Thursday, August 7, 2014

ಎಸ್ ದಿವಾಕರ್ ಸಂದರ್ಶನ: ಭಾಗ-3

12. ನಿಮ್ಮ ಅನೇಕ ಕತೆಗಳಲ್ಲಿ ಸ್ಥಾಯಿಭಾವವಾಗಿ ಕಂಡುಬರುವುದು ಬದುಕು ಒಂದು ಬಗೆಯಲ್ಲಿ ನಿಂತ ನೀರಾಗಿಬಿಟ್ಟಂತಿರುವ ಸ್ಥಿತಿ. ಇಂಥ ಸ್ಥಿತಿಯನ್ನು ಕಥಾನಕದ ನೆರವಿದ್ದರೂ, ವಿವರಗಳಲ್ಲಿ ಕಟ್ಟಿಕೊಡುವುದು ತೀರ ಪ್ರಯಾಸಕರವಾದ ಕೌಶಲ. ನೀವೇ ಅನುವಾದಿಸಿರುವ ರಷ್ಯನ್ ಲೇಖಕ ಇವಾನ್ ಬುನಿನ್ನ 'ಹಳ್ಳಿ' ಕಾದಂಬರಿಯಲ್ಲಿ ಕೂಡ ಇಂಥವೇ ವಿವರಗಳಿವೆ. ಯಾರನ್ನೋ ಕಾಯುತ್ತಿರುವಾಗ, ತೀರ ಅಹಿತಕರ ಪರಿಸ್ಥಿತಿಯಲ್ಲಿ ನಿದ್ದೆ ಬಾರದ ಒಂದು ರಾತ್ರಿಯನ್ನು ಕಳೆಯುವಾಗ, ನಿರ್ಜನವಾದ ಹಾದಿಯಲ್ಲಿ ಸಾಗುತ್ತಿರುವ ಒಂದು ಕೊನೆಯಿಲ್ಲದ ಪಯಣದ ವಿವರಗಳಲ್ಲಿ ಓದುಗನ ಮನಸ್ಸಿನ ಮೇಲೆಯೇ ನೇರವಾಗಿ ಬರೆಯುತ್ತಿರುವಂತಿರುತ್ತದೆ ಅದೆಲ್ಲ. ಇಂಥದ್ದರ ಅನುವಾದ ಇನ್ನೂ ಕ್ಲಿಷ್ಟಕರವಾದ ಪ್ರಯಾಸ ಅನಿಸುವುದಿಲ್ಲವೆ? ಈ ಬಗೆಯ ಬರವಣಿಗೆಯ ಪಕ್ವತೆಯನ್ನು ಒಬ್ಬ ಬರಹಗಾರ ಸಾಧಿಸುವುದು ಹೇಗೆ?

ನಾವು ಬೆಳೆದ ಪರಿಸರ, ನಮ್ಮ ಮನೋಧರ್ಮ, ನಮ್ಮ ಆಶಯ, ಇತ್ಯಾದಿ ನಮ್ಮ ಬರವಣಿಗೆಯ ಮೇಲೂ ಪ್ರಭಾವ ಬೀರುತ್ತವೆ. ನನ್ನ ಕತೆಗಳಲ್ಲಿರುವ ಸ್ಥಾಯೀಭಾವಕ್ಕೆ ನನ್ನ ಬಾಲ್ಯದ ಬದುಕೂ ತಕ್ಕಮಟ್ಟಿಗೆ ಕಾರಣವಾಗಿರಬಹುದು. ಅಂಥ ಅನುಭವವನ್ನು ಓದುಗನಿಗೂ ತೀವ್ರ್ರವಾಗಿ ತಟ್ಟುವಂತೆ ಬರೆಯುವುದು ಸುಲಭವಲ್ಲ. ಕಾಫ್ಕನ ಕತೆ, ಕಾದಂಬರಿಗಳಲ್ಲಿರುವುದು ಒಂದು ಬಗೆಯ ಸ್ಥಾಯೀಭಾವವೇ ಅಲ್ಲವೆ? ನನಗಂತೂ ಕತೆ ಬರೆಯುವಾಗ, ಅನುವಾದಿಸುವಾಗ ಒಂದು ತರದ ಹಿಂಸೆಯೇ ಆಗುತ್ತದೆ. ಎಷ್ಟೋ ಬಾರಿ ಬರೆದದ್ದೊಂದೂ ತೃಪ್ತಿ ಕೊಡುವುದಿಲ್ಲ. ಹಾಗಾಗಿ ಮತ್ತೆ ಮತ್ತೆ ಬರೆಯಬೇಕು; ಬರೆದದ್ದು ಸಾರ್ಥಕವಾಗುವ ಮುಹೂರ್ತಕ್ಕಾಗಿ ಕಾಯಬೇಕು. ಒಮ್ಮೆ ಗೋಪಾಲಕೃಷ್ಣ ಅಡಿಗರು ಬಹುಮಟ್ಟಿಗೆ ತಾವು ಬರೆದು ಮುಗಿಸಿದ್ದ ಒಂದು ಕವನಕ್ಕೆ ಅರ್ಥಪೂರ್ಣವಾದೊಂದು ಪದವೋ ರೂಪಕವೋ ಬೇಕೆಂದೂ, ಅದು ಹೊಳೆಯುತ್ತಿಲ್ಲವೆಂದೂ ನಿರಾಶರಾಗಿದ್ದುಂಟು. ಅವರಿಗೆ ಬೇಕಾದ್ದು ನಿಜಕ್ಕೂ ಸಿಕ್ಕಿದಾಗ ಒಂದು ವರ್ಷವೇ ಆಗಿಹೋಗಿತ್ತು!

13. ಪ್ರಯೋಗಶೀಲತೆ ಮತ್ತು ಚಮತ್ಕಾರದಂಥ ನಿರೂಪಣೆ ಒದಗಿಸುವ ಅಪೂರ್ವ ಒಳನೋಟ ನಿಮ್ಮನ್ನು ತುಂಬ ಸೆಳೆದಂತೆ ಕಂಡುಬರುತ್ತದೆ. ಜೀವಂತಿಕೆಯ ಕುರುಹಾಗಿ ಇದು ಒಬ್ಬ ಸಾಹಿತಿಯಲ್ಲಿರಲೇಬೇಕಾದ ಗುಣ ಎಂದಾದರೆ, ಜಗತ್ತಿನ ಶ್ರೇಷ್ಠ ಕತೆಗಾರ/ಕಾದಂಬರಿಕಾರರಲ್ಲಿ ನೀವಿದನ್ನು ಹೇಗೆ ಕಂಡಿರುವಿರಿ? ಇದೇ ಮಿತಿಯಾಗುವ ಅಪಾಯದ ಬಗ್ಗೆ ಸಾಹಿತಿಯು ಹೇಗೆ ಎಚ್ಚರವಹಿಸಬಹುದು?

ಒಂದು ಸಾಹಿತ್ಯ ನಿಂತನೀರಿನ ಸ್ಥಿತಿಯನ್ನು ತಲಪಿದಾಗ ಇನ್ನೊಂದು ಸ್ಥಿತಿಗೆ ಹೊರಳಬಹುದಾದ ಒಂದು ಲಂಘನಕ್ಕೆ ಸಿದ್ಧವಾಗಬೇಕು. ಸಾಹಿತ್ಯದಲ್ಲಿ ಪ್ರಯೋಗಶೀಲತೆಯನ್ನು ನಾನು ಮಾನ್ಯಮಾಡುವುದು ಈ ದೃಷ್ಟಿಯಿಂದ. ಬಿ.ಎಂ.ಶ್ರೀ. ಅವರ 'ಇಂಗ್ಲಿಷ್ ಗೀತಗಳು', ಅಡಿಗರ 'ಚಂಡೆ ಮದ್ದಳೆ' ಆಯಾ ಕಾಲಕ್ಕೆ ಹೊಸ ಪ್ರಯೋಗಗಳೂ ಆಗಿದ್ದುವೆಂಬುದನ್ನು ನಾವು ಮರೆಯಬಾರದು. ಪ್ರಗತಿಶೀಲರ ಕಾದಂಬರಿಗಳಿಗೂ ನವ್ಯರ ಕಾದಂಬರಿಗಳಿಗೂ ನಡುವೆ ಇರುವ ವ್ಯತ್ಯಾಸ ಏನನ್ನು ಸೂಚಿಸುತ್ತದೆ? ಎಂ.ಎಸ್.ಕೆ. ಪ್ರಭು ಅವರ ಕತೆಗಳಿಗೂ ಮುನ್ನ ಅಂಥ ಕತೆಗಳೇ ಕನ್ನಡದಲ್ಲಿರಲಿಲ್ಲ. ಅಥವಾ ಪ್ರಯೋಗಶೀಲತೆಯಿಲ್ಲದಿದ್ದರೆ ಅವರಿಂದ ಅಂಥ ಕತೆಗಳೇ ಸೃಷ್ಟಿಯಾಗುತ್ತಿರಲಿಲ್ಲ. ಪ್ರಯೋಗಶೀಲತೆಯ ಉದ್ದೇಶ ಸಾಹಿತ್ಯ ಪ್ರಕಾರಗಳಿಗೆ ಇರುವ ಸಾಧ್ಯತೆಯನ್ನು ಹಿಗ್ಗಿಸುವುದು, ಚರ್ವಿತಚರ್ವಣವೆನಿಸುವ ನಿರೂಪಣಾ ಶೈಲಿಯನ್ನೋ ವಾಸ್ತವಕ್ಕೆ ಸಂಬಂಧಿಸಿದ ರೂಢಿಗತ ಅಭಿಪ್ರಾಯವನ್ನೋ ಒಡೆಯುವುದು, 'ನಡೆದು ಬಂದ ದಾರಿ ಕಡೆಗೆ' ಯಾಕೆ ತಿರುಗಬಾರದೆನ್ನುವುದನ್ನು ಸಕಾರಾತ್ಮಕವಾಗಿ ತೋರಿಸಿಕೊಡುವುದು. ದೇವನೂರು ಮಹಾದೇವರ 'ಕುಸುಮಬಾಲೆ' ಕನ್ನಡದ ಅಪೂರ್ವ ಕಾದಂಬರಿಯಷ್ಟೆ. ಅದೂ ಪ್ರಯೋಗಾತ್ಮಕವಾಗಿದೆಯಲ್ಲವೆ? ಜಗತ್ತಿನ ಸಾಹಿತ್ಯದಲ್ಲಿ ಲಾರೆನ್ಸ್ ಸ್ಟರ್ನನ 'ಟ್ರಿಸ್ಟ್ರಮ್ ಶ್ಯಾಂಡಿ', ಜೇಮ್ಸ್ ಜಾಯ್ಸನ 'ಯೂಲಿಸಿಸ್', ಫ್ಲ್ಯಾನ್ ಓ'ಬ್ರಯನ್ನನ 'ಅಟ್ ಸ್ವಿಮ್-ಟೂ-ಬಡ್ಸರ್', ಇತಾಲೊ ಕಲ್ವಿನೋನ 'ಇಫ್ ಆನ್ ಎ ವಿಂಟಸರ್ ನೈಟ್ ಟ್ರಾವೆಲರ್', ಡೇವಿಡ್ ಗ್ರಾಸ್ಮನ್ನನ 'ಲವ್ ಸೀ ಅಂಡರ್', ಹ್ಯಾನ್ ಶಾವೋಗಾಂಗ್ನ 'ಎ ಡಿಕ್ಷ್ನರಿ ಆಫ್ ಮಾಚಿಯಾವೊ' - ಹೀಗೆ ಅನೇಕಾನೇಕ ಪ್ರಯೋಗಾತ್ಮಕ ಕೃತಿಗಳನ್ನು ಹೆಸರಿಸಿಯೇನು.

14. ನೀವು ಬೇಂದ್ರೆ ಕವಿಗೋಷ್ಠಿಯನ್ನು ಅಚ್ಚುಕಟ್ಟಾಗಿ ಆಯೋಜಿಸಿ ನಿರ್ವಹಿಸಿದವರು. ಬೇರೆ ಬೇರೆ ಕ್ಷೇತ್ರಗಳ ಪ್ರಸಿದ್ಧರು ಬೇಂದ್ರೆಯವರ ಒಂದೆರಡು ಕವನಗಳನ್ನ ವಾಚಿಸುವಂತೆ ಮಾಡಿ ಅದನ್ನು ಸಾರ್ಥಕವೂ ಸಂಪನ್ನವೂ ಆಗುವಂತೆ ಮಾಡಿದವರು. ಕಿ.ರಂ. ತರದವರು ಕವನಗಳನ್ನ ವಾಚಿಸಿ ವಿಶ್ಲೇಷಿಸಿ ಕಾವ್ಯಾನುಸಂಧಾನಕ್ಕೆ ಹೊಸ ತಲೆಮಾರನ್ನು ಸಜ್ಜುಗೊಳಿಸಿದ್ದರು ಎಂದರೂ ತಪ್ಪಾಗುವುದಿಲ್ಲ. ಆದರೆ, ಇವತ್ತಿನ ಅನೇಕ ಸಮ್ಮೇಳನ ಇತ್ಯಾದಿಗಳ ಕವಿಗೋಷ್ಠಿಗಳಲ್ಲಿ ತಮ್ಮ ಕವನ ಓದಲು ಕಾದು ಕೂತಿರುವ ಮತ್ತು ಅದನ್ನು ಬಿಟ್ಟು ಬೇರೆ ಯಾರ ಕವನವನ್ನೂ ಕೇಳಿಸಿಕೊಳ್ಳಲಾರದ ಮಂದಿ ಮಾತ್ರ ಇರುತ್ತಾರೆ ಎಂದು ಕೊಂಚ ತಮಾಶೆಯಾಗಿ ಹೇಳುತ್ತಾರೆ. ಮಾಯವಾಗುತ್ತಿರುವಂತೆ ಕಾಣುವ ಕಾವ್ಯಾಭಿರುಚಿ ಬಗ್ಗೆ ನಿಮಗೇನೆನಿಸುತ್ತೆ?

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನನಗೊಮ್ಮೆ ಬೇಂದ್ರೆಯಂಥ ಕವಿಯನ್ನು ಯಾಕೆ ಸಾಹಿತ್ಯಪ್ರಿಯರಷ್ಟೇ ಓದಬೇಕು, ಇತರರೂ ಓದಬಹುದಲ್ಲ ಎನ್ನಿಸಿತು. ಅಂಥದೊಂದು ಕಾರ್ಯಕ್ರಮ ಏರ್ಪಡಿಸಿದರೆ ಜನರು ಬರಬಹುದೆ? ವಿವಿಧ ಕ್ಷೇತ್ರಗಳಲ್ಲಿ ಪ್ರಖ್ಯಾತರಾದವರಿಂದ ಕಾವ್ಯವಾಚನ ಮಾಡಿಸಿದರೆ ಹೇಗೆ? ಮಿತ್ರರ ಜೊತೆ ಹೀಗೆಲ್ಲ ಯೋಚಿಸಿದಾಗ ರೂಪುಗೊಂಡ ಕಾರ್ಯಕ್ರಮ 'ನಾದಲೀಲೆ'. ಸುಮಾರು ಮೂರೂವರೆ ಗಂಟೆ ನಡೆದ ಆ ಕಾರ್ಯಕ್ರಮ ಎಷ್ಟು ಯಶಸ್ವಿಯಾಯಿತೆಂದರೆ, ಸಭೆಯಿಂದ ಒಬ್ಬರೂ ಹೊರಗೆ ಹೋಗಲಿಲ್ಲ. ಒಟ್ಟಿನಲ್ಲಿ ಅದೊಂದು ಪ್ರಯೋಗ. ಆದರೆ ಜನರಲ್ಲಿಂದು ಕಾವ್ಯಾಭಿರುಚಿ ಮಾಯವಾಗುತ್ತಿದೆ. ಕವಿಯೊಬ್ಬನ ಕವನಗಳನ್ನು ಇತರ ಕವಿಗಳಷ್ಟೇ ಓದಬೇಕಾದ ಪರಿಸ್ಥಿತಿ. ಯಾಕೆ ಹೀಗೆ? ನನಗೆ ಅರ್ಥವಾಗುತ್ತಿಲ್ಲ.

15. ಪತ್ರಿಕೆಗಳಲ್ಲಿ ಸಂಪಾದಕರಾಗಿ ಕೆಲಸ ಮಾಡಿದವರು ನೀವು. ನಿಮಗೇ ಒಂದು ಪತ್ರಿಕೆ ಸುರುಮಾಡಬೇಕು ಅಂತ ಯಾವತ್ತೂ ಅನಿಸಿದ್ದಿಲ್ಲವೆ?

ಒಂದು ಕಾಲದಲ್ಲಿ ಅನ್ನಿಸಿತ್ತು. ವಿವೇಕ ಶಾನಭಾಗ, ಎಂಎಸ್. ಶ್ರೀರಾಂ ಮತ್ತು ನಾನು ಕೂಡಿಕೊಂಡು 'ಮಾಯಾದರ್ಪಣ' ಎಂಬ ಹೆಸರಿನ ತ್ರೈಮಾಸಿಕವನ್ನು ಹೊರತರಬೇಕೆಂದಿದ್ದೆವು. ಉದ್ದೇಶ ಸಾಹಿತ್ಯದಲ್ಲಿ ಹೊಸ ದನಿಗಳನ್ನು, ಹೊಸ ಅನುಭವಗಳನ್ನು, ಹೊಸ ಪ್ರಯೋಗಗಳನ್ನು ಗುರುತಿಸಿ ಪ್ರಕಟಿಸುವುದು. ಮೊದಲ ಸಂಚಿಕೆಗಾಗಿ ಯಶವಂತ ಚಿತ್ತಾಲರು ಬರೆದು ಕೊಟ್ಟ ಒಂದು 'ಲಬಸಾ' (ಲಯಬದ್ಧ ಸಾಲುಗಳು) ನಿಜಕ್ಕೂ ಹೊಸ ಬಗೆಯ ಕವನವಾಗಿತ್ತು. ಆದರೆ ನಾನು ಮದರಾಸಿಗೆ ಹೋದೆ. ಅವರೂ ಎಲ್ಲೆಲ್ಲೋ ಚದುರಿದರು. ಮುಂದೆ ವಿವೇಕ ಶಾನಭಾಗ 'ದೇಶ ಕಾಲ' ಪತ್ರಿಕೆಯನ್ನು ಹೊರ ತಂದಾಗ ನನ್ನ ಹಳೆಯ ಕನಸು ಸ್ವಲ್ಪಮಟ್ಟಿಗೆ ನನಸಾಯಿತೆಂದು ಸಂತೋಷಪಟ್ಟೆ.

16. ಯಾವುದೇ ಒಂದು ನಿರ್ದಿಷ್ಟ ಕಾಲಘಟ್ಟದ ಬರಹಗಾರನನ್ನು ಗಮನಿಸಿದರೂ ಆತ ತನ್ನದೇ ಆದ ಒಂದು ವಿಶಿಷ್ಟವಾದ ಶೈಲಿಯನ್ನು ರೂಢಿಸಿಕೊಂಡಿರುವುದನ್ನು ಕಾಣುತ್ತೇವೆ. ನವ್ಯರಲ್ಲೇ ಚಿತ್ತಾಲ, ತೇಜಸ್ವಿ, ಲಂಕೇಶ್, ಯು.ಆರ್.ಅನಂತಮೂರ್ತಿ, ಶಾಂತಿನಾಥ ದೇಸಾಯಿ ಮುಂತಾಗಿ ಪ್ರತಿಯೊಬ್ಬರೂ ವಿಶಿಷ್ಟರೇ. ಇದನ್ನು ನೀವು ಎಲ್ಲೋ ಒಂದು ಕಡೆ `ಟೋನ್' ಎಂದು ವಿವರಿಸಿದ್ದ ನೆನಪು. ದಯವಿಟ್ಟು ಅದನ್ನೇ ಇಲ್ಲಿ ಹೊಸ ಬರಹಗಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಸ್ವಲ್ಪ ವಿವರಿಸಬಹುದೇ? [ನಿಮ್ಮದೇ ಒಂದು ಲೇಖನದಲ್ಲಿ ನೀವು ಕೋಟ್ ಮಾಡಿರುವುದನ್ನು ಇಲ್ಲಿ ನಿಮಗೆ ನೆನಪಿಸಲು ಬಯಸುತ್ತೇನೆ: ವಿ.ಸೀ. ಅವರು ಠಾಕೂರರ ಗದ್ಯದಲ್ಲಿ "ಒಂದು ಅಖಂಡ ವಾಕ್ಯವೃಂದದಲ್ಲಿನ ವಾಗ್ವಿಲಾಸ ಸಮುಚ್ಚಯ ಧೋರಣೆಯಲ್ಲಿಯೊ (Cumulative effect) ಅಥವಾ ಸಾದೃಶ್ಯ ವೈದೃಶ್ಯಗಳ ಭೂಮಿಕೆಯುಳ್ಳದ್ದಾಗಿಯೊ (Antithesis) ಪೇರಿಸಿದಂತಿರುತ್ತದೆ. ಆ ಮಾತು, ರಚನೆ, ಅರ್ಥದ, ಉಸಿರಿನ ಆ ವಿನ್ಯಾಸ ಆ ವಿರಾಮ ನಡೆಗಳನ್ನು ಮೊದಲಿದ್ದಂತೆಯೇ ಉಳಿಸಿಕೊಳ್ಳದಿದ್ದರೆ ಅವರ ಧ್ವನಿ ಕೇಳುವುದಿಲ್ಲ. ಅಚ್ಚ ಕನ್ನಡದ ಮಾತಿನ ಬಳಕೆ ಒಂದೆರಡೆಡೆ ಅರ್ಥವನ್ನು ಹೆಚ್ಚು ಸುಲಭಮಾಡಬಹುದಿತ್ತು. ಆದರೆ ಆ ಧಾಟಿಗೆ ಅದು ಪೇಲವವಾಗುತ್ತದೆ. ಇಷ್ಟರಮೇಲೆ ಇಲ್ಲಿ ಕೊಡುತ್ತಿರುವುದು ಬರಿಯ ಕನ್ನಡದ ಸರಳ ಅನುವಾದವಲ್ಲ, ಭಾವಾನುವಾದವನ್ನಲ್ಲ. ಠಾಕೂರರ ಬಗೆಯ ಲೇಖನಗಳನ್ನು. ಆದ್ದರಿಂದ ಅಲ್ಲಿ ಕೇಳಿಸಬೇಕಾದುದು ಬಹುವಾಗಿ ಅವರ ವಾಣಿ" ಎಂದಿದ್ದಾರೆ.]

ಕಥೆ, ಕಾದಂಬರಿಗಳಲ್ಲಿ (ಅಷ್ಟೇಕೆ, ಕಾವ್ಯ, ನಾಟಕ, ಪ್ರಬಂಧಗಳಲ್ಲಿ ಕೂಡ) 'ಟೋನ್' ಎಂಬುದೊಂದು ಇರುತ್ತದೆ. ನನಗೆ ತಿಳಿದ ಮಟ್ಟಿಗೆ 'ಟೋನ್' ಎಂದರೆ 'ಧ್ವನಿ' ಅಲ್ಲ. ಸದ್ಯಕ್ಕೆ ಅದನ್ನು 'ಧಾಟಿ' ಎಂದು ಇಟ್ಟುಕೊಳ್ಳೋಣ. ಕೃತಿಯೊಂದರಲ್ಲಿ (ಓದುಗನ ಬಗ್ಗೆ) ಅದರ ಲೇಖಕನಿಗಿರಬಹುದಾದ ನಿಲುವು, ವಿಚಾರ ವೈಖರಿ, ಮನೋವೃತ್ತಿ, ನೈತಿಕ ದೃಷ್ಟಿ ಮೊದಲಾದುವುಗಳನ್ನು ಯಾವುದು ಪ್ರತಿಫಲಿಸುತ್ತದೋ ಅದೇ ಧಾಟಿ; ವಿಮರ್ಶಕ ಲಯನೆಲ್ ಟ್ರಿಲಿಂಗ್ ಒಂದೆಡೆ ಹೇಳಿರುವಂತೆ ದೃಷ್ಟಿಕೋನ, ನಿರೂಪಣಾ ವಿಧಾನ, ಪಾತ್ರಸೃಷ್ಟಿ, ಕಥಾಸಂವಿಧಾನ, ಆಕೃತಿ, ಕಾಲ, ಕ್ರಿಯಾಕ್ಷೇತ್ರ, ಶೈಲಿ, ಇವೇ ಮೊದಲಾದ ಕಥಾಸಾಹಿತ್ಯದ ತಾಂತ್ರಿಕ ಪರಿಕರಗಳ ಮೂಲಕ ಯಾವುದು ಕಥಾವಸ್ತುವಿನ ಬಗ್ಗೆ ಕತೆಗಾರನಿಗಿರಬಹುದಾದ ನಿಲುವನ್ನು ಪ್ರಕಟಪಡಿಸುವುದೋ ಅದೇ ಧಾಟಿ. ಒಂದು ಕತೆಯ ಧಾಟಿ ಎಂದರೆ ಆ ಕತೆಯನ್ನು ಹೇಳಿರುವ ರೀತಿ; ಅದು ಸೂಚಿಸುವ ಲೇಖಕನ ನಿಲುವು. ಕತೆಯಲ್ಲಿ ಕಣ್ಣಿಗೆ ಹೊಡೆಯುವಂಥ ನಿರೂಪಕನಿಲ್ಲದಿದ್ದರೂ ಅದರಲ್ಲಿ ಒಂದು ಶೈಲಿಯೋ ಲೇಖಕನ ಪ್ರಜ್ಞಾಪೂರ್ವಕ ಅಥವಾ ಅಪ್ರಜ್ಞಾಪೂರ್ವಕ ಉದ್ದೇಶವನ್ನು ಪ್ರಕಟಪಡಿಸುವ ಅವನದೇ ಆದ ವಿಶೇಷ ಸಹಿಯೋ ಇದ್ದೇ ಇರುತ್ತದೆ. ಧ್ವನಿಯ ಏರಿಳಿತ, ಗತಿ, ಲಯ, ವಾಕ್ಯರಚನಾ ವಿಧಾನ - ಇವೆಲ್ಲವೂ ಶಬ್ದಗಳಿಗೆ ಭಾಗಶಃ ಅರ್ಥವನ್ನು ಕೊಡುವ ವಾಹಕಗಳು. ಕಥಾವಸ್ತುವಿನ ಜೊತೆಗೆ ಇವೂ ಕೂಡ ಕತೆಯ 'ವ್ಯಕ್ತಿತ್ವ'ವನ್ನು ರೂಪಿಸುತ್ತವೆ.

ಇವತ್ತು ಟಾಲ್ಸ್ಟಾಯ್, ದೊಸ್ತೊಯೆವ್ಸ್ಕಿ, ಗೊಗೋಲ್, ಮೊದಲಾದವರ ಕೃತಿಗಳು ಮತ್ತೆ ಮತ್ತೆ ಇಂಗ್ಲಿಷಿಗೆ ಅನುವಾದಗೊಳ್ಳುತ್ತಿವೆಯಷ್ಟೆ. ಇದಕ್ಕೆ ಅವು ಸಮಕಾಲೀನ ಭಾಷೆಯಲ್ಲಿರಬೇಕೆಂಬುದಷ್ಟೇ ಕಾರಣವಲ್ಲ. ಹಿಂದಿನ ಅನುವಾದಗಳು ಮೂಲ ಕೃತಿಗಳ ಧಾಟಿಯನ್ನು ಹಿಡಿಯಬೇಕಾದಷ್ಟು ಸಮರ್ಪಕವಾಗಿ ಹಿಡಿದಿಲ್ಲವೆನ್ನುವುದೂ ಒಂದು ಕಾರಣವೇ. ಇಂಥ ಅಭಿಪ್ರಾಯವನ್ನು ವಿ.ಸೀ. ಅಂಥವರೇ ವ್ಯಕ್ತಪಡಿಸಿದ್ದಾರೆನ್ನುವುದು ಸಮಾಧಾನದ ಸಂಗತಿ.

17. ನವ್ಯ ಕನ್ನಡ ಸಾಹಿತ್ಯದ ಯುಗಧರ್ಮಕ್ಕೆ ತೀರ ಮುಂಚಿತವಾಗಿ ಬಂತು, ಅದಕ್ಕಿನ್ನೂ ಇಲ್ಲಿ ಕಾಲ ಪಕ್ವ ಆಗಿರಲಿಲ್ಲ ಎನ್ನುವ ಮಾತು ಕೇಳಿಬಂದಿತ್ತು. ಪ್ರಧಾನವಾಗಿ ಲಂಕೇಶ್ ಮತ್ತು ತೇಜಸ್ವಿ ತಮ್ಮದೇ ಆದ ರೀತಿಗಳಲ್ಲಿ ನವ್ಯವನ್ನೇ ಇನ್ನೊಂದು ಮಜಲಿಗೆ ವಿಸ್ತರಿಸಿಕೊಂಡು ಬರೆದರೂ ನವ್ಯವೂ ಕೂಡ ಕನ್ನಡಕ್ಕೆ ಕೊಡಬಹುದಾಗಿದ್ದ ಮಟ್ಟದ ಕೊಡುಗೆಯನ್ನು ಕೊಡುವ ಮೊದಲೇ ಬಂಡಾಯ ಮತ್ತು ಆನಂತರದ ದಲಿತ ಪಂಥಗಳ ಕವಲುಗಳು ಹುಟ್ಟಿಕೊಂಡು ಅತ್ತ ನವೋದಯ, ನವ್ಯಗಳಷ್ಟೂ ಸಮೃದ್ಧವಾಗದೆ ಇದ್ದರೂ ನವ್ಯವನ್ನು ನಿರಾಕರಿಸುವ ಮನಸ್ಥಿತಿಗೆ ಹೊರಳಿಕೊಂಡಿದ್ದರಿಂದ ಕನ್ನಡಕ್ಕೆ ನಷ್ಟವಾಯಿತು ಎಂಬ ಮಾತೂ ಇದೆ. ವಿಶ್ವಸಾಹಿತ್ಯದ ಅಧ್ಯಯನ ಕೈಗೊಂಡವರು ನೀವು. ಈ ತರ್ಕ ನಿಮಗೆ ಹೇಗೆ ಕಾಣಿಸುತ್ತದೆ?

ನವ್ಯ ನಮ್ಮ ಸಾಹಿತ್ಯಕ್ಕೆ ತೀರ ಮುಂಚಿತವಾಗಿ ಬಂತು ಎಂಬ ವಾದ ಸರಿಯಲ್ಲ.
ಮನೋಧರ್ಮವಿರುವಂತೆ ಕಾಲಧರ್ಮವೂ ಒಂದಿದೆಯಷ್ಟೆ. ಯಾರು ಏನೇ ಹೇಳಲಿ, ನಮ್ಮ ಸಮಾಜ ಸದಾ ಚಲನಶೀಲವಾಗಿಯೇ ಇರುತ್ತದೆ. ಈ ಚಲನಶೀಲತೆಯನ್ನು ಕೆಲವರು ಪ್ರತಿಭಾವಂತರು ತತ್‌ಕ್ಷಣ ಗುರುತಿಸಬಲ್ಲರು.
ಎಸ್ರಾ ಪೌಂಡನ ಒಂದು ಕವಿತೆಯ ಸಾಲು 'ದಿ ಏಜ್ ಡಿಮ್ಯಾಂಡೆಡ್ ಅನ್ ಇಮೇಜ್ ಆಫ್ ಇಟ್ಸ್ ಆಕ್ಸೆಲರೇಟೆಡ್ ಗ್ರಿಮೇಸ್' ಎಂದಿದೆ. ಕಾಲಧರ್ಮಕ್ಕೆ ತಕ್ಕಂತೆ ಸಾಹಿತ್ಯವೂ ಬದಲಾಗುವುದೆನ್ನುವುದಕ್ಕೆ ನಮ್ಮಲ್ಲೇ ಅನೇಕ ನಿದರ್ಶನಗಳಿವೆ. ಭಾಷೆಯ ಉಪಯೋಗದಲ್ಲಿ, ಅನುಭವವನ್ನು ಪಡಿಮೂಡಿಸುವುದರಲ್ಲಿ, ಭಾವತೀವ್ರತೆಯಲ್ಲಿ, ವೈಚಾರಿಕತೆಯ ಬೀಸಿನಲ್ಲಿ ನವ್ಯರ ಸಾಧನೆಯನ್ನು ಕಡೆಗಣಿಸುವಂತಿಲ್ಲ. ಸಾಹಿತ್ಯದ ಅಸಲು ಕಸಬಿನಲ್ಲಿ ತೊಡಗಿಕೊಂಡಿದ್ದ ಆ ಕಾಲದ ಲೇಖಕರಿಗೆ ಬೇರೆ ಯಾವ ಪ್ರಲೋಭನೆಗಳೂ ಇರಲಿಲ್ಲವೆಂಬುದನ್ನು ಗಮನಿಸಬೇಕು. ಇವತ್ತು ನವ್ಯರನ್ನು ಖಂಡಿಸುವವರ ಸಂಖ್ಯೆ ಹೆಚ್ಚಿರಬಹುದು. ಆದರೆ ಒಂದು ಸಾಹಿತ್ಯ ಕೃತಿ ಎಷ್ಟೋ ಕಾಲದ ನಂತರ ಕೂಡ ಹೆಚ್ಚು ಪ್ರಸ್ತುತವಾಗಬಹುದು, ಅರ್ಥಪೂರ್ಣವಾಗಬಹುದು ಎಂಬುದನ್ನು ಮರೆಯುವಂತಿಲ್ಲ.

18. ಅನ್ಯಭಾಷೆಯ ಸಾಹಿತ್ಯ ಎನ್ನುವಾಗ ಅದರಲ್ಲಿ ಇತರ ಭಾರತೀಯ ಭಾಷೆಯ ಸಾಹಿತ್ಯವೂ, ಭಾರತೀಯ ಇಂಗ್ಲಿಷ್ ಸಾಹಿತ್ಯವೂ ಬಂತು. ಇಂಗ್ಲಿಷ್ ಭಾಷೆಯಲ್ಲಿ ಲಭ್ಯ ಸಾಹಿತ್ಯವನ್ನಷ್ಟೇ ಗಣನೆಗೆ ತೆಗೆದುಕೊಂಡರೂ ಅದರಲ್ಲಿ ಭಾರತೀಯ ಇಂಗ್ಲಿಷ್ ಸಾಹಿತ್ಯ ಬರುತ್ತದೆ. ಭಾರತೀಯ ಇಂಗ್ಲಿಷ್ ಸಾಹಿತ್ಯದ ಬಗ್ಗೆ ಈಚೆಗೆ ಮತ್ತೆ ಚರ್ಚೆಗಳು ಸುರುವಾಗಿವೆ. ಭಾರತೀಯ ಇಂಗ್ಲೀಷ್ ಸಾಹಿತ್ಯ ಮತ್ತು ಭಾರತೀಯ ಭಾಷಾ ಸಾಹಿತ್ಯದ ನಡುವೆ ನಿರ್ದಿಷ್ಟ ಅಂತರವಿರುವುದು ಎದ್ದು ಕಾಣುತ್ತದೆ. ತನ್ನ ಓದುಗ ಯಾರು ಎಂಬ ದೃಷ್ಟಿಕೋನದಿಂದಲೇ ಉಂಟಾದ ವ್ಯತ್ಯಾಸ, ಬುಕರ್ನಂಥ ಪ್ರತಿಷ್ಠಿತ ಪ್ರಶಸ್ತಿ ಗಿಟ್ಟಿಸಿಕೊಳ್ಳುವ ಉದ್ದೇಶದಿಂದಲೇ ಉಂಟಾದ ವ್ಯತ್ಯಾಸ ಎಂದೆಲ್ಲ ಇದನ್ನು ಬೇರೆ ಬೇರೆಯವರು ವಿಶ್ಲೇಷಿಸಿದ್ದಾರೆ. ಆದರೆ ಇದಕ್ಕಿರಬಹುದಾದ ಕಾರಣಗಳನ್ನು ನೀವು ಹೇಗೆ ವಿಶ್ಲೇಷಿಸುತ್ತೀರಿ? ಇವು ಸಾಹಿತ್ಯಿಕ ಕಾರಣಗಳೆನ್ನುತ್ತೀರಾ? ಹಾಗಲ್ಲವಾದಲ್ಲಿ, ಅಸಾಹಿತ್ಯಿಕ/ಸಾಹಿತ್ಯೇತರ ಪ್ರಭಾವಗಳು ಸೃಜನಶೀಲ ಸಾಹಿತ್ಯಕ್ಕೆ ಅಪೇಕ್ಷಣೀಯವೆ?

ಇಂಗ್ಲಿಷಿಗೆ ಅಂತರರಾಷ್ಟ್ರೀಯ ಭಾಷೆಯೆಂಬ ಹೆಗ್ಗಳಿಕೆಯಿದೆ. ಆ ಭಾಷೆಯಲ್ಲಿ ಬರೆದ ಸಾಹಿತ್ಯ ಕೃತಿಯನ್ನು ಜಗತ್ತಿಡೀ ಪರಿಗಣಿಸುತ್ತದೆಯೆಂಬ ಭ್ರಮೆ ಕೆಲವು ಲೇಖಕರಿಗೇ ಉಂಟು. ಭಾರತೀಯ ಇಂಗ್ಲಿಷ್ ಸಾಹಿತ್ಯ ವಲಯದಲ್ಲೂ ಇಂಥದೊಂದು ಭ್ರಮೆಯಿರುವುದಕ್ಕೆ ಕಾರಣ, ಇಂಗ್ಲಿಷಿನಲ್ಲಿ ಬರೆದ ಸಾಹಿತ್ಯಕ್ಕೆ ನಮ್ಮ ಮಾಧ್ಯಮಗಳು ನೀಡುವ ಅಭೂತಪೂರ್ವ ಪ್ರಚಾರ. ಕನ್ನಡ ಲೇಖಕರಿಗೆ ಇಂಥ ಸೌಲಭ್ಯವಿಲ್ಲ. ಆದರೆ ಅವರಿಗೆ ತಾವು ಬೆಳೆದ ಪರಿಸರವನ್ನು ಕುರಿತು, ತಮ್ಮ ಅಭಿವ್ಯಕ್ತಿಯನ್ನು ಸಹಜಗೊಳಿಸುವ ಮತ್ತು ಸುಗಮಗೊಳಿಸುವ ಭಾಷೆಯ ಕುರಿತು, ತಮ್ಮ ಓದುಗರನ್ನು ಕುರಿತು ಸ್ಪಷ್ಟವಾದ ತಿಳಿವಳಿಕೆಯಿರುತ್ತದೆ. ಬಹುಮಂದಿ ಭಾರತೀಯ ಇಂಗ್ಲಿಷ್ ಬರಹಗಾರರಿಗೆ ಇಂಥ ತಿಳಿವಳಿಕೆಯಿರುತ್ತದೆಯೆಂದು ಹೇಳಲಾಗದು. ಅವರ ಗಮನವೇನಿದ್ದರೂ ಅಖಿಲ ಭಾರತ ಖ್ಯಾತಿಯತ್ತ. ಅವರಿಗೆ ಕನ್ನಡ ಲೇಖಕರಿಗಿರುವಂಥ ಒಂದು ನಿರ್ದಿಷ್ಟ ಓದುಗ ವರ್ಗ ಇರುವುದಿಲ್ಲ. ಆದರೂ ಮಾಧ್ಯಮಗಳ ಬೆಂಬಲದಿಂದಾಗಿ ಇವತ್ತು ಇಂಗ್ಲಿಷಿನಲ್ಲಿ ಬರೆಯುವ ಒಬ್ಬ ಕಳಪೆ ಲೇಖಕನಿಗೆ ಸಿಕ್ಕುವಷ್ಟು ಪ್ರಚಾರ ಕನ್ನಡದ ಒಬ್ಬ ಅತ್ಯುತ್ತಮ ಲೇಖಕನಿಗೆ ಕೂಡ ಸಿಕ್ಕುವುದಿಲ್ಲ. ಇದು ವಸ್ತುಸ್ಥಿತಿ. ಇದಕ್ಕೂ ಸೃಜನಶೀಲತೆಗೂ ಏನೂ ಸಂಬಂಧವಿಲ್ಲವಷ್ಟೆ.

19. ಒಂದು ಕಾಲಮಾನಕ್ಕೆ ಹೋಲಿಸಿದಲ್ಲಿ ಇವತ್ತು ಕನ್ನಡದ ಪರಿಸರದಲ್ಲಿಯೂ ಸರಕಾರೀ ಮತ್ತು ಖಾಸಗೀ ಎಂದೆಲ್ಲ ಲೆಕ್ಕವಿಲ್ಲದಷ್ಟು ಪ್ರಶಸ್ತಿ, ಪುರಸ್ಕಾರ, ಸ್ಪರ್ಧೆ ಇವೆ. ಪ್ರಚಾರಯುಗದಲ್ಲೇ ಬದುಕುತ್ತಿದ್ದೇವೆ ಎನಿಸುವಂಥ ಸಂದರ್ಭದಲ್ಲಿ ಒಬ್ಬ ಲೇಖಕ ತನ್ನ ಬರವಣಿಗೆಗೆ ಅಗತ್ಯವಾದ ವ್ಯಕ್ತಿಗತ ಖಾಸಗಿತನ, ಕಾಲಾವಕಾಶ ಮತ್ತು ಸ್ಪೇಸ್ ಎಂದು ನಾವಿವತ್ತು ಏನನ್ನು ಹೇಳುತ್ತೇವೋ ಅದನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎನ್ನುವ ಮಾತನ್ನೂ ನಾನು ಸಾಹಿತಿಗಳ ಬಾಯಲ್ಲಿ ಕೇಳಿರುವುದುಂಟು. ಅದೇ ಕಾಲಕ್ಕೆ ಇನ್ನೂ ಕೆಲವರ ಪ್ರಚಾರಪ್ರಿಯತೆ, ಸದಾ ಚಾಲ್ತಿಯಲ್ಲಿರುವುದಕ್ಕೆ ನಡೆಸುವ ಪ್ರಯತ್ನಗಳೂ ಸಾಗುತ್ತಿರುತ್ತವೆ. ಈ ಸದಾ ಚಾಲ್ತಿಯಲ್ಲಿರುವುದು ಎನ್ನುವುದರ ಪರಿಕಲ್ಪನೆ ಇವತ್ತು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು - ಅದು ಟೀವಿಯಿಂದ ಹಿಡಿದು ಸಾಮಾಜಿಕ ತಾಣ, ಬ್ಲಾಗು, ವೆಬ್ ಮ್ಯಾಗ್ಝೀನ್ ತನಕ, ಒಂದಿಲ್ಲೊಂದು ಪ್ರಶಸ್ತಿ, ಪುರಸ್ಕಾರ, ಸನ್ಮಾನ ಪಡೆಯುವುದರಿಂದ ಹಿಡಿದು ಪುಂಖಾನುಪುಂಖ ಪುಸ್ತಕ ಪ್ರಕಟಿಸುವುದು, ಅಲ್ಲಲ್ಲಿ ರಾಜಕಾರಣಿಗಳಂತೆ ಸಭೆ-ಸಮಾರಂಭಗಳಲ್ಲಿ, ವಿಚಾರ ಸಂಕಿರಣ, ಶಿಬಿರಗಳಲ್ಲಿ ಭಾಷಣ-ಸಿದ್ಧಾಂತ ಮಂಡಿಸುವವರೆಗೆ ವಿಭಿನ್ನವಾಗಿರುತ್ತದೆ. ಸರಿಸುಮಾರು ಮೂರು ತಲೆಮಾರುಗಳ ಸಾಹಿತಿಗಳ ರೀತಿನೀತಿ ಕಂಡವರು ನೀವು. ಮಾಧ್ಯಮ ಪ್ರಣೀತ ಸಾಹಿತ್ಯ ಮತ್ತು ಸಾಹಿತಿಯೇ ನಿಜವಾಗುತ್ತಿರುವ, ಕ್ರಮೇಣ ಅದೇ ಇತಿಹಾಸವಾಗುವ ತಮಾಷೆಯಲ್ಲದ ತಮಾಷೆಯ ಬಗ್ಗೆ ನಿಮಗೇನನಿಸುತ್ತದೆ?

ನಾವು ಬರೆಯತೊಡಗಿದ ಕಾಲದಲ್ಲಿ ಇಷ್ಟು ಪ್ರಶಸ್ತಿಗಳಿರಲಿಲ್ಲ. ಹಾಗಾಗಿ ಬರಹಗಾರನಿಗೆ ಬರೆಯುವುದೊಂದನ್ನು ಬಿಟ್ಟು ಬೇರೆ ಫಲಾಪೇಕ್ಷೆ ಇರುತ್ತಿರಲಿಲ್ಲ. ಇವತ್ತಿನ ಪರಿಸ್ಥಿತಿ ತೀರ ಭಿನ್ನ. ಪ್ರಶಸ್ತಿಗಳ ಸಂಖ್ಯೆ ಹೆಚ್ಚಿದಂತೆ ಅವುಗಳನ್ನು ಪಡೆಯುವುದಕ್ಕಾಗಿ ಲಾಬಿ ಮಾಡುವವರೂ ಇದ್ದಾರೆಂದು ಕೇಳಿದ್ದೇನೆ. ಪ್ರಶಸ್ತಿಗಳಿಗಾಗಿಯೇ ಬರೆಯುವವರೂ, ಮಾಧ್ಯಮಗಳ ಕೃಪಾಕಟಾಕ್ಷಕ್ಕಾಗಿ ಹಂಬಲಿಸುವವರೂ ಇದ್ದಾರು. ನನಗೆ ಅಷ್ಟಾಗಿ ಪ್ರಶಸ್ತಿಗಳು ಸಿಕ್ಕಿಲ್ಲವಾದ ಕಾರಣ ಆ ಬಗ್ಗೆ ಹೆಚ್ಚೇನೂ ಹೇಳಲಾರೆ. ಇಷ್ಟಕ್ಕೂ ಸಾಹಿತ್ಯ ರಚನೆ, ಅದರ ಓದು, ಅದರ ವಿಮರ್ಶೆ, ಎಲ್ಲವೂ ತೀರ ವ್ಯಕ್ತಿನಿಷ್ಠವಾದದ್ದು. ಅದು ವಿಜ್ಞಾನದಲ್ಲಿ ನಡೆಯುವ ಸಾಧನೆಗಳಂತೆ ವಸ್ತುನಿಷ್ಠವಲ್ಲ. ಬಹುಶಃ ಇದೇ ಕಾರಣದಿಂದಲೇ ನಾನ್ನೂರು ವರ್ಷಕ್ಕೂ ಹಿಂದಿನ ಶೇಕ್ಸ್ ಪಿಯರ್ ಇಂದಿಗೂ ನಮಗೆ ಪ್ರಸ್ತುತನಾಗುತ್ತಾನೆ. ಅದೇ ವಿಜ್ಞಾನಕ್ಕೆ ಬಂದರೆ ಐಸಾಕ್ ನ್ಯೂಟನ್ನನ ಸಂಶೋಧನೆ ಓಬೀರಾಯನ ಕಾಲದ್ದೆನಿಸುತ್ತದೆ. ಹೀಗಿರುವಾಗ ಲೇಖಕನೊಬ್ಬ ವ್ಯಕ್ತಿನಿಷ್ಠವಾಗಿ ಕಟ್ಟಿಕೊಡುವ ಒಂದು ಸಾಹಿತ್ಯ ಕೃತಿಯನ್ನು - ವಿಮರ್ಶಕನನ್ನು ಹೊರತುಪಡಿಸಿ - ಬೇರೆ ಯಾರು ತಾನೆ ವಸ್ತುನಿಷ್ಠವಾಗಿ ಅಳೆಯಬಲ್ಲರು? ಅದೂ ಪ್ರಜಾಪ್ರಭುತ್ವದ ಈ ಯುಗದಲ್ಲಿ? ವಿಪರ್ಯಾಸವೆಂದರೆ ಇವತ್ತಿನ ಮಾಧ್ಯಮಗಳ ಭರಾಟೆಯಲ್ಲಿ ಯಾವುದು ಸಾಚ, ಯಾವುದು ಮೋಸ ಎಂದು ಸುಲಭವಾಗಿ ತಿಳಿಯಲಾಗದ್ದು.

No comments: