Monday, October 6, 2014

ಸಂತೆಯೊಳಗಿನ ಸೃಜನಶೀಲ ಅಂಶಗಳು

ಅಯ್ಯೋ ಮುಗಿದು ಹೋಯಿತಲ್ಲ ಎಂದು ಅನಿಸುವಂತೆ ಮಾಡುವ ಕೃತಿಗಳು ಅಪರೂಪ. ಆತ್ಮಚರಿತ್ರೆಯ ಛಾಯೆಯುಳ್ಳ, ಅದರಲ್ಲೂ ವೃತ್ತಿಜೀವನದ ಕುರಿತೇ ಹೇಳುತ್ತಿರುವ ಒಂದು ಕೃತಿಯಂತೂ ಅಂಥ ಅನುಭವ ಕೊಡುವ ಸಂಭವ ತೀರ ಕಡಿಮೆ. ಇದಕ್ಕೆ ಅಪವಾದದಂತಿದೆ ಶ್ರೀನಿವಾಸ ವೈದ್ಯರ "ಇನ್ನೊಂದು ಸಂತೆ" ಪುಸ್ತಕ.

ಇನ್ನಷ್ಟು ಪುಟಗಳಿರಬಾರದಿತ್ತೇ, ಮತ್ತೊಂದಿಷ್ಟು ವಿವರಗಳು ಇರಬಾರದಿತ್ತೇ, ಆತ್ಮಚರಿತ್ರೆಯಂಥ ಕೃತಿಯೊಂದು ನೂರು ಪುಟಗಳನ್ನೂ ದಾಟದೆ ಮುಗಿಯುತ್ತಿದೆಯಲ್ಲ ಎಂಬ ಹಳಹಳಿಕೆಯನ್ನು ನಮ್ಮಲ್ಲಿ ಹುಟ್ಟಿಸುತ್ತಲೇ ಹೀಗೆ ‘ಮುಕ್ತಕತೆ’ಗಳನ್ನು ಅಲ್ಲಲ್ಲಿ ಹಾಗೆಯೇ ಉಳಿಸಿ ಬಿಟ್ಟಿರುವ, "ಎಲ್ಲ ಕತೆಗಳೂ ಮುಕ್ತಕತೆಗಳೇ, ಬದುಕೇ ಒಂದು ಮುಕ್ತಕತೆ" ಎನ್ನುವ ವೈದ್ಯರು ಇದನ್ನು ಉದ್ದೇಶಪೂರ್ವಕವಾಗಿಯೇ ಹೀಗೆ ಹೆಣೆದಿದ್ದಾರೆಯೇ ಎನ್ನುವ ಅನುಮಾನಗಳನ್ನೂ ಹುಟ್ಟಿಸುತ್ತಾರೆ.

ಚುಟುಕಾಗಿ ಹೇಳಿಬಿಡುವ ಒತ್ತಡದಲ್ಲೋ ಎಂಬಂತೆ ಕೆಲವೊಂದು ಕಡೆ ಇರಬೇಕಿತ್ತು ಎನಿಸುವ ವಿವರಗಳನ್ನೂ ಮೊಟಕುಗೊಳಿಸಿ ಸಾಗುವ ಈ ಸಂತೆಯೊಳಗಿನ ಸುಳಿದಾಟ ಹಲವಾರು ರೂಪಕಗಳ ಸಂರಚನೆಯಿಂದಲೂ ಅಚ್ಚರಿ ಹುಟ್ಟಿಸುವಂತಿರುವುದು ಗಮನಾರ್ಹವಾದ ಅಂಶ. ಸೃಜನಶೀಲ ಕೃತಿಯೊಂದು ಹೇಗಿರಬೇಕು ಎನ್ನುವುದನ್ನು ಸೂಚ್ಯವಾಗಿ ಕಾಣಿಸುವ ಮಾರ್ಗದರ್ಶಕ ಗುಣಗಳು ಈ ಕೃತಿಗೆ ಅಂಟುವುದು ಹೀಗೆ. ಅನಾಥಪ್ರಜ್ಞೆಯಿಂದ ಮುಂಬಯಿಯ ಚೌಪಾಟಿಯಲ್ಲಿ ಸಂಜೆ ಹೊತ್ತು ಮುಸುಮುಸು ಅಳುತ್ತ ಕುಳಿತ ಎಂ.ಎ. ಕಲಿತ, ಇಪ್ಪತ್ತೆರಡು ವರ್ಷದ ತರುಣ ಒಂದು ರೂಪಕವಾಗಿ ವೈದ್ಯರ ಮನದಲ್ಲಿ ನಿಂತುಬಿಟ್ಟಂತೆಯೇ ಒಂದು ತಲೆಮಾರಿನ ಎಲ್ಲ ಹುಡುಗರ ರೂಪಕ ಕೂಡ. ಇಂಥ ಹಲವಾರು ರೂಪಕಗಳು ಈ ಕೃತಿಯುದ್ದಕ್ಕೂ ನಮಗೆ ಸಿಗುತ್ತಲೇ ಹೋಗುತ್ತವೆ ಮಾತ್ರವಲ್ಲ ನಮಗೂ ವೈದ್ಯರಿಗೂ ಸಮಾನವಾದದ್ದರ ನೇಯ್ಗೆಯನ್ನು ಕೂಡ ನೇಯುತ್ತಲೇ ಹೋಗುತ್ತವೆ! ದೇಶ ವಿಭಜನೆಯಲ್ಲಿ ಕಳೆದುಕೊಂಡ ತನ್ನ ಪ್ರೇಯಸಿಯ ಹುಡುಕಾಟದಲ್ಲಿರುವ ಅಬ್ದುಲ್ ವಹೀದಖಾನ, ಆಗೊಮ್ಮೆ ಈಗೊಮ್ಮೆ ಕನಸಿನಲ್ಲಿ ಬಂದು "ಬುದ್ದು" ಎಂದು ಲೇವಡಿ ಮಾಡುವ ಆ ಚೆಲುವೆ, ಕರುಣೆಯನ್ನಷ್ಟೇ ಹುಟ್ಟಿಸಬಲ್ಲ ರಾನಡೆ ರೋಡಿನ ‘ಪೀಡೆ’, ಭರ್ಜರಿ ಕಾರಿನಲ್ಲಿ ಓಡಾಡುವ ಮಾಜಿ ಮಹರಾಜನೊಬ್ಬ ತನ್ನ ಬೆಲೆಬಾಳುವ ಬಟ್ಟೆಯ ಪರಿವೆಯಿಲ್ಲದೇ ನೆಲಕ್ಕೆ ಕೂತು ತರಕಾರಿಯವರ ಹತ್ತಿರ ನಾಲ್ಕೆಂಟಾಣೆಗಳಿಗೆಲ್ಲ ಚೌಕಾಶಿ ಮಾಡುತ್ತಿರುವ ಚಿತ್ರವನ್ನೇ ವೈದ್ಯರ ಮನಸ್ಸಿನಲ್ಲಿ ಉಳಿಸಿಬಿಟ್ಟ ಪರಿ, ಇಪ್ಪತ್ತು ವರ್ಷಗಳ ನಂತರ ಭೇಟಿಯಾಗುವ ಮುಕ್ತಕತೆಯ ಲೀನಾ ಹುಟ್ಟಿಸುವ ತಲ್ಲಣಗಳು, ಕೊನೆಗೂ ತನ್ನ ಕುಡುಕ ಮಗನ ಸಾಲ ತೀರಿಸಿದ ಅಪ್ಪ ರಂಗಾ ಪಾಟೀಲನ ಅನೂಹ್ಯ ಭವಿಷ್ಯ, ದುಡ್ಡಿನಂಥ ದುಡ್ಡನ್ನೇ ಅಪಾಯಕರವೆಂದ ಕೆ ವಿ ಸುಬ್ಬಣ್ಣ, ವಾಘಾ ಬಾರ್ಡರಿನಲ್ಲಿ ಮಿಡಿಯುವ ಭಾವನೆಗಳ ತಂತುಗಳು ನಿರ್ಮಿಸಿದ ಬೇಲಿಯಾಚೆ ಮುಳುಗುವ ವಿಷಣ್ಣ ಸಂಜೆ - ಹೀಗೆ ಈ ಕಥಾನಕಗಳು ಕೇವಲ ವಿವರಗಳಲ್ಲಿ ಮೂಡಿದುದಷ್ಟೇ ಆಗಿ ಉಳಿಯಲಾರದ, ಅದರೊಂದಿಗೇ ಮುಗಿಯಲಾರದ, ಓದಿದವರು ಓದಿನೊಂದಿಗೇ ಮರೆಯಲಾಗದ ರೂಪಕಗಳಾಗಿ ಮೈತಳೆಯುತ್ತವೆ, ಕಾಡುತ್ತವೆ. ಒಂದು ಜೀವನ ಮೌಲ್ಯವನ್ನೋ, ಬದುಕಿನ ದರ್ಶನವನ್ನೋ ಛಕ್ ಎಂದು ಹೊಳೆಯಿಸಿ ಬಿಡಬಲ್ಲ ವಿವರಗಳಾಗಿ ಬೆಳೆದು ನಿಲ್ಲುತ್ತವೆ. ಬರವಣಿಗೆಯ ಹಲವು ಪಾಠಗಳು ಇಲ್ಲಿವೆ. ದಾರಿ ಹೇಳಿದ ಮೇಲೂ ಕಂಡಕಂಡವರನ್ನು "ಮಲಾ ಪಂಢರಾಪುರಲಾ ಜಾಯಿಚ ಅಹೆಹೋ,ಕಸ ಜಾಯಿಚ ಕುಣಿತರೀ ಸಾಂಗಾನಾ?" ಎನ್ನುವ ವೃದ್ಧನ ಹಪಹಪಿಯಂತೂ ಬದುಕಿಗೆ ಒಡ್ಡುವ ಭಾಷ್ಯದಂತಿದೆ.

ಹಾಗೆಯೇ ಕೆಲವೊಂದು ಘಟನೆಗಳು ಕೂಡ. ಅವು ಅಂಥ ಮಹತ್ವದ್ದಲ್ಲ ಎನಿಸುವಾಗಲೂ, ವೈದ್ಯರೂ ಅದನ್ನು ಮೆಲೊಡ್ರಾಮಕ್ಕೇರಿಸದೆ ಚುಟುಕಾಗಿ ಹೇಳಿ ಮುಗಿಸಿ ಮುಂದೆ ಸಾಗಿದಾಗಲೂ ಅವೆಲ್ಲ ಬಹುಕಾಲ ನಮ್ಮ ಮನಕಲಕಬಲ್ಲ, ವಾಸ್ತವ ದರ್ಶನ ಮಾಡಬಲ್ಲ ಕಸುವನ್ನು ಹೊಂದಿದ್ದು ನಮ್ಮನ್ನು ಬದುಕಿನ ಗಾಢ ಅನುಭವಗಳ ಎದುರು ಮುಖಾಮುಖಿ ನಿಲ್ಲಿಸುವಂತಿವೆ. ಎಳೆಯ ಪ್ರಾಯದ ವಿಧವೆಗೆ ಮೃತನ ಹಣ ವಹಿಸುವ ಸನ್ನಿವೇಶ, ಅಂದು ಯಾರೋ ವಿಧವೆ ನುಡಿದ "ಈ ವಯಸ್ಸಿನಾಗ ಇಜ್ಜೋಡ ಆಗಬಾರದ್ರೀ ವೈದ್ಯರ..." ಎಂದ ಮಾತು ಕಾಡತೊಡಗುವ ಇಂದಿನ ವರ್ತಮಾನದ ಕ್ಷಣ, ಇಬ್ರಾಹಿಂ ಸೇಟ ಮತ್ತು ಅವರ ಪಾರ್ಸಿ ಹೆಂಡತಿ ಲಿಲಿ, ಅಮೆರಿಕೆ ಇನ್ನು ಸಾಕು ಎಂದು ಇಲ್ಲೇ ನೆಲೆಯಾಗಲು ಬಂದ ವೃದ್ಧ ದಂಪತಿಗಳು ಮತ್ತೆ ಅಮೆರಿಕೆಗೇ ಮರಳಲು ಕಾರಣವಾದ, ವೈದ್ಯರು ವಿವರಿಸದೇ ಬಿಟ್ಟ ಘಟನೆಗಳ ಸರಮಾಲೆ, Spoken English Classesಗೆ ತಮ್ಮ ತಮ್ಮ ಹೆಂಡಂದಿರನ್ನು ಕಳಿಸಲು ಕಾರಣವಾದ ಘಟನೆ - ಹೇಳುವುದು ಕಡಿಮೆ, ಕಾಣಿಸುವುದು ಹೆಚ್ಚು.

ವೈದ್ಯರಿಗೆ ಸಹಜವಾಗಿ ಬಿಟ್ಟ ತಿಳಿ ಹಾಸ್ಯದ ನಿರೂಪಣೆ ಇಡೀ ಬರವಣಿಗೆಯನ್ನು ಲವಲವಿಕೆಯಿಂದಿರುವಂತೆ, ಜೀವಕಳೆಯಿಂದ ಪುಟಿಯುತ್ತಿರುವಂತೆ ಇರಿಸಿದೆ. ಪ್ರಮಿಳೆ ಬರುವ ದಿನ, ಸತ್ಯನಾರಾಯಣ ವ್ರತದ ಖುರ್ಷಿದ ತವಾಡಿಯಾ, ಅನಮೋಡದಲ್ಲಿಯ "ಮ್ಹಾಳಸಾ ಪ್ರಸನ್ನ"ದ ಅಕ್ಕಿ ಉಪ್ಪಿಟ್ಟು, ಪುಣೆಯ ಫರ್ಗ್ಯೂಸನ್ ಕಾಲೇಜು ರೋಡಿನ ಹುಡುಗಿಯರನ್ನು ಕಾಣದ ಜನ್ಮ ವ್ಯರ್ಥವಾಯಿತೆನ್ನಿಸುವಂತೆ ಮಾಡುವ ವೈದ್ಯರ ಕುಶಾಲು, ಸಬರಮತಿ ಆಶ್ರಮ ಮತ್ತು ಮುದುಕಿಯ ಪೊರಕೆ ಸೇವೆ - ರಘುಪತಿ ರಾಘವ ಮತ್ತು ಚೋಲೀಕೆ ಪೀಚೆ ಕ್ಯಾ ಹೈ... ಗಳನ್ನು ಜೊತೆಗೇ ಕಾಣಿಸುವ ವಾಸ್ತವ, ನಾಕುತಂತಿಯ ಕವನ ವಿವರಿಸಿದ ಕುರ್ತುಕೋಟಿ ಮತ್ತು ಬೇಂದ್ರೆ, ಕಾಲ ನಿಲ್ಲುವುದಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡುವ ಗಿರಿಜಾಳ ಮರುಭೇಟಿ - ಹೀಗೆ ಚುರುಕಾಗಿ ಸಂತೆಯೊಳಗಿನ ನೂರು ಅಂಗಡಿಗಳ ಥಳುಕು ಬಳುಕು ಝಗಮಗಿಸಿ ಬದುಕಿನ ಒಂದು ವಿಶ್ವರೂಪವನ್ನೇ ತೆರೆದು ತೋರಿಸುವ ವೈದ್ಯರು ಏನೂ ಕೊಡಿಸುವುದಿಲ್ಲ, ಸುಮ್ಮನೇ ಒಂದು ಸುತ್ತು ಹಾಕಿ ಬರೋದಷ್ಟೇ ಎನ್ನುತ್ತಲೇ ಕೊಟ್ಟಿರುವುದು ಸಮೃದ್ಧವಾಗಿದೆ. ಹಾಗಾಗಿ ಇದೊಂದು ಓದಲೇ ಬೇಕಾದ ಅಮೂಲ್ಯ ಪುಸ್ತಕವಾಗಿ ನಿಲ್ಲುತ್ತದೆ.

No comments: