Sunday, August 3, 2014

ಎಲ್ಲಿ ಜಾರಿತೋ ಮನವೂ....ಎಲ್ಲೆ ಮೀರಿತೋ...

ಈಕೆ ತಾಯಿ. ಆದರೆ ಗೆಳತಿಯಂತೆ ತನ್ನ ಹದಿಹರಯದ ಮಗ ಮತ್ತು ಮಗಳ ಜೊತೆ ಬೆರೆಯುತ್ತಾಳೆ. ಪ್ರೇಮ-ಪ್ರೀತಿಯ ಮದುವೆಯ ಕತೆಯನ್ನು ಈಗಲೂ ಎಂಬಂತೆ ಅನುಭವಿಸುತ್ತಾಳೆ. ಈಕೆ ಪತ್ರ, ಡೈರಿ, ಅಲ್ಲಲ್ಲಿ ಈಕೆ ಬರೆದಿಟ್ಟ ಟಿಪ್ಪಣಿಗಳು ಮತ್ತು ಕೆಲವು ವಿಶಿಷ್ಟ ಎಂದು ಈಗಷ್ಟೇ ಅನಿಸುತ್ತಿರುವ ನೆನಪುಗಳಲ್ಲಿ ಇಲ್ಲಿ ಮಗ ನಮಗೆ ಕಟ್ಟಿಕೊಡುತ್ತಿರುವ ಚಿತ್ರದಲ್ಲಿ ಒಬ್ಬ ತಾಯಿ, ಒಬ್ಬ ಗೆಳತಿ, ಒಬ್ಬ ಪ್ರೇಮಿ ಇರುವಂತೆಯೇ ಬೇರೆ ಬೇರೆ ಮುಖಗಳ ಕೊಲಾಜ್ ಇದೆ.

ಇದು ಜೆರ್ರಿ ಪಿಂಟೊ ಅವರ EM and the Big HOOM ಕಾದಂಬರಿ. 2013 ರ ಹಿಂದೂ ಲಿಟರರಿ ಅವಾರ್ಡ್ ಪುರಸ್ಕೃತ ಕಾದಂಬರಿಯಾದ ಇದು ಅಲೆಪ್ ಪ್ರಕಟನೆ. ಆದಿಲ್ ಜಸ್ಸುವಾಲ ಅವರ ಅಮೂಲ್ಯ ಲೇಖನಗಳನ್ನು ಒಂದು ಗೂಡಿಸಿ, Maps for a Mortal Moon; Essays and Entertainments; Prose by Adil Jussawalla ಹೆಸರಿನಲ್ಲಿ ಪ್ರಕಟಿಸಿರುವ ಪರ್ತಕರ್ತ ಜೆರ್ರಿ ಪಿಂಟೊ ಒಬ್ಬ ಒಳ್ಳೆಯ ಕವಿ ಕೂಡ. ಪ್ರಸ್ತುತ ಕಾದಂಬರಿ ಸಾಕಷ್ಟು ಆತ್ಮಚರಿತ್ರಾತ್ಮಕ ಅಂಶಗಳನ್ನು ಹೊಂದಿದೆ ಎಂದೂ ಹೇಳಿದವರಿದ್ದಾರೆ. ಕಾದಂಬರಿಯ ವಸ್ತು ಮತ್ತು ಅದರ ನಿರೂಪಣೆಯ ಹದ ಗಮನಿಸಿದರೆ ಯಾರಿಗಾದರೂ ಹಾಗೆ ಅನಿಸದೇ ಇರದು. ಆದರೆ ಕಾದಂಬರಿ ಎಂದು ಹೇಳಿಕೊಂಡು ಹೊರಬಂದ ಮೇಲೆ ಇಂಥ ಅಂಶಗಳು ವಿಧಿಸುವ ಮಿತಿಗಳೇ ಹೆಚ್ಚು ಎನ್ನುವುದನ್ನು ಅಲ್ಲಗಳೆಯಲಾಗದು ಕೂಡ, ಇರಲಿ.

ಇಲ್ಲಿ ಕಡು ಬಡತನದ ಕುಟುಂಬದಲ್ಲಿ ಸಂಸಾರದ ಹೊರೆಹೊತ್ತ ಹದಿಹರಯದ ಹುಡುಗಿಯ ದುಡಿಮೆಯ ಬವಣೆಗಳಿವೆ. ಇವಳಿಗೆ ಕಲಿಯ ಬೇಕೆಂಬ ಆಸೆಯಿತ್ತೆ? ಗೊತ್ತಿಲ್ಲ. ಆಸೆಯಿದ್ದರೂ ಅದನ್ನು ಆ ಕುಟುಂಬ ಆಧರಿಸುವ ಸ್ಥಿತಿಯಲ್ಲಿರಲೇ ಇಲ್ಲ. ದುಡಿಮೆ ಅನಿವಾರ್ಯವಾಯಿತು. ಅಲ್ಲಿ, ಹೊರಗಿನ ಜಗತ್ತಿನಲ್ಲಿ ಹೆಣ್ಣೊಬ್ಬಳು ಸಲೀಸಾಗಿ ಹೋಗಿ ದುಡಿದು ತರುವಂತೇನೂ ಇರಲಿಲ್ಲ. ಅಲ್ಲಿ ರಾಜಕೀಯವಿತ್ತು, ಲೈಂಗಿಕತೆಯಿತ್ತು, ಜಿದ್ದಾಜಿದ್ದಿಯಿತ್ತು, ಸಾಮರ್ಥ್ಯದ ಮೊನಚುಗತ್ತಿಯ ಮೇಲೆ ಹತ್ತಿ ಏಗಬೇಕಿತ್ತು. ಅಷ್ಟಕ್ಕೆಲ್ಲ ತಯಾರಾಗಿದ್ದ ಹುಡುಗಿಯಲ್ಲ ಅದು. ಆದರೆ ಬದುಕು ಕೇಳಬೇಕಲ್ಲ? ಮನೆಯಲ್ಲಿ ಗಂಜಿ ಬೇಯಬೇಕಲ್ಲ? ಬದುಕಿನ ನಿಷ್ಠುರ ನಿಯಮಗಳು ಎಂಥ ಮೃದುತ್ವವನ್ನೂ ಮೆಟ್ಟಲು, ಹೊಸಕಿ ಹಾಕಲು ಹಿಂಜರಿಯದ ಹಾಗಿರುತ್ತವೆ. ಆ ಹೆಜ್ಜೆ ಗುರುತುಗಳು ಸುಮ್ಮನೇ ಅಳಿಸಿ ಹೋಗುತ್ತವೆಯೆ - ಕಾಲಕ್ರಮೇಣ?

ಆಗಲೇ ಪ್ರೇಮ ಕಾಲಿಗೆ ಎಡವಿತೆ? ಬಿಗ್ ಹೂಂ ಬದುಕಿಗೆ ಬಂದಿದ್ದು ಒಂದು ಬಗೆಯ ಆಕಸ್ಮಿಕ. ಒಂದು ಬಗೆಯ ಅನಿವಾರ್ಯ. ಒಂದು ಬಗೆಯ ಗೊಂದಲ ಹುಟ್ಟಿಸಿ. ಆದರೆ ಆಯ್ಕೆಗಳಾದರೂ ಎಲ್ಲಿದ್ದವು ಆಕೆಗೆ? ಮದುವೆ ಕೂಡ ಆಕೆಗೆ ಲಕ್ಷುರಿ ಎಂದು ಅವಳ ಸಂಬಳದ ಮೇಲೆಯೇ ನಿಂತ ಆ ಬಡ ಕುಟುಂಬ ಮೌನದಲ್ಲಿ ಬೇಡ ಮಗಳೇ ನಿನಗೆ ಮದುವೆ ಎನ್ನುತ್ತಿದ್ದರೆ ಪ್ರಕಟವಾಗಿ ಅಯ್ಯೊ, ನಿನ್ನ ಮದುವೆ ಆಗಲೇಬೇಕಲ್ಲ ಎನ್ನುತ್ತಿತ್ತು. ದುರಂತ ಯಾವುದು ಎಂದರೆ ಈ ಹುಡುಗಿಗೆ ಎಲ್ಲವೂ ಅರ್ಥವಾಗುತ್ತಿತ್ತಲ್ಲ, ಅದೇ.

ಮನುಷ್ಯನಿಗೆ ಎಷ್ಟು ಕಡಿಮೆ ಅರ್ಥವಾದರೆ ಅಷ್ಟೂ ಒಳ್ಳೆಯದು. ತನ್ನ ಸಂಬಳದ ಮೇಲೆಯೇ ಅವಲಂಬಿಸಿ ನಿಂತ ಮುದಿಯರ ಈ ಕುಟುಂಬದ ಮೇಲಿನ ಮಮಕಾರ ಮತ್ತು ಅದೇ ತನ್ನ ಭವಿಷ್ಯಕ್ಕೆ ತೊಡಕಾಗಿ ನಿಂತ ಬಗ್ಗೆ ಸಿಟ್ಟು, ಈ ಬಗೆಯ ಒಂದು ಬದುಕು ತನ್ನ ತಟ್ಟೆಯಲ್ಲಿರುವುದರ ಬಗ್ಗೆ ಅಸಹ್ಯ, ಇದಕ್ಕೆಲ್ಲ ಯಾರು ಕಾರಣ, ಇದಕ್ಕೆಲ್ಲ ಯಾರು ಹೊಣೆ, ತನಗೇ ಯಾಕೆ ಹೀಗಾಕಬೇಕು ಎಂಬ ಪ್ರಶ್ನೆಗೆ ಇಲ್ಲದ ಉತ್ತರಕ್ಕಾಗಿ ತಡಕಾಡುವುದರಲ್ಲೇ ವಯಸ್ಸಾಗಿ ಬಿಡುವ ಘೋರ.

ನಾನು ಮದುವೆಯಾಗಿ ಹೋದರೆ ನೀವೇನು ಮಾಡುತ್ತೀರಿ?
ಅದನ್ನು ಆಮೇಲೆ ನೋಡಿದರಾಯಿತು.

ಬಿಗ್ ಹೂಂ ನಿಜಕ್ಕೂ ಪ್ರೀತಿಸುತ್ತಾನ, ವರದಕ್ಷಿಣೆ ಬೇಡ ಎಂದ, ನಿಜ. ಆದರೆ ಹೆತ್ತವರು ಕೇಳಿದರೆ ಅದು ಇನ್ನು ಮುಂದೆ ತಿಂಗಳಾ ತಿಂಗಳಾ ಬರುತ್ತೆ ಎಂದು ಅವರಿಗೆ ಹೇಳುತ್ತೇನೆ ಎಂದನಲ್ಲ. ಅಂದರೆ ಈ ಮದುವೆಯ ಅರ್ಥ ತನ್ನ ಸಂಬಳ ಇನ್ನುಮುಂದೆ ತನ್ನದಲ್ಲ ಎಂದೇ? ಮದುವೆ, ಅದರ ಆರ್ಥಿಕ ಮುಖ ಹೀಗೆ. ನಂತರ ಅದರ ಲೈಂಗಿಕ ಮುಖವೂ ಒಂದಿದೆ. ಆದರೆ ಅದೇ ಪ್ರೀತಿಯೆ? ಹುಟ್ಟುವ ಮಕ್ಕಳು ಪ್ರೀತಿಗೆ ಹುಟ್ಟುತ್ತವೆಯೆ ಅಥವಾ ಪ್ರೀತಿಯ ಹೆಸರಿನಲ್ಲಿ, ದಾಂಪತ್ಯದ ಹೆಸರಿನಲ್ಲಿ ಸಹಜವೆನ್ನಿಸಿಕೊಳ್ಳುವ ತೆವಲಿಗಾ? ಆ ಮಕ್ಕಳೇಕೆ ಬರೇ ಪ್ರೀತಿಯನ್ನು ನೆನಪಿಸದೇ ಇನ್ನೇನೇನೋ ನೆನಪಿಸಬೇಕು? ತಾನೂ ಮಗಳಾಗಿದ್ದೆನಲ್ಲ, ಅಮ್ಮನಿಗೇನು ಕೊಟ್ಟೆ? ಅವಳೇಕೆ ನನ್ನನ್ನು ಬಳಸಿಕೊಂಡಳು, ನನ್ನ ಸಂಬಳಕ್ಕೆ ಆಸೆ ಪಟ್ಟಳು. ಕೊನೆಗೂ ಇದೆಲ್ಲ ಅಷ್ಟೇಯೆ? ಯಾಕೆ ಮನುಷ್ಯನಿಗೆ ಇಷ್ಟೊಂದು ಗೊಂದಲಗಳಾಗಬೇಕು!

ಪ್ರೀತಿ, ಭಾವನೆ, ಕರುಣೆ, ಸ್ನೇಹ, ಸದ್ಭಾವ ಎಲ್ಲ ಇರುವಲ್ಲಿಯೇ ಹಣ, ಕೊರತೆ, ಹೋರಾಟ, ಜಿದ್ದು, ಕಾಮ, ಹಠ, ಅಹಂಕಾರ, ಸಣ್ಣತನ, ಕುತಂತ್ರ ಕೂಡಾ ಇದೆ. ಇಲ್ಲಿ ಒಳ್ಳೆಯವರಾಗಿರಲು ಎಲ್ಲರಿಗೂ ಇಷ್ಟವಿದೆ. ಆದರೆ ಯಾಕೆ ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ ಎನ್ನುವುದೇ ಕುತೂಹಲಕರವಾದ ಪ್ರಶ್ನೆ. ನಮ್ಮ ಸಿಟ್ಟು, ನಮ್ಮ ಅಹಂಕಾರ, ನಮ್ಮ ಕ್ರೌರ್ಯ ಮತ್ತು ನಮ್ಮ ಹುಚ್ಚುತನಗಳಿಗೆ ಒಂದು ಕಾರಣ ಪರಂಪರೆಯೇ ಇದೆ. ಅದು ಏಕಾಎಕಿ ನಮ್ಮ ರಕ್ತದೊಳಗೆ ನುಸುಳಿದ್ದಾದರೂ ಎಲ್ಲಿಂದ? ನಾವೇಕೆ ಕೆಟ್ಟವರಾಗಿ ಬಿಟ್ಟೆವು ಈ ಜಗತ್ತಿನಲ್ಲಿ? ನಾನೇಕೆ ನಿಮಗೆ ಕೊನೆತನಕ ಒಳ್ಳೆಯವನೇ ಆಗಿ ಉಳಿಯುವುದು ಸಾಧ್ಯವಾಗಲಿಲ್ಲ? ನಾನು ನಿಜಕ್ಕೂ ಅದನ್ನೇ ಬಯಸಿರಲಿಲ್ಲವೆ, ಗುಟ್ಟಾಗಿ? ಆದರೆ ಅಲ್ಲಿ ಸಂಘರ್ಷವಿದೆ. ಒಳ್ಳೆಯವರಾಗಿ ಉಳಿಯುವುದು, ಬದುಕು ನಮ್ಮೊಂದಿಗೆ ನಿಷ್ಠುರವಾಗಿದ್ದ ಬಗ್ಗೆ ಅರಿವಿದ್ದೂ ಅದನ್ನು ಮರೆಯುವುದು, ಮರೆತು ನಗುವುದು, ಒಳ್ಳೆಯವರಾಗಿಯೇ ಉಳಿಯುವುದು ಎಂದರೆ ಒಳಗಿನ ಸಂಘರ್ಷವನ್ನು, ಗೊಂದಲವನ್ನು, ದ್ವಂದ್ವವನ್ನು ಮೆಟ್ಟಿ ನಿಲ್ಲುವುದು. ಆದರೆ ಅದೆಲ್ಲ ಒಂದು ಕಡೆ ಮೆಟ್ಟಿದರೆ ಇನ್ನೆಲ್ಲೊ ಒಂದು ಕಡೆ ತೂತು ಕೊರೆದುಕೊಂಡು ಲೀಕ್ ಆಗದೇ ಇರುತ್ತದೆಯೆ? ಹುಚ್ಚಿನ ವಾಸನೆ ಇಲ್ಲೆಲ್ಲೊ ಬಂದಂತಾಗುತ್ತದೆ.

ಇದು ಸ್ಥಿತಿ.

ಈ ತಾಯಿ, ಪ್ರೇಮಿ, ಮಗಳು, ಗೆಳತಿಯ ಬಗ್ಗೆ ಹೇಳುತ್ತಿರುವಾಗ ಆಕೆ ಜೆಜೆ ಹಾಸ್ಪಿಟಲಿನ ಸೈಕಿಯಾಟ್ರಿ ವಾರ್ಡಿನಲ್ಲಿ ಒಬ್ಬ ರೋಗಿಯಾಗಿದ್ದಾಳೆ. ಹೌದು, ಈ ತನಕ ನಿಮಗೆ ವಿವರಿಸುತ್ತಿದ್ದುದು ಒಬ್ಬ ಹುಚ್ಚಿಯ ಬಗ್ಗೆ. ಅವಳು ಒಬ್ಬಳು ಹುಚ್ಚಿ. ಇಲ್ಲೊಂದು ಕಡೆ ಈಕೆಯ ಮಗ ನಮಗೆ ಹೇಳುತ್ತಾನೆ, Mad is an everyday, ordinary word. It is compact. It fits into songs. As the old Hindi film song has it, M-A-D, mad mane paagal. It can become a phrase - `Maddaw-what?' which began life as `Are you mad or what?'. It can be everything you choose it to be: a mad whirl, a mad idea, a mad March day, a mad heiress, a mad mad mad mad world, a mad passion, a mad hatter, a mad dog. But it is different when you have a mad mother. Then the word wakes up from time to time and blinks at you, eyes of fire. But only sometimes, for we used the word casually ourselves, children of a mad mother. There is no automatic gift that arises out of such a circumstance. If sensitivity or gentleness came with such a genetic load, there would be no old people in mental homes.

ಈತ ತನ್ನ ತಾಯಿಯ ಮನೋವೈದ್ಯರ ಬಳಿ ಒಮ್ಮೆ ತನಗೇ ಹುಚ್ಚು ಹಿಡಿಯುವ ಸಾಧ್ಯತೆಯ ಬಗ್ಗೆ, ತನಗೆ ಹುಚ್ಚು ಹಿಡಿಯುವುದು ಸಾಧ್ಯವಾ ಎಂಬ ಬಗ್ಗೆ, ಖಂಡಿತ ಹಿಡಿಯುವುದಿಲ್ಲ ಎಂದು ಖಾತ್ರಿ ನೀಡಬಹುದೇ ಎಂಬ ಬಗ್ಗೆ ಕೇಳಲು ಹೋಗುತ್ತಾನೆ. ಇಷ್ಟೇ, ಹುಚ್ಚು ಹಿಡಿದಿದೆ ಎಂದು ಸರ್ಟಿಫೈ ಮಾಡುವವರು ಇರಬಹುದು, ಹುಚ್ಚು ಇಲ್ಲ ಎಂದು ಸರ್ಟಿಫೈ ಮಾಡುವವರು ಯಾರು? ಅಂಥ ಸರ್ಟಿಫಿಕೇಟು ನಮ್ಮ ಬಳಿ ಇದ್ದಿರುವುದಿಲ್ಲ. ಅಂದ ಮಾತ್ರಕ್ಕೆ ನಾವು ಹುಚ್ಚರಲ್ಲ ಎಂದು ಹೇಳುವುದು.....ಕಷ್ಟ. ನೀನು ಹುಚ್ಚ ಎನ್ನುವವರನ್ನು ನಾವು ಅನುಮಾನಿಸುವವರೆಗೆ ಅವನು ಹುಚ್ಚನಾಗಿರುತ್ತಾನೆ ಎನ್ನುವುದೇ ನಮ್ಮ ಸೇನಿಟಿಗೆ ಸಾಕ್ಷ್ಯ! ಆ ಗೆರೆ ತೆಳ್ಳಗಿದೆ.

ಬುದ್ಧಿಮಾಂದ್ಯ ಮಕ್ಕಳನ್ನು ಹೊಂದಿರುವ ತಾಯಂದಿರು, ಹುಚ್ಚು ಎಂದು ಗೆರೆ ಎಳೆಯಲಾರದ, ಅಲ್ಲ ಎಂದು ಎದೆ ಸೆಟೆಸಿ ಹೇಳಲಾರದ ಮಕ್ಕಳನ್ನು, ಅಕ್ಕಂದಿರನ್ನು, ತಂಗಿಯನ್ನು, ಮಡದಿಯನ್ನು, ಮಗಳನ್ನು ಹೊಂದಿದವರ ಸಂಕಟ, ಅಪಮಾನ, ಅಸಹಾಯಕತೆ, ಕ್ರೌರ್ಯ, ಮನಸ್ಸಿನ ತಲ್ಲಣ ಬಲ್ಲವರೇ ಬಲ್ಲರು. ನಾವು ಇಲ್ಲಿ ಕ್ರೌರ್ಯವಿಲ್ಲದ, ಸಿಟ್ಟಿಲ್ಲದ, ಸಿನಿಕತೆಯಿಲ್ಲದ, ವಿಕ್ಷಿಪ್ತತೆಯಿಲ್ಲದ, ಗರ್ವವಿಲ್ಲದ ಬರೇ ಆದರ್ಶದ ಮೂರ್ತಿಯಂಥ ಒಳ್ಳೆಯ ಮನುಷ್ಯರಾಗಿದ್ದರೆ ಅದು ಕೇವಲ ಬದುಕು ನಮ್ಮನ್ನು ಇರಿಸಿದ ಸಂದರ್ಭದ ಆಶೀರ್ವಾದ, ಸ್ವಂತಕ್ಕೆ ಹೆಮ್ಮೆ ಪಡುವುದಕ್ಕೇನಿದೆ ಅದರಲ್ಲಿ? ಇದರ ಅರಿವಿಲ್ಲದ ಮನುಷ್ಯ ಮಾತ್ರ ಇನ್ನೊಬ್ಬರನ್ನು ವಿಕ್ಷಿಪ್ತ ಎಂದು ಕರೆಯುವ ಉದ್ಧಟತನ ತೋರಿಯಾನು.

ಜೆರ್ರಿ ಪಿಂಟೊ ಇಲ್ಲಿ ಕಟ್ಟಿಕೊಟ್ಟ ಒಂದು ಚಿತ್ರ ಹದವಾಗಿದೆ, ಹೃದ್ಯವಾಗಿದೆ, ಜೀವಂತಿಕೆಯಿಂದಲೂ, ಬರವಣಿಗೆಯ ಕುಸುರಿಯಿಂದಲೂ ನಳನಳಿಸುತ್ತಿದೆ. ಆದರೆ ಅದು ಒಂದು ಅನುಭವವಾಗಿ ಕೆಲವೇ ಕೆಲವರನ್ನಾದರೂ ಯಾವ ಪರಿ ಹಿಂಡುವುದೆಂದರೆ, ಆ ಎಲ್ಲ ಸಾಹಿತ್ಯಿಕ ವಿಶೇಷಗಳೂ ಅದರೆದುರು ಇರ್ರಿಲೆವಂಟ್ ಆಗಿ ಬಿಡುವಷ್ಟು. ಬದುಕಿನ ತೀರ ಆಳದ ಪ್ರಶ್ನೆಗಳಿಗೆ ಸಾಹಿತ್ಯದಲ್ಲೂ ಪರಿಹಾರವಿಲ್ಲ. ಪರಿಹಾರ ಎಂದಿರುವುದು ಮನದ ತಲ್ಲಣಗಳಿಗೆ ಉಪಶಮನ ನೀಡಬಲ್ಲ ಅದರ ಶಕ್ತಿಯ ಬಗ್ಗೆ ಅಷ್ಟೆ. ಯಾಕೆಂದರೆ, ಸಾಹಿತ್ಯ ನಮ್ಮನ್ನು ಹುಚ್ಚರಾಗುವುದರಿಂದ ಕಾಪಾಡುತ್ತ ಬಂದಿದೆ ಎಂದು ನಂಬುವ ಸಾಕಷ್ಟು ಮಂದಿಯನ್ನು ನಾನು ಬಲ್ಲೆ. ಸಾಹಿತ್ಯದ ಓದು ಜಗತ್ತಿನಲ್ಲಿ ಎಲ್ಲವೂ ಸರಿಯಾಗಿದೆ, ನಮ್ಮ ಬದುಕಿನಲ್ಲಿ ನಡೆಯುತ್ತಿರುವುದೆಲ್ಲ ಸಹಜವಾಗಿಯೇ ನಡೀತಿದೆ ಎಂಬ ಬಗ್ಗೆ ನಮಗೆ ಧೈರ್ಯ ತುಂಬುವುದೆಂದು ಪಮುಕ್ ಒಂದೆಡೆ ಹೇಳುತ್ತಾನೆ. ನಮಗೆ ಅಂಥ confirmation ಬೇಕು! ಆದರೆ, ಯಾವುದರಿಂದ ದೂರವಾಗಲು ನಾವು ಪುಸ್ತಕಗಳನ್ನು ಹಿಡಿಯುತ್ತ ಬಂದೆವೋ, ಆ ತಲ್ಲಣಗಳ ಹತ್ತಿರಕ್ಕೆ ಈ ಕೃತಿ ನಮ್ಮನ್ನು ಒಯ್ಯುತ್ತದೆ. ಇಂಥ ರಿವರ್ಸ್ ಗೇರ್ ಪ್ರಯಾಣವೊಂದು ಬೇಕಿತ್ತು. ಅದನ್ನು ಸಾಧ್ಯವಾಗಿಸಿದ ಅಪರೂಪದ ಕೃತಿ ಜೆರ್ರಿ ಪಿಂಟೊ ಅವರ EM and the big HOOM.

ಇನ್ನುಳಿದಂತೆ ಪಿಂಟೊ ಅವರ ಚುರುಕಾದ, ಹರಿತವಾದ, ಹಾಸ್ಯವನ್ನೂ, ವಿಡಂಬನೆಯನ್ನೂ, ದುರಂತವನ್ನೂ ಬೆನ್ನಿಗಿಟ್ಟುಕೊಂಡ ಭಾಷೆ ಗಮನ ಸೆಳೆಯುತ್ತದೆ. ಸಂಭಾಷಣೆ, ಡೈರಿ, ಪತ್ರಗಳು ಮತ್ತು ಅಲ್ಲಲ್ಲಿ ಚದುರಿದಂಥ ಟಿಪ್ಪಣಿಗಳ ಜೊತೆ ಅಪ್ಪ, ಸಹೋದರಿ, ತಾಯಿ ಮತ್ತು ತನ್ನವೇ ನೆನಪುಗಳಲ್ಲಿ ಇಲ್ಲಿ ನಿರೂಪಕ ಕಟ್ಟುತ್ತಿರುವ ಚಿತ್ರ ಒಂದು ವಾರ್ಡ್, ಒಂದು ಮನೆ, ಒಂದು ಸಂಸಾರದ ಚೌಕಟ್ಟನ್ನು ಮೀರಿ ಸಮಾಜವನ್ನು, ವಸ್ತುಲೋಕವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸಿದೆ. ಹವಣಿಸಿದೆಯಾದರೂ ಯಶಸ್ವಿಯಾಗಿದೆ ಎಂದೇನಲ್ಲ. ವಸ್ತು ಸಮಾಜದಿಂದ ವಿಮುಖವಾಗಿ ಬದುಕುವ ವ್ಯಕ್ತಿಯ ಸುತ್ತ ತಿರುಗುವಾಗ ಅದು ಕಷ್ಟ. ಆದರೂ ಇಲ್ಲಿ ಸ್ತ್ರೀಮತದ ಪ್ರಶ್ನೆಗಳಿರುವುದು, ಒಟ್ಟು ನಮ್ಮ ಜೀವನಶೈಲಿಯ ಸ್ಥಾಪಿತ ಮೌಲ್ಯಗಳನ್ನೇ ಪ್ರಶ್ನಿಸುವ ನೆಲೆಗಟ್ಟು ಒಂದಿರುವುದು ಗಮನಾರ್ಹವಾಗಿದೆ. ಗರ್ಭ, ಮಕ್ಕಳು, ಲೈಂಗಿಕತೆ ಮತ್ತು ದಾಂಪತ್ಯ ಎನ್ನುವುದು ಅದರ ಆರ್ಥಿಕ ಮತ್ತು ಸಾಮಾಜಿಕ ಮುಖಗಳನ್ನು, ಅಗತ್ಯ-ಅನಿವಾರ್ಯಗಳನ್ನು ಮೀರಿ ಇಲ್ಲಿ ಪ್ರಶ್ನೆಗಳಿಗೆ ಮುಖಾಮುಖಿಯಾಗುತ್ತಿದೆ ಎನಿಸುವಾಗಲೇ ಇದು ಕೇವಲ ಸೂಕ್ಷ್ಮಸಂವೇದಿಯಾಗಿ, ಭಾವಕೋಶವನ್ನಷ್ಟೇ ಮೀಟುವ ಕಥಾನಕವಾಗಿಯೂ ತಟ್ಟುತ್ತದೆ. ಮನುಷ್ಯನನ್ನು ಮತ್ತಷ್ಟು ಮಾನವೀಯಗೊಳಿಸುವ ನಿಟ್ಟಿನಲ್ಲಿ ಇಂಥ ಕೃತಿಗಳು ಸ್ವಾಗತಾರ್ಹ. ಆದರೆ ಅದನ್ನು ಮಾಡುತ್ತಲೇ ಕೊಂಚ ಹೆಚ್ಚಿನದ್ದಕ್ಕೆ, ಅತ್ಯಂತ ಸಹಜವಾಗಿ ಚಾಚಿಕೊಳ್ಳುವ ಇಂಥ ಕೃತಿಗಳು ಗಮನಾರ್ಹ ಕೂಡ.

No comments: