Tuesday, September 2, 2014

ಕನ್ನಡ ಕಾದಂಬರಿಯ ಸ್ವರೂಪ ಬದಲಾವಣೆಯ ಹೊರಳುದಾರಿಯಲ್ಲಿದೆಯೆ? (ಭಾಗ – 1)

ಟೆಡ್ ಜೋಯಿ ಎಂಬ ಪ್ರಸಿದ್ಧ ಸಂಗೀತ ಶಾಸ್ತ್ರಜ್ಞ ಕಳೆದ ವರ್ಷ ಜೂಲೈ ತಿಂಗಳಲ್ಲಿ ಒಂದು ಪ್ರಬಂಧ ಪ್ರಕಟಿಸಿದ. ದ ರೈಸ್ ಆಫ್ ಫ್ರಾಗ್ಮಂಟೆಡ್ ನಾವೆಲ್ಸ್ ಎಂಬುದು ಅದರ ಹೆಸರು. ಒಟ್ಟು 26 ಫ್ರಾಗ್ಮಂಟೆಡ್ ತುಣುಕುಗಳಲ್ಲಿ ಈತ ಮಂಡಿಸಿದ ಪ್ರಬಂಧದ ಮೊದಲ ತುಣುಕು ಪ್ರಧಾನಧಾರೆಯ ಸೃಜನಶೀಲ ಸಾಹಿತ್ಯ ತುಣುಕು ತುಣುಕುಗಳಾಗಿ ಉದುರುತ್ತಿದೆ ಎಂದಷ್ಟೇ ಹೇಳುತ್ತದೆ. ಎರಡನೆಯ ತುಣುಕು ಇದೇನೂ ಕೆಟ್ಟದ್ದಾಗಿರಲಾರದು ಎಂದು ಹೇಳುತ್ತದೆ. ಕನ್ನಡ ಸಾಹಿತ್ಯದ ಕಾದಂಬರಿ ಪ್ರಕಾರದಲ್ಲಿ ಕಂಡು ಬರುವ ಕೆಲವು ಲಕ್ಷಣಗಳನ್ನು ಇಲ್ಲಿ ಪಟ್ಟಿ ಮಾಡುವ ಮುನ್ನ ಮತ್ತೊಮ್ಮೆ ಹೇಳಬೇಕಾದ ಮಾತೆಂದರೆ, ಇದರಿಂದ ಸಾಹಿತ್ಯ ಎಕ್ಕುಟ್ಟಿ ಹೋಯಿತು ಎಂದೇನೂ ಹೇಳುತ್ತಿಲ್ಲ ಎನ್ನುವುದನ್ನು ಮನಸ್ಸಿನಲ್ಲಿಡಿ ಎಂಬುದು. ಇದರ ಸಾಧಕ ಬಾಧಕಗಳನ್ನು ಲೇಖನದ ವ್ಯಾಪ್ತಿಯಿಂದ ಹೊರಗಿಟ್ಟು ಮಾಡಿದ ಅವಲೋಕನ ಇದು.
ಟೆಡ್ ಸುಮಾರು ಐವತ್ತಕ್ಕೂ ಹೆಚ್ಚಿನ ಕಾದಂಬರಿಗಳ ಒಂದು ಪಟ್ಟಿಯನ್ನೂ ತನ್ನ ಪ್ರಬಂಧದ ಬಲಕ್ಕೆ ಕಾಣಿಸಿದ್ದಾನೆ. ಆ ಕಾದಂಬರಿಗಳ ವಿವರವಾದ ಪರಾಮರ್ಶನಕ್ಕೆ ಅಲ್ಲಿಯೇ ಕೊಂಡಿ ಒದಗಿಸಲಾಗಿದೆ. ಹಾಗಾಗಿ ಲೇಖನ 26 ಪುಟ್ಟ ತುಣುಕುಗಳಲ್ಲಿ ಮುಗಿಯುತ್ತದೆ. ನಾನು ಇಲ್ಲಿ ಕೆಲವು ಆಯ್ದ ಲೇಖಕರು ಮತ್ತು ಆಯ್ದ ಕಾದಂಬರಿಗಳನ್ನು ಮಾತ್ರ ನನ್ನ ಪ್ರಮೇಯಕ್ಕೆ ಬಳಸಿಕೊಂಡಿದ್ದೇನೆ. ನಿಜ, ನಮ್ಮ ಬಳಿ ಒಂದು ಸಿದ್ಧ ಸೂತ್ರವಿದೆ, ಅದಕ್ಕೆ ಒಗ್ಗುವಂತೆ ಈ ಲೇಖನ ಸಿದ್ಧ ಪಡಿಸಿದ್ದೇವೆ ಎನ್ನುವ ಆರೋಪ ಈಗ ಸಾಧ್ಯ. ಆದರೆ, ಈ ಆಯ್ದ ಲೇಖಕರನ್ನು ನಾನು ಈ ಸಿದ್ಧ ಸೂತ್ರಕ್ಕಾಗಿಯೇ ಸಂದರ್ಶಿಸಿಲ್ಲ ಅಥವಾ ಅವರ ಕೃತಿಗಳ ಬಗ್ಗೆ ಬರೆದಿದ್ದಿಲ್ಲ. ಈ ಸಂದರ್ಶನಗಳು ಕಳೆದ ಐದಾರು ವರ್ಷಗಳಲ್ಲಿ, ಬೇರೆ ಬೇರೆಯವರ ಉತಾವಳಿಯಿಂದ, ಇಂಥ ಪೂರ್ವ ಉದ್ದೇಶವಿಲ್ಲದೇ ನಡೆದವು. ಇಲ್ಲಿ ನಾನು ಚರ್ಚಿಸುತ್ತಿರುವ ಕಾದಂಬರಿಗಳ ವಿವರವಾದ ಪರಾಮರ್ಶನ ಕೂಡ ಐದಾರು ವರ್ಷಗಳ ಅವಧಿಯಲ್ಲಿ ಇಂಥ ಅಜೆಂಡಾ ಇಟ್ಟುಕೊಳ್ಳದೇ ಸಾಗಿದ್ದು. ಹಾಗಾಗಿಯೇ ಇಲ್ಲಿ ಉಲ್ಲೇಖಿಸ ಬೇಕಿದ್ದ ಹಲವು ಲೇಖಕರು, ಹಲವು ಪ್ರಮುಖ ಕಾದಂಬರಿಗಳು ತಪ್ಪಿ ಹೋಗಿವೆ. ಒಂದು ಚರ್ಚೆಯನ್ನು ಇಂಥ ಮಿತಿಗಳು, ಎಡವಟ್ಟುಗಳು ತುಂಬಿಕೊಡುವುದರಿಂದ ಅದೇನೂ ಕೆಟ್ಟದ್ದಾಗಿರಲಾರದು!

ಟೆಡ್ ಹೇಳುವ ಪ್ರಕಾರ, ಇವತ್ತು ಕಾದಂಬರಿಗಳಲ್ಲಿ ಹಲವು ಬಗೆಯ, ವೈವಿಧ್ಯಮಯವಾದ, ಪರಸ್ಪರ ವೈರುಧ್ಯವನ್ನು, ಸಂಘರ್ಷವನ್ನು ಸಾಧ್ಯವಾಗಿಸುವ ಧ್ವನಿಗಳು ಕೇಳಿಸುತ್ತಿಲ್ಲ. ವಸ್ತುವೇ ತಂತ್ರ ಮತ್ತು ಸ್ವರೂಪದ ಇತಿಮಿತಿಗಳನ್ನು ನಿರ್ಧರಿಸುವಷ್ಟು ಗಟ್ಟಿಯಾಗಿದ್ದ ಸಂದರ್ಭದಲ್ಲಿ ಅಪಸ್ವರಕ್ಕೆ ಆಸ್ಪದವಿರುವುದಿಲ್ಲ ಎನ್ನುವುದು ನಿಜವಾದರೂ ಅಂಥ ಸಂದರ್ಭದಲ್ಲಿ ಅದು ಒಂದು ಪೂರ್ವನಿರ್ಧಾರಿತ (ಸಿದ್ಧ ಮಾದರಿಯ) ಸ್ವರೂಪದ ಚೌಕಟ್ಟಿಗೆ ಸಿಗುವುದೇ ಇಲ್ಲ. ಉದಾಹರಣೆಗೆ ಕಂಬಾರರ ಶಿಖರಸೂರ್ಯ, ಗೋಪಾಲಕೃಷ್ಣ ಪೈಯವರ ಸ್ವಪ್ನಸಾರಸ್ವತ, ವಿ.ತಿ.ಶೀಗೆಹಳ್ಳಿಯವರ ತಲೆಗಳಿ ಕಾದಂಬರಿಗಳನ್ನು ಗಮನಿಸಿ. ಪ್ರಜ್ಞಾಪೂರ್ವಕ ತಂತ್ರದ ಬಳಕೆಯನ್ನು ಖಡಾಖಂಡಿತವಾಗಿ ನಿರಾಕರಿಸಿದ ಕಾರಂತರ ಕಾದಂಬರಿಗಳೂ ಇಲ್ಲಿ ಉಲ್ಲೇಖನೀಯ. ಹಾಗೆಯೇ, ಕಥಾನಕದ ಸನ್ನಿವೇಶ (ವಾತಾವರಣ)ನಿರ್ಮಾಣ, ಸಂಭಾಷಣೆ, ಲಯದ ನಿರ್ವಹಣೆ ಮತ್ತು ಇತರ ಬೋಲ್ಟು ನಟ್ಟುಗಳನ್ನು ಅಕೆಡೆಮಿಕ್ ವಿಮರ್ಶಕರು ಕೂಡಾ ಇತ್ತೀಚಿನ ದಶಕಗಳಲ್ಲಿ ಅವಗಣಿಸುತ್ತಿದ್ದಾರೆ. ಕ್ರಿಯೇಟಿವ್ ರೈಟಿಂಗ್ ಪ್ರೊಗ್ರಾಮುಗಳಲ್ಲಿ ‘ಸೂಪರ್ ಮಾರ್ಕೆಟ್ ನಾವೆಲ್’ಗಳು ಬುಕ್ ಸ್ಟಾಲುಗಳಲ್ಲಿ ಬಿಸಿಬಿಸಿಯಾಗಿ ಬಿಕರಿಯಾಗುವಂತೆ ಅವುಗಳನ್ನು ಹೇಗೆ ಉತ್ಪಾದಿಸಬೇಕು ಎನ್ನುವುದನ್ನು ಕಲಿಸಲಾಗುತ್ತಿದೆ.

ಟೆಡ್ ಹೀಗೆಲ್ಲ ಹೇಳುವ ಮುನ್ನ ಅಲ್ಲೊಂದು ಇಲ್ಲೊಂದು ಸ್ಯಾಂಪಲ್ಲುಗಳಂತೆ ಬಂದ ಪ್ರಯೋಗಶೀಲ ಕೃತಿಗಳ ವಿಳಂಬಿತ ಪ್ರಭಾವ ಸದ್ಯದ ಕಾದಂಬರಿಗಳ ಮೇಲಾಗಿರಬಹುದು ಎನ್ನುವುದನ್ನು ಅಲ್ಲಗಳೆಯುವುದಿಲ್ಲ. ನೀವು ಅಧ್ಯಾಯಗಳನ್ನು ಅವುಗಳ ಕ್ರಮಬದ್ಧತೆಯನ್ನು ತಪ್ಪಿಸಿ ಓದಬಹುದಾದ ಕಾದಂಬರಿಗಳು, 73ನೆಯ ಪುಟದ ನಂತರ 131ನೇ ಪುಟ ಓದಬಹುದಾದ ಕಾದಂಬರಿಗಳು ಹೀಗೆ. ಸರಿಯೋ ತಪ್ಪೋ ಹದಿನೆಂಟು ವಿಭಿನ್ನ ನೆಲೆಯಲ್ಲಿ ಓದಬಹುದಾದ ಕಾದಂಬರಿ ಎಂಬುದಾಗಿ ಜೇಮ್ಸ್ ಜಾಯ್ಸ್‌ನ ಕಾದಂಬರಿ ಯೂಲಿಸಿಸ್‌ನ್ನು ಗುರುತಿಸಿದ ಇಪ್ಪತ್ತನೇ ಶತಮಾನದ ಸಾಹಿತ್ಯ ಕ್ಷೇತ್ರ, ಅವನಿಂದ ಬಹಳಷ್ಟನ್ನು ಪಡೆದುಕೊಂಡಿರುವಂತೆಯೇ ಅವನು ಫಾಕ್ನರ್, ಪ್ರೌಸ್ಟ್, ವೂಲ್ಫ್ ಮುಂತಾದವರಂತೆಯೇ ಪ್ರಜ್ಞಾಪ್ರವಾಹ ತಂತ್ರಕ್ಕೆ ಲಯ ಒದಗಿಸಿದ ಎನ್ನುವುದನ್ನು ಒಪ್ಪುತ್ತಾನೆ.

ಡಿಜಿಟಲ್ ಯುಗಮಾನದ ಓದು ಕೂಡ (ಆನ್‌ಲೈನ್ ಓದು) ಫ್ರಾಗ್ಮಂಟೆಡ್ ಆದಂಥ ವಿಶಿಷ್ಟ ಬಗೆಯ ಓದು ಎಂದು ಟೆಡ್ ಗುರುತಿಸುತ್ತಾನೆ. ಕಾದಂಬರಿಕಾರರು ಒಂದು ಬಗೆಯ ಸಣ್ಣಕತೆ ಮತ್ತು ಪಾರಂಪರಿಕ ಕಾದಂಬರಿ ಎರಡರ ನಡುವಿನ ಹೈಬ್ರಿಡ್ ಸ್ವರೂಪವೊಂದಕ್ಕೆ ತಿಣುಕುತ್ತಿರಬಹುದೇ ಎಂಬ ಅನುಮಾನವನ್ನೂ ಟೆಡ್ ಇಲ್ಲಿ ಕೋಟ್ ಮಾಡುತ್ತಾನೆ. ಕನ್ನಡದ ಸಂದರ್ಭದಲ್ಲಿ ಇವತ್ತು ಬರುತ್ತಿರುವ ಕಾದಂಬರಿಗಳನ್ನು ಕಂಡರೆ ಈ ಮಾತು ಹೆಚ್ಚು ನಿಜವೆನಿಸುತ್ತದೆ. ಹಿರಿಯ ಮತ್ತು ಅನುಭವೀ ಕಾದಂಬರಿಕಾರರೂ, ಭರವಸೆಯ ಕಾದಂಬರಿಕಾರರೂ, ಹೊಸದಾಗಿ ಬರೆಯುತ್ತಿರುವವರೂ ಈ ವಿಷಯದಲ್ಲಿ ಕಾಲಕ್ಕೆ ಹೊಂದಿಕೊಂಡಿರುವಂತೆಯೂ ಕಾಣಿಸುವುದರಿಂದ ಇದು ಕಾಲಧರ್ಮವಿರಬಹುದು ಎಂದೂ ಎನಿಸುತ್ತದೆ.

ಆಧುನಿಕ ಮನುಷ್ಯನೇ ಫ್ರಾಗ್ಮೆಂಟೆಡ್ ಆದ ವ್ಯಕ್ತಿತ್ವವನ್ನು ಹೊಂದಿದ್ದಾನೆ, ಹಾಗಿರುತ್ತ ಅವನ ಸೃಷ್ಟಿ ಹಾಗಿರುವುದು ಸಹಜವಲ್ಲವೆ ಎಂಬ ನೆಲೆಯಲ್ಲಿ ಸಮಕಾಲೀನ ಸಾಹಿತ್ಯವನ್ನು ಗುರುತಿಸಿದವರೂ ಇದ್ದಾರೆ. ಭಾರತೀಯ ಇಂಗ್ಲೀಷ್ ಸಾಹಿತಿ ಅಂಜುಂ ಹಸನ್ ತಮ್ಮ ಕೆರವಾನ್ ಪತ್ರಿಕೆಯಲ್ಲಿ (ನವೆಂಬರ್ 2011) ಹರಿಕುಂಜ್ರು ಅವರ ಹೊಸ ಕಾದಂಬರಿಯ ಬಗ್ಗೆ ಬರೆಯುತ್ತ ಇಂಥ ನಿಲುವು ವ್ಯಕ್ತಪಡಿಸಿದ್ದರು. ಮುಂದೆ ಪ್ರಜಾವಾಣಿಗಾಗಿ ಅವರನ್ನು ಸಂದರ್ಶಿಸಿದಾಗ ಈ ಬಗ್ಗೆ ಅವರನ್ನು ಕೇಳಿದ್ದೆ. ಅವರ ಉತ್ತರ ಇಲ್ಲಿದೆ:

ಪ್ರಶ್ನೆ: ಆಧುನಿಕ ಮನುಷ್ಯ ಛಿದ್ರಗೊಂಡ ಸ್ಥಿತಿಯಲ್ಲಿದ್ದಾನೆ ಮತ್ತು ಸಾಹಿತ್ಯ ಅವನನ್ನು ಮತ್ತೆ ಇಡಿಯಾಗಿ ಗ್ರಹಿಸಲು ಸಹಾಯ ಮಾಡಬಹುದೆ ಎನ್ನುವ ಪ್ರಶ್ನೆಯನ್ನು ನೀವೊಮ್ಮೆ ಎತ್ತಿದ್ದಿರಿ. ಸ್ವಲ್ಪ ವಿವರಿಸುತ್ತೀರಾ?

“ದಾಸ್ತಾವಸ್ಕಿಯ Crime and Punishment ನಿಂದ ತೊಡಗಿ ವಿಘಟನೆ ಅನ್ನೋದು ಆಧುನಿಕ ಸಾಹಿತ್ಯದ ಕೇಂದ್ರಪ್ರಜ್ಞೆಯಾಗಿಯೇ ಇದೆ. ಅಮಿತಾವ ಘೋಷ್ ತಮ್ಮ The March of the Novel Through History -The Testimony of My Grandfather's Bookcase" ಪ್ರಬಂಧದಲ್ಲಿ ಬಹಳ ಚೆನ್ನಾಗಿ ವಿವರಿಸಿರೋ ಹಾಗೆ ಕಾದಂಬರಿಯ ಚರಿತ್ರೆಯೇ ವಿಘಟನೆಯಿಂದ ಸುರುವಾಗುತ್ತದೆ. ವ್ಯಕ್ತಿತ್ವದ ಬಿರುಕುಗಳೇ ಎಲ್ಲಾ ಶ್ರೇಷ್ಠ ಆಧುನಿಕ ಕಾದಂಬರಿಗಳ ಕೇಂದ್ರವಾಗಿದೆ. ಅಂತಿಮವಾಗಿ ಕಾದಂಬರಿಯೊಂದರ ಜಗತ್ತನ್ನ ಅವನ ಅಥವಾ ಅವಳ ಅನುಭವ ಮತ್ತು ಗ್ರಹಿಕೆಗಳೇ ರೂಪಿಸುತ್ತವೆ.

“ಕಳೆದ ಎರಡು ಅಥವಾ ಮೂರು ದಶಕಗಳ ಈಚೆಗೆ ಆಂಗ್ಲೋ ಅಮೆರಿಕನ್ ಸಾಹಿತ್ಯದಲ್ಲಿ ಏನಾಗಿದೆ ಅಂದರೆ ವ್ಯಕ್ತಿ ಒಂದು ಘಟಕವಾಗಿ ಇಡೀ ಕಾದಂಬರಿಯನ್ನ ಹಿಡಿದಿಟ್ಟುಕೊಳ್ಳೋದಕ್ಕೆ ಸಾಕಾಗಲ್ಲ ಅನ್ನೋ ನಿಲುವು ಇದೆ. ಈ ಬಗೆಯ ಸಾಹಿತ್ಯದ ಪ್ರಭಾವ ಹರಿ ಕುಂಜ್ರು ಮೇಲೆ ಇದ್ದಿರಬಹುದು ಅಂತ ಅವರ ಪುಸ್ತಕದ ರಿವ್ಯೂ ಮಾಡ್ತಾ ನಾನು Caravan ನಲ್ಲಿ (ನವೆಂಬರ್ 2011ರ ಸಂಚಿಕೆ) ಬರೆದಿದ್ದೆ. ಅಂಥ ಬರಹಗಾರರಿಗೆ ಸಮಕಾಲೀನ ಜಗತ್ತಿನ ರಾಜಕೀಯ, ಜನಪ್ರಿಯ ಸಂಸ್ಕೃತಿ, ಡಿಜಿಟಲ್ ತಂತ್ರಜ್ಞಾನ, ವಿಜ್ಞಾನ, ಇತಿಹಾಸ, ಭೂಗೋಳ ಹೀಗೆ ಎಲ್ಲವನ್ನೂ ತಮ್ಮ ಕಾದಂಬರಿಯಲ್ಲಿ ಸಾಕಷ್ಟು ತುರುಕುವ ಅನಿವಾರ್ಯತೆ ಇರುತ್ತದೆ. ಇದು ಮನುಷ್ಯನ ಬದುಕು, ಜೀವನ ಮತ್ತು ಸ್ಥಿತಿಯ ಪ್ರತಿಬಿಂಬ ಅನ್ನುವುದಕ್ಕಿಂತ ಕಾದಂಬರಿ ಎಂದರೆ ಒಂದು ವಿಧವಾದ ಡಾಕ್ಯುಮೆಂಟರಿ ಸಾಹಿತ್ಯ ಅಂದುಕೊಂಡ ಹಾಗಿರುತ್ತದೆ.”

ಆದರೆ ಕನ್ನಡ ಸಾಹಿತ್ಯದಲ್ಲಿ ಬಹುಷಃ ಮೊತ್ತ ಮೊದಲಬಾರಿಗೆ ನಾವು ಪ್ರಾಂಗ್ಮೆಂಟೆಡ್ ಮನುಷ್ಯನನ್ನು ಭೇಟಿಯಾಗಿದ್ದು ಗಿರಿ ಅವರ ಗತಿಸ್ಥಿತಿ (1971)ಯಲ್ಲಲ್ಲವೆ? ಆಗ ಅದು ಪ್ರಯೋಗವಾಗಿತ್ತು. ಆದರೆ ಇವತ್ತೂ ನಾವು ಈ ಗತಿಸ್ಥಿತಿಯ ನಾಯಕನನ್ನು ಬೇರೆ ಬೇರೆ ಕಾದಂಬರಿಗಳಲ್ಲಿ ಭೇಟಿಯಾಗುತ್ತಲೇ ಇದ್ದೇವೆ ಅನಿಸುವುದಿಲ್ಲವೆ? ಬಹುಷಃ ಮೊತ್ತ ಮೊದಲ ಬಾರಿಗೆ ಕುಟುಂಬ, ಸಮಾಜ ಎಂಬ ವಿಸ್ತೃತ ಕ್ಯಾನ್ವಾಸನ್ನು ಬಿಟ್ಟುಕೊಟ್ಟು ವ್ಯಕ್ತಿಕೇಂದ್ರಿತ ನೆಲೆಯಲ್ಲಿ ಬಂದ ಕನ್ನಡ ಕಾದಂಬರಿ ಕೂಡ ಇದಿರಬಹುದು.

ಗಿರಿಯವರ ಗತಿ-ಸ್ಥಿತಿ ಕಾದಂಬರಿ, ತೇಜಸ್ವಿಯವರ ಸ್ವರೂಪ(1966), ಲಂಕೇಶರ ಬಿರುಕು(1967), ಮತ್ತು ಚಿತ್ತಾಲರ ಶಿಕಾರಿ(1979) - ಸ್ಥೂಲವಾಗಿ ಒಂದೇ ಬಗೆಯಲ್ಲಿ ಮನುಷ್ಯನ ಬದುಕಿನ ಕ್ಷುದ್ರತೆಯನ್ನು ಶೋಧಿಸುತ್ತ ಹೋಗುವ ಕಾದಂಬರಿಗಳು. ಯು ಆರ್ ಅನಂತಮೂರ್ತಿಯವರ ಅವಸ್ಥೆ (1978) ಕಾದಂಬರಿಯಲ್ಲಿ ಈ ಕ್ಷುದ್ರತೆಯೇ ಚರ್ಚೆಯ ವಿಷಯವಾಗಿದ್ದೂ ಇದೆ. ಒಂದು ಬಗೆಯಲ್ಲಿ ಇನ್ನೇನು ಇದು ವಿಕ್ಷಿಪ್ತತೆಗೆ ಹೊರಳುತ್ತದೆ ಎನ್ನುವ ಮಟ್ಟದ ಒಂಟಿತನದ ಹಲಬುವಿಕೆ ಇಲ್ಲಿದೆ. ಇಲ್ಲ ಇದೇ ವಿಕ್ಷಿಪ್ತ ಮನಸ್ಥಿತಿ ಎಂದು ಕೆಲವು ಕಡೆ ಅನಿಸಿದರೂ ಅಚ್ಚರಿಯಿಲ್ಲ. ಲಂಕೇಶ್ ಅಕ್ಕ ಬರೆಯುವ ಹೊತ್ತಿಗೆ ಬದುಕಿನ ಕ್ಷುದ್ರತೆಯ ಕಡೆಗೆ ನೋಡುವ ಅವರ ದೃಷ್ಟಿಕೋನದಲ್ಲಿ ಬಹಳಷ್ಟು ಬದಲಾವಣೆಗಳಾಗಿರುವುದು ಗೋಚರಿಸುತ್ತದೆ. ತೇಜಸ್ವಿಯವರಂತೂ ನವ್ಯದ ಬಗ್ಗೆ ತಿರಸ್ಕಾರ ಬಂದು ಬರವಣಿಗೆಯ ಬೇರೆಯೇ ಮಜಲಿಗೆ ನಡೆದವರು. ಚಿತ್ತಾಲರು ಶಿಕಾರಿ ಬರೆಯುವುವಾಗಲೇ ಬೇರೆಯೇ ಹದ ಕಂಡುಕೊಂಡಿದ್ದರು ಅನಿಸುತ್ತದೆ.

ಗತಿ,ಸ್ಥಿತಿ ಬದುಕಿನ ಬೇಸರ (boredom) ಮತ್ತು ಅಸಹ್ಯತೆ (nausea)ಗಳ ಆಭಿವ್ಯಕ್ತಿ ಎನ್ನುತ್ತಾರೆ ಜಿ.ಎಸ್.ಅಮೂರ.

"ಆತನ ಸ್ಥಾಯಿಭಾವ ಅನಾಸಕ್ತಿ, ಬೇಸರ. ಈ ಬೇಸರ ಅವನ ಮೂಲಪ್ರವೃತ್ತಿಯೋ ಅಥವಾ ಅಸಂಗತ ಬದುಕಿಗೆ ಪ್ರತಿಕ್ರಿಯೆಯೋ ಖಚಿತವಾಗಿ ಹೇಳುವುದಕ್ಕಾಗುವುದಿಲ್ಲ. ಈ ಬಗ್ಗೆ ಆತನಲ್ಲಿಯೇ ಸಂಶಯಗಳಿವೆ. ಗೆಳೆಯ ಮೂರ್ತಿಯೊಂದಿಗೆ ಆತ ನಡೆಸುವ ಸಂಭಾಷಣೆಯೊಂದು ಹೀಗಿದೆ:
"ಏನನ್ನು ನೆನೆಸಿಕೊಂಡರೂ ಮನಸ್ಸಿಗೆ ನಿರುತ್ಸಾಹವೇ. ಮಾಡಬಹುದಾದ್ದೆಲ್ಲ ಚಿಲ್ಲರೆಯಾಗಿ, ಮಾಡಲಾಗದ್ದು ಅಗಾಧವಾಗಿ ಕಾಣುತ್ತದೆ. ಯಾವುದೊಂದು ಕೆಲಸವೂ ಆಸಕ್ತಿ ಹುಟ್ಟಿಸಿ ನನ್ನನ್ನು ಎಳೆದುಕೊಳ್ಳಲ್ಲ" ಎಂದ."ಸಿಂಪಲ್ ಆಗಿ ಹೇಳೋದಾದರೆ ನಿನಗೆ ಬೋರ್ ಆಗಿದೆ. ಸುಮಾರಾದ್ದೊಂದು ಕೆಲಸ ಸಿಕ್ಕಿ ಕೈಗೆ ರೆಗ್ಯೂಲರ್ ಆಗಿ ಒಂದಿಷ್ಟು ಹಣ ಬೀಳ್ತಾಹೋಗಲಿ, ನಿನ್ನ ಬಹಳಷ್ಟು ಬೇಜಾರು ಕಡಿಮೆಯಾದೀತು" ಎಂದ ಮೂರ್ತಿ."ಇದ್ದರೂ ಇರಬಹುದು ನೋಡು. ಕೆಲವು ಸಾರಿ ನಾವು ಬಹಳ philosophical ಅಂತ ನಮ್ಮನ್ನೇ ನಾವು ನಂಬಿಸಿಕೊಳ್ಳಲು ಪ್ರಯತ್ನಿಸುವ ಸಮಸ್ಯೆಯ ಮೂಲ ಸುಮ್ಮನೇ ಖಾಲಿ ಜೇಬಾಗಿರುತ್ತೆ" ಎಂದು ನಕ್ಕ.
ಆತನ ಅನಾಸಕ್ತಿಯ ತಾತ್ವಿಕ ಸ್ವರೂಪ ಏನೇ ಆಗಿರಲಿ, ಅದು ಅವನ ಸ್ಥಾಯೀ ಭಾವವೆನ್ನುವಷ್ಟರ ಮಟ್ಟಿಗೆ ಗಟ್ಟಿಯಾಗಿದೆ" (ಕನ್ನಡ ಕಥನ ಸಾಹಿತ್ಯ:ಕಾದಂಬರಿ - ಜಿ ಎಸ್ ಅಮೂರ)

ಗತಿಸ್ಥಿತಿಯ ಜೊತೆಗೇ ಇಟ್ಟು ನೋಡಲು ಸಮೃದ್ಧವಾದ ವಸ್ತು ಶಂಕರ ಮೊಕಾಶಿ ಪುಣೇಕರರ ‘ನಟ ನಾರಾಯಣಿ’ (1988)ಕಾದಂಬರಿಯಲ್ಲಿದೆ. ವ್ಯಕ್ತಿ ವಿಶಿಷ್ಟ ಪ್ರಜ್ಞೆಯನ್ನೇ ಇಲ್ಲಿಯೂ ದುಡಿಸಿಕೊಳ್ಳಲಾಗಿರುವುದು. ಆದರೆ ಅದಕ್ಕೆ ಸಾಮಾಜಿಕ, ರಾಜಕೀಯ, ಆರ್ಥಿಕ, ನೈತಿಕ ಆಯಾಮಗಳನ್ನು ಬಿಟ್ಟುಕೊಡಬೇಕಿಲ್ಲ ಎಂದು ಸಾಧಿಸಲು ಹೊರಟಂತೆ ಮತ್ತು ಸಿದ್ಧ ಮಾದರಿಯಿಂದ ಹೊರಗಿರುವ ಹಠವನ್ನೂ ಬಿಟ್ಟುಕೊಡದಂತೆ ಬರೆದ ಕಾದಂಬರಿಯಿದು. ಬಹುಷಃ ಮೊಟ್ಟಮೊದಲ ಬಾರಿಗೆ ಸಲಿಂಗರತಿಯನ್ನೂ ಒಂದು ರೂಪಕದಂತೆ ಬಳಸಿಕೊಂಡ ಮತ್ತು ಅದನ್ನೇ ಸೂಚಿಸುವಂಥ ಹೆಸರನ್ನು ಕಾದಂಬರಿಗೆ ಕೊಟ್ಟುಕೊಂಡು ಬಂದ ಕಾದಂಬರಿ ಕೂಡ ಇದೇ. ಬಹುಷಃ ಫ್ರಾಂಗ್ಮೆಂಟೆಡ್ ಮನುಷ್ಯನನ್ನೇ ಚಿತ್ರಿಸುವಾಗಲೂ ಅಂಥ ಕಾದಂಬರಿ ಮನೋಲೋಕವನ್ನೇ ನೆಚ್ಚಿಕೊಳ್ಳಬೇಕಾದುದಿಲ್ಲ ಎನ್ನುವುದನ್ನೂ ಪುಣೇಕರರಿಗೆ ಸಾಧಿಸುವುದಿತ್ತೇನೊ ಎನಿಸುತ್ತದೆ.

ನಾಣನ ಅರ್ಧನಾರೀ ಪಾತ್ರಗಳು, ನಾಣನಾಗಿ, ನಟನಾರಾಯಣಿಯಾಗಿ ಮತ್ತು ಚಮೇಲಿಯಾಗಿ ಅವು ನೀಡುವ ಒಳನೋಟಗಳು; ಬ್ರಹನ್ನಳೆ-ದ್ವಾರಕಾಧೀಶರ ರೂಪಕ; ವ್ಯಕ್ತಿತ್ವದ ಸೀಳು ಮತ್ತು ಮನಸ್ಸಿನಲ್ಲಿ ಹುಟ್ಟುವ ಅಧಃಪತನದ ಭಯ, ಪಾಪಭೀತಿ, ಆತ್ಮನಿರೀಕ್ಷಣೆಯ ತಲ್ಲಣ ಇವುಗಳಿಗೆ ಭಕ್ತಿಜನ್ಯ ಶರಣಾಗತಿಯಲ್ಲದೆ ಅನ್ಯ ಚಿಕಿತ್ಸೆಯಿಲ್ಲ ಎಂಬ ತತ್ವದ ಸೂಕ್ಷ್ಮ ಚಿತ್ರಣ ಕಾದಂಬರಿಯ ಹೈಲೈಟ್.

2003ರ ನವೆಂಬರ್‌ನಲ್ಲಿ ಹರೀಶ್ ಕೇರ ಅವರು ಉದಯವಾಣಿ ಸಾಪ್ತಾಹಿಕದಲ್ಲಿ ಬರೆಯುವ ಮತ್ತು ಬರೆಯದಿರುವ ಕಷ್ಟ ಎಂಬ ಹೆಸರಿನಲ್ಲಿ ಒಂದು ಸಂವಾದ ಆರಂಭಿಸಿದರು. ಈ ಲೇಖನ ಬಹು ಮುಖ್ಯವಾದ ಹತ್ತು ಹಲವು ಪ್ರಶ್ನೆಗಳನ್ನು ಎತ್ತಿತ್ತು.

"ಮರೀಚಿಕೆಯಾದ ಕೆಲವೇ ಏಕಾಂತದ ಘಳಿಗೆಗಳು ದೊರಕಿದಾಗ ಅವುಗಳನ್ನು ಕ್ಷಿಪ್ರ, ಸರಳ ಮತ್ತು ಅಷ್ಟೇನೂ ಆತ್ಮವಿಲ್ಲದ ಬರಹಗಳು ನುಂಗುತ್ತವೆ............ಅಂದರೆ ಅರ್ಥ ಇಷ್ಟೆ. ಇದು ಚೆದುರಿ ಹೋದ ಕಥನಗಳ ಯುಗ. ಇಲ್ಲಿ ಇಡಿ ಇಡೀ ಘನೀಕೃತವಾದ ಕಾದಂಬರಿ, ಒಂದು ಜೀವನ ದರ್ಶನವನ್ನು ಒಂದು ಬೀಸಿನಲ್ಲಿ ಕೊಡಬಹುದಾದ ಕೃತಿಗಳು - ಅಂದರೆ ಮರಳಿ ಮಣ್ಣಿಗೆ, ಮಲೆಗಳಲ್ಲಿ ಮದುಮಗಳು, ಗ್ರಾಮಾಯಣದಂಥ ಕೃತಿಗಳು ವರ್ತಮಾನ ಕಾಲದಲ್ಲಿಲ್ಲ."

ನಾನೂ ‘ಸೋ ವಾಟ್!’ ಎಂದು ಪ್ರತಿಕ್ರಿಯಿಸಿದ್ದ ಈ ಲೇಖನಕ್ಕೆ ಈಗ ಏನಿಲ್ಲವೆಂದರೂ ಹತ್ತು ವರ್ಷಗಳು ಸಂದಿವೆ. ಅಂಡ್ರಾಯ್ಡ್ ಸೆಲ್ ಫೋನುಗಳು, ಟ್ಯಾಬ್ಲೆಟ್ಟುಗಳು, ಲ್ಯಾಪ್‌ಟಾಪುಗಳು, ಇಂಟರ್ನೆಟ್, ಫೇಸ್‌ಬುಕ್, ಟ್ವಿಟರ್, ವಾಟ್ಸಪ್ ಇತ್ಯಾದಿ ಯುವ ಜನತೆಯ ಸಮಯವನ್ನು ನುಂಗಿ ನೀರು ಕುಡಿಯುತ್ತಿವೆ. ಲೈಕ್, ಶೇರ್, ಪೋಸ್ಟ್ ಎಂದು ಸಿಂಗಲ್ ಕ್ಲಿಕ್ ವಿಮರ್ಶೆ, ಸಿಂಗಲ್ ಸ್ಕ್ರೀನ್ ಗ್ರಹಿಕೆ ಸಾಧ್ಯವಾಗುವಂತಿದ್ದರೆ ಮಾತ್ರಾ ಗಮನ ಕೊಟ್ಟೇವು ಎನ್ನುತ್ತದೆ ‘ಸದಾ ಬ್ಯುಸೀ ಇರ್ತಾರೆ’ ಯುವಜನತೆ. ಸಂಕೀರ್ಣವಾದದ್ದನ್ನ, ಹಲವು ಮಗ್ಗುಲುಗಳ, ಆಯಾಮಗಳ ವಿಶ್ಲೇಷಣೆ ಅಗತ್ಯವಾಗುವಂಥ ವಿಷಯದ ಬಗ್ಗೆ ಮಾತನಾಡುತ್ತೀರಿ ಎಂದರೆ ಅದನ್ನೆಲ್ಲ ಕೇಳುವವರಿಲ್ಲ. ಕೇಳುವವರಿಲ್ಲದಿದ್ದರೂ ಮಾತನಾಡುತ್ತೀರಿ ಎಂದರೆ ಏನರ್ಥ? ನಿಮಗೆ ವಯಸ್ಸಾಗಿದೆ ಅಂಕಲ್, ಸ್ವಲ್ಪ ಸುಮ್ನಿರಿ!

ನಮ್ಮ ಕಾದಂಬರೀ ಪ್ರಕಾರ ಈ ಕಾಲದ ತಾಳಕ್ಕೆ ತಕ್ಕ ಕೋಲ ಕಟ್ಟಲು ಆಗಲೇ ಸಜ್ಜಾಗಿತ್ತೆ? ನಿಮ್ಮ ಕಾದಂಬರಿಗೆ ಆಕೃತಿ ಇಲ್ಲ, ಕೇಂದ್ರ ಇಲ್ಲ, ಆಳ ಇಲ್ಲ, ವಿಸ್ತಾರ ಇಲ್ಲ, ಅದು ಕಾದಂಬರಿಯ ಫಾರ್ಮ್ ಬಿಟ್ಟುಕೊಟ್ಟಿದೆ, ಅದರಲ್ಲಿ ಏಕಸೂತ್ರದ ಕಥಾನಕವೇ ಇಲ್ಲವಲ್ಲ ಎಂದೆಲ್ಲ ‘ಇಲ್ಲ’ಗಳ ಪಟ್ಟಿ ಮಾಡುತ್ತ ಮುಗ್ಗರಿಸಿದ್ದು ಕೃತಿಯಾಗಿರದೆ ವಿಮರ್ಶೆಯೇ ಇರಬಹುದೆ! ಯೋಚಿಸಬೇಕಾದ ಪ್ರಶ್ನೆಯೇ.

ಕಾದಂಬರಿಗೇ ವಿಶಿಷ್ಟವಾದ ಒಂದು ಸ್ವರೂಪ ಎನ್ನುವುದು ನಿಜಕ್ಕೂ ಇದೆಯೇ ಅಥವಾ ಅದು ಕೇವಲ ಪರಾಮರ್ಶನ ಹಂತದ ವಿಭಾಗೀಕರಣದಿಂದಾಗಿಯೇ ಹುಟ್ಟಿಕೊಂಡ ಪರಿಕಲ್ಪನೆಯೇ? ಕಾದಂಬರಿಯ ಸ್ವರೂಪ ಅಥವಾ ಆ ಪ್ರಕಾರದ ಚೌಕಟ್ಟುಗಳನ್ನು ನಿರ್ಣಯಿಸುವ ಸಂಗತಿಗಳೇನು? ಕೇವಲ ಗಾತ್ರವೆ? ಗಾತ್ರ, ತಂತ್ರ, ವಸ್ತು, ನಿರೂಪಣೆ, ವ್ಯಾಪ್ತಿ ಮತ್ತು ಆಕೃತಿ ಎಲ್ಲವೂ ಒಂದು ರೀತಿ ಕ್ರಿಕೆಟ್ ಬೌಲಿಂಗ್‌ನ ಲೈನ್ ಎಂಡ್ ಲೆಂಗ್ತ್ ಇದ್ದಂತೆ ಒಂದನ್ನು ಬಿಟ್ಟು ಒಂದಿಲ್ಲ. ಎಲ್ಲವೂ ಸರಿಯಿದ್ದರೆ ಅದು ಕಾದಂಬರಿ ಎನಿಸಿಕೊಳ್ಳುತ್ತದೆ ಎನ್ನುವುದಾದರೆ, ಒಂದೋ ಎರಡೋ ಸಾಮಾನು ಹಾಕದೇ ಮಾಡಿದ ಅಡುಗೆ ಹೊಸರುಚಿ ಎನಿಸಿಕೊಳ್ಳಲಾರದೆ?

ಕಾದಂಬರಿ ಚಿತ್ರಿಸುತ್ತಿರುವ ಊರು/ಸಮಾಜ ಅಂದರೆ ದೇಶ, ಅದು ಚಿತ್ರಿಸುತ್ತಿರುವ - ಅದರ ನಿರೂಪಣೆಯ ತೆಕ್ಕೆಗೆ ಬಿದ್ದ ಕಾಲ, ಅದನ್ನು ನಿರೂಪಿಸುತ್ತಿರುವ ಕಾಲ, ಅದು ಚಿತ್ರಿಸಲು ಸೋತಿರುವ ಸಮಾಜ, ಅದರ ಕಾಲ ಸ್ಪಷ್ಟವಿದ್ದಲ್ಲಿ ಆಗಿನ ರಾಜಕೀಯ, ಆರ್ಥಿಕ ಸ್ಥಿತಿಗತಿಯ ಚಿತ್ರ ಕೊಡುತ್ತಿದೆಯೆ ಇಲ್ಲವೆ, ಧರ್ಮದ ಪ್ರಶ್ನೆಯನ್ನು ಎತ್ತುತ್ತದೆಯೇ ಇಲ್ಲವೆ, ಗಂಡು-ಹೆಣ್ಣು ಸಂಬಂಧದ ಕುರಿತೇ ಮತ್ತೆ ಹೇಳುತ್ತಿದೆಯೇ ಅಥವಾ ಹೊಸತೇನಾದರೂ ಇದೆಯೆ, ಮನೋಲೋಕಕ್ಕೆ ಸಂಬಂಧಿಸಿದ ನಿರೂಪಣೆಯೆ, ನಿರುದ್ದಿಶ್ಯ ಕಥಾನಕದಂತೆ ಕಾಣುವ ಈಸೀಗೋ ನಿರೂಪಣೆಯೆ? ಅದರಲ್ಲಿ ಚಿತ್ರಿತಗೊಂಡಿರುವ ಪಾತ್ರಲೋಕ - ಕುಟುಂಬ/ಸಮಾಜ/ದೇಶ ಎಷ್ಟು ವ್ಯಾಪಕವಾದದ್ದು ಅಥವಾ ಸೀಮಿತವಾದದ್ದು, ಕಾದಂಬರಿಕಾರ ಸುತ್ತಮುತ್ತಲ ವಿವರಗಳನ್ನು ಸುಪುಷ್ಟವಾಗಿ ಕೊಡುತ್ತಿದ್ದಾನೆಯೇ ಅಥವಾ ತನ್ನ ಕತೆಯೊಂದೇ ಇದೆ ಜಗತ್ತಿನಲ್ಲಿ ಎಂಬಂತೆ ಓಟ ಹೂಡಿದ್ದಾನೆಯೇ, ಅಲ್ಲಿ ಕಂಡು ಬರುವ ಜೀವನದೃಷ್ಟಿ ಆರೋಗ್ಯಕರವೆ ಎನ್ನುವ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು. ಅಥವಾ, ಅದು ಐತಿಹಾಸಿಕವೆ, ಪೌರಾಣಿಕವೆ, ಕೌಟುಂಬಿಕವೆ, ಪತ್ತೇದಾರಿಯೆ, ಹಾಸ್ಯಪ್ರಧಾನವೆ, ಅನುವಾದವೆ-(ದೇಶೀಯ/ಅಂತರ್ರಾಷ್ಟ್ರೀಯ/ದೇಶೀಯ-ಇಂಗ್ಲೀಷ್), ವೈಜ್ಞಾನಿಕವೆ, ಗ್ರಾಫಿಕ್ ಕಾದಂಬರಿಯೆ, ಜನಪ್ರಿಯ ಸಾಹಿತ್ಯಕ್ಕೆ ಸೇರಿದ್ದೆ, ವಾಮಾಚಾರ/ಭೂತ-ಪ್ರೇತಗಳ ಕಥಾನಕವೆ, ಕಾಲ್ಪನಿಕ ಕಥಾನಕವೆ, ಸಾಮಾಜಿಕ ಕ್ರಾಂತಿ/ಯುದ್ಧ/ದುರಂತ,ಘಟನೆ ಕೇಂದ್ರಿತ ಕಾದಂಬರಿಯೇ ಎಂದೆಲ್ಲ ಕೇಳಿಕೊಳ್ಳಬಹುದು. ಸ್ವಲ್ಪ ಆಳಕ್ಕೆ ಹೋದರೆ ಕಾದಂಬರಿಕಾರ ಬಳಸುವ ನಿರೂಪಣಾ ವಿಧಾನ ಯಾವುದು, ಭಾಷೆಯ ಲಯ ಯಾವುದು, ನಿರೂಪಕನ ಪ್ರಜ್ಞೆ ಯಾವ ನೆಲೆಯದ್ದು, ಭೂತಕಾಲವನ್ನು ಹೇಳುತ್ತಿದೆಯೆ, ವರ್ತಮಾನವನ್ನೇ, ಅವನು/ಳು ಪ್ರಬುದ್ಧನೆ, ಮಗುವೆ, ಜಿಗುಟು ಮನುಷ್ಯನೆ, ಆದರ್ಶ ವ್ಯಕ್ತಿಯೇ, ಅವನು ಯಾವ ಬಗೆಯ ಓದುಗನನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಳುತ್ತಿದ್ದಾನೆ, ಕೃತಿ ನನಗೆ ಅಪೀಲ್ ಮಾಡುತ್ತಿದೆಯೇ, ಈ ಕೃತಿಯ ತಾತ್ವಿಕ ಆಯಾಮ ಯಾವ ತರದ್ದು ಇತ್ಯಾದಿ ಪ್ರಶ್ನೆಗಳು ಕೂಡ ಪ್ರಸ್ತುತವೆನಿಸಬಹುದು.

ಆದರೆ ಇದೆಲ್ಲವೂ ಕಾದಂಬರಿ ಹಾಗೆ ನಮ್ಮ ಕೈಸೇರಿದ ಮೇಲಿನ ಅಧಿಕಪ್ರಸಂಗವೇ ಹೊರತು ಕಾದಂಬರಿಕಾರರನ್ನೇ ಕೇಳಿದರೆ ಅವರು ಏನು ಹೇಳುತ್ತಾರೆ?

ಡಾ||ಕೆ ಶಿವರಾಮ ಕಾರಂತರು ಯಾವತ್ತೂ ತಾವು ತಂತ್ರಕ್ಕೆ ಕಟ್ಟುಬಿದ್ದವರೇ ಅಲ್ಲ ಎನ್ನುತ್ತಿದ್ದರು. ಡಾ|| ಯು ಆರ್ ಅನಂತಮೂರ್ತಿಯವರಿಗೆ ನೀಡಿದ ಒಂದು ಸಂದರ್ಶನದಲ್ಲಿ ಅವರು ತಾವು ಬೇರೆಯವರನ್ನು ಓದುವುದಕ್ಕೇ ಹೋಗಲಿಲ್ಲ, ಟೆಂಮ್ಟೇಶನ್ ಟು ಇಮಿಟೇಟ್ ಅದರಿಂದ ಹೆಚ್ಚಾಗುತ್ತೆ, ಇಮಿಟೇಟರ್ ಈಸ್ ನಾಟ್ ಎ ಕ್ರಿಯೇಟರ್ ಎಂದುಬಿಟ್ಟಿದ್ದರು. ಅಂದರೆ ಫಾರ್ಮ್, ಟೆಕ್ನಿಕ್ ಎರಡೂ ಆಗಲೇ ಲಭ್ಯವಿರುವ, ಹೊಸಬರು ಹಳಬರನ್ನು ಅನುಸರಿಸುವ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮಾದರಿ. ತಮಗೆ ತಮ್ಮ ಜೀವನದಲ್ಲಿ ಕಂಡಿದ್ದನ್ನು ತೋಡಿಕೊಳ್ಳುವುದು ಮುಖ್ಯ. ಹಾಗೆ ತೋಡಿಕೊಳ್ಳಲು ಹೊರಟಾಗ ವಸ್ತುವೇ ತನಗೆ ತಕ್ಕುದಾದ ತಂತ್ರವನ್ನು ಹುಡುಕಿಕೊಳ್ಳುತ್ತದೆ, ಹುಡುಕಿಕೊಳ್ಳಬೇಕು ಎಂದವರು ಕಾರಂತರು. ಬೆಟ್ಟದ ಜೀವ, ಅಳಿದ ಮೇಲೆ, ಮೂಕಜ್ಜಿಯ ಕನಸುಗಳು ಇಂಥಲ್ಲೆಲ್ಲ ಫಾರ್ಮ್ ಬಗ್ಗೆ ನಿಮ್ಮಲ್ಲಿ ಪ್ರಿಒಕ್ಯುಪೇಶನ್ ಇದೆ ಎಂದು ಅನಂತಮೂರ್ತಿಯವರು ಬಿಟ್ಟುಕೊಡದೆ ವಾದಿಸಿದರೂ ಕಾರಂತರು ಅದು ಪ್ರಯತ್ನಪಟ್ಟು ಬಂದಿದ್ದಲ್ಲ ಎಂದವರು. [‘ಅನಂತಮೂರ್ತಿ ಮಾತುಕತೆ:ಹತ್ತು ಸಮಸ್ತರ ಜೊತೆ’ (ಸಂ) ಎಚ್ ಪಟ್ಟಾಭಿರಾಮ ಸೋಮಯಾಜಿ, (ಅಹರ್ನಿಶಿ) ಪುಟ 76.]
ಕೇಶವ ಮಳಗಿಯವರ ಕತೆಗಾರನೊಬ್ಬನ ರೂಪಕಲೋಕದ ಕಥನ ‘ನೇರಳೆ ಮರ’ ಹೊರಬಂದಾಗ ಅದು ಕತೆ, ಕಾದಂಬರಿ, ಆತ್ಮಕಥನ ಯಾವ ಪ್ರಕಾರಕ್ಕೂ ಒದ್ದೆ ಮಣ್ಣಲ್ಲಿ ಕಲ್ಲು ಕೂತ ಹಾಗೆ ಫಿಟ್ ಆಗುತ್ತಿರಲಿಲ್ಲ. ಅವರನ್ನೇ ಈ ಬಗ್ಗೆ ಮಾತಿಗೆಳೆದಾಗ ಅವರು ತುಂಬ ಕುತೂಹಲಕರವಾದ ಕೆಲವೊಂದು ಸಂಗತಿಗಳನ್ನು ಹಂಚಿಕೊಂಡಿದ್ದರು.

ಪ್ರಶ್ನೆ: ಕಾದಂಬರಿಯ ಅನನ್ಯತೆಗೆ ನಿಮ್ಮ ನಿರೂಪಣಾ ಕ್ರಮ ಹೆಚ್ಚು ಹತ್ತಿರವಿದೆ ಎನ್ನುವ ಬಗ್ಗೆ ಅನೇಕ ವಿಮರ್ಶಕರ ನಿಲುವಿನ ಬಗ್ಗೆ ಗೊತ್ತು. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ನನ್ನದೊಂದು ಸ್ವಲ್ಪ ಬೇರೆ ತರ ನಿಲುವಿದೆ ಇಲ್ಲಿ. ವಿಮರ್ಶಕರು ಅಥವಾ ಆ ತರದ ಯಾವುದೇ ಒಂದು ಗ್ರಹಿಕೆ ಇರುವಂಥವರಿಗೆ ಆ ಗ್ರಹಿಕೆ ಬಂದಿರೋದು ನಮ್ಮಲ್ಲಿರೊ ಸಾಂಪ್ರದಾಯಿಕ ಮಾದರಿಗಳಿಂದ. ಸಣ್ಣಕತೆಗಳು ಅಂದ್ರೆ ಅದಕ್ಕೆ ಒಂದು ಮಾದರಿಯನ್ನ ನಾವು ಪ್ರಪೋಸ್ ಮಾಡ್ತಾ ಇದೀವಿ. ಕಾದಂಬರಿ ಅಂದ್ರೆ ಅದಕ್ಕೆ ಒಂದು ಮಾದರಿಯನ್ನ ಪ್ರಪೋಸ್ ಮಾಡ್ತೀವಿ. ಕಾದಂಬರಿ ಎಲ್ಲಿಂದ ಬಂದಿದೆಯೋ ಅಲ್ಲಿ, ಯುರೋಪಿನಿಂದಲೇ ಬಂದಿರೋದದು, ಅವರ ಸಾಂಪ್ರದಾಯಿಕ ಮಾದರಿಯೊಂದಿದೆ ಮತ್ತು ಹೊಸದಾಗಿ ಪುನರ್ವ್ಯಾಖ್ಯಾನ ಮಾಡಿರೋ ಮಾದರಿಗಳು ಕೂಡ ಇವೆ. ಈ ಮಿಲನ್ ಕುಂದೇರಾ ಕಾದಂಬರಿಗಳನ್ನ ನೋಡಿದ್ರೆ ಕಾದಂಬರಿಗಳಿಗಿಂತ ಹೆಚ್ಚು ಕತೆ ತರ ಇದೆ ಅದು. ಆದ್ರೆ ಕಾದಂಬರಿ ರೂಪದಲ್ಲಿ ಪಬ್ಲಿಷ್ ಆಗಿವೆ. ಮಿಲನ್ ಕುಂದೇರಾನ ಯಾವ್ದೇ ಒಂದು ಕೃತಿನ ಗಮನಿಸಿದ್ರೂನು ಹಾಗೇ ಅನಿಸ್ತಿರುತ್ತೆ ನಮಗೆ. ಅಲ್ಲಿ ಪ್ರಶ್ನೆ ಏನಿದೆ ಅಂದ್ರೆ ನಾವು ಯಾವ ಒಂದು ಮಾದರಿಗಳನ್ನ ಫಿಕ್ಸ್ ಮಾಡಿದೇವೆ ಆ ಮಾದರಿಗಳ ಮೂಲಕ ನಾವು ಬರಹಗಳನ್ನ ಸ್ವೀಕಾರ ಮಾಡ್ತೀವಿ. ಅದು ನನ್ನ ಪ್ರಕಾರ ಅಷ್ಟೋಂದು ಸಮರ್ಪಕ ಅಲ್ಲ ಅನ್ಸುತ್ತೆ. ತಪ್ಪು ಅಂತ ನಾನು ಹೇಳಲ್ಲ. ಅಷ್ಟೊಂದು ಸಮರ್ಪಕವಾದ ಗ್ರಹಿಕೆ ಅಲ್ಲ ಅದು.

ಆಮೇಲೆ ನನಗೆ, ನಾನು ಬರೀಬೇಕಾದಾಗ ಯಾವಾಗ್ಲುನು ಬಹಳಷ್ಟು conflictsಗಳನ್ನ ಎದುರಿಸ್ತಾ ಇರ್ತೀನಿ. ಅದ್ಯಾಕಂದ್ರೆ ಕತೆ ಅಂದ ತಕ್ಷಣ, ಒಂದು ಸಿದ್ಧ ಮಾದರಿ ಇದೆ ಈಗಾಗ್ಲೆ. ಅಂದ್ರೆ ಪ್ರಸ್ತುತ ಸಿದ್ಧ ಮಾದರಿಯ ಕಲ್ಪನೆಗಳ ಬಗ್ಗೆ ನಾನು ಮಾತಾಡ್ತಾ ಇದ್ದೇನೆ. ಸಿದ್ಧ ಮಾದರಿಗಳ ಬಗ್ಗೆ ಅಲ್ಲ. ಅದರ ಸಿದ್ಧ ಮಾದರಿಗಳ ಬಗ್ಗೇನೆ ನಾನು ಮಾತಾಡ್ತಾ ಇಲ್ಲ. ಬಂಡಾಯದ ಒಂದು ಮಾದರಿಯಿದೆ. ನವ್ಯದವರದ್ದೊಂದು ಮಾದರಿಯಿದೆ. ಇನ್ನು ಕೆಲವು ತರದ ಕೆಲವು ಟಿಪಿಕಲ್ ಮಾದರಿಗಳಿವೆ. ಕಥಾ ಸ್ಪರ್ಧೆಗಳಿಗೆ ಬರೆಯೋ ಮಾದರಿನೆ ಇದೆ. ಅದ್ರ ಬಗ್ಗೆ ನಾನು ಮಾತಾಡ್ತಾ ಇಲ್ಲ. ಈಗ ಕಲ್ಪಿತ ಸಿದ್ಧ ಮಾದರಿ ಏನಂದ್ರೆ ಕತೆ ಅಂದ್ರೆ ಇಷ್ಟು ಪುಟಗಳ ಒಳಗಡೆ ಇರಬೇಕಂತ ಅನ್ನೋದು ಒಂದು. ಈಗ ಅದ್ರ ಅನುಭವ ಇದೆಯಲ್ಲ, ಅಂದ್ರೆ ಓದಿನ ಅನುಭವ, ಈಗ ಒಂದು ಕೃತಿಯನ್ನ ಓದಿದ ಮೇಲೆ ಅದು ದಟ್ಟವಾಗಿ ಕೊಡುವ ಅನುಭವ ಇದ್ಯಲ್ಲ, ಅದು ಮುಖ್ಯ ಅಂತ ನನಗನಿಸುತ್ತೆ.

ಅಂದ್ರೆ ಈಗ ನಾವು ಹಿಂದೆ ಚರ್ಚೆ ಮಾಡ್ತಾ ಇದ್ವಿ ನೋಡಿ, ಪೊಯೆಟ್ರಿಗೆ ನಾವು ಆತರ ಮಾಡಬಹುದು. ಬಟ್ ಗದ್ಯ ಬರಹದಲ್ಲಿ ಇದು ಕತೆ ಅಥವಾ ಕಾದಂಬರಿ - ಈ ತರದ ಚರ್ಚೆನೆ ಬಹಳ ಅಪ್ರಸ್ತುತ ಅಂತ ಅನ್ಸುತ್ತೆ ನನಗೆ. ಯಾಕಂದ್ರೆ ನಾನು ಓದೊ ಬೇರೆ ಬೇರೆ ದೇಶಗಳ ಎಷ್ಟೋ ಲೇಖಕರಲ್ಲಿ ಕತೆಗಳು ಅಂತ ಪಬ್ಲಿಷ್ ಮಾಡಿರೋದೆ actually ನೂರು ಪುಟಗಳ ಮೇಲಿದೆ. ಈಗ ಗೇಬ್ರಿಯಲ್ ಗಾರ್ಸಿಯಾ ಮಾರ್ಕೆಸ್ ಬರೆಯೊ ಕತೆಗಳನ್ನ ನೋಡಿದ್ರೆ, ಸಿಂಗರ್ ಬರೆಯೋ ಕತೆಗಳನ್ನ ನೋಡಿದ್ರೆ ಅಥವಾ even ಎಷ್ಟೋ ಆಫ್ರಿಕನ್ writers ಬರೆಯೋ ಕತೆಗಳನ್ನ ನೋಡಿದ್ರೆ ನೀವು, ಅವ್ರದೆಲ್ಲ ನೂರು ಪೇಜ್ ಮೇಲೆನೆ ಇದಾವೆ. ಕತೆಗಳು ಅಂತ ಪಬ್ಲಿಷ್ ಮಾಡಿದಾರೆ. ಪಬ್ಲಿಷ್ ಮಾಡ್ಬೇಕಾದ್ರೆ ನಿಮಗೆ ಒಂದು convenient form ಬೇಕು. ಅಂದ್ರೆ ಅದು convenient form ಅಷ್ಟೆನೆ ಅದು.

ಕನ್ನಡದಲ್ಲಿ ಯಾವಾಗ್ಲೂನು ಏನಾಗಿದೆ ಅಂದ್ರೆ, ಈಗ ಸಣ್ಣಕತೆಗಳು ಅಂದ್ರೆ ಮಾಸ್ತಿ ನಮ್ಮ ಗಮನದಲ್ಲಿದ್ದಾರೆ. ಅದಕ್ಕಿಂತ ಮುಂಚೆ ಹೇಳೋದಾದ್ರೆ ಪಂಜೆಯವರು ನಮ್ಮ ಗಮನದಲ್ಲಿದ್ದಾರೆ. ಸೊ ಅವರಿಬ್ರುನು ಈ ತರ ತಮ್ಮ ಮಾದರಿಯನ್ನ ರೂಢಿಸಿಕೊಂಡಿದ್ದು. ಮೊದಲನೆಯದಾಗಿ ಆ ತರದ್ದೊಂದು ಮಾದರಿ ಕನ್ನಡದಲ್ಲಿ ಇರಲಿಲ್ಲ. ಸೊ ಅವರು ಹೊಸದಾಗಿ ರೂಢಿಸಿಕೊಳ್ಳಬೇಕಾಗಿತ್ತು. ಹಾಗೆ ರೂಢಿಸಿಕೊಳ್ಳಬೇಕಾದಾಗ ಅವರ ಕಾಲಮಾನಕ್ಕೆ ತಕ್ಕ ಎಲ್ಲಾ ಆಶಯಗಳನ್ನ, ರಾಜಕೀಯ ಆಶಯ, ಸಾಹಿತ್ಯಿಕ ಆಶಯ ಮತ್ತು ಪ್ರಭಾವ, ಮೊಪಾಸಾ ತರದ್ದನ್ನ ಗಮನದಲ್ಲಿಟ್ಟುಕೊಂಡು ನಾನು ಹೇಳ್ತಾ ಇದ್ದೀನಿ. ಮಾಸ್ತಿಯವರಿಗೆ ಮುಖ್ಯವಾಗಿ ಪ್ರಭಾವ ಬಂದಿದ್ದು ಯುರೋಪಿಯನ್ writersರಿಂದ. ಸೊ ಆಗ ಸಣ್ಣಕತೆಯ ಮಾದರಿ ಆ ತರ ಇತ್ತು. ಕನ್ನಡಕ್ಕೆ ಬಹಳ ಹೊಸತಾಗಿತ್ತದು.

ಆಮೇಲೆ ಬಂದ ಸಾಹಿತ್ಯದ ಪ್ರಯತ್ನಗಳು ಏನಿವೆ, ನವ್ಯರನ್ನ ನೀವು ಗಮನಿಸಿದ್ರೆ, ಮಾಸ್ತಿಯವರ ಮಾದರಿ ಬಹಳ convenient ಆಗಿತ್ತು ಆಗ. Actually, ನವ್ಯರು ಮಾಡಿದ್ದೇನು ಅಂದ್ರೆ ಅದರಲ್ಲಿ formನಲ್ಲಿ ಅವರು ವ್ಯತ್ಯಾಸಗಳನ್ನು ಮಾಡಿದ್ರು. ಕತೆಯ ರಚನೆಯ structure ಇದೆಯಲ್ಲ, ಅದರಲ್ಲಿ ವ್ಯತ್ಯಾಸವನ್ನು ಮಾಡಿದ್ದು ಬಿಟ್ರೆ, ಸಣ್ಣಕತೆಯ ಪರಿಕಲ್ಪನೆಯನ್ನು ವ್ಯತ್ಯಾಸ ಮಾಡ್ಲಿಲ್ಲ ಅವರು. ಮಾಸ್ತಿಯವರನ್ನ ನೀವು ನೋಡಿದ್ರೆ ಅನಂತಮೂರ್ತಿಯವರ ಪ್ರಯತ್ನನು ಕತೆ ಹೇಳೋದೇ ಇದೆ. ಬಟ್ ಅಲ್ಲಿ ಕತೆ ಹೇಳುವ ವಿಧಾನ ಬೇರೆ ಇದೆ, ಕತೆ ಹೇಳುವ ತಂತ್ರ ಬೇರೆ ಇದೆ. ವಸ್ತುಗಳು ಬೇರೆಯಿದೆ. ವಿಶಾಲವಾದ ನೆಲೆಯಲ್ಲಿ ನೋಡೋದಾದ್ರೆ ವಸ್ತುಗಳು ಕೂಡ ಬೇರೆಯಲ್ಲ. ಬಟ್ ಬೇರೆ ಇದೆ ಅಂತ ನಾವು ಒಪ್ಪಬಹುದು. ಅಲ್ಲಿ ಅವರಿಗೆ ಏನು ಸಮಸ್ಯೆಯಾಯ್ತು ಅಂದ್ರೆ, particularly ಇಬ್ರನ್ನ ನಾವು ಆ ಕಾಲದ ಮಹತ್ವದ ಲೇಖಕರು ಅಂತ ತಗೊಳ್ಳೋದಾದ್ರೆ, ಒಬ್ರು ಶಾಂತಿನಾಥ ದೇಸಾಯಿ, ಇನ್ನೊಬ್ರು ಅನಂತಮೂರ್ತಿ. ಇವ್ರಿಗುನು ಅತ್ಯಂತ ಸವಾಲಿನ ವಿಷಯವನ್ನು ಹೇಳಬೇಕಾದಾಗ ಇದನ್ನ, ಈ ಮಾದರಿಯ ಮಿತಿಯನ್ನ, ಕೇರ್ ಮಾಡ್ಲಿಲ್ಲ ಅವರು. ಅನಂತಮೂರ್ತಿಯವರ ‘ಕ್ಲಿಪ್ ಜಾಯಿಂಟ್’ ಅತ್ಯಂತ ಒಳ್ಳೆಯ ಉದಾಹರಣೆ ಅಂತ ನಾನು ಅಂದ್ಕೊಂಡಿದೀನಿ. ಅಥವಾ ಮಂದಾಕಿನಿಯ ಕತೆಯನ್ನು ಹೇಳುವ ‘ಕ್ಷಿತಿಜ’. ಮತ್ತು ಅದೇ lengthನ ಬೇರೆ ಬೇರೆ ಕತೆಗಳಿವೆ. ‘ಸುಬ್ಬಣ್ಣ’ನೆ ತಗೊಳಿ ನೀವು. ಅದನ್ನ ಕಾದಂಬರಿ ಅಂತ ಮಾಸ್ತಿಯವರೆ ಪರಿಗಣಿಸಿರಲಿಲ್ಲ ಎಷ್ಟೋ ಸಮಯ. ಪಬ್ಲಿಷ್ ಮಾಡ್ತಾ ಮಾಡ್ತಾ ಕಾದಂಬರಿಯಾಗಿ ಬಿಟ್ಟಿದೆ ಅದು.

ಅಂದ್ರೆ ಈ ತರದ್ದೊಂದು contradictionನು ಎಲ್ಲಾ ಕಾಲ್ದಲ್ಲು ಇರುತ್ತೆ. ಈಗ ನಿಮಗೆ ಮಾದರಿಗಳು ನಿಮ್ಮನ್ನ dictate ಮಾಡೋಕೆ ಸುರುಮಾಡಿ ಬಿಟ್ಟಾಗ ಲೇಖಕನಿಗೆ tension ಆಗಕ್ಕೆ ಸುರುವಾಗಿಬಿಡುತ್ತೆ. ಅದಕ್ಕೆ ಜೋತುಬಿದ್ದು ನೀವು ಈಗ ಅನಂತಮೂರ್ತಿಯವರ ಹಿಂದಿನ ಹಿಂದಿನ ಹಿಂದಿನ ಕತೆಗಳನ್ನು ನೋಡ್ಕೊಂಡೋಗಿ. ಬರ್ತಾ ಬರ್ತಾ ಬರ್ತಾ ಬಂದ ಕತೆಗಳನ್ನ ನೋಡ್ಕೊಂಡೋಗಿ. ಅಂದ್ರೆ ಆರಂಭದ ಕತೆಗಳನ್ನ ನಾನು ಹೇಳ್ತಾ ಇರೋದು. ಆಮೇಲಾಮೇಲೆ ಅವ್ರು length ಬಗ್ಗೆ ತಲೆಕೆಡಿಸಿಕೊಳ್ಳಿಲ್ಲ. - ನನಗೆ ಹೇಳ್ಬೇಕಾಗಿರೋದು ಇಷ್ಟಿದೆ; ಮುವ್ವತ್ತು ಪೇಜ್ ಬಿಟ್ಟು ಮುವ್ವತ್ತೊಂದನೆ ಪೇಜಿಗೆ ಹೋಗ್ತಾ ಇದೆ, I don't care. ನನಗೆ ಹೇಳೋದು important ಅಷ್ಟೆ ಅಲ್ಲಿ. - ಆಮೇಲೆ ನೀವದನ್ನು ಕಾದಂಬರಿ ಅಂತಾದ್ರು ಕರೀರಿ, ಕತೆ ಅಂತಾದ್ರು ಕರೀರಿ ಅದು ನಿಮ್ಮ ಹಣೆಬರಹ ಅದು. ಸೊ, ಹೀಗೆ ಎಲ್ಲಿ ಕೊನೆಯಾಗುತ್ತಲ್ಲ, ತಾತ್ವಿಕವಾಗಿ, ಮನಸ್ಸಿನಲ್ಲಿ ಕೆಲವು ವಿಚಾರಗಳು ಎಲ್ಲಿ ನಮಗೆ ಕೊನೆಯಾಗುತ್ತೊ ಅಲ್ಲಿ ನಾವು ನಿಲ್ಲಿಸ್ತೀವಿ. ಆಮೇಲಿನ ಸ್ವರೂಪ ಕಾದಂಬರಿನೂ ಆಗಿರುತ್ತೆ ಅಥವಾ ಕತೇನೂ ಆಗಿರುತ್ತೆ.

ನನ್ನ contradiction ಎಲ್ಲಿದೆ ಅಂತಂದ್ರೆ, ಈಗ ನಾನು ಹೇಳುವ ಎಷ್ಟೋ ವಿಷಯಗಳು ಬರೀಬೇಕಾದಾಗ ನಾನು length ಬಗ್ಗೆ ಯೋಚನೆ ಮಾಡೋಕೆ ಹೋಗಲ್ಲ. ಆದರೆ ಅದು ಮುಗಿದಾಗ actually ಅದು ಈಗಾಗ್ಲೆ ಕಲ್ಪಿತ ಸಣ್ಣಕತೆಯ ಸ್ವರೂಪದಲ್ಲಿ ಅದು ಇಲ್ಲ. ಕಲ್ಪಿತ ಕಾದಂಬರಿಯ ಸ್ವರೂಪದಲ್ಲೂ ಅದಿಲ್ಲ. ಸೊ ಹಾಗಿದ್ದಾಗ ಎಷ್ಟೋ ಜನ ನನಗೆ ಕೇಳ್ತಾರೆ, ನೀವಿದನ್ನ ಇನ್ನೊಂದು ಸ್ವಲ್ಪ ಬೆಳೆಸಿಬಿಟ್ಟು ಕಾದಂಬರಿ ಮಾಡಬಹುದಾಗಿತ್ತು ಅಂತ. ಈ ‘ನಕ್ಷತ್ರಯಾತ್ರಿಕರು’ ಇರಬಹುದು, actually ‘ಕಡಲತೆರೆಗೆ ದಂಡೆ’ ಸ್ವಲ್ಪ ಆ ತರ ಇಲ್ಲ. ಕಾದಂಬರಿ ಅಂತ ಒಪ್ಪಬಹುದೇನೋ ಜನ ಅದನ್ನ. ಪ್ರತ್ಯೇಕವಾಗಿ ಪಬ್ಲಿಷ್ ಮಾಡಿದಾಗ. ಬಟ್ ಎಷ್ಟೋ ಕತೆಗಳು ಸಣ್ಣಕತೆಗಳ ಒಳಗಡೆನೂ ಇಲ್ಲ ಅವು ಆ ಮೇಲೆ ಈ ಕಡೆನೂ ಇಲ್ಲ. ಅದಕ್ಕೆ ನಮ್ಮ ಈ journalistಗಳು ಏನ್ಮಾಡ್ತಾರೆ ಅಂದ್ರೆ, ಅಂದ್ರೆ ಪತ್ರಿಕೆಯ ಸಂಪಾದಕರು, ನೀಳ್ಗತೆ ಅಂತ ಒಂದು form ಸೃಷ್ಟಿ ಮಾಡ್ಕೊಂಬಿಡ್ತಾರೆ. ಆತರ ಏನಿರಲ್ಲ actually. ನೀಳ್ಗತೆ-ಕಿರುಕಾದಂಬರಿ, ಹಿಂಗೇನಿರಲ್ಲ ಅದು. ಅದೇ ಆದ್ರೆ, ಸೀರಿಯಸ್ ಓದುಗರಿಗೆ, ಸೀರಿಯಸ್ ಬರಹಗಾರರಿಗೆ ನಾನು ಹೇಳ್ತಾ ಇದೀನಿ. ಜನಪ್ರಿಯ ಮಾದರಿ ಬಗ್ಗೆ ನಾನು ಮಾತಾಡ್ತ ಇಲ್ಲ. ಅವರಿಗೆ ಆ ತರದ್ದೊಂದು form ಏನು ಇರಲ್ಲ. ಸೊ, ನನಗೆ ಯಾವಾಗ್ಲು ಎಲ್ಲಿ ನನ್ನ contradiction ಇರುತ್ತೆ ಅಂದ್ರೆ ಅದು ಮುಗಿದಾಗ ಯಾವ್ದೋ ಒಂದು ಎರಡರ ಮಧ್ಯೆ ಇರುತ್ತಲ್ಲ, ಅದೇ form ಅಷ್ಟೆ ಅದು. ಸೊ, ನಾವೆಲ್ಲೊ ಒಂದು ಕಡೆಗೆ ಫಿಕ್ಸ್ ಮಾಡೋಕೆ ಟ್ರೈ ಮಾಡ್ದಾಗ, ನನಗೇನೂ problem ಆಗಲ್ಲ ಅದು, ಅವ್ರಿಗೆ, ಗುರುತಿಸೋವ್ರಿಗೆ problem ಆಗಿ ಬಿಡುತ್ತೆ. ಸೊ, ಇದು ವಿಮರ್ಶಕರಿಗೆ problem ಆಗಿ ಬಿಡುತ್ತೆ. ಇದನ್ನ ಕಾದಂಬರಿಯಾಗಿ ಪರಿಗಣಿಸಬೇಕು ಅಂದ್ರೆ length ಇಲ್ಲ....

ನನ್ನ ಪ್ರಕಾರ, ಅದ್ಕೆ ನಾ ನಿಮಗೆ ಆರಂಭದಲ್ಲೆ ಹೇಳಿದೀನಿ, ನಿಮಗೆ ಓದಿದಾಗ ಅದರ ಸಂಕೀರ್ಣತೆ ಮತ್ತು ಅದರ ದಟ್ಟವಾಗಿ ನಿಮ್ಮನ್ನ ಕಾಡುವ ಶಕ್ತಿ, ಅದು ನಿಮ್ಮ ಮೇಲೆ ಮಾಡುವ ಪ್ರಭಾವ ಮತ್ತಿತರ ಒಟ್ಟಾರೆ structure ಅದು ಪರಿಪೂರ್ಣವಾಗಿದೆಯೆ ಇಲ್ಲವೆ ಅನ್ನೋದಷ್ಟು ಮುಖ್ಯ ನನಗೆ. ಅದು ಕಾದಂಬರಿ ತರ ನಿಮಗನಿಸ್ತಾ ಇದ್ರೆ, its fine. ಕತೆ ತರ ಇದೆ ಅನಿಸ್ತಾ ಇದ್ರೆ, its fine. ಬಟ್ ಈಗ ನೀವು ‘ಅಂಗದ ಧರೆ’ನ ಕಾದಂಬರಿ ಅಂತ ಹೇಳ್ಬಿಟ್ಟು, ಮತ್ತೊಮ್ಮೆ length ಬಗ್ಗೆ ಗಮನ ಕೊಡೋಕ್ಕಾಗಲ್ಲ. ಅದು ಅಲ್ಲಿಗೆ ಮುಗಿದೋಗಿದೆ ನನ್ ಪ್ರಕಾರ; ತಾತ್ವಿಕವಾಗಿ ಅದು ಮುಗಿದೋಗಿದೆ ಮತ್ತು ತಾರ್ಕಿಕವಾಗಿಯೂ ಮುಗಿದು ಹೋಗಿದೆ, ಆ ಕ್ಷಣಕ್ಕೆ. ಆಮೇಲದನ್ನ ಬೆಳೆಸೋಕೆ ಸಾಧ್ಯ ಇಲ್ಲ. ಕೆಲವು ಜನ ನನಗೆ suggest ಮಾಡಿದ್ರು, ಇನ್ನೊಂದು ಸ್ವಲ್ಪ ಅಲ್ಲಿ ನೀವು ಘಟನೆಗಳಿವ್ಯಲ್ಲ, ಅದನ್ನೆ ಮೂರು ಮೂರು ಪೇಜ್ ಮಧ್ಯದಲ್ಲಿ ಸೇರಿಸಿ ಒಂದು ಕಾದಂಬರಿ ಮಾಡಿ ಅಂತ. ಹಾಗೆ ಮಾಡ್ಲಿಕ್ಕೆ ನನಗೆ ಸಾಧ್ಯ ಇಲ್ಲ. ಸೊ ಆದ್ರಿಂದ ಆ ಪ್ರಶ್ನೆ ಅದು ಓದೋವ್ರಿಗು ಮತ್ತು ವಿಮರ್ಶಕರಿಗು ಸೇರಿದ್ದೆ ಹೊರತು ಲೇಖಕನಾಗಿ ನನಗಲ್ಲ. ನನಗಷ್ಟೇ ಅಲ್ಲ, ಈಗ ಅನಂತಮೂರ್ತಿಯವರಿಗೇ ಈಗ ‘ಕ್ಲಿಪ್ ಜಾಯಿಂಟ್’ ಯಾಕೆ ನೀವು ಇನ್ನೂ ಐದು ಪೇಜ್ ಕಡಿಮೆ ಬರೀಲಿಲ್ಲ ಅಂತ ಕೇಳಿದ್ರೆ ಅಷ್ಟೇ ಬರೀಬೇಕವ್ರು. ಅದ್ರಿಂದಾನೆ ಅವ್ರು ಬರೆದಿದಾರೆ ಅಂತ ನನಗನಿಸುತ್ತೆ.

ಆಮೇಲೆ ಕಾದಂಬರಿಯ, ನಮ್ಮ ಪೂರ್ಣ ಪ್ರಮಾಣದ ಕಾದಂಬರಿಯ ಕಲ್ಪನೆಯಿಂದಾಗಿ ಇದೆಲ್ಲ ಅನಿಸ್ತಾ ಇದೆ. ಕಾದಂಬರಿ ಅಂತ ಹೇಳಿದ ತಕ್ಷಣ ಕಾರಂತರ ಮತ್ತು ಕುವೆಂಪು ಅಂಥವರ ಎರಡು ಮಾದರಿಗಳಿವೆ ನಮಗೆ. ಸಿದ್ಧ ಮಾದರಿಗಳೇನಲ್ಲ ಅವು. ಬಟ್ ಆ ಮಾದರಿಗಳಿವೆ. ಸೊ ಯಾರೇ ಕಾದಂಬರಿ ಬರೆದ್ರೂ, ಇನ್ನೊಂದು ಕಡೆ ಭೈರಪ್ಪನವರಿದ್ದಾರೆ. ಸೊ, ಅವರ ಗಾತ್ರ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಾ ಇದ್ಯೆ ಹೊರತು ಕಡಿಮೆಯಾಗ್ತಾ ಇಲ್ಲ. ಸೊ, ಆ ನೆಲೆಯಲ್ಲಿ ನೀವು ಗ್ರಹಿಸಿದ್ರೆ ಖಂಡಿತವಾಗಿ ನೀವು ಕೇಳ್ತಾ ಇರುವ ಪ್ರಶ್ನೆ ಬಹಳ ರಿಲೆವಂಟ್ ಆಗಿದೆ. ಬಟ್ ಈಗ ನೀವು ಭೈರಪ್ಪನವರ ‘ಅಂಚು’ ಕತೆ actually ‘ಅಗಮ್ಯ ಅಗೋಚರ ಅಪ್ರತಿಮ ಜೀವವೇ...’ ಅದರ contentಉ ಹೆಚ್ಚು ಕಮ್ಮಿ ಒಂದೇ ತರನೆ ಇದೆ. ನಿಮಗೆ ಕತೆ ಓದಿದ ಮೇಲೆ ಅಥವಾ ಕಾದಂಬರಿ ಓದಿದ ಮೇಲೆ ಕೊಡುವ ಒಂದು ದಟ್ಟವಾದ ಅನುಭವ ಇದೆಯಲ್ಲ, ಈ ಸಣ್ಣಕತೆನೆ ಕೊಡ್ತಾ ಇದೆ. ಸಣ್ಣಕತೆ ಅಂತ ಅದನ್ನ ನಾನು ಕರೆದಿಲ್ಲ. ನನ್ನ ಕತೆ ಕೊಡ್ತಾ ಇದ್ರೆ ನಿಮ್ಗೆ, ಅದಕ್ಕು ಇದಕ್ಕು ಏನು ವ್ಯತ್ಯಾಸ ಅಂತ ನನ್ನ ಕೇಳಿದ್ರೆ ಏನೂ ಇಲ್ಲ, ನನ್ ಪ್ರಕಾರ. ಅಷ್ಟೇ ಹೇಳೋಕೆ ಇಷ್ಟ ಪಡ್ತೀನಿ.

‘ಕುಂಕುಮ ಭೂಮಿ’ಯ ವಿಚಾರಕ್ಕೆ ಬಂದ್ರೆ, ಅದನ್ನ ನಾನು ಕಾದಂಬರಿ ಬರೀಬೇಕು ಅಂತಾನೆ ಬರೆದಿದ್ರಿಂದ ಆ ತರ structureನ ನಾನು ಯೋಚನೆ ಮಾಡಿದೀನಿ ಅಂತ ನಿಮ್ಗೆ ಗೊತ್ತಾಗುತ್ತೆ. ಅದು artificial structure ಅನಿಸುತ್ತೆ ನನಗೆ. ಅದಕ್ಕೆ ಆ ಕಾದಂಬರಿ ಬಗ್ಗೆ ನನಗಷ್ಟು ಒಲವಿಲ್ಲ ಅಂತ ಹೇಳೋವಾಗ ಇದು ಕೂಡ ಒಂದು ಕಾರಣ ಅದರಲ್ಲಿ. ನಾನು ಯಾವ್ದೇ ಬರಹ ಬರೆಯೋಕೆ ಸುರುಮಾಡಿದಾಗ ಅದನ್ನ ಅಂತ್ಯ ಏನು ಅಂತ ನಾನು ಯೋಚನೆ ಮಾಡೋದಿಲ್ಲ. ಅಂದ್ರೆ ಅದರ length ಬಗ್ಗೆ ನಾನು ಹೇಳ್ತಾ ಇರೋದು. ಅದು ನಾನು ಕತೆ ಬರೆಯೋಕೆ ಸುರುಮಾಡ್ತೀನಿ. length ಎಲ್ಲಿಗೆ ಮುಗಿಯುತ್ತೆ ಅಲ್ಲಿಗೆ ನಾ ಬಿಡ್ತೀನಿ. ಸೊ, ಈ ಸಮಸ್ಯೆ ನನಗೆಲ್ಲಿ ಬರುತ್ತೆ ಅಂತಂದ್ರೆ ಅದನ್ನ ಎಲ್ಲಿ place ಮಾಡ್ಬೇಕು ಅಂತಂದಾಗ ಬರುತ್ತೆ. actually ‘ಅಂಗದ ಧರೆ’ನೂ ನನ್ನ ಕಲೆಕ್ಷನ್ನಿನಲ್ಲಿ ಸೇರಿಸ್ಬೇಕು ಅಂತ ನನಗಿತ್ತು. ಮತ್ತೆ ಕತೆಯಾಗಿ ನೋಡಿದ್ರೆ ಬಹಳ ದೊಡ್ಡದಿದೆ ಅದು. ನಮ್ಮ ಒಪ್ಪಿತ ಮಾದರಿಗಳಿವೆಯಲ್ಲ, ಅದರಿಂದಾಗಿ ಹುಟ್ತಾ ಇರೋ ಸಮಸ್ಯೆ ಅಂತ ನನಗನಿಸ್ತಾ ಇರುತ್ತೆ. ಬಟ್ ಇನ್ನೊಂದು ಅರ್ಥದಲ್ಲಿ, ಈಗ ಕಾರಂತರ ಕಾದಂಬರಿಯಲ್ಲಿ, ಒಂದು ಬದುಕನ್ನೇ ಅದು ಕಟ್ಟಿಕೊಡುತ್ತೆ ಅಂತಾದ್ರೆ, I live that life; but whereas it may not be possible here. so, at the same time it is giving some kind of effect which can be taken as a full experience. But at the same time in the format or in the form it’s not representing a novel. That is the conflict.
(ಈ ಲೇಖನದ ಆಯ್ದ ಭಾಗ ವಿಜಯವಾಣಿ ಸಾಪ್ತಾಹಿಕದ ಜೂಲೈ 6 ಮತ್ತು 13ನೆಯ ದಿನಾಂಕದ ಸಂಚಿಕೆಯಲ್ಲಿ ಪ್ರಕಟವಾಗಿದೆ)

1 comment:

ಸಿಂಧು sindhu said...

Sir,
i want(actually need :) ) your mail id.
my id is sindhusagar@gmail.com

Thanks for your time,
Warm Regards,
sindhu