Monday, April 27, 2015

ಅರುಣ್ ಕೊಲಟ್ಕರ್ ಅವರ ಜೆಜೂರಿ

ಮೊಟ್ಟ ಮೊದಲಿಗೆ Adil Jussawalla ಅವರ Maps for a Mortal Moon (Em and the Big Hoom ಕಾದಂಬರಿಯ ಜೆರ್ರಿ ಪಿಂಟೊ ಇದರ ಸಂಪಾದಕರು) ಕೃತಿಯಲ್ಲಿ ಮತ್ತು ತದನಂತರ ಅರವಿಂದ ಕೃಷ್ಣ ಮೆಹರೊತ್ರ ಅವರ Partial Recall ಪ್ರಬಂಧಗಳ ಸಂಕಲನದಲ್ಲಿ ನಾನು ಅರುಣ್ ಕೊಲಟ್ಕರ್ ಹೆಸರು ಉಲ್ಲೇಖಿಸಲ್ಪಟ್ಟಿದ್ದನ್ನು ಗಮನಿಸಿದ್ದೆ. ಈ ಕೃತಿಯ ಡೆತ್ ಆಫ್ ಅ ಪೊಯೆಟ್ ಎಂಬ ಲೇಖನ ಕೊಲಟ್ಕರ್ ಅವರ ಸಮಗ್ರ ಇಂಗ್ಲೀಷ್ ಕವನ ಸಂಕಲನದ ಮುನ್ನುಡಿ ಕೂಡಾ. ಅರವಿಂದ ಕೃಷ್ಣ ಮೆಹರೊತ್ರ ಅವರು ಆಕ್ಸ್‌ಫರ್ಡ್ ಇಂಡಿಯಾಗಾಗಿ ಸಂಪಾದಿಸಿದ ಆಧುನಿಕ ಭಾರತದ ಹನ್ನೆರಡು ಕವಿಗಳ ಕವನ ಸಂಕಲನದಲ್ಲಿಯೂ (The Oxford India Anthology of Twelve Modern Indian Poets) ಅರುಣ್ ಕೊಲಟ್ಕರ್ ಅವರ ಕವನಗಳಿವೆ. ಆದರೆ ನಾನು ಅರುಣ್ ಕೊಲಟ್ಕರ್ ಅವರ ಕವನಗಳನ್ನು ಓದಿದ್ದು ಮಾತ್ರ ಮೊನ್ನೆ ಮೊನ್ನೆ. ಇದಕ್ಕೆ ಕಾರಣವಾಗಿದ್ದು ಲಂಡನ್ನಿನ ಗ್ರಾಂಟಾ ಪತ್ರಿಕೆ.

ಗ್ರಾಂಟಾ ಪತ್ರಿಕೆಯ ಕಳೆದ ಸಂಚಿಕೆ (ಸಂಖ್ಯೆ 130) ಭಾರತೀಯ ಬರಹಗಾರರಿಗೆ ಮೀಸಲಾಗಿದೆ. ಆದರೆ ಇದರಲ್ಲಿ ಕಾಣಿಸಿಕೊಂಡ ಹೆಚ್ಚಿನೆಲ್ಲಾ ಬರಹಗಾರರು ಇಂಗ್ಲೀಷಿನಲ್ಲಿ ಬರೆಯುತ್ತಿರುವವರೇ ಹೊರತು ಭಾರತೀಯ ಭಾಷೆಗಳಲ್ಲಿ ಬರೆಯುತ್ತಿರುವವರಲ್ಲ ಎಂಬುದು ಗಮನಾರ್ಹ. ಇದಕ್ಕೆ ಹಲವಾರು ಕಾರಣಗಳಿದ್ದೇ ಇರುತ್ತವೆ ಎನ್ನುವುದು ಬೇರೆ ವಿಚಾರ. ಆದರೆ ಮರಾಠಿಯಲ್ಲಿ ಬರೆಯುತ್ತಿದ್ದ (ಇಂಗ್ಲೀಷ್ ಭಾಷೆಗೆ ತಮ್ಮ ಕವನಗಳನ್ನು ತಾವೇ ಅನುವಾದಿಸಿರುವ) ಅರುಣ್ ಕೊಲಟ್ಕರ್ ಮತ್ತು ಕನ್ನಡದ ವಿವೇಕ್ ಶಾನಭಾಗ ಇಬ್ಬರೇ ಇದಕ್ಕೆ ಅಪವಾದದಂತಿರುವವರು. ಗ್ರಾಂಟಾದಲ್ಲಿ ಕಾಣಿಸಿಕೊಂಡಿರುವುದು ಕೊಲಟ್ಕರ್ ಅವರ ಕವನವಲ್ಲ. ಬದಲಿಗೆ ಅವರ ಅಪರೂಪದ ಒಂದು ಗದ್ಯ ಕಥನ. ಮತ್ತೆ ಇದಕ್ಕೆ ಪರಿಚಯಾತ್ಮಕ ಟಿಪ್ಪಣಿ ಬರೆದವರು ಮೆಹರೊತ್ರ ಅವರೇ. ಅರುಣ್ ಕೊಲಟ್ಕರ್ ಈಗಿಲ್ಲ.

ಅರುಣ್ ಕೊಲಟ್ಕರ್ ಅವರ ಜೆಜುರಿ ಸಂಕಲನಕ್ಕೆ ಪ್ರಸ್ತಾವನೆ ಬರೆದಿರುವ ಅಮಿತ್ ಚೌಧುರಿಯವರು ಕೊಲಟ್ಕರ್ ಅವರನ್ನು ವೇ ಸೈಡ್ ಇನ್‌ನಲ್ಲಿ ಸಂಜೆ ನಾಲ್ಕರ ಹೊತ್ತಿಗೆ ಭೇಟಿಯಾಗಲು ಹೋದ ವಿವರಗಳಿವೆ. ಕೊಲಟ್ಕರ್ ಅವರ ಕಲೆಕ್ಟೆಡ್ ಪೊಯೆಮ್ಸ್ ಇನ್ ಇಂಗ್ಲೀಷ್ ಸಂಕಲನದ ಮುಖಪುಟದಲ್ಲಿಯೂ ನೀವು ಕಾಣುವ ಚಿತ್ರ ಇದೇ ವೇ ಸೈಡ್ ಇನ್‌ನಲ್ಲಿ ಹಲವು ಚಾಯ್ ಬಸಿಗಳ ಎದುರು ಕುಳಿತ ಅರುಣ್ ಕೊಲಟ್ಕರ್. ಗೋಡೆಯಲ್ಲಿ ಸರಿಸುಮಾರು ನಾಲ್ಕುಗಂಟೆ ತೋರಿಸುತ್ತಿರುವ ಗಡಿಯಾರ ಇಡೀ ಚಿತ್ರಕ್ಕೆ ಕೊಟ್ಟಿರುವ ಮೆರುಗು ಬೇರೆಯೇ ಬಗೆಯದು. ಮುಖ್ಯವಾಗಿ ಅಮಿತ್ ಚೌಧುರಿಯವರು ಜೆಜುರಿ ಕವನ ಸಂಕಲನದ ಹುಟ್ಟಿಗಿರುವ ಹಿನ್ನೆಲೆ ಮತ್ತು ಅರುಣ್ ಕೊಲಟ್ಕರ್ ಯಾವ ಬಗೆಯ ವ್ಯಕ್ತಿಯೆಂಬುದನ್ನು ಎಷ್ಟೊಂದು ಆಪ್ತವಾಗಿ ಕಟ್ಟಿಕೊಡುತ್ತಾರೆಂದರೆ, ಮೊದಲಿಗೆ ಕವನ ಸಂಕಲನವೊಂದರ ಪ್ರಸ್ತಾವನೆಯಲ್ಲಿ ಹೀಗೆಲ್ಲ ಬರೆಯುವುದು ಯಾವ ಪುರುಷಾರ್ಥಕ್ಕೆ, ಕವನಗಳ ಬಗ್ಗೆ ಬರೆಯಬೇಕಲ್ಲವೆ ಎಂದೆಲ್ಲ ಎನಿಸಿದ್ದರೂ ಸಂಕಲನದ ಒಂದೊಂದೇ ಕವನ ಓದುತ್ತ ಹೋದಂತೆ ಹೀಗಲ್ಲದೆ ಬೇರೆ ಥರದ ಒಂದು ಪ್ರಸ್ತಾವನೆ ಸಾಧ್ಯವಿತ್ತೆ/ಸರಿಯಾಗುತ್ತಿತ್ತೆ ಎಂದೇ ಅನಿಸತೊಡಗಿತ್ತು!

ಒಂದರ್ಥದಲ್ಲಿ ಇದೊಂದು ಪ್ರವಾಸ ಕಥನದಂಥ ಕವನಗಳ ಗುಚ್ಛ. ಕವಿ ತನ್ನ ಸಹೋದರ ಮತ್ತು ಸ್ನೇಹಿತನೊಂದಿಗೆ ಜೆಜುರಿ ಎಂಬ, ಒಂದು ವರ್ಗದ ಆರಾಧನೆಗಷ್ಟೇ ಸಂದ ಖಂಡೋಬನ ಮಂದಿರ ಹಾಗೂ ಅಲ್ಲಿನ ಒಟ್ಟು 63 ದೈವ ಸ್ಥಾನಗಳನ್ನು ಸಂದರ್ಶಿಸುವ ಸಂದರ್ಭ ಇಲ್ಲಿ ಚಿತ್ರಿತವಾಗಿರುವುದು. ಸರ್ಕಾರಿ ಬಸ್ಸಿನಲ್ಲಿ ಹೊರಡುವಲ್ಲಿಂದ ಹಿಡಿದು ಹಿಂದಿರುಗುವಾಗ ರೈಲ್ವೇ ಸ್ಟೇಶನ್ನಿಗೆ ತಲುಪುವವರೆಗಿನ ಚಿತ್ರಗಳು ನಮಗಿಲ್ಲಿ ಸಿಗುತ್ತವೆ. ಹೀಗೆ ಹೇಳುವಾಗಲೇ ನಂಬಿಕೆ ಮತ್ತು ವೈಜ್ಞಾನಿಕ ಮನೋಭಾವದ ತಿಕ್ಕಾಟಗಳೂ ಮುಖ್ಯವಾಗುತ್ತವೆ. ಹಿಂದಿರುಗುವಾಗ ಕವಿಯ ಒಂದು ಪಕ್ಕಕ್ಕೆ ಪುರೋಹಿತರೂ ಇನ್ನೊಂದು ಪಕ್ಕಕ್ಕೆ ರೈಲ್ವೇ ಸ್ಟೇಶನ್ ಮಾಸ್ತರರೂ ಇದ್ದಾರೆ ನಿಜವೇ. ಆದರೆ ಈ ಪುರೋಹಿತರು ಮತ್ತು ಸ್ಟೇಶನ್ ಮಾಸ್ತರರು ಪ್ರತಿನಿಧಿಸುವ ಸಂಕೀರ್ಣ ವಸ್ತುಸ್ಥಿತಿ ಏನಿದೆ, ಅದು ಸರಳ ವ್ಯಾಖ್ಯಾನಗಳಿಗೆ ಮೀರಿದ್ದು. ಆದರೆ ಹೇಗೆ ಹಿಂದೂತ್ವದ ಅತಿರೇಕಗಳನ್ನು ಈ ಕವನಗಳು ಸಹಜವಾಗಿಯೇ, ತಣ್ಣಗೆ ನಿರ್ಲಕ್ಷಿಸುತ್ತವೆಯೋ ಹಾಗೆಯೇ ಮೂಢನಂಬಿಕೆ ಮತ್ತು ಧಾರ್ಮಿಕ ಶ್ರದ್ಧೆಯ ನಡುವಣ ಬೌದ್ಧಿಕ ತಿಕ್ಕಾಟಗಳೂ ಇಲ್ಲಿಲ್ಲ. ಕವಿಗೆ ಹೇಗೆ ಕಲ್ಪನೆ, ಕನಸು, ಭ್ರಮೆ ಮತ್ತು ವಾಸ್ತವದೊಂದಿಗೆ ಅವೆಲ್ಲವೂ ತಳುಕು ಹಾಕಿಕೊಂಡಿರುವುದು ಒಂದು ಸಹಜ ಸುಂದರ ವಿದ್ಯಮಾನವೋ ಈ ಕವನಗಳಿಗೂ ಅದೆಲ್ಲ ಸಹಜ ಮತ್ತು ಸ್ವಾಭಾವಿಕ. ಅರುಣ್ ಕೊಲಟ್ಕರ್ ಸ್ವತಃ ಮರಾಠಿ ಭಕ್ತಿಗೀತೆಗಳನ್ನು ಕೂಡ ಇಂಗ್ಲೀಷಿಗೆ ಅನುವಾದಿಸಿದ್ದಿದೆ. ಹಾಗೆಯೇ ಇಲ್ಲಿ ಅವರು ಮಾನವೀಯ ನೆಲೆಯಲ್ಲಿ ಬೀಸಿದ ಟೀಕಾಪ್ರಹಾರಕ್ಕೆ ಪುರೋಹಿತಶಾಹಿ ಮತ್ತು ಮನಸ್ಸಿನ ದೌರ್ಬಲ್ಯಗಳು ಯಾವುದೇ ರಿಯಾಯಿತಿ ಗಿಟ್ಟಿಸುವುದು ಕೂಡ ಸಾಧ್ಯವಾಗಿಲ್ಲ. ಈ ಬಗೆಯ ಲೌಕಿಕ ಮತ್ತು ಸಮಕಾಲೀನ ನಿರೀಕ್ಷೆಗಳನ್ನು ಬಿಟ್ಟುಕೊಟ್ಟು ಈ ಕವನಗಳನ್ನು ಮನದುಂಬಿಕೊಳ್ಳುವುದು ಮುಖ್ಯ.

ಇಲ್ಲಿರುವುದು 1974ಕ್ಕೂ ಹಿಂದಿನ ದಿನಗಳಲ್ಲಿ ಬರೆದ ಕವನಗಳು. ಆಗಿನ್ನೂ ಬಾಬ್ರಿ ಮಸೀದಿ ನೆಲಸಮವಾಗಿರಲಿಲ್ಲ. ಆಗ ಬಾಂಬೆ ಆಗಿದ್ದ ಮುಂಬಯಿಯಲ್ಲಿ ಶಿವಸೇನೆ ಈಗಿನಷ್ಟು ಪ್ರಬಲವಾಗಿರಲಿಲ್ಲ. ಅದಕ್ಕೂ ಮುಖ್ಯವಾಗಿ ಹಿಂದೂಗಳು ತಮ್ಮ ದೇವರು, ದೇವಾಲಯ, ಪುರಾಣ, ನಂಬಿಕೆ ಮತ್ತು ಆಚರಣೆಗಳ ಬಗ್ಗೆ ಹಿಂದೂಗಳೇ ಮಾಡುತ್ತಿದ್ದ ಲೇವಡಿ, ಟೀಕೆ, ವಿಡಂಬನೆಗಳನ್ನು ಏನೂ ಅಲ್ಲವೆಂಬಂತೆ ನಕ್ಕು ಸ್ವೀಕರಿಸುವಷ್ಟು ಸ್ವಾಸ್ಥ್ಯವನ್ನು ಉಳಿಸಿಕೊಂಡಿದ್ದ ದಿನಗಳವು. ಆಗ ಕೋಟ ಲಕ್ಷ್ಮೀನಾರಾಯಣ ಕಾರಂತರ ಆತ್ಮಕಥಾನಕ, ಕಾರಂತರ ಕಾದಂಬರಿಗಳಲ್ಲಿ ಉಲ್ಲೇಖಿಸಲ್ಪಟ್ಟ ಮಠ-ಮಠಾಧೀಶರ ವಿಚಾರ ಯಾವುದೇ ಕೋಮುಗಲಭೆಗೆ ಕಾರಣವಾಗುವಷ್ಟು ಮುಖ್ಯವೆಂದೇ ಜನರಿಗೆ ಅನಿಸುತ್ತಿರಲಿಲ್ಲ ಹೇಗೋ ಹಾಗೆಯೇ ಕೊಲಟ್ಕರ್ ಅವರ ಕವನಗಳು ಯಾವುದೇ ಬೆಂಕಿ ಹೊತ್ತಿಸಲಿಲ್ಲ. ಆದರೆ ಇವತ್ತು ನಾವು ಅವುಗಳನ್ನು ಗಮನಿಸುವಾಗ ನಮಗೆ ಮುಖ್ಯವಾಗಬೇಕಾದ್ದು ನಾವು, ನಮ್ಮ ಸಮಾಜ ಕಳೆದುಕೊಂಡ ಈ ಸ್ವಾಸ್ಥ್ಯವೇ.

ಸಹಜವಾಗಿ, ಸರಳವಾಗಿ, ಮೇಲ್ನೋಟಕ್ಕೆ ಏನೋ ಕ್ಯಾಶುವಲ್ ಆಗಿ ಮಾತನಾಡುತ್ತಿದ್ದಾರೆ, ವಿವರಿಸುತ್ತಿದ್ದಾರೆ ಅನಿಸುವಾಗಲೇ ಛಕ್ಕೆಂದು ಮಿಂಚಿದಂತೆ ಗುಪ್ತಗಾಮಿನಿಯಾಗಿ ಹರಿದ ಅಥವಾ ಹರಿಯುತ್ತಿದೆಯೋ ಎನ್ನುವ ಹೊಳಹು ಕೊಟ್ಟ ಯಾವುದೋ ಅರ್ಥಪರಂಪರೆ, ಒಂದು ಒಳನೋಟ, ನಾವು ನಿಂತ ನೆಲ ಒಂದಿಷ್ಟು ಕದಲಿದ ಅನುಭವ ಅರುಣ್ ಕೊಲಟ್ಕರ್ ಅವರ ಕವನ ಓದುವಾಗ ಹುಟ್ಟಿಸುವ ಝಲಕ್ ಏನಿದೆ, ಆ ಸುಖಕ್ಕಾಗಿಯೇ ಈ ಕವನಗಳನ್ನು ಮತ್ತೆ ಮತ್ತೆ ಓದಬೇಕೆನಿಸುತ್ತದೆ. ಒಂದು ಕವನ ಇದಕ್ಕಿಂತ ಹೆಚ್ಚೇನೂ ಮಾಡಬೇಕಿಲ್ಲ ಎಂದೂ ಅನಿಸುತ್ತದೆ. ಕವನಗಳ ಬಗ್ಗೆ ಹೆಚ್ಚೇನೂ ಹೇಳದೆ, ಈ ಕವನಗಳ ರುಚಿ ನಿಮಗೆ ಹತ್ತಲಿ ಎಂಬ ಕಾರಣಕ್ಕೆ ಇಲ್ಲಿ ನಾನು ಅನುವಾದಿಸಿದ ಕೆಲವು ಕವನಗಳನ್ನು ಕಾಣಿಸುತ್ತಿದ್ದೇನೆ. ಇವು ಮೂಲ ಕವನದ ಸೊಗಡು ಕಾಣಿಸುತ್ತವೆ ಎಂದಲ್ಲದಿದ್ದರೂ ಅದು ಹೀಗಿರಲಿಕ್ಕಿಲ್ಲ, ನಿಜಕ್ಕೂ ಹೇಗಿರಬಹುದು ಎಂಬ ಕೌತುಕ ನಿಮ್ಮಲ್ಲಿ ಹುಟ್ಟಿದರೂ ಉದ್ದೇಶ ಈಡೇರಿದಂತೆ ಎಂಬ ಆಸೆಯೇ ಈ ಧೈರ್ಯಕ್ಕೆ ಪ್ರೇರಣೆ!

ಭಕ್ತಿಪಂಥದ ಆದ್ಯಪ್ರವರ್ತಕರಲ್ಲೊಬ್ಬರಾದ ಚೈತನ್ಯರ ಬಗ್ಗೆ ಎಲ್ಲರಿಗೂ ಗೊತ್ತು. ಇಲ್ಲಿ ಕಲ್ಲುಗಳೇ ದೈವ-ದೇವರುಗಳಾಗಿರುವ ಖಂಡೋಬನ ಆರಾಧನಾ ಸ್ಥಳ ಜೆಜುರಿಗೆ ಭೇಟಿ ಕೊಟ್ಟ ಕವಿ ಅಲ್ಲಿನ ಕಲ್ಲಿನ ಜೊತೆ ದೇವರು, ದೇವಾಲಯ, ಆರಾಧನೆ, ಪೂಜೆ, ಆಚರಣೆಗಳನ್ನು ತ್ಯಜಿಸಿ ಕೇವಲ ನಾಮಸ್ಮರಣೆ ಮತ್ತು ಭಕ್ತಿಯಿಂದ ದೇವರನ್ನು ಒಲಿಸಿಕೊಳ್ಳುವುದನ್ನು ಉಪದೇಶಿಸಿದ ಚೈತನ್ಯರು ಆಡುವ ಮಾತುಗಳಾಗಿಯೂ ಇದನ್ನು ಓದಿಕೊಳ್ಳಬಹುದು ಅಥವಾ, ಜಡತ್ವವನ್ನು ಪ್ರತಿನಿಧಿಸುವ ಕಲ್ಲಿಗೆ ಚೈತನ್ಯವನ್ನು ಪ್ರತಿಪಾದಿಸುವ ಚಲನೆ ಆಡುವ ಮಾತುಗಳಾಗಿಯೂ ಓದಿಕೊಳ್ಳಬಹುದು.

ಚೈತನ್ಯ

ಚೈತನ್ಯ ಕಲ್ಲೊಂದಕ್ಕೆ
ಕಲ್ಲನ್ನೊದ್ದು ಎದ್ದು ಬಾ
ಎಂದ
ಕಲ್ಲ ಭಾಷೆಯಲ್ಲೇ

ನಿನ್ನ ಮುಸುಡಿಗೆ ಬಳಿದ ಕೆಂಬಣ್ಣ ತೊಳೆದುಕೊ
ಅದೇನೇನೂ ಒಪ್ಪುತ್ತಿಲ್ಲ ನಿನಗೆ
ಅಲ್ಲಯ್ಯಾ ಸುಣ್ಣಬಣ್ಣ ಇಲ್ಲದೆ ಬರೇ ಕಲ್ಲಾಗಿರುವುದರಲ್ಲೇನು
ಕಷ್ಟನಷ್ಟ ಅಂತೀನಿ
ಆಗಲೂ ನಿನಗಂತ ಹೂವ ತಂದೇನು ನಾನು
ಗೊಂಡೆ ಹೂವೆಂದರೆ ನಿನಗೆ ಭಾಳ
ಸುಳ್ಳಾ ಮತ್ತೆ
ನಂಗೂ ಅವು ಇಷ್ಟ ಕಣೊ

ಚೈತನ್ಯ ಕಲ್ಲ ಭಾಷೆಯಲ್ಲೇ ಹೇಳುವುದು (ಜಡತ್ವಕ್ಕೆ ಅರ್ಥವಾಗುವ ಭಾಷೆಯಲ್ಲೇ) ಮತ್ತು ಕುಂಕುಮ, ಅರಿಶಿನ, ಹೂವು, ಗಂಧ ಎಲ್ಲ ಇಲ್ಲದೆಯೂ ಕಲ್ಲನ್ನು ಇಷ್ಟಪಡಬಹುದು ಎನ್ನುವ ಸಹಜವಾದ ಮಾತುಗಳು ದೇವಾಲಯಗಳೇ (ಬಸವಣ್ಣನ ಸ್ಥಾವರ - ಜಂಗಮ ಪರಿಕಲ್ಪನೆಯಲ್ಲಿಯೂ) ಪ್ರಾಮುಖ್ಯ ಪಡೆಯುತ್ತಿರುವ ದಿನಗಳಲ್ಲಿ ಹೆಚ್ಚು ಅರ್ಥಪೂರ್ಣವೆನಿಸುತ್ತವೆ.

ಗೀರು

ಯಾವುದು ದೈವ
ಯಾವುದು ಕಲ್ಲು
ನಡುವಿನ ಗೆರೆ
ಇರುವುದೇ ಆದರೆ
ಅದು ಬರೆ ತೆಳ್ಳಗೆ
ಇಲ್ಲಿ
ಮತ್ತೆ ಒಂದೊಂದು ಕಲ್ಲೂ
ದೈವ ಇಲ್ಲಾ ಅದರ ನೆಂಟ

ಇಲ್ಲಿ ಬೇರೆ ಬೆಳೆ ಬೆಳೆಯುವುದಿಲ್ಲ
ಬರೇ ದೇವರನ್ನು ಬೆಳೆಯುತ್ತಾರೆ
ವರ್ಷವೆಲ್ಲ
ದಿನವೆಲ್ಲ
ಈ ಬಂಜರು ನೆಲದಿಂದ
ಮತ್ತಿದೋ ಈ ಕಗ್ಗಲ್ಲು ಬಂಡೆಯಿಂದ

ಅಲ್ಲಿದೆಯಲ್ಲ ಆ ಭಾರೀ ಬಂಡೆ
ಶಯನಾಗೃಹದ ಗಾತ್ರದ್ದು
ಅದೇ
ಕಲ್ಲಾದ ಖಂಡೋಬನ ಹೆಂಡತಿಯೇ ಅದು
ಅದರ ಮೇಲೆ ಕಾಣುತ್ತಲ್ಲ ಗೆರೆ
ಉದ್ದಕ್ಕೂ ಎಳೆದಂತೆ
ಅದು
ಒಮ್ಮೆ ಕೆರಳಿದಾಗ ಅವನು ಅವಳಿಗೆ ಖಡ್ಗವನೆತ್ತಿ
ಹೊಡೆದು ಕೆಡವಿದ ಗುರುತು

ಕಲ್ಲ ಮೇಲೆ ಗೆರೆ
ಗೀರು
ಹೊಡೆದರೆ
ಹೊರಡುತ್ತದೆ ಪುರಾಣ

ಈ ಕವನದಲ್ಲಿ ಹಲವು ಆಯಾಮಗಳ ಒಂದು ಚಿತ್ರ ನಮಗೆ ಸಿಗುತ್ತಿದೆ. ಮೊದಲಿಗೆ ಕಲ್ಲು ದೇವರಾಗುವ ಬಗ್ಗೆ ಇದ್ದರೆ ನಂತರ ಹೊಡಿದಿದ್ದು, ಕೊಂದಿದ್ದು ದೈವೀಕವಾಗುವ, ಶೋಷಣೆ ಮತ್ತು ದಬ್ಬಾಳಿಕೆ ಪವಿತ್ರವಾಗುವ ಚೋದ್ಯವೂ ಇದೆ. ಬಂಜರು ನೆಲ, ಕಗ್ಗಲ್ಲು ಬಂಡೆಗಳಿಂದ ದೇವರು ಹುಟ್ಟುವ ಪರಿಯ ಬಗ್ಗೆ ಹೇಳುತ್ತಲೇ ದೈವ ಮತ್ತು ಕಲ್ಲಿನ ನಡುವೆ ಗೆರೆ ಎಳೆಯುವ, ಗೀರು ಮಾಡುವ, ಹೊಡೆಯುವ ಪ್ರಕ್ರಿಯೆಗಳಲ್ಲಿ ಸುಪ್ತ ಹಿಂಸೆಯ ಪ್ರಕ್ರಿಯೆ ಇರುವುದನ್ನೂ ಮತ್ತು ಪುರಾಣಗಳು ಅಲ್ಲಿಂದಲೇ ಚಿಗಿತುಕೊಳ್ಳುವುದನ್ನೂ ಈ ಕವನ ಒಟ್ಟೊಟ್ಟಿಗೇ ಹಿಡಿದುಕೊಡುತ್ತಿದೆ.

ಮನೋಹರ

ಬಾಗಿಲು ತೆರೆದಿತ್ತು
ಇದಿನ್ನೊಂದು ದೇವಳ
ಎಂದು ತಿಳಿದ ಮನೋಹರ

ಇಣುಕಿದ ಒಳಗೆ
ಅದ್ಯಾವ ದೇವ ದೇವತೆ
ಇರಬಹುದೋ ಇಲ್ಲಿ ಎನ್ನುತ

ತುಂಬು ಕಂಗಳ ಎಳೆಗರು
ಕತ್ತಲಲಿ ಕಣ್ಣಗಲಿಸಿ
ಇವನನ್ನೇ ದಿಟ್ಟಿಸಿದ ಪರಿಗೆ
ಹೆದರಿ ಹಿಮ್ಮೆಟ್ಟಿ ಹಾರಿದ

ಇದು ದೇವಳವಲ್ಲ
ಬರಿಯ
ಗೋಮಾಳ
ಎಂದ

ಇಲ್ಲಿ ಬರುವ ಮನೋಹರ ಯಾವುದೇ ಪುರಾಣದ ಪ್ರತಿನಿಧಿಯಲ್ಲ. ಜೆಜುರಿಗೆ ಭೇಟಿಕೊಟ್ಟ ಕವಿಗೆ ಜೊತೆಯಾದ ಗೆಳೆಯ. ಮುಖ್ಯವಾದ ಅನುಭೂತಿಯೆಂದರೆ ಜೀವಂತ ಜೀವಿಗೆ ಹೆದರುವ ಮನುಷ್ಯ ನಿರೀಕ್ಷಿಸುವ ದೇವರು ನಿಷ್ಕ್ರಿಯ, ನಿರ್ಜೀವ ಸ್ವರೂಪಿ ಎಂಬ ಪರಿಕಲ್ಪನೆಯಲ್ಲಿರುವ ವಿಡಂಬನೆ. ಹಾಗೆಯೇ ಇವತ್ತಿನ ಗೋಮಾಂಸದ ಗದ್ದಲದಲ್ಲಿ ಈ ಕವನ ಪಡೆದುಕೊಳ್ಳುವ ಹೊಳಪು ಸ್ವಲ್ಪ ಹೆಚ್ಚೇ ಇದೆ!

ಚೈತನ್ಯ

ಇಲ್ಲಿನ ಒಂದೊಂದು ಕಲ್ಲು
ಕಲ್ಲಲ್ಲ
ಸಿಹಿಸಿಹಿ ರಸಗುಲ್ಲ
ಎಂದ ಚೈತನ್ಯ

ಅಲ್ಲೆ ಕಲ್ಲೊಂದನ್ನೆತ್ತಿ
ಬಾಯ್ಗೆಸೆದುಕೊಂಡ
ಮತ್ತು
ದೇವರುಗಳನ್ನೇ ಉಗಿದ

ಚೈತನ್ಯರು ದೇವರು-ದೇವಳ-ಆಚರಣೆ-ಆರಾಧನೆಗಳಿಗೆ ಬದಲಾಗಿ ಭಕ್ತಿ ಮತ್ತು ನಾಮಸಂಕೀರ್ತನೆಯಿಂದಲೇ ಭಗವಂತನ ಸಾಕ್ಷಾತ್ಕಾರ ಸಾಧ್ಯವಾಗಬೇಕೆಂದವರು. ಅವರ ಹರೇಕೃಷ್ಣ ಪಂಥದವರು ಇವತ್ತು ಏನು ಮಾಡುತ್ತಿದ್ದಾರೆಂಬುದು ಹಾಗಿರಲಿ. ಇಲ್ಲಿ ಕಲ್ಲನ್ನು ನುಂಗಲು ಯತ್ನಿಸಿದ ಚೈತನ್ಯರು ಉಗುಳಿದ ಕಲ್ಲು ದೈವವೇ ಆಗಿ ಅವರನ್ನು ಅಣಕಿಸಿದ ಚೋದ್ಯ ಸಣ್ಣದೇನಲ್ಲ. ಸ್ಥಾವರಕ್ಕಳಿವುಂಟು ಜಂಗಮಕ್ಕಿಲ್ಲ ಎಂದ ಬಸವಣ್ಣನಿಗಾದ ಗತಿಯೇ ಚೈತನ್ಯರಿಗೂ ಆಯಿತು. ಇವತ್ತು ಬಸವಣ್ಣನ ಮೂರ್ತಿ ಮುಖ್ಯವಾಗುತ್ತದೆ, ತತ್ವಗಳಲ್ಲ. ಜಾತಿವ್ಯವಸ್ಥೆಯನ್ನು ಅಳಿಸಲು ಯತ್ನಿಸಿದ ಬಸವಣ್ಣ ಮತ್ತೊಂದು ಹೊಸ ಜಾತಿಯನ್ನಷ್ಟೇ ಸೃಷ್ಟಿಸಿದಂತಾಯಿತು ಎಂಬಂತೆ ನಾವು ನಡೆದುಕೊಳ್ಳುತ್ತ ಬಂದಿದ್ದೇವೆ. ಬುದ್ಧ, ಗಾಂಧಿ ಎಲ್ಲರ ವಿಚಾರದಲ್ಲಿಯೂ ಆಗಿರುವುದು ಅದೇ. ಪುಟ್ಟ ಕವನವೊಂದು ಅದನ್ನು ಚೊಕ್ಕವಾಗಿ ಹಿಡಿದಿಟ್ಟಿರುವ ಬಗೆ ಇಷ್ಟವಾಗುವಂತಿದೆ.

ಬಾಗಿಲು

ಶಿಲುಬೆಗೇರಿದ ಸಂತ
ನೊಲು ನಲುಗುತ್ತ
ನೇಲುತ್ತ ಅರೆಬರೆ ಜೋತುಬಿದ್ದಂತೆ

ಅದೋ ಅಂಧಕಾಲದ ಮಣಭಾರ ಬಾಗಿಲು
ಒಂದು ಬಂಧ ಕಳಚಿ ಉಳಿದ
ಇನ್ನೊಂದರಲ್ಲೇ ಅರೆಜೀವ ಹಿಡಿದು ಬಾಗಿದೆ

ಹಾದಿಬೀದಿಯ ಧೂಳೆಲ್ಲ ಒಳಗೆ
ಪದೇಪದೇ ಜೀಕುತ್ತ
ತೇಕುತ್ತ ಎತ್ತರದ ಕುಂದಕ್ಕೆ
ತಾಕುತ್ತ ಬಡಿಯುತ್ತ ತಾಕುತ್ತ ಬಡಿಯುತ್ತ ಬಡಿಯುತ್ತ
ಉಳಿದಿದೆ

ಕಾಲ ಕಳೆದಂತೆ ಹಳೆಯ ನೆನಪು
ಆಳಕಿಳಿದು ಮರುಜೀವ ಪಡೆವಂತೆ
ಮರದೊಳಗಣ ಕಿಚ್ಚು ಮೆಲ್ಲಗೆ ಕಿಡಿವೊಡೆಯುವುದು

ಚರ್ಮ ಸುಲಿದ ನರಮಾನವನ ನರನಾಡಿಯೆಲ್ಲ
ಗೆರೆಕೊರೆದು ಕರೆದು ಕಾಣಿಸುವೊಲು
ವಿವರವಿವರ ಸುಸ್ಪಷ್ಟ ಸೌಷ್ಟವ
ಮತ್ತೆ ಮರಳಾರದೆಂದಿಗೂ ತನ್ನದೇ ದೇಹದೊಳಗೊಳಗೆ

ಒಂದಿಷ್ಟು ಸುಧಾರಿಸಿಕೊಳ್ಳಲು ಉಸ್ಸಪ್ಪಾ
ಎಂದಲ್ಲಿ ಹಳೆಯ ಬೀದಿ ಬಾಗಿಲಿಗೆ ಚಾಚಿ ಕೈ
ತಳ್ಳಿ ನಿಂತ ಕಳ್ಳಭಟ್ಟಿ ಕುಡಿದು ಓಲಾಡುವ
ಕುಡುಕನಂತೆ.

ಈ ಬಾಗಿಲು ಈ ದಾರಂದ ಬಂಧ ಬೀಜಾಗ್ರಿ
ಸಾಯ್ಲಿ ಬಿಡಿ ಬಿಟ್ಟಾಕ್ರೀ
ಎನ್ನುತ್ತ ಅದೆಂದೋ ತಲೆಕೊಡವಿ
ಎತ್ತಲೋ ನಡೆದು ಬಿಡಬಹುದಿತ್ತು
ಈ ಬಾಗಿಲು ಗೊತ್ತ

ಹೆಗಲ ಮೇಲೆ ಒಣಗ ಹಾಕಿದ
ಆ ಎರಡು ಚಡ್ಡಿಗಳ ಹಂಗೊಂದು
ಇಲ್ಲದಿರುತ್ತಿದ್ದಿದ್ದರೆ

ಇದು ನನಗೆ ಅತ್ಯಂತ ಇಷ್ಟವಾದ ಮತ್ತು ಸಾಕಷ್ಟು ಸಂಕೀರ್ಣ ಅನುಭವವನ್ನು ತನ್ನೊಳಗೆ ಇರಿಸಿಕೊಂಡಿರುವ ಕವನ. ಇದರ ಬಗ್ಗೆ ಬರೆಯದಿರುವುದೇ ಅದನ್ನು ಅರ್ಥಮಾಡಿಕೊಳ್ಳುವ ಅತ್ಯುತ್ತಮ ವಿಧಾನ!

ಬಸ್ಸು

ಫಡಫಡಿಸುವ ಟರ್ಪಾಲು ಬಿಗಿದು
ಕಿಡಕಿಯ ರಾಡಿಗೆ ಕಟ್ಟಿ
ಗಡಗಡ ನಡುಗುತ್ತ ಹೊರಟಿದೆ
ಎಸ್ಟಿ ಬಸ್ಸು.

ತಣ್ಣಗಿನ ಗಾಳಿ ರಪರಪ ಬೀಸುತ್ತ
ಮೊಣಕೈಗೆ ಬಡಿವ ಟರ್ಪಾಲು ತುದಿಯಿಂದ
ಕೆಣಕುತ್ತಿದೆ.

ಕೆಳಗೆ ಭರ್ರೋ ಎಂದು ಸರಿದು ಹೋಗುವ ಕಪ್ಪು ರಸ್ತೆ
ಬಸ್ಸಿನೊಳಗೆ ಅಷ್ಟಿಷ್ಟು ಕಣ್ಣು
ಪಿಳುಕಿಸುವ ಅರೆಬರೆ ಬೆಳಕಲ್ಲಿ
ತುಳುಕೀತೆ ಮುಂಜಾವಿನ ಹೊಳ ಎಂದು
ಹುಡುಕಾಟ ನಡೆದಿದೆ.

ಮುದುಕನ ಮೊಗದಲ್ಲಿ ಎರಡು ಹೋಳಾಗಿ
ಮೂಗೇರಿ ಕೂತ ಕನ್ನಡಕದಲ್ಲಿ ನಿಮ್ಮ
ಮುಸುಡೇ ನಿಮ್ಮತ್ತ ಕಾಣುವುದೊಂದೇ
ಸುಡುಗಾಡು ನೋಟ ಕಾಣ ಸಿಕ್ಕಿದ್ದು.

ಗುರಿಯೊಂದರತ್ತ ಸತತ ಸಾಗುತಿಹ ಭಾವ
ಹರಿಯುವುದಾಗ ಉದ್ದಕ್ಕೂ ನಿಮ್ಮಲ್ಲಿ
ಮೀರಿ ಅವನ ಹುಬ್ಬುಗಳ ನಡುವಿನ ಉದ್ದುದ್ದ ನಾಮ.

ಹೊರಗೆ ಸೂರ್ಯ ಮೂಡಿಹನು ತಣ್ಣಗೇ ಸದ್ದಿಲ್ಲದೆ
ಗುರಿಯಿಟ್ಟು ಟರ್ಪಾಲು ಸಂದಿಯಿಂದ
ಬಿರಿದ ಬೆಳಕು ಕಾಣುವುದೂ ಮುದುಕನ ಕನ್ನಡಿಯಲ್ಲೆ.

ಕದ್ದು ಬಂದಂತೆ ಕಂಡ ಕಿರಣವೊಂದು
ಮುದ್ದಾಗಿ ಚಾಲಕನ ಹಣೆಯ ಮೇಲೆ
ಹಾದಿ ಹೊರಳುವ ಮೊದಲೇ ಜಾಣನಂತೆ
ಗಡದ್ದು ಚಾಪೆ ಹಾಸಿದೆ ವಿರಮಿಸಲು.

ಎರಡೂ ಕಡೆ ನಿಮ್ಮದೇ ಮುಖದ ಹೋಳು ಕಣ್ಣಲ್ಲೆ
ಹಿಡಿದು ಕಳೆದ ಪಯಣ
ಕಡೆಗೂ ಮುಗಿದಿದೆ.

ಮುದುಕನ ಮನದೊಳಗೆ ಕೊನೆಗೂ ನೀವು
ಒಂದಡಿ ಇಡಲಿಲ್ಲ ನೋಡಿ.

ಇದೂ ಕೂಡ ನನಗೆ ಅತ್ಯಂತ ಇಷ್ಟವಾದ ಮತ್ತು ಸಾಕಷ್ಟು ಸಂಕೀರ್ಣ ಅನುಭವವನ್ನು ತನ್ನೊಳಗೆ ಇರಿಸಿಕೊಂಡಿರುವ ಕವನ. ಇದರ ಬಗ್ಗೆ ಬರೆಯದಿರುವುದೇ ಅದನ್ನು ಅರ್ಥಮಾಡಿಕೊಳ್ಳುವ ಅತ್ಯುತ್ತಮ ವಿಧಾನ!
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ