Tuesday, June 30, 2015

ಕತೆಯೆಂಬ ಮಾಯಾ ಕೋಲಾಹಲ

ಮೌನೇಶ್ ಬಡಿಗೇರ್ ಅವರ ಕಥಾ ಸಂಕಲನ "ಮಾಯಾ ಕೋಲಾಹಲ"ದಲ್ಲಿ ಒಟ್ಟು ಎಂಟು ಕತೆಗಳಿವೆ. ಎಲ್ಲಾ ಕತೆಗಳಿಗೂ ಸಾಮಾನ್ಯವಾದ ಒಂದು ಅಂಶವೆಂದರೆ ಟಿವಿ ಮತ್ತು ಕ್ರೈಂ ಟೈಮ್ ಎಂಬ ಒಂದು ಕಾರ್ಯಕ್ರಮ. ಇದನ್ನೇ ಮುಂದುವರಿಸಿ ಹೇಳುವುದಾದರೆ ಇಲ್ಲಿ ಮೌನೇಶ್ ಅವರು ಇದುವರೆಗಿನ ತಮ್ಮ ಪ್ರೌಢ ಬದುಕಿನ ಅಬ್ಸರ್ವೇಶನ್ ತಮಗೆ ದಕ್ಕಿಸಿದ ಗ್ರಹಿಕೆಗಳನ್ನು ಅವು ತಮಗೆ ತಟ್ಟಿದಷ್ಟೇ ತೀವ್ರವಾಗಿ - ಅದಕ್ಕಾಗಿ ಕನಸು, ರೂಪಕ, ವ್ಯಂಗ್ಯ, ವಿನೋದ ಇತ್ಯಾದಿಗಳನ್ನು ಬಳಸಿಕೊಂಡು- ಹೇಳುತ್ತಿರುವುದು ಇಲ್ಲಿನ ಸಾಮಾನ್ಯ ಎಳೆ. ಇದನ್ನು ಅವರು ಸಹಜವಾಗಿ ಮಾಡುತ್ತಾರೆಂಬುದೇ ಒಂದು ಹೆಚ್ಚುಗಾರಿಕೆ. ಇಲ್ಲಿ ಕಥನದ ಗಿಮ್ಮಿಕ್ ಇಲ್ಲ, ಏನೋ ಕಟ್ಟುತ್ತಿದ್ದೇನೆಂಬ ಸಂಕಲ್ಪವಾಗಲಿ, ಯಾರಿಗೋ, ಯಾವುದಕ್ಕೋ ಬದ್ಧನಾಗಿರಬೇಕೆಂಬ ಅಸಹಜ ಕಟ್ಟುಪಾಡುಗಳ ಲಿಮಿಟೇಶನ್ಸ್ ಆಗಲಿ ಅವರಿಗಿಲ್ಲಿ ಇಲ್ಲ ಎಂಬುದು ಓದುಗನಿಗೆ ಮೊದಲಸಲಕ್ಕೇ ಅನುಭವಕ್ಕೆ ಬಂದುಬಿಡುವ ಸತ್ಯ. ಮೌನೇಶ್ ನಮಗೆಲ್ಲ ತಿಳಿದಿರುವಂತೆ ನಾಟಕಕಾರ, ನಿರ್ದೇಶಕ ಮತ್ತು ನಾಟಕಪ್ರಿಯ. ಹಾಗಾಗಿ, ಒಬ್ಬ ನಾಟಕಕಾರ ಮಾತ್ರ ಸೂಕ್ಷ್ಮವಾಗಿ ಸ್ಪಂದಿಸಲು ಕಲಿವ, ಕಲಿತಿರುವ, ದೇಹದ ಚಲನೆಯೂ ಸೇರಿದಂತೆ ಒಟ್ಟಾರೆ ರಂಗ ಚಲನೆ, ಕತ್ತಲು-ಬೆಳಕಿನ ವಿನ್ಯಾಸ, ಸಂಗೀತವೂ ಆಗಬಹುದಾದ ಎಲ್ಲ ಬಗೆಯ ಸದ್ದು, ಸಂಭಾಷಣೆ(ಟೆಕ್ಸ್ಟ್)ಯನ್ನು ಮೀರಿ ರಂಗಭಾಷೆಯ ಸಶಕ್ತ ಬಳಕೆ (ಅದರ ಧ್ವನಿಶಕ್ತಿಯ ಅರಿವು), ಯಾವುದನ್ನೂ ಸಮಕಾಲೀನವಾಗಿಸಬಲ್ಲ ಒಗ್ಗಿಸಿಕೊಳ್ಳುವಿಕೆ, ಬದುಕಿನ ಪ್ರತಿಯೊಂದರಲ್ಲೂ ನಾಟಕೀಯತೆಯನ್ನು ಕಾಣುವ ಕಣ್ಣುಗಳು - ಇವೆಲ್ಲದರ ಬಗ್ಗೆ ಮೇಲ್ಮಟ್ಟದ ಅರಿವು ಬೇರೆ ಹೊಸ ಕತೆಗಾರರಿಗಿರುವುದಕ್ಕಿಂತ ಹೆಚ್ಚು ಮೌನೇಶ್ ಅವರಿಗೆ ಇದ್ದಿರಲು ಸಾಧ್ಯವಿದೆ. ಇನ್ನು ಇವರ ಪುಟ್ಟ ಪರಿಚಯದ ಭಾಷೆಯನ್ನೇ ಗಮನಿಸಿ " ಓದಿದ್ದು ಎನ್ನುವುದಕ್ಕಿಂತ ಓದು ಬಿಟ್ಟದ್ದು ಎಂದರೇನೇ ಹೆಚ್ಚು ಸತ್ಯ. ಓದುತ್ತಿದ್ದ ಕಂಪ್ಯೂಟರ್ ಡಿಪ್ಲೊಮೋವನ್ನ ಅರ್ಧಕ್ಕೇ ಬಿಟ್ಟು ರಂಗಭೂಮಿಗೆ ಹಾರಿದ್ದು, ಈ ಎಡಬಿಡಂಗಿ ಸ್ಥಿತಿಯಲ್ಲೇ ಅಲ್ಪಸ್ವಲ್ಪ ಸಾಹಿತ್ಯದ ಓದು ಸಾಧ್ಯವಾದದ್ದು, ಓದಿದ್ದನ್ನ ಬರೆದದ್ದು, ಬರೆದದ್ದನ್ನ ಹರಿದದ್ದು! ನಂತರ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಎರಡು ವರ್ಷಗಳ ಕಾಲ ರಂಗಭೂಮಿಯ ಅಭ್ಯಾಸ, ಕಲಿಕೆ ಮತ್ತು ಕಲಿಕೆಯ ಮುರಿಕೆ!"

ಜೋಗಿಯವರ ಒಂದು ಸಂದರ್ಶನ, ಓ ಎಲ್ ನಾಗಭೂಷಣ ಸ್ವಾಮಿಯವರಂಥ ನುರಿತ ವಿಮರ್ಶಕರ ಒಂದು ಮುನ್ನುಡಿ ಮತ್ತು ಮೌನೇಶರ "ಕಥನ ಕೋಲಾಹಲ" ಎಂಬ ಪ್ರವೇಶಿಕೆ ನಮ್ಮನ್ನು ಮೌನೇಶರ ಕತೆಗಳ ಓದಿಗೆ ಸಜ್ಜುಗೊಳಿಸಲು ಲಭ್ಯವಿರುವ ಸಂಗತಿಗಳಾಗಿ ಸಹಕರಿಸುತ್ತವೆ. ಸಾಹಿತ್ಯ ಎಂಬುದು ಮೌನೇಶರಿಗೆ ಏನು ಎನ್ನುವುದನ್ನು ಗಮನಿಸಿದರೆ ಅವರು ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡ ಬರಹಗಾರ ಎಂಬುದು ವೇದ್ಯವಾಗುತ್ತದೆ.

ನವ್ಯ ಕಥಾಪರಂಪರೆಯ ಆತ್ಮಾವಲೋಕನದಲ್ಲೇ ಕುಬ್ಜನಾಗುತ್ತ, "ಕ್ಷುಲ್ಲಕ ದೈನಂದಿನ"ಗಳಲ್ಲೇ ತನ್ನ ಏನೋ ಆಗಬಹುದಾಗಿದ್ದ ಒಳಗಿನ ಬೆಂಕಿ ಆರಿಹೋಗುತ್ತಿದೆ ಎಂಬ ಹಳಸಲು ಹಪಹಪಿಕೆಯ ಸ್ವಗತಪಾಠವಾಗಿ ಬಿಡಬಹುದಾಗಿದ್ದ ಕತೆಯೊಂದು "ಕ್ರೈಂ ಡೈರಿ" ಕತೆಯಲ್ಲಿ ವಾಸ್ತವದೊಂದಿಗಿನ ಅನುಸಂಧಾನ ಸಾಧಿಸಿದೆ. ಹಾಗೆ ನೋಡಿದರೆ ಕೆಟ್ಟು ಹೋದ ಟಿವಿ ಮತ್ತು ಕನ್ಸೂಮರಿಸಂ ಕುರಿತೇ ಇರುವ ಕತೆಯಾದ "ಶಫಿ ಎಲೆಕ್ಟ್ರಿಕಲ್ಸ್" ಕೂಡ ವಾಸ್ತವದೊಂದಿಗಿನ ಅನುಸಂಧಾನದ ಸಾಧ್ಯತೆಗಳನ್ನು ಅರಸುವ ಕತೆಯೇ. ಈ ಅನುಸಂಧಾನವನ್ನು ಇಲ್ಲಿನ ಒಂದೊಂದು ಕತೆಯೂ ಕಂಡುಕೊಳ್ಳುವ ಭಿನ್ನವಿಭಿನ್ನ ಹಾದಿಗಳು ಮೋಡಿ ಮಾಡುವಂತಿವೆ. ಉದಾಹರಣೆಗೆ "ಚಿಟ್ಟೆ ಮತ್ತು ಸೆಲ್ವಿ" ಕತೆಯ ಸೆಲ್ವಿ ಅದನ್ನು ಕನಸುಗಳಲ್ಲಿ ಮತ್ತು ತನ್ನ ಬಾಲ್ಯದ (ಚಿಟ್ಟೆ ಹಿಡಿವ) ಸ್ಮೃತಿಗಳಲ್ಲಿ ಸಾಧಿಸಲು ಪ್ರಯತ್ನಿಸಿದರೆ, "ಮಾಯಾಕೋಲಾಹಲ"ದಲ್ಲಿ ಸೂರ್ಯೋದಯವನ್ನು ಕಾಣುವ ಸಂಭ್ರಮವನ್ನು ಮರಳಿ ತನ್ನ ಸಂವೇದನೆಗೆ ದಕ್ಕಿಸಿಕೊಳ್ಳುವ ಪ್ರಯತ್ನದಲ್ಲಿಯೇ ಅದನ್ನು ಸಾಧಿಸುವ ಆಶಾವಾದವಿದೆ. ಮೌನೇಶರ ಕೇಂದ್ರ ಪಾತ್ರಗಳಿಗೆ ತಮ್ಮ ವರ್ತಮಾನದ ಬಗ್ಗೆ ಕಟುವಾಗಿ, ನಿಷ್ಠುರವಾಗಿ, ವಿಮರ್ಶಾತ್ಮಕವಾಗಿ ನೋಡಿಕೊಳ್ಳುವ ಗುಣವಿದೆ. ಇದಕ್ಕೆ ವ್ಯಂಗ್ಯ, ವಿಡಂಬನೆ, ವೈನೋದಿಕ ಧಾಟಿ ಸಹಕರಿಸಿದೆ. ಆದರೆ ಇದು ನವ್ಯರಲ್ಲಿ ಅತಿರೇಕಕ್ಕೆ ಹೋದ ಆರೋಪಕ್ಕೆ ತುತ್ತಾದ ಗುಣವೇ. "ಕ್ರೈಂ ಡೈರಿ" ಮತ್ತು "ಶಫಿ ಎಲೆಕ್ಟ್ರಿಕಲ್ಸ್" ಕತೆಯ ನಿರೂಪಕ ಕೂಡ ಇದನ್ನು ಮಾಡುತ್ತಾನೆ, "ಫೋಟೋದೊಳಗೆ ಸಿಕ್ಕಿಹಾಕಿಕೊಂಡ ಮುಖ" ಕತೆಯ ನಿರೂಪಕಿಯೂ ಇದನ್ನು ಮಾಡುತ್ತಾಳೆ, "‘ದೊಡ್ಡಮನೆ’ ಪಾಪಮ್ಮ" ಕತೆಯ ನಿರೂಪಕನೂ ತನ್ನ ನೆರೆಹೊರೆಯ ವಿಚಾರ ಪ್ರಸ್ತಾಪಿಸುವಲ್ಲಿ ಇದನ್ನು ಮಾಡುತ್ತಾನೆ ಮತ್ತು "ಮಾಯಾಕೋಲಾಹಲ" ಕತೆ ಕೂಡ ನಮ್ಮ ಬದುಕಿನ ವರ್ತಮಾನದ ಅತಿರೇಕಗಳನ್ನು ವಿಡಂಬಿಸುತ್ತಲೇ ಸಾಗುತ್ತದೆ. ಆದರೆ ಕತೆಗಳ ಒಟ್ಟಾರೆ ಧ್ವನಿ ಅಷ್ಟಕ್ಕೇ ಸೀಮಿತವಾಗದೇ ಅದರಾಚೆಗೆ ಚಾಚಿಕೊಳ್ಳುವುದೇ ಈ ಕತೆಗಳ ವೈಶಿಷ್ಟ್ಯ.

"ಶ್ರದ್ಧಾಂಜಲಿ" ಕತೆ ನಿಜಕ್ಕೂ ಅತ್ಯಂತ ಆಪ್ತವಾಗಿ ಕಾಡುವ, ಬಹುಕಾಲ ನೆನಪಿನಲ್ಲಿ ಉಳಿಯುವ ಕತೆಗಳಲ್ಲೊಂದು. ಸಂಕಲನದ ಎಲ್ಲ ಕತೆಗಳಂತೆಯೇ ಈ ಕತೆಯಲ್ಲೂ ಮೌನೇಶ್ ಪ್ಲಾಟ್ ಕ್ರಿಯೇಟ್ ಮಾಡುವುದಿಲ್ಲ. ಇವರ ಪಾತ್ರಗಳು ಸ್ವತಂತ್ರವಾಗಿ ತಮ್ಮ ರೂಪುರೇಷೆ ಪಡೆದುಕೊಂಡು ನಳನಳಿಸುತ್ತವೆ. ಇಲ್ಲಿನ ಅಜ್ಜ, ಗೌರೀಕಾಕ, ಅವನ ರಾಜಕೀಯ ಆಕಾಂಕ್ಷೆಗಳು, ಮದುವೆ, ಈ ಎಲ್ಲದರ ಜೊತೆಜೊತೆಗೇ ಸಾಗುವ ಕಾಲಮಾನದ ಪಲ್ಲಟಗಳು, ಅಜ್ಜನ ಹೊಸ ಖಯಾಲಿಯ ಬಗ್ಗೆ ನಿರ್ಲಿಪ್ತ ನಿರೂಪಕನ ಧ್ವನಿಯಲ್ಲಿ ಸಿಗುವ ಚಿತ್ರ ಯಾವುದೂ ಒಂದು ಪೂರ್ವಯೋಜಿತ ಚೌಕಟ್ಟಲ್ಲ, ತಂತ್ರವಲ್ಲ, ತಾನು ಹೇಳಹೊರಟಿದ್ದು ಇದನ್ನೇ ಎಂದು ತಲುಪಬೇಕಾದ ಗಮ್ಯದ ಚಿಂತೆಗಳ ಹೊರೆಹೊತ್ತ ಪಯಣವಿದಲ್ಲ; ಜಯಂತರು ಎಲ್ಲೋ ಒಂದೆಡೆ ಹೇಳಿದಂತೆ ಲಗ್ಗೇಜಿಲ್ಲದ ಪ್ರಯಾಣ! ಆದರೆ ಗಮನಿಸಬೇಕಾದ್ದು, ಹೀಗೆ ಹೊರಟಾಗ ಕತೆಗಾರ ಕೆಲವೊಮ್ಮೆ ಎಲ್ಲಿಗೂ ತಲುಪುವುದೇ ಇಲ್ಲ! ಮತ್ತೆ ಕೆಲವೊಮ್ಮೆ ಮಾತ್ರ ಅಚಾನಕ್ ಎಂಬಂತೆ ಮುಕ್ತಿಧಾಮವನ್ನೇ ಕಂಡುಕೊಂಡು ಬಿಡುತ್ತಾನೆ!! ಹಾಗಾದಾಗಲೇ ಓ ಎಲ್ ನಾಗಭೂಷಣ ಅವರು ಹೇಳಿದಂತೆ ಕತೆಗಾರ ಬಿಡುಗಡೆಯನ್ನು ಪಡೆಯುವುದೂ, ಓದುಗ ಬಂಧನಕ್ಕೆ ಒಳಗಾಗುವುದೂ ನಡೆಯುತ್ತದೆ. ಆದರೆ ಜಸ್ಟ್ ಛಾನ್ಸ್ ಫ್ಯಾಕ್ಟರ್. ಉದಾಹರಣೆಗೆ "ಚಲಿಸಿ ಹೋ(ಗ)ದ ಚಹರೆಗಳು" ಕತೆಗೆ ಬಾಲ್ಯಕಾಲದ ನಾಯಿಯೊಂದರ ಕತೆ ಮತ್ತು ತತ್ಸಂಬಂಧಿ ಗೆಳೆಯನನ್ನು ಸಾಯುವ ಮುನ್ನ ಒಮ್ಮೆ ಕಂಡು ನಿಜ ಹೇಳಿಬಿಡಬೇಕೆಂಬ ತುಡಿತ - ಎರಡೂ ಸೇರಿಕೊಳ್ಳುವುದು ಸಹಜವಾಗಿ ಸೇರಿಕೊಂಡಂತೆ ಕಾಣಿಸದೆ ಸೇರಿಸಿದಂತೆ ಕಾಣಿಸುವುದು ಮತ್ತು "ಶಫಿ ಎಲೆಕ್ಟ್ರಿಕಲ್ಸ್" ಕತೆಯ ಟೀವಿ, ಕನ್ಸೂಮರಿಸಂ ಕುರಿತ ಅಚ್ಚರಿ ಇತ್ಯಾದಿಗಳಿಗೆ ಬಾಂಬು, ಭಯೋತ್ಪಾದನೆ, ಕೋಮುವಾದದ ಎಳೆ ಸೇರಿಕೊಳ್ಳುವುದು - ಇಂಪ್ರೂವೈಸೇಶನ್ ಅನಿಸುತ್ತದೆಯೇ ಹೊರತು ಅಚ್ಚುಕಟ್ಟಾಗಿ ಒದ್ದೆ ಮಣ್ಣಲ್ಲಿ ಕಲ್ಲು ಕೂತಂತೆ ಕೂತ ಭಾವ ತರುವುದಿಲ್ಲ. ಅಥವಾ ನನಗೆ ಹಾಗನಿಸಲು ನನ್ನವೇ ಕಾರಣಗಳಿರಬಹುದು. ನನಗೆ "ಚಲಿಸಿ ಹೋ(ಗ)ದ ಚಹರೆಗಳು" ಕತೆಯನ್ನು ಓದುವಾಗ ಪದೇ ಪದೇ ನೆನಪಾದುದು ಸಂದೀಪ ನಾಯಕರ ಹೆಸರಾಂತ ಕತೆ "ಕರೆ". ಅಲ್ಲಿಯೂ ಸಾವಿನ ನಿರೀಕ್ಷೆಯಲ್ಲಿರುವ ಒಬ್ಬ ಮುದುಕ ಸಾಯುವ ಮುನ್ನ ಒಮ್ಮೆ ಕಂಡು ಸಾಯುವ ಆಸೆಯಿಂದ ಯಾರನ್ನೋ ಕಾಯುತ್ತಿದ್ದಾನೆ, ಬರಹೇಳಿದ್ದಾನೆ. ತನಗೆ ಕರೆ ಬಂದಿದೆ ಮತ್ತು ತಾನು ಒಬ್ಬನಿಗೆ ಕರೆ ಕಳಿಸಿದ್ದಾನೆ; ನಡುವೆ ಕತೆಯಿದೆ, ಓದುಗನಿದ್ದಾನೆ. ಅಶೋಕ ಹೆಗಡೆಯವರ ಒಂದು ಕತೆಯಲ್ಲೂ ಇಂಥ ಮರಣಶಯ್ಯೆಯ ಚಿತ್ರವಿದೆ. "ಒಳ್ಳೆಯವನು" ಸಂಕಲನದ "ಕೈಹಿಡಿದವರು" ಕತೆ ಅದು.

"ಫೋಟೋದೊಳಗೆ ಸಿಕ್ಕಿಹಾಕಿಕೊಂಡ ಮುಖ" ಕತೆ ಗಮನಾರ್ಹವಾದ ಒಂದು ಕತೆ ಎಂದು ಅನಿಸುವುದು ಅದು ಚಿತ್ರಿಸುತ್ತಿರುವ ಆಧುನಿಕ ಮನುಷ್ಯನ ವಿಲಕ್ಷಣ ಮನಸ್ಥಿತಿಗಾಗಿ. ಇಲ್ಲಿಯೂ ಕ್ರೈಂ ಡೈರಿಯ ಪ್ರಸ್ತಾಪವಿದೆ, ಈ ವಿಲಕ್ಷಣ ಮನಸ್ಥಿತಿ ಅಥವಾ ಅದನ್ನು ಮನೋಧರ್ಮವೆಂದೇ ಕರೆಯಬೇಕೇನೊ, ಅದಕ್ಕೂ ಈ ಕ್ರೈಮ್‌ಗಳಿಗೂ ಯಾವುದೋ ನಂಟು ಇದ್ದೇ ಇದೆ ಎನಿಸುವಂತೆ. ಸಂಕಲನದ ಮೊದಲ ಕತೆ "ಕ್ರೈಂ ಡೈರಿ"ಯಲ್ಲೇ ಇಂಥ ಒಂದು ಉಲ್ಲೇಖವಿದೆ. ಟೀವಿಯ ಕಾರ್ಯಕ್ರಮದಲ್ಲಿ ಸಿಕ್ಕಿಬಿದ್ದವರಷ್ಟೇ ಕಾಣಿಸಿಕೊಳ್ಳುತ್ತಾರೆ. ಸಿಕ್ಕಿ ಬೀಳದ ಕ್ರಿಮಿನಲ್ಸ್ ಇದ್ದಾರೆ. ಅವರನ್ನು ಬಿಡಿ, ತಮ್ಮ ಕ್ರೈಮ್ ಎಂದು ಪ್ರಾಮಾಣಿಕವಾಗಿ ತಮಗೇ ಎಂದೂ ಅನಿಸಿದೇ ಇರುವಂಥ ನಿಷ್ಪಾಪಿ ಪಾಪಿಗಳೂ ಇದ್ದಾರೆ, ನನ್ನಂಥವರು, ನಿಮ್ಮಂಥವರು. ನಾವು ಯಾವತ್ತೂ ನಮ್ಮನ್ನು ಕಟಕಟೆಯಲ್ಲಿ, ನೇಣುಗಂಭದೆದುರು ನಿಲ್ಲಿಸಿಕೊಂಡಿಲ್ಲ. ಅಥವಾ, ನಮಗೆ ಯಾವತ್ತೂ ನಾವು ಮಾಡಬಾರದಿತ್ತು, ಆಡಬಾರದಿದ್ದು, ಹಾಗಾಗಬಾರದಿತ್ತು ಎನಿಸಿರಲಿಕ್ಕಿಲ್ಲ ಅಥವಾ ಅನಿಸಿದ್ದರೂ ಅದು ನಮ್ಮನ್ನು ಎಡೆಬಿಡದೆ ಕಾಡಿರಲಿಕ್ಕಿಲ್ಲ. ಮತ್ತೆ, ಅಂಥಾ ಪಾಪಪ್ರಜ್ಞೆಯಿಂದ ನರಳುವ ಸ್ಥಿತಿಯೊಂದು ನಮಗೆ ಬಂದುದೇ ಆದರೆ ಅದು ಆಗ ರೋಗ ಎನಿಸಿಕೊಳ್ಳುತ್ತದೆ ಎನ್ನುವುದು ನಮಗೆ ಗೊತ್ತಿದೆ ಕೂಡ. ನಾವು ಗಟ್ಟಿಯಾಗಲು, ಪ್ರಬುದ್ಧರಾಗಲು, ಬೆಳೆದವರಾಗಲು ಹೊರಟವರಲ್ಲವೆ ಮತ್ತೆ. ಕಳೆದುಕೊಂಡ ಸೂಕ್ಷ್ಮಸಂವೇದಿತ್ವ, ಸಂವೇದನೆ, ಭಾವಸ್ಪಂದನದ ಸಾಧ್ಯತೆ ಎಲ್ಲದರ ಬಗ್ಗೆ ನಮಗೆ ಹೆಮ್ಮೆ ಇರಬೇಕೆ, ಹಳಹಳಿಕೆ ಇರಬೇಕೆ ಎಂಬ ಪ್ರಶ್ನೆಗೆ ಖಚಿತ ಉತ್ತರವಿಲ್ಲದ ಸ್ಥಿತಿಯಲ್ಲಿ ನಾವಿರುವಾಗಲೇ ಈ ಕತೆಗಳು ಕಾಡುತ್ತವೆ. ಒಂದು ನಿರ್ದಿಷ್ಟ ಹಂತದಲ್ಲಿ ಚಂದ್ರು ಈ ಫೋಟೋದಲ್ಲಿ ಬಂದವನು ಮನೆಗೂ ಬಂದು ಕದ ತಟ್ಟಿದನೇ ಎಂಬಂತೆ ವರ್ತಿಸುವುದನ್ನು ಗಮನಿಸಬೇಕು. ಬದುಕಿನಲ್ಲಿ ಯಶಸ್ಸಿನ ಹೆಸರಿನಲ್ಲೇ ಮನುಷ್ಯ ಸಾಧಿಸುವ ಆ ಒಂದು ಹಂತವೇ ಈ ಒಂದು ರೋಗದ ಮೂಲವೇ ಅಥವಾ ಅದು (ಅದೇ) ಕ್ರೈಮ್ ಡೈರಿಯೇ ಎನ್ನುವುದು ಚಿದಂಬರ ರಹಸ್ಯದಂಥ ಪ್ರಶ್ನೆ. ನಮ್ಮ ವ್ಯಗ್ರ ಘಳಿಗೆಯನ್ನು ಹಾಗೇ ಕಾಪಿಟ್ಟುಕೊಂಡು ಸ್ವಸ್ಥ ಮನಸ್ಥಿತಿಯಲ್ಲಿ ಪ್ರಯೋಗಾಲಯಕ್ಕೆ ಕಳಿಸಿಕೊಟ್ಟು ನಾವು ನಾವೇ ಕನ್ನಡಿಯಲ್ಲಿ ನಮ್ಮ ನಮ್ಮ ರಿಪೋರ್ಟ್ ಓದಿಕೊಳ್ಳಬೇಕಾದ ಪ್ರಶ್ನೆ ಕೂಡ, ಉತ್ತರವಲ್ಲ.

"‘ದೊಡ್ಡಮನೆ’ ಪಾಪಮ್ಮ" ಹಾಗೂ "ಚಿಟ್ಟೆ ಮತ್ತು ಸೆಲ್ವಿ" ಕತೆಗಳು ಒಂದು ಸೀಮಿತ ಅರ್ಥದಲ್ಲಿ ವರ್ಗಸಂಘರ್ಷದ ಎಳೆಗಳನ್ನು ತಮ್ಮೊಡಲಲ್ಲಿ ಇರಿಸಿಕೊಂಡಿರುವ ಕತೆಗಳು. ಉಳಿದ ಕತೆಗಳೆಲ್ಲಾ ವ್ಯಕ್ತಿಗತ ನೆಲೆಯ ವಿವರ ಮತ್ತು ಕಥಾನಕದ ಚೌಕಟ್ಟು ಹೊಂದಿದ್ದೇ ಸಮಾಜಮುಖಿ ಧೋರಣೆಗಳನ್ನು ಕಾಣಿಸಿದರೆ ಈ ಎರಡು ಕತೆಗಳು ಒಂದು ವರ್ಗದ ಬಗ್ಗೆ ಮಾತನಾಡುತ್ತಿವೆ. ಹಾಗೆಯೇ "ಚಲಿಸಿ ಹೋ(ಗ)ದ ಚಹರೆಗಳು", "ಚಿಟ್ಟೆ ಮತ್ತು ಸೆಲ್ವಿ" ಮತ್ತು "ಮಾಯಾ ಕೋಲಾಹಲ" ಕತೆಗಳನ್ನು ಹೊರತು ಪಡಿಸಿದರೆ ಸಂಕಲನದ ಉಳಿದೆಲ್ಲಾ ಕತೆಗಳೂ ಉತ್ತಮ ಪುರುಷ ನಿರೂಪಣೆಯಲ್ಲೇ ಇವೆ. ಹಾಗೆಂದ ಮಾತ್ರಕ್ಕೆ ಈ ಎಲ್ಲಾ ಕತೆಗಳಲ್ಲೂ ಕತೆ ನಿರೂಪಕನದ್ದೇ ಎಂದಲ್ಲ. "‘ದೊಡ್ಡಮನೆ’ ಪಾಪಮ್ಮ" ಕತೆಯಲ್ಲಿ ಪಾಪಮ್ಮ ಕತೆ ಹೇಳುವವಳು, ನಿರೂಪಕನಲ್ಲ. ಹಾಗೆಯೇ "ಚಲಿಸಿ ಹೋ(ಗ)ದ ಚಹರೆಗಳು" ಮತ್ತು "ಮಾಯಾ ಕೋಲಾಹಲ" ಕತೆಗಳಲ್ಲಿ ಬರುವ ಗೌರೀಕಾಕ ಮತ್ತು ಶಂಕರಮೂರ್ತಿಯಿಂದಾಗಿ ಹೆಸರಿಗೆ ಪ್ರಥಮಪುರುಷ ನಿರೂಪಣೆಯಿದ್ದರೂ ಅವರೇ ಅಲ್ಲಿ ನಿರೂಪಕರೂ ಆಗಿರುವುದು ಗಮನಾರ್ಹ. ಹೀಗೆ ಸಂಕಲನದ ಬಹುತೇಕ ಎಲ್ಲಾ ಕತೆಗಳೂ ವ್ಯಕ್ತಿಗತ ನೆಲೆಯನ್ನೇ ಹೊಂದಿವೆ. ಈ ಮಾತಿಗೆ ಅಪವಾದವಾಗಿ ನಿಲ್ಲುವ ಕತೆಗಳು ಇವೆರಡು. ಪಾಪಮ್ಮ ತೆರೆದಿಡುವ ಕತೆಗೂ ಸೆಲ್ವಿಯ ಕತೆಗೂ ಸಾಮ್ಯತೆಗಳಿವೆ. ಆದರೆ ಅವರ ಸಾವಿನಲ್ಲಿ ಕಂಡುಬರುವ ದುರಂತ ಸಾಮಾಜಿಕ ಆಯಾಮವುಳ್ಳದ್ದು ಎಂದೇನಲ್ಲ. ಆದಾಗ್ಯೂ ಅವರ ನಿಜವಾದ ದುರಂತವಾಗಿರುವ ಬದುಕು ಏನಿದೆ, ಅದಕ್ಕೆ ಸಾಮಾಜಿಕ ಆಯಾಮಗಳಿವೆ. ಇದು ಈ ಎರಡೂ ಕತೆಗಳ ವೈಶಿಷ್ಟ್ಯ. ತುಂಬ ಹಿಂದೆ ಅನನ್ಯ ಕತೆಗಾರ ಕೇಶವ ಮಳಗಿಯವರು ಮಾತನಾಡುತ್ತ ಹೇಳಿದ್ದರು, ನಮ್ಮ ಹೆಚ್ಚಿನ ದಲಿತ ಸಂವೇದನೆಯ ಕತೆಗಳಲ್ಲಿ ಚಿತ್ರಿತಗೊಂಡ ದಲಿತರು ತಮ್ಮ ಬದುಕು ದುರಂತವೆಂದು ತಿಳಿದಿರುವ, ಅಂಥ ಅರಿವಿರುವ ಮತ್ತು ಹಾಗಾಗಿ ಬರೇ ಗೋಳನ್ನೇ ಅಭಿನಯಿಸುವ ದಲಿತರು. ಆದರೆ ನಿಜವಾದ ದಲಿತರಿಗೆ ತಮ್ಮದು ದುರಂತವೆಂಬ ಅರಿವಿರುವುದಿಲ್ಲ ಅಥವಾ ಇದ್ದರೂ ಅವರು ಹಾಗೆ ಬದುಕುತ್ತಿರುವುದಿಲ್ಲ. ಅವರ ದುರಂತವೆಂದರೆ ಅವರು ಅಂಥ ಬದುಕನ್ನು ಸಂಭ್ರಮದಿಂದಲೇ ಬದುಕುತ್ತಿರುತ್ತಾರೆ ಮತ್ತು ಅವರಿಗೇ ತಮ್ಮದು ದುರಂತವೆಂಬ ಅರಿವು ಬಾಧಿಸುತ್ತಿರುವುದಿಲ್ಲ ಎನ್ನುವುದೇ. ಆದರೆ ಕತೆಗಾರ ಪ್ರಾಜ್ಞನಾಗಿರುವುದರಿಂದ, ಎಜುಕೇಟೆಡ್ ಆಗಿರುವುದರಿಂದ ನಮಗೆ ಅವರ ಸಹಜ ಬದುಕನ್ನು ದುರಂತವೆಂಬಂತೆ ಕಟ್ಟಿಕೊಡುತ್ತಾನೆ ಮತ್ತು ಇದರಿಂದಾಗಿ ಅಂಥ ಕತೆಗಳು ವಾಸ್ತವದ ಚಿತ್ರಕೊಡಲು, ಪರಿಣಾಮಕಾರಿಯಾಗಲು ಸೋಲುತ್ತವೆ. ಬಹುಷಃ ದೇವನೂರ ಮಹದೇವ ಅವರೇ ಇದನ್ನು ಮೊದಲಿಗೆ ಗುರುತಿಸಿಕೊಂಡ, ಮೀರಿದ ಕತೆಗಾರ ಎನಿಸುತ್ತದೆ. (ಮಳಗಿಯವರ ಒಟ್ಟು ಮಾತಿನ ಗ್ರಹಿಕೆ ನನ್ನ ವೈಯಕ್ತಿಕ ಇತಿಮಿತಿಗಳ ಲೇಪ ಹೊಂದಿರುವುದರಿಂದ ಇಲ್ಲಿ ಅದನ್ನು ಹೀಗೆಯೇ ಕಾಣಿಸಿದ್ದೇನೆ). ಈ ಮಾತು ಏಕೆ ನೆನಪಾಯಿತೆಂದರೆ, ಮೌನೇಶ್ ಬಡಿಗೇರ್ ಚಿತ್ರಿಸಿರುವ ಈ ದುರಂತ ಬದುಕಿನ ಚಿತ್ರದಲ್ಲಿಯೂ ಮೆಲೊಡ್ರಾಮ ಇಲ್ಲ ಎನ್ನುವುದನ್ನು ಸೂಚಿಸುವುದಕ್ಕಷ್ಟೇ.

"ಮಾಯಾ ಕೋಲಾಹಲ" ಕತೆ ಈ ಸಂಕಲನಕ್ಕೆ ಹೆಸರು ನೀಡಿದ ಪುಟ್ಟ ಕತೆ. ನನಗೆ ಇಷ್ಟವಾಗದ ಒಂದೇ ಒಂದು ಕತೆಯಿದ್ದರೆ ಅದು ಇದೇ.

ಮೌನೇಶರ ಕತೆಗಳಲ್ಲಿ ಕಂಡು ಬರುವ ಇನ್ನೊಂದು ಪ್ರಮುಖ ವೈಶಿಷ್ಟ್ಯವೆಂದರೆ ಅವರು ಕನಸುಗಳನ್ನು, ಕಲ್ಪನೆಯನ್ನು ಒಂದಿನಿತೂ ಅಸಹಜವೆನ್ನಿಸದ ಹಂತದಲ್ಲಿ ಬಳಸಿಕೊಂಡು ಕತೆಗೆ ದಕ್ಕಿಸಿಕೊಡುವ ಲೀಪ್. ಒಮ್ಮೆ ಜಯಂತ್ ಕಾಯ್ಕಿಣಿಯವರು ಹೇಳಿದ್ದ ಮಾತು, ‘ನೀನು ಬರೆಯುವ ಕತೆ ನೀನು ಮಾತ್ರಾ ನೋಡಬಹುದಾದ ಕನಸಿದ್ದಂತೆ!’ ಮೌನೇಶರ ಹೆಚ್ಚಿನ ಕತೆಗಳು ಕನಸಿನಿಂದಲೇ ಎದ್ದು ಬಂದವೇ, ಅಥವಾ ಈ ಕತೆಗಳನ್ನು ನಾವು ಕನಸಿದೆವೇ ಎನ್ನಿಸಿದರೆ ಅಚ್ಚರಿಯಿಲ್ಲ. ಅಷ್ಟೂ ಅಚ್ಚುಕಟ್ಟಾಗಿ ಅವರ ಕತೆಗಳಲ್ಲಿ ಕನಸುಗಳು, ಕನಸುಗಳಲ್ಲಿ ಕತೆಗಳು ಕೂರುತ್ತವೆ.

ಅತ್ಯುತ್ತಮವಾದ ಒಂದಿಷ್ಟು ಕತೆಗಳನ್ನು ಯಾವ ಹಮ್ಮುಬಿಮ್ಮು ಬಿಗುಮಾನವಿಲ್ಲದೆ ನೀಡಿದ್ದಾರೆ ಮೌನೇಶ್. ಪ್ರಶಸ್ತಿ ಬಂದಾಗ ಅವರನ್ನು ಅಭಿನಂದಿಸಿದ ಗೆಳೆಯರಿಗೆ ಅವರು ಒಂದು ಮಾತು ಹೇಳಿದ್ದರು, ಇದೆಲ್ಲ ಬೇಡ ಕಣ್ರೊ, ಸಾಧ್ಯವಿದ್ದರೆ ನನ್ನ ಕತೆಗಳನ್ನೇ ಒಮ್ಮೆ ಓದಿ ನೋಡಿ, ನಿಮಗನಿಸಿದ್ದನ್ನು ಹೇಳಿ. ಅದೇ ನಿಜವಾದ ಅಭಿನಂದನೆ - ಎಂಬರ್ಥದ್ದು. ಅದು ಸರಿ. ಜೊತೆಗೆ, ಇದನ್ನು ಹೇಳದಿರುವುದು ಸಾಧ್ಯವಿಲ್ಲ; ಹೃತ್ಪೂರ್ವಕ ಅಭಿನಂದನೆಗಳು ಮೌನೇಶ್...
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Saturday, June 13, 2015

ಚಿತ್ರಗುಪ್ತನ ಕತೆಗಳು - ಹೇಳಲಾಗದ ಕತೆಗಳ ಕಥನ

ಕೆ ಸತ್ಯನಾರಾಯಣ ಅವರ ಕತೆ, "ನಿಮ್ಮ ಮೊದಲ ಪ್ರೇಮದ ಕಥೆ" ಬಹುಷಃ ಇವತ್ತಿಗೂ ನನ್ನಂತೆಯೇ ಇತರ ಬಹುಮಂದಿಯ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತಿರುವ ಒಂದು ಕತೆ. ಆ ಕತೆಯ ಮೋಹಕತೆ ಅದರ ಹೆಸರಿನಲ್ಲೇ ಕಾಣಿಸುತ್ತದೆ. ಅದಿರಲಿ, ಅಲ್ಲಿನ ಕಥನ ಕೂಡ ಅದ್ಭುತವಾಗಿದೆ. ಒಂದು ಊರು, ಅಲ್ಲಿ ಆಡುವ ನಾಟಕ, ಅದನ್ನು ಅಭಿನಯಿಸಲು ಸಜ್ಜಾಗುವ ನಟರ ಜೊತೆ ಜೊತೆಗೇ ಸಂಭ್ರಮಕ್ಕೆ ಸಜ್ಜಾಗುವ ಇಡೀ ಊರು, ಪುಟ್ಟರಾಜುವಿನ ಪ್ರೇಮ, ಮದುವೆ, ಪ್ರೀತಿಯ ಸಂಬಂಧಗಳ ನಿರ್ವಹಣೆಯಲ್ಲಿರುವ ವೈಚಿತ್ರ್ಯ ಮತ್ತು ಅದರಲ್ಲಿ ನಾವೂ ನೀವೂ ಕಂಡು ಕೊಳ್ಳುವ ಸಹಜಧರ್ಮ, ಹೀಗೆ ಅದೊಂದು ಅದ್ಭುತವಾದ ಕತೆ. ಅದೆಲ್ಲಕ್ಕಿಂತ ಮುಖ್ಯವಾಗಿ ಅದು ಕೆ ಸತ್ಯನಾರಾಯಣ ಅವರು ತಮ್ಮ ಓದುಗನನ್ನು ಸ್ವೀಕರಿಸುವ ನೆಲೆ, ಕತೆ ಹೇಳುವ ಮತ್ತು ಅದನ್ನು ತಾವು ಯಾರಿಂದ ಕೇಳಿದೆವೊ ಅವರಿಂದ ಅದನ್ನು ತಮ್ಮ ಓದುಗನಿಗೆ ದಾಟಿಸುವ "ಕತೆಗಾರ"ನ ಪ್ರಕ್ರಿಯೆಯಲ್ಲಿ ವಹಿಸುವ ನಿರೂಪಕನ ಪಾತ್ರದ ನೆಲೆ, ಇದಕ್ಕೆಲ್ಲ ಹಿನ್ನೆಲೆಯಾಗಿ ನಿಲ್ಲುವಂಥ ಒಂದು ಜೀವನ ದೃಷ್ಟಿ ಎಲ್ಲವೂ ನಮಗೆ ಒಡೆದು ಕಾಣಿಸುತ್ತದೆ ಎಂಬ ಕಾರಣಕ್ಕಾಗಿಯೂ ಇದೊಂದು ಮುಖ್ಯ ಕತೆ.

ಈಗ ಸತ್ಯನಾರಾಯಣ ಅವರ ಹೊಸ ಕಥಾಸಂಕಲನ, "ಚಿತ್ರಗುಪ್ತನ ಕತೆಗಳು" ಬಂದಿದೆ. ಇದಕ್ಕೆ ಕೆ ಪಿ ಸುರೇಶ್ ಅವರು ಬಹಳ ಆಳವಾದ ಗ್ರಹಿಕೆಯಿಂದ ಕೂಡಿದ, ವಿಶಿಷ್ಟ ವಿಶ್ಲೇಷಣೆಯ ಮುನ್ನುಡಿಯನ್ನು ಬರೆದಿದ್ದಾರೆ. ಇಲ್ಲಿ ತಮಗೆ ಇಷ್ಟವಾದದ್ದು, ಆಗದ್ದು ಯಾವುದು ಎಂದು ಹೇಳುವಲ್ಲಿ ಯಾವ ಮುಲಾಜನ್ನೂ ಇರಿಸಿಕೊಳ್ಳದೆ ಅವರು ಸಂಕಲನದ ಕತೆಗಳನ್ನು ವಿಮರ್ಶಿಸಿದ್ದಲ್ಲದೆ ಸತ್ಯನಾರಾಯಣರ ಕಥನ ಕೌಶಲದ ಪಟ್ಟು-ಮಟ್ಟುಗಳ ಬಗ್ಗೆ ಅಚ್ಚರಿದಾಯಕ ಸತ್ಯಗಳನ್ನು, ಮರ್ಮಗಳನ್ನು ಕೂಡ ಬಿಡಿಸಿಟ್ಟಿದ್ದಾರೆ. ತಮಗೆ ನಿಜವಾಗಿ ಅನಿಸಿದ್ದನ್ನಷ್ಟೇ ಹೇಳಲು ಯೋಗ್ಯವೆನಿಸಿದ ಶಬ್ದಗಳನ್ನು ಎತ್ತಿಕೊಳ್ಳುವ ಅವರು ಈ ಸಂಕಲನದ ಕತೆಗಳನ್ನು "ಇದು ಕನ್ನಡದ ಹೊಸ ದಾರಿಯ ಸುಳುಹು" ಎಂದು ಕರೆದು ವಿಶ್ಲೇಷಿಸಿರುವುದು ಗಮನಾರ್ಹವಾದ ಸಂಗತಿ. ಈ ಮುನ್ನುಡಿಯ ಜೊತೆಗೆ ಕೆ ರಘುನಾಥ್ ಅವರ ಅಕಾಡೆಮಿಕ್ ಶೈಲಿಯ ಒಂದು ಪ್ರವೇಶಿಕೆ ಕೂಡ ಇದ್ದು ಇದೂ ಕೂಡ ಕೆ ಸತ್ಯನಾರಾಯಣ ಅವರ ಹೊಸ ಕತೆಗಳ ವಿವಿಧ ಆಯಾಮಗಳನ್ನು ತೆರೆದಿಟ್ಟಿದೆ.

ಕಥಾಸಂಕಲನವನ್ನು ಓದಿದ ಬಳಿಕ ಕೆ ಪಿ ಸುರೇಶ್ ತಮ್ಮ ಮುನ್ನುಡಿಯಲ್ಲಿ ಹೇಳಿರುವುದನ್ನು ಬಿಟ್ಟು ಹೊಸದಾಗಿ ಹೇಳುವುದಕ್ಕೇನೂ ಉಳಿದಿಲ್ಲ ಎನಿಸುವುದು ಸಹಜವೇ. ಆದಾಗ್ಯೂ, ಹೊಸ ಬಗೆಯ ಕತೆಗಳು ಕನ್ನಡಕ್ಕೆ ಒದಗಿ ಬಂದಾಗ ಆ ಬಗ್ಗೆ ನಾಲ್ಕು ಮಂದಿ ಮಾತನಾಡುವುದು, ಚರ್ಚಿಸುವುದು, ಬರೇ ಚರ್ಚೆಗಾಗಿಯಾದರೂ ಕೆಲವನ್ನು ವಿರೋಧಿಸಿ, ಕೆಲವನ್ನು ವಿಸ್ತರಿಸಿ ಮಾತು ಮುಂದುವರಿಸುವುದು ಖಂಡಿತವಾಗಿ ಅಗತ್ಯ.

ಇಲ್ಲೊಂದು ಕಡೆ "ಆತ್ಮೀಯವೆನ್ನಿಸುವಾಗಲೂ ಅಷ್ಟು ದೂರ ಉಳಿಸಿಕೊಳ್ಳುವ ಬ್ರಾಹ್ಮಣರ ಮಾತಿನ ಶೈಲಿ" - ಎಂಬ ಮಾತನ್ನು ಕೆ ಪಿ ಸುರೇಶ್ ಹೇಳುತ್ತಾರೆ. ಈ ಮಾತು ನನ್ನನ್ನು ಸ್ವಲ್ಪ ಕಾಡುತ್ತಿತ್ತು. ಸತ್ಯನಾರಾಯಣರು ಹಿರಿಯರಾದರೂ ನನ್ನ ಜೊತೆ ಸ್ನೇಹಿತನಂತೆ ವ್ಯವಹರಿಸಿದವರು. ಸಾಕಷ್ಟು ಅಂತರಂಗದ ಮಾತುಕತೆ ಕೂಡ ನಮ್ಮ ನಡುವೆ ನಡೆದಿದ್ದಿದೆ. ಹಿರಿಯರೂ, ಅತ್ಯುನ್ನತ ಸ್ಥಾನಮಾನದಲ್ಲಿರುವವರೂ ಆಗಿದ್ದಾಗ್ಯೂ ನನ್ನೊಂದಿಗೆ ಸಮವಯಸ್ಕರಂತೆಯೇ ಒಂದು ಸ್ನೇಹದ ಪಾತಳಿಯಲ್ಲಿ ವ್ಯವಹರಿಸಿದ್ದಿದೆ. ಈಗ ಇದ್ದಕ್ಕಿದ್ದಂತೆ ಇದು "ಆತ್ಮೀಯವೆನ್ನಿಸುವಾಗಲೂ ಅಷ್ಟು ದೂರ ಉಳಿಸಿಕೊಳ್ಳುವ ಬ್ರಾಹ್ಮಣರ ಮಾತಿನ ಶೈಲಿ" ಯೇ ಎಂಬ ಪ್ರಶ್ನೆಯೆದುರು ನಿಲ್ಲುವುದು ನನಗಂತೂ ಎದೆಯೊಡೆಯುವ ಸಂಗತಿ.

ಕೆ ಪಿ ಸುರೇಶ್ ಅವರ ಅನುಭವದ ಮಾತಿಗೆ ನನ್ನಲ್ಲಿ ಬದಲಿಲ್ಲ. ಅವರ ಹೆಚ್ಚಿನ ಅನ್ನಿಸಿಕೆಗಳನ್ನು ನಾನೂ ಒಪ್ಪುತ್ತೇನೆ. ಆದರೆ ಇದು ಮಾತ್ರ ಸ್ವಲ್ಪ ಭಿನ್ನ ಬಗೆಯ ಚಿಂತನೆಗೆ ಹಚ್ಚಿತು. ಒಂದು ಸೀಮಿತ ಸ್ತರದಲ್ಲಿ ಹೇಳುವುದಾದರೆ, ನಮ್ಮ ನಮ್ಮ ಮಾತು-ಸ್ನೇಹ-ವ್ಯವಹಾರ ಬೇರೆ, ಸಾಹಿತ್ಯಿಕ ರಚನೆಯಲ್ಲಿ ಕಾಣಿಸಿಕೊಳ್ಳುವ ಆತ್ಮೀಯತೆಯೇ ಬೇರೆ. ಆದರೆ ಸಾಹಿತಿ ಮತ್ತು ವ್ಯಕ್ತಿ ಒಬ್ಬನೇ ಕೂಡ ಹೌದು. ವ್ಯಕ್ತಿತ್ವದ ಛಂದಸ್ಸೇ ಆತನ ರಚನೆಯಲ್ಲೂ ಒಡಮೂಡುವುದು ಅನಿವಾರ್ಯ ಎನ್ನುವುದನ್ನು ಒಪ್ಪುತ್ತಲೇ ಇಲ್ಲೊಂದು ಭಿನ್ನತೆ ಇದೆ ಎನ್ನುವುದನ್ನೂ ಕಂಡುಕೊಳ್ಳಬೇಕು. ಅಂದರೆ, ನನ್ನ ಓದುಗ ಯಾರು ಎಂದು ನಾನು ಭಾವಿಸಿಕೊಂಡಿರುತ್ತೇನೆ ಎನ್ನುವುದರ ಮೇಲೆ ಅದು ನಿಂತಿರುತ್ತದೆ. ಉದಾಹರಣೆಗೆ, ವಸುಧೇಂದ್ರ ತಮ್ಮ ಕತೆಗಳನ್ನು ತಾವು ತಾಯಿಗೆ ಹೇಳುತ್ತಿದ್ದೇನೆ ಎಂದುಕೊಂಡು ಬರೆಯುತ್ತಾರಂತೆ. ಕಾಗಿನೆಲೆಯವರು ಕೂಡ ತಮ್ಮ ಓದುಗ ಯಾರು ಎನ್ನುವ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಒಂದಷ್ಟು ಕಾಲ ಪಿ ಲಂಕೇಶ್ ತಮ್ಮ ಸಂಚಿಕೆಯ ಟೀಕೆ-ಟಿಪ್ಪಣಿಗಳನ್ನೆಲ್ಲ ನಿಮ್ಮಿ ಎಂಬ ಹುಡುಗಿಯನ್ನೇ ಉದ್ದೇಶಿಸಿ ಬರೆದಿದ್ದೂ ಉಂಟು. ಆದರೆ ಹೆಚ್ಚಿನವರಿಗೆ ಓದುಗ ಎಂಬುದು ಸಮಷ್ಠಿಯೇ ಹೊರತು ವ್ಯಕ್ತಿಯಲ್ಲ. ಹೆಚ್ಚಿನವರಿಗೆ ಮತ್ತು ಹೆಚ್ಚಿನ ಸಂದರ್ಭದಲ್ಲಿ ಎಂದು ಹೇಳಬೇಕು. ಯಾಕೆಂದರೆ, ಎಲ್ಲರಿಗೂ ಕೆಲವೊಂದು ಸಂದರ್ಭದಲ್ಲಿ ಈ ಓದುಗ ಸಮಷ್ಠಿಯಿಂದ ಆಯ್ದ ಕೇವಲ ವ್ಯಕ್ತಿಯಾಗಿಯೂ, ನಿರ್ದಿಷ್ಟ ವ್ಯಕ್ತಿಯಾಗಿಯೂ ಆವಿರ್ಭವಿಸುವುದು ಇದ್ದೇ ಇರುತ್ತದೆ.

ಹೀಗೆ ಎಲ್ಲೋ ಕೆಲವೆಡೆ ಅದು ವ್ಯಕ್ತಿ ಕೂಡ ಹೌದು. ಬರೆಯುವ ಸಂಭ್ರಮವನ್ನು ಅನುಭವಿಸಿದವರಿಗೆಲ್ಲ ಗೊತ್ತಿರುವ ಈ ಮಲ್ಟಿ ಶಿಫ್ಟ್ ಏನಿದೆ, ಅದೇ ಈ ಆತ್ಮೀಯವೆನ್ನಿಸುವಾಗಲೂ ಅಷ್ಟು ದೂರ ಉಳಿಸಿಕೊಳ್ಳುವ ಒಂದು ಶೈಲಿಗೆ ಕಾರಣವಾಗುತ್ತದೆ ಎಂದು ನಾನು ಅಂದುಕೊಂಡಿದ್ದೇನೆ. ಅಂದರೆ, ನಿಮ್ಮ ಓದುಗ ವೈಯಕ್ತಿಕವಾಗಿ ನಿಮಗೆ ಒಂದಷ್ಟು ತೀರಾ ಗೊತ್ತಿರುವ ವ್ಯಕ್ತಿ. ಎಲ್ಲರೂ ಯಕಃಶ್ಚಿತ್ ಮನುಷ್ಯರೇ ಆಗಿರುವುದರಿಂದ ಎಂದಿಟ್ಟುಕೊಳ್ಳಿ. ಆದರೆ, ಒಂದಷ್ಟು ತೀರಾ ಅಪರಿಚಿತ, ಅನೂಹ್ಯ ಮತ್ತು ಗೊತ್ತಿಲ್ಲದ "ವಿಚಾರ" ಕೂಡ ಹೌದು. ಹಾಗಾಗಿ ಅವನ ಎದುರು ಒಬ್ಬ ಬರಹಗಾರನಿಗೆ ನಗ್ನನಾಗಿ ನಿಲ್ಲಲು ಇಷ್ಟ ಮತ್ತು ಕಷ್ಟ. ಆದರೆ ಮೊದಲೇ ಹೇಳಿರುವಂತೆ ಒಬ್ಬ ಬರಹಗಾರ ಖಾಸಗಿ ವ್ಯಕ್ತಿಯಾಗಿ ಮತ್ತು ಸಾಹಿತಿಯಾಗಿ ಬೇರೆ ಬೇರೆಯಾಗಿರುವುದಿಲ್ಲ ಎನ್ನುವ ಮಾತು ಕೂಡ ನಿಜವೇ. ಹಾಗಾಗಿ ವೈಯಕ್ತಿಕವಾಗಿ ನನಗೆ ಸತ್ಯನಾರಾಯಣರ ಆತ್ಮೀಯತೆ, ಪಾರದರ್ಶಕತೆ ಅನುಭವಿಸಿರುತ್ತ ಅದು ಆತ್ಮೀಯವೆನ್ನಿಸುವಾಗಲೂ ಅಷ್ಟು ದೂರ ಉಳಿಸಿಕೊಳ್ಳುವ ಬ್ರಾಹ್ಮಣ ಶೈಲಿ ಎಂದುಕೊಂಡು ಬಿಟ್ಟರೆ ಎದೆಯೊಡೆಯುತ್ತದೆ. ಬಹುಷಃ ಹಾಗಾಗಿಯೇ ಕೆ ಪಿ ಸುರೇಶ್ ಅವರ ಮಾತು ಸ್ವಲ್ಪ ಕಾಡಿತು.

ಮಾಸ್ತಿಯವರ ಕತೆಗಳನ್ನು ಓದುವಾಗಲೂ ನನ್ನನ್ನು ಅದೇ "ಬ್ರಾಹ್ಮಣ ಶೈಲಿ" ಕಾಡುತ್ತದೆ. ಮಾಸ್ತಿ ಓದುಗರೊಂದಿಗೆ ಅಷ್ಟೆಲ್ಲ ಮಾತನಾಡುತ್ತ ಕತೆ ಸುರು ಹಚ್ಚಿಕೊಂಡರೂ, ಓದುಗರ ಜೊತೆ ಎರಡು ಮಾತನ್ನಾಡಿ ಮುಗಿಸಿದರೂ ಅವರು ಎಲ್ಲೋ ಗೆರೆಯಾಚೆಗೇ ನಿಂತಂತಿರುತ್ತದೆ. ತೇಜಸ್ವಿ ಥರ ದಿನವೂ ಭೇಟಿಯಾಗುವ ನಮ್ಮೂರಿನ ಗೆಳೆಯನಂತಾಗುವುದೇ ಇಲ್ಲ. ಲಂಕೇಶ್ ಥರ ಅದೂ ಇದೂ ಬುದ್ಧಿ ಹೇಳುವ ಮೇಷ್ಟ್ರು ಕೂಡ ಆಗುವುದಿಲ್ಲ.

ಇಲ್ಲಿಯೇ ಹೆನ್ರಿ ಮಿಲ್ಲರ್ ಬಗ್ಗೆ ಸ್ವತಃ ಜಾರ್ಜ್ ಆರ್ವೆಲ್ ಹೇಳಿರುವ ಮಾತುಗಳನ್ನೂ ಗಮನಿಸಬೇಕು.

"Read him for five pages, ten pages, and you feel the peculiar relief that comes not so much from understanding as from being understood. "He knows all about me," you feel; "he wrote this specially for me.""

ಪ್ರತಿಯೊಬ್ಬ ಓದುಗನಿಗೂ ಒಂದಲ್ಲಾ ಒಂದು ಪುಸ್ತಕ ಓದುವಾಗ ಆಗಿಯೇ ಇರುವ ಅನುಭವವಿದು. ಕೃತಿಕಾರ ತನ್ನ ಬಗ್ಗೆಯೇ ಬರೆದಿದ್ದಾನೆ, ಇದು ತನ್ನದೇ ಕತೆ, ಈ ಸಂವೇದನೆಗಳೆಲ್ಲವೂ ನನ್ನವೇ ಎನಿಸದೇ ಇರುವ ಓದುಗ ಯಾರೂ ಇರಲಿಕ್ಕಿಲ್ಲ. ಸಾಹಿತ್ಯ ನಮ್ಮದಾಗುವ ರೀತಿಯೇ ಇದು. ಹೀಗಾಗಿಯೇ ಸತ್ಯನಾರಾಯಣರು ನಮ್ಮ ಮೊದಲ ಪ್ರೇಮದ ಕತೆಯನ್ನು ನಮಗೇ ಹೇಳಬಲ್ಲ ಕತೆಗಾರ ಆಗುವುದು ಸಾಧ್ಯವಾಗುವುದು ಕೂಡ. ಇದಕ್ಕೆ ಅನನ್ಯ ಪ್ರೀತಿ ಇರಬೇಕಾಗುತ್ತದೆ. ಓದುಗನ ಜೊತೆ ಅಂತರಂಗದ ಸ್ನೇಹಿತನೊಂದಿಗೆ ಮಾತ್ರ ಇರಬಹುದಾದ ಒಂದು ಬಗೆಯ ತಾದ್ಯಾತ್ಮ ಸಾಧ್ಯವಾಗಬೇಕಾಗುತ್ತದೆ. ಆದರೆ ಇದು ಎಲ್ಲ ಸಂದರ್ಭದಲ್ಲಿಯೂ ಸಾಧ್ಯವಾಗುತ್ತದೆ ಎನ್ನುವಂತಿಲ್ಲ. ನಾವು ಬದುಕುತ್ತಿರುವ ಕಾಲ ಅದಕ್ಕೆ ಅಷ್ಟು ಪೂರಕವಾಗಿರುವಂತೆಯೂ ಕಾಣಿಸುವುದಿಲ್ಲ. ಆಗ ಸೂಕ್ಷ್ಮ ಸಂವೇದಿ ಲೇಖಕನಾದವನು ಹಲವು ಬಗೆಯ ಇರಿಸು-ಮುರಿಸುಗಳನ್ನೆದುರಿಸಬೇಕಾಗುತ್ತದೆ.

"ಓದುಗರೊಡನೆ..." ಎಂದು ತೊಡಗುವ ಸತ್ಯನಾರಾಯಣರ ಮಾತುಗಳು ತೊಡಗುವುದೇ ಹೀಗೆ:

"ಕೆಲವು ತಿಂಗಳುಗಳ ಹಿಂದೆ ಒಂದು ದಿನ ಹೀಗಾಯಿತು. ನಂತರ ಮತ್ತೆ ಮತ್ತೆ ಹೀಗಾಗಲು ಶುರುವಾಯಿತು.

" ಬರವಣಿಗೆ ನನ್ನ ಸ್ವಭಾವದ ಒಂದು ಮುಖ್ಯ ಭಾಗವಾದರೂ ನಾನು ಬರವಣಿಗೆಯಲ್ಲೂ, ಓದುಗರಿಂದಲೂ ಕೆಲ ಮುಖ್ಯ ಸಂಗತಿಗಳನ್ನು/ಸತ್ಯಗಳನ್ನು ಮುಚ್ಚಿಡುತ್ತಿರುವುದು ನನಗೇ ಗೊತ್ತಿದ್ದು ಕೂಡ ನಿಸ್ಸಹಾಯಕನಾಗಿದ್ದೆ. ಏನಾದರೂ ಸರಿ ಇದನ್ನು ಬರವಣಿಗೆಯಲ್ಲಿ ದಾಖಲಿಸಲೇಬೇಕು, ಎದುರಾಗಲೇ ಬೇಕು ಎಂದು ನಿರ್ಧರಿಸಿ ಕುಳಿತುಕೊಂಡರೆ, ಇಂತಹ ಸಂಗತಿಗಳನ್ನು ನಾನು ನನ್ನಿಂದಲೂ ಮುಚ್ಚಿಡಲು ಪ್ರಯತ್ನಿಸುತ್ತಿರುವುದರ ಅರಿವಾಯಿತು. ಆಯ್ತು, ಈಗ ಬರೆಯುತ್ತಿರುವುದನ್ನು ಯಾರಿಗೂ ತೋರಿಸುವುದು ಬೇಡ, ಎಲ್ಲೂ ಪ್ರಕಟಿಸುವುದು ಬೇಡ, ಬರೆದು ಮುಗಿಸಿದ ತಕ್ಷಣವೇ ಹರಿದು ಹಾಕಿಬಿಡುವುದು ಎಂದು ನನಗೆ ನಾನೇ ಪದೇ ಪದೇ ಹೇಳಿಕೊಂಡರೂ ಒಂದೆರಡು ಸಾಲುಗಳನ್ನು ಕೂಡ ನನಗೆ ಬರೆಯಲು ಸಾಧ್ಯವಾಗಲಿಲ್ಲ. ನಾನೇ ನನ್ನ ಬರವಣಿಗೆಯ ವಸ್ತುವಿನಲ್ಲಿ, ಶೈಲಿಯಲ್ಲಿ, ಓಘದಲ್ಲಿ ಸಿಕ್ಕಿ ಹಾಕಿಕೊಂಡಿರಬಹುದೆಂಬ ಭಾವನೆ ಮೂಡಿ ನನ್ನನ್ನು ಕಿತ್ತು ತಿನ್ನಲು ಪ್ರಾರಂಭಿಸಿತು."

ಬಹುಷಃ ಒಬ್ಬ ಕತೆಗಾರನಿಗೆ ಕೆಲವೊಂದು ಕತೆಗಳನ್ನು ಅವು ಎಷ್ಟೇ ಆಪ್ತವಾಗಿದ್ದರೂ, ಎಷ್ಟೇ ಸಮೃದ್ಧವಾಗಿದ್ದರೂ, ಎಷ್ಟೇ ಚೆನ್ನಾಗಿ ಹೇಳಬಲ್ಲವನಾಗಿದ್ದರೂ, ಹಾಗೆಲ್ಲ ಆಗಿರುವುದರಿಂದಲೇ ಅವನ್ನು ಹೇಳುವುದು ಸಾಧ್ಯವಿಲ್ಲ ಕೂಡ ಎಂಬಂಥ ಪರಿಸ್ಥಿತಿ ಎದುರಾಗುವುದು ಕೂಡ ಸಹಜವೇ. ಆಗ ಅವುಗಳನ್ನು ಹೇಳುವ ಹೊಸ ವಿಧಾನವನ್ನು ಅವನು ಆವಿಷ್ಕರಿಸಿಕೊಳ್ಳಲೇ ಬೇಕಾಗುತ್ತದೆ. ಕತೆಗಾರನಿಗೆ ಗೊತ್ತಿರುವ ಕತೆಗಳನ್ನು ಹೇಗಾದರೂ ಸರಿ, ಹೇಳದೇ ವಿಧಿಯಿಲ್ಲ. ಅಂಥ ಹೊಸ ಹೊಸ ವಿಧಾನಗಳಲ್ಲಿ ಕಾವ್ಯಕ್ಕೆ ಹತ್ತಿರವಾದ ಬಗೆಯಲ್ಲಿ, ಅನೂಹ್ಯತೆಯನ್ನುಳಿಸಿಕೊಂಡು, ಅಬ್ಸ್ಟ್ರಾಕ್ಟ್ ವಿಧಾನದಲ್ಲಿ ಹೇಳುವುದೂ ಒಂದು. ವಾಸ್ತವಕ್ಕೆ ಮೀರಿದ ವಿವರಗಳನ್ನು, ಅತೀಂದ್ರಿಯ ಅನುಭವಗಳನ್ನು, ಫ್ಯಾಂಟಸಿಯನ್ನು, ನಿಜವೋ ಭ್ರಮೆಯೋ ಸ್ಪಷ್ಟವಿಲ್ಲದ ಘಟನಾವಳಿಗಳನ್ನು ತರುವುದು ಒಂದು. ಭಾಷೆಯನ್ನು ಹಲವು ಸ್ತರಗಳಲ್ಲಿ ವಿಭಿನ್ನ ಅರ್ಥ ಸ್ಫುರಿಸುವಂತೆ ಜೋಡಿಸುತ್ತ ನಿರೂಪಣೆಯನ್ನು ಹೆಣೆಯುವುದು ಒಂದು. ಇಲ್ಲಿ ಅರ್ಥಕ್ಕಿಂತ, ಕತೆಗಿಂತ, ಕಾರ್ಯಕಾರಣ ತರ್ಕಕ್ಕಿಂತ ಭಾವವೇ ಹೆಚ್ಚು ಮುಖ್ಯವಾಗುತ್ತದೆ, ಭಾವ ಓದುಗನಲ್ಲಿ ಹುಟ್ಟಿಸುವ ಸಂವೇದನೆಗಳು ಮುಖ್ಯವಾಗುತ್ತವೆ, ಒಟ್ಟು ಸಂವಹನ ಈ ಲಯದಲ್ಲಿ ಸಫಲಗೊಳ್ಳುವುದೇ ಮುಖ್ಯವಾಗುತ್ತದೆ. ಸತ್ಯನಾರಾಯಣರ ಇಲ್ಲಿನ ಹೆಚ್ಚಿನ ಕತೆಗಳಲ್ಲಿರುವ ಹೊಸತನ ಇದೇ.

ಇಲ್ಲಿನ ಕೆಲವು ಕತೆಗಳನ್ನಂತೂ ಹೀಗಲ್ಲದೇ ಬೇರೆ ರೀತಿ ಹೇಳುವುದಕ್ಕೆ ಸಾಧ್ಯವೇ ಇರಲಿಲ್ಲ ಎಂಬಂತಿವೆ. ನಮ್ಮ ಗಮನ ಸೂಕ್ಷ್ಮವಾಗಿ ಹರಿಯಬೇಕಿರುವುದು ಇಲ್ಲಿಯೇ. ಈ ಕತೆಗಳಲ್ಲಿರುವ ಅನುರಣನ ಶಕ್ತಿ ವಿಶಿಷ್ಟವಾಗಿದೆ. ಈ ಕತೆಗಳೆಲ್ಲ ಒಂಥರ ಕವನಗಳಂತೆ ಪುಟ್ಟದಾಗಿದ್ದರೂ ಓದಿಗೆ ಹೆಚ್ಚು ಗಹನವಾದ ಬಗೆಯಲ್ಲಿ ತೆರೆದುಕೊಳ್ಳುವ ಕತೆಗಳು. ಇವುಗಳಲ್ಲಿರುವ ಅನೂಹ್ಯತೆ, ಹೌದೋ ಅಲ್ಲವೋ ಎಂಬಂತೆ ಅವು ಕಾಣಿಸುವ ಹೊಳಹುಗಳು, ಯಾವುದನ್ನೂ ಇದಂಇತ್ಥಂ ಎಂಬಂತೆ ಹೇಳದೆ ಬಹಳಷ್ಟನ್ನು ಉಳಿಸಿಬಿಡುವ ಅಪೂರ್ಣತೆಯೇ ಈ ಕತೆಗಳ ನಿಜವಾದ ಶಕ್ತಿ. ಭಾಷೆ ಮತ್ತು ನಗು, ಸಾವು ಬಲ್ಲ ನೋಟ, ಕಂಡು ಕೇಳದ ಶಬ್ದ, ಜೀವಾವಧಿ ಶಿಕ್ಷೆ, ಸ್ವಾಮಿ ಮತ್ತು ನಾಯಿ, ಮುಟ್ಟು, ಯಕ್ಷ ಪ್ರಶ್ನೆ, ೧೨-೦೫-೧೯೬೨, ದಾಟದ ಮೂರು, ಹೊಸ ಉದ್ಯೋಗ, ಬಣ್ಣ ಮತ್ತು ಬಣ್ಣ ಇಲ್ಲಿ ಉಲ್ಲೇಖನೀಯ. ಸತ್ಯನಾರಾಯಣ ಅವರು ಇದುವರೆಗಿನ ಶೈಲಿ ಬಿಟ್ಟುಕೊಟ್ಟು ಈ ಬಗೆಯ ಕತೆಗಳಿಗೆ ತೆರೆದುಕೊಂಡಿದ್ದೇ ಅವರ ಪ್ರಯೋಗಶೀಲ ಸಾಹಸ ಮತ್ತು ಅದರ ಸಾಫಲ್ಯದ ಬಗ್ಗೆ ಮೆಚ್ಚುಗೆಯನ್ನು ಮೂಡಿಸುವ, ಅಂಥ ರಿಸ್ಕ್ ತೆಗೆದುಕೊಂಡ ಅವರ ದಿಟ್ಟತನದ ಬಗ್ಗೆ ಅಭಿಮಾನ ಹುಟ್ಟಿಸುವ ಸಂಗತಿಯಾಗಿದೆ.

ಹೀಗಿದ್ದೂ ಅಲ್ಲಲ್ಲಿ ಅವರ ಹಳೆಯ ಶೈಲಿ ಇಣುಕುತ್ತಿರುವುದು ಕೂಡ ಸತ್ಯ. ದಾಂಪತ್ಯದ ಬಗ್ಗೆ ಬರೆದಾಗಲೆಲ್ಲ ಒಂಥರಾ ಹಳೆಯ ಕತೆ/ಲೇಖನಗಳ ಛಾಯೆ ಕಂಡಂತಾಗುತ್ತದೆ. ಲೋಕಾಭಿರಾಮದ ಮಾತುಕತೆಯ ಶೈಲಿ ಕಾಣಿಸಿಕೊಂಡಾಗಲೂ ಮತ್ತೆ ಹಳೆಯ ಸತ್ಯನಾರಾಯಣರೇ ಕಾಣಿಸಿಕೊಂಡಂತಾಗುತ್ತದೆ. ಬಹುಷಃ ಇಲ್ಲಿನ ಕೆಲವು ಕತೆಗಳನ್ನಾದರೂ ("ವಾಸನೆಯ ಸುವರ್ಣ ಜಯಂತಿ","ಪಾತ್ರ, ನಟ ಮತ್ತು ನಿಜ","ವೈಶಂಪಾಯನದಲ್ಲಿ ಪಾಲು", "ಕೃತಜ್ಞತಾ ಕಲ್ಯಾಣ " ಮತ್ತು "ನಿಮಗೆ ಮಾತ್ರ ಕಥೆ ಹೇಳೋಲ್ಲ") ಕೆ ಸತ್ಯನಾರಾಯಣ ಅವರು ತಮ್ಮ ಹಳೆಯ ವಿಧಾನದಲ್ಲಿಯೇ ಹೇಳಬಹುದಾಗಿತ್ತು, ಹೇಳಿದ್ದರೂ ವ್ಯತ್ಯಾಸವಾಗುತ್ತಿರಲಿಲ್ಲ ಎನಿಸುತ್ತದೆ. ಅಂದರೆ ಅವುಗಳನ್ನು ಹೇಳಬೇಕಿದ್ದುದೇ ಆ ವಿಧಾನದಲ್ಲಿ ಎಂದೇನೂ ಅಲ್ಲ. ಬಹುಷಃ ಆ ವಿಧಾನದಲ್ಲಿಯೇ ಅವು ಹೆಚ್ಚು ಯಶಸ್ವಿಯಾಗುತ್ತಿದ್ದವು ಎಂದು ಖಂಡಿತವಾಗಿಯೂ ನನಗೆ ಅನಿಸಿದೆ. ಹೀಗೆಲ್ಲ ಅನಿಸಿದ್ದರಿಂದಲೇ ಸ್ಪಷ್ಟವಾಗುವ ಸತ್ಯವೆಂದರೆ ಈ ಹೊಸ ಶೈಲಿ ಎಲ್ಲಾ ಕತೆಗಳನ್ನೂ ಹೇಳಬಹುದಾದ ಪಾತಳಿಯಲ್ಲ ಎನ್ನುವುದು. ಇದು ಕಾವ್ಯಕ್ಕೆ ಹತ್ತಿರವಾದ, ಭಾಷೆಯಲ್ಲಿ ವ್ಯಕ್ತವಾದುದಕ್ಕಿಂತಲೂ ಹೆಚ್ಚಿನದನ್ನು ಭಾಷೆಯ ಮೂಲಕವೇ ಸಾಧಿಸಬಯಸುವ ವಿಶಿಷ್ಟ ಕತೆಗಳಿಗಷ್ಟೇ ಅಚ್ಚುಕಟ್ಟಾಗಿ ಹೊಂದುವ ಶೈಲಿ.

Father's Day, ಸಾವಿನ ಬಣ್ಣ, ದೃಷ್ಟಿ - ಅದೃಷ್ಟ, ಗುಟ್ಟೇ ಇರಬಾರದು ಸ್ವಾಮಿ, ಶಿವಂಗಿ ಸ್ವಾಮಿ, ಲೇಖಕನ ರಾಜೀನಾಮೆ, ಶೀಲವಂತರ Affidavit ಕತೆಗಳು ಒಂದು ಬಗೆಯ ಅಸಂಗತ ಕ್ರಿಯೆ, ಕಥಾನಕದ ನಡೆ, ವಿಚಿತ್ರ ವಸ್ತುವಿನಿಂದ ರಂಜಿಸುತ್ತಲೇ ಗಹನವಾದ ವಿಚಾರಗಳತ್ತ ನಮ್ಮ ಮನಸ್ಸು ಹರಿಯುವಂತೆ ಮಾಡುತ್ತವಾದರೂ ಇಲ್ಲಿ ವೈಚಾರಿಕತೆ, ತರ್ಕ ಮತ್ತು ಪ್ರಜ್ಞಾಪೂರ್ವಕ ನಿಲುವು ಎದ್ದು ಕಾಣುವುದರಿಂದ ಒಂಥರಾ ಝೆನ್ ಕತೆಗಳನ್ನು ಓದುತ್ತಿರುವ ಅನುಭವವಾಗುತ್ತದೆ.

ಇಲ್ಲಿನ ಎಲ್ಲ ಕತೆಗಳೂ ನನಗೆ ಇಷ್ಟವಾದವು. ಕೆಲವೇ ಕೆಲವು ಕತೆಗಳಲ್ಲಿ ಈ ಶೈಲಿಗೆ ಒಗ್ಗದ ವಸ್ತು-ಹರಹು ಇದ್ದು ಅವುಗಳನ್ನು ಈ ಸಂಕಲನದಲ್ಲಿ ಸೇರಿಸದೇ ಇದ್ದಿದ್ದರೆ ಒಳ್ಳೆಯದಿತ್ತು ಎಂದೂ ಅನಿಸಿತು. ಆ ಬಗ್ಗೆ ಕೆ ಪಿ ಸುರೇಶ್ ಹೇಳಿರುವ ಮಾತಿಗೆ ನಾನು ಸೇರಿಸುವುದೇನೂ ಇಲ್ಲ. ಅಮೆರಿಕಾದಲ್ಲಿ ಸಂಶೋಧನೆ, ಅಮೆರಿಕಾದಲ್ಲಿ ಸೀಸದ ಕಡ್ಡಿ, ತಿಥಿಗೆ ರಾಜೀನಾಮೆ, ಯಕ್ಷ ಸ್ಪಷ್ಟನೆ, ಸೂರ್ಯೋದಯ, ಸರ್ ಎಂ.ವಿ. ಕೊನೆಯ ಬಯಕೆ ಮತ್ತು ಸರ್ ಎಂ.ವಿ. ಮತ್ತು ರುದ್ರಭೂಮಿ ಕತೆಗಳು ಮನಸ್ಸು-ಬುದ್ಧಿಯಲ್ಲಿ ತೀರ ಹೊಸದಾದ ಸಂವೇದನೆಗಳನ್ನು ಮೂಡಿಸುವಂತಿಲ್ಲ. ತಿಥಿಗೆ ರಾಜೀನಾಮೆ ಕತೆ ಸಶಕ್ತವಾಗಿದ್ದೂ ಅದರ ಬಂಧ ಕೊಂಚ ಸಡಿಲವಾಗಿದ್ದು, ವಿಳಂಬಿತ ಗತಿಯಲ್ಲಿರುವುದರಿಂದ ಉಳಿದ ಕತೆಗಳಿಗೆ ಹೋಲಿಸಿದಲ್ಲಿ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ. ಈ ಕತೆಗಳು ಉಳಿದ ಕತೆಗಳಂತೆ ಅನೂಹ್ಯವಾದ ವ್ಯಾಪ್ತಿಯನ್ನು ಹೊಂದಿಲ್ಲದಿರಬಹುದು, ವಿಶೇಷ ಹೊಳಹುಗಳನ್ನು ಕಾಣಿಸುವಷ್ಟು ಅರ್ಥಗರ್ಭಿತವಲ್ಲದಿರಬಹುದು ಮತ್ತು ಅಂಥ ಅನುರಣನ ಶಕ್ತಿಯನ್ನು ಹೊಂದಿಲ್ಲದಿರಬಹುದು ಅಥವಾ ಅದಕ್ಕೆ ಸ್ಪಂದಿಸುವುದು ನನಗೆ ಸಾಧ್ಯವಾಗದೇ ಹೋಗಿರಬಹುದು. ಆದರೆ ನನ್ನ ಸಾಮರ್ಥ್ಯ ಅತ್ಯಂತ ಕನಿಷ್ಠ ಮಟ್ಟದಲ್ಲಿರುವಾಗಲೇ ಅದು ನನಗೆ ದಕ್ಕಬೇಕಿರುವುದು ಮುಖ್ಯ. ಓದುಗನೇನೂ ಕತೆಗಳಿಂದ ತಿಣುಕಾಡಿ ಪಡೆಯುವಂತಿರಬಾರದು ಎಂಬ ನಿಲುವು ನನ್ನದಾಗಿರುವುದರಿಂದ ಇವತ್ತು ನಾವುಗಳೆಲ್ಲ ವಿಭಿನ್ನ ಪರಿಸ್ಥಿತಿಯಲ್ಲಿ, ಧಾವಂತದಲ್ಲಿ, ಕದ್ದುಮುಚ್ಚಿ, ಅರೆಬರೆಯಾಗಿ ಓದಿಕೊಂಡರೂ ಕತೆ ನಮಗೆ ದಕ್ಕುವಂತಿರಬೇಕಾದುದು ಬಹಳ ಮುಖ್ಯ!

ಇಷ್ಟು ಹೇಳಿದ ಮೇಲೆ ಹೇಳಲೇ ಬೇಕಾದ ಇನ್ನೊಂದು ಮಾತೆಂದರೆ ಈ ಮೂರೂ ಬಗೆಯ ಕತೆಗಳನ್ನು ಗೆರೆಯೆಳೆದು ವಿಂಗಡಿಸುವ ಕಷ್ಟದ್ದು. ಇವುಗಳ ಗುಣಲಕ್ಷಣಗಳಲ್ಲಿ ಇವು overlapping ಆಗಿವೆ. ಎಲ್ಲಾ ಕತೆಗಳೂ ಗಾತ್ರದಲ್ಲಿ ಪೂರ್ಣಗಾತ್ರದ ಕತೆಗಳಲ್ಲ. ಆದರೆ ಕೆಲವು ನಿಜಕ್ಕೂ ತಮಗೆ ತಕ್ಕ ಗಾತ್ರದಲ್ಲಿದ್ದರೆ ಕೆಲವು ಈ ಸಂಕಲನದಲ್ಲಿ ಕಾಣಿಸಿಕೊಳ್ಳುವುದಕ್ಕಾಗಿಯೇ ಗಾತ್ರ ಕುಗ್ಗಿಸಿಕೊಂಡಂತಿವೆ. ಕೆಲವು ಕತೆಗಳು ಗಾತ್ರದಲ್ಲಿ ಚಿಕ್ಕವಾಗಿದ್ದೂ ಅಂಥ ಗುರುತ್ವ, ಗಹನತೆ, ಅನುರಣನ ಶಕ್ತಿ ಪಡೆದಿಲ್ಲ ಎನಿಸಿದರೆ ಇನ್ನು ಕೆಲವು ದೀರ್ಘ ಎನಿಸುವಂತಿದ್ದೂ ಮಹತ್ವದ ಒಳನೋಟಗಳನ್ನು ಹೊಂದಿವೆ. ಕೆಲವು ದೀರ್ಘವಾಗಿದ್ದೂ ಸಾಕಷ್ಟು ಹರಿತವಾಗದೇ ಮುಗಿಯುತ್ತಿದ್ದು ಅವನ್ನು ಸುದೀರ್ಘ ಕತೆಯಾಗಿಸಿದ್ದರೆ ಹೆಚ್ಚಿನದನ್ನು ನಿರೀಕ್ಷಿಸಬಹುದಾಗಿತ್ತೇ ಎನಿಸುವಂತಿವೆ. ಹೀಗೆ ಗಾತ್ರ, ವಸ್ತು, ತಂತ್ರ ಎಂದು ಇಲ್ಲಿನ ಕತೆಗಳನ್ನು ವಿಂಗಡಿಸುವುದು ಸಾಧ್ಯವಿಲ್ಲ ಹೇಗೋ ಹಾಗೆಯೇ ಈ ಬಗೆಯ ಗಾತ್ರ, ವಸ್ತು ಮತ್ತು ತಂತ್ರದಲ್ಲಿ ಅತ್ಯಂತ ಸಮರ್ಥ ಶಿಲ್ಪ ಪಡೆದ ಕತೆಗಳು ಇಂಥವೇ ಎಂದು ಹೇಳಬಹುದಾದರೂ ಹಾಗಾಗದೇ ಹೋದ ಕತೆಗಳ ವಿಚಾರದಲ್ಲಿ ಯಾವ ಅಂಶ ಕೈಕೊಟ್ಟಿತು ಎಂದು ಹೇಳುವುದು ಕಷ್ಟ.

ಈ ಸಂಕಲನದ ಹೆಚ್ಚಿನೆಲ್ಲಾ ಕತೆಗಳಲ್ಲಿಯೂ ತನ್ನ ನೆರಳು ಚಾಚಿರುವ ಮೃತ್ಯು ಪ್ರಜ್ಞೆ ಇದುವರೆಗೂ ಕನ್ನಡ ಸಾಹಿತ್ಯದಲ್ಲಿ ನಾವು ಕಂಡ ಮೃತ್ಯುಪ್ರಜ್ಞೆಯಿಂದ ತುಂಬ ಭಿನ್ನವಾಗಿದೆ. ಇದು ಮೃತ್ಯುವೆಂದರೆ ಮೃತ್ಯು ಎಂದು ಒಪ್ಪಿಕೊಂಡು ಹುಟ್ಟಿರುವ ಮೃತ್ಯುಪ್ರಜ್ಞೆಯೇ ಹೊರತು ಅದನ್ನು ನಿಗೂಢಗೊಳಿಸಿ ಬೆರಗು ನೀಡುವ ತಂತ್ರವಾಗಿ ಬಳಸಲ್ಪಟ್ಟಿಲ್ಲ ಎನ್ನುವುದು ಇಲ್ಲಿನ ವಿಶೇಷ. ಈ ಕತೆಗಳಿಗೆ ಚಿತ್ರಗುಪ್ತನ ಕತೆಗಳು ಎಂದೇ ಹೆಸರಿಟ್ಟಿರುವುದು ಆ ರೀತಿಯಿಂದ ಅತ್ಯಂತ ಸೂಕ್ತವಾಗಿದೆ. ಇಲ್ಲಿ ಸತ್ತವರು ಇನ್ನೂ ಬದುಕಿರುವವರಂತೆ ನಮ್ಮ ನಿಮ್ಮ ನಡುವೆ ಕಾಣಿಸಿಕೊಂಡು ಸಾವನ್ನು ಮೀರುತ್ತಾರೆ. ಸತ್ತ ನಂತರವೂ ಅವರೊಂದಿಗೆ ನಮ್ಮ ಸಂಬಂಧದಲ್ಲಿ ಉಳಿದೇ ಹೋದ ಕೆಲಸ/ಕರ್ತವ್ಯಗಳನ್ನು ಅತ್ತ ಮಾಡಲೂ ಆಗದ ಇತ್ತ ಬಿಟ್ಟು ಬಿಡಲೂ ಆಗದ ನಮ್ಮ ಸಂದಿಗ್ಧತೆಯನ್ನು ಮತ್ತೆ ಕೆದಕಿ ವ್ಯಕ್ತಿತ್ವಕ್ಕೆ ಅಳತೆಗೋಲೊಡ್ಡುತ್ತಾರೆ. ಅವರ ಪ್ರೀತಿ ಕೆಲವೆಡೆ ಹಿಂಸೆಯಾಗಿ ಕಾಡಿದರೆ ಅವರನ್ನು ದ್ವೇಷಿಸಲಾಗದ ಆಯಾಮ ನಮ್ಮದೇ ಕೊರೆಯಾಗಿ ಕಾಡುತ್ತದೆ. ಸಾವನ್ನು ಜೀವಂತಗೊಳಿಸಿ ಮುಖಾಮುಖಿಯಾಗುವುದು ಮತ್ತು ಆಗಿಯೂ ನೆಮ್ಮದಿಯಿಂದ ಮಲಗುವುದು ಕಷ್ಟ.

ಕೊನೆಯದಾಗಿ, ಈ ಸಂಕಲನದ ಹೆಚ್ಚಿನ ಕತೆಗಳು ಎರಡನೇ ಮತ್ತು ಪುನರಪಿ ಓದಿಗೆ ಆಹ್ವಾನ ನೀಡುವಂತಿರುವುದು ಗಮನಾರ್ಹವಾದ ಸಂಗತಿಯಾಗಿದೆ. ಆದರೆ ಅಂಥ ವ್ಯವಧಾನ, ಆಸಕ್ತಿ ಇಂದು ಸಾಧ್ಯವೇ ಎಂಬ ಪ್ರಶ್ನೆಯಂತೂ ನನ್ನನ್ನೂ ಕಾಡಿದೆ. ಎಲ್ಲೋ ಒಂದೆಡೆ ನಾನು ಒಂದೊಂದು ಪುಸ್ತಕಗಳಿಗೂ ನ್ಯಾಯವಾಗಿ ಸಲ್ಲಬೇಕಾದ ಸಮಯ (ಕಾಲ), ಅವಕಾಶ(Space) ಮತ್ತು ವ್ಯವಧಾನ (quality time ಎನ್ನುತ್ತೇವಲ್ಲ, ಆ ಅರ್ಥದ ವ್ಯವಧಾನ) ನೀಡುವಲ್ಲಿ ಸಫಲನಾಗುತ್ತಿಲ್ಲವೇನೊ ಎಂಬ ಆತಂಕ ಕಾಡುತ್ತದೆ. ಇದು ಅಷ್ಟಿಷ್ಟು ಓದುವವರ ಆತಂಕ. ತಮ್ಮ ಚೂರುಪಾರು ಓದಿಗೆ ಫೇಸ್ ಬುಕ್, ವ್ಯಾಟ್ಸಪ್ ಮತ್ತು ಬ್ರೌಸಿಂಗ್-ಸರ್ಫಿಂಗ್ ಶೈಲಿಗಳನ್ನೊಗ್ಗಿಸಿಕೊಂಡವರ ಮಾತು ಬೇರೆ. ಓದುವುದನ್ನೇ ಬಿಟ್ಟುಕೊಟ್ಟವರದ್ದು ನಿಜ ನೆಮ್ಮದಿ.

ಅದೇನಿದ್ದರೂ ಈ ಕತೆಗಳು ಬಹುಕಾಲ ನಿಲ್ಲುವ ರಚನೆಗಳು ಎಂಬ ಮಾತನ್ನಂತೂ ನಿಶ್ಚಿತವಾಗಿ ಹೇಳಬಹುದು.

****

ಈಗ ಮೇಲಿನ ಮಾತುಗಳಿಗೆ ಪೂರಕವಾಗಿ ಇಲ್ಲಿನ ಕೆಲವು ಕತೆಗಳನ್ನು ವಿವರವಾಗಿ ಗಮನಿಸಿ ಈ ಚರ್ಚೆಯನ್ನು ಮುಂದುವರಿಸಬಹುದು.

ಭಾಷೆ ಮತ್ತು ನಗು ಕತೆಯಲ್ಲಿ ಅತ್ಯಂತ ಸೂಕ್ಷ್ಮವಾದೊಂದು ಮುಜುಗರ, ಪಾರಂಪರಿಕವಾಗಿ ನಡೆದು ಬಂದಿರುವುದರೊಂದಿಗೆ ಏನು ಮಾಡಿದರೂ ತತ್ಕ್ಷಣಕ್ಕೆ ಹೊಂದಿಕೊಳ್ಳಲು ಸಾಧ್ಯವೇ ಇಲ್ಲದ ಬೆಳವಣಿಗೆಯೊಂದನ್ನು ಒಪ್ಪಿಕೊಳ್ಳಲಾರದ, ಸ್ವೀಕರಿಸಲಾರದ, ಸಹಿಸಲಾರದ ಅಸಹನೆಯ ಸ್ಫೋಟವಿದೆ. ಇದು ದಲಿತ-ಬ್ರಾಹ್ಮಣ, ಉಳ್ಳವರು-ಇಲ್ಲದವರು ಮುಂತಾಗಿ ನಾವು ಕಟ್ಟಬಹುದಾದ ವರ್ಗಸಂಘರ್ಷವೋ, ಶೋಷಣೆಯೋ, ಪಕ್ಷಪಾತದ ನಿಲುವೋ ಅಲ್ಲ ಎನಿಸುವಾಗಲೂ ಅದರ ಬೀಜಗಳನ್ನೆಲ್ಲ ತನ್ನೊಳಗೆ ಇರಿಸಿಕೊಂಡಿರುವಂಥ ಸಂಗತಿಯೇ. ಆದರೆ ಗಟ್ಟಿಯಾಗಿ ಇದು ಹೀಗೆಯೇ ಎಂದು ಹೇಳತೊಡಗಿದೊಡನೆ ಎಲ್ಲ ಕುಸಿದು ಬೀಳುವಂಥ, ಭಾವನಾತ್ಮಕವಾದ, ಸಂವೇದನೆಗಳ ಮಟ್ಟದ ಶಿಲ್ಪದಲ್ಲಷ್ಟೇ ಅವೆಲ್ಲದರ ಬೀಜಗಳಿವೆ. ವ್ಯಕ್ತಿ ಮಾಗುವ ಹಂತ ಅಥವಾ ಸಮಾಜ ಕೆಟ್ಟು ನಾರುವ ಹಂತ ಎರಡೂ ತೊಡಗುವ ಒಂದು ಸಂದಿಗ್ಧ ಬಿಂದುವಿನ ಚಿತ್ರಣ ಇಲ್ಲಿದೆ.

ಸಾವು ಬಲ್ಲ ನೋಟ ಕೂಡ ಸರಳವಾಗಿದ್ದೂ ಗಹನವಾದ ಒಂದು ಸಂಗತಿಯನ್ನು, ಅದು ಇದೇ ಎಂದು ಹೇಳಲಾಗದ ಪರಿಯಲ್ಲಿ ನಮ್ಮ ಅಂತರಂಗದಲ್ಲಿ ಕಲಕುವ ಶಕ್ತಿಯನ್ನು ಪಡೆದಿರುವ ಕತೆ. ಸಾಯುವ ಕೆಲ ಸಮಯ ಮುಂಚೆ ಮನುಷ್ಯನ ಮನಸ್ಸು ಬಾಲ್ಯವನ್ನು ನೆನಪಿಸಿಕೊಳ್ಳುತ್ತೆ, ಹಂಬಲಿಸುತ್ತೆ ಎನ್ನುವ ಒಂದು ಆಡುಮಾತನ್ನೇ ಹಿಡಿದು ಸಾಗುವ ಕತೆ ಬದುಕಿನ ಒಂದು ಕ್ಷಿಪ್ರನೋಟವನ್ನು ನೀಡುತ್ತಲೇ ವಾಸ್ತವದ ಕಟು ದೈನಂದಿನದ ಎದುರು ಸಾವು-ಬದುಕು, ಅದರ ಕಾರ್ಪಣ್ಯ ಎಲ್ಲವನ್ನೂ ಚಿತ್ ಮಾಡುತ್ತ ಹೋಗುತ್ತದೆ. ಯಾರು ಸತ್ತರೂ, ಯಾರು ಬದುಕಿದರೂ ತನ್ನ ಪಾಡಿಗೆ ತಾನು ಓಡುತ್ತಿರುವ ದಿನಮಾನದಲ್ಲಿ ಅದೊಂದು ಗಂಭೀರ ವಿದ್ಯಮಾನವೇ ಅಲ್ಲ ಎಂಬಂತೆ ಸಾಗುವ ಬಗೆ ನಮಗೆ ಗೊತ್ತು. ಪಕ್ಕದ ಮದುವೆ ಹಾಲ್ನಲ್ಲಿ ಸಂಭ್ರಮದ ಗದ್ದಲ ಇರುವಾಗಲೇ ಇತ್ತ ಸಾವಿನ ಸುದ್ದಿ, ಶವಸಂಸ್ಕಾರದ ಗಡಿಬಿಡಿ ಇರುವುದು ವಿಶೇಷವೇನಲ್ಲ. ಆಗಲೂ ಇದಲ್ಲ ನನ್ನ ಜಗತ್ತು ಎಂದು ಸುಮ್ಮನೆ disown ಮಾಡಲಾಗದು ನಮಗೆ. ನಮ್ಮ ಅದೇ ಜಗತ್ತಿನೆದುರು ನಮ್ಮ ನಮ್ಮ ವೈಯಕ್ತಿಕ ಬದುಕಿನ ಮಹತ್ವದ ಸಂಗತಿಗಳು, ಸಾವು-ನೋವು-ವಿಯೋಗ-ನೆನಪು-ಕಷ್ಟನಷ್ಟಗಳೆಲ್ಲ ಕೇವಲ ಅಂತರಂಗದಲ್ಲಷ್ಟೇ ಕಾಡುತ್ತ, ಯಾವುದಕ್ಕೋ ಹಂಬಲಿಸುತ್ತ, ನೋನುತ್ತ ಉಳಿಯುವ ಘಳಿಗೆಯ ದಿವ್ಯವನ್ನು ಛಕ್ ಎಂದು ಹೊಳೆಯಿಸಿ ಮರೆಯಿಸುವಂತೆ ಈ ಕತೆಯಿದೆ, ಇಲ್ಲಿನ ಇತರ ಹಲವು ಕತೆಗಳೂ ಇವೆ.

ಕಂಡು ಕೇಳದ ಶಬ್ದ ಇಲ್ಲಿನ ಮತ್ತೊಂದು ಮುಖ್ಯ ಕತೆ. ಇಲ್ಲಿ ಫ್ಯಾಂಟಸಿ ಇದೆ, ಭ್ರಮೆಯನ್ನು ವಾಸ್ತವದೊಂದಿಗೆ ಮೇಳೈಸಿ ಹೇಳುವ ವಿಧಾನದ ಬಳಕೆಯಾಗಿದೆ. ಆದರೆ ಕೊನೆಗೆ ಇದ್ಯಾವುದೂ ಮುಖ್ಯವೆನಿಸದೆ, ತರ್ಕದ ಅಗತ್ಯವೇ ಇಲ್ಲದೆ ನೇರ ಅಂತರಾತ್ಮಕ್ಕೆ ಲಗ್ಗೆಯಿಡುವ ವಸ್ತು ಇಲ್ಲಿನದು. ಸಾವು ಮತ್ತು ಸತ್ತ ವ್ಯಕ್ತಿಯೊಂದಿಗಿನ ಮುಖಾಮುಖಿಯಂಥ ಒಂದು ಪರಿಕಲ್ಪನೆಯೇನಿದೆ, ತೀರ ಆತ್ಮೀಯ ವ್ಯಕ್ತಿಯೊಬ್ಬರನ್ನು ಇದೀಗ ಕಳೆದುಕೊಂಡು ನೊಂದ ಮನಸ್ಸು ಅಥವಾ ಕಳೆದುಕೊಳ್ಳಬೇಕಾದೀತು ಎಂಬ ಆತಂಕದಲ್ಲಿ ನೊಂದ ಮನಸ್ಸು ಅಥವಾ ಹಿಂದೆಂದೋ ಕಳೆದುಕೊಂಡು ನೆನಪುಗಳಲ್ಲಿ ಆ ವ್ಯಕ್ತಿ ಜೀವಂತಗೊಂಡು ನಮ್ಮ ಸಂವೇದನೆಗಳನ್ನು ಜಾಗೃತಗೊಳಿಸಿದ್ದರಿಂದಲೇ ಹುಟ್ಟಿದ ನೋವು - ಇವುಗಳನ್ನು ಎಲ್ಲರೂ ಅನುಭವಿಸಿಯೇ ಇರುತ್ತಾರೆ. ಮನುಷ್ಯ ಬದುಕುವುದೇ ನೆನಪುಗಳಲ್ಲಿ. ವಿಯೋಗ, ವಿರಹ, ವಿರಸ ಮತ್ತು ಸಾವು ಕಠೋರವಾಗುವುದು ಕೂಡ ಬಿಡುಗಡೆ ಪಡೆಯಲಾಗದ ಈ ನೆನಪುಗಳ ದಾಳಿಯಿಂದಲೇ. ನೆನಪು ಮಧುರವಾಗದೆ ಕಠೋರವಾಗುವುದು ನಾವು ಪ್ರಸ್ತುತ ಗೈರಿನಲ್ಲಿರುವ ವ್ಯಕ್ತಿಯೊಂದಿಗೆ ಪೂರ್ತಿಗೊಳಿಸದೇ ಬಿಟ್ಟ ಕೆಲವು ಸಂಗತಿಗಳನ್ನು ನೆನೆದು. ಆ ಸಂಬಂಧಗಳಲ್ಲಿ ಏನೋ ಒಂದಿಷ್ಟು ಉಳಿದು ಹೋಗಿದೆ ಮತ್ತು ಕೇವಲ ನಾವು ಮಾತ್ರ ಇಲ್ಲಿ ಉಳಿದು ಹೋಗಿದ್ದೇವೆ, ಅದನ್ನು ಪೂರ್ತಿಗೊಳಿಸಲು ಅಗತ್ಯವಾದ ಆ ಇನ್ನೊಂದು ವ್ಯಕ್ತಿ ಇನ್ನಿಲ್ಲವಾಗಿದೆ. ಇದು ಒಂದು ಹೊಸ ಸಂಕಟಕ್ಕೆ ಕಾರಣವಾಗಿದೆ ಮತ್ತು ಅದು ನಾವಿರುವಷ್ಟೂ ಕಾಲ ಹಾಗೆಯೇ ಉಳಿದು ಹೋಗುವ, ನಿರಂತರ ಕಾಡುವ ಪುತ್ರಶೋಕದಂತಿದೆ. ಇದು ಇಲ್ಲಿನ ಹಲವಾರು ಕತೆಗಳ ಏಕಸೂತ್ರ. ಆದರೆ ಈ ಏಕಸೂತ್ರ ಕಾಣಿಸುವ ಸತ್ಯಗಳು ಮಾತ್ರ ವಿಭಿನ್ನ, ವಿಶಿಷ್ಟ ಮತ್ತು ಸಂವೇದನೆಗಳಲ್ಲಷ್ಟೇ ಸ್ಪಷ್ಟವಾಗುವ, ಮಾತಿಗೆ ನಿಲುಕದ ಕಲಕುವಿಕೆಯಲ್ಲಿ ಗ್ರಹಿಕೆಗೆ ದಕ್ಕುವಂಥಾದ್ದು. ಹೀಗೆ ಈ ಎಲ್ಲ ಕತೆಗಳೂ ಎಲ್ಲೋ ಯಾವುದೋ ವಿಷಯದಲ್ಲಿ ನಮ್ಮ ಅಂತರಂಗದ ಕಣ್ತೆರೆಸುವ ಮೆಲುದನಿಯ ಮಾತುಗಳನ್ನಾಡುತ್ತಿವೆ.

ಜೀವಾವಧಿ ಶಿಕ್ಷೆ, ಸ್ವಾಮಿ ಮತ್ತು ನಾಯಿ, ಮುಟ್ಟು, ಯಕ್ಷ ಪ್ರಶ್ನೆ, ೧೨-೦೫-೧೯೬೨, ದಾಟದ ಮೂರು ಕತೆಗಳು ಬೇರೆ ಹಲವು ಆಯಾಮಗಳನ್ನು ಹೊಂದಿವೆಯಾದರೂ ಮೂಲಭೂತವಾಗಿ ಸಾವು, ಅದರ ಅಮೂರ್ತ ಸಂಬಂಧವೊಂದು ನಮ್ಮ ಬದುಕಿನೊಂದಿಗೆ ಸಾವಿನ ನಂತರವೂ ಬಿಗಿದುಕೊಂಡೇ ಇರುವುದನ್ನು ಕಾಣಿಸುವ ವಿಶಿಷ್ಟ ಬಗೆಯಿಂದ ಮುಖ್ಯವಾಗುತ್ತವೆ. ಸ್ವಾಮಿ ಮತ್ತು ನಾಯಿ, ಮುಟ್ಟು, ಯಕ್ಷ ಪ್ರಶ್ನೆ, ೧೨-೦೫-೧೯೬೨ ಮತ್ತು ದಾಟದ ಮೂರು ಕತೆಗಳು ಒಂದೊಂದೂ ಹಲವು ಬಗೆಯಲ್ಲಿ ಕಾಡುವ ಕಸುವುಳ್ಳ ಮಹತ್ವದ ಕತೆಗಳು. ನಮ್ಮ ಭೂತಕಾಲದ ದೈನಂದಿನ, ಕಳೆದ ದಿನಗಳ ಬದುಕು ಕೂಡ ಸತ್ತ ವ್ಯಕ್ತಿಯಂತೆಯೇ, ಅಷ್ಟೇ ಮಟ್ಟಿಗೆ ನೆನಪು. ಆ ನೆನಪು ಒಂದು ಅಸಹಾಯಕತೆಯನ್ನು ಹುಟ್ಟು ಹಾಕುತ್ತಿರುತ್ತದೆ, ಬೇರೆ ಬೇರೆ ಬಗೆಯಲ್ಲಿ. ಸತ್ತ ವ್ಯಕ್ತಿಗೆ ಹೇಗೆ ಬಿಡುಗಡೆಯಿಲ್ಲವೋ ಹಾಗೆಯೇ ಬದುಕಿರುವ ವ್ಯಕ್ತಿಗೂ ಸದ್ಯ ಬಿಡುಗಡೆಯಿಲ್ಲ. ಒಂದು ನೆನಪಾಗಿ ಕಾಡುತ್ತದೆ, ಇನ್ನೊಂದರ ಸತ್ತ ಜೀವಂತಿಕೆಯನ್ನು ನೆನೆನೆನೆದು. ಈ ಪ್ರಕ್ರಿಯೆ ಎಲ್ಲರ ಬದುಕಿನಲ್ಲೂ ಬರುವಂಥಾದ್ದೇ. ಈ ಕಾಡುವಿಕೆಯಲ್ಲೇ ಬದುಕಿನ ಮರ್ಮವನ್ನು ಒಂದು ಹೊಳಹಿನಲ್ಲೆಂಬಂತೆ ಕಾಣಿಸುವ ಪ್ರಯತ್ನ ಇಲ್ಲಿದೆ. ಮುಟ್ಟು ಕತೆಯಲ್ಲಿ ನೇರವಾಗಿ ಸಾವು ತನ್ನ ನೆರಳು ಚಾಚಿಲ್ಲವಾದರೂ ಸೂಕ್ಷ್ಮವಾಗಿ ಗಮನಿಸಿದರೆ ಕಮಿಷನರ್ ಕೃಷ್ಣಪ್ಪ ಮತ್ತು ಸಾವಿತ್ರಮ್ಮ ಸಾಕಿದ ಮಗು ಒಂದೇಯೆ? ಹೌದು ಎಂದಾದರೆ ಕೃಷ್ಣಪ್ಪನದು ಸದ್ಯ ಮರುಜನ್ಮವೇ ಸರಿ. ಇಲ್ಲಿರುವುದು ಕಮಿಷನರ್ ಕೃಷ್ಣಪ್ಪನ "ಸತ್ತ ಭೂತವನ್ನು ಹದ್ದಿನಂದದಿ ತಂದು ಅವನ ಮನೆಯಂಗಳದಿ ಹಾಕುತ್ತಿರುವ" ಸಾವಿತ್ರಮ್ಮ ಎಂಬ ವರ್ತಮಾನ. ಮುಟ್ಟು ಎನ್ನುವುದು ಇಲ್ಲಿ ಕ್ರಿಯಾಪದವಾಗಿ ಲಂಕೇಶರ "ಮುಟ್ಟಿಸಿಕೊಂಡವನು" ಕತೆಯ ನೆನಪು ತರುವಂತಿದೆ.

ಹೊಸ ಉದ್ಯೋಗ ಎಂಬ ಕತೆಯಲ್ಲಿಯೂ ಅದೇ ಸಾವು, ಸ್ಮಶಾನ, ಅಪರಕರ್ಮ ಎಲ್ಲ ಇದ್ದೂ ಅದು ಹೇಳುತ್ತಿರುವುದು ಬದುಕಿನ ಬಗ್ಗೆ, ಜೀವನ ಪ್ರೀತಿಯ ಬಗ್ಗೆ ಮತ್ತು ಜೀವ ಜೀವದ ನಡುವಿನ ಸಂಬಂಧದ ಬಗ್ಗೆ ಎನ್ನುವುದು ಬಹುಮುಖ್ಯವಾದ ಸಂಗತಿ. ಇಲ್ಲೆಲ್ಲ ಸತ್ಯನಾರಾಯಣ ಅವರು ತಣ್ಣಗಿನ ಧ್ವನಿಯಲ್ಲಿ ಕತೆ ಹೇಳುತ್ತಿರುವುದು ತುಂಬ ಇಷ್ಟವಾಗುತ್ತದೆ. ಇದೇ ಸಾಲಿಗೆ ಸೇರುವ ಇನ್ನೊಂದು ಕತೆ ಬಣ್ಣ ಮತ್ತು ಬಣ್ಣ.

ಅಕಿರಾ ಕುರಾಸೋವಾನ ಒಂದು ಸಿನಿಮಾದಲ್ಲಿ ವೈದ್ಯವೃತ್ತಿಯ ಸೇವೆ ಸಲ್ಲಿಸಲೆಂದೇ ಬರುವ ಒಬ್ಬ ಯುವ ವೈದ್ಯನಿಗೆ ಹಳ್ಳಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಒಬ್ಬ ಹಿರಿಯ ವೈದ್ಯ ಒಂದು ಸಲಹೆ ನೀಡುತ್ತಾನೆ. ಇನ್ನೇನು ಸಾಯಲಿರುವ ವ್ಯಕ್ತಿಯ ಹಾಸಿಗೆಯ ಪಕ್ಕ ಸುಮ್ಮನೇ ಕೂತು ಆತನನ್ನು ಗಮನಿಸುತ್ತಿರು ಎನ್ನುವುದೇ ಆ ಸಲಹೆ. ಅಲ್ಲೀಗ ರೋಗಿಯ ವಿಷಯದಲ್ಲಿ ವೈದ್ಯ, ವೈದ್ಯಕೀಯ ಮಾಡಬಹುದಾದ್ದು ಇನ್ನೇನೂ ಉಳಿದಿಲ್ಲ. ಉಳಿದಿರುವುದೆಲ್ಲಾ ಸಾವಿನ ಪ್ರತೀಕ್ಷೆಯಷ್ಟೇ. ಹಾಗೆ ಸಾವಿನ ಪ್ರತೀಕ್ಷೆಯಲ್ಲಿರುವ ಒಬ್ಬ ವ್ಯಕ್ತಿಯ ಹಾಸಿಗೆಯ ಪಕ್ಕ ಕುಳಿತು ಆ ನೀರವ ಕ್ಷಣಗಳನ್ನು ಅನುಭವಿಸುವುದು, ಸ್ವತಃ ಒಬ್ಬ ಆರೋಗ್ಯವಂತ, ಸ್ವಸ್ಥ, ಯೌವನದ ದೇಹ ಹೊಂದಿರುವ ವ್ಯಕ್ತಿಯಾಗಿದ್ದುಕೊಂಡು ಜರ್ಜರಿತ ಶರೀರವೊಂದರ ಕೊನೆಯ ಕ್ಷಣಗಳಿಗೆ ಸಾಕ್ಷಿಯಾಗುವುದು ಬಹುಮುಖ್ಯ ಕಲಿಕೆ ಎಂದು ಆ ಹಿರಿಯ ವೈದ್ಯ ಹೇಳುತ್ತಾನೆ. ಸತ್ಯನಾರಾಯಣರ "ಚಿತ್ರಗುಪ್ತನ ಕತೆಗಳು" ಹುಟ್ಟಿರುವುದು ಅದೇ ನೆಲೆಯಿಂದ.

ಅಮೆರಿಕಾದಲ್ಲಿ ಸಂಶೋಧನೆ ಕತೆಯ ತಿರುಳು ನನಗೆ ಅಷ್ಟೇನೂ ಒಗ್ಗಲಿಲ್ಲ. ಒಂದು ನಿರ್ದಿಷ್ಟ ಜೀವನಶೈಲಿಯನ್ನು ರೂಢಿಸಿಕೊಂಡಿರುವಂಥ ಸಂಸ್ಕೃತಿಯಲ್ಲಿ ಲೈಂಗಿಕತೆ ಮಹತ್ವ ಪಡೆಯುತ್ತಿದೆ ಎನ್ನುವುದೇ ಒಂದು ಅಬ್ಸರ್ವೇಶನ್ ಎಂದು ತಿಳಿಯುವ ಸ್ಥಿತಿ, ಆ ಬಗ್ಗೆ ವಿಶ್ಲೇಷಣೆ, ಅಧ್ಯಯನ ಅಗತ್ಯ ಎಂದು ತಿಳಿಯಬೇಕಾದಂಥ ಪರಿಸ್ಥಿತಿ ಇದೆ ಅಥವಾ ಒದಗಬಹುದು ಎನ್ನುವುದನ್ನು ಯಾಕೊ ನನ್ನ ಮನಸ್ಸು ಒಪ್ಪುತ್ತಿಲ್ಲ. ಇಲ್ಲಿ ನೆನಪಾಗುವುದು ವಿ ಆರ್ ಕಾರ್ಪೆಂಟರ್ ಅವರ "ನೀಲಿಗ್ರಾಮ" ಕಾದಂಬರಿ. ಅಲ್ಲಿ ನೀಲಿಗ್ರಾಮದ ದೊರೆ ಇನ್ನೂ ಆಟ ಆಡಿಕೊಂಡಿರಬೇಕಾದ ಮಕ್ಕಳನ್ನು ಲೈಂಗಿಕತೆಗೆ ಸಜ್ಜುಗೊಳಿಸುವಷ್ಟು ವೈಜ್ಞಾನಿಕವಾಗಿ ಮುಂದುವರಿದ(?) ಒಂದು ಚಿತ್ರವಿದೆ. ಒಂದೆಡೆ ಹೆಚ್ಚುತ್ತಿರುವ ರೇಪು, ಲೈಂಗಿಕತೆಯ ವಿಜೃಂಭಣೆ ಎಲ್ಲ ಇರುವಂತೆಯೇ ಮದುವೆಯಿಂದ ವಿಮುಖರಾಗುತ್ತಿರುವ, ಲೈಂಗಿಕ ಆಸಕ್ತಿಯನ್ನೂ ಕಳೆದುಕೊಳ್ಳುತ್ತಿರುವ, ಸಲಿಂಗಕಾಮದಲ್ಲಿ ಹೆಚ್ಚು ಆಸಕ್ತರಾಗುತ್ತಿರುವ ಯುವಜನಾಂಗ ಕೂಡ ನಮ್ಮ ವರ್ತಮಾನವಾಗಿದೆ ಎನಿಸುತ್ತದೆ. ಇವತ್ತಿನ ಈ ಲೈಂಗಿಕ ಅತಿರೇಕದಲ್ಲಿ ಕಾಣುತ್ತಿರುವುದು ಕೂಡ ಕ್ರೌರ್ಯ ಮತ್ತು ಹಿಂಸೆಯೇ ಹೊರತು ಕಾಮುಕತೆಯಲ್ಲ ಎನಿಸುತ್ತದೆ. ಅದೇನಿದ್ದರೂ ಕತೆಯ ನಿರೂಪಣೆಗೆ ಹೊಸ ಶೈಲಿ ಅತ್ಯಂತ ಸೂಕ್ತವಾಗಿದೆ ಅಥವಾ ಅದನ್ನು ಸೂಕ್ತವಾಗಿ ಬಳಸಿಕೊಳ್ಳಲಾಗಿದೆ ಎನ್ನುವುದು ನಿಜ.

ಅಮೆರಿಕಾದಲ್ಲಿ ಸೀಸದ ಕಡ್ಡಿಯ ಬಗ್ಗೆ ಕೂಡ ಇದೇ ಮಾತನ್ನು ಹೇಳಬಹುದಾದರೂ ಕತೆ ಅಷ್ಟೇನೂ ಇಷ್ಟವಾಗಲಿಲ್ಲ. ತಿಥಿಗೆ ರಾಜೀನಾಮೆ ಕತೆಯಲ್ಲಿ ಆಯ್ದುಕೊಂಡ ಪ್ರಶ್ನೆಯೂ ಗಂಭೀರವಾದುದೇ ಆಗಿದ್ದರೂ ಅದರ ನಿರ್ವಹಣೆ ಅಷ್ಟೊಂದು ಹರಿತವಾಗಿ ಬಂದಿಲ್ಲ ಎನಿಸುತ್ತದೆ. ಯಕ್ಷ ಸ್ಪಷ್ಟನೆ ಮತ್ತು ಸೂರ್ಯೋದಯ ಕತೆ ಕೂಡ ಹೇಳಬೇಕಾದುದನ್ನು ತೀರ ಸರಳಗೊಳಿಸಿಕೊಂಡಿದೆ. ಇವು ಹಲವು ಆಯಾಮಗಳ ನೆಲೆಯನ್ನು ಬಿಟ್ಟುಕೊಟ್ಟು ಯಾವುದೋ ಒಂದು ಪ್ರಶ್ನೆ, ವೈಚಾರಿಕ ತರ್ಕ ಅಥವಾ ವೈಶಿಷ್ಟ್ಯವನ್ನೇ ಕೇಂದ್ರವಾಗಿರಿಸಿಕೊಂಡ ಕತೆಗಳಾಗಿವೆ.

Father's Day ಒಂದು ಅಸಂಗತ ಕತೆಯಂತಿರುವ ನಿಜಕ್ಕೂ ಫ್ಯಾಂಟಸಿಯಷ್ಟೇ ಆಗಿರುವ ಕತೆ. ಇದು ನಗಿಸುತ್ತದೆ, ಕಾಡುತ್ತದೆ ಮತ್ತು ಕೆಣಕುತ್ತದೆ ಕೂಡ. ಸಾವಿನ ಬಣ್ಣ, ದೃಷ್ಟಿ - ಅದೃಷ್ಟ, ಗುಟ್ಟೇ ಇರಬಾರದು ಸ್ವಾಮಿ, ಶಿವಂಗಿ ಸ್ವಾಮಿ, ಲೇಖಕನ ರಾಜೀನಾಮೆ, ಶೀಲವಂತರ Affidavit ಕತೆಗಳು ಕೂಡ ಇಂಥ "ಝೆನ್ - ತನ" ಇರಿಸಿಕೊಂಡಿರುವ ಇನ್ನಷ್ಟು ಕತೆಗಳು. ಆದರೆ ಈ ಸಂಕಲನದ ನಿಜವಾದ ಆಕರ್ಷಣೆ ಇರುವುದು ಈ ಕತೆಗಳಲ್ಲಲ್ಲ. ನಿಜಕ್ಕೂ ಗಟ್ಟಿಯಾದ ಮತ್ತು ಒರಿಜಿನಲ್ ಆದ, ಸರಳವಾಗಿ ತನ್ನಂತರಂಗವನ್ನು ಬಿಟ್ಟುಕೊಡದ ಕತೆಗಳೇ ಈ ಸಂಕಲನದ ಪ್ಲಸ್ ಪಾಯಿಂಟ್. ಉಳಿದಂತೆ ಈ ಕತೆಗಳೆಲ್ಲ ಊಟದ ಜೊತೆ ರುಚಿಗೆ ಹುಳಿಯೊಗರು ಉಪ್ಪಿನ ಕಾಯಿ ಎಲ್ಲ ಇರುವಂತೆ ಇವೆ, ಇಷ್ಟವೂ ಆಗುತ್ತವೆ. ಈ ಬಗೆಯ ಕತೆಗಳಲ್ಲಿ ಅತ್ಯಂತ ಪೇಲವ ಎನಿಸುವ ಎರಡು ಕತೆಗಳು ಸರ್ ಎಂ.ವಿ. ಕೊನೆಯ ಬಯಕೆ ಮತ್ತು ಸರ್ ಎಂ.ವಿ. ಮತ್ತು ರುದ್ರಭೂಮಿ.

"ವಾಸನೆಯ ಸುವರ್ಣ ಜಯಂತಿ","ಪಾತ್ರ, ನಟ ಮತ್ತು ನಿಜ","ವೈಶಂಪಾಯನದಲ್ಲಿ ಪಾಲು", "ಕೃತಜ್ಞತಾ ಕಲ್ಯಾಣ " ಮತ್ತು "ನಿಮಗೆ ಮಾತ್ರ ಕಥೆ ಹೇಳೋಲ್ಲ" ಕತೆಗಳನ್ನು ಸತ್ಯನಾರಾಯಣರ ಇದುವರೆಗಿನ ಶೈಲಿಯಲ್ಲಿಯೇ ಹೇಳಿದ್ದರೂ ಅಂಥ ವ್ಯತ್ಯಾಸವೇನೂ ಆಗುತ್ತಿರಲಿಲ್ಲ ಮಾತ್ರವಲ್ಲ ಆಗ ಅವು ಮತ್ತಷ್ಟು ಒಳನೋಟಗಳನ್ನೋ, ಆಯಾಮವನ್ನೋ ಪಡೆದುಕೊಂಡು ಸುಪುಷ್ಟವಾಗಿಯೂ ಸಮೃದ್ಧವಾಗಿಯೂ ಮೂಡಿಬರುವುದು ಸಾಧ್ಯವಿತ್ತೇನೋ ಎಂದು ಕೂಡ ಅನಿಸುತ್ತದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ