Saturday, July 19, 2014

ಎಸ್ ದಿವಾಕರ್ ಸಂದರ್ಶನ: ಭಾಗ-೨

6. ನೀವು ಕತೆ, ಕವನ, ಪ್ರಬಂಧ, ವ್ಯಕ್ತಿಚಿತ್ರ - ಹೀಗೆ ವಿಧವಿಧವಾದ ಪ್ರಕಾರಗಳಲ್ಲಿ ಬರೆದಿದ್ದೀರಿ ಮಾತ್ರವಲ್ಲ, ಪ್ರತಿ ಪ್ರಕಾರದಲ್ಲೂ ವಿಶಿಷ್ಟವಾದ ಛಾಪನ್ನೂ ಮೂಡಿಸಿದ್ದೀರಿ. ಸ್ವಂತ ಬರಹಗಳಿಗಿಂತ ಹೆಚ್ಚಾಗಿ ಅನುವಾದ ಮಾಡಿದ್ದೀರಿ, ಮಾಡಿಸಿದ್ದೀರಿ, ಅನೇಕರ ಕತೆ, ಅನುವಾದಗಳ ಸಂಪಾದಕರಾಗಿಯೂ, ಸುಧಾ, ಮಲ್ಲಿಗೆಯಂಥ ಪತ್ರಿಕೆಗಳ ಸಂಪಾದಕರಾಗಿಯೂ ಕೆಲಸಮಾಡಿದ್ದೀರಿ. ಸ್ವತಃ ಸಂಗೀತಪ್ರಿಯರೂ ಸಂಗೀತಾಭ್ಯಾಸಿಯೂ ಆಗಿದ್ದು 'ನಾದದ ನವನೀತ'ದಂಥ ಅಪರೂಪದ ಕೃತಿಯನ್ನೂ ಸಂಪಾದಿಸಿದ್ದೀರಿ. 'ಘಟಶ್ರಾದ್ಧ' ಸಿನಿಮಾದ ಸಹನಿರ್ದೇಶಕರಾಗಿಯೂ ಕೆಲಸ ಮಾಡಿದ್ದೀರಿ. ಚಿತ್ರಕಲೆಯಲ್ಲಿಯೂ ನಿಮಗೆ ಸಾಕಷ್ಟು ಪರಿಶ್ರಮವಿತ್ತು ಎಂದು ಕೇಳಿದ್ದೇನೆ. ವ್ಯಂಗ್ಯಚಿತ್ರಗಳನ್ನು ಬಿಡಿಸುತ್ತಿದ್ದಿರಿ, ಬಾಪ್ಕೋ ಪ್ರಕಾಶನದ ಪುಸ್ತಕಗಳಿಗೆ ಮುಖಚಿತ್ರ ಬಿಡಿಸಿದ್ದಿರಿ ಎಂದೂ ಓದಿದ್ದೇನೆ. ಈ ಎಲ್ಲಾ ರಂಗಗಳನ್ನು ಮನಸ್ಸಿಗೆ ತಂದುಕೊಂಡು ಹೇಳುವುದಾದರೆ, ಈಗಲೂ ನೀವು ಹೊಸತನ್ನು ಪ್ರಯತ್ನಿಸುತ್ತಿರುವ ರಂಗವನ್ನು ಹೊರತಾಗಿಸಿ, ಎಲ್ಲಿ ನಿಮಗೆ ಇನ್ನೂ ಹೆಚ್ಚಿನದನ್ನು ಸಾಧಿಸಬಹುದಿತ್ತು, ಕಾರಣಾಂತರದಿಂದ ಸಾಧ್ಯವಾಗಲಿಲ್ಲ ಎನಿಸಿತ್ತು? ಆ ರಂಗದಿಂದ ನೀವು ಹಾಗೆ ಅತೃಪ್ತರಾಗಿಯೇ ನಿರ್ಗಮಿಸುವಂತೆ ಮಾಡಿದ ಅಥವಾ ಈ ಕ್ಷೇತ್ರ ನನ್ನದಲ್ಲ ಅನಿಸುವಂತೆ ಮಾಡಿದ ಅಂಶಗಳೇನಾದರೂ ಇವೆಯೆ?

ಮೊದಲೇ ಹೇಳಿದಂತೆ ಚಿತ್ರಕಲೆ, ಸಂಗೀತ, ಸಿನಿಮಾ, ನಾಟಕ, ಇವೆಲ್ಲವುಗಳಲ್ಲೂ ನನಗೆ ಅತೀವ ಆಸಕ್ತಿಯಿದೆ. ನಾನೊಬ್ಬ ಪತ್ರಕರ್ತನಾಗಿದ್ದುದರಿಂದ ಸಹಜವಾಗಿಯೇ ನನಗೆ ಅನೇಕ ಮಂದಿ ಲೇಖಕರ ಪರಿಚಯವಾಯಿತು. ಹಾಗಾಗಿ ಅನುವಾದದ ಬಗೆಗೆ ಒಲವಿದ್ದ ಕೆಲವು ಲೇಖಕರಿಗೆ ನಾನೇ ಮೂಲ ಕೃತಿಗಳನ್ನು ಕೊಟ್ಟು ಅನುವಾದಮಾಡಿಸಿದ್ದುಂಟು. ಇನ್ನು ಶಾಸ್ತ್ರೀಯ ಸಂಗೀತದ ಬಗೆಗೆ ನನ್ನಲ್ಲಿ ಮೂಡಿದ ಕೆಲವು ವಿಚಾರಗಳನ್ನು ಪ್ರತಿಪಾದಿಸುವುದಕ್ಕಾಗಿಯೇ ನಾನು ಕೆಲವು ಲೇಖನಗಳನ್ನು ಬರೆದೆ. ನಾನು ಸಂಪಾದಿಸಿರುವ 'ನಾದದ ನವನೀತ' ಇದುವರೆಗೆ ಕನ್ನಡದಲ್ಲಿ ಬಂದ ಕೆಲವು ಅತ್ಯುತ್ತಮ ಬರಹಗಳ ಸಂಕಲನ. ಒಂದು ಕಾಲದಲ್ಲಿ ನನಗೆ ಉದ್ಯೋಗವಿಲ್ಲದಿದ್ದಾಗ ವ್ಯಂಗ್ಯಚಿತ್ರಗಳನ್ನೂ ಕೆಲವು ಪುಸ್ತಕಗಳ ಮುಖಪುಟಗಳನ್ನೂ ರಚಿಸಿದ್ದುಂಟು. 'ಘಟಶ್ರಾದ್ಧ' ಸಿನಿಮಾಕ್ಕೆ ನಾನು ಸಹ ನಿರ್ದೇಶಕನಾದದ್ದು ಗಿರೀಶ್ ಕಾಸರವಳ್ಳಿಯವರ ಪ್ರೀತಿಯ ಒತ್ತಾಯದಿಂದ. ಚಿತ್ರಕಲೆಯಾಗಲೀ ಚಲನಚಿತ್ರವಾಗಲೀ ನನ್ನ ಅಭಿವ್ಯಕ್ತಿ ಮಾಧ್ಯಮವಲ್ಲವೆಂದು ನಾನು ಬಹುಬೇಗ ಅರಿತುಕೊಂಡದ್ದು ಒಳ್ಳೆಯದೇ ಆಯಿತು. ಮೊದಲೇ ಹೇಳಿದಂತೆ ನಾನು ಬರೆಯಬಯಸುವ, ಆದರೆ ಈಗಲೂ ನನ್ನಿಂದ ಸಾಧ್ಯವೇ ಇಲ್ಲ ಎನಿಸುತ್ತಿರುವ ಪ್ರಕಾರವೆಂದರೆ ನಾಟಕ.

7. ಪರಂಪರೆಯ ಅರಿವು, ತನ್ನ ಭಾಷೆಗೆ ಸಂಬಂಧಪಟ್ಟಂತೆ ಮಾತ್ರವಲ್ಲ, ಇಡೀ ಜಗತ್ತಿನ ಸಾಹಿತ್ಯಕ್ಕೆ ಸಂಬಂಧಿಸಿದ ಹಾಗೆ, ಒಬ್ಬ ಸಾಹಿತಿಗೆ ಅಗತ್ಯವೆ? ಸಂಗೀತ, ನೃತ್ಯ, ಚಿತ್ರಕಲೆ ಯಾವುದಕ್ಕೂ ತಕ್ಕಮಟ್ಟಿನ ಶಿಕ್ಷಣ, ತರಬೇತಿ ಅಗತ್ಯವಿದ್ದರೂ ಬರೆಯುವುದಕ್ಕೆ ಅದು ಅನಿವಾರ್ಯ ಎನಿಸಿಕೊಂಡಿಲ್ಲ. ಅಲ್ಲದೆ, ಓದು ಬರಹದ ಶತ್ರು ಎಂಬ ಮಾತೂ ಇದೆ. ಬೇರೆ ಸಾಹಿತಿಯನ್ನು/ಸಾಹಿತ್ಯವನ್ನು ಓದಿಕೊಳ್ಳುವುದು ಒಂದು ಮಿತಿಯಾಚೆ (ಇದನ್ನು ನಿರ್ಣಯಿಸುವವರು ಯಾರು!) ಒಳ್ಳೆಯದಲ್ಲ - ಬರಹಗಾರನಿಗೆ ಎನ್ನಬಹುದೆ?

ಪರಂಪರೆಯ ಅರಿವಿದ್ದರೆ ತಪ್ಪೇನಿಲ್ಲ. ಎಲಿಯಟ್ಟನ 'ವೇಸ್ಟ್ ಲ್ಯಾಂಡ್' ಕವನ ಓದಿದರೆ ಇಂಗ್ಲಿಷ್ ಕಾವ್ಯ ಪರಂಪರೆಯೇ ಅದರ ಬೆನ್ನಿಗಿದೆ ಅನ್ನಿಸುವುದಿಲ್ಲವೆ? ಅದೇ ರೀತಿಯಲ್ಲಿ ಗೋಪಾಲಕೃಷ್ಣ ಅಡಿಗರ 'ಭೂಮಿಗೀತ' ಕವನದಲ್ಲೂ ನಮ್ಮ ಇತಿಹಾಸ, ಪುರಾಣಗಳು ರೂಪಕಗಳಾಗಿ ಕಾಣಿಸಿಕೊಳ್ಳುತ್ತವೆ. ಪರಂಪರೆಯ ಅರಿವು ಒಬ್ಬ ಸೃಜನಶೀಲ ಲೇಖಕನಿಗೆ ಹೇಗೋ ಹಾಗೆ ಒಬ್ಬ ವಿಮರ್ಶಕನಿಗೂ ಅತ್ಯಗತ್ಯವೆನ್ನುತ್ತೇನೆ ನಾನು. ಹಾಗೆಂದು ಸೃಜನಶೀಲ ಲೇಖಕ ಹೆಚ್ಚು ಓದಬಾರದೆಂದಿಲ್ಲ. ಅವನು ತುಂಬ ಪ್ರತಿಭಾವಂತನಾಗಿದ್ದರೆ ಓದದಿದ್ದರೂ ನಡೆದೀತು. ವಾಲ್ಮೀಕಿಯಾಗಲೀ ವ್ಯಾಸನಾಗಲೀ 'ಮಂಟೇಸ್ವಾಮಿ'ಯಂಥ ಜಾನಪದ ಕಾವ್ಯ ರಚಿಸಿದವನಾಗಲೀ ಏನು ಓದಿಕೊಂಡಿದ್ದರು? ನಿರ್ದಿಷ್ಟವಾಗಿ ಹೇಳಲಾದೀತೆ? ನವೋದಯ ಕಾಲದಲ್ಲಿ ನಮ್ಮಲ್ಲಿಲ್ಲದಿದ್ದ ಸಣ್ಣಕತೆ, ಕಾದಂಬರಿ, ಪ್ರಬಂಧ, ವಿಮಶರ್ೆ, ಇತ್ಯಾದಿ ಪ್ರಕಾರಗಳನ್ನು ಇಂಗ್ಲಿಷ್ ಸಾಹಿತ್ಯದಿಂದ ಬರಮಾಡಿಕೊಂಡ ನಮ್ಮವರು ಆ ಪ್ರಕಾರಗಳ ಸೀಸೆಗಳಲ್ಲಿ ಎಂಥ ದ್ರಾವಣಗಳನ್ನು ತುಂಬಿಸಿದರೆಂಬುದು ಬಹು ಮುಖ್ಯ. ಓದು ಬರಹದ ಶತ್ರುವೆಂದು ನನಗೆಂದೂ ಅನ್ನಿಸಿಲ್ಲ. ಲೇಖಕನಾದವನಿಗೆ ತನ್ನ ಅನುಭವವನ್ನು ತಕ್ಕ ಮಾಧ್ಯಮದ ಮೂಲಕ ಹಂಚಿಕೊಳ್ಳಲೇಬೇಕೆಂದು ಅನ್ನಿಸಿದಾಗ ಮಾತ್ರ ಅವನಿಂದ ಸಾಹಿತ್ಯ ಸೃಷ್ಟಿ ಸಾಧ್ಯ. ಈ ದಿಸೆಯಲ್ಲಿ ಓದಿನಿಂದ ಅವನಿಗೆ ತನ್ನ ಅನುಭವವನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕೆ ಸೂಕ್ತ ಪ್ರೇರಣೆ ಉಂಟಾಗಬಹುದಷ್ಟೆ. ಮತ್ತೆ ಸಂಗೀತ, ನೃತ್ಯ, ಚಿತ್ರಕಲೆ ಮೊದಲಾದವುಗಳಿಗೆ ಎಂಥ ಶಿಕ್ಷಣ, ತರಬೇತಿ ಅಗತ್ಯವೋ ಅಂಥದೇ ಶಿಕ್ಷಣ, ತರಬೇತಿ ಲೇಖಕನಿಗೂ ಅನಿವಾರ್ಯ ಎನ್ನುವಂತಿಲ್ಲ. ಯಾಕೆಂದರೆ ಲೇಖಕ ತನ್ನ ಸಾಹಿತ್ಯವನ್ನು ಸೃಷ್ಟಿಸುವ ಭಾಷೆಯಿದೆಯಲ್ಲ, ಅದು ಸಾಮುದಾಯಿಕವಾದದ್ದು. ಒಂದು ಭಾಷಿಕ ಸಮುದಾಯ ಉಪಯೋಗಿಸುವ ಭಾಷೆಯಲ್ಲೇ ಅವನು ಹೊಸತೇ ಆದ ಒಂದನ್ನು ಸೃಷ್ಟಿಸಬೇಕು. ಲೇಖಕನಾದವನಿಗೆ ತರಬೇತಿ ಕೊಡುವುದೇನಾದರೂ ಇದ್ದರೆ ಅದು ಅತ್ಯುತ್ತಮ ಸಾಹಿತ್ಯ ಕೃತಿಗಳ ಆಶಯ, ಆಕೃತಿಗಳನ್ನು ಅವನು ಕೈಗೊಳ್ಳಬಹುದಾದ ಸತತ ಅಧ್ಯಯನ.

8. ಪರಂಪರೆ ಎಂದ ತಕ್ಷಣ ಕನ್ನಡದ ಮಟ್ಟಿಗೆ ಬಂದರೆ ಪಂಪನಿಂದ ತೊಡಗಿ ತೀರ ಈಚಿನ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ-ದಲಿತ, ನವ್ಯೋತ್ತರ ಆಧುನಿಕ ಸಾಹಿತ್ಯ ಎಂದೆಲ್ಲ ಇರುವ ವಿಂಗಡನೆ ಕೂಡ ಮುಖ್ಯವಾಗಿಬಿಡುತ್ತದೆ. ಈ ಹಿನ್ನೆಲೆಯಲ್ಲಿ ಒಬ್ಬ ಸಾಹಿತಿ ವ್ಯಕ್ತಿವಿಶಿಷ್ಟ ಪ್ರಜ್ಞೆಯಾಗಿ ಬೆಳೆಯಬೇಕು ಮತ್ತು ಅದೇ ಕಾಲಕ್ಕೆ ಸಾಮಾಜಿಕ, ತಾತ್ವಿಕ ನೆಲೆಯಲ್ಲಿಯೂ ತನ್ನ ನಿಲುವು ರೂಪಿಸಿಕೊಳ್ಳಬೇಕು ಎನ್ನುವುದನ್ನು ನೀವು ಹೇಗೆ ನೋಡುತ್ತೀರಿ? ಈ ಪ್ರಶ್ನೆಯನ್ನು ಇವತ್ತಿನ ಮಿತ ಜೀವನಾನುಭವದ ನಗರಜೀವಿ ಕಾರ್ಪೊರೇಟ್ ಸಂಸ್ಕೃತಿಯ ಸಾಹಿತಿಯ ಸಾಮಾಜಿಕ ಪ್ರಜ್ಞೆ ಮತ್ತು ಸಂವೇದನೆಗಳ ಹಿನ್ನೆಲೆಯಲ್ಲಿಯೂ ನೋಡಿ ಉತ್ತರಿಸಬೇಕು ಎಂದು ಕೇಳಿಕೊಳ್ಳುತ್ತೇನೆ. ಲೇಖಕನಾದವನು ತನ್ನ ಕಂಫರ್ಟ್ ಝೋನ್ ಮೀರಿ ಬರೆಯಬೇಕು ಎಂಬ ಸಲಹೆ ಕೂಡ ಆಗಾಗ ಕೇಳಿಬರುತ್ತಿರುತ್ತದೆ. ಈ ಹಿನ್ನೆಲೆಯಲ್ಲಿಯೂ ನೀವು ನಿಮ್ಮ ಉತ್ತರವನ್ನು ವಿಸ್ತರಿಸಬೇಕೆಂಬುದು ಇನ್ನೊಂದು ಕೋರಿಕೆ. (ಕಾರಂತರಂತೆ ಇವತ್ತು ಬರೆದು ಬದುಕುವ ಸವಾಲು ತೆಗೆದುಕೊಂಡು, ದೇಶ ಸುತ್ತಿ, ಕೋಶ ಓದಿ, ಜೀವನದ ವಿಭಿನ್ನ ಮುಖಗಳನ್ನು ಸ್ವತಃ ಕಂಡು, ಅನುಭವಿಸಿ ಬರೆಯುವ ಸಾಧ್ಯತೆಯನ್ನೇ ಆಧುನಿಕ ಸಾಹಿತಿ ವಿಭಿನ್ನ ಕಾರಣಗಳಿಂದಾಗಿ ಕಳೆದುಕೊಂಡಿದ್ದಾನೆ ಎಂಬುದು ಒಂದು ಮಗ್ಗುಲಾದರೆ, ಇವತ್ತಿನ ಕಾರ್ಪೊರೇಟ್ ಸಾಹಿತಿ ಬಂಡಾಯ-ದಲಿತ ಸುರುಮಾಡಿದ ಶೋಷಿತ ಜನಾಂಗದ ಧ್ವನಿಯಾಗುವ ಸಾಧ್ಯತೆಯಿಂದ ಸಾಹಿತ್ಯವನ್ನು ಆತ್ಮಕೇಂದ್ರಿತ ಮೌಲ್ಯಗಳತ್ತ ಸರಿಸಿದ್ದಾನೆ ಎಂಬುದು ಇದರ ಇನ್ನೊಂದು ಮಗ್ಗುಲು.)

ಭಾಷೆ ಸಾಮಾಜಿಕವಾದದ್ದು. ಸಮಾಜ ಎಂದರೆ ಒಂದು ಇಡೀ ವ್ಯವಸ್ಥೆ, ಜೀವನವಿಧಾನ, ಸಂಸ್ಕೃತಿ. ಇವು ಕೂಡ ಕಾಲಕಾಲಕ್ಕೆ ಬದಲಾಗುತ್ತವೆಯಷ್ಟೆ. ಒಂದು ಕಾಲದ ತವಕ ತಲ್ಲಣಗಳು ಇನ್ನೊಂದು ಕಾಲದಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳಬಹುದು; ಆಗ ಅವುಗಳಿಗೆ ಬದಲಾಗಿ ಇತರ ಸಮಸ್ಯೆಗಳು ಮುಖ್ಯವಾಗಬಹುದು. ನಮ್ಮಲ್ಲಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ-ದಲಿತ, ಆಧುನಿಕೋತ್ತರ, ಇತ್ಯಾದಿ ವಿಂಗಡನೆ ಮಾಡಿದವರು ಬಹುಮಟ್ಟಿಗೆ ವಿಮರ್ಶಕರು. ಸಾಹಿತ್ಯದಲ್ಲಿ ವಿವಿಧ ಮನೋಧರ್ಮಗಳನ್ನು ಗುರುತಿಸುವುದಕ್ಕೆ ಇಂಥ ವಿಂಗಡನೆ ಅಗತ್ಯವೂ ಹೌದು. ನವೋದಯದ ಅನೇಕ ಮಂದಿ ಲೇಖಕರು ಈಗಲೂ ತುಂಬ ಪ್ರಸ್ತುತರಾಗಿದ್ದಾರಲ್ಲ, ಅದಕ್ಕೆ ಏನು ಹೇಳುತ್ತೀರಿ? ಅಡಿಗರಂಥ ಕವಿಗಳಿಗೆ ನಾವು ಉಸಿರಾಡುವ ಗಾಳಿಯಲ್ಲಿ ಎಂಥ ವಾಸನೆಯಿದೆ ಎಂಬ ಪರಿಜ್ಞಾನ ಸದಾ ಜಾಗೃತವಾಗಿಯೇ ಇರುತ್ತದೆ. ಮತ್ತೆ 'ಲೇಖಕನಾದವನು ತನ್ನ ಕಂಫರ್ಟ್ ಝೋನ್ ಮೀರಿ ಬರೆಯಬೇಕು ಎಂಬ ಸಲಹೆ'ಯನ್ನು ನಿಜವಾದ ಲೇಖಕ ಅಷ್ಟಾಗಿ ಪರಿಗಣಿಸಲಾರನೇನೊ. ಇಷ್ಟಕ್ಕೂ ಸಾಹಿತಿಗೆ ಮೂಲದ್ರವ್ಯ ಎನ್ನುವ ಅನುಭವವಿದೆಯಲ್ಲ, ಅದನ್ನು ಹೇಗೆ ವ್ಯಾಖ್ಯಾನಿಸುತ್ತೀರಿ? ಶಿವರಾಮ ಕಾರಂತರ 'ಮರಳಿ ಮಣ್ಣಿಗೆ'ಯಂಥ ಬೃಹತ್ ಕಾದಂಬರಿಯಲ್ಲಿ ಸಿಕ್ಕಲಾರದ್ದೇನೋ ತಿರುಮಲೇಶರ ಅಥವಾ ವಿ.ಎಂ. ಮಂಜುನಾಥರ ಒಂದು ಕವನದಲ್ಲಿ ಸಿಕ್ಕಿಬಿಡುತ್ತದೆಯಲ್ಲ? ಯಾವುದು ದೊಡ್ಡದು, ಯಾವುದು ಸಣ್ಣದು? ಟಾಲ್ಸ್ಟಾಯಿಯಲ್ಲಿ ಕಾಣುವ ಜೀವನ ವೈಶಾಲ್ಯ, ಅನುಭವ ವೈವಿಧ್ಯ ಕಾಫ್ಕನಲ್ಲಿ ಇಲ್ಲವೇ ಇಲ್ಲ. ಆದರೆ ಕಾಫ್ಕ, ಟಾಲ್‌ಸ್ಟಾಯ್ ಕಡೆಗಣಿಸಿರಬಹುದಾದ ಒಂದು ಅನುಭವವನ್ನು ಭೂತಗನ್ನಡಿ ಹಿಡಿದು ತೋರಿಸುವುದರಿಂದ ಅವನು ನನಗಂತೂ ಟಾಲ್‌ಸ್ಟಾಯಷ್ಟೇ ಶ್ರೇಷ್ಠ ಲೇಖಕನೆನಿಸುತ್ತಾನೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಇವತ್ತಿನ ನಗರಜೀವಿ ಕಾರ್ಪೊರೇಟ್ ಸಂಸ್ಕೃತಿಯ ಸಾಹಿತಿಯದು ಮಿತ ಜೀವನಾನುಭವ ಎಂದು ತಳ್ಳಿಹಾಕುವಂತಿಲ್ಲ. ಅವನು ಜೀವನವನ್ನು, ಮನುಷ್ಯರನ್ನು ನೋಡುವ ಕ್ರಮವೇನು? ಅವನ ಜೀವನ ದೃಷ್ಟಿಯೇನು? ಅವನ ಕೃತಿ ಇತರರ ಕೃತಿಗಳಿಗಿಂತ ಹೇಗೆ ಭಿನ್ನ? ಅದು ನಮ್ಮ ಸಾಹಿತ್ಯದ ದಿಕ್ಕನ್ನು ಬದಲಾಯಿಸುವಷ್ಟು ಶಕ್ತವಾಗಿದೆಯೆ? ಇವೇ ಮೊದಲಾದ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳುವುದೊಳ್ಳೆಯದು. ಇನ್ನು ಶಿವರಾಮ ಕಾರಂತರಿಗಿದ್ದ ಎನರ್ಜಿಯನ್ನಾಗಲೀ ಬಹುಮುಖೀ ಪ್ರತಿಭೆಯನ್ನಾಗಲೀ ನಮ್ಮಲ್ಲಿ ಯಾರಲ್ಲೂ ನಾವು ನಿರೀಕ್ಷಿಸಲಾಗದು. ಕನ್ನಡದಲ್ಲಿ ಅವರಷ್ಟು ಬರೆದವರು ಇನ್ನೊಬ್ಬರಿಲ್ಲ; ಬಹುಶಃ ಪ್ರಪಂಚದಲ್ಲೂ ಇರಲಿಕ್ಕಿಲ್ಲ. ಮತ್ತೆ ಸಾಹಿತ್ಯವಲ್ಲದೆ ಜೀವನದ ಇತರ ಕ್ಷೇತ್ರಗಳ ಬಗೆಗೂ ಅವರು ಪುಂಖಾನುಪುಂಖವಾಗಿ ಬರೆದರಲ್ಲ, ಹಾಗೆ ನಾವೂ ಬರೆಯುವುದರಲ್ಲಿ ಅರ್ಥವಿಲ್ಲ. ಯಾಕೆಂದರೆ ಅವರ ಕಾಲಕ್ಕೆ ಅವರು ಬರೆದದ್ದೆಲ್ಲವೂ ಹೊಸದಾಗಿಯೇ ಇತ್ತು.

9. ಸಾಮಾಜಿಕ ಚಳುವಳಿಗಳಿಗೂ ಒಬ್ಬ ಸಾಹಿತಿಯ ಬರಹಗಳ ವೈಚಾರಿಕತೆಗೂ ಸಂಬಂಧವನ್ನು ಪರಿಕಲ್ಪಿಸುವ, ಒಬ್ಬ ಲೇಖಕ ಬರೆಯುವುದನ್ನೆಲ್ಲ ಸದ್ಯದ ವರ್ತಮಾನದಲ್ಲಿ ಅವನು ಮತ್ತು ನಾವು ಎದುರಿಸುತ್ತಿರುವ ಹಿಂಸೆಯ ಸ್ವರೂಪಗಳಿಗೆ ಒಡ್ಡಿದ ಮುಖಾಮುಖಿ ಎಂಬ ಸಂಬಂಧವನ್ನು ಪರಿಕಲ್ಪಿಸುವ ವಿಮರ್ಶಕ ಪ್ರಜ್ಞೆಯನ್ನು ನೀವು ಒಬ್ಬ ಲೇಖಕನಾಗಿ ಮತ್ತು ಸ್ವತಃ ವಿಮರ್ಶಕನಾಗಿ ಹೇಗೆ ಸ್ವೀಕರಿಸುತ್ತೀರಿ? ಇಸಂಗಳು, ಹೋರಾಟಗಳು, ನಾನಾ ಬಗೆಯ ಸಾಮಾಜಿಕ ಚಳುವಳಿಗಳು - ಇವುಗಳ ಮೂಲಕ ಕನ್ನಡ ಸಾಹಿತ್ಯ ಪರಂಪರೆಗೆ ಒಂದು ತಾತ್ವಿಕತೆ ದಕ್ಕಿದೆ ಎಂಬುದನ್ನು ಸಾರ್ವತ್ರಿಕಗೊಳಿಸುವುದಾಗಲೀ, ಇವೆರಡರ ನಡುವೆ ಕೊಡುಕೊಳ್ಳುವಿಕೆ ಒಂದು ಅನಿವಾರ್ಯ ಸಂಕರ ಎಂದಾಗಲೀ ಪ್ರತಿಪಾದಿಸುವುದು ಸರಿಯೆ?

ಒಂದು ದೃಷ್ಟಿಯಿಂದ ಸರಿ. ಅಲ್ಲದೆ ಇದು ಸಾಹಿತಿಯ ಕೃತಿಗಿಂತ ಮಿಗಿಲಾಗಿ ಆ ಕೃತಿಯ ವ್ಯಾಖ್ಯಾನಕ್ಕೆ ಸಂಬಂಧಿಸಿದ್ದು. ಇವತ್ತು ಸಂಸ್ಕೃತಿ ಚಿಂತನೆಯ ಫಲವಾಗಿ ಹುಟ್ಟಿಕೊಂಡಿರುವ ಹೊಸ ವಿಮರ್ಶೆ ಸಾಹಿತ್ಯ ಕೃತಿಯಲ್ಲಿ ಧ್ವನಿಸುವ ಸಾಮಾಜಿಕ, ಸಾಂಸ್ಕೃತಿಕ ಅಂಶಗಳಿಗೇ ಹೆಚ್ಚು ಒತ್ತು ಕೊಡುತ್ತಿದೆ. ತತ್ಪರಿಣಾಮವಾಗಿ ಒಂದು ಪಠ್ಯವನ್ನು ಓದುವ ವಿಧಾನವೇ ಬದಲಾಗಿದೆ. (ಇದರ ಪರಿಣಾಮವಾಗಿ ಸಾಹಿತ್ಯ ಕೃತಿಯ ಶಿಲ್ಪ ಅವಗಣನೆಗೆ ಗುರಿಯಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ.) ನನ್ನ ದೃಷಿಯಲ್ಲಿ ಈ ಬಗೆಯ ವಿಮರ್ಶೆಯೂ ಅಗತ್ಯ. ಇನ್ನು ಇಸಂಗಳು, ಹೋರಾಟಗಳು, ನಾನಾ ಬಗೆಯ ಸಾಮಾಜಿಕ ಚಳುವಳಿಗಳು ನಮ್ಮ ಸಾಹಿತ್ಯಕ್ಕೆ ಒಂದು ಬಗೆಯ ತಾತ್ವಿಕತೆ ನೀಡಿರುವುದಂತೂ ಸತ್ಯ. ಇವು ಒಂದನ್ನೊಂದು ಪ್ರಭಾವಿಸಿವೆ ಕೂಡ. ಉದಾಹರಣೆಗೆ ಪ್ರಗತಿಶೀಲರ ಸಾಹಿತ್ಯವನ್ನೇ ನೋಡಬಹುದು. ಆ ಕಾಲದಲ್ಲಿ ಕುಂವೀ ಅವರಂಥ, ಅಮರೇಶ ನುಗಡೋಣಿಯವರಂಥ ಲೇಖಕರನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿರಲಿಲ್ಲ, ಅಲ್ಲವೆ?

10. ವಿಮರ್ಶೆ ತನ್ನ ಸ್ಥಾನಮಾನ ಕಳೆದುಕೊಂಡುಬಿಟ್ಟಿದೆ ಅನಿಸುತ್ತದೆಯೆ? ವಿಮರ್ಶೆ ನಿಜಕ್ಕೂ ಬೇಕೆ? ಸಾಹಿತಿ, ಪ್ರಕಾಶಕ, ಓದುಗ, ಪತ್ರಿಕೆ ಮತ್ತು ಒಂದು ಸಾಹಿತ್ಯಿಕ ವಾತಾವರಣದ ನಿರ್ಮಾಣ ಈ ಎಲ್ಲ ದೃಷ್ಟಿಕೋನಗಳಿಂದಲೂ ಇಂದಿನ ಬದಲಾದ ಕಾಲಮಾನದಲ್ಲಿ ವಿಮರ್ಶೆಯ ಅಗತ್ಯ, ಯುಕ್ತಾಯುಕ್ತತೆಯ ಪರಿಕಲ್ಪನೆ ಬದಲಾಗಿದೆಯೆ?

ಹಾಗೆನಿಸುವುದಿಲ್ಲ. ವಿಮರ್ಶೆಗೆ ಅದರ ಸ್ಥಾನಮಾನ ಇದ್ದೇ ಇದೆ. ಆದರೆ ಈಗ ಬರೆಯುವವರಿಗೆ ವಿಮರ್ಶಕರ ಅಗತ್ಯವೇನು ಎಂದು ಸ್ಪಷ್ಟವಾಗಿ ತಿಳಿದಂತಿಲ್ಲ. ನನ್ನ ದೃಷ್ಟಿಯಲ್ಲಿ ಒಂದು ಭಾಷೆಯ ಸಾಹಿತ್ಯದಲ್ಲಿ ಅತ್ಯುತ್ತಮವಾದುದನ್ನು ಆಯ್ಕೆ ಮಾಡಿ, ಬೆಲೆಕಟ್ಟಿ, ಅದನ್ನು ಮುಂದಿನ ಪೀಳಿಗೆಯವರಿಗೆ ದಾಟಿಸುವ ಮಹತ್ಕಾರ್ಯ ವಿಮರ್ಶಕರದು. ನವೋದಯ ಕಾಲದಲ್ಲಿ ಎ.ಆರ್. ಕೃಷ್ಣಶಾಸ್ತ್ರೀ ಅವರಂಥ ಅಪವಾದಗಳನ್ನು ಬಿಟ್ಟರೆ ವಿಮರ್ಶಕರೇ ಇರಲಿಲ್ಲ. (ಹಾಗಿದ್ದೂ ಆ ಕಾಲದ ಲೇಖಕರು ಮಹತ್ವಪೂರ್ಣ ಕೃತಿಗಳನ್ನು ಬರೆದರೆನ್ನುವುದು ಬೇರೆ ಮಾತು.) ನಮ್ಮ ಸಾಹಿತ್ಯದಲ್ಲಿ ವಿಮರ್ಶೆಗೊಂದು ಗೌರವದ ಸ್ಥಾನ ಪ್ರಾಪ್ತವಾದದ್ದು ನವ್ಯರ ಕಾಲದಲ್ಲಿ. ನವ್ಯರದು ನಿಜಕ್ಕೂ ಕೃತಿನಿಷ್ಠ ವಿಮರ್ಶೆ. ಇವತ್ತು ಕೂಡ ನಮ್ಮ ನಡುವೆ ಜಿ.ಎಸ್. ಆಮೂರ, ಜಿ.ಎಚ್.ನಾಯಕ, ಗಿರಡ್ಡಿ ಗೋವಿಂದರಾಜ, ಸಿ.ಎನ್. ರಾಮಚಂದ್ರನ್ರಂಥ ಹಿರಿಯ ತಲೆಮಾರಿನ ಮುಖ್ಯ ವಿಮರ್ಶಕರು ಇದ್ದಾರೆ. ಟಿ.ಪಿ. ಅಶೋಕ, ನರಹಳ್ಳಿ ಬಾಲಸುಬ್ರಮಣ್ಯ, ರಾಜೇಂದ್ರ ಚೆನ್ನಿ, ಎಂ.ಎಸ್. ಆಶಾದೇವಿ, ಎಸ್.ಆರ್. ವಿಜಯಶಂಕರ ಮೊದಲಾದವರು ತಮ್ಮ ಬರಹಗಳಿಂದ ವಿಮರ್ಶೆಯ ಎಚ್ಚರವನ್ನು ಕಾಯ್ದುಕೊಂಡಿದ್ದಾರೆ. ಆದರೆ ಈಗ ಬಹುಮಟ್ಟಿಗೆ ಒಂದು ಕೃತಿಯ ಲೋಪದೋಷಗಳನ್ನು ಚಚರ್ಿಸುವ ಪರಿಪಾಠವೇ ಮಾಯವಾಗಿದೆ. ಇದಕ್ಕೆ ಸಾಹಿತ್ಯೇತರ ಕಾರಣಗಳೂ ಇದ್ದಾವು. ಇವತ್ತಿನ ವಿಮರ್ಶಕರಲ್ಲಿ ಅಂಥ ಒಳನೋಟಗಳೇ ಇಲ್ಲವೆಂದುಕೊಂಡಿದ್ದ ನಾನು ಇತ್ತೀಚೆಗೆ ಎಂ.ಎಸ್. ಆಶಾದೇವಿ, ಬಿ.ಎನ್. ಸುಮಿತ್ರಾಬಾಯಿಯಂಥವರ ವಿಮರ್ಶೆಗಳನ್ನು ಓದಿ ಬೆರಗಾಗಿದ್ದೇನೆ. ಇಲ್ಲಿ ಇನ್ನೊಂದು ಮಾತನ್ನೂ ನಾನು ಸೇರಿಸಬೇಕು. ನಾನು ಗೌರವಿಸುವ ಎಂಕೆ. ಅನಿಲ್ ನನ್ನ ತರುಣ ಮಿತ್ರರು. ಕನ್ನಡ ಸಾಹಿತ್ಯವನ್ನು, ಭಾರತೀಯ ಸಾಹಿತ್ಯವನ್ನು, ಜಗತ್ತಿನ ಸಾಹಿತ್ಯವನ್ನು ಅವರಷ್ಟು ಓದಿಕೊಂಡಿರುವ ಇನ್ನೊಬ್ಬರನ್ನು ನಾನು ಊಹಿಸುವುದಕ್ಕೂ ಸಾಧ್ಯವಿಲ್ಲ. ಅವರ ಜೊತೆ ಅನೌಪಚಾರಿಕವಾಗಿ ಮಾತನಾಡುವಾಗಲೆಲ್ಲ ನನಗೆ ಅವರು ಒಂದು ಪಠ್ಯವನ್ನು ಎಷ್ಟೆಲ್ಲ ಕೂಲಂಕಷವಾಗಿ ಓದುತ್ತಾರೆಂದು, ಅವರಲ್ಲೇ ಯಾಕೆ ನಮ್ಮ ವಿಮರ್ಶಕರಾರಲ್ಲೂ ಕಾಣದಂಥ ಒಳನೋಟಗಳಿವೆಯೆಂದು ಮನವರಿಕೆಯಾಗಿರುವುದುಂಟು. ಆದರೇನು ಮಾಡುವುದು? ಅವರು ವಿಮರ್ಶೆಯಿರಲಿ, ಬೇರೆ ಏನನ್ನೂ ಬರೆಯದವರು.

11. ನಮಗೆ 'ಗೆಳೆಯರ ಗುಂಪು', ಧಾರವಾಡದ ಮನೋಹರ ಗ್ರಂಥಮಾಲೆಯ ಅಟ್ಟ, ಗಾಂಧೀಬಜಾರಿನಲ್ಲಿ ಸೇರುತ್ತಿದ್ದ ನವ್ಯರು ಮುಂತಾಗಿ ಕೇಳಿ ಗೊತ್ತು. ನವೋದಯ ಮತ್ತು ನವ್ಯರ ಕಾಲಕ್ಕೆ ವಿಪುಲವಾಗಿತ್ತೆನ್ನಿಸುವ ಸಾಹಿತಿಗಳ ನಡುವಣ ಚರ್ಚೆ, ವಾಗ್ವಾದ ಇವತ್ತು ಇಲ್ಲವಾಗಿದೆ ಎನಿಸುತ್ತದೆಯೆ? ಲಂಕೇಶ್-ತೇಜಸ್ವಿ, ಲಂಕೇಶ್-ಅನಂತಮೂರ್ತಿ, ಅನಂತಮೂರ್ತಿ-ಭೈರಪ್ಪ, ಕಾರ್ನಾಡ್-ನೈಪಾಲ್ ತರದ ಕೃತಿನಿಷ್ಠ ಭಿನ್ನಾಭಿಪ್ರಾಯಗಳ ಮುಕ್ತ ಅಭಿವ್ಯಕ್ತಿ, ಚರ್ಚೆ ಆ ನಂತರದ ತಲೆಮಾರಿನಲ್ಲಿ ನಿಂತೇ ಹೋಗಿರುವುದು ಏನನ್ನು ಸೂಚಿಸುತ್ತದೆ? ಸಾಹಿತಿಗಳ ನಡುವೆ ಸಂವಾದ, ಚರ್ಚೆ, ವಾಗ್ವಾದ ಕೂಡ ಒಂದು ರಂಗದ ಆರೋಗ್ಯಕರ ಜೀವಂತಿಕೆಯ ಲಕ್ಷಣ ಅಲ್ಲವೆ? ಪರಂಪರೆಯೊಂದಿಗಿನ ಸಂಬಂಧ ಕಡಿದುಕೊಂಡಿರುವುದರ ಸೂಚನೆಯೆ ಇದು?

ಹಿಂದೆಲ್ಲ ಲೇಖಕರ ನಡುವೆ ನಡೆಯುತ್ತಿದ್ದ ಚರ್ಚೆ, ವಾಗ್ವಾದಗಳಿಗೆ ಬಹುಶಃ ಇದು ಕಾಲವಲ್ಲ. ಈಗ ಸಾಹಿತಿಯೊಬ್ಬ ಆರಂಭಿಸುವ ಚರ್ಚೆಯನ್ನು, ಅದು ಎಷ್ಟೇ ಮಹತ್ವಪೂರ್ಣವಾಗಿದ್ದರೂ, ನಿರ್ಲಕ್ಷಿಸುವುದೇ ಹೆಚ್ಚು. ಸೃಜನಶೀಲತೆಯ ಜೀವಂತಿಕೆಯ ದೃಷ್ಟಿಯಿಂದ ಇದೇನೂ ಆರೋಗ್ಯಕರ ಲಕ್ಷಣವಲ್ಲ. ನಮ್ಮ ಪರಿಷತ್ತು, ಅಕಾಡೆಮಿಗಳಂಥ ಸಂಸ್ಥೆಗಳು ಎಲ್ಲ ಲೇಖಕ ಲೇಖಕಿಯರೂ ಒಂದೆಡೆ ಸೇರಿ ಚರ್ಚಿಸುವಂಥ ವೇದಿಕೆಯೊಂದನ್ನು ಸೃಷ್ಟಿಸಬಹುದಿತ್ತು, ಸೃಷ್ಟಿಸಲಿಲ್ಲ. ಈಚೆಗೆ ನಾವು ಕೆಲವು ಮಿತ್ರರು ಪರಸ್ಪರ ಮಾತಾಡಿಕೊಂಡು ಕತೆಗಾರರು, ಕಾದಂಬರಿಕಾರರು, ಕವಿಗಳು, ಪ್ರಬಂಧಕಾರರು, ನಾಟಕಕಾರರು, ವಿಮರ್ಶಕರು, ಸಾಹಿತ್ಯವನ್ನು ಭಾಷಾಂತರಿಸುವವರು, ಲೇಖನಗಳನ್ನು ಬರೆಯುವವರು, ಪತ್ರಕರ್ತರು, ಹೀಗೆ ಎಲ್ಲರೂ ಸೇರುವಂಥ ಒಂದು ವೇದಿಕೆಯನ್ನು ರೂಪಿಸಿದೆವು. ಮೊದಲ ಸಭೆಗೆ ಬಂದ ಹೊಸ ಕಾಲದ ಲೇಖಕರೊಬ್ಬರಿಗೆ ಸಭೆಯಲ್ಲಿದ್ದ ಬಹುಮಂದಿ ನರೆತಕೂತಲಿನವರೆಂದು ನಿರಾಶೆಯಾಯಿತು! ಯಾಕೆ ಹೀಗೆ ಎಂದು ಮನೋವಿಶ್ಲೇಷಣೆ ಮಾಡುವ ಶಕ್ತಿ ನನಗಿಲ್ಲ. ಒಟ್ಟಿನಲ್ಲಿ ನಮ್ಮ ಹೊಸ ಪ್ರಯತ್ನವೂ ಕೂಡ ಅಂತಿಮವಾಗಿ ಸೋತರೆ ಆಶ್ಚರ್ಯವಿಲ್ಲ.
(ಚಿತ್ರಗಳನ್ನು ಅಂತರ್ಜಾಲದ ವಿವಿಧ ತಾಣಗಳಿಂದ ಕೃತಜ್ಞತಾಪೂರ್ವಕವಾಗಿ ಬಳಸಿಕೊಳ್ಳಲಾಗಿದೆ)

No comments: