Monday, June 30, 2014

ಕಲಕಬಲ್ಲ ಕಥಾನಕ: ವನಜಮ್ಮನ ಸೀಟು

ಒಂದು ಅದ್ಭುತವಾದ ಕಾದಂಬರಿಯಾಗಿ ರೂಪು ತಳೆಯುತ್ತಿದೆ ಎಂಬ ಆಶಾವಾದ ಮತ್ತು ನಿರೀಕ್ಷೆಗಳನ್ನು ಹುಟ್ಟಿಸುವ, ಕಾದಂಬರಿಯ ಕೊನೆ ಕೊನೆಯ ವರೆಗೂ ಅದನ್ನು ಹಾಗೆಯೇ ಹಿಡಿದಿಟ್ಟುಕೊಂಡು ಪೊರೆಯುವ ಈ ಕೃತಿ ಕೊನೆಗೂ ಅತೃಪ್ತಿಯನ್ನು ಉಳಿಸುತ್ತದೆ. ಹಾಗೆಂದ ಮಾತ್ರಕ್ಕೆ ಈ ಕಥಾನಕದ ಭಾವೀ ಓದುಗನನ್ನು ನಾನು ತಡೆಯುತ್ತಿಲ್ಲ, ಉತ್ತೇಜಿಸುತ್ತಿದ್ದೇನೆ. ಅದು ಹೀಗೆ:

ಹೆಣ್ಣು ಏನಾದರೂ ಹೊಸತನ್ನು ಅಥವಾ ಅಪರೂಪದ್ದನ್ನು ಮಾಡಲು ಹೊರಟರೆ, ಹಾಗೆ ಹೊರಡುವ ಮುನ್ನ ಅವಳು ಅದಕ್ಕೆ ತನ್ನ ಹಿರಿಯರಿಂದ, ಕೆಲವೊಮ್ಮೆ ಕಿರಿಯರಿಂದಲೂ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಇದು ಕಾಲಾತೀತವಾಗಿ ನಿಂತ ಸತ್ಯ ಮತ್ತು ನಮ್ಮೆಲ್ಲಾ ಸಭ್ಯ, ಶಿಷ್ಟ, ಪ್ರಬುದ್ಧ ಫೋಸುಗಳಾಚೆ ಇದನ್ನು ನಾವೂ ನೀವೂ ನಮ್ಮ ನಮ್ಮ ಮನೆಗಳಲ್ಲಿ ವಿಧ್ಯುಕ್ತವಾಗಿ ಆಚರಿಸುತ್ತ ಬಂದಿರುವುದು ಕೂಡ ಅಷ್ಟೇ ಸತ್ಯ. ನಾವು ಎಂದರೆ ಇಲ್ಲಿ ಗಂಡಸು ಮತ್ತು ಹೆಂಗಸು ಇಬ್ಬರೂ ಬಂದೆವು. ಅವಳು ಅದನ್ನೆಲ್ಲ ಧಿಕ್ಕರಿಸಿ ತಾನು ಮಾಡಬೇಕೆಂದಿರುವುದನ್ನು ಮಾಡಲು ಹೊರಟರೆ ಅದನ್ನು ಹೇಗೆ ಮಣಿಸಬೇಕೆಂಬುದೂ ನಮಗೆ ಗೊತ್ತು. ಅವಳು ಹಾಗೆ ಹೊರಟಾಗಲೆಲ್ಲ ಸಮಾಜದ ಸಿದ್ಧಮಾದರಿಯ ಹೆಣ್ಣಿನೆದುರು ಅವಳು ವಿಲಕ್ಷಣವಾಗಿಯೇ ಕಾಣಿಸಿಕೊಳ್ಳುವುದರಿಂದ ಮತ್ತು ಇಡೀ ಸಮಾಜ ಸಿದ್ಧಮಾದರಿಯನ್ನೇ ಗುಪ್ತವಾಗಿ ಬಯಸುತ್ತ, ಪೊರೆಯುತ್ತ ಅದೇ ಆರೋಗ್ಯಕರ ಎಂದು ಭಾವಿಸುವುದರಿಂದ ಅಂಥ ಹೆಣ್ಣು ಯಶಸ್ಸು ಕಾಣುವುದು ಕಡಿಮೆಯೇ. ಇದರ ಜೊತೆಜೊತೆಗೇ ನಾವು ಮರೆಯಬಾರದ ಒಂದು ಸಂಗತಿಯೆಂದರೆ, ಶತಶತಮಾನಗಳಿಂದ ಹೆಣ್ಣಿಗೆ ಸಿಕ್ಕ ಅವಕಾಶ ಮತ್ತು ಪ್ರೋತ್ಸಾಹ ಅಷ್ಟಕ್ಕಷ್ಟೇ ಆಗಿರುವುದರಿಂದ ಸಹಜವಾಗಿಯೇ ಅವಳಲ್ಲಿ ಈ ಹತಾರಗಳನ್ನೆಲ್ಲ ಎದುರಿಸುವ ಚಾಣಾಕ್ಷತನವೂ ಮುಕ್ಕಾಗಿರುತ್ತದೆ ಎನ್ನುವುದು. ಇದರಿಂದಾಗಿ ಅವಳು ಒಂದೋ ಬಹುಬೇಗ ಸೋಲೊಪ್ಪಿಕೊಳ್ಳುತ್ತಾಳೆ ಅಥವಾ ರಾಜೀಸೂತ್ರಕ್ಕೆ ಒಗ್ಗಿಕೊಳ್ಳುತ್ತಾಳೆ ಅಥವಾ ಮೇಲೆ ಹೇಳಿದಂಥ ಗುಣಲಕ್ಷಣಗಳ ಒಂದು ಸಮಾಜಕ್ಕೆ ಅಪ್ರಸ್ತುತವಾಗಿ ಬಿಡುತ್ತಾಳೆ.

ವನಜಮ್ಮನ ಸೀಟು ಕಾದಂಬರಿಯಲ್ಲಿ ಉಮಾರಾವ್ ಈ ಎಲ್ಲ ಅಂಶಗಳನ್ನೂ ಸೂಕ್ಷ್ಮವಾಗಿ ಗುರುತಿಸುತ್ತ ತಮ್ಮ ಕಥಾನಕವನ್ನು ಹೆಣೆಯುತ್ತಾರೆ. ಅವರು ಸಮುದಾಯವನ್ನು, ಅದರ ವಿಭಿನ್ನ ಸ್ತರಗಳನ್ನು, ಅಂತಸ್ತು, ವರ್ಗ, ಪ್ರಭೇದ, ಮನೋಧರ್ಮಗಳ ಸಹಿತ ತಮ್ಮ ಕೃತಿಯ ಚೌಕಟ್ಟಿನೊಳಕ್ಕೆ ಅತ್ಯಂತ ಸಹಜವಾಗಿ ತರಬಲ್ಲರು. ಮನುಷ್ಯನ ದ್ವಂದ್ವವನ್ನು, ತನ್ನದೇ ಅಂತಃಸ್ಸತ್ವದ ಎದುರು ತಲೆತಗ್ಗಿಸದೇ ಇರಲಾರದ ಅವನ ಆತ್ಮದ ಕುಹಕವನ್ನು, ವಿರೋಧ ಸಾಧ್ಯವಾಗದ ಷಂಡತನವನ್ನು ರೂಪಕವಾಗಿಯೂ ವಸ್ತುಸ್ಥಿತಿಯಾಗಿಯೂ ನಮಗೆ ತೋರಬಲ್ಲರು. ವನಜಮ್ಮನ ನಾಜೂಕು ನಿಲುವು, ಸಾಮಾಜಿಕ ಕಟ್ಟುಪಾಡುಗಳ ಗಡಿರೇಖೆಗಳ ಸ್ಪಷ್ಟವಾದ ಅರಿವು ಮತ್ತು ತನ್ನದೇ ಸ್ವಂತದ ಯುಕ್ತಾಯುಕ್ತ ಪ್ರಜ್ಞೆ ಅಚ್ಚರಿ ಹುಟ್ಟಿಸುವಾಗಲೇ ಇದೆಲ್ಲವೂ ಸಂಘರ್ಷಕ್ಕೆ ಬೆನ್ನಿಕ್ಕುವ ತಂತ್ರವೂ ಇರಬಹುದಲ್ಲವೆ ಎನಿಸುವಾಗಲೂ ಆ ಪಾತ್ರದ ಚೌಕಟ್ಟಿನಲ್ಲಿ ಈ ಬಗೆಯ ನಿರ್ವಹಣೆ ನಮ್ಮ ಮೆಚ್ಚುಗೆಗೆ ಪಾತ್ರವಾಗುತ್ತದೆ ಕೂಡ. ವನಜಾ ಇಡೀ ಕಾದಂಬರಿಯ ಕಥಾನಕದ ನಡೆಯುದ್ದಕ್ಕೂ ಸಿದ್ಧಗೊಳ್ಳುತ್ತ ಹೋಗುವ ಗಮ್ಯ ಕೊನೆಗೂ ವೈಯಕ್ತಿಕ ತುರ್ತಿನದ್ದಷ್ಟೇ ಆಗಿರಬಹುದು, ತಪ್ಪೇನಿಲ್ಲ. ಆದರೆ ಅದಕ್ಕೆ ಒಂದು ಸಾಮಾಜಿಕ ಮುಖವೂ ಇರುವುದು ಸುಳ್ಳಲ್ಲ ಮತ್ತು ಅದರಿಂದಾಗಿಯೇ ನಮಗೆ ಈ ಕಾದಂಬರಿ ಪ್ರಸ್ತುತವಾಗುವುದು ಎಂಬ ನೆಲೆಯ ಮೇಲೆ ಕೆಲವೊಂದು ಅಂಶಗಳನ್ನು ಮುಂದೆ ಚರ್ಚಿಸಿದ್ದೇನೆ.

ವನಜಮ್ಮನ ಪಾತ್ರದಂತೆಯೇ ಈ ಕಾದಂಬರಿಯ ಇತರ ಕೆಲವು ಮುಖ್ಯಪಾತ್ರಗಳೂ ರಕ್ತಮಾಂಸ ಸಹಿತ ನಮ್ಮ ಅನುಭವಕ್ಕೆ ದಕ್ಕುತ್ತ ಅವು ನಮಗೆ ನಿಜವಾಗುವಲ್ಲಿ ಕೆಲವು ತೊಡಕುಗಳಿವೆ ಎಂಬುದು ನಿಜ. ಇಲ್ಲಿ ನಮಗೆ ವನಜ ಅಥವಾ ಶಾಮಸುಂದರನ ಇಡೀ ಒಂದು ದಿನ ಹೇಗೆ ಕಣ್ಣಿಗೆ ಕಟ್ಟುವುದಿಲ್ಲವೋ ಹಾಗೆಯೇ ಆ ವ್ಯಕ್ತಿತ್ವಗಳೂ ಇಡಿಯಾಗಿ ದಕ್ಕುವುದಿಲ್ಲ. ಗೋದಮ್ಮ, ಸೇತುಮಾಧವನಂಥ ಪಾತ್ರಗಳು ಸ್ಕೆಚೀ ಆಗಿ ಉಳಿದರೆ ನಷ್ಟವೇನಿಲ್ಲ. ಅವು ಒಂದು ಬಗೆಯ ಸ್ಟಿರಿಯೋ ಟೈಪ್, ಮಿಡಿಯೊಕರ್ ಪಾತ್ರಗಳು. ಆದರೆ ಇಡೀ ಕಾದಂಬರಿಯ ಕೇಂದ್ರದಲ್ಲಿರುವ ವನಜಾ ಪಾತ್ರ ಹಾಗಲ್ಲ. ಕಟ್ ಶಾಟ್‌ ಮಾದರಿಯಲ್ಲಿ ಇವರ ಚಟುವಟಿಕೆಯ ಸೀನ್‌ಗಳನ್ನು ತೋರಿಸುತ್ತ ಹೋಗುವ ಮುನ್ನ ನಮಗೆ ಅವರು ಇಡಿಯಾಗಿ "ಹೌದು" ಆಗಬೇಕಾಗುತ್ತದೆ. ವನಜಾ ನಿಲುವು, ನಿರ್ಧಾರ, ನಡೆ ಎಲ್ಲವೂ ಹಟಾತ್ ಎಂಬಂತೆ ಘಟಿಸುವುದರಲ್ಲಿರುವ ಅನಿರೀಕ್ಷಿತಕ್ಕೆ ಬೆರಗಾಗುವುದನ್ನೇ ಮೆಚ್ಚಿಕೊಳ್ಳುವುದು ಸಾಧ್ಯ, ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಹಾಗೆಯೇ ಶ್ಯಾಮಸುಂದರನ ಸ್ಥಿತಿಯಲ್ಲಿ ಗಂಡನೊಬ್ಬನ ದ್ವಂದ್ವ, ತುಮುಲ, ತಿಕ್ಕಾಟಗಳು - ಅವುಗಳ ಬಗ್ಗೆ ಸ್ತ್ರೀಮತಕ್ಕೆ ಎಂಥ ತಿರಸ್ಕಾರವೇ ಬೇಕಾದರೂ ಇರಲಿ, ಅದನ್ನು ಕಾದಂಬರಿಯ ಚೌಕಟ್ಟಿನ ಹೊರಗಿಟ್ಟು ನೋಡಲು ಸಾಧ್ಯವಿಲ್ಲ. ಈ ಅಂಶದತ್ತ ಕೊಂಚ ಹೆಚ್ಚಿನ ಗಮನ ಅಗತ್ಯವಿತ್ತೆನಿಸಿದರೂ ಇವತ್ತಿನ ಜಾಯಮಾನದ ಕಾದಂಬರಿಯಾಗಿ ಅದನ್ನು ಸಹಿಸಬಹುದು ಅಥವಾ ಸಹಿಸಬೇಕೇನೊ.

ಹದಿನಾಲ್ಕು ವರ್ಷದ ಪ್ರಮೀಳಾ ಪಕ್ಕದ ಮನೆಯ ವಿಲ್ಸನ್‌ನನ್ನೇ ಮದುವೆಯಾಗುತ್ತೇನೆ ಎಂದು ದೃಢವಾಗಿ ನಿಲ್ಲುವುದಕ್ಕೆ ಕಾರಣಳಾಗುವ ವನಜಾ, ಸಂಪತ್ತು ಕಾಣೆಯಾಗಿದ್ದಾನೆಯೇ ಅಥವಾ ಕೊಲೆಯಾಗಿದ್ದಾನೆಯೇ ಎಂಬ ಬಗ್ಗೆ ಆಕೆ ತನ್ನ ಲಾಯರ್ ಪತಿಯ ಎದುರು ಎತ್ತುವ ಪ್ರಶ್ನೆ, ಕೆರೆಹಳ್ಳಕ್ಕೆ ಭೇಟಿಕೊಟ್ಟು ಅಲ್ಲಿನ ಬದುಕು ಬವಣೆಗಳ ಬಗ್ಗೆ ಅದೇ ಊರಿನ ಮಂದಿ ಅಸಡ್ಡೆ ತೋರುತ್ತಿರುವುದರ ಬಗ್ಗೆ ಪ್ರಶ್ನಿಸುತ್ತಲೇ ತಾನು ತನ್ನಿಂದಾದುದನ್ನು ಮಾಡಲು ಮುಂದಾಗುವ ಅವಳ ದಿಟ್ಟತನ, ಮೂಢನಂಬಿಕೆಗಳನ್ನು ಪೊರೆಯುವ ಶಂಕರಿಯೊಂದಿಗಿನ ಜಗಳ, ನಾಟಕದ ಅಭಿನೇತ್ರಿ ಮನೋನ್ಮಣಿಯ ಹಿನ್ನೆಲೆಯ ಕುರಿತು ಅವಳಿಗಿರುವ ಕಕ್ಕುಲಾತಿ, ಗಂಡನಿಗಿಲ್ಲದ ಛಾತಿ ತೋರಿಸಿ ತಾನೇ ಕಾರ್ ಡ್ರೈವಿಂಗ್ ಕಲಿಯುವ ಅವಳ ಮನೋಧಾರ್ಡ್ಯ - ಇವೆಲ್ಲವೂ ವನಜಳನ್ನು ಕಾಣಿಸುವಾಗಲೇ ಸಮುದಾಯವನ್ನು ಕಾಣಿಸುತ್ತಿರುತ್ತದೆ ಮಾತ್ರವಲ್ಲ ಕಾದಂಬರಿಯ ತಾಂತ್ರಿಕ ಅಗತ್ಯಗಳನ್ನೂ ಪೊರೆಯುತ್ತಿರುತ್ತದೆ ಎಂಬುದೇ ಇಲ್ಲಿನ ಕ್ರಾಫ್ಟ್ ಬಗ್ಗೆ ಹುಟ್ಟುವ ಮೆಚ್ಚುಗೆಗೆ ಕಾರಣವಾಗುತ್ತದೆ. ಉದಾಹರಣೆಗೆ ಇಲ್ಲಿನ ನಾಟಕದ ಪಾತ್ರ ಒಂದು ಹಂತದಲ್ಲಿ ವನಜಾಳನ್ನು ನಾಟಕದ ಎಸ್ಕೇಪಿಸಂನಿಂದ ಪೊರೆದರೆ ಇನ್ನೊಂದು ಹಂತದಲ್ಲಿ ಅಭಿನೇತ್ರಿಯ ಕತೆಯಲ್ಲಿ ವನಜಾಳ ಕತೆಯ ನೆರಳುಗಳು ಹರಿದಾಡುತ್ತವೆ. ರಂಗನನ್ನು ಮತ್ತೊಬ್ಬ ಸಂಪತ್ತುವಾಗಿಸಬೇಕೆ ಅಥವಾ ಅವನನ್ನು ಹಾಗೆಯೇ ಬಿಡಬೇಕೆ ಅಥವಾ ಮನೋರೋಗತಜ್ಞರಿಗೊಪ್ಪಿಸಬೇಕೆ ಎಂಬಲ್ಲಿ ಹಲವು ಸ್ತರಗಳ, ವೈರುಧ್ಯಗಳು ಕಾಡುತ್ತವೆ. ಕೆರೆಹಳ್ಳದ ಸಮಸ್ಯೆಗಳಂತೂ ಕಾದಂಬರಿಗೆ ಮಾತ್ರವಲ್ಲ, ಕಾದಂಬರಿಕಾರರಿಗೇ ಒಡ್ಡಿದ ಸವಾಲು ಸಣ್ಣದಲ್ಲ. ಆದರೆ ಅವರದನ್ನು ಅರ್ಧದಲ್ಲೇ ಕೈಬಿಟ್ಟಿರುವುದು ಸ್ವಾರಸ್ಯಕರವಾಗಿದೆ. ಸಮುದಾಯದ ಸಮಸ್ಯೆಗಳಿಗೇ ಇಲ್ಲಿನ ವನಜಾ ಹೆಚ್ಚು ಹೆಚ್ಚು ಮುಖಾಮುಖಿಯಾಗುವ ಸಂದರ್ಭದಲ್ಲಿ ಆ ಸಮುದಾಯದ ಅನಿವಾರ್ಯ ಘಟಕಗಳತ್ತ ಕಾದಂಬರಿ ಮೌನವಹಿಸಿರುವುದು ಈ ಮಾತಿಗೆ ಕಾರಣ.

ಬಹುಷಃ ಅಲ್ಲಿಯೇ ಈ ಕಾದಂಬರಿ ಹುಟ್ಟಿಸುವ ಅತೃಪ್ತಿಯ ಬೀಜಗಳಿವೆ. ಈ ರೀತಿಯಾಗಿ ಒಂದು ಸಮಾಜವನ್ನು, ಮಾನವನ ಮೂಲಭೂತ ಸ್ವಭಾವವನ್ನು ತಮ್ಮ ಕಾದಂಬರಿಯ ಚೌಕಟ್ಟಿನಲ್ಲಿ ಹಿಡಿದಿಡುವ ಉಮಾರಾವ್ ಸಮುದಾಯದ ಸಮಸ್ಯೆಗಳಿಗೆ ಪೂರ್ತಿಯಾಗಿ ಮುಖಾಮುಖಿಯಾಗುವುದನ್ನು ಉದ್ದೇಶಪೂರ್ವಕವಾಗಿಯೇ ತಪ್ಪಿಸುತ್ತಾರೆ. ಹಾಗೆ ಈ ಕಾದಂಬರಿಯಲ್ಲಿ ಖಡಾಖಂಡಿತವಾಗಿ ರಾಜಕೀಯ ಆಯಾಮಗಳೇ ಇಲ್ಲ. ಸಮಾಜ-ಸಮುದಾಯವಿದ್ದು ಅಲ್ಲಿ ರಾಜಕೀಯವಿಲ್ಲ, ಮಾಧ್ಯಮಗಳಿಲ್ಲ, ಪ್ರಭುತ್ವವಿಲ್ಲ ಮತ್ತು ಯಾವುದೇ ಸಂಘಟನೆಗಳಿಲ್ಲ. ಬೆಂಗಳೂರಿನಿಂದ ಐವತ್ತು ಕಿಲೊಮೀಟರ್ ಅಂತರದಲ್ಲಿರುವ ಒಂದು ಹಳ್ಳಿಯ, ಹೆಚ್ಚು ಕಡಿಮೆ ಇಪ್ಪತ್ತು ವರ್ಷಗಳ ಹಿಂದಿನದ್ದಷ್ಟೇ ಆಗಿರಬಹುದಾದ ಕತೆಯನ್ನು ಹೇಳುತ್ತಿರುವ ಕಾದಂಬರಿಯಿದು ಎಂಬ ಅಂಶವನ್ನೂ ಗಮನಿಸಬೇಕು. ಪೋಲೀಸ್ ಎಂಬ ಶಬ್ದ ವನಜಾ ಬಾಯಲ್ಲಿ ಎರಡು ಮೂರು ಬಾರಿ ಬರುತ್ತದೆಯಾದರೂ, ತನ್ನ ಪತಿಯೇ ಲಾಯರ್ ಆಗಿದ್ದರೂ ಇಲ್ಲಿನ ಸಮಾಜದಲ್ಲಿ ಅದರ ಅನಿವಾರ್ಯ ಅಂಗಗಳಾದ ರಾಜಕೀಯ, ಸಾಮಾಜಿಕ ಮತ್ತು ವರ್ಗೀಯ ಘಟಕಗಳೇ ಇಲ್ಲ. ಹಾಗಾಗಿ ಕೆರೆಹಳ್ಳದ ಕೆಳವರ್ಗದವರಲ್ಲಿ ಯಾವುದೇ ಸಂಘಟನೆಯಾಗಲೀ, ನಾಯಕರಾಗಲೀ, ಅದರ ರಾಜಕೀಯ ಮುಖಗಳಾಗಲೀ ನಮಗೆ ಕಾಣಿಸದ ಒಂದು ವೈಕಲ್ಯ ಎದ್ದು ಕಾಣುತ್ತದೆ. ಹಾಗೆಯೇ ಇಲ್ಲಿ ರಾಜಮ್ಮ ನಡೆಸುವ ಅನಧಿಕೃತ ಮಹಿಳಾಮಂಡಲವೇ ಏಕೈಕ ಸಂಘಟನೆ. ಸಮಾಜದ್ದು, ಸಂಸಾರದ್ದು, ದಾಂಪತ್ಯದ್ದು ಮತ್ತು ವೈಯಕ್ತಿಕದ್ದು ಎಂಬ ನೆಲೆಯಲ್ಲೇ ವನಜಾ ತನ್ನ ಸುತ್ತಲಿನ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತಾಳೆ ಮತ್ತು ಅಷ್ಟಿಷ್ಟು ಮಾತ್ರ ತೊಡಗಿಕೊಳ್ಳುತ್ತಾಳೆ ಎಂದು ಒಪ್ಪಿಕೊಂಡರೂ ಕಾದಂಬರಿಯ ಹೊರಗೂ ಚಾಚಿಕೊಳ್ಳುವ ಈ ಪ್ರಶ್ನೆ ಪ್ರಸ್ತುತವೇ ಆಗಿ ಉಳಿಯುತ್ತದೆ. ಬಹುಷಃ ಇಲ್ಲಿ ರಾಜಕೀಯ ನೇತಾರರ, ಕೆಳವರ್ಗದ ಸಮುದಾಯವನ್ನು ಪ್ರತಿನಿಧಿಸುವ ನಾಯಕರ ಮತ್ತು ಸ್ತ್ರೀವಾದಿ ಸಂಘಟನೆಯ ಘಟಕಗಳಿಗೆ, ಅವು ಯಾವ ಮಟ್ಟದಲ್ಲಿಯೇ ಇರಲಿ, ಅವು ಇದ್ದು ಅವುಗಳಿಗೆ ವನಜಾ ಮುಖಾಮುಖಿಯಾಗುವಂತಿದ್ದರೆ ಬಹುಷಃ ಕಾದಂಬರಿ ಮತ್ತಷ್ಟು ಅಥೆಂಟಿಕ್ ಆಗಿ ರೂಪುಗೊಳ್ಳುತ್ತಿತ್ತು ಮಾತ್ರವಲ್ಲ ಅದರ ಹಾಗೂ ವನಜಾಳ ಸಾಧ್ಯತೆಗಳು ಮತ್ತಷ್ಟು ವಿಸ್ತೃತವಾಗುತ್ತಿದ್ದವೋ ಏನೊ. ಹಾಗಾಗದೆ ಅವಳು "ಲೇಡಿಸ್ ಓನ್ಲಿ" ತಿರುವಿಗೆ ಹೊರಳಿಕೊಂಡು ಕಾದಂಬರಿ ಮುಗಿಯುವುದು ಕೃತಕವೆನಿಸುವುದು ಮಾತ್ರವಲ್ಲ, ಒಮ್ಮೆಗೇ ಕಾದಂಬರಿಯು ನೆಟ್ಟ ಬೀಜರೂಪಿ ಆಶಯಕ್ಕೆ ಕತ್ತರಿಯಿಟ್ಟಂತೆಯೂ ಕಾಣುತ್ತದೆ.

ಹಾಗಾಗಿ ಇದನ್ನು ಮತ್ತಷ್ಟು ಚೆನ್ನಾಗಿ, ಸುಪುಷ್ಟವಾಗಿ ಮತ್ತು ಹೆಚ್ಚು ಮಹತ್ವಾಕಾಂಕ್ಷೆಯ ಕೃತಿಯಾಗಿ ನಿಲ್ಲಿಸಬಹುದಾಗಿತ್ತು ಎನಿಸುವುದು ಸುಳ್ಳಲ್ಲ. ಅಂಥ ರೂಹು, ಕ್ಷಮತೆಯುಳ್ಳ ವಸ್ತು ಉಮಾ ಅವರಿಗೆ ದಕ್ಕಿತ್ತು. ಸ್ಪಷ್ಟವಾಗಿಯೇ ಅವರು ಅದರ ಹರಹು ಹಾಗೆ ಚಾಚಿಕೊಳ್ಳಬಹುದೆಂಬುದನ್ನೂ ಕಂಡುಕೊಂಡಿದ್ದರು. ಮಾತ್ರವಲ್ಲ ಅದನ್ನು ಹಾಗೆ ವಿಸ್ತರಿಸಿಕೊಂಡು ದುಡಿಸಿಕೊಳ್ಳಬಲ್ಲ ಶಕ್ತಿಯಿದ್ದ ಕಾದಂಬರಿಕಾರ್ತಿಯನ್ನು ಕೂಡ ಇಲ್ಲಿ ಕಾಣುತ್ತೇವೆ. ಮನುಷ್ಯನ ಮತ್ತು ಸಮುದಾಯದ ಸೂಕ್ಷ್ಮಗಳನ್ನು ಅದ್ಭುತವಾಗಿ ಗ್ರಹಿಸುವ ಮತ್ತು ಅಷ್ಟೇ ಸೂಕ್ಷ್ಮವಾಗಿಯೂ, ಕಲಾತ್ಮಕವಾಗಿಯೂ ಅಕ್ಷರದಲ್ಲಿ ಹಿಡಿದಿಡಬಲ್ಲ ಛಾತಿಯೂ ಉಳ್ಳ ಉಮಾ ರಾವ್ ಸ್ವತಃ ಒಂದಿಷ್ಟು ಅವಸರ, ಅಸಡ್ಡೆಗಳಿಂದ ಕೃತಿಗೆ ಕೊಡಬೇಕಾದ ಪೋಷಣೆ ನೀಡದೆ ಹೋದುದರಿಂದ ಕಾದಂಬರಿ ಅವರದೇ ನಿರ್ಲಕ್ಷ್ಯಕ್ಕೆ ತುತ್ತಾಗಿದೆ ಎನಿಸುತ್ತದೆ.

ಕೇವಲ ಐವತ್ತಮೂರು ಪುಟಗಳಲ್ಲಿ ಮುಗಿದುಬಿಡುವ ಈ ಪುಟ್ಟ ಕಾದಂಬರಿ ಬೃಹತ್ ಕಾದಂಬರಿಗಳು ಸಾಧಿಸಲು ವಿಫಲವಾದ ಒಂದು ಮನೋಭೂಮಿಕೆಯನ್ನೂ, ತಲ್ಲಣಗಳನ್ನೂ ಹುಟ್ಟಿಸಬಲ್ಲಷ್ಟು ಸಶಕ್ತವಾಗಿದ್ದು ಓದುಗರ ಮೆಚ್ಚುಗೆಗೆ ಪಾತ್ರವಾಗುತ್ತದೆ.

No comments: