Friday, July 11, 2014

ಕೆ ಜಿ ಸೋಮಶೇಖರ್: ನನ್ನ ಬದುಕು ನನ್ನ ಫೋಟೋಗ್ರಫಿ

ವೃತ್ತಿ ಬದುಕಿನ ನೆನಪುಗಳ ಒಂದು ದಾಖಲೆಯಂತಿರುವ ಈ ಕೃತಿಯನ್ನು ಬಿ ಎಸ್ ಜಯಪ್ರಕಾಶ್ ನಾರಾಯಣ ಎಷ್ಟೊಂದು ಚೆನ್ನಾಗಿ ಮತ್ತು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆಂದರೆ, ಎಲ್ಲಿಯೂ ಇದನ್ನು ಸೋಮಶೇಖರ್ ಹೇಳುತ್ತಿರುವುದಲ್ಲ, ಇನ್ಯಾರೋ ನಿರೂಪಿಸುತ್ತಿರುವುದು ಎನ್ನುವ ಭಾವನೆಯೇ ಬರುವುದಿಲ್ಲ. ಅಷ್ಟೊಂದು ಶ್ರದ್ಧೆಯಿಂದ ಮತ್ತು ಪ್ರಾಮಾಣಿಕತೆಯಿಂದ ಜೇಪಿ ಇದನ್ನು ಮಾಡಿದ್ದಾರೆ. ಈ ನಿರೂಪಣೆ ಮೂರು ವಿಭಿನ್ನ ಆಯಾಮಗಳಲ್ಲಿದೆ. ಮೊದಲನೆಯದು ನೇರವಾಗಿ ತಮ್ಮ ಹುಟ್ಟು, ಬಾಲ್ಯ, ಶಿಕ್ಷಣ ಮತ್ತು ಹೊಟ್ಟೆಪಾಡಿನ ಪಡಿಪಾಟಲುಗಳ ಜೊತೆಗೇ ತಾವು ಹಚ್ಚಿಕೊಂಡ ಹುಚ್ಚಿನ ತೀವ್ರತೆಯನ್ನು ನಮಗೆ ಪರಿಚಯ ಮಾಡಿಕೊಡುವ ಭಾಗ. ಎರಡನೆಯ ಭಾಗದಲ್ಲಿ ಸುಮಾರು 46 ಮಂದಿ ಗಣ್ಯರೂ, ಪ್ರಭಾವಿಗಳೂ ಆದ, ಸಾಹಿತ್ಯ, ಸಂಗೀತ, ರಂಗಭೂಮಿ, ವಿಜ್ಞಾನ ಮುಂತಾದ ವಿಭಿನ್ನ ಕ್ಷೇತ್ರಗಳಿಗೆ ಸಂದ ಸಾಧಕರನ್ನು ಹೇಗೋ ಸಂಪರ್ಕಿಸಿ, ಅವರ ಒಪ್ಪಿಗೆ ಪಡೆದು, ಅವರಿದ್ದಲ್ಲಿಗೆ ಹೋಗಿ, ಅವರ ಭೇಟಿಯಾಗಿ, ಪೋರ್ಟ್ರೇಟ್ ಸೆರೆಹಿಡಿದ ಸಂದರ್ಭದ ಸಿಹಿ-ಕಹಿ ನೆನಪುಗಳನ್ನು ಕೆ ಜಿ ಸೋಮಶೇಖರ್ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಮೂರನೆಯ ಭಾಗದಲ್ಲಿ ಕೊಂಚ ವಿಲಕ್ಷಣವಾದ ವಿಚಾರಗಳಿವೆ. ಫೋಟೋಗೆ ಸಮ್ಮತಿ ನೀಡದ ಮೂವರು ಗಣ್ಯರು, ಸಿಗದೇ ಹೋದ ಮಾನ್ಯತೆ, ತಮ್ಮ ಫೋಟೋಗಳ ದುರ್ಬಳಕೆ ಮತ್ತು ಅದರ ವಿರುದ್ಧ ತಮ್ಮ ಅಸಹಾಯಕ ಹೋರಾಟ ಮತ್ತು ತಾವು ವೃತ್ತಿ-ಪ್ರವೃತ್ತಿಗಳಲ್ಲಿ ಅನುಸರಿಸಿಕೊಂಡು ಬಂದ ಸೂತ್ರ ಮುಂತಾದ ವಿಚಾರಗಳ ಬಗ್ಗೆ ಇಲ್ಲಿ ಅವರು ಮಾತನಾಡಿದ್ದಾರೆ.

ಈ ಪುಸ್ತಕವನ್ನು ಓದುತ್ತ ಮೊದಲಿಗೆ ಮೆಚ್ಚುಗೆಯಾಗಿದ್ದು ಜೇಪಿ ಇದನ್ನು ನಮಗೆ ದಾಟಿಸುವಾಗ ವಹಿಸಿದ ಶ್ರದ್ಧೆ ಮತ್ತು ಮರೆಯಲ್ಲೇ ಉಳಿದು ಮೆರೆದ ತಾಳ್ಮೆ ಮತ್ತು ಪ್ರೀತಿಗಳೇ. ತದನಂತರದಲ್ಲಿ ಇದು ಕಾಡುವ ಸ್ತರಗಳೇ ಬೇರೆ.

ಸೋಮಶೇಖರ್ ನಮ್ಮ ಯಾಂತ್ರಿಕ ಶಿಕ್ಷಣದ ಅಚ್ಚಿನಲ್ಲಿ ಮೂಡಿಬಂದವರಲ್ಲ. ಅವರು ಸರ್ಟಿಫಿಕೇಟು, ಪ್ರಮಾಣಪತ್ರಗಳ ತಜ್ಞರಲ್ಲ. ಬಹುಷಃ ಅವರ ಪ್ರಥಮ ಸೋಲು ಇರುವುದೇ ಇಲ್ಲಿ ಎಂದೆನಿಸುತ್ತದೆ. ಅವರಲ್ಲಿದ್ದ ದಾಖಲೆಗಳೆಲ್ಲಾ ಅವರ ಅಚ್ಚುಕಟ್ಟುತನ, ಶ್ರದ್ಧೆ ಮತ್ತು ಅಭಿರುಚಿಯನ್ನು ಪ್ರಮಾಣೀಕರಿಸಬಲ್ಲ ಕೆಲಸ ಮಾತ್ರ. ಎರಡನೆಯದಾಗಿ ಅವರಿಗೆ ಮೊದಲು ಚಿತ್ರಕಲೆ, ನಂತರ ಫೋಟೋಗ್ರಫಿ ಒಂದು ಪ್ಯಾಶನ್ ಆಗಿತ್ತು. ಎಷ್ಟರ ಮಟ್ಟಿಗೆ ಅದು ಅವರ ‘ಹುಚ್ಚಾ’ಗಿತ್ತೆಂದರೆ, ಅವರು ತಾವು ಅದಕ್ಕಾಗಿ ವ್ಯಯಿಸಿದ ಹಣ, ಸಮಯ ಮತ್ತು ಶ್ರಮಕ್ಕೆ ಯಾವತ್ತೂ ಕಮರ್ಶಿಯಲ್ ಲೆಕ್ಕಾಚಾರವೊಂದನ್ನು ಇಡಲೇ ಇಲ್ಲ. ತಾವಾಗಿ ಹುಡುಕಿಕೊಂಡು ಹೋಗಿ, ಸಮಯ, ಅನುಮತಿ ಕೇಳಿಕೊಂಡು, ರೋಲುಗಟ್ಟಲೆ (ಒಂದು ರೋಲ್ ಎಂದರೆ ಹನ್ನೆರಡು ಫೋಟೋಗಳ ಫಿಲ್ಮ್)ಫೋಟೋ ತೆಗೆದು, ಮನೆಗೆ ಮರಳಿ, ನೆಗೆಟೀವ್ ಡೆವಲಪ್ ಮಾಡಿ, ಅದನ್ನು ಒಪ್ಪಗೊಳಿಸಿ, ಪ್ರಿಂಟ್ ಹಾಕುವ ಸಲಕರಣೆ, ಡಾರ್ಕ್‌ರೂಮುಗಳಿಗೆಲ್ಲ ಒದ್ದಾಟ ತೆಗೆದು, ತಮ್ಮ ಖರ್ಚಿನಲ್ಲೇ ಫೋಟೋ ಪ್ರಿಂಟ್ ಹಾಕಿ, ಡೆವಲಪರ್, ಹೈಪು, ನೀರಿನ ಉಷ್ಣತೆ ಎಂದೆಲ್ಲ ಒಬ್ಬರೇ ಶ್ರಮಿಸಿ ಬೆಳ್ಳನೆಯ ಫೋಟೋ ಶೀಟ್ ಮೇಲೆ ಕಪ್ಪುಬಿಳುಪು ಚಿತ್ರ ಉದ್ಭವಿಸಿ ಬರುವ ಸಂಭ್ರಮಕ್ಕೇ ತಮ್ಮ ಬದುಕು-ಭವಿಷ್ಯವನ್ನು ತೆತ್ತುಕೊಂಡ ಸೋಮಶೇಖರ್ ಅವರ ಉತ್ಪನ್ನವನ್ನು ಎಲ್ಲರೂ ಮೆಚ್ಚಿ ಹೊಗಳಿದವರೇ. ಆದರೆ ಅವರ ಬದುಕು ಬರೇ ಹೊಗಳಿಕೆ ಮತ್ತು ಮೆಚ್ಚುಗೆಗಳಿಂದ ಸಾಗುವುದಿಲ್ಲವಲ್ಲ. ಈ ನೋವು ಉದ್ದಕ್ಕೂ ನಮ್ಮನ್ನು ಕಾಡುತ್ತದೆ ಇಲ್ಲಿ.

ನನ್ನ 8 -15 ವರ್ಷ ಪ್ರಾಯದ ಒಳಗಿನ ವಯಸ್ಸಿನಲ್ಲಿ ನಾನು ಒಬ್ಬ ಫೋಟೋಗ್ರಾಫರ್ ಜೊತೆ ಒಡನಾಟ ಹೊಂದಿದ್ದೆ. ಅವರೊಬ್ಬ ಶ್ರೇಷ್ಠ ಚಿತ್ರಕಾರ ಕೂಡ ಆಗಿದ್ದರು. ಏನೋ ಆಕಸ್ಮಿಕವಾಗಿ ಅವರು ದೂರದ ತಮ್ಮ ಮೂಲಮನೆಯಿಂದ ಹೊರಬಂದು ನಮ್ಮ ಊರಿನಲ್ಲೇ ಸ್ಟುಡಿಯೋ ತೆರೆದರು. ಮುಂದೆ ಪಕ್ಕದಲ್ಲೇ ಬಾಡಿಗೆ ಮನೆ ಹೂಡಿ, ಊರಿನಿಂದ ತಮ್ಮ ಸಂಸಾರವನ್ನೂ ಕರೆಸಿಕೊಂಡರು. ಆಗಲೇ ಅವರ ಕೂದಲು ಮೀಸೆಯೆಲ್ಲ ನೆರೆದಿತ್ತು,ಮಕ್ಕಳು ಬೆಳೆದಿದ್ದರು. ಅವರ ಸ್ಟುಡಿಯೋದಲ್ಲಿ ನಾನು ಸರ್ ಎಂ ವಿಶ್ವೇಶ್ವರಯ್ಯನವರ ಆಯಿಲ್‌ಪೇಂಟಿಂಗ್ ಮತ್ತು ಹಲವಾರು ಅದ್ಭುತವಾದ ಗ್ಲಾಸ್‌ಪೇಂಟಿಂಗ್ ನೋಡಿದ್ದೆ. ಅವರು ತಮ್ಮ ಬಗ್ಗೆ ಹೆಚ್ಚು ಹೇಳಿಕೊಳ್ಳುತ್ತಿದ್ದವರಲ್ಲ. ಆದರೆ ತುಂಬ ಮಾಗಿದ ಮನುಷ್ಯ ಎಂಬ ಒಂದು ಇಂಪ್ರೆಶನ್ ಆಗಲೇ ನನ್ನ ಮೇಲಿತ್ತು. ಅವರ ಜೊತೆ ಡಾರ್ಕ್‌ರೂಮಿನೊಳಗೆ ನಾನೂ ಸಹಾಯಕನಾಗಿ ಕೆಲಸ ಮಾಡಿದ್ದರಿಂದ, ಕಪ್ಪುಬಿಳುಪು ಫೋಟೋಗಳನ್ನು ತೆಗೆಯುವವರ ಕಷ್ಟ-ನಷ್ಟ ನಿಷ್ಟೂರಗಳ ಬಗ್ಗೆ ನನಗೆ ಚೆನ್ನಾಗಿಯೇ ಗೊತ್ತು. ಒಂದು ರೋಲ್ ಖಾಲಿಯಾಗದೆ ತಮ್ಮ ಫೋಟೋ ಬಯಸಿ ಬರುವವರಿಗೆ ಹೇಳಿದ ದಿನ ಫೋಟೋ ಕೊಡುವುದು ಕಷ್ಟ. ಪುಟ್ಟ ಊರುಗಳಲ್ಲಿ ಹನ್ನೆರಡು ಫಿಲ್ಮ್ ಬಳಕೆಗೆ ಬರಲು ಎಷ್ಟು ಕಾಲ ಹಿಡಿಯುತ್ತದೆ ಎಂದು ಹೇಳಲು ಬರುವುದಿಲ್ಲ. ತೀರ ತುರ್ತಿನವರಿಗೆ ಏನಾದರೂ ಮಾಡಿ ಫೋಟೋ ಕೊಡಬೇಕೆಂದರೆ ಒಂದು ಫಿಲ್ಮ್‌ಗಾಗಿ ಆಸುಪಾಸಿನ ನಾಲ್ಕೈದು ಫಿಲ್ಮ್ ಎಕ್ಸ್‌ಫೋಸ್ ಮಾಡುವ ಅನಿವಾರ್ಯತೆ. ಅಂಥ ನೆಗೆಟೀವ್ ಡೆವಲಪ್ ಮಾಡುವ ಗೋಳು ಕಷ್ಟದ್ದು. ಉಸಿರು ಕಟ್ಟುವ ಡಾರ್ಕ್‌ರೂಮಿನಲ್ಲಿ ವಯಸ್ಸಾದಂತೆ ಹೆಚ್ಚು ಹೊತ್ತು ಕಳೆಯುವುದು ಕಷ್ಟ. ಅದೆಲ್ಲಾ ಹೋಗಲಿ ಎಂದರೆ ಈ ಕೆಲಸ ಒಂದು ರೀತಿಯ ಥ್ಯಾಂಕ್‌ಲೆಸ್ ಜಾಬ್. ಅತ್ತ ಹಣ ಹುಟ್ಟುವುದೂ ಅಷ್ಟರಲ್ಲೇ ಇದೆ. ಮದುವೆ ಮುಂಜಿಯ ಆರ್ಡರ್ ಸಿಕ್ಕಿದಾಗಷ್ಟೇ ಹಬ್ಬ ಆಚರಿಸುವ ಸ್ಥಿತಿ. ಆದರೆ ಈ ಯಾವ ತಾಂತ್ರಿಕ ಕಷ್ಟ-ನಷ್ಟಗಳ ಬಗ್ಗೆಯೂ ಸೋಮಶೇಖರ್ ಇಲ್ಲಿ ವಿವರಿಸಿಲ್ಲ. ಬಹುಷಃ ಅದೆಲ್ಲಾ ಕೇಳುಗ/ಓದುಗರಿಗೆ ಬೋರ್ ಹೊಡೆಸಬಹುದೆಂದೋ ಏನೊ. ನನಗೆ ಮಾತ್ರ ತಮ್ಮನ್ನು ತಾವೇ ತೋರ ಶೆಟ್ಟಿ ಎಂದು ತಮಾಷೆ ಮಾಡಿಕೊಳ್ಳುತ್ತಿದ್ದ ತೋನ್ಸೆ ರಘುನಾಥ ಶೆಟ್ಟರ ಜೊತೆ ಕಳೆದ ದಿನಗಳನ್ನು ನೆನೆಯುವಂತೆ ಮಾಡಿದ ಪುಸ್ತಕವಿದು. ಕ್ರಮೇಣ ಮರೆಯಾಗುತ್ತಿದ್ದ ಕಪ್ಪು ಬಿಳುಪು ಫೋಟೋಗ್ರಫಿಯ ವೃತ್ತಿ ಹೊಸ ಹೊಸ ಆತಂಕಗಳನ್ನು ಎದುರಿಸುತ್ತಿರುವಾಗಲೇ ಅದನ್ನು ಮತ್ತು ಅದೊಂದನ್ನೇ ನೆಚ್ಚಿಕೊಂಡವರ ಬದುಕು ತತ್ತರಿಸುತ್ತಿದ್ದ ನೆಲೆ ಒಂದೋ ಎರಡೋ ಆಗಿರಲಿಲ್ಲ. ಕಲರ್ ಫೋಟೋಗ್ರಫಿ ಮತ್ತು ಡಿಜಿಟಲ್ ಕ್ಯಾಮರಾಗಳು ಬರುತ್ತಲೇ ಅದುವರೆಗಿನ "ಫೋಟೋ ತೆಗೆಯುವ" ಒಂದು ತಪಸ್ಸೇನಿತ್ತು, ಅದರ ನೆನಪೇ ಜನಮನದಿಂದ ಮಾಸಿಹೋಯಿತು ಮಾತ್ರವಲ್ಲ, ಅದರ ದಾಖಲೆ ಕೂಡ ಎಲ್ಲಿಯೂ ಆದಂತಿಲ್ಲ.

ನಂತರ, ಎಂಥೆಂಥವರೆಲ್ಲ ನಮ್ಮ ಈ ಸೋಮಶೇಖರ್ ಅವರಿಗೆ ನ್ಯಾಯವಾಗಿ ಕೊಡಬೇಕಾದ ಸಂಭಾವನೆ, ಕನಿಷ್ಠ ತಗುಲಿದ ವೆಚ್ಚ ನೀಡದೆ ಕೈಯಾಡಿಸಿದ್ದಾರೆ! ಅಂಥವರ ಹೆಸರುಗಳನ್ನು ತೆಗೆಯುವುದೇಕೆ, ನೀವೇ ಈ ಪುಸ್ತಕ ಓದಿ ನೋಡಿ. ಇವತ್ತಿಗೂ ಇಂಥ ಅನೇಕ ಕೌಶಲವನ್ನು ಬಯಸುವ ಅನೇಕ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವವರ ಕತೆ ಇದೇ ಆಗಿದೆ. ಕೆಲಸ ಮಾಡಿಸಿಕೊಂಡು ಅದು ಏನೂ ಅಲ್ಲ ಎಂಬಂತೆ ನಿರ್ಲಕ್ಷ್ಯ ತೋರುವ ಮನೋಧರ್ಮದ ಮಂದಿ ಎಲ್ಲೆಲ್ಲೂ ಇದ್ದಾರೆ. ಇಂಥ ಕೆಲವೇ ಮಂದಿಯ ತಾತ್ಸಾರದ ವರ್ತನೆ ಅಂಥ ಕೌಶಲ್ಯವಿರುವವರನ್ನು ಎಷ್ಟೊಂದು ನೋಯಿಸುತ್ತದೆಂದರೆ, ಮುಂದೆ ಅವರು ಸುಲಿಯಲು ಕಲಿತು ಬಿಡುತ್ತಾರೆ! ಹೀಗಾಗಿ ನಾವು "ಅಯ್ಯೊ, ಮುಟ್ಟಿದ್ದಕ್ಕೇ ಐನೂರು ಕೇಳುತ್ತಾನೆ ಮಾರಾಯ!" ಎಂದು ದೂರುವುದನ್ನು ಅಲ್ಲಲ್ಲಿ ಕೇಳುವುದೆಲ್ಲ ಇದರದ್ದೇ ಪರಿಣಾಮ ಎನಿಸುತ್ತದೆ. ಆದರೂ ಕೂಡ ನಾವು ಪುಕ್ಕಟೆಯಾಗಿ ಏನಾದರೂ ಮಾಡಿಸಿಕೊಳ್ಳುವುದಕ್ಕೆ ಸಾಧ್ಯವಾದರೆ ಮಾಡಿಸಿಕೊಂಡು ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವುದನ್ನು ಬಿಡುವುದೇ ಇಲ್ಲ! ಸೋಮಶೇಖರ್ ಕೂಡ ಇಂಥ ನೋವು-ನಷ್ಟ ಅನುಭವಿಸಿದ್ದಾರೆ ಎಂದು ತಿಳಿದ ಮೇಲೆ, ಅವರ ಎದುರು ನನ್ನದು ಏನೂ ಅಲ್ಲ ಎನಿಸಿ ಅಷ್ಟಿಷ್ಟು ಸಮಾಧಾನವಾಗಿದ್ದು ಸುಳ್ಳಲ್ಲ!!

ಆತ್ಮಚರಿತ್ರೆಯನ್ನು ದಾಖಲಿಸುವ ಎಷ್ಟೊಂದು ವಿಧಾನಗಳಿವೆ! ಒಬ್ಬ ವ್ಯಕ್ತಿ ತನ್ನ ಅನುಭವ ಕಥನವನ್ನು ಅಕ್ಷರಗಳಲ್ಲಿ ಮೂಡಿಸುವುದರ ಮೂಲಕ ಅದನ್ನು ಮಾಡಬಹುದು. ಬೇರೊಬ್ಬರು ತಮ್ಮ ಗ್ರಹಿಕೆಗಳ ಮೂಲಕ ಒಬ್ಬ ವ್ಯಕ್ತಿಯ ಜೀವನ ಚರಿತ್ರೆಯನ್ನು ನಮಗೆ ಕಟ್ಟಿಕೊಡಬಹುದು. ಒಬ್ಬ ವ್ಯಕ್ತಿಯನ್ನು ಬಲ್ಲ ಹತ್ತು ಹಲವು ಮಂದಿಯ ಮಾತುಗಳನ್ನು ಸಂಗ್ರಹಿಸುವುದರ ಮೂಲಕವೂ ಅದನ್ನು ಮಾಡಬಹುದು. ಇಲ್ಲಿ ಇನ್ನೊಂದು ವಿನೂತನ ಪ್ರಯೋಗವಿದೆ. ಇಲ್ಲಿ ಸೋಮಶೇಖರ್ ಸುಮಾರು 40-50 ಮಂದಿಯ ಪೋರ್ಟ್ರೆಟ್ ಫೋಟೋಗ್ರಫಿ ಮಾಡಲು ಹೋದಾಗಿನ ತಮ್ಮ ನೆನಪುಗಳನ್ನು ಬಿಚ್ಚಿಡುವುದರ ಮೂಲಕ ಏಕಕಾಲಕ್ಕೆ ನಮಗೆ ಡಿವಿಜಿ, ಮಾಸ್ತಿ, ಕುವೆಂಪು, ಕಾರಂತ, ಅಡಿಗ, ಖುಶ್ವಂತ್ ಸಿಂಗ್, ವಿಲಿಯಂ ಗೋಲ್ಡಿಂಗ್, ಕಮಲಾದಾಸ್, ಸುಬ್ಬಣ್ಣ, ಗುಬ್ಬಿ ವೀರಣ್ಣ, ಸತ್ಯಜಿತ್ ರೇ, ಅಮರೀಶ್ ಪುರಿ, ಮನ್ಸೂರ್, ಗಂಗೂಬಾಯಿ, ಸುಬ್ಬುಲಕ್ಷ್ಮಿ ಮುಂತಾದವರ ಕುರಿತು ಅಷ್ಟಿಷ್ಟು ತಿಳಿಸುತ್ತಲೇ ತಮ್ಮ ಬಗ್ಗೆ ನಮಗೊಂದು ಒಳನೋಟ ಒದಗಿಸುತ್ತಿದ್ದಾರೆ. ಈ ಹೊಸತನವೇ ಈ ಕೃತಿಯ ಪ್ರಧಾನ ಆಕರ್ಷಣೆ ಎಂದೂ ಅನಿಸುತ್ತದೆ. ನಾನಂತೂ ಈ ಪುಸ್ತಕದ ಎರಡು ಮತ್ತು ಮೂರನೆಯ ಭಾಗವನ್ನೇ ಮೊದಲು ಓದಿ ನಂತರವೇ ಮೊದಲ ಭಾಗಕ್ಕೆ ಬಂದೆ!

ಅನಾಯಾಸವಾಗಿ ನಮಗೆ ಅತ್ಯದ್ಭುತವಾಗಿ ಮೂಡಿಬಂದಿರುವ, ಹಲವಾರು ಶ್ರೇಷ್ಠ ವ್ಯಕ್ತಿಗಳ ವ್ಯಕ್ತಿತ್ವದ ಬಗ್ಗೆ ಪಿಸುನುಡಿಯ ಬಲ್ಲ ಅಂತಃಶಕ್ತಿಯಿರುವ ಫೋಟೋಗಳ, ಆಯಾ ವ್ಯಕ್ತಿಗಳ ಮುಖದ ಸನಿಹದ ಒಂದು ಮುಖಾಮುಖಿಯನ್ನೊದಗಿಸಬಲ್ಲ ದರ್ಶನದ ಅವಕಾಶ ಈ ಪುಸ್ತಕದಿಂದೊದಗಿದೆ. ದುಬಾರಿ ವೆಚ್ಚದ ಆರ್ಟ್ ಪೇಪರ್ ಮೇಲೆ ಇಡೀ ಪುಸ್ತಕವನ್ನು ಅಚ್ಚುಕಟ್ಟಾಗಿ ಮುದ್ರಿಸಿ ನಮ್ಮ ಕೈಗಿತ್ತಿದ್ದಾರೆ ಆಕೃತಿ ಪುಸ್ತಕದ ಡಿ ಎನ್ ಗುರುಪ್ರಸಾದ್. ಹೀಗಾಗಿ ಇಲ್ಲಿ ಏಕಕಾಲಕ್ಕೆ ಕೆ ಜಿ ಸೋಮಶೇಖರ್ ಅವರ ಮನಸ್ಸು, ಜೇಪಿಯವರ ನಿರೂಪಣೆ ಮತ್ತು ಸೋಮಶೇಖರ್ ತೆಗೆದ ಫೋಟೋಗಳು ಮಾತನಾಡುತ್ತಿವೆ!

No comments: