Monday, June 23, 2014

ಎಸ್ ದಿವಾಕರ್ ಕವನಗಳು

ಇತ್ತೀಚೆಗೆ ಬಿಡುಗಡೆಯಾದ ಎಸ್ ದಿವಾಕರ್ ಅವರ ಅತ್ಯುತ್ತಮ ಬರಹಗಳ ಸಂಕಲನ "ರೂಪ ರೂಪಗಳನು ದಾಟಿ" ಕೃತಿಗೆ ಬರೆದ ಪ್ರಸ್ತಾವನೆಯಿಂದ ಆಯ್ದ, ಅವರ ಕವನಗಳ ಕುರಿತ ಲೇಖನದ ಭಾಗ ಇಲ್ಲಿದೆ:

ಕವನಗಳ ಬಗ್ಗೆ ಬರೆಯಬಾರದು, ಅವುಗಳನ್ನು ಸುಮ್ಮನೇ ಅನುಭವಿಸಬೇಕು. ಅಲ್ಲಿ ಬಳಕೆಯಾದ ಶಬ್ದಗಳ, ಆ ಶಬ್ದ ಸಂಕಲನದ ಕಂಪನ ವಿಸ್ತಾರವೇನಿದೆ, ಅದಕ್ಕೆ ಅರ್ಥದ ಸೂತಕ ಹಿಡಿಸುವುದು ತಪ್ಪು. ಕೀ.ರಂ.ನಾಗರಾಜ್ ಬೇಂದ್ರೆಯವರ ಬಗ್ಗೆ ಮಾತನಾಡುತ್ತ "ಕವಿಯ ಕೆಲಸ ಅರ್ಥದ ಬಂಧನದಿಂದ ಮಾತನ್ನು ಪಾರು ಮಾಡುವುದು" ಎಂದಿದ್ದರು. ಒಂದು ಅನುಭವದ ಸಂವೇದನೆಗಳನ್ನು ಭಾಷೆಯಲ್ಲಿ ದಾಟಿಸುವ, ಕವಿ ಭಾವ ಪ್ರತಿಮಾ ಪುನರ್ ಸೃಷ್ಟಿಯ ಸಂಭವನೀಯತೆಯನ್ನು ಧ್ಯಾನಿಸಿ, ಅದರ ವಿಧಿ ವಿಧಾನದ ಬಗ್ಗೆ ಆಳವಾಗಿ ಯೋಚಿಸಿ, ವಿಶೇಷ ಎಚ್ಚರದಿಂದ ಅದನ್ನು ಆಗುಮಾಡಿದವರು ಎಸ್ ದಿವಾಕರ್. ಎಸ್ ದಿವಾಕರ್ ಬರೆದಿರುವ ಕವನಗಳು ಸಂಖ್ಯೆಯಲ್ಲಿ ಬಹಳ ಕಡಿಮೆ. ಇದುವರೆಗೆ ಪ್ರಕಟವಾಗಿರುವುದು ‘ಆತ್ಮಚರಿತ್ರೆಯ ಕೊನೆಯ ಪುಟ’ ಎಂಬ ಹೆಸರಿನ ಒಂದೇ ಒಂದು ಸಂಕಲನ. ಇದರಲ್ಲಿ ಒಟ್ಟು ಇಪ್ಪತ್ತಾರು ಕವನಗಳಿವೆ. ಇಲ್ಲಿ ಕೊಡಮಾಡಿರುವ ಆರು ಕವನಗಳು ಈ ಸಂಕಲನದಿಂದ ಆರಿಸಿದವು. ಕೊನೆಯ ಎರಡು ಕವನಗಳು ಇತ್ತೀಚಿನ ರಚನೆಗಳು. ಅವರ ನಿಗೂಢ ಕವನವನ್ನು ಗಮನಿಸಿ.

ಯಾರೀ ಮನುಷ್ಯ ನಿಂತಿದ್ದಾನೆ ಬತ್ತಲೆ:
ಉರಿಯುತ್ತಿವೆ ಇವನ ಕಣ್ಣು
ಸುರಿಯುತ್ತಿರುವ ಮಳೆಯಲ್ಲಿ;
ತುರುಕಿಟ್ಟಿದ್ದಾನೆ ತನ್ನ ತಲೆಯನ್ನೊಂದು ಚೀಲದಲ್ಲಿ.

ಸುರಿಯುವ ಮಳೆ ಮತ್ತು ಉರಿಯುವ ಕಣ್ಣು ಇಲ್ಲಿ ಒಟ್ಟಿಗೇ ಬರುತ್ತವೆ. ಮನುಷ್ಯ ಬತ್ತಲಾಗಿದ್ದಾನೆ ಆದರೆ ತನ್ನ ತಲೆಯನ್ನು ಚೀಲದಲ್ಲಿ ತುರುಕಿಟ್ಟಿದ್ದಾನೆ. ಉರಿಯುತ್ತಿರುವ ಕಣ್ಣುಗಳನ್ನು ನೀವು ಕಂಡಿದ್ದು ಹೆಗಲ ಮೇಲಿನ ತಲೆಯಲ್ಲಲ್ಲ ಹಾಗಾದರೆ! ಮೊದಲ ಭಾಗದ ಕೊನೆಯಲ್ಲಿ ಅವನು ಮುಗ್ಗರಿಸಿದರೆ ಎದ್ದ ಸದ್ದು ಬಿದ್ದ ಮರದ್ದು. ಎರಡನೆಯ ಭಾಗದಲ್ಲಿ ‘ಅಗೋ ಮುರಿದು ಬಿದ್ದಿತು ಏನೊ ಆಕಾಶದಿಂದ’ ಎಂಬ ಸಾಲಿನೊಂದಿಗೆ ಈ ಭಾಗಕ್ಕೆ ಬಾದರಾಯಣ ಸಂಬಂಧ!

ತತ್ತರಿಸುತ್ತಿದೆ ಗಾಳಿ ವಾಸನೆಗಳ ಹೊರೆ ಹೊತ್ತುಕೊಂಡು
ನನ್ನೆದೆಯೊಂದು ನಡುಮನೆ, ಅಲ್ಲಿನ ಕಿಟಕಿಯಲ್ಲಿ
ಕತ್ತಲೆ ಹೇಳಿಕೊಳ್ಳುತ್ತಿದೆ ಏನೇನು ಕಳೆದುಕೊಂಡಿತೆಂದು.
ಹೊರಗೆ ಶರಣಾಗಿದೆ ರಾತ್ರಿ ಹರಡಿಕೊಂಡ ನಕ್ಷತ್ರಗಳಿಗೆ;

‘ಮೌನ ಸಂಗೀತ’ ಕವನ ಒಂದು ಬಗೆಯ ಗದ್ಯಪದ್ಯ ಅನುಸಂಧಾನದಲ್ಲಿದೆ. ಇದನ್ನೊಂದು ಪ್ರಯೋಗಶೀಲ ಕತೆಯನ್ನಾಗಿಯೂ ಓದಬಹುದು, ಕವನವನ್ನಾಗಿಯೂ ಓದಬಹುದು. ರಾಗ ಮತ್ತು ಭಾವ ಇವುಗಳ ನಡುವಿನ ಸಂಬಂಧ ಒಂದು ನೆಲೆಯದ್ದಾದರೆ, ಆ ರಾಗವನ್ನು ತನ್ನ ಭಾವದ ಪಥವನ್ನಾಗಿ ಆರಿಸಿಕೊಂಡು ಪಯಣಿಸುವಾಗಿನ ಹಾವಭಾವವೇನಿದೆ, ಅವುಗಳ ನಡುವಿನ ಸಂಬಂಧ ಇನ್ನೊಂದು ನೆಲೆಯದ್ದು. ಎಸ್. ದಿವಾಕರ್ ಸಂಗೀತ ಪ್ರಿಯರು. ಆ ಕಾರಣಕ್ಕಾಗಿಯೇ ಅವರ ಸಂಗೀತ ಪ್ರೇಮವನ್ನು ಸೂಚಿಸುವ ಪ್ರಬಂಧಗಳನ್ನು ಇಲ್ಲಿ ಪ್ರತ್ಯೇಕವಾಗಿಯೇ ಆರಿಸಿಕೊಡಲಾಗಿದೆ. ಅವರು ರಾಗ, ಭಾವ ಮತ್ತು ಪ್ರಾಯೋಗಿಕತೆಗಳನ್ನು ಮೆಚ್ಚಿಕೊಂಡಷ್ಟೇ ಗಾಯಕರ ಹಾವಭಾವ, ಹವ್ಯಾಸಗಳನ್ನು ಕೂಡ ಅಭ್ಯಸಿಸಿದವರು. ಇಲ್ಲಿ ಆಯ್ಕೆ ಮಾಡಿಕೊಡಲಾದ ಪೆಟ್ಟಿಗೆ ಕತೆ ಅಂಥ ಒಂದು ಚಿತ್ರವನ್ನು ನಮಗೆ ದೊರಕಿಸಿಕೊಡುತ್ತದೆ. ಹಾಗೆಯೇ ಈ ಕವನ ಕೂಡ ಅಂತಹುದೇ ಇನ್ನೊಂದು ಚಿತ್ರವನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದೆ.

‘ಜಗವೇ ಮಾಯ’ ಕವನ ಕೂಡ ಮೇಲೆ ಹೇಳಿದ ಗಪದ್ಯದ ಸಾಲಿಗೇ ಸೇರುವಂಥಾದ್ದು. ಇದನ್ನು ಎಸ್.ದಿವಾಕರರೇ ಇನ್ನೊಂದು ಕಡೆ ಕತೆಯಾಗಿ ಸೇರಿಸಿರುವುದೂ ಇದೆ. ಈ ಕವನ/ಕತೆಯನ್ನು ಚಿತ್ತಾಲರ ಪ್ರಸಿದ್ಧ ಕತೆ ‘ಪಯಣ’ದೊಂದಿಗೆ ಹೋಲಿಸಿ ನೋಡಬಹುದು.

‘ಇಲ್ಲಿ ಕವಿದಿದೆ ಮೌನ’ ಕವನದಲ್ಲಿಯೂ ಕೆಲವು ವಿಶಿಷ್ಟ ಪದಸಂಯೋಜನೆ ಗಮನ ಸೆಳೆಯುವಂತಿದೆ. ಮೌನವನ್ನು ಎಸ್ ದಿವಾಕರ್ ಕಟ್ಟಿಕೊಡುವ ವಿಧಾನ ಗಮನಿಸಿ:

ನೀನೊ ಡವಗುಟ್ಟುವೆದೆ, ಮೇಲೆ ಎರಗುವ ಬಾನು
ನೀಲಿಯಾಳದ ದಾಹ ಕಣ್ಣಿನಲ್ಲಿ.

ನೀಲಿಯಾಳದ ದಾಹ ಎನ್ನುವಾಗ ನಮ್ಮ ಮನಸ್ಸಿನಲ್ಲಿ ನೀರು, ಬಾಯಾರಿಕೆ ಎರಡೂ ಮೂಡುತ್ತದೆ. ಆಗಲೇ ಅಲ್ಲಿ ಬರುವ ಮುಂದಿನ ಶಬ್ದ ಕಣ್ಣಿನಲ್ಲಿ ಎಂಬುದು. ಈ ಕಡಲು, ಈ ದಾಹ ಎರಡೂ ಕಣ್ಣಿನಲ್ಲಿ ಕಾಣುತ್ತಿವೆಯೇ ಅಥವಾ ಕಣ್ಣು ಇಲ್ಲಿ ಕೇವಲ ಪ್ರತಿಮೆಯೋ? ಮೇಲೆ ಎರಗುವ ಬಾನಿದೆ. ನೀಲಿಗೆ ಆಳವಿದೆ. ಆದರೆ ಡವಗುಟ್ಟುವೆದೆ ಮತ್ತು ಕಣ್ಣು ಯಾವುದೋ ಜೀವವನ್ನು ಕಲ್ಪಿಸುತ್ತಿದೆ.


ಮುಂದೆ ನೋಡಿ:

ಯಾರೂ ನಗದ ಅತ್ತುಬಿಡದ ನಟ್ಟಿರುಳಿನಲ್ಲಿ
ಕಿರಿಚಿಕೊಳ್ಳುವ ಜಾಗ ಇಲ್ಲೆ ಇರಲು
ಎಂಥ ನೀರವ!

ಕಿರಿಚಿಕೊಳ್ಳುವ ಜಾಗ ಇಲ್ಲೇ ಇದೆ, ಇಷ್ಟು ಸನಿಹ, ಕಿರುಚಿಕೊಂಡು ಬಿಡಬಹುದು. ಆದರೆ ತಡೆಯುತ್ತಿರುವುದೇನು? ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ ಎಂಬ ಬೇಂದ್ರೆ ಸಾಲುಗಳಂತೆ ಇಲ್ಲಿ ತಡೆಯುತ್ತಿರುವುದು ಒಂದೇ ಮಾತು, ಎಂಥ ನೀರವ!

.................ಪಾಪ, ಕಡೆಯ ದಿನ ಅವರೆಲ್ಲ 
ಸುರಿದ ಮಾತುಗಳೆಲ್ಲ ಗಾಳಿಪಾಲು.

‘ಹುಲ್ಲುಗಾವಲಿನಲ್ಲಿ ಸತ್ತ ಕರು’ ಒಂದು ವಿಶಿಷ್ಟ ಕವಿತೆ. ಇಲ್ಲಿನ ಒಂದೊಂದು ಶಬ್ದ ಕೂಡ ಮನಸ್ಸಿನಲ್ಲಿ ಸೃಜಿಸುವ ಪ್ರತಿಮೆಗಳು, ಸಂವೇದನೆಗಳು ತಲ್ಲಣಗೊಳಿಸುವಂತಿರುವುದೇ ಈ ಕವನದ ಶಕ್ತಿಗೆ ಸಾಕ್ಷಿ.

ಹುಲ್ಲುಗಾವಲಿನಲ್ಲಿ ಸತ್ತುಬಿದ್ದಿದೆ ಕರು
ಕಣ್ಣಿಲ್ಲದ ತಲೆ, ಹುಲ್ಲಿನ ಮೇಲೆ ದವಡೆಬಿಟ್ಟುಕೊಂಡ
ಮೌನ. ಹೊಟ್ಟೆಯ ಕೆಳಗೆ ಅರಳಿಕೊಂಡ ನೆರಳು
ನೋವಿನ ನೂಲಾಗಿ ಸಿಂಬಿಸುತ್ತಿದ ಕರುಳು.

ಭೂಭಾರವೇ ಈ ಕರುವಿನೊಳಕ್ಕೆ ಇಳಿದು ನೆಲಕ್ಕೆ ಕುಸಿದಿದೆಯೆ? ಕುಸಿಯಿಸಿದೆ ಎನ್ನುತ್ತಾರೆ ಎಸ್.ದಿವಾಕರ್.

ಅಬ್ಬ ಭಯಂಕರ? ಭಯವೆಲ್ಲಿದೆ ಕರುವಿನಲ್ಲಿ?
.....
......
ನೆತ್ತಿಯ ಸೂರ್ಯನೀಗ ಎತ್ತಿ ಹಿಡಿದಿದ್ದಾನೆ ಖಡ್ಗ.
.......
ಎಲ್ಲೆಲ್ಲು ಮೌನ ಮರುದನಿಯಾಗಿ ಅಪ್ಪಳಿಸುತಿದೆ ಕಿವಿಗೆ

ಅಥವಾ

ಕರುವಿನ ಪಕ್ಕೆಲುಬನ್ನು ಹೊಕ್ಕಿರುವ ಗಾಳಿ
ಊಳಿಡುತ್ತಿದೆ ಅದರ ದವಡೆಯಲ್ಲಿ.

ಕವನ ಈ ಸಾಲುಗಳೊಂದಿಗೆ ಮುಗಿಯುತ್ತದೆ. ಹುಲ್ಲುಗಾವಲಿನಲ್ಲಿ ಸತ್ತು ಬಿದ್ದ ಒಂದು ಕರು, ಹದ್ದು ಗಿಡುಗಗಳು ಅದನ್ನು ಆಗಲೇ ಕುಕ್ಕಿ ತಿಂದು ಹರಡಿ ಹಾಕಿವೆ. ಇದು ಕಣ್ಣಿಗೆ ಕಾಣುವ ಚಿತ್ರ, ಅದರ ವಿವರಗಳು. ಆದರೆ ಭಾವ? ಎಸ್.ದಿವಾಕರ್ ಕವನದಲ್ಲಿ ಅದನ್ನು ಬೆನ್ನಟ್ಟುತ್ತಾರೆ, ದೃಶ್ಯ ಕೇವಲ ನಿಮಿತ್ತವಾಗಿದೆ ಇಲ್ಲಿ. ಭಾಷೆಯನ್ನು ಸಮರ್ಥವಾಗಿ ದುಡಿಸಿಕೊಳ್ಳಬಲ್ಲ ಕವಿ ಎಸ್ ದಿವಾಕರ್ ಎನ್ನುವುದಕ್ಕೆ ಬೇರೆ ಪುರಾವೆ ಬೇಕೆ?

‘ಏಕಾಂತದ ಮೊರೆ’ ಎಂಬುದು ಇಲ್ಲಿನ ಮತ್ತೊಂದು ಬಹುಮುಖ್ಯ ಕವನ.

ಕೊಡಬಲ್ಲೆ, ಸಾಲುಸಾಲಾಗಿಲ್ಲಿ ಮಲಗಿರುವ ಅಕ್ಷರಗಳನ್ನಷ್ಟೆ
ಮೊರೆಯಿಡಲಾರೆ ದನಿಯೆತ್ತಿ, ಕೈ ಚಾಚಲಾರೆ
ಈ ಹಾಳೆಯಾಚೆಗೆ. ಏನು ಮಾಡಲಿ, ನಿನ್ನ ತಲುಪಲಾರೆ

......
........
ಮಲಗಿದ್ದೇನೆ ಕವಿತೆಯನ್ನು ಹಾಸಿಕೊಂಡು
ನನ್ನೊಂದು ಕನಸಲ್ಲಿ ಯಾರ ಒಲವೋ ಏನೊ ಲೇಖಣಿಯನಾಡಿಸಿದೆ.
ಓದು ಕಟ್ಟೆಚ್ಚರದಿಂದ ನಾನೇ ಉಸಿರಾಡುತ್ತಿರುವ ಈ ಪುಟವನ್ನು;
ನಿನ್ನೊಳಗೆ ನುಸುಳಿ ಕೆರಳುತ್ತಿರುವ ನನ್ನ ನೋವನ್ನು.

- ಈ ಸಾಲುಗಳಲ್ಲಿ ನಮಗೆ ಕಾಣುವುದು ಎಸ್ ದಿವಾಕರ್ ಕ್ರಿಯೆ-ಭಾವ ಮತ್ತು ಭಾಷೆಯೊಂದಿಗೆ ನಡೆಸುವ, ನಡೆಸಲೆಳಸುವ ಅನುಸಂಧಾನವೇ.

ಎಸ್ ದಿವಾಕರ್ ಅವರ ವಿಶಿಷ್ಟವಾದ ಶಬ್ದಸಂಯೋಜನೆಯನ್ನೇ ತೋರಿಸುವ ಇನ್ನೊಂದು ಸೊಗಸಾದ ಕವನ ‘ನಿರೀಕ್ಷೆ’.

ಆಕಾಶವುಂಟಲ್ಲಿ ತನ್ನ ಪಾಡಿಗೆ, ಇಲ್ಲಿ
ಒಣಮರದ ತುದಿಗೇರಿ ಊಳಿಡುವ ಮುದಿಗಾಳಿ
ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ;
ಟೇಬಲ್ಲಿನ ಮೇಲೆ ಜೇಡಗಳಾಗಿ ಸುರಿದು
ಮೂಲೆಯ ಸೇರಿ ತೂಕಡಿಸುತ್ತಿರುವ ಮೌನ.

ಒಣಮರ ಮತ್ತು ಮುದಿಗಾಳಿ ಎಂಬ ಶಬ್ದಗಳನ್ನೂ, ಗಾಳಿ ಊಳಿಡುತ್ತಿದೆ ಎನ್ನುವ ಪರಿಕಲ್ಪನೆಯನ್ನೂ ಗಮನಿಸಿ. ಹಾಗೆಯೇ ಮಧ್ಯಾಹ್ನ ಮತ್ತು ಸೋತ ಕಣ್ಣುಗಳು ಬೇಡವೆಂದರೂ ನಮಗೆ ನೀಡುವ ಸುಡುಬಿಸಿಲಿನ ಭಾವನೆ ಶಬ್ದದಲ್ಲಿಲ್ಲದಿರುವುದು. ಹಾಗೆಯೇ ಇಲ್ಲಿ ಮೌನಕ್ಕೆ ಕೊಡುವ ವಿಲಕ್ಷಣವಾದ ಜೇಡ, ಮೂಲೆ ಮತ್ತು ತೂಕಡಿಸುವ ಪ್ರತಿಮೆಯನ್ನು ಗಮನಿಸಿ.

‘ಒಬ್ಬೊಂಟಿ’ ಕವನದ ಲಯವೂ ಗದ್ಯವನ್ನು ಪ್ರಾಯೋಗಿಕವಾಗಿ ಬಳಸಿಕೊಂಡಿದೆ. ಇಲ್ಲಿನ ಪರಿಕಲ್ಪನೆ ಮಾತ್ರ ಹೊಸದು. ಅದು ಸ್ವಾತಂತ್ರ್ಯದ ಕಲ್ಪನೆಯನ್ನೂ, ಒಬ್ಬೊಂಟಿತನದ ಬೇಸರದಿಂದ ಮುಕ್ತನಾಗುವ ಬಯಕೆಯನ್ನೂ, ಆಳದ ಮೌನವನ್ನೂ ಏಕಕಾಲಕ್ಕೆ ನಮ್ಮ ಮನಸ್ಸಿನ ಲಹರಿಯಾಗಿಸುತ್ತ ಕೈಗಳು ಇದ್ದಕ್ಕಿದ್ದಂತೆ ಕಳಚಿಕೊಂಡು ಹಾರುವ ಚಿತ್ರವನ್ನು ಕೊಡುತ್ತಿವೆ. ಒಟ್ಟಿನಲ್ಲಿ ಖುಶಿಯೊ ದುಃಖವೊ ಇಲ್ಲದ ಸ್ಥಿತಿಯನ್ನು ಸೂಚಿಸಿದರೂ ಅದರ ಕೊನೆಯಲ್ಲಿ ಸಣ್ಣ ಪೆಚ್ಚು ಕೂಡ ಇದೆ. ಈ ಮಿಶ್ರ ಭಾವದ ಹಳಹಳಿಕೆಯಿಂದ ಇಲ್ಲಿ ಓದುಗ ತಪ್ಪಿಸಿಕೊಳ್ಳಲಾರ.

ಎಸ್ ದಿವಾಕರ್ ಕವನಗಳಲ್ಲಿ ಪ್ರಯತ್ನಿಸಿರುವುದು ಮುಕ್ತವಾದ ಲಯದ, ಸಂಕೀರ್ಣ ಮನಸ್ಥಿತಿಯ ಅಭಿವ್ಯಕ್ತಿ. ಹಾಗಾಗಿ ಅವರಿಗದು ಗದ್ಯವಾಗಿ ಮೂಡುತ್ತಿದೆಯೇ, ಪ್ರಕಾರ ಎಂದು ಸ್ವೀಕೃತವಾದ ಮಾದರಿಯಲ್ಲಿಯೇ ಕವನವಾಗುತ್ತಿದೆಯೇ ಎಂಬುದು ಕೂಡ ಮುಖ್ಯವಾಗಿಲ್ಲ. ಅವರಿಗೆ ತನ್ನ ಭಾವಕ್ಕೆ ನಿಷ್ಠನಾಗಿರುವ, ಅದನ್ನು ಯಶಸ್ವಿಯಾಗಿ ಸಂವಹಿಸುವ ಮಾಧ್ಯಮವಾಗಿ ಭಾಷೆ, ಪ್ರತಿಮೆಗಳು, ಕಲ್ಪನೆ, ಶಬ್ದಸಂಯೋಜನೆ ಒದಗುತ್ತಿದೆಯೇ ಇಲ್ಲವೆ ಎಂಬುದು ಮಾತ್ರ ಮುಖ್ಯ. ಹಾಗಾಗಿ ದಿವಾಕರ್ ಅವರ ಎಲ್ಲ ಯಶಸ್ವಿ ಕವನಗಳಲ್ಲಿ ಸಶಕ್ತ ಸಂವಹನವಿದೆ, ಸಾರ್ಥಕ ಅಭಿವ್ಯಕ್ತಿಯಿದೆ ಮತ್ತು ಅಮೂರ್ತ ಸಂವೇದನೆಯನ್ನು ಭಾಷೆಯಲ್ಲಿ ಚಿತ್ರವಾಗಿಸಿದ ಸಂಕಲ್ಪಶುದ್ಧಿಯಿದೆ. ಇಷ್ಟಾಗಿಯೂ ಅವರು ಬಳಸುವ ಶಬ್ದ, ಕಲ್ಪನೆ, ಪ್ರತಿಮೆ ಮತ್ತು ಶಬ್ದಸಂಯೋಜನೆಯಾಚೆ ಅನುಭವದ ಹೊಳಹುಗಳು ಕಣ್ಣಾಮುಚ್ಚಾಲೆಯಾಡಿದಂತೆ, ಎಟುಕಿಯೂ ಎಟುಕದಂತೆ ಉಳಿಯುತ್ತವೆ. ಇದು ಕವನವೊಂದು ಓದುಗನಿಗೆ ಒಡ್ಡುವ ಸವಾಲು.

No comments: