Tuesday, June 30, 2015

ಕತೆಯೆಂಬ ಮಾಯಾ ಕೋಲಾಹಲ

ಮೌನೇಶ್ ಬಡಿಗೇರ್ ಅವರ ಕಥಾ ಸಂಕಲನ "ಮಾಯಾ ಕೋಲಾಹಲ"ದಲ್ಲಿ ಒಟ್ಟು ಎಂಟು ಕತೆಗಳಿವೆ. ಎಲ್ಲಾ ಕತೆಗಳಿಗೂ ಸಾಮಾನ್ಯವಾದ ಒಂದು ಅಂಶವೆಂದರೆ ಟಿವಿ ಮತ್ತು ಕ್ರೈಂ ಟೈಮ್ ಎಂಬ ಒಂದು ಕಾರ್ಯಕ್ರಮ. ಇದನ್ನೇ ಮುಂದುವರಿಸಿ ಹೇಳುವುದಾದರೆ ಇಲ್ಲಿ ಮೌನೇಶ್ ಅವರು ಇದುವರೆಗಿನ ತಮ್ಮ ಪ್ರೌಢ ಬದುಕಿನ ಅಬ್ಸರ್ವೇಶನ್ ತಮಗೆ ದಕ್ಕಿಸಿದ ಗ್ರಹಿಕೆಗಳನ್ನು ಅವು ತಮಗೆ ತಟ್ಟಿದಷ್ಟೇ ತೀವ್ರವಾಗಿ - ಅದಕ್ಕಾಗಿ ಕನಸು, ರೂಪಕ, ವ್ಯಂಗ್ಯ, ವಿನೋದ ಇತ್ಯಾದಿಗಳನ್ನು ಬಳಸಿಕೊಂಡು- ಹೇಳುತ್ತಿರುವುದು ಇಲ್ಲಿನ ಸಾಮಾನ್ಯ ಎಳೆ. ಇದನ್ನು ಅವರು ಸಹಜವಾಗಿ ಮಾಡುತ್ತಾರೆಂಬುದೇ ಒಂದು ಹೆಚ್ಚುಗಾರಿಕೆ. ಇಲ್ಲಿ ಕಥನದ ಗಿಮ್ಮಿಕ್ ಇಲ್ಲ, ಏನೋ ಕಟ್ಟುತ್ತಿದ್ದೇನೆಂಬ ಸಂಕಲ್ಪವಾಗಲಿ, ಯಾರಿಗೋ, ಯಾವುದಕ್ಕೋ ಬದ್ಧನಾಗಿರಬೇಕೆಂಬ ಅಸಹಜ ಕಟ್ಟುಪಾಡುಗಳ ಲಿಮಿಟೇಶನ್ಸ್ ಆಗಲಿ ಅವರಿಗಿಲ್ಲಿ ಇಲ್ಲ ಎಂಬುದು ಓದುಗನಿಗೆ ಮೊದಲಸಲಕ್ಕೇ ಅನುಭವಕ್ಕೆ ಬಂದುಬಿಡುವ ಸತ್ಯ. ಮೌನೇಶ್ ನಮಗೆಲ್ಲ ತಿಳಿದಿರುವಂತೆ ನಾಟಕಕಾರ, ನಿರ್ದೇಶಕ ಮತ್ತು ನಾಟಕಪ್ರಿಯ. ಹಾಗಾಗಿ, ಒಬ್ಬ ನಾಟಕಕಾರ ಮಾತ್ರ ಸೂಕ್ಷ್ಮವಾಗಿ ಸ್ಪಂದಿಸಲು ಕಲಿವ, ಕಲಿತಿರುವ, ದೇಹದ ಚಲನೆಯೂ ಸೇರಿದಂತೆ ಒಟ್ಟಾರೆ ರಂಗ ಚಲನೆ, ಕತ್ತಲು-ಬೆಳಕಿನ ವಿನ್ಯಾಸ, ಸಂಗೀತವೂ ಆಗಬಹುದಾದ ಎಲ್ಲ ಬಗೆಯ ಸದ್ದು, ಸಂಭಾಷಣೆ(ಟೆಕ್ಸ್ಟ್)ಯನ್ನು ಮೀರಿ ರಂಗಭಾಷೆಯ ಸಶಕ್ತ ಬಳಕೆ (ಅದರ ಧ್ವನಿಶಕ್ತಿಯ ಅರಿವು), ಯಾವುದನ್ನೂ ಸಮಕಾಲೀನವಾಗಿಸಬಲ್ಲ ಒಗ್ಗಿಸಿಕೊಳ್ಳುವಿಕೆ, ಬದುಕಿನ ಪ್ರತಿಯೊಂದರಲ್ಲೂ ನಾಟಕೀಯತೆಯನ್ನು ಕಾಣುವ ಕಣ್ಣುಗಳು - ಇವೆಲ್ಲದರ ಬಗ್ಗೆ ಮೇಲ್ಮಟ್ಟದ ಅರಿವು ಬೇರೆ ಹೊಸ ಕತೆಗಾರರಿಗಿರುವುದಕ್ಕಿಂತ ಹೆಚ್ಚು ಮೌನೇಶ್ ಅವರಿಗೆ ಇದ್ದಿರಲು ಸಾಧ್ಯವಿದೆ. ಇನ್ನು ಇವರ ಪುಟ್ಟ ಪರಿಚಯದ ಭಾಷೆಯನ್ನೇ ಗಮನಿಸಿ " ಓದಿದ್ದು ಎನ್ನುವುದಕ್ಕಿಂತ ಓದು ಬಿಟ್ಟದ್ದು ಎಂದರೇನೇ ಹೆಚ್ಚು ಸತ್ಯ. ಓದುತ್ತಿದ್ದ ಕಂಪ್ಯೂಟರ್ ಡಿಪ್ಲೊಮೋವನ್ನ ಅರ್ಧಕ್ಕೇ ಬಿಟ್ಟು ರಂಗಭೂಮಿಗೆ ಹಾರಿದ್ದು, ಈ ಎಡಬಿಡಂಗಿ ಸ್ಥಿತಿಯಲ್ಲೇ ಅಲ್ಪಸ್ವಲ್ಪ ಸಾಹಿತ್ಯದ ಓದು ಸಾಧ್ಯವಾದದ್ದು, ಓದಿದ್ದನ್ನ ಬರೆದದ್ದು, ಬರೆದದ್ದನ್ನ ಹರಿದದ್ದು! ನಂತರ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಎರಡು ವರ್ಷಗಳ ಕಾಲ ರಂಗಭೂಮಿಯ ಅಭ್ಯಾಸ, ಕಲಿಕೆ ಮತ್ತು ಕಲಿಕೆಯ ಮುರಿಕೆ!"

ಜೋಗಿಯವರ ಒಂದು ಸಂದರ್ಶನ, ಓ ಎಲ್ ನಾಗಭೂಷಣ ಸ್ವಾಮಿಯವರಂಥ ನುರಿತ ವಿಮರ್ಶಕರ ಒಂದು ಮುನ್ನುಡಿ ಮತ್ತು ಮೌನೇಶರ "ಕಥನ ಕೋಲಾಹಲ" ಎಂಬ ಪ್ರವೇಶಿಕೆ ನಮ್ಮನ್ನು ಮೌನೇಶರ ಕತೆಗಳ ಓದಿಗೆ ಸಜ್ಜುಗೊಳಿಸಲು ಲಭ್ಯವಿರುವ ಸಂಗತಿಗಳಾಗಿ ಸಹಕರಿಸುತ್ತವೆ. ಸಾಹಿತ್ಯ ಎಂಬುದು ಮೌನೇಶರಿಗೆ ಏನು ಎನ್ನುವುದನ್ನು ಗಮನಿಸಿದರೆ ಅವರು ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡ ಬರಹಗಾರ ಎಂಬುದು ವೇದ್ಯವಾಗುತ್ತದೆ.

ನವ್ಯ ಕಥಾಪರಂಪರೆಯ ಆತ್ಮಾವಲೋಕನದಲ್ಲೇ ಕುಬ್ಜನಾಗುತ್ತ, "ಕ್ಷುಲ್ಲಕ ದೈನಂದಿನ"ಗಳಲ್ಲೇ ತನ್ನ ಏನೋ ಆಗಬಹುದಾಗಿದ್ದ ಒಳಗಿನ ಬೆಂಕಿ ಆರಿಹೋಗುತ್ತಿದೆ ಎಂಬ ಹಳಸಲು ಹಪಹಪಿಕೆಯ ಸ್ವಗತಪಾಠವಾಗಿ ಬಿಡಬಹುದಾಗಿದ್ದ ಕತೆಯೊಂದು "ಕ್ರೈಂ ಡೈರಿ" ಕತೆಯಲ್ಲಿ ವಾಸ್ತವದೊಂದಿಗಿನ ಅನುಸಂಧಾನ ಸಾಧಿಸಿದೆ. ಹಾಗೆ ನೋಡಿದರೆ ಕೆಟ್ಟು ಹೋದ ಟಿವಿ ಮತ್ತು ಕನ್ಸೂಮರಿಸಂ ಕುರಿತೇ ಇರುವ ಕತೆಯಾದ "ಶಫಿ ಎಲೆಕ್ಟ್ರಿಕಲ್ಸ್" ಕೂಡ ವಾಸ್ತವದೊಂದಿಗಿನ ಅನುಸಂಧಾನದ ಸಾಧ್ಯತೆಗಳನ್ನು ಅರಸುವ ಕತೆಯೇ. ಈ ಅನುಸಂಧಾನವನ್ನು ಇಲ್ಲಿನ ಒಂದೊಂದು ಕತೆಯೂ ಕಂಡುಕೊಳ್ಳುವ ಭಿನ್ನವಿಭಿನ್ನ ಹಾದಿಗಳು ಮೋಡಿ ಮಾಡುವಂತಿವೆ. ಉದಾಹರಣೆಗೆ "ಚಿಟ್ಟೆ ಮತ್ತು ಸೆಲ್ವಿ" ಕತೆಯ ಸೆಲ್ವಿ ಅದನ್ನು ಕನಸುಗಳಲ್ಲಿ ಮತ್ತು ತನ್ನ ಬಾಲ್ಯದ (ಚಿಟ್ಟೆ ಹಿಡಿವ) ಸ್ಮೃತಿಗಳಲ್ಲಿ ಸಾಧಿಸಲು ಪ್ರಯತ್ನಿಸಿದರೆ, "ಮಾಯಾಕೋಲಾಹಲ"ದಲ್ಲಿ ಸೂರ್ಯೋದಯವನ್ನು ಕಾಣುವ ಸಂಭ್ರಮವನ್ನು ಮರಳಿ ತನ್ನ ಸಂವೇದನೆಗೆ ದಕ್ಕಿಸಿಕೊಳ್ಳುವ ಪ್ರಯತ್ನದಲ್ಲಿಯೇ ಅದನ್ನು ಸಾಧಿಸುವ ಆಶಾವಾದವಿದೆ. ಮೌನೇಶರ ಕೇಂದ್ರ ಪಾತ್ರಗಳಿಗೆ ತಮ್ಮ ವರ್ತಮಾನದ ಬಗ್ಗೆ ಕಟುವಾಗಿ, ನಿಷ್ಠುರವಾಗಿ, ವಿಮರ್ಶಾತ್ಮಕವಾಗಿ ನೋಡಿಕೊಳ್ಳುವ ಗುಣವಿದೆ. ಇದಕ್ಕೆ ವ್ಯಂಗ್ಯ, ವಿಡಂಬನೆ, ವೈನೋದಿಕ ಧಾಟಿ ಸಹಕರಿಸಿದೆ. ಆದರೆ ಇದು ನವ್ಯರಲ್ಲಿ ಅತಿರೇಕಕ್ಕೆ ಹೋದ ಆರೋಪಕ್ಕೆ ತುತ್ತಾದ ಗುಣವೇ. "ಕ್ರೈಂ ಡೈರಿ" ಮತ್ತು "ಶಫಿ ಎಲೆಕ್ಟ್ರಿಕಲ್ಸ್" ಕತೆಯ ನಿರೂಪಕ ಕೂಡ ಇದನ್ನು ಮಾಡುತ್ತಾನೆ, "ಫೋಟೋದೊಳಗೆ ಸಿಕ್ಕಿಹಾಕಿಕೊಂಡ ಮುಖ" ಕತೆಯ ನಿರೂಪಕಿಯೂ ಇದನ್ನು ಮಾಡುತ್ತಾಳೆ, "‘ದೊಡ್ಡಮನೆ’ ಪಾಪಮ್ಮ" ಕತೆಯ ನಿರೂಪಕನೂ ತನ್ನ ನೆರೆಹೊರೆಯ ವಿಚಾರ ಪ್ರಸ್ತಾಪಿಸುವಲ್ಲಿ ಇದನ್ನು ಮಾಡುತ್ತಾನೆ ಮತ್ತು "ಮಾಯಾಕೋಲಾಹಲ" ಕತೆ ಕೂಡ ನಮ್ಮ ಬದುಕಿನ ವರ್ತಮಾನದ ಅತಿರೇಕಗಳನ್ನು ವಿಡಂಬಿಸುತ್ತಲೇ ಸಾಗುತ್ತದೆ. ಆದರೆ ಕತೆಗಳ ಒಟ್ಟಾರೆ ಧ್ವನಿ ಅಷ್ಟಕ್ಕೇ ಸೀಮಿತವಾಗದೇ ಅದರಾಚೆಗೆ ಚಾಚಿಕೊಳ್ಳುವುದೇ ಈ ಕತೆಗಳ ವೈಶಿಷ್ಟ್ಯ.

"ಶ್ರದ್ಧಾಂಜಲಿ" ಕತೆ ನಿಜಕ್ಕೂ ಅತ್ಯಂತ ಆಪ್ತವಾಗಿ ಕಾಡುವ, ಬಹುಕಾಲ ನೆನಪಿನಲ್ಲಿ ಉಳಿಯುವ ಕತೆಗಳಲ್ಲೊಂದು. ಸಂಕಲನದ ಎಲ್ಲ ಕತೆಗಳಂತೆಯೇ ಈ ಕತೆಯಲ್ಲೂ ಮೌನೇಶ್ ಪ್ಲಾಟ್ ಕ್ರಿಯೇಟ್ ಮಾಡುವುದಿಲ್ಲ. ಇವರ ಪಾತ್ರಗಳು ಸ್ವತಂತ್ರವಾಗಿ ತಮ್ಮ ರೂಪುರೇಷೆ ಪಡೆದುಕೊಂಡು ನಳನಳಿಸುತ್ತವೆ. ಇಲ್ಲಿನ ಅಜ್ಜ, ಗೌರೀಕಾಕ, ಅವನ ರಾಜಕೀಯ ಆಕಾಂಕ್ಷೆಗಳು, ಮದುವೆ, ಈ ಎಲ್ಲದರ ಜೊತೆಜೊತೆಗೇ ಸಾಗುವ ಕಾಲಮಾನದ ಪಲ್ಲಟಗಳು, ಅಜ್ಜನ ಹೊಸ ಖಯಾಲಿಯ ಬಗ್ಗೆ ನಿರ್ಲಿಪ್ತ ನಿರೂಪಕನ ಧ್ವನಿಯಲ್ಲಿ ಸಿಗುವ ಚಿತ್ರ ಯಾವುದೂ ಒಂದು ಪೂರ್ವಯೋಜಿತ ಚೌಕಟ್ಟಲ್ಲ, ತಂತ್ರವಲ್ಲ, ತಾನು ಹೇಳಹೊರಟಿದ್ದು ಇದನ್ನೇ ಎಂದು ತಲುಪಬೇಕಾದ ಗಮ್ಯದ ಚಿಂತೆಗಳ ಹೊರೆಹೊತ್ತ ಪಯಣವಿದಲ್ಲ; ಜಯಂತರು ಎಲ್ಲೋ ಒಂದೆಡೆ ಹೇಳಿದಂತೆ ಲಗ್ಗೇಜಿಲ್ಲದ ಪ್ರಯಾಣ! ಆದರೆ ಗಮನಿಸಬೇಕಾದ್ದು, ಹೀಗೆ ಹೊರಟಾಗ ಕತೆಗಾರ ಕೆಲವೊಮ್ಮೆ ಎಲ್ಲಿಗೂ ತಲುಪುವುದೇ ಇಲ್ಲ! ಮತ್ತೆ ಕೆಲವೊಮ್ಮೆ ಮಾತ್ರ ಅಚಾನಕ್ ಎಂಬಂತೆ ಮುಕ್ತಿಧಾಮವನ್ನೇ ಕಂಡುಕೊಂಡು ಬಿಡುತ್ತಾನೆ!! ಹಾಗಾದಾಗಲೇ ಓ ಎಲ್ ನಾಗಭೂಷಣ ಅವರು ಹೇಳಿದಂತೆ ಕತೆಗಾರ ಬಿಡುಗಡೆಯನ್ನು ಪಡೆಯುವುದೂ, ಓದುಗ ಬಂಧನಕ್ಕೆ ಒಳಗಾಗುವುದೂ ನಡೆಯುತ್ತದೆ. ಆದರೆ ಜಸ್ಟ್ ಛಾನ್ಸ್ ಫ್ಯಾಕ್ಟರ್. ಉದಾಹರಣೆಗೆ "ಚಲಿಸಿ ಹೋ(ಗ)ದ ಚಹರೆಗಳು" ಕತೆಗೆ ಬಾಲ್ಯಕಾಲದ ನಾಯಿಯೊಂದರ ಕತೆ ಮತ್ತು ತತ್ಸಂಬಂಧಿ ಗೆಳೆಯನನ್ನು ಸಾಯುವ ಮುನ್ನ ಒಮ್ಮೆ ಕಂಡು ನಿಜ ಹೇಳಿಬಿಡಬೇಕೆಂಬ ತುಡಿತ - ಎರಡೂ ಸೇರಿಕೊಳ್ಳುವುದು ಸಹಜವಾಗಿ ಸೇರಿಕೊಂಡಂತೆ ಕಾಣಿಸದೆ ಸೇರಿಸಿದಂತೆ ಕಾಣಿಸುವುದು ಮತ್ತು "ಶಫಿ ಎಲೆಕ್ಟ್ರಿಕಲ್ಸ್" ಕತೆಯ ಟೀವಿ, ಕನ್ಸೂಮರಿಸಂ ಕುರಿತ ಅಚ್ಚರಿ ಇತ್ಯಾದಿಗಳಿಗೆ ಬಾಂಬು, ಭಯೋತ್ಪಾದನೆ, ಕೋಮುವಾದದ ಎಳೆ ಸೇರಿಕೊಳ್ಳುವುದು - ಇಂಪ್ರೂವೈಸೇಶನ್ ಅನಿಸುತ್ತದೆಯೇ ಹೊರತು ಅಚ್ಚುಕಟ್ಟಾಗಿ ಒದ್ದೆ ಮಣ್ಣಲ್ಲಿ ಕಲ್ಲು ಕೂತಂತೆ ಕೂತ ಭಾವ ತರುವುದಿಲ್ಲ. ಅಥವಾ ನನಗೆ ಹಾಗನಿಸಲು ನನ್ನವೇ ಕಾರಣಗಳಿರಬಹುದು. ನನಗೆ "ಚಲಿಸಿ ಹೋ(ಗ)ದ ಚಹರೆಗಳು" ಕತೆಯನ್ನು ಓದುವಾಗ ಪದೇ ಪದೇ ನೆನಪಾದುದು ಸಂದೀಪ ನಾಯಕರ ಹೆಸರಾಂತ ಕತೆ "ಕರೆ". ಅಲ್ಲಿಯೂ ಸಾವಿನ ನಿರೀಕ್ಷೆಯಲ್ಲಿರುವ ಒಬ್ಬ ಮುದುಕ ಸಾಯುವ ಮುನ್ನ ಒಮ್ಮೆ ಕಂಡು ಸಾಯುವ ಆಸೆಯಿಂದ ಯಾರನ್ನೋ ಕಾಯುತ್ತಿದ್ದಾನೆ, ಬರಹೇಳಿದ್ದಾನೆ. ತನಗೆ ಕರೆ ಬಂದಿದೆ ಮತ್ತು ತಾನು ಒಬ್ಬನಿಗೆ ಕರೆ ಕಳಿಸಿದ್ದಾನೆ; ನಡುವೆ ಕತೆಯಿದೆ, ಓದುಗನಿದ್ದಾನೆ. ಅಶೋಕ ಹೆಗಡೆಯವರ ಒಂದು ಕತೆಯಲ್ಲೂ ಇಂಥ ಮರಣಶಯ್ಯೆಯ ಚಿತ್ರವಿದೆ. "ಒಳ್ಳೆಯವನು" ಸಂಕಲನದ "ಕೈಹಿಡಿದವರು" ಕತೆ ಅದು.

"ಫೋಟೋದೊಳಗೆ ಸಿಕ್ಕಿಹಾಕಿಕೊಂಡ ಮುಖ" ಕತೆ ಗಮನಾರ್ಹವಾದ ಒಂದು ಕತೆ ಎಂದು ಅನಿಸುವುದು ಅದು ಚಿತ್ರಿಸುತ್ತಿರುವ ಆಧುನಿಕ ಮನುಷ್ಯನ ವಿಲಕ್ಷಣ ಮನಸ್ಥಿತಿಗಾಗಿ. ಇಲ್ಲಿಯೂ ಕ್ರೈಂ ಡೈರಿಯ ಪ್ರಸ್ತಾಪವಿದೆ, ಈ ವಿಲಕ್ಷಣ ಮನಸ್ಥಿತಿ ಅಥವಾ ಅದನ್ನು ಮನೋಧರ್ಮವೆಂದೇ ಕರೆಯಬೇಕೇನೊ, ಅದಕ್ಕೂ ಈ ಕ್ರೈಮ್‌ಗಳಿಗೂ ಯಾವುದೋ ನಂಟು ಇದ್ದೇ ಇದೆ ಎನಿಸುವಂತೆ. ಸಂಕಲನದ ಮೊದಲ ಕತೆ "ಕ್ರೈಂ ಡೈರಿ"ಯಲ್ಲೇ ಇಂಥ ಒಂದು ಉಲ್ಲೇಖವಿದೆ. ಟೀವಿಯ ಕಾರ್ಯಕ್ರಮದಲ್ಲಿ ಸಿಕ್ಕಿಬಿದ್ದವರಷ್ಟೇ ಕಾಣಿಸಿಕೊಳ್ಳುತ್ತಾರೆ. ಸಿಕ್ಕಿ ಬೀಳದ ಕ್ರಿಮಿನಲ್ಸ್ ಇದ್ದಾರೆ. ಅವರನ್ನು ಬಿಡಿ, ತಮ್ಮ ಕ್ರೈಮ್ ಎಂದು ಪ್ರಾಮಾಣಿಕವಾಗಿ ತಮಗೇ ಎಂದೂ ಅನಿಸಿದೇ ಇರುವಂಥ ನಿಷ್ಪಾಪಿ ಪಾಪಿಗಳೂ ಇದ್ದಾರೆ, ನನ್ನಂಥವರು, ನಿಮ್ಮಂಥವರು. ನಾವು ಯಾವತ್ತೂ ನಮ್ಮನ್ನು ಕಟಕಟೆಯಲ್ಲಿ, ನೇಣುಗಂಭದೆದುರು ನಿಲ್ಲಿಸಿಕೊಂಡಿಲ್ಲ. ಅಥವಾ, ನಮಗೆ ಯಾವತ್ತೂ ನಾವು ಮಾಡಬಾರದಿತ್ತು, ಆಡಬಾರದಿದ್ದು, ಹಾಗಾಗಬಾರದಿತ್ತು ಎನಿಸಿರಲಿಕ್ಕಿಲ್ಲ ಅಥವಾ ಅನಿಸಿದ್ದರೂ ಅದು ನಮ್ಮನ್ನು ಎಡೆಬಿಡದೆ ಕಾಡಿರಲಿಕ್ಕಿಲ್ಲ. ಮತ್ತೆ, ಅಂಥಾ ಪಾಪಪ್ರಜ್ಞೆಯಿಂದ ನರಳುವ ಸ್ಥಿತಿಯೊಂದು ನಮಗೆ ಬಂದುದೇ ಆದರೆ ಅದು ಆಗ ರೋಗ ಎನಿಸಿಕೊಳ್ಳುತ್ತದೆ ಎನ್ನುವುದು ನಮಗೆ ಗೊತ್ತಿದೆ ಕೂಡ. ನಾವು ಗಟ್ಟಿಯಾಗಲು, ಪ್ರಬುದ್ಧರಾಗಲು, ಬೆಳೆದವರಾಗಲು ಹೊರಟವರಲ್ಲವೆ ಮತ್ತೆ. ಕಳೆದುಕೊಂಡ ಸೂಕ್ಷ್ಮಸಂವೇದಿತ್ವ, ಸಂವೇದನೆ, ಭಾವಸ್ಪಂದನದ ಸಾಧ್ಯತೆ ಎಲ್ಲದರ ಬಗ್ಗೆ ನಮಗೆ ಹೆಮ್ಮೆ ಇರಬೇಕೆ, ಹಳಹಳಿಕೆ ಇರಬೇಕೆ ಎಂಬ ಪ್ರಶ್ನೆಗೆ ಖಚಿತ ಉತ್ತರವಿಲ್ಲದ ಸ್ಥಿತಿಯಲ್ಲಿ ನಾವಿರುವಾಗಲೇ ಈ ಕತೆಗಳು ಕಾಡುತ್ತವೆ. ಒಂದು ನಿರ್ದಿಷ್ಟ ಹಂತದಲ್ಲಿ ಚಂದ್ರು ಈ ಫೋಟೋದಲ್ಲಿ ಬಂದವನು ಮನೆಗೂ ಬಂದು ಕದ ತಟ್ಟಿದನೇ ಎಂಬಂತೆ ವರ್ತಿಸುವುದನ್ನು ಗಮನಿಸಬೇಕು. ಬದುಕಿನಲ್ಲಿ ಯಶಸ್ಸಿನ ಹೆಸರಿನಲ್ಲೇ ಮನುಷ್ಯ ಸಾಧಿಸುವ ಆ ಒಂದು ಹಂತವೇ ಈ ಒಂದು ರೋಗದ ಮೂಲವೇ ಅಥವಾ ಅದು (ಅದೇ) ಕ್ರೈಮ್ ಡೈರಿಯೇ ಎನ್ನುವುದು ಚಿದಂಬರ ರಹಸ್ಯದಂಥ ಪ್ರಶ್ನೆ. ನಮ್ಮ ವ್ಯಗ್ರ ಘಳಿಗೆಯನ್ನು ಹಾಗೇ ಕಾಪಿಟ್ಟುಕೊಂಡು ಸ್ವಸ್ಥ ಮನಸ್ಥಿತಿಯಲ್ಲಿ ಪ್ರಯೋಗಾಲಯಕ್ಕೆ ಕಳಿಸಿಕೊಟ್ಟು ನಾವು ನಾವೇ ಕನ್ನಡಿಯಲ್ಲಿ ನಮ್ಮ ನಮ್ಮ ರಿಪೋರ್ಟ್ ಓದಿಕೊಳ್ಳಬೇಕಾದ ಪ್ರಶ್ನೆ ಕೂಡ, ಉತ್ತರವಲ್ಲ.

"‘ದೊಡ್ಡಮನೆ’ ಪಾಪಮ್ಮ" ಹಾಗೂ "ಚಿಟ್ಟೆ ಮತ್ತು ಸೆಲ್ವಿ" ಕತೆಗಳು ಒಂದು ಸೀಮಿತ ಅರ್ಥದಲ್ಲಿ ವರ್ಗಸಂಘರ್ಷದ ಎಳೆಗಳನ್ನು ತಮ್ಮೊಡಲಲ್ಲಿ ಇರಿಸಿಕೊಂಡಿರುವ ಕತೆಗಳು. ಉಳಿದ ಕತೆಗಳೆಲ್ಲಾ ವ್ಯಕ್ತಿಗತ ನೆಲೆಯ ವಿವರ ಮತ್ತು ಕಥಾನಕದ ಚೌಕಟ್ಟು ಹೊಂದಿದ್ದೇ ಸಮಾಜಮುಖಿ ಧೋರಣೆಗಳನ್ನು ಕಾಣಿಸಿದರೆ ಈ ಎರಡು ಕತೆಗಳು ಒಂದು ವರ್ಗದ ಬಗ್ಗೆ ಮಾತನಾಡುತ್ತಿವೆ. ಹಾಗೆಯೇ "ಚಲಿಸಿ ಹೋ(ಗ)ದ ಚಹರೆಗಳು", "ಚಿಟ್ಟೆ ಮತ್ತು ಸೆಲ್ವಿ" ಮತ್ತು "ಮಾಯಾ ಕೋಲಾಹಲ" ಕತೆಗಳನ್ನು ಹೊರತು ಪಡಿಸಿದರೆ ಸಂಕಲನದ ಉಳಿದೆಲ್ಲಾ ಕತೆಗಳೂ ಉತ್ತಮ ಪುರುಷ ನಿರೂಪಣೆಯಲ್ಲೇ ಇವೆ. ಹಾಗೆಂದ ಮಾತ್ರಕ್ಕೆ ಈ ಎಲ್ಲಾ ಕತೆಗಳಲ್ಲೂ ಕತೆ ನಿರೂಪಕನದ್ದೇ ಎಂದಲ್ಲ. "‘ದೊಡ್ಡಮನೆ’ ಪಾಪಮ್ಮ" ಕತೆಯಲ್ಲಿ ಪಾಪಮ್ಮ ಕತೆ ಹೇಳುವವಳು, ನಿರೂಪಕನಲ್ಲ. ಹಾಗೆಯೇ "ಚಲಿಸಿ ಹೋ(ಗ)ದ ಚಹರೆಗಳು" ಮತ್ತು "ಮಾಯಾ ಕೋಲಾಹಲ" ಕತೆಗಳಲ್ಲಿ ಬರುವ ಗೌರೀಕಾಕ ಮತ್ತು ಶಂಕರಮೂರ್ತಿಯಿಂದಾಗಿ ಹೆಸರಿಗೆ ಪ್ರಥಮಪುರುಷ ನಿರೂಪಣೆಯಿದ್ದರೂ ಅವರೇ ಅಲ್ಲಿ ನಿರೂಪಕರೂ ಆಗಿರುವುದು ಗಮನಾರ್ಹ. ಹೀಗೆ ಸಂಕಲನದ ಬಹುತೇಕ ಎಲ್ಲಾ ಕತೆಗಳೂ ವ್ಯಕ್ತಿಗತ ನೆಲೆಯನ್ನೇ ಹೊಂದಿವೆ. ಈ ಮಾತಿಗೆ ಅಪವಾದವಾಗಿ ನಿಲ್ಲುವ ಕತೆಗಳು ಇವೆರಡು. ಪಾಪಮ್ಮ ತೆರೆದಿಡುವ ಕತೆಗೂ ಸೆಲ್ವಿಯ ಕತೆಗೂ ಸಾಮ್ಯತೆಗಳಿವೆ. ಆದರೆ ಅವರ ಸಾವಿನಲ್ಲಿ ಕಂಡುಬರುವ ದುರಂತ ಸಾಮಾಜಿಕ ಆಯಾಮವುಳ್ಳದ್ದು ಎಂದೇನಲ್ಲ. ಆದಾಗ್ಯೂ ಅವರ ನಿಜವಾದ ದುರಂತವಾಗಿರುವ ಬದುಕು ಏನಿದೆ, ಅದಕ್ಕೆ ಸಾಮಾಜಿಕ ಆಯಾಮಗಳಿವೆ. ಇದು ಈ ಎರಡೂ ಕತೆಗಳ ವೈಶಿಷ್ಟ್ಯ. ತುಂಬ ಹಿಂದೆ ಅನನ್ಯ ಕತೆಗಾರ ಕೇಶವ ಮಳಗಿಯವರು ಮಾತನಾಡುತ್ತ ಹೇಳಿದ್ದರು, ನಮ್ಮ ಹೆಚ್ಚಿನ ದಲಿತ ಸಂವೇದನೆಯ ಕತೆಗಳಲ್ಲಿ ಚಿತ್ರಿತಗೊಂಡ ದಲಿತರು ತಮ್ಮ ಬದುಕು ದುರಂತವೆಂದು ತಿಳಿದಿರುವ, ಅಂಥ ಅರಿವಿರುವ ಮತ್ತು ಹಾಗಾಗಿ ಬರೇ ಗೋಳನ್ನೇ ಅಭಿನಯಿಸುವ ದಲಿತರು. ಆದರೆ ನಿಜವಾದ ದಲಿತರಿಗೆ ತಮ್ಮದು ದುರಂತವೆಂಬ ಅರಿವಿರುವುದಿಲ್ಲ ಅಥವಾ ಇದ್ದರೂ ಅವರು ಹಾಗೆ ಬದುಕುತ್ತಿರುವುದಿಲ್ಲ. ಅವರ ದುರಂತವೆಂದರೆ ಅವರು ಅಂಥ ಬದುಕನ್ನು ಸಂಭ್ರಮದಿಂದಲೇ ಬದುಕುತ್ತಿರುತ್ತಾರೆ ಮತ್ತು ಅವರಿಗೇ ತಮ್ಮದು ದುರಂತವೆಂಬ ಅರಿವು ಬಾಧಿಸುತ್ತಿರುವುದಿಲ್ಲ ಎನ್ನುವುದೇ. ಆದರೆ ಕತೆಗಾರ ಪ್ರಾಜ್ಞನಾಗಿರುವುದರಿಂದ, ಎಜುಕೇಟೆಡ್ ಆಗಿರುವುದರಿಂದ ನಮಗೆ ಅವರ ಸಹಜ ಬದುಕನ್ನು ದುರಂತವೆಂಬಂತೆ ಕಟ್ಟಿಕೊಡುತ್ತಾನೆ ಮತ್ತು ಇದರಿಂದಾಗಿ ಅಂಥ ಕತೆಗಳು ವಾಸ್ತವದ ಚಿತ್ರಕೊಡಲು, ಪರಿಣಾಮಕಾರಿಯಾಗಲು ಸೋಲುತ್ತವೆ. ಬಹುಷಃ ದೇವನೂರ ಮಹದೇವ ಅವರೇ ಇದನ್ನು ಮೊದಲಿಗೆ ಗುರುತಿಸಿಕೊಂಡ, ಮೀರಿದ ಕತೆಗಾರ ಎನಿಸುತ್ತದೆ. (ಮಳಗಿಯವರ ಒಟ್ಟು ಮಾತಿನ ಗ್ರಹಿಕೆ ನನ್ನ ವೈಯಕ್ತಿಕ ಇತಿಮಿತಿಗಳ ಲೇಪ ಹೊಂದಿರುವುದರಿಂದ ಇಲ್ಲಿ ಅದನ್ನು ಹೀಗೆಯೇ ಕಾಣಿಸಿದ್ದೇನೆ). ಈ ಮಾತು ಏಕೆ ನೆನಪಾಯಿತೆಂದರೆ, ಮೌನೇಶ್ ಬಡಿಗೇರ್ ಚಿತ್ರಿಸಿರುವ ಈ ದುರಂತ ಬದುಕಿನ ಚಿತ್ರದಲ್ಲಿಯೂ ಮೆಲೊಡ್ರಾಮ ಇಲ್ಲ ಎನ್ನುವುದನ್ನು ಸೂಚಿಸುವುದಕ್ಕಷ್ಟೇ.

"ಮಾಯಾ ಕೋಲಾಹಲ" ಕತೆ ಈ ಸಂಕಲನಕ್ಕೆ ಹೆಸರು ನೀಡಿದ ಪುಟ್ಟ ಕತೆ. ನನಗೆ ಇಷ್ಟವಾಗದ ಒಂದೇ ಒಂದು ಕತೆಯಿದ್ದರೆ ಅದು ಇದೇ.

ಮೌನೇಶರ ಕತೆಗಳಲ್ಲಿ ಕಂಡು ಬರುವ ಇನ್ನೊಂದು ಪ್ರಮುಖ ವೈಶಿಷ್ಟ್ಯವೆಂದರೆ ಅವರು ಕನಸುಗಳನ್ನು, ಕಲ್ಪನೆಯನ್ನು ಒಂದಿನಿತೂ ಅಸಹಜವೆನ್ನಿಸದ ಹಂತದಲ್ಲಿ ಬಳಸಿಕೊಂಡು ಕತೆಗೆ ದಕ್ಕಿಸಿಕೊಡುವ ಲೀಪ್. ಒಮ್ಮೆ ಜಯಂತ್ ಕಾಯ್ಕಿಣಿಯವರು ಹೇಳಿದ್ದ ಮಾತು, ‘ನೀನು ಬರೆಯುವ ಕತೆ ನೀನು ಮಾತ್ರಾ ನೋಡಬಹುದಾದ ಕನಸಿದ್ದಂತೆ!’ ಮೌನೇಶರ ಹೆಚ್ಚಿನ ಕತೆಗಳು ಕನಸಿನಿಂದಲೇ ಎದ್ದು ಬಂದವೇ, ಅಥವಾ ಈ ಕತೆಗಳನ್ನು ನಾವು ಕನಸಿದೆವೇ ಎನ್ನಿಸಿದರೆ ಅಚ್ಚರಿಯಿಲ್ಲ. ಅಷ್ಟೂ ಅಚ್ಚುಕಟ್ಟಾಗಿ ಅವರ ಕತೆಗಳಲ್ಲಿ ಕನಸುಗಳು, ಕನಸುಗಳಲ್ಲಿ ಕತೆಗಳು ಕೂರುತ್ತವೆ.

ಅತ್ಯುತ್ತಮವಾದ ಒಂದಿಷ್ಟು ಕತೆಗಳನ್ನು ಯಾವ ಹಮ್ಮುಬಿಮ್ಮು ಬಿಗುಮಾನವಿಲ್ಲದೆ ನೀಡಿದ್ದಾರೆ ಮೌನೇಶ್. ಪ್ರಶಸ್ತಿ ಬಂದಾಗ ಅವರನ್ನು ಅಭಿನಂದಿಸಿದ ಗೆಳೆಯರಿಗೆ ಅವರು ಒಂದು ಮಾತು ಹೇಳಿದ್ದರು, ಇದೆಲ್ಲ ಬೇಡ ಕಣ್ರೊ, ಸಾಧ್ಯವಿದ್ದರೆ ನನ್ನ ಕತೆಗಳನ್ನೇ ಒಮ್ಮೆ ಓದಿ ನೋಡಿ, ನಿಮಗನಿಸಿದ್ದನ್ನು ಹೇಳಿ. ಅದೇ ನಿಜವಾದ ಅಭಿನಂದನೆ - ಎಂಬರ್ಥದ್ದು. ಅದು ಸರಿ. ಜೊತೆಗೆ, ಇದನ್ನು ಹೇಳದಿರುವುದು ಸಾಧ್ಯವಿಲ್ಲ; ಹೃತ್ಪೂರ್ವಕ ಅಭಿನಂದನೆಗಳು ಮೌನೇಶ್...

No comments: