Monday, January 12, 2015

ಗಾಳಿಗೆ ಬಿದ್ದ ಚಂದ್ರನ ತುಂಡುಗಳು

ಎಸ್ ಸುರೇಂದ್ರನಾಥ್ ಅವರ ಹೊಸ ಕಾದಂಬರಿ "ಗಾಳಿಗೆ ಬಿದ್ದ ಚಂದ್ರನ ತುಂಡುಗಳು". ಈ ಕಾದಂಬರಿಯ ಟೈಟಲ್ ಓದುತ್ತಿದ್ದಂತೆ ನೆನಪಾಗುವುದು ಜಯಂತ್ ಕಾಯ್ಕಿಣಿಯವರ ಹಾಡು! ನೀರಲ್ಲಿ ಸಣ್ಣ ಅಲೆಯೊಂದು ಮೂಡಿ| ಚೂರಾದ ಚಂದ್ರನೀಗಾ| ಅಲ್ಲೊಂದು ಚೂರು ಇಲ್ಲೊಂದು ಚೂರು| ಒಂದಾಗಬೇಕು ಬೇಗಾ|

ಅವನನ್ನೇ ತೋರಿಸಿ ತುತ್ತು ತಿನಿಸುತ್ತಿದ್ದ ದಿನಗಳಿಂದ ತೊಡಗಿ ನಾವು ಕೂತ ಬಸ್ಸು ಓಡಿದಂತೆಲ್ಲ, ಬಯಲಲ್ಲಿ ನಾವು ಓಡಿದಂತೆಲ್ಲ ಆಕಾಶದಲ್ಲಿ ಚಂದಿರನೇತಕೆ ಓಡುವನೋ ಎಂದು ಬೆರಗಾದ ದಿನಗಳನ್ನು ಹಾದು ಇವತ್ತಿಗೂ ಚಂದ್ರ ನಮ್ಮ ಕನಸು, ಕಲ್ಪನೆ, ಭ್ರಮೆ ಮತ್ತು ಮನೋವ್ಯಾಪಾರಗಳ ಸಂಕೇತ. ವೈಜ್ಞಾನಿಕವಾಗಿಯೂ ಭೂಮಿಯ ಮೇಲಿನ ಸಾಗರವನ್ನು ಉಕ್ಕುವಂತೆ ಮಾಡಬಲ್ಲ ಶಕ್ತಿ ಹೊಂದಿರುವ ಈ ಚಂದ್ರ ಭೂಮಿಯಂತೆಯೇ ಮೂರುಪಟ್ಟು ನೀರು ತುಂಬಿದ ದೇಹವನ್ನು ಹೊತ್ತ ಮನುಷ್ಯನ ಮನಸ್ಸನ್ನೂ ಕೆರಳಿಸಬಲ್ಲ, ಅರಳಿಸಬಲ್ಲ ಶಕ್ತಿಯನ್ನು ಹೊಂದಿರುವುದು ಸಹಜವೇ ಇರಬಹುದೇನೊ. ಅದಿರಲಿ, ಈ ಚಂದ್ರ ಚೂರಾಗುವುದು ಎಂದರೇನು? ಬಹುಷಃ ಅದೊಂದು ಕವಿಸಮಯವಾಗಿದೆ ಈಗ.

ಸುರೇಂದ್ರನಾಥರ ಕಥನ ಕೌಶಲದ ಬಗ್ಗೆ ಬರೆಯುತ್ತ ಹಿಂದೊಮ್ಮೆ ನಾನು ಹೇಳಿದ್ದನ್ನೇ ಇಲ್ಲಿ ಮತ್ತೆ ನೆನಪಿಸುತ್ತೇನೆ. ಸುರೇಂದ್ರನಾಥ್ ನಾಟಕಕಾರರು. ನಾಟಕೀಯ ಸನ್ನಿವೇಶಗಳ ಮೂಲಕ, ಡ್ರಮಾಟಿಕ್ ಸಿಚುಯೇಶನ್ನುಗಳಲ್ಲಿ ಪಾತ್ರಗಳನ್ನಿರಿಸಿ, ಅವು ಅಲ್ಲಿ ಏಗುವ-ಬೀಗುವ-ಎದ್ದು ಬಿದ್ದು ಮುಗ್ಗರಿಸಿ ಬೆಪ್ಪಾಗುವ ಆಟವಾಡಿಸಿ, ನಮಗೇ ತಿಳಿಯದ ಹಾಗೆ ಸಕ್ಕರೆಯ ಪಾಕದೊಳಗೆ ಔಷಧಿಯ ಕಹಿಗುಳಿಗೆಯನ್ನಿರಿಸಿ ನಮ್ಮನ್ನೇ ನಮಗೆ ತೋರಿಸುವ ಚಾಣಾಕ್ಷತೆ ಸುರೇಂದ್ರನಾಥರಿಗೆ ಅಭಿಜಾತವೋ, ಅವರೊಳಗಿನ ನಾಟಕಕಾರ ಅದನ್ನವರಿಗೆ ದಕ್ಕಿಸಿದನೊ ಗೊತ್ತಿಲ್ಲ. ಆದರೆ ದಟ್ಸ್ ಸುರೇಂದ್ರನಾಥ್!

ಈ ಕಾದಂಬರಿ ಹಲವು ಹೊಸತನಗಳನ್ನು ಹೊಂದಿದೆ. ಕನ್ನಡದಲ್ಲಿ ಬಹುಷಃ ಇದೇ ಮೊದಲ ಬಾರಿಗೆ ವಿಕಲ್ಪವೊಂದಕ್ಕೆ ಮಾತು-ಕತೆ ಎರಡನ್ನೂ ಪರಿಕಲ್ಪಿಸಿ ಈ ಕಾದಂಬರಿಯನ್ನು ಹೆಣೆಯಲಾಗಿದೆ. ರಾಘವೇಂದ್ರ ಖಾಸನೀಸರ ‘ತಬ್ಬಲಿಗಳು’ ಕತೆಯನ್ನು ಮತ್ತು ಇತ್ತೀಚೆಗೆ ತೀರಿಕೊಂಡ ತಮಗೆ ತಿಳಿದ ಜೀವಂತ ವ್ಯಕ್ತಿಯೊಬ್ಬರನ್ನು ನೆನೆಯುತ್ತಾ ಈ ಕಾದಂಬರಿ ತೊಡಗುತ್ತದೆ. ಈ ವ್ಯಕ್ತಿಯಾದರೂ ಎಂಥವರು! ಸುರೇಂದ್ರನಾಥ್ ಅವರೇ ವಿವರಿಸುವಂತೆ 'ತಮ್ಮ ಹಿಡಿಯಳತೆಯೊಳಗೆ ದಕ್ಕಿದಷ್ಟೇ ಸುಖವನ್ನು ಯಾವುದೇ ದೂರಿಲ್ಲದೇ ಉಂಡವರು ಆಕೆ'. ತಮ್ಮ ಮಾತಲ್ಲಿ ನಡೆಯಲ್ಲಿ ತಾವುಂಡ ಕಹಿಯ ಪಸೆಯುಳಿಯದಂತೆ ತನ್ನ ಸುತ್ತಲಿನವರಿಗೆ ಸಿಹಿಯನ್ನು, ನಗುವನ್ನು ಹಂಚಿದವರು. ತನ್ನ ನೋವು, ಸಂಕಟ, ದುರ್ವಿಧಿಯಲ್ಲ, ನೀವು ಚೆನ್ನಾಗಿರುವುದು ಮುಖ್ಯ, ಅದೇ ತಮ್ಮ ಸಂತೋಷ. ಇದು ಜೀವನದೃಷ್ಟಿ. ಈ ಇಡೀ ಕಾದಂಬರಿಯನ್ನು ಹೆಚ್ಚೂಕಡಿಮೆ ಆಕೆಯನ್ನೇ ಆಧಾರವಾಗಿಟ್ಟುಕೊಂಡು ಬರೆದೆ ಎನ್ನುವ ಸುರೇಂದ್ರನಾಥ್ ಈ ಆಧಾರ ಯಾವ ಬಗೆಯದು ಎನ್ನುವುದನ್ನು ವಿವರಿಸಿಲ್ಲ. ಅದು ಸಂವೇದನೆಗಳ, ಗ್ರಹಿಕೆಗಳ ಮತ್ತು ತನ್ನ ಅನುಭವವನ್ನು ಇನ್ನೊಂದು ಜೀವಕ್ಕೆ ಹೇಳುವ ಹಿಂದಿರುವ ಪ್ರಾಮಾಣಿಕ ಕಕ್ಕುಲಾತಿಯದ್ದು, ಭಾವ ಸೂಕ್ಷ್ಮದ್ದು.

ಹೀಗೆ ಕಥೆ ಮತ್ತು ಬದುಕಿಗೆ ತಂತುವಾಗಿ ಮಿಡಿಯುವ ಯಾವುದೋ ಒಂದು ಒಂದು ಕೊಂಡಿಯನ್ನು ಜಾಗೃತಗೊಳಿಸಿಯೇ ತೊಡಗುವ ಈ ಕಾದಂಬರಿಯನ್ನು ಕೊನೆಗೂ ನಮಗೆ ತಲುಪಿಸುತ್ತಿರುವುದು ಈ ಇಡೀ ಕಥಾನಕದ ನಿರೂಪಕನಲ್ಲ, ಅನ್ಯ ವ್ಯಕ್ತಿ. ದುರಂತಕ್ಕೆ ಮೊಗಮಾಡಿ ನಿಂತಂತಿರುವ ನಿರೂಪಕನಿಗೆ ಭವಿಷ್ಯವಿಲ್ಲ, ಭೂತ ಮಾತ್ರವಿದೆ. "ಭವ್ಯ ಭವಿತವ್ಯಕ್ಕೆ ಮೊಗಮಾಡಿ ನಿಂತಿರು"ವ ನಾವು "ಸತ್ತ ಭೂತವನೆತ್ತಿ ಹದ್ದಿನಂದದಿ ತಂದು ಎನ್ನ ಮನೆಯಂಗಳಕೆ ಹಾಕದಿರು ಮನವೇ" ಎಂದು ಮೊರೆಯಿಡುವ ಮಂದಿ. ಈ ನಿರೂಪಕನ ಕತೆ ಯಾರಿಗೆ ಬೇಕಿದೆ? ನಮಗೆ ನಮ್ಮದೇ ಲೋಕವಿದೆ, ಮದುವೆ, ಮುಂಜಿ, ಸಮಾರಂಭಗಳಿವೆ, ಫೇಸ್‌ಬುಕ್ಕು, ಸಿನಿಮಾ, ಇಂಟರ್‌ನೆಟ್ಟು, ಮೊಬೈಲು ಎಂದೆಲ್ಲ ಇಪ್ಪತ್ತನಾಲ್ಕು ಗಂಟೆಗಳಿದ್ದೂ ಏನೇನೂ ಸಾಲದು. ಇಂತಿಪ್ಪ ಸನ್ನಿವೇಶದೊಳ್ ಈ ನಿರೂಪಕನ ಮೆಲುದನಿಯ ಮಾತುಗಳನ್ನು ಕೇಳಿಸಿಕೊಳ್ಳಲು, ಸ್ಪಂದಿಸಲು ಅಗತ್ಯವಾದ ವ್ಯವಧಾನ, ಮಾನವೀಯ ಸಂವೇದನೆ, ನಮ್ಮ ನಿಡುಗಾಲದ ಸಖ ಚಂದ್ರನೇಕೆ ಚೂರಾದ ಎಂಬ ಬಗ್ಗೆ ಕಳವಳ ಇದ್ದಲ್ಲಿ ನಮಗೆ ಈ ಕಾದಂಬರಿ ಬಹಳ ಮುಖ್ಯ ಕೃತಿಯಾಗುವುದರಲ್ಲಿ ಸಂದೇಹವಿಲ್ಲ. ಯಾಕೆಂದರೆ ಕೊನೆಗೂ ನಾವು ಆರಿಸಿಕೊಳ್ಳಬೇಕಾದ ಚೂರುಗಳು ನಮ್ಮವೇ ಆಗಿರುತ್ತವೆ.

ಇಲ್ಲಿಯೇ ಹೇಳಬೇಕಾದ ಮಾತೊಂದಿದೆ. ಬುದ್ಧಿಮಾಂದ್ಯ ಶಿಶುವೊಂದನ್ನು ಪರಿತ್ಯಜಿಸಲು ನಿರ್ಧರಿಸಿದ ಸಂದರ್ಭದಲ್ಲಿ, ಯಾವುದೇ ಪ್ರಜ್ಞೆಯಿಲ್ಲ, ಸಂವೇದನೆಗಳಿಲ್ಲ ಎಂದೇ ಎಲ್ಲರೂ ಭಾವಿಸಿದ್ದ ಆ ಮಗು ತನ್ನ ತಾಯಿಯ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ತನ್ನ ಕಳವಳವನ್ನು ಸೂಚಿಸಿತ್ತಂತೆ. ಗರ್ಭಸಂವಹನ! ವರ್ಷಾನುಗಟ್ಟಲೆ ಕೋಮಾದಲ್ಲಿರುವವರ, ಮೆದುಳಿಗೂ ದೇಹಕ್ಕೂ ಇರುವ ತಂತು ಕಡಿದುಕೊಂಡು ಜೀವಂತ ಶವದಂತೆ ಬದುಕುತ್ತಿರುವವರ, ದಯಾಮರಣಕ್ಕಷ್ಟೇ ಅರ್ಹರೆನಿಸಿಕೊಂಡವರ ಮನೋಲೋಕಕ್ಕೆ ನಮಗೆ ಪ್ರವೇಶವಿಲ್ಲದೇ ಇದ್ದೀತು; ಆ ಲೋಕವೇ ಇಲ್ಲವೆನ್ನಲು ನಾವ್ಯಾರು? ಆ ಲೋಕವನ್ನು ಕುರುಡ ಬಣ್ಣಿಸಿದ ಆನೆಯಾಗುವಂಥ ರೂಪಕಗಳಲ್ಲಿ, ಬೊಚ್ಚು ಭಾಷೆಯಲ್ಲಿ, ಕನಸು-ಕಲ್ಪನೆ-ಭ್ರಮೆ ಮತ್ತು ವಾಸ್ತವಗಳ ತುಂಡು ತುಂಡು ಚಿತ್ರಗಳಲ್ಲಿ ಸುರೇಂದ್ರನಾಥ್ ಕಟ್ಟಿಕೊಟ್ಟಿರುವ ಬಗೆ ಅತ್ಯಂತ ಸೂಕ್ಷ್ಮವಾಗಿದೆ. ಮೇಲೆ 'ಆಧಾರ'ವೆಂದು ಬಣ್ಣಿಸಿದ ಮಾತೃಹೃದಯದ ಸಂವೇದನೆಗಳಿಗೆ ಹತ್ತಿರವಿದೆ.

ತಂತ್ರವಾಗಿ ಬಾಲ ಪ್ರಜ್ಞೆಯನ್ನು ದುಡಿಸಿಕೊಂಡ ಕಾಡು, ಘಟಶ್ರಾದ್ಧ ಮುಂತಾದ ಕತೆಗಳನ್ನು ನಾವು ಬಲ್ಲೆವು. ಆದರಿಲ್ಲಿ ನಿರೂಪಕನ ವಯಸ್ಸು ಮತ್ತು ವರ್ತಮಾನ ಕಾಲ ಎರಡೂ ಅನೂಹ್ಯವಾಗಿ ಉಳಿಯುವಂತೆ ಕತೆ ಸಾಂಪ್ರದಾಯಿಕ ಚೌಕಟ್ಟನ್ನು ಬಿಟ್ಟುಕೊಟ್ಟೇ ಸಾಗುತ್ತದೆ. ನಿರೂಪಕನ ಪ್ರಜ್ಞೆಯೇ ಒಂದರ್ಥದಲ್ಲಿ ಇಲ್ಲಿನ ಕಥಾನಾಯಕ. ಅದು ಯಾವ ನೆಲೆಯದ್ದು ಎಂಬ ಒಂದು ಪ್ರಶ್ನೆ ಸದಾ ಕಾಲ ಸದ್ಯದ ಸನ್ನಿವೇಶವನ್ನು ಗ್ರಹಿಸುವ ಮತ್ತು ಅದಕ್ಕೆ ಅರ್ಥಕಟ್ಟುವ ಸವಾಲನ್ನು ಓದುಗನಿಗೆ ಒಡ್ಡುತ್ತಲೇ ಇರುತ್ತದೆ. ಭಾವಕ್ಕೆ ಅರ್ಥದ ಹಂಗಿಲ್ಲ; ಭಾಷೆಗಿದೆ. ಭಾಷೆಯನ್ನು ಅರ್ಥದ ಹಂಗಿನಿಂದ ಮುಕ್ತವಾಗಿಸುವುದು ಕಾವ್ಯ ಎಂದರು ಕೀರಂ. ಸುರೇಂದ್ರನಾಥ್ ಇಲ್ಲಿ ಎತ್ತಿಕೊಂಡ ಸವಾಲು ಇದು. ಇಲ್ಲಿ ಈ ಸಮಸ್ಯೆ ನಿರೂಪಕನದ್ದೂ ಆಗಿರುವುದರಿಂದ ಓದುಗನಿಗೂ ಅದರಿಂದ ಮುಕ್ತಿಯಿಲ್ಲ. ಗಡ್ಡ ಮೀಸೆಯಿರುವ, ಶಾಲೆಗೆ ಸೇರಲು ಹೊರಟಿರುವ, ಕೈಕೂಸಾಗಿರುವ, ಪ್ರಬುದ್ಧವಾಗಿ ಯೋಚಿಸಬಲ್ಲ, ದುರಂತದತ್ತ ಸಾಗುತ್ತಿರುವ ಸ್ಪಷ್ಟ ಪ್ರಜ್ಞೆಯುಳ್ಳ ಮತ್ತು ಮುಗ್ಧನಾಗಿರುವ ಮಗುವೋ, ಹುಡುಗನೊ, ಗಂಡಸೊ ಯಾವುದೂ ನಿಖರವಾಗಿ ಅಳವಿಗೆಟುಕದ ತ್ರಿಶಂಕು ಭಂಗಿಯಲ್ಲೇ ಓದುಗ ನಿಲ್ಲುತ್ತಾನೆ. ಈ ನಿರೂಪಕ ತನ್ನ ಸಮಸ್ಯೆಯ, ಕಾಯಿಲೆಯ ನಿಜವಾದ ಸ್ವರೂಪಗಳು ಕೂಡ ಇಂಥವೇ ಎಂದು ತಾನೇ ಹೇಳಿಕೊಳ್ಳಲಾರದ, ಓದುಗ ತಾನೇ ಗ್ರಹಿಸಲಾರದ ಒಂದು ಅಸಹಾಯಕ ನೀರವತೆಯನ್ನು ಒಪ್ಪಿಕೊಂಡೂ ಅದಕ್ಕೆ ಸುಲಭವಾಗಿ ಹೊಂದಿಕೊಳ್ಳಲಾರದ ಚಡಪಡಿಕೆಯನ್ನು ಉದ್ದಕ್ಕೂ ಅನುಭವಿಸುತ್ತಾನೆ.

ಆದರೆ ಇದೆಲ್ಲದರಿಂದೇನು ಎಂಬ ಪ್ರಶ್ನೆಯೆದುರು ಕೊನೆಗಾದರೂ ನಾವು ನಿಲ್ಲಲೇಬೇಕು.

ಈ ಕಥಾನಕ ಎಂಥವರ ಮನಸ್ಸನ್ನೂ ಕಲಕುವಂತಿದೆ ಎನ್ನುವುದಷ್ಟೇ ಇದರ ಹೆಚ್ಚುಗಾರಿಕೆಯಲ್ಲ, ಪರಿಹಾರವೇ ಇಲ್ಲದ ಒಂದು ಸಮಸ್ಯೆಗೆ ಒಂದು ಕುಟುಂಬವನ್ನು ಒಡ್ಡಿದ ರೀತಿಯೇ ಮನುಷ್ಯನನ್ನು ಮನುಷ್ಯತ್ವದ ಮುಖಾಮುಖಿಗೆ ಒಡ್ಡುವ ಪರಿಯೂ ಆಗಿದೆ. ಕುಟುಂಬದಲ್ಲಿ ಒಂದು ಬುದ್ಧಿಮಾಂದ್ಯ ಮಗು ಹುಟ್ಟಿತೆಂದರೆ ಅದು ಇಡೀ ಕುಟುಂಬದ ಬದುಕು-ಭವಿಷ್ಯವನ್ನು, ನಗೆ-ನಲಿವನ್ನು ಹೀರಿ ಬಿಡಬಲ್ಲದು ಎನ್ನುವುದನ್ನು ನಾವು ಕಣ್ಣಾರೆ ಕಂಡವರೇ. ಎಂಡೋಸಲ್ಫಾನ್‌ನ ದುಷ್ಪರಿಣಾಮಕ್ಕೆ ತುತ್ತಾದ, ಕಣ್ಣು, ಬಾಯಿ, ಕೈಕಾಲುಗಳೆಲ್ಲ ಸೊಟ್ಟಗಾಗಿ ಹುಟ್ಟಿದ ನೂರಾರು ಮಕ್ಕಳು, ಮಕ್ಕಳಂತೆ ಕಾಣುವ ವಯಸ್ಕರನ್ನು ನಾವಿಲ್ಲಿ ನಿತ್ಯ ಕಾಣುತ್ತಿದ್ದೇವೆ. ಇವರಿಗೆ ನಮ್ಮ ಅಸಹಾಯಕ ನಿಟ್ಟುಸಿರಿನಾಚೆಗೇನಿದೆ ನಮ್ಮ ಬಳಿ? ನಮ್ಮ ಜಗತ್ತು ಇವರನ್ನು ಬಿಟ್ಟುಕೊಟ್ಟು ನೆಮ್ಮದಿಯಿಂದಿದೆ. ನಮ್ಮ ಒಳಜಗತ್ತೊಂದಿದೆಯಲ್ಲ, ಅದು ಇವರನ್ನು ಬಿಟ್ಟು ನಿಲ್ಲುತ್ತಿಲ್ಲ, ನಿಲ್ಲಲಾರದು. ಸೂಕ್ಷ್ಮವಾಗಿ ಗಮನಿಸಿ ನೋಡಿ, ನಮ್ಮ ಅತ್ಯಂತ ನೀರವ ಕ್ಷಣದಲ್ಲಿ ನಮ್ಮನ್ನು ಕೊನೆಗೂ ಕಾಡುವುದು ದುಡ್ಡಲ್ಲ, ಪ್ರಮೋಷನ್ ಅಲ್ಲ, ಹೆಣ್ಣಲ್ಲ, ಸಾಲದ ಬಾಧೆಯೂ ಅಲ್ಲ. ಅದು ಕನಸಿನಲ್ಲೆಂಬಂತೆ ಸುಳಿವ, ನಾವು ಕಣ್ಣಲ್ಲಿ ಕಣ್ಣಿಟ್ಟು ಕಂಡರಷ್ಟೇ ದೃಗ್ಗೋಚರವಾಗಬಲ್ಲ ನಮ್ಮದೇ ಚಿಂದಿ ಚೂರುಗಳು. ಸುರೇಂದ್ರನಾಥ್ ಅವರ ಕಾದಂಬರಿ ಕೊನೆಗೂ ನಮ್ಮನ್ನು ತಲುಪಿಸುವುದು ಇಲ್ಲಿಗೇ. ಹೊರಗಿನ ಜಗತ್ತೊಂದು ನಮ್ಮೊಳಗೂ, ನಮ್ಮ ವ್ಯಕ್ತಿತ್ವದ ಭಾಗವಾಗಿಯೂ ಜೀವಂತವಾಗಿರುತ್ತದೆ ಮತ್ತು ಅದು ಒಳಗು-ಹೊರಗುಗಳ ಪ್ರತಿಸ್ಪಂದನದ ಮೂಲಕ ನಮ್ಮ ವ್ಯಕ್ತಿತ್ವವನ್ನು ಕಟ್ಟುತ್ತ, ಕಸಿಯುತ್ತ ಇರುತ್ತದೆ. ಚಂದ್ರ ಚೂರಾಗುವುದು ಇದ್ದದ್ದೇ. ಆದರೆ ಅವನು ಒಂದಾಗುವುದರತ್ತ ಈ ಎಲ್ಲ ಪ್ರಕ್ರಿಯೆಯೂ ಮೊಗಮಾಡಿದೆ ಎಂಬುದು ಮುಖ್ಯ.

ಹಾಗೆಯೇ ನಮ್ಮವೇ ಚೂರುಗಳೇನಿವೆ, ಅವು ನಿಷ್ಪಾಪಿ ಗಾಳಿಗೆ ಉದುರಿ ಬಿದ್ದಿಲ್ಲ ಎನ್ನುವ ಅರಿವನ್ನೂ ಇದು ಹುಟ್ಟಿಸಿದರೆ ಒಳ್ಳೆಯದು.

No comments: