Tuesday, August 19, 2014

ಹಲವು ಹೊಸತನಗಳ ಸಾರ್ಥಕ ಪ್ರಯತ್ನ

ತಾವು ತಮ್ಮ ಬದುಕಿನ ಪರ್ವಕಾಲದಲ್ಲಿ ಒಡನಾಡಿದ ಇಬ್ಬರು ಮಹತ್ವದ ವ್ಯಕ್ತಿಗಳ ಕುರಿತು ಇಲ್ಲಿ ಬರೆಯುತ್ತ ನಟರಾಜ್ ಹುಳಿಯಾರ್ ಬಹು ಆಯಾಮದ ಒಂದು ಕೃತಿಯನ್ನು ಕಟ್ಟಿಕೊಡುತ್ತಾರೆ. ಇದು ಲಂಕೇಶ್ ಮತ್ತು ಡಿ ಆರ್ ನಾಗರಾಜ್ ಅವರ ಕೃತಿಗಳ ಹಿನ್ನೆಲೆಯಲ್ಲೇ ಬೆಳೆಯುತ್ತ ಹೋಗುವ ಕೃತಿಯಾಗಿರುವುದರಿಂದ, ಅದು ಈ ಇಬ್ಬರ ಕೃತಿಗಳ ಜೊತೆಗೇ ಅವರ ವ್ಯಕ್ತಿತ್ವವನ್ನು ವಿಮರ್ಶಿಸುತ್ತದೆ. ಒಡನಾಟಕ್ಕೆ ಹೆಚ್ಚಿನ ಒತ್ತು ಸಹಜವಾಗಿಯೇ ಇರುವುದರಿಂದ, ಇದು ಈ ಇಬ್ಬರು ವ್ಯಕ್ತಿಗಳ ವ್ಯಕ್ತಿತ್ವವನ್ನು ಅದರ ಎಲ್ಲ ಪ್ಲಸ್ಸು ಮೈನಸ್ಸುಗಳೊಂದಿಗೆ ಕಟ್ಟಿಕೊಡುತ್ತಲೇ ಅದನ್ನು ಗ್ರಹಿಸುತ್ತಿರುವ ವ್ಯಕ್ತಿಯನ್ನೂ ನಮಗೆ ಕಟ್ಟಿಕೊಡುತ್ತಿರುತ್ತದೆ ಎನ್ನುವುದೂ ಸುಳ್ಳಲ್ಲ. ನಾವು ಬೇರೆಯವರ ಬಗ್ಗೆ ಮಾತನಾಡುವಾಗಲೆಲ್ಲ ನಮ್ಮನ್ನೂ ಕುರಿತ ಚಿತ್ರವನ್ನು ಕೊಡುತ್ತಿರುತ್ತೇವೆ. ಯಾವುದು ಹೆಚ್ಚಾಗುತ್ತದೆ ಎನ್ನುವಲ್ಲೇ ಅದರ ಹದ ಇರುವುದು ಕೂಡ. ಎಲ್ಲಿಯೂ ನಟರಾಜ್ ಹುಳಿಯಾರ್ ಹದ ತಪ್ಪುವುದಿಲ್ಲ ಎನ್ನುವುದೇ ಈ ಕೃತಿಯ ಹೆಚ್ಚುಗಾರಿಕೆ. ಕೃತಿ, ವ್ಯಕ್ತಿತ್ವಗಳಾಚೆ ಇಲ್ಲಿ ಪರಸ್ಪರರ ಒಡನಾಟ, ಪ್ರೀತಿ, ಸಂಘರ್ಷ, ತುಮುಲಗಳೂ ಇಲ್ಲಿ ಕಣ್ಣಿಗೆ ಕಟ್ಟುವಂತೆ ಬಂದಿರುವುದು ವಿಶೇಷ. ಈ ಮೂವರೂ ತ್ರಿಕೋನದ ಮೂರು ಬಿಂದುಗಳಂತಿದ್ದು ತ್ರಿಕೋನ ಯಾವತ್ತೂ ಇಡೀ ಕಥನದ ಚೌಕಟ್ಟಾಗಿಯೇ ಉಳಿದಿರುವುದರಿಂದ ಅದು ದಕ್ಕಿಸಿದ ಹೊಸದೊಂದು ಆಯಾಮ ಕೂಡ ನಟರಾಜ್ ಹುಳಿಯಾರ್ ಅವರ ಕೃತಿಗೆ ಲಭಿಸಿ ಅದರ ಸೌಂದರ್ಯ ಮತ್ತಷ್ಟು ಹೆಚ್ಚಿದೆ.
ಲಂಕೇಶ್ ಬಗ್ಗೆ ಇರುವ ಭಾಗದಲ್ಲಿ ಲಂಕೇಶರ ಕೃತಿಗಳನ್ನು ಮತ್ತು ಪತ್ರಿಕೆಯನ್ನು ನಿಕಟವಾಗಿ ಓದಿಕೊಂಡಿದ್ದವರಿಗೆ ತೀರ ಹೊಸದೇನಿಲ್ಲ ಎನಿಸಬಹುದಾದರೂ ಇಲ್ಲಿನ ವಿಶೇಷ ನಟರಾಜ್, ಡಿ ಆರ್ ಮತ್ತು ಲಂಕೇಶರ ಒಡನಾಟದ ಏರುಪೇರುಗಳಲ್ಲೇ ಒಡಮೂಡುವುದು ಹೊಸದೇ ಆದ ನೋಟವನ್ನು ಕೊಡುವುದು ಸುಳ್ಳಲ್ಲ. ಆದರೆ ಡಿ ಆರ್ ನಾಗರಾಜ್ ಅವರ ಕೃತಿಗಳು ಲಂಕೇಶರ ಕೃತಿಗಳಷ್ಟು ಓದಲ್ಪಟ್ಟ ಕೃತಿಗಳೇನಲ್ಲ. ಡಿ ಆರ್ ನಾಗರಾಜ್ ಅವರ ಬಗ್ಗೆ ಕನ್ನಡದಲ್ಲಿ ಯಾವುದೇ ಕೃತಿಗಳಿರಲಿ, ಸರಿಯಾಗಿ ಅವರ ಬದುಕು-ಬರಹ-ವ್ಯಕ್ತಿತ್ವವನ್ನು ಕಟ್ಟಿಕೊಡಬಲ್ಲ ಒಂದು ಲೇಖನ ಕೂಡ ಸಿಗುವುದು ಕಷ್ಟ. ಹೀಗಾಗಿ ನಲವತ್ತರ ಆಯುರ್ಮಾನದಲ್ಲೇ ಬದುಕಿಗೆ ವಿದಾಯ ಹೇಳಿದ ಡಿ ಆರ್ ಆನಂತರದ ತಲೆಮಾರಿಗೆ ಅಗೋಚರವಾಗಿಯೇ ಉಳಿದುಬಿಟ್ಟಂತಿದೆ. ಅತಿಯಾದ ಅಕಾಡಮಿಕ್ ಚಿಂತನೆ ಮತ್ತು ಅದರಿಂದ ಪ್ರೇರಿತವಾದ ಅವರ ಭಾಷೆ ಕೂಡ ಇಂಥ ಸ್ಥಿತಿಗೆ ಕೊಡುಗೆ ನೀಡಿದೆ ಎನ್ನುವುದು ನಿಜವಿರಬಹುದು. ಆದರೆ ಅದಷ್ಟೇ ಕಾರಣವಲ್ಲ. ಸಮಕಾಲೀನ ಕನ್ನಡ ಸಾಹಿತ್ಯ ಏನನ್ನು ಕುರಿತು ಚಿಂತಿಸುತ್ತದೆ, ಚರ್ಚಿಸುತ್ತದೆ, ಯಾವುದನ್ನು ಮೇಲಿಟ್ಟು ಮೆರೆಸುತ್ತದೆ ಮತ್ತು ಯಾವುದನ್ನು ಮರೆಯಿಸುತ್ತಿದೆ ಎನ್ನುವುದು ಇಲ್ಲಿ ಪಿಸುಗುಡುತ್ತಿರುವುದರಲ್ಲಿ ಸತ್ಯವಿದೆ. ದೇಶಕಾಲ ಸಾಹಿತ್ಯ ಪತ್ರಿಕೆಯ ವಿಶೇಷಾಂಕ ಬಿಡುಗಡೆ ಸಮಾರಂಭದಲ್ಲಿ ಡಾ||ಯು ಆರ್ ಅನಂತಮೂರ್ತಿಯವರು ಡಿ ಆರ್ ಅವರ ಗೈರು ಕಾಡುತ್ತಿದೆ ಎಂದರು. ಅವರು ಇದ್ದಿದ್ದರೆ, ಇಂಥ ಸಂಚಿಕೆಯೊಂದು ರೂಪುಗೊಳ್ಳುವಲ್ಲಿ ಅವರ ಪಾತ್ರವೂ ಇರುವಂತಾಗಿದ್ದರೆ ಎಂದು ಹಂಬಲಿಸಿದರು. ಆದರೆ ಅವರ ಹಳಹಳಿಕೆ ಎಷ್ಟು ಮಂದಿಗೆ ತಲುಪಿತೋ ಎನ್ನುವುದು ಉತ್ತರವಿಲ್ಲದ ಪ್ರಶ್ನೆಯೇ. ಹಾಗಾಗಿ ಇಲ್ಲಿ ನಟರಾಜ್ ಹುಳಿಯಾರ್ ಅವರು ಮಾಡಿರುವ ಅದ್ಭುತವಾದ ಮತ್ತು ಅಭಿನಂದನೀಯವಾದ ಕೆಲಸ ಇದ್ದರೆ ಅದು ಡಿ ಆರ್ ಬಗ್ಗೆ ಅವರು ಮಾಡಿರುವುದೆಲ್ಲವೂ.

ನಟರಾಜ್ ಅವರು ಇಲ್ಲಿ ಡಿ ಆರ್ ಅವರ ಅಮೃತ ಮತ್ತು ಗರುಡ, ಶಕ್ತಿಶಾರದೆಯ ಮೇಳ, ಸಾಹಿತ್ಯ ಕಥನ, ವಸಂತಸ್ಮೃತಿ, ಏಕಾಂಗಿ ಮತ್ತು ಇತರ ಕತೆಗಳು (ವಸಂತ ಪ್ರಕಾಶನ), ಅಲ್ಲಮ ಪ್ರಭು ಮತ್ತು ಶೈವಪ್ರತಿಭೆ, ಸಂಸ್ಕೃತಿ ಕಥನ (ಸಂ: ಅಗ್ರಹಾರ ಕೃಷ್ಣಮೂರ್ತಿ), ಉರಿಚಮ್ಮಾಳಿಗೆ (ದ ಫ್ಲೇಮಿಂಗ್ ಫೀಟ್ ಕೃತಿಯ ಕನ್ನಡ ಅನುವಾದ ಎಂ ಎಸ್ ಆಶಾದೇವಿ) ಮತ್ತು ಅಕ್ಷರ ಪ್ರಕಾಶನ ಹೊರತಂದ ಅಕ್ಷರ ಚಿಂತನದ ಕೆಲವು ಕೃತಿಗಳಿಗೆ ಡಿ ಆರ್ ನಾಗರಾಜ್ ಬರೆದ ಹಿನ್ನುಡಿಗಳು ಮುಂತಾಗಿ ಒಂದೊಂದನ್ನೇ ಹಿಡಿದು ಅದರ ಮಹತ್ವವನ್ನು, ಅದಕ್ಕಾಗಿ ಡಿ ಆರ್ ಪಟ್ಟ ಶ್ರಮವನ್ನು, ಅವರ ಅಧ್ಯಯನದ ಹಿಂದಿದ್ದ ಕನ್‌ವಿಕ್ಷನ್ನನ್ನು, ಆ ಮಟ್ಟದ ತಾದ್ಯಾತ್ಮ ಪರ್ಯಾಯವಾಗಿ ಎಲ್ಲೋ ಏನನ್ನೋ ಕಳೆದುಕೊಳ್ಳುತ್ತಿದೆಯೇ ಎಂಬ ಆತಂಕವನ್ನು (ಲಂಕೇಶ್ ಜೊತೆ ಜಂಟಿಯಾಗಿ) ಅಸೂಯೆಯೇ ಇಂಥ ಭಾವಕ್ಕೆ ಕಾರಣವಿದ್ದೀತೆ ಎಂಬ ಅನುಮಾನದೊಂದಿಗೇ ವಿವರಿಸಿರುವುದು ನಿಜಕ್ಕೂ ಸ್ತುತ್ಯ ಪ್ರಯತ್ನ. ನಟರಾಜ್ ಹುಳಿಯಾರ್ ಅವರು ಇಲ್ಲಿ ಡಿ ಆರ್ ಅವರ ಕೃತಿಗಳು, ಚಿಂತನೆ ಮತ್ತು ತಮ್ಮನ್ನೇ ತಾವು ಮೀರಬೇಕೆಂಬ, ಹೊಸತಕ್ಕೆ ಕೈಚಾಚುತ್ತಲೇ ಇರುವ ಬಗ್ಗೆ ಅವರಲ್ಲಿದ್ದ ತಹತಹವನ್ನು ಒಟ್ಟಾಗಿಯೇ ಗಮನಿಸುತ್ತಾರೆ ಮಾತ್ರವಲ್ಲ ಅವರ ಒಡನಾಟ ತಮ್ಮನ್ನು ಹೇಗೆಲ್ಲ ಪ್ರಭಾವಿಸಿತು, ಲಂಕೇಶ್ ಮತ್ತು ಇವರ ನಡುವೆ ನಿಂತ ತಾವು ಕಂಡುದೇನು ಎನ್ನುವುದನ್ನೆಲ್ಲ ಹೇಳುತ್ತ ಒಟ್ಟಾರೆಯಾಗಿ ಡಿ ಆರ್ ಅವರ ಸಂಕೀರ್ಣ ವ್ಯಕ್ತಿತ್ವದ ಚಿತ್ರವನ್ನು ಕಟ್ಟಿಕೊಡುತ್ತಾರೆ. ಬಹುಷಃ ಇದನ್ನು ಹೀಗಲ್ಲದೆ ಬೇರೆ ತರ ಮಾಡಲು ಸಾಧ್ಯವಿರಲಿಲ್ಲವೇನೋ ಎಂಬಷ್ಟರಮಟ್ಟಿಗೆ ಇಲ್ಲಿನ ಮೂರೂ ಬಿಂದುಗಳು ಮುಖ್ಯವಾಗುತ್ತವೆ.

ಇಲ್ಲಿ ಲಂಕೇಶರ ಮತ್ತು ಡಿ ಆರ್ ನಾಗರಾಜ್ ಅವರ ಸಿಟ್ಟು, ಅಸಹನೆ, ಅಹಂಗೆ ಏಟಾದ ಸಂದರ್ಭದಲ್ಲಿ ವರ್ತಿಸಿದ ಬಗೆ ಕೂಡ ದಾಖಲಾಗುತ್ತದೆ. ಒಂದು ಕಡೆ ನಟರಾಜ್ ಅವರೇ ತಮ್ಮ ನಡೆಯನ್ನು ವಿಮರ್ಶಿಸಿಕೊಂಡಿದ್ದಾರೆ. ಆದರೆ ಒಟ್ಟಾರೆಯಾಗಿ ಈ ಎಲ್ಲ ವ್ಯಕ್ತಿತ್ವಗಳ ಔದಾರ್ಯವೇ ಮೇಲೆ ನಿಂತು ಅವರವರ ವ್ಯಕ್ತಿತ್ವದ ಕ್ಷುದ್ರ ಎನ್ನಬಹುದಾದ ಭಾಗಗಳನ್ನು ಸಹ್ಯ/ನಗಣ್ಯವಾಗಿಸಿ ಕೊನೆಗೂ ಅಭಿಮಾನವನ್ನೇ ಪೊರೆಯುತ್ತವೆ ಎನ್ನುವುದು ಗಮನಿಸಬೇಕಾದ ಅಂಶ.

ನಟರಾಜ್ ಹುಳಿಯಾರ್ ಅವರು ಲಂಕೇಶ್ ಮತ್ತು ಡಿ ಆರ್ ನಾಗರಾಜ್ ಅವರ ಒಡನಾಟದ ಅಪೂರ್ವ ಘಳಿಗೆಗಳನ್ನು, ಆ ಕ್ಷಣ ಅವರಾಡಿದ ಅದ್ಭುತ ಮಾತುಗಳನ್ನು ಎತ್ತಿಟ್ಟುಕೊಂಡು ಕೊಟ್ಟಿದ್ದೂ ಇಲ್ಲಿದೆ. ಅವರ ಕೃತಿಗಳಿಂದ ಆಯ್ದ, ಅವರ ವ್ಯಕ್ತಿತ್ವ-ಚಿಂತನೆಗಳ ಅಪೂರ್ವ ಹೊಳಹುಗಳನ್ನು ಇಲ್ಲಿ ಕಾಣಿಸಿದ್ದೂ ಇದೆ. ಸ್ವತಃ ತಾವು ಬರೆದ ಕವನ, ಡೈರಿಯ ಬರಹ, ಯಾವುದೋ ಹಿನ್ನುಡಿ, ಅಂಕಣದ ಭಾಗಗಳೂ ಇಲ್ಲಿವೆ. ಯಾವುದೋ ಸಂದರ್ಭ, ಘಟನೆ, ಮನಸ್ತಾಪದ ಹಿನ್ನೆಲೆಯನ್ನಿಟ್ಟುಕೊಂಡು ವ್ಯಕ್ತಿತ್ವಗಳನ್ನು ಒರೆಗೆ ಹಚ್ಚಿ ನೋಡಿದ್ದೂ ಇದೆ. ಹೀಗೆ ಬಹುರೂಪಿ ಕಥನಕ್ರಿಯೆಯನ್ನು ತನ್ನೊಳಗಿರಿಸಿಕೊಂಡು ರೂಪುಗೊಂಡ ಈ ಸೃಜನಶೀಲ ಕಥಾನಕ ಅನೇಕ ಕಾರಣಗಳಿಗೆ ಹೊಸಬಗೆಯದು. ನಟರಾಜ್ ಅವರು ತಮ್ಮ ಸಮಕಾಲೀನ ಬದುಕಿನ, ಅಷ್ಟೇನೂ ಹಿರಿಯರಲ್ಲದ ಮತ್ತು ಅರೆಕೊರೆಗಳನ್ನೂ ಗಮನಿಸಿಕೊಂಡೇ ಇದ್ದ ವ್ಯಕ್ತಿಗಳಿಬ್ಬರ ಮಾತು, ಸಂವಾದ, ಬರವಣಿಗೆ, ಬದುಕಿನಿಂದ ಎಷ್ಟು ಸಾಧ್ಯವೋ ಅಷ್ಟನ್ನು ಹೀರಿಕೊಳ್ಳುವ ವಿದ್ಯಾರ್ಥಿತನದ ವಿನಯವನ್ನು ತಮ್ಮಲ್ಲಿ ಆವತ್ತು ಉಳಿಸಿಕೊಂಡಿದ್ದರಿಂದಲೇ ಇವತ್ತು ನಮಗೆ ಈ ಕೃತಿ ಸಿಗುವಂತಾಗಿದೆ ಎನ್ನುವುದು ಸುಳ್ಳಲ್ಲ. ಅವರು ಅಲ್ಲಲ್ಲಿ ಟಿಪ್ಪಣಿ ಮಾಡಿಕೊಳ್ಳುತ್ತಿರುವುದನ್ನು ಒಮ್ಮೆ ಲಂಕೇಶರೇ ಗೇಲಿ ಮಾಡಿದ್ದಿದೆ. ಇಬ್ಬರು ಗುರುಗಳ ನಡುವೆ ಲಾಯಲ್ಟಿಯ ಪ್ರಶ್ನೆಯನ್ನು ಎದುರಿಸಿದ್ದೂ ಇದೆ. ಎಲ್ಲವೂ ಇವತ್ತು ಕಾಣಿಸುವ ಬಗೆಯಲ್ಲೇ ಆವತ್ತು ಕಾಣುತ್ತಿರಲಿಲ್ಲ, ಕಂಡಿರಲಿಲ್ಲ ಎಂಬ ಪ್ರಜ್ಞೆ ಕೂಡ ನಮಗಿರಬೇಕಾಗುತ್ತದೆ. ಹೀಗೆ ಭೂತವನ್ನು, ಈಗ ಬದುಕಿಲ್ಲದ (ಸೀಮಿತ ಅರ್ಥದಲ್ಲಿ) ಇಬ್ಬರು ಪ್ರೇರೇಪಿಸಿದ್ದ ಕ್ಷಣಗಳನ್ನು ವರ್ತಮಾನದಲ್ಲಿ ನಿಂತು ನೋಡುವಾಗ ಹುಟ್ಟುವ ವಿಚಿತ್ರವಾದ ಒಂದು ಅನುಭವವನ್ನೂ ಈ ಕೃತಿ ಮುಟ್ಟಬಯಸಿದೆ.

ಇದು ಅದರ ಆಕೃತಿ ಮತ್ತು ಒಟ್ಟು ಆಶಯದ ಮಾತಾಯಿತು. ಅದರಾಚೆಗೆ ಈ ಕೃತಿ ಕನ್ನಡ ಸಾಹಿತ್ಯದ ವರ್ತಮಾನದಲ್ಲಿ ಹೇಗೆ ಸ್ವೀಕೃತಗೊಂಡು, ಚರ್ಚೆಗೆ ತುತ್ತಾಗಿ ಮತ್ತಷ್ಟು ಬಗೆಯ ಕಥಾನಕಗಳ ಹುಟ್ಟಿಗೆ ಪ್ರೇರಣೆಯಾಗಬಹುದು ಎನ್ನುವುದನ್ನು ಕಾದು ನೋಡಬೇಕಿದೆ.

ವಿಚಿತ್ರವೆಂದರೆ ಎಚ್ ಎಸ್ ಶಿವಪ್ರಕಾಶ್ ಬರೆದ ಒಂದು ಅಂಕಣ ಲೇಖನದಿಂದ ಪ್ರಭಾವಿತನಾಗಿ (ಒಂದೇ ರಾತ್ರಿ ಕೂತು ಓದಿ ಮುಗಿಸಿದ ಮಾತು ಕೇಳಿ) ನಾನು ಒಂದಿಷ್ಟು ಪುಟಗಳನ್ನು ಓದಿ ನಿಧಾನವಾಗಿ ಓದಬೇಕೆಂದು ಬದಿಗಿರಿಸಿದ್ದ ಈ ಪುಸ್ತಕವನ್ನು ಒಂದೇ ಏಟಿಗೆ ಓದಿ ಮುಗಿಸಿದೆ. ಓದಿ ಮುಗಿಸಿದ ನಂತರ ಇದು ಮತ್ತೊಮ್ಮೆ ಹುಳಿಮಾವಿನ ಮರವನ್ನು, ಮುಟ್ಟಿಸಿಕೊಂಡವನು, ಸಹಪಾಠಿ ಮುಂತಾದ ಕತೆಗಳನ್ನು, ಡಿ ಆರ್ ಅವರ ಎಲ್ಲ ಕೃತಿಗಳನ್ನು ಓದುವುದು ಅನಿವಾರ್ಯವಾಗಿಸಿದೆ. ಬಹುಷಃ ವ್ಯಕ್ತಿತ್ವವನ್ನು ಕಟ್ಟಿಕೊಡುವುದರ ಜೊತೆಗೇ ಕೃತಿಗಳ ಓದಿಗೆ ಪ್ರೇರೇಪಿಸುವ ಮಟ್ಟಿಗೆ ಈ ಕೃತಿ ಪ್ರಭಾವಶಾಲಿಯಾಗಿದೆ ಎಂದರೆ ನಟರಾಜ್ ಹುಳಿಯಾರ್ ಅವರ ಶ್ರಮ ಸಾರ್ಥಕವೇ. ಸ್ವತಃ ನಟರಾಜ್ ಹುಳಿಯಾರ್ ಅವರ ಗಾಳಿಬೆಳಕು, ಮಾಯಾಕಿನ್ನರಿ ಕೂಡಾ ಶೆಲ್ಫಿನಿಂದ ಮತ್ತೆ ಹೊರಬಂದಿವೆ ಈಗ!

ಅವರನ್ನು ಕನ್ನಡಿಗರೆಲ್ಲರೂ ಅಭಿನಂದಿಸಬೇಕಾದಂತೆ ಮಾಡಿರುವ ಕೃತಿಯಿದು.

No comments: