Tuesday, January 13, 2015

ಕರಣಂ ಪವನ್ ಪ್ರಸಾದ್ ಅವರ `ಕರ್ಮ’ ಕಾದಂಬರಿ

"ಪ್ರಸ್ತುತ ಕನ್ನಡ ಕಾದಂಬರಿ ಲೋಕ ನಿಂತ ನೀರಾಗಿದೆ" ಎಂದು ಒಬ್ಬರು ಹಲುಬಿದ್ದನ್ನು ಕಂಡು ತಮಗೆ ಕಾದಂಬರಿಯಲ್ಲಿ ತೊಡಗಲು ಮನಸಾಯಿತು ಎಂದಿರುವ ಕರಣಂ ಪವನ್ ಪ್ರಸಾದ್ "ಒಟ್ಟಾರೆಯಾಗಿ `ಕರ್ಮ’ ಈಗಿನ ಪೀಳಿಗೆಯ ಈ ಅಭದ್ರ ಭಾವಸ್ಥಿತಿಯ ಪ್ರತಿಬಿಂಬವಾಗಿ ಹೊಮ್ಮಿದೆ" ಎಂದೂ ತಮ್ಮ ಕೃತಿಯ ಬಗ್ಗೆ ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ.

ಇಲ್ಲಿ ಎರಡು ಅಂಶಗಳಿವೆ. ಒಂದು ಆಧುನಿಕ ಪೀಳಿಗೆ ಮತ್ತು ಇನ್ನೊಂದು ಅಭದ್ರ ಮನಸ್ಥಿತಿ. ಯಾರು ಈ ಆಧುನಿಕ ಪೀಳಿಗೆ? ಅದು ತಮ್ಮನ್ನು ತಾವು ಈ ಕಾದಂಬರಿಯ ಸುರೇಂದ್ರನೊಂದಿಗೆ ಸಮೀಕರಿಸಿಕೊಳ್ಳಲು ಸಿದ್ಧವಿದೆಯೆ? ಹಾಗೆಯೇ ಅಭದ್ರ ಮನಸ್ಥಿತಿ ಎಂದರೇನು? ಅದು ಟೆಂಪೊರರಿಯೆ, ದೀರ್ಘಕಾಲೀನವೆ, ಅದು ಯಾವಾಗ, ಅಂದರೆ ವಯಸ್ಸಿನ ಯಾವ ಹಂತದಲ್ಲಿ ಈ ಪೀಳಿಗೆಯನ್ನು ಕಾಡತೊಡಗುತ್ತದೆ, ಮತ್ತು ಈ ಪೀಳಿಗೆ ಅದಕ್ಕೆ ಕಂಡುಕೊಂಡಿರುವ ಮಾರ್ಗೋಪಾಯಗಳೇನೇನು? - ಈ ಸಂಗತಿಗಳ ಬಗ್ಗೆ ಅತ್ಯಂತ ವಾಸ್ತವಿಕ ನೆಲೆಗಟ್ಟಿನಲ್ಲಿ ಸ್ವಲ್ಪ ಯೋಚಿಸಿ ನೋಡಿ.

ಈಗಿನ ಪೀಳಿಗೆಯ ಬಗ್ಗೆ ಜನರಲೈಸ್ ಆಗಿ ತಮ್ಮ ಕೃತಿಯ ಬಗ್ಗೆ ಮಾತನಾಡುವ ಕರಣಂ ಪವನ್ ಪ್ರಸಾದ್ ಅವರು ಅಭದ್ರ ಮನಸ್ಥಿತಿಯೊಂದಕ್ಕೆ ಕಾರಣವಾಗಬಹುದಾದ ಸೋಶಿಯೊ-ಇಕಾನಮಿಕ್ ಅಂಶಗಳ ಬಗ್ಗೆ ಕಾದಂಬರಿಯ ಚೌಕಟ್ಟಿನಲ್ಲಿ ತಮ್ಮ ಗಮನ ಹರಿಸಿಲ್ಲ. ವ್ಯಕ್ತಿಗತವಾದ ಕಾರಣಗಳಿರುವ ಒಬ್ಬ ಸುರೇಂದ್ರನಂಥ ವ್ಯಕ್ತಿ ಆಧುನಿಕ ಪೀಳಿಗೆಯ ಪ್ರತಿನಿಧಿ ಎಂದು ಒಪ್ಪಿಕೊಳ್ಳುವುದು ಕಷ್ಟ. ಆಧುನಿಕ ಪೀಳಿಗೆಯ ಲಕ್ಷಣಗಳು ಅವನಲ್ಲಿರಬಹುದು, ಆದರೆ ಅವನ ಲಕ್ಷಣಗಳೆಲ್ಲ ಆಧುನಿಕ ಪೀಳಿಗೆಗೆ ಆರೋಪಿಸುವುದು ಪೂರ್ವಾಗ್ರಹವಾಗುತ್ತದೆ. ಅಲ್ಲದೆ ತಾವು ಸೃಷ್ಟಿಸಿದ ಸುರೇಂದ್ರನಂಥ ಒಂದು ಪಾತ್ರಕ್ಕೆ ಕರಣಂ ಪವನ್ ಪ್ರಸಾದ್ ಒದಗಿಸುವ ಪರಿಪ್ರೇಕ್ಷ್ಯ ಊರಿನಲ್ಲೇ ಉಳಿದು ಅಪ್ಪನಂತೆಯೇ ಪೌರೋಹಿತ್ಯ ಕಲಿತ ನರಹರಿಯದ್ದೇ ಹೊರತು ಇನ್ನೊಂದು `ಆಧುನಿಕ ಪೀಳಿಗೆ’ಯ ವ್ಯಕ್ತಿ, ಸುರೇಂದ್ರನಿಗೆ ಹೊರತಾದ ಆವೃತ್ತಿ ಕಾದಂಬರಿಯಲ್ಲಿಲ್ಲ. ಇದೇ ರೀತಿ ನೇಹಾ ಪಾತ್ರವಂತೂ ತೀರ ಹೀನಾಯವಾಗಿ ಚಿತ್ರಿಸಲ್ಪಟ್ಟಿದೆ. ಈ ನೇಹಾ ಪಾತ್ರಕ್ಕೂ ಹಳ್ಳಿಯ ವಾಣಿ ಪರಿಪ್ರೇಕ್ಷ್ಯವನ್ನೊದಗಿಸುತ್ತಿದ್ದಾಳೆಯೇ ಹೊರತು ನಗರದ ಇನ್ನೊಂದು ಹುಡುಗಿ ಇಲ್ಲಿಲ್ಲ. ಆಧುನಿಕ ಪೀಳಿಗೆಯ ಯುವತಿ ತನ್ನನ್ನು ತಾನು ಈ ನೇಹಾ ಪಾತ್ರದೊಂದಿಗೆ ಸಮೀಕರಿಸಿಕೊಳ್ಳುವುದು ಸಾಧ್ಯವೆ? ಸೂಳೆ, ರಂಡೆ, ವೇಶ್ಯೆ, ನಾಯಿ ಎಂದೆಲ್ಲ ಕರೆಸಿಕೊಳ್ಳುವ ಈ ಪಾತ್ರವನ್ನು ತುಚ್ಛೀಕರಿಸಿರುವ ರೀತಿ ಗಮನಿಸಿದರೆ ಆಶ್ಚರ್ಯವಾಗುತ್ತದೆ. ಅಂದರೆ, ಅಪವಾದದಂತಿರುವ ಇಬ್ಬರು ವ್ಯಕ್ತಿಗಳನ್ನಿಟ್ಟುಕೊಂಡು, ಇವರೇ ಆಧುನಿಕ ಪೀಳಿಗೆಯ ಪ್ರತಿನಿಧಿಗಳು ಎಂಬಂತೆ ಚಿತ್ರಿಸಿರುವುದು ಕಾದಂಬರಿಕಾರರಿಗೆ ಇರುವ ಪೂರ್ವಾಗ್ರಹವನ್ನಷ್ಟೇ ಸೂಚಿಸುವಂತಿದೆ.

ಅಭದ್ರ ಮನಸ್ಥಿತಿ ಎನ್ನುವುದು ಕೂಡಾ ಯಾವುದೇ ಒಂದು ಪೀಳಿಗೆಯ ಗುತ್ತಿಗೆಯಲ್ಲ. ಎಲ್ಲ ಪೀಳಿಗೆಯೂ ಬದುಕಿನ ಒಂದಲ್ಲ ಒಂದು ಹಂತದಲ್ಲಿ ಅಭದ್ರ ಮನಸ್ಥಿತಿಯನ್ನು ಹಾದು ಬಂದಿರುವಂಥದ್ದೇ. ಒಂದು ಮಗುವಿನ ತಂದೆ-ತಾಯಿ, ಅದು ಬೆಳೆಯುವ ವಾತಾವರಣ, ಅದರ ಬಾಲ್ಯದ ಸಮೃದ್ಧಿ, ಶ್ರೀಮಂತವಾದ ಆಟ-ಪಾಠ-ಕೌಟುಂಬಿಕ-ಸಂಸ್ಕಾರಯುತ ಬೆಳವಣಿಗೆಯ ಅವಕಾಶ, ಅದಕ್ಕೆ ದೊರೆಯುವ ಶಿಕ್ಷಣ, ಶಾಲೆಯ ವಾತಾವರಣ, ಮುಂದೆ ಅದು ಉದ್ಯೋಗಕ್ಕೆ ತಯಾರಾಗುವ ಪರಿ, ಶೈಕ್ಷಣಿಕವಾಗಿಯೂ ಔದ್ಯೋಗಿಕವಾಗಿಯೂ ಅದು ಎದುರಿಸ ಬೇಕಾಗುವ ಸ್ಪರ್ಧೆ, ಒತ್ತಡ, ಸವಾಲುಗಳು, ಈ ಹಂತದಲ್ಲಿ ಅದು ಮೈಗೂಡಿಸಿಕೊಳ್ಳುವ ಆತ್ಮವಿಶ್ವಾಸ ಅಥವಾ ಕೀಳಿರಿಮೆ, ಆರ್ಥಿಕ ಒತ್ತಡಗಳು, ಲೈಂಗಿಕ ಒತ್ತಡಗಳು ಹಾಗೂ ಸಮಾಜದಲ್ಲಿ ಅಸ್ಮಿತೆಯನ್ನು ಕಂಡುಕೊಳ್ಳುವ ಒತ್ತಡಗಳು ಆತನನ್ನು ಯಾವ ಪಥದಲ್ಲಿ ಮುನ್ನಡೆಸುತ್ತವೆ, ಆತ ಗಳಿಸುವ ಹಣ, ಹೆಣ್ಣು, ಆಸ್ತಿ ಸಹಿತವಾದ ಜೀವನ ಶೈಲಿ - ಎಲ್ಲವೂ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ವ್ಯಕ್ತಿಯೊಬ್ಬ ತನ್ನ ಬದುಕಿನುದ್ದಕ್ಕೂ ತನ್ನ ಪಾಲಿಗೆ ದಕ್ಕಿಸಿಕೊಳ್ಳಬಲ್ಲ "ಸ್ವಂತ ಸಮಯ" ಕೂಡಾ. ಇದನ್ನು ನಾವು ಸ್ಪೇಸ್ ಎಂದೂ, ಏಕಾಂತವೆಂದೂ ಕರೆಯಬಹುದು. ಕನಿಷ್ಠ ಒಂದಷ್ಟು ಹೊತ್ತು ಸ್ವಸ್ಥ ಕೂತು ತಾನು ಏನಾಗಿದ್ದೇನೆ-ಹೇಗೆ ಬದುಕುತ್ತಿದ್ದೇನೆ-ಹೇಗಿರಬೇಕು ಎಂಬ ಬಗ್ಗೆ ವಿವೇಚಿಸಬಹುದಾದ ಘಳಿಗೆಯದು. ಗಡಿಯಾರ ನೋಡಿಕೊಂಡು ಏಳುವ, ಮಲಗುವ, ನಿಮಿಷಗಳ ಲೆಕ್ಕದಲ್ಲಿಯೇ ನಿತ್ಯವಿಧಿಗಳನ್ನು ಮುಗಿಸಿಕೊಂಡು ಕಚೇರಿಗೆ ಧಾವಿಸುವ, ಯಾವುದಕ್ಕೂ ಪುರುಸೊತ್ತಿಲ್ಲದ ಜೀವನಶೈಲಿಯಲ್ಲಿ ಪ್ರತಿಯೊಬ್ಬರಿಗೂ ಅಭದ್ರ ಮನಸ್ಥಿತಿಯ ಅನುಭವವಾದರೆ ಅದರಲ್ಲೇನೂ ಅಚ್ಚರಿಯಿಲ್ಲ. ಯೋಗ, ಧ್ಯಾನ, ಸತ್ಸಂಗ ಮತ್ತೊಂದು ಎಂದೆಲ್ಲ ಹೆಜ್ಜೆ ಹೆಜ್ಜೆಗೂ ಹುಟ್ಟಿಕೊಂಡಿರುವ ಕೇಂದ್ರಗಳಲ್ಲಿ ಕಂಡುಬರುವ ನೂಕುನುಗ್ಗಲು ಇದಕ್ಕೆ ಪುರಾವೆಯನ್ನೂ ಒದಗಿಸುತ್ತಿದೆ, ಸುಳ್ಳಲ್ಲ. ಕರಣಂ ಪವನ್ ಪ್ರಸಾದ್ ಬಳಸಿಕೊಳ್ಳುವುದೇನೋ ಈ ಹಂತದ ಮನಸ್ಥಿತಿಯನ್ನೇ. ಆದರೆ ಬಳಸಿಕೊಳ್ಳುತ್ತಿದ್ದಾರೆಯೇ ಹೊರತು ಪೂರ್ವನಿರ್ಧಾರಿತ ಉದ್ದೇಶಗಳನ್ನಿಟ್ಟುಕೊಳ್ಳದೇ ಮುಕ್ತವಾದ ಮನಸ್ಥಿತಿಯೊಂದಿಗೆ ವಾಸ್ತವವನ್ನು ಶೋಧಕ್ಕೊಡ್ಡುತ್ತಿಲ್ಲ. ಕರಣಂ ಪವನ್ ಪ್ರಸಾದ್ ವಾಸ್ತವದ ಒಂದು "ಆಧುನಿಕ ಪೀಳಿಗೆಯ ಅಭದ್ರ ಮನಸ್ಥಿತಿ" ಎಂಬ ಪರಿಕಲ್ಪನೆಯನ್ನು ಎತ್ತಿಕೊಂಡು ತಮ್ಮದೇ ಆದ ಪ್ರಮೇಯ ಮಂಡನೆಗೆ ಹೊರಡುತ್ತಾರೆ.

ತಾವು ನಂಬಿದ ತಾತ್ವಿಕ ನಿಲುವು-ನೆಲೆಗಟ್ಟಿನಲ್ಲಿಯೇ ತಮ್ಮ ಕೃತಿಗಳನ್ನು ರಚಿಸುವ ಅಜೆಂಡಾ ಸಾಹಿತಿಗಳು ತಮ್ಮ ನಿಲುವು, ತತ್ವ, ಅರಿವು ಏನಿದೆ ಅದನ್ನು ಕೃತಿಯೊಂದರ ಮೂಲಕ ಸ್ಥಾಪಿಸಲು ಹೊರಟಾಗ ಅದಕ್ಕನುಗುಣವಾಗಿಯೇ ತಮ್ಮ ಪಾತ್ರಗಳನ್ನು ಸೃಷ್ಟಿಸುತ್ತಾರೆಯೇ ಹೊರತು ಅದನ್ನು ಪ್ರಶ್ನಿಸಬಲ್ಲ ನೆಲೆಗೆ ಅವೇ ಪಾತ್ರಗಳನ್ನು ಯಾವತ್ತೂ ಹೋಗಲು ಬಿಡುವುದಿಲ್ಲ.

ಕಾದಂಬರಿಯೊಂದನ್ನು ಓದುತ್ತಿರುವಾಗಲೇ ಅದರಲ್ಲಿನ ಪಾತ್ರಗಳು, ಅವುಗಳ ವರ್ತನೆ, ನಿಲುವು ಎಲ್ಲವನ್ನೂ ಓದುಗ ತನ್ನ ಸ್ವಂತದ ಜೀವನಾನುಭವದೊಂದಿಗೆ ತಳುಕು ಹಾಕಿಕೊಳ್ಳುತ್ತಲೇ ಅದನ್ನು ತನಗಾಗಿ ತಾನು ಮರುಸೃಷ್ಟಿಸಿಕೊಳ್ಳುತ್ತಲೇ ಇರುತ್ತಾನೆ. ಆ ಪ್ರಕ್ರಿಯೆಯಲ್ಲಿ ಅವನು ಸಹಜವಾಗಿಯೇ ಒಂದು ಪಾತ್ರ ಹೀಗೆಯೇ ನಡೆದುಕೊಳ್ಳುತ್ತದೆ ಎನ್ನುವ ಬಗ್ಗೆ ತನ್ನದೇ ಪೂರ್ವಾಗ್ರಹ/ನಿರೀಕ್ಷೆ/ಕಲ್ಪನೆಗಳನ್ನು ಕಟ್ಟಿಕೊಳ್ಳುವುದೂ ಸೇರಿರುತ್ತದೆ. ಬರಹಗಾರನಿಗೂ ಇದರ ಅರಿವಿದ್ದು ಅವನು ಅದನ್ನು ಮೀರಲು, ಮೀರಿ ಓದುಗನನ್ನು ಶಾಕ್‌ಗೆ ಒಳಪಡಿಸಲು, ಓದುಗನನ್ನು ಅರಿವಿನ ಹೊಸ ಎತ್ತರಕ್ಕೆ ಕೊಂಡೊಯ್ಯಲು, ಓದುಗನಿಗೆ ಅದುವರೆಗೂ ಹೊಳೆದಿರದ, ಗೊತ್ತಿರದಿದ್ದ ಹೊಸತೇ ಆದ ಸತ್ಯದ/ಒಳನೋಟದ/ದರ್ಶನದ/ಕಾಣ್ಕೆಯ ಮುಖಾಮುಖಿಗೆ ಸಜ್ಜಾಗಿಸಲು ಯತ್ನಿಸುತ್ತಿರುತ್ತಾನೆ. ಈ ಎರಡೂ - ಬರೆಯುವ ಹಂತದ ಮತ್ತು ಓದುವ ಹಂತದ ಪ್ರಕ್ರಿಯೆಯನ್ನು ಮೀರಿ ಸೂಕ್ಷ್ಮವಾದ ಗ್ರಹಿಕೆಯೊಂದು ಕೃತಿಯನ್ನು, ಆ ಕೃತಿಯೊಳಗಿನ ಸನ್ನಿವೇಶ, ಪಾತ್ರಗಳು ಮತ್ತು ಅವುಗಳ ಸಂಯೋಜನೆಯ ಫಲಶ್ರುತಿಯನ್ನು ತೂಗುತ್ತಿರುತ್ತದೆ. ಅದು ಕೃತಿಯ ಅಥೆಂಟಿಸಿಟಿ, ಬರಹಗಾರನ ಪ್ರಾಮಾಣಿಕತೆ ಮತ್ತು ಅನುಭವ ನಿಷ್ಠತೆಯನ್ನು ಸೂಚಿಸುವಂಥಾದ್ದು. ಡಾ|| ಯು ಆರ್ ಅನಂತಮೂರ್ತಿಯವರೇ ಇದನ್ನು `ವಾಲ್ಮೀಕಿಯ ನೆವದಲ್ಲಿ’ ಎನ್ನುವ ಒಂದು ಪ್ರಬಂಧದಲ್ಲಿ ಬಹುಅದ್ಭುತವಾಗಿ ವಿವರಿಸಿದ್ದಾರೆ. ಬರೆದಿದ್ದು ಓದುವಾಗ ಓದುವ real time experienceನಲ್ಲೇ ಹೌದು ಹೌದು ಎನಿಸುವುದು ಮುಖ್ಯವಾಗುತ್ತದೆ ಎನ್ನುವ ಅರ್ಥದ ಮಾತು. ಲಿಂಗ ಮೆಚ್ಚಿ ಅಹುದು ಅಹುದೆನ್ನಬೇಕು ಎನ್ನುತ್ತಾರಲ್ಲ, ಅದು. ಆದರೆ ಇದಕ್ಕೆ ಸಾಕ್ಷ್ಯ, ಆಧಾರ, ಪ್ರಮಾಣ ಇರುವುದಿಲ್ಲ.

ಕೆಲವೊಂದು ಸೂಕ್ಷ್ಮವಾದ ವಿಚಾರಗಳನ್ನು ನಾವು ನಮ್ಮೊಳಗೇ ತರ್ಕ, ಚರ್ಚೆ, ಪ್ರಶ್ನೆ, ವಾದ, ವಿರೋಧ ಎಲ್ಲವನ್ನೂ ಮುಂದೊಡ್ಡಿ ನಮಗೆ ನಾವು ಸ್ಪಷ್ಟವಾಗಬೇಕಾಗುತ್ತದೆ. ಇದನ್ನು ನನಗಾಗಿ ಇನ್ನೊಬ್ಬ ವ್ಯಕ್ತಿ ಮಾಡುವುದು ಸಾಧ್ಯವಿಲ್ಲ. ಇದು ಕನ್ವಿನ್ಸ್ ಮಾಡುವ ಪ್ರಕ್ರಿಯೆಯಲ್ಲ. ಪ್ರಶ್ನಿಸದೇ ರೂಢಿಸಿಕೊಂಡು ಬಂದಿರುವುದನ್ನು, ಒಪ್ಪಿಕೊಂಡಿರುವುದನ್ನು, ಆಚರಿಸುತ್ತಿರುವುದನ್ನು ಪ್ರಶ್ನಿಸಿಕೊಳ್ಳುವ ಪ್ರಕ್ರಿಯೆ ಮತ್ತು ಇದನ್ನು ಮಾಡುತ್ತಿರುವುದು ಕೇವಲ ನಮಗಾಗಿ, ಇನ್ಯಾರಿಗಾಗಿಯೂ ಅಲ್ಲ. ಈ ಪ್ರಕ್ರಿಯೆಯಲ್ಲಿ ವಾದ-ವಿವಾದಕ್ಕೆ ಸೂಕ್ತವಾಗಿ ಮಂಡಿಸಬಹುದಾದ ಪಾಯಿಂಟುಗಳಿರುವುದಿಲ್ಲ. ನನ್ನೊಂದಿಗೆ ನಾನು ಮಾತನಾಡಿಕೊಳ್ಳುವಾಗ ಎಷ್ಟೋ ಬಾರಿ ನನಗೆ ಸಾಕ್ಷ್ಯ, ಆಧಾರ, ಪ್ರಮಾಣಗಳ ಮೂಲಕ ಮಂಡಿಸಿಕೊಳ್ಳಬೇಕಾದ ಸಂಗತಿಗಳಿರುವುದೇ ಇಲ್ಲ. ನನ್ನ ಜೀವನಾನುಭವ, ಸ್ಮೃತಿ, ಪೂರ್ವಾಗ್ರಹ, ಒಗ್ಗುವಿಕೆಗಳನ್ನೆಲ್ಲ ನಾನು ಇನ್ನೊಬ್ಬರ ಮೇಲೆ ಇರಿಸಲು-ಹೊರಿಸಲು ಸಾಧ್ಯವಿಲ್ಲವಾದರೂ ನನ್ನ ಮಟ್ಟಿಗೆ ಅದು ಸಮಸ್ಯೆಯೊಡ್ಡುವುದಿಲ್ಲ. ಹಾಗೆ ನಾನು ಒಪ್ಪಿಕೊಂಡಿದ್ದು ನನ್ನೊಂದಿಗೆ ನನ್ನ ಅತ್ಯಂತ ಕಠಿಣತಮ ಸ್ಥಿತಿಯಲ್ಲೂ ಒಪ್ಪಿಕೊಳ್ಳುವುದಕ್ಕೆ ಸರಳೀತವಾಗುವಂತಿರಬೇಕು. ಎಲ್ಲೋ ಒಂದು ಕಡೆ ನಾನು ನನ್ನ ಅನುಕೂಲಕ್ಕಾಗಿ ಅದನ್ನು ಬಿಟ್ಟುಬಿಡುವಂತಿದ್ದರೆ ಅದು ನಿಲುವು ಆಗುವುದಕ್ಕೆ ಅರ್ಹವಾದ ವಿಚಾರವಲ್ಲ. Ship of Theseus ಸಿನಿಮಾದಲ್ಲಿ ಇಂಥ ಒಂದು ಅತಿರೇಕಕ್ಕೆ ನಿಲುವುಗಳನ್ನು ಕೊಂಡೊಯ್ದು ಪರೀಕ್ಷೆಗೊಡ್ಡುವ ಸಂದರ್ಭವಿದೆ, ಆಸಕ್ತರು ಅದನ್ನು ಗಮನಿಸಬಹುದು.

ಇದಕ್ಕೆ ವ್ಯತಿರಿಕ್ತವಾಗಿ ಇದನ್ನು ಪರರೊಂದಿಗೆ ಮಾಡುವ ಚರ್ಚೆಯಾಗಿಸಿದಲ್ಲಿ, ಅದು ಕಾದಂಬರಿಯಾಗದೆ ಡಿಬೇಟ್ ಆಗುತ್ತದೆ. ಅನಂತಮೂರ್ತಿಯವರೇ ಒಮ್ಮೆ ಎಸ್ ಎಲ್ ಭೈರಪ್ಪನವರನ್ನು ಕಾದಂಬರಿಕಾರರಲ್ಲ, ಡಿಬೇಟರ್ ಎಂದಿದ್ದು ಈ ಅರ್ಥದಲ್ಲಿ. ನನಗೆ ಏನೋ ಹೇಳುವುದಿದೆ ಮತ್ತು ಅದಕ್ಕೆ ಪ್ರತಿಯಾಗಿ ಒಂದಿಷ್ಟು ವಾದವಿರುವುದೂ ನನಗೆ ಗೊತ್ತಿದೆ. ನಾನು ನನ್ನ ವಾದವನ್ನು ಸಮರ್ಥವಾಗಿ ಮಂಡಿಸಲು ಪ್ರತಿವಾದಿಯನ್ನು ದುರ್ಬಲವಾಗಿಸುತ್ತೇನೆ ಮತ್ತು ತನ್ಮೂಲಕ ಮೇಲ್ಗೈ ಸಾಧಿಸುತ್ತೇನೆ. ಇದು ಇಂಥ ಸೂಕ್ಷ್ಮ ವಿಚಾರಗಳನ್ನು ಅಂತರಂಗದ ಚಿಂತನ-ಮಂಥನದ ನೆಲೆಯಿಂದ ಸಾರ್ವಜನಿಕ ಚರ್ಚಾಗೋಷ್ಠಿಗೆ ಎಳೆದು ತರುವುದರ ಪರಿಣಾಮ. `ಕರ್ಮ’ ಕಾದಂಬರಿಯ ಪುಟ 76ರಲ್ಲಿ ಆಶಾದಾಯಕವಾದ ಮಾತೊಂತಿದೆ. "ಬೇರೆಯವರ ಮೇಲಿನ ನಿನ್ನ ಅವಲಂಬನೆ ನಂಬಿಕೆ, ನಿನ್ನ ಮೇಲಿನ ನಿನ್ನ ಅವಲಂಬನೆ ಶ್ರದ್ಧೆ. ಇದೇ ಶ್ರದ್ಧೆಗೂ ನಂಬಿಕೆಗೂ ಇರುವ ವ್ಯತ್ಯಾಸ" ಎಂಬುದೇ ಆ ಮಾತು. ಆದರೆ ಅದೇ ಒಳಗಿನಿಂದ ಬರಬೇಕಾದ ಶ್ರದ್ಧೆಯನ್ನು ಹೀಗೆ ಎರವಲು ಕೊಡುವ ಉದ್ದೇಶದಿಂದ ಕಾದಂಬರಿಗಳು ಹೊರಡುವುದು ವಿಚಿತ್ರ ಎನಿಸುವುದಿಲ್ಲವೆ?

ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಒಮ್ಮೆ ಒಪ್ಪಿಕೊಂಡ ಮೌಲ್ಯ,ನಿಲುವು, ನೀತಿಗಳನ್ನು ಮುಂದೆ ಬದಲಿಸಿಕೊಳ್ಳಬಹುದು, ಇಲ್ಲವೆಂದಲ್ಲ. ಆದರೆ ಎಷ್ಟು ಕಾಲ ಅವನು ಬದ್ಧನಾಗಿರುತ್ತಾನೋ ಅಷ್ಟು ಕಾಲ ಆ ಬದ್ಧತೆ ಚಂಚಲವಾಗಿರಬಾರದು. ಇಲ್ಲಿ ನಂಬುಗೆ ಬೇರೆ ಶೃದ್ಧೆ ಬೇರೆ ಎಂದು ಎರಡು ವಿಧವಾಗಿ ವಿಂಗಡಿಸಿ ವಿವರಿಸಲಾಗಿದೆ. ಅದನ್ನು ನಂಬುಗೆ ಎಂದಾದರೂ ಕರೆಯಿರಿ, ಶ್ರದ್ಧೆ ಎಂದಾದರೂ ಕರೆಯಿರಿ, ಅದನ್ನು ಪ್ರತಿಪಾದಿಸುವ ವ್ಯಕ್ತಿಗೆ ಅದರತ್ತ ರೀಸನೆಬಲ್ ಅವಧಿಗಾದರೂ ಬದ್ಧತೆ ಇರಬೇಕಾಗುತ್ತದೆ. ಅಂಥ ಬದ್ಧತೆ ಇರಬೇಕಾದರೆ ವ್ಯಕ್ತಿತ್ವ ಜೊಳ್ಳಾಗಿರಬಾರದು. ಗಟ್ಟಿಯಾಗಿರಬೇಕಿರುತ್ತದೆ. ಸಾಮಾಜಿಕ-ತಾತ್ವಿಕ ಅರ್ಥಪೂರ್ಣತೆಯನ್ನು ಕೃತಿಗಳ ಮೂಲಕ ಮಂಡಿಸಲು ಹೊರಡುವ ನಮ್ಮ ಕಾದಂಬರಿಗಳಲ್ಲಿ ಗಟ್ಟಿಯಾದ ನಿಲುವು, ವ್ಯಕ್ತಿತ್ವ ಇರುವ ಪಾತ್ರಗಳನ್ನು ನಿಕಷಃಕ್ಕೊಳಪಡಿಸಿದರೆ ಮಾತ್ರ ಕೃತಿಕಾರ ಮಂಡಿಸುತ್ತಿರುವುದರಲ್ಲಿ ಓದುಗನಿಗೆ ಸತ್ವವಿದೆ ಎನಿಸುವುದು ಸಾಧ್ಯ. ಬದಲಿಗೆ ಇತ್ತ ವಾಲಿದರೆ ಇತ್ತ, ಅತ್ತ ತೂರಿದರೆ ಅತ್ತ ಎಂಬಂಥ ಮನಸ್ಥಿತಿಯ ಪಾತ್ರಗಳನ್ನಿಟ್ಟುಕೊಂಡು ಸಿದ್ಧಾಂತವನ್ನು ಮಂಡಿಸಲು ಹೊರಡುವುದು ಅವಕಾಶವಾದಿತ್ವ ಎನಿಸಿಕೊಳ್ಳುತ್ತದೆ ಮಾತ್ರವಲ್ಲ ಅದು ಓದುಗನ ತಾತ್ಸಾರಕ್ಕೂ ಪಾತ್ರವಾಗುತ್ತದೆ.

ಈಗ ಗಮನಿಸಿದರೆ ನಾರಣಪ್ಪನಂಥ ಕುಡುಕ, ವ್ಯಭಿಚಾರಿ, ಲಂಪಟ, ಚಂದ್ರಿಯಂಥ ಸೂಳೆಯನ್ನು ಪ್ರಾಣೇಶಾಚಾರ್ಯರ ಎದುರಿಟ್ಟುಕೊಂಡು ಹೊರಡುವ ಅನಂತಮೂರ್ತಿ ಮತ್ತು ಸುರೇಂದ್ರನಂಥ ಸ್ಪಷ್ಟ ನಿಲುವಿಲ್ಲದ, ವ್ಯಕ್ತಿತ್ವವಿಲ್ಲದ ಪಾತ್ರ ಮತ್ತು ನೇಹಾಳಂಥ ಪಾತ್ರವನ್ನು ಶ್ರೀಕಂಠ ಜೋಯಿಸರು, ನರಹರಿ, ವಾಣಿ, ವೆಂಕಟೇಶ ಭಟ್ಟರ ಎದುರಿರಿಸಿ ಅಭದ್ರ ಮತ್ತು ಸುಭದ್ರ ಮನಸ್ಥಿತಿಯ ಪ್ರತಿಬಿಂಬಗಳನ್ನು ಮೂಡಿಸುವ ಕರಣಂ ಪವನ್ ಪ್ರಸಾದ್ ನಮಗೆ ಸ್ಪಷ್ಟವಾಗಬೇಕು. ಈ ಬಗೆಯಾಗಿ ಬರೆದವರು ಇವರಿಬ್ಬರೇ ಎಂದಾಗಲೀ, ಈ ಪದ್ಧತಿಯ ಸರಿತಪ್ಪುಗಳನ್ನಾಗಲೀ ನಾನು ವಿಮರ್ಶಿಸುತ್ತಿಲ್ಲ. ನನ್ನ ಆಸಕ್ತಿ ಏನಿದ್ದರೂ ಬದುಕು-ಮನುಷ್ಯ ಮತ್ತು ಮನಸ್ಸು ಇವುಗಳ ಬಗ್ಗೆ ವಿಶ್ವಾಸಾರ್ಹವಾದುದನ್ನು ಕೃತಿ ಕಟ್ಟಿಕೊಡುತ್ತಿದೆಯೇ ಅಥವಾ ಕೇವಲ ಅಂಥ ಭ್ರಮೆ ಮೂಡಿಸುತ್ತಿದೆಯೇ ಎನ್ನುವುದಷ್ಟೇ.

ನಂಬಿಕೆ, ಶ್ರದ್ಧೆಯ ಮಾತು ಬಂದಾಗ ಗಮನಿಸಬಹುದಾದ ಒಂದು ವಿಚಾರ ಇಲ್ಲಿದೆ. 2013ರ ಮ್ಯಾನ್ ಬುಕರ್ ಪ್ರಶಸ್ತಿಗೆ ಪಾತ್ರವಾದ ಕೃತಿ ಎಲೆನಾರ್ ಕ್ಯಾಟನ್ ಅವರ ದ ಲ್ಯುಮಿನರೀಸ್ ತನ್ನ ಕಥಾಹಂದರದಲ್ಲಿ ನವಗ್ರಹಗಳ ಕೂಟ ಮತ್ತು ಚಲನೆಯನ್ನು ಬಳಸಿಕೊಂಡು ಸಾಗುತ್ತದೆ. ಈ ಬಗ್ಗೆ ಈಚೆಗೆ ಆಕೆಯನ್ನು ಪ್ರಶ್ನಿಸಿದ ಒಂದು ಸಂದರ್ಶನ ಡಿಸೆಂಬರ್ 14,2014ರ ದ ಹಿಂದೂ ದಿನಪತ್ರಿಕೆಯ ಭಾನುವಾರದ ಪುರವಣಿಯಲ್ಲಿ ಪ್ರಕಟವಾಗಿದೆ, ಆಸಕ್ತರು ಅದನ್ನೂ ಗಮನಿಸಬಹುದು. ಅಲ್ಲಿ ಆಕೆಗೆ ನೀವಿದನ್ನೆಲ್ಲ ನಂಬುತ್ತೀರಾ ಎಂಬ ಅದೇ ಹಳಸಲು ಪ್ರಶ್ನೆಯನ್ನು ಕೇಳಲಾಗಿದೆ. ಅದಕ್ಕೆ ಆಕೆ ನಂಬಿಕೆ ಎಂಬ ಶಬ್ದ ಪ್ರಯೋಗವೇ ತಪ್ಪು ಎನ್ನುತ್ತಾರೆ. "ಮನುಷ್ಯ ಪ್ರಜ್ಞೆ ತಾನು ಕಾಣುವ ಪ್ರತಿಯೊಂದನ್ನೂ ಇನ್ಯಾವುದರ ಜೊತೆಗೋ ಪರಸ್ಪರ ಅರ್ಥಪೂರ್ಣವಾಗಿ ಜೋಡಿಸುವುದಕ್ಕೆ, ಸಂಯೋಜಿಸಿ ಗ್ರಹಿಸುವುದಕ್ಕೆ ತುಡಿಯುತ್ತದೆ. ಹಾಗೆ ನೀವು ಕಾಣಬಯಸುವುದನ್ನು ಕಾಣುವುದು ಅಥವಾ ಬಯಸದ್ದನ್ನು ಕಾಣದೇ ಇರುವುದು ಸಾಧ್ಯವಿದೆ. ಒಬ್ಬ ಕಾದಂಬರಿಕಾರಳಾಗಿ ನಾನು ನನ್ನ ಕೃತಿಯಲ್ಲಿ ಅಂಥ ಸಂಯೋಜನೆಯನ್ನು ಕಟ್ಟಿದ್ದೇನೆ. ಅಲ್ಲಿಯೂ ನೀವು ಪರಸ್ಪರ ಸಂಬಂಧವನ್ನು ಕಾಣಬಹುದು ಅಥವಾ ಬಿಟ್ಟು ಬಿಡಬಹುದು. ಬದುಕಿನಲ್ಲಿ ಎಂತೋ ಅಂತೆಯೇ ಇದೂ ನೋಡುವ-ನೋಡದಿರುವ ಆಯ್ಕೆಗೆ ಬಿಟ್ಟಿದ್ದೇ ಹೊರತು ನಂಬಿಕೆಗೆ ಸೇರಿದ್ದಲ್ಲ" ಎಂಬರ್ಥದ ಮಾತುಗಳನ್ನಾಕೆ ಆಡಿದ್ದಾರೆ. ಹಿಂದೂ ಧರ್ಮ, ಎಸ್ ಎಲ್ ಭೈರಪ್ಪ, ಆಧುನಿಕ ಪೀಳಿಗೆ ಮುಂತಾದ ಪೂರ್ವಾಗ್ರಹಗಳ ನೆಲೆಯನ್ನು ಬಿಟ್ಟು ಈ ದೃಷ್ಟಿಕೋನದಿಂದಲೂ ಇದನ್ನೆಲ್ಲ ಗಮನಿಸಬಹುದು.

ಈಗ ಅನಂತಮೂರ್ತಿಯವರ ಸಂಸ್ಕಾರ ಕಾದಂಬರಿಯನ್ನು ಗಮನಿಸಿ. ಕರಣಂ ಪವನ್ ಪ್ರಸಾದ್ ತಮ್ಮ ಕರ್ಮ ಕಾದಂಬರಿಯನ್ನು ದೋಸೆ ತಿರುವಿ ಹಾಕಿದಷ್ಟೇ ಸಲೀಸಾಗಿ ಸಂಸ್ಕಾರವನ್ನು ಪುನರ್ರಚಿಸಿರುವುದು ಕಂಡು ಬರುವುದರಿಂದ ಎರಡೂ ಕಾದಂಬರಿಗಳ ಪಾತ್ರಗಳನ್ನು ಮತ್ತೊಮ್ಮೆ ಜಿಜ್ಞಾಸೆಗೊಡ್ಡುವುದು ಅನಿವಾರ್ಯ. ಸಂಸ್ಕಾರದಲ್ಲಿಯೂ ಕರ್ಮದಲ್ಲಿಯಂತೇ ಒಂದು ಶವವನ್ನಿಟ್ಟುಕೊಂಡು ಕಥಾನಕ ಸಾಗುತ್ತದೆ. ಸಹಜವಾಗಿ ಹಿಂದೂ ಧರ್ಮದ ಕೇಂದ್ರ ಆಸಕ್ತಿ ಕೂಡಾ ಬದುಕು ಅಲ್ಲ. ಅದಕ್ಕೆ ಬದುಕಿನ ನಂತರದ ಅವಸ್ಥೆ, ಕರ್ಮಫಲ, ಗರುಡ ಪುರಾಣ, ನರಕ, ಪಾಪ-ಪುಣ್ಯ ಇವುಗಳತ್ತ ಗಮನ ಹೆಚ್ಚು. ಅದಕ್ಕಾಗಿ ಮರಣಾನಂತರದ ಅವಸ್ಥೆಗಳು, ಪುನರ್ಜನ್ಮ ಇತ್ಯಾದಿಗಳ ಭರವಸೆಯೊಂದು ಅಗತ್ಯವಾಗಿದೆ. ಬದುಕು ಮತ್ತು ತದನಂತರ ಬರಿ ಬೂದಿ ಅಷ್ಟೇ ಎಂದರೆ ಮನಸ್ಸಿಗೆ ಆಘಾತವಾಗುತ್ತದೆ. ಇಲ್ಲ, ಆನಂತರವೂ ಏನೋ ಒಂದು ಮುಂದುವರಿಯುತ್ತಲೇ ಇರುತ್ತದೆ ಎಂದರೆ ಸ್ವಲ್ಪ ಸಮಾಧಾನವಾಗುತ್ತದೆ. ಜನ್ಮತಃ ಬಂದುಬಿಟ್ಟ ಜಾತಿ, ದೈಹಿಕ ನ್ಯೂನತೆ, ಆರ್ಥಿಕ ಸಂಕಷ್ಟ, ರೋಗ-ರುಜಿನ ಇವುಗಳಿಗೆಲ್ಲ ಪೂರ್ವಜನ್ಮದ ಕರ್ಮಫಲವನ್ನೋ, ನಸೀಬನ್ನೋ, ಹಣೆಬರಹವನ್ನೋ ದೂರುವುದರಲ್ಲಿ ಸಾಂತ್ವನವಿದೆ. ತರ್ಕಕ್ಕೆ ಸಿಗದ ಅಸಮಾನತೆಯನ್ನೂ ಹೀಗೆಯೇ ತಳ್ಳಿಹಾಕುವುದರಿಂದ ಕನಿಷ್ಠ ಕಮ್ಯುನಿಸಂ ಹುಟ್ಟಿಕೊಳ್ಳದಂತೆ ನೆಮ್ಮದಿಯಿಂದ ಬದುಕಬಹುದು.

ಸಂಸ್ಕಾರದಲ್ಲಿ ಸತ್ತಿರುವ ನಾರಣಪ್ಪ ಒಬ್ಬ ಲಫಂಗ, ಕುಡುಕ, ವ್ಯಭಿಚಾರಿ. ಚಂದ್ರಿ ಸಾಕ್ಷಾತ್ ಸೂಳೆ. ಅವಳ ಮೊಲೆ, ಕಾಲ ಬೆರಳು ಕೂಡ ಪುರೋಹಿತಶಾಹಿಯ ತುಲನೆಗೆ ಒಳಗಾಗುವ ಅಂಶ. ಪ್ರಾಣೇಶಾಚಾರ್ಯ ಕರ್ಮಠ ಬ್ರಾಹ್ಮಣ, ಹಾಸಿಗೆ ಹಿಡಿದ ಪತ್ನಿಯ ಸೇವೆ ಮಾಡುತ್ತ ನಿಜಾರ್ಥದಲ್ಲಿ ಬಹಳ ಆದರ್ಶಮಯವೂ, ಶ್ರೇಷ್ಠವೂ, ಗೌರವಾರ್ಹವೂ ಇತ್ಯಾದಿಗಳೆಲ್ಲ ಆದ ಬದುಕನ್ನು ಸವೆಸುತ್ತಿರುವ ಪುರೋಹಿತ. ಇದು ಪಾರಂಪರಿಕ ಬ್ಲ್ಯಾಕ್ ಎಂಡ್ ವೈಟ್ ಚಿತ್ರವೇ ಹೊರತು ಇನ್ನೇನಲ್ಲ. ಅನಂತಮೂರ್ತಿಯವರ ಪ್ರಾಣೇಶಾಚಾರ್ಯರು ಪ್ರಕೃತಿಗೆ - ನೈಸರ್ಗಿಕವಾದ ಕಾಮಕ್ಕೆ ಸ್ಪಂದಿಸಿ ಸಂಸ್ಕಾರವಂತರಾಗುತ್ತಾರೆ ಅಥವಾ ಹೊಸದಾದ ಒಂದು ಅರಿವಿಗೆ ಮುಖಾಮುಖಿಯಾಗುತ್ತಾರೆ ಎಂದಿಟ್ಟುಕೊಳ್ಳುವ. `ಕರ್ಮ’ದಲ್ಲಿ ತದ್ವಿರುದ್ಧವಾಗಿ ಸತ್ತಿರುವ ವ್ಯಕ್ತಿ ಪ್ರಾಣೇಶಾಚಾರ್ಯರ ಅಪರಾವತಾರ. ಗಮನಿಸಿ - ಇಲ್ಲಿನ ಶ್ರೀಕಂಠ ಜೋಯಿಸರು ಸಾಮಾನ್ಯ ಮನುಷ್ಯನಾಗಬಲ್ಲ ಸಾಧ್ಯತೆಯೊಂದು ಜೀವಂತವಾಗಿರುವ ಪ್ರಾಣೇಶಾಚಾರ್ಯರಂಥವರಲ್ಲ. ಅವರು ಕಾಮಕ್ಕೂ ಸ್ಪಂದಿಸಿ ವಿವಶರಾಗಿ ಸೋಲುವವರಲ್ಲ, ಅಷ್ಟೂ ಶ್ರೇಷ್ಠ. ಇದಕ್ಕೆ ನರಹರಿಯ ಆವೃತ್ತಿಯಲ್ಲಿ ಸಮರ್ಥನೆ ಇದೆ. ಇನ್ನು ಬದುಕಿ ಸಂಸ್ಕಾರಯುತನಾಗಬೇಕಿರುವ ವ್ಯಕ್ತಿ, ಸುರೇಂದ್ರ ಇಲ್ಲಿ ನಾರಣಪ್ಪನ ಅವತಾರ. ಈತ ಲಂಪಟ, ಕಾಮುಕ, ನಿಯತ್ತಿಲ್ಲದವನು ಇತ್ಯಾದಿ. ಚಂದ್ರಿಯ ಆವೃತ್ತಿಯಾಗಿ ಇಲ್ಲಿ ನೇಹಾ ಇದ್ದಾಳೆ. ಟೀಶರ್ಟ್ ತೊಟ್ಟು ಮೊಲೆ ಗಮನಕ್ಕೆ ಬರುವಂತೆ ಮಾಡುವ, ಹೊಟ್ಟೆ-ಹೊಕ್ಕುಳು ತೋರಿಸುವ, ಸಿಗರೇಟು ಸೇದುವ, ಕುಡಿಯುವ, ಲಿವಿಂಗ್ ಇನ್ ಮಾಡಿದ, ಹಲವರೊಂದಿಗೆ ಮಲಗಿದ, ಕಾಮುಕಿಯಾದ ಈಕೆಯನ್ನು ಕಾದಂಬರಿಯ ಹಲವು ಪಾತ್ರಗಳು ಸೂಳೆ, ವೇಶ್ಯೆ, ರಂಡೆ ಎಂದೆಲ್ಲ ಉದ್ದಕ್ಕೂ ಜರಿಯುತ್ತಲೇ ಇರುವುದನ್ನು ಗಮನಿಸಬಹುದು. ಇವಳಿಗೆ ಪರಿಪ್ರೇಕ್ಷ ಒದಗಿಸುವ ಪಾತ್ರ ಮುತ್ತೈದೆಯ ಗುಣಲಕ್ಷಣಗಳನ್ನೂ, ಪಾವಿತ್ರ್ಯದ ಪ್ರಖರತೆಯನ್ನೂ ಸೂಚಿಸುವ ವಾಣಿ. ವಿವಿಧ ಸನ್ನಿವೇಶ, ಸಂದರ್ಭಗಳಲ್ಲಿ ಈ ಪಾತ್ರಗಳ ಕೃತಕತೆಯನ್ನೋ ಸಹಜತೆಯನ್ನೊ ಆಯಾ ಓದುಗರೇ ವಿಮರ್ಶೆಗೊಡ್ಡಿ ಕಂಡುಕೊಳ್ಳುವುದಕ್ಕೆ ಸಾಕಷ್ಟು ಪ್ರಸಂಗಗಳ ಅನುಕೂಲತೆ ಲಭ್ಯವಿದೆ.

ಇಂಥ ಅಳ್ಳಕವಾದ ವ್ಯಕ್ತಿತ್ವದ ಆಧುನಿಕ ಪೀಳಿಗೆಯ ಪ್ರತಿನಿಧಿಗಳನ್ನು ತಾವೆ ಕರಣಂ ಪವನ್ ಪ್ರಸಾದ್ ಮೊದಲು ತಯಾರು ಮಾಡಿಕೊಂಡಿಟ್ಟು ತಮ್ಮ ಪ್ರಮೇಯ, ಸಿದ್ಧಾಂತಗಳನ್ನು ಮಂಡಿಸಲು ಮುಂದಾಗುವುದರಲ್ಲೇ ಅವಾಸ್ತವಿಕ ನೆಲೆಗಟ್ಟಿನ ಬೇರುಗಳಿವೆ. ಆಧುನಿಕ ಪೀಳಿಗೆಯಲ್ಲಿ ಅಭದ್ರ ಮನಸ್ಥಿತಿ ಇದೆ ಎನ್ನುವುದು ಮೊದಲನೆಯ ಗ್ರಹೀತ. ಅದಕ್ಕೆ ಕಾರಣ ಶಾಸ್ತ್ರದಲ್ಲಿ ಶ್ರದ್ಧೆ ಇಲ್ಲದಿರುವುದು, ಗುರು-ಹಿರಿಯರಲ್ಲಿ ಗೌರವವಿಲ್ಲದಿರುವುದು, ಸಿಗರೇಟು-ಮದ್ಯದಂಥ ಮಾದಕವಸ್ತುಗಳ ವ್ಯಸನ, ಸೂಳೆಯರ ಸಹವಾಸ ಮತ್ತು ಆಧುನಿಕ ಜೀವನಶೈಲಿ ಎಂದಾದರೆ ಈ ಗುಣಲಕ್ಷಣಗಳೆಲ್ಲ ಇರುವ ಆಧುನಿಕ ಪೀಳಿಗೆ (ಅಂಥಾದ್ದೊಂದು ಇರುವುದೇ ಆದಲ್ಲಿ) ಯ ಹಿನ್ನೆಲೆಯ ಬಗ್ಗೆಯೂ ಕೊಂಚ ಅಧ್ಯಯನ ಅಗತ್ಯವೆನಿಸುತ್ತದೆ. ಅಭದ್ರ ಮನಸ್ಥಿತಿ ಆಧುನಿಕ ಪೀಳಿಗೆಯ, ಹೊಸದಾಗಿ ಆವಿಷ್ಕಾರಗೊಂಡ ಕಾಯಿಲೆಯೇನಲ್ಲ. ಅಂಥ ಮನಸ್ಥಿತಿಯ ಪ್ರತೀಕದಂತಿರುವ ಸುರೇಂದ್ರ ಮತ್ತು ನೇಹಾರಂಥ ಅಬ್‌ನಾರ್ಮಲ್ ವ್ಯಕ್ತಿಗಳು ಎಲ್ಲಾ ತಲೆಮಾರುಗಳಲ್ಲೂ ಇದ್ದಿರಬಹುದು. ಆದರೆ ಅವರು ಒಂದು ತಲೆಮಾರಿನ ಪ್ರತಿನಿಧಿಗಳಾಗಲು ಅರ್ಹರೇ? ಅನಿಷ್ಟಕ್ಕೆಲ್ಲ ಶನೈಶ್ಚರನೇ ಕಾರಣ ಎಂದಂತೆ ಈ ಮಾನಸಿಕ ಅಸ್ಥಿರತೆ, ಪೊಳ್ಳು ವ್ಯಕ್ತಿತ್ವದ ಸಮಸ್ಯೆಗೆ ಆಧುನಿಕತೆಯನ್ನೇ ಗಂಟು ಹಾಕುವುದು ಎಷ್ಟರಮಟ್ಟಿಗೆ ಸರಿ? ಸಮಸ್ಯೆಯ ಪರಿಹಾರಕ್ಕೆ ಲೇಖಕರು ಸೂಚಿಸಿರುವ ವಿಷಯದ ಬಗ್ಗೆ ನಂತರ ಯೋಚಿಸಬಹುದು.

ಸುರೇಂದ್ರನನ್ನು ಸದಾ ಕಾಡುವ ಇನ್‌ಸೆಕ್ಯುರಿಟಿ ಮತ್ತು ಅತಂತ್ರ ಮನಸ್ಥಿತಿ ಅವನ ವ್ಯಕ್ತಿತ್ವದ ಸಮಸ್ಯೆಯೇ ಹೊರತು ಕೇವಲ ಆಧುನಿಕತೆಯದ್ದೂ ಅಲ್ಲ ಬ್ರಾಹ್ಮಣ್ಯದ್ದೂ ಅಲ್ಲ. ಹಾಗೆಯೇ ಆಧುನಿಕ ಪೀಳಿಗೆಯ ಸರಾಸರಿ ಪ್ರತಿನಿಧಿಯಾಗಲು ಕೂಡ ಸುರೇಂದ್ರ ಮತ್ತು ನೇಹಾ ಅರ್ಹರಲ್ಲ. ಅವರ ಪಾತ್ರ ಚಿತ್ರಣ ಆ ಮಟ್ಟದ ಸಂತುಲನವನ್ನು ಕಾಯ್ದುಕೊಂಡಿಲ್ಲದಿರುವುದು ಗಮನಿಸಲೇ ಬೇಕಾದ ಮತ್ತೊಂದು ಅಂಶ. ಕಾದಂಬರಿಯ ನೆರಳಿನಿಂದ ಮುಕ್ತವಾಗಿ ನಾವು ಆಧುನಿಕ ಪೀಳಿಗೆಯ ಕುರಿತು ಚಿಂತನೆ ನಡೆಸಿದರೆ ನಮಗೆ ಕಾಣಬಹುದಾದ ಸತ್ಯಗಳು, ಏಳುವ ಅನುಮಾನಗಳು ಬೇರೆಯಾಗಿಯೇ ಇವೆ. ಕಾದಂಬರಿ ಅವುಗಳನ್ನು ಒಳಗೊಂಡು ಸಾಗದೆ ತನ್ನದೇ ಪ್ರಮೇಯವನ್ನು ಸಾಧಿಸುತ್ತಿದೆ. ಅನುಕೂಲ ಶಾಸ್ತ್ರಕ್ಕನುಸಾರವಾಗಿ ಈ ಆಧುನಿಕ ಪೀಳಿಗೆ ಅಷ್ಟಿಷ್ಟು ಪಾರಂಪರಿಕ ನಡಾವಳಿಗಳಿಗೆ ಬದ್ಧವಾಗಿದ್ದೇ ಜೀವನ ಸಾಗಿಸುತ್ತಿರಬಹುದು ಅಥವಾ ಅವರಲ್ಲಿ ಕೃತಿಕಾರರು ಗುರುತಿಸಿದ ಅಭದ್ರತೆಯ ಲಕ್ಷಣಗಳು ಇಲ್ಲದೆ ತಾವು ಆಯ್ದುಕೊಂಡ ಹಾದಿಯ ಬಗ್ಗೆ ಸಂತೃಪ್ತಿಯೂ ಇದ್ದಿರಬಹುದು. ನಮಗೆಲ್ಲ ಆಧುನಿಕ ಪೀಳಿಗೆಯಲ್ಲಿ ಅಭದ್ರತೆಯ ಲಕ್ಷಣಗಳನ್ನು ಗುರುತಿಸಲು, ಅವರು ಶಾಸ್ತ್ರ-ಪುರಾಣಗಳನ್ನು ಅನುಸರಿಸುವುದನ್ನು ಬಿಟ್ಟಿದ್ದರಿಂದ ಕೆಡುಕಾಯಿತು ಎಂದು ನಂಬಲು ಇಷ್ಟ. ಆದರೆ ಅಂಥ ಅಭದ್ರತೆಯಿಂದ ಆದ ಕೆಡುಕುಗಳನ್ನು ಪ್ರಮಾಣೀಕರಿಸಿ ದಾಖಲಿಸಲು ಹೊರಟರೆ ನಿರಾಶೆ ಕಾದಿರುತ್ತದೆ. ಎಂದೇ ಇಂಥ ಕತೆ ಕಟ್ಟುತ್ತೇವೆ ಎನಿಸುವುದಿಲ್ಲವೆ?

ಕೊನೆಗೂ ಕರ್ಮ ಕಾದಂಬರಿಯ ಪ್ರಶ್ನೆ, ಹುಟ್ಟಿಸಿದ ಮಾತ್ರಕ್ಕೆ ಒಬ್ಬ ಅಪ್ಪನಾಗುತ್ತಾನೆಯೇ ಅಥವಾ ಅಪ್ಪ ಎನಿಸಿಕೊಂಡ ವ್ಯಕ್ತಿ ಮಾಡಬೇಕಾದುದನ್ನು ಮಾಡಿದ ಮಾತ್ರಕ್ಕೇ ಅಪ್ಪನಾಗುತ್ತಾನೆಯೇ ಎನ್ನುವುದೆ? ವಂಶವೃಕ್ಷದಲ್ಲಿ ಎಸ್ ಎಲ್ ಭೈರಪ್ಪನವರು ಎತ್ತಿದ ಅದೇ ಪ್ರಶ್ನೆ ಮತ್ತಿಲ್ಲಿ ಪುನರಾವರ್ತನೆಯಾಗುತ್ತದೆ. ಆದಾಗ್ಯೂ ಕರ್ಮ ಕಾದಂಬರಿಯ ಗಮ್ಯ ಈ ಪ್ರಶ್ನೆಯಲ್ಲ ಎನಿಸುತ್ತದೆ. ಕಾದಂಬರಿಯ ಕೊನೆಯ ಪುಟಗಳಲ್ಲಿ ಕಾಣಿಸಿಕೊಳ್ಳುವ ಈ ಪ್ರಶ್ನೆಯನ್ನೇನೂ ಕೃತಿ ಬೆಳೆಸುವುದಿಲ್ಲ. ಬದಲಿಗೆ, ನಿಷ್ಠೆ, ನಂಬುಗೆ, ಶ್ರದ್ಧೆ ಯಾವುದೂ ಇಲ್ಲದ, ಸ್ವಚ್ಛ-ಸಭ್ಯ ವ್ಯಕ್ತಿತ್ವವೂ ಇಲ್ಲದ, ಎಲ್ಲಕ್ಕಿಂತ ಮಿಗಿಲಾಗಿ ಸತ್ತಿರುವ ಶ್ರೀಕಂಠ ಜೋಯಿಸರಿಗೆ ಹುಟ್ಟಿದ ಮಗನೇ ಅಲ್ಲದ ಸುರೇಂದ್ರ ತಲೆ ಬೋಳಿಸಿಕೊಂಡು, ಅನುಷ್ಠಾನ ಸಹಿತ ಶ್ರಾದ್ಧ ಕರ್ಮ ನಡೆಸುವುದಕ್ಕೆ ಬದ್ಧನಾಗಿ (ಮೊದಲು ಒತ್ತಾಯ ಪೂರ್ವಕ, ನಂತರ ವಿಧಿಯಿಲ್ಲದೆ) ಕ್ರಮಿಸುವ ಹಾದಿಯಲ್ಲಿ ಕಂಡುಕೊಳ್ಳುವ ವಿಚಾರವೇ ಕಾದಂಬರಿಯ ಗಮ್ಯ. ಆದರೆ ಆ ವಿಚಾರವೇನು ಎನ್ನುವುದು ಕಾದಂಬರಿ ಓದಿ ಮುಗಿಸಿದರೂ ಅರ್ಥವಾಗುವುದಿಲ್ಲ. ಬಹುಷ: "ಒಟ್ಟಾರೆಯಾಗಿ `ಕರ್ಮ’ ಈಗಿನ ಪೀಳಿಗೆಯ ಅಭದ್ರ ಭಾವಸ್ಥಿತಿಯ ಪ್ರತಿಬಿಂಬವಾಗಿ ಹೊರಹೊಮ್ಮಿದೆ" ಎನ್ನುವುದಷ್ಟೇ ಇದ್ದೀತು. ಸುರೇಂದ್ರ ಮುಂದೆ ಮಾಡಲಿರುವ ತಾಯಿಯ ಕರ್ಮದಲ್ಲಿ ಪೂರ್ತಿಯಾಗಿ ಪರಿವರ್ತಿತನಾಗಿರುತ್ತಾನೆಂದು ಸೂಚಿಸುವುದೇ ಕೃತಿಕಾರರ ಆಶಯವಿದ್ದರೂ ಇರಬಹುದು. ಹೀಗೆ ಸುರೇಂದ್ರನಿಗೆ ಮತ್ತು ಅವನು ಪ್ರತಿನಿಧಿಸುವ ಆಧುನಿಕ ಪೀಳಿಗೆಗೆ ಕರಣಂ ಪವನ್ ಪ್ರಸಾದ್ ತೋರಿಸುತ್ತಿರುವ ಆದರ್ಶ ನರಹರಿಯದ್ದು. ಸಂಸ್ಕಾರದಲ್ಲಿ ಹೇಗೆ ಚಂದ್ರಿಯನ್ನು ಕೂಡಿದ್ದರಿಂದಲೇ ಪ್ರಾಣೇಶಾಚಾರ್ಯರು ಮುಖಾಮುಖಿಯಾಗಬೇಕಾಗಿ ಬಂದ ಆಂತರಿಕ ಗೊಂದಲ, ಜಿಜ್ಞಾಸೆ, ತಾತ್ವಿಕ ಸಂಘರ್ಷ ಅವರ ಸಂಸ್ಕಾರದ ಹಾದಿಯಾಗುವುದೋ ಹಾಗೆಯೇ ಇಲ್ಲಿ ನೇಹಾಳಂಥವಳನ್ನು ತೊರೆಯುವುದರಿಂದಲೇ ಸುರೇಂದ್ರ ಶ್ರಾದ್ಧ ಮಾಡುವುದಕ್ಕೆ ಅರ್ಹನಾಗುತ್ತಾನೆಂಬ ಹೊಳಹುಗಳಿರುವುದನ್ನು ಗಮನಿಸಬಹುದು. ಈ ಬಗ್ಗೆ ಆಧುನಿಕ ಪೀಳಿಗೆಯ ವಿಚಾರಗಳೇನಿವೆ ಎನ್ನುವ ಬಗ್ಗೆ ಕುತೂಹಲವೆನಿಸುತ್ತದೆ.

ತಮ್ಮ ಪೂರ್ವನಿರ್ಧಾರಿತ ಜೀವನ ದರ್ಶನವೊಂದನ್ನು ಕಾದಂಬರಿಯ ಮೂಲಕ ನಮಗೆ ಕಟ್ಟಿಕೊಡುವ ಭರದಲ್ಲಿ ಸೃಷ್ಟಿಸುವ ಪಾತ್ರಗಳು ಎಷ್ಟರಮಟ್ಟಿಗೆ ಸ್ವತಂತ್ರವಾಗಿ ವರ್ತಿಸುತ್ತವೆ ಎನ್ನುವುದು ಬಹುಮುಖ್ಯ ಪ್ರಶ್ನೆ. ಅನಂತಮೂರ್ತಿಯವರು ನಾರಾಯಣನನ್ನು, ಚಂದ್ರಿಯನ್ನು ವಿಕ್ಟಿಮೈಸ್ ಮಾಡಿದಂತೆಯೇ ಇಲ್ಲಿ ಕರಣಂ ಸುರೇಂದ್ರನನ್ನು, ನೇಹಾಳನ್ನು ಮಾಡುತ್ತಿರುವುದು ಸ್ಪಷ್ಟ. ಈ ನಡೆಯಲ್ಲಿ ಕೃತಿಕಾರರ ಅತ್ಯುತ್ಸಾಹ ಸೂಕ್ಷ್ಮವಾಗಿ ಗಮನಿಸಿದರೆ ಕಣ್ಣಿಗೆ ಹೊಡೆದು ಕಾಣಿಸದೇ ಇರುವುದಿಲ್ಲ. ಸುರೇಂದ್ರ ಒಂದು ಬೆನ್ನೆಲುಬಿಲ್ಲದ, ತನ್ನ ದೇಹ-ಮನಸ್ಸುಗಳ ಮೇಲೆ ಹಿಡಿತವಿಲ್ಲದ, ತನ್ನದೇ ನಿರ್ಧಾರಗಳ ಬಗ್ಗೆ ಗಟ್ಟಿಯಾದ ನಿಲುವಿಲ್ಲದ ವ್ಯಕ್ತಿಯೇ ಆಗಿರುತ್ತಾನೆ ಯಾಕೆ? ಪ್ರಾಣೇಶಾಚಾರ್ಯರ ಹೆಂಡತಿ ಯಾಕೆ ರೋಗಗ್ರಸ್ತೆಯಾಗಿ, ಗಂಡನಿಗೆ ಲೈಂಗಿಕ ಸುಖ ನೀಡಲಾರದ ಹೆಣ್ಣೇ ಆಗಿರುತ್ತಾಳೆ? ಚಂದ್ರಿಯಾಕೆ ವಾತ್ಯಾಯನ ವರ್ಣಿಸಿದ ಚಿತ್ತಿನಿಯೇ ಆಗಿರಬೇಕು ಮತ್ತು ಪ್ರಸಾದಕ್ಕೆ ಕಾದು ಕೂತು ಆಹಾರ- ವಿಶ್ರಾಂತಿ ಎರಡೂ ಇಲ್ಲದೆ ಹೈರಾಣಾಗಿದ್ದ ಪ್ರಾಣೇಶಾಚಾರ್ಯರಿಗೆ ಅಲ್ಲೇ ಪ್ರಕೃತಿಸಹಜ, ನೈಸರ್ಗಿಕ ಕಾಮ ಸಂಭವವಾಗಬೇಕು? ಕರ್ಮದ ನರಹರಿಯಂತೂ ಮತ್ತಷ್ಟು ವಿಚಿತ್ರವಾಗಿ ವರ್ತಿಸುತ್ತಾನೆ! ಏಕಾಂತ ಸಾಧಿಸಿ ನರಹರಿಯನ್ನು ಹಾಸಿಗೆಗೆ ಎಳೆಯುವ ಕಾಮಾತುರಳಾದ ನೇಹಾ ಒಂದಿಷ್ಟು ಅಂಗಸ್ಪರ್ಷ ಇತ್ಯಾದಿಗಳೆಲ್ಲ ಆದ ಮೇಲೂ ನರಹರಿಯನ್ನು ಚಿಲಕದ ಸದ್ದು ಮಾಡಿದ್ದು ಯಾರೆಂದು ನೋಡಿ ಬರಲು ಬಿಟ್ಟುಕೊಡುತ್ತಾಳೆ ಮತ್ತು ನರಹರಿ ಅಲ್ಲೇ ಬಚ್ಚಲಿಗೆ ಹೋಗಿ ಮೈಥುನ ಮಾಡಿಕೊಂಡು `ಶೀಲ’ ಕಾಪಾಡಿಕೊಳ್ಳುತ್ತಾನೆ ಅಥವಾ ಕಾದಂಬರಿಕಾರರೇ ಅವನ ಶೀಲ ಕಾಪಾಡಿದ್ದಾರೆನ್ನಿ! ಪ್ರಾಣೇಶಾಚಾರ್ಯರಿಗಿಂತ ನರಹರಿ ಒಂದು ಕೈ ಮೇಲಾಗುವುದು ಹೀಗೆ! ಸಂಸ್ಕೃತ ಶ್ಲೋಕಗಳನ್ನು ಅಲ್ಲಲ್ಲಿ ಉದ್ಧರಿಸಿದ ಮಾತ್ರಕ್ಕೆ ಅಥೆಂಟಿಸಿಟಿ ಬಂದು ಬಿಡುವುದಿಲ್ಲ ಅಲ್ಲವೆ? ಹಾಗೆ ನೋಡಿದರೆ ಮತ್, 5:28 "ಯಾರೇ ಆಗಲಿ, ಹೆಂಗಸೊಬ್ಬಳತ್ತ ಕಾಮುಕ ದೃಷ್ಟಿಯಿಂದ ನೋಡಿದಲ್ಲಿ, ಆತ ಆಗಲೇ ತನ್ನ ಮನಸ್ಸಿನಲ್ಲಿ ಆಕೆಯೊಂದಿಗೆ ಸಂಭೋಗ ನಡೆಸಿದಂತಾಗುತ್ತದೆ ಎಂದು ನಾನು ನಿಮಗೆ ಹೇಳುತ್ತೇನೆ" ಎನ್ನುತ್ತದೆ. ಅದನ್ನು ಇಲ್ಲಿ ಅನ್ವಯಿಸಿದರೆ ನರಹರಿ ತನ್ನ ಅತ್ತಿಗೆಯನ್ನೇ ಕೂಡಿದನೆಂದೂ, ಅವನ ಶೀಲ ಹೋಯಿತೆಂದೂ ಹೇಳಬಹುದು! ಆದರೆ ಕರಣಂ ಪವನ್ ಪ್ರಸಾದ್ ಹಠ ಹಿಡಿದು ವೆಂಕಟೇಶ ಭಟ್ಟರು, ವಾಣಿ, ಭರತ್, ನರಹರಿ ಮುಂತಾಗಿ ಇಲ್ಲಿನ ಕೆಲವು ಪಾತ್ರಗಳನ್ನು ಸುರೇಂದ್ರ-ನೇಹಾ ಎದುರು ಶ್ರೇಷ್ಠಗೊಳಿಸುತ್ತ ಹೋಗುತ್ತಾರೆ. ವಾಣಿಯ ಪಾತ್ರ ಅಂಥ ಪಾತ್ರಗಳಲ್ಲಿ ಒಂದು.

ವಾಣಿಯ ಪಾತ್ರ ಶ್ರೇಷ್ಠವಾಗುವುದು ಲಂಪಟ ಸುರೇಂದ್ರನ ಮನಸ್ಸಿನಲ್ಲಿ ಎನ್ನುವುದು ಗಮನಿಸಬೇಕಾದ ಒಂದು ಅಂಶ. ಪುಟ 28-29ರಲ್ಲಿ ಇವನು ಬಟ್ಟೆ ಒಣಗಿಸುತ್ತಿದ್ದ ವಾಣಿಯ ಕಂಕುಳಿನ ನೋಟದಲ್ಲಿ ಅವಳ ಮೊಲೆ ಕಾಣಲು ಪ್ರಯತ್ನಿಸುತ್ತಾನೆ. ಪುಟ 132ರಲ್ಲಿ ಶ್ರಾದ್ಧದ ಊಟಕ್ಕೆ ಕುಳಿತಲ್ಲಿಯೇ ವಾಣಿ ಬಡಿಸಲು ಬಾಗಿದಾಗ ಮೊಲೆ ಕಣಿವೆಗಳು ಕಣ್ಣಿಗೆ ಬಿದ್ದು ಕೂಡಲೇ ನೇಹಾ ಜೊತೆ ಸಂಭೋಗಕ್ಕೆಳಸುವಷ್ಟು ಉದ್ರೇಕಿತನಾಗುತ್ತಾನೆ. ಆದರೆ ವಾಣಿಯ ಸೌಂದರ್ಯ ಉದ್ರೇಕಕಾರಿಯಲ್ಲವೆಂದೂ, ನೇಹಾ ಬಟ್ಟೆ ತೊಟ್ಟಿರುವಾಗಲೂ ನಗ್ನ ದೇಹದ ಕಲ್ಪನೆಯನ್ನು ಕೊಡುವ ಬೀದಿಬದಿಯ ಸೂಳೆ ಎಂದೂ ನಿರ್ಧಾರಕ್ಕೆ ಬರುವುದಷ್ಟೇ ಅಲ್ಲ, “ನಮ್ಮ ದೃಷ್ಟಿಯನ್ನು ಕಟ್ಟಿ ಹಾಕಬಲ್ಲ ಹಾಗೂ ಉದ್ರೇಕಗೊಳಿಸುವ ಶಕ್ತಿ ಬಟ್ಟೆಗಿದೆ” ಎಂಬ ತೀರ್ಮಾನವನ್ನೂ ಕೊಡುತ್ತಾನೆ. ಇಲ್ಲೆಲ್ಲ ಮಾತನಾಡುತ್ತಿರುವುದು ಪಾತ್ರವೇ, ಕೃತಿಕಾರರೇ ಎನ್ನುವುದು ಪ್ರಶ್ನೆ. ಪುಟ 90ರಲ್ಲಿ ವಾಣಿಯನ್ನು ಪಡೆಯಬೇಕು, ಎಂದುಕೊಳ್ಳುವ ಸುರೇಂದ್ರ 92ನೆಯ ಪುಟದಲ್ಲಿ ನೇಹಾ ಮೈಮೇಲೆ ಬಿದ್ದರೂ "ಛೀ ಬಿಡು ಪ್ಲೀಸ್ ನಾನು ಇಲ್ಲಿ ಕೇಯ್ದಾಡಕ್ಕೆ ಬಂದಿಲ್ಲ ಅಪ್ಪ ಸತ್ತು ಆರು ದಿನ ಆಗಿದೆ. ಅಮ್ಮ ಆಸ್ಪತ್ರೇಲಿ ಇದಾರೆ. ಏನೇ ನಿನ್ನ ಚೂಲು ನಿನಗೆ ಏನೂ ಅನ್ನಿಸಲ್ವ.ಪ್ಲೀಸ್" ಎನ್ನುತ್ತಾನೆ! ಯಾರು ಉದ್ರೇಕಕಾರಿಯೋ ಯಾರು ಕಾಮೋತ್ತೇಜಕರೋ ಲೇಖಕರಿಗೇ ಗೊಂದಲವಿರುವಂತಿದೆ! ಉಳಿದಂತೆ ಇಲ್ಲಿ ವಾಣಿ, ನರಹರಿ, ಭರತ್ ಎಲ್ಲರೂ ಗ್ರೇಟೇ. ಸುರೇಂದ್ರನಿಗೆ ಕೂಡ ಗ್ರೇಟ್ ಆಗುವ ಹಾದಿ ತೆರೆದೇ ಇದೆ, ಅವನು ಶ್ರೀಕಂಠರ ಮಗನಾಗಲಿ, ಬ್ರಾಹ್ಮಣನಾಗಲಿ ಅಲ್ಲದಿದ್ದರೂ. ಆದರೆ ನೇಹಾ ಮಾತ್ರ ಕುಲುಷಿತೆ. ಹೆಣ್ಣು ಇಲ್ಲಿ ಲೈಂಗಿಕತೆಯಿಂದ, ಸಿಗರೇಟಿನಿಂದ ಮತ್ತು ಮದ್ಯದಿಂದ ಕುಲುಷಿತೆಯಾಗುತ್ತಾಳೆ. ಪುರುಷ ಆಗುವುದಿಲ್ಲ. ಅಷ್ಟೇಕೆ, ಶಾರದಮ್ಮನ ಇತಿಹಾಸ ಓದುಗರಿಗೆ, ಸುರೇಂದ್ರನಿಗೆ, ನೇಹಾಗೆ ಗೊತ್ತಿಲ್ಲದೇ ಇರಬಹುದು. ಆದರೆ ನೇಹಾಳನ್ನು ದೂಷಿಸುವ ಹಲವಾರು ಪಾತ್ರಗಳಿಗೆ ಗೊತ್ತೇ ಇರುತ್ತದೆ. ಆದರೂ ನೇಹಾ ಮಾತ್ರ ಕುಲುಷಿತೆ ಮಾತ್ರವಲ್ಲ, ಶುದ್ಧಿಯ ಯಾವ ಹಾದಿಯೂ ಇರದವಳು. ಹೀಗೆ ಇದು ಕೃತಿಕಾರರ ನೇರ ನಿಯಂತ್ರಣದಲ್ಲಿರುವ ಪಾತ್ರವೆನ್ನುವುದು ಬಹುಸ್ಪಷ್ಟ. ಆಧುನಿಕ ಸ್ತ್ರೀಯ ಪ್ರತಿರೂಪ ನೇಹಾ ಎನ್ನುವ ಪೂರ್ವಾಗ್ರಹವೇನಾದರೂ ಕಾದಂಬರಿಕಾರರಿಗಿದೆಯೇ ಎನ್ನುವ ಅನುಮಾನಕ್ಕೂ ಕಾರಣವಾಗುವ ಮಟ್ಟದಲ್ಲಿ ಇದು ಇದೆ. ನೇಹಾ ಪಾತ್ರದ ಚಿತ್ರಣದಲ್ಲಿ ಇಂಥ ಅತಿರೇಕಗಳ ಹಲವಾರು ಉದಾಹರಣೆಗಳು ಕಣ್ಣಿಗೆ ಕಾಣುತ್ತವೆ.

ಪುಟ 35 ರಲ್ಲಿ “ತನಗೆ ಆದ ಲಘು ಅವಮಾನದ ತುಂಡು ಬೆಂಕಿ ಅವನ ಅಂಡಿನ ಭಾಗದಲ್ಲಿ ತೇಲಾಡುತ್ತಿತ್ತು.” ಎಂಬ ಪೈಲ್ಸ್ ಮಾದರಿಯ ವರ್ಣನೆಯಿದೆ. ಪುಟ 38ರಲ್ಲಿ ಎರಡನೇ ಪಿಯುಸಿಯಲ್ಲಿರುವ ಸುರೇಂದ್ರ ಹೈಸ್ಕೂಲಿನಲ್ಲಿರುವ ವಾಣಿಯನ್ನು ದೈಹಿಕವಾಗಿ ಬಳಸಿಕೊಳ್ಳುವುದರ ವಿವರಣೆ ಇದೆ. ಪುಟ 40ರಲ್ಲಿ ಮದುವೆಗೆ ಬೆಳೆದ ಮೊಮ್ಮಗನಿರುವ ಮುದುಕ ವೆಂಕಟೇಶ ಭಟ್ಟರು ಮತ್ತು ಅವರ ಪತ್ನಿ ನೇಹಾಳ ದೇಹ ತೋರಿಸುವ ನಡತೆಯ ಬಗ್ಗೆ ಆಡಿಕೊಳ್ಳುವ ಮಾತುಗಳಿವೆ. ಪುಟ 58ರಲ್ಲಿ ವೆಂಕಟೇಶ ಭಟ್ಟರು ನೇಹಾಳನ್ನು ನಾಯಿಗೆ ಹೋಲಿಸುತ್ತಾರೆ. ಅನಂತಮೂರ್ತಿಯವರು ತಮ್ಮ ಕಾದಂಬರಿಯಲ್ಲಿ ಅಗ್ರಹಾರದ ಬ್ರಾಹ್ಮಣರನ್ನು ಎಷ್ಟೇ ವ್ಯಂಗ್ಯಚಿತ್ರಗಳಂತೆ ಚಿತ್ರಿಸಿದರೂ ಪಾತ್ರದ ಘನತೆ-ಸನ್ನಿವೇಶದ ಗಾಂಭೀರ್ಯ ಮೀರಿ ತಮ್ಮ ಪಾತ್ರಗಳ ಬಾಯಲ್ಲಿ ಹೊಲಸು ಮಾತುಗಳನ್ನಾಡಿಸಿಲ್ಲ, ಲೈಂಗಿಕ ಅತಿರೇಕದ ವಿವರಗಳನ್ನು ಕೊಟ್ಟಿಲ್ಲ. ಆದರೆ ಕರಣಂ ಪವನ್ ಪ್ರಸಾದ್ ಅಂಥ ಚೌಕಟ್ಟುಗಳನ್ನು ಇರಿಸಿಕೊಂಡಂತಿಲ್ಲ.

ಮನೆಗೆಲಸದವರ ಮಕ್ಕಳನ್ನು ತೊಡೆಯ ಮೇಲಿರಿಸಿಕೊಂಡು ತಿನ್ನಿಸುವ, ಜಾತೀಯತೆಯಿಲ್ಲದ ಶ್ರೀಕಂಠ ಜೋಯಿಸರು ಕೂಡಾ ಸುರೇಂದ್ರ-ನೇಹಾ ತಿಂದ ಉಪ್ಪಿಟ್ಟಿನ ಪ್ಲೇಟುಗಳನ್ನು ತೊಳೆದು ಹೊರಗೆ ಎಸೆದು ಬಿಡಿ ಎಂಬ ಆದೇಶವನ್ನು ನೀಡುತ್ತಾರೆ. ಇದರಿಂದಾಗಿ ನೇಹಾ ಮತ್ತು ಸುರೇಂದ್ರರ ಬಗ್ಗೆ ರೊಚ್ಚು ಇರುವುದು ಆಯಾ ಪಾತ್ರಗಳಲ್ಲೋ ಅಥವಾ ಕೃತಿಕಾರರಲ್ಲೋ ಎಂಬ ಅನುಮಾನವೇಳುವುದು ಸಹಜವೇ ಆಗಿದೆ. ಹಾಗೆಯೇ ಸುರೇಂದ್ರ ತಮ್ಮ ಮಗನಲ್ಲ ಎಂದು ತಿಳಿದಿರುವ ಶ್ರೀಕಂಠ ಜೋಯಿಸರು ಅವನನ್ನು ತಿದ್ದುವ ಬಗ್ಗೆ ಹೆಚ್ಚಿನ ಗಮನ ನೀಡಿದಂತಿಲ್ಲ. ಅವನು ಹೈಸ್ಕೂಲಿನಲ್ಲಿದ್ದ ವಾಣಿಯೊಂದಿಗೆ ತಪ್ಪಾಗಿ ನಡೆದುಕೊಂಡಾಗ ಅವರು ಕಂಡುಕೊಳ್ಳುವ ಪರಿಹಾರ ಸುರೇಂದ್ರನನ್ನು ಬೆಂಗಳೂರಿಗೆ ಸಾಗಹಾಕುವುದು. ತಮ್ಮ ಕುಟುಂಬದ, ಬ್ರಾಹ್ಮಣರ, ಊರಿನ ಹುಡುಗಿ ಕೆಡುವುದು ಬೇಡ, ಕೆಟ್ಟರೆ ನಗರದ ಹುಡುಗಿ ಕೆಡಲಿ ಎಂಬಂತೆ! ಕರ್ಮ ಮಾಡುವ ಸುರೇಂದ್ರ ಸತ್ತಿರುವ ಶ್ರೀಕಂಠ ಜೋಯಿಸರ ಸ್ವಂತ ಮಗನಲ್ಲ ಎನ್ನುವ ಸಂಗತಿ ಕಾದಂಬರಿಯ ಕಟ್ಟಕಡೆಯಲ್ಲಿ ಅವನಿಗೂ ನಮಗೂ ತಿಳಿದು ಬರುವ `ಗುಟ್ಟಾ’ಗಿದೆ. ಇದನ್ನು ಎಷ್ಟು ಜಾಗ್ರತೆಯಿಂದ ಕಾದಂಬರಿಯ ಉದ್ದಕ್ಕೂ ಕಾಪಾಡಿಕೊಂಡು ಬರಲಾಗುತ್ತದೆ ಎಂದರೆ ಬಹುಷಃ ಈ ಗುಟ್ಟು ಒಡೆಯುವಲ್ಲೇ ಕಾದಂಬರಿ ನಮಗೆ ಕಾಣಿಸುವುದೇನೋ ಇದ್ದಿರಬೇಕು ಎನಿಸುತ್ತದೆ. ‘ವಂಶವೃಕ್ಷ’ದ ಪ್ರಶ್ನೆಯನ್ನು ಹೊರತು ಪಡಿಸಿ, ಇಲ್ಲಿ ಲೇಖಕರು ನಮಗೆಲ್ಲ ಈ ಸುರೇಂದ್ರ ಬ್ರಾಹ್ಮಣನಾಗಿರದೇ ಇದ್ದುದರಿಂದಲೇ ಹೀಗಾದ ಎನ್ನುವ ಸಂದೇಶ ನೀಡುತ್ತಿದ್ದಾರೆಯೆ? ಆಧುನಿಕ ಪೀಳಿಗೆಯ ಬ್ರಾಹ್ಮಣೇತರರು ಮಾತ್ರ ಮಾನಸಿಕ ಅಭದ್ರತೆಗೆ ಪಕ್ಕಾಗುತ್ತಿದ್ದಾರೆಯೆ?

ಪುಟ 118ರಲ್ಲಿ "ಮನಸ್ಸನ್ನು ಶೂನ್ಯದಿಂದ ಉಲ್ಲಾಸದೆಡೆಗೆ ಒಂದು ಕಲೆ ನನ್ನನ್ನು ತರಿಸಿತು. ಇದಕ್ಕಿಂತ ಕಲೆಯಿಂದ ಏನನ್ನೂ ಅಪೇಕ್ಷಿಸಬಾರದು. ಏನೇನೋ ಪ್ರಶ್ನೆ ಮಾಡ್ತಾರೆ" ಎಂದು ಪುರುಷೋತ್ತಮನ ನಾಟಕದ ಕುರಿತು ಪ್ರಶ್ನೋತ್ತರದಲ್ಲಿ ಪ್ರಶ್ನೆ ಎತ್ತಿದವರ ಬಗ್ಗೆ ಸುರೇಂದ್ರ ಬೈದುಕೊಳ್ಳುತ್ತಾನೆ. ಸುರೇಂದ್ರನಿಗೆ ತನ್ನ ಆತ್ಮ ಸಮಾಧಾನವಷ್ಟೇ ಮುಖ್ಯ. ಅದು ಸಿಗುವಂತಿದ್ದರೆ ಅವನು ನೇಹಾಳನ್ನು ವೈತರಣಿಯಲ್ಲಿ ಎಸೆದು ಬಿಡಲು ಸಿದ್ಧ (ಗಮನಿಸಿ: ಪುಟ 70). ತನ್ನ ಸ್ವಾರ್ಥ ಸಾಧನೆಗೆ ಕಲೆ ಪುಷ್ಟಿಕೊಡುವಂತಿದ್ದರೆ ಅದು ಶ್ರೇಷ್ಠವೇ ಇರಬೇಕು ಎನ್ನುವ ನಿಲುವಿದೆ ಇಲ್ಲಿ. ಇದನ್ನು ಕಾದಂಬರಿಗೂ ಅನ್ವಯಿಸಬೇಕು ಎಂಬುದು ಕೃತಿಕಾರರ ಸೂಚನೆ ಇದ್ದರೂ ಇರಬಹುದು. ಪುಟ 70ರಲ್ಲಿಯೂ 138ರಲ್ಲಿಯೂ ಶತಶತಮಾನಗಳಿಂದ ಜನ ಇದನ್ನೆಲ್ಲ ನಂಬಿಕೊಂಡು ಬಂದಿರುವುದರಿಂದಲೇ ಇದೆಲ್ಲ ನಿಜವೆಂಬುದು ಸಾಬೀತಾಗುತ್ತದೆ ಎಂದು ಸುರೇಂದ್ರ ತನಗೆ ತಾನೇ ಸಮಾಧಾನ ಕೊಟ್ಟುಕೊಳ್ಳುವ ಮಾತುಗಳಿವೆ. ಜಾಗತಿಕವಾಗಿ ಎಷ್ಟು ಧರ್ಮಗಳಿವೆ, ಅವುಗಳನ್ನು ಅನುಸರಿಸುತ್ತಿರುವ ಮಂದಿಯ ಅನುಪಾತವೇನು ಮತ್ತು ಅವರವರ ನಂಬುಗೆ-ಶ್ರದ್ಧೆಗಳಲ್ಲಿ ಎಷ್ಟೊಂದು ವೈವಿಧ್ಯವಿದೆ ಎಂಬ ವಾಸ್ತವವನ್ನು ಮರೆಮಾಚುವ ಈ ಕುರುಡು ಸಮಾಧಾನ ಕೇವಲ ಸುರೇಂದ್ರನಿಗೆ ಮಾತ್ರ ಹೊಂದುವಂತಿದೆ.

ಇಡೀ ಕಾದಂಬರಿ ಸುಲಲಿತವಾದ ಓದಿಗೆ ಒದಗುವಂತಿದೆ. ಕಥಾನಕದ ಚಲನೆ ವೇಗವಾಗಿದೆ. ಹನ್ನೆರಡು - ಹದಿಮೂರು ದಿನಗಳ ಕಾಲವ್ಯಾಪ್ತಿಯಲ್ಲಿ ಅಷ್ಟಿಷ್ಟು ಫ್ಲ್ಯಾಶ್ ಬ್ಯಾಕ್ ತಂತ್ರವನ್ನೂ ಬಳಸಿಕೊಂಡು ರಚಿಸಲ್ಪಟ್ಟಿದೆ. ವಸ್ತು-ವ್ಯಕ್ತಿ ಲೋಕದ ವಿವರಗಳು, ಅಪರಕ್ರಿಯೆಯ ವಿಧಿ ವಿಧಾನಗಳ ವಿವರಗಳು ಸಾಕಷ್ಟು ಅಧ್ಯಯನ, ಶ್ರಮ ಮತ್ತು ಬದ್ಧತೆಯಿಂದ ಹುಟ್ಟಿರುವುದನ್ನು ಸಾಬೀತು ಪಡಿಸುವಂತಿದ್ದು ಇವತ್ತಿನ ಬರಹಗಾರರಲ್ಲಿ ಮರೆಯಾಗುತ್ತಿರುವ ಸಂಶೋಧನಾ ಪ್ರವೃತ್ತಿ ಇವರಲ್ಲಿರುವುದರ ಬಗ್ಗೆ ಮೆಚ್ಚುಗೆ, ಅಭಿಮಾನ ಮತ್ತು ಭರವಸೆಯನ್ನು ಮೂಡಿಸುವಂತಿವೆ. ಭಾಷೆ ಅಷ್ಟೇನೂ ಇಂಪ್ರೆಸಿವ್ ಅನಿಸಲಿಲ್ಲ ಮತ್ತು ಪಂಕ್ಚುಯೇಶನ್ ಮಾರ್ಕುಗಳ ಬಗ್ಗೆ ಯಾವುದೇ ಲಕ್ಷ್ಯ ನೀಡಿದ ಸುಳಿವಿಲ್ಲ. ಕಾದಂಬರಿಯ ಬರವಣಿಗೆ ಬಯಸುವ ಶಿಸ್ತು ಮತ್ತು ನೈಪುಣ್ಯ ಕರಣಂ ಪವನ್ ಪ್ರಸಾದ್ ಅವರಿಗೆ ದಕ್ಕಿದೆ. ಅದ್ಭುತವಾದ ಪ್ರತಿಭೆಯೊಂದು ತನ್ನನ್ನೇ ತಾನು ಫ್ಲೆಕ್ಸಿಬಲ್ ಅಲ್ಲದ ಒಂದು ನಿರ್ದಿಷ್ಟ ಚೌಕಟ್ಟಿಗೆ ಹೊಂದಿಸಿಕೊಂಡು ಮಾನವ ಜನಾಂಗ ಇದಾಗಲೇ ಪ್ರಯೋಗಿಸಿ, ಪ್ರಯತ್ನಿಸಿರುವ ಅದೇ ಹಳೆಯ ಹೊಳಹುಗಳನ್ನೇ ಮತ್ತೆ ಮತ್ತೆ ಪ್ರತಿಪಾದಿಸುವುದಕ್ಕೆ ಮನಸೋತರೆ ಸ್ವಲ್ಪ ಬೇಸರವಾಗುತ್ತದೆ ಅಷ್ಟೆ.ಜೀವನಾನುಭವಕ್ಕೆ ನಿಷ್ಠರಾಗಿದ್ದು ಅದಕ್ಕೆ ಬದ್ಧವಾದ ನೆಲೆಯಲ್ಲೇ ಕಥಾನಕ ಮತ್ತು ಪಾತ್ರಪ್ರಪಂಚ ಸಾಗುವುದಕ್ಕೆ ಅನುವು ಮಾಡಿಕೊಟ್ಟಿದ್ದರೆ ಅದು ನಮ್ಮನ್ನು ಹೊಸ ಅರಿವಿನತ್ತ ಕೊಂಡೊಯ್ಯ ಬಹುದಾಗಿತ್ತೇನೊ.

8 comments:

ಬಾಣಾವರ ಶ್ರೀನಿವಾಸಭಟ್ಟ ಅನಂತ said...

ನಿಮ್ಮ ವಿಮರ್ಷೆ ವಸ್ತುನಿಷ್ಠ ವಾಗಿದೆ.

ಕಾದಂಬರಿ ಮುನ್ನುಡಿ ಇಲ್ಲದೇ ಶುರುವಾಗಿದ್ದರೆ, ನಿಮ್ಮ ಲೇಖನದ ಶುರು ಹೇಗಿರತಿತ್ತು ಎಂಬ ಕುತೂಹಲ ನನ್ನಲ್ಲಿದೆ
ಅನಂತಮೂರ್ತಿ ಮೈಸೂರು

ನರೇಂದ್ರ ಪೈ said...

ಅನಂತಮೂರ್ತಿಯವರೇ,

ನನ್ನ ಅನಿಸಿಕೆ ವಸ್ತುನಿಷ್ಠವಾಗಿದೆ ಎಂದ ನಿಮ್ಮ ಮಾತು ನನಗೆ ತುಂಬ ಸಮಾಧಾನ ನೀಡಿದೆ. ಒಂದು ಕೃತಿ ಬೇರೆ ಬೇರೆಯವರಿಗೆ ಬೇರೆ ಬೇರೆ ರೀತಿಯಲ್ಲಿ ದಕ್ಕುತ್ತದೆ. ಯಾರ ಯಾವ ಮಾತೂ ಅಂತಿಮವಲ್ಲ ಅಥವಾ ಸಾರ್ವಕಾಲಿಕವೂ ಅಲ್ಲ. ನಮ್ಮ ಅನುಭವ, ಓದು, ಅರಿವು ಹೆಚ್ಚಿದಂತೆ ನಮ್ಮ ಓದಿನ ರುಚಿ, ಗ್ರಹಿಕೆಗಳು ಬದಲಾಗಲೂ ಬಹುದು.

ಹಾಗೆಯೇ ನಿಮ್ಮ ಕಾಮೆಂಟ್ "ಮುನ್ನುಡಿಯಿರದೇ ಇದ್ದಿದ್ದರೆ" ಎಂದು ನಾನು ಇದೇ ಮೊದಲ ಬಾರಿಗೆ ಯೋಚಿಸುವಂತೆ ಮಾಡಿದೆ ಕೂಡ. ಬಹುಷಃ, ಮುನ್ನುಡಿಯಿರದೇ ಇದ್ದಿದ್ದರೆ ನನ್ನ ಲೇಖನದ ಆರಂಭ ಮಾತ್ರವಲ್ಲ, ಇಡೀ ಲೇಖನದ ತಳಹದಿಯೇ ಅಲುಗಾಡುತ್ತಿತ್ತು. ಈ ಇಡೀ ಕಾದಂಬರಿಯನ್ನು ಓದಿದ ನಂತರ ಕಾದಂಬರಿಯ ಒಟ್ಟು ಶಿಲ್ಪ, ಅದರ ಆಕೃತಿ ಅಥವಾ ಕೇಂದ್ರ ಇದು ಎಂದು ಪರಿಗಣಿಸಬಹುದಾದ ಒಂದು ಸ್ಥೂಲ ಕಲ್ಪನೆ ನನ್ನಲ್ಲಿ ಮೂಡಲಿಲ್ಲ. ಸಾವು ಮತ್ತು ಅಪರಕ್ರಿಯೆಯ ಪ್ರಕ್ರಿಯೆ ಸುರೇಂದ್ರನಲ್ಲಿ ಪ್ರೇರೇಪಿಸುವ ಆತ್ಮಾವಲೋಕನ, ಫ್ಲ್ಯಾಶ್ ಬ್ಯಾಕ್ ಮೂಲಕ ಬಿಚ್ಚಿಕೊಳ್ಳುವ ಒಬ್ಬೊಬ್ಬರದೇ ವ್ಯಕ್ತಿತ್ವ ಮತ್ತು ಕಾದಂಬರಿಯ ಉದ್ದಕ್ಕೂ ವಿವರವಾಗಿ ಆವರಿಸಿಕೊಂಡ ಅಪರಕ್ರಿಯೆಯ ವಿವರಗಳು - ಈ ಮೂರೂ ಕ್ರಿಯೆಗಳು ಕಾದಂಬರಿಯಲ್ಲಿ ಘಟಿಸುವ ವಿಧಾನವೇನಿದೆ, ಅದರಲ್ಲಿ ಸಹಜತೆ ಕಡಿಮೆಯಿದೆ, ಯೋಜನೆ ಹೆಚ್ಚಿದೆ ಎನಿಸಿತು.

ಕೊನೆಗೂ ಒಂದು ಕಾದಂಬರಿಯ ಕಥಾನಕ ಮತ್ತು ಪಾತ್ರಗಳೊಂದಿಗೆ ಓದುಗ ಹೊಂದುವ ತಾದ್ಯಾತ್ಮದಲ್ಲಿ ಹುಟ್ಟಿಕೊಳ್ಳುವ ತೊಡಕುಗಳು ಇವು. ನಾನು ಒಂದು ಕಾದಂಬರಿಯನ್ನು ನನ್ನದೇ ಕಾದಂಬರಿಯನ್ನಾಗಿಸಿಕೊಂಡೇ ಓದಬೇಕಾಗಿದೆ, ನನಗೆ. ಕೃತಿಯಿಂದ ಏನನ್ನಾದರೂ ಪಡೆದುಕೊಳ್ಳಲು ನನಗೆ ಬೇರೆ ದಾರಿಯಿಲ್ಲ. ಹಾಗಾಗಿ ನನ್ನ ಅನುಭವ, ಓದು, ಗ್ರಹಿಕೆಗೆ ದಕ್ಕಿದಂತೆ ಇದು ನನ್ನ ಓದಿನ ಫಲಶ್ರುತಿ.

ಹೀಗಾಗಿ, ಸರಳವಾಗಿ ಈ ಕಾದಂಬರಿ ಏನನ್ನು ಹೇಳುತ್ತಿದೆ ಅಥವಾ ಹೇಳಲು ಪ್ರಯತ್ನಿಸುತ್ತದೆ ಎನ್ನುವ ಪ್ರಶ್ನೆಗೆ ಮುನ್ನುಡಿಯಲ್ಲೇ ಸಿಗುವ ಲೇಖಕರದೇ ವಿವರವನ್ನು ಅವಲಂಬಿಸುವುದು ಕ್ಷೇಮಕರವಾದ ಒಂದು ಹಾದಿ ಎನಿಸಿದ್ದು ಅಷ್ಟೆ. ಇದು ಅಷ್ಟು ಸರಿಯಾದ ಮಾರ್ಗವಲ್ಲ. ಹಾಗಾಗಿ ನನ್ನೊಳಗೇ ನನಗೆ ಚರ್ಚೆ, ವಾದ, ಮಂಡನೆ ಎಲ್ಲ. ಮುನ್ನುಡಿಯ ಮಾತೂ ಇರದೇ ಇದ್ದಿದ್ದರೆ ಲೇಖಕರ ಉದ್ದೇಶದ ಕುರಿತೇ ಗೊಂದಲವಾಗುತ್ತಿತ್ತು ಎಂದು ಈಗ ಅನಿಸುತ್ತಿದೆ. ಹಾಗಾಗಿ ಕೃತಿಯ ಕುರಿತು ಮಾತನಾಡುವ ಸಾಧ್ಯತೆಯೇ ಮೊಟಕಾಗುತ್ತಿತ್ತು. ಬಹುಷಃ ಇದು ನೀವೆಂದಂತೆ ಕೇವಲ ಲೇಖನದ ಆರಂಭದ ಸಾಲುಗಳ ಪ್ರಶ್ನೆಯಷ್ಟೇ ಅಲ್ಲ ನನ್ನಮಟ್ಟಿಗೆ.

ಪ್ರತಿಕ್ರಿಯೆ ದಾಖಲಿಸಿದ್ದಕ್ಕೆ ತುಂಬ ಕೃತಜ್ಞ.

ನಿಮ್ಮ
ನರೇಂದ್ರ

ಬಾಣಾವರ ಶ್ರೀನಿವಾಸಭಟ್ಟ ಅನಂತ said...

ಶ್ರೀ ನರೇಂದ್ರಪೈರವರೆ,

ಸಾಹಿತ್ಯಾಸಕರು ಮೆಚ್ಚುವ ಬಿಚ್ಚು ಪ್ರಾಮಾಣಿಕ ಉತ್ತರ ನಿಮ್ಮದು.

ಒಬ್ಬ ಓದುಗ, ಕಾದಂಬರಿಕಾರ ಮತ್ತು ವಿಮರ್ಷಕನ ನಡುವಿನ catlalyst ಅಷ್ಟೇ. ನನಗೆ ಹೆಚ್ಚಿನ ಓದುವಿಕಿಗೆ ನಿಮ್ಮ ಟಿಪ್ಪಣಿ ಪುಸ್ತಕ ಸಹಾಯವಾಗುತ್ತದೆ ಎಂದು ಭಾವಿಸಿದ್ದೇನೆ. ಧನ್ಯವಾದಗಳು

ಬಾಣಾವರ ಶ್ರೀನಿವಾಸಭಟ್ಟ ಅನಂತ said...

ಶ್ರೀ ನರೇಂದ್ರಪೈರವರೆ,

ಸಾಹಿತ್ಯಾಸಕರು ಮೆಚ್ಚುವ ಬಿಚ್ಚು ಪ್ರಾಮಾಣಿಕ ಉತ್ತರ ನಿಮ್ಮದು.

ಒಬ್ಬ ಓದುಗ, ಕಾದಂಬರಿಕಾರ ಮತ್ತು ವಿಮರ್ಷಕನ ನಡುವಿನ catlalyst ಅಷ್ಟೇ. ನನಗೆ ಹೆಚ್ಚಿನ ಓದುವಿಕಿಗೆ ನಿಮ್ಮ ಟಿಪ್ಪಣಿ ಪುಸ್ತಕ ಸಹಾಯವಾಗುತ್ತದೆ ಎಂದು ಭಾವಿಸಿದ್ದೇನೆ. ಧನ್ಯವಾದಗಳು

Rohith Chakrathirtha said...

ನರೇಂದ್ರ ಪೈ ಅವರೇ ನಮಸ್ಕಾರ.

ವಿಮರ್ಶೆ ಎಂಬ ಪ್ರಕಾರವೇ ನಶಿಸಿಹೋದಂತಿರುವ ಸಮಯದಲ್ಲಿ ನೀವು ಒಂದು ಕಾದಂಬರಿಯನ್ನು ಇಷ್ಟೊಂದು ಆಳವಾದ ಮತ್ತು ಧೀರ್ಘವಾದ ವಿಮರ್ಶೆಗೆ ಒಳಪಡಿಸಿರುವುದನ್ನು ನೋಡಿ ಆಶ್ಚರ್ಯವೂ ಖುಷಿಯೂ ಆಯಿತು! ಎಷ್ಟೊಂದು ಅದ್ಭುತವಾದ ಒಳನೋಟಗಳನ್ನು ನೀಡಿದ್ದೀರಿ! ಎಲ್ಲಿದ್ದಿರಿ ಮಾರಾಯ್ರೇ ಇಷ್ಟು ದಿನ? ಅಥವಾ ನನ್ನ ಓದೇ ಸೀಮಿತವೋ..

ನೀವು ಅನಂತಮೂರ್ತಿಯನ್ನು ಬಹಳ ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ ಎನ್ನುವುದೇ ತುಂಬ ಸಮಾಧಾನದ ವಿಷಯ. ಅವರನ್ನು ಚೆನ್ನಾಗಿ ಓದಿ ಅಪಾರ್ಥ ಮಾಡಿಕೊಂಡವರೇ ತುಂಬಿತುಳುಕುತ್ತಿರುವ ಈ ಕಾಲದಲ್ಲಿ ನೀವು ನಿಜವಾಗಿಯೂ ಎಂಡೇಂಜರ್ಡ್ ಸ್ಪೀಷೀಸೇ :)
ನಿಮ್ಮ ಒಳನೋಟ ಮತ್ತು ತಳದೃಷ್ಟಿ ಚೆನ್ನಾಗಿವೆ. ಬಹುಶಃ ಕರ್ಮ ಕಾದಂಬರಿಯ ಲೇಖಕರು ನಿಮ್ಮ ವಿಮರ್ಶೆಯನ್ನು ಯಾವ ಪೂರ್ವಗ್ರಹ ಇಟ್ಟುಕೊಳ್ಳದೆ, ಕೋಪ ಮಾಡಿಕೊಳ್ಳದೆ ಓದಿ ಅರ್ಥೈಸಿಕೊಳ್ಳಲು ಸಾಧ್ಯವಾದರೆ, ಎರಡನೇ ಮಗು ಹೆರುವ ಹೊತ್ತಿಗೆ ಸಾಕಷ್ಟು ಪ್ರಬುದ್ಧತೆ ತೋರಿಸಬಹುದು. ಏನೇ ಇರಲಿ, ಕಾದಂಬರಿ, ಕತೆ ಬರೆಯಬೇಕೆಂದು ಹೊರಡುವ ಯುವ ಬರಹಗಾರರಿಗೆ ಪಾಠಪುಸ್ತಕದಂತಿದೆ ನಿಮ್ಮ ಬರಹ. ಬರೆಯುತ್ತಿರಿ.

ನರೇಂದ್ರ ಪೈ said...

ರೋಹಿತ್ ಚಕ್ರತೀರ್ಥ ಅವರೇ,
ನಿಮ್ಮ ಮೆಚ್ಚುಗೆ ಸ್ವಲ್ಪ ಭಯ ಹುಟ್ಟಿಸುವಂತಿದೆ, ಅಷ್ಟೆಲ್ಲಕ್ಕೆ ನಾನು ಅರ್ಹನಲ್ಲ ಸರ್. ಈ ಕಾದಂಬರಿಯ ಬಗ್ಗೆ ಮೌನ ಕಷ್ಟ ಮತ್ತು ತಪ್ಪು ಎನಿಸಿದ್ದರಿಂದ ಮಾತನಾಡಲೇ ಬೇಕಿತ್ತು. ಸುದೀರ್ಘ ವಿಮರ್ಶೆ ಪ್ರಕಟಿಸುತ್ತೇವೆಂದಿದ್ದ ಪತ್ರಿಕೆಯೊಂದಕ್ಕೆ ಕಳುಹಿಸಿದೆ, ತಿರಸ್ಕರಿಸಿದರು. ಹಾಗೆ ನಿಮ್ಮ ಓದು ಸೀಮಿತವಿದ್ದಿರಲಾರದು, ನಾನು ಮಂದಿಗೆ ಇಷ್ಟವಾದದ್ದು ಕಡಿಮೆ, ಆ ಬಗ್ಗೆ ಕಹಿಯಿಲ್ಲ, ನನ್ನ ಪಾಡಿಗೆ ನಾನಿರಲು ಸಾಧ್ಯವಾಗಿದೆ!
ಕರಣಂ ಪವನ್ ಪ್ರಸಾದ್ ವರ್ಷ ವರ್ಷವೂ ಅತ್ಯುತ್ತಮ ಕಾದಂಬರಿಗಳನ್ನು ಕನ್ನಡಕ್ಕೆ ಕೊಡುತ್ತಿರಲಿ ಎನ್ನುವುದೇ ನನ್ನ ನಿರೀಕ್ಷೆ ಕೂಡ.
ನಿಮ್ಮ
ನರೇಂದ್ರ

ಕರಣಂ ಪವನ್ ಪ್ರಸಾದ್ said...

i am not offended . . .
ನನ್ನ ಓದುಗರೊಬ್ಬರು, ನಿಮ್ಮ ಈ ಲಿಂಕನ್ನು ಆಶ್ಚರ್ಯ ಚಿಹ್ನೆ ಲಗತ್ತಿಸಿ ಕಳುಹಿಸಿದರು.ಕಾದಂಬರಿಯನ್ನು ಇಷ್ಟು ಧೀರ್ಘವಾಗಿ ವಿಶ್ಲೇಷಿಸಿರುವುದು ನಿಮ್ಮ ಸೂಕ್ಷ್ಮ ನೋಟಕ್ಕೆ ಸಾಕ್ಷಿಯಾಗಿದೆ.ನಿಮ್ಮ ವಿಮರ್ಶೆಯ ಹದ ನಿಮ್ಮ ಸಾಹಿತ್ಯದ ಓದಿನ ಕಸುವಿನ ಉನ್ನತೆಯನ್ನು ನಿರೂಪಿಸಿದೆ. ಅದಕ್ಕಾಗಿ ಶ್ರದ್ಧೇಯ ಧನ್ಯವಾದಗಳು ನಿಮಗೆ.ಮಿಕ್ಕಂತೆ ಒಂದಷ್ಟು ಪುರ್ವ ನಿರ್ಧಾರಿತ ಹೇಳಿಕೆಗಳು ಇಲ್ಲಿ ಬಳಕೆಗೊಂಡಿದೆ, ಅದಕ್ಕೆ ಯಾವ ರೀತಿಯ ಸಮರ್ಥನೆಯನ್ನು ನಾನು ನೀಡೋಲ್ಲ.ಸಮರ್ಥನೆಗಳು ಸದಾ ತಪ್ಪನ್ನು ಮರೆ ಮಾಚುವ ಕ್ರಿಯೆಯಾಗಿ ರೂಪುಗೂಳ್ಳುತ್ತದೆ. ಆದ್ದರಿಂದ ಕಾದಂಬರಿಯ ಒಳತೋಟಿಯನ್ನು ನಿಮಗೆ ತಲುಪಿಸುವಲ್ಲಿ
ನಾನು ವಿಫಲನಾಗಿದ್ದೇನೆ ಅಥವಾ ನೀವು ಇನ್ನೊಂದು ಆಯಾಮದಲ್ಲಿ ತೆಗೆದುಕೊಂಡಿದ್ದೀರಿ ಎಂದಷ್ಟೇ ಭಾವಿಸುತ್ತೇನೆ.

ಹಲವಾರು ವಿಮರ್ಶೆಗಳು ನನ್ನ ಕಾದಂಬರಿಯ ಬಗ್ಗೆ ಈವರೆಗೆ ಬಂದಿವೆ, ಶೇ. ೯೦ ರಲ್ಲಿ "ಕರ್ಮ" ವನ್ನು ೧೯೬೫ ಸುತ್ತಮುತ್ತ ಹೊರಬಂದ ಉನ್ನತ ಕೃತಿಗಳಾದ ಸಂಸ್ಕಾರ ಮತ್ತು ವಂಶವೃಕ್ಷದ ಜೊತೆಯಲ್ಲಿ ನಿಲ್ಲಿಸಿಯೇ ವಿಮರ್ಶಿಸಿದ್ದಾರೆ. ಅಂದರೆ ಕಳೆದ ೬೦ ವರ್ಷದ ನಂತರದ ಈ ಕೃತಿಯ ವಸ್ತು ಅವುಗಳೊಂದಿಗೆ ನಿಂತು ಸೆಣೆಸುತ್ತಿದೆ / ಪಶ್ಚಾತ್ ೬೦ ವರ್ಷದ ಅವಧಿಯಲ್ಲಿ ಈ ವಸ್ತುವನ್ನು ಯಾರೂ ನಿಭಾಯಿಸಲು ಸಾಧ್ಯವಾಗಿಲ್ಲ ಎಂಬುದು. ನಾನು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ವಿಷಯವಾಗಿದೆ.

ಸಾಹಿತ್ಯ ಸಂಚಯನ ಮುಂದುವರೆಯಲಿ, ಧನ್ಯವಾದ
ಶುಭವಾಗಲಿ.

ನರೇಂದ್ರ ಪೈ said...

ಕರಣಂ ಪವನ್ ಪ್ರಸಾದ್,

ಬಹುಶಃ ಇದೇ ಮೊದಲ ಬಾರಿಗೆ ಸ್ವತಃ ಕಾದಂಬರಿಕಾರರೊಬ್ಬರು ನನ್ನ ಬರಹಕ್ಕೆ ಪ್ರತಿಕ್ರಿಯಿಸಿದ್ದು ಅದು ನೀವು. ಧನ್ಯವಾದಗಳು. ಓದಿದಾಗ ತಕ್ಷಣಕ್ಕೆ ಅನಿಸಿದ್ದನ್ನು ವ್ಯಕ್ತಪಡಿಸುವುದಷ್ಟೇ ಇಲ್ಲಿ ಕಾಣಿಸುತ್ತಿರುವ ಟಿಪ್ಪಣಿಗಳು ಮಾಡುತ್ತಿರುವುದು. ಇದು ಹಲವಾರು ನಿಟ್ಟಿನ ಓದುಗಳು ಸಾಧ್ಯ ಎಂಬ ಪರಿಜ್ಞಾನವನ್ನಿಟ್ಟುಕೊಂಡೇ ಸೂಚಿಸುತ್ತಿರುವ ಒಂದಾನೊಂದು ನೋಟವೇ ಹೊರತು ಇದೇ ಸರಿ ಎಂಬ ನಿಲುವು ಎಷ್ಟು ಮಾತ್ರಕ್ಕೂ ಇಲ್ಲ. ನಿಮ್ಮಿಂದ ಮತ್ತಷ್ಟು ಸೊಗಸಾದ ಕಾದಂಬರಿಗಳನ್ನು ನಿರೀಕ್ಷಿಸುತ್ತೇನೆ.
ನಿಮ್ಮ
ನರೇಂದ್ರ