Thursday, February 5, 2015

ಅನುಪಮಾ ಪ್ರಸಾದ್ ಅವರ ದೂರ ತೀರ

ದೂರ ತೀರ ಅನುಪಮಾ ಪ್ರಸಾದ್ ಅವರ ಮೂರನೆಯ ಕಥಾಸಂಕಲನ. ಅವರ ಈ ಹಿಂದಿನ ”ಕರವೀರದ ಗಿಡ” ಕಥಾಸಂಕಲನದ ಕತೆಗಳಿಗೆ ಹೋಲಿಸಿದರೆ ಈ ಕತೆಗಳಲ್ಲಿ ಅವರು ಸಾಕಷ್ಟು ಬೆಳೆದಿರುವುದು ಥಟ್ಟನೇ ಗಮನಕ್ಕೆ ಬರುತ್ತದೆ. ಅಲ್ಲದೆ ಈ ದೂರತೀರ ಸಂಕಲನಕ್ಕೆ 2012ನೇ ಸಾಲಿನ ತ್ರಿವೇಣಿ ಕಥಾ ಪ್ರಶಸ್ತಿ, ಮಾಸ್ತಿ ಕಥಾ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ ದತ್ತಿ ಕಥಾ ಪ್ರಶಸ್ತಿ ಎಂದೆಲ್ಲ ಸಾಲು ಸಾಲು ಪ್ರಶಸ್ತಿಗಳು ಸಂದಿವೆ. ಕನ್ನಡದ ಬಹುಮುಖ್ಯ ವಿಮರ್ಶಕ ಜಿ ರಾಜಶೇಖರ್ ಮೌಲಿಕವಾದ ಮುನ್ನುಡಿಯೊಂದಿಗೆ ಸಂಕಲನದ ಘನತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಈ ಕೃತಿಯ ಬಗ್ಗೆ ಮತ್ತೆ ಬರೆಯುವುದಕ್ಕೇನಾದರೂ ಇದೆಯೇ ಎನ್ನುವ ಪ್ರಶ್ನೆಯೊಂದಿಗೇ ನನ್ನ ಕೆಲವು ಟಿಪ್ಪಣಿಗಳನ್ನು ಸೇರಿಸುತ್ತಿದ್ದೇನೆ.

ಸಣ್ಣ ಕತೆಯ ಸ್ವರೂಪದ ಬಗ್ಗೆ ಸಾಕಷ್ಟು ಚಿಂತನ-ಮಂಥನಗಳು ನಡೆದಿವೆ. ಸಣ್ಣ ಕತೆ ಸರಳವಾಗಿದ್ದು ಅದರ ಹರವು ಸೀಮಿತ ಎನ್ನುವ ನೆಲೆಯನ್ನು ಬಿಟ್ಟುಕೊಟ್ಟು ಅದು ಗದ್ಯಕಾವ್ಯವಾಗಿ, ಕಾದಂಬರಿಯ ಗಹನತೆಗೆ ಕೈಚಾಚಿ, ಸಣ್ಣಕತೆಯ ಸ್ವರೂಪವೇ ಒಂದು ನಿರ್ದಿಷ್ಟ ವ್ಯಾಖ್ಯಾನಕ್ಕೆ ಸಿಗದಷ್ಟೂ ಪ್ರಯೋಗಶೀಲತೆಗೆ ತುತ್ತಾದ ಪ್ರಕಾರವಾಗಿ ಅದು ಮಾರ್ಪಟ್ಟಿರುವುದು ನಮಗೆ ಗೊತ್ತು. ಜಿ ರಾಜಶೇಖರ ಅವರು ಈ ಕುರಿತು ಹೇಳುತ್ತ, "...ಆದರೆ ಸರಳ ಮಾತುಗಳಲ್ಲಿ ಕತೆ ಕಟ್ಟಿ ಹೇಳುವ ಕಸುಬು ಸರಳವಲ್ಲ. ಹಕ್ಕಿ ತನ್ನ ಗೂಡು ಕಟ್ಟಿಕೊಳ್ಳುವಂತೆ ಅದು. ಪರಿಕರ ಸರಳ; ಆದರೆ ಸಂರಚನೆ ಸಂಕೀರ್ಣ...." ಎನ್ನುತ್ತಾರೆ. ಪ್ರಸ್ತುತ ಸಂಕಲನದ ಒಟ್ಟು ಆರು ಕತೆಗಳಲ್ಲಿ “ಖಾದಿ ಅಂಗಿ” ಎಂಬ ಒಂದು ಕತೆಯನ್ನು ಹೊರತು ಪಡಿಸಿ ಉಳೆದೆಲ್ಲಾ ಐದು ಕತೆಗಳೂ ಸಂಕೀರ್ಣವಾದ ಸಂರಚನೆಯನ್ನೇ ನೆಚ್ಚಿಕೊಂಡಿರುವಂಥವು. ಈ ಕತೆಗಳು ಮೂಲತಃ ಸಣ್ಣಕತೆಗಳ ಪ್ರಧಾನ ಲಕ್ಷಣವೆಂದು ನಾವೆಲ್ಲ ತಿಳಿದುಕೊಂಡ ಒಂದು ಕೇಂದ್ರ ಎಂಬ ಪರಿಕಲ್ಪನೆಯೇನಿದೆ, ಅದನ್ನೇ ನಿರಾಕರಿಸಿ, ಅದರಿಂದ ದೂರ ಸರಿಯುತ್ತ, ಮತ್ತೆ ಹತ್ತಿರವಾಗುತ್ತ, ಒಟ್ಟಾರೆ ಪರಿಣಾಮದಲ್ಲಿ ಕೇಂದ್ರವೊಂದನ್ನು ಇಲ್ಲವಾಗಿಸುವ ನಿರೂಪಣೆಯನ್ನೇ ನೆಚ್ಚಿಕೊಳ್ಳುವ ಒಲವನ್ನು ತೋರಿಸುತ್ತವೆ.

ಸರಳವಾಗಿ ಹೇಳುವುದಾದರೆ “ದೂರ ತೀರ” ಕತೆಯಲ್ಲಿ ಶ್ರೀನಿವಾಸ ಮತ್ತು ಗೋವೆಯ ಪೈಗಳ ಹೋಟೇಲು ಪ್ರಧಾನ ವೇದಿಕೆ. ಈ ಕತೆಯಲ್ಲಿ ಕಾಮತರ ಹೋಟೇಲು ಮತ್ತು ಅಲ್ಲಿನ ಆಗು ಹೋಗುಗಳ ಪ್ರಸಂಗ ಒಂದು ನಿಟ್ಟಿನಿಂದ ನೋಡಿದರೆ ಅನಗತ್ಯ. ಹಾಗೆಯೇ “ಬಣ್ಣ” ಕತೆಗೆ ಬಂದರೆ ಅಲ್ಲಿ ಶಾರ್ವರಿಯ ಚಿತ್ರಕಲಾ ನೈಪುಣ್ಯಮತ್ತು ಅದಕ್ಕೆ ತಂದೆ-ಪತಿ ಮತ್ತಿತರರ ಉತ್ತೇಜನ ದೊರೆಯುವ/ದೊರೆಯದಿರುವ ಸಂಗತಿ ಒಂದರ್ಥದಲ್ಲಿ ಕೇಂದ್ರ ವಸ್ತು. ಆದರೆ ಇಲ್ಲಿ ಅಡಿಕೆ ತೋಟ, ರಬ್ಬರ್ ಎಸ್ಟೇಟ್, ಪರಿಸರದ ಪ್ರಶ್ನೆಗಳು, ಬುಟ್ಟಿ ಹೆಣೆಯುವ ಕಸುಬು, ತಂದೆ ಮತ್ತು ಪತಿ ಇವರ ದೃಷ್ಟಿಕೋನ ಮತ್ತು ಜೀವನಕ್ರಮದಲ್ಲಿನ ವೈರುಧ್ಯ, ಸ್ಟೀಫನ್ ತರದ ಪಾತ್ರಗಳ ಹಿನ್ನೆಲೆಯಲ್ಲಿ ಇವರುಗಳ ಆಟಿಟ್ಯೂಡ್ ಕಾಣಿಸುವ ಬಗೆ ಎಲ್ಲ ಕೇಂದ್ರವನ್ನು ಡೈಲ್ಯೂಟ್ ಮಾಡುವ ಅಥವಾ ಮಲ್ಟಿಸೆಂಟ್ರಿಕ್ ಆಗಿ ಕತೆಯನ್ನು ಸಂರಚಿಸುವ ಉದ್ದೇಶವನ್ನು ತೋರಿಸುತ್ತವೆ. “ಕಾಳಿಂದಿ ಮಡು” ಕತೆಯಲ್ಲಿಯೂ ಎಂಡೋಸಲ್ಫಾನ್ ದುಷ್ಪರಿಣಾಮ ಒಂದು ಪುಟ್ಟ ಸಂಸಾರವನ್ನು ಹಿಂಡುವ ಬಗೆ ಕೇಂದ್ರವೆನಿಸಿದರೂ ಅಲ್ಲಿ ಮಹೇಂದ್ರನೆಂಬ ಒಂದು ಪಾತ್ರ, ಬಲ್ಲಾಳ ದಂಪತಿಗಳ ಒಡನಾಟ, ವಾರಾಣಸಿಯ ಪರಿಸರ ಉದ್ದೀಪಿಸುವ ಪಾಪ-ಪುಣ್ಯ ಕುರಿತ ಕರ್ಮಸಿದ್ಧಾಂತ ಮುಂತಾಗಿ ಕತೆ ಹಲವು ಆಯಾಮಗಳನ್ನು ತನ್ನ ತೆಕ್ಕೆಗೆ ದಕ್ಕಿಸಿಕೊಳ್ಳಲು ಕೈಚಾಚುವುದು ಕಂಡು ಬರುತ್ತದೆ. “ಜಾಜಿ ಗಂಧದ ಜಾಡು” ಕತೆಯಲ್ಲಿಯೂ “ಬಣ್ಣ” ಕತೆಯ ಶಾರ್ವರಿಯಂಥದೇ ಕಲಾವಿದೆಯೊಬ್ಬಳು ಗಂಡಿನ ಆಟಿಟ್ಯೂಡ್ ಗೆ ಸ್ಪಂದಿಸುವ ಬಗೆಯನ್ನು ನಿರೂಪಿಸುತ್ತಲೇ ಅದನ್ನು ಅಹಲ್ಯೆಗೂ, ಸಮಾಜದ ಬಹುಮುಖ್ಯ ಘಟಕವಾದ ಮಾರುಕಟ್ಟೆಯಲ್ಲಿ ಹೆಣ್ಣಿನ ನಗ್ನತೆ ಪಡೆದುಕೊಳ್ಳುವ ವೈವಿಧ್ಯಮಯ ಪ್ರತಿಕ್ರಿಯೆಗೂ ಜೋಡಿಸಿ ಕತೆಯ ಧ್ವನಿಶಕ್ತಿಯನ್ನು amplify ಮಾಡುವ ಪ್ರಯತ್ನವಿದೆ. “ಅಗೋಚರ ವಿಪ್ಲವಗಳು” ಕತೆಯಂತೂ ಕತೆಗಾರ್ತಿಯ ಇಂಥ ತುಡಿತಗಳಿಗೆ ವಿಪುಲವಾದ ಅವಕಾಶಗಳನ್ನು ತೆರೆದಿಟ್ಟಿದೆ. ಇಲ್ಲಿ ಕಮ್ಯುನಿಸಂನ ಸಿದ್ಧಾಂತ ತನ್ನೊಳಗಿನಿಂದಲೇ ಎದುರಿಸಿದ ಸವಾಲುಗಳು ಒಂದು ಪ್ರಧಾನ ಧಾರೆಯಾದರೆ, ಮನುಷ್ಯನ ಕ್ರೌರ್ಯ, ಹಿಂಸೆ, ದುರಾಸೆ, ಅವುಗಳೆಲ್ಲದರ ಎದುರು ಸರಿಸುಮಾರು ಹಾಸ್ಯಾಸ್ಪದವಾಗುವ ಆದರ್ಶಗಳು ಕತೆಯನ್ನು ಹತ್ತು ಹಲವು ದಿಕ್ಕುಗಳಿಗೆ ಎಳೆದಾಡಿವೆ. ರಾಜೀವ ಲೋಚನನ ಸಾವು ಒಂದು ಸಂಕೀರ್ಣ ವಿದ್ಯಮಾನಗಳ ಸರಮಾಲೆಯನ್ನು ತೆರೆದಿಡುವಾಗಲೇ ಪ್ರೊಫೆಸರ್ ಜಯರಾಮರ ಪುನರ್ನವ ಶಾಲೆ, ತತ್ವ ಮತ್ತು ಸಿದ್ಧಾಂತಗಳು ಅರ್ಥ ಕಳೆದುಕೊಳ್ಳುತ್ತಿರುವುದನ್ನು ಗ್ರಹಿಸುವ ಸೂಕ್ಷ್ಮ ಪ್ರಜ್ಞೆ ಇನ್ನೊಂದೇ ಎಳೆಯ ಕತೆಯನ್ನು ಜೋಡಿಸಿದೆ. ರಾಜೇಶ್ವರಿ ಮತ್ತು ನಂಬೀಶರ ಒಡನಾಟ ಕತೆಗೆ ಬೇರೆಯದೇ ಒಂದು ಚೌಕಟ್ಟನ್ನು ಜೋಡಿಸುವಂತಿದೆ. ದಂಪತಿಗಳಾದ ಅವರಿಬ್ಬರ ನಡುವಿನ ತಾತ್ವಿಕವಾದ ಭಿನ್ನ ನಿಲುವು ಪಡೆಯಬಹುದಾಗಿದ್ದ ಪೋಷಣೆಯನ್ನು ಪಡೆಯದಿದ್ದರೂ ಅದು ಸಾಕಷ್ಟು ಗಟ್ಟಿಯಾಗಿಯೇ ಮೂಡಿದೆ ಎನ್ನಲಡ್ಡಿಯಿಲ್ಲ. ಎಡಪಂಥ ಮತ್ತು ಬಲಪಂಥೀಯರ ಪ್ರಾಬಲ್ಯ ಇವತ್ತು ಕೇವಲ ರಷ್ಯಾ-ಅಮೆರಿಕ ಸಮೀಕರಣದ ಮಜಲನ್ನು ದಾಟಿ ಹಿಂದೂತ್ವ ಇತ್ಯಾದಿ ಆಯಾಮಗಳನ್ನೂ ಪಡೆದುಕೊಂಡಿರುವುದು ಕೂಡ ಕತೆಯ ಒಡಲಿನಲ್ಲಿ ದಾಖಲಾಗುತ್ತದೆ.

ಇಲ್ಲಿ ನಾವು ಗಮನಿಸಬೇಕಾದ ಹಲವಾರು ಪ್ರಶ್ನೆಗಳಿವೆ. ಒಂದು, ಈ ಸಂಕೀರ್ಣ ಕಥಾಹಂದರ ಕೇವಲ ಕತೆಗಾರನ ಹಂಬಲದಿಂದ ಹುಟ್ಟಿದ್ದೇ, ತನ್ನ ಕತೆಯನ್ನು ಶ್ರೇಷ್ಠಗೊಳಿಸುವ ಮೋಹಕ್ಕೆ ಒಳಗಾಗಿ ಸಣ್ಣಕತೆಯಂಥ ಒಂದು ಪ್ರಕಾರದ ಒಡಲಿಗೆ ಹಿತವಲ್ಲದ ಸಂಕೀರ್ಣತೆಯನ್ನು ಇಲ್ಲಿ ಬಲವಂತವಾಗಿ ತೊಡಿಸಲಾಗಿದೆಯೇ ಎಂಬುದು. ಇನ್ನೊಂದು, ನಾವು ಬದುಕುತ್ತಿರುವ ವಾಸ್ತವ ಸಂಕೀರ್ಣವಾಗಿರುತ್ತ, ಕತೆಯೊಂದು ಕೇವಲ ತನ್ನ ಒಡಲು ಸರಳವಾಗಿರಬೇಕೆಂಬ ಸಿದ್ಧ ಮಾದರಿಯ ನಿರೀಕ್ಷೆಗೆ ಬದ್ಧವಾಗುಳಿವ ಏಕೈಕ ಉದ್ದೇಶದಿಂದ ಅಂಥ ಸಂಕೀರ್ಣ ಗ್ರಹಿಕೆಗಳನ್ನು ಬಿಟ್ಟುಕೊಟ್ಟು ಮೂಡಬೇಕೇ ಎನ್ನುವುದು. ಇಲ್ಲಿಯೇ ಕೇಳಿಕೊಳ್ಳಬೇಕಾದ ಪ್ರಶ್ನೆ, ಕತೆಗಾರನಿಗೆ ತಾನು ಹೇಳಬೇಕೆಂದುಕೊಂಡಿರುವ ಅಷ್ಟೂ ವಿಚಾರಗಳ ಮಂಡನೆಗೆ ಸೂಕ್ತವಾದ ಪ್ರಕಾರ ಪ್ರಜ್ಞೆ ಇದ್ದಲ್ಲಿ ಇದು ಸಮಸ್ಯೆಯಾಗುವುದಿಲ್ಲ ಅಲ್ಲವೆ ಎನ್ನುವುದು. ಇವೆಲ್ಲಕ್ಕಿಂತ ಮುಖ್ಯವಾದ ಮೂರನೆಯ ಪ್ರಶ್ನೆ ಎಂದರೆ, ಕತೆ ತಾನು ತನ್ನ ತೆಕ್ಕೆಗೆ ಎಳೆದುಕೊಂಡ ಯಾವತ್ತೂ ವಿದ್ಯಮಾನಗಳಿಗೆ ನ್ಯಾಯ ಒದಗಿಸಲು ಶಕ್ತವಾಗಿದೆಯೇ ಅಥವಾ ಕೇವಲ ಎಲ್ಲವನ್ನೂ ಮೈಮೇಲೆಳೆದುಕೊಂಡೂ ಯಾವುದನ್ನೂ ಸರಿಯಾಗಿ ಪೋಷಿಸಲಾಗದೆ ನಡುನೀರಿನಲ್ಲಿ ಕೈಬಿಟ್ಟಿದೆಯೇ ಎನ್ನುವುದು.

ಇಲ್ಲಿಯೇ ಗಮನಿಸಬೇಕಾದ ಇನ್ನೂ ಒಂದು ಸಂದಿಗ್ಧವಿದೆ. ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ “ಮಾಯಾಲೋಕ-೧”, ಅಬ್ದುಲ್ ರಶೀದ್ ಅವರ ಕಾದಂಬರಿ “ಹೂವಿನಕೊಲ್ಲಿ”, ವಿವೇಕ್ ಶಾನಭಾಗ ಅವರ ಕಾದಂಬರಿ “ಒಂದು ಬದಿ ಕಡಲು” ಮತ್ತು ಶ್ರೀಧರ ಬಳಗಾರ ಅವರ ಕಾದಂಬರಿ “ಆಡುಕಳ” - ಸಂದರ್ಭದಲ್ಲಿ ಆಯಾ ಕಾದಂಬರಿಕಾರರೊಡನೆಯೋ, ಇತರ ಲೇಖಕರೊಡನೆಯೋ ಮಾತನಾಡುವಾಗ ಗಮನಕ್ಕೆ ಬಂದ ಒಂದು ವಾದವೆಂದರೆ ಈ ಸ್ವರೂಪ, ಆಕೃತಿ, ಕೇಂದ್ರ ಅಥವಾ ಪ್ರಕಾರ ಪ್ರಜ್ಞೆ ಎನ್ನುವುದೆಲ್ಲಾ outdated ವಾದ; ಬದುಕಿಗೆ, ವಾಸ್ತವಕ್ಕೆ ಇಂಥ ಯಾವುದೇ ನಿಯತಿಯಿಲ್ಲ, ಜೀವನ ಇರುವುದೇ ಈ ಯಾವ ಒಂದು ಅರ್ಥಪೂರ್ಣತೆ ಅಥವಾ ಸ್ಪಷ್ಟವಾದ ಚೌಕಟ್ಟಿಗೆ ಅತೀತವಾದ ಬಗೆಯಲ್ಲಿಯೇ. ಹಾಗಿರುತ್ತ ಕೃತಿಕಾರನೋರ್ವ ತಾನು ಕಂಡುದನ್ನು ಚಿತ್ರಿಸುತ್ತ ಅವುಗಳಿಗೆ ಅರ್ಥ-ಚೌಕಟ್ಟು-ಆಯಾಮ-ಆಕೃತಿ ಒದಗಿಸುವ ಅಹಂಕಾರ ಪ್ರದರ್ಶಿಸುವುದಾದರೂ ಎಷ್ಟರಮಟ್ಟಿಗೆ ಸಮರ್ಥನೀಯ ಎನ್ನುವ ಪ್ರಶ್ನೆಯಿದೆಯಲ್ಲವೇ ಎನ್ನುವುದೇ ಆ ವಾದ. ಇಲ್ಲಿ ನನ್ನ ನೆರವಿಗೆ ಬರುವುದು Orhan Pamuk ಬರೆದ ಕೃತಿ The Naive and the Sentimental Novelist. ಆದರೆ ಇದೆಲ್ಲ ತರ್ಕ, ಜಿಜ್ಞಾಸೆಗಳಿಗೆ ಮೀರಿದ್ದು ಸಂವೇದನೆ, ರಸಪ್ರಜ್ಞೆ ಮತ್ತು ಕಲೆಯ ಸ್ವಾದ. ಇದನ್ನು ಮರೆಯದಿರೋಣ.

ನಾನು ಅನುಪಮಾ ಪ್ರಸಾದ್ ಅವರ “ದೂರ ತೀರ” ಮತ್ತು “ಕಾಳಿಂದಿ ಮಡು” ಕತೆಗಳನ್ನು ಇದೇ ಬಗೆಯ ವಸ್ತುವನ್ನು ನಿರ್ವಹಿಸಿದ ಇತರ ಕೆಲವು ಕತೆಗಾರರ ಕತೆಗಳೊಂದಿಗಿಟ್ಟು ತೌಲನಿಕವಾಗಿ ಗಮನಿಸುವ ಪ್ರಯತ್ನ ಮಾಡುವುದೇ ಈ ಸಮಸ್ಯೆಗೆ ಒಂದು ರೀತಿಯ ಪರಿಹಾರ ಎಂದು ಭಾವಿಸುತ್ತೇನೆ. ಅಶೋಕ ಹೆಗಡೆಯವರ “ಒಳ್ಳೆಯವನು” ಕಥಾಸಂಕಲನದಲ್ಲಿನ ಒಂದು ಕತೆ, “ಆಲಿಕಲ್ಲು”, “ದೂರ ತೀರ” ಕತೆಯದೇ ವಸ್ತುವನ್ನು ಬಹುಮಟ್ಟಿಗೆ ಹೋಲುತ್ತದೆ. ಹಾಗೆಯೇ “ಕಾಳಿಂದಿ ಮಡು” ಕತೆಯನ್ನು ಎಂ ವ್ಯಾಸ ಅವರ “ರಥ”, ಸಿ ಎನ್ ರಾಮಚಂದ್ರರ “ಸಂಗತ” ಮತ್ತು ಅಶೋಕ ಹೆಗಡೆಯವರ “ಮಳೆ” ಕತೆಗಳೊಂದಿಗಿಟ್ಟು ನೋಡುವುದು ಸಾಧ್ಯವಿದೆ. ಇದು ಕೇವಲ ಒಂದು ಸೂಚನೆ ಮಾತ್ರ. ಕುತೂಹಲಕರವಾದ ಅಧ್ಯಯನಕ್ಕೆ ಇದು ಕಾರಣವಾದೀತೆಂಬ ನಿರೀಕ್ಷೆಯಿದೆ.

ಅದೇನಿದ್ದರೂ ಸಂಕೀರ್ಣ ಗ್ರಹಿಕೆಯಾಗಲೀ, ಸಂಕೀರ್ಣ ರಚನೆಗೆ ಬೇಕಾದ ಏಕಾಗ್ರತೆ, ಸಹನೆ ಮತ್ತು ಸಮಯವಾಗಲೀ ಕಣ್ಮರೆಯಾಗುತ್ತಿರುವಂತೆಯೇ ಕಾಣುತ್ತಿರುವ ಇಂದಿನ ಕನ್ನಡ ಸಾಹಿತ್ಯದಲ್ಲಿ ಅನುಪಮಾ ಪ್ರಸಾದ್ ತಲೆಮಾರಿನ ಕತೆಗಾರರು ಬರೆಯುತ್ತಿರುವುದು, ಅವರ ಕತೆಗಳು ನಮಗೆ ಓದಲು ಸಿಗುತ್ತಿರುವುದು ಸಣ್ಣ ಸಂಗತಿಯೇನಲ್ಲ. ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತ, ಅವರು ಮತ್ತಷ್ಟು ಕತೆಗಳನ್ನು ಬರೆಯಲಿ, ಕತೆಯಿಂದ ಕತೆಗೆ ಬೆಳೆಯುತ್ತ ಬರೆಯಲಿ ಎಂದು ಹಾರೈಸುತ್ತೇನೆ.

No comments: