Saturday, July 5, 2014

ಶ್ರೀಧರ ಬಳಗಾರರ ಕಾದಂಬರಿ ‘ಆಡುಕಳ’

ಶ್ರೀಧರ ಬಳಗಾರ ಅವರ ಹೊಸ ಕಾದಂಬರಿ ‘ಆಡುಕಳ’ ಎರಡು ಕಾರಣಗಳಿಗಾಗಿ ಮನಸೆಳೆಯುತ್ತದೆ. ಒಂದು, ಅವರು ಇದುವರೆಗಿನ ತಮ್ಮ ಧಾಟಿಯನ್ನು ಪೂರ್ತಿಯಾಗಿ ಅಲ್ಲದಿದ್ದರೂ ಗಣನೀಯವಾಗಿ ಬಿಟ್ಟುಕೊಟ್ಟು ಈ ಕಾದಂಬರಿಯ ಕಥಾಲೋಕವೊಂದನ್ನು ಸೃಷ್ಟಿಸಿದ್ದಾರೆನ್ನುವುದು. ಇನ್ನೊಂದು ಜನಮಾನಸದಿಂದ ಮರೆಯಾಗಿ ಹೋಗುತ್ತಿರುವ ಕೆಲವೊಂದು ಸಾಂಸ್ಕೃತಿಕ ಘಳಿಗೆಗಳನ್ನು, ನಡಾವಳಿಗಳನ್ನು ಇಲ್ಲಿ ವಿವರವಾಗಿ ಚಿತ್ರಿಸಿದ್ದಾರೆನ್ನುವುದು. ಈ ಎರಡೂ ಬೆಳವಣಿಗೆಗಳಿಗಾಗಿ ಶ್ರೀಧರ ಬಳಗಾರರು ಸಾಕಷ್ಟು ಶ್ರಮಪಟ್ಟಿದ್ದಾರೆಂದು ಅನಿಸದಿರದು. ಅಷ್ಟೊಂದು ಶ್ರೀಮಂತವಾದ ಮತ್ತು ತಲಸ್ಪರ್ಶಿಯಾದ ವಿವರಗಳು ಕಾದಂಬರಿಯನ್ನು ತುಂಬಿಕೊಂಡಿವೆ.

ಶ್ರೀಧರ ಬಳಗಾರರ ಕತೆಗಳನ್ನು ನಾವು ಗಮನಿಸಿದರೆ ಅವರು ಒಬ್ಬ ವ್ಯಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ತೊಡಗಿದ್ದಾರೆನ್ನಿಸುವಾಗಲೇ ಒಂದು ಅವಿಭಕ್ತ ಕುಟುಂಬವನ್ನು, ಒಂದು ಕುಟುಂಬವೇ ಕೇಂದ್ರವಾಗುಳ್ಳ ಪುಟ್ಟ ಊರನ್ನು, ಆ ಊರಿನ ಅಂಚಿನಂತಿರುವ ಕಾಡನ್ನು ಒಳಗೊಳ್ಳುತ್ತಲೇ, ಸಮುದಾಯ, ಸಂಸ್ಕೃತಿ ಮತ್ತು ಅದರ ನಡಾವಳಿಯ ಚಿತ್ರಣಕ್ಕೆ ಇಳಿಯುತ್ತಾರೆ. ಅವರು ವಿವರಗಳಲ್ಲಿ ಪಶು,ಪಕ್ಷಿ, ಪ್ರಾಣಿಗಳಂತಿರಲಿ, ಹುಳು ಹುಪ್ಪಟೆಗಳನ್ನೂ ಬಿಡುವವರಲ್ಲ. ಹಾಗೆಯೇ ಅವರು ನಿರ್ಲಿಪ್ತವಾಗಿಯೇ ಮೌಢ್ಯ, ಭ್ರಮೆ, ತಲೆಮಾರಿನ ಅಂತರ ನಿರ್ಮಿಸುವ ಹಠ ಎಲ್ಲವನ್ನೂ ತಮ್ಮ ಕಥಾಜಗತ್ತು ಒಳಗುಗೊಳ್ಳುವಷ್ಟು ಮುಕ್ತವಾಗಿ ಬರೆಯುವ ಕತೆಗಾರ ಕೂಡ ಹೌದು. ಮನುಷ್ಯನನ್ನು ಅವನ ಕಾಯಕದ ವಿವರಗಳೊಂದಿಗೇ ಚಿತ್ರಿಸುತ್ತ ಬಂದಿರುವ ಶ್ರೀಧರ ಬಳಗಾರರು ಯಾವತ್ತೂ ತಮ್ಮ ಪಾತ್ರಗಳ ಜೀವನೋಪಾಯದ ಹೋರಾಟಗಳೇನಿವೆ, ಅವುಗಳ ವಿವರವನ್ನು ಸುಪುಷ್ಟವಾಗಿ ಕೊಡುತ್ತ ಬಂದಿದ್ದಾರೆ. ಹೀಗೆ ಸಾಕಷ್ಟು ಶ್ರೀಮಂತವಾದ ಸ್ಮೃತಿಗಳಿಂದ ಮತ್ತು ಸೂಕ್ಷ್ಮವಾದ ಗ್ರಹಿಕೆಗಳ ನೆರವಿನಿಂದ ಶ್ರೀಧರ ಬಳಗಾರ ಅವರು ತಮ್ಮ ಇದುವರೆಗಿನ ಕತೆಗಳಲ್ಲಿ ಕಟ್ಟಿಕೊಟ್ಟಿರುವ ಒಂದು ಜಗತ್ತೇನಿದೆ, ಅದು ಇಲ್ಲಿಯೂ ಮುಂದುವರಿದಿದೆ.

‘ಆಡುಕಳ’ ಕಾದಂಬರಿ ಆರಂಭಗೊಳ್ಳುವ ನಾಟಕೀಯ ರೀತಿಯೇ ಉಳಿದೆಲ್ಲ ಅಂಶಗಳನ್ನು ಬದಿಗೆ ಸರಿಸಿ ಸುಮಾರು ಮುವ್ವತ್ತು ಮುವ್ವತ್ತೈದು ಪುಟಗಳಷ್ಟು ಕಾಲ ಓದುಗನನ್ನು ಕಚ್ಚಿ ಹಿಡಿದುಕೊಳ್ಳುವ ಕಸು ಹೊಂದಿರುವ ನಿರೂಪಣೆಯೊಂದಿಗೆ ಸಾಗುತ್ತದೆ. ಅಷ್ಟರಲ್ಲೇ ಅವರು ನಮಗೆ ಇನ್ನೂ ಕೆಲವು ಶಾಕಿಂಗ್ ವಿದ್ಯಮಾನಗಳನ್ನೂ ಕಾಣಿಸಿ ಬೆರಗು ಹುಟ್ಟಿಸುತ್ತಾರೆ ಕೂಡ. ಆದರೆ ದಶರಥನ ‘ಆ ನಸುಕು’ ಕೊನೆಗೂ ನಿರೀಕ್ಷೆಯ ಮಟ್ಟಕ್ಕೇರಬಲ್ಲ ಯಾವ ವಿಚಿತ್ರ ವಿದ್ಯಮಾನವನ್ನೂ ಬಯಲುಗೊಳಿಸದೆ ಟುಸ್ಸೆನಿಸುವಂತೆಯೇ ಮುಂದೆ ಕಾದಂಬರಿಕಾರರು ಕಥಾನಕದ ನಡೆ ಮತ್ತು ವಿದ್ಯಮಾನಗಳನ್ನು ನಿಗೂಢವಾಗಿಸಲು ಪ್ರಯತ್ನಿಸಿ ಹೂಡುವ ತಂತ್ರಗಳೆಲ್ಲ ಅಷ್ಟೇನೂ ಯಶ ಕಾಣುವುದಿಲ್ಲ. ಮೂಲಭೂತವಾಗಿ ಇಲ್ಲಿರುವುದು ಸರಿಯಾದ ವಾರಸುದಾರಿಕೆಯಿಲ್ಲದ ಒಂದು ಚಿನ್ನದಂಥ ಆಸ್ತಿಯನ್ನು ಕಬಳಿಸುವ ದಾಯಾದಿಗಳ, ದುಡ್ಡಿದ್ದವರ ಹುನ್ನಾರಗಳು. ಇದಕ್ಕೆ ಹೂರಣವಾಗಿ ಯಕ್ಷಿ, ದೇವಿ, ಮೈಮೇಲೆ ಬರುವುದು, ಸ್ಥಳದ ಕಾರಣಿಕ ಇತ್ಯಾದಿಗಳ ರಂಗು. ಹಣವುಳ್ಳವರ ಮತ್ತು ಹಕ್ಕಿನವರೆಂದು ಭಾವಿಸಬಹುದಾದ ದಾಯಾದಿಗಳ ಕರಾಮತ್ತು ಒಂದು ಸ್ತರದಲ್ಲಿದ್ದರೆ, ಆ ಭೂಮಿಯನ್ನೇ ಎರಡು ಹೊತ್ತಿನ ಗಂಜಿಗಾಗಿ ಆಶ್ರಯಿಸಿದ ಮಂದಿಗೂ ತಮ್ಮದೇ ತಾಪತ್ರಯಗಳ, ಭವಿಷ್ಯದ ಚಿಂತೆಯಿರುತ್ತದೆ. ಅವರೂ ತಮ್ಮ ಹೊಟ್ಟೆಪಾಡಿನ ಭದ್ರತೆಗೆ ಸಾಧ್ಯವಿರುವ ಕಸರತ್ತು ನಡೆಸಬೇಕಾಗುತ್ತದೆ, ನಡೆಸುತ್ತಾರೆ. ಕಾದಂಬರಿ ಇದನ್ನು ಹೇಳುತ್ತ ತೆರೆದಿಡುವ ಹೊಸ ಸತ್ಯಗಳೇನು ಎಂದರೆ ಉತ್ತರವಿಲ್ಲ.

ಅದೇ ದಾಯಾದಿ ಕಲಹ, ಅದಕ್ಕಿರಬಹುದಾದ ಅಥವಾ ತಗುಲಿಕೊಳ್ಳಬಹುದಾದ ರಾಜಕೀಯ, ಧಾರ್ಮಿಕ ಆಯಾಮಗಳು, ಉತ್ತರಕನ್ನಡದ ದೇಶ-ಕಾಲದ ಹಿನ್ನೆಲೆಯಲ್ಲೇ ಸಾಕಷ್ಟು ಸಲ ಬಂದು ಹೋಗಿದೆ ಎನಿಸುತ್ತದೆ. ಹಾಗೆ ನೋಡಿದರೆ ಈ ಕಾದಂಬರಿ ಓದುವಾಗ ಬೇಡವೆಂದರೂ ನೆನಪಾಗುವ ಅಶೋಕ ಹೆಗಡೆಯವರ ‘ಅಶ್ವಮೇಧ’(2006) ಕಾದಂಬರಿ ಇದಕ್ಕಿಂತ ಹೆಚ್ಚು ಸಮೃದ್ಧವಾಗಿ ಮೂಡಿಬಂದಿದ್ದ ಕಾದಂಬರಿ. ಅದೂ ಅಲ್ಲದೆ, ಇಲ್ಲಿ ಬರುವ ಗಂಗಣ್ಣ ಮದುವೆ ತಯಾರಿ ಹೇಗೆ ಮಾಡುತ್ತಿದ್ದ ಎಂಬ ವಿವರಗಳು, ಮದ್ಗುಣಿ ಡಾಕ್ಟರು ಆಡುಕಳದಿಂದ ಜೇನು ಹೇಗೆ ಸಂಗ್ರಹಿಸುತ್ತಿದ್ದರು ಎನ್ನುವ ವಿವರಗಳು, ಆಡುಕಳದಲ್ಲಿ ಹೇಗೆ ಆಲೆಮನೆ ನಿರ್ಮಿಸಿ ಅದರಲ್ಲಿ ಕಬ್ಬು ಅರೆಯುತ್ತಿದ್ದರು ಎಂಬ ಕುರಿತು ಬರುವ ವಿವರಗಳು, ಮಣ್ಮನೆಯ ಚೌತಿಯ ವಿವರಗಳು, ವಾಸುದೇವನ ಮದುವೆಯ ಸಂದರ್ಭದಲ್ಲಿ ಬರುವ ಗಣಪಯ್ಯ, ಈಶ್ವರಯ್ಯ ಮತ್ತು ಮದುವೆಯ ವಿವರಗಳು ಕಾದಂಬರಿಯ ದೇಹವಾಗಿದ್ದೂ ಕಥಾನಕದ ಕೇಂದ್ರಕ್ಕೆ ಕೂಡಿಕೊಳ್ಳಲು ಕೊಸರಾಟ ಮಾಡಿದಂತಿವೆ. ಚಿನ್ನದಂಥ ಆಸ್ತಿಯೊಂದು ವಾರಸುದಾರಿಕೆ ಕಳೆದುಕೊಳ್ಳುವಂತಾಗುವುದರಲ್ಲಿಯೇ ಇರುವ ನಾಟಕೀಯತೆ ಮತ್ತು ಅದೇ ನಾಂದಿಯಾಗಿ ದಶರಥನ ಆಸ್ತಿಯ ಸುತ್ತ ಹೆಣೆದುಕೊಳ್ಳುವ ಹಲವರ ಆಸೆಯ ಬಲೆ - ಇದೇ ಕೇಂದ್ರವಾಗಿರುತ್ತ ಇಲ್ಲಿನ ಪ್ರಧಾನ ಪಾತ್ರಗಳು ತುಂಬ ಸೀಮಿತ. ಒಂದೆಡೆ ವ್ಯಾವಹಾರಿಕ ಕುತಂತ್ರಗಳಿದ್ದರೆ ಇನ್ನೊಂದೆಡೆ ಕಾಕತಾಳೀಯ ವಿದ್ಯಮಾನಗಳು ಹುಟ್ಟಿಸುವ ಮೌಢ್ಯದ ವಿಜೃಂಭಣೆಗೆ ಫಲವತ್ತಾದ ಪರಿಸರ ಇಲ್ಲಿರುವುದರಿಂದ ಅದೂ ಚಿಗುರಿಕೊಳ್ಳುತ್ತದೆ. ಇಷ್ಟನ್ನು ಬಿಟ್ಟರೆ ಉಳಿದ ಸಂಗತಿಗಳು ಕಥಾನಕದ ಕೇಂದ್ರವನ್ನೇನೂ ಪೊರೆಯುವುದಿಲ್ಲ ಎಂಬ ಸಂಗತಿಯನ್ನು ಗಮನದಲ್ಲಿರಿಸಿಕೊಂಡು ನೋಡಿದರೆ ವಿವರಗಳ ಹೊರೆ ಕಾದಂಬರಿಯ ಬಿಗುವನ್ನು ಕೆಡಿಸಿದಂತೆಯೇ ಅನಿಸುತ್ತದೆ. ಇದಕ್ಕೆ ಕಥಾನಕದಲ್ಲಿ ಹೊಸತೇನೂ ಇಲ್ಲದಿರುವುದು, ಅದು ಅಷ್ಟೊಂದು ಗಟ್ಟಿಯಾಗಿಲ್ಲದೇ ಇರುವುದು ಕಾರಣವಿರಬಹುದು ಅಥವಾ ವಿವರಗಳು ಸೂಕ್ತವಾಗಿಲ್ಲದಿರುವುದೂ ಕಾರಣವಿರಬಹುದು.

ಕಾದಂಬರಿಯ ವಿಶಾಲ ಕ್ಯಾನ್ವಾಸ್ ಸಮುದಾಯವನ್ನು ಒಳಗೊಂಡು ರೂಪುಗೊಳ್ಳುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರೂ ಅದನ್ನು ಸಮರ್ಥವಾಗಿ ಕಥಾನಕದ ನಡೆಯೊಂದಿಗೆ ಮೇಳೈಸಿಕೊಂಡು ಸಾಗುವುದೂ ಇಲ್ಲ. ಇದಕ್ಕೆ ಒಂದು ಕುಟುಂಬದ ಒಳಗಿನ ಆಸ್ತಿ ಜಗಳಕ್ಕೆ ಸಮುದಾಯವನ್ನು ಒಳಗೊಳ್ಳುವ ಪರಿಸರ ಆಡುಕಳದಲ್ಲಿ ಅಥವಾ ಮಣ್ಮನೆಯಲ್ಲಿ ಇಲ್ಲದಿರುವುದೇ ಕಾರಣವೆನ್ನಿಸುತ್ತದೆ. ಇಲ್ಲಿ ಬರುವ ಜೇಡಿಮಣ್ಣಿನ ವ್ಯವಹಾರ ನಡುವಿನಲ್ಲೆಲ್ಲೊ ಊರು ಸುತ್ತುವ ಖಯಾಲಿಗೆ ಬಿದ್ದ ಪರಮನೊಂದಿಗೆ ಅಪ್ರಸ್ತುತವಾಗಿ ಬಿಡುತ್ತದೆ. ಎಷ್ಟೆಂದರೆ, ಆಡುಕಳದಲ್ಲಿ ಜೇಡಿಮಣ್ಣಿನ ವ್ಯವಹಾರ ಸಾಧ್ಯವಿತ್ತೆಂಬುದೇ ಸುಳ್ಳೆಂಬಷ್ಟು. ಗಂಗಣ್ಣ ಕೂಡ ನಡುವಿನಲ್ಲಿ ಸ್ವಲ್ಪ ಕಾಲ ಆಸ್ತಿ ದಕ್ಕಿಸಿಕೊಳ್ಳುವ ತನ್ನ ಪ್ರಯತ್ನಗಳಿಗೆ ರಜಾ ಘೋಷಿಸುತ್ತಾನೆ. ವಾಸುದೇವನ ಮದುವೆಯ ಕತೆಯೂ ಅಷ್ಟೇ, ಕಥಾನಕದ ಪ್ರಧಾನ ಧಾರೆಯಿಂದ ಬೇರೆಯೇ ಆಗಿ ನಿಲ್ಲುತ್ತದೆ. ಔಷಧೀಯ ಸಸ್ಯಗಳಿಗಾಗಿ ಆಡುಕಳದ ಭೂಮಿಯನ್ನು ಬಯಸುವ ಮದ್ಗುಣಿ ಡಾಕ್ಟರು ಕೂಡ ನಡುವಿನಲ್ಲೇ ತಮ್ಮ ಸೀನ್ ಮುಗಿಸಿ ಮಾಯವಾಗುತ್ತಾರೆ. ಪರಭಾರೆಯಾದೀತು ಎಂಬ ಕಾಲ್ಪನಿಕ ಭಯವೇ ಕಾರಣವಾಗಿ ಅದರ ಆಧಾರದ ಮೇಲೆಯೇ ನಡೆಸುವ ತಂತ್ರಗಾರಿಕೆಯಲ್ಲಾದರೂ ತೀರ ಹೊಸತೇ ಆದ ಒಳನೋಟಗಳಾಗಲೀ, ಜೀವನ ದರ್ಶನದ ಕಾಣ್ಕೆಯಾಗಲೀ ಇಲ್ಲ. ತಮ್ಮಂದಿರು ಆಸ್ತಿಯ ಪಾಲು ಕೇಳದಿರಲಿ ಎಂದೇ ಸ್ವತಃ ತಾವು ನೆಲೆನಿಂತ ಸೂರನ್ನು ಕೆಡವಿ, ಕೆಡವಿಕೊಂಡೇ ಆ ತಮ್ಮಂದಿರಲ್ಲೊಬ್ಬನ ಮದುವೆ ನಿಶ್ಚಯಿಸಿ ಇನ್ನೆಲ್ಲೊ ಅವನ ಮದುವೆ ಮಾಡುವ, ಕೆಡವಿದ ಮನೆಯ ಮರುನಿರ್ಮಾಣವನ್ನು ಬೇಕೆಂದೇ ವಿಳಂಬಿಸುವ ತಂತ್ರಗಳೆಲ್ಲ ಚಾಣಕ್ಯತಂತ್ರ ಎಂಬಂತೆ ಚಿತ್ರಿಸಿರುವುದನ್ನು ಕಥಾನಕದ ರಂಜಕತೆಯ ನೆಲೆಯಲ್ಲಿ ಮಾತ್ರ ಒಪ್ಪಿಕೊಳ್ಳಬಹುದು. ಕೊನೆಗೂ ಆಸ್ತಿಯನ್ನು ಯಾವತ್ತೂ ಮಾರುವುದಕ್ಕಾಗಲೀ, ಪರಭಾರೆ ಮಾಡುವುದಕ್ಕಾಗಲೀ ಸಿದ್ಧನಿಲ್ಲದ ದಶರಥನ ಮನೋಗತವನ್ನು ಅರಿಯದೇ ಹುಟ್ಟಿಕೊಂಡ ಕಾಲ್ಪನಿಕ ಭಯವೇ ಸೂರಣ್ಣನ ಚಾಣಕ್ಯತನವನ್ನು ಅರ್ಥಹೀನಗೊಳಿಸುವ ಅಂಶವಾಗಿರುವುದು ಸುಳ್ಳಲ್ಲ.

ಹೆಣ್ಣಾದ ಸಾವಿತ್ರಿ ಗಂಡಾಗಿ ಬದಲಾಗುವುದು ಮತ್ತು ಗಂಡಾದ ದಶರಥನ ಮರ್ಮಾಂಗಕ್ಕೆ ಘಾತವಾಗುವುದು; ಸಾವಿತ್ರಿ, ಬಕಾಲ ನೋಡನೋಡುತ್ತಿರುವಂತೆಯೇ ಯಾವುದೇ ಕುರುಹು ಕೂಡ ಸಿಗದ ರೀತಿಯಲ್ಲಿ ಕಣ್ಮರೆಯಾಗುವುದು ಮತ್ತು ಆಗಾಗ ಆಡುಕಳದಲ್ಲಿ ನಮಗೆ ಗೊತ್ತಿರುವ ಈ ಎಲ್ಲ ಪಾತ್ರಗಳಲ್ಲದೆ ಇನ್ಯಾರೋ ಒಬ್ಬರು ನಿಗೂಢವಾಗಿ ಇವರ ನಡುವೆಯೇ ಓಡಾಡಿಕೊಂಡಿದ್ದಂತೆ ಅನಿಸುವುದು; ಕಳ್ಳರಿಂದ ನಗ್ನಗೊಂಡು ಅಪಮಾನಿತನಾಗುವ ದಶರಥ ಮತ್ತು ಆಲೆಮನೆಯಲ್ಲಿ ಸುರುವಾಗುವ ವಿಚಿತ್ರ ಹುಳುಗಳ ಕಾಟದಿಂದ ಊರವರು ಉಟ್ಟ ಬಟ್ಟೆ ಕಳಚಿಕೊಂಡು ಓಡುವ ಸ್ಥಿತಿಗಿಳಿಯುವಂತಾಗುವುದು - ಮುಂತಾದ ತಂತ್ರಗಳು ಕೊನೆಗೂ ತಥಾಕಥಿತ ಸಂಬಂಧ ಪಡೆದುಕೊಳ್ಳದೇ, ಅಂಥ ಹೊಳಹುಗಳನ್ನು ಕೂಡ ಮೂಡಿಸದೆ ಬಿಡಿಬಿಡಿಯಾಗಿಯೇ ಉಳಿದುಬಿಡುತ್ತವೆ. ಅವು ಕೇವಲ ಕುತೂಹಲ ಉಳಿಸಿಕೊಳ್ಳುವ ತಂತ್ರಗಳಷ್ಟೇ ಆಗಿ ಉಳಿದು ಹೋಗುವುದು ನಿರಾಸೆಯನ್ನೂ ಹುಟ್ಟಿಸುತ್ತದೆ.

ಅತ್ತ ಕಾಮಾಕ್ಷಿ ತೊಡಗುವ ದೇವಿ ಮೈಮೇಲೆ ಬರುವ ಹೊಸ ಕಾಯಕವೂ ಆರಂಭಿಕ ನಿಗೂಢತೆಯ ಭ್ರಮೆ-ಕಲ್ಪನೆ-ವದಂತಿಗಳ ಪೊರೆಯನ್ನೆಲ್ಲಾ ಕಳಚಿಕೊಂಡು ವ್ಯಾವಹಾರಿಕ ಮಟ್ಟದಲ್ಲಿ ನಿಸ್ತೇಜಗೊಂಡು ಬಿಡುತ್ತದೆ. ಹಾಗಾಗಿ ಇಲ್ಲಿಯೂ ಓದುಗನನ್ನು ಅರಳಿಸಬಲ್ಲ, ಸಾರ್ಥಕತೆ ದಕ್ಕಿಸಬಲ್ಲ ಅಂಶಗಳು ಮೈತಳೆಯುವುದಿಲ್ಲ. ಬಯಲು ದೈವೀಕವಾದದ್ದು, ಆಲಯ ಬಂಧನದ್ದು ಎಂಬ ಸರಳ ಸತ್ಯ ಕಾಮಾಕ್ಷಿಗೆ ಹೊಳೆದಂತೆ ಉಳಿದವರಿಗೆ ಹೊಳೆಯದೇ ಹೋಗಲು ದುರಾಸೆಯೇ ಕಾರಣವೆಂದು ಹೇಳುವಂತೆಯೂ ಇಲ್ಲ. ಯಾಕೆಂದರೆ, ಸಿನೆಮಾ ನಟ ಕಾಂತರಾಜುವಿನ ಪ್ರವೇಶಕ್ಕೆ ಯಾರ ಯಾವ ಕುತಂತ್ರವೂ ಕಾರಣವಲ್ಲ ಎನ್ನುವುದು ಒಂದಾದರೆ, ಅವನನ್ನು ಇಲ್ಲಿ ಬಳಸಿಕೊಳ್ಳಲು ಹವಣಿಸಿ ಯಶಸ್ಸು ಪಡೆಯುವ ಏಕೈಕ ವ್ಯಕ್ತಿ ಸೂರಣ್ಣ ಮಾತ್ರ. ಅವನು ಈ ಪರಮಸತ್ಯಕ್ಕೆ ಕೊನೆತನಕ ವಿಮುಖನೇ ಆದುದರಿಂದ ಅವನಿಗೆ ಬಂಧನದಲ್ಲೂ ಬಂಧನದ ಸೋಂಕಿಲ್ಲ. ಅವನು ಕೊನೆಗೂ ಚಕ್ರದಿಂದ ಹೊರಬರುವ ಹವಣಿಕೆಯಲ್ಲೇನೂ ಇಲ್ಲದ ಸ್ಥಿತಿಯಲ್ಲೇ ಕಾದಂಬರಿ ಈ ಮುಗಿಯುತ್ತದೆ.

ಎನ್ ಮನುಚಕ್ರವರ್ತಿಯವರ ‘ಒಂದು ಮಾತು’ ಮುನ್ನುಡಿಯಂತೆ ಕಾದಂಬರಿಯಲ್ಲಿದೆ. ಬ್ಲರ್ಬ್ ಕೂಡ ಹೇಳುವ ಒಂದು ವಾಕ್ಯ ಹೀಗಿದೆ:

"ಇಲ್ಲಿ ಲಾಭಕ್ಕಾಗಿ ಎಲ್ಲರನ್ನು ಬಳಸುವ,
ಅನೇಕರ ದುರಂತಗಳನ್ನು ಹುಟ್ಟಿಸುವವರಿಂದ ಹಿಡಿದು
ಮುಗ್ಧರು, ಅಮಾಯಕರು ಎಲ್ಲರೂ
ಒಂದಲ್ಲ ಒಂದು ರೀತಿ ಬದುಕಿನ ದೊಡ್ಡ ದುರಂತ ಸತ್ಯಗಳನ್ನು
ತಪ್ಪಿಸಿಕೊಳ್ಳಲಾಗುವುದಿಲ್ಲ
ಎಂದು ಪ್ರಕಟಿಸಿರುವ "ಎಪಿಕ್"ಗಳ
ಗುಣವನ್ನು "ಆಡುಕಳ" ತನ್ನ ಗರ್ಭದಲ್ಲೇ ಇಟ್ಟುಕೊಂಡು
ಹಂತ ಹಂತವಾಗಿ
ನಾನಾ ಬಗೆಗಳಲ್ಲಿ
ಅದನ್ನು ಎಲ್ಲರ ಅನುಭವಕ್ಕೆ ಸಂವಹನ ಮಾಡುವ ಶ್ರೇಷ್ಠ ಕೃತಿ.

(ಈ ವಾಕ್ಯವನ್ನು ಕವನದ ಸಾಲುಗಳಂತೆ ತುಂಡು ಮಾಡಿರುವುದು ನಾನು.) "ಇಲ್ಲಿ" ಎಂದು ಸುರುವಾಗುವ ಈ ವಾಕ್ಯ "ಎಂದು ಪ್ರಕಟಿಸಿರುವ ಎಪಿಕ್‌ಗಳ ಗುಣವನ್ನು" ಎಂದು ಮುಂದುವರಿಯುತ್ತದೆ. ಅದುವರೆಗಿನ ಮಾತುಗಳೆಲ್ಲ ಎಪಿಕ್‌ಗಳಿಗೆ ಅನ್ವಯಿಸುವುದು ಎಂದಿಟ್ಟುಕೊಳ್ಳಬಹುದು. ಅಂದರೆ ಅರ್ಥ, ಅನೇಕರ ದುರಂತಗಳನ್ನು ಹುಟ್ಟಿಸುವವರನ್ನೂ ಕೂಡ ಬದುಕಿನ ದೊಡ್ಡ ದುರಂತ ಸತ್ಯಗಳು ಮುಖಾಮುಖಿಯಾಗುತ್ತವೆ ಮತ್ತು ಇದನ್ನು ಎಪಿಕ್ಕುಗಳಲ್ಲಿ ನಾವು ಕಾಣುತ್ತೇವೆ ಎಂದು. ನಿಜ, ಶಂತನು ತನ್ನ ಮಗನಿಗೆ ಮದುವೆ ಮಾಡುವುದನ್ನು ಬಿಟ್ಟು ತಾನೇ ಮುದಿವಯಸ್ಸಿನಲ್ಲಿ ಇನ್ನೊಂದು ಹೆಣ್ಣನ್ನು ಬಯಸಿದ್ದರಿಂದ ಭೀಷ್ಮ ಹಾಗಾದ. ಅದಕ್ಕೂ ಮೊದಲು ಯಯಾತಿ ಕೂಡ ಇದನ್ನೇ ಮಾಡಿದ್ದ. ಭೀಷ್ಮ ಹಿಂದೆ ಸರಿದು ನಿಂತದ್ದೇ ಇಲ್ಲದ ತಾಪತ್ರಯಗಳಿಗೆ ಕಾರಣವಾಗುವಂತಾಯಿತು. ದೃತರಾಷ್ಟ್ರನ ಕುರುಡು ಮತ್ತು ಪಾಂಡುವಿನ ದುಡುಕು ಮಾಡಿದ ಅವಾಂತರಗಳೆಲ್ಲ ನಮಗೆ ಗೊತ್ತು. ಕೊನೆಗೆ ಧುರ್ಯೋಧನನ ದುರಾಸೆ ಮಹಾಯುದ್ಧಕ್ಕೆ ಕಾರಣವಾಯಿತು ಮಾತ್ರವಲ್ಲ ಅವನು ತನ್ನದೇ ನಾಶದೊಂದಿಗೆ ಉಳಿದ ಎಲ್ಲರ ನಾಶಕ್ಕೂ ಕಾರಣನಾದ. ಅತ್ತ ಕೈಕೇಯಿ ಮಾಡಿದ್ದು ಭರತನಿಗೂ ಸುಖ ತರಲಿಲ್ಲ, ರಾಮನಿಗೂ ಸುಖ ತರಲಿಲ್ಲ. ಶ್ರೀಧರ ಬಳಗಾರರ ‘ಆಡುಕಳ’ ಇದನ್ನೇ ಹಂತ ಹಂತವಾಗಿ, ನಾನಾ ಬಗೆಗಳಲ್ಲಿ ಹೇಳುತ್ತದೆ ಎನ್ನುತ್ತಿದ್ದಾರೆ ಮನು ಚಕ್ರವರ್ತಿಯವರು. ಆದರೆ ಅವರು ಇದನ್ನು ಸಾಧಾರ ವಿವರಿಸುವ ಕಷ್ಟ ತೆಗೆದುಕೊಂಡಿಲ್ಲ.

ಇಲ್ಲಿ ಅನೇಕರ ದುರಂತಗಳನ್ನು ಹುಟ್ಟಿಸುವವರು ಯಾರೆಂಬುದೇ ಸ್ಪಷ್ಟವಿಲ್ಲ. ಅದು ಗಂಗಣ್ಣ ಅಥವಾ ಸೂರಣ್ಣ (ಭವಾನಿ) ಎಂದು ಊಹಿಸಬಹುದಾದರೂ ಅವರು ಯಾವ ದೊಡ್ಡ ದುರಂತ ಸತ್ಯಕ್ಕೆ ಮುಖಾಮುಖಿಯಾಗುವುದೂ ಕಾದಂಬರಿಯ ಚೌಕಟ್ಟಿನಲ್ಲಿ ಕಾಣುವುದಿಲ್ಲ. ಭವಾನಿ ಕಣ್ಣು ಕಳೆದುಕೊಳ್ಳುವುದನ್ನು ಕೂಡ ಅಂಥ ದುರಂತಕ್ಕೆ ಸಮೀಕರಿಸುವುದು ಕಷ್ಟ. ಇವರಿಗೆ ಗಂಡು ಮಕ್ಕಳಿಲ್ಲ ಮತ್ತು ಭವಾನಿಯ ಅಂಧತ್ವ ಧೃತರಾಷ್ಟ್ರ-ಗಾಂಧಾರಿಯರ ಕುರುಡುತನದಲ್ಲಿ ಪಾಲುದಾರಿಕೆಯನ್ನೇನೂ ಬಯಸುತ್ತಿಲ್ಲ. ಸೂರಣ್ಣ ಮತ್ತು ಭವಾನಿ ಇದನ್ನು ತೊಡಗಿದ್ದು ತಮ್ಮಂದಿರ ಮದುವೆ, ಆಸ್ತಿಯ ಪಾಲು ಇತ್ಯಾದಿ ಪ್ರಶ್ನೆಗಳೇಳುವ ಮುನ್ನವೆ ತಮ್ಮ ಹೆಣ್ಣುಮಕ್ಕಳ ಮದುವೆ ಸಾಂಗೋಪಾಂಗವಾಗಿ ಸಾಗುವುದಕ್ಕೆ ಅಗತ್ಯವಾದ ‘ನಾಲ್ಕು ಕಾಸು’ ಗಂಟುಕಟ್ಟಬೇಕು ಎಂಬುದಷ್ಟೇ. ಅದಕ್ಕೆ ಯಾವುದೇ ತೊಡಕು ಎದುರಾಗುವುದಿಲ್ಲ. ಇಲ್ಲಿ ಕುರುಡು ಯಾರ ಕಣ್ಣನ್ನೂ ತೆರೆಸುವುದಿಲ್ಲ ಎನ್ನುವುದು ಬಹಳ ಮುಖ್ಯವಾದ ಅಂಶ. ಕೊನೆಗೂ ದಶರಥ "ಉತ್ತರಕ್ಕೆ ಹೋಗಿದ್ದಾನೆ" ಎಂಬ ಹೊಸಸುಳ್ಳಿನಿಂದಲೇ ತಾನು ಕಟ್ಟಿದ ಸುಳ್ಳಿನಕೋಟೆಯನ್ನು ರಕ್ಷಿಸುವುದರಲ್ಲೇ ವ್ಯಸ್ತನಾಗಿರುವ ಸೂರಣ್ಣ ಯಾವುದೇ ದುರಂತಕ್ಕೆ ಮುಖಾಮುಖಿಯಾದ ಹಳಹಳಿಕೆಯಲ್ಲಿರುವಂತೆ ಅಥವಾ ತನ್ನ ಕೃತ್ಯಕ್ಕೆ ನಾಚಿಕೊಂಡಂತೆ ಕಾಣಿಸುವುದಿಲ್ಲ. ದಶರಥನ ವೈರಾಗ್ಯ ಕೂಡ ಪಲಾಯನದ ಲಕ್ಷಣಗಳಿಂದ ಮುಕ್ತವಾಗಿಲ್ಲ ಎನ್ನುವುದು ಸುಳ್ಳಲ್ಲ.

ಆಡುಕಳದ ವಿದ್ಯಮಾನಗಳು ಸಾಮುದಾಯಿಕವಾಗಿ ಅಥವ ಪರಿಸರ ಇತ್ಯಾದಿ ನೆಲೆಯಲ್ಲಿ ಗಹನವಾದ ಆಯಾಮವನ್ನು ಹೊಂದಿವೆ ಎನಿಸುವ ಅಂಶಗಳು ಕಾದಂಬರಿಯಲ್ಲಿ ಕಾಣಿಸಿಕೊಂಡರೂ ಅವು ಒಂದು ಹಂತದ ಆಚೆ ಬೆಳೆದು ನಿಲ್ಲುವುದಿಲ್ಲ. ಮಠ, ಪುಢಾರಿ, ಸಿನೆಮಾ ನಟನ ಆಸಕ್ತಿ ಯಾವುದೂ ಇಂಥ ಆಯಾಮಗಳನ್ನು ಒದಗಿಸಿಕೊಡುವಲ್ಲಿ ಸಹಕಾರಿಯಾಗುವುದಿಲ್ಲ.

ಪುಟ 178ರಲ್ಲಿ "ಸೂರಣ್ಣನ ಉಂಡಾಡಿತನಕ್ಕೆ ಜಾತ್ರೆ ನೆಪವಾಯಿತು. ಮಾವನ ಮನೆ ಎನ್ನುತ್ತ ಅವನು ಹೊರಟುಹೋದ." ಎಂಬ ವಾಕ್ಯ ಸೂರಣ್ಣನ ಪಾತ್ರಕ್ಕೆ ಹೊಂದದ ಒಂದು ವಾಕ್ಯ. ಬಹುಷಃ ಅದು ವಾಸುದೇವ ಆಗಬೇಕು. ಆದರೆ ಅವನು ಉಂಡಾಡಿಯೇನೂ ಆಗಿರಲಿಲ್ಲ. ಉಂಡಾಡಿಯಾಗಿದ್ದವ ಪರಮ. ಆದರೆ ಅವಿವಾಹಿತನಾದ ಅವನಿಗೆಲ್ಲಿಯ ಮಾವ!

No comments: