Thursday, October 9, 2014

ಅಕಾಲ ಮಳೆ ಸುರಿದಾಗಿನ ಕಥೆ

ಆನಂದ ವಿಂಗಕರ ಅವರ ಮರಾಠಿ ಕಾದಂಬರಿಯನ್ನು ಕನ್ನಡಕ್ಕೆ ತಂದ ಚಂದ್ರಕಾಂತ ಪೋಕಳೆಯವರು ಇದೊಂದು ಕನ್ನಡದ್ದೇ ಕಾದಂಬರಿ ಎನಿಸುವಷ್ಟು ಚೆನ್ನಾದ ರೀತಿಯಲ್ಲಿ ಇದನ್ನು ಅನುವಾದಿಸಿದ್ದಾರೆ. ಗ್ರಾಮ್ಯ ಕನ್ನಡವನ್ನು ಬಳಸಿ ಮೂಲದ ಸೊಗಡನ್ನು ಉಳಿಸಿಕೊಂಡು ಬರುವುದು ಅನುವಾದದ ಪ್ರಕ್ರಿಯೆಯಲ್ಲಿ ಕೊಂಚ ಹೆಚ್ಚಿನ ಶ್ರಮ ಮತ್ತು ಶ್ರದ್ಧೆಯನ್ನು ಬೇಡುವ ಕೆಲಸ. ಪೋಕಳೆಯವರು ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವುದರಿಂದಲೇ ಕಾದಂಬರಿ ಹೃದ್ಯವಾಗಿ ಕನ್ನಡದ ಓದುಗನನ್ನು ತಟ್ಟುವುದು ಸಾಧ್ಯವಾಗಿದೆ.

ಹಲವು ಕಾರಣಗಳಿಗಾಗಿ ಇದೊಂದು ಬಹುಮುಖ್ಯ ಕಾದಂಬರಿ ಮಾತ್ರವಲ್ಲ, ಈಚೆಗೆ ಓದಲು ಸಿಕ್ಕಿದ ಕಾದಂಬರಿಗಳಲ್ಲೇ ಅತ್ಯುತ್ತಮವಾದದ್ದು ಎನಿಸಿದೆ. ಇದೊಂದು ‘ಮಸ್ಟ್ ರೀಡ್’ ಕಾದಂಬರಿ ಎಂದು ಯಾವ ಸಂಕೋಚವಿಲ್ಲದೇ ಹೇಳಬಹುದು.

ಮೂಲದಲ್ಲಿಯೇ ಇದ್ದಿರಬಹುದಾದ ಒಂದು ಬಗೆಯ ‘ಸಂಕ್ಷಿಪ್ತಗೊಳಿಸುವ’ ತುರ್ತು ಎದ್ದು ಕಾಣುವಂತಿದೆ. ತನ್ಮೂಲಕ ನಿಧಾನಗತಿಯ ಚಲನೆಯಿಂದ ಸುದೀರ್ಘವಾಗಿ ಚಾಚಿಕೊಂಡು ಕತೆಯನ್ನು ಬಿಚ್ಚಿಡುವ ಸಾವಧಾನ ಇಲ್ಲಿ ಕಾಣಿಸುವುದಿಲ್ಲ. ಇದೇ ಒಂದು ದೊಡ್ಡ ಕೊರತೆಯೆಂದೇನೂ ಅಲ್ಲ. ಬಹುಷಃ ಇಂದಿನ ಜೀವನ ಶೈಲಿ ಮತ್ತು ವೇಗದ ಬದುಕಿಗೆ ಈ ಬಗೆಯಾಗಿ ಹೇಳುವುದೇ ಸೂಕ್ತವಾದ ವಿಧಾನ ಇದ್ದರೂ ಇದ್ದೀತು. ಆದರೆ ದೇಶದೆಲ್ಲೆಡೆ ಹೆಚ್ಚತೊಡಗಿದ ರೈತರ ಆತ್ಮಹತ್ಯೆ, ಜಾಗತಿಕವಾಗಿ ಕಮ್ಯುನಿಸಂನ (ಸೋವಿಯತ್ ಯೂನಿಯನ್)ಪತನ ಮತ್ತು ಅಬ್ಬರಿಸಿದ ಬಂಡವಾಳಶಾಹಿ(ಅಮೆರಿಕದ)ಗಳ ಅಟ್ಟಹಾಸ, ಜನಸಾಮಾನ್ಯರ ಮೇಲೆ ಮತ್ತು ಮಧ್ಯಮವರ್ಗದ ವ್ಯಾಪಾರಸ್ಥರು, ಉತ್ಪಾದಕರುಗಳ ಮೇಲೆ ಜಾಗತೀಕರಣ-ಮುಕ್ತ ಮಾರುಕಟ್ಟೆಗಳು ನೀಡಿದ ಪ್ರಹಾರ, ಪರಿಸರ ನಾಶದ, ಅರಣ್ಯನಾಶದ ಫಲಶ್ರುತಿಯಾದ ಗ್ಲೋಬಲ್ ವಾರ್ಮಿಂಗ್‌, ಮರೆಯಾದ ಮಳೆ ಉಂಟು ಮಾಡಿದ ತಲ್ಲಣ, ಜಾತಿಪದ್ಧತಿ ಮತ್ತು ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ ಎರಡೂ ನಮ್ಮ ಜೀವನಶೈಲಿಯನ್ನು ಕುಟುಕಿದ ಬಗೆ - ಮುಂತಾಗಿ ಹಲವು ಹತ್ತು ಆಯಾಮಗಳಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ, ಜಾಗತಿಕ ಮತ್ತು ಮಾನವೀಯವೂ-ಮನೋವೈಜ್ಞಾನಿಕವೂ ಆದ ನೆಲೆಗಟ್ಟಿನಲ್ಲೂ ಹರವಿಕೊಂಡ ಕಥಾನಕವೊಂದಕ್ಕೆ ಈ ಶೈಲಿಯಿಂದಾಗಿ ಕೊಂಚ ಅನ್ಯಾಯವಾಯಿತೇ ಅನಿಸದಿರದು.

ಈ ಕಾದಂಬರಿಯೊಂದಿಗೆ ನಾವು ಹೋಲಿಸಬಹುದಾದ ಕನ್ನಡದ (ಅನುವಾದಿತವೂ ಸೇರಿ) ಕಾದಂಬರಿಗಳೆಂದರೆ, ಡಾ||ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’, ಶಂಕರ ಮೊಕಾಶಿ ಪುಣೇಕಾರರ ‘ಗಂಗವ್ವ ಗಂಗಾಮಾಯಿ’, ಪರ್ಲ್ ಎಸ್ ಬಕ್ ಅವರ ನೊಬೆಲ್ ಪ್ರಶಸ್ತಿ ಪುರಸ್ಕೃತ ಚೀನೀ ಕಾದಂಬರಿ ‘ಗುಡ್ ಅರ್ತ್’ (ಕನ್ನಡಕ್ಕೆ ಪಾರ್ವತಿ ಜಿ ಐತಾಳ್), ಭೀಷ್ಮ ಸಹಾನಿಯವರ ‘ಮಯ್ಯಾದಾಸನ ವಾಡೆ’(ಕನ್ನಡಕ್ಕೆ ದು.ನಿಂ.ಬೆಳಗಲಿ), ಎಂ.ಟಿ.ವಾಸುದೇವನ್ ನಾಯರ್ ಅವರ ‘ಚೌಕಟ್ಟಿನ ಮನೆ’, ‘ಕಾಲ’ (ಎರಡೂ ಕೃತಿಗಳ ಕನ್ನಡ ಅನುವಾದ ಬಿ.ಕೆ.ತಿಮ್ಮಪ್ಪ), ಎಸ್ ಸುರೇಂದ್ರ ನಾಥ್ ಅವರ ‘ಎನ್ನ ಭವದ ಕೇಡು’, ಅಶೋಕ ಹೆಗಡೆಯವರ ‘ಅಶ್ವಮೇಧ’ ಮುಂತಾದವು. ಕೃಷಿಯನ್ನು ನೆಚ್ಚಿ ಬದುಕಿದ ಕುಟುಂಬದ ಚಿತ್ರಣಕ್ಕಾಗಿ, ಹೆಂಗಳೆಯರೇ ಮನೆಯ ಜವಾಬ್ದಾರಿ ವಹಿಸಿಕೊಂಡು ನಿರ್ವಹಿಸುವ ಚಿತ್ರಣಕ್ಕಾಗಿ, ಯುವಕನೊಬ್ಬ ತನ್ನ ಬದುಕನ್ನು ರೂಪಿಸಿಕೊಂಡು ಬದುಕಿನಲ್ಲಿ ಮುಂದಕ್ಕೆ ಬರುವುದನ್ನು ಕಾಣಿಸಿದ್ದಕ್ಕಾಗಿ, ಕುಟುಂಬದ ನಡುವಣ ಆಸ್ತಿ-ಹಿಸ್ಸೆ ಮತ್ತು ತತ್ಸಂಬಂಧಿ ಗೋಟಾಳೆಗಳ ಚಿತ್ರಣಕ್ಕಾಗಿ ಅಥವಾ ಸಾಮಾನ್ಯನೊಬ್ಬನ ಬದುಕಿನಲ್ಲಿ ರಾಜಕೀಯ ಪ್ರತ್ಯಕ್ಷವಾಗಿ ತನ್ನ ಕಬಂಧ ಬಾಹುಗಳನ್ನು ಚಾಚುವುದರ ಚಿತ್ರಣಕ್ಕಾಗಿ ಈ ಕಾದಂಬರಿಗಳು ಎಲ್ಲೋ ಒಂದು ಕಡೆ ‘ಅಕಾಲ ಮಳೆ ಸುರಿದಾಗಿನ ಕಥೆ’ಯೊಂದಿಗೆ ತಳುಕು ಹಾಕಿಕೊಳ್ಳುವಂತಿವೆ. ಆದರೆ ಈ ಯಾವತ್ತೂ ಕಾದಂಬರಿಗಳ ಹರವು, ಪುಟಗಳಲ್ಲಿ ಮತ್ತು ವಿವರಗಳಲ್ಲಿ ಮಾತ್ರವಲ್ಲ, ಕಥಾನಕದ ಚಲನೆಯ ಲಯದ ಮಟ್ಟಿಗೆ ಕೂಡ ಭಿನ್ನವಾಗಿರುವುದು ಕಂಡು ಬರುತ್ತದೆ. ಇದು ತುಸುಮಟ್ಟಿಗೆ ಈ ಕಾದಂಬರಿಯ ಬಗ್ಗೆ ನಿರಾಸೆಯನ್ನೂ ಹುಟ್ಟಿಸುತ್ತದೆ. ಎಲ್ಲ ಒಳ್ಳೆಯ ಕೃತಿಗಳೂ ಬೇಗನೆ ಮುಗಿದು ಹೋಗುವುದು ನಮಗೆ ಇಷ್ಟವಿಲ್ಲ.

ಈ ಕಾದಂಬರಿಯಲ್ಲಿ ಬಹು ಮುಖ್ಯ ಎನಿಸಿದ ಎರಡು ಮೂರು ಸಂಗತಿಗಳನ್ನಷ್ಟೇ ಇಲ್ಲಿ ಹೇಳಿ ಉಳಿದವುಗಳನ್ನು ಓದುಗರೇ ಕಂಡುಕೊಳ್ಳಲು ಅವರಿಗೇ ಬಿಟ್ಟು ಬಿಡುವುದು ಸೂಕ್ತ.

ಒಂದು, ಕಾದಂಬರಿಯಲ್ಲಿ ಮೂಡಿದ ಒಂದು ತಾತ್ವಿಕತೆ. ಮೂಡಿಸಿದ ಅಲ್ಲ, ಸಹಜವಾಗಿ ಮೂಡಿದ ಎಂದು ಉದ್ದೇಶಪೂರ್ವಕವಾಗಿಯೇ ಹೇಳಿದೆ. ಇಲ್ಲಿ ಯಶವಂತ ಅಥವಾ ಅವನ ಮೂವರು ಹೆಮ್ಮಕ್ಕಳು, ಹೆಂಡತಿ ಸಹಿತವಾದ ಕುಟುಂಬ ತೀರ ಬಡತನದ ಸ್ಥಿತಿಯಲ್ಲಿದೆ. ಸರಿಯಾಗಿ ಹೊಟ್ಟೆಬಟ್ಟೆಗಿಲ್ಲದೇ, ಹರಕು ಬಟ್ಟೆ, ಚಪ್ಪಲಿ ಕೂಡ ಇಲ್ಲದ ಸ್ಥಿತಿಯಲ್ಲಿ ಅದೋ ಇದೋ ಯಾವುದಾದರೂ ಒಂದು ಎಂಬಂಥ ಆಯ್ಕೆಯಲ್ಲಿ ಬದುಕಿನ ಅತ್ಯಗತ್ಯ ವಸ್ತುಗಳಿಗೆ ಹಣ ಹೊಂದಿಸಬೇಕಾದ ಸ್ಥಿತಿ ಇವರದು. ಸಹಕಾರೀ ಬ್ಯಾಂಕಿನಲ್ಲಿ ಸುಮಾರು ಎರಡು ಲಕ್ಷ, ಊರ ಸಾಹುಕಾರನ ಬಳಿ ಸುಮಾರು ಅರವತ್ತು ಸಾವಿರ (ಅರ್ಧದಷ್ಟು ಬಡ್ಡಿ), ಬ್ಯಾಂಕಿನಲ್ಲಿ ಸುಮಾರು ಇಪ್ಪತ್ತು ಸಾವಿರ - ಹೀಗೆ ಸಾಲವಿದೆ. ಎರಡೆಕೆರೆ ಭೂಮಿ ಬಿತ್ತಿದ್ದಕ್ಕೆ, ದುಡಿದಿದ್ದಕ್ಕೆ ಸರಿಯಾಗಿ ಉತ್ಪತ್ತಿ ಕೊಡುತ್ತಿಲ್ಲ, ಕೊಟ್ಟರೂ ಒಂದಲ್ಲಾ ಒಂದು ಕಾರಣದಿಂದ ಅದು ದಕ್ಕುತ್ತಿಲ್ಲ. ಹತಾಶೆಯ ಅಂಚಿಗೆ ತಲುಪಿದಂತಿರುವ ಈ ಮಂದಿ ಒಂದು ಹೋತವನ್ನು ಒಂದೋ ಎರಡೋ ಸಾವಿರಕ್ಕೆ ಮಾರಿ ಕನಿಷ್ಠ ಮಾನ ಮುಚ್ಚಿಕೊಳ್ಳುವುದಕ್ಕೆ ಬೇಕಾದ ಬಟ್ಟೆಬರೆ ಕೊಂಡುಕೊಳ್ಳುವ ಯೋಚನೆಯಲ್ಲಿರುವಾಗಲೇ ಒಂದು ಕಂತ್ರಿ ನಾಯಿ ಅದನ್ನು ಕಚ್ಚಿ ಸಾಯಿಸುತ್ತದೆ. ಕೆರಳಿದ ಯಶವಂತ ಹೋತದ ಮೈತುಂಬ ಕ್ರಿಮಿನಾಶಕ ಚೆಲ್ಲಿ ಅದನ್ನು ಬಯಲಿಗೆ ಎಸೆದು ಬಿಡುತ್ತಾನೆ. ಮರುದಿನ ಬೆಳಿಗ್ಗೆ ಈ ವಿಷಪೂರಿತ ಹೋತವನ್ನು ತಿಂದ ನೂರಾರು ಕಾಗೆಗಳು, ಊರಿನ ನಾಲ್ಕೈದು ನಾಯಿಗಳು ಸತ್ತು ಬಿದ್ದು ಊರೆಲ್ಲಾ ಯಶವಂತನನ್ನು ಉಗಿಯುವಂತಾಗುತ್ತದೆ, ದ್ವೇಷಿಸುವಂತಾಗುತ್ತದೆ. ಇಷ್ಟು ಮಾತ್ರವಲ್ಲ, ಊರ ತುಂಬ ಕಾಗೆಗಳು ಸೇರಿಕೊಂಡು ಯಶವಂತನನ್ನು ಕುಕ್ಕಿ ಕುಕ್ಕಿ ಹಾಕಲು ಕಾಯುತ್ತ ಕೂರುತ್ತವೆ!

ಇನ್ನೊಬ್ಬ, ಸಯಾಜಿ, ಕದ್ದು ತಂದ ನಾಯಿಯ ಸಂತಾನ ಶಕ್ತಿಯನ್ನು ಅಮಾನುಷವಾಗಿ ಹರಣ ಮಾಡುತ್ತಾನೆ. ಆ ನಾಯಿ ಮರಿ ಸಾಧಾರಣದ್ದಲ್ಲ. ಅದರ ತಾಯಿ ಅಪಘಾತವೊಂದರಲ್ಲಿ ಸತ್ತಾಗ ಉಳಿದಿದ್ದ ಕಟ್ಟ ಕೊನೆಯ ಕುಡಿ ಅದು. ಕುರುಬರ ಮುದುಕಿಯೊಬ್ಬಳಿಗೆ ಬಹುತೇಕ ಜೀವನದ ಭದ್ರತೆಯನ್ನೇ ಒದಗಿಸಿದ್ದಂಥ ನಾಯಿಯ ಏಕೈಕ ಮರಿ. ಅದನ್ನೀತ ಕದ್ದು ತಂದ. ತಂದಾದರೂ ತಂದ, ಅದನ್ನು ಸರಿಯಾಗಿ ಬದುಕಲು ಬಿಡಲಿಲ್ಲ. ಅದರ ಸಂತಾನಶಕ್ತಿ ಹರಣ ಮಾಡಿದ. ಹತ್ತನೇ ತರಗತಿಯ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಮದುವೆಯಾಗುವ ಈ ಸಯಾಜಿ ಆ ಹುಡುಗಿಯನ್ನು ಬಲಾತ್ಕಾರದಿಂದ ಕೂಡಬೇಕೆನ್ನುವಾಗಲೆಲ್ಲ ಈ ನಾಯಿ ಅಳುತ್ತಿರುವಂತೆ ಊಳಿಟ್ಟು ಕಾಡತೊಡಗುತ್ತದೆ!

ಕಾಗೆ ಮತ್ತು ನಾಯಿಗಳು ಯಾವುದಕ್ಕೆಲ್ಲ ಸಂಕೇತ ಎನ್ನುವ ವಿಚಾರವೆಲ್ಲ ಬೇಡ. ಸೂಕ್ಷ್ಮವಾಗಿ ಬದುಕು-ಸಾವು-ಅಪರಕರ್ಮಗಳ ವರೆಗೆ ಇವು ಹೇಗೆಲ್ಲ ಮನುಷ್ಯನ ಬದುಕಿನೊಂದಿಗೆ ನಂಟು ಹೊಂದಿವೆ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತು. ದಿನಬೆಳಗಾದರೆ ನಾವು ಕಂಡೇ ಕಾಣುವ ಪ್ರಾಣಿ ಪಕ್ಷಿಗಳಿವು. ಇನ್ನು ಮಳೆಯ ಬಗ್ಗೆ ವಿವರಿಸಬೇಕಿಲ್ಲ. ಅದು ಅನ್ನ ಕೊಡುವ ಅಮೃತಧಾರೆಯೂ ಹೌದು, ಸುನಾಮಿಯಂತೆ ಎರಗಬಲ್ಲ ಮೃತ್ಯುವೂ ಹೌದು. ಅನ್ನ ನೀಡುವ ಭೂಮಿಗೂ ಹೆಣ್ಣಿಗೂ ಇರುವ ಪರಿಕಲ್ಪನೆಗಳೂ ನಮಗೆಲ್ಲ ಗೊತ್ತು. ಕಾದಂಬರಿ ಎಲ್ಲಿಯೂ ಇದನ್ನು ಸೂಚ್ಯವಾಗಿ ಕೂಡ ನಮಗೆ ಹೇಳುವ ಉದ್ದೇಶವನ್ನಿಟ್ಟುಕೊಳ್ಳದ ಲಯದಲ್ಲೆ ಒಂದು ಬದುಕನ್ನು, ಜೀವನ ಪ್ರವಾಹವನ್ನು ಚಿತ್ರಿಸುತ್ತ ಹೋಗುತ್ತದೆ. ಬೀಜ ಒಡೆದಿದ್ದು ಒಂದು ನಾಯಿಯದು, ಅದಕ್ಕೂ ಇನ್ಯಾವುದಕ್ಕೋ ಸಂಬಂಧ ಇದೆ ಎಂದವರಾರು ಎನ್ನುತ್ತ, ವಿಷವಿಟ್ಟ ಅನ್ನವನ್ನು ತಿನ್ನಲು ಕಾಗೆಗೆ ಆಮಂತ್ರಣ ನೀಡಿದವರಾರು, ಅದಾಗಿ ಅದು ತಿಂದು ಸತ್ತರೆ ಅದಕ್ಕೆ ಹೊಣೆಯಾರು ಎನ್ನುತ್ತಲೇ ಈ ಬದುಕು ತನ್ನ ಸುತ್ತಲಿನ ಪಕ್ಷಿ, ಪ್ರಾಣಿ, ಪರಿಸರ ಎಲ್ಲವಕ್ಕೂ ತೀರಿಸಬೇಕಾದ ಋಣಾನುಬಂಧ ಹೊಂದಿದೆ, ಸ್ವತಂತ್ರವಲ್ಲ ಈ ಬದುಕು, ಅದು ನಮಗೆ ತಿಳಿದ - ತಿಳಿಯದ ನೂರಾರು ಋಣಕ್ಕೆ, ಸಾಲಕ್ಕೆ, ಮರಳಿ ಕೊಡಬೇಕಾದ ಯಾವುದೋ ಸಂಬಂಧಕ್ಕೆ ಬದ್ಧವಾಗಿದೆ, ಸರಪಳಿಯೊಂದರ ಕೊಂಡಿಯಂತೆ ಪರಸ್ಪರ ಬಿಗಿದುಕೊಂಡಿದೆ ಎನ್ನುವುದನ್ನು ತೋರಿಸುತ್ತ ಸಾಗುತ್ತದೆ. ಬಹುಷಃ ಕಾದಂಬರಿಯ ಕೇಂದ್ರ ಪಾತ್ರ ಎಂದೇ ಹೇಳಬಹುದಾದ ಉಷೆಯ ಬದುಕು ಕೊನೆಗೂ ಕಾಣಿಸುವುದು ಇದನ್ನೇ. ಈ ಕಾವ್ಯದ ಗುಣ ಈ ಕಾದಂಬರಿಯ ಒಂದು ಬಹುಮುಖ್ಯ ಅಂಶ.

ಮೇಲ್ನೋಟಕ್ಕೆ ರೈತನ ಆತ್ಮಹತ್ಯೆಯಂಥ ಒಂದು ಎಳೆಯನ್ನೇ ಹಿಡಿದು ಹೊರಟಂತೆ ಕಾಣುವ ಕಾದಂಬರಿ ಇಂಥ ಯಾವುದೇ ‘ಮಿತಿ’ಯಾಗಿ ಬಿಡಬಲ್ಲ ಆಮಿಷಕ್ಕೆ ಒಳಗಾಗದೇ, ಕಾಲವನ್ನು, ಸಮಕಾಲೀನವಾಗುವುದಕ್ಕಿಂತ ಸಾರ್ವಕಾಲಿಕವಾಗುವ ಎಚ್ಚರವನ್ನು ಕಾಯ್ದುಕೊಂಡು ಸಾಗುತ್ತದೆ. ಹಾಗೆ ಈ ಕಾದಂಬರಿ ಪೂರ್ವನಿಶ್ಚಿತ ಗಮ್ಯಕ್ಕೆ ಬದಲಾಗಿ ಒಂದು ಊರು, ಒಂದು ಜೀವನ ಕ್ರಮ ಮತ್ತು ಒಂದು ಬದುಕಿನ ಚಿತ್ರಣವನ್ನೇ ನೆಚ್ಚಿ ನಿಲ್ಲುವುದು ಮೆಚ್ಚುಗೆಗೆ ಕಾರಣವಾಗುವ ಇನ್ನೊಂದು ಬಹುಮುಖ್ಯ ಅಂಶ. ಕೇವಲ ಚಿತ್ರಣವಲ್ಲ, ಸೂಕ್ಷ್ಮವಾದ ಅವಲೋಕನದಿಂದ ಹುಟ್ಟಿದ ಚಿತ್ರವಿದೆ ಇಲ್ಲಿ. ಕಾಣಿಸುವುದು ಕೇವಲ ಮಿಂಚಿ ಮರೆಯಾದಂತಿರುವ ಕೆಲವೇ ಕಿರುನೋಟಗಳಾದರೂ ಅವು ತೆರೆದಿಡುವ ವಿಶಾಲ ಭೂಮಿಕೆ ಓದುಗನ ಮನೋವೇದಿಕೆಯಿಂದ ಸುಲಭವಾಗಿ ನುಣುಚಿ ಹೋಗುವುದಿಲ್ಲ, ಮರೆಯಾಗುವುದೂ ಇಲ್ಲ.

ಈ ಊರಿನ ಮಂದಿ ಅಂತಃಕರಣವುಳ್ಳವರು, ಒಬ್ಬರ ನೋವಿಗೆ ಇನ್ನೊಬ್ಬರು ಮಿಡಿಯುವವರು. ಯಶವಂತನ ಹತಾಶೆ ಅವರಿಗೆ ಅರ್ಥವಾಗುತ್ತದೆ, ಪಾರ್ವತಿಯ ಕಷ್ಟಗಳು ಅವರಿಗೆ ತಿಳಿಯುತ್ತವೆ. ಅನಾಥರಾದ ಪೋರಿಯರ ಬಗ್ಗೆ ಅವರಲ್ಲಿ ಅನುತಾಪವಿದೆ. ಆದರೆ ಅದೇ ಜನ ದುಷ್ಟರು ಕೂಡ. ಇನ್ನೊಬ್ಬನ ಹೊಲಕ್ಕೆ ನೀರು ಕಡಿಮೆಯಾದೀತೆಂದು ತಾವು ಬೋರ್ ಹೊಡೆಸದೇ ಉಳಿಯುವವರಲ್ಲ. ಸಹಾನುಭೂತಿ ತೋರಿಸಲು ಮುಂದಾದರೆ ಅದು ಕಿಸೆಗೆ ಹೊರೆಯಾದೀತೆಂದು ಹೆದರುವವರು ಅವರು. ಮನೆಮಂದಿಯೇ ಆಸ್ತಿಪಾಸ್ತಿಯ ಮಾತು ಬಂದರೆ, ಸಾಲಕ್ಕೆ ತಲೆಕೊಡುವ ಪ್ರಸಂಗ ಬಂದರೆ ಸಂಬಂಧದ ಬಗ್ಗೆ ನಿಷ್ಠುರರು. ಆದರೆ ಹೃದಯದ ಭಾಷೆಗೆ ಮಿಡಿಯುತ್ತಾರೆ, ಒಂದಾಗುತ್ತಾರೆ. ಯಶವಂತನ ಹೃದಯದ ಮಿಡಿತ ಬಲ್ಲವಳು ಪಾರ್ವತಿ. ಪುಟ 67ರಲ್ಲಿ ಅವಳು ವಿಶ್ವಾಸನ ಬಳಿ ಆಡುವ ಎರಡೇ ಎರಡು ಮಾತು ಕಣ್ಣು ಹನಿಗೂಡಿಸುವಷ್ಟು ತೀವ್ರವಾದ, ಸೂಕ್ಷ್ಮವಾದ ಸಂವೇದನೆಗಳನ್ನುಂಟು ಮಾಡುವಷ್ಟು ಸಶಕ್ತವಾದ ಜೀವಂತಿಕೆಯನ್ನು ಪಡೆದು ಬಂದಿವೆ. ‘ಮನಸ್ಸಿನಾಗ ಏನು ಅದ, ಅದನ್ನು ಹೇಳಲಿಲ್ಲ’; ಆದರೆ ಪಾರ್ವತಿಗೆ ಅದು ಕೇಳಿಸಿದೆ. ಇದು ಗುಟ್ಟು, ಪ್ರೀತಿಯ, ಒಡನಾಟದ, ನಿಜವಾದ ಸಂಬಂಧದ ಗುಟ್ಟು. ಅಲ್ಲಿ ಮೌನ ಮಾತನಾಡುತ್ತದೆ, ತಿಳಿಯಬೇಕಾದ ಜೀವಕ್ಕೆ ಹೇಳದೇನೆ ಮನದ ಮಾತುಗಳೆಲ್ಲ ತಲುಪುತ್ತವೆ. ಊರ ಜನರ ದ್ವೇಷ, ಸಿಟ್ಟು, ಸಣ್ಣತನ, ಪ್ರೀತಿ, ಸಹಕಾರ, ಸಹಾಯಗಳು ಕೂಡ ಹೀಗೆಯೇ. ಅದಕ್ಕೊಂದು ಆಳವಿದೆ, ಹಿನ್ನೆಲೆಯಿದೆ. ಮಾತು-ಕೃತಿಯನ್ನು ಮೀರಿ ಅವರ ವ್ಯಕ್ತಿತ್ವದೊಂದಿಗೆ ಜೀವಕ್ಕೆ ಅಂಟಿದ ನಂಟು ಇದೆ; ಕಂಡವರು ಕಾಣಬಹುದಾದ ಆ ನಂಟು ಈ ಕಾದಂಬರಿಯಲ್ಲಿ ಕಾಣುತ್ತದೆ. ಇದಕ್ಕೆ ಹಿನ್ನೆಲೆಯಾಗಿ ನಮಗಿರುವುದು ಮಾತಿಲ್ಲದ, ನಾವು ಬಲ್ಲ ಭಾಷೆಯ ಹಂಗಿಲ್ಲದ ಕಾಗೆಗಳು, ನಾಯಿಗಳು, ಇಳೆ, ಬೆಳೆ ಎಲ್ಲವೂ. ಹಾಗೆಯೇ ಪುಟ 120ರಲ್ಲಿ ಉಷಾ ಸತ್ತ ತಾಯಿಯೊಂದಿಗೆ ಆಡುವ ಮಾತುಗಳು ಕೂಡ ಹೃದಯದ ಸಂಬಂಧದೆದುರು ಸಾವನ್ನು ಮಣಿಸುವಷ್ಟು ತೀವ್ರವಾಗಿವೆ. ಹೀಗೆ ಈ ಕಾದಂಬರಿ ಅಜೆಂಡಾಗಳಿಗೆ ಮರುಳಾಗುವ ಅಪಾಯಗಳಿಂದ ಸಹಜವಾಗಿ ದೂರವುಳಿದು ಮೈತಳೆದ ಬಗ್ಗೆ ಮೂಡುವ ಗೌರವ ಅಷ್ಟಿಷ್ಟಲ್ಲ.

ಇಡೀ ಕಾದಂಬರಿ ಹೆಚ್ಚೆಂದರೆ ಒಂದು ವಾರದ ‘ಕಾಲ ವ್ಯಾಪ್ತಿ’ಯನ್ನುಳ್ಳದ್ದು. ಒಂದು ಪುಟ್ಟ ಕುಟುಂಬ ಅದರ ಪಾತಳಿ. ಆದರೆ ಅದು ಚಾಚಿಕೊಳ್ಳುವುದು ಇಡೀ ಬದುಕಿಗೆ. ಅದು ಎಷ್ಟು ತೀವ್ರವಾಗಿ ಚಾಚಿಕೊಳ್ಳುತ್ತದೆ ಮತ್ತು ಎಷ್ಟು ಆಳವಾಗಿ ವ್ಯಾಪಿಸುತ್ತದೆ ಎಂದರೆ ಈ ಕಾದಂಬರಿಯ ಒಂದೊಂದು ಪಾತ್ರವೂ ನಮಗೆ ನಿನ್ನೆ ಮೊನ್ನೆ ಇಲ್ಲೇ ಒಟ್ಟಿಗೇ ಒಡನಾಡಿದ ಜೀವಗಳೋ ಎಂಬಷ್ಟು ಸಹಜವಾಗಿ, ಜೀವಂತವಾಗಿ ಮನದೊಳಕ್ಕೆ ಇಳಿದು ನಿಲ್ಲುತ್ತವೆ. ಇದು ನಿಜವಾಗಿ ಒಂದು ಕಾದಂಬರಿ ಸಾಧಿಸಬೇಕಾದ ಹದ. ಅದನ್ನು ಈ ಕೃತಿ ನಿರಾಯಾಸ ಸಾಧಿಸಿದೆ.

ಕನ್ನಡದಲ್ಲಿ ಈ ಕಾದಂಬರಿಯನ್ನು ನಿಜ ಅರ್ಥದಲ್ಲಿ ಅನು-ವಾದಿಸಿದ್ದಾರೆ, ಅನುಸಂಧಾನಗೊಳಿಸಿದ್ದಾರೆ ಚಂದ್ರಕಾಂತ ಪೋಕಳೆಯವರು. ಆನಂದ ವಿಂಗಕರ ಅವರೊಂದಿಗೆ ಇವರೂ ಅಭಿನಂದನಾರ್ಹರು.

No comments: