Tuesday, July 8, 2014

ಈ ಮೇರಿಯ ಮಾತುಗಳಿಗೆ ಕಿವಿಗೊಡಿ...

2013ರ ಬುಕರ್ ಪ್ರಶಸ್ತಿಯ ಶಾರ್ಟ್ ಲಿಸ್ಟ್‌ನಲ್ಲಿದ್ದ ಐದು ಕಾದಂಬರಿಗಳಲ್ಲಿ ಕಾಮ್ ಟಾಯ್ಬೀನ್ ಅವರ ದ ಟೆಸ್ಟಮೆಂಟ್ ಆಫ್ ಮೇರಿ ಕೂಡ ಒಂದು. ಅತ್ಯಂತ ಪುಟ್ಟ ಗಾತ್ರದ, ಕಿರುಕಾದಂಬರಿಯೆನ್ನ ಬಹುದಾದ ದ ಟೆಸ್ಟಮೆಂಟ್ ಆಫ್ ಮೇರಿಯೇ ನಿಜಕ್ಕೂ ಪ್ರಶಸ್ತಿಗೆ ಅರ್ಹವಾದ ಕಾದಂಬರಿ ಎಂಬ ರಿವ್ಯೂವೊಂದು ತೆಹಲ್ಕಾ ವಾರಪತ್ರಿಕೆಯಲ್ಲಿ ಕಾಣಿಸಿಕೊಂಡಿತ್ತು. ಈ ಕಾದಂಬರಿ ಹಲವಾರು ಕಾರಣಗಳಿಗಾಗಿ ಬಹುಚರ್ಚಿತ ಮತ್ತು ವಿವಾದಾತ್ಮಕ ವಸ್ತುವನ್ನು ಹೊಂದಿರುವ ಕೃತಿ ಕೂಡ ಹೌದು.

ನಾವು ಈ ಕೃತಿಯನ್ನು ಹೇಗೆ ಕಾಣುತ್ತೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ಒಂದು ಸಾಹಿತ್ಯ ಕೃತಿಯನ್ನಾಗಿ ಮಾತ್ರ ಕಾಣುವುದು ಕಷ್ಟವಾಗುವಂಥ ವಸ್ತು ಮತ್ತು ಹಿನ್ನೆಲೆಯನ್ನು ಇದು ಹೊಂದಿದೆ. ಇದನ್ನು ಬರೆದ ಐರ್ಲೆಂಡಿನ ಟಾಯ್ಬೀನ್ ಮಾಜಿ ಕ್ಯಾಥಲಿಕ್, ಸಲಿಂಗಕಾಮಿ ಮತ್ತು ಪ್ರೀಸ್ಟ್‌ಹುಡ್‌ನತ್ತ ಒಮ್ಮೆ ಕಣ್ಣಿಟ್ಟಿದ್ದ ವ್ಯಕ್ತಿ ಎನ್ನುವುದು ಕೆಲವರಿಗೆ ಮುಖ್ಯವಾಗಿ ಕಂಡಿದೆ. ಕಾದಂಬರಿಯ ವಸ್ತು ಕ್ರಿಶ್ಚಿಯನ್ನರ ಧಾರ್ಮಿಕ ಶ್ರದ್ಧೆಯೊಂದಿಗೆ ತಳುಕು ಹಾಕಿಕೊಂಡಿರುವುದು ಸುಳ್ಳಲ್ಲ. ಐಯರ್ಲ್ಯಾಂಡ್ ಕೂಡ ಕಳೆದ ಇಪ್ಪತ್ತು ವರ್ಷಗಳಿಂದ ಐರಿಷ್ ಕ್ಯಾಥೊಲಿಸಿಸಂನಿಂದ ಸಾಕಷ್ಟು ಅನುಭವಿಸಿದೆಯಂತೆ. ಅದೆಲ್ಲದರ ಪ್ರಭಾವದಿಂದ ಟಾಯ್ಬೀನ್ ಹೀಗೆಲ್ಲ ಮೇರಿಯೇ ಕ್ರಿಸ್ತನನ್ನು, ಅವನ ಶಿಷ್ಯಂದಿರನ್ನು ಅಲ್ಲಗಳೆದಂತೆಲ್ಲ ಬರೆದು ತನ್ನನ್ನೇ ತಾನು ಹೀಗಳೆದುಕೊಂಡಿದ್ದಾನೆ; ದೇವರು ಈ ದುರಾದೃಷ್ಟಕರ, ಹೀನ, ಸುಳ್ಳು ಸೃಷ್ಟಿಯನ್ನು ಕ್ಷಮಿಸಲಿ ಮತ್ತು ಅವನ ದೈವಿಕವಾದ ಆತ್ಮವನ್ನು ಹತಾಶೆ ಮತ್ತು ಕ್ಷೋಭೆಯಿಂದ ಕಾಪಾಡಲಿ ಎಂದು ಹಾರೈಸಿ ಕಟು ಟೀಕೆಯನ್ನು ಕೂಡ ಧಾರ್ಮಿಕ ಶ್ರದ್ಧಾಳುಗಳು ಕರುಣಿಸಿದ್ದಾರೆ. ಇದನ್ನು ಬ್ಯಾನ್ ಮಾಡಬೇಕು, ಬರೆದವನನ್ನು ಗಲ್ಲಿಗೇರಿಸಬೇಕು ಎಂದೆಲ್ಲ ಪುಸ್ತಕ ಸುಟ್ಟು ಬೀದಿ ಪ್ರತಿಭಟನೆ ಮಾಡುವ ಮಟ್ಟಕ್ಕೆ ಅವರು ಇಳಿದಿಲ್ಲ ಎನ್ನುವುದು ಗಮನಾರ್ಹ.

ನಾನು ಅನೇಕರನ್ನು ಕೇಳಿ ನೋಡಿದ್ದೇನೆ, ಕ್ರಿಸ್ತನನ್ನು ಶಿಲುಬೆಗೇರಿಸುವಾಗ ಅವನ ತಾಯಿ ಮೇರಿ ಎಲ್ಲಿದ್ದಳು? ನನ್ನ ಹೆಚ್ಚಿನ ಗೆಳೆಯರಿಗೆ ಆ ಬಗ್ಗೆ ಗೊತ್ತಿಲ್ಲ. ಕ್ರಿಶ್ಚಿಯನ್ ಗೆಳೆಯರಿಗೆ ಸ್ಪಷ್ಟವಾಗಿ ಗೊತ್ತಿದೆ. ನಾವು ಹಿಂದೂಗಳು ಈ ಬಗ್ಗೆ ಯೋಚಿಸುವುದಕ್ಕೇ ಹೋಗಿಲ್ಲ ಎನಿಸುತ್ತದೆ. ಹೆಚ್ಚಿನಂಶ ನಾವು ಅಂಥ ಒಂದು ದುರಂತಕ್ಕೆ ಹೆತ್ತ ತಾಯಿ ಸಾಕ್ಷಿಯಾಗುವುದು ಅಸಂಭವ ಎಂದು ತೀರ್ಮಾನಿಸಿಕೊಂಡಿರುತ್ತೇವೆ ಎನಿಸುತ್ತದೆ. ಅಮಾನುಷ ಹಿಂಸೆಯಿಂದ, ಎಂಥವರ ಎದೆಯನ್ನೂ ಕರಗಿಸುವಂಥ ಶಿಕ್ಷೆಗೆ ಗುರಿಯಾಗಿಸಿ ಏಸುವನ್ನು ಕೊಂದ ಘಟನೆಯೇ ಭಯಂಕರವಾದದ್ದು. ಅಂಥದ್ದಕ್ಕೆ ಸಾಕ್ಷಿಯಾಗಲು ಯಾವ ತಾಯಿ ತಾನೇ ಬಯಸುತ್ತಾಳೆ? ಬಹುಷಃ ಹಿಂದಿನ ಕಾಲದ ಶಿಕ್ಷೆಗಳೆಲ್ಲ ಹಾಗೆಯೇ ಭಯಂಕರವಾಗಿರುತ್ತಿದ್ದವೇನೊ. ಆದರೂ ಒಬ್ಬ ಹೆತ್ತ ತಾಯಿ ತನ್ನ ಮಗನನ್ನು ಶಿಲುಬೆಗೇರಿಸಿ, ಕೈ ಕಾಲುಗಳಿಗೆ ಮೊಳೆ ಹೊಡೆದು, ತಲೆಗೆ ಮುಳ್ಳಿನ ಕಿರೀಟವನ್ನು ಹೆಟ್ಟಿ, ಆ ಶಿಲುಬೆಯನ್ನು ಮಣ್ಣಲ್ಲಿ ಹುಗಿದು, ಪ್ರಾಣಪಕ್ಷಿ ಹಾರಿ ಹೋಗುವವರೆಗೂ ಶಿಲುಬೆಗೆ ತೂಗುಹಾಕುವ ದೃಶ್ಯಕ್ಕೆ ಸಾಕ್ಷಿಯಾಗಲು ಸಾಧ್ಯವೆ? ಸುತ್ತಲಿನವರ ಕೇಕೆ, ಉತ್ಸಾಹ, ಹಿಂಸೆಯನ್ನು, ರಕ್ತವನ್ನು ಕಾಣುವ ದಾಹ, ಈ ಭಯಂಕರ ಶಿಕ್ಷೆಯನ್ನು ಆಚರಿಸುವ ಉನ್ಮಾದ - ಇವನ್ನೆಲ್ಲ ತಡೆದುಕೊಳ್ಳಲು ಸಾಧ್ಯವೆ? ಇವತ್ತಿಗೂ ಗಲ್ಲು ಶಿಕ್ಷೆಗೆ ಗುರಿಯಾಗುತ್ತಿರುವ ವ್ಯಕ್ತಿಯ ತಾಯಿ, ಒಡಹುಟ್ಟಿದವರು ಎಲ್ಲ ಆ ದಿನ, ಘಳಿಗೆ ಅನುಭವಿಸುವ ತಲ್ಲಣ ಹೇಗಿರುತ್ತದೆ? ಮರಣಶಯ್ಯೆಯಲ್ಲಿರುವ ಪ್ರೀತಿಪಾತ್ರರ ಮರಣವನ್ನು ಕಾಯುತ್ತ ಕುಳಿತಿರಬೇಕಾದ ಸಂದರ್ಭದಲ್ಲಿ ನಮ್ಮ ನಮ್ಮ ದುಗುಡ, ತಲ್ಲಣ, ಮನಸ್ಸಿನ ಕ್ಷೋಭೆ ಹೇಗಿರುತ್ತದೆ?

ನಾಟಕದ ರೂಪಾಂತರವಾಗಿಯೂ ಜನಪ್ರಿಯವಾದ ಈ ಕಾದಂಬರಿಯಲ್ಲಿ ಎಲ್ಲ ಪ್ರೇಕ್ಷಕರನ್ನೂ ಹಿಡಿದಿಟ್ಟ ಅಂಶಗಳು ಇವೇ. ಇದಕ್ಕೆ ಶತಶತಮಾನಗಳಿಂದ ಹೆಣ್ಣನ್ನು ಮಾತಿಗೆ ಅವಕಾಶವಿಲ್ಲದಂತೆ ಮೆಟ್ಟಿ ನಿಂತ ಪುರುಷಾಕಾರದ ಆಯಾಮವೂ ಸೇರಿಕೊಳ್ಳುತ್ತದೆ. ನಾಟಕದ ರಂಗಪ್ರಯೋಗವೊಂದರಲ್ಲಿ ಮೇರಿ ಗಾಜಿನ ಒಂದು ಪೆಟ್ಟಿಗೆಯೊಳಗೆ ಬಂಧಿಯಾಗಿ ಕಾಣಿಸಿಕೊಳ್ಳುತ್ತಾಳಂತೆ. ಅವಳನ್ನು ನೀವು ನೋಡಬಹುದು, ಕೇಳುವಂತಿಲ್ಲ! ಟಾಯ್ಬೀನ್ ಇದೀಗ ಅವಳಿಗೆ ಧ್ವನಿ ನೀಡಿದ್ದಾನೆ. ಕಾದಂಬರಿಯಲ್ಲೂ ರೆಕ್ಕೆ ಬಿಚ್ಚುವಷ್ಟು ಸ್ಥಳಾವಕಾಶವಿಲ್ಲದ ಒಂದು ಪಂಜರದಲ್ಲಿರುವ ರಣಹದ್ದಿಗೆ ಜೀವಂತ ಮೊಲದ ಮರಿಗಳನ್ನು ತಿನ್ನಿಸುವ ವ್ಯಕ್ತಿಯೊಬ್ಬನಿದ್ದಾನೆ. ಬಂಧನ ಮತ್ತು ಹಿಂಸೆ, ಹೊಟ್ಟೆಪಾಡು ಮತ್ತು ಕ್ರೌರ್ಯ, ಆಟ ಮತ್ತು ಜೀವನದ ಪಾಠ ಜೊತೆ ಜೊತೆಯಾಗಿಯೇ ಸಾಗುತ್ತವೆಯೆ?

ತನ್ನ ಮಗನನ್ನು ತನ್ನ ಕಣ್ಣೆದುರೇ ಶಿಲುಬೆಗೇರಿಸಿ ಕೊಂದ ಇಪ್ಪತ್ತು ವರ್ಷಗಳ ನಂತರ ತನ್ನ ನೆನಪುಗಳಲ್ಲಿ ಕ್ರಿಸ್ತನನ್ನು ಕಟ್ಟಿಕೊಡುವ ಮೇರಿ ಇಲ್ಲಿದ್ದಾಳೆ. ಕ್ರಿಸ್ತನನ್ನು ಪ್ರಶ್ನಾತೀತ ವ್ಯಕ್ತಿಯೆಂದೂ ಅವನು ಅನುಮಾನಕ್ಕೆಡೆಯಿಲ್ಲದಂತೆ ದೇವರ ಮಗನೆಂದೂ ನಂಬಿ ಬಂದಿರುವ ಶ್ರದ್ಧಾಳುಗಳಿಗೆ ಇದು ಅಪಥ್ಯವಾಗುವಂತಿದೆ. ಸತ್ತು ಹೂತಿದ್ದ ಮನುಷ್ಯನನ್ನು ನಾಲ್ಕು ದಿನಗಳ ನಂತರ ಮಣ್ಣಿನಿಂದ ಹೊರತೆಗೆದು ಬದುಕಿಸಿದ ಕ್ರಿಸ್ತ, ನೀರನ್ನು ವೈನ್ ಆಗಿ ಪರಿವರ್ತಿಸಿದ ಕ್ರಿಸ್ತ, ಸಮುದ್ರದ ಅಲೆಗಳ ಮೇಲೆ ನಡೆದು ಬಂದ ಕ್ರಿಸ್ತ ಮತ್ತು ಸತ್ತ ಮೂರು ದಿನಗಳ ತರುವಾಯ ತನ್ನ ಪ್ರಿಯಶಿಷ್ಯರಿಗೆ ಕಾಣಿಸಿಕೊಂಡ ಕ್ರಿಸ್ತ ಮತ್ತು ಅವನೇ ಬೋಧಿಸಿದನೆಂಬ ನೆಲೆಯಲ್ಲಿ ಬೇರೆಯವರ ಕೈಯಲ್ಲಿ ಧರ್ಮಸಂಸ್ಥಾಪಕನಾದ ಕ್ರಿಸ್ತ ಇಲ್ಲಿ ತನ್ನದೇ ತಾಯಿಯ ಅನುಮಾನದ ಕಣ್ಣುಗಳಿಗೆ ಗುರಿಯಾಗುತ್ತಿದ್ದಾನೆ. ಅವನ ಹಿಂಬಾಲಕರು ತನ್ನ ಮಗನ ಹಾದಿ ತಪ್ಪಿಸುತ್ತಿದ್ದಾರೆ, ಅವನಿಂದ ಏನೇನೋ ಮಾಡಬಾರದ್ದನ್ನು ಮಾಡಿಸುತ್ತಿದ್ದಾರೆ, ಸಾವಿಗೆ ಕೊಡುವ ಮರ್ಯಾದೆ ಕೊಡಬೇಕು; ಅದನ್ನು ಬಿಟ್ಟು ಅದನ್ನೇ ವಿರೋಧಿಸುವುದೆಂದರೇನು, ನಿಜಕ್ಕೂ ತಂದಿಟ್ಟಿದ್ದು ನೀರೇ ಆಗಿತ್ತೆ ಅಥವಾ.... ಹೀಗೆ. ಮಗನ ಮರಣಾನಂತರವಂತೂ ಅವನನ್ನು ಇವರೆಲ್ಲ ಸೇರಿ ಏನು ಮಾಡಿದರೋ ಅದು ಮೇರಿಗೆ ಸ್ವಲ್ಪವೂ ಸಮ್ಮತವಿಲ್ಲ. ತಾನು ಕನ್ಯೆಯಾಗಿಯೇ ಅವನನ್ನು ಹೆತ್ತ ಕತೆಯನ್ನು ಅವಳೇ ನಿರಾಕರಿಸುತ್ತಾಳೆ. ತಾನು ಅವನಿನ್ನೂ ಶಿಲುಬೆಯಲ್ಲೇ ತೂಗಾಡುತ್ತಿರುವಾಗಲೇ ಅಲ್ಲಿಂದ ನಿರ್ಗಮಿಸಿದ್ದನ್ನು ಹೇಳುವ ಆಕೆ ಆನಂತರವೂ ಅಲ್ಲಿದ್ದು ಮಗನನ್ನು ಮಡಿಲಲ್ಲಿರಿಸಿಕೊಂಡು ನೇವರಿಸಿದ ಕನಸು ಕಂಡುದಾಗಿ ಹೇಳಿದರೆ ಆ ಕನಸನ್ನು ನಿಜವೆನ್ನುತ್ತದೆ ಜಗತ್ತು. ಇಂಥ ಕನಸು-ಕಲ್ಪನೆಗಳಿಂದಲೇ ಜಗತ್ತು ಚರಿತ್ರೆಯನ್ನು ಕಟ್ಟುತ್ತದೆ. ಸೃಜನಶೀಲವಾದುದೆಲ್ಲವೂ ಕನಸು, ಕಲ್ಪನೆ, ಭ್ರಮೆ, ನಂಬಿಕೆ ಮತ್ತು ಉತ್ಪ್ರೇಕ್ಷೆಗಳಿಂದ ಸಮೃದ್ಧವಾಗುತ್ತದೆ. ಅದನ್ನು ಜನಸಾಮಾನ್ಯರು ಒಪ್ಪಿಕೊಳ್ಳುತ್ತಾರೆ. ಅದರಲ್ಲೇ ಅವರ ಸುಖ, ನೆಮ್ಮದಿಯನ್ನು ಅವರು ಕಾಣುತ್ತಾರೆ. ಅದನ್ನು ಪ್ರಶ್ನಿಸಿದರೆ, ತಿರಸ್ಕರಿಸಿದರೆ ಅದು ದುಃಖ ಮತ್ತು ಕ್ಷೋಭೆಗೆ ಕಾರಣವಾಗುತ್ತದೆ ಎನ್ನುತ್ತಾರೆ ಧಾರ್ಮಿಕ ಗುರುಗಳು. ಆದರೆ ಈ ಮೇರಿಯ ಮಾತುಗಳನ್ನು ಗಮನಿಸಿ:

I wanted dreams to have their place, to let them belong to the night. And I wanted what happened, what I saw, what I did, to belong to the day. Until I died I hoped that I would live in full recognition of the difference between the two. (page 93)

ಕಾಮ್ ಟಾಯ್ಬೀನ್ ಕಾದಂಬರಿಯ ಮೇಲೆ ಇನ್ನೊಂದು ನಿಟ್ಟಿನಿಂದಲೂ ಆಕ್ರಮಣ ಸಾಧ್ಯವಿದೆ. ನಾವು ಹೆತ್ತ ತಾಯಿ ಇಂಥ ಘೋರಕ್ಕೆ ಸಾಕ್ಷಿಯಾಗಲಾರಳು ಎನ್ನುತ್ತೇವೆ. ಅಂಥ ಸಂದರ್ಭ ಬಂದರೆ ತಾನೇ ಮೊದಲು ಜೀವ ತೆತ್ತಾಳು ಎಂದುಕೊಳ್ಳುತ್ತೇವೆ. ಆದರೆ, ತನ್ನ ಪ್ರೀತಿಯ ಮಗನನ್ನು ಈ ಜಗತ್ತು ತನ್ನದೇ ಕಾರಣಗಳಿಗಾಗಿ ಬಲಿಪಶುವನ್ನಾಗಿಸಿಕೊಂಡಿತು ಎಂದು ದೂರುವ, ಅದನ್ನು ತಪ್ಪಿಸಬಹುದಾಗಿತ್ತು ಎಂದು ಹಂಬಲಿಸುವ ಮೇರಿ, ಆವತ್ತು ತನ್ನ ಜೀವವನ್ನು ಕಾಪಾಡಿಕೊಳ್ಳುವ ಒಂದೇ ಉದ್ದೇಶದಿಂದ ಕದ್ದು ಮುಚ್ಚಿ ಪ್ರಯಾಣಿಸುತ್ತಾಳೆ ಮಾತ್ರವಲ್ಲ, ಮಗನ ದೇಹದ ಉಸಾಬರಿಗೂ ಹೋಗದೆ ಕದ್ದು ಪರಾರಿಯಾಗುತ್ತಾಳೆ. ಕ್ರಿಸ್ತನ ಸಂಬಂಧಿಕರು, ಅನುಯಾಯಿಗಳು, ಅವನಿಂದ ಉಪಕೃತರಾದವರು ಅಷ್ಟೆಲ್ಲ ಮಂದಿಯಿರುವಾಗ ಜನರೆಲ್ಲ ಹೇಗೆ ಕ್ರಿಸ್ತನನ್ನು ಕ್ಷಮಿಸಬಾರದು, ಅವನಿಗೆ ಶಿಕ್ಷೆಯಾಗಬೇಕು ಎಂದು ಹಠಕಟ್ಟಿ ನಿಂತರು ಎನ್ನುವುದಕ್ಕೆ ಅದೆಲ್ಲವೂ ವಿಧಿಲಿಖಿತ, ಕ್ರಿಸ್ತನ ತ್ಯಾಗದಿಂದಲೇ ಈ ಜಗತ್ತು ಪುನೀತವಾಗುವುದಿತ್ತು, ಅವನ ತ್ಯಾಗದಿಂದಲೇ ಜನ ಅವನನ್ನು ಸಂಪೂರ್ಣ ಶರಣಾಗತಿಯೊಂದಿಗೆ ಸ್ವೀಕರಿಸಿದರು ಎನ್ನುವ ವಾದವಿದೆ. ಈ ವಾದವನ್ನು ಮೇರಿ ಒಂದೇ ಮಾತಿನಿಂದ ತಿರಸ್ಕರಿಸಿ ಬಿಡುತ್ತಾಳೆ. ಆವತ್ತು ಅಂಥ ಘೋರಕ್ಕೆ ಸಾಕ್ಷಿಯಾದ, ಅದನ್ನು ತಡೆಯಲು ಮುಂದಾಗದ ಈ ಜಗತ್ತು ಅಂಥಾ ತ್ಯಾಗಕ್ಕೆ ಅರ್ಹವಾಗಿಲ್ಲ. ಹೌದು, ಜಗತ್ತು ಅರ್ಹವಾಗಿಲ್ಲ ಎನ್ನುತ್ತಾಳೆ ಅವಳು. ಆದರೆ ಸ್ವತಃ ಮೇರಿ ಮಾಡಿದ್ದೇನು.....?

ಮೇರಿ ಹಾಗೆ ಮಾಡಿರದೇ ಇದ್ದರೆ ಟಾಯ್ಬೀನ್ ಕಾದಂಬರಿಯೇ ಇರುತ್ತಿರಲಿಲ್ಲ. ಆದರೆ ಹಾಗೆ ಮಾಡಿದ ಟಾಯ್ಬೀನನ ಮೇರಿ ಹೆಣ್ಣಿನ ಮೇಲಿನ ದಬ್ಬಾಳಿಕೆಯನ್ನು, ಅವಳಿಗೆ ಉಸಿರಿಲ್ಲದಂತೆ, ಧ್ವನಿಯೆತ್ತದಂತೆ ಮಾಡಿದ ಸಮಾಜದ ಕ್ರೌರ್ಯವನ್ನು, ಇಲ್ಲದ ದೇವಪುತ್ರನೊಬ್ಬನನ್ನು ಸೃಷ್ಟಿಸುವುದಕ್ಕಾಗಿ ಹೂಡಿದ ಹೂಟವನ್ನು, ಅದರ ಹಿಂದಿನ ರಾಜಕೀಯವನ್ನು, ನೀಚತನವನ್ನು ಕಾಣಿಸುವುದಕ್ಕೆ ಅಷ್ಟು ಅರ್ಹಳಾಗಿಲ್ಲ ಎನಿಸುವುದು ಯಾಕೆ?

ಜಾಗತಿಕ ಶ್ರದ್ಧೆ ಮತ್ತು ನಂಬಿಕೆಗಳ ಹಿಂದೆ ಇದ್ದಿರಬಹುದಾದ ವೈಯಕ್ತಿಕ ನೋವು, ಸಂಕಟ ಮತ್ತು ತ್ಯಾಗವನ್ನು ಮರೆಯುವುದು ಕೂಡ ಸಲ್ಲ. ಹಾಗೆಯೇ ಎಲ್ಲ ಶ್ರೇಷ್ಠ, ಮಹಾನ್ ವ್ಯಕ್ತಿತ್ವಗಳ ಹಿಂದೆಯೂ ಕ್ಷೀಣವಾಗಿ ಕೂಡ ಕೇಳಿಸದಂತೆ ಕರಗಿ ಹೋದ, ಶಾಶ್ವತವಾದ ಅವಜ್ಞೆಗೆ ಗುರಿಯಾದ ಅದೆಷ್ಟು ತಾಯಂದಿರ, ಮಡದಿಯರ ಅಳು, ತ್ಯಾಗ, ನೋವುಗಳಿದ್ದಿರಬಹುದು! ಅದರೆದುರು ಈ ಮಹಾನ್ ಚೇತನಗಳು ಕನಿಷ್ಠ ಕ್ಷಮೆಗಾದರೂ ಅರ್ಹವೆ? ಈ ಪ್ರಶ್ನೆಯೆದುರು ಮೇರಿ ನಡೆದುಕೊಂಡ ರೀತಿ ಅಕ್ಷಮ್ಯ ಎನಿಸುವುದಿಲ್ಲ ಅಲ್ಲವೆ?

ಸಾಹಿತ್ಯ ಕೃತಿಯಾಗಿ ಈ ಕಾದಂಬರಿ ನಮ್ಮನ್ನು ಕಾಡುವಷ್ಟೇ, ಚರಿತ್ರೆಯಾಗಿ, ಇತಿಹಾಸವಾಗಿ, ಪುರಾಣವಾಗಿ, ಧರ್ಮವಾಗಿ, ಮಾನವ ಜನಾಂಗದ ನಾಗರಿಕತೆಯ ಕತೆಯಾಗಿ ಕಾಡುವ ಶಕ್ತಿ ಹೊಂದಿದೆ. ಮೇರಿಯನ್ನು ನಾವು ಪ್ರಶ್ನಿಸುತ್ತಿರುವಾಗಲೇ ಇದು ನಮ್ಮ ಪುರಾಣಗಳನ್ನು, ಸಂತರನ್ನು, ನಂಬಿಕೆಗಳನ್ನು, ವ್ಯಕ್ತಿಪೂಜೆಯ ತೆವಲನ್ನು ಪ್ರಶ್ನಿಸುತ್ತದೆ. ಪ್ರಶ್ನಿಸಿದವರ ತಲೆ ಕಡಿಯುವವರ ಸಂಖ್ಯೆ ಹೆಚ್ಚುತ್ತಿರುವಾಗಲೇ ಪ್ರಶ್ನಿಸುವವರು ಮತ್ತು ಹೊಸ ಹೊಸ ಪ್ರಶ್ನೆಗಳು ಹೆಚ್ಚುವುದು ಅಗತ್ಯ.

No comments: