Sunday, August 31, 2014

ಪ್ಯಾಶನ್ ಪ್ಲವರ್ ಎಂಬ ಕಥಾಸಂಕಲನ...

ಸೈರಸ್ ಮಿಸ್ತ್ರಿಯವರ ದ ರೇಡಿಯೆನ್ಸ್ ಆಫ್ ಆಶಸ್ (Radience of Ashes) ಕಾದಂಬರಿಯನ್ನು ಓದಿದಾಗ ಅವರು ಅಲ್ಲಿ ಕಟ್ಟುವ ವಿವರಗಳು ಎಷ್ಟೊಂದು ಅಚ್ಚುಕಟ್ಟಾಗಿ ಮತ್ತು ಕಾದಂಬರಿಯ ಪ್ರತಿಯೊಂದು ಪ್ಲಾಟ್‌ನ ಉದ್ದೇಶಕ್ಕೆ ಪೂರಕವಾಗಿಯೂ, ಹಿತಮಿತವಾಗಿಯೂ ಮತ್ತು ಅತ್ಯಂತ ಜೀವಂತವಾಗಿಯೂ ಇವೆಯಲ್ಲ ಎಂದೆನಿಸುತ್ತಿತ್ತು. ಹಾಗೆಯೇ ಅವರ ದ ಕಾರ್ಪ್ಸ್ ಬೇರರ್ ಕಾದಂಬರಿ ಕೂಡ ವಿವರಗಳಿಂದಲೇ ಮನಸೆಳೆಯುವ ಕಾದಂಬರಿ. ವಿವರಗಳು ಎಂದರೆ ಜೇಮ್ಸ್ ಜಾಯ್ಸ್ ಹೇಳುವ ಸಿಗ್ನ್‌ನಿಫಿಕಂಟ್ ಡೀಟೇಲ್ಸ್. ಒಟ್ಟಾರೆ ನಮಗೆ ಚಂದ ಕಂಡ, ಗೊತ್ತಿರುವ, ಸ್ವಂತದ್ದು, ನಿಜವಾ...ಗಿ ಘಟಿಸಿದ್ದು ಎಂಬ ಮೋಹದಿಂದಲೇ ಒಬ್ಬ ಬರಹಗಾರ ಕಾರಿಕೊಳ್ಳಬಯಸುವ ವಿವರಗಳಲ್ಲ. ಅದೇ ಸೈರಸ್ ಮಿಸ್ತ್ರಿಯವರ ಮೊತ್ತಮೊದಲ ಕಥಾಸಂಕಲನ, ಪ್ಯಾಶನ್ ಪ್ಲವರ್ ಬಿಡುಗಡೆಯಾದಾಗ ಅವರ ಎರಡು ಕಾದಂಬರಿಗಳನ್ನು ಓದಿ ಪರವಶರಾಗಿದ್ದ ಅನೇಕ ಅಭಿಮಾನಿಗಳಲ್ಲಿ ಅದು ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಅದ್ಭುತ ಕಾದಂಬಾರಿಕಾರನೊಬ್ಬನ ಸಣ್ಣಕತೆಗಳು ನಿಜಕ್ಕೂ ಅಂಥ ಕುತೂಹಲಕ್ಕೆ ಕಾರಣವಾದದ್ದು ಸಹಜವೇ. ಆದರೆ ಕಥಾಸಂಕಲನ ಅಂಥ ನಿರೀಕ್ಷೆಗಳನ್ನೆಲ್ಲ ಹುಸಿಯಾಗಿಸಿದೆ. ಇದು ಕೂಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಕುತೂಹಲಕರವೇ. ಒಬ್ಬ ಕತೆ-ಕಾದಂಬರಿಕಾರನಿಗೆ ನಿಜವಾದ ಸವಾಲಿರುವುದು ಕೊನೆಗೂ ಸಣ್ಣಕತೆಯಲ್ಲಿಯೇ ಎನ್ನುವುದು ಇಲ್ಲಿ ಸಾಬೀತಾದಂತಿದೆ.

ಮಿಸ್ತ್ರಿ ಇಲ್ಲಿನ ಒಟ್ಟು ಏಳು ಕತೆಗಳಲ್ಲಿ ಕಟ್ಟಿಕೊಡುವ ವಿವರಗಳು ಅಷ್ಟೇನೂ ಗಾಢವಾಗಿಲ್ಲ ಎನ್ನುವುದಕ್ಕಿಂತ ಅವುಗಳಲ್ಲಿ ಅಥೆಂಟಿಕ್ ಅನಿಸುವ ಜೀವಂತಿಕೆಯಿಲ್ಲ ಎನ್ನುವುದೇ ಹೆಚ್ಚು ಸರಿ. ಕೆಲವೊಂದು ಕಡೆ ಕೃತಕತೆ ಇಣುಕಿದಂತಿದೆ ಕೂಡ. ವಿವರಗಳೇ ಒಂದು ಸಾಹಿತ್ಯಿಕ ಸೃಷ್ಟಿಯ ಉಸಿರಾಗಿರುವುದರಿಂದ ಕೆಲವೇ ಕೆಲವು ಕತೆಗಳಲ್ಲಿ ಬಿಟ್ಟರೆ ಸಣ್ಣಕತೆಯ ಪ್ರಕಾರದಲ್ಲಿ ಮಿಸ್ತ್ರಿ ಅಷ್ಟೇನೂ ಯಶಸ್ವಿಯಾದಂತಿಲ್ಲ.

ಪ‍ರ್ಸಿ, ಫೈನ್ಲೀ ಚೋಪ್ಡ್ ಡಿಲ್, ಬೊಕ್ಕ ಮುಂತಾದ ಕತೆಗಳಲ್ಲಿ ಕೇಂದ್ರಪಾತ್ರವಾಗಿ ಆರಿಸಿಕೊಂಡಿರುವುದು ಸಮಾಜದ ಹಾಸ್ಯಗಾರರಾಗಿಬಿಟ್ಟಂಥ ದೈಹಿಕ ವಿಕಾರತೆ ಅಥವಾ ಮಾನಸಿಕ ಅಸ್ಥಿರತೆಗೆ ಗುರಿಯಾದವರನ್ನು. ಸಿಂಗರನ ಗಿಂಪೆಲ್ ದ ಫೂಲ್ ಕತೆಯ ಗಿಂಪೆಲ್, ವಿವೇಕ ಶಾನಭಾಗರ ಉಪ್ಪ, ಪಬ್ಬ ಮುಂತಾದ ಪಾತ್ರಗಳು, ಅನಂತಮೂರ್ತಿಯವರ ಹಡೆವೆಂಕಟ ಎಲ್ಲ ಸುಮಾರಾಗಿ ಇಂಥ ಪಾತ್ರಗಳೇ.

ಮಿಸ್ತ್ರಿಯವರ ಸರಿಸುಮಾರು ಎಲ್ಲಾ ಕತೆಗಳಲ್ಲಿಯೂ ಭೂತ, ಮಾಟ-ಮಂತ್ರ, ಮಾನಸಿಕ ಭ್ರಮೆಗಳ ಪಾತ್ರವೂ ಎದ್ದು ಕಾಣುವಂತಿದೆ. ಈ ಅತೀಂದ್ರಿಯ ಸಂಗತಿಗಳನ್ನು ತಂತ್ರವಾಗಿಯಷ್ಟೇ ತಂದಿಲ್ಲ, ಅವು ಕತೆಯ ಚೌಕಟ್ಟಿನಲ್ಲೇ, ವಸ್ತುವಾಗಿಯೂ ಬರುತ್ತವೆ.

ಕೆಲವೊಂದು ಕತೆಗಳಲ್ಲಿ ಮಿಸ್ತ್ರಿಯವರು ಬಳಸಿಕೊಳ್ಳುವ ತಂತ್ರಗಳು ಗಮನಸೆಳೆಯುತ್ತವೆ. ಉದಾಹರಣೆಗೆ ಟು ಎಂಗ್ರೀ ಮೆನ್ (Two Angry Men)ಕತೆಯಲ್ಲಿ ಸ್ವಗತ ಮತ್ತು ನಿರೂಪಕನ ವಿವರ ಎರಡೂ ಬಳಸಿಕೊಂಡು ಕಥಾನಕ ಸಾಗುತ್ತದೆ. ಸ್ವಗತವನ್ನೆಲ್ಲ ಇಟ್ಯಾಲಿಕ್ ಲೆಟರ್ಸ್ ಬಳಸಿ ಕಾಣಿಸಲಾಗಿದೆ. ಹಾಗೆಯೇ ಬೊಕ್ಕ ಕತೆಯಲ್ಲಿ ಒಮ್ಮೆಲೇ ಬೊಕ್ಕನನ್ನು ಕೇಂದ್ರದಲ್ಲಿಟ್ಟು ತೊಡಗಿದ ನಿರೂಪಕನ ವಿವರಣೆ ನಿಂತು ಸೋಲಿ ಎಂಬ ಹುಡುಗನ ನಿರೂಪಣೆ ತೊಡಗುತ್ತದೆ.

ವಸ್ತುವಿನ ವಿಚಾರಕ್ಕೆ ಬಂದರೆ, ನಮ್ಮನ್ನು ಗಾಢವಾಗಿ ಕಾಡಬಲ್ಲಂಥ, ಓದಿ ಮುಗಿಸಿದ ಬಳಿಕವೂ ಅನುರಣಿಸುವಂಥ ಕತೆಗಳು ಈ ಸಂಕಲನದಲ್ಲಿವೆ ಎನಿಸುತ್ತಿಲ್ಲ. ಪ‍ರ್ಸಿ ಮತ್ತು ಬೊಕ್ಕ ಕತೆಗಳಲ್ಲಿ ಬರುವ ತಾಯಿ ಮಗನ ಸಂಬಂಧ ಮತ್ತು ವ್ಯಕ್ತಿತ್ವಗಳಲ್ಲಿ ಹೆಚ್ಚು ವ್ಯತ್ಯಾಸವೇನೂ ಇಲ್ಲ. ಪ‍ರ್ಸಿ ವಿಪರೀತವಾಗಿ ತಾಯಿಯನ್ನೇ ಅವಲಂಬಿಸಿ ಬೆಳೆದ ಹೆಣ್ಣಿಗ ಎನ್ನಬಹುದಾದ ಹುಡುಗ. ಇವನಿಗೆ ಸ್ವಂತದ್ದು ಎನ್ನಬಹುದಾದ ಒಂದು ವ್ಯಕ್ತಿತ್ವವೇ ಇಲ್ಲದಿರುವುದು ಮತ್ತು ರೂಢಿಸಿಕೊಂಡ ವ್ಯಕ್ತಿತ್ವದಲ್ಲಿ ಇವನೊಬ್ಬ ಎಡಬಿಡಂಗಿಯಂತೆ ಕಾಣಿಸುವುದು ಕಥಾನಕದ ಚೌಕಟ್ಟು. ತಾಯಿಯ ಸಾವೇ ಎರಡೂ ಕತೆಗಳಲ್ಲಿ ಅಂತಿಮ ಘಟ್ಟವಾಗಿರುವುದು ಕೂಡ ವಿಶೇಷ. ಆದರೆ ತಾಯಿಯ ಸಾವು ಎರಡೂ ಕತೆಗಳ ಪ‍ರ್ಸಿ ಅಥವಾ ಬೊಕ್ಕನ ಮುಕ್ತಿಯನ್ನು ಸೂಚಿಸುತ್ತಿಲ್ಲ ಎನ್ನುವುದು ಕೂಡ ಗಮನಾರ್ಹ. ಹಾಗೆ ನೋಡಿದರೆ ಇಬ್ಬರನ್ನೂ ಅಮರಿಕೊಂಡಿರುವುದು ತಾಯಿ ಎಂಬ ಪಾತ್ರವಲ್ಲ, ಬೆಳೆಸಿದ ರೀತಿ ಮತ್ತು ಅವರವರು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡ ರೀತಿಯೇ. ಇಬ್ಬರಿಗೂ ಅದರಿಂದ ಹೊರಬರುವ ದಾರಿಗಳಿದ್ದಂತಿಲ್ಲ.

ಅನ್‍ಎಕ್ಸ್‌ಪೆಕ್ಟೆಡ್ ಗ್ರೇಸ್ (Unexpected Grace) ಕತೆಯ ಪತ್ನಿ ತನ್ನ ಪತಿಯ ಬಗ್ಗೆ ಸಲ್ಲದ(?) ಸಂಶಯದಿಂದ ಪೀಡಿತಳಾಗಿದ್ದರೆ ಫೈನ್ಲೀ ಚೋಪ್ಡ್ ಡಿಲ್ (Finely Chopped Dill) ಕತೆಯ ಜೆಸಿಂತಾ ತನ್ನ ನಾದಿನಿಯ ಕಡೆಯವರು ಆಸ್ತಿಗಾಗಿ ತನ್ನನ್ನು ಕೊಲ್ಲುವುದಕ್ಕೆ ಹುನ್ನಾರ ನಡೆಸಿದ್ದಾರೆಂಬ ಭ್ರಮೆಗೆ ಬಿದ್ದು ತಲೆಕೆಡಿಸಿಕೊಂಡಾಕೆ. ಇಬ್ಬರಿಗೂ ಒಂದು ಬಗೆಯ ಟ್ರೀಟ್‌ಮೆಂಟ್ ದೊರೆತು ಮನಸ್ಸಿನ ಅಸ್ವಾಸ್ಥ್ಯ ನೀಗುತ್ತದೆ. ಈ ಎರಡೂ ಕತೆಗಳಲ್ಲಿ ವಿವರಗಳು ಸುಂದರವಾಗಿ ಮೂಡಿಬಂದಿವೆ ಮತ್ತು ಈ ಎರಡೂ ಕತೆಗಳಲ್ಲಿನ ಒಂದು ವಿಧದ ಕೌತುಕ ಈ ಕತೆಗಳನ್ನು ಓದುವ ಓದುಗನನ್ನು ಹಿಡಿದಿಡಬಲ್ಲಷ್ಟು ತೀವ್ರವಾಗಿವೆ.

ಟು ಏಂಗ್ರೀ ಮೆನ್ (Two Angry Men) ಕತೆ ಸಂಕೀರ್ಣ ರಚನೆ. ಆದರೆ ಈ ಸಂಕೀರ್ಣತೆಯ ಲಾಭವನ್ನೇನೂ ಕಥಾನಕ ದಕ್ಕಿಸಿಕೊಂಡಿಲ್ಲ. ಅಶುತೋಷ್ ಎಂಬ ಬಾಸ್ ಮತ್ತು ಪ್ರಶಾಂತ್ ಎಂಬ ನೌಕರ ಇಬ್ಬರೂ ವಿದ್ಯಾರ್ಥಿದೆಸೆಯ ಸ್ನೇಹಿತರು. ಈ ಸಂಬಂಧ ಪಡೆದುಕೊಂಡ ತಿರುವು ಅವರ ನಡುವೆ ಲವ್-ಹೇಟ್ ಸಂಬಂಧದ ಹಿನ್ನೆಲೆ. ಪ್ರಶಾಂತ್ ತನ್ನ ಮಗಳ ವಯಸ್ಸಿನವಳಿರಬಹುದಾದ ಹೊಸ ರಿಸೆಪ್ಷನಿಸ್ಟ್ ಹುಡುಗಿಯ ಮೋಹಕ್ಕೆ ಬಿದ್ದಂತಿದೆ. ಅಶುತೋಷ್ ಮತ್ತು ಪ್ರಶಾಂತ್ ನಡುವಿನ ವ್ಯಾವಹಾರಿಕ ಸಂಬಂಧ, ಗಂಡು-ಹೆಣ್ಣಿನ ಭಾವನಾತ್ಮಕ ಸಂಬಂಧ ಎರಡೂ ಜಿದ್ದಿಗೆ ಬಳಕೆಯಾದಂತಿರುವುದು ಕಥಾನಕದ ಕೇಂದ್ರ. ಇದರಾಚೆ ಇಬ್ಬರ ವ್ಯಕ್ತಿತ್ವದ ವಿವರಗಳು ಸ್ವಗತದಲ್ಲೂ, ನಿರೂಪಣೆಯಲ್ಲೂ ನಮಗೆ ಸಿಗುತ್ತಲೇ ಹೋಗುವುದು ಕಥಾನಕದ ನಡೆ. ಅಶುತೋಷ್‌ನ ಬದುಕಿಗೆ ಸಿಕ್ಕಿದ ಪುಷ್ಟಿ ಪ್ರಶಾಂತ್‌ನ ಬದುಕಿಗೆ ಸಿಕ್ಕಿದಂತಿಲ್ಲ ಅಥವಾ ಅಲ್ಲಿ ಅಂಥ ಮಹತ್ವದ ಅಂಶಗಳಿಲ್ಲ. ವಿಶೇಷವಾದ ಆಯಾಮವೆಂದರೆ, ಅಶುತೋಷ್‌ಗೆ ತಮ್ಮ ಕೌಟುಂಬಿಕ ಆಸ್ತಿಯನ್ನು ತಾನೇ ಹೊಡೆದುಕೊಂಡಂತಿರುವುದು, ತಮ್ಮನಿಗೆ ಅದರಲ್ಲಿ ಸಿಗಬೇಕಾದಷ್ಟು ಸಿಕ್ಕಿಲ್ಲವೇನೋ ಎಂಬ ಭಾವನೆಯ ಜೊತೆಯಲ್ಲಿ ಸಂಘರ್ಷಗಳಿರುವುದು ಮತ್ತು ತಾನು ತನ್ನ ಜೀವನವನ್ನು ರೂಪಿಸಿಕೊಂಡ ಬಗೆಯ ಬಗ್ಗೆಯೂ ದ್ವಂದ್ವವಿರುವುದು. ಅದೇ ರೀತಿ ಪ್ರಶಾಂತನಿಗೆ ಕೂಡ ತಡವಾಗಿ ಗರ್ಭವತಿಯಾಗಿರುವ ತನ್ನ ಪತ್ನಿ ಮಗುವನ್ನು ನಿರೀಕ್ಷಿಸುತ್ತಿರುವಾಗ ತನಗಿಂತ ಅರ್ಧದಷ್ಟು ವಯಸ್ಸಿನ ಹುಡುಗಿಯ ಜೊತೆ, ಒಂಥರಾ ‘ಉಪಯೋಗಿಸಿ’ಕೊಳ್ಳುತ್ತಿರುವ ಪಾಪಪ್ರಜ್ಞೆಯೊಂದಿಗೇ ಮತ್ತು ಈ ಸಂಬಂಧ ಕೊನೆಗೂ ತಾನು ಬಯಸುತ್ತಿರುವ (ಆ ಬಗ್ಗೆ ಅವನಿಗೇ ಗೊಂದಲವಿದೆ) ಹಂತಕ್ಕೆ ತಲುಪುವುದೋ ಇಲ್ಲವೋ ಎನ್ನುವ ಸಂದಿಗ್ಧಗಳ ಜೊತೆಗೇ ವೃತ್ತಿ ಜೀವನವನ್ನು ಒಂದು ಘಟ್ಟಕ್ಕೆ ಕೊಂಡೊಯ್ಯುವ ತುರ್ತುಗಳಿವೆ. ಈ ಎಲ್ಲ ತುರ್ತುಗಳಲ್ಲಿ ಒಂದು ವಿಧವಾದ ಸಂಘರ್ಷವಿದೆ. ಇಷ್ಟರ ಮಟ್ಟಿಗೆ ಕಥಾನಕ ಸಾಕಷ್ಟು ಗಟ್ಟಿಯಾಗಿದೆ ಎನಿಸುವುದು ಸರಿಯೇ. ಆದರೆ ಅದು ನಮ್ಮನ್ನು ಎಲ್ಲಿಗೂ ತಲುಪಿಸುವುದೇ ಇಲ್ಲ ಎನಿಸುವಂತೆ, ಕೇವಲ ವಿಪರ್ಯಾಸಕರವೆಂಬಂತೆ ಈ ಕಥೆಯ ಮುಕ್ತಾಯವಿದೆ.

ಲೇಟ್ ಫಾರ್ ಡಿನ್ನರ್ (Late for Dinner) ಕತೆಯಲ್ಲಿ ಹೊಸವರ್ಷದ ಪಾರ್ಟಿಗೆ ಹೊರ ಹೋಗಿರುವ ತಮ್ಮ ಹದಿಹರೆಯದ ಮಗಳನ್ನು ಕಾಯುತ್ತ ಕೂತ ವೃದ್ಧ ದಂಪತಿಗಳು ತಮ್ಮ ದಾಂಪತ್ಯದತ್ತ ಬೀರುವ ಹಿನ್ನೋಟದಲ್ಲಿಯೂ ವಿಶೇಷವಾದುದೇನೂ ಇಲ್ಲ. ತುಂಬ ಹಿಂದೆ ನಾಟಕೀಯವಾಗಿ ತಮ್ಮ ಪುಟ್ಟ ಮಗುವೊಂದನ್ನು ಕಳೆದುಕೊಂಡ ಕಹಿ ಇವರ ಬದುಕನ್ನು ಹಿಂಡಿಹಾಕಿರುವುದು ಸಾಧ್ಯವಿದ್ದರೂ ಅದನ್ನೇ ಕೇಂದ್ರದಲ್ಲಿಟ್ಟುಕೊಂಡು, ಸಸ್ಪೆನ್ಸ್ ಎಂಬಂತೆ ಕಾಪಿಟ್ಟುಕೊಂಡು ಸಾಗುವ ಕತೆ ಕೊನೆಗೂ ದಾರುಣವಾದುದನ್ನು ಬಿಚ್ಚಿಟ್ಟಾಗ ಹುಟ್ಟಿಸಬಹುದಾಗಿದ್ದ ಸಂವೇದನೆಗಳನ್ನು ಹುಟ್ಟಿಸುವಲ್ಲಿ ವಿಫಲವಾಗುತ್ತದೆ. ಈಗ ಜೊತೆಗಿರುವ ಹೆಣ್ಣುಮಗಳ ಭವಿಷ್ಯದ ಎಳೆ ಇಬ್ಬರ ಕೈತಪ್ಪಿ ಹೋಗಿರುವುದನ್ನು ಎಂದೋ ಜನಸಂದಣಿಯಲ್ಲಿ ತಾವು ಕಳೆದುಕೊಂಡ ಮಗಳ ನೆನಪುಗಳಲ್ಲಿ ಕಾಣಿಸುವ ತಂತ್ರವೂ (ಹಾಗೆಂದುಕೊಳ್ಳಬಹುದಾದರೆ) ಯಶಸ್ವಿ ಎನಿಸುವುದಿಲ್ಲ.

ಪ್ಯಾಶನ್ ಪ್ಲವರ್ (Passion Flower) ಕತೆ ಇದ್ದುದರಲ್ಲಿ ದೀರ್ಘವಾದ, ಸಂಕಲನಕ್ಕೆ ಹೆಸರು ಕೊಡಿಸಿರುವ ಮತ್ತು ಮಹತ್ವಾಕಾಂಕ್ಷಿ ಎಂದುಕೊಳ್ಳಬಹುದಾದ ಕತೆ. ಇಲ್ಲಿಯೂ ಕೌಟುಂಬಿಕವಾದ ಒಂದು ತುಣುಕು, ವೃತ್ತಿ ಜೀವನದ ಇನ್ನೊಂದು ತುಣುಕು ಮತ್ತು ಸಂವೇದನೆಗಳ ನೆಲೆಯ ಇನ್ನೊಂದು ತುಣುಕು ಸೇರಿಕೊಂಡಿದೆ. ಈ ಮೂರೂ ತುಣುಕುಗಳ ನಡುವೆ ಸಮಾನವಾದದ್ದು ಅಥವಾ ಒಂದರೊಂದಿಗೆ ಇನ್ನೊಂದನ್ನು ಜೋಡಿಸಬಹುದಾದ್ದು ಕಾಣೆಯಾಗಿದೆ. ಹಾಗೆ ಜೋಡಿಸಬಹುದಾದ ಒಂದರ ನಿರೀಕ್ಷೆ ಕೂಡ ತಪ್ಪೆನ್ನುವಂತಿಲ್ಲವಲ್ಲ. ಒಂದು ಸಣ್ಣಕತೆಯಲ್ಲಿ ಯಾವುದೇ ಮಹತ್ವದ ಮತ್ತು ಸಾಕಷ್ಟು ದೀರ್ಘವಾಗಿ ಬರುವ ವಿವರವೂ ಅನಾವಶ್ಯಕವಾಗಿ ಬಂದಿರುವಂಥಾದ್ದೆಂದು ಅಥವಾ ಕೇವಲ ಪೂರಕವಾದುದೆಂದು ಭಾವಿಸುವುದು ಕಷ್ಟವೇ. ಕಾದಂಬರಿಯಲ್ಲಾದರೆ ಹಾಗೆ ತಿಳಿಯುವುದು ಸಾಧ್ಯವಿದೆ. ಕೇವಲ ಐದು ವಾರಗಳ ಭ್ರೂಣ ಗರ್ಭದಲ್ಲಿರುತ್ತ ಔಷಧ ಸೇವಿಸಿದ್ದು ಮಗುವಿನ ಮಾನಸಿಕ-ದೈಹಿಕ ಬೆಳವಣಿಕೆಯ ಮೇಲೆ ಗಂಭೀರವಾದ ಪರಿಣಾಮ ಬೀರಬಹುದೆಂಬ ಕಾರಣಕ್ಕೆ ಗರ್ಭಪಾತಕ್ಕೆ ಒತ್ತಾಯಿಸುವ ಆನಂದ್ ಮತ್ತು ಅದನ್ನು ಒಪ್ಪದ ಕ್ಯಾಥಲಿಕ್ ಪತ್ನಿ ಪಮೇಲಾರ ನಡುವೆ ಈಗ ಹೆರಿಗೆಯನ್ನು ಆತಂಕದಿಂದ ಕಾಯುವ ಪರಿಸ್ಥಿತಿಯಿದೆ. ಹೀಗಿರುತ್ತ ಆನಂದ್ ದಿಲ್ಲಿಯಿಂದ ದಕ್ಷಿಣದ ಕೇರಳದ ಗಿರಿಧಾಮಕ್ಕೆ ವೃತ್ತಿನಿಮಿತ್ತ ಬಂದಿದ್ದಾನೆ. ಸದ್ಯದಲ್ಲೇ ಸಿಗಲಿರುವ ವಿದೇಶೀ ವಿಶ್ವವಿದ್ಯಾಲಯದ ಫೆಲೊಶಿಪ್‌ನ ನಿರೀಕ್ಷೆಯಲ್ಲೇ ಇರುವ ಅವನ ಮಟ್ಟಿಗೆ ಇದೊಂದು ತಾತ್ಕಾಲಿಕ ವ್ಯವಸ್ಥೆ ಅಷ್ಟೇ. ಆದರೆ ಅದರ ನಡುವೆಯೇ ತೀರ ಅಪರೂಪದ್ದೆಂದೂ, ಸದ್ಯ ಜಗತ್ತಿನಲ್ಲೆಲ್ಲೂ ಸಿಗದಂತೆ ಅಳಿದು ಹೋಗಿರಬಹುದೆಂದೇ ನಂಬಲಾದ ಪಾಸಿಫ್ಲೋರಾ ಬೊಲಿವಿಯಾನಾ ಜಾತಿಯ ಒಂದು ಸಸ್ಯವನ್ನು ತಾನು ಈ ಗಿರಿಶ್ರೇಣಿಯ ಯಾವುದಾದರೊಂದು ಕಣಿವೆಯಲ್ಲಿ ಇದ್ದಕ್ಕಿದ್ದಂತೆ ಕಂಡು ಹಿಡಿದೇ ಬಿಡುವ ಸಾಧ್ಯತೆಯ ಬಗ್ಗೆ ಏನೋ ಒಂದು ಕುರುಡು ವಿಶ್ವಾಸ ತಾಳಿದ ಆನಂದ್ ಅದರ ಬೆಂಬೆತ್ತಿ ಹೋಗುವುದು ಇನ್ನೊಂದು ಘಟ್ಟ. ಕಂಡು ಹಿಡಿದಿದ್ದೇ ಆದರೆ ತಾನು ಪಡೆಯಬಹುದಾದ ಕೀರ್ತಿ, ಹಣ, ಹುದ್ದೆಗಳ ಬಗ್ಗೆ ಅವನಲ್ಲಿ ಸುಪ್ತವಾದ ಕನಸ್ಸಿದೆ. ಅವನೊಬ್ಬ ಸಸ್ಯಶಾಸ್ತ್ರದ ಬಗ್ಗೆ ಪ್ರಾಮಾಣಿಕವಾದ ಪ್ಯಾಶನ್ ಉಳ್ಳ ಪ್ರಾಧ್ಯಾಪಕನೆನ್ನುವುದರಲ್ಲಿ ಸಂಶಯವಿಲ್ಲ. ಆದರೆ ಇದು ಅವನಲ್ಲಿ ಹುಟ್ಟಿಸಿರಬಹುದಾದ ಸುಪ್ತ ಅಹಂ ಇಲ್ಲಿ ಪ್ರಶ್ನಿಸಲ್ಪಡುವುದು ಒಬ್ಬ ಭಿಕ್ಷುಕನಿಂದ ಎನ್ನುವುದೇ ಕುತೂಹಲಕರ. ದಿನವೂ ಕೆಲಸಕ್ಕೆ ಹೋಗುತ್ತ ಬರುತ್ತ ತನ್ನ ಕಣ್ಣಿಗೆ ಬೇಡವೆಂದರೂ ಬೀಳುವ, ಕಿವಿಗೆ ಬೇಡವೆಂದರೂ ಕೇಳುವ ಅವನ ಅಮ್ಮಾತಾಯೇಗಳಿಂದ ಅವನು ಎಷ್ಟೊಂದು ಕಿರಿಕಿರಿ ಅನುಭವಿಸುತ್ತಾನೆಂದರೆ ಜಗತ್ತಿನ ಉಳಿದೆಲ್ಲಾ ಸಂಗತಿಗಳು ಗೌಣವಾಗಿ ಇದೇ ಅವನನ್ನು ಆವರಿಸಿಕೊಳ್ಳುವುದೂ ಕಾಣುತ್ತದೆ!

"ಮನುಷ್ಯನಲ್ಲಿ, ಬ್ರಹ್ಮಾಂಡಲ್ಲಿ ಹೇಗೆಯೋ ಹಾಗೆಯೇ ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ. ತನ್ನದೇ ವಿಸ್ತರಣೆಯಂತಿರುವ ಇಲ್ಲಿನ ಪ್ರತಿಯೊಂದರ ಅಂಶದಲ್ಲಿಯೂ, ಪೂರ್ಣತ್ವದಲ್ಲಿಯೂ ಇದೇ ಸಂತುಲನ ತತ್ವದಿಂದ ಪ್ರತಿಯೊಂದು ಚರಾಚರ ವಸ್ತುವಿನ ಕೇಂದ್ರಕ್ಕೆ ಸಮಾನವಾದ ಹಕ್ಕನ್ನೇ ಸುಪ್ತವಾಗಿ ಉಳಿಸಿದೆ." 1824ರ ಗೋಥೆಯ ಒಂದು ಪ್ರಬಂಧದಿಂದ ಎತ್ತಿಕೊಂಡ ಸಾಲನ್ನು ಉಲ್ಲೇಖಿಸಿ ತೊಡಗುವ ಈ ಕತೆ ಸೃಷ್ಟಿಯ ಸಮಾನತೆಯನ್ನು ಭಿಕ್ಷುಕ ಮತ್ತು ನಾಗರಿಕ ಸಮಾಜದ ವಿದ್ಯಾವಂತ ಶಿಷ್ಟವ್ಯಕ್ತಿಯ ನಡುವೆ ಸಾಧಿಸಲು ಬಯಸಿದೆ. ಆದರೆ ಬಾಟನಿಯ ಕತೆಯೇನಾಯಿತು, ಪಮೇಲಾಳ ಮಗುವೇನಾಯಿತು ಎಂಬ ಎಳೆಗಳು ಇದರೊಂದಿಗೆ ಜೋಡಿಸಲ್ಪಡುವುದಿಲ್ಲ. ಹನ್ನೆರಡು ವರ್ಷಗಳಿಗೊಮ್ಮೆ ಮಾತ್ರ ಕಾಣಿಸಿಕೊಳ್ಳುವ, ಬಹು ಅಪರೂಪದ ತಳಿಯ ಸಸ್ಯಜಾತಿ ಮೂಳೆಗೆ ಸಂಬಂಧಿಸಿದಂತೆ ಬಹೂಪಯೋಗಿ ಔಷಧೀಯ ಗುಣವನ್ನು ಹೊಂದಿರುವಂಥಾದ್ದು ಎನ್ನುವ ಸಂಗತಿ ಆ ಭಿಕ್ಷುಕನಿಗೂ ಗೊತ್ತಿದೆ ಮಾತ್ರವಲ್ಲ, ಈ ವಿದ್ಯಾವಂತ ಪ್ರೊಫೆಸರ್‌ಗೆ ಗೊತ್ತಿಲ್ಲದ, ಹುಡುಕಿದರೂ ಸಿಗದೇ ಹೋದ ಆ ಸಸ್ಯದ ಬಳ್ಳಿ ಎಲ್ಲಿ ಸಿಗುತ್ತದೆ ಎನ್ನುವುದೂ ಅವನಿಗೆ ಗೊತ್ತಿತ್ತು! ಇಲ್ಲಿ ಆ ಸಮಾನತೆಯಿದೆ, ಮಂದಣ್ಣನಿಗೂ ವಿಜ್ಞಾನಿ ಕರ್ವಾಲೋ ಸಾಹೇಬರಿಗೂ ಇದ್ದ ಸಮಾನತೆ. ಆದರೇನು, ಇವನಿಗೆ ಪ್ರಜ್ಞೆ ಮರಳುವ ಮುನ್ನವೇ ಮೂಳೆ ಮುರಿದುಕೊಂಡು ಬಿದ್ದ ಇದೇ ಪ್ರೊಫೆಸರನ ಚಿಕಿತ್ಸೆಗೆ ಇದ್ದಬಿದ್ದ ಎಲ್ಲಾ ಸಸ್ಯಗಳನ್ನು ಅರೆದು ಹಚ್ಚಿಯಾಗಿದೆ. ಈಗ ಮತ್ತೆ ಬೇಕೆಂದರೆ ಹನ್ನೆರಡು ವರ್ಷ ಕಾಯಬೇಕು!

ಬೊಕ್ಕ (Bokha) ಕತೆಯಲ್ಲಿ ಪ‍ರ್ಸಿ ಕತೆಯ ಪ‍ರ್ಸಿ ಮತ್ತು ಫೈನ್ಲೀ ಚೊಪ್ಡ್ ಡಿಲ್ ಕತೆಯ ಜೆಸಿಂತಾ ಇಬ್ಬರೂ ಇದ್ದಾರೆ. ಇವರಿಬ್ಬರ ಸಮಾಗಮಕ್ಕೆ ಮಾಟಗಾತಿ ತಾಯಿ ಅಡ್ಡಿಯಾಗಿದ್ದಾಳೆ. ಅರ್ಧ ಕತೆ ಬೊಕ್ಕನ ನಿಟ್ಟಿನಲ್ಲಿ ನಿರೂಪಕ ಹೇಳಿದರೆ ಇನ್ನರ್ಧವನ್ನು ಬೊಕ್ಕನ ಊರಿಗೆ ಬಂದ ಪುಟ್ಟ ಬಾಲಕ ಸೊಲಿ ಹೇಳುತ್ತಾನೆ. ಪ‍ರ್ಸಿಯ ತಾಯಿ ಇದ್ದಕ್ಕಿದ್ದಂತೆ ಸತ್ತರೆ ಬೊಕ್ಕನ ತಾಯಿಯ ಸಾವು ವಿಚಿತ್ರವಾಗಿದೆ. ಇವಳು ಒಂದು ಕೋಳಿಯನ್ನು ಬಲಿಕೊಟ್ಟು ತನ್ನ ಮಗ ಬೊಕ್ಕನ ‘ತಲೆಕೆಡಿಸಿದ’, ಅವನನ್ನು ತನ್ನಿಂದ ದೂರಮಾಡಲು ಬಯಸಿರುವ ಸೆರಾಫಿನಾಳನ್ನು ಶಾಶ್ವತವಾಗಿ ಹುಚ್ಚಿಯಾಗಿಸುವ ಪ್ರಯತ್ನದಲ್ಲಿರುವಾಗಲೇ, ಆ ಕೋಳಿಯ ಮಾಂಸ ತಿಂದ ಬೊಕ್ಕ ಪೂರ್ತಿಯಾಗಿ ಹುಚ್ಚನಾಗುತ್ತಾನೆ, ಆಗುವ ಹಂತದಲ್ಲಿ ತನ್ನದೇ ತಾಯಿಯನ್ನು ಐವತ್ತೆರಡು ಬಾರಿ (!) ಇರಿದು ಕೊಲ್ಲುತ್ತಾನೆ. ಹುಚ್ಚಿನ ಹಂತದಲ್ಲೇ ಇದ್ದ ಸೆರಾಫಿನಾ ಅವನನ್ನು ತನ್ನ ಮಡಿಲಲ್ಲಿರಿಸಿಕೊಂಡು ಸಂತೈಸುವುದರೊಂದಿಗೆ ಕತೆ ಮುಗಿಯುತ್ತದೆ.

ವೈಚಿತ್ರ್ಯಗಳು, ಸಂಕೀರ್ಣತೆ, ಯಾವುದನ್ನೂ ಇದಂಮಿತ್ಥಂ ಎಂಬಂತೆ ಸ್ಪಷ್ಟಗೊಳಿಸದ, ಆದರೂ ಒಂದರ ಪಕ್ಕ ಒಂದೆಂಬಂತೆ ಸಪ್ರಯತ್ನ ಸಂಕಲಿತ ಘಟನೆಗಳು - ಇಲ್ಲಿ ಸಾಕಷ್ಟಿವೆ. ಬದುಕು ಇರುವುದೇ ಹಾಗೆ ಎನ್ನುವುದೇನೋ ಸತ್ಯವೇ. ಆದರೆ ಕತೆಗಳು ಹಾಗಿದ್ದರೆ ಸ್ಪಲ್ಪ ಕಷ್ಟವೇ. ಬದುಕನ್ನು ಕತೆ-ಕಾದಂಬರಿಗಳ ಮೂಲಕ ಒಂದು ಚೌಕಟ್ಟಿಗೆ ಒಗ್ಗಿಸಿ, ಹಿಗ್ಗಿಸಿ, ತಿರುವು ಮುರುವು ಮಾಡಿ, ಒಪ್ಪಿಕೊಂಡು ಮತ್ತು ಅಲ್ಲಗಳೆದು ಬದುಕನ್ನು ಅರ್ಥೈಸಿಕೊಳ್ಳುವ ಅಭ್ಯಾಸವಾಗಿರುವ ನಮಗೆ ಈ ಕತೆಗಳು ಅಷ್ಟೊಂದು ತೃಪ್ತಿಕೊಡುವುದಿಲ್ಲ.

No comments: