Tuesday, March 3, 2015

ಬಹು ಸಾಧ್ಯತೆಗಳ ‘ಊರು ಭಂಗ’

ಬಹುಶಃ ವಿವೇಕ್ ಶಾನಭಾಗರ ಈ ಊರುಭಂಗ ಕಾದಂಬರಿ ಪ್ರಪ್ರಥಮ ಬಾರಿಗೆ, ಬಹುಸಾಧ್ಯತೆಗಳ ಓದಿಗೆ ತೆರೆದುಕೊಂಡ ಒಂದು ಗದ್ಯ ಕೃತಿ ಎಂದು ನಾನು ಅಂದುಕೊಂಡಿದ್ದೇನೆ. ಇದುವರೆಗೂ ನಾವು ಕಾವ್ಯಕ್ಕೆ ಮಾತ್ರ ಇಂಥ ಸಾಧ್ಯತೆಯಿದೆ ಎಂದು ತಿಳಿದುಕೊಂಡಿದ್ದೆವು. ಹಲವಾರು ವಿಮರ್ಶಕರು, ಉಪನ್ಯಾಸಕರು ನಮಗೆ ಈ ರೀತಿ ಒಂದು ಕವನವನ್ನು ಬೇರೆ ಬೇರೆ ಸಂದರ್ಭದಲ್ಲಿಟ್ಟು, ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆ ಬೇರೆ ತರ ಅದನ್ನು ಓದಬಹುದು ಅಂತ ಹೇಳಿದ್ದಿದೆ. ಮೊಟ್ಟ ಮೊದಲ ಬಾರಿಗೆ ಒಂದು ಗದ್ಯ ಕೃತಿಯನ್ನು ಕೂಡ ಹೀಗೆ ವಿಭಿನ್ನ ಆಯಾಮಗಳಲ್ಲಿ ಓದಿಕೊಳ್ಳುವುದು ಸಾಧ್ಯವಿದೆ ಅಂತ ಅನಿಸುವಂತೆ ಮಾಡಿದೆ ಊರುಭಂಗ. ಬಹುಶಃ ಕನ್ನಡದ ಇದೊಂದೇ ಕಾದಂಬರಿ ಇಂಥ ಸಾಧ್ಯತೆಗೆ ತೆರೆದುಕೊಂಡಿರುವ ಕಾದಂಬರಿ ಎಂದು ನಾನು ಅಂದುಕೊಂಡಿದ್ದೇನೆ.

ವಿವೇಕ್ ಶಾನಭಾಗ್ ಅವರ ಹೊಸ ಕಾದಂಬರಿ ಊರುಭಂಗ ಕುರಿತ ಹಾಗೆ ನಾನು ಒಂದು ಪುಟ್ಟ ಟಿಪ್ಪಣಿ ಬರೆದು ನನ್ನ ಬ್ಲಾಗಿನಲ್ಲಿ ಅದನ್ನು ಹಾಕಿದ್ದೆ. ಯಾವುದೇ ಒಂದು ಪುಸ್ತಕ ಓದಿದರೂ ಅದರ ಬಗ್ಗೆ ಏನಾದರೂ ಸ್ವಲ್ಪ ಬರೆಯುವ ಅಭ್ಯಾಸ ನನ್ನದು. ಹಾಗೆ ಬರೆಯುವಾಗಲೇ ನನಗೆ ಓದುವಾಗ ಸಿಗದೇ ಹೋದ ಹಲವಾರು ಒಳನೋಟಗಳು ಸಿಗುವುದಿದೆ. ಹಾಗೆ ಬರೆಯದೇ ಹೋದರೆ ನನಗೆ ನಾನು ಓದಿದ ಕೃತಿ ಪೂರ್ತಿಯಾಗಿ ದಕ್ಕುವುದೇ ಇಲ್ಲ. ಹಾಗಾಗಿ, ತೀರ ವೈಯಕ್ತಿಕವಾದ ಒಂದು ಅಗತ್ಯದಿಂದ ನಾನು ಟಿಪ್ಪಣಿ ಮಾಡಿಕೊಳ್ಳುತ್ತೇನೆ. ಹಾಗೆ ಮಾಡಿಕೊಂಡು ಒಂದು ಟಿಪ್ಪಣಿಯನ್ನು ಬ್ಲಾಗಿನಲ್ಲಿ ಹಾಕಿದೆ ಮತ್ತು ಅದಕ್ಕೆ ಸ್ವಲ್ಪ ಪ್ರಚಾರ ಬೇಕಲ್ಲ ಅಂತ ಅದರ ಲಿಂಕನ್ನು ಫೇಸ್ ಬುಕ್ಕಲ್ಲಿ ಕಾಣಿಸಿದೆ. ಮೊದಲಿಗೆ ಹರೀಶ್ ಕೇರ ಅವರು ಕಾಮೆಂಟ್ ಹಾಕಿದ್ರು, ತಮಗೆ ಈ ಕಾದಂಬರಿ ಓದಿದ ಬಳಿಕ ಇದರ ಬಗ್ಗೆ ಏನಾದ್ರೂ ಬರೀಬೇಕು ಅಂತ ತೀವ್ರವಾಗಿ ಅನಿಸ್ತಾ ಇತ್ತು, ಆದ್ರೆ ನರೇಂದ್ರ ಬರ್ದಿದ್ದನ್ನ ಓದಿದ್ಮೇಲೆ ಇನ್ನೇನೂ ಬರೆಯೋದಕ್ಕೆ ಇಲ್ಲ ಅನಿಸಿಬಿಡ್ತು ಅಂತ. ಸ್ವಲ್ಪ ಹೊತ್ತಲ್ಲೇ ಜೋಗಿ ಅವರು ಕೂಡ ತಾವು ಬರೆಯುವುದಕ್ಕೂ ಮೊದಲೇ ಪೈಯವರು ಬರೆದಿದ್ದನ್ನ ಓದಿದ್ದ್ರೆ ತಾವೂ ಬರೀತಿರಲಿಲ್ಲ ಅಂತ ಕಾಮೆಂಟ್ ಹಾಕಿದ್ರು. ಇದೇನೂ ಸಂತೋಷ ಪಡುವ ವಿಷಯವೇನೂ ಆಗಿರಲಿಲ್ಲ. ಒಂದು ಒಳ್ಳೆಯ ಬರಹ ಇನ್ನಷ್ಟು ಬರವಣಿಗೆಯನ್ನ ಪ್ರಚೋದಿಸ್ಬೇಕು, ಚರ್ಚೆಗಳನ್ನ ಹುಟ್ಟು ಹಾಕಬೇಕು, ಕನಿಷ್ಟ ಕೆಲವು ಪ್ರಶ್ನೆಗಳನ್ನ, ಅನುಮಾನಗಳನ್ನಾದ್ರೂ ಎಬ್ಬಿಸ್ಬೇಕು. ಹಾಗೇನೂ ಆಗಲಿಲ್ಲವಲ್ಲ ಅಂತ ಬೇಸರವಾಯಿತು ಮಾತ್ರವಲ್ಲ ನಾನು ಬರೆದು ತಪ್ಪು ಮಾಡಿದೆನಾ ಅನ್ನಿಸಿತು.

ಆಮೇಲೆ ಚುಕ್ಕುಬುಕ್ಕು ತಾಣದಲ್ಲೇ ಗೌರಿಯವರು ಬರೆದರು. ತೇಜಸ್ವಿನಿ ಹೆಗಡೆಯವರು ಜೋಗಿಯವರ ಬರಹಕ್ಕೆ ಪ್ರತಿಕ್ರಿಯೆಯಾಗಿ ವಿಮರ್ಶೆ ಎಂದೇ ಪರಿಗಣಿಸಬಹುದಾದಂಥ ಒಂದು ಕಾಮೆಂಟ್ ಹಾಕಿದರು. ಅವಧಿಯಲ್ಲಿ ಸಂಯುಕ್ತ ಪುಲಿಗಲ್ ಅವರು ಬರೆದರು. ಸುದರ್ಶನ ಬೇಳೂರು ಅವರು ಬರೆದಿದ್ದಾರೆ. ನನ್ನ ಒಬ್ಬಿಬ್ಬರು ಸಾಹಿತಿ ಮಿತ್ರರು ಈ ಕಾದಂಬರಿಯ ಬಗ್ಗೆ ನನ್ನ ಜೊತೆ ಫೋನಿನಲ್ಲಿ, ಈಮೇಲಿನಲ್ಲಿ ಚರ್ಚೆ ಮಾಡಿದ್ದೂ ಇದೆ. ಎಷ್ಟೋ ಬಾರಿ ಬರಹದಲ್ಲಿ ಕಾಣಿಸದೇ ಇರುವುದನ್ನ ಮಾತಿನಲ್ಲಿ ವ್ಯಕ್ತಪಡಿಸುವುದೂ ಇರುತ್ತದೆ. ಹಾಗೆ ಬಹುತೇಕ ಎಲ್ಲರಲ್ಲೂ ನಾನು ಕಂಡುಕೊಂಡಂಥ ಸಮಸ್ಯೆ ಎಂದರೆ ಈ ಕಾದಂಬರಿಯ ಕೇಂದ್ರ ಯಾವುದು, ಇದರಲ್ಲಿ ಅನೇಕ ಕತೆಗಳಿವೆ, ಅವುಗಳನ್ನೆಲ್ಲಾ ಏಕಸೂತ್ರದಲ್ಲಿ ಬಂಧಿಸಿಡುವಂಥ ಒಂದು ಕೇಂದ್ರ ಕಾಣುತ್ತಿಲ್ಲ ಎನ್ನುವುದು ಒಂದು. ಇಲ್ಲ, ಇದು ಈ ಕಾದಂಬರಿಯ ಕೇಂದ್ರ ಇರಬಹುದು ಎಂದು ಹೇಳಿದರೆ, ಅವರ ಎರಡನೇ ಸಮಸ್ಯೆ, ಈ ಕಾದಂಬರಿಯ ಸಾಮಾಜಿಕ ಆಯಾಮ ಅಥವಾ ಸೋಶಿಯಲ್ ರಿಲವನ್ಸ್ ಏನು? ಅಂದರೆ ಇವತ್ತಿನ ಸಮಾಜಕ್ಕೆ ನೀವು ಹೇಳುತ್ತಾ ಇರುವುದು ಏನನ್ನು ಎಂಬ ಪ್ರಶ್ನೆ.

ಒಂದು ವಾಕ್ಯದಲ್ಲಿ ಹಿಡಿದುಕೊಡಬಹುದಾದಂಥ ಅಥವಾ ವಿವರಿಸಿ ವ್ಯಾಖ್ಯಾನಿಸಬಹುದಾಂಥ ಮಾತು ಬೇಕು ಅಥವಾ ಲಭ್ಯ ಎನ್ನಬಹುದಾದಂಥ ಸ್ಥಿತಿ ಇದ್ದರೆ ಇನ್ನೂರಕ್ಕೂ ಹೆಚ್ಚು ಪುಟಗಳ ಒಂದು ಕಾದಂಬರಿಯನ್ನು ಒಬ್ಬ ಯಾಕೆ ಬರೆಯಬೇಕು!

ಪ್ರತಿಯೊಬ್ಬ ಓದುಗನೂ ಒಂದು ಕಾದಂಬರಿಯನ್ನ ತನ್ನದೇ ಆದ ರೀತೀಲಿ ಓದ್ಕೋತಾನೆ, ಓದ್ಕೋಬೇಕು. ವಿಮರ್ಶೆ ಅಂಥ ಮುಕ್ತವಾದ ಓದಿಗೆ ಒಂದು ತೊಡಕು ಆಗಬಾರದು. ಹಾಗಾದಲ್ಲಿ ವಿಮರ್ಶೆಯ ಉದ್ದೇಶ ವಿಫಲವಾದ ಹಾಗೆ ಅಂತ ನಾನು ಮಾತ್ರವಲ್ಲ, ಹೌ ಟು ರೀಡ್ ಎ ನಾವೆಲ್ ಅನ್ನೋ ಒಂದು ಪ್ರಸಿದ್ಧ ಎಸ್ಸೆಯಲ್ಲಿ, (ಕಾಮನ್ ರೀಡರ್ ಎರಡನೇ ವ್ಯಾಲ್ಯೂಮ್ ನಲ್ಲಿ ಈ ಎಸ್ಸೆ ಇದೆ), ವರ್ಜಿನಿಯಾ ವೂಲ್ಫ್ ಕೂಡಾ ಹೇಳಿದ್ದಾರೆ. ಕಾಮನ್ ರೀಡರ್ ಅಂದ್ರೆ, ಯಾವುದೇ ಪೂರ್ವಗ್ರಹ, ನಿರ್ಧಾರ, ಅಭಿಪ್ರಾಯ ಇಟ್ಟುಕೊಳ್ಳದೆ, ಕೃತಿ ಅಥವಾ ಕೃತಿಕಾರನ ಬಗ್ಗೆ ಅಭಿಮಾನವೂ ಇಲ್ಲ ದ್ವೇಷವೂ ಇಲ್ಲ ಅನ್ನೋ ಮನಸ್ಥಿತಿಯಲ್ಲಿ ಒಂದು ಕಾದಂಬರಿಯನ್ನ ಸುಮ್ಮನೇ ಓದೋವ್ನು ಅಂತ ಇಟ್ಕೊಬೌದು. ನಾವು ಏನೇನೇನೋ ತೋರಿಸ್ತೀವಿ, ನೀವು ಓದೋವಾಗ ಅದೆಲ್ಲ ನಿಮಗೆ ಕಾಣಿಸಬೇಕು, ನಾನೊಬ್ಬನೇ ಬುದ್ಧಿವಂತ, ಅಥವಾ ನಾನು ಬುದ್ಧಿವಂತ, ನನಗಿದೆಲ್ಲ ಕಂಡಿದೆ, ನಿಮಗೆ ಕಾಣಿಸಲಿಲ್ಲ ಎಂದರೆ ನೀವು ಪ್ರಯೋಜನ ಇಲ್ಲ ಅಥವಾ ನೀವು ಓದೋವಾಗ ನಿಮಗೂ ಇದಿಷ್ಟೇ ಕಾಣಬೇಕು ಎಂದರೆ ಅದು ವಿಮರ್ಶೆ ಅಲ್ಲ. ಅದು ವಿಮರ್ಶೆಯ ಉದ್ದೇಶವೂ ಅಲ್ಲ.

ಚಿತ್ತಾಲರು ಒಂದು ಕಡೆ ಹೇಳ್ತಾರೆ, ಒಂದು ಪುಸ್ತಕಾನ ಕೈಗೆತ್ತಿಕೋ ಬೇಕಾದ್ರೆ ಒಬ್ಬ ಅಪರಿಚಿತ ಮನುಷ್ಯನ ಭೇಟಿಯಾಗೋಕೆ ಹೊರಟಾಗ ಇರಬೇಕಾದ ಮಾನಸಿಕ ಸಿದ್ಧತೆ ಅಗತ್ಯ ಅಂತ. ಪ್ರತಿಯೊಂದು ಪುಸ್ತಕಾನೂ ಒಂದು ಜೀವಂತ ಜಗತ್ತು, ಒಂದು ಪರಕಾಯ ಪ್ರವೇಶ, ಒಂದು ಜನ್ಮವೆತ್ತಿದ ಹಾಗೆ. ಅಂಥ ಒಂದು ಮುಕ್ತವಾದ ಮನಸ್ಸು ನಮಗೆ ಸಾಧ್ಯವಾಗದೇ ಇದ್ದಲ್ಲಿ ಪುಸ್ತಕ ಓದೋದನ್ನ ಕೆಲ ಕಾಲ ಮುಂದಕ್ಕೆ ಹಾಕೋದು ಒಳ್ಳೇದೆ.

ಯಾವ ಇಬ್ಬರು ಓದುಗರೂ ಕೂಡ ಒಂದು ಕಾದಂಬರಿಯನ್ನ ಒಂದೇ ಕಾದಂಬರಿ ಅನ್ನೋ ತರ ಓದಲ್ಲ. ನೀವು ಓದಿರೊ ಊರುಭಂಗ ಬೇರೆ, ನಾನು ಓದಿರೋ ಊರುಭಂಗ ಬೇರೆ; ಪೂರ್ತಿಯಾಗಿ ಅಲ್ಲದಿದ್ರೂ ಇದು ನಿಜ. ಜೋಗಿಯವರ ಬರಹವನ್ನು ನೀವು ಓದಿದ್ರೆ, ಅವರು ವಿಶ್ಲೇಷಿಸಿದ ಅನೇಕ ವಿಚಾರಗಳಲ್ಲಿ ಶಮಿ ಎಂಬ ಅದ್ಭುತವಾದ, ಸುಂದರ ಆಶಯದಂತಿರುವ ಹುಡುಗಿಯನ್ನು ಪಡೆಯುವುದೇ ಒಂದು ಬಗೆಯ ಸಿದ್ಧಿ ಎಂಬಂಥ ಭಾವ ಕೂಡ ಒಂದು. ಅರುಣ್ ಜೋಶಿಯವರ The Last Labyrinth ಕಾದಂಬರಿಯಲ್ಲೂ ಇಂಥ ಒಂದು ಪಾತ್ರ ಬರುತ್ತದೆ. ಅನೂ ಎಂಬ ಒಬ್ಬ ಹುಡುಗಿ ಸಿಗುವುದೇ ಬಾಳಿನ ಅಂತಿಮ ಗುರಿ ಎಂಬಂತೆ, ಅವಳು ಕೈ ತಪ್ಪಿ ಹೋಗಿದ್ದೇ ತನ್ನೊಳಗಿನದ್ದೇನೋ ಹೊರಟು ಹೋದಂತಾಗಿದೆ ಎಂಬಂತೆ ಪರಿತಪಿಸುವ ನಿರೂಪಕ ಅದಾಗಲೇ ಮದುವೆಯಾಗಿ ದೂರವಾಗಿರುವ ಅನೂ ಎಂಬ ಹೆಣ್ಣಿಗಾಗಿ ಪರಿತಪಿಸುತ್ತ ಹುಡುಕುವುದು ಈ ಕಾದಂಬರಿಯ ಬದುಕಿನ ಶೋಧ ಕೂಡ ಆಗಿರುತ್ತದೆ.

ಅರುಣ್ ಜೋಶಿಯವರ The Strange Case of Billy Biswas ಕೂಡ ಇಂಥದೇ ಕಥಾವಸ್ತುವನ್ನು ಹೊಂದಿದೆ ಎನ್ನಬಹುದು. ಅಲ್ಲಿ ಒಬ್ಬ ಆದಿವಾಸಿ ಹುಡುಗಿ ಬಿಲಾಸಿಯ ಎಂಬಾಕೆಯನ್ನು ಕಾಣುವುದಕ್ಕೂ ಮುನ್ನವೇ ಅವಳು ಬಿಲ್ಲಿಯ ಕನಸಿನಲ್ಲಿ ಬಂದು ಕಾಡುತ್ತಾಳೆ, ಕರೆಯುತ್ತಾಳೆ. ಅಥವಾ ಸುದರ್ಶನ ಬೇಳೂರು ಅವರು ಗುರುತಿಸಿದಂತೆ ಈ ರೀತಿ ಹೆಣ್ಣಿನ ಮೋಹವನ್ನು ಬೆನ್ನಟ್ಟಿ ಹೋಗುವವರಿಗೆ (ಶುಗರ್‌ಡಾಡಿ ಲವ್ ಆಸಕ್ತರಿಗೆ) ಸರಿಯಾದ ಪಾಠದಂತಿದೆ ಈ ಕಾದಂಬರಿ ಎಂದೂ ಇದನ್ನು ಕಾಣಬಹುದಾಗಿದೆ. ಅಶೋಕ್ ಹೆಗಡೆಯವರು ಹೇಳಿದಂತೆ ದಾಂಪತ್ಯ, ಅದರ ನಿಷ್ಠೆ ಮುಂತಾದ ಪ್ರಶ್ನೆಗಳನ್ನಿಟ್ಟುಕೊಂಡೂ ಇಲ್ಲಿನ ಮನಮೋಹನ ಬೆಳೆಸಲೆಳಸುವ ಎಕ್ಸ್ಟ್ರಾ ಮೆರಿಟಲ್ ಸಂಬಂಧದ ಬಗ್ಗೆ ಗಮನ ಹರಿಸಿದರೆ ಕಾದಂಬರಿ ಬೇರೆಯೇ ರೀತಿಯ ಹೊಳಹುಗಳನ್ನ ನೀಡಬಲ್ಲದು. ಕಿಮಾನಿ ವಕೀಲರ ಸಂಸಾರ, ಸದಾನಂದ ಮಾಸ್ತರರ ಸಂಸಾರ, ಸುಂಕಾಪುರ ಮಾಸ್ತರರ ಸಂಸಾರ ಎಲ್ಲವೂ ಆಗ ಬೇರೆಯೇ ಬೆಳಕಿನಲ್ಲಿ ಹೊಳೆಯುತ್ತದೆ ಎನ್ನುವುದು ಸುಳ್ಳಲ್ಲ. ಬಹುಮುಖ್ಯವಾಗಿ ಅನೇಕ ಸ್ತ್ರೀ ಸಂವೇದನೆಯ ವಿಶ್ಲೇಷಕರಿಗೆ ಹಾಲು ಖರೀದಿಸಿ ತುಪ್ಪ ಕಾಯಿಸುವ ಸದಾನಂದ ಮಾಸ್ತರರ ಹೆಂಡತಿಯ ಕತೆಯನ್ನು ಬೆಳೆಸದೇ ನಡುವಿನಲ್ಲೆಲ್ಲೊ ಕೈಬಿಟ್ಟಿರುವುದಕ್ಕೆ ಬೇಸರವಿದೆ. ಸಾಕಷ್ಟು ಪೊಟೆನ್ಷಿಯಲ್ ಆದ ಎಳೆ ಅದು, ಅದನ್ನು ಮುಂದುವರಿಸಬೇಕಿತ್ತು ಅನಿಸಿದೆ ಅವರಿಗೆ. ಹಾಗೇನೆ ವಿವೇಕ್ ಶಾನಭಾಗರು ಮಾತನಾಡುತ್ತ ಹೇಳಿದ್ದರು, ಊರು ಎನ್ನುವುದಕ್ಕೆ ಭೌಗೋಳಿಕ ಪ್ರದೇಶ, ತೊಡೆ ಎನ್ನುವುದಕ್ಕಿಂತ ಹೆಚ್ಚಿನ ಅರ್ಥಗಳಿವೆ, ಅವುಗಳಲ್ಲಿ ಊರಿಕೊಳ್ಳುವುದು, ತಳವೂರುವುದು ಎನ್ನುವ ಅರ್ಥ ಕೂಡಾ ಒಂದು ಅಂತ. ಖ್ಯಾತ ವಿಮರ್ಶಕ ಎಸ್ ಆರ್ ವಿಜಯಶಂಕರ ಅವರು ಒದಗಿಸಿದ ಒಂದು ಒಳನೋಟ ಇದು. ಗಮನಿಸಿ ನೋಡಿ, ಇಲ್ಲಿ ಕಿಮಾನಿ ವಕೀಲರು ಪುಣೆಯಿಂದ ಓಡಿ ಬಂದವರು, ಸದಾನಂದ ಮಾಸ್ತರರು ಘಟ್ಟ ಇಳಿದು ಬಂದವರು. ಸುಂಕಾಪುರರು ಎಲ್ಲಿಂದಲೋ ವರ್ಗವಾಗಿ ಬಂದವರು. ಮನಮೋಹನ ಬೆಂಗಳೂರಿನವನಲ್ಲ. ಸನ್ಯಾಲ್, ಸಾಹು ಹೆಸರೇ ಸೂಚಿಸುವಂತೆ ಕನ್ನಡದವರಲ್ಲ. ಹೀಗೆ ಇಲ್ಲಿ ಎಲ್ಲರೂ outsiders ಯೇ. ಯಾರೂ insiders ಅಲ್ಲ. ಇವರು ತೆಂಕಣಕೇರಿಯಲ್ಲಿ ತಳವೂರುವುದಕ್ಕೆ, ಬೆಂಗಳೂರಿನಲ್ಲಿ ತಳವೂರುವುದಕ್ಕೆ, ತಮ್ಮ ಅಸ್ತಿತ್ವ, ಅಸ್ಮಿತೆ ಕಂಡುಕೊಳ್ಳುವುದಕ್ಕೆ ಸತತವಾಗಿ ಏನನ್ನೋ ಮೀರಬೇಕಾಗಿದೆ ಮತ್ತದು ತೆಂಕಣಕೇರಿ ಎಫೆಕ್ಟೇ ಎಂದು ಸೂಚ್ಯವಾಗಿ ಹೇಳಬಹುದಾಗಿದೆ. ನೀವು ಮಹಾಭಾರತವನ್ನೇ ತೆಗೆದುಕೊಳ್ಳಿ. ಅಲ್ಲಿ ಪಾಂಡವರು ಪಾಂಡುವಿಗೆ ಹುಟ್ಟಿದ ಮಕ್ಕಳೇ ಅಲ್ಲ. ಕೌರವರೂ ಕೂಡ ಕೃಷ್ಣದ್ವೈಪಾಯನರ ಸಹಾಯದಿಂದ ಟೆಸ್ಟ್ ಟ್ಯೂಬ್ ಬೇಬಿಗಳ ತರ ಹುಟ್ಟಿದವರು. ಪಾಂಡು, ಧೃತರಾಷ್ಟ್ರ, ವಿಧುರ ಕೂಡಾ ಕುಲಪುತ್ರರಲ್ಲ. ನಿಯೋಗದಿಂದ ಹುಟ್ಟಿದವರು ಅವರು. ಹಾಗಾಗಿ ರಾಜ್ಯದ ಮೇಲೆ ಧರ್ಮರಾಯನಿಗೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ದುರ್ಯೋಧನನಿಗೂ ಇದೆ. ಇಲ್ಲಾ ಎನ್ನುತ್ತೀರಾ? ಹಾಗಾಗಿಯೇ ಧರ್ಮರಾಯ ಇಡೀ ರಾಜ್ಯ ತನಗೆ ಬೇಕು ಎನ್ನುವುದೇ ಇಲ್ಲ. ಅವನಿಗೆ ಧರ್ಮಸೂಕ್ಷ್ಮದ ಅರಿವಿದೆ. ಪಾಲು ಕೇಳುವವನು ಅವನು. ದುರ್ಯೋಧನ ಸೂಜಿಯ ಮೊನೆ ‘ಊರು’ವಷ್ಟು ನೆಲವನ್ನೂ ಕೊಡುವುದಿಲ್ಲ ಎನ್ನುತ್ತಾನೆ, ಗಮನಿಸಿ. ಇಲ್ಲಿ ಪಾಂಡವರಿಗೂ ಕೌರವರಿಗೂ ತಮ್ಮ ಹುಟ್ಟಿನ ಕುಲದ ನೆಲೆಯನ್ನು ಮೀರಬೇಕಾಗಿದೆ, ಅದೂ ಒಂದು ತರದ ತೆಂಕಣಕೇರಿ ಎಫೆಕ್ಟೇ. ದುರ್ಯೋಧನ ಯಾಕೆ ತೊಡೆ ಮುರಿದುಕೊಳ್ಳುತ್ತಾನೆ? ತನ್ನ ಹಠಮಾರಿತನಕ್ಕೆ. ಈ ಹಠಮಾರಿತನ ಕೂಡ ತೆಂಕಣಕೇರಿಯ ಎಫೆಕ್ಟ್ ಮೀರುವ ಹಠವೇ.

ನನಗೆ ಮೊತ್ತಮೊದಲಿಗೆ ಅನಿಸಿದ್ದು, ಈ ಕಾದಂಬರಿ ಒಂದು ಲಂಘನದ ಕುರಿತಾಗಿ ಇದೆ. ಇಲ್ಲಿ ಬರುವ ಮನಮೋಹನನಿಗೆ ಏನೋ ಒಂದನ್ನು ಮೀರಬೇಕಾದ, ದಾಟಬೇಕಾದ ಒಂದು ಒತ್ತಡ ಅವನಲ್ಲಿ ಇದೆ. ತೆಂಕಣಕೇರಿ ಎಫೆಕ್ಟ್ ಎಂದು ಮನಮೋಹನ ಮತ್ತೆ ಮತ್ತೆ ಹೇಳುವ ಕಾಂಪ್ಲೆಕ್ಸ್ ಏನಿದೆ ಅದನ್ನ ನಾವು ಲಂಕೇಶರ ಬಿರುಕು ಕಾದಂಬರಿಯಲ್ಲಿ ಬರುವ ಈ ಹಳ್ಳಿಯಲ್ಲಿ ಬೆಳೆದ ಒಬ್ಬ ಹುಡುಗ ಇದ್ದಕ್ಕಿದ್ದ ಹಾಗೆ ನಗರಕ್ಕೆ ಬಂದಾಗ ಅನುಭವಿಸುವಂಥ ತಲ್ಲಣಗಳೇನಿರುತ್ತವೆ, ಅದೇ ಅಂತಾನೂ ನೋಡಬಹುದು. ಅಂತೂ ಅದು ಅವನ ಪೊಟೆನ್ಷಿಯಲ್ ಏನಿದೆ ಅದನ್ನು ಪರಿಪೂರ್ಣವಾಗಿ ಬಳಸಿಕೊಂಡು ಕಾರ್ಪೊರೇಟ್ ಜಗತ್ತಿನಲ್ಲಿ ಬೆಳೆಯೋದಕ್ಕೆ ತಡೆಯಾಗಿದೆ, ಅವನ ಎಲ್ಲ ಹಿಂಜರಿಕೆಗೆ ಕಾರಣವಾಗ್ತಿದೆ, ಅದು ಅವನನ್ನು ಬೆಳೆಯಬಹುದಾದ ಎತ್ತರಕ್ಕೆ, ಏರಬಹುದಾದ ಎತ್ತರಕ್ಕೆ ಏರೋದಕ್ಕೆ ಬಿಡುತ್ತಾ ಇಲ್ಲ, ಸೊ ಅದನ್ನು ಅವನು ನೀಗಿಕೊಳ್ಳಲೇ ಬೇಕು. ಈ ಒತ್ತಡ ಅವನಲ್ಲಿ ಅದಾಗಲೇ ಇದೆ ಮತ್ತು ಅದಕ್ಕೆ ಅವನಿಗೆ ಶಮಿ ಇಲ್ಲಿ ಒಂದು ನೆಪವಾಗುತ್ತಾಳೆ ಅಷ್ಟೆ. ಶಮಿಯ ಒಡನಾಟದಲ್ಲಿ, ಅವಳ ಮೂಲಕ ತಾನು ಇದನ್ನು ಮೀರುತ್ತೇನೆ ಎಂದು ಅವನು ಅಂದುಕೊಳ್ಳುತ್ತಾನೆ, ಬಹುಶಃ.

ಶಮಿಯನ್ನು ಒಲಿಸಿಕೊಳ್ಳುವುದಕ್ಕಾಗಿ ಅವನು ಅವಳಿಗೆ ಹೇಳುವ ಕತೆ ಕಿಮಾನಿ ವಕೀಲರದ್ದು, ಸದಾನಂದ ಮಾಸ್ತರರದ್ದು, ಸುಂಕಾಪುರ ಮಾಸ್ತರರದ್ದು, ಸ್ವಲ್ಪ ಮಟ್ಟಿಗೆ ಚಿರಾಗ್ ಎಂಬಾತನದ್ದು. ಈ ಕತೆಗಳನ್ನು ಅವನು ಯಾವ ಬಗೆಯಾಗಿ ಹೇಳುತ್ತಾನೆಂದರೆ, ಡಾ||ಯು.ಆರ್.ಅನಂತಮೂರ್ತಿಯವರು ದೇಶಕಾಲದ ಮೊತ್ತಮೊದಲ ಸಂಚಿಕೆಯಲ್ಲಿ ಬರೆದ ವಾಲ್ಮೀಕಿಯ ನೆವದಲ್ಲಿ ಎನ್ನುವ ಪ್ರಬಂಧದಲ್ಲಿ ಹೇಳ್ತಾರಲ್ಲ, ಒಂದು ಪಾತ್ರ ತನಗೆ ತಾನೇ ಹೇಳಿಕೊಂಡಿದ್ದು ಗೊತ್ತಾಗುವ ಹಾಗೆ, ಒಂದು ಪಾತ್ರ ಇನ್ನೊಂದು ಪಾತ್ರದೊಂದಿಗೆ ಗುಟ್ಟಾಗಿ ಹೇಳಿಕೊಂಡಿದ್ದು ಗೊತ್ತಾಗುತ್ತೆ ಮಾತ್ರವಲ್ಲ, ಹೇಳಿದ್ದು ಸದ್ಯದಲ್ಲಿ ನಿಜವಾಗುವ ಹಾಗೆ- ಲಿಂಗ ಮೆಚ್ಚಿ ಅಹುದು ಅಹುದು ಎನ್ನುವ ಹಾಗೆ - ಹೇಳುತ್ತಾನೆ. ಒಬ್ಬ ಕತೆಗಾರ/ಕವಿ ಆಗಿದ್ದರೂ ಇದು ಸುಲಭದ ಸಿದ್ಧಿಯಲ್ಲ. ಹಾಗೆ ತನ್ನ ಪ್ರಜ್ಞೆಗೆ ಮೀರಿದ್ದನ್ನೂ ಹೇಳಬಲ್ಲ ಮನಮೋಹನನ ಇಡೀ ಕತೆಯೇ ಒಂದು ಕಟ್ಟುಕತೆಯಿರಬಹುದಲ್ಲವೇ ಎಂಬ ಅನುಮಾನ ಇಲ್ಲಿ ನಮಗೆ ಬರದೇ ಇರುವುದಿಲ್ಲ. ಈ ಎಲ್ಲಾ ಪಾತ್ರಗಳೂ ಒಂದರ್ಥದಲ್ಲಿ ಮನಮೋಹನನೇ. ಅವನದೇ ಬೇರೆ ಬೇರೆ ಆವೃತ್ತಿ ಮಾತ್ರ ಈ ಪಾತ್ರಗಳು. ಒಂದೆಡೆ ಅವನು ಹೇಳುತ್ತಾನೆ, ಅದೆಲ್ಲ ಇಲ್ಲಿ ನನ್ನೊಳಗೇ ಇದೆ, ಮೀಟಿದರೆ ಹೊಮ್ಮುತ್ತದೆ ಅಂತ.

ತಾನು ತೆಂಕಣಕೇರಿ ಎಫೆಕ್ಟನ್ನು ಮೀರಿ ನಿಲ್ಲಬೇಕಾದರೆ ಹೇಗೆ ಶಮೀ ಒಂದು ದಾರಿಯಾಗುತ್ತಾಳೋ ಹಾಗೆಯೇ, ಅದೇ ಕಾಲಕ್ಕೆ ಅವನು ತನ್ನಲ್ಲಿರುವ ತೆಂಕಣಕೇರಿಯ ಪ್ರತಿಮೆಯನ್ನು ಪೂರ್ತಿಯಾಗಿ ಸರ್ವನಾಶ ಮಾಡುವುದು ಕೂಡ ಅನಿವಾರ್ಯ ಎನ್ನುವುದು ಅವನಿಗೆ ಗೊತ್ತಿದೆ. ಮೊದಲೇ ಮನಮೋಹನ ಹೇಳಿರುವಂತೆ ಕಿಮಾನಿ ವಕೀಲರು ಅಂದರೆ ಆದರ್ಶ ಮತ್ತು ಹೋರಾಟದ ಪ್ರತೀಕ. ಆದರ್ಶ ಮತ್ತು ಹೋರಾಟ ಎರಡೂ ಬದುಕಿನ ಸೋಲಿನ ಅಂಚಿಗೆ ಮನುಷ್ಯನನ್ನು ದೂಡುವುದಕ್ಕೆ ಸಾಧ್ಯವಾಗುವುದು ಯಾವಾಗ ಎಂದರೆ ಆದರ್ಶ ಒಂದು ಅಹಂಕಾರವಾದಾಗ ಮತ್ತು ಹೋರಾಟ ಒಂದು ಒಣ ಪ್ರತಿಷ್ಠೆಯಾದಾಗ. ನಾವು ಕೆಲವೊಂದು ಮೌಲ್ಯಗಳನ್ನು ಇಟ್ಟುಕೊಂಡು ಅದನ್ನು ಸಾಧಿಸುತ್ತ ಹೋದ ಹಾಗೆ ಅದು ನಮ್ಮ ಅಹಂಕಾರಕ್ಕೂ ಕಾರಣವಾಗುವುದು ಒಂದು ಚೋದ್ಯ. ಬ್ರಹ್ಮಚರ್ಯ, ಸತ್ಯಾಚರಣೆ, ಮಾಂಸಾಹಾರ ಮಾಡದಿರುವುದು, ಮದ್ಯಪಾನ ಮಾಡದಿರುವುದು ಇತ್ಯಾದಿ ವೃತಾಚರಣೆ ನಮ್ಮ ಅಹಂಕಾರಕ್ಕೆ ಕಾರಣವಾಗುವುದಾದರೆ ಅಲ್ಲಿ ಗರ್ವಭಂಗ ಅನಿವಾರ್ಯವಾಗುತ್ತದೆ. ಆಗ ಮಾತ್ರ ನಾವು ಹೊಸ ಒಂದು ಅರಿವಿಗೆ ತೆರೆದುಕೊಳ್ಳುವುದಕ್ಕೆ ಬೇಕಾದ ಪೂರ್ವಸಿದ್ಧತೆ ಮಾಡಿದಂತಾಗುತ್ತದೆ. ಹಾಗೆ ಇಲ್ಲಿ ಕಿಮಾನಿ ವಕೀಲರ ಗರ್ವಭಂಗ ಕೂಡ ನಡೆದಿದೆ ಎನ್ನುವುದನ್ನ ನಾವು ಸಾಮಾಜಿಕ ಸ್ತರದಲ್ಲಿಯೂ, ಕೌಟುಂಬಿಕ ನೆಲೆಯಲ್ಲಿಯೂ ಕಾಣುತ್ತೇವೆ.

ಇನ್ನು ಅಶೋಕ್ (ಕತೆ,ಕಾದಂಬರಿಕಾರ ಅಶೋಕ್ ಹೆಗಡೆ)ಅವರು ಹೇಳಿದರು, ದಾಂಪತ್ಯದ ನಿಷ್ಠೆ, ದಾಂಪತ್ಯ ಎನ್ನುವ ಸಂಬಂಧಕ್ಕಿರುವ ಮೌಲ್ಯ ಇವನ್ನೆಲ್ಲ ಈ ಕಾದಂಬರಿ ಪರೀಕ್ಷೆಗೆ ಒಡ್ಡುತ್ತಿದೆ ಅಂತ. ಅದು ನಿಜ. ಆದರೆ, ವೈವಾಹಿಕ ಚೌಕಟ್ಟಿನ ಹೊರಗೆ ಒಂದು ಸಂಬಂಧ ನಿಷಿದ್ಧ ಅಥವಾ ತಪ್ಪು ಅಂತ ತಿಳಿಯಬೇಕಾದ್ದಿಲ್ಲ. ಇಲ್ಲಿ ನನಗೆ ಹಶಾಂಬಿಯಂಥ ಪಾತ್ರಗಳನ್ನು ಚಿತ್ರಿಸಿದ ಕೇಶವ ಮಳಗಿ ಅವರ ಮಾತುಗಳು, puritan concept ಬಗ್ಗೆ, ನೆನಪಾಗುತ್ತವೆ. ನಾವು ಕೇವಲ ಭಾರತೀಯ ಸಂಸ್ಕೃತಿಯ ನೆರಳಿಗೆ ಬದ್ಧರಾಗಿ ಈ ಕಾದಂಬರಿಯನ್ನು ನೋಡಬೇಕಾಗಿಲ್ಲ. ಎಲ್ಲಿಯ ವರೆಗೆ ಬದ್ಧತೆಗಳನ್ನು ಬಿಟ್ಟುಕೊಡದೆ, ಬೇಜವಾಬ್ದಾರಿತನ ತೋರಿಸದೇ ಸಂಬಂಧಗಳನ್ನು ನಿರ್ವಹಿಸಬಹುದೋ ಅಲ್ಲಿಯ ತನಕ ಅದು ಸಮಾಜ ವಿರೋಧಿಯಾಗುತ್ತದೆ ಅಂತ ನಾನಂತೂ ತಿಳಿದಿಲ್ಲ. ಇದಕ್ಕೆ ಮತ್ತೆ ನಾವು ಶಮಿಯನ್ನೇ ಗಮನಿಸಬೇಕು. ಅವಳು ಯಾವತ್ತೂ ಮನಮೋಹನನ ಬಳಿ ಹೆಂಡತಿಯನ್ನು ಬಿಟ್ಟು ಬಾ, ತನಗೆ ಬೇರೆ ಮನೆ ಮಾಡಿ ನಿಲ್ಲಿಸು, ಮದುವೆಯಾಗು ಎಂದೆಲ್ಲ ಕೇಳಿಕೊಳ್ಳುವುದಿಲ್ಲ. ಸಂಬಂಧವನ್ನು dis-own ಮಾಡಬೇಡ ಎಂಬುದಷ್ಟೇ ಬಹುಶಃ ಅವಳ ನಿರೀಕ್ಷೆಯಿತ್ತು ಅನಿಸುತ್ತದೆ. ಹಾಗಾಗಿ ಪಾರ್ಕಿನಲ್ಲಿ ಸಿಕ್ಕಿದ ಯಾರಿಗೋ ಮನಮೋಹನ ತನ್ನ ಕುರಿತು ಹೇಳುವ ರೀತಿಗೇ ಅವಳು ಬೇಸತ್ತು ದೂರವಾದಂತಿದೆ. ಹೀಗೆ ದಾಂಪತ್ಯಕ್ಕೆ, ನನ್ನ ಹೆಂಡತಿಗೆ ನಾನು ನಿಷ್ಠೆಯಿಂದ ಇದ್ದರೆ ಅದು ದಾಂಪತ್ಯದ ಸಹಜ ಧರ್ಮ, ನಾನು ಹಾಗಿರುವುದು ಸರಿಯಾದ ರೀತಿ ಅಷ್ಟೆ. ನಾನು ನನ್ನ ಹೆಂಡತಿಗೆ ನಿಷ್ಠನಾಗಿದ್ದೇನೆ ಎನ್ನುವುದೇ ಒಂದು ಅಹಂಕಾರಕ್ಕೆ ಕಾರಣವಾಗಬಹುದಾದ ಸಂಗತಿ ಆಗುವುದಾದರೆ ಅದರ ಗರ್ವಭಂಗ ಕೂಡ ಅನಿವಾರ್ಯವೇ. ಯಾಕೆಂದರೆ, ಆದರ್ಶಗಳ ನಿಜವಾದ ಸ್ವರೂಪ ನಮಗೆ ಹೊಳೆಯುವುದೇ ನಾವು ಅದನ್ನು ಮೀರಿದಾಗ, ನಾವು ವಾಯ್ಡ್ ಆದಾಗ.

ನಾವಿಲ್ಲಿ ಮತ್ತಷ್ಟು ಅಂಶಗಳನ್ನು ಕನೆಕ್ಟ್ ಮಾಡುತ್ತ ಹೋಗಬಹುದು. ಭಾಸ್ಕರ ರಾಯರು ಎಲ್ಲವನ್ನೂ ಹೇಳಿಬಿಡ್ತೇನೆ ಎನ್ನುವುದಕ್ಕೂ ಸುಂಕಾಪುರ ಮಾಸ್ತರರು ಆತ್ಮಚರಿತ್ರೆ ಬರೆಯುವ ಮಾತನಾಡಿ ಎಬ್ಬಿಸಿದ ಬಿರುಗಾಳಿಗೂ ಇರುವ ಸಂಬಂಧ, ಕಿಮಾನಿ ವಕೀಲರ ಮಗಳು ಪಕ್ಕದ ಮನೆ ಹುಡುಗನಿಗೆ ಸ್ಪಂದಿಸುವುದಕ್ಕೂ ಶಮಿ ಮನಮೋಹನನಿಗೆ ಸ್ಪಂದಿಸಿದ್ದಕ್ಕೂ ಇರುವ ಸಂಬಂಧ ಹೀಗೆಲ್ಲ ಕನೆಕ್ಟ್ ಮಾಡುತ್ತ ಹೋಗಬಹುದು. ಈ ರೀತಿ ಕನೆಕ್ಟ್ ಮಾಡುವುದು ಕೂಡಾ ಮನುಷ್ಯನ ಮನಸ್ಸಿನ ಸಹಜ ಧರ್ಮವೇ. ಒಂದು ಕೃತಿಯನ್ನ ಓದುತ್ತಾ ಓದುತ್ತಾ ನಾವು ನಮ್ಮ ಬದುಕನ್ನು ಆ ಕೃತಿಯ ಬದುಕಿನೊಂದಿಗೆ, ಜಗತ್ತಿನೊಂದಿಗೆ ಮತ್ತು ಕೃತಿಯ ಒಳಗೇ ಆ ಕೃತಿಯ ಜಗತ್ತನ್ನು, ಅಲ್ಲಿನ ಪಾತ್ರಗಳನ್ನು, ಸನ್ನಿವೇಶಗಳನ್ನು ಪರಸ್ಪರ ಕನೆಕ್ಟ್ ಮಾಡುತ್ತಾ ಇರುತ್ತೇವೆ. ಈ ಕನೆಕ್ಟ್ ಮಾಡದೇ ಏನನ್ನೂ ಓದುವುದಕ್ಕೆ, ಗ್ರಹಿಸುವುದಕ್ಕೆ ನಮಗೆ ಸಾಧ್ಯವಾಗುವುದಿಲ್ಲ. ನಮ್ಮ ಬದುಕಿನ ಅನುಭವವನ್ನು ಕೂಡಾ ನಾವು ಗ್ರಹಿಸುವುದು ಹೀಗೇನೆ. ಬೆಳಿಗ್ಗೆ ಬೆಳಿಗ್ಗೆ ನಿಮ್ಮ ಕೈಯಿಂದ ಮೊಬೈಲೋ ಇನ್ನೊಂದೋ ಕೆಳಗೆ ಬಿದ್ದು ಒಡೆದು ಹೋಗುತ್ತೆ, ಇಲ್ಲಾ ಬೆಕ್ಕೋ ನಾಯೋ ನಿಮ್ಮ ಕಾರಿಗೆ ಅಡ್ಡಬಂದು ಸತ್ತೇ ಹೋಗುತ್ತದೆ, ಲಿಫ್ಟ್ ಜ್ಯಾಮ್ ಆಗಿ ಆಫೀಸಿಗೆ ಅರ್ಧಗಂಟೆ ತಡವಾಗುತ್ತೆ. ಆದರೆ ಇದು ಅಷ್ಟೇ ಆಗಿ ಉಳಿಯೋದೇ ಇಲ್ಲ. ಇದು ಯಾಕೆ ಹೀಗೆಲ್ಲೆ ಆಗ್ತಿದೆ, ನಂಗೇ ಯಾಕೆ ಆಗ್ತಿದೆ, ಇವತ್ತೇ ಯಾಕೆ ಆಗ್ತಿದೆ ಇತ್ಯಾದಿ ಕನೆಕ್ಟ್ ಮಾಡೋಕೆ ಸುರು ಮಾಡುತ್ತೇವೆ. ಹಾಗೇನೆ ಒಂದು ಕಲೆ. ಕಲೆಯೊಂದಿಗೆ ನಮ್ಮನ್ನು, ನಮ್ಮ ಬದುಕನ್ನು ಕನೆಕ್ಟ್ ಮಾಡಿಕೊಳ್ಳುವುದು, ಕಲೆಯ ಬಲೆಯೊಳಗೇ ಅಂತರ್ ಸಂಬಂಧಗಳ ಎಳೆಗಳನ್ನು ಗುರುತಿಸುವುದು ಸಹಜ ಮತ್ತು ಇದಕ್ಕೆ ವಿಮರ್ಶಕರಾಗಬೇಕಾದ್ದಿಲ್ಲ.

ಆದಾಗ್ಯೂ ಬೇರೆ ಬೇರೆಯವರ ಓದು ಬೇರೆ ಬೇರೆಯಾಗಿಯೇ ಇರುತ್ತೆ ಎನ್ನುವುದು ನಿಜ. ಇದಕ್ಕೆ ನಮ್ಮ ನಮ್ಮ ಅನುಭವ, ಓದು, ಸ್ಮೃತಿ ಮತ್ತು ನೆನಪಿನಲ್ಲಿ ದಾಖಲಾದ ಮುಖ್ಯ ಎನ್ನಬಹುದಾದ ಸಂಗತಿಗಳು - ಹೀಗೆ ನೂರಾರು ಕಾರಣಗಳಿರುತ್ವೆ. ಉದಾಹರಣೆಗೆ ನೀವೆಲ್ರೂ ಓದಿರಬಹುದಾದ ಘಾಚರ್ ಘೋಚರ್ ಕೃತಿಯಲ್ಲಿ ಬರುವ ಒಂದು ಮನೆ ಇದೆಯಲ್ಲ, ಎಕ್ಸಾಕ್ಟಲೀ ಅಂಥಾದ್ದೇ ಮನೆಯಲ್ಲಿ, ಸಾಲಾಗಿ ರೈಲು ಬೋಗಿಗಳಿರೋ ತರದ ಐದೋ ಆರೋ ರೂಮುಗಳು, ಕೊನೆಯಲ್ಲಿ ಕಿಚನ್ ಮತ್ತು ಅದರಾಚೆ ಬಾತ್ ರೂಮು ಇರುವಂಥ ಮತ್ತು ಇರುವೆ ಕಾಟ ಇರುವಂಥಾ ಮನೇಲೆ ನಾವು ಒಂದು ಕಾಲದಲ್ಲಿ ಬಾಡಿಗೆಗಿದ್ದೆವು. ಹಾಗೇನೆ ಈ ಕಾದಂಬರಿ ಓದುತ್ತ ನಾವು ನಾವು ಕಟ್ಟಿಕೊಳ್ಳುವ ಕಿಮಾನಿ ವಕೀಲರ ರೂಪುರೇಷೆಗಳೇನಿರುತ್ತವೆ, ಅವು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತವೆ. ಉದಾಹರಣೆಗೆ, ಬೆಟ್ಟದ ಜೀವ ಕಾದಂಬರಿ ಸಿನಿಮಾ ಆದಾಗ ಗೋಪಾಲಯ್ಯನ ಪಾತ್ರದಲ್ಲಿ ದತ್ತಾತ್ರೇಯ ಅವರನ್ನು ಕಲ್ಪಿಸಿಕೊಳ್ಳುವುದಕ್ಕೆ ಅನೇಕರಿಗೆ ಸಾಧ್ಯವಾಗಲಿಲ್ಲ. ಇವರೇನು ಸುಸ್ತಾದ ಮುದುಕನ ತರ ಇದ್ದಾರೆ, ಗೋಪಾಲಯ್ಯ ಪಾದರಸದಂಥ ಚುರುಕು ಮುದುಕನಲ್ಲವೇ ಇತ್ಯಾದಿ ಅಪಸ್ವರಗಳೆದ್ದವು. ಹಾಗೆಯೇ ಲಂಕೇಶರ ಮುಸ್ಸಂಜೆ ಕಥಾ ಪ್ರಸಂಗ ಕಾದಂಬರಿ ಅಕ್ಕ ಸಿನಿಮಾ ಆದಾಗ ಅದರ ಸಣ್ಣೀರಪ್ಪ ಮೇಸ್ಟ್ರ ಪಾತ್ರವನ್ನು ಮಾಡಿದ ಏಣಗಿ ನಟರಾಜ್ ಆ ಪಾತ್ರಕ್ಕೆ ಹೇಳಿಮಾಡಿಸಿದ ಹಾಗೆ ಹೊಂದಿಕೆ ಆಗುತ್ತಾ ಇದ್ದರು ಅನಿಸಿತು ಕೆಲವರಿಗೆ. ಯಾವಾಗ್ಲೂ ಹಾಗೆ ಆಗುವುದಿಲ್ಲ. ಕೆಲವೊಂದು ಅನುಭವಕ್ಕೆ ಸಂಬಂಧಿಸಿದ್ದು, ಇನ್ನು ಕೆಲವು ನೆನಪಿಗೆ ಸಂಬಂಧಿಸಿದ್ದು. ಇಲ್ಲಿ ಊರುಭಂಗದಲ್ಲಿ ಬರುವ ಒಂದು ಸನ್ನಿವೇಶದಲ್ಲಿ ಅಡಿಗೆ ಮನೆಯಲ್ಲಿ ಹರಡಿದ ಗಂಜಿಯ ಪರಿಮಳ, ಒಲೆಯ ಮೇಲಿಟ್ಟ ಪಾತ್ರೆಯ ಮುಚ್ಚಳ ಹೌದೋ ಅಲ್ಲವೋ ಅನ್ನುವಷ್ಟು ಮೆಲ್ಲಗೆ ಕೊತಕೊತ ಕುಣಿಯುತ್ತಿರುವುದು, ಹೊಗೆಯ ತೆಳುವಾದ ಪರದೆಯು ಕಿಟಕಿಯ ಗಾಳಿಗೆ ಅತ್ತಿಂದಿತ್ತ ಹಗುರವಾಗಿ ಓಲಾಡುತ್ತಿರುವುದು ಮುಂತಾದ ವಿವರಗಳು ಬರುತ್ತವೆ. ಇನ್ನೊಂದು ಕಡೆ ಗುಬ್ಬಚ್ಚಿಯೊಂದು ಫೋಟೋ ಫ್ರೇಮಿನ ಹಿಂದಿನಿಂದ ಹಾರಿ ಬಾಗಿಲಿನಿಂದ ಹೊರಹೋಗುತ್ತದೆ. ಅದರ ಗೂಡಿನಿಂದ ಒಣಹುಲ್ಲಿನ ಸಣ್ಣಕಡ್ಡಿಯೊಂದು ಹಗೂರ ತೇಲುತ್ತ ಕೆಳಗಿಳಿಯುತ್ತದೆ. ಇನ್ನು ಕೆಲವು ನಮ್ಮ ಸ್ಮೃತಿಗಷ್ಟೇ ಸಂಬಂಧಿಸಿದ್ದು. ಇದು ಪೂರ್ವಜನ್ಮದ ವಾಸನೆ ಅನ್ನುತ್ತೀರೋ, ನಮ್ಮ ಜೀನ್ಸಿನಲ್ಲಿ ಬಂದಿದ್ದು ಎನ್ನುತ್ತೀರೋ, ನಾವೆಂದೂ ಕಾಣದ್ದು ಕನಸಲ್ಲಿ ಬಂದು ಕಾಣಿಸಿಕೊಳ್ಳುವಂಥ ಮಾಯಕ ಎನ್ನುತ್ತೀರೋ ನಿಮಗೇ ಬಿಟ್ಟಿದ್ದು. ಆದರೆ ಅದು ನಮಗೆ ಸಾಕ್ಷ್ಯ ಪುರಾವೆ ಇಲ್ಲದ ವಾಸ್ತವ.

ಈ ಕಾದಂಬರಿಯನ್ನು ಬೇರೆ ಬೇರೆ ಸ್ತರದಿಂದ, ಆಯಾಮಗಳ ಮೂಲಕ ಗಮನಿಸಬಹುದು ಎನ್ನುವುದೇನೊ ಸರಿಯೇ. ಆದರೆ ಏನಿದರ ಸೋಶಿಯಲ್ ರಿಲೆವನ್ಸ್ ಎನ್ನುವ ಪ್ರಶ್ನೆಗೆ ಬಂದರೆ ಸೋಶಿಯಲ್ ರಿಲೆವನ್ಸ್ ಕೂಡಾ ಸಾಕಷ್ಟಿದೆ. ಬದುಕು ಸಂಕೀರ್ಣವಾಗಿದೆ ಎನ್ನುವುದರಿಂದ ಹೇಗೆ ಕೃತಿಯೂ ಸಂಕೀರ್ಣವಾಗುವುದಕ್ಕೆ ಪ್ರೇರಣೆಯನ್ನು ಒದಗಿಸುತ್ತದೆಯೋ ಹಾಗೆಯೇ ನಮ್ಮ ಬದುಕು ಎಷ್ಟು ಸೋಶಿಯಲಿ ರಿಲೆವಂಟೋ ಅಷ್ಟೇ ಕೃತಿಯೂ ರಿಲೆವಂಟ್ ಆಗಿರುತ್ತದೆ. ಈ ಕಾದಂಬರಿಯನ್ನು ಒಂದು ಪ್ರತಿಭಟನೆ, ಪ್ರತಿರೋಧಗಳ ರಾಜಕೀಯ ಕಾದಂಬರಿಯೆಂದೇ ಪರಿಗಣಿಸಿ ನೋಡಿ. ಅಲ್ಲಿಯೂ ಅದು ಹೊಂದಿಕೊಳ್ಳುತ್ತದೆ. ಕಿಮಾನಿ ವಕೀಲರ ತಲೆಮಾರೇ ಗಾಂಧೀವಾದವನ್ನು, ಸ್ವಾತಂತ್ರ್ಯ ಚಳುವಳಿಯನ್ನ, ತುರ್ತುಪರಿಸ್ಥಿತಿಯ ವಿರೋಧವನ್ನ ನಮಗೆ ಕಟ್ಟಿಕೊಡುತ್ತಿದೆ. ಮುಂದೆ ಚಿರಾಗ್ ತರದ ನವಯುವಕರು ಕಟ್ಟಿದ ಕಮ್ಯುನಿಸಂನ ಒಂದು ಸಫಲವೋ ವಿಫಲವೋ ಆದ ಚಳುವಳಿ, ಜನಾಂದೋಲನ ಕೂಡ ಕರ್ನಾಟಕವನ್ನು ಒಂದು ಕಾಲಘಟ್ಟದಲ್ಲಿ ಸಾಕಷ್ಟು ಪ್ರಭಾವಿಸಿದ ವಿದ್ಯಮಾನವೇ. ಹಾಗೆಯೇ ಇವತ್ತಿನ ದೇಸಿ ಮತ್ತು ಆಧುನಿಕತೆ, ಹಳ್ಳಿ ಮತ್ತು ಕಾರ್ಪೊರೇಟ್ ಜಗತ್ತು, ಜಾಗತೀಕರಣ ಮತ್ತು ಸ್ವದೇಶಿ ಮುಂತಾದ ಸಂಘರ್ಷಗಳನ್ನು ಪ್ರತಿನಿಧಿಸುವ ತಲೆಮಾರು ಎದುರಿಸುತ್ತಿರುವ ಬಿಕ್ಕಟ್ಟುಗಳು, ಆಂತರಿಕ ಒತ್ತಡ, ಪ್ರತಿರೋಧದ ಅಭಿವ್ಯಕ್ತಿಗೆ ಮನಮೋಹನನಂಥ ವ್ಯಕ್ತಿಯ ವರ್ತನೆ ಕನ್ನಡಿ ಹಿಡಿದಿದೆ. ತನ್ನನ್ನು ಏನೋ/ಯಾವುದೋ ಹಿಡಿದಿಟ್ಟಿದೆ, ತಾನದನ್ನು ಮೀರಬೇಕು ಎಂಬ ತುರ್ತು ಮನಮೋಹನನಲ್ಲಿ ಹುಟ್ಟಿರುವುದೇ ಅವನ ಪ್ರತಿರೋಧದ ಪ್ರಜ್ಞೆಗೆ ಪುರಾವೆ. ಇಲ್ಲಿ ಯಾರು ಪ್ರತಿಭಟನೆ ಮಾಡುತ್ತಿಲ್ಲ? ಕಿಮಾನಿ ವಕೀಲರು ಬಿಡಿ, ಪ್ರತಿಯೊಂದಕ್ಕೂ ಪ್ರತಿಭಟಿಸುವವರು. ಸುಂಕಾಪುರ ಮಾಸ್ತರರು ಎಲ್ಲವನ್ನೂ ಹೇಳಿಬಿಡುವ, ಊರಿನ ಚರಿತ್ರೆಯೂ ಆಗಲಿರುವ ಆತ್ಮಚರಿತ್ರೆಯನ್ನು ಬರೆಯುತ್ತೇನೆನ್ನುವುದು ಹುಟ್ಟಿಸುವ ತಲ್ಲಣ ಒಂದು ಬಗೆಯ ಆಂದೋಲನವೇ.

ಸದಾನಂದ ಮಾಸ್ತರರ ಹೆಂಡತಿಯ ವಿಪರೀತವಾದ ಸ್ವಚ್ಛತೆಯ ಗೀಳು ಮತ್ತು ತುಪ್ಪ ತಯಾರಿಸುವ ಖಯಾಲಿ ಕೂಡ ಯಾವುದಕ್ಕೂ ಪ್ರತಿಭಟಿಸುವ ಖದರಿಲ್ಲದ ಮಾಸ್ತರರ (ಗಂಡನ) ನಿರ್ಲಿಪ್ತಿಯ ವಿರುದ್ಧ ಎದ್ದ ಬಂಡಾಯವೇ ಯಾಕಿರಬಾರದು? ಮುಟ್ಟು ನಿಂತ ವಯಸ್ಸಿನಲ್ಲಿ ವಾಸನೆ-ವಾಸನೆ ಎಂದು ಕಿರಿಕಿರಿ ಎಬ್ಬಿಸುವ ಹೆಂಗಸಿನ ಕತೆಗಳು ಕನ್ನಡದಲ್ಲೇ ಇವೆ. ಒಂದು ಎಚ್ ವೈ ಶಾರದಾಪ್ರಸಾದ್ ಅವರ ಮೊಮ್ಮಕ್ಕಳು ಬರೆದ ಅಜ್ಜೀಕತೆಯಲ್ಲಿ ಸಿಕ್ಕಿದರೆ ಇನ್ನೊಂದು ಎಸ್ ದಿವಾಕರ್ ಅವರ ಹೇಗೆ ಬದುಕುವುದೋ ಯಾರಿಗೆ ಗೊತ್ತು ಕತೆಯಲ್ಲಿ ಸಿಗುತ್ತದೆ.

ಎರಡೂ ಕತೆಗಳಲ್ಲಿ ತೃಪ್ತವಾಗದುಳಿದ ಯಾವುದೋ ಕಾಮನೆಯೇ ಈ ಬಗೆಯ ಮಾನಸಿಕ ಚಾಳಿಯ ಸ್ವರೂಪ ಪಡೆದುಕೊಳ್ಳುವ ಸೂಚನೆಗಳು ನಮಗೆ ಸಿಗುತ್ತವೆ. ಇಲ್ಲಿಯೂ ನಾವು ಅದೇ ಬಗೆಯ ಪ್ರತಿರೋಧದ ಚಿಹ್ನೆಗಳನ್ನು ಕಾಣುವುದು ಸಾಧ್ಯವಿದೆ. ಈ ಸದಾನಂದ ಮಾಸ್ತರರು ಸಕ್ಕರೆ ಕೊಡದ ವಿಠೋಬನನ್ನು ಅವರು ಪ್ರಶ್ನಿಸುವುದಿಲ್ಲ, ಯಾವುದೇ ಪ್ರತಿರೋಧ ತೋರುವುದಿಲ್ಲ. ಕಿಮಾನಿ ವಕೀಲರೇ ಪ್ರತಿಭಟನೆಗೆ ಮುಂದಾದರೂ ಸದಾನಂದ ಮಾಸ್ತರರಿಗೆ ಅದರಲ್ಲಿ ಒಲವಿಲ್ಲ. ಹೆಂಡತಿಯ ತುಪ್ಪ ಮಾಡುವ ಚಾಳಿಯಿಂದ ಆರ್ಥಿಕ ಸ್ಥಿತಿ ಹದಗೆಟ್ಟರೂ ಅವರು ಹೆಂಡತಿಯನ್ನು ವಿರೋಧಿಸುವವರಲ್ಲ. ಇಂಥ ಸದಾನಂದ ಮಾಸ್ತರರ ಹೆಂಡತಿಯ ವರ್ತನೆಯಲ್ಲಿ ನನಗಂತೂ ಉಗ್ರ ಪ್ರತಿರೋಧದ ಲಕ್ಷಣಗಳೇ ಕಾಣಿಸುತ್ತವೆ. ಇತ್ತ ಕಿಮಾನಿ ವಕೀಲರ ಮಗನಿಗೂ ರಾಮ-ರಹೀಮ ಬೇಡ, ಅಶೋಕ ಬೇಕು. ಅದಕ್ಕಾಗಿ ಅವನು ಅಪ್ಪನ ವಿರುದ್ಧವೇ ಬಂಡೆದ್ದು ವಿರೋಧಿ ಪಾಳಯದ ನೆರವು ಪಡೆಯುವ ಬಂಡುಗಾರನೇ. ಹೀಗೆ ಇದೊಂದು ಉದ್ದಕ್ಕೂ ಪ್ರತಿರೋಧ, ಪ್ರತಿಭಟನೆ, ಹೋರಾಟದ ಮನೋಧರ್ಮವನ್ನೇ ದಾಖಲಿಸುವ ಕಾದಂಬರಿಯಲ್ಲವೆ ಎಂದರೆ ಅದೂ ಹೌದು.

ಹೀಗೆ ಹಲವರ ವಿಮರ್ಶೆ, ಚರ್ಚೆ ಎಲ್ಲವೂ ಸೇರಿ ಕಾಣಿಸುತ್ತಿರುವ ಈ ಕಾದಂಬರಿಯ ಬಹು ಸಾಧ್ಯತೆಯ ಓದು ಮತ್ತು ಅಂಥ ಓದಿಗೆ ಅದು ಸುಪುಷ್ಟವಾಗಿಯೇ ತೆರೆದುಕೊಳ್ಳುತ್ತಿರುವ ಬಗೆ ನೋಡಿದರೆ ಬಹುಶಃ ಊರು ಭಂಗ ಕಾದಂಬರಿ ಯಾವತ್ತೂ ಪೂರ್ತಿಯಾಗಿ ತನ್ನ ಗುಟ್ಟು, ತಿರುಳುಗಳನ್ನು ಬಿಟ್ಟುಕೊಡಲಾರದೇನೊ ಎಂದೇ ಎನಿಸುತ್ತದೆ. ಒಮ್ಮೆ ಓದಿದ ಮೇಲೆ ನಮ್ಮ ಏಕಾಂತವನ್ನು ಮತ್ತೆ ಮತ್ತೆ ತುಂಬಿಕೊಂಡು ಪ್ರಶ್ನೆ ಮತ್ತು ಉತ್ತರಗಳ ಜಿಜ್ಞಾಸೆಗೆ ಕಾರಣವಾಗುತ್ತಲೇ ಇರುವ ಬಗೆ ನಿಜಕ್ಕೂ ಹೊಸ ಒಂದು ಅನುಭವ.

(ಇದು ಫೆಬ್ರವರಿ 28ರ ಸಂಜೆ ಬೆಂಗಳೂರಿನಲ್ಲಿ ಟೋಟಲ್ ಕನ್ನಡ, ಪೇಜ್ ವರ್ಲ್ಡ್ ಇಂಡಿಯಾ ಮತ್ತು ಅಕ್ಷರದಾಹ ಒಂದಾಗಿ ಆಯೋಜಿಸಿದ 'ಊರುಭಂಗ' ಕಾದಂಬರಿ ಕುರಿತ ಸಂವಾದ ಕಾರ್ಯಕ್ರಮದಲ್ಲಿ ನಾನು ಹಂಚಿಕೊಂಡ ಮಾತುಗಳ ಪರಿಷ್ಕೃತ ಅಕ್ಷರ ರೂಪ.ಇಲ್ಲಿ ಉಲ್ಲೇಖಿಸಿದ ಬೇರೆ ವಿಮರ್ಶೆ/ವಿಶ್ಲೇಷಣೆಗಳ ಪೂರ್ಣಪಾಠವನ್ನು ದಯವಿಟ್ಟು ಗಮನಿಸಬೇಕು. ನಾನು ಕೇವಲ ಒಂದೆರಡು ಅಂಶಗಳತ್ತ ಮಾತ್ರ ಇಲ್ಲಿ ಉಲ್ಲೇಖಿಸಿದ್ದು ಅದು ಯಾವುದೇ ವಿಧದಲ್ಲೂ ಆಯಾ ವಿಮರ್ಶೆ/ವಿಶ್ಲೇಷಣೆಗಳ ಒಟ್ಟು ದೃಷ್ಟಿಕೋನವನ್ನು ಪ್ರತಿನಿಧಿಸುತ್ತಿಲ್ಲ ಎನ್ನುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ.)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ