Tuesday, September 9, 2014

ಕನ್ನಡ ಕಾದಂಬರಿಯ ಸ್ವರೂಪ ಬದಲಾವಣೆಯ ಹೊರಳುದಾರಿಯಲ್ಲಿದೆಯೆ? (ಭಾಗ – 2)

Orhan Pamuk ನ ಹೊಸ ಕೃತಿ ‘The Naive and Sentimental Novelist’ ಇಲ್ಲಿ ಗಮನಿಸಬಹುದಾಗಿದೆ. ಪಮುಕ್ ಹೇಳುವ naive novelist ಮತ್ತು reader, sentimental novelist ಮತ್ತು reader ಗಳನ್ನು ನಾವು ಸೀಮಿತ ಅರ್ಥದಲ್ಲಿ ಒಬ್ಬ `ಒಪ್ಪಿಕೊಂಡ’ ಮತ್ತು `ಪ್ರಶ್ನಿಸುವ ಓದುಗ/ಕಾದಂಬರಿಕಾರ’ ಎಂದು ಭಾವಿಸಿದರೆ ತಪ್ಪಾಗಲಾರದು.ಮುಗ್ಧವಾಗಿ ಬರಹಗಾರನ ಲೋಕವನ್ನು ಪ್ರವೇಶಿಸಿ ಅಲ್ಲಿಯದನ್ನು ಮನಸಾ ಒಪ್ಪಿಕೊಂಡು ರಸಾನುಭೂತಿಯಲ್ಲಿ ತೇಲಿಹೋಗುವ ಓದುಗ ಇರುವಂತೆಯೇ ಹಾಗೆ ತನ್ಮಯತೆಯಿಂದ ಬರೆಯಬಲ್ಲ ಕಾದಂಬರಿಕಾರನೂ ಇರುತ್ತಾನೆ. ಇವರಿಗೆ ತರ್ಕ ಮುಖ್ಯವಲ್ಲ. ಇದು ಸಂಭಾವ್ಯವೇ, ಸಂಬದ್ಧವೇ, ಸಮಕಾಲೀನವೇ ಎಂಬೆಲ್ಲ ಪ್ರಶ್ನೆಗಳು ಕೂಡ ಅಪ್ರಸ್ತುತ. ಒಪ್ಪಿಕೊಂಡಿದ್ದಾರೆ, ಅನುಭವಿಸುತ್ತಿದ್ದಾರೆ, ಅದರ ರಸ ಅವರಿಗೆ ದಕ್ಕಿಬಿಟ್ಟಿದೆ. ಅಷ್ಟೇ ಮುಖ್ಯವಾದದ್ದು. ಆದರೆ ಪ್ರಶ್ನಿಸುವ ಓದುಗ ಹಾಗಲ್ಲ. ಪ್ರಶ್ನಿಸಿಕೊಂಡೇ ಬರೆಯುವ ಬರಹಗಾರನೂ ಕೂಡ ಹಾಗಲ್ಲ. ಇವರು ಓದುಗನನ್ನು, ಕೆಲವೊಮ್ಮೆ ವಿಮರ್ಶಕನನ್ನೂ ಮನಸ್ಸಿನಲ್ಲಿಯೇ ಎದುರಿಸುತ್ತ ಬರೆಯುವ ‘ಜಾಣ’ ಬರಹಗಾರರು. ಇವರ ಓದುಗನೂ ಪ್ರತಿ ವಾಕ್ಯ, ಶಬ್ದ-ಗಳ ಔಚಿತ್ಯ, ಬಳಕೆ ತೆರೆದಿಡುವ ಅರ್ಥ ಸಾಧ್ಯಾಸಾಧ್ಯತೆಗಳು - ಹೀಗೆ ಸೀಳಿ ಸೀಳಿ ವಿವೇಚಿಸುವವರು. ಎರಡರ ತೀವ್ರತೆಯಲ್ಲೂ ಒಬ್ಬೊಬ್ಬರಿಗೂ ಅವರವರ ಭಿನ್ನತೆ ಇದ್ದೀತು, ಆದರೆ ಮೂಲ ಲಕ್ಷಣಗಳು ಸ್ಥೂಲವಾಗಿ ಹೀಗೆ. ಒಬ್ಬ ಉತ್ತಮ ಕಾದಂಬರಿಕಾರ ಅಥವಾ ಓದುಗ ಈ ಎರಡೂ ತುದಿಗಳಲ್ಲಿರದೆ ಎರಡರ ಸಂತುಲಿತ ಮಿಶ್ರಣವಾಗಿರುತ್ತಾನೆ ಎನ್ನುತ್ತಾನೆ ಪಮುಕ್.

ಎರಡನೆಯದಾಗಿ, ಕಾದಂಬರಿಯಲ್ಲಿ ಕಾದಂಬರಿಯ ಕೇಂದ್ರ ಎಂಬುದು ಬಹುಮುಖ್ಯ ಅಂಶ ಎನ್ನುತ್ತಾನೆ ಪಮುಕ್. ಎಲ್ಲಿದೆ ಕಾದಂಬರಿಯ ಕೇಂದ್ರ, ಏನಿದರ ಅರ್ಥ, ಏನಿದರ ಉದ್ದೇಶ, ಇಡೀ ಕಲಾಕೃತಿ ಹೇಳಲು ಪ್ರಯತ್ನಿಸುತ್ತಿರುವುದಾದರೂ ಏನನ್ನು ಎಂಬುದನ್ನು ಓದುಗನ ಮನಸ್ಸು ತೀವ್ರವಾಗಿ ಹುಡುಕುತ್ತಿರುತ್ತದಂತೆ, ಕಾದಂಬರಿಯನ್ನು ಓದುವಾಗ.

ಪಮುಕ್ ತನ್ನ ಕೃತಿಯಲ್ಲಿ ನಮಗೆಲ್ಲ ಗೊತ್ತಿರುವ ಮತ್ತು ಗೊತ್ತಿಲ್ಲದ ಒಂದು ನೂರು ಸಂಗತಿಗಳನ್ನು ಹೇಳುತ್ತ ಹೋಗುತ್ತಾನೆ, ಕಾದಂಬರಿಕಾರನ ಮತ್ತು ಕಾದಂಬರಿಯ ಓದುಗನ ಬಗ್ಗೆ. ಇಲ್ಲಿ ಬೇಕಾದ ಇನ್ನೊಂದೇ ಅಂಶ, ನಾವೇಕೆ ಓದುತ್ತೇವೆ ಎನ್ನುವುದರ ಕುರಿತಾಗಿದೆ. ಪತ್ತೇದಾರಿ, ರೋಮಾನ್ಸ್, ಕೌತುಕಮಯ ವಿವರ-ತಿರುವು, ಆಘಾತ, ಅಚ್ಚರಿ, ಸಾಹಸ, ಅದ್ಭುತಗಳೇ ತುಂಬಿ ಮನರಂಜಿಸುವ ಕಾದಂಬರಿಗಳು ಮತ್ತು ಸಾಹಿತ್ಯಿಕ ಕಾದಂಬರಿಗಳು ಎಂದು ವಿಂಗಡಿಸಿಕೊಂಡು ಯಾಕೆ ಕೆಲವರು ಆ ಬಗೆಯ ಮತ್ತು ಕೆಲವರು ಈ ಬಗೆಯ ಕಾದಂಬರಿಗಳನ್ನೇ ಖಾಯಸು ಮಾಡುತ್ತಾರೆ ಎನ್ನುವ ಬಗ್ಗೆ ಪಮುಕ್ ಹೇಳುವ ಮಾತು ಕುತೂಹಲಕರವಾಗಿದೆ. ಮನೋರಂಜನೆಯೇ ಉದ್ದೇಶವಾಗುಳ್ಳ ಓದು ನಮಗೆ ಈ ಜಗತ್ತಿನಲ್ಲಿ ಎಲ್ಲವೂ ಸರಿಯಾಗಿ ನಡೀತಿದೆ, ಹೇಗಿರಬೇಕೋ ಹಾಗಿದೆ ಎನ್ನುವ ಭಾವನೆಯನ್ನೂ, ನೆಮ್ಮದಿ ಮತ್ತು ಸಮಾಧಾನವನ್ನೂ ನೀಡುವುದಂತೆ. ಮತ್ತೆ ಯಾಕೆ ನಾವು ಸಾಹಿತ್ಯಿಕ ಕಾದಂಬರಿಗಳು, ಮಹಾನ್ ಕಾದಂಬರಿಗಳು ಎನ್ನುತ್ತೇವಲ್ಲ, ಯಾವುದು ನಮಗೆ ಅಷ್ಟಿಷ್ಟು ಮಾರ್ಗದರ್ಶನ, ಅರಿವು-ಜ್ಞಾನವನ್ನೆಲ್ಲ ನೀಡಿ ಈ ಬದುಕಿಗೆ ಕೊಂಚ ಅರ್ಥವಂತಿಕೆಯನ್ನೂ, ನಾವು ಬದುಕುತ್ತಿರುವುದಕ್ಕೆ ಅರ್ಥವನ್ನೂ ನೀಡಬಹುದೆಂದು ನಂಬುತ್ತೇವೋ ಅದರತ್ತ ಯಾಕೆ ತಿರುಗುತ್ತೇವೆ ಎಂದರೆ, ನಾವು ಬದುಕುತ್ತಿರುವ ಈ ಜಗತ್ತಿನೊಂದಿಗೆ ಒಂದು ತಾದ್ಯಾತ್ಮವನ್ನು ಸಾಧಿಸುವಲ್ಲಿ ವಿಫಲರಾಗಿರುವುದರಿಂದಂತೆ!
ಈಚೆಗೆ ಬಂದ ಪ್ರಮುಖ ಕಾದಂಬರಿಗಳಲ್ಲೊಂದಾದ ಅಬ್ದುಲ್ ರಶೀದರ ‘ಹೂವಿನಕೊಲ್ಲಿ’ ಕಾದಂಬರಿಯನ್ನೇ ತೆಗೆದುಕೊಂಡರೆ, ಅದರ ‘ಕೇಂದ್ರ’ ಯಾವುದು ಎಂಬ ಪ್ರಶ್ನೆಯಿದೆ. ಕೇಂದ್ರ ಹೂವಿನಕೊಲ್ಲಿಯೇ, ಅನುಮಾನವಿಲ್ಲ. ಆದರೆ ಹೂವಿನಕೊಲ್ಲಿಯ ಯಾವುದು, ಏನು ಎಂಬುದನ್ನು ಓದುಗನ ಮನಸ್ಸು ಹುಡುಕುತ್ತಲೇ ಇರುತ್ತದೆ ಎನ್ನುವುದು ಕೂಡ ನಿಜವೇ. ಹೂವಿನಕೊಲ್ಲಿಯ ಬದುಕನ್ನು, ಜೀವನಕ್ರಮವನ್ನು ಮತ್ತು ಅದರ ಇತಿಮಿತಿಗಳಲ್ಲೇ ಆ ಬದುಕಿನ ಏರಿಳಿತಗಳನ್ನು - ಚಿತ್ರಿಸುತ್ತ ಸಾಗುವ ಇಲ್ಲಿನ ನಿರೂಪಣೆ ಯಾವುದೋ ಕಥಾನಕದ ಎಳೆ ಇಟ್ಟುಕೊಂಡು ಏನೋ ಒಂದಿಷ್ಟು ಕೌತುಕದ ತಿರುವುಗಳು, ಏನೋ ಒಂದು ಮೇರುಘಟ್ಟ, ‘ಇದೇ ನಾನು ಹೇಳ ಹೊರಟಿದ್ದು’ಎಂಬ ಕುರುಹು ಅಥವಾ ಚಿತ್ತಾಲರು ಹೇಳುವಂತೆ ‘ನಾನು ಹೊಳೆಯಿಸಲು ಹೊರಟಿದ್ದು ಇದೇ’ ಎಂಬ ಧಾಟಿಯಾಗಲೀ, ನಿಲುವಾಗಲೀ ಇಲ್ಲಿ ಕಾಣಸಿಗುವುದಿಲ್ಲ. ಇಂಥ ನಿರೀಕ್ಷೆಗಳಿಗೆ ಈ ಕಾದಂಬರಿ ಬದ್ಧವಾಗಿ ಸಾಗುವುದಿಲ್ಲ. ಕಾದಂಬರಿಯ ಕೇಂದ್ರ ಎನ್ನುವಾಗ ಅದರ ಸರಳ ಅರ್ಥ ಏಕಸೂತ್ರದ ಕಥಾನಕ ಎಂದಾಗಲೀ, ಅದು ನೀಡುವ message ಎಂದಾಗಲೀ ತಿಳಿಯಬಾರದು. ಇಡೀ ಕೃತಿ ಏಕತ್ರವಾಗಿ ನಮ್ಮಲ್ಲಿ ಒಡಮೂಡಿಸುವ ಭಾವವೂ ಕೂಡ ಒಂದು ಕಾದಂಬರಿಯ ಕೇಂದ್ರವೇ. ಇಲ್ಲಿ ಅದು ಹೂವಿನಕೊಲ್ಲಿಯ ಬದುಕಿನ ಚಿತ್ರಗಳು, ವಿವಿಧ ಸಮಯ, ಸಂದರ್ಭ, ಸನ್ನಿವೇಶ ಮತ್ತು ಪ್ರಾಕೃತಿಕ ಹಿನ್ನೆಲೆಯ ಚಿತ್ರಗಳು.

ಆದರೂ ಹೇಳಬೇಕಾದ ಮಾತೆಂದರೆ, ಬಾಲ್ಯದ ನೆನಪುಗಳ ದಾಖಲಾತಿಯೇ ಮುಖ್ಯವಾದಂತಿರುವ ಇಲ್ಲಿ ಕೆಲಸ ಮಾಡುವ ಪ್ರಜ್ಞೆ ಕೂಡಾ infant ಆಗಿಯೇ ಇದೆ. ಪ್ರೇಮ-ಕಾಮಗಳಾಗಲೀ, ದೊಡ್ಡವರ ಜಗತ್ತಿನ ಯಾವುದೇ ಗಹನವಾದ ಸಂಗತಿಗಳಾಗಲೀ ಇಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದೆ ಅಂಥ ವಿದ್ಯಮಾನಗಳೆಲ್ಲ ಒಂಥರಾ ಬಾಲಪ್ರಜ್ಞೆಯ ಊಹೆ-ಕಲ್ಪನೆಗಳ ತಥಾಕಥಿತ ಉಲ್ಲೇಖಗಳಷ್ಟೇ ಆಗಿ ಉಳಿಯುತ್ತವೆ. ಅಷ್ಟರ ಮಟ್ಟಿಗೆ ಅನೇಕ ಪಾತ್ರಗಳು ಸ್ಕೆಚೀ ಆಗಿಯೇ ಮನಸ್ಸಿನಲ್ಲುಳಿದು ಬಿಟ್ಟರೆ ಅದರ ಉದ್ದೇಶವೇನೋ ಬೇರೆ ಇದ್ದೀತು.

ತೇಜಸ್ವಿ ತಮ್ಮ ‘ವಿಮರ್ಶೆಯ ವಿಮರ್ಶೆ’ಪುಸ್ತಕದಲ್ಲಿ ಒಂದು ಮಾತು ಹೇಳುತ್ತಾರೆ. ಬಹುಷಃ ಇದು ಅವರು ಚಂದ್ರಶೇಖರ ನಂಗಲಿಯವರಿಗೆ ಬರೆದ ಪತ್ರದಲ್ಲಿ ಬರುತ್ತದೆ ಎಂದು ನೆನಪು. ‘ಬರೇ ಓದುವ ಖುಶಿಗಾಗಿಯೇ ನಾವು ಕೆಲವೊಂದು ಪುಸ್ತಕಗಳನ್ನು ಇಷ್ಟಪಡುವುದಿಲ್ಲವೇ....ಓದುತ್ತಾ ಖುಶಿಪಡುವ, ಅಯ್ಯೊ ಇದು ಮುಗಿದೇ ಹೋದರೆ ಇನ್ನೇನಪ್ಪಾ ಓದೋದು ಅಂದುಕೊಳ್ಳುವ ಪುಸ್ತಕಗಳಿಲ್ಲವೆ....’ ಎನ್ನುತ್ತ ಅಂಥ ಏನೋ ಒಂದು ಖುಶಿ ಕೊಡುವ ಬರಹಗಳ ಬಗ್ಗೆ, ಪುಸ್ತಕಗಳ ಬಗ್ಗೆ ಉಲ್ಲೇಖಿಸುತ್ತಾರೆ. ತೇಜಸ್ವಿಯವರ ಪರಿಸರದ ಕತೆಗಳು, ಕರ್ವಾಲೊ, ಅವರು ಅನುವಾದಿಸಿರುವ ಕೆನೆತ್ ಆಂಡರ್ಸನ್ ಸರಣಿಗಳು, ಅವರದೇ ಪ್ರಕಾಶನದ ಲಾರಾ ಇಂಗಲ್ಸ್ ವೈಲ್ಡರಳ ಸರಣಿ ಎಲ್ಲ ಇಂಥ ಪುಸ್ತಕಗಳೇ. ತೇಜಸ್ವಿಯವರ ‘ಮಾಯಾಲೋಕ -೧’ ಕೂಡಾ ಈ ತರದ ಬರವಣಿಗೆಯೇ. ಗಮನಿಸಬೇಕಾದ್ದೆಂದರೆ ಇಲ್ಲಿ ನಾವು ಒಂದು ಕೇಂದ್ರವನ್ನೋ, ಚಲನಶೀಲ ಕಥಾನಕದ ಬೆಳವಣಿಗೆಯನ್ನೋ ಅಷ್ಟಾಗಿ ಹುಡುಕುವ, ನೆಚ್ಚಿಕೊಳ್ಳುವ ಪ್ರಮೇಯವೇ ಬರುವುದಿಲ್ಲ. ‘ಕರ್ವಾಲೊ’ ಮಾತ್ರ ಈ ಮಾದರಿಯನ್ನೇ ಕಾದಂಬರಿ ಪ್ರಕಾರದಲ್ಲಿ ದುಡಿಸಿಕೊಂಡು ಯಶಸ್ವಿಯಾದ ಬರವಣಿಗೆಯಾಗಿ ನಿಲ್ಲುವುದು ಯಾಕೆಂದರೆ ಅದಕ್ಕೊಂದು ಕೇಂದ್ರ ಮತ್ತು ಚಲನಶೀಲ ಕಥಾನಕದ ನಡೆ ಎರಡೂ ಇರುವುದರಿಂದಲೇ. ‘ಮಾಯಾಲೋಕ’ದಲ್ಲಿ ಈ ಎರಡೂ ಇರಲೇ ಇಲ್ಲ. ಬಹುಷಃ ತೇಜಸ್ವಿಯವರು ಬದುಕಿದ್ದಿದ್ದರೆ ‘ಮಾಯಾಲೋಕ-೨’ ಅಥವಾ ೩ರಲ್ಲಿ ಅಂಥ ಒಂದು ಕೇಂದ್ರವನ್ನೂ ಕಥಾನಕದ ಹಂದರವನ್ನೂ ಇಡೀ ಸರಣಿಗೆ ದಕ್ಕಿಸಿಕೊಡುತ್ತಿದ್ದರೇನೊ. ದಾಸ್ತಾವಸ್ಕಿಯ ಜಗತ್ಪ್ರಸಿದ್ಧ ರಾಜಕೀಯ ಕಾದಂಬರಿ "ದ ಡೆವಿಲ್ಸ್" ಈ ರೀತಿಯಲ್ಲಿ ಎಲ್ಲೋ ಒಂದು ಕಡೆ ಅಕಸ್ಮಾತ್ತಾಗಿ ಕೇಂದ್ರ ಗ್ರಹಣ ಮಾಡಿದ ಪ್ರಸಂಗವನ್ನು ಪಮುಕ್ ತನ್ನ ಕೃತಿಯಲ್ಲಿ ವಿವರಿಸಿದ್ದಾನೆ ಕೂಡ. ತೇಜಸ್ವಿಯವರದೂ ಅಂಥ ಸಿದ್ಧಿಯನ್ನು ದಕ್ಕಿಸಬಲ್ಲ ಪ್ರತಿಭೆಯೇ ಎನ್ನುವುದರಲ್ಲಿ ಸಂಶಯವಿಲ್ಲ. ಸಾವು ಅಂಥ ಸಿದ್ಧಿಯ ಸಂಭವವನ್ನು ಕೊಂದಿತು.

ಮಾರ್ಕ್ವೆಜ್‌ನ ಶೈಲಿಯಲ್ಲಾಗಲೀ, ಲಂಕೇಶರ ‘ಮುಸ್ಸಂಜೆಯ ಕಥಾ ಪ್ರಸಂಗ’ದಲ್ಲಾಗಲೀ ಬರೆಯುತ್ತಿರುವುದು ಕಾದಂಬರಿ, ಅದಕ್ಕೊಂದು ಆತ್ಮ, ಕೇಂದ್ರ ಬೇಕೇ ಬೇಕು ಎಂಬ ಎಚ್ಚರ ಮತ್ತು ಎಲ್ಲ ಬಿಡಿ ಬಿಡಿ ಚಿತ್ರಗಳನ್ನೂ ಸೆಳೆದು ಏಕಸೂತ್ರದಲ್ಲಿ ಬಂಧಿಸಿ ನೇಯಬಲ್ಲ ಕೊಂಡಿಗಳ ಒಂದು ಸರಪಳಿ ಪೂರ್ತಿಯಾಗಿ missing ಆಗಿರುವುದಿಲ್ಲ ಎನ್ನುವುದನ್ನು ಗಮನಿಸಬೇಕು. ಸೂಕ್ಷ್ಮವಾಗಿ ಗಮನಿಸಿದರೆ ತೇಜಸ್ವಿಯವರ ‘ಚಿದಂಬರ ರಹಸ್ಯ’ ಕಾದಂಬರಿಯ ನಡೆ ಮತ್ತು ಅಂತ್ಯದ ಸಮೀಕರಣದಲ್ಲೂ ನಮಗೆ ಇಂಥ ದರ್ಶನವೇ ಲಭ್ಯವಾಗುತ್ತದೆ, ತೇಜಸ್ವಿಯವರು ಸ್ವತಃ ‘ಚಿದಂಬರ ರಹಸ್ಯ’ದ ಅಂತ್ಯಕ್ಕೆ ಅಂಥ ಬಣ್ಣವನ್ನೆಲ್ಲ ಕೊಡುವುದನ್ನು ಅಷ್ಟಾಗಿ ಇಷ್ಟಪಟ್ಟಿರಲಿಲ್ಲ ಎಂಬುದನ್ನೂ ಒಪ್ಪಿಕೊಂಡರೂ. ಇಲ್ಲೆಲ್ಲಾ ಏನಾಯಿತೆಂದರೆ, ಇವರ ಬರವಣಿಗೆಯ ಹರವು, ವ್ಯಾಪ್ತಿ - ಯಾವುದನ್ನು ನಾವು ಕ್ಯಾನ್ವಾಸ್ ಎನ್ನುತ್ತೇವೋ ಅದು ಹಿಗ್ಗುತ್ತಾ ಹೋಗುತ್ತದೆ ಮತ್ತು ಎಲ್ಲವನ್ನೂ ನುಂಗಿ ಜೀರ್ಣಿಸಿಕೊಳ್ಳಬಲ್ಲ ವಿಸ್ತಾರವನ್ನು ಪಡೆದುಕೊಂಡು ನಿಲ್ಲುತ್ತದೆ. ರಶೀದ್ ಬಳಸಿಕೊಂಡ format ಈ ಬಗೆಯದ್ದು ಮತ್ತು ಇದರ ಆಸುಪಾಸಿನದ್ದು. ಇದನ್ನೇ ವಿವೇಕ್ ಶಾನಭಾಗ ತಮ್ಮ ‘ಒಂದು ಬದಿ ಕಡಲು’ ಕಾದಂಬರಿಯಲ್ಲಿ ಮಾಡುತ್ತಾರೆ. ಆದರೆ ಅಲ್ಲಿ ಕಥಾನಕದ ಒಂದು ಎಳೆಯನ್ನು ಹಿಡಿದುಕೊಂಡೇ ಚಿತ್ರಗಳನ್ನು ಜೋಡಿಸುತ್ತ ಹೋಗುವುದರಿಂದ "ಒಟ್ಟಾರೆಯಾಗಿ ಬದುಕೇ" ಕೇಂದ್ರ ಎಂಬ ಒಂದು ಅಸಂಕಲ್ಪಿತವೆಂದೂ ಹೇಳಬಹುದಾದ ಕೇಂದ್ರದ ಕಡೆಗೆ ಬೊಟ್ಟು ಮಾಡಿ ಬಚಾವಾಗುತ್ತಾರೆ. ಸರಿ ಸುಮಾರು ಇದೇ ನೆಲೆಯಲ್ಲಿ ಹೂವಿನಕೊಲ್ಲಿಯ ಜನಜೀವನವೇ, ಜೀವನಕ್ರಮವೇ ಈ ಕೃತಿಯ ಕೇಂದ್ರ ಎನ್ನುವುದನ್ನು ಒಪ್ಪಿಕೊಂಡೂ ಈ ಜೀವನಕ್ರಮ, ಇದು ಪ್ರತಿನಿಧಿಸುವ ಜೀವನಮೌಲ್ಯ , ವಿಧಿಯೋ, ಅಜ್ಞಾನವೋ, ಮಾಟ ಮಂತ್ರಗಳೋ, ಮಾನವ ಸಹಜ ವಾಂಛೆಗಳೋ, ಸ್ವಯಂಕೃತ ತಪ್ಪು ಹೆಜ್ಜೆಗಳೋ ಇವರ ಬದುಕನ್ನು ಏನು ಮಾಡಿಬಿಟ್ಟವೋ ಅದು, ನಮಗೆ ನೀಡುವ ದರ್ಶನದ ಬಗ್ಗೆ, ಬದುಕಲು ಕಲಿಯುವ ಆಸೆಯಿಂದ ಓದುಗ ಓದುಗನಿಗೆ, ಇಲ್ಲೇನಾದರೂ ಸಿಕ್ಕೀತೇ ಎನ್ನುವ ಹಪಹಪಿಕೆಯಿಂದ ಒಂದು ಕಾಣ್ಕೆಗಾಗಿ ಹಂಬಲಿಸುವ ಓದುಗನಿಗೆ ಇದು ನೀಡುವ ದರ್ಶನ ಅಥವಾ ಕಾಣ್ಕೆಯ ಬಗ್ಗೆ ಕಾದಂಬರಿ ಆಸಕ್ತವಾಗಿಲ್ಲ.

ವಿವೇಕ್ ಶಾನಭಾಗ ಕಾದಂಬರಿ ಪ್ರಕಾರದ ಬರವಣಿಗೆಯ ಬಗ್ಗೆಯೇ ಹೇಳುತ್ತ, ದೀರ್ಘವಾದ ಬರವಣಿಗೆಯೊಂದನ್ನು ತಿದ್ದಲು, ಬಿಟ್ಟಲ್ಲಿಂದ ಮುಂದುವರಿಸಲು ಮತ್ತೆ ಮತ್ತೆ ಆ ಜಗತ್ತನ್ನು ಹೊಕ್ಕು ಅದರಲ್ಲಿ ತನ್ಮಯನಾಗಲು ಬಹಳ ಕಷ್ಟವಾಗುತ್ತದೆ ಎಂದಿದ್ದರು. ಬರವಣಿಗೆ ಪಾರ್ಟ್ ಟೈಂ ಆಗಿರುವ ಇಂದಿನ ತಲೆಮಾರಿನ ಅನೇಕರ ಸಮಸ್ಯೆಯಿದು.

ಸಂಪದ ಡಾಟ್ ಕಾಮ್ ಅಂತರ್ಜಾಲ ತಾಣದ ಹರಿಪ್ರಸಾದ್ ನಾಡಿಗ್ ಅವರ ಪ್ರಯತ್ನದಿಂದ ಸಾಧ್ಯವಾದ ವಿವೇಕ್ ಶಾನಭಾಗ್ ಅವರ ಸಂದರ್ಶನದಲ್ಲಿ ಅವರಿಗೆ ಕಾದಂಬರಿ ಬರವಣಿಗೆಯ ಕುರಿತೇ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಕತೆ ಮತ್ತು ಕಾದಂಬರಿಗಳೆರಡರ ಸ್ವರೂಪದ ಕುರಿತು ಅವರು ಹೇಳಿರುವ ಮಾತುಗಳಿಲ್ಲಿವೆ:

ಪ್ರಶ್ನೆ: ನಿಮ್ಮ ಒಂದು ಬದಿ ಕಡಲು ಕಾದಂಬರಿಯಲ್ಲಿ ಮೊದಲಿಗೆ ಒಂದು ಮಾತು ಹೇಳಿದ್ದೀರಿ, 'ಬರೆಯುವ ಹೊತ್ತಿಗೆ ಮಹತ್ವದ್ದೆಂದು ಅನಿಸಿದ ಹಲವು ಸಂಗತಿಗಳು ಕಾಲಾಂತರದಲ್ಲಿ ಅದೇ ತೀವೃತೆಯಲ್ಲಿ ಕಾಣಿಸದೇ ಇರುವುದರಿಂದ ದೀರ್ಘ ಬರವಣಿಗೆಗೆ ಮತ್ತೊಮ್ಮೆ ಕೈಹಚ್ಚಲು ಅಳುಕಾಗುತ್ತದೆ' ಅಂತ. ಇಂಥ ಅನುಮಾನ ಯಾಕೆ ಕಾಡಿತು?

ನಾನು ಆ ಮಾತನ್ನು ಬರ್ದಿದ್ದು ಈ ಕಾದಂಬರಿಯ ಪರಿಷ್ಕರಣೆಯ ಬಗ್ಗೆ. ಅಂದ್ರೆ, ಈ ದೀರ್ಘ ಕಾದಂಬರಿಯನ್ನ ಬರ್ದು ಅದ್ಮೇಲೆ ಅದ್ರ ಒಳ್ಗಡೆ, ಅದು ತುಂಬ ಒಂದು ಸಂಕೀರ್ಣವಾದ ಒಂದು ಕಟ್ಟಡ ಇದೆ ಅದ್ರ ಒಳ್ಗಡೆ. ಅಂದ್ರೆ ಅದಕ್ಕೆ ನೀವು ಆ ಸಂದರ್ಭಗಳನ್ನ, ಅದ್ರ ಅಧ್ಯಾಯಗಳನ್ನ ನೋಡಿದ್ರೆ ಅದು ಬೇರೆ ಬೇರೆ, ವರ್ಷದ ಬೇರೆ ಬೇರೆ ಕಾಲಗಳಲ್ಲಿ, ಬೇರೆ ಬೇರೆ ಋತುಮಾನಗಳಲ್ಲಿ, ಬೇರೆ ಬೇರೆ ಬೆಳಕಿನಲ್ಲಿ, ದಿನದ ಬೇರೆ ಬೇರೆ ಜಾಗದಲ್ಲಿ ಜರಗುವಂಥದ್ದು. ಸೊ, ಅಷ್ಟೊಂದು ಕಾಂಪ್ಲೆಕ್ಸನ್ನ ನಾನು ಮತ್ತೆ, ಅದನ್ನ ಬರೆದು ಒಂದೆರಡು ವರ್ಷ ಬಿಟ್ಟು ಮತ್ತೆ ಅದನ್ನ ಪರಿಷ್ಕರಣೆ ಮಾಡೋದಿದ್ಯಲ್ಲ, ಆವಾಗ ಅದು, ಅದ್ರೊಳಗೆ ಹೋಗ್ಲಿಕ್ಕೇನೇ ಒಂದ್ವಾರ ಬೇಕಾಗುತ್ತೆ. ಅಂದ್ರೆ, ಅದೇ ಮನಸ್ಥಿತಿಯಲ್ಲಿ ಅದ್ನೆಲ್ಲ ನೋಡ್ಲಿಕ್ಕೆ ಆ ಪರಿಸ್ಥಿತಿ, ಅಂಥಾ ಒಂದು process ಇದ್ಯಲ್ಲ, ಅದನ್ನ ಮತ್ತೊಂದ್ಸಲ ಇಂಥಾ ಒಂದು ದೀರ್ಘ ಬರವಣಿಗೆಗೆ ಮತ್ತೊಮ್ಮೆ ಕೈ ಹಚ್ಚಲಿಕ್ಕೆ ಅಳಕಾಗ್ತದೆ ಅಂತ ನಾನು... ಅದು ನನ್ನ ಉದ್ದೇಶ. ಅಂದ್ರೆ ಅದು ಆ ತೀವೃತೆಯಲ್ಲಿ ಕಾಣ್ಸೋದಿಲ್ಲ, ಆ ತೀವೃತೆಯಲ್ಲಿ ಆವಾಗ ನಾವು ಅದು ಅನಗತ್ಯ ಅಂತ ತಿಳ್ಕೊಂಡಿರ್ತೀವಿ, ಅಥವಾ ಬರೆಯುವಾಗ ಏನೋ ಒಂದು ಮನ್ಸಲ್ಲಿರುತ್ತೆ, ಬರೆಯುವಾಗ ಯಾವ್ದಾದರೂ ಕೆಲವು ಮುಖ್ಯ ಅಂತ ಅನ್ಸಿರುವ ಸಂಗತಿಗಳಿರ್ತಾವಲ್ಲ, ಅಂದ್ರೆ ಮುಖ್ಯ ಅಂತ ಕಾದಂಬರಿ ಒಳ್ಗಡೆ; ಅದು ಕಾಲಾಂತರದಲ್ಲಿ, ಈ ಎಲ್ಲ ಬದ್ಲಾವಣೆಗಳಿಂದ ಅದು ಅಷ್ಟು... ಅದು ನಾನು ಬರೆದ ಮಾತು ಆ ಒಟ್ಟು process ಬಗ್ಗೆ, ಅಂದ್ರೆ, process of editing ಬಗ್ಗೆ. ಪರಿಷ್ಕರಣೆಯ ಪ್ರಕ್ರಿಯೆ ಬಗ್ಗೆ ನಾನು ಬರೆದಿದ್ದೆ ಹೊರತು ಒಟ್ಟು ಬರವಣಿಗೆಯ ಬಗ್ಗೆ ಅಲ್ಲ. ಸೊ, ಹಾಗಾಗಿ ಅದು ಅಪಾರ್ಥಕ್ಕೆ ಎಡೆ ಮಾಡಿ ಕೊಡ್ಬಾರ್ದು.

ಪ್ರಶ್ನೆ: ಒಂದು ಕತೆ ಬರೆಯುವುದು ಇನ್ನೊಂದು ಕಾದಂಬರಿ ಬರೆಯೋದು. ಈ ಎರಡರಲ್ಲಿ ಬರವಣಿಗೆಯ ಪ್ರಕ್ರಿಯೆಯ ದೃಷ್ಟಿಯಿಂದ ಏನು ವ್ಯತ್ಯಾಸ? ನಿಮಗೆ ಯಾವುದು ಹೆಚ್ಚು ಇಷ್ಟ?

“ಈ ಕತೆ ಅನ್ನೋದು ನಾನು ಯಾವಾಗ್ಲು ಈ ಉದಾಹರಣೆಯನ್ನ ಕೊಡ್ತ ಇರ್ತೇನೆ; ಅದನ್ನು ಶಾಂತಿನಾಥ ದೇಸಾಯಿ ಹೇಳಿದ್ರು. ಅದೇನಂದ್ರೆ, ಕತೆಯಂದ್ರೆ ಒಂದು ಮರದ ಮೇಲೆ ಹತ್ತಿ ಅದ್ರ ಹಣ್ಣು ತಿಂದ್ಹಂಗೆ, ಕಾದಂಬರಿ ಅಂದ್ರೆ ಇಡೀ ತೋಟದಲ್ಲೆ ಓಡಾಡಿ, ನಿಮ್ಗೆ ಬೇಕಾದ ಹಣ್ಣು ಕಿತ್ಹಂಗೆ ಅಂತ. ಅಂದ್ರೆ ನಿಮಗೆ ಹೇಳ್ಬೇಕಾಗಿದ್ದೇನಂದ್ರೆ, ಒಟ್ಟು ಎರಡೂ ಮಾಧ್ಯಮ ಇದ್ಯಲ್ಲ, ಅದಕ್ಕದಕ್ಕೆ ಭಿನ್ನವಾದ ಒಂದು ಜೀವನದೃಷ್ಟಿ ಬೇಕಾಗತ್ತೆ. ಎರಡನ್ನು ಬರೀಬೇಕಾದ್ರೆ ನಮ್ಮ ಮನಸ್ಥಿತಿ, ಅದಕ್ಕೆ ಬೇಕಾದ ಸಿದ್ಧತೆ ಮತ್ತು ಅದಕ್ಕೆ ಬೇಕಾದ ಲೋಕದೃಷ್ಟಿ ಎಲ್ಲವೂ ತುಂಬ ಭಿನ್ನವಾದದ್ದು. ಆದ್ರಿಂದ ಒಂದು ಕತೆ ಬರೀತ ಬರೀತ ಕಾದಂಬರಿಯಾಗೋದಿಲ್ಲ ಅಥ್ವಾ ಒಂದು ಉದ್ದ ಕತೆ ಕಾದಂಬರಿಯಾಗೋದಿಲ್ಲ. ಕಾದಂಬರಿಗೆ ಬೇಕಾದ, ಕಾದಂಬರಿಗೆ ತುಂಬ ಆಳ ಬೇಕು. ಅಂದ್ರೆ, it is about total experience... ಅಂಥ ಒಂದು ಅನುಭವದ, ಒಂದು ಪೂರ್ಣ ಅನುಭವದ ಅಂಥ ಒಂದು ಮಾಧ್ಯಮ ಅದು. ಆದ್ರೆ ಕತೆ ಅಂದ್ರೆ ಹಾಗಲ್ಲ. ಕತೆ ಅದರ ಅಳತೆ ಚಿಕ್ಕದು, ಆಮೇಲೆ ಅದ್ರಲ್ಲಿ ನೀವು ಹೇಳಬೇಕಾದ ಸಂಗತಿಗಳನ್ನ ಚುರುಕಾಗಿ ಹೇಳ್ಬೇಕು, ಆಮೇಲೆ ಹೀಗೆ... ಅದ್ರಲ್ಲೊಂದು ಇಡೀ ಮಾಧ್ಯಮಾನೇ ಅದು ಬೇರೆ. ಹಾಗಾಗಿ ಕತೆಗಾರನಿಗೆ ಮತ್ತು ಕಾದಂಬರಿಕಾರನಿಗೆ ಇರಬೇಕಾದ ಮನಸ್ಥಿತಿ ಎರಡೂ ಬೇರೆ ಬೇರೆ. ಆಮೇಲೆ ಕಾದಂಬರಿ ಬರೆಯುವಾಗ ಹೆಚ್ಚು ಸಾವಧಾನ ಬೇಕು ಅಂತ ನನಗನಿಸುತ್ತೆ. ಅಂದ್ರೆ ಸಾವಧಾನ ಅನ್ನೋದು ನಾನು ನಿಮಗೆ ಒಂದನ್ನ ತಿಳ್ಕೊಂಡು, ಒಂದನ್ನ ಅರಗಿಸಿಕೊಂಡು, ಒಂದನ್ನ ಸಮಾಧಾನವಾಗಿ ಹೇಳುವ ರೀತಿ. ಸಮಾಧಾನ ಅನ್ನೋದನ್ನ ನೀವು ತುಂಬ metaphoricalಆದ ಅರ್ಥದಲ್ಲಿ ನೀವದನ್ನ ತಗೊಳ್ಬೇಕು. ಸಮಾಧಾನಕರವಾದ ರೀತಿಯಲ್ಲಿ ಅದನ್ನ ಹೇಳ್ಬೇಕು. ಸೊ, ಈ ಎಲ್ಲ ರೀತಿಯಿಂದ ಎರಡೂ ಸಂಪೂರ್ಣ ಭಿನ್ನವಾದ ಮಾಧ್ಯಮಗಳಂತ್ಲೆ ನನಗೆ ಅನ್ಸುತ್ತೆ. ಆಮೇಲೆ ನಾನು ಈ ಕಾದಂಬರಿಗಳನ್ನ ಬರೀತಾ ಇರೋದಿಕ್ಕೂ ಮತ್ತೆ ಆ ತರ ಈ ಕ್ಷೇತ್ರದಲ್ಲಿ ನಾನು ಈಗ ಎರಡು ಕಾದಂಬರಿಗಳನ್ನ ಬರೆಯೋದಿಕ್ಕು ಇದೇ ಒಂದು ಕಾರಣ; ಯಾಕಂದ್ರೆ ಅದು ನನಗೆ ಅದು ಹೆಚ್ಚು space ಕೊಡುತ್ತೆ ಅಂತ ನನಗನಿಸಿದೆ.”

ಒಂದು ಜೀವನ ದರ್ಶನವನ್ನು ಒಂದು ಬೀಸಿನಲ್ಲಿ ಕೊಡುವ ಒಂದೇ ಕೃತಿ ಬೇಕೆ, ಹಲವು ಕೃತಿಗಳಿಂದ ಅದನ್ನು ಪಡೆಯಲು ಸಾಧ್ಯವಿಲ್ಲವೆ ಎಂಬ ಪ್ರಶ್ನೆಯೂ ಇದೆ. ಫಾರ್ಮ್ ಎಂಬುದೇ ಅಸಂಗತವಾದ ಕಾಲದಲ್ಲಿ ನಾವಿದ್ದೇವೆ ಎಂಬ ವಾದವೂ ಇದೆ. ಆದರೆ ಇದು ಟೆಡ್‌ನ ಪ್ರಮೇಯದ ಸಂದರ್ಭದಲ್ಲಿಯೇ ಹೇಳಿರುವಂತೆ, ಫಾರ್ಮನ್ನು ಮೀರಿಸಿದ ಕಂಟೆಂಟ್ ಇದ್ದರೆ ಮಾತ್ರ ಒಪ್ಪಬಹುದಾದ ಮಾತೇ ಹೊರತು, ಕಂಟೆಂಟ್‌ನ ಜಾಳುತನವನ್ನು ಸಮರ್ಥಿಸಿಕೊಳ್ಳಲು ಉಪಯೋಗಿಸಲ್ಪಡಬಾರದು. ಹೆಚ್ಚುಗಾರಿಕೆ ಎಂದು ನಾವು ನಮ್ಮ ಕೃತಿಯನ್ನು ಸಮರ್ಥಿಸಿಕೊಳ್ಳಲು ಬಳಸುವ ಯಾವ ವಿಚಾರವೇ ಇರಲಿ, ಅದರಿಂದ ಕೊನೆಗೂ ಕೃತಿಗೆ ದಕ್ಕಿದ್ದೇನು, ಅದು ಸಾಧಿಸಿದ್ದೇನು ಎನ್ನುವುದೇ ನಿಲ್ಲುವ ಮಾತು. ಇಲ್ಲವಾದರೆ ನಮ್ಮ ಸಿನಿಮಾ ರಂಗದವರು ಡಿಫ್ರೆಂಟ್ ಆಗಿದೆ ಎಂದು ಒತ್ತೊತ್ತಿ ಹೇಳುತ್ತ ಅದೇ ಹಳಸಲು ತೋರಿಸುತ್ತ ಬಂದ ಹಾಗೇ ಇದೂ ಆಗಿಬಿಡುತ್ತದೆ.

ಕಾದಂಬರಿ ಎಂದರೆ ಏನು ಎಂದು ನಾವು ಕೇಳಿಕೊಂಡು ಸರಳವಾದ ಉತ್ತರಗಳನ್ನು ಕೊಟ್ಟುಕೊಳ್ಳುವುದಾದರೆ ಅದು ಒಂದು ಜಗತ್ತು, ಅದು ಒಂದು ಬದುಕು ಅಷ್ಟೆ. ಕಾರಂತರು 40-45 ಕಾದಂಬರಿಗಳಲ್ಲಿ ಇದನ್ನು ಸಾಧಿಸಿದರೇ ಹೊರತು ಅವರ ಒಂದು ‘ಸರಸಮ್ಮನ ಸಮಾಧಿ’ಯೋ ‘ಗೊಂಡಾರಣ್ಯ’ವೋ ಅದೊಂದನ್ನೇ ಅವರು ಬರೆದಿದ್ದು ಎಂದುಕೊಂಡು ಬಿಡಿಯಾಗಿ ಓದಿದರೆ ಆಹಾ ಎನ್ನುವಂಥದ್ದೇನಿಲ್ಲ ಅದರಲ್ಲಿ. ವಿವೇಕರ ‘ಒಂದು ಬದಿ ಕಡಲು’ ಕಾದಂಬರಿಯ ವಿಮರ್ಶೆಯ ಸಂದರ್ಭದಲ್ಲಿ, ಈ ಕಾದಂಬರಿಯ ನಂತರದಲ್ಲಿ ವಿವೇಕ್ ಬರೆಯಲಿರುವ ಇನ್ನಷ್ಟು ಕಾದಂಬರಿಗಳು ಈ ಕಾದಂಬರಿಯ ಸ್ಥಾನವನ್ನು ನಿಶ್ಚಯಿಸಲಿವೆ ಎಂಬರ್ಥದ ಮಾತನ್ನು ವಿಮರ್ಶಕರು ಆಡಿದ್ದರು. ಈ ಅರ್ಥದಲ್ಲೂ "ಹೂವಿನ ಕೊಲ್ಲಿ" ಒಂದು ಆರಂಭ ಮಾತ್ರ ಎಂದು ಅನಿಸುತ್ತದೆ. ರಶೀದರೇ "ಲೇಖಕರ ಮಾತು" ಬರೆಯುತ್ತ ಹೇಳಿದ, ಅನುಭವಿಸಿದ ನಾಸ್ಟಾಲ್ಜಿಯಾ ತರದ ಭಾವ ಓದುಗರದ್ದೂ ಆಗುವುದು ನಿಶ್ವಯವಾಗಿಯೂ ಒಂದು ಸಾಧನೆ. ಆದರೆ ಅದು ಸಾಧನೆಯಾದಂತೆಯೇ ಸವಾಲೂ ಕೂಡ ಆಗಿದೆ. ಮುನ್ನೆಡೆಸುವ, ಸೃಜನಶೀಲ ಸಾಮರ್ಥ್ಯದ ಸೀಮಾರೇಖೆಗಳನ್ನು ಮೀರಿ ಸಾಧಿಸುವ ಹೊಸ ಸವಾಲು ಅದು, ಲೇಖಕನಿಗೆ ತನ್ನದೇ ಕೃತಿ ಒಡ್ಡುವ ಸವಾಲು.

ದಾಂಪತ್ಯದ ಕುರಿತಾಗಿಯೇ ಕೆಲವು ಕಾದಂಬರಿಗಳು ಒಂದರ ಹಿಂದೆ ಒಂದರಂತೆ ಬಂದುದು ಕುತೂಹಲಕರವಾಗಿದೆ. ಎಸ್.ಎಲ್.ಭೈರಪ್ಪನವರ ಕವಲು, ಸತ್ಯನಾರಾಯಣರ ವಿಚ್ಛೇದನಾ ಪರಿಣಯ, ಗುರುಪ್ರಸಾದ್ ಕಾಗಿನೆಲೆಯವರ ಗುಣ ಎಲ್ಲದರ ಕೇಂದ್ರ ದಾಂಪತ್ಯವೇ ಆಗಿರುವಂತಿದೆ. ‘ವಿಚ್ಛೇದನಾ ಪರಿಣಯ’ ದಲ್ಲಿ ಸತ್ಯನಾರಾಯಣರು ವಿಭಿನ್ನ ಪಾತಳಿಯಿಂದ ಒಂದೇ issueವನ್ನು ಮತ್ತೆ ಮತ್ತೆ ಬೇರೆ ಬೇರೆ ಕಥಾನಕಗಳ ಮೂಲಕ ಹೇಳುವ, ಕಾಣಿಸುವ ಒಂದು ನೇಯ್ಗೆಯನ್ನು ಹೆಣೆಯುತ್ತಾರೆ. ಅದಕ್ಕೆ ಅವರು ಬಳಸುವ ತಾಂತ್ರಿಕ ಜಾಣ್ಮೆ, ಕಲ್ಪನೆಯ ಭರಪೂರ ಉಪಯೋಗ ಮತ್ತು ಕಲಾತ್ಮಕತೆ ಏನೇ ಇರಲಿ. ಅವರ ವೈಚಾರಿಕ ಧೋರಣೆ ಇದು: ಒಂದು - ದಾಂಪತ್ಯ; ಅದರ ಮುಖಗಳಾದ ಪ್ರೇಮ ಮತ್ತು ಕಾಮ. ವಿವಾಹ ಎಂದರೆ ಕೇವಲ ಎರಡು ವ್ಯಕ್ತಿಗಳ ನಡುವಣ ಸಂಬಂಧ ಮಾತ್ರ ಅಲ್ಲ; ಅದೇನಿದ್ದರೂ ಮೇಲ್ನೋಟಕ್ಕೆ ಎರಡು, ಸೂಕ್ಷ್ಮವಾಗಿ ಗಮನಿಸಿದರೆ ನೂರಾರು ಕುಟುಂಬಗಳ ನಡುವೆ ತೆರೆದುಕೊಳ್ಳುವ ಸಾವಿರಾರು ಮನುಷ್ಯ ಸಂಬಂಧಗಳ matrix. ಹೀಗೆ ಅದು ಸಾಮಾಜಿಕ ವಿದ್ಯಮಾನ, ನಾವು ತಿಳಿದುಕೊಂಡಂತೆ ವೈಯಕ್ತಿಕ ವಿಷಯವೇ ಅಲ್ಲ. ಹೀಗಾಗಿ ಅದರ success or failure ಕೂಡಾ ವೈಯಕ್ತಿಕವಾಗಿ ಉಳಿಯುವಂಥಾದ್ದು, ಉಳಿಯಬಹುದಾದ್ದು ಅಲ್ಲ ಎಂಬುದನ್ನೇ ಸತ್ಯನಾರಾಯಣರು `n' number of instances ಗಳ ಮೂಲಕ ನಮಗೆ ಕಾಣಿಸುತ್ತಾ ಹೋಗುತ್ತಾರೆ. ಇದನ್ನು ಸತ್ಯನಾರಾಯಣರು ಖಚಿತವಾದ ನಿಲುವು ಮತ್ತು ಸ್ಪಷ್ಟ ಉದ್ದೇಶದಿಂದಲೇ ಮಾಡುವುದರಿಂದ ಇವರ ಕಾದಂಬರಿಗಳಲ್ಲಿ ಪಾತ್ರಗಳು, ಕಥಾನಕಗಳ ಇಡಿಕ್ಕಿರಿದಂತೆ ಕಂಡರೆ ಅಚ್ಚರಿಯಿಲ್ಲ. ಇದರಿಂದಾಗಿಯೇ ಸಿದ್ಧಮಾದರಿಯ ಕಾದಂಬರಿ ಪ್ರಕಾರದ ಎಲ್ಲ ಎಲ್ಲೆಕಟ್ಟುಗಳನ್ನು ಹರಿದೊಗೆದು ನಿಂತ ಕೃತಿ ಇದು.

ಎಸ್ ಸುರೇಂದ್ರನಾಥರ ಕಾದಂಬರಿ ಎನ್ನ ಭವದ ಕೇಡು ಇಷ್ಟವಾಗುವುದು ಅದು ಒಂದು ಇಡೀ ಆಕೃತಿಯಾಗಿ ನಮ್ಮ ಎದೆಯಲ್ಲಿ ಹುಟ್ಟಿಸುವ ತಲ್ಲಣಗಳಿಗಾಗಿ ಮತ್ತು ಇಡೀ ಕಾದಂಬರಿಯ ಉದ್ದಕ್ಕೂ ಕಥಾನಕ ಸಾಗುವ ಒಂದು ಅನೂಹ್ಯ ವಿಧಾನಕ್ಕಾಗಿ. ಆದರೆ ಇಲ್ಲಿನ ಬರವಣಿಗೆ ಸದಾ ಒಂದು ಬಗೆಯ ನಿಗೂಢಕ್ಕೆ, ಅನಿರೀಕ್ಷಿತಕ್ಕೆ, ತಿರುವಿಗೆ, ಆಘಾತಕ್ಕೆ ಓದುಗನನ್ನು ಮುಖಾಮುಖಿಯಾಗಿಸುತ್ತ ಸಾಗುವ ಚಪಲಕ್ಕೆ ಸಿಕ್ಕಿಕೊಂಡಂತಿದೆ. ಇದು ತಪ್ಪೇನೂ ಅಲ್ಲ. ಆದರೆ ಇಂಥದು ಪದೇ ಪದೇ ಸಂಭವಿಸುವುದರಿಂದ ಕ್ರಮೇಣ ಈ ಯಾವುದೋ ಒಂದು ಅನೂಹ್ಯವಾದ ದುರ್ಘಟನೆಗೆ ಸದಾ ಕಾತರಿಸುವಂತೆ ಮಾಡುವ ಕಾದಂಬರಿಯ ತಂತ್ರ ಓದುಗನನ್ನು ರಂಜಿಸುವ ಬದಲಿಗೆ ಪ್ರತಿ ಅಧ್ಯಾಯದ ಕೊನೆಗೆ ಒಡೆಯುವ ಕುತೂಹಲದ ಮೊಟ್ಟೆ ಅವನಲ್ಲಿ ಇದು ಇಷ್ಟೇ ಎನಿಸುವ ಭಾವವನ್ನು ತರುವ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಮುಂದಿನ ಅಧ್ಯಾಯದ ಓದು ಒಂದು ಸಿದ್ಧ ಮನಸ್ಥಿತಿಗೆ ಓದುಗನನ್ನು ಅನಗತ್ಯವಾಗಿ ಒಗ್ಗಿಸುತ್ತದೆ. ಅಲ್ಲಿ ಮತ್ತೆ ಇಂಥ ತಂತ್ರ ತೊಡಗಿದಂತೆಲ್ಲ ಓದುಗನ ಗಮನ ಆ ಅಂತ್ಯದತ್ತ ಹರಿದು ಕಾದಂಬರಿಯ ಆಶಯ, ಚೌಕಟ್ಟು, ಹಂದರದ ಕಡೆಗೆ ಇರಬೇಕಾದ ಗಮನ ಕುಂಠಿತವಾಗುತ್ತದೆ. ಇಡೀ ಕಾದಂಬರಿಗೆ ಬಿಗಿಯಾದ ಒಂದು ಚೌಕಟ್ಟು ಮತ್ತು ಹಂದರ ದಕ್ಕಿದೆ. ಅದು ಉದ್ದೇಶಿತವೋ ಅನುದ್ದೇಶಿತವೋ ಎನ್ನುವ ಸಂಗತಿ ಬೇರೆ. ಆದರೆ ಈ ಹಂದರವನ್ನು, ಚೌಕಟ್ಟನ್ನು, ಅದರ ಒಟ್ಟಾರೆ ಪರಿಣಾಮವನ್ನು ಈ ಸ್ವತಂತ್ರ ಅಧ್ಯಾಯಗಳಿಗೆ ಮಾತ್ರ ಹೊಂದುವ ತಂತ್ರವೇ ಅನಗತ್ಯವಾಗಿ ಮೊಟಕುಗೊಳಿಸಿರುವುದು ಬೇಸರ ಹುಟ್ಟಿಸುತ್ತದೆ.

ಜೋಗಿಯವರ ಕಾದಂಬರಿಯಲ್ಲಿ ಅಲ್ಲಲ್ಲಿ ತಾಂತ್ರಿಕವಾಗಿ, ಲಾಜಿಕಲ್ ಆಗಿ ಸಾಕಷ್ಟು ಒಳ್ಳೆಯ ಒಳನೋಟಗಳನ್ನು ನೀಡಬಲ್ಲ ಅಂಶಗಳಿರುತ್ತವೆ. ಹಾಗೆಯೇ ಅವರು ನಿರ್ಮಿಸುವ ಕಥಾಜಗತ್ತು, ಪಾರ್ತವರ್ಗ ಮತ್ತು ಸನ್ನಿವೇಶಗಳನ್ನು ಕೊಂಚ improvise ಮಾಡಿದರೆ ಅವು ಇಡೀ ಕಾದಂಬರಿಗೆ ನೀಡಬಲ್ಲ ಆಯಾಮಗಳ ಮಜಲು ಕೂಡಾ ಹೆಚ್ಚುವಂತಿರುತ್ತದೆ. ಆದರೆ, ಜೋಗಿಯವರು ಇಂಥ ಭಾಗಗಳನ್ನು ಅಲ್ಲಲ್ಲಿ ತರುವ ಕ್ಯಾಶುವಲ್ ಆದ ರೀತಿಯೇನಿದೆ, ಅದು ಇಂಥ ಉದ್ದೇಶಗಳ ಈಡೇರಿಕೆಗೆ ಬೇಕಾದಷ್ಟು ಸುಪುಷ್ಟವಾಗಿಲ್ಲ ಎಂಬುದನ್ನು ಉಪೇಕ್ಷಿಸುವಂತಿಲ್ಲ. ಕಾದಂಬರಿಯನ್ನು ಒಮ್ಮೆ ಓದಿದ ಮೇಲೆ ನಿಧಾನವಾಗಿ ಮತ್ತೊಮ್ಮೆ ಓದಬಹುದಾದ, ಓದಿ ತರ್ಕಿಸಬಹುದಾದ ಸಾಕಷ್ಟು stuff ಇಲ್ಲಿದೆ; ಹಾಗೆಯೇ ಒಂದು ಕ್ಲಾಸಿಕಲ್ ಶೈಲಿಯ ಕಾದಂಬರಿಯಲ್ಲಿ ಇರಬೇಕಾದ, ಕಾದಂಬರಿ ಪ್ರಕಾರ ಎಂದ ಮಾತ್ರಕ್ಕೇ ಓದುಗ ನಿರೀಕ್ಷಿಸಬಹುದಾದ ಅನೇಕ ಅಂಶಗಳ ಗೈರು ಕೂಡ ಇದೆ ಎನಿಸುತ್ತಿರುತ್ತದೆ. Word economy ತತ್ವಕ್ಕೆ ಬದ್ಧರಾಗಿ, ಚಕಚಕನೆ ಓದಿಸಿಕೊಂಡು ಹೋಗಬಲ್ಲ ಆದರೆ ಆ ರೀತಿಯಿದ್ದೂ ಓದುಗ ಒಮ್ಮೆ ಅಲ್ಲಲ್ಲಿ ನಿಂತು ಯೋಚಿಸುವಂತೆ ಮಾಡಬಲ್ಲ ಕಾದಂಬರಿಗಳನ್ನು ಜೋಗಿ ಕೊಡುತ್ತ ಬಂದಿದ್ದಾರೆ.

ವಿ ಆರ್ ಕಾರ್ಪೆಂಟರ್ ಅವರ ಅಪ್ಪನ ಪ್ರೇಯಸಿ ಮತ್ತು ನೀಲಿಗ್ರಾಮ ಕಾದಂಬರಿಗಳನ್ನೂ ಇಲ್ಲಿ ಗಮನಿಸಬೇಕು. ಅಪ್ಪನ ಪ್ರೇಯಸಿ ಮತ್ತೊಂದು ದಿಡೀರನೇ ಮುಕ್ತಾಯಕ್ಕೆ ಬಂದುಬಿಡುವ ಕಾದಂಬರಿಯಾಗಿ ಓದುಗನನ್ನು ನಡುದಾರಿಯಲ್ಲೇ ಕೈಬಿಟ್ಟ ಅನುಭವದೊಂದಿಗೆ ದೂರವಾಗಿತ್ತು. ಇಲ್ಲಿ ಅಪ್ಪನ ಪ್ರಣಯ ಮತ್ತು ಮಗನ ಮೊದಲ ಪ್ರೇಮದಂಥ ನವಿರಾದ ಒಂದು ಭಾವನೆಗಳ ನಡುವಣ ಅವ್ಯಕ್ತ ಮುಖಾಮುಖಿ ಸಂಬಂಧದ, ತಲೆಮಾರಿನ, ಊರ ಇನ್ನಷ್ಟು ಮಂದಿಯ ಜೀವನ ದೃಷ್ಟಿಯ ಪಾತಳಿಗಳ ಮೂಲಕ ನಮಗೆ ಪ್ರಸ್ತುತ ಪಡಿಸಲ್ಪಡುವುದಾದರೂ ಆ ಕಾದಂಬರಿಯ ಮುಕ್ತಾಯ, ಅಲ್ಲಿಂದ ವಸ್ತು ಪಡೆಯಬಹುದಾಗಿದ್ದ/ಬೇಕಿದ್ದ ಬೆಳವಣಿಗೆ ಮತ್ತು ಆ ಮೂಲಕ ಕೃತಿಗೆ ದಕ್ಕಬೇಕೆನಿಸುವ/ದಕ್ಕ ಬಹುದಾಗಿದ್ದ ಆಕೃತಿ ಪರಿಪೂರ್ಣಗೊಂಡ ಭಾವ ಓದುಗನಲ್ಲಿ ಮೂಡುವುದು ಕಷ್ಟಕರವಾಗಿದೆ. ಹೊಳಹುಗಳನ್ನಷ್ಟೇ ಕಾಣಿಸಿ ಮುಗಿಯುವ ಕವನದ ಶೈಲಿ ಕಾರ್ಪೆಂಟರ್ ಅವರ ಎರಡನೆಯ ಕಾದಂಬರಿಯಲ್ಲಿಯೂ ಮುಂದುವರಿದಿದೆ, ಆದರೆ ಹೆಚ್ಚು ಕಲಾತ್ಮಕವಾದ ಭಂಗಿಯಲ್ಲಿ, ತಾಂತ್ರಿಕ ನೈಪುಣ್ಯದೊಂದಿಗೆ ಎನ್ನುವುದು ಮುಖ್ಯ. ಒಂದೆಡೆ ಲೈಂಗಿಕ ಪಿಪಾಸೆ, ಅಧಿಕಾರಗ್ರಹಣದ ತಂತ್ರಗಳನ್ನು ಕಾಣಿಸುವಾಗಲೇ ಕಾದಂಬರಿ ರೆಸಾರ್ಟ್ ತರದ ಆಧುನಿಕ ಜೀವನಶೈಲಿಯ ವಿಪರ್ಯಾಸಗಳನ್ನು ಕೂಡ ಟಚ್ ಮಾಡುತ್ತದೆ. ಆದರೆ ನಿರಾಸೆಯ ಮಾತೆಂದರೆ ಇಂಥ ಮಹತ್ವದ ಆಯಾಮಗಳು ತೆರೆದುಕೊಳ್ಳಬಹುದಾಗಿದ್ದ ಹೆಚ್ಚಿನೆಲ್ಲಾ ಕಡೆ ಮಹತ್ವಾಕಾಂಕ್ಷೆಯ ಕೊರತೆ ಎದ್ದು ಕಾಣುವಂತೆ ಬರೇ `ಟಚ್' ಮಾಡುವುದಷ್ಟೇ ಆಗಿದೆ, ನಾಟುವಂತೆ ಊರಿಕೊಳ್ಳುವ ವ್ಯವಧಾನವಿಲ್ಲ.

ಈಚಿನ ಉಮಾರಾವ್ ಅವರ ವನಜಮ್ಮನ ಸೀಟು ಕೃತಿ ಪುಟ್ಟದಾಗಿದ್ದರೂ, ದಾಂಪತ್ಯದ ಚೌಕಟ್ಟಿನಲ್ಲೇ ನಿಂತು ಹಲವು ಸಾಮುದಾಯಿಕ ವಿದ್ಯಮಾನಗಳನ್ನು ಕೂಡ ತನ್ನ ತೆಕ್ಕೆಗೆ ಬಾಚಿಕೊಂಡು ಬನ್ನಿ, ಸ್ತ್ರೀಮತವನ್ನುತ್ತರಿಸಿ ಎಂದು ಆಗ್ರಹಪೂರ್ವಕ ಕೇಳಬಲ್ಲ ಕಸುವನ್ನು ತೋರಿಸುತ್ತ ಅಚ್ಚರಿ ಹುಟ್ಟಿಸಿದರೂ, ಇಲ್ಲಿಯೂ ಸಮಗ್ರವಾಗಿ ಸಮುದಾಯವನ್ನು ಒಳಗುಗೊಳ್ಳಬಲ್ಲ ವ್ಯಾಪ್ತಿಗೆ ಕಾದಂಬರಿಯ ಚೌಕಟ್ಟನ್ನು ಹಿಗ್ಗಿಸುವಲ್ಲಿ ಮಹತ್ವಾಕಾಂಕ್ಷೆಯ ಕೊರತೆ ಎದ್ದುಕಾಣುತ್ತದೆ.

ಒಂದು ಜೀವನ ದರ್ಶನವನ್ನು ಒಂದು ಬೀಸಿನಲ್ಲಿ ಕೊಡುವ ಒಂದೇ ಕೃತಿ ಬೇಕೆ, ಹಲವು ಕೃತಿಗಳಿಂದ ಅದನ್ನು ಪಡೆಯಲು ಸಾಧ್ಯವಿಲ್ಲವೆ ಎಂಬ ಪ್ರಶ್ನೆಯೂ ಇದೆ. ಫಾರ್ಮ್ ಎಂಬುದೇ ಅಸಂಗತವಾದ ಕಾಲದಲ್ಲಿ ನಾವಿದ್ದೇವೆ ಎಂಬ ವಾದವೂ ಇದೆ. ಆದರೆ ಇದು ಟೆಡ್‌ನ ಪ್ರಮೇಯದ ಸಂದರ್ಭದಲ್ಲಿಯೇ ಹೇಳಿರುವಂತೆ, ಫಾರ್ಮನ್ನು ಮೀರಿಸಿದ ಕಂಟೆಂಟ್ ಇದ್ದರೆ ಮಾತ್ರ ಒಪ್ಪಬಹುದಾದ ಮಾತೇ ಹೊರತು, ಕಂಟೆಂಟ್‌ನ ಜಾಳುತನವನ್ನು ಸಮರ್ಥಿಸಿಕೊಳ್ಳಲು ಉಪಯೋಗಿಸಲ್ಪಡಬಾರದು. ಹೆಚ್ಚುಗಾರಿಕೆ ಎಂದು ನಾವು ನಮ್ಮ ಕೃತಿಯನ್ನು ಸಮರ್ಥಿಸಿಕೊಳ್ಳಲು ಬಳಸುವ ಯಾವ ವಿಚಾರವೇ ಇರಲಿ, ಅದರಿಂದ ಕೊನೆಗೂ ಕೃತಿಗೆ ದಕ್ಕಿದ್ದೇನು, ಅದು ಸಾಧಿಸಿದ್ದೇನು ಎನ್ನುವುದೇ ನಿಲ್ಲುವ ಮಾತು. ಇಲ್ಲವಾದರೆ ನಮ್ಮ ಸಿನಿಮಾ ರಂಗದವರು ಡಿಫ್ರೆಂಟ್ ಆಗಿದೆ ಎಂದು ಒತ್ತೊತ್ತಿ ಹೇಳುತ್ತ ಅದೇ ಹಳಸಲು ತೋರಿಸುತ್ತ ಬಂದ ಹಾಗೇ ಇದೂ ಆಗಿಬಿಡುತ್ತದೆ.

ಫ್ರಾಂಗ್ಮೆಂಟೆಡ್ ನಾವೆಲ್ಸ್ ಅಥವಾ ನಮ್ಮ ಪಾರಂಪರಿಕ ಕಾದಂಬರಿಯ ಸ್ವರೂಪವನ್ನು ತಿರಸ್ಕರಿಸಿ ಬಂದ ಕೃತಿಗಳ ಜೊತೆಜೊತೆಗೇ ಹಳ್ಳ ಬಂತು ಹಳ್ಳ, ಸ್ವಪ್ನಸಾರಸ್ವತ, ಶಿಖರಸೂರ್ಯ, ತಲೆಗಳಿ ಮುಂತಾದ ಕಾದಂಬರಿಗಳೂ ಬಂದವು ಎನ್ನುವುದನ್ನು ಮರೆಯುವಂತಿಲ್ಲ. ಇದು ಇಂಗ್ಲೀಷ್ ಸಾಹಿತ್ಯಕ್ಕೂ ಒಪ್ಪುವ ಮಾತೇ. ಈ ಚರ್ಚೆಯ ಬೆಳಕಿನಲ್ಲಿ ನಾವು ಕನ್ನಡದ ಇತರ ಕೆಲವು ಕಾದಂಬರಿಗಳತ್ತ ಗಮನ ಹರಿಸಿದಾಗ ಅವು ಸಣ್ಣಕತೆ ಮತ್ತು ಪಾರಂಪರಿಕ ಕಾದಂಬರಿಗಳ ನಡುವಣ ಒಂದು ಸ್ವರೂಪವನ್ನು ಕಂಡುಕೊಳ್ಳಲು ತಿಣುಕುತ್ತಿವೆ ಎನ್ನುವುದು ಅರ್ಥವಾಗದೇ ಇರಲಾರದು. ಉದಾಹರಣೆಗೆ ಕೃಷ್ಣಮೂರ್ತಿ ಹನೂರ ಅವರು ತಮ್ಮ ‘ಅಜ್ಞಾತನೊಬ್ಬನ ಆತ್ಮಚರಿತ್ರೆ’ ಮೊದಲಿಗೆ ಸುಮಾರು ಮುವ್ವತ್ತು ಪುಟಗಳ ಕತೆಯಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಸಾಕಷ್ಟು ಕಾದಂಬರಿಗಳು ಬಂದಿವೆ. ಒಂದೇ ಬೀಸಿನಲ್ಲಿ ಬದುಕನ್ನು ಕಟ್ಟಿಕೊಡಬಲ್ಲ ಮಹತ್ವದ ಕಾದಂಬರಿಗಳ ಕಾಲ ಹೊರಟು ಹೋಗಿದೆ ಎನ್ನುವುದರಲ್ಲಿ ಅನುಮಾನವೇನಿಲ್ಲ. ಆದಾಗ್ಯೂ ಗಟ್ಟಿಯಾದ ಅನುಭವ ದ್ರವ್ಯವುಳ್ಳ, ನಿರೂಪಣೆಯಲ್ಲಿ ಪ್ರಬುದ್ಧತೆಯುಳ್ಳ ಹಾಗೂ ಅವುಗಳಿಗೆ ಓದುಗ ವಿನಿಯೋಗಿಸುವ ಹಣ, ಓದುವ ಶ್ರಮ, ವ್ಯಯಿಸಿದ ಸಮಯ ಇವುಗಳ ಮಟ್ಟಿಗೆ ಒಂದು ಸಾರ್ಥಕ ಭಾವವನ್ನು ಕರುಣಿಸುವ ಕಾದಂಬರಿಗಳು ಎಷ್ಟು? ಈ ಪ್ರಶ್ನೆಯನ್ನು ಪ್ರತಿಯೊಂದು ಕಾದಂಬರಿಯ ಸಂದರ್ಭದಲ್ಲಿ ಉತ್ತರಿಸಬೇಕಾಗುತ್ತದೆ. ಕಾದಂಬರಿಯ ಪಾತ್ರಗಳ ವ್ಯಕ್ತಿತ್ವದಲ್ಲಿನ ಸೀಳು ಮತ್ತು ಕೃತಿಯ ಫ್ರಾಗ್ಮಂಟೆಡ್ ಆಕೃತಿ ಎರಡೂ ಒಂದೇ ಅಲ್ಲ. ಆದರೆ ಒಂದು ಇನ್ನೊಂದರ ಮೇಲೆ ಪರಿಣಾಮ ಬೀರುವುದು ಸಹಜವೇ. ಆದರೆ, ಮುಂದೆ ಕನ್ನಡ ಕಾದಂಬರಿಗಳ ಒಟ್ಟು ಆಕೃತಿಯಲ್ಲಿ ಕಂಡು ಬಂದ ಫ್ರಾಗ್ಮಂಟೇಶನ್ ಬೇರೆಯೇ ಬಗೆಯದು. ಈ ದೃಷ್ಟಿಯಿಂದ ಗತಿಸ್ಥಿತಿ, ಬಿರುಕು, ಸ್ವರೂಪ ಮತ್ತು ಶಿಕಾರಿಯಲ್ಲಿ ನಾವು ಕಾಣುವ ಬಿರುಕು ಬೇರೆ, ಸತ್ಯನಾರಾಯಣರ ವಿಚ್ಛೇದನಾ ಪರಿಣಯ, ಅಬ್ದುಲ್ ರಶೀದರ ಹೂವಿನಕೊಲ್ಲಿ ಮತ್ತು ವಿ ಆರ್ ಕಾರ್ಪೆಂಟರ್ ಅವರ ಕಾದಂಬರಿಗಳದ್ದು ಬೇರೆ. ಇವೆರಡರ ನಡುವೆ ಎಸ್ ಸುರೇಂದ್ರನಾಥರ ಕಾದಂಬರಿಯಿದೆ, ಜೋಗಿಯವರ ಕಾದಂಬರಿಗಳಿವೆ. ಅತ್ತಕಡೆ ಇನ್ನಷ್ಟು ಕಾದಂಬರಿಗಳು ಅತ್ತಲೂ ಸೇರದ ಇತ್ತಲೂ ಸೇರದ ಆದರೆ ಹಲವಾರು ಕಾರಣಗಳಿಗೆ ಇಷ್ಟವಾಗುವ ಹಾಗಿವೆ ಎನ್ನುವುದನ್ನು ಮರೆಯುವಂತಿಲ್ಲ. ಯಾವುದೇ ಬದಲಾವಣೆ ಸ್ವಿಚ್ ಆನ್ ಆಫ್ ಮಾಡಿದಂತೆ ಇಲ್ಲಿಂದ ತೊಡಗಿತು ಎಂದು ಗೆರೆ ಎಳೆಯುವುದಕ್ಕೆ ಸಾಧ್ಯವಿಲ್ಲದಂತೆ ಜರುಗುತ್ತದೆ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಹಾಗೆಯೇ ಕನ್ನಡ ಸಾಹಿತ್ಯದಲ್ಲಿ ಕಾದಂಬರಿಗಳ ಪಾರಂಪರಿಕ ಸ್ವರೂಪ ಬದಲಾವಣೆಯ ಹೊರಳು ದಾರಿಯಲ್ಲಿದೆಯೇ ಎಂಬ ಅನುಮಾನ ಸಕಾರಣವಾದದ್ದು ಎನಿಸುವುದರಿಂದ ಅದು ಎತ್ತ ಸಾಗುತ್ತಿದೆ ಎಂಬ ಎಚ್ಚರ ಹಾಗೂ ಈ ಪ್ರಯತ್ನ ಮತ್ತು ಪಯಣದ ಮೇಲೆ ಒಂದಿಷ್ಟು ನಿಯಂತ್ರಣ ಎರಡೂ ಅಗತ್ಯವಾಗಿದೆ.

ಉಪಯುಕ್ತ ಓದು:
ಶತಮಾನದ ಕನ್ನಡ ಸಾಹಿತ್ಯ (ಸಂ) ಜಿ ಎಚ್ ನಾಯಕ (ಶ್ರೀರಾಘವೇಂದ್ರ ಪ್ರಕಾಶನ, ಅಂಬಾರಕೊಡ್ಲ)
ವಿಮರ್ಶೆಯ ವಿನಯ - ಕಾದಂಬರಿ - ಕೀರ್ತಿನಾಥ ಕುರ್ತಕೋಟಿ (ಮನೋಹರ ಗ್ರಂಥ ಮಾಲಾ)
ಕನ್ನಡ ಕಥನ ಸಾಹಿತ್ಯ : ಕಾದಂಬರಿ - ಜಿ ಎಸ್ ಅಮೂರ (ಶ್ರೀಹರಿ ಪ್ರಕಾಶನ, ಧಾರವಾಡ)
ಸಾಹಿತ್ಯದಲ್ಲಿ ವೈಚಾರಿಕತೆ -(ಹಲವು ಲೇಖಕರು) (ಮನೋಹರ ಗ್ರಂಥ ಮಾಲಾ)
ಕನ್ನಡ ಕಾದಂಬರಿ ಕಳೆದ ಕಾಲು ಶತಮಾನದಲ್ಲಿ - ವೀಣಾ ಶಾಂತೇಶ್ವರ (ನಿರ್ವಹಣೆ: ಅಭಿನವ)
ಸಮಕಾಲೀನ ಕಥೆ ಕಾದಂಬರಿ ಹೊಸ ಪ್ರಯೋಗಗಳು - ಡಾ. ಜಿ ಎಸ್ ಅಮೂರ (ಕನ್ನಡ ಸಾಹಿತ್ಯ ಪರಿಷತ್ತು)
ಮಿಲನ್ ಕುಂದೇರ The Art of the Novel
ಇಕೊ ಎಂಬರ್ಟೊ On Literature, Confessions of a Young Novelist
ಇತಾಲೊ ಕೆವಿನೊ Why Read the Classics, The Uses of Literature
ಆರಾನ್ ಪಮುಕ್ The Colours, The Naive and Sentimental Novelist
ಮಾರಿಯೊ ವಗಾಸ್ ಯೋಸಾ Letters to A Young Novelist
ಸ್ಟೀಫನ್ ಕೋಚ್ Writer’s Workshop
ಜ್ಯೂಲಿಯಾನಾ ವೂಲ್ಫ್‌ರೇಸ್ Introducing Literary Theories
ಎವ್ಲಿನ್ ಮೇ ಆಲ್‌ಬ್ರೈಟ್ The Short Story
(ಈ ಲೇಖನದ ಆಯ್ದ ಭಾಗ ವಿಜಯವಾಣಿ ಸಾಪ್ತಾಹಿಕದ ಜೂಲೈ 6 ಮತ್ತು 13ನೆಯ ದಿನಾಂಕದ ಸಂಚಿಕೆಯಲ್ಲಿ ಪ್ರಕಟವಾಗಿದೆ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Tuesday, September 2, 2014

ಕನ್ನಡ ಕಾದಂಬರಿಯ ಸ್ವರೂಪ ಬದಲಾವಣೆಯ ಹೊರಳುದಾರಿಯಲ್ಲಿದೆಯೆ? (ಭಾಗ – 1)

ಟೆಡ್ ಜೋಯಿ ಎಂಬ ಪ್ರಸಿದ್ಧ ಸಂಗೀತ ಶಾಸ್ತ್ರಜ್ಞ ಕಳೆದ ವರ್ಷ ಜೂಲೈ ತಿಂಗಳಲ್ಲಿ ಒಂದು ಪ್ರಬಂಧ ಪ್ರಕಟಿಸಿದ. ದ ರೈಸ್ ಆಫ್ ಫ್ರಾಗ್ಮಂಟೆಡ್ ನಾವೆಲ್ಸ್ ಎಂಬುದು ಅದರ ಹೆಸರು. ಒಟ್ಟು 26 ಫ್ರಾಗ್ಮಂಟೆಡ್ ತುಣುಕುಗಳಲ್ಲಿ ಈತ ಮಂಡಿಸಿದ ಪ್ರಬಂಧದ ಮೊದಲ ತುಣುಕು ಪ್ರಧಾನಧಾರೆಯ ಸೃಜನಶೀಲ ಸಾಹಿತ್ಯ ತುಣುಕು ತುಣುಕುಗಳಾಗಿ ಉದುರುತ್ತಿದೆ ಎಂದಷ್ಟೇ ಹೇಳುತ್ತದೆ. ಎರಡನೆಯ ತುಣುಕು ಇದೇನೂ ಕೆಟ್ಟದ್ದಾಗಿರಲಾರದು ಎಂದು ಹೇಳುತ್ತದೆ. ಕನ್ನಡ ಸಾಹಿತ್ಯದ ಕಾದಂಬರಿ ಪ್ರಕಾರದಲ್ಲಿ ಕಂಡು ಬರುವ ಕೆಲವು ಲಕ್ಷಣಗಳನ್ನು ಇಲ್ಲಿ ಪಟ್ಟಿ ಮಾಡುವ ಮುನ್ನ ಮತ್ತೊಮ್ಮೆ ಹೇಳಬೇಕಾದ ಮಾತೆಂದರೆ, ಇದರಿಂದ ಸಾಹಿತ್ಯ ಎಕ್ಕುಟ್ಟಿ ಹೋಯಿತು ಎಂದೇನೂ ಹೇಳುತ್ತಿಲ್ಲ ಎನ್ನುವುದನ್ನು ಮನಸ್ಸಿನಲ್ಲಿಡಿ ಎಂಬುದು. ಇದರ ಸಾಧಕ ಬಾಧಕಗಳನ್ನು ಲೇಖನದ ವ್ಯಾಪ್ತಿಯಿಂದ ಹೊರಗಿಟ್ಟು ಮಾಡಿದ ಅವಲೋಕನ ಇದು.
ಟೆಡ್ ಸುಮಾರು ಐವತ್ತಕ್ಕೂ ಹೆಚ್ಚಿನ ಕಾದಂಬರಿಗಳ ಒಂದು ಪಟ್ಟಿಯನ್ನೂ ತನ್ನ ಪ್ರಬಂಧದ ಬಲಕ್ಕೆ ಕಾಣಿಸಿದ್ದಾನೆ. ಆ ಕಾದಂಬರಿಗಳ ವಿವರವಾದ ಪರಾಮರ್ಶನಕ್ಕೆ ಅಲ್ಲಿಯೇ ಕೊಂಡಿ ಒದಗಿಸಲಾಗಿದೆ. ಹಾಗಾಗಿ ಲೇಖನ 26 ಪುಟ್ಟ ತುಣುಕುಗಳಲ್ಲಿ ಮುಗಿಯುತ್ತದೆ. ನಾನು ಇಲ್ಲಿ ಕೆಲವು ಆಯ್ದ ಲೇಖಕರು ಮತ್ತು ಆಯ್ದ ಕಾದಂಬರಿಗಳನ್ನು ಮಾತ್ರ ನನ್ನ ಪ್ರಮೇಯಕ್ಕೆ ಬಳಸಿಕೊಂಡಿದ್ದೇನೆ. ನಿಜ, ನಮ್ಮ ಬಳಿ ಒಂದು ಸಿದ್ಧ ಸೂತ್ರವಿದೆ, ಅದಕ್ಕೆ ಒಗ್ಗುವಂತೆ ಈ ಲೇಖನ ಸಿದ್ಧ ಪಡಿಸಿದ್ದೇವೆ ಎನ್ನುವ ಆರೋಪ ಈಗ ಸಾಧ್ಯ. ಆದರೆ, ಈ ಆಯ್ದ ಲೇಖಕರನ್ನು ನಾನು ಈ ಸಿದ್ಧ ಸೂತ್ರಕ್ಕಾಗಿಯೇ ಸಂದರ್ಶಿಸಿಲ್ಲ ಅಥವಾ ಅವರ ಕೃತಿಗಳ ಬಗ್ಗೆ ಬರೆದಿದ್ದಿಲ್ಲ. ಈ ಸಂದರ್ಶನಗಳು ಕಳೆದ ಐದಾರು ವರ್ಷಗಳಲ್ಲಿ, ಬೇರೆ ಬೇರೆಯವರ ಉತಾವಳಿಯಿಂದ, ಇಂಥ ಪೂರ್ವ ಉದ್ದೇಶವಿಲ್ಲದೇ ನಡೆದವು. ಇಲ್ಲಿ ನಾನು ಚರ್ಚಿಸುತ್ತಿರುವ ಕಾದಂಬರಿಗಳ ವಿವರವಾದ ಪರಾಮರ್ಶನ ಕೂಡ ಐದಾರು ವರ್ಷಗಳ ಅವಧಿಯಲ್ಲಿ ಇಂಥ ಅಜೆಂಡಾ ಇಟ್ಟುಕೊಳ್ಳದೇ ಸಾಗಿದ್ದು. ಹಾಗಾಗಿಯೇ ಇಲ್ಲಿ ಉಲ್ಲೇಖಿಸ ಬೇಕಿದ್ದ ಹಲವು ಲೇಖಕರು, ಹಲವು ಪ್ರಮುಖ ಕಾದಂಬರಿಗಳು ತಪ್ಪಿ ಹೋಗಿವೆ. ಒಂದು ಚರ್ಚೆಯನ್ನು ಇಂಥ ಮಿತಿಗಳು, ಎಡವಟ್ಟುಗಳು ತುಂಬಿಕೊಡುವುದರಿಂದ ಅದೇನೂ ಕೆಟ್ಟದ್ದಾಗಿರಲಾರದು!

ಟೆಡ್ ಹೇಳುವ ಪ್ರಕಾರ, ಇವತ್ತು ಕಾದಂಬರಿಗಳಲ್ಲಿ ಹಲವು ಬಗೆಯ, ವೈವಿಧ್ಯಮಯವಾದ, ಪರಸ್ಪರ ವೈರುಧ್ಯವನ್ನು, ಸಂಘರ್ಷವನ್ನು ಸಾಧ್ಯವಾಗಿಸುವ ಧ್ವನಿಗಳು ಕೇಳಿಸುತ್ತಿಲ್ಲ. ವಸ್ತುವೇ ತಂತ್ರ ಮತ್ತು ಸ್ವರೂಪದ ಇತಿಮಿತಿಗಳನ್ನು ನಿರ್ಧರಿಸುವಷ್ಟು ಗಟ್ಟಿಯಾಗಿದ್ದ ಸಂದರ್ಭದಲ್ಲಿ ಅಪಸ್ವರಕ್ಕೆ ಆಸ್ಪದವಿರುವುದಿಲ್ಲ ಎನ್ನುವುದು ನಿಜವಾದರೂ ಅಂಥ ಸಂದರ್ಭದಲ್ಲಿ ಅದು ಒಂದು ಪೂರ್ವನಿರ್ಧಾರಿತ (ಸಿದ್ಧ ಮಾದರಿಯ) ಸ್ವರೂಪದ ಚೌಕಟ್ಟಿಗೆ ಸಿಗುವುದೇ ಇಲ್ಲ. ಉದಾಹರಣೆಗೆ ಕಂಬಾರರ ಶಿಖರಸೂರ್ಯ, ಗೋಪಾಲಕೃಷ್ಣ ಪೈಯವರ ಸ್ವಪ್ನಸಾರಸ್ವತ, ವಿ.ತಿ.ಶೀಗೆಹಳ್ಳಿಯವರ ತಲೆಗಳಿ ಕಾದಂಬರಿಗಳನ್ನು ಗಮನಿಸಿ. ಪ್ರಜ್ಞಾಪೂರ್ವಕ ತಂತ್ರದ ಬಳಕೆಯನ್ನು ಖಡಾಖಂಡಿತವಾಗಿ ನಿರಾಕರಿಸಿದ ಕಾರಂತರ ಕಾದಂಬರಿಗಳೂ ಇಲ್ಲಿ ಉಲ್ಲೇಖನೀಯ. ಹಾಗೆಯೇ, ಕಥಾನಕದ ಸನ್ನಿವೇಶ (ವಾತಾವರಣ)ನಿರ್ಮಾಣ, ಸಂಭಾಷಣೆ, ಲಯದ ನಿರ್ವಹಣೆ ಮತ್ತು ಇತರ ಬೋಲ್ಟು ನಟ್ಟುಗಳನ್ನು ಅಕೆಡೆಮಿಕ್ ವಿಮರ್ಶಕರು ಕೂಡಾ ಇತ್ತೀಚಿನ ದಶಕಗಳಲ್ಲಿ ಅವಗಣಿಸುತ್ತಿದ್ದಾರೆ. ಕ್ರಿಯೇಟಿವ್ ರೈಟಿಂಗ್ ಪ್ರೊಗ್ರಾಮುಗಳಲ್ಲಿ ‘ಸೂಪರ್ ಮಾರ್ಕೆಟ್ ನಾವೆಲ್’ಗಳು ಬುಕ್ ಸ್ಟಾಲುಗಳಲ್ಲಿ ಬಿಸಿಬಿಸಿಯಾಗಿ ಬಿಕರಿಯಾಗುವಂತೆ ಅವುಗಳನ್ನು ಹೇಗೆ ಉತ್ಪಾದಿಸಬೇಕು ಎನ್ನುವುದನ್ನು ಕಲಿಸಲಾಗುತ್ತಿದೆ.

ಟೆಡ್ ಹೀಗೆಲ್ಲ ಹೇಳುವ ಮುನ್ನ ಅಲ್ಲೊಂದು ಇಲ್ಲೊಂದು ಸ್ಯಾಂಪಲ್ಲುಗಳಂತೆ ಬಂದ ಪ್ರಯೋಗಶೀಲ ಕೃತಿಗಳ ವಿಳಂಬಿತ ಪ್ರಭಾವ ಸದ್ಯದ ಕಾದಂಬರಿಗಳ ಮೇಲಾಗಿರಬಹುದು ಎನ್ನುವುದನ್ನು ಅಲ್ಲಗಳೆಯುವುದಿಲ್ಲ. ನೀವು ಅಧ್ಯಾಯಗಳನ್ನು ಅವುಗಳ ಕ್ರಮಬದ್ಧತೆಯನ್ನು ತಪ್ಪಿಸಿ ಓದಬಹುದಾದ ಕಾದಂಬರಿಗಳು, 73ನೆಯ ಪುಟದ ನಂತರ 131ನೇ ಪುಟ ಓದಬಹುದಾದ ಕಾದಂಬರಿಗಳು ಹೀಗೆ. ಸರಿಯೋ ತಪ್ಪೋ ಹದಿನೆಂಟು ವಿಭಿನ್ನ ನೆಲೆಯಲ್ಲಿ ಓದಬಹುದಾದ ಕಾದಂಬರಿ ಎಂಬುದಾಗಿ ಜೇಮ್ಸ್ ಜಾಯ್ಸ್‌ನ ಕಾದಂಬರಿ ಯೂಲಿಸಿಸ್‌ನ್ನು ಗುರುತಿಸಿದ ಇಪ್ಪತ್ತನೇ ಶತಮಾನದ ಸಾಹಿತ್ಯ ಕ್ಷೇತ್ರ, ಅವನಿಂದ ಬಹಳಷ್ಟನ್ನು ಪಡೆದುಕೊಂಡಿರುವಂತೆಯೇ ಅವನು ಫಾಕ್ನರ್, ಪ್ರೌಸ್ಟ್, ವೂಲ್ಫ್ ಮುಂತಾದವರಂತೆಯೇ ಪ್ರಜ್ಞಾಪ್ರವಾಹ ತಂತ್ರಕ್ಕೆ ಲಯ ಒದಗಿಸಿದ ಎನ್ನುವುದನ್ನು ಒಪ್ಪುತ್ತಾನೆ.

ಡಿಜಿಟಲ್ ಯುಗಮಾನದ ಓದು ಕೂಡ (ಆನ್‌ಲೈನ್ ಓದು) ಫ್ರಾಗ್ಮಂಟೆಡ್ ಆದಂಥ ವಿಶಿಷ್ಟ ಬಗೆಯ ಓದು ಎಂದು ಟೆಡ್ ಗುರುತಿಸುತ್ತಾನೆ. ಕಾದಂಬರಿಕಾರರು ಒಂದು ಬಗೆಯ ಸಣ್ಣಕತೆ ಮತ್ತು ಪಾರಂಪರಿಕ ಕಾದಂಬರಿ ಎರಡರ ನಡುವಿನ ಹೈಬ್ರಿಡ್ ಸ್ವರೂಪವೊಂದಕ್ಕೆ ತಿಣುಕುತ್ತಿರಬಹುದೇ ಎಂಬ ಅನುಮಾನವನ್ನೂ ಟೆಡ್ ಇಲ್ಲಿ ಕೋಟ್ ಮಾಡುತ್ತಾನೆ. ಕನ್ನಡದ ಸಂದರ್ಭದಲ್ಲಿ ಇವತ್ತು ಬರುತ್ತಿರುವ ಕಾದಂಬರಿಗಳನ್ನು ಕಂಡರೆ ಈ ಮಾತು ಹೆಚ್ಚು ನಿಜವೆನಿಸುತ್ತದೆ. ಹಿರಿಯ ಮತ್ತು ಅನುಭವೀ ಕಾದಂಬರಿಕಾರರೂ, ಭರವಸೆಯ ಕಾದಂಬರಿಕಾರರೂ, ಹೊಸದಾಗಿ ಬರೆಯುತ್ತಿರುವವರೂ ಈ ವಿಷಯದಲ್ಲಿ ಕಾಲಕ್ಕೆ ಹೊಂದಿಕೊಂಡಿರುವಂತೆಯೂ ಕಾಣಿಸುವುದರಿಂದ ಇದು ಕಾಲಧರ್ಮವಿರಬಹುದು ಎಂದೂ ಎನಿಸುತ್ತದೆ.

ಆಧುನಿಕ ಮನುಷ್ಯನೇ ಫ್ರಾಗ್ಮೆಂಟೆಡ್ ಆದ ವ್ಯಕ್ತಿತ್ವವನ್ನು ಹೊಂದಿದ್ದಾನೆ, ಹಾಗಿರುತ್ತ ಅವನ ಸೃಷ್ಟಿ ಹಾಗಿರುವುದು ಸಹಜವಲ್ಲವೆ ಎಂಬ ನೆಲೆಯಲ್ಲಿ ಸಮಕಾಲೀನ ಸಾಹಿತ್ಯವನ್ನು ಗುರುತಿಸಿದವರೂ ಇದ್ದಾರೆ. ಭಾರತೀಯ ಇಂಗ್ಲೀಷ್ ಸಾಹಿತಿ ಅಂಜುಂ ಹಸನ್ ತಮ್ಮ ಕೆರವಾನ್ ಪತ್ರಿಕೆಯಲ್ಲಿ (ನವೆಂಬರ್ 2011) ಹರಿಕುಂಜ್ರು ಅವರ ಹೊಸ ಕಾದಂಬರಿಯ ಬಗ್ಗೆ ಬರೆಯುತ್ತ ಇಂಥ ನಿಲುವು ವ್ಯಕ್ತಪಡಿಸಿದ್ದರು. ಮುಂದೆ ಪ್ರಜಾವಾಣಿಗಾಗಿ ಅವರನ್ನು ಸಂದರ್ಶಿಸಿದಾಗ ಈ ಬಗ್ಗೆ ಅವರನ್ನು ಕೇಳಿದ್ದೆ. ಅವರ ಉತ್ತರ ಇಲ್ಲಿದೆ:

ಪ್ರಶ್ನೆ: ಆಧುನಿಕ ಮನುಷ್ಯ ಛಿದ್ರಗೊಂಡ ಸ್ಥಿತಿಯಲ್ಲಿದ್ದಾನೆ ಮತ್ತು ಸಾಹಿತ್ಯ ಅವನನ್ನು ಮತ್ತೆ ಇಡಿಯಾಗಿ ಗ್ರಹಿಸಲು ಸಹಾಯ ಮಾಡಬಹುದೆ ಎನ್ನುವ ಪ್ರಶ್ನೆಯನ್ನು ನೀವೊಮ್ಮೆ ಎತ್ತಿದ್ದಿರಿ. ಸ್ವಲ್ಪ ವಿವರಿಸುತ್ತೀರಾ?

“ದಾಸ್ತಾವಸ್ಕಿಯ Crime and Punishment ನಿಂದ ತೊಡಗಿ ವಿಘಟನೆ ಅನ್ನೋದು ಆಧುನಿಕ ಸಾಹಿತ್ಯದ ಕೇಂದ್ರಪ್ರಜ್ಞೆಯಾಗಿಯೇ ಇದೆ. ಅಮಿತಾವ ಘೋಷ್ ತಮ್ಮ The March of the Novel Through History -The Testimony of My Grandfather's Bookcase" ಪ್ರಬಂಧದಲ್ಲಿ ಬಹಳ ಚೆನ್ನಾಗಿ ವಿವರಿಸಿರೋ ಹಾಗೆ ಕಾದಂಬರಿಯ ಚರಿತ್ರೆಯೇ ವಿಘಟನೆಯಿಂದ ಸುರುವಾಗುತ್ತದೆ. ವ್ಯಕ್ತಿತ್ವದ ಬಿರುಕುಗಳೇ ಎಲ್ಲಾ ಶ್ರೇಷ್ಠ ಆಧುನಿಕ ಕಾದಂಬರಿಗಳ ಕೇಂದ್ರವಾಗಿದೆ. ಅಂತಿಮವಾಗಿ ಕಾದಂಬರಿಯೊಂದರ ಜಗತ್ತನ್ನ ಅವನ ಅಥವಾ ಅವಳ ಅನುಭವ ಮತ್ತು ಗ್ರಹಿಕೆಗಳೇ ರೂಪಿಸುತ್ತವೆ.

“ಕಳೆದ ಎರಡು ಅಥವಾ ಮೂರು ದಶಕಗಳ ಈಚೆಗೆ ಆಂಗ್ಲೋ ಅಮೆರಿಕನ್ ಸಾಹಿತ್ಯದಲ್ಲಿ ಏನಾಗಿದೆ ಅಂದರೆ ವ್ಯಕ್ತಿ ಒಂದು ಘಟಕವಾಗಿ ಇಡೀ ಕಾದಂಬರಿಯನ್ನ ಹಿಡಿದಿಟ್ಟುಕೊಳ್ಳೋದಕ್ಕೆ ಸಾಕಾಗಲ್ಲ ಅನ್ನೋ ನಿಲುವು ಇದೆ. ಈ ಬಗೆಯ ಸಾಹಿತ್ಯದ ಪ್ರಭಾವ ಹರಿ ಕುಂಜ್ರು ಮೇಲೆ ಇದ್ದಿರಬಹುದು ಅಂತ ಅವರ ಪುಸ್ತಕದ ರಿವ್ಯೂ ಮಾಡ್ತಾ ನಾನು Caravan ನಲ್ಲಿ (ನವೆಂಬರ್ 2011ರ ಸಂಚಿಕೆ) ಬರೆದಿದ್ದೆ. ಅಂಥ ಬರಹಗಾರರಿಗೆ ಸಮಕಾಲೀನ ಜಗತ್ತಿನ ರಾಜಕೀಯ, ಜನಪ್ರಿಯ ಸಂಸ್ಕೃತಿ, ಡಿಜಿಟಲ್ ತಂತ್ರಜ್ಞಾನ, ವಿಜ್ಞಾನ, ಇತಿಹಾಸ, ಭೂಗೋಳ ಹೀಗೆ ಎಲ್ಲವನ್ನೂ ತಮ್ಮ ಕಾದಂಬರಿಯಲ್ಲಿ ಸಾಕಷ್ಟು ತುರುಕುವ ಅನಿವಾರ್ಯತೆ ಇರುತ್ತದೆ. ಇದು ಮನುಷ್ಯನ ಬದುಕು, ಜೀವನ ಮತ್ತು ಸ್ಥಿತಿಯ ಪ್ರತಿಬಿಂಬ ಅನ್ನುವುದಕ್ಕಿಂತ ಕಾದಂಬರಿ ಎಂದರೆ ಒಂದು ವಿಧವಾದ ಡಾಕ್ಯುಮೆಂಟರಿ ಸಾಹಿತ್ಯ ಅಂದುಕೊಂಡ ಹಾಗಿರುತ್ತದೆ.”

ಆದರೆ ಕನ್ನಡ ಸಾಹಿತ್ಯದಲ್ಲಿ ಬಹುಷಃ ಮೊತ್ತ ಮೊದಲಬಾರಿಗೆ ನಾವು ಪ್ರಾಂಗ್ಮೆಂಟೆಡ್ ಮನುಷ್ಯನನ್ನು ಭೇಟಿಯಾಗಿದ್ದು ಗಿರಿ ಅವರ ಗತಿಸ್ಥಿತಿ (1971)ಯಲ್ಲಲ್ಲವೆ? ಆಗ ಅದು ಪ್ರಯೋಗವಾಗಿತ್ತು. ಆದರೆ ಇವತ್ತೂ ನಾವು ಈ ಗತಿಸ್ಥಿತಿಯ ನಾಯಕನನ್ನು ಬೇರೆ ಬೇರೆ ಕಾದಂಬರಿಗಳಲ್ಲಿ ಭೇಟಿಯಾಗುತ್ತಲೇ ಇದ್ದೇವೆ ಅನಿಸುವುದಿಲ್ಲವೆ? ಬಹುಷಃ ಮೊತ್ತ ಮೊದಲ ಬಾರಿಗೆ ಕುಟುಂಬ, ಸಮಾಜ ಎಂಬ ವಿಸ್ತೃತ ಕ್ಯಾನ್ವಾಸನ್ನು ಬಿಟ್ಟುಕೊಟ್ಟು ವ್ಯಕ್ತಿಕೇಂದ್ರಿತ ನೆಲೆಯಲ್ಲಿ ಬಂದ ಕನ್ನಡ ಕಾದಂಬರಿ ಕೂಡ ಇದಿರಬಹುದು.

ಗಿರಿಯವರ ಗತಿ-ಸ್ಥಿತಿ ಕಾದಂಬರಿ, ತೇಜಸ್ವಿಯವರ ಸ್ವರೂಪ(1966), ಲಂಕೇಶರ ಬಿರುಕು(1967), ಮತ್ತು ಚಿತ್ತಾಲರ ಶಿಕಾರಿ(1979) - ಸ್ಥೂಲವಾಗಿ ಒಂದೇ ಬಗೆಯಲ್ಲಿ ಮನುಷ್ಯನ ಬದುಕಿನ ಕ್ಷುದ್ರತೆಯನ್ನು ಶೋಧಿಸುತ್ತ ಹೋಗುವ ಕಾದಂಬರಿಗಳು. ಯು ಆರ್ ಅನಂತಮೂರ್ತಿಯವರ ಅವಸ್ಥೆ (1978) ಕಾದಂಬರಿಯಲ್ಲಿ ಈ ಕ್ಷುದ್ರತೆಯೇ ಚರ್ಚೆಯ ವಿಷಯವಾಗಿದ್ದೂ ಇದೆ. ಒಂದು ಬಗೆಯಲ್ಲಿ ಇನ್ನೇನು ಇದು ವಿಕ್ಷಿಪ್ತತೆಗೆ ಹೊರಳುತ್ತದೆ ಎನ್ನುವ ಮಟ್ಟದ ಒಂಟಿತನದ ಹಲಬುವಿಕೆ ಇಲ್ಲಿದೆ. ಇಲ್ಲ ಇದೇ ವಿಕ್ಷಿಪ್ತ ಮನಸ್ಥಿತಿ ಎಂದು ಕೆಲವು ಕಡೆ ಅನಿಸಿದರೂ ಅಚ್ಚರಿಯಿಲ್ಲ. ಲಂಕೇಶ್ ಅಕ್ಕ ಬರೆಯುವ ಹೊತ್ತಿಗೆ ಬದುಕಿನ ಕ್ಷುದ್ರತೆಯ ಕಡೆಗೆ ನೋಡುವ ಅವರ ದೃಷ್ಟಿಕೋನದಲ್ಲಿ ಬಹಳಷ್ಟು ಬದಲಾವಣೆಗಳಾಗಿರುವುದು ಗೋಚರಿಸುತ್ತದೆ. ತೇಜಸ್ವಿಯವರಂತೂ ನವ್ಯದ ಬಗ್ಗೆ ತಿರಸ್ಕಾರ ಬಂದು ಬರವಣಿಗೆಯ ಬೇರೆಯೇ ಮಜಲಿಗೆ ನಡೆದವರು. ಚಿತ್ತಾಲರು ಶಿಕಾರಿ ಬರೆಯುವುವಾಗಲೇ ಬೇರೆಯೇ ಹದ ಕಂಡುಕೊಂಡಿದ್ದರು ಅನಿಸುತ್ತದೆ.

ಗತಿ,ಸ್ಥಿತಿ ಬದುಕಿನ ಬೇಸರ (boredom) ಮತ್ತು ಅಸಹ್ಯತೆ (nausea)ಗಳ ಆಭಿವ್ಯಕ್ತಿ ಎನ್ನುತ್ತಾರೆ ಜಿ.ಎಸ್.ಅಮೂರ.

"ಆತನ ಸ್ಥಾಯಿಭಾವ ಅನಾಸಕ್ತಿ, ಬೇಸರ. ಈ ಬೇಸರ ಅವನ ಮೂಲಪ್ರವೃತ್ತಿಯೋ ಅಥವಾ ಅಸಂಗತ ಬದುಕಿಗೆ ಪ್ರತಿಕ್ರಿಯೆಯೋ ಖಚಿತವಾಗಿ ಹೇಳುವುದಕ್ಕಾಗುವುದಿಲ್ಲ. ಈ ಬಗ್ಗೆ ಆತನಲ್ಲಿಯೇ ಸಂಶಯಗಳಿವೆ. ಗೆಳೆಯ ಮೂರ್ತಿಯೊಂದಿಗೆ ಆತ ನಡೆಸುವ ಸಂಭಾಷಣೆಯೊಂದು ಹೀಗಿದೆ:
"ಏನನ್ನು ನೆನೆಸಿಕೊಂಡರೂ ಮನಸ್ಸಿಗೆ ನಿರುತ್ಸಾಹವೇ. ಮಾಡಬಹುದಾದ್ದೆಲ್ಲ ಚಿಲ್ಲರೆಯಾಗಿ, ಮಾಡಲಾಗದ್ದು ಅಗಾಧವಾಗಿ ಕಾಣುತ್ತದೆ. ಯಾವುದೊಂದು ಕೆಲಸವೂ ಆಸಕ್ತಿ ಹುಟ್ಟಿಸಿ ನನ್ನನ್ನು ಎಳೆದುಕೊಳ್ಳಲ್ಲ" ಎಂದ."ಸಿಂಪಲ್ ಆಗಿ ಹೇಳೋದಾದರೆ ನಿನಗೆ ಬೋರ್ ಆಗಿದೆ. ಸುಮಾರಾದ್ದೊಂದು ಕೆಲಸ ಸಿಕ್ಕಿ ಕೈಗೆ ರೆಗ್ಯೂಲರ್ ಆಗಿ ಒಂದಿಷ್ಟು ಹಣ ಬೀಳ್ತಾಹೋಗಲಿ, ನಿನ್ನ ಬಹಳಷ್ಟು ಬೇಜಾರು ಕಡಿಮೆಯಾದೀತು" ಎಂದ ಮೂರ್ತಿ."ಇದ್ದರೂ ಇರಬಹುದು ನೋಡು. ಕೆಲವು ಸಾರಿ ನಾವು ಬಹಳ philosophical ಅಂತ ನಮ್ಮನ್ನೇ ನಾವು ನಂಬಿಸಿಕೊಳ್ಳಲು ಪ್ರಯತ್ನಿಸುವ ಸಮಸ್ಯೆಯ ಮೂಲ ಸುಮ್ಮನೇ ಖಾಲಿ ಜೇಬಾಗಿರುತ್ತೆ" ಎಂದು ನಕ್ಕ.
ಆತನ ಅನಾಸಕ್ತಿಯ ತಾತ್ವಿಕ ಸ್ವರೂಪ ಏನೇ ಆಗಿರಲಿ, ಅದು ಅವನ ಸ್ಥಾಯೀ ಭಾವವೆನ್ನುವಷ್ಟರ ಮಟ್ಟಿಗೆ ಗಟ್ಟಿಯಾಗಿದೆ" (ಕನ್ನಡ ಕಥನ ಸಾಹಿತ್ಯ:ಕಾದಂಬರಿ - ಜಿ ಎಸ್ ಅಮೂರ)

ಗತಿಸ್ಥಿತಿಯ ಜೊತೆಗೇ ಇಟ್ಟು ನೋಡಲು ಸಮೃದ್ಧವಾದ ವಸ್ತು ಶಂಕರ ಮೊಕಾಶಿ ಪುಣೇಕರರ ‘ನಟ ನಾರಾಯಣಿ’ (1988)ಕಾದಂಬರಿಯಲ್ಲಿದೆ. ವ್ಯಕ್ತಿ ವಿಶಿಷ್ಟ ಪ್ರಜ್ಞೆಯನ್ನೇ ಇಲ್ಲಿಯೂ ದುಡಿಸಿಕೊಳ್ಳಲಾಗಿರುವುದು. ಆದರೆ ಅದಕ್ಕೆ ಸಾಮಾಜಿಕ, ರಾಜಕೀಯ, ಆರ್ಥಿಕ, ನೈತಿಕ ಆಯಾಮಗಳನ್ನು ಬಿಟ್ಟುಕೊಡಬೇಕಿಲ್ಲ ಎಂದು ಸಾಧಿಸಲು ಹೊರಟಂತೆ ಮತ್ತು ಸಿದ್ಧ ಮಾದರಿಯಿಂದ ಹೊರಗಿರುವ ಹಠವನ್ನೂ ಬಿಟ್ಟುಕೊಡದಂತೆ ಬರೆದ ಕಾದಂಬರಿಯಿದು. ಬಹುಷಃ ಮೊಟ್ಟಮೊದಲ ಬಾರಿಗೆ ಸಲಿಂಗರತಿಯನ್ನೂ ಒಂದು ರೂಪಕದಂತೆ ಬಳಸಿಕೊಂಡ ಮತ್ತು ಅದನ್ನೇ ಸೂಚಿಸುವಂಥ ಹೆಸರನ್ನು ಕಾದಂಬರಿಗೆ ಕೊಟ್ಟುಕೊಂಡು ಬಂದ ಕಾದಂಬರಿ ಕೂಡ ಇದೇ. ಬಹುಷಃ ಫ್ರಾಂಗ್ಮೆಂಟೆಡ್ ಮನುಷ್ಯನನ್ನೇ ಚಿತ್ರಿಸುವಾಗಲೂ ಅಂಥ ಕಾದಂಬರಿ ಮನೋಲೋಕವನ್ನೇ ನೆಚ್ಚಿಕೊಳ್ಳಬೇಕಾದುದಿಲ್ಲ ಎನ್ನುವುದನ್ನೂ ಪುಣೇಕರರಿಗೆ ಸಾಧಿಸುವುದಿತ್ತೇನೊ ಎನಿಸುತ್ತದೆ.

ನಾಣನ ಅರ್ಧನಾರೀ ಪಾತ್ರಗಳು, ನಾಣನಾಗಿ, ನಟನಾರಾಯಣಿಯಾಗಿ ಮತ್ತು ಚಮೇಲಿಯಾಗಿ ಅವು ನೀಡುವ ಒಳನೋಟಗಳು; ಬ್ರಹನ್ನಳೆ-ದ್ವಾರಕಾಧೀಶರ ರೂಪಕ; ವ್ಯಕ್ತಿತ್ವದ ಸೀಳು ಮತ್ತು ಮನಸ್ಸಿನಲ್ಲಿ ಹುಟ್ಟುವ ಅಧಃಪತನದ ಭಯ, ಪಾಪಭೀತಿ, ಆತ್ಮನಿರೀಕ್ಷಣೆಯ ತಲ್ಲಣ ಇವುಗಳಿಗೆ ಭಕ್ತಿಜನ್ಯ ಶರಣಾಗತಿಯಲ್ಲದೆ ಅನ್ಯ ಚಿಕಿತ್ಸೆಯಿಲ್ಲ ಎಂಬ ತತ್ವದ ಸೂಕ್ಷ್ಮ ಚಿತ್ರಣ ಕಾದಂಬರಿಯ ಹೈಲೈಟ್.

2003ರ ನವೆಂಬರ್‌ನಲ್ಲಿ ಹರೀಶ್ ಕೇರ ಅವರು ಉದಯವಾಣಿ ಸಾಪ್ತಾಹಿಕದಲ್ಲಿ ಬರೆಯುವ ಮತ್ತು ಬರೆಯದಿರುವ ಕಷ್ಟ ಎಂಬ ಹೆಸರಿನಲ್ಲಿ ಒಂದು ಸಂವಾದ ಆರಂಭಿಸಿದರು. ಈ ಲೇಖನ ಬಹು ಮುಖ್ಯವಾದ ಹತ್ತು ಹಲವು ಪ್ರಶ್ನೆಗಳನ್ನು ಎತ್ತಿತ್ತು.

"ಮರೀಚಿಕೆಯಾದ ಕೆಲವೇ ಏಕಾಂತದ ಘಳಿಗೆಗಳು ದೊರಕಿದಾಗ ಅವುಗಳನ್ನು ಕ್ಷಿಪ್ರ, ಸರಳ ಮತ್ತು ಅಷ್ಟೇನೂ ಆತ್ಮವಿಲ್ಲದ ಬರಹಗಳು ನುಂಗುತ್ತವೆ............ಅಂದರೆ ಅರ್ಥ ಇಷ್ಟೆ. ಇದು ಚೆದುರಿ ಹೋದ ಕಥನಗಳ ಯುಗ. ಇಲ್ಲಿ ಇಡಿ ಇಡೀ ಘನೀಕೃತವಾದ ಕಾದಂಬರಿ, ಒಂದು ಜೀವನ ದರ್ಶನವನ್ನು ಒಂದು ಬೀಸಿನಲ್ಲಿ ಕೊಡಬಹುದಾದ ಕೃತಿಗಳು - ಅಂದರೆ ಮರಳಿ ಮಣ್ಣಿಗೆ, ಮಲೆಗಳಲ್ಲಿ ಮದುಮಗಳು, ಗ್ರಾಮಾಯಣದಂಥ ಕೃತಿಗಳು ವರ್ತಮಾನ ಕಾಲದಲ್ಲಿಲ್ಲ."

ನಾನೂ ‘ಸೋ ವಾಟ್!’ ಎಂದು ಪ್ರತಿಕ್ರಿಯಿಸಿದ್ದ ಈ ಲೇಖನಕ್ಕೆ ಈಗ ಏನಿಲ್ಲವೆಂದರೂ ಹತ್ತು ವರ್ಷಗಳು ಸಂದಿವೆ. ಅಂಡ್ರಾಯ್ಡ್ ಸೆಲ್ ಫೋನುಗಳು, ಟ್ಯಾಬ್ಲೆಟ್ಟುಗಳು, ಲ್ಯಾಪ್‌ಟಾಪುಗಳು, ಇಂಟರ್ನೆಟ್, ಫೇಸ್‌ಬುಕ್, ಟ್ವಿಟರ್, ವಾಟ್ಸಪ್ ಇತ್ಯಾದಿ ಯುವ ಜನತೆಯ ಸಮಯವನ್ನು ನುಂಗಿ ನೀರು ಕುಡಿಯುತ್ತಿವೆ. ಲೈಕ್, ಶೇರ್, ಪೋಸ್ಟ್ ಎಂದು ಸಿಂಗಲ್ ಕ್ಲಿಕ್ ವಿಮರ್ಶೆ, ಸಿಂಗಲ್ ಸ್ಕ್ರೀನ್ ಗ್ರಹಿಕೆ ಸಾಧ್ಯವಾಗುವಂತಿದ್ದರೆ ಮಾತ್ರಾ ಗಮನ ಕೊಟ್ಟೇವು ಎನ್ನುತ್ತದೆ ‘ಸದಾ ಬ್ಯುಸೀ ಇರ್ತಾರೆ’ ಯುವಜನತೆ. ಸಂಕೀರ್ಣವಾದದ್ದನ್ನ, ಹಲವು ಮಗ್ಗುಲುಗಳ, ಆಯಾಮಗಳ ವಿಶ್ಲೇಷಣೆ ಅಗತ್ಯವಾಗುವಂಥ ವಿಷಯದ ಬಗ್ಗೆ ಮಾತನಾಡುತ್ತೀರಿ ಎಂದರೆ ಅದನ್ನೆಲ್ಲ ಕೇಳುವವರಿಲ್ಲ. ಕೇಳುವವರಿಲ್ಲದಿದ್ದರೂ ಮಾತನಾಡುತ್ತೀರಿ ಎಂದರೆ ಏನರ್ಥ? ನಿಮಗೆ ವಯಸ್ಸಾಗಿದೆ ಅಂಕಲ್, ಸ್ವಲ್ಪ ಸುಮ್ನಿರಿ!

ನಮ್ಮ ಕಾದಂಬರೀ ಪ್ರಕಾರ ಈ ಕಾಲದ ತಾಳಕ್ಕೆ ತಕ್ಕ ಕೋಲ ಕಟ್ಟಲು ಆಗಲೇ ಸಜ್ಜಾಗಿತ್ತೆ? ನಿಮ್ಮ ಕಾದಂಬರಿಗೆ ಆಕೃತಿ ಇಲ್ಲ, ಕೇಂದ್ರ ಇಲ್ಲ, ಆಳ ಇಲ್ಲ, ವಿಸ್ತಾರ ಇಲ್ಲ, ಅದು ಕಾದಂಬರಿಯ ಫಾರ್ಮ್ ಬಿಟ್ಟುಕೊಟ್ಟಿದೆ, ಅದರಲ್ಲಿ ಏಕಸೂತ್ರದ ಕಥಾನಕವೇ ಇಲ್ಲವಲ್ಲ ಎಂದೆಲ್ಲ ‘ಇಲ್ಲ’ಗಳ ಪಟ್ಟಿ ಮಾಡುತ್ತ ಮುಗ್ಗರಿಸಿದ್ದು ಕೃತಿಯಾಗಿರದೆ ವಿಮರ್ಶೆಯೇ ಇರಬಹುದೆ! ಯೋಚಿಸಬೇಕಾದ ಪ್ರಶ್ನೆಯೇ.

ಕಾದಂಬರಿಗೇ ವಿಶಿಷ್ಟವಾದ ಒಂದು ಸ್ವರೂಪ ಎನ್ನುವುದು ನಿಜಕ್ಕೂ ಇದೆಯೇ ಅಥವಾ ಅದು ಕೇವಲ ಪರಾಮರ್ಶನ ಹಂತದ ವಿಭಾಗೀಕರಣದಿಂದಾಗಿಯೇ ಹುಟ್ಟಿಕೊಂಡ ಪರಿಕಲ್ಪನೆಯೇ? ಕಾದಂಬರಿಯ ಸ್ವರೂಪ ಅಥವಾ ಆ ಪ್ರಕಾರದ ಚೌಕಟ್ಟುಗಳನ್ನು ನಿರ್ಣಯಿಸುವ ಸಂಗತಿಗಳೇನು? ಕೇವಲ ಗಾತ್ರವೆ? ಗಾತ್ರ, ತಂತ್ರ, ವಸ್ತು, ನಿರೂಪಣೆ, ವ್ಯಾಪ್ತಿ ಮತ್ತು ಆಕೃತಿ ಎಲ್ಲವೂ ಒಂದು ರೀತಿ ಕ್ರಿಕೆಟ್ ಬೌಲಿಂಗ್‌ನ ಲೈನ್ ಎಂಡ್ ಲೆಂಗ್ತ್ ಇದ್ದಂತೆ ಒಂದನ್ನು ಬಿಟ್ಟು ಒಂದಿಲ್ಲ. ಎಲ್ಲವೂ ಸರಿಯಿದ್ದರೆ ಅದು ಕಾದಂಬರಿ ಎನಿಸಿಕೊಳ್ಳುತ್ತದೆ ಎನ್ನುವುದಾದರೆ, ಒಂದೋ ಎರಡೋ ಸಾಮಾನು ಹಾಕದೇ ಮಾಡಿದ ಅಡುಗೆ ಹೊಸರುಚಿ ಎನಿಸಿಕೊಳ್ಳಲಾರದೆ?

ಕಾದಂಬರಿ ಚಿತ್ರಿಸುತ್ತಿರುವ ಊರು/ಸಮಾಜ ಅಂದರೆ ದೇಶ, ಅದು ಚಿತ್ರಿಸುತ್ತಿರುವ - ಅದರ ನಿರೂಪಣೆಯ ತೆಕ್ಕೆಗೆ ಬಿದ್ದ ಕಾಲ, ಅದನ್ನು ನಿರೂಪಿಸುತ್ತಿರುವ ಕಾಲ, ಅದು ಚಿತ್ರಿಸಲು ಸೋತಿರುವ ಸಮಾಜ, ಅದರ ಕಾಲ ಸ್ಪಷ್ಟವಿದ್ದಲ್ಲಿ ಆಗಿನ ರಾಜಕೀಯ, ಆರ್ಥಿಕ ಸ್ಥಿತಿಗತಿಯ ಚಿತ್ರ ಕೊಡುತ್ತಿದೆಯೆ ಇಲ್ಲವೆ, ಧರ್ಮದ ಪ್ರಶ್ನೆಯನ್ನು ಎತ್ತುತ್ತದೆಯೇ ಇಲ್ಲವೆ, ಗಂಡು-ಹೆಣ್ಣು ಸಂಬಂಧದ ಕುರಿತೇ ಮತ್ತೆ ಹೇಳುತ್ತಿದೆಯೇ ಅಥವಾ ಹೊಸತೇನಾದರೂ ಇದೆಯೆ, ಮನೋಲೋಕಕ್ಕೆ ಸಂಬಂಧಿಸಿದ ನಿರೂಪಣೆಯೆ, ನಿರುದ್ದಿಶ್ಯ ಕಥಾನಕದಂತೆ ಕಾಣುವ ಈಸೀಗೋ ನಿರೂಪಣೆಯೆ? ಅದರಲ್ಲಿ ಚಿತ್ರಿತಗೊಂಡಿರುವ ಪಾತ್ರಲೋಕ - ಕುಟುಂಬ/ಸಮಾಜ/ದೇಶ ಎಷ್ಟು ವ್ಯಾಪಕವಾದದ್ದು ಅಥವಾ ಸೀಮಿತವಾದದ್ದು, ಕಾದಂಬರಿಕಾರ ಸುತ್ತಮುತ್ತಲ ವಿವರಗಳನ್ನು ಸುಪುಷ್ಟವಾಗಿ ಕೊಡುತ್ತಿದ್ದಾನೆಯೇ ಅಥವಾ ತನ್ನ ಕತೆಯೊಂದೇ ಇದೆ ಜಗತ್ತಿನಲ್ಲಿ ಎಂಬಂತೆ ಓಟ ಹೂಡಿದ್ದಾನೆಯೇ, ಅಲ್ಲಿ ಕಂಡು ಬರುವ ಜೀವನದೃಷ್ಟಿ ಆರೋಗ್ಯಕರವೆ ಎನ್ನುವ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು. ಅಥವಾ, ಅದು ಐತಿಹಾಸಿಕವೆ, ಪೌರಾಣಿಕವೆ, ಕೌಟುಂಬಿಕವೆ, ಪತ್ತೇದಾರಿಯೆ, ಹಾಸ್ಯಪ್ರಧಾನವೆ, ಅನುವಾದವೆ-(ದೇಶೀಯ/ಅಂತರ್ರಾಷ್ಟ್ರೀಯ/ದೇಶೀಯ-ಇಂಗ್ಲೀಷ್), ವೈಜ್ಞಾನಿಕವೆ, ಗ್ರಾಫಿಕ್ ಕಾದಂಬರಿಯೆ, ಜನಪ್ರಿಯ ಸಾಹಿತ್ಯಕ್ಕೆ ಸೇರಿದ್ದೆ, ವಾಮಾಚಾರ/ಭೂತ-ಪ್ರೇತಗಳ ಕಥಾನಕವೆ, ಕಾಲ್ಪನಿಕ ಕಥಾನಕವೆ, ಸಾಮಾಜಿಕ ಕ್ರಾಂತಿ/ಯುದ್ಧ/ದುರಂತ,ಘಟನೆ ಕೇಂದ್ರಿತ ಕಾದಂಬರಿಯೇ ಎಂದೆಲ್ಲ ಕೇಳಿಕೊಳ್ಳಬಹುದು. ಸ್ವಲ್ಪ ಆಳಕ್ಕೆ ಹೋದರೆ ಕಾದಂಬರಿಕಾರ ಬಳಸುವ ನಿರೂಪಣಾ ವಿಧಾನ ಯಾವುದು, ಭಾಷೆಯ ಲಯ ಯಾವುದು, ನಿರೂಪಕನ ಪ್ರಜ್ಞೆ ಯಾವ ನೆಲೆಯದ್ದು, ಭೂತಕಾಲವನ್ನು ಹೇಳುತ್ತಿದೆಯೆ, ವರ್ತಮಾನವನ್ನೇ, ಅವನು/ಳು ಪ್ರಬುದ್ಧನೆ, ಮಗುವೆ, ಜಿಗುಟು ಮನುಷ್ಯನೆ, ಆದರ್ಶ ವ್ಯಕ್ತಿಯೇ, ಅವನು ಯಾವ ಬಗೆಯ ಓದುಗನನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಳುತ್ತಿದ್ದಾನೆ, ಕೃತಿ ನನಗೆ ಅಪೀಲ್ ಮಾಡುತ್ತಿದೆಯೇ, ಈ ಕೃತಿಯ ತಾತ್ವಿಕ ಆಯಾಮ ಯಾವ ತರದ್ದು ಇತ್ಯಾದಿ ಪ್ರಶ್ನೆಗಳು ಕೂಡ ಪ್ರಸ್ತುತವೆನಿಸಬಹುದು.

ಆದರೆ ಇದೆಲ್ಲವೂ ಕಾದಂಬರಿ ಹಾಗೆ ನಮ್ಮ ಕೈಸೇರಿದ ಮೇಲಿನ ಅಧಿಕಪ್ರಸಂಗವೇ ಹೊರತು ಕಾದಂಬರಿಕಾರರನ್ನೇ ಕೇಳಿದರೆ ಅವರು ಏನು ಹೇಳುತ್ತಾರೆ?

ಡಾ||ಕೆ ಶಿವರಾಮ ಕಾರಂತರು ಯಾವತ್ತೂ ತಾವು ತಂತ್ರಕ್ಕೆ ಕಟ್ಟುಬಿದ್ದವರೇ ಅಲ್ಲ ಎನ್ನುತ್ತಿದ್ದರು. ಡಾ|| ಯು ಆರ್ ಅನಂತಮೂರ್ತಿಯವರಿಗೆ ನೀಡಿದ ಒಂದು ಸಂದರ್ಶನದಲ್ಲಿ ಅವರು ತಾವು ಬೇರೆಯವರನ್ನು ಓದುವುದಕ್ಕೇ ಹೋಗಲಿಲ್ಲ, ಟೆಂಮ್ಟೇಶನ್ ಟು ಇಮಿಟೇಟ್ ಅದರಿಂದ ಹೆಚ್ಚಾಗುತ್ತೆ, ಇಮಿಟೇಟರ್ ಈಸ್ ನಾಟ್ ಎ ಕ್ರಿಯೇಟರ್ ಎಂದುಬಿಟ್ಟಿದ್ದರು. ಅಂದರೆ ಫಾರ್ಮ್, ಟೆಕ್ನಿಕ್ ಎರಡೂ ಆಗಲೇ ಲಭ್ಯವಿರುವ, ಹೊಸಬರು ಹಳಬರನ್ನು ಅನುಸರಿಸುವ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮಾದರಿ. ತಮಗೆ ತಮ್ಮ ಜೀವನದಲ್ಲಿ ಕಂಡಿದ್ದನ್ನು ತೋಡಿಕೊಳ್ಳುವುದು ಮುಖ್ಯ. ಹಾಗೆ ತೋಡಿಕೊಳ್ಳಲು ಹೊರಟಾಗ ವಸ್ತುವೇ ತನಗೆ ತಕ್ಕುದಾದ ತಂತ್ರವನ್ನು ಹುಡುಕಿಕೊಳ್ಳುತ್ತದೆ, ಹುಡುಕಿಕೊಳ್ಳಬೇಕು ಎಂದವರು ಕಾರಂತರು. ಬೆಟ್ಟದ ಜೀವ, ಅಳಿದ ಮೇಲೆ, ಮೂಕಜ್ಜಿಯ ಕನಸುಗಳು ಇಂಥಲ್ಲೆಲ್ಲ ಫಾರ್ಮ್ ಬಗ್ಗೆ ನಿಮ್ಮಲ್ಲಿ ಪ್ರಿಒಕ್ಯುಪೇಶನ್ ಇದೆ ಎಂದು ಅನಂತಮೂರ್ತಿಯವರು ಬಿಟ್ಟುಕೊಡದೆ ವಾದಿಸಿದರೂ ಕಾರಂತರು ಅದು ಪ್ರಯತ್ನಪಟ್ಟು ಬಂದಿದ್ದಲ್ಲ ಎಂದವರು. [‘ಅನಂತಮೂರ್ತಿ ಮಾತುಕತೆ:ಹತ್ತು ಸಮಸ್ತರ ಜೊತೆ’ (ಸಂ) ಎಚ್ ಪಟ್ಟಾಭಿರಾಮ ಸೋಮಯಾಜಿ, (ಅಹರ್ನಿಶಿ) ಪುಟ 76.]
ಕೇಶವ ಮಳಗಿಯವರ ಕತೆಗಾರನೊಬ್ಬನ ರೂಪಕಲೋಕದ ಕಥನ ‘ನೇರಳೆ ಮರ’ ಹೊರಬಂದಾಗ ಅದು ಕತೆ, ಕಾದಂಬರಿ, ಆತ್ಮಕಥನ ಯಾವ ಪ್ರಕಾರಕ್ಕೂ ಒದ್ದೆ ಮಣ್ಣಲ್ಲಿ ಕಲ್ಲು ಕೂತ ಹಾಗೆ ಫಿಟ್ ಆಗುತ್ತಿರಲಿಲ್ಲ. ಅವರನ್ನೇ ಈ ಬಗ್ಗೆ ಮಾತಿಗೆಳೆದಾಗ ಅವರು ತುಂಬ ಕುತೂಹಲಕರವಾದ ಕೆಲವೊಂದು ಸಂಗತಿಗಳನ್ನು ಹಂಚಿಕೊಂಡಿದ್ದರು.

ಪ್ರಶ್ನೆ: ಕಾದಂಬರಿಯ ಅನನ್ಯತೆಗೆ ನಿಮ್ಮ ನಿರೂಪಣಾ ಕ್ರಮ ಹೆಚ್ಚು ಹತ್ತಿರವಿದೆ ಎನ್ನುವ ಬಗ್ಗೆ ಅನೇಕ ವಿಮರ್ಶಕರ ನಿಲುವಿನ ಬಗ್ಗೆ ಗೊತ್ತು. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ನನ್ನದೊಂದು ಸ್ವಲ್ಪ ಬೇರೆ ತರ ನಿಲುವಿದೆ ಇಲ್ಲಿ. ವಿಮರ್ಶಕರು ಅಥವಾ ಆ ತರದ ಯಾವುದೇ ಒಂದು ಗ್ರಹಿಕೆ ಇರುವಂಥವರಿಗೆ ಆ ಗ್ರಹಿಕೆ ಬಂದಿರೋದು ನಮ್ಮಲ್ಲಿರೊ ಸಾಂಪ್ರದಾಯಿಕ ಮಾದರಿಗಳಿಂದ. ಸಣ್ಣಕತೆಗಳು ಅಂದ್ರೆ ಅದಕ್ಕೆ ಒಂದು ಮಾದರಿಯನ್ನ ನಾವು ಪ್ರಪೋಸ್ ಮಾಡ್ತಾ ಇದೀವಿ. ಕಾದಂಬರಿ ಅಂದ್ರೆ ಅದಕ್ಕೆ ಒಂದು ಮಾದರಿಯನ್ನ ಪ್ರಪೋಸ್ ಮಾಡ್ತೀವಿ. ಕಾದಂಬರಿ ಎಲ್ಲಿಂದ ಬಂದಿದೆಯೋ ಅಲ್ಲಿ, ಯುರೋಪಿನಿಂದಲೇ ಬಂದಿರೋದದು, ಅವರ ಸಾಂಪ್ರದಾಯಿಕ ಮಾದರಿಯೊಂದಿದೆ ಮತ್ತು ಹೊಸದಾಗಿ ಪುನರ್ವ್ಯಾಖ್ಯಾನ ಮಾಡಿರೋ ಮಾದರಿಗಳು ಕೂಡ ಇವೆ. ಈ ಮಿಲನ್ ಕುಂದೇರಾ ಕಾದಂಬರಿಗಳನ್ನ ನೋಡಿದ್ರೆ ಕಾದಂಬರಿಗಳಿಗಿಂತ ಹೆಚ್ಚು ಕತೆ ತರ ಇದೆ ಅದು. ಆದ್ರೆ ಕಾದಂಬರಿ ರೂಪದಲ್ಲಿ ಪಬ್ಲಿಷ್ ಆಗಿವೆ. ಮಿಲನ್ ಕುಂದೇರಾನ ಯಾವ್ದೇ ಒಂದು ಕೃತಿನ ಗಮನಿಸಿದ್ರೂನು ಹಾಗೇ ಅನಿಸ್ತಿರುತ್ತೆ ನಮಗೆ. ಅಲ್ಲಿ ಪ್ರಶ್ನೆ ಏನಿದೆ ಅಂದ್ರೆ ನಾವು ಯಾವ ಒಂದು ಮಾದರಿಗಳನ್ನ ಫಿಕ್ಸ್ ಮಾಡಿದೇವೆ ಆ ಮಾದರಿಗಳ ಮೂಲಕ ನಾವು ಬರಹಗಳನ್ನ ಸ್ವೀಕಾರ ಮಾಡ್ತೀವಿ. ಅದು ನನ್ನ ಪ್ರಕಾರ ಅಷ್ಟೋಂದು ಸಮರ್ಪಕ ಅಲ್ಲ ಅನ್ಸುತ್ತೆ. ತಪ್ಪು ಅಂತ ನಾನು ಹೇಳಲ್ಲ. ಅಷ್ಟೊಂದು ಸಮರ್ಪಕವಾದ ಗ್ರಹಿಕೆ ಅಲ್ಲ ಅದು.

ಆಮೇಲೆ ನನಗೆ, ನಾನು ಬರೀಬೇಕಾದಾಗ ಯಾವಾಗ್ಲುನು ಬಹಳಷ್ಟು conflictsಗಳನ್ನ ಎದುರಿಸ್ತಾ ಇರ್ತೀನಿ. ಅದ್ಯಾಕಂದ್ರೆ ಕತೆ ಅಂದ ತಕ್ಷಣ, ಒಂದು ಸಿದ್ಧ ಮಾದರಿ ಇದೆ ಈಗಾಗ್ಲೆ. ಅಂದ್ರೆ ಪ್ರಸ್ತುತ ಸಿದ್ಧ ಮಾದರಿಯ ಕಲ್ಪನೆಗಳ ಬಗ್ಗೆ ನಾನು ಮಾತಾಡ್ತಾ ಇದ್ದೇನೆ. ಸಿದ್ಧ ಮಾದರಿಗಳ ಬಗ್ಗೆ ಅಲ್ಲ. ಅದರ ಸಿದ್ಧ ಮಾದರಿಗಳ ಬಗ್ಗೇನೆ ನಾನು ಮಾತಾಡ್ತಾ ಇಲ್ಲ. ಬಂಡಾಯದ ಒಂದು ಮಾದರಿಯಿದೆ. ನವ್ಯದವರದ್ದೊಂದು ಮಾದರಿಯಿದೆ. ಇನ್ನು ಕೆಲವು ತರದ ಕೆಲವು ಟಿಪಿಕಲ್ ಮಾದರಿಗಳಿವೆ. ಕಥಾ ಸ್ಪರ್ಧೆಗಳಿಗೆ ಬರೆಯೋ ಮಾದರಿನೆ ಇದೆ. ಅದ್ರ ಬಗ್ಗೆ ನಾನು ಮಾತಾಡ್ತಾ ಇಲ್ಲ. ಈಗ ಕಲ್ಪಿತ ಸಿದ್ಧ ಮಾದರಿ ಏನಂದ್ರೆ ಕತೆ ಅಂದ್ರೆ ಇಷ್ಟು ಪುಟಗಳ ಒಳಗಡೆ ಇರಬೇಕಂತ ಅನ್ನೋದು ಒಂದು. ಈಗ ಅದ್ರ ಅನುಭವ ಇದೆಯಲ್ಲ, ಅಂದ್ರೆ ಓದಿನ ಅನುಭವ, ಈಗ ಒಂದು ಕೃತಿಯನ್ನ ಓದಿದ ಮೇಲೆ ಅದು ದಟ್ಟವಾಗಿ ಕೊಡುವ ಅನುಭವ ಇದ್ಯಲ್ಲ, ಅದು ಮುಖ್ಯ ಅಂತ ನನಗನಿಸುತ್ತೆ.

ಅಂದ್ರೆ ಈಗ ನಾವು ಹಿಂದೆ ಚರ್ಚೆ ಮಾಡ್ತಾ ಇದ್ವಿ ನೋಡಿ, ಪೊಯೆಟ್ರಿಗೆ ನಾವು ಆತರ ಮಾಡಬಹುದು. ಬಟ್ ಗದ್ಯ ಬರಹದಲ್ಲಿ ಇದು ಕತೆ ಅಥವಾ ಕಾದಂಬರಿ - ಈ ತರದ ಚರ್ಚೆನೆ ಬಹಳ ಅಪ್ರಸ್ತುತ ಅಂತ ಅನ್ಸುತ್ತೆ ನನಗೆ. ಯಾಕಂದ್ರೆ ನಾನು ಓದೊ ಬೇರೆ ಬೇರೆ ದೇಶಗಳ ಎಷ್ಟೋ ಲೇಖಕರಲ್ಲಿ ಕತೆಗಳು ಅಂತ ಪಬ್ಲಿಷ್ ಮಾಡಿರೋದೆ actually ನೂರು ಪುಟಗಳ ಮೇಲಿದೆ. ಈಗ ಗೇಬ್ರಿಯಲ್ ಗಾರ್ಸಿಯಾ ಮಾರ್ಕೆಸ್ ಬರೆಯೊ ಕತೆಗಳನ್ನ ನೋಡಿದ್ರೆ, ಸಿಂಗರ್ ಬರೆಯೋ ಕತೆಗಳನ್ನ ನೋಡಿದ್ರೆ ಅಥವಾ even ಎಷ್ಟೋ ಆಫ್ರಿಕನ್ writers ಬರೆಯೋ ಕತೆಗಳನ್ನ ನೋಡಿದ್ರೆ ನೀವು, ಅವ್ರದೆಲ್ಲ ನೂರು ಪೇಜ್ ಮೇಲೆನೆ ಇದಾವೆ. ಕತೆಗಳು ಅಂತ ಪಬ್ಲಿಷ್ ಮಾಡಿದಾರೆ. ಪಬ್ಲಿಷ್ ಮಾಡ್ಬೇಕಾದ್ರೆ ನಿಮಗೆ ಒಂದು convenient form ಬೇಕು. ಅಂದ್ರೆ ಅದು convenient form ಅಷ್ಟೆನೆ ಅದು.

ಕನ್ನಡದಲ್ಲಿ ಯಾವಾಗ್ಲೂನು ಏನಾಗಿದೆ ಅಂದ್ರೆ, ಈಗ ಸಣ್ಣಕತೆಗಳು ಅಂದ್ರೆ ಮಾಸ್ತಿ ನಮ್ಮ ಗಮನದಲ್ಲಿದ್ದಾರೆ. ಅದಕ್ಕಿಂತ ಮುಂಚೆ ಹೇಳೋದಾದ್ರೆ ಪಂಜೆಯವರು ನಮ್ಮ ಗಮನದಲ್ಲಿದ್ದಾರೆ. ಸೊ ಅವರಿಬ್ರುನು ಈ ತರ ತಮ್ಮ ಮಾದರಿಯನ್ನ ರೂಢಿಸಿಕೊಂಡಿದ್ದು. ಮೊದಲನೆಯದಾಗಿ ಆ ತರದ್ದೊಂದು ಮಾದರಿ ಕನ್ನಡದಲ್ಲಿ ಇರಲಿಲ್ಲ. ಸೊ ಅವರು ಹೊಸದಾಗಿ ರೂಢಿಸಿಕೊಳ್ಳಬೇಕಾಗಿತ್ತು. ಹಾಗೆ ರೂಢಿಸಿಕೊಳ್ಳಬೇಕಾದಾಗ ಅವರ ಕಾಲಮಾನಕ್ಕೆ ತಕ್ಕ ಎಲ್ಲಾ ಆಶಯಗಳನ್ನ, ರಾಜಕೀಯ ಆಶಯ, ಸಾಹಿತ್ಯಿಕ ಆಶಯ ಮತ್ತು ಪ್ರಭಾವ, ಮೊಪಾಸಾ ತರದ್ದನ್ನ ಗಮನದಲ್ಲಿಟ್ಟುಕೊಂಡು ನಾನು ಹೇಳ್ತಾ ಇದ್ದೀನಿ. ಮಾಸ್ತಿಯವರಿಗೆ ಮುಖ್ಯವಾಗಿ ಪ್ರಭಾವ ಬಂದಿದ್ದು ಯುರೋಪಿಯನ್ writersರಿಂದ. ಸೊ ಆಗ ಸಣ್ಣಕತೆಯ ಮಾದರಿ ಆ ತರ ಇತ್ತು. ಕನ್ನಡಕ್ಕೆ ಬಹಳ ಹೊಸತಾಗಿತ್ತದು.

ಆಮೇಲೆ ಬಂದ ಸಾಹಿತ್ಯದ ಪ್ರಯತ್ನಗಳು ಏನಿವೆ, ನವ್ಯರನ್ನ ನೀವು ಗಮನಿಸಿದ್ರೆ, ಮಾಸ್ತಿಯವರ ಮಾದರಿ ಬಹಳ convenient ಆಗಿತ್ತು ಆಗ. Actually, ನವ್ಯರು ಮಾಡಿದ್ದೇನು ಅಂದ್ರೆ ಅದರಲ್ಲಿ formನಲ್ಲಿ ಅವರು ವ್ಯತ್ಯಾಸಗಳನ್ನು ಮಾಡಿದ್ರು. ಕತೆಯ ರಚನೆಯ structure ಇದೆಯಲ್ಲ, ಅದರಲ್ಲಿ ವ್ಯತ್ಯಾಸವನ್ನು ಮಾಡಿದ್ದು ಬಿಟ್ರೆ, ಸಣ್ಣಕತೆಯ ಪರಿಕಲ್ಪನೆಯನ್ನು ವ್ಯತ್ಯಾಸ ಮಾಡ್ಲಿಲ್ಲ ಅವರು. ಮಾಸ್ತಿಯವರನ್ನ ನೀವು ನೋಡಿದ್ರೆ ಅನಂತಮೂರ್ತಿಯವರ ಪ್ರಯತ್ನನು ಕತೆ ಹೇಳೋದೇ ಇದೆ. ಬಟ್ ಅಲ್ಲಿ ಕತೆ ಹೇಳುವ ವಿಧಾನ ಬೇರೆ ಇದೆ, ಕತೆ ಹೇಳುವ ತಂತ್ರ ಬೇರೆ ಇದೆ. ವಸ್ತುಗಳು ಬೇರೆಯಿದೆ. ವಿಶಾಲವಾದ ನೆಲೆಯಲ್ಲಿ ನೋಡೋದಾದ್ರೆ ವಸ್ತುಗಳು ಕೂಡ ಬೇರೆಯಲ್ಲ. ಬಟ್ ಬೇರೆ ಇದೆ ಅಂತ ನಾವು ಒಪ್ಪಬಹುದು. ಅಲ್ಲಿ ಅವರಿಗೆ ಏನು ಸಮಸ್ಯೆಯಾಯ್ತು ಅಂದ್ರೆ, particularly ಇಬ್ರನ್ನ ನಾವು ಆ ಕಾಲದ ಮಹತ್ವದ ಲೇಖಕರು ಅಂತ ತಗೊಳ್ಳೋದಾದ್ರೆ, ಒಬ್ರು ಶಾಂತಿನಾಥ ದೇಸಾಯಿ, ಇನ್ನೊಬ್ರು ಅನಂತಮೂರ್ತಿ. ಇವ್ರಿಗುನು ಅತ್ಯಂತ ಸವಾಲಿನ ವಿಷಯವನ್ನು ಹೇಳಬೇಕಾದಾಗ ಇದನ್ನ, ಈ ಮಾದರಿಯ ಮಿತಿಯನ್ನ, ಕೇರ್ ಮಾಡ್ಲಿಲ್ಲ ಅವರು. ಅನಂತಮೂರ್ತಿಯವರ ‘ಕ್ಲಿಪ್ ಜಾಯಿಂಟ್’ ಅತ್ಯಂತ ಒಳ್ಳೆಯ ಉದಾಹರಣೆ ಅಂತ ನಾನು ಅಂದ್ಕೊಂಡಿದೀನಿ. ಅಥವಾ ಮಂದಾಕಿನಿಯ ಕತೆಯನ್ನು ಹೇಳುವ ‘ಕ್ಷಿತಿಜ’. ಮತ್ತು ಅದೇ lengthನ ಬೇರೆ ಬೇರೆ ಕತೆಗಳಿವೆ. ‘ಸುಬ್ಬಣ್ಣ’ನೆ ತಗೊಳಿ ನೀವು. ಅದನ್ನ ಕಾದಂಬರಿ ಅಂತ ಮಾಸ್ತಿಯವರೆ ಪರಿಗಣಿಸಿರಲಿಲ್ಲ ಎಷ್ಟೋ ಸಮಯ. ಪಬ್ಲಿಷ್ ಮಾಡ್ತಾ ಮಾಡ್ತಾ ಕಾದಂಬರಿಯಾಗಿ ಬಿಟ್ಟಿದೆ ಅದು.

ಅಂದ್ರೆ ಈ ತರದ್ದೊಂದು contradictionನು ಎಲ್ಲಾ ಕಾಲ್ದಲ್ಲು ಇರುತ್ತೆ. ಈಗ ನಿಮಗೆ ಮಾದರಿಗಳು ನಿಮ್ಮನ್ನ dictate ಮಾಡೋಕೆ ಸುರುಮಾಡಿ ಬಿಟ್ಟಾಗ ಲೇಖಕನಿಗೆ tension ಆಗಕ್ಕೆ ಸುರುವಾಗಿಬಿಡುತ್ತೆ. ಅದಕ್ಕೆ ಜೋತುಬಿದ್ದು ನೀವು ಈಗ ಅನಂತಮೂರ್ತಿಯವರ ಹಿಂದಿನ ಹಿಂದಿನ ಹಿಂದಿನ ಕತೆಗಳನ್ನು ನೋಡ್ಕೊಂಡೋಗಿ. ಬರ್ತಾ ಬರ್ತಾ ಬರ್ತಾ ಬಂದ ಕತೆಗಳನ್ನ ನೋಡ್ಕೊಂಡೋಗಿ. ಅಂದ್ರೆ ಆರಂಭದ ಕತೆಗಳನ್ನ ನಾನು ಹೇಳ್ತಾ ಇರೋದು. ಆಮೇಲಾಮೇಲೆ ಅವ್ರು length ಬಗ್ಗೆ ತಲೆಕೆಡಿಸಿಕೊಳ್ಳಿಲ್ಲ. - ನನಗೆ ಹೇಳ್ಬೇಕಾಗಿರೋದು ಇಷ್ಟಿದೆ; ಮುವ್ವತ್ತು ಪೇಜ್ ಬಿಟ್ಟು ಮುವ್ವತ್ತೊಂದನೆ ಪೇಜಿಗೆ ಹೋಗ್ತಾ ಇದೆ, I don't care. ನನಗೆ ಹೇಳೋದು important ಅಷ್ಟೆ ಅಲ್ಲಿ. - ಆಮೇಲೆ ನೀವದನ್ನು ಕಾದಂಬರಿ ಅಂತಾದ್ರು ಕರೀರಿ, ಕತೆ ಅಂತಾದ್ರು ಕರೀರಿ ಅದು ನಿಮ್ಮ ಹಣೆಬರಹ ಅದು. ಸೊ, ಹೀಗೆ ಎಲ್ಲಿ ಕೊನೆಯಾಗುತ್ತಲ್ಲ, ತಾತ್ವಿಕವಾಗಿ, ಮನಸ್ಸಿನಲ್ಲಿ ಕೆಲವು ವಿಚಾರಗಳು ಎಲ್ಲಿ ನಮಗೆ ಕೊನೆಯಾಗುತ್ತೊ ಅಲ್ಲಿ ನಾವು ನಿಲ್ಲಿಸ್ತೀವಿ. ಆಮೇಲಿನ ಸ್ವರೂಪ ಕಾದಂಬರಿನೂ ಆಗಿರುತ್ತೆ ಅಥವಾ ಕತೇನೂ ಆಗಿರುತ್ತೆ.

ನನ್ನ contradiction ಎಲ್ಲಿದೆ ಅಂತಂದ್ರೆ, ಈಗ ನಾನು ಹೇಳುವ ಎಷ್ಟೋ ವಿಷಯಗಳು ಬರೀಬೇಕಾದಾಗ ನಾನು length ಬಗ್ಗೆ ಯೋಚನೆ ಮಾಡೋಕೆ ಹೋಗಲ್ಲ. ಆದರೆ ಅದು ಮುಗಿದಾಗ actually ಅದು ಈಗಾಗ್ಲೆ ಕಲ್ಪಿತ ಸಣ್ಣಕತೆಯ ಸ್ವರೂಪದಲ್ಲಿ ಅದು ಇಲ್ಲ. ಕಲ್ಪಿತ ಕಾದಂಬರಿಯ ಸ್ವರೂಪದಲ್ಲೂ ಅದಿಲ್ಲ. ಸೊ ಹಾಗಿದ್ದಾಗ ಎಷ್ಟೋ ಜನ ನನಗೆ ಕೇಳ್ತಾರೆ, ನೀವಿದನ್ನ ಇನ್ನೊಂದು ಸ್ವಲ್ಪ ಬೆಳೆಸಿಬಿಟ್ಟು ಕಾದಂಬರಿ ಮಾಡಬಹುದಾಗಿತ್ತು ಅಂತ. ಈ ‘ನಕ್ಷತ್ರಯಾತ್ರಿಕರು’ ಇರಬಹುದು, actually ‘ಕಡಲತೆರೆಗೆ ದಂಡೆ’ ಸ್ವಲ್ಪ ಆ ತರ ಇಲ್ಲ. ಕಾದಂಬರಿ ಅಂತ ಒಪ್ಪಬಹುದೇನೋ ಜನ ಅದನ್ನ. ಪ್ರತ್ಯೇಕವಾಗಿ ಪಬ್ಲಿಷ್ ಮಾಡಿದಾಗ. ಬಟ್ ಎಷ್ಟೋ ಕತೆಗಳು ಸಣ್ಣಕತೆಗಳ ಒಳಗಡೆನೂ ಇಲ್ಲ ಅವು ಆ ಮೇಲೆ ಈ ಕಡೆನೂ ಇಲ್ಲ. ಅದಕ್ಕೆ ನಮ್ಮ ಈ journalistಗಳು ಏನ್ಮಾಡ್ತಾರೆ ಅಂದ್ರೆ, ಅಂದ್ರೆ ಪತ್ರಿಕೆಯ ಸಂಪಾದಕರು, ನೀಳ್ಗತೆ ಅಂತ ಒಂದು form ಸೃಷ್ಟಿ ಮಾಡ್ಕೊಂಬಿಡ್ತಾರೆ. ಆತರ ಏನಿರಲ್ಲ actually. ನೀಳ್ಗತೆ-ಕಿರುಕಾದಂಬರಿ, ಹಿಂಗೇನಿರಲ್ಲ ಅದು. ಅದೇ ಆದ್ರೆ, ಸೀರಿಯಸ್ ಓದುಗರಿಗೆ, ಸೀರಿಯಸ್ ಬರಹಗಾರರಿಗೆ ನಾನು ಹೇಳ್ತಾ ಇದೀನಿ. ಜನಪ್ರಿಯ ಮಾದರಿ ಬಗ್ಗೆ ನಾನು ಮಾತಾಡ್ತ ಇಲ್ಲ. ಅವರಿಗೆ ಆ ತರದ್ದೊಂದು form ಏನು ಇರಲ್ಲ. ಸೊ, ನನಗೆ ಯಾವಾಗ್ಲು ಎಲ್ಲಿ ನನ್ನ contradiction ಇರುತ್ತೆ ಅಂದ್ರೆ ಅದು ಮುಗಿದಾಗ ಯಾವ್ದೋ ಒಂದು ಎರಡರ ಮಧ್ಯೆ ಇರುತ್ತಲ್ಲ, ಅದೇ form ಅಷ್ಟೆ ಅದು. ಸೊ, ನಾವೆಲ್ಲೊ ಒಂದು ಕಡೆಗೆ ಫಿಕ್ಸ್ ಮಾಡೋಕೆ ಟ್ರೈ ಮಾಡ್ದಾಗ, ನನಗೇನೂ problem ಆಗಲ್ಲ ಅದು, ಅವ್ರಿಗೆ, ಗುರುತಿಸೋವ್ರಿಗೆ problem ಆಗಿ ಬಿಡುತ್ತೆ. ಸೊ, ಇದು ವಿಮರ್ಶಕರಿಗೆ problem ಆಗಿ ಬಿಡುತ್ತೆ. ಇದನ್ನ ಕಾದಂಬರಿಯಾಗಿ ಪರಿಗಣಿಸಬೇಕು ಅಂದ್ರೆ length ಇಲ್ಲ....

ನನ್ನ ಪ್ರಕಾರ, ಅದ್ಕೆ ನಾ ನಿಮಗೆ ಆರಂಭದಲ್ಲೆ ಹೇಳಿದೀನಿ, ನಿಮಗೆ ಓದಿದಾಗ ಅದರ ಸಂಕೀರ್ಣತೆ ಮತ್ತು ಅದರ ದಟ್ಟವಾಗಿ ನಿಮ್ಮನ್ನ ಕಾಡುವ ಶಕ್ತಿ, ಅದು ನಿಮ್ಮ ಮೇಲೆ ಮಾಡುವ ಪ್ರಭಾವ ಮತ್ತಿತರ ಒಟ್ಟಾರೆ structure ಅದು ಪರಿಪೂರ್ಣವಾಗಿದೆಯೆ ಇಲ್ಲವೆ ಅನ್ನೋದಷ್ಟು ಮುಖ್ಯ ನನಗೆ. ಅದು ಕಾದಂಬರಿ ತರ ನಿಮಗನಿಸ್ತಾ ಇದ್ರೆ, its fine. ಕತೆ ತರ ಇದೆ ಅನಿಸ್ತಾ ಇದ್ರೆ, its fine. ಬಟ್ ಈಗ ನೀವು ‘ಅಂಗದ ಧರೆ’ನ ಕಾದಂಬರಿ ಅಂತ ಹೇಳ್ಬಿಟ್ಟು, ಮತ್ತೊಮ್ಮೆ length ಬಗ್ಗೆ ಗಮನ ಕೊಡೋಕ್ಕಾಗಲ್ಲ. ಅದು ಅಲ್ಲಿಗೆ ಮುಗಿದೋಗಿದೆ ನನ್ ಪ್ರಕಾರ; ತಾತ್ವಿಕವಾಗಿ ಅದು ಮುಗಿದೋಗಿದೆ ಮತ್ತು ತಾರ್ಕಿಕವಾಗಿಯೂ ಮುಗಿದು ಹೋಗಿದೆ, ಆ ಕ್ಷಣಕ್ಕೆ. ಆಮೇಲದನ್ನ ಬೆಳೆಸೋಕೆ ಸಾಧ್ಯ ಇಲ್ಲ. ಕೆಲವು ಜನ ನನಗೆ suggest ಮಾಡಿದ್ರು, ಇನ್ನೊಂದು ಸ್ವಲ್ಪ ಅಲ್ಲಿ ನೀವು ಘಟನೆಗಳಿವ್ಯಲ್ಲ, ಅದನ್ನೆ ಮೂರು ಮೂರು ಪೇಜ್ ಮಧ್ಯದಲ್ಲಿ ಸೇರಿಸಿ ಒಂದು ಕಾದಂಬರಿ ಮಾಡಿ ಅಂತ. ಹಾಗೆ ಮಾಡ್ಲಿಕ್ಕೆ ನನಗೆ ಸಾಧ್ಯ ಇಲ್ಲ. ಸೊ ಆದ್ರಿಂದ ಆ ಪ್ರಶ್ನೆ ಅದು ಓದೋವ್ರಿಗು ಮತ್ತು ವಿಮರ್ಶಕರಿಗು ಸೇರಿದ್ದೆ ಹೊರತು ಲೇಖಕನಾಗಿ ನನಗಲ್ಲ. ನನಗಷ್ಟೇ ಅಲ್ಲ, ಈಗ ಅನಂತಮೂರ್ತಿಯವರಿಗೇ ಈಗ ‘ಕ್ಲಿಪ್ ಜಾಯಿಂಟ್’ ಯಾಕೆ ನೀವು ಇನ್ನೂ ಐದು ಪೇಜ್ ಕಡಿಮೆ ಬರೀಲಿಲ್ಲ ಅಂತ ಕೇಳಿದ್ರೆ ಅಷ್ಟೇ ಬರೀಬೇಕವ್ರು. ಅದ್ರಿಂದಾನೆ ಅವ್ರು ಬರೆದಿದಾರೆ ಅಂತ ನನಗನಿಸುತ್ತೆ.

ಆಮೇಲೆ ಕಾದಂಬರಿಯ, ನಮ್ಮ ಪೂರ್ಣ ಪ್ರಮಾಣದ ಕಾದಂಬರಿಯ ಕಲ್ಪನೆಯಿಂದಾಗಿ ಇದೆಲ್ಲ ಅನಿಸ್ತಾ ಇದೆ. ಕಾದಂಬರಿ ಅಂತ ಹೇಳಿದ ತಕ್ಷಣ ಕಾರಂತರ ಮತ್ತು ಕುವೆಂಪು ಅಂಥವರ ಎರಡು ಮಾದರಿಗಳಿವೆ ನಮಗೆ. ಸಿದ್ಧ ಮಾದರಿಗಳೇನಲ್ಲ ಅವು. ಬಟ್ ಆ ಮಾದರಿಗಳಿವೆ. ಸೊ ಯಾರೇ ಕಾದಂಬರಿ ಬರೆದ್ರೂ, ಇನ್ನೊಂದು ಕಡೆ ಭೈರಪ್ಪನವರಿದ್ದಾರೆ. ಸೊ, ಅವರ ಗಾತ್ರ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಾ ಇದ್ಯೆ ಹೊರತು ಕಡಿಮೆಯಾಗ್ತಾ ಇಲ್ಲ. ಸೊ, ಆ ನೆಲೆಯಲ್ಲಿ ನೀವು ಗ್ರಹಿಸಿದ್ರೆ ಖಂಡಿತವಾಗಿ ನೀವು ಕೇಳ್ತಾ ಇರುವ ಪ್ರಶ್ನೆ ಬಹಳ ರಿಲೆವಂಟ್ ಆಗಿದೆ. ಬಟ್ ಈಗ ನೀವು ಭೈರಪ್ಪನವರ ‘ಅಂಚು’ ಕತೆ actually ‘ಅಗಮ್ಯ ಅಗೋಚರ ಅಪ್ರತಿಮ ಜೀವವೇ...’ ಅದರ contentಉ ಹೆಚ್ಚು ಕಮ್ಮಿ ಒಂದೇ ತರನೆ ಇದೆ. ನಿಮಗೆ ಕತೆ ಓದಿದ ಮೇಲೆ ಅಥವಾ ಕಾದಂಬರಿ ಓದಿದ ಮೇಲೆ ಕೊಡುವ ಒಂದು ದಟ್ಟವಾದ ಅನುಭವ ಇದೆಯಲ್ಲ, ಈ ಸಣ್ಣಕತೆನೆ ಕೊಡ್ತಾ ಇದೆ. ಸಣ್ಣಕತೆ ಅಂತ ಅದನ್ನ ನಾನು ಕರೆದಿಲ್ಲ. ನನ್ನ ಕತೆ ಕೊಡ್ತಾ ಇದ್ರೆ ನಿಮ್ಗೆ, ಅದಕ್ಕು ಇದಕ್ಕು ಏನು ವ್ಯತ್ಯಾಸ ಅಂತ ನನ್ನ ಕೇಳಿದ್ರೆ ಏನೂ ಇಲ್ಲ, ನನ್ ಪ್ರಕಾರ. ಅಷ್ಟೇ ಹೇಳೋಕೆ ಇಷ್ಟ ಪಡ್ತೀನಿ.

‘ಕುಂಕುಮ ಭೂಮಿ’ಯ ವಿಚಾರಕ್ಕೆ ಬಂದ್ರೆ, ಅದನ್ನ ನಾನು ಕಾದಂಬರಿ ಬರೀಬೇಕು ಅಂತಾನೆ ಬರೆದಿದ್ರಿಂದ ಆ ತರ structureನ ನಾನು ಯೋಚನೆ ಮಾಡಿದೀನಿ ಅಂತ ನಿಮ್ಗೆ ಗೊತ್ತಾಗುತ್ತೆ. ಅದು artificial structure ಅನಿಸುತ್ತೆ ನನಗೆ. ಅದಕ್ಕೆ ಆ ಕಾದಂಬರಿ ಬಗ್ಗೆ ನನಗಷ್ಟು ಒಲವಿಲ್ಲ ಅಂತ ಹೇಳೋವಾಗ ಇದು ಕೂಡ ಒಂದು ಕಾರಣ ಅದರಲ್ಲಿ. ನಾನು ಯಾವ್ದೇ ಬರಹ ಬರೆಯೋಕೆ ಸುರುಮಾಡಿದಾಗ ಅದನ್ನ ಅಂತ್ಯ ಏನು ಅಂತ ನಾನು ಯೋಚನೆ ಮಾಡೋದಿಲ್ಲ. ಅಂದ್ರೆ ಅದರ length ಬಗ್ಗೆ ನಾನು ಹೇಳ್ತಾ ಇರೋದು. ಅದು ನಾನು ಕತೆ ಬರೆಯೋಕೆ ಸುರುಮಾಡ್ತೀನಿ. length ಎಲ್ಲಿಗೆ ಮುಗಿಯುತ್ತೆ ಅಲ್ಲಿಗೆ ನಾ ಬಿಡ್ತೀನಿ. ಸೊ, ಈ ಸಮಸ್ಯೆ ನನಗೆಲ್ಲಿ ಬರುತ್ತೆ ಅಂತಂದ್ರೆ ಅದನ್ನ ಎಲ್ಲಿ place ಮಾಡ್ಬೇಕು ಅಂತಂದಾಗ ಬರುತ್ತೆ. actually ‘ಅಂಗದ ಧರೆ’ನೂ ನನ್ನ ಕಲೆಕ್ಷನ್ನಿನಲ್ಲಿ ಸೇರಿಸ್ಬೇಕು ಅಂತ ನನಗಿತ್ತು. ಮತ್ತೆ ಕತೆಯಾಗಿ ನೋಡಿದ್ರೆ ಬಹಳ ದೊಡ್ಡದಿದೆ ಅದು. ನಮ್ಮ ಒಪ್ಪಿತ ಮಾದರಿಗಳಿವೆಯಲ್ಲ, ಅದರಿಂದಾಗಿ ಹುಟ್ತಾ ಇರೋ ಸಮಸ್ಯೆ ಅಂತ ನನಗನಿಸ್ತಾ ಇರುತ್ತೆ. ಬಟ್ ಇನ್ನೊಂದು ಅರ್ಥದಲ್ಲಿ, ಈಗ ಕಾರಂತರ ಕಾದಂಬರಿಯಲ್ಲಿ, ಒಂದು ಬದುಕನ್ನೇ ಅದು ಕಟ್ಟಿಕೊಡುತ್ತೆ ಅಂತಾದ್ರೆ, I live that life; but whereas it may not be possible here. so, at the same time it is giving some kind of effect which can be taken as a full experience. But at the same time in the format or in the form it’s not representing a novel. That is the conflict.
(ಈ ಲೇಖನದ ಆಯ್ದ ಭಾಗ ವಿಜಯವಾಣಿ ಸಾಪ್ತಾಹಿಕದ ಜೂಲೈ 6 ಮತ್ತು 13ನೆಯ ದಿನಾಂಕದ ಸಂಚಿಕೆಯಲ್ಲಿ ಪ್ರಕಟವಾಗಿದೆ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ