಾಲವನ್ನು ಬಳಸಿಕೊಳ್ಳುವ ಕತೆಗಳನ್ನೂ ಮ್ಯಾಜಿಕಲ್ ರಿಯಲಿಸಂ ಎಂದು ಗುರುತಿಸುವ ಒಂದು ಆತುರ ಅಲ್ಲಲ್ಲಿ ಕಂಡುಬರುವುದರಿಂದ ಈ ಕುರಿತು ಕೊಂಚ ಸ್ಪಷ್ಟವಾಗಿರುವುದು ಉತ್ತಮ. ನಿಜ ಮತ್ತು ಸುಳ್ಳುಗಳ ನಡುವಿನ ಗೆರೆಯೇ ಮಾಸುವಂತೆ ಮಾಡಬಲ್ಲಷ್ಟು ಸಶಕ್ತವಿವರಗಳಲ್ಲಿ ಮೂಡಿಬರುವ ಕತೆಗಳು ಮಾತ್ರವೇ ಈ ವಿಭಾಗದಲ್ಲಿ ಗುರುತಿಸಲ್ಪಡುವುದಕ್ಕೆ ಅರ್ಹವಾಗುತ್ತವೆ ಎಂಬ ನಿಲುವಿನಿಂದ ನೋಡಿದರೆ ಎಸ್ ದಿವಾಕರ್ ‘ಪೆಟ್ಟಿಗೆ’ ಕತೆಯಲ್ಲಿ ಬಳಸಿರುವ ತಂತ್ರ ಇದು. ‘ಉಚ್ಛಾಟನೆ’ಯ ತಂತ್ರಕ್ಕೂ ಇದಕ್ಕೂ ಇರುವ ಭಿನ್ನತೆಯನ್ನು ಕಂಡುಕೊಳ್ಳಬೇಕು. ‘ಅಂತರಾಳದಲ್ಲಿ ನಿಂತ ನೀರು’, ‘ಉಚ್ಛಾಟನೆ’ ಮುಂತಾದ ಕತೆಗಳಲ್ಲಿ ಅವಾಸ್ತವಿಕ ವಿವರಗಳಿಂದ ವಾಸ್ತವವನ್ನು ಸ್ಪಷ್ಟವಾಗಿ ಕಾಣುವ ಪ್ರಯತ್ನವಿದ್ದರೆ ‘ಪೆಟ್ಟಿಗೆ’ಯಂಥ ಕತೆಗಳಲ್ಲಿ ಅವಾಸ್ತವಿಕವಾದುದೇನೂ ಕಾಣಿಸುವುದಿಲ್ಲ. ಕಾಲನ್ನು ವಾಸ್ತವ ಜಗತ್ತಿನ ನೆಲಕ್ಕೂರಿಯೇ ವಿಲಕ್ಷಣವಾದ ಒಂದು ವಿದ್ಯಮಾನದಿಂದ ಚಿತ್ರವನ್ನು ಪರಿಪೂರ್ಣಗೊಳಿಸುವ ಕತೆಯಿದು. ಇಲ್ಲಿನ ಹೆಸರಾಂತ ಗಾಯಕ ಪಂಡಿತ್ ಶಿವರುದ್ರಯ್ಯ ಬಸವನಾಳಮಠರಿಗೆ ಪೆಟ್ಟಿಗೆಗಳ ಹುಚ್ಚು ಹಿಡಿದಂತೆಯೇ ಅವರ ಶಿಷ್ಯನಾಗಲು ಬಂದು ಬಡಗಿ ಕೆಲಸ ಕಲಿತ ಕಡೇಕಾರ್ ಶ್ರೀಧರ ಭಟ್ಟನಿಗೂ ಅದು ಸೋಂಕಿನಂತೆ ತಗಲಿಕೊಂಡಿದೆ. ಮೊದಲು ನೀರಿನ ಬಿಂದಿಗೆಯನ್ನಿಡಲೆಂದು ಸುರುವಾಗಿದ್ದು ಕ್ರಮೇಣ ಹಾಡುವುದಕ್ಕೆಂದು ಯಾವ ಷಹರಕ್ಕೆ ಹೊರಟರೂ ಜೊತೆಗೊಯ್ಯುವ ಪ್ರತಿಯೊಂದು ವಸ್ತುವಿಗೆ ಒಂದು ಪೆಟ್ಟಿಗೆ ಮಾಡುವ ಮಟ್ಟಿಗೆ ಹೋಗುತ್ತದೆ. ಸಹಜವಾಗಿ ಸಂಗೀತಾಸಕ್ತನಾದ ಕಡೇಕಾರು ಶ್ರೀಧರ ಭಟ್ಟನಿಗೂ, ಗಾಯಕರಾದ ಬಸವನಾಳಮಠರಿಗೂ ಈ ಪೆಟ್ಟಿಗೆಗಳೇ ಮನಸ್ಸಿನ ಸೂಕ್ಷ್ಮಗಳ ಪ್ರತಿಮೆಗಳಾಗಿ ರೂಪಾಂತರಗೊಳ್ಳುವುದನ್ನು ಕತೆ ನಿರೂಪಿಸಿರುವ ರೀತಿಯೇ ಹೊಸದು ಮತ್ತು ಅದ್ಭುತವಾಗಿದೆ.

ಇದೇ ರೀತಿ ತೀವ್ರವಾಗಿ ತಟ್ಟಬಲ್ಲ ಮಾದರಿಯಲ್ಲಿ ರೂಪುಗೊಂಡಿರುವ ಇನ್ನೊಂದು ಕತೆ ‘ಹರಕೆ’. ಇಲ್ಲಿಯೂ ಮೇಲ್ನೋಟಕ್ಕೆ ಅವಾಸ್ತವಿಕವೆಂದು ಹೇಳಬಹುದಾದ ಏನೂ ಇಲ್ಲ. ಎಲ್ಲರೂ ಹರಕೆ ಹೊರುವಂತೆಯೇ ಹರಕೆ ಹೊತ್ತ ತಮ್ಮಣ್ಣಪ್ಪ ಅಂದುಕೊಂಡಿದ್ದನ್ನೇನೋ ಸಾಧಿಸುತ್ತಾನೆ. ಆದರೆ ಹೊತ್ತ ಹರಕೆಯನ್ನು ಇಳಿಸಿಕೊಳ್ಳಲಾರದೆ ಹೋಗುತ್ತಾನೆ. ಹರಕೆಯ ಫಲವಾದ ಮಗನ ಡಾಕ್ಟರಿಕೆಯೇ ಅಪ್ಪನ ಹರಕೆಯ ಹೊರೆಯನ್ನು ಇಳಿಸುವ ವಿನೂತನ ವಿಧಾನಕ್ಕೆ ಮುಂದಾದಾಗ ತಲೆದೋರುವ ಸಂದಿಗ್ಧ ಏಕಕಾಲಕ್ಕೆ ಹಲವು ಸತ್ಯಗಳನ್ನು ಬಿಚ್ಚಿಡುವಂತಿದೆ. ನಿಜ ಜೀವನದಲ್ಲಿ ಇಂಥದ್ದು ಸಂಭವನೀಯವೆ ಎಂದು ಕೇಳಿಕೊಂಡರೆ ಅಸಂಭವವಂತೂ ಅಲ್ಲ ಎನ್ನುವ ಉತ್ತರ ಬಂದೀತು. ಇಲ್ಲಿಯೂ ಬಳಕೆಯಾದ ತಂತ್ರ ಅದೇ ಮ್ಯಾಜಿಕಲ್ ರಿಯಲಿಸಂನದು.

‘ಮೃತ್ಯುಂಜಯ’, ‘ಕಾಲನೇಮಿ ಮತ್ತು ಕಣ್ಣುಗಳು’, ‘ಪ್ರಾಣದೇವರು’, ‘ಟೊಮ್ಯಾಟೊ’, ‘ಮರುಗಭೂಪತಿಯ ಮಗ: ಒಂದು ಕತೆ ಮತ್ತು ಪ್ರಶ್ನೆ ಪತ್ರಿಕೆ’, ‘ಕೋಮುವಾದಿ’, ‘ಫೋಟೋ’ ಮೊದಲಾದ ಅದ್ಭುತ ಪ್ರಯೋಗಶೀಲ ಕತೆಗಳಲ್ಲಿ ಯಾವುದನ್ನೂ ಇಲ್ಲಿ ಸೇರಿಸದೆಯೇ ಇರುವಂತಿರಲಿಲ್ಲ ಎಂಬುದು ನಿಜವಾದರೂ ಅದು ಸಾಧ್ಯವಿಲ್ಲ. ಇಲ್ಲಿನ ಕತೆಗಳು ಓದುಗರನ್ನು ಇನ್ನುಳಿದ ಕತೆಗಳತ್ತ ಗಮನ ಹರಿಸುವಂತೆ ಪ್ರೇರೇಪಿಸಿದರೆ ಉದ್ದೇಶ ಈಡೇರಿದಂತೆ.

(ಇತ್ತೀಚೆಗೆ ಬಿಡುಗಡೆಯಾದ ಎಸ್ ದಿವಾಕರ್ ಅವರ ಅತ್ಯುತ್ತಮ ಬರಹಗಳ ಸಂಕಲನ "ರೂಪ ರೂಪಗಳನು ದಾಟಿ" ಕೃತಿಗೆ ಬರೆದ ಪ್ರಸ್ತಾವನೆಯಿಂದ ಆಯ್ದ, ಅವರ ಕತೆಗಳ ಕುರಿತ ಲೇಖನದ ಭಾಗ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Monday, June 23, 2014

ಎಸ್ ದಿವಾಕರ್ ಕವನಗಳು

ಇತ್ತೀಚೆಗೆ ಬಿಡುಗಡೆಯಾದ ಎಸ್ ದಿವಾಕರ್ ಅವರ ಅತ್ಯುತ್ತಮ ಬರಹಗಳ ಸಂಕಲನ "ರೂಪ ರೂಪಗಳನು ದಾಟಿ" ಕೃತಿಗೆ ಬರೆದ ಪ್ರಸ್ತಾವನೆಯಿಂದ ಆಯ್ದ, ಅವರ ಕವನಗಳ ಕುರಿತ ಲೇಖನದ ಭಾಗ ಇಲ್ಲಿದೆ:

ಕವನಗಳ ಬಗ್ಗೆ ಬರೆಯಬಾರದು, ಅವುಗಳನ್ನು ಸುಮ್ಮನೇ ಅನುಭವಿಸಬೇಕು. ಅಲ್ಲಿ ಬಳಕೆಯಾದ ಶಬ್ದಗಳ, ಆ ಶಬ್ದ ಸಂಕಲನದ ಕಂಪನ ವಿಸ್ತಾರವೇನಿದೆ, ಅದಕ್ಕೆ ಅರ್ಥದ ಸೂತಕ ಹಿಡಿಸುವುದು ತಪ್ಪು. ಕೀ.ರಂ.ನಾಗರಾಜ್ ಬೇಂದ್ರೆಯವರ ಬಗ್ಗೆ ಮಾತನಾಡುತ್ತ "ಕವಿಯ ಕೆಲಸ ಅರ್ಥದ ಬಂಧನದಿಂದ ಮಾತನ್ನು ಪಾರು ಮಾಡುವುದು" ಎಂದಿದ್ದರು. ಒಂದು ಅನುಭವದ ಸಂವೇದನೆಗಳನ್ನು ಭಾಷೆಯಲ್ಲಿ ದಾಟಿಸುವ, ಕವಿ ಭಾವ ಪ್ರತಿಮಾ ಪುನರ್ ಸೃಷ್ಟಿಯ ಸಂಭವನೀಯತೆಯನ್ನು ಧ್ಯಾನಿಸಿ, ಅದರ ವಿಧಿ ವಿಧಾನದ ಬಗ್ಗೆ ಆಳವಾಗಿ ಯೋಚಿಸಿ, ವಿಶೇಷ ಎಚ್ಚರದಿಂದ ಅದನ್ನು ಆಗುಮಾಡಿದವರು ಎಸ್ ದಿವಾಕರ್. ಎಸ್ ದಿವಾಕರ್ ಬರೆದಿರುವ ಕವನಗಳು ಸಂಖ್ಯೆಯಲ್ಲಿ ಬಹಳ ಕಡಿಮೆ. ಇದುವರೆಗೆ ಪ್ರಕಟವಾಗಿರುವುದು ‘ಆತ್ಮಚರಿತ್ರೆಯ ಕೊನೆಯ ಪುಟ’ ಎಂಬ ಹೆಸರಿನ ಒಂದೇ ಒಂದು ಸಂಕಲನ. ಇದರಲ್ಲಿ ಒಟ್ಟು ಇಪ್ಪತ್ತಾರು ಕವನಗಳಿವೆ. ಇಲ್ಲಿ ಕೊಡಮಾಡಿರುವ ಆರು ಕವನಗಳು ಈ ಸಂಕಲನದಿಂದ ಆರಿಸಿದವು. ಕೊನೆಯ ಎರಡು ಕವನಗಳು ಇತ್ತೀಚಿನ ರಚನೆಗಳು. ಅವರ ನಿಗೂಢ ಕವನವನ್ನು ಗಮನಿಸಿ.

ಯಾರೀ ಮನುಷ್ಯ ನಿಂತಿದ್ದಾನೆ ಬತ್ತಲೆ:
ಉರಿಯುತ್ತಿವೆ ಇವನ ಕಣ್ಣು
ಸುರಿಯುತ್ತಿರುವ ಮಳೆಯಲ್ಲಿ;
ತುರುಕಿಟ್ಟಿದ್ದಾನೆ ತನ್ನ ತಲೆಯನ್ನೊಂದು ಚೀಲದಲ್ಲಿ.

ಸುರಿಯುವ ಮಳೆ ಮತ್ತು ಉರಿಯುವ ಕಣ್ಣು ಇಲ್ಲಿ ಒಟ್ಟಿಗೇ ಬರುತ್ತವೆ. ಮನುಷ್ಯ ಬತ್ತಲಾಗಿದ್ದಾನೆ ಆದರೆ ತನ್ನ ತಲೆಯನ್ನು ಚೀಲದಲ್ಲಿ ತುರುಕಿಟ್ಟಿದ್ದಾನೆ. ಉರಿಯುತ್ತಿರುವ ಕಣ್ಣುಗಳನ್ನು ನೀವು ಕಂಡಿದ್ದು ಹೆಗಲ ಮೇಲಿನ ತಲೆಯಲ್ಲಲ್ಲ ಹಾಗಾದರೆ! ಮೊದಲ ಭಾಗದ ಕೊನೆಯಲ್ಲಿ ಅವನು ಮುಗ್ಗರಿಸಿದರೆ ಎದ್ದ ಸದ್ದು ಬಿದ್ದ ಮರದ್ದು. ಎರಡನೆಯ ಭಾಗದಲ್ಲಿ ‘ಅಗೋ ಮುರಿದು ಬಿದ್ದಿತು ಏನೊ ಆಕಾಶದಿಂದ’ ಎಂಬ ಸಾಲಿನೊಂದಿಗೆ ಈ ಭಾಗಕ್ಕೆ ಬಾದರಾಯಣ ಸಂಬಂಧ!

ತತ್ತರಿಸುತ್ತಿದೆ ಗಾಳಿ ವಾಸನೆಗಳ ಹೊರೆ ಹೊತ್ತುಕೊಂಡು
ನನ್ನೆದೆಯೊಂದು ನಡುಮನೆ, ಅಲ್ಲಿನ ಕಿಟಕಿಯಲ್ಲಿ
ಕತ್ತಲೆ ಹೇಳಿಕೊಳ್ಳುತ್ತಿದೆ ಏನೇನು ಕಳೆದುಕೊಂಡಿತೆಂದು.
ಹೊರಗೆ ಶರಣಾಗಿದೆ ರಾತ್ರಿ ಹರಡಿಕೊಂಡ ನಕ್ಷತ್ರಗಳಿಗೆ;

‘ಮೌನ ಸಂಗೀತ’ ಕವನ ಒಂದು ಬಗೆಯ ಗದ್ಯಪದ್ಯ ಅನುಸಂಧಾನದಲ್ಲಿದೆ. ಇದನ್ನೊಂದು ಪ್ರಯೋಗಶೀಲ ಕತೆಯನ್ನಾಗಿಯೂ ಓದಬಹುದು, ಕವನವನ್ನಾಗಿಯೂ ಓದಬಹುದು. ರಾಗ ಮತ್ತು ಭಾವ ಇವುಗಳ ನಡುವಿನ ಸಂಬಂಧ ಒಂದು ನೆಲೆಯದ್ದಾದರೆ, ಆ ರಾಗವನ್ನು ತನ್ನ ಭಾವದ ಪಥವನ್ನಾಗಿ ಆರಿಸಿಕೊಂಡು ಪಯಣಿಸುವಾಗಿನ ಹಾವಭಾವವೇನಿದೆ, ಅವುಗಳ ನಡುವಿನ ಸಂಬಂಧ ಇನ್ನೊಂದು ನೆಲೆಯದ್ದು. ಎಸ್. ದಿವಾಕರ್ ಸಂಗೀತ ಪ್ರಿಯರು. ಆ ಕಾರಣಕ್ಕಾಗಿಯೇ ಅವರ ಸಂಗೀತ ಪ್ರೇಮವನ್ನು ಸೂಚಿಸುವ ಪ್ರಬಂಧಗಳನ್ನು ಇಲ್ಲಿ ಪ್ರತ್ಯೇಕವಾಗಿಯೇ ಆರಿಸಿಕೊಡಲಾಗಿದೆ. ಅವರು ರಾಗ, ಭಾವ ಮತ್ತು ಪ್ರಾಯೋಗಿಕತೆಗಳನ್ನು ಮೆಚ್ಚಿಕೊಂಡಷ್ಟೇ ಗಾಯಕರ ಹಾವಭಾವ, ಹವ್ಯಾಸಗಳನ್ನು ಕೂಡ ಅಭ್ಯಸಿಸಿದವರು. ಇಲ್ಲಿ ಆಯ್ಕೆ ಮಾಡಿಕೊಡಲಾದ ಪೆಟ್ಟಿಗೆ ಕತೆ ಅಂಥ ಒಂದು ಚಿತ್ರವನ್ನು ನಮಗೆ ದೊರಕಿಸಿಕೊಡುತ್ತದೆ. ಹಾಗೆಯೇ ಈ ಕವನ ಕೂಡ ಅಂತಹುದೇ ಇನ್ನೊಂದು ಚಿತ್ರವನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದೆ.

‘ಜಗವೇ ಮಾಯ’ ಕವನ ಕೂಡ ಮೇಲೆ ಹೇಳಿದ ಗಪದ್ಯದ ಸಾಲಿಗೇ ಸೇರುವಂಥಾದ್ದು. ಇದನ್ನು ಎಸ್.ದಿವಾಕರರೇ ಇನ್ನೊಂದು ಕಡೆ ಕತೆಯಾಗಿ ಸೇರಿಸಿರುವುದೂ ಇದೆ. ಈ ಕವನ/ಕತೆಯನ್ನು ಚಿತ್ತಾಲರ ಪ್ರಸಿದ್ಧ ಕತೆ ‘ಪಯಣ’ದೊಂದಿಗೆ ಹೋಲಿಸಿ ನೋಡಬಹುದು.

‘ಇಲ್ಲಿ ಕವಿದಿದೆ ಮೌನ’ ಕವನದಲ್ಲಿಯೂ ಕೆಲವು ವಿಶಿಷ್ಟ ಪದಸಂಯೋಜನೆ ಗಮನ ಸೆಳೆಯುವಂತಿದೆ. ಮೌನವನ್ನು ಎಸ್ ದಿವಾಕರ್ ಕಟ್ಟಿಕೊಡುವ ವಿಧಾನ ಗಮನಿಸಿ:

ನೀನೊ ಡವಗುಟ್ಟುವೆದೆ, ಮೇಲೆ ಎರಗುವ ಬಾನು
ನೀಲಿಯಾಳದ ದಾಹ ಕಣ್ಣಿನಲ್ಲಿ.

ನೀಲಿಯಾಳದ ದಾಹ ಎನ್ನುವಾಗ ನಮ್ಮ ಮನಸ್ಸಿನಲ್ಲಿ ನೀರು, ಬಾಯಾರಿಕೆ ಎರಡೂ ಮೂಡುತ್ತದೆ. ಆಗಲೇ ಅಲ್ಲಿ ಬರುವ ಮುಂದಿನ ಶಬ್ದ ಕಣ್ಣಿನಲ್ಲಿ ಎಂಬುದು. ಈ ಕಡಲು, ಈ ದಾಹ ಎರಡೂ ಕಣ್ಣಿನಲ್ಲಿ ಕಾಣುತ್ತಿವೆಯೇ ಅಥವಾ ಕಣ್ಣು ಇಲ್ಲಿ ಕೇವಲ ಪ್ರತಿಮೆಯೋ? ಮೇಲೆ ಎರಗುವ ಬಾನಿದೆ. ನೀಲಿಗೆ ಆಳವಿದೆ. ಆದರೆ ಡವಗುಟ್ಟುವೆದೆ ಮತ್ತು ಕಣ್ಣು ಯಾವುದೋ ಜೀವವನ್ನು ಕಲ್ಪಿಸುತ್ತಿದೆ.


ಮುಂದೆ ನೋಡಿ:

ಯಾರೂ ನಗದ ಅತ್ತುಬಿಡದ ನಟ್ಟಿರುಳಿನಲ್ಲಿ
ಕಿರಿಚಿಕೊಳ್ಳುವ ಜಾಗ ಇಲ್ಲೆ ಇರಲು
ಎಂಥ ನೀರವ!

ಕಿರಿಚಿಕೊಳ್ಳುವ ಜಾಗ ಇಲ್ಲೇ ಇದೆ, ಇಷ್ಟು ಸನಿಹ, ಕಿರುಚಿಕೊಂಡು ಬಿಡಬಹುದು. ಆದರೆ ತಡೆಯುತ್ತಿರುವುದೇನು? ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ ಎಂಬ ಬೇಂದ್ರೆ ಸಾಲುಗಳಂತೆ ಇಲ್ಲಿ ತಡೆಯುತ್ತಿರುವುದು ಒಂದೇ ಮಾತು, ಎಂಥ ನೀರವ!

.................ಪಾಪ, ಕಡೆಯ ದಿನ ಅವರೆಲ್ಲ 
ಸುರಿದ ಮಾತುಗಳೆಲ್ಲ ಗಾಳಿಪಾಲು.

‘ಹುಲ್ಲುಗಾವಲಿನಲ್ಲಿ ಸತ್ತ ಕರು’ ಒಂದು ವಿಶಿಷ್ಟ ಕವಿತೆ. ಇಲ್ಲಿನ ಒಂದೊಂದು ಶಬ್ದ ಕೂಡ ಮನಸ್ಸಿನಲ್ಲಿ ಸೃಜಿಸುವ ಪ್ರತಿಮೆಗಳು, ಸಂವೇದನೆಗಳು ತಲ್ಲಣಗೊಳಿಸುವಂತಿರುವುದೇ ಈ ಕವನದ ಶಕ್ತಿಗೆ ಸಾಕ್ಷಿ.

ಹುಲ್ಲುಗಾವಲಿನಲ್ಲಿ ಸತ್ತುಬಿದ್ದಿದೆ ಕರು
ಕಣ್ಣಿಲ್ಲದ ತಲೆ, ಹುಲ್ಲಿನ ಮೇಲೆ ದವಡೆಬಿಟ್ಟುಕೊಂಡ
ಮೌನ. ಹೊಟ್ಟೆಯ ಕೆಳಗೆ ಅರಳಿಕೊಂಡ ನೆರಳು
ನೋವಿನ ನೂಲಾಗಿ ಸಿಂಬಿಸುತ್ತಿದ ಕರುಳು.

ಭೂಭಾರವೇ ಈ ಕರುವಿನೊಳಕ್ಕೆ ಇಳಿದು ನೆಲಕ್ಕೆ ಕುಸಿದಿದೆಯೆ? ಕುಸಿಯಿಸಿದೆ ಎನ್ನುತ್ತಾರೆ ಎಸ್.ದಿವಾಕರ್.

ಅಬ್ಬ ಭಯಂಕರ? ಭಯವೆಲ್ಲಿದೆ ಕರುವಿನಲ್ಲಿ?
.....
......
ನೆತ್ತಿಯ ಸೂರ್ಯನೀಗ ಎತ್ತಿ ಹಿಡಿದಿದ್ದಾನೆ ಖಡ್ಗ.
.......
ಎಲ್ಲೆಲ್ಲು ಮೌನ ಮರುದನಿಯಾಗಿ ಅಪ್ಪಳಿಸುತಿದೆ ಕಿವಿಗೆ

ಅಥವಾ

ಕರುವಿನ ಪಕ್ಕೆಲುಬನ್ನು ಹೊಕ್ಕಿರುವ ಗಾಳಿ
ಊಳಿಡುತ್ತಿದೆ ಅದರ ದವಡೆಯಲ್ಲಿ.

ಕವನ ಈ ಸಾಲುಗಳೊಂದಿಗೆ ಮುಗಿಯುತ್ತದೆ. ಹುಲ್ಲುಗಾವಲಿನಲ್ಲಿ ಸತ್ತು ಬಿದ್ದ ಒಂದು ಕರು, ಹದ್ದು ಗಿಡುಗಗಳು ಅದನ್ನು ಆಗಲೇ ಕುಕ್ಕಿ ತಿಂದು ಹರಡಿ ಹಾಕಿವೆ. ಇದು ಕಣ್ಣಿಗೆ ಕಾಣುವ ಚಿತ್ರ, ಅದರ ವಿವರಗಳು. ಆದರೆ ಭಾವ? ಎಸ್.ದಿವಾಕರ್ ಕವನದಲ್ಲಿ ಅದನ್ನು ಬೆನ್ನಟ್ಟುತ್ತಾರೆ, ದೃಶ್ಯ ಕೇವಲ ನಿಮಿತ್ತವಾಗಿದೆ ಇಲ್ಲಿ. ಭಾಷೆಯನ್ನು ಸಮರ್ಥವಾಗಿ ದುಡಿಸಿಕೊಳ್ಳಬಲ್ಲ ಕವಿ ಎಸ್ ದಿವಾಕರ್ ಎನ್ನುವುದಕ್ಕೆ ಬೇರೆ ಪುರಾವೆ ಬೇಕೆ?

‘ಏಕಾಂತದ ಮೊರೆ’ ಎಂಬುದು ಇಲ್ಲಿನ ಮತ್ತೊಂದು ಬಹುಮುಖ್ಯ ಕವನ.

ಕೊಡಬಲ್ಲೆ, ಸಾಲುಸಾಲಾಗಿಲ್ಲಿ ಮಲಗಿರುವ ಅಕ್ಷರಗಳನ್ನಷ್ಟೆ
ಮೊರೆಯಿಡಲಾರೆ ದನಿಯೆತ್ತಿ, ಕೈ ಚಾಚಲಾರೆ
ಈ ಹಾಳೆಯಾಚೆಗೆ. ಏನು ಮಾಡಲಿ, ನಿನ್ನ ತಲುಪಲಾರೆ

......
........
ಮಲಗಿದ್ದೇನೆ ಕವಿತೆಯನ್ನು ಹಾಸಿಕೊಂಡು
ನನ್ನೊಂದು ಕನಸಲ್ಲಿ ಯಾರ ಒಲವೋ ಏನೊ ಲೇಖಣಿಯನಾಡಿಸಿದೆ.
ಓದು ಕಟ್ಟೆಚ್ಚರದಿಂದ ನಾನೇ ಉಸಿರಾಡುತ್ತಿರುವ ಈ ಪುಟವನ್ನು;
ನಿನ್ನೊಳಗೆ ನುಸುಳಿ ಕೆರಳುತ್ತಿರುವ ನನ್ನ ನೋವನ್ನು.

- ಈ ಸಾಲುಗಳಲ್ಲಿ ನಮಗೆ ಕಾಣುವುದು ಎಸ್ ದಿವಾಕರ್ ಕ್ರಿಯೆ-ಭಾವ ಮತ್ತು ಭಾಷೆಯೊಂದಿಗೆ ನಡೆಸುವ, ನಡೆಸಲೆಳಸುವ ಅನುಸಂಧಾನವೇ.

ಎಸ್ ದಿವಾಕರ್ ಅವರ ವಿಶಿಷ್ಟವಾದ ಶಬ್ದಸಂಯೋಜನೆಯನ್ನೇ ತೋರಿಸುವ ಇನ್ನೊಂದು ಸೊಗಸಾದ ಕವನ ‘ನಿರೀಕ್ಷೆ’.

ಆಕಾಶವುಂಟಲ್ಲಿ ತನ್ನ ಪಾಡಿಗೆ, ಇಲ್ಲಿ
ಒಣಮರದ ತುದಿಗೇರಿ ಊಳಿಡುವ ಮುದಿಗಾಳಿ
ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ;
ಟೇಬಲ್ಲಿನ ಮೇಲೆ ಜೇಡಗಳಾಗಿ ಸುರಿದು
ಮೂಲೆಯ ಸೇರಿ ತೂಕಡಿಸುತ್ತಿರುವ ಮೌನ.

ಒಣಮರ ಮತ್ತು ಮುದಿಗಾಳಿ ಎಂಬ ಶಬ್ದಗಳನ್ನೂ, ಗಾಳಿ ಊಳಿಡುತ್ತಿದೆ ಎನ್ನುವ ಪರಿಕಲ್ಪನೆಯನ್ನೂ ಗಮನಿಸಿ. ಹಾಗೆಯೇ ಮಧ್ಯಾಹ್ನ ಮತ್ತು ಸೋತ ಕಣ್ಣುಗಳು ಬೇಡವೆಂದರೂ ನಮಗೆ ನೀಡುವ ಸುಡುಬಿಸಿಲಿನ ಭಾವನೆ ಶಬ್ದದಲ್ಲಿಲ್ಲದಿರುವುದು. ಹಾಗೆಯೇ ಇಲ್ಲಿ ಮೌನಕ್ಕೆ ಕೊಡುವ ವಿಲಕ್ಷಣವಾದ ಜೇಡ, ಮೂಲೆ ಮತ್ತು ತೂಕಡಿಸುವ ಪ್ರತಿಮೆಯನ್ನು ಗಮನಿಸಿ.

‘ಒಬ್ಬೊಂಟಿ’ ಕವನದ ಲಯವೂ ಗದ್ಯವನ್ನು ಪ್ರಾಯೋಗಿಕವಾಗಿ ಬಳಸಿಕೊಂಡಿದೆ. ಇಲ್ಲಿನ ಪರಿಕಲ್ಪನೆ ಮಾತ್ರ ಹೊಸದು. ಅದು ಸ್ವಾತಂತ್ರ್ಯದ ಕಲ್ಪನೆಯನ್ನೂ, ಒಬ್ಬೊಂಟಿತನದ ಬೇಸರದಿಂದ ಮುಕ್ತನಾಗುವ ಬಯಕೆಯನ್ನೂ, ಆಳದ ಮೌನವನ್ನೂ ಏಕಕಾಲಕ್ಕೆ ನಮ್ಮ ಮನಸ್ಸಿನ ಲಹರಿಯಾಗಿಸುತ್ತ ಕೈಗಳು ಇದ್ದಕ್ಕಿದ್ದಂತೆ ಕಳಚಿಕೊಂಡು ಹಾರುವ ಚಿತ್ರವನ್ನು ಕೊಡುತ್ತಿವೆ. ಒಟ್ಟಿನಲ್ಲಿ ಖುಶಿಯೊ ದುಃಖವೊ ಇಲ್ಲದ ಸ್ಥಿತಿಯನ್ನು ಸೂಚಿಸಿದರೂ ಅದರ ಕೊನೆಯಲ್ಲಿ ಸಣ್ಣ ಪೆಚ್ಚು ಕೂಡ ಇದೆ. ಈ ಮಿಶ್ರ ಭಾವದ ಹಳಹಳಿಕೆಯಿಂದ ಇಲ್ಲಿ ಓದುಗ ತಪ್ಪಿಸಿಕೊಳ್ಳಲಾರ.

ಎಸ್ ದಿವಾಕರ್ ಕವನಗಳಲ್ಲಿ ಪ್ರಯತ್ನಿಸಿರುವುದು ಮುಕ್ತವಾದ ಲಯದ, ಸಂಕೀರ್ಣ ಮನಸ್ಥಿತಿಯ ಅಭಿವ್ಯಕ್ತಿ. ಹಾಗಾಗಿ ಅವರಿಗದು ಗದ್ಯವಾಗಿ ಮೂಡುತ್ತಿದೆಯೇ, ಪ್ರಕಾರ ಎಂದು ಸ್ವೀಕೃತವಾದ ಮಾದರಿಯಲ್ಲಿಯೇ ಕವನವಾಗುತ್ತಿದೆಯೇ ಎಂಬುದು ಕೂಡ ಮುಖ್ಯವಾಗಿಲ್ಲ. ಅವರಿಗೆ ತನ್ನ ಭಾವಕ್ಕೆ ನಿಷ್ಠನಾಗಿರುವ, ಅದನ್ನು ಯಶಸ್ವಿಯಾಗಿ ಸಂವಹಿಸುವ ಮಾಧ್ಯಮವಾಗಿ ಭಾಷೆ, ಪ್ರತಿಮೆಗಳು, ಕಲ್ಪನೆ, ಶಬ್ದಸಂಯೋಜನೆ ಒದಗುತ್ತಿದೆಯೇ ಇಲ್ಲವೆ ಎಂಬುದು ಮಾತ್ರ ಮುಖ್ಯ. ಹಾಗಾಗಿ ದಿವಾಕರ್ ಅವರ ಎಲ್ಲ ಯಶಸ್ವಿ ಕವನಗಳಲ್ಲಿ ಸಶಕ್ತ ಸಂವಹನವಿದೆ, ಸಾರ್ಥಕ ಅಭಿವ್ಯಕ್ತಿಯಿದೆ ಮತ್ತು ಅಮೂರ್ತ ಸಂವೇದನೆಯನ್ನು ಭಾಷೆಯಲ್ಲಿ ಚಿತ್ರವಾಗಿಸಿದ ಸಂಕಲ್ಪಶುದ್ಧಿಯಿದೆ. ಇಷ್ಟಾಗಿಯೂ ಅವರು ಬಳಸುವ ಶಬ್ದ, ಕಲ್ಪನೆ, ಪ್ರತಿಮೆ ಮತ್ತು ಶಬ್ದಸಂಯೋಜನೆಯಾಚೆ ಅನುಭವದ ಹೊಳಹುಗಳು ಕಣ್ಣಾಮುಚ್ಚಾಲೆಯಾಡಿದಂತೆ, ಎಟುಕಿಯೂ ಎಟುಕದಂತೆ ಉಳಿಯುತ್ತವೆ. ಇದು ಕವನವೊಂದು ಓದುಗನಿಗೆ ಒಡ್ಡುವ ಸವಾಲು.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ