Tuesday, February 17, 2015

ವಿವೇಕ್ ಶಾನಭಾಗರ ಕಾದಂಬರಿ “ಊರು ಭಂಗ”

“ಊರು ಭಂಗ” ವಿವೇಕ್ ಶಾನಭಾಗ ಅವರ ಮೂರನೆಯ ಕಾದಂಬರಿ. ಬಹು ಚರ್ಚಿತ ಮತ್ತು ಹಲವು ಆಯಾಮಗಳ, ದಟ್ಟವಾದ ವಿವರಗಳಿಂದ ಓದುಗನನ್ನು ಇಡಿಯಾಗಿ ಆವರಿಸಿಕೊಳ್ಳುವಂತಿದ್ದ “ಘಾಚರ್ ಘೋಚರ್” ಎಂಬ ರಚನೆಯನ್ನು ಕಾದಂಬರಿ ಎನ್ನುವುದಾದರೆ ಇದು ನಾಲ್ಕನೆಯದು.

ಕಾದಂಬರಿಯನ್ನು ನೇರವಾಗಿ ಹೊಗುವ ಮುನ್ನ ವಿವೇಕ್ ಅವರು ಒಂದೆರಡು ಸಂದರ್ಶನ
ಗಳಲ್ಲಿ ಆಡಿದ ಮಾತು ಮತ್ತು ಅವರ ಅಚ್ಚುಮೆಚ್ಚಿನ ಕೃತಿಗಳ ಹಿನ್ನೆಲೆಯಲ್ಲಿ ಅವರು ಬರವಣಿಗೆಯನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಮತ್ತು ಅವರ ಮಟ್ಟಿಗೆ ಕಾದಂಬರಿ ಬರೆಯುವುದು ಎಂದರೆ ಏನು ಎಂಬ ಬಗ್ಗೆ ನಾವು ತಿಳಿದುಕೊಂಡಿರುವುದು ಸೂಕ್ತ. ಒಟ್ಟಾರೆಯಾಗಿ ಒಂದು ಕೃತಿ ಏನನ್ನು ಹೇಳುತ್ತಿದೆ ಎನ್ನುವುದನ್ನು ಕುರಿತು ಯೋಚಿಸುವ ಮನಸ್ಸು ಅದನ್ನು ಸಮಗ್ರವಾಗಿ ಒಂದು ಬೀಸಿನಲ್ಲಿ ಹಿಡಿದಿಡಲು ಬಯಸುವುದು ಕೂಡ ಅರ್ಥಮಾಡಿಕೊಳ್ಳುವ, ಗ್ರಹಿಸುವ ಸಹಜವಾದ ಪ್ರಯತ್ನ. ಮನಸ್ಸು ಒಂದನ್ನು ಇನ್ನೊಂದರ ಜೊತೆ ಜೋಡಿಸಲು, ಜೋಡಿಸಿ ಅರ್ಥದ ಪೊರೆ ಹಚ್ಚಲು ಮತ್ತು ತನ್ಮೂಲಕ ಇದು ಹೀಗೆ ಎಂದು ಗ್ರಹಿಸಲು ಬಯಸುವುದು ಕೂಡ ಇದು ತನಗೆ ದಕ್ಕಿತು ಎಂಬ ಸಮಾಧಾನ ಹೊಂದುವ ಅದರ ಸ್ವಾರ್ಥದಿಂದ ಪ್ರೇರಿತವಾದದ್ದೇ ಹೊರತು ಇನ್ನೇನಲ್ಲ. ಆದರೆ ಒಂದು ಉತ್ತಮ ಕೃತಿ ಎಂದೂ ಓದುಗನಿಗೆ ಅಂಥಾ ತೃಪ್ತಿಯ, ಸಮಾಧಾನದ ಕೃಪೆಯನ್ನು ತೋರುವುದಿಲ್ಲ ಎನ್ನುವುದು ನಿಲ್ಲುವ ಮಾತು. ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ವಿವೇಕ್ ಇದೇ ಅರ್ಥದ ಮಾತನ್ನು ಹೇಳಿದ್ದಾರೆ. ಹಾಗೆಯೇ ಹಿಂದೊಮ್ಮೆ ಅವರು ದೀರ್ಘವಾದ ಬರವಣಿಗೆಗೆ ಮತ್ತೊಮ್ಮೆ ಕೈಹಚ್ಚಲು ಅಳುಕಾಗುತ್ತದೆ ಎಂಬ ಮಾತನ್ನೂ ಹೇಳಿದ್ದರು. ಒಮ್ಮೆ ಬರೆದ ತಮ್ಮದೇ ಕಾದಂಬರಿಯನ್ನು ತಿದ್ದಿ ತೀಡಲು ಮತ್ತೊಮ್ಮೆ ಆ ಜಗತ್ತಿಗೆ ಪ್ರವೇಶಿಸಿ, ಅಲ್ಲಿಯ ಅನುಭವಕ್ಕೆ ತಮ್ಮನ್ನು ತಾವು ತೆತ್ತುಕೊಂಡು, ಅಲ್ಲಿಯೇ ಬದುಕುತ್ತ ಅದನ್ನು ಮರು ಪರಿಶೀಲಿಸುವ ಪ್ರಕ್ರಿಯೆ ಸಾಕಷ್ಟು ಸಮಯ, ವ್ಯವಧಾನ ಮತ್ತು ಏಕಾಂತವನ್ನು ಬೇಡುತ್ತದೆ. ಇದು ಹಲವಾರು ಕಾರಣಗಳಿಂದ ಕಷ್ಟವಾಗುತ್ತ ಹೋಗುತ್ತದೆ ಎಂಬ ಕಾರಣಕ್ಕೆ ಹುಟ್ಟಿದ ಅಳುಕಿದು. ಈ ಬಾರಿ ಪುಸ್ತಕ ಬಿಡುಗಡೆ ಮಾಡುತ್ತ ಮತ್ತೆ ಅದನ್ನೇ ಬೇರೆ ಮಾತುಗಳಲ್ಲಿ ಹೇಳಿದ್ದಾರೆ. ಬರೆಯುತ್ತ ಬರೆಯುತ್ತ ಅದು ತಮ್ಮ ಅನುಭವವೇ ಆಗುತ್ತದೆ ಎಂಬ ಮಹತ್ವದ ಮಾತದು. ಅಂದರೆ, ಬರವಣಿಗೆಯಲ್ಲಿ ನಿಜಗೊಳ್ಳುತ್ತ, ಅದೇ ನಿಜವಾಗುತ್ತ ನಿಲ್ಲುವ ಪ್ರಕ್ರಿಯೆ ಅದು. ಇದಕ್ಕೆ ಒಬ್ಬ ವ್ಯಕ್ತಿ ಮನಸ್ಸಿನಲ್ಲೇ ಕಟ್ಟಿದ ದೇವಾಲಯದ ರೂಪಕವನ್ನೂ ಅವರು ಒದಗಿಸಿದರು.

ಹಲವಾರು ಬಾರಿ ನಮಗೆ ವಿವೇಕ್ ಅವರು ಜೇಮ್ಸ್ ಜಾಯ್ಸ್ ಹೇಳುವ ಸಿಗ್ನಿಫಿಕೆಂಟ್ ಡೀಟೇಲ್ಸ್ ಬಗ್ಗೆ ವಿವರಿಸಿದ್ದಾರೆ. ಒಂದು ಮೇಜಿನ ಮೇಲೆ ಹಲವಾರು ವಸ್ತುಗಳನ್ನಿಟ್ಟಿದ್ದರೆ ಬೇರೆ ಬೇರೆಯವರು ಅದನ್ನೆಲ್ಲ ವಿವರಿಸುವ ವಿಧಾನ ವಿಭಿನ್ನವಾಗಿರುತ್ತದೆ. ಪ್ರತಿಯೊಬ್ಬರೂ ಏನನ್ನೋ ಬಿಟ್ಟು ಬಿಟ್ಟಿರುತ್ತಾರೆ ಮತ್ತು ಪ್ರತಿಯೊಬ್ಬರೂ ಹೇಳುವ ವಿಧಾನದಲ್ಲೇ ಏನೋ ಒಂದು ವಿನ್ಯಾಸ ನಿರ್ಮಿಸಿರುತ್ತಾರೆ. ನೀನು ಏನನ್ನು ಬಿಡುತ್ತಿ, ಏನನ್ನು ಹೇಳುತ್ತೀ ಎನ್ನುವುದು ಮತ್ತು ನಿಜಕ್ಕೂ ಇರುವುದು - ಇದೆಲ್ಲ ಒಬ್ಬ ಬರಹಗಾರನಿಗೆ ಕುತೂಹಲಕರ ಎನಿಸಬೇಕು ಎನ್ನುವಂಥ ಮಾತನ್ನು ವಿವೇಕ್ ಹೇಳಿದ್ದಿದೆ. ಇಲ್ಲಿಯೇ ವಿವೇಕ್‌ಗೆ ಇಷ್ಟವಾದ ಗೇಬ್ರಿಯಲ್ ಗ್ರಾಸಿಯಾ ಮಾರ್ಕೆಸ್ ಅವರ ಒಂದು ಮಾತನ್ನು ನೆನೆಯುವುದು ಈ ವಿಚಾರವನ್ನು ಮತ್ತಷ್ಟು ಸ್ಪಷ್ಟವಾಗಿಸೀತು.

Life is not what one lived, but what one remembers and how one remembers it in order to recount it.

ಇದನ್ನು ಮುಂದೆ ಈ ಕಾದಂಬರಿಯಲ್ಲಿ ಬರುವ ಪಾಲಿಟಿಕ್ಸ್ ಆಫ್ ಮೆಮೊರಿಯೊಂದಿಗೆ ಇರಿಸಿ ಸ್ವಲ್ಪ ಚರ್ಚಿಸಬಹುದು.

“ಊರು ಭಂಗ” ಕಾದಂಬರಿಯಲ್ಲಿ ಹಲವು ಆಯಾಮಗಳ "ಲಂಘನ"ದ ಚಿತ್ರಣವಿದೆ. ತೆಂಕಣ ಕೇರಿಯ ಎಫೆಕ್ಟ್‌ನಿಂದ ಕಾರ್ಪೊರೇಟ್ ಮತ್ತು ಆಧುನಿಕತೆಯ ಎಫೆಕ್ಟ್‌ನತ್ತ ಲಂಘನಕ್ಕೆಳಸುವ ಮನಮೋಹನ್ ಇಲ್ಲಿ ನಿರೂಪಕ ಕೂಡ. ಆದರೆ ನಿರೂಪಕ ಪ್ರಜ್ಞೆಯಲ್ಲಿ ಅವನಿಗೆ ಹೊರತಾದುದನ್ನೂ ಅವನು ನಿರೂಪಿಸುವಂತೆ ಕಾಣುವುದರಿಂದ ಆತನೇ ಇಲ್ಲಿ ಪೂರ್ತಿಯಾಗಿ ಆವರಿಸಿಕೊಳ್ಳುತ್ತಿಲ್ಲ. ಮನಮೋಹನ್‌ಗೆ ಸಂಬಂಧಿಸಿದ ಆಯಾಮದಲ್ಲಿ ಇದು ಊರು-ಭಂಗದ ಪ್ರಕರಣವಾಗುವುದು ಹೀಗೆ. ಊರು ಎಂದರೆ ತೊಡೆಯೂ ಹೌದು, ವಾಸ್ತವ್ಯದ ಊರೂ ಹೌದು. ತೆಂಕಣಕೇರಿ ವಾಸ್ತವ್ಯಕ್ಕೆ ಸಂಬಂಧಿಸಿದ್ದರೆ, ಅದರ ಎಫೆಕ್ಟ್ ಎಂಬ ಬೇಲಿ ಏನಿದೆ, ಅದು ಕೇವಲ ಭೂಪ್ರದೇಶಕ್ಕೆ ಸಂಬಂಧಿಸಿದ್ದಾಗದೆ, ಮನಮೋಹನದ ಭೌತಿಕ ವ್ಯಕ್ತಿತ್ವಕ್ಕೇ ಹಾಕಿದ ಬೇಲಿಯಾಗಿ ಅವನನ್ನು ಕಾಡಿದೆ. ಇದರಿಂದ ಮುಕ್ತಿಯಿಲ್ಲವೇ ಎಂದರೆ ಮನಮೋಹನ ಕಂಡುಕೊಂಡ ಲಂಘನವೇ ಮುಕ್ತಿಯಾಗಬೇಕಿತ್ತು. ವಿಚಿತ್ರವೆಂದರೆ ಇಂಥ ಲಂಘನವೊಂದು "ಭಂಗ"ದ, ಡಿಸ್ಟ್ರಕ್ಷನ್ನಿನ ಅಂಶವನ್ನೂ ತನ್ನಲ್ಲೇ ಇರಿಸಿಕೊಂಡಿರುತ್ತದೆ ಎಂಬುದು. ಯುವ ಕವಯಿತ್ರಿ ಶ್ರಿದಲಾ ಸ್ವಾಮಿ ಹೇಳುವಂತೆ ಮೊಟ್ಟೆಯನ್ನು ಒಡೆಯದೇ ಆಮ್ಲೆಟ್ ಕೂಡ ಮಾಡಲಾಗದು.

ಕತ್ತಲಿನಿಂದ ದಿನ ಒಡೆವ ಘಳಿಗೆಯಲ್ಲೇ ಅರ್ಥ ಮತ್ತು ಅಸ್ತಿತ್ವ ಕೂಡ ತೆಳ್ಳಗೆ ಒಡಮೂಡಬೇಕು. ಹಾಗಾಗಿ ತೆಂಕಣಕೇರಿ ಎಂಬ ಊರು ಭಂಗವಾಗದೆ ಅದರ ಎಫೆಕ್ಟ್‌ನಿಂದ ಹೊರಬರಲು ಅಥವಾ ಕಾರ್ಪೊರೇಟ್ ಜಗತ್ತಿಗೆ ಪೂರ್ತಿಯಾಗಿ ಸಲ್ಲುವವನಾಗಿ ಬದಲಾಗಲು ಸಾಧ್ಯವಿಲ್ಲ. ಹಾಗೆಯೇ ತೊಡೆ ಭಂಗಿಸಿಕೊಂಡ ಹೊರತು ಕಾಮಕ್ಕೆ ಎದುರಾಗಲು, ಪೂರ್ತಿಯಾಗಿ ತೆಂಕಣಕೇರಿಯ ಹೆಣ್ಣಿಗತನದಿಂದ, ಅದನ್ನು ಹಾಗೆ ಕರೆಯಬಹುದಾದರೆ, ಮುಕ್ತನಾಗಿ ನಿಲ್ಲುವುದು ಸಾಧ್ಯವಿಲ್ಲ.

ಕೌತುಕದ ಸಂಗತಿಯೆಂದರೆ, ಈ ಕಾದಂಬರಿಯ ಕೆಲವು ಬೀಜಗಳು ವಿವೇಕರ ಮೊಟ್ಟಮೊದಲ ಕಥಾಸಂಕಲನ “ಅಂಕುರ”ದಲ್ಲೇ ಇದ್ದವೇ ಎಂಬುದು! ಅಂಕುರಕ್ಕೆ ಮುನ್ನುಡಿ ಬರೆಯುತ್ತ ಯಶವಂತ ಚಿತ್ತಾಲರು ಕಾಮ ಎಂಬುದು ವೈಯಕ್ತಿಕ ಜೀವನದಲ್ಲಿ ಪಡೆದುಕೊಳ್ಳುವ ಆಕೃತಿಯೇ ಹೇಗೆ ಸಮಾಜದ ಸ್ವರೂಪದ ಮೇಲೆ ಬೆಳಕು ಚೆಲ್ಲುವ ಆಕೃತಿ ಕೂಡ ಆಗಬಲ್ಲುದು ಎಂಬ ಬಗ್ಗೆ ಬರೆಯುತ್ತಾರೆ. ಇದೇ ಸಂಕಲನದ “ಬಂದಾವೋ ಬಾರವೋ...” ಕತೆಯಲ್ಲಿ ನಾಯಕ ಎಂಬ ಪಾತ್ರ "ಕಾಮವನ್ನು ನಾವು ಎದುರಿಸಿ ನಿರ್ವಹಿಸುತ್ತೇವಲ್ಲ, ಅದೇ ಬದುಕನ್ನು ನಾವು ಪ್ರವೇಶಿಸುವ ಮತ್ತು ಎದುರಿಸುವ ರೀತಿಯೂ ಆಗಿರುತ್ತದೇನೋ ಎಂದು ಇತ್ತೀಚೆಗೆ ನನಗನ್ನಿಸತೊಡಗಿದೆ" ಎನ್ನುತ್ತದೆ!(ಪುಟ 78) ತೆಂಕಣಕೇರಿ ಎಫೆಕ್ಟ್‌ನ ನಿಜವಾದ ಪರಿಚಯ ಬಹುಶಃ ಇಲ್ಲಿಯೇ, “ಅಂಕುರ” ಸಂಕಲನದ ಕತೆಗಳಲ್ಲಿಯೇ, ನಮಗೆ ಸಿಗುವುದು ಎನಿಸುತ್ತದೆ.

ಮನಮೋಹನ್‌ಗೆ ಸಂವಾದಿಯಾಗಿ ಕಿಮಾನಿ ವಕೀಲರು ಮತ್ತು ಅವರ ಊರು ಇವೆ. ಕಿಮಾನಿ ವಕೀಲರು ಸ್ವಾತಂತ್ರ್ಯಪೂರ್ವದ ಒಂದು ತಲೆಮಾರನ್ನು, ಅದರ ಆದರ್ಶ, ಛಲ ಮತ್ತು ಹೋರಾಟದ ಮನೋಭಾವವನ್ನು ಸಾಂಕೇತಿಸುತ್ತಾರೆ. ಈ ಮಾತು ಕ್ಲೀಷೆ ಎನಿಸುವುದಾದರೂ ಇದನ್ನು ಹಾಗೆಯೇ ಹೇಳಬೇಕಿದೆ. ಏಕೆಂದರೆ, ಕಿಮಾನಿ ವಕೀಲರ ತೊಡೆ ಮುರಿಯುವುದು ಎಂದರೆ ಅವರ ಈ ಆದರ್ಶದ ಪರಿಕಲ್ಪನೆ, ಅವರ ಹಠಮಾರಿತನದ ಹೋರಾಟದ ಬೆನ್ನೆಲುಬು, ಅವರು ನಂಬಿದ ಮೌಲ್ಯಗಳ ತೊಡೆ ಮುರಿಯುವುದು ಕೂಡ ಆಗಿರುವುದರಿಂದ. ಇತ್ತಕಡೆಯಿಂದ ಇದೂ ನಡೆಯದೇ ಹೋದರೆ ಅತ್ತಕಡೆ ಮನಮೋಹನ ಸಾಧಿಸಿದ ಲಂಘನ ಪೂರ್ತಿಯಾಗುವುದಿಲ್ಲ ಎನ್ನುವುದು ಕೂಡ ಮುಖ್ಯ. ಈ ಅಂತರ್ ಸಂಬಂಧ ಮನಮೋಹನನ ವ್ಯಕ್ತಿಗತ ಕಥಾನಕದ ಚೌಕಟ್ಟನ್ನೂ, ಕಿಮಾನಿ ವಕೀಲರ ಕಪೋಲಕಲ್ಪಿತ ಇತಿಹಾಸದ ಚೌಕಟ್ಟನ್ನೂ ಮೀರಿ ನಿಲ್ಲುವ ನೆಲೆಯದ್ದು ಎನ್ನುವುದನ್ನು ಮರೆಯುವಂತಿಲ್ಲ. ಈ ಬಗೆಯಾಗಿ ಇಲ್ಲಿ ಸ್ವಾತಂತ್ರ್ಯಪೂರ್ವದ ದಿನಗಳ ಒಂದು ತಲೆಮಾರು ಚಂದು, ಚಿರಾಗ್ ತರದ ಸ್ನೇಹಿತರಿಂದ ಹಾದು ರಾಮ-ರಹೀಮರಿಂದ ಕಳಚಿಕೊಂಡ ಅಶೋಕನ ತರದ ಇಂದಿನ ತಲೆಮಾರಿನ ತನಕ ಚಾಚಿಕೊಳ್ಳುವ ಕಾಲಮಾನಕ್ಕೂ ಇದು ಹರಡಿಕೊಳ್ಳುತ್ತದೆ. ಮಾತ್ರವಲ್ಲ ಈ ಎಲ್ಲ ಕಾಲಮಾನದ ಸಹಜ ಬದಲಾವಣೆಗಳನ್ನು ಗಮನಿಸುತ್ತಲೇ ಅದರಲ್ಲಿನ ಸಾಂಕೇತಿಕತೆಗಳನ್ನೆಲ್ಲ ದುಡಿಸಿಕೊಂಡು, ಅದರಿಂದ ಬೇರೆಯಾದ ಕಾದಂಬರಿಯಾಗಿ ರೂಪುಗೊಳ್ಳುತ್ತದೆ. ಹೀಗೆ ಸಾಂಕೇತಿಕತೆ ಇಲ್ಲಿ ಕೇವಲ ಸಾಪೇಕ್ಷವಾದ ಪರಿಕಲ್ಪನೆ, ಅರ್ಥ ಗ್ರಹಿಸುವುದಕ್ಕಾಗಿ ಹಾಕಿಕೊಂಡ ಅಕ್ಷಾಂಶ-ರೇಖಾಂಶಗಳಿದ್ದಂತೆ, ಅಷ್ಟೆ.

ಇಲ್ಲಿ ಒಂದು ಪುಟ್ಟ ಊರು ಮತ್ತು ಕಾರ್ಪೊರೇಟ್ ಜಗತ್ತು ಸಂತುಲಿತವಾಗಿ ತೆರೆದುಕೊಳ್ಳುತ್ತಿದೆ. ಇರದುದಕ್ಕಾಗಿಯೇ ತುಡಿಯುತ್ತ ಎಂದೂ ಕಂಪ್ಲೀಟ್ ಆಗಲಾರದ, ಒಳಗಿನ ಟೊಳ್ಳನ್ನು ತುಂಬಿಕೊಳ್ಳಲಾರದ, ಖಾಲಿಯಾಗಿಯೇ ಉಳಿದು ಬಿಡುವ ಮತ್ತು ಇವೆಲ್ಲದರಿಂದ ತಹತಹ, ತಲ್ಲಣ, ತಳಮಳಗಳಿಗೆ ದಾಸನಾಗಿಯೇ ಇರುವ ಸೆಲ್ಫ್ ಮುಖಾಮುಖಿಯಾಗುವ “ಸೆರೆ”, ಮನುಷ್ಯನ ಅಹಂಕಾರಕ್ಕೂ ಕಾರಣವಾಗಬಲ್ಲ ಮೌಲ್ಯ, ಆದರ್ಶ, ಛಲಗಳಿಗೆ ಎದುರಾಗುವ ಅಪಮಾನದ ಮತ್ತು ಸೋಲಿನ ಎದುರು ವರ್ತಮಾನದ ಬಂಧಿಯಾಗುವ ಮನುಷ್ಯನ ಮುಕ್ತಿಯ ಪ್ರಶ್ನೆ ಎರಡರ ನಡುವೆಯೇ ತೆರೆದುಕೊಳ್ಳುವ ದರ್ಶನ ಏನಿದೆ, ಅದು ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲ; ಅನುಭವ ಯಾವತ್ತೂ ಸಮಗ್ರವಲ್ಲ.

ಮನುಷ್ಯ ಸಂಬಂಧಗಳು ಕೇವಲ ಒಳಗಿನ ಟೊಳ್ಳು ಸಂಭಾಳಿಸಿಕೊಳ್ಳುವುದಕ್ಕಷ್ಟೇ ಬೇಕೆನಿಸುವ, ಅದನ್ನು ಟೆಂಪೊರರಿಯಾಗಿ ತುಂಬಿಕೊಳ್ಳುವ ಒಂದಾನೊಂದು ದಾರಿಯಷ್ಟೇ ಆಗಿ, ಅದಕ್ಕಾಗಿ ಸಾಹಿತ್ಯ- ಕಥೆ ಕಟ್ಟುವ ಕೌಶಲ - ಬಾಲ್ಯದ ಅನುಭವಗಳು - ಒಲಿಸಿಕೊಳ್ಳುವ ಚಾಲಾಕಿತನ ಎಲ್ಲವನ್ನೂ ಬಳಸಿಕೊಳ್ಳಬಲ್ಲ ಮಟ್ಟಕ್ಕೆ ಇಳಿಯುವ ಮನುಷ್ಯ - ನನ್ನು ತೋರಿಸಿಯೂ ಇನ್ನೊಂದು ಕಡೆಯಿಂದ ಇವತ್ತಿನ ಕಾರ್ಪೊರೇಟ್ ಜಗತ್ತು ಇದನ್ನು ಹೇಗೆ ಬಳಸಿಕೊಳ್ಳಬಲ್ಲುದು ಎನ್ನುವುದನ್ನು ತೀರಾ ಸೂಕ್ಷ್ಮವಾಗಿ (ಭಾಸ್ಕರ ರಾವ್-ವ್ಯಾಂಡಿ ಶೊನಾಯ್-ಎಂಡಿ-ಸಾಹು-ಸನ್ಯಾಲ್-ರೇವತಿ) ತೋರಿಸಿರುವುದು ಈ ಕಾದಂಬರಿಯ ಇನ್ನೊಂದು ಆಯಾಮ. ವಿವಾಹಿತನಾದ ಮನಮೋಹನ್ ಶಮಿಯ ಒಡನಾಟಕ್ಕೆ ಎಳಸುವಲ್ಲಿ ಕೇವಲ ತೆಂಕಣಕೇರಿ ಎಫೆಕ್ಟನ್ನು ಮೀರುವ ಸಾಹಸ ಅಥವಾ ಪ್ರಯತ್ನವನ್ನಷ್ಟೇ ಕಾಣಬೇಕಿಲ್ಲ. ಇವತ್ತಿನ ತಲೆಮಾರು ಮಾತ್ರವಲ್ಲ, ನಡುವಯಸ್ಸಿನವರೂ ಸೋಶಿಯಲ್ ವೆಬ್ಸೈಟ್ಗಳಲ್ಲಿ, ಮೊಬೈಲುಗಳಲ್ಲಿ ಹೊಸ ಸ್ನೇಹಕ್ಕೆ, ಸಂಬಂಧಕ್ಕೆ ತಹತಹಿಸುತ್ತಿರುವಲ್ಲಿಯೂ ಈ ಒಳಗಿನ ಟೊಳ್ಳನ್ನೇ ವರ್ಚ್ಯುಯಲ್ ರಿಲೇಶನ್ಸ್ ಮೂಲಕ ತುಂಬಿಕೊಳ್ಳಲು ಮಾಡುವ ಲಂಘನವೇ ಕಾಣಿಸುವುದಿಲ್ಲವೆ? ಹಾಗೆಯೇ ಈ ಪ್ರಕ್ರಿಯೆಯಲ್ಲಿ ಬಹುತೇಕ “ಊರುಭಂಗ” ವನ್ನೇ ಬೇರೆ ಬೇರೆ ಅರ್ಥಗಳಲ್ಲಿ ಸಾಕ್ಷಾತ್ಕರಿಸುವುದಿಲ್ಲವೆ?

ಇಲ್ಲಿ ಕಿಮಾನಿ ವಕೀಲರ ಪ್ರಸಂಗವನ್ನು ನಿರೂಪಿಸುವ ಒಟ್ಟೂ ಕಥಾನಕದ ಚೌಕಟ್ಟೇನಿದೆ, ಅದು ಪೂರ್ತಿಯಾಗಿ ಕಟ್ಟುಕತೆಯೇ ಆಗಿರುವ ಸಾಧ್ಯತೆಯೊಂದಕ್ಕೆ ಓದುಗ ತೆರೆದುಕೊಳ್ಳಲೇ ಬೇಕಾಗುತ್ತದೆ. ಕಿಮಾನಿ ವಕೀಲರ ಕತೆಯನ್ನು ಮನಮೋಹನ್ ಎಷ್ಟೇ "ಹೌದು-ಹೌದು" ಎನಿಸುವಂತೆಯೇ ಕಟ್ಟಿರಲಿ, ಅದು ಕಟ್ಟುಕತೆಯೇ, ಶಮಿಯನ್ನು ಒಲಿಸಿಕೊಳ್ಳುವ "ಕೇವಲ ಚಾಲಾಕಿತನ"ವೇ ಆಗಿದೆ ಎಂದುಕೊಂಡು ನೋಡಬಹುದು. ತನ್ನ ಪ್ರಜ್ಞೆಗೆ ಹೊರತಾದುದನ್ನೂ ಹೇಳುವ ನಿರೂಪಕ ಈ ಮನಮೋಹನ್ ಎಂದು ಹೇಳಿದ್ದು ಈ ಅರ್ಥದಲ್ಲಿಯೇ. ಆದರೆ ಇಲ್ಲಿಯೂ ಚಿತ್ತಾಲರ ಕೇಂದ್ರ ವೃತ್ತಾಂತದಂತೆಯೇ ತಾನು ಕೇಂದ್ರ ಎಂದುಕೊಂಡಿರುವ ಮನಮೋಹನನ ಕತೆಯಲ್ಲಿ ಅವನೇ ಬೇರೊಂದು ಕೇಂದ್ರದಿಂದ ಹೊರಟ ಬೇರೊಂದು ವೃತ್ತದ ಪರಿಧಿಯ ಮೇಲೆ ಕುಳಿತ ಒಂದು ಬಿಂದುವಷ್ಟೇ ಆಗಿರುವ ಸಾಧ್ಯತೆ ನಮ್ಮನ್ನು ಅಚ್ಚರಿಗೆ ಕೆಡಹುತ್ತದೆ. ಇದನ್ನು ತನ್ನ ಗೆಳೆಯ ಚಂದು ಜೊತೆ ಮಾತನಾಡುತ್ತ ಮನಮೋಹನ್ ಗ್ರಹಿಸಿರುವುದೂ ಇದೆ. ಇದು ಮನಮೋಹನ್ಗೆ ಮಾತ್ರವೇ ಅನ್ವಯಿಸುವ ಮಾತೂ ಅಲ್ಲ ಎಂಬ ಗ್ರಹಿಕೆ ಕಾದಂಬರಿಯ ಚೌಕಟ್ಟಿನಲ್ಲೇ ನಮಗೆ ದಕ್ಕುತ್ತದೆ. ಇಲ್ಲಿನ ಸಾಹು, ಸನ್ಯಾಲ್ ಮುಂತಾದವರನ್ನು ಕಾರ್ಪೊರೇಟ್ ಜಗತ್ತನ್ನು ಪ್ರತಿನಿಧಿಸುವ ಪಾತ್ರಗಳೆಂದೇ ನಾವು ತಿಳಿಯಬೇಕಾದ್ದಿಲ್ಲ. ಅವರೂ ಮನುಷ್ಯರೇ ಮತ್ತು ಅವರೂ ಹತ್ತು ಹಲವಾರು ತಾಪತ್ರಯಗಳಲ್ಲಿ ಮುಳುಗಿಕೊಂಡು ಸದಾ ಕೇಂದ್ರವಾಗಲು ಹವಣಿಸುವ ಇನ್ಯಾವುದೋ ವೃತ್ತಗಳ ಪರಿಧಿಯ ಮೇಲೆ ಈಗಲೋ ಆಗಲೋ ಜಾರುವ ಭೀತಿಯಲ್ಲೇ ಕೂತ ಬಿಂದುಗಳಾಗಿರುವ ಸಾಧ್ಯತೆಯನ್ನು ಕಾದಂಬರಿ ನಮಗೆ ಕಾಣಿಸುವುದರಲ್ಲೇ ಅದರ ಸೌಂದರ್ಯವೂ ಅಡಗಿದೆ. ರೇವತಿಯ ಬಿಕ್ಕಟ್ಟುಗಳು, ಸಾಹುವಿನ ಬಿಕ್ಕಟ್ಟುಗಳು ಮುಂತಾದುವು ಕಾದಂಬರಿಯಲ್ಲಿ ಸಾಕಷ್ಟು ಪೋಷಣೆ ಪಡೆದುಕೊಂಡೇ ಬಂದಿರುವುದನ್ನು ನಾವು ಹೀಗೆ ಗ್ರಹಿಸಬಹುದು.

ಕಾಂಪೌಂಡ್ ಒಳಗೆ ಅಭಿಮನ್ಯುವಿನಂತೆ ಸಿಕ್ಕಿಕೊಂಡಿರುವ ನಿರೂಪಕ ಮುಂದೆ ಎದುರಿಸಲಿರುವ “ಶಾಕ್”ಗಳ ರುಚಿಯನ್ನು ಓದುಗನಿಗೆ ತೋರಿಸದೇ ಸೂಚ್ಯವಾಗಿಟ್ಟಿರುವುದು ಕೂಡ ಇಲ್ಲಿ ಗಮನಾರ್ಹವಾದ ತಿರುವೇ. ಯಾರಿಗೆ ಗೊತ್ತು, ಇದೊಂದು ಕಾರ್ಪೊರೇಟ್ ಜಗತ್ತಿನ ಜಿದ್ದಾಜಿದ್ದಿನ ಫಲಶ್ರುತಿಯಾದ, ಯೋಜಿತ ಚಕ್ರವ್ಯೂಹವೇ ಇದ್ದೀತು. ಚಿತ್ತಾಲರ ಶಿಕಾರಿಯ ನಾಗಪ್ಪನಂತೆ ಇಲ್ಲಿ "ಬೇಟೆಗಾರನೇ ಬೇಟೆಯೂ" ಆಗಿರುವುದು ಸಾಧ್ಯ. ಅವನೆಲ್ಲಾ ಚಾಲಾಕಿತನದ ಕತೆಗಾರಿಕೆ ಅವನನ್ನೇ ಕತೆಯಾಗಿಸಲು ಹೂಡಿದ ಸಂಚಿನ ಭಾಗವೇ ಆಗಿಬಿಟ್ಟಿರಲು ಸಾಧ್ಯ. ಅಥವಾ....

ಈ ಬೇಟೆಗಾರನೇ ಬೇಟೆಯಾಗಬಹುದೆಂಬ ಕಾರ್ಪೊರೇಟ್ ಭಯವೇ ಮನಮೋಹನನ ಸುಪ್ತಮನಸ್ಸನ್ನು ತಿನ್ನುತ್ತಲೇ ಇದ್ದು, ಅದೇ ಅವನ ಕನಸಿನ ಕಲ್ಪನೆ ಆಗಿರಬಾರದು ಯಾಕೆ? ಮತ್ತೊಮ್ಮೆ ಓದಿ ನೋಡಿದರೆ ಕೊನೆಯ ಅಧ್ಯಾಯ ನಿಜವಾಗಿ ನಡೆಯಿತೇ, ಮಲಗಿಕೊಂಡು ಅವನು ಕನಸಿದನೇ ಗೊತ್ತಾಗುತ್ತಿಲ್ಲ! ಇಲ್ಲಿ ಮತ್ತೆ “ಅಂಕುರ” ಕತೆಯ ಈ ಮಾತು ಗಮನಿಸಿ: "ಒಂದು ಅನುಭವವನ್ನು ಇದು ಹೀಗೆ ಎಂದು ನಿರ್ಧರಿಸೋದೇ ಕಷ್ಟ. ಎಲ್ಲ ಅನುಭವಗಳು ಅಪೂರ್ಣವಾಗೇ ಬಳಿ ಬರುತ್ತವೇನೋ. ಅವುಗಳ ಮುಂದಿನ ಭಾಗ ಯಾವಾಗಲಾದರೂ ಹಠಾತ್ತಾಗಿ ಉದ್ಭವಿಸಿ ಬಿಡುತ್ತವೆ. ಆಗ ಹೆಕ್ಕಿ ಒಂದಕ್ಕೂ ಇನ್ನೊಂದಕ್ಕೂ ಕೊಂಡಿ ಹಾಕಬೇಕು ನೋಡು...." (ಪುಟ 45)

ಈ ಕಾದಂಬರಿಯಲ್ಲಿ ಪಾಲಿಟಿಕ್ಸ್ ಆಫ್ ಮೆಮೊರಿಯ ಉಲ್ಲೇಖವಿದೆ. ನಾವು ಗಮನಿಸಿರುವ ಮಾರ್ಕೆಸ್ನ ಮಾತಿನೊಂದಿಗೇ ಇದನ್ನೂ ಗಮನಿಸುವುದರಿಂದ ಹಲವು ಸ್ತರಗಳಲ್ಲಿ ಅದು ನಮ್ಮ ಬದುಕಿನಲ್ಲಿ ಬಂದು ಹೋಗುವ ಬಗೆಯನ್ನು ವಿವೇಚಿಸಲು ಸಹಾಯಕವಾಗುತ್ತದೆ. ನಮ್ಮ ಬದುಕಿನ ಅನುಭವಗಳಲ್ಲಿ ಯಾವುದೇ ಕ್ರಮಬದ್ಧತೆ ಎಂಬುದು ಇರುವುದಿಲ್ಲ ಎಂದಿಟ್ಟುಕೊಳ್ಳಿ. ಆದರೂ ಅನುಭವ ಒಂದು ಬಗೆಯ ಸಂಚಾರೀ ಭಾವದ ತೀವ್ರತೆಯೊಂದಿಗೇ ಹಾಯುತ್ತಿರುತ್ತದೆ. ಅದು ಸಮಗ್ರವಲ್ಲ ಎಂದಿಟ್ಟುಕೊಂಡು ಗಮನಿಸಿದರೂ, ಗಮನಿಸುವಾಗ ನಾವು ಅದಕ್ಕೆ ಅರ್ಥದ ಲೇಪವನ್ನು ಹಚ್ಚಲು, ತನ್ಮೂಲಕ ಗ್ರಹಿಸಲು ಒದ್ದಾಡುತ್ತಿರುತ್ತೇವೆ ಎನ್ನುವುದು ನಿಜವೇ. ಹೀಗೆ ಹಾಯುತ್ತಿರುವಾಗಲೇ ಒಂದು ಸೃಜನಶೀಲ ಕೃತಿಯ ರಚನೆಯಲ್ಲಿ ತೊಡಗಿಕೊಂಡ ಒಬ್ಬ ಕೃತಿಕಾರ ತನ್ನ ಅನುಭವದ ಗ್ರಹಿಕೆಗಳನ್ನು, ಸ್ಮೃತಿಯಿಂದ, ನೆನಪುಗಳಿಂದ ಪುನರ್-ನಿರ್ಮಿಸಿಕೊಳ್ಳಲು, ಕಟ್ಟಲು ಪ್ರಯತ್ನಿಸುತ್ತಾನೆ ಮತ್ತು ಈ ಪ್ರಕ್ರಿಯೆಯಲ್ಲಿ ಕೃತಿಗೆ ಒಂದು ಆಕೃತಿ ಅಥವಾ ಶಿಲ್ಪ ಎಂಬ ಮೂರ್ತ ಆಕಾರವನ್ನು ದಕ್ಕಿಸಲು ಒದ್ದಾಡುತ್ತಾನೆ. ಮನುಷ್ಯ ಸಂಬಂಧ ಕೂಡ ನೆನಪುಗಳಿಂದಲೇ ಕಟ್ಟಲ್ಪಡುವುದರಿಂದ ಅಲ್ಲಿಯೂ ಪಾಲಿಟಿಕ್ಸ್ ಆಫ್ ಮೆಮೊರಿ ಎಂಬುದು ಘಟಿಸುತ್ತಿರುತ್ತದೆ ಎಂದು ಭಾವಿಸಬಹುದು. ಅದು ಅನೈಚ್ಛಿಕವೂ ಆಗಬಹುದು ಎನ್ನುವುದನ್ನು ಮರೆಯದಿರೋಣ. ಅನುಭವವನ್ನು ನೆನಪುಗಳಲ್ಲಿ ಹಿಡಿದುಕೊಳ್ಳುವ ಮತ್ತು ಹಿಡಿದುಕೊಡುವ ಈ ಪ್ರಕ್ರಿಯೆ ಕುತೂಹಲಕರವಾಗಿದೆ. ಮನುಷ್ಯ ಸಂಬಂಧಗಳ ನೆನಪು ಅದರ ಒಂದಾನೊಂದು ಆಯಾಮವಷ್ಟೇ. ಹಾಗೆ ನೋಡಿದರೆ ನಾವೆಲ್ಲರೂ ಬದುಕಿರುವುದೇ, ನಿಜವಾಗುವುದೇ, ನೆನಪುಗಳಲ್ಲಿ ಅಥವಾ ಯೋಚನೆಗಳಲ್ಲಿ. ಇಲ್ಲಿ, “ನಾನು ಯೋಚಿಸುತ್ತೇನೆ ಮತ್ತು ಹಾಗಾಗಿ ಇದ್ದೇನೆ” ಎಂದ ರೇನೆಯ ಮಾತು ನೆನಪಾಗುತ್ತದೆ.

ಆರಾನ್ ಪಮುಕ್ ತನ್ನ ಮ್ಯೂಸಿಯಮ್ ಆಫ್ ಇನ್ನೊಸೆನ್ಸ್ ಕಾದಂಬರಿಯಲ್ಲಿ ತನ್ನ ಗತಿಸಿದ ಪ್ರೇಯಸಿಯನ್ನು ಪುನರ್ ನಿರ್ಮಿಸಿಕೊಳ್ಳುವ ಪ್ರಕ್ರಿಯೆಯನ್ನು ನೆನಪಿಸಿಕೊಳ್ಳಿ. ಆರಾನ್ ಪಮುಕ್ ಅಂಥ ಒಂದು ಮ್ಯೂಸಿಯಮ್ಮನ್ನು ನಿಜವಾಗಿಯೂ ನಿರ್ಮಿಸಿದ್ದಾನೆ. ನಮ್ಮಲ್ಲಿ ಜಯಂತ್ ಕಾಯ್ಕಿಣಿ ಈ ಲೈನ್ಸ್ ಎಂಡ್ ಡಾಟ್ಸ್ ಪರಿಕಲ್ಪನೆಯ ಮೂಲಕ, ಕೇಶವ ಮಳಗಿ ನದಿ ಮತ್ತು ದಂಡೆಯ ಪರಿಕಲ್ಪನೆಯ ಮೂಲಕ ಇದನ್ನೇ ಸ್ವಲ್ಪ ವಿಭಿನ್ನವಾಗಿ ವಿವರಿಸುವುದನ್ನು ನಾವು ಗಮನಿಸಬಹುದಾಗಿದೆ. ಅದಿರಲಿ, ಈಗ ನೆನಪುಗಳಿಂದ ಅಕ್ಷರ ಪ್ರಪಂಚಕ್ಕೆ ಒಂದು ಸೇತು ನಿರ್ಮಿಸಿಕೊಳ್ಳುವ ಸಂಕಷ್ಟಗಳೂ ಬರಹಗಾರನಿಗೆ ಎದುರಾಗುತ್ತವೆ. ಇಲ್ಲಿ ಮತ್ತೆ ನಾವು ಅಕ್ಷರ ಜಗತ್ತಿನ ತೊಡಕುಗಳು ಮತ್ತು ಪದ-ವಾಕ್ಯ ಸಂಬಂಧದಿಂದ ತೊಡಗಿ ಯೋಚನೆಯೊಂದು ಅಕ್ಷರಗಳಲ್ಲಿ ಲುಪ್ತವಾಗುವ ಭೀತಿಯ ವರೆಗಿನ ವಿಚಾರಗಳ ಕುರಿತು ಯೋಚಿಸಬಹುದು. ಮೊದಲಿನದ್ದಕ್ಕೆ ಭರ್ತೃಹರಿಯನ್ನು ಗಮನಿಸಿದರೆ ಎರಡನೆಯದಕ್ಕೆ Ongನ ವಿಚಾರಗಳನ್ನು ಅವಲಂಬಿಸಬೇಕಾದೀತು. ಅಷ್ಟೇಕೆ, ಅಲ್ಲಮ ಹೇಳಿರುವ “ಘನತರ ಚಿತ್ರದ ರೂಹ ಬರೆಯಬಹುದಲ್ಲದೆ ಪ್ರಾಣವ ಬರೆಯಬಹುದೆ ಅಯ್ಯ” ಎನ್ನುವಲ್ಲಿ ವ್ಯಕ್ತಪಡಿಸಿರುವ ಅನುಮಾನ ಕೂಡ ಅನುಭವ ಮತ್ತು ಭಾಷೆಯ ನಡುವಿನ ಕೊಡು-ಕೊಳ್ಳುವಿಕೆಯ ಕುರಿತಾಗಿಯೇ ಇದೆಯೆಂದುಕೊಂಡು ನಾವಿದನ್ನು ಗ್ರಹಿಸಬಹುದಾಗಿದೆ.
ಈ ಎಲ್ಲ ಯೋಚನಾ ಲಹರಿಗೆ ಪ್ರೇರಣೆ ಕೀರಂ ನಾಗರಾಜ್. ಅವರ (ಅಕ್ಷತಾ ಅವರು ಅಕ್ಷರ ರೂಪಕ್ಕಿಳಿಸಿದ) “ಮತ್ತೆ ಮತ್ತೆ ಬೇಂದ್ರೆ” ಕೃತಿಯ ಆರಂಭದಲ್ಲಿಯೇ ಅವರು ಕೃತಿಯೊಂದನ್ನು ಅರ್ಥಕ್ಕೆ ಒಳಪಡಿಸುವ ವಿಧಾನಗಳ ಬಗ್ಗೆ ಮತ್ತು ಭಾಷೆಯನ್ನು ಅರ್ಥದ ಹಂಗಿನಿಂದ ಮುಕ್ತವಾಗಿಸುವ ಕವಿಯ ತುಡಿತದ ಬಗ್ಗೆ ಮಾತನಾಡಿದ್ದಾರೆ.

ವಿವೇಕರ ಕಾದಂಬರಿಯಲ್ಲಿ ಬರುವ ಪಾಲಿಟಿಕ್ಸ್ ಆಫ್ ಮೆಮೊರಿ ವಿವೇಕರ ಪಾತ್ರದ ತುಮುಲವಾಗಿ ಎಷ್ಟು ಮುಖ್ಯವೋ, ಕಾದಂಬರಿಕಾರರಾಗಿ ಸ್ವತಃ ವಿವೇಕರ ಗ್ರಹಿಕೆಗಳು ಮತ್ತು ಅವರು ಅನುಭವವನ್ನು ಕೃತಿಯ ಮೂಲಕವೇ ಪುನರ್-ನಿರ್ಮಿಸಿಕೊಳ್ಳಲು ಪಡುವ ಪಾಡನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಕೂಡ, ಓದುಗರಾಗಿ ಕಾದಂಬರಿಯ ಗುರುತ್ವವನ್ನು ಗ್ರಹಿಸಲು ಮತ್ತು ಬರಹಗಾರರಾಗಿ ಬರವಣಿಗೆಯ ನಿರೀಕ್ಷೆಗಳನ್ನು ಕಂಡುಕೊಳ್ಳುವುದಕ್ಕೂ ಬಹಳ ಮುಖ್ಯ ಎಂದು ನಾನು ತಿಳಿಯುತ್ತೇನೆ.

ವಿವೇಕರ ನಿಯಂತ್ರಿತ ಬರವಣಿಗೆ, ಪ್ರಜ್ಞಾಪೂರ್ವಕವಾಗಿದ್ದೂ ಹಾಗನಿಸದ ಹದದಲ್ಲಿ ಕೃತಿಯನ್ನು ಆಕೃತಿಗೊಳಗಾಗಿಸುವ ಅವರ ಕೌಶಲ, ವಿವರಗಳನ್ನು, ಮನುಷ್ಯ ವರ್ತನೆಯ ಸೂಕ್ಷ್ಮಗಳನ್ನು ಗ್ರಹಿಸಿ ಅದನ್ನು ಕಲಾತ್ಮಕವಾಗಿ ಕೃತಿಯ ಒಡಲಿನಲ್ಲಿ ಅಳವಡಿಸಿ ಕೊಡುವ ಅವರ ಕುಸುರಿತನ ಇವು ಈ ಕೃತಿಯನ್ನು ಶ್ರೇಷ್ಠವಾಗಿಸಿವೆ.

No comments: