Friday, July 4, 2014

ಎಸ್ ದಿವಾಕರ್ ಸಂದರ್ಶನ: ಭಾಗ-೧

ಎಸ್ ದಿವಾಕರ್ ನಮ್ಮ ನಡುವಿನ ಅದ್ವಿತೀಯ ವ್ಯಕ್ತಿ. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅವರು ಸದ್ದಿಲ್ಲದೆ, ಪ್ರಶಸ್ತಿ, ಸನ್ಮಾನಗಳಿಗೆ ಹಾತೊರೆಯದೆ ನೀಡಿದ ಕೊಡುಗೆ ಬಹುಕಾಲ ನಿಲ್ಲುವಂಥಾದ್ದು. ಒಂದು ಸಂಸ್ಥೆಯಂತೆ ದುಡಿದ ಈ ವ್ಯಕ್ತಿಗೆ ತನ್ನ ಸಾಧನೆಯ ಬಗ್ಗೆ ಯಾವುದೆ ಜಂಭವಿಲ್ಲ, ಅಹಂ ಇಲ್ಲ. ತೀರ ಎಳೆಯ ಬರಹಗಾರರೊಂದಿಗೂ, ಸಾಮಾನ್ಯರೊಂದಿಗೂ ಸಮಾನ ನೆಲೆಯಲ್ಲಿ ಬೆರೆಯಬಲ್ಲ ಈ ವ್ಯಕ್ತಿ ಅಷ್ಟೇ ಸೂಕ್ಷ್ಮ ಮತ್ತು ಸರಳ ಮನಸ್ಸಿನ ವ್ಯಕ್ತಿ.

ದಿವಾಕರ್ ಅವರ ಪ್ರಧಾನ ಆಸಕ್ತಿಗಳತ್ತ ಗಮನಿಸಿ. ಅದು ಸಾಹಿತ್ಯ, ಓದು, ಅನುವಾದ ಮತ್ತು ಬರವಣಿಗೆ ಇಲ್ಲಿ ಪ್ರಧಾನವಾದದ್ದು. ಇದರ ಜೊತೆ ಅವರು ‘ಶತಮಾನದ ಸಣ್ಣಕತೆಗಳು’, ‘ಬೆಸ್ಟ್ ಆಫ್ ಕೇಫ’, ‘ಕನ್ನಡದ ಅತಿಸಣ್ಣ ಕತೆಗಳು’, ‘ನಾದದ ನವನೀತ’ ಎಂದೆಲ್ಲ ಸಂಪಾದನ ಕ್ರಿಯೆಯಲ್ಲೂ ಸಕ್ರಿಯರಾಗಿದ್ದವರು. ‘ಮಲ್ಲಿಗೆ’, ‘ಸುಧಾ’ದಂಥ ಪತ್ರಿಕೆಗಳ ಸಂಪಾದಕರಾಗಿಯೂ ಹೆಸರು ಮಾಡಿದವರು. ಸಂಗೀತ ಅವರ ಇನ್ನೊಂದು ಪ್ರಧಾನ ಆಸಕ್ತಿ. ಚಿತ್ರಕಲೆ, ಫೋಟೋಗ್ರಫಿ, ಬಣ್ಣಗಳು ಅವರನ್ನು ಸದಾ ಆಕರ್ಷಿಸಿವೆ. ಪ್ರಬಂಧಗಳಲ್ಲಿಯೂ ಸಾದಾ ಲಲಿತ ಪ್ರಬಂಧಗಳದೇ ಒಂದು ಸೊಗಸಾದರೆ, ಕುರಿತಿಟ್ಟು ಡೂಡೋ, ಇರುವೆ, ಕಾಗೆ, ಜಿರಲೆಗಳ ಬಗ್ಗೆ ಬರೆದ ಅವರ ಪ್ರಬಂಧಗಳು ಕೂಡ ವಿಜ್ಞಾನದಿಂದ, ಸಾಹಿತ್ಯದಿಂದ, ಪರಂಪರೆಯಿಂದ, ದೇಶವಿದೇಶಗಳ ಮಾಹಿತಿಯಿಂದ ವಿಶಿಷ್ಟವಾದ ಒಂದು ಪರಸ್ಪರ ಅಂತರ್ ಸಂಬಂಧವನ್ನು ಹೆಣೆದು ಬಿಡಬಲ್ಲ ಕಸೂತಿಯಂಥ ವಿನ್ಯಾಸವನ್ನು ತಳೆದು ಅಚ್ಚರಿ ಹುಟ್ಟಿಸುತ್ತವೆ. ಸಂಗೀತಕ್ಕೆ ಬಂದರೆ ಅವರು ಭೀಮಸೇನ ಜೋಶಿ, ಮಂಗಳಪಲ್ಲಿ, ಶೆಮ್ಮಗುಂಡಿ ಮುಂತಾದವರ ಬಗ್ಗೆ ಬರೆಯಬಲ್ಲಷ್ಟೇ ಸೊಗಸಾಗಿ ಹಾರ್ಮೋನಿಯಂ, ತಂಬೂರಿಗಳ ಬಗ್ಗೆ ರಸವತ್ತಾಗಿ ಬರೆಯಬಲ್ಲರು, ಬಿಲಾಸಖಾನಿ ತೋಡಿ, ಸುಗಮ ಸಂಗೀತದ ಬಗ್ಗೆ ವಿವರಿಸಬಲ್ಲರು. ಇನ್ನು ಸಾಹಿತ್ಯದ ಬಗ್ಗೆ, ಸಾಹಿತಿಗಳ ಬಗ್ಗೆ, ಪುಸ್ತಕಗಳ ಬಗ್ಗೆ ತಮ್ಮ ಅರಿವಿನ ವಿಚಾರದಲ್ಲಿ ಅವರಾಗಲೇ ದಂತಕತೆಯಾಗಿ ಬಿಟ್ಟಿದ್ದಾರೆ. ಎಸ್ ದಿವಾಕರ್‌ಗೆ ಗೊತ್ತಿಲ್ಲದ ಲೇಖಕನಿಲ್ಲ, ಪುಸ್ತಕವಿಲ್ಲ ಎಂಬಷ್ಟು ಅವರೊಂದು ವಿಶ್ವಕೋಶವೆಂಬಂಥ ವಿಶ್ವಾಸ ಅವರ ಸಹವರ್ತಿಗಳಲ್ಲಿ, ಬರಹಗಾರರಲ್ಲಿ ಇದೆ. ಅಂಥವರು ಸಾಹಿತ್ಯದ ಬಗ್ಗೆ, ಪುಸ್ತಕಗಳ ಬಗ್ಗೆ ಬರೆದಾಗ ತಮ್ಮ ಓದಿನ ಅನುಭವದಿಂದ ಮಾತನಾಡುತ್ತಿದ್ದಾರೆ, ತಮ್ಮ ಓದಿಗೆ ದಕ್ಕಿದ ಶ್ರೇಷ್ಠ ಕೃತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ನಿರೀಕ್ಷೆ, ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಹಾಗಾಗಿಯೇ, ಅವರು ಕನ್ನಡದ ಉದಯೋನ್ಮುಖರಿಗಷ್ಟೇ ಅಲ್ಲ, ನುರಿತ ತಲೆಮಾರಿನ ಬರಹಗಾರರಿಗೆ ಕೂಡ ಗುರುವಿದ್ದಂತೆ.

ಎಂ.ಎಸ್.ಆಶಾದೇವಿಯವರು ಗುರುತಿಸಿರುವಂತೆ ಇವು ಕಥನವಾಗಲು ಹಂಬಲಿಸುವ ಪ್ರಬಂಧಗಳಾಗಿರುವುದರಿಂದ ಓದು ಎಲ್ಲಿಯೂ ಹೊರೆಯಾಗುವುದಿಲ್ಲ, ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುವುದಿಲ್ಲ. ಓದುತ್ತ ಹೋದಂತೆ ಮತ್ತಷ್ಟು ಇನ್ನಷ್ಟು ಓದಲು ಮನಸ್ಸು ಕಾತರಿಸುತ್ತದೆ.

ಎಸ್ ದಿವಾಕರ್ ಅವರ ವಿಪುಲವಾದ ಕೃಷಿ ಇರುವುದೇ ಅನುವಾದಗಳಲ್ಲಿ. ಕನ್ನಡದಲ್ಲಿರಲಿ, ಇತರ ಭಾಷೆಯಲ್ಲೇ ಇರಲಿ, ಕತೆಯ ಪ್ರಧಾನ ಕೆಲಸವೇ ಮನರಂಜನೆ; ಮನಸ್ಸನ್ನು ರಂಜಿಸುವುದರೊಂದಿಗೆ ಅದು ಇನ್ನಷ್ಟನ್ನು ಮತ್ತಷ್ಟನ್ನು ಮಾಡಬಹುದು, ಮಾಡಬೇಕು ಎಂಬುದು ಅನ್ವೇಷಣೆ, ಪ್ರಯೋಗ ಮತ್ತು ಮಹತ್ವಾಕಾಂಕ್ಷೆ. ಈ ಜಾಡನ್ನು ಹಿಡಿದು ಹೊರಟವರು ಎಸ್ ದಿವಾಕರ್. ತಮ್ಮದೇ ಬರವಣಿಗೆಯಾಗಲಿ, ತಾವು ಸಂಗ್ರಹಿಸಿ ಪ್ರಕಟಿಸಿದ, ಅನುವಾದಿಸಲು ಎತ್ತಿಕೊಂಡ ಕತೆಗಳಲ್ಲಾಗಲೀ ನಾವು ಕಾಣುವುದು ಇದನ್ನು. ಒಂದು ಕತೆ, ಅದು ಪುಟ್ಟದಾಗಿರಲಿ, ದೊಡ್ಡದಾಗಿರಲಿ, ಓದಿ ಮುಗಿಸುತ್ತಲೇ ಹೊಸ ಚೈತನ್ಯ ತಳೆದ ಒಂದು ಜೀವದಂತೆ ನಮ್ಮನ್ನು ಆವರಿಸಿಕೊಂಡು, ನಮ್ಮೊಂದಿಗಿದ್ದುಬಿಡುವ ವಾಂಛೆ ತೋರಬೇಕು. ದಿವಾಕರ್ ಅನುವಾದಿಸಿದ ‘ಜಗತ್ತಿನ ಅತಿಸಣ್ಣ ಕತೆಗಳು’ ಎರಡು ಸಂಕಲನಗಳಲ್ಲಿ ಲಭ್ಯವಿವೆ. ಆ ಪ್ರತಿಯೊಂದು ಕತೆಯೂ ಒಂದು ಒಳ್ಳೆಯ ಕವನದಂತೆ ಮನದಲ್ಲಿ ಊರಿನಿಂತು, ಮೌನದಲ್ಲೇ ಮಾತನಾಡಿ ಕಾಡುತ್ತವೆ. ಚುರುಕು, ತಮಾಷೆ, ಕೌತುಕ ಮತ್ತು ನಿಗೂಢತೆಯ ಆಕರ್ಷಣೆಯನ್ನು ಮೀರಿ ನಾವು ಮುಂದಿನ ಕತೆಗೆ ಪ್ರವೇಶಿಸುವುದಕ್ಕೂ ಮುನ್ನ ಅಷ್ಟು ಹೊತ್ತು ಸುಸ್ತು ಹೊಡೆಸಿ, ಕೊಂಚ ಸುಧಾರಿಸಿಕೊಳ್ಳುವಂತೆ ಮಾಡುತ್ತವೆ. ಜಗತ್ತಿನ ಶ್ರೇಷ್ಠ ಸಾಹಿತ್ಯವನ್ನು ಎಸ್ ದಿವಾಕರ್ ಹಲವು ಹತ್ತು ಬಗೆಯಲ್ಲಿ ಕನ್ನಡಿಗರ ಪಾಲಿಗೆ ದಕ್ಕುವಂತೆ ಮಾಡಿದ್ದಾರೆ. ತಾವು ಸ್ವತಃ ಮಾಡಿದ್ದಲ್ಲದೆ ತಮ್ಮ ಪರಿಚಯದ ಹಲವರಿಗೆ ಪ್ರೇರಣೆಯಾಗಿ ನಿಂತು ಅವರಿಂದಲೂ ಜಗತ್ತಿನ ಅತ್ಯುತ್ತಮ ಸಾಹಿತ್ಯವನ್ನು ಅನುವಾದ ಮಾಡಿಸಿದ್ದಾರೆ.

ನೊಬೆಲ್ ಪ್ರಶಸ್ತಿ ವಿಜೇತರ 50 ಕತೆಗಳನ್ನು ಕನ್ನಡಕ್ಕೆ ತಂದರು. ‘ಉತ್ತರ ದಕ್ಷಿಣ ದಿಕ್ಕುಗಳನ್ನು ಬಲ್ಲವನು’ ಎಂಬ ಹಲವು ದೇಶಗಳ ಅಪರೂಪದ ಕತೆಗಳನ್ನು ಕನ್ನಡಕ್ಕೆ ತಂದರು. ಈಚಿನ ‘ಹಾರಿಕೊಂಡು ಬಂದವನು’ ಸೇರಿದಂತೆ ಒಟ್ಟು ಎರಡು ಸಂಕಲನಗಳಿಗಾಗುವಷ್ಟು ಅತಿಸಣ್ಣ ಕತೆಗಳನ್ನು ಜಗತ್ತಿನ ಹಲವು ಭಾಷೆ-ದೇಶಗಳ ಸಾಹಿತ್ಯದಿಂದ ಆಯ್ದು, ಅನುವಾದಿಸಿ ಒಂದೆಡೆ ಸಂಕಲಿಸಿದರು. ಇವಾನ್ ಬುನಿನ್ ಬರೆದ ‘ಹಳ್ಳಿ’, ರೋಜರ್ ಮಾರ್ತೀನ್ ದ್ಯುಗಾರನ ‘ಪೋಸ್ಟ್‌ಮ್ಯಾನ್’, ಥಾಮಸ್ ಮಾನ್ ಬರೆದ ‘ವೆನಿಸ್ಸಿನಲ್ಲಿ ಸಾವು’ ಕಾದಂಬರಿಗಳನ್ನು ಕನ್ನಡಕ್ಕೆ ತಂದರು. ಈಚೆಗೆ ಕುಲದೀಪ್ ನಯ್ಯರ್ ಅವರ ಭಗತ್‌ಸಿಂಗ್‌ನ ಜೀವನ ಮತ್ತು ಹೋರಾಟದ ಕಥನ ‘ನಿರ್ಭಯ’ವನ್ನು ಅನುವಾದಿಸಿದರು. ಇಲ್ಲೆಲ್ಲಾ ಎಸ್ ದಿವಾಕರ್ ಅವರ ಅಭಿರುಚಿ ಮತ್ತು ಸಾಹಿತ್ಯ ಪ್ರೀತಿಯ ಪರಿಚಯ ನಮಗಾಗುವುದಲ್ಲದೆ ಅನುವಾದ ಎಂಬ ಪ್ರಕಾರಕ್ಕೆ ಅವರು ಎಷ್ಟೊಂದು ಮಹತ್ವ ನೀಡುತ್ತಾರೆ, ಪ್ರತಿಯೊಂದು ಕೃತಿ, ಕತೆಗಳ ಆಯ್ಕೆ, ಶಬ್ದಗಳ ಆಯ್ಕೆ, ಕತೆಗಾರನ ಹಿನ್ನೆಲೆಯ ಆಧಾರದ ಮೇಲೆ ಅನುವಾದದ ನೆಲೆಯ ಆಯ್ಕೆಗಳಿಗೆ ಎಷ್ಟೊಂದು ಕಾಳಜಿ ವಹಿಸುತ್ತಾರೆ ಎಂಬುದನ್ನು ಕೂಡಾ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಎಲ್ಲರಿಗೂ ಸಾಮಾನ್ಯವಾಗಿರುವ ಅದೇ ಭಾಷೆಯನ್ನು ತಾನೂ ಬಳಸುವ ಬರಹಗಾರನಲ್ಲಿ ಅದನ್ನು ಬಳಸುವ ತನ್ನದೇ ಆದ ರೀತಿಯೊಂದಿರುತ್ತದೆ. ಅದು ಅವನ ವ್ಯಕ್ತಿತ್ವದೊಂದಿಗೇ ತಳುಕುಹಾಕಿಕೊಂಡಿರುತ್ತದೆ. ಅದನ್ನು ಆ ಲೇಖಕನ ವ್ಯಕ್ತಿಗತ ಛಂದಸ್ಸು ಎನ್ನಬಹುದಾದರೆ, ಎಸ್ ದಿವಾಕರ್ ತಮ್ಮ ಭಾಷೆಯ ಮತ್ತು ತಮ್ಮ ವ್ಯಕ್ತಿತ್ವದ ಛಂದಸ್ಸಿನಲ್ಲಿ ಮೂಲ ಲೇಖಕನ ಛಂದಸ್ಸು ಕಳೆದು ಹೋಗದಂತೆ ವಹಿಸುವ ಎಚ್ಚರವಿದೆಯಲ್ಲ, ಅದು ಅನನ್ಯವಾದದ್ದು. ಈ ಕುರಿತ ಆಳವಾದ ಪ್ರಜ್ಞೆ ಮತ್ತು ಮೂಲ ಲೇಖಕನ ಬಗ್ಗೆ ಅಪಾರ ಗೌರವ ಎರಡೂ ಇಲ್ಲದಿದ್ದಲ್ಲಿ ಇಂಥ ಅನುಸಂಧಾನ ಸಾಧ್ಯವಾಗುವುದಿಲ್ಲ. ಹಾಗಾಗಿ ದಿವಾಕರ್ ಅವರ ಅನುವಾದಗಳಲ್ಲಿ ಕೇವಲ ಕತೆಯೊಂದು ಅನುವಾದಕನ ಭಾಷೆ ಮತ್ತು ಲಯದಲ್ಲಿ ನಮಗೆ ದಕ್ಕುವುದಿಲ್ಲ. ಬದಲಿಗೆ ಮೂಲ ಲೇಖಕ ನಿಮಗೆ ಖಾಸಾ ಪರಿಚಿತನಾಗಿಬಿಡುತ್ತಾನೆ. ಮೂಲದ ಸೊಗಡು ಕನ್ನಡದಲ್ಲಿ ಮೈತಳೆಯುವ ಈ ಪ್ರಕ್ರಿಯೆಯ ಹಿಂದೆ ದಿವಾಕರ್ ಅವರ ಅಪಾರವಾದ ಶ್ರದ್ಧೆ ಮತ್ತು ಪರಿಶ್ರಮವಿದೆ. ನಾಲ್ಕೈದು ಸಾಲಿನ ಒಂದು ಕತೆಯನ್ನು ಕೂಡ ಹಲವು ಹತ್ತು ಸಲ ಬೇರೆ ಬೇರೆ ಶಬ್ದ - ವಾಕ್ಯಬಂಧದಲ್ಲಿಟ್ಟು ನೋಡಿ ತಿದ್ದಿದ್ದಾರವರು. ಕೆಲವೊಂದು ಕತೆಗಳನ್ನು ಗಟ್ಟಿಯಾಗಿ ಓದುವಾಗ ಅವರು ಧ್ವನಿಯನ್ನು ಏರಿಳಿಸುವ ರೀತಿ, ಕೊಡುವ ಒತ್ತು, ವಿರಾಮ ಗಮನಿಸಿದರೆ ಅವರು ಪ್ರತಿಯೊಂದು ಕತೆಯನ್ನು ಎಷ್ಟೊಂದು ಪ್ರೀತಿಯಿಂದ, ಅಕ್ಕರೆಯಿಂದ ಕನ್ನಡಕ್ಕೆ ತಂದಿದ್ದಾರೆಂಬುದು ಅರ್ಥವಾಗುತ್ತದೆ. ಕೃತಿಯಷ್ಟೇ ಕೃತಿಕಾರನ ಬಗ್ಗೆ ಕೂಡ ಸಾಕಷ್ಟು ತಿಳಿದುಕೊಂಡಿರುವುದರಿಂದ ಅವರ ಅನುವಾದಕ್ಕೆ ವಿಶೇಷವಾದ ಒಂದು ಅಥೆಂಟಿಸಿಟಿ, ಮೆರುಗು ದಕ್ಕಿದೆ.

ಬಹಳಷ್ಟು ಶ್ರಮವಹಿಸಿ ಅವರು ಸಂಕಲಿಸಿರುವ ‘ಕನ್ನಡದ ಅತಿಸಣ್ಣ ಕತೆಗಳು’ ಮತ್ತು ‘ಶತಮಾನದ ಸಣ್ಣಕತೆಗಳು’ ಕೃತಿಗಳ ಬಗ್ಗೆ ಹೊಸದಾಗಿ ಹೇಳಬೇಕಾದುದೇನಿಲ್ಲ. ಅತಿಸಣ್ಣಕತೆಗಳ ಬಗ್ಗೆ ಎಸ್ ದಿವಾಕರ್ ಅವರಿಗಿರುವ ಮೋಹದಷ್ಟೇ ಪ್ರಯೋಗಶೀಲತೆಯ ಬಗ್ಗೆಯೂ ಅವರಿಗೆ ವಿಶೇಷ ಆಸ್ಥೆ. ಪ್ರಯೋಗಶೀಲತೆ ಯಾವುದೇ ಸೃಜನಶೀಲ ಕಲೆಯ ಜೀವನಾಡಿ ಎಂದು ಎಸ್ ದಿವಾಕರ್ ಪರಿಗಣಿಸುತ್ತಾರೆ. ಕತೆಗಳಲ್ಲೆಂತೋ ಅವರ ಕವನಗಳಲ್ಲಿಯೂ ಈ ಪ್ರಯೋಗಶೀಲತೆ ನಮ್ಮನ್ನು ಬೆಚ್ಚಿಬೀಳಿಸುವಷ್ಟು ಪಕ್ವವಾಗಿ ಕಂಡುಬರುತ್ತದೆ.

ಎಸ್ ದಿವಾಕರ್ ಅವರಿಗೆ ಸಾಹಿತ್ಯ, ಓದು, ಬರವಣಿಗೆ, ಅನುವಾದ, ಸಾಹಿತಿ ಮಿತ್ರರೊಂದಿಗಿನ ಸಂವಾದ ಪ್ರತಿಯೊಂದೂ ಬದುಕಿನ ಪ್ಯಾಶನ್. ಅದು ಅವರ ಉಸಿರು, ಬದುಕಿನಷ್ಟೇ ಮುಖ್ಯವಾದದ್ದು. ಹಾಗಾಗಿಯೇ ಅವರ ಸಾನ್ನಿಧ್ಯ, ಸಾಮೀಪ್ಯ ಮತ್ತು ಸಾಂಗತ್ಯ ಸದಾ ಕಾಲ ಹೊಸತನ್ನು, ಅನಿರೀಕ್ಷಿತವಾದದ್ದನ್ನು ಕಾಣಿಸುತ್ತಿರುತ್ತದೆ. ಅವರ ಓದು, ಉತ್ಸಾಹ ಮತ್ತು ಕನಸುಗಳಷ್ಟೇ ಅವರ ನೆನಪಿನ ಶಕ್ತಿ ಕೂಡ ಅಗಾಧವಾದದ್ದು.


ದಿವಾಕರ್ ಅವರ ಅತ್ಯುತ್ತಮ ಬರಹಗಳ ಸಂಕಲನ "ರೂಪರೂಪಗಳನು ದಾಟಿ" ಕೃತಿಗಾಗಿ ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ.

1. ಮೊತ್ತ ಮೊದಲನೆಯದಾಗಿ, ಬರವಣಿಗೆಯೇ ನಿಮ್ಮ ವ್ಯಕ್ತಿತ್ವದ ಅಭಿವ್ಯಕ್ತಿಯ ಸಹಜ ಧರ್ಮ ಎಂಬುದು ಸ್ವತಃ ನಿಮಗೇ ತಿಳಿಯುವುದಕ್ಕೂ ಮೊದಲೇ ನಿಮ್ಮಲ್ಲಿ ಬರೆಯುವ ಆಸೆ ಮೂಡಿದ್ದು ಹೇಗೆ ಮತ್ತು ಯಾವಾಗ? ಆಗ ನೀವು ಬರೆದಿದ್ದು ಏನು? (ಕತೆ, ಕವನ, ನಾಟಕ)

ನಾನು ತೀರ ಸಣ್ಣ ವಯಸ್ಸಿನಲ್ಲೇ ಕಾವ್ಯಕ್ಕೆ ತೆರೆದುಕೊಂಡವನು. ಮೊದಮೊದಲು ಕಾವ್ಯವನ್ನು - ಮುಖ್ಯವಾಗಿ ದಾಸರ ಪದಗಳು, ಭಾವಗೀತೆಗಳು, ಬಸವಣ್ಣ, ಅಕ್ಕಮಹಾದೇವಿ, ಸರ್ವಜ್ಞ ಮೊದಲಾದವರ ವಚನಗಳು, ಇತ್ಯಾದಿ - ಓದುವುದರಲ್ಲಿದ್ದ ಆಸಕ್ತಿ ಬರೆಯುವುದರಲ್ಲಿರಲಿಲ್ಲ. ಕ್ರಮೇಣ ಕುವೆಂಪು, ಬೇಂದ್ರೆ, ಕೆ.ಎಸ್.ನ. ಮೊದಲಾದವರ ಕವನಗಳನ್ನು ಅನುಕರಿಸಿಯಾದರೂ ಸರಿ, ನಾನೂ ಬರೆಯಬೇಕೆನ್ನಿಸಿತು. ಹಾಗೆ ಬರೆದ ಕೆಲವು ಕವನಗಳು, ಮಾಸ್ತಿಯವರ 'ಜೀವನ' ಪತ್ರಿಕೆಯೂ ಸೇರಿದಂತೆ ಆ ಕಾಲದ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು ಕೂಡ. ಆಮೇಲೆ ಗೋಪಾಲಕೃಷ್ಣ ಅಡಿಗರ 'ಚಂಡೆಮದ್ದಳೆ', 'ಭೂಮಿಗೀತ' ಸಂಕಲನಗಳನ್ನೂ 'ಸಂಕ್ರಮಣ' ಪತ್ರಿಕೆಯಲ್ಲಿ ಬರುತ್ತಿದ್ದ ಕವನಗಳನ್ನೂ ಓದಿದ ಮೇಲೆ, ಅದುವರೆಗೂ ನವ್ಯತೆ ಎಂದರೇನೆಂದು ಕಿಂಚಿತ್ತೂ ತಿಳಿಯದಿದ್ದ ನಾನು ನವ್ಯಕಾವ್ಯ ಬರೆಯುವುದು ತೀರ ಸುಲಭವೆಂದುಕೊಂಡು ಬರೆದದ್ದೇ ಬರೆದದ್ದು. ಒಮ್ಮೆ ಅಷ್ಟೂ ಕವನಗಳನ್ನು ಎ.ಕೆ.ರಾಮಾನುಜನ್ನರಿಗೆ ತೋರಿಸಿದಾಗ ಅವರು ನನ್ನ ಕವನಗಳ ಶಿಲ್ಪ ಶಿಥಿಲವಾಗಿದೆಯೆಂದೂ ಅವುಗಳಲ್ಲಿ ಅರ್ಥಸ್ಫೋಟವುಳ್ಳ ಧ್ವನಿಯೇ ಇಲ್ಲವೆಂದೂ ಮನಮುಟ್ಟುವಂತೆ ವಿವರಿಸಿದರು. ಅದರ ಪರಿಣಾಮವೇನೆಂದರೆ ಮುಂದೆ ಹಲವು ದಶಕಗಳ ಕಾಲ ನಾನು ಕವನಗಳನ್ನು ಬರೆಯದೇ ಇದ್ದದ್ದು. ಆಮೇಲೆ ನನ್ನ ಆಸಕ್ತಿ ಸಣ್ಣಕತೆಗಳತ್ತ ಸರಿಯಿತು. ಮುಖ್ಯವಾಗಿ ಮಾಸ್ತಿ, ಚಿತ್ತಾಲ, ಅನಂತಮೂತರ್ಿ, ಲಂಕೇಶ್ ಅವರ ಕತೆಗಳು ನನ್ನನ್ನು ಆವರಿಸಿಕೊಂಡವು. ಅದೇ ಸಮಯದಲ್ಲಿ ನನಗೆ ಶಾಸ್ತ್ರೀಯ ಸಂಗೀತದಲ್ಲೂ ಚಿತ್ರಕಲೆಯಲ್ಲೂ ವ್ಯಂಗ್ಯಚಿತ್ರದಲ್ಲೂ ಕುತೂಹಲವಿತ್ತು. ಸ್ವಲ್ಪಮಟ್ಟಿಗೆ ಆ ಕಲೆಗಳನ್ನು ಅಭ್ಯಾಸಮಾಡಿದರೂ ಅದೇಕೋ ನನಗೆ ಅವುಗಳನ್ನು ಸ್ವಾಧೀನಪಡಿಸಿಕೊಳ್ಳಬಲ್ಲ ಪ್ರತಿಭೆಯಿಲ್ಲವೆಂದು ಬಹುಬೇಗ ಗೊತ್ತಾದದ್ದು ಒಳ್ಳೆಯದೇ ಆಯಿತೆನ್ನಬೇಕು. ಒಟ್ಟಿನಲ್ಲಿ ಸಣ್ಣಕತೆಯೇ ನನ್ನ ಅಭಿವ್ಯಕ್ತಿ ಮಾಧ್ಯಮವೆಂದು ಅರಿತುಕೊಳ್ಳುವುದಕ್ಕಾಗಿ ನಾನು ಅಷ್ಟೆಲ್ಲ ಪರದಾಡಿದ್ದಂತೂ ನಿಜ.

2. ನಿಮ್ಮ ಕವನಗಳಲ್ಲಿ ಪ್ರಧಾನವಾಗಿ ನೀವು ಭಾಷೆಯ ಲಯ, ನಾದ ಮತ್ತು ಅನುರಣನ ಶಕ್ತಿಯ ಸಂಪೂರ್ಣ ಬಳಕೆಗೆ ಆದ್ಯತೆ ನೀಡುತ್ತೀರಿ; ನಿದರ್ಿಷ್ಟ ಪದವನ್ನು ಬಳಸಿ ಅದು ಹುಟ್ಟಿಸುವ ಶಬ್ದದಲ್ಲಿ ಒಡೆಯುವ ಧ್ವನಿಯನ್ನೇ ನೆಚ್ಚಿ ಕವನ ಬರೆಯುತ್ತೀರಿ; ಅನುಭವ ಒಂದು ವಿಶಿಷ್ಟ ವಾಕ್-ವಿನ್ಯಾಸದಲ್ಲಿ ವ್ಯಕ್ತಗೊಂಡಾಗ ಓದುಗನಿಗೆ ಕೊಡುವ ಶಾಕ್ ಮೂಲವಾದ ಒಳನೋಟವೇ ನಿಮ್ಮ ಗಮ್ಯ - ಎಂದೆಲ್ಲ ಎನಿಸುತ್ತದೆ. ಎ.ಕೆ.ರಾಮಾನುಜನ್ ಪರಿಪಾಠವನ್ನೇ ಇನ್ನೊಂದು ಮಜಲಿಗೆ ಕೊಂಡೊಯ್ದಿದ್ದೀರಿ ಎನಿಸುತ್ತದೆ. ಭಾಷೆಯೊಂದಿಗೆ ನಿಮ್ಮ ಈ ಬಗೆಯ ಆಟ ಕವನಗಳಿಗೇ ಸೀಮಿತವಾದದ್ದೇ ಅಥವಾ ನಿಮ್ಮ ಎಲ್ಲಾ ಬರಹದಲ್ಲೂ ತಿಳಿದೋ ತಿಳಿಯದೆಯೋ ನೀವಿದನ್ನು ಮಾಡುತ್ತಲೇ ಬಂದಿದ್ದೀರೋ ಎಂಬ ಅನುಮಾನಕ್ಕೆ ಕಾರಣವಿದೆ. ನಿಮ್ಮ ಗದ್ಯದಲ್ಲಿ ಅಂಥ ಒಂದು ವೈಶಿಷ್ಟ್ಯವಿದೆ. ಇದರ ಬಗ್ಗೆ ಸ್ವಲ್ಪ ವಿವರಿಸಬಹುದೆ?

ನನ್ನ ಕವನಗಳನ್ನು ಕುರಿತು ನೀವು ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಧನ್ಯವಾದ. ಆದರೆ ಅಂಥ ಗುಣ ನನ್ನ ಕವನಗಳಲ್ಲಿರುವ ಬಗ್ಗೆ ನನಗೇ ಅನುಮಾನ. ತುಂಬ ಕವನಗಳನ್ನು ಬರೆದವನಲ್ಲ, ನಾನು. ಇದುವರೆಗೆ ನಾನು ಪ್ರಕಟಿಸಿರುವ ಸಂಕಲನ ಒಂದೇ ಒಂದು. ಹಾಗಾಗಿ ವಾಕ್-ವಿನ್ಯಾಸಕ್ಕೆ ಸಂಬಂಧಿಸಿದಂತೆ ರಾಮಾನುಜನ್ ಪರಿಪಾಠ ಎಂದು ನೀವೇನನ್ನು ಸೂಚಿಸುತ್ತಿದ್ದೀರೋ ಅದನ್ನು ಕುರಿತು ನಿದರ್ಿಷ್ಟವಾಗಿ ಏನನ್ನೂ ಹೇಳಲಾರೆ. ಆದರೆ ಗದ್ಯದಲ್ಲಿ ಮಾತ್ರ ನಾನು ಶಬ್ದಗಳನ್ನು ಸ್ವಲ್ಪಮಟ್ಟಿಗೆ ಪ್ರಜ್ಞಾಪೂರ್ವಕವಾಗಿಯೇ ಬಳಸುತ್ತೇನೆನ್ನಬಹುದು. ಎಷ್ಟೋ ವರ್ಷಗಳಿಂದ ನಮ್ಮ ಅತ್ಯುತ್ತಮ ಕಾವ್ಯವನ್ನು ಓದುತ್ತಿರುವ ನನಗೆ ಶಬ್ದಗಳ ದುಂದುಗಾರಿಕೆಯಿಲ್ಲದೆ ಎಲ್ಲವನ್ನೂ ತೀರ ಅಡಕವಾಗಿ ಹೇಳುವ ಕಾವ್ಯದಿಂದ, ಅದರ ಧ್ವನಿಶಕ್ತಿಯಿಂದ ತುಂಬ ಲಾಭವಾಗಿದೆ. ನನ್ನ 'ಆಯ್ದ ಕತೆಗಳು' ಸಂಕಲನಕ್ಕೆ ಮುನ್ನುಡಿ ಬರೆಯುತ್ತ ಜಿ.ರಾಜಶೇಖರ್, ನನ್ನ ಕತೆಗಳು ಸಾರರೂಪಿಯಾದ ವಿವರಗಳಿಂದ ಕಟ್ಟಿದ ರಚನೆಗಳು. ಭಾಷೆಯ ಬಳಕೆಯಲ್ಲಿ ದಿವಾಕರ್ ಮಹಾ ಮಿತವ್ಯಯಿ; ಅನವಶ್ಯಕವಾಗಿ ಅವರು ಒಂದು ಮಾತು, ಯಾಕೆ, ಒಂದು ಶಬ್ದವನ್ನೂ ಬಳಸುವವರಲ್ಲ. ಈ ಹ್ರಸ್ವತೆಯ ಜೊತೆ ಅವರ ಕತೆಗಳಲ್ಲಿ ಪಾತ್ರಗಳು, ನೆನಪುಗಳು, ಘಟನೆಗಳು, ಊರು, ಕೇರಿ, ಕೊಳೆಗೇರಿ, ಜನಜಂಗುಳಿ, ಬಿಸಿಲು, ಧೂಳು, ವಾಸನೆ ಎಲ್ಲವೂ ಒಟ್ಟಾಗಿ ಬದುಕಿನ ಲಯವನ್ನು ರೂಪಿಸುತ್ತವೆ ಎಂದಿದ್ದಾರೆ. ಇದು ನನ್ನ ಬರವಣಿಗೆಗೆ ಸಂದ ಅತ್ಯುತ್ಕೃಷ್ಟ ಪ್ರಶಸ್ತಿ ಎಂದುಕೊಂಡಿದ್ದೇನೆ.

3. ಒಂದು ಪ್ರಕಾರವಾಗಿ ಪ್ರಬಂಧದ ಲಕ್ಷಣಗಳ ಬಗ್ಗೆ ಮಾತನಾಡುವ ದಿನಗಳು ಇವತ್ತು ಹೊರಟುಹೋದವು ಎನಿಸುತ್ತದೆಯೆ? ಲಲಿತ ಪ್ರಬಂಧಗಳು, ಅನುಭವ ಕಥನಗಳು, ಪಠ್ಯಗಳ ಅಂತರ್ ಸಂಬಂಧವನ್ನೇ ವಿಶ್ಲೇಷಿಸುವಂಥ ಪ್ರಬಂಧಗಳು ಮತ್ತು ಪ್ರಬಂಧದಂಥ ಸಣ್ಣಕತೆಗಳು ಅಥವಾ ಸಣ್ಣಕತೆಗಳಂಥ ಪ್ರಬಂಧಗಳು ಎಲ್ಲವೂ ಒಂದೇ `ಪ್ರಕಾರ' ಎಂಬ ವಗರ್ೀಕರಣವೇ ಔಟ್ ಡೇಟೆಡ್ ಎನ್ನುತ್ತೀರಾ? ಹಾಗಿಲ್ಲವಾದಲ್ಲಿ ನಿಮ್ಮ ಅನಿಸಿಕೆಯಲ್ಲಿ ಕನ್ನಡದ ಪ್ರಬಂಧಗಳ ಅತ್ಯುತ್ತಮ ಮಾದರಿಗಳು ಯಾರಲ್ಲಿ ಕಾಣಸಿಗುತ್ತವೆ, ಯಾಕೆ ಮತ್ತು ನೀವು ಕಂಡುಕೊಂಡಂತೆ ಪ್ರಬಂಧ ಪ್ರಕಾರದ ಗುಣಲಕ್ಷಣಗಳೇನು? (ಈ ಬಗ್ಗೆ ಈಗಿನ ತಲೆಮಾರಿನಲ್ಲಿ ಗೊಂದಲ ಮತ್ತು ಅಸಡ್ಡೆ ಎರಡೂ ಕಂಡುಬರುತ್ತಿದೆ ಎನಿಸಿದ್ದರಿಂದ ಈ ಪ್ರಶ್ನೆ).

ನನ್ನ ಮಟ್ಟಿಗೆ ಪ್ರಬಂಧ ಪ್ರಕಾರ ಸರ್ವಗ್ರಾಹಿ. ಅದು ಒಳಗೊಳ್ಳದ ವಿಷಯವಿಲ್ಲ,
ಸಾಹಿತ್ಯದ ಪ್ರಕಾರವಿಲ್ಲ. ಹಿಂದೆಲ್ಲ ಒಂದು ಹೆದ್ದಾರಿಯಲ್ಲಿ ಏಕಮುಖವಾಗಿ ಪ್ರಯಾಣಿಸಬಹುದಿತ್ತಷ್ಟೆ. ಆದರೆ ಪ್ರಜಾಪ್ರಭುತ್ವದ ಈ ಯುಗದಲ್ಲಿ ಪ್ರತಿಯೊಂದು ಹೆದ್ದಾರಿಯುದ್ದಕ್ಕೂ, ಅದನ್ನೂ ಮೀರಿಸುವಂತೆ, ಕಾಣಿಸಿಕೊಳ್ಳುವ ಅಡ್ಡದಾರಿಗಳು, ಒಳದಾರಿಗಳು ಸಾಕಷ್ಟಿವೆ. ಹಾಗಾಗಿ ಒಂದು ಪ್ರಕಾರದ ಶೈಲಿಯಾಗಲೀ, ಆಶಯವಾಗಲೀ, ಒಟ್ಟಾರೆ ಧ್ವನಿಯಾಗಲೀ ಇನ್ನೊಂದು ಪ್ರಕಾರದಲ್ಲಿ ಅದರ ವ್ಯಾಕರಣಕ್ಕೆ ಬಾಧಕವಾಗದಂತೆ ಕಾಣಿಸಿಕೊಳ್ಳುವಂತಾದರೆ ತಪ್ಪೇನಿಲ್ಲ. ಉದಾಹರಣೆಗೆ ಅರ್ಜೆಂಟೀನಾದ ಲೇಖಕ ಬೋರ್ಹೆಸ್ ಬರೆದ ಕೆಲವು ಸಣ್ಣಕತೆಗಳು ಪ್ರಬಂಧದಂತೆಯೂ ಕೆಲವು ಪ್ರಬಂಧಗಳು ಸಣ್ಣಕತೆಯಂತೆಯೂ ಭಾಸವಾಗುತ್ತವೆ. ನನ್ನ ಮಟ್ಟಿಗೆ ಹೇಳುವುದಾದರೆ ಕನ್ನಡದಲ್ಲಿ ಪ್ರಬಂಧಗಳ ಎರಡು ಮಾದರಿಗಳಿವೆ: ಒಂದು ಎ.ಎನ್. ಮೂತರ್ಿರಾಯರದು; ಇನ್ನೊಂದು ಪು.ತಿ.ನ. ಅವರದು. ಮೂತರ್ಿರಾಯರ ಪ್ರಬಂಧಗಳ ಸೊಗಸು, ಲಾಲಿತ್ಯ, ಭಾವಗೀತೆಯ ಗುಣ ಪು.ತಿ.ನ. ಪ್ರಬಂಧಗಳಲ್ಲಿಲ್ಲ; ಪು.ತಿ.ನ. ಪ್ರಬಂಧಗಳಲ್ಲಿ ಕಾಣುವ ಗಾಢವಾದ ವಿಚಾರಲಹರಿ ಮೂರ್ತಿರಾಯರ ಪ್ರಬಂಧಗಳಲ್ಲಿಲ್ಲ. ಈ ಎರಡು ಬಗೆಯ ಮಾದರಿಗಳನ್ನೂ ಒಟ್ಟಿಗೆ ತರುವ ಜೊತೆಜೊತೆಗೇ ನಾನು ಓದಿದ್ದಕ್ಕೂ ಕಂಡದ್ದಕ್ಕೂ ಕೇಳಿದ್ದಕ್ಕೂ ಅರ್ಥಪೂರ್ಣ ಸಂಬಂಧಗಳನ್ನು ಕಲ್ಪಿಸಿ ಬರೆದರೆ ಹೇಗೆ? ಇಂಥ ಚಿಂತನೆಯ ಫಲವೇ ನನ್ನ ಪ್ರಬಂಧಗಳು.

4. ಪ್ರಕಾರಗಳ ಮಾತಿಗೇ ಬರುವುದಾದರೆ, ಕವನ-ಕತೆ-ಪ್ರಬಂಧ-ನಾಟಕ-ಕಾದಂಬರಿ-ಅನುವಾದ ಇವುಗಳಲ್ಲಿ ನೀವು ಯಾವುದೇ ಬಗೆಯ ಶ್ರೇಣೀಕೃತ ವಗರ್ೀಕರಣವನ್ನು ಕಾಣಲು ಸಾಧ್ಯ ಎನಿಸಿದ್ದಿದೆಯೆ? ಉದಾಹರಣೆಗೆ ಇನ್ನೂ ಕತೆ ಬರೀತಾ ಇದ್ದರೆ ಹೇಗೆ, ಇನ್ನು ಕಾದಂಬರಿ ಬರೆಯಬೇಕು, ಅಥವಾ, ಈಗಲೂ ಕವನ ಬರೀಯೋದು ಸರೀನಾ ಮುಂತಾಗಿ? ಸಾಹಿತಿ ಬೆಳೆದಂತೆಲ್ಲ ಅವನ ಬರೆಹದ ಪ್ರಕಾರವೂ ಬದಲಾಗಬೇಕು ಎನಿಸುತ್ತದೆಯೆ? ಜಗತ್ತಿನ ಸಾಹಿತಿಗಳಲ್ಲಿ ನೀವು ಇಂತಹ ಒಂದು ಪ್ರಕಾರದಿಂದ ಇನ್ನೊಂದು ಪ್ರಕಾರಕ್ಕೆ ಶಾಶ್ವತವಾದ ಚಲನೆಯನ್ನೇನಾದರೂ ಗಮನಿಸಿದ್ದೀರಾ?

ವರ್ಗೀಕರಣ ಇದೆ. ಅದು ಸ್ವಲ್ಪಮಟ್ಟಿಗೆ ಅಗತ್ಯ ಕೂಡ. ಸೃಜನಶೀಲ ಲೇಖಕ ಒಂದು ವಸ್ತುವನ್ನೋ ಒಂದು ಭಾವವನ್ನೋ ಒಂದು ವಿಚಾರವನ್ನೋ ಕುರಿತು ಆಳವಾಗಿ ಯೋಚಿಸಿದ ಮೇಲೆ ಅವನ ಬರಹ ತನಗೆ ಸೂಕ್ತವೆನ್ನಿಸುವ ಪ್ರಕಾರವನ್ನು ತಾನೇ ಆಯ್ಕೆಮಾಡಿಕೊಳ್ಳುತ್ತದೆ. ಪ್ರಖ್ಯಾತ ನಾಟಕಕಾರ ಲೂಯಿಜಿ ಪಿರಾಂಡೆಲೊ ಮೊದಲು ಸಣ್ಣಕತೆಗಳನ್ನು ಬರೆದು ಪ್ರಕಟಿಸಿ, ಆಮೇಲೆ ಅವುಗಳಲ್ಲೇ ಕೆಲವನ್ನು ನಾಟಕಗಳಾಗಿ  ಪರಿವರ್ತಿಸಿದ್ದುಂಟು. ಚೆಕಾಫ್ ಕೂಡ ಸಣ್ಣಕತೆಗಳ ಜೊತೆಜೊತೆಗೇ ನಾಟಕಗಳನ್ನೂ ಬರೆದ. ಎರಡು ಪ್ರಕಾರಗಳಲ್ಲೂ ಅವನದು ಅಸಾಮಾನ್ಯ ಸಾಧನೆ. ಇದುವರೆಗೆ ಕತೆಗಳನ್ನಷ್ಟೇ ಬರೆದಿರುವ ನನಗೆೆ ಕಾದಂಬರಿಯೊಂದನ್ನು ಬರೆಯುವ ಆಸೆಯಿದೆ. ಕಳೆದ ಕೆಲವು ವರ್ಷಗಳಿಂದ ಒಂದು ಕಾದಂಬರಿಯನ್ನೂ ಬರೆಯುತ್ಲೂ ಇದ್ದೇನೆ. ಆದರೆ ನಾಟಕವೊಂದನ್ನು ಬರೆಯುವ ಧೈರ್ಯವಾಗಲೀ ಆತ್ಮವಿಶ್ವಾಸವಾಗಲೀ ಇಲ್ಲ. ನಾನು ಮೊದಲಿಂದಲೂ ಅಂತರ್ಮುಖಿ. ಅಂತರ್ಮುಖಿಯಾದವನು ಇತರರ ಜೊತೆ ಸುಲಭವಾಗಿ ವ್ಯವಹರಿಸಲಾರ. ಹಾಗಾಗಿ ನಾಟಕ ಕ್ರಿಯೆಗೆ ಅಗತ್ಯವಾದ ಸಂಭಾಷಣೆ ನನ್ನಿಂದ ಸಾಧ್ಯವೇ ಇಲ್ಲ ಎನಿಸುತ್ತದೆ. ಇನ್ನು ಜಗತ್ತಿನ ಲೇಖಕರಲ್ಲಿ ಒಂದು ಪ್ರಕಾರದಿಂದ ಇನ್ನೊಂದು ಪ್ರಕಾರಕ್ಕೆ ಶಾಶ್ವತವಾಗಿ ಚಲಿಸಿರಬಹುದಾದ ಲೇಖಕರ ಬಗೆಗೆ ನನಗೆ ಅಷ್ಟಾಗಿ ಗೊತ್ತಿಲ್ಲ. 

5. ಸೃಜನಶೀಲ ಕೃತಿಗಳ ಅನುವಾದ ಆಗಲೂ ಈಗಲೂ ನಿರ್ಲಕ್ಷಿತ ವಲಯ. ನಿಮಗೆ ಅದರತ್ತ ಗಮನ ಹರಿಯಲು, ಆಸಕ್ತಿ ಕುದುರಲು ಏನು ಕಾರಣ? ಒಬ್ಬ ಲೇಖಕನನ್ನು ಅನುವಾದ ಮಾಡುವುದು ಎಂದರೆ ನಿಮ್ಮ ಪ್ರಕಾರ ಏನು? ಅನುವಾದದ ಶೀಲ ಯಾವುದು?

ನಾನು ಅನುವಾದ ಮಾಡುವುದಕ್ಕೆ ಮುಂಚೆ ನನ್ನೆದುರಿಗೆ ಬಿ.ಎಂ.ಶ್ರೀ., ಎ.ಎನ್. ಮೂರ್ತಿರಾವ್, ನಾ.ಕಸ್ತೂರಿ ಮೊದಲಾದವರ ಅತ್ಯುತ್ತಮ ಮಾದರಿಗಳಿದ್ದುವು. ನಾನು ಅನುವಾದ ಮಾಡುವುದಕ್ಕೆ ಮುಖ್ಯ ಕಾರಣ ಜಗತ್ತಿನ ಅತ್ಯುತ್ತಮ ಸಾಹಿತ್ಯವನ್ನು ಕನ್ನಡಿಗರಿಗೆ ಪರಿಚಯಮಾಡಿಸಬೇಕೆಂಬ ಘನೋದ್ದೇಶವಲ್ಲ. ನಾನು ಅನುವಾದ ಮಾಡಿದ್ದು, ಈಗಲೂ ಆಗಾಗ ಮಾಡುವುದು, ನನ್ನ ಅಭಿವ್ಯಕ್ತಿ ಸಾಧ್ಯತೆಗಳನ್ನು ನಾನೇ ಕಂಡುಕೊಳ್ಳುವುದಕ್ಕಾಗಿ. ಇಂಗ್ಲಿಷಿನಲ್ಲಿ 'ಕ್ಲೋಸ್ ರೀಡಿಂಗ್' ಎನ್ನುತ್ತಾರಲ್ಲ, ಹಾಗೆ ಪಠ್ಯವೊಂದನ್ನು ತೀರ ನಿಕಟವಾಗಿ ಓದುವಾಗ ನಮಗೆ ಅದರ ಒಳ್ಳೆಯ ಗುಣಗಳು ಹೇಗೋ ಹಾಗೆ ಭಾಷೆ, ಅಲಂಕಾರ, ನಿರೂಪಣೆ, ವಿವರ, ವರ್ಣನೆ ಮೊದಲಾದವುಗಳಿಗೆ ಸಂಬಂಧಿಸಿದಂತೆ ಅದರ ದೋಷಗಳು ಕೂಡ (ಅವು ಇದ್ದರೆ) ಗೊತ್ತಾಗುತ್ತವೆ. ಹೀಗೆ ಗೊತ್ತಾಗುವುದರಿಂದ ಸೃಜನಶೀಲ ಲೇಖಕರಿಗೆ ತುಂಬ ಲಾಭವಾಗುತ್ತದೆ. ಮತ್ತೆ ಅನುವಾದ ಕಲೆಯ ಬಗ್ಗೆ ಇವತ್ತು ಅನೇಕಾನೇಕ ಸಿದ್ಧಾಂತಗಳಿವೆ. ಅವೆಲ್ಲವನ್ನೂ ಅನುಲಕ್ಷಿಸಿ ನಾನು ಅನುವಾದಿಸಿದ್ದೇನೆಂದು ಹೇಳಲಾರೆ. ಲೇಖಕ ಬೋರ್ಹೆಸ್ ತನ್ನ ಇಂಗ್ಲಿಷ್ ಅನುವಾದಕನಿಗೆ 'ನಾನು ಹೇಳುವುದನ್ನು ಅನುವಾದಿಸಬೇಡ: ನಾನೇನು ಹೇಳುವುದಕ್ಕೆ ಪ್ರಯತ್ನಿಸುತ್ತಿದ್ದೇನೋ ಅದನ್ನು ಮಾತ್ರ ಅನುವಾದಿಸು' ಎಂದು ಹೇಳಿದನಂತೆ. ಅವನೇ ಇನ್ನೊಂದು ಸಂದರ್ಭದಲ್ಲಿ 'ಅನುವಾದವೆನ್ನುವುದು ಮೂಲ ಕೃತಿಯಲ್ಲ. ಹಾಗಾಗಿ ಅದನ್ನು ಒಂದು ಅನುವಾದದಂತೆಯೇ ಓದಿಕೊಳ್ಳಬೇಕು; ಅನುವಾದ ಅನುವಾದದಂತೆಯೇ ಓದಿಸಿಕೊಳ್ಳಬೇಕು' ಎಂದೂ ಹೇಳಿದ. ಈ ಮಾತಿಗೆ ನಿದರ್ಶನವಾಗಿ ಕೆ.ವಿ. ತಿರುಮಲೇಶರು ಅನುವಾದಿಸಿರುವ 'ಆಚೆಬದಿ' ಮತ್ತು ರಿಲ್ಕ್ ಬರೆದ 'ಟಪ್ಪಣಿ ಪುಸ್ತಕ' ಎಂಬ ಕೃತಿಗಳನ್ನು ನೋಡಬಹುದು. ಇವು ಉದ್ದಕ್ಕೂ 'ನೀನು ಓದುತ್ತಿರುವುದು ಒಂದು ಅನುವಾದ' ಎಂದು ನನ್ನನ್ನು ಎಚ್ಚರಿಸುತ್ತಿದ್ದವು. ಇತ್ತೀಚೆಗೆ ಓ.ಎಲ್. ನಾಗಭೂಷಣ ಸ್ವಾಮಿಯವರು ಅನುವಾದಿಸಿರುವ ಟಾಲ್ಸ್ಟಾಯಿಯ 'ಯುದ್ಧ ಮತ್ತು ಶಾಂತಿ'ಯಲ್ಲಿ ಅವರು ಅನುವಾದಕ್ಕೆ ಆರಿಸಿಕೊಂಡ ಇಂಗ್ಲಿಷ್ ಅನುವಾದವನ್ನೇ ಸಂಪೂರ್ಣವಾಗಿ ಅನುಸರಿಸಿದ್ದಾರೆಂದು ಹೇಳುವಂತಿಲ್ಲ. ಟಾಲ್ಸ್ಟಾಯಿಯ ಉದ್ದನೆಯ ವಾಕ್ಯವೊಂದನ್ನು ಎರಡು ಮೂರು ನಾಲ್ಕು ವಾಕ್ಯಗಳಾಗುವಂತೆ ಅವರು ಅನುವಾದಿಸಿದ್ದಾರೆ. ಹೀಗೆ ಮಾಡುವುದರಿಂದ ಮೂಲ ಲೇಖಕನ ಧಾಟಿಗೆ ಧಕ್ಕೆಯುಂಟಾಗುವ ಅಪಾಯವುಂಟು. ಹೀಗಿದ್ದೂ ನಾನು 'ಯುದ್ಧ ಮತ್ತು ಶಾಂತಿ'ಯನ್ನು ಅತ್ಯಂತ ಸಂಭ್ರಮದಿಂದ ಸ್ವಾಗತಿಸುವುದಕ್ಕೆ ಕಾರಣ ಅವರ ಅಪಾರ ಪರಿಶ್ರಮ, ಟಾಲ್ಸ್ಟಾಯಿಯ ಸತ್ವವನ್ನು ಕನ್ನಡ ಓದುಗರಿಗೆ ಪರಿಚಯಮಾಡಿಕೊಡಬೇಕೆಂಬ ಅವರ ಕಳಕಳಿ.

ಮತ್ತೆ ಕನ್ನಡ ವಾಕ್ಯಸರಣಿಯ ಜಾಯಮಾನಕ್ಕೆ ಸುಲಭವಾಗಿ ಒಗ್ಗದಂಥ ವಾಕ್ಯಗಳನ್ನು ರಚಿಸಿರುವ ಅನೇಕ ಮಂದಿ ಶ್ರೇಷ್ಠ ಲೇಖಕರಿದ್ದಾರೆ. ವಿಲಿಯಂ ಫಾಕ್ನರನಂಥ ಅಮೆರಿಕನ್ ಲೇಖಕ, ಜೋಸ್ ಸರಮಾಗೋನಂಥ ಪೋರ್ಚುಗಲ್ ಲೇಖಕ ತಮ್ಮ ಕೃತಿಗಳ ಆಶಯಕ್ಕೆ ತಕ್ಕಂತೆ ಉದ್ದುದ್ದನೆಯ ವಾಕ್ಯಗಳನ್ನು ಬರೆಯುತ್ತಾರೆ. ಇವುಗಳನ್ನು ಅನುವಾದಿಸಬೇಕಾದಾಗ ನಾವು ನಮ್ಮ ಕಥನ ಪರಂಪರೆಯಲ್ಲಿರಬಹುದಾದ ವಾಕ್ಯ ಸರಣಿಯನ್ನು ಅಭ್ಯಸಿಸುವುದೊಳ್ಳೆಯದು. ಶಿವಕೋಟ್ಯಾಚಾರ್ಯನ 'ವಡ್ಡಾರಾಧನೆ'ಯಲ್ಲಿ, ವೆಂಕಟಾಚಾರ್ಯ, ಗಳಗನಾಥ ಮುಂತಾದ ಕಾದಂಬರಿಕಾರರ ಕೃತಿಗಳಲ್ಲಿ ಇಂಥ ಉದ್ದುದ್ದನೆಯ ವಾಕ್ಯಗಳಿವೆ. ಇವುಗಳನ್ನು ಅಭ್ಯಾಸಮಾಡುವುದಿದೆಯಲ್ಲ, ಅದು ಅಂಥ ಲೇಖಕರನ್ನು ಅನುವಾದಿಸುವವನು ನಮ್ಮ ಪರಂಪರೆಯ ಜೊತೆ ನಡೆಸಬಹುದಾದ ಒಂದು ಅನುಸಂಧಾನವೆಂದೇ ನಾನು ತಿಳಿದಿದ್ದೇನೆ.

(ಚಿತ್ರಗಳು: ವಿವಿಧ ಅಂತರ್ಜಾಲ ತಾಣಗಳಿಂದ ಕೃತಜ್ಞತಾಪೂರ್ವಕ)

No comments: