Monday, December 8, 2014

ಸಿಲೋನ್ ಸುಶೀಲಾ ಹಾವಾಡಿಗ ಮೀಸೆ ಹೆಂಗಸು ಮತ್ತು ಇತರರು

"ಸಿಲೋನ್ ಸುಶೀಲಾ ಹಾವಾಡಿಗ ಮೀಸೆ ಹೆಂಗಸು ಮತ್ತು ಇತರರು" ಇದು ಉಮಾ ರಾವ್ ಅವರ ಕಥಾಸಂಕಲನದ ಹೆಸರು. ನುಡಿ ಪ್ರಕಾಶನ 2010ರಲ್ಲಿ ಹೊರತಂದಿರುವ ಈ ಕಥಾಸಂಕಲನಕ್ಕೆ ಎಚ್‌.ವಿ.ಸಾವಿತ್ರಮ್ಮ ಪ್ರಶಸ್ತಿಯೂ ಬಂದಿದೆ. ಕಥಾಸಂಕಲನದ ಹೆಚ್ಚಿನ ಕತೆಗಳು ಈ ಶೀರ್ಷಿಕೆಯಷ್ಟು ದೀರ್ಘವಾಗಿರದೆ ಚುಟುಕಾಗಿ ಓದಿಸಿಕೊಂಡು ಮನಸ್ಸಿಗೂ ಮೆದುಳಿಗೂ ಮುದ ನೀಡುವಂತಿವೆ.

ಚುಟುಕಾಗಿ ಹೇಳಿಬಿಡುವುದರಲ್ಲಿ ಕೆಲವೊಂದು ಅನುಕೂಲಗಳೂ ಇವೆ, ಸವಾಲುಗಳೂ ಇವೆ. ಕೆಲವೊಂದು ಕತೆಗಳನ್ನು ಹಾಗಲ್ಲದೇ ಬೇರೆ ರೀತಿಯಾಗಿ ಹೇಳುವುದಕ್ಕೆ ಸಾಧ್ಯವೇ ಇರುವುದಿಲ್ಲ ಕೂಡ. ಆದರೆ ಉಮಾ ರಾವ್ ಅವರ "ವನಜಮ್ಮನ ಸೀಟು" ಕಾದಂಬರಿಯನ್ನೂ "ಸಿಲೋನ್ ಸುಶೀಲಾ" ಸಂಕಲನದ ಕತೆಗಳನ್ನೂ ಜೊತೆಗಿರಿಸಿ ನೋಡಿದಾಗ ಉಮಾ ರಾವ್ ಅವರ ಒಟ್ಟಾರೆ ಶೈಲಿಯಲ್ಲಿಯೇ ಈ ಬಗೆಯ ಚುಟುಕುತನವೊಂದು ಮೇಲುಗೈ ಸಾಧಿಸಿರುವುದು ಕಂಡು ಬರುತ್ತದೆ.

ಈ ಸಂಕಲನದ ಎರಡು ಭಾಗಗಳಲ್ಲಿ ಮೊದಲ ಭಾಗದ ಕತೆಗಳೆಲ್ಲವೂ ಚುಟುಕು ಕತೆಗಳೇ. ಬರವಣಿಗೆಯಲ್ಲಿ ಹೆಚ್ಚೆಂದರೆ ಎರಡು ಪುಟಗಳಾಚೆ ಇವು ಚಾಚಿಕೊಂಡಿಲ್ಲ. ಎರಡನೆಯ ಭಾಗದ ಕತೆಗಳು ನಾವು ಸಾಮಾನ್ಯವಾಗಿ ಸಣ್ಣಕತೆಗಳೆಂದು ಒಪ್ಪಿಕೊಂಡ ಗಾತ್ರದಲ್ಲಿವೆ. ಆದರೆ ಗಾತ್ರ ಒಂದು ಕತೆಯ ಯಶಸ್ಸು/ಸೋಲು ನಿರ್ಧರಿಸುವ ಸಂಗತಿಯಲ್ಲ. ಪುಟ್ಟ ಕತೆ ಕೂಡ ಸವಿವರ ಕತೆಯೊಂದರೆ ಗಾಢ ಮನೋಭೂಮಿಕೆಯನ್ನೇ ನಿರ್ಮಿಸಿಕೊಡುವುದು ಸಾಧ್ಯವಿದೆ. ಮೊದಲ ಭಾಗದ ಕೆಲವೊಂದು ಕತೆಗಳಲ್ಲಿ ಉಮಾ ರಾವ್ ಇದನ್ನು ಸಾಧಿಸುತ್ತಾರೆ.

ಆದರೆ ಚುಟುಕಾಗಿ ಹೇಳುವುದೇ ನಿರ್ಧಾರವಾಗಿ ಬಿಟ್ಟಾಗ, ‘ಹೀಗೆಯೇ ಹೇಳಿಸಿಕೊಳ್ಳಬೇಕಾದ’ ಕತೆ ಅದಲ್ಲದಿರುವಾಗಲೂ ಅವರು ಕೆಲವೊಂದು ಪುಟ್ಟದಾಗಿ ಹೇಳಿ ‘ಮುಗಿಸುವ’ (ಒಮ್ಮೆ ಅವುಗಳಿಂದ ಕಳಚಿಕೊಳ್ಳುವ?!) ಕಡೆಗೇ ಒಲವು ತೋರಿಸಿರುವುದು ಕೊಂಚ ಮಟ್ಟಿಗೆ ನಿರಾಸೆ ಹುಟ್ಟಿಸುತ್ತದೆ. ನಿರಾಸೆ ಏಕೆಂದರೆ, ಉಮಾ ರಾವ್ ಅವರಲ್ಲಿ ಬಾಲ್ಯದ, ತಮ್ಮ ಪುಟ್ಟ ಊರಿನಂಥ ಊರಿನ ನಿಬಿಡ ನೆನಪುಗಳ ಉಗ್ರಾಣವೇ ಇರುವುದು ನಿಚ್ಚಳವಾಗಿ ಅರಿವಿಗೆ ಬರುವಂತಿದೆ. ಅವರ "ವನಜಮ್ಮನ ಸೀಟು" ಕಾದಂಬರಿಯಲ್ಲಾಗಲೀ, ಈ ಸಂಕಲನದ ಹಲವಾರು ಪುಟ್ಟ ಕತೆಗಳಲ್ಲಾಗಲೀ ಹೀಗೆ ಬಂದು ಹಾಗೆ ಹೋಗುವ ಪಾತ್ರಗಳು ಬರೇ ಪಾತ್ರಗಳಾಗಿ ಉಳಿಯದ ಜೀವಂತ ವ್ಯಕ್ತಿಗಳಾಗಿ ಮೂಡಿಬಂದಿರುವುದು ಸುಳ್ಳಲ್ಲ. ಇವರೆಲ್ಲ ಸುದೀರ್ಘ ಕಥಾನಕವೊಂದರ, ಕಥಾಜಗತ್ತೊಂದರ ಅಂಗಾಂಗಗಳಾಗಿ ಸಶಕ್ತವೂ ಜೀವಂತವೂ ಆದ ಒಂದು ವಾತಾವರಣವನ್ನು ನಿರ್ಮಿಸಬಲ್ಲವರು. ಹೀಗೆ ಸುಮ್ಮನೇ ಹನಿಗಳಲ್ಲಿ, ಮೊಟಕುಗೊಂಡ ವಿವರಗಳಲ್ಲಿ ನಮಗೆ ಪೂರ್ತಿಯಾಗಿ ದಕ್ಕದೇ ಹೋಗುತ್ತಿರುವ ಅರಿವು ಹುಟ್ಟಿಸುವ ನಿರಾಸೆಯದು.

ಈ ಸಂಕಲನದ "ಅಂಗಡಿ ಮನೆ", "ಗುದ್ದು", "ನಗು", "ಮಬ್ಬು", "ಮೂಲೆಮನೆ", "ಲಿಟ್ಲ್ ಇಟಲಿ", "ಸಿಲೋನ್ ಸುಶೀಲಾ", "ಹಕ್ಕಿ", "ಘಲ್ ಘಲ್ ಘಲ್" ಕತೆಗಳು ಇಂಥ ನಿರಾಸೆಯನ್ನು ಹುಟ್ಟಿಸುವಂಥ, ಅಂಥ ನಿರಾಸೆಯ ಹೊರತಾಗಿ ನಿಜಕ್ಕೂ ಅದ್ಭುತವಾದ ಕತೆಗಳು. ಈ ಯಾವತ್ತೂ ಕತೆಗಳು ಉಮಾ ರಾವ್ ಅವರ ನಿರೂಪಣೆಯೊಂದಿಗೆ ಮುಗಿಯುವುದು ಶಕ್ಯವೇ ಇಲ್ಲ. ಇವು ಮನಸ್ಸಿನಲ್ಲಿ ಉಳಿಯುತ್ತವೆ, ಕಾಡುತ್ತವೆ, ಕೆಣಕುತ್ತವೆ ಮತ್ತು ಉಮಾ ರಾವ್ ನಮಗೆ ಹೇಳದೇ ಉಳಿಸಿಕೊಂಡಿರುವ ವಿವರಗಳ ಬಗ್ಗೆ ಸಿಟ್ಟು ಬರುವಂತೆಯೂ ಮಾಡುತ್ತವೆ. ಈ ಕತೆಗಳಿಗೆ ಮಿನಿಕತೆಗಳ ಚೌಕಟ್ಟು ಅದಾಗಿಯೇ ಹೊಂದುತ್ತಿಲ್ಲ, ಹೊಂದಿಸಲಾಗಿದೆ ಅಷ್ಟೆ.

ಆದರೆ ಗಹನವಾಗಿದ್ದೂ ಚುಟುಕಾಗಿ ಹೇಳಿರುವುದರಿಂದಲೇ ಪರಿಣಾಮಕಾರಿಯಾಗಿರುವ ಹಲವಾರು ಕತೆಗಳೂ ಈ ಸಂಕಲನದಲ್ಲಿವೆ. "ಹಾತೂನಿಕಾ ಎಂಬ ಕನಸು", "ಹಗುರ", "ಕಪ್ಪು ಬ್ರಾ", "ಚಾರ್ಲಿ", "ಮಂಜು", "ಬ್ಯೂಟಿ ಪಾರ್ಲರಿನಲ್ಲೊಂದು ಮಧ್ಯಾಹ್ನ", "ಮೀಸೆ ಹೆಂಗಸು" ಕತೆಗಳನ್ನು ಬಹುಷಃ ಹೀಗಲ್ಲದೇ ಬೇರೆ ರೀತಿ ಹೇಳುವುದು ಸಾಧ್ಯವಿರಲಿಲ್ಲ ಎನಿಸುತ್ತದೆ. ಇಲ್ಲಿಯೂ "ಮೀಸೆ ಹೆಂಗಸು" ಕತೆ ಹೆಚ್ಚು ಗಾಢವಾದ ಅನುಭವವನ್ನು ತನ್ನಲ್ಲಿರಿಸಿಕೊಂಡಿರುವ, ಸಶಕ್ತವಾಗಿ ಅದನ್ನು ಓದುಗರಿಗೆ ದಾಟಿಸಿದ ಕತೆ.

‘ಕಾಲ ಪ್ರಜ್ಞೆ’ಕೂಡ ಉಮಾ ರಾವ್ ಅವರ ಈ ಸಂಕಲನದ ಹೆಚ್ಚಿನ ಕತೆಗಳಲ್ಲಿ ಎದ್ದು ಕಾಣುವ ಬಹುಮುಖ್ಯ ಅಂಶ. ಉಮಾ ರಾವ್ ಆಯ್ದುಕೊಂಡ ವಸ್ತುವಿನ ಹರಹು ಸಣ್ಣಕತೆಯ ಕ್ಯಾನ್ವಾಸಿಗೇ ದೊಡ್ಡದೆನಿಸುವಂಥದ್ದು. ಹಾಗಿರುವಾಗ ಪುಟ್ಟಕತೆಗಂತೂ ಕೆಲವೊಮ್ಮೆ ಹೊರಲಾಗದ ಭಾರ. ಒಂದಿಡೀ ಬದುಕಿನ ಹಿನ್ನೋಟ, ಕೆಲವೊಮ್ಮೆ ತಲೆಮಾರುಗಳ ನಂತರದ ಹಿನ್ನೋಟ ಇಲ್ಲಿದೆ. ಹೀಗಾಗಿ ಕಾಲವನ್ನು ದಾಪುಗಾಲಲ್ಲಿ, ಕೆಲವೊಮ್ಮೆ ಹಾರಿಕೊಂಡೇ ಹಾಯುವುದು ಅನಿವಾರ್ಯವಾಗುತ್ತದೆ. ಹೀಗಾದಾಗಲೆಲ್ಲ ಕತೆಯೊಳಗಿನ ‘ಕ್ಷಣ’ಗಳು ಕೈತಪ್ಪುತ್ತವೆ. ಕಥಾನಕದ ಹಂಗು ನೀಗಿಕೊಂಡ ಬಳಿಕ ಬಂದ ಸಣ್ಣಕತೆಗಳನ್ನು ಗಮನಿಸಿದರೆ ಸಾಮಾನ್ಯವಾಗಿ ಈ ಸಣ್ಣಕತೆಗಳು ಸ್ಥಿರಗೊಂಡ ಒಂದು ಕ್ಷಣ (ಸಂವೇದನೆ, ಭಾವ, ನೆನಪು) ವನ್ನೇ ಧ್ಯಾನಿಸಿ ರಚನೆಗೊಳ್ಳುವುದು ಹೆಚ್ಚು. ಗಂಟೆಗಳ, ದಿನಗಳ ಕತೆಗಳು ಮತ್ತಷ್ಟು. ವರ್ಷಗಳದ್ದಿವೆ. ಆದರೆ ಬದುಕನ್ನೇ ಕಟ್ಟಿಕೊಡುವ, ತಲೆಮಾರುಗಳ ಇತಿಹಾಸವನ್ನು ಬಗೆಯುವ ಸಣ್ಣಕತೆಗಳು ಎಷ್ಟೇ ವಿವರಗಳೊಂದಿಗೆ, ಸಶಕ್ತವಾಗಿ ಮೂಡಿಬಂದರೂ ಅವು ತಮ್ಮ ಮೇಲೆ ಕಾದಂಬರಿಗಳ ನೆರಳಿನ ಭಾರ ಬೀಳದಂತೆ ತಪ್ಪಿಸಿಕೊಳ್ಳುವುದು ಕಷ್ಟ. ಉಮಾ ರಾವ್ ಅವರ ಇಲ್ಲಿನ ಕೆಲವು ಕತೆಗಳೂ ಈ ಸವಾಲನ್ನು ಎದುರಿಸಿವೆ.

ಉಮಾ ರಾವ್ ಅವರು ವಸ್ತುವನ್ನು ನಿರ್ವಹಿಸುವ ರೀತಿ, ಅದು ಚುಟುಕಾದ ಕತೆಯಿರಲಿ, ಕೊಂಚ ದೀರ್ಘವಾದ ಕತೆಯಿರಲಿ, ಗಮನಾರ್ಹವಾಗಿದೆ. ಅವರಿಲ್ಲಿ ನೇರವಾಗಿ ಅಜೆಂಡಾ ಇರುವ ಕತೆಗಳನ್ನು ಬರೆದಿರುವಂತೆಯೇ ಓದುಗನೇ ಕಂಡುಕೊಳ್ಳಬೇಕಾದ ಕತೆಗಳನ್ನು ಕೂಡ ಬರೆದಿದ್ದಾರೆ. ತಮಾಷೆಯೆಂದರೆ, ಉಮಾ ರಾವ್ ಅವರು ಬರೆದಿರುವ ಹೆಚ್ಚಿನ ಪೂರ್ಣಗಾತ್ರದ ಸಣ್ಣಕತೆಗಳು ಅಜೆಂಡಾ ಇರಿಸಿಕೊಂಡೇ ಬರೆದಂಥ ಕತೆಗಳು. ಅಂತರ್ಜಾಲ,ಗ್ರೌಂಡ್ ಜೀರೋ, ನನ್ನಮ್ಮ ಎಲ್ಲರಂತಲ್ಲ ಇತ್ಯಾದಿ ಇದಕ್ಕೆ ಉತ್ತಮ ಉದಾಹರಣೆಗಳು. ಇಂಥ ನಿರ್ದಿಷ್ಟ ಉದ್ದೇಶದ ಕತೆಗಳಿರಲಿ, ಮೇಲ್ನೋಟಕ್ಕೆ ಎದ್ದು ಕಾಣದ ಉದ್ದೇಶದ ಕತೆಗಳಿರಲಿ, ಉಮಾರಾವ್ ತಮ್ಮ ನಿರೂಪಣೆಯಲ್ಲಿ, ವಿವರಗಳಲ್ಲಿ ವಸ್ತುವನ್ನು ನಿರ್ವಹಿಸುವ ವಿಧಾನ ಗಮನಾರ್ಹವಾಗಿದೆ. ಇದು ನಮ್ಮ ಮೆಚ್ಚುಗೆಗೆ ಪಾತ್ರವಾಗುವುದೇನಿದ್ದರೂ ಎರಡನೆಯ ಬಗೆಯ (ಚುಟುಕಾದ) ಕತೆಗಳಲ್ಲಿಯೇ. ಅಲ್ಲಿ ಅವರು ನಿರುದ್ದಿಶ್ಯದ ಪಯಣಕ್ಕೆ ನಮ್ಮನ್ನು ಸಜ್ಜುಗೊಳಿಸಿ ಕರೆದೊಯ್ಯುತ್ತ ಬದುಕಿನ ಸಂಕೀರ್ಣತೆಯನ್ನೂ, ವೈವಿಧ್ಯವನ್ನೂ ಕಾಣಿಸುತ್ತಲೇ ಕತೆ ಹೆಣೆಯುತ್ತಾರೆ. ಕೊನೆಗೂ ಒಂದು ಸಾಲಿನಲ್ಲಿ ಈ ಕತೆಗಳನ್ನು ನೀವು ಇನ್ನೊಬ್ಬರಿಗೆ ಕಟ್ಟಿಕೊಡಲಾರಿರಿ ಎನ್ನುವುದರಲ್ಲೇ ಈ ಕತೆಗಳ ಯಶಸ್ಸಿದೆ.

ಹಾಗೆಯೇ ಉಮಾ ರಾವ್ ಬಳಸುವ ಭಾಷೆ ಸಾಮಾನ್ಯವಾಗಿ ನಾವು ‘ಸ್ತ್ರೀ ಸಂವೇದನೆ’ ಎಂದು ಗುರುತಿಸುವ ಲಯದ್ದಲ್ಲ. ಅದು ಭಿನ್ನವಾದದ್ದು, ವಿಶಿಷ್ಟವಾದದ್ದು ಮತ್ತು ತನ್ನದೇ ಆದ ಖದರ್ ಉಳ್ಳದ್ದು. ಕನ್ನಡದ ಪ್ರಮುಖ ವಿಮರ್ಶಕ ಜಿ ರಾಜಶೇಖರ ಅವರು ಉಮಾ ರಾವ್ ಕುರಿತು ಹೇಳಿರುವ ಈ ಮಾತುಗಳು ಬಹುಷಃ ಇಲ್ಲಿ ಉಲ್ಲೇಖನೀಯ: "ನಿಮಗೆ ಈ ಕಾಲದ ಮನುಷ್ಯನ - ಬರೇ ಹೆಣ್ಣಿನದು ಅಲ್ಲ - ಇಕ್ಕಟ್ಟುಗಳು ಅರ್ಥವಾಗುತ್ತವೆ. ಕನ್ನಡದಲ್ಲಿ ಈಗ ಬರೆಯುತ್ತಿರುವ ಮಹಿಳೆಯರಲ್ಲಿ ನಿಮಗೊಬ್ಬರಿಗೇ ನಿಜವಾದ ಆಧುನಿಕ ಸಂವೇದನೆ ಇರುವುದು ಎಂದು ನನಗೆ ಮೊದಲಿನಿಂದಲೂ ಅನ್ನಿಸಿದೆ."

ಏನಿಲ್ಲ ಎಂಬತೆ ಕಾಣಿಸಿಕೊಳ್ಳುವ "ಕಪ್ಪು ಬ್ರಾ" ಕತೆ ಸಾಕಷ್ಟು ಗಹನವಾಗಿದೆ. ಅದು ರಾಜಶೇಖರ್ ಹೇಳುವ ಆಧುನಿಕ ಸಂವೇದನೆಯನ್ನೂ, ಉಮಾ ರಾವ್ ತಮ್ಮದೇ ವಿಶಿಷ್ಟ ಕನ್ನಡದಲ್ಲಿ ಕತೆಗಳ ಮೂಲಕ ಕನ್ನಡಕ್ಕೆ ಒದಗಿಸಿದ ಒಂದು ‘ಪಾರಂಪರಿಕ ಚೌಕಟ್ಟು’ ಮೀರುವ ಹಾದಿಯನ್ನೂ ಕಾಣಿಸುವುದಷ್ಟೇ ಅಲ್ಲ, ಮಿತಿಗಳು ಹೇಗೆಲ್ಲ ವಿಧಿಸಲ್ಪಡಬಹುದೆಂಬುದನ್ನೂ ಕಾಣಿಸುತ್ತದೆ. ವೈವಾಹಿಕ ಬಿಕ್ಕಟ್ಟುಗಳು, ಮುಟ್ಟು, ಹೆರಿಗೆ, ಬಾಣಂತನದ ಕತೆಗಳನ್ನೇ ಕಟ್ಟುವುದರಲ್ಲಿ ವ್ಯಸ್ತವಾಗಿದ್ದ ಸ್ತ್ರೀಸಂವೇದನೆ ಇಲ್ಲಿ ಹೊಸಹಾದಿಗಳನ್ನು ಅರಸುತ್ತಿರುವುದನ್ನು ನಾವು ಗಮನಿಸಬಹುದು.

ಹಾಗೆ ನೋಡಿದರೆ "ಅಂಗಡಿ ಮನೆ"ಗಿಂತ ಹೆಚ್ಚು ಸಂಕೀರ್ಣವಾದ ಕತೆ "ಮೂಲೆಮನೆ". ಈ ಕತೆಯ ತಂದೆಯನ್ನು ತಾಯಿ, ಲೀಲಾ, ತಾಯಮ್ಮ, ಮಗಳು ಮಾತ್ರವಲ್ಲ ಸಮಾಜವೂ ನೋಡುವ ಹತ್ತು ಆಯಾಮಗಳಿವೆ ಕತೆಯೊಳಗೆ. ಎಲ್ಲರನ್ನೂ ಕಾಣುತ್ತಿರುವ ಸಮಾಜವನ್ನು ಕತೆ ಗಮನಿಸುವುದು ಸೂಕ್ಷ್ಮವಾಗಿ. ಕ್ರಿಯೆ ಮಾತ್ರ ಕತೆಯಲ್ಲಿ ಮಗಳಾದ ಜಯಾ ಮೂಲಕ ನಡೆಯುತ್ತಿದೆ. ಕತೆಯ ನೆಲ ವಿದೇಶದ್ದು. ಕ್ರಿಯೆ ಈ ದೇಶದ್ದು. ಮತ್ತೆ ಇಲ್ಲಿ ಬಳಸಿಕೊಂಡಿರುವುದು ‘ಸತ್ತ ಭೂತವನೆತ್ತಿ ಹದ್ದಿನಂದದಿ ತಂದು ಮನದಂಗಳದಿ ಹಾಕು’ವ ಹಿನ್ನೋಟದ ತಂತ್ರವನ್ನೇ. ಕಾಲ-ದೇಶ-ಅನುಭವ ಎಲ್ಲವೂ ಎರಡು ಪುಟಗಳ ವ್ಯಾಪ್ತಿಗೆ ಮೀರಿದ್ದೇ. ಆದರೂ ನಿರ್ವಹಣೆ ಅತ್ಯುತ್ತಮವಾಗಿದೆ.

"ಸಿಲೋನ್ ಸುಶೀಲಾ" ಕತೆಯ ವಿಲಾಸಿನಿ ಟೀಚರನ್ನು ನೋಡುವ ಕಣ್ಣುಗಳೂ ಹಲವಾರು. ಅಲ್ಲಿ ಸಿಲೋನ್ ಸುಶೀಲಾ, ನಿರೂಪಕಿ ಇಬ್ಬರೇ ಇರುವುದಲ್ಲ. ಕಾಲ ಪಲ್ಲಟದ ತಂತ್ರ ಇಲ್ಲಿಯೂ ಇದೆ. ಮುಖ್ಯ ವಿಲಾಸಿನಿ ಟೀಚರ್ ಕತೆಯಲ್ಲಿ ಪೋಷಣೆ ಪಡೆಯದ ಪಾತ್ರ. ಅದಿರಲಿ, ಅವಳನ್ನು ಗಮನಿಸುವ ನಿರೂಪಕಿಯಾಗಲಿ, ಸಿಲೋನ್ ಸುಶೀಲಾ ಆಗಲಿ ಸ್ಪಷ್ಟವಾಗಿ ಒಡಮೂಡದೇ ವಿಲಾಸಿನಿ ಟೀಚರ್ ಬದುಕಿಗೆ, ಅಂತ್ಯಕ್ಕೆ, ಆಕೆ ಆಯ್ದುಕೊಂಡ ಮಾರ್ಗಕ್ಕೆ ದಕ್ಕಬಹುದಾಗಿದ್ದ ಆಯಾಮಗಳು ಕೂಡ ಅಸ್ಪಷ್ಟ-ಅನೂಹ್ಯವಾಗಿಯೇ ಉಳಿದು ಹೋಗುತ್ತವೆ.

"ಹೀಗಿಬ್ಬರು" ಕತೆಯ ವಸ್ತು ಮೇಲ್ನೋಟಕ್ಕೆ ಕಾಣುವಂಥ ನಾಸ್ಟಾಲ್ಜಿಯಾ ಆಗಿರದೇ ಮನುಷ್ಯ ತನ್ನ ಸ್ಥಿತಿಗೆ ತಾನೇ ವಿಧಿಸಿಕೊಂಡ, ಮೀರಲಾರದ್ದೆಂದು ತಾನೇ ಅಂದುಕೊಂಡ ಬೇಲಿ ಕೂಡ ಕಾರಣವಿರಬಹುದು ಎಂಬ ಪ್ರಜ್ಞೆಯನ್ನು ಅದು ತಡಕಿ ನೋಡುತ್ತದೆ. ಆದರೆ ದಟ್ಟವಾಗದ ಬಾಲ್ಯದ ವಿವರಗಳು, ಟ್ರಾನ್ಸಿಶನಲ್ ಎನಿಸುವ ಹಿನ್ನೋಟಗಳು ಕತೆ ಆರಿಸಿಕೊಂಡ ಚುಟುಕುತನದ ಪ್ರಭಾವದಿಂದಾಗಿರುವಂಥವು.

"ಹಕ್ಕಿ" ಕತೆಯನ್ನು ಜಯಂತ್ ಕಾಯ್ಕಿಣಿಯವರ ‘ಬಣ್ಣದ ಕಾಲು’ ಕತೆಯೊಂದಿಗಿಟ್ಟು ನೋಡಿದರೆ ನಮಗೆ ಕೆಲವೊಂದು ಹೊಳಹುಗಳು ಸಿಗುತ್ತವೆ. "ಅಮೂರ್ತವನ್ನು ಭಾಷೆಗೊಲಿಸುವ ಗೋಜಲು ಮಾರ್ಗ ಹಿಡಿಯದೆ ‘ಸನ್ನಿವೇಶಗಳ ಸಹಯೋಗ’ದಲ್ಲೇ ಅನಿರ್ವಚನೀಯವನ್ನು ಹೊಳೆಯಿಸಲು ಯತ್ನಿಸುವ ಅವರ ಕಥೆಗಳ ಶಾರೀರ ಭಾಷಾಶರೀರವನ್ನು ಮೀರುವಂತಿದೆ." ಎನ್ನುತ್ತಾರೆ ಜಯಂತ್, ಉಮಾ ರಾವ್ ಕತೆಗಳ ಬಗ್ಗೆ. ಓದುಗ ಮುಂದೆ ಮುಖಾಮುಖಿಯಾಗಲಿರುವ ‘ಯಾವುದಕ್ಕೋ’ ಇನ್ನಷ್ಟು ಕಾಯಬೇಕು, ತುಡಿಯಬೇಕು, ಮಾನಸಿಕವಾಗಿ ಸಜ್ಜಾಗಬೇಕು - ಎನ್ನುವಂತೆ ಅವನನ್ನು ವಿವರಗಳಲ್ಲಿ, ಉಪಕಥಾನಕಗಳಲ್ಲಿ, ನೆನಪುಗಳಲ್ಲಿ, ಕನಸುಗಳಲ್ಲಿ ಅಡ್ಡಾಡಿಸಿ ಮುನ್ನೆಡೆಸುವ ಜಯಂತ್ ಕಾಯ್ಕಿಣಿ ಶಬ್ದಗಳ ಮಾಂತ್ರಿಕ ರೂಪಕ ಲೋಕದಲ್ಲಿ ಮಾಡುವ ಟೈಮ್ ಮ್ಯಾನೇಜ್‌ಮೆಂಟ್ - ಉಮಾ ಅವರಲ್ಲಿಲ್ಲ. ಉಮಾ ರಾವ್ ಅವರಿಗೆ ಹೇಳಿ ‘ಮುಗಿಸುವ’ಕಥನ ಕ್ರಿಯೆಯಲ್ಲಿ ಹೆಚ್ಚು ವಿಶ್ವಾಸ. ಹಾಗೆಂದೇ ಚುಟುಕುತನ ಅವರಿಗೆ ಒಗ್ಗಿದ ಶೈಲಿ ಎನಿಸುವುದು ಕೂಡ.

"ಘಲ್ ಘಲ್ ಘಲ್" ಕತೆ ಕೂಡ ಮೇಲೆ ಹೇಳಿದ ಮಾತಿಗೆ ಮತ್ತೊಂದು ಉದಾಹರಣೆಯಾಗಿ ನಿಲ್ಲಬಲ್ಲ ಕತೆ. ಇಲ್ಲಿರುವುದು ಪುಟ್ಟ ಬಾಲಕಿಯ ಜಗತ್ತಾದರೂ ಕತೆಯನ್ನು ಹೇಳುತ್ತಿರುವ ಪ್ರಜ್ಞೆ ಪುಟ್ಟ ಬಾಲಕಿಯದ್ದಲ್ಲ. ಅಪ್ಪನ ಮನೋಭೂಮಿಕೆ ಮತ್ತು ಪುಟ್ಟ ಹುಡುಗಿಯ ಮನೋಭೂಮಿಕೆ ಎರಡೂ ನಿರೂಪಣೆಯ ತೆಕ್ಕೆಗೆ ಒಗ್ಗುವುದಕ್ಕೆ ಈ ತಂತ್ರ ಅನಿವಾರ್ಯವೆನ್ನುವುದೇನೊ ಸರಿಯೇ. ಆದರೆ ಈ ಎರಡರ ನಡುವೆಯೇ ಇರುವ ಕೇಂದ್ರಕ್ಕೆ ಸಿಗಬೇಕಿದ್ದ ಪುಷ್ಟಿ ದೊರೆಯುವುದು ಕಷ್ಟವಾಗಿದೆ. ಇಬ್ಬರ ಜಗತ್ತುಗಳೂ ಮತ್ತಷ್ಟು ತೆರೆದುಕೊಳ್ಳುವುದು, ಹಾಗೆ ತೆರೆದುಕೊಂಡಾಗ ಅವುಗಳಿಗೆ ಮುಖಾಮುಖಿಯಾಗುವುದಕ್ಕೆ ಓದುಗನನ್ನು ಸಜ್ಜುಗೊಳಿಸುವಂಥ ವಿವರಗಳು, ಕಥಾನಕದ ಅಂಗಗಳು ಇಲ್ಲಿಲ್ಲ. ಹಾಗಾಗಿ ಈ ಎರಡೂ ಜಗತ್ತುಗಳೂ ಇಲ್ಲಿ ಪರಸ್ಪರ ಛೇದಿಸದೆ ಪ್ರತ್ಯೇಕಗೊಂಡೇ ಉಳಿಯುತ್ತವೆ. ಅಪ್ಪ ಮಗಳಿಗೆ ಬಿಗಿದ ತಪರಾಕಿಯಾಗಲೀ, ಮಣ್ಣಲ್ಲಿ ಸೇರಿದ ಕಂಬನಿಯ ಹನಿಗಳಾಗಲೀ ಕತೆಯ ಒಡಲಿನಾಚೆ ಓದುಗನನ್ನು ಕಾಡುವ ಶಕ್ತಿ ಪಡೆಯುವುದಿಲ್ಲ.

"ಮೀಸೆ ಹೆಂಗಸು" ಕತೆ ಮಾತ್ರ ತನ್ನ ಚುಟುಕುತನದೊಳಗೇ ಸುಪುಷ್ಟ ವಿವರಗಳ ದೇಹದೊಂದಿಗೆ ಪರಿಣಾಮಕಾರಿಯಾಗಿ ಒಡಮೂಡಿದೆ. ಆದರೂ ಇಲ್ಲಿನ ನಿರೂಪಣೆಯಲ್ಲಿ ಅಕ್ಕನ ಆತ್ಮಹತ್ಯೆ, ಗಂಡನ ಸಾವು, ಅಪ್ಪನ ಹತಾಶೆ ಎಲ್ಲವೂ ಅಲ್ಪವಿರಾಮಗಳ ಒಂದೇ ವಾಕ್ಯದ ಘಟನೆಗಳಾಗಿ ಬಿಟ್ಟಂತಿರುವುದು ಈ ಕತೆಗಿದ್ದ ಸಾಧ್ಯತೆಗಳತ್ತಲೇ ಬೆಟ್ಟು ಮಾಡುವಂತಿರುವುದು ಕೂಡ ಅಷ್ಟೇ ನಿಜ.

ಎರಡನೆಯ ಭಾಗದಲ್ಲಿ ಪೂರ್ಣಪ್ರಮಾಣದ ಹತ್ತು ಸಣ್ಣಕತೆಗಳಿವೆ. ವಿಚಿತ್ರವೆಂದರೆ, ಇವುಗಳಲ್ಲಿ ಒಂದೆರಡನ್ನು ಬಿಟ್ಟರೆ ಹೆಚ್ಚಿನ ಕತೆಗಳಿಗೆ ಮೊದಲ ಭಾಗದ ಕತೆಗಳು ನೀಡುವ ಖುಶಿಯನ್ನಾಗಲೀ, ಗಾಢ ಅನುಭವವನ್ನಾಗಲೀ ಕೊಡಲು ಸಾಧ್ಯವಾಗಿಲ್ಲ. "ಹಾವಾಡಿಗ" ಕತೆಯನ್ನು ವಸುಧೇಂದ್ರ ಅವರ "ಕ್ಷಮೆಯಿಲ್ಲದೂರಿನಲಿ" ಕತೆಯೊಂದಿಗೆ ಹೋಲಿಸಿ ನೋಡಿದರೆ ಕೆಲವೊಂದು ಹೊಸ ಹೊಳಹುಗಳು ಸಿಗುವುದು ಸಾಧ್ಯ. ಇದೇ ರೀತಿಯ, ಅಪಾರ್ಟ್‌ಮೆಂಟ್ ಬದುಕನ್ನೇ ಕೇಂದ್ರದಲ್ಲಿರಿಸಿಕೊಂಡ ಮೇಘನಾ ಪೇಠೆಯವರ ಒಂದು (ನಾಲ್ಕೂ ದಿಕ್ಕಿಗೆ ಕಡಲಿನ ನೀರು) ಕತೆಯನ್ನೂ ಇಲ್ಲಿ ನೆನೆಯಬಹುದು. ಉಮಾ ರಾವ್ ಅವರ ಕತೆಯಲ್ಲಿ ನಾವು ಕಾಣುವುದು ವರ್ಗಸಂಘರ್ಷದ ಒಂದು ಮುಖವನ್ನೇ ಎಂದುಕೊಂಡರೂ ಅವರು ಅದನ್ನು ಚಿತ್ರಿಸಿದ ರೀತಿಯಲ್ಲಾಗಲೀ, ಒಟ್ಟಾರೆ ಮನೋಧರ್ಮದಲ್ಲಾಗಲೀ ಅದು ಅಷ್ಟೇ ಅಲ್ಲ ಎನ್ನುವುದು ಸ್ಪಷ್ಟವಿದೆ. ಇಲ್ಲಿರುವುದು ಮನುಷ್ಯನ ಸಹಜವಾದ ಸಣ್ಣತನದ ಪ್ರದರ್ಶನವೇ. ವಸುಧೇಂದ್ರ, ಮೇಘನಾ ಪೇಠೆ ಮತ್ತು ಉಮಾ ರಾವ್ ಮೂವರ ನಿರೂಪಣೆಯಲ್ಲಿಯೂ ಒಂದು ವಿಧವಾದ ವ್ಯಂಗ್ಯವಿದ್ದೇ ಇದೆ. ಆದರೆ ಈ ಮೂವರೂ ಚಿತ್ರಿಸುವ ಮನುಷ್ಯ ಸ್ವಭಾವದ ಸಂಕೀರ್ಣತೆಯ ವಿಚಾರಕ್ಕೆ ಬಂದಾಗ, ಒಟ್ಟು ವಿದ್ಯಮಾನದ ಗಂಭೀರ ಸ್ವರೂಪದ ವಿಚಾರಕ್ಕೆ ಬಂದಾಗ ಹಾಗೂ ಕಥೆಯ ಚೌಕಟ್ಟಿನಲ್ಲಿ ಸಾಧಿಸಿದ ಪರಿಣಾಮಕಾರತ್ವದ ವಿಚಾರಕ್ಕೆ ಬಂದಾಗ ಅವುಗಳ ನಡುವೆ ತೌಲನಿಕ ವಿಶ್ಲೇಷಣೆಗೆ ಸಾಕಷ್ಟು ಅವಕಾಶಗಳಿವೆ.

"ಕಸೂತಿಯಮ್ಮ" ಕನ್ನಡದ ಸಂವೇದನೆಗಳಿಗೆ ಹೊಸತನವನ್ನು ಪರಿಕಲ್ಪಿಸುವ ಕತೆಯಾಗಿಯೂ, ನವಿರಾದ ನಿರೂಪಣೆಯಿಂದಲೂ ಗಮನ ಸೆಳೆದರೆ "ಪರಕೀಯ" ಕತೆಯ ಅಸಹಜ ಅಂತ್ಯದ ಹೊರತಾಗಿಯೂ ಅದು ವಿವರಗಳಿಂದಾಗಿಯೇ ಮನಸ್ಸಲ್ಲಿ ನಿಲ್ಲುತ್ತದೆ. "ಅಂತರ್ಜಾಲ", "ಬೆತ್ತಲೆ", "ಪಯಣಿಗರು", "ಮೂವತ್ತಾರು ಇಪ್ಪತ್ನಾಲ್ಕು ಮೂವತ್ತಾರು", "ಗ್ರೌಂಡ್ ಜೀರೋ", "ಸರೋವರ" ಮತ್ತು "ನನ್ನಮ್ಮ ಎಲ್ಲರಂತಲ್ಲ" ಕತೆಗಳಲ್ಲಿ ವಸ್ತುವಿಗೆ ಪೂರ್ವನಿಶ್ಚಿತ ಗಮ್ಯವಿದ್ದು ಅವು ಸಿಲೆಬಸ್‌ಗನುಗುಣವಾಗಿ ಸಾಗುವ ಕತೆಗಳೆನ್ನಿಸುತ್ತವೆ. ಉದಾಹರಣೆಗೆ, ಪಯಣಿಗರು ಕತೆ ಲಿವಿಂಗ್ ಇನ್ ಪದ್ಧತಿ, ಗ್ರೌಂಡ್ ಜೀರೋ ಕತೆ ವರ್ಲ್ಡ್ ಟ್ರೇಡ್ ಸೆಂಟರ್ ದುರಂತ, ನನ್ನಮ್ಮ ಕತೆ ಎಚ್ ಐ ವಿ ಸಮಸ್ಯೆಗಳನ್ನು ತನ್ನ ಕೇಂದ್ರದಲ್ಲಿರಿಸಿಕೊಂಡಿದೆ. ಈ ಒಂದೇ ಕಾರಣಕ್ಕಾಗಿ ಈ ಕತೆಗಳನ್ನು ಗಮನಾರ್ಹವಲ್ಲ ಎಂದು ಬದಿಗೆ ಸರಿಸಿ ಬಿಡಬೇಕಾಗಿಲ್ಲ. ಆದರೆ ಪುಟ್ಟಪುಟ್ಟ ಕತೆಗಳಲ್ಲಿ ಕಂಡು ಬರುವ ಉಮಾ-ತನವಾಗಲೀ, ಆ ಕತೆಗಳ ತರಂಗಾಂತರವಾಗಲಿ ಈ ಕತೆಗಳಿಗೆ ದಕ್ಕಿಲ್ಲದೇ ಇರಲು ಇದೇ ವಸ್ತುನಿಷ್ಠತೆ ಕಾರಣವೆನ್ನುವುದು ಸುಸ್ಪಷ್ಟ. ಹಾಗೆ ನೋಡಿದರೆ ಇಂಥ ಆಧುನಿಕ - ಸಮಕಾಲೀನ ವಿದ್ಯಮಾನಗಳನ್ನೇ ತನ್ನ ಕೇಂದ್ರದಲ್ಲಿರಿಸಿಕೊಂಡಿರುವಂಥ "ಅಂತರ್ಜಾಲ", "ಮೂವತ್ತಾರು ಇಪ್ಪತ್ನಾಲ್ಕು ಮೂವತ್ತಾರು" ಕತೆಗಳು ಉಳಿದವುಗಳಿಗಿಂತ ಹೆಚ್ಚು ಕೇಂದ್ರ ನಿರಪೇಕ್ಷತನದಿಂದಾಗಿ ಗಮನ ಸೆಳೆಯುವಂತಿವೆ. "ಸರೋವರ" ಮತ್ತು "ಬೆತ್ತಲೆ" ಕತೆಗಳು ವಿಶೇಷವಾದ ಏನನ್ನೂ ಹೇಳಹೊರಟಿಲ್ಲವಾದರೂ "ಸರೋವರ" ತನ್ನ ನಿರೂಪಣೆಯಲ್ಲಿನ ಲಯದ ನಿರ್ವಹಣೆಗಾಗಿ ಗಮನಾರ್ಹವೆನಿಸುವ ಕತೆ.

ಉಮಾ ರಾವ್ ನಮ್ಮ ನಡುವಿನ ಗಮನಾರ್ಹ ಕತೆಗಾರ್ತಿಯಾಗಿದ್ದೂ ಅವರ ಕತೆಗಳ ಬಗ್ಗೆ ಸಾಕಷ್ಟು ಚರ್ಚೆ, ವಿಚಾರ ವಿನಿಮಯ ನಡೆಯದೇ ಇರುವುದು ಆಶ್ಚರ್ಯಕರವಾಗಿದೆ. ಈ ಸಂಕಲನಕ್ಕೆ ಎಚ್‌.ವಿ.ಸಾವಿತ್ರಮ್ಮ ಪ್ರಶಸ್ತಿಯೂ ಬಂದಿದ್ದು ಇದು ಸಾಹಿತ್ಯಾಸಕ್ತರೆಲ್ಲರೂ ಗಮನಿಸ ಬೇಕಾದ ಒಂದು ಕೃತಿ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ