Tuesday, August 11, 2015

ಕಥೆ ಹುಟ್ಟುವ ಪರಿ

ಒಂದು ಕತೆ ಹೇಗೆ ಹುಟ್ಟುತ್ತದೆ, ಮನಸ್ಸಿನಲ್ಲಿ ಅದರ ಬೀಜ ಮೊಳೆಯುವುದು ಹೇಗೆ ಮತ್ತು ಯಾವಾಗ? ಆಮೇಲೆ ಹೇಗೆ ಅದು ಮೈಕೈ ತುಂಬಿಕೊಂಡು ಒಂದು ಆಕೃತಿಯನ್ನು ಪಡೆದುಕೊಳ್ಳುತ್ತದೆ ಇತ್ಯಾದಿಗಳ ಬಗ್ಗೆ ಮಾತನಾಡುವಾಗ ನಾವು ನಿಜವಾಗಿ ಹಾಯ್ದುಬಂದ ಪ್ರಕ್ರಿಯೆಯ ಜೊತೆ ನಮ್ಮ ಕಲ್ಪನೆ, ದೊಡ್ಡಸ್ತಿಕೆಗಳೆಲ್ಲ ಸೇರಿಕೊಳ್ಳುವ ಅಪಾಯವಿದೆ!

ಮೊತ್ತ ಮೊದಲಿಗೆ ಪತ್ರಿಕೆಯಲ್ಲಿ ಹೆಸರು ಕಾಣಿಸಿಕೊಳ್ಳುವುದೇ ಒಂದು ಮಹದಾಸೆಯಾಗಿದ್ದ ನನ್ನಂಥ ಸಾಮಾನ್ಯ ಕತೆಗಾರರು ಬರೆಯುವ ಕತೆಯ ವಸ್ತು, ವಿನ್ಯಾಸ ಮತ್ತು ಮಾದರಿಯನ್ನು ಸಿದ್ಧ ಮಾದರಿ ಎಂದು ಇವತ್ತು ನಾವು ಏನನ್ನು ಕರೆಯುತ್ತೇವೆಯೋ ಅದರ ಚೌಕಟ್ಟಿನಲ್ಲೇ ಇರುವುದು ಸಹಜ ಮತ್ತು ಅನಿವಾರ್ಯ. ಹೀಗೆ ನಾನು ಸುಮಾರು ಮುವತ್ತು ಕತೆಗಳನ್ನಾದರೂ ಬರೆದು ಕತೆಗಾರನಾಗಿಯೇ ಬಿಟ್ಟೆ ಎನ್ನುವ ಜಂಭದಲ್ಲಿದ್ದಾಗ ವಿವೇಕ ಶಾನಭಾಗರ ದೇಶಕಾಲಕ್ಕೆ ಒಂದು ಕತೆಯನ್ನು ಕಳಿಸಿದೆ. ದೇಶಕಾಲದ ಬಗ್ಗೆ, ಅದು ಸದಾ ಅನುಸರಿಸುತ್ತ ಬಂದ ಮೌಲ್ಯಮಾಪನದ ಮಾನದಂಡದ ಬಗ್ಗೆ ನಿಮಗೆಲ್ಲ ಗೊತ್ತಿದೆ. ಸಹಜವಾಗಿಯೇ ನನ್ನ ಕತೆ ಪ್ರಕಟವಾಗಲಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ ಒಂದು ದಿನ (ಅಕ್ಟೋಬರ್ 7,2005) ವಿವೇಕ್ ಶಾನಭಾಗರ ಫೋನ್ ಬಂತು! ಸ್ವಲ್ಪಹೊತ್ತು ವಿರಾಮವಾಗಿ ಮಾತನಾಡಬಹುದೇ ಎಂದು ತೊಡಗಿದ ವಿವೇಕ್ ಆವತ್ತು ಬಹಳ ಹೊತ್ತು ಮಾತನಾಡಿದರು. ನಾನು ಅದನ್ನೆಲ್ಲ ಟಿಪ್ಪಣಿ ಮಾಡಿಕೊಂಡೆ ಮತ್ತು ಆನಂತರ ಅದನ್ನು ಅವರಿಗೇ ಈಮೇಲ್ ಮಾಡಿದೆ. ಅವರು ಹೇಳಿದ್ದನ್ನು ನಾನು ಹೇಗೆ ಗ್ರಹಿಸಿದ್ದೇನೆ, ಅದರಲ್ಲೇನಾದರೂ ತಪ್ಪಿದ್ದೇನೆಯೇ ಎಂದು ತಿಳಿದುಕೊಳ್ಳುವುದು ನನ್ನ ಉದ್ದೇಶವಾಗಿತ್ತು. ನನ್ನ ಕತೆಯನ್ನು ಕೈಲಿಟ್ಟುಕೊಂಡೇ ಅದನ್ನು ಎಳೆ ಎಳೆಯಾಗಿ ಜಾಲಾಡಿದ ವಿವೇಕ್ ಬಗ್ಗೆ ನಾನು ಅಚ್ಚರಿಗೊಂಡಿದ್ದೆ. ನಿಮಗೆ ಕತೆ ಕಳಿಸಿ ಅದು ತಿರಸ್ಕೃತರಾದವರಿಗೆಲ್ಲ ಈ ತರ ಮಾರ್ಗದರ್ಶನ ಮಾಡುತ್ತೀರಾ ಎಂದೊಮ್ಮೆ ಕೇಳಿದ್ದೆ ಕೂಡ!

ನಿನ್ನ ಕತೆ, ಕತೆಯ ವಸ್ತು, ಕನ್ನಡ ಭಾಷೆ ಚೆನ್ನಾಗಿದೆ. ಆದರೆ ಕೆಲವು ಸಲಹೆ-ಸೂಚನೆ ಕೊಡಬೇಕೆನಿಸುತ್ತದೆ. ನೀನು ಹೇಳುವುದು ಹೆಚ್ಚಾಗುತ್ತದೆ, ಕಾಣಿಸುವುದು ಕಡಿಮೆಯಾಗುತ್ತದೆ. ನಿನ್ನ ಕತೆಯ ಕೆಲವೊಂದು ವಾಕ್ಯ, ಸಂದರ್ಭ ಎಷ್ಟು ಚೆನ್ನಾಗಿದೆ ಎಂದರೆ ಇಡೀ ಕತೆಯಲ್ಲಿ ಅದು ಬರಬೇಕಾಗಿದೆ. ಒಂದು ಸಂದರ್ಭ ಅಥವಾ ಘಟನೆಯನ್ನು ನಾಲ್ಕು ಮಂದಿ ಕಾಣುತ್ತ ನಾಲ್ಕು ತರ ಯೋಚಿಸಬಹುದು. ಆದರೆ ನೀನು ಅದರಿಂದ ದೂರ ನಿಂತವನ ಧ್ವನಿಯಲ್ಲಿ ಹೇಳತೊಡಗಿದೊಡನೆ ಅದೆಲ್ಲ ಹೇಳಿಕೆಗಳು, ಸ್ಟೇಟ್ಮೆಂಟ್ಗಳು ಆಗಿಬಿಟ್ಟು ಓದುಗನಿಂದಲೂ ಹೊರಗೇ ಉಳಿದುಬಿಡುತ್ತವೆ. ಘಟನೆಗಳನ್ನು ಬಗೆ, ಆಗ ಅವು ಮಾತನಾಡುತ್ತವೆ. ಒಳ್ಳೊಳ್ಳೆಯ ಕತೆಗಳನ್ನು ಗಮನಿಸು. ಅವುಗಳಲ್ಲಿ ಬರುವ ಮಾತುಕತೆಗಳು, ವಿವರಗಳು ಏನಿಲ್ಲ ಅನಿಸುವಾಗಲೇ ತಮ್ಮ ಕೆಲಸ ಮಾಡಿರುತ್ತವೆ. ಹಾಗೆ ಬರೆಯಬೇಕು.

ನಿನ್ನ ಈ ಕತೆಯಲ್ಲಿ ರಜನಿಯ ಗಂಡ ಸಾಯುವುದು, ಅವಳು ಆತ್ಮಹತ್ಯೆ ಮಾಡಿಕೊಳ್ಳುವುದು ಎಲ್ಲ ಬರುತ್ತದೆ. ಅದೆಲ್ಲ ತುಂಬ ಆದ ಕೂಡಲೇ ಓದುಗ ದೂರವಾಗುತ್ತಾನೆ.

ಒಂದು ಮೇಜಿನ ಮೇಲೆ ಹತ್ತು ಹದಿನೈದು ವಸ್ತುಗಳನ್ನಿಟ್ಟು ವಿವರಿಸು ಎಂದಾಗ ನೀನು ಏನನ್ನು ವಿವರಿಸುತ್ತೀ ಎಂಬುದರ ಮೂಲಕ ಏನನ್ನು ಕಾಣಿಸುತ್ತೀ ಎನ್ನುವುದು ಅವಲಂಬಿತವಾಗಿರುತ್ತದೆ. ಬರೇ ಒಂದು ವಸ್ತುವನ್ನೇ ವಿವರಿಸಬಹುದು. ಅಥವಾ ಎಲ್ಲವನ್ನೂ. ಆದರೆ ಅದು, ಆ ವಿವರಣೆ ಏನನ್ನು ಕಾಣಿಸುತ್ತದೆ ಅದು ಮುಖ್ಯವಾಗುತ್ತದೆ.

ಕತೆಯಲ್ಲಿ ಬಹಳ ಸೂಕ್ಷ್ಮವಾದ ಸಂಗತಿಗಳಿವೆ, ಘಟನೆಗಳಿವೆ. ಅದನ್ನಿಟ್ಟುಕೊಂಡು ಬರೆದ ಕತೆ ಏರಿದ ಸ್ವರದಲ್ಲಿ ತೊಡಗಿದರೆ ಹೇಗೆ? ಪಿಸುನುಡಿಯಲ್ಲಿ ಹೇಳಿದಂತಿರಬೇಕಿತ್ತು. ಇಂಥದ್ದನ್ನೆಲ್ಲ ಗಟ್ಟಿಯಾಗಿ ಹೇಳತೊಡಗಿದರೆ ಸೂಕ್ಷ್ಮಗಳಿಗೆ ಬರುವಾಗ ಓದುಗನ ಮನಸ್ಸು ಅಂಥದ್ದಕ್ಕೆ ಸಿದ್ಧಗೊಂಡಿರುವುದಿಲ್ಲ. ಆರಂಭದಿಂದಲೂ ನಾವು ಅದನ್ನು ಸಾಧಿಸಿಕೊಂಡು ಹೇಳಬೇಕಾಗುತ್ತದೆ.

ಇದೆಲ್ಲ ಒಂಥರಾ ನಮ್ರನಾಗುತ್ತ ಹೋಗುವ ದಾರಿ. ನಾವು ನಮ್ಮನ್ನ ಅದಕ್ಕೆಲ್ಲ ಒಪ್ಪಿಸಿಕೊಳ್ಳುತ್ತ, ಬಿಟ್ಟುಕೊಳ್ಳುತ್ತ ಬರಬೇಕಾಗುತ್ತದೆ. ಅಹಂಕಾರ ಕಳೆದುಕೊಳ್ಳುತ್ತ ಹೋಗಬೇಕಾಗುತ್ತದೆ.

ವಿವೇಕ್ ತರವೇ ಜಯಂತ್ ಕಾಯ್ಕಿಣಿ ನನಗೆ ಮಾರ್ಗದರ್ಶನ ಮಾಡಿದ್ದಾರೆ. ನನ್ನ ಕೆಲವೊಂದು ಕತೆಗಳನ್ನು ನಮ್ಮ ಮನೆಯಲ್ಲೇ ಮಂಚದ ಮೇಲೆ ಕೂತು ಓದಿ ಇದನ್ನು ಹೀಗೆ ಬೆಳೆಸು, ಇದರಲ್ಲಿ ತುಂಬ ಭಾಗ ತೆಗೆದು ಹಾಕಬೇಕು, ನೀನು ಎಲ್ಲವನ್ನು ಅಂತೆ ಕಂತೆ ಮಾಡಿ ಹೇಳ್ತೀ, ಅದನ್ನು ಬಿಟ್ಟು ಬಿಡು, ಕತೆಯನ್ನು ವರ್ತಮಾನದ ಹುಡುಕಾಟವಾಗಿಸು, ಗೊತ್ತಿರುವ ಕತೆಯನ್ನೇನು ಬರೆಯುತ್ತೀಯ, ಗೊತ್ತಿಲ್ಲದ ಕತೆಯನ್ನು ಬೆನ್ನತ್ತಿ ಹೋಗು ಎಂದೆಲ್ಲ ಪ್ರಾಕ್ಟಿಕಲ್ ಆದ ತರಬೇತಿ ಕೊಟ್ಟಿದ್ದಾರೆ. ಸಿಲೆಬಸ್ ಇಟ್ಟುಕೊಂಡು ಬರೆಯಬೇಡ. ನವ್ಯ-ಬಂಡಾಯ, ಕತೆ ಎಂದರೆ ಹೀಗಿರಬೇಕು, ಸಾಮಾಜಿಕ ಅರ್ಥಪೂರ್ಣತೆ, ಮೆಸೇಜು, ಇತ್ಯಾದಿ ಎಲ್ಲ ತಲೆಯಲ್ಲಿಟ್ಟುಕೊಂಡು ಬರೆಯಬೇಡ. ನೀನು ಮಾತ್ರಾ ಬರೆಯಬಹುದಾದ, ನೀನು ಮಾತ್ರ ಹೇಳಲು ಸಾಧ್ಯವಾದಂಥ ಕತೆಗಳಿರುತ್ತವೆ ನಿನ್ನೊಳಗೆ, ನಿನ್ನ ಕನಸುಗಳಿದ್ದ ಹಾಗಿನವು. ನೀನು ಮಾತ್ರ ಕಾಣಬಹುದಾದವು. ಅಂಥವನ್ನು ಬರೆ. ಅದು ತೀರ ಸಣ್ಣ, ಸರಳ, ಸಿಂಪಲ್ ವಿಷಯದ ಬಗ್ಗೆಯೇ ಆಗಿರಬಹುದು, ಪರವಾಗಿಲ್ಲ. ನಿನಗೆ ಹಾಗೆ ಕಾಣಿಸುತ್ತಿರಬಹುದು. ಆದರೆ ನೀನದನ್ನು ಉಳಿದವರಿಗೆ ಹೇಳಬೇಕಾಗಿರುತ್ತದೆ. ಅಂಥ ಕತೆಗಳನ್ನು ಬರೆ ಎಂದಿದ್ದರು ಜಯಂತ್. ಪ್ರತಿಯೊಂದು ಬರಹದಲ್ಲಿ ಬರೆದವನ ಮನಸ್ಸೊಂದು ಕೂತು ಬರಹದಾಚೆಗೂ ಓದುಗನ ಜೊತೆ ಮಾತನಾಡುವ ಬಗೆಯನ್ನು ವಿವರಿಸಿದವರು ಜಯಂತ್. ನನಗ್ಯಾಕೆ ಯಾರೂ ಈ ಮಾತನ್ನು ಮೊದಲೇ ಹೇಳಿರಲಿಲ್ಲ ಅನಿಸಿತ್ತು ಕೇಳಿದಾಗ. ನನ್ನ ಸಂಕಲನ ಪ್ರಕಟವಾದಾಗ ಎಚ್.ಎಸ್.ರಾಘವೇಂದ್ರ ರಾವ್ ಕರೆ ಮಾಡಿ ನನ್ನ ಕತೆಗಳ ಅನೇಕಾನೇಕ ಕೊರತೆಗಳ ಬಗ್ಗೆ ತಿಳಿಹೇಳಿದ್ದಾರೆ. ಕತೆಗಾರ ತನ್ನೊಳಗಿನ ಪ್ರಕ್ಷುಬ್ದತೆಯನ್ನು ಕತೆಯ ಪ್ರಕ್ಷುಬ್ದತೆಯನ್ನಾಗಿಸದೇ ಮಾಸ್ತಿಯವರ ಹಾಗೆ, ಚಿತ್ತಾಲರ ಪಾತ್ರದ ಪ್ರಕ್ಷುಬ್ಧತೆಯನ್ನು ಕತೆಯಾಗಿಸಿ ಬರೆಯಬೇಕು. ಅವರ ಕತೆಗಳನ್ನು ಗಮನಿಸಿದರೆ ಪಾತ್ರದ ಪ್ರಕ್ಷುಬ್ಧತೆಯನ್ನು ಕತೆಯಾಗಿಸುವ ವಿಧಾನಗಳು ತಿಳಿಯುತ್ತವೆ. ಕತೆಯಲ್ಲಿ ಕತೆಯ ಪಾತ್ರಗಳ, ಇತರ ವಿವರಗಳಷ್ಟೇ ಗಮನ ವಸ್ತುಲೋಕದ ವಿವರಗಳಿಗೂ ಕೊಡಬೇಕು. ಮುಂತಾದ ಸಲಹೆಗಳನ್ನವರು ನೀಡುವ ಪ್ರಯಾಸ ತೆಗೆದುಕೊಳ್ಳುವ ಪ್ರೀತಿಯನ್ನು ತೋರಿಸಿದ್ದನ್ನು ಮರೆಯುವಂತಿಲ್ಲ.

ತುಂಬ ಚೆನ್ನಾಗಿ ಬರೀತೀಯ ಎಂದವರಿಗಿಂತ ಥತ್ ಎಂದು ಉಗಿಯದೇ ನನ್ನ ಮಿತಿ-ದೌರ್ಬಲ್ಯ ಮತ್ತು ತಪ್ಪು ರೀತಿನೀತಿಗಳ ಬಗ್ಗೆ ಮಾತನಾಡಿದವರು ಹೆಚ್ಚು ನಿಜ ಹೇಳಿದ್ದಾರೆ, ಪ್ರಾಮಾಣಿಕವಾಗಿ ನನ್ನ ಬೆಳವಣಿಗೆಯನ್ನು ಬಯಸಿ ಹರಸಿದ್ದಾರೆ. ಚಿತ್ತಾಲರ ಪುಸ್ತಕಗಳು, ಲಂಕೇಶರ ಬರಹಗಳಲ್ಲಿ ಅಲ್ಲಿ ಇಲ್ಲಿ ಚದುರಿದಂತೆ ಕಾಣಿಸಿಕೊಂಡ ಸಲಹೆಗಳು ನನ್ನನ್ನು ಪೊರೆದಿವೆ. ಆದರೆ ಇಷ್ಟರಿಂದಲೇ ಇವರೆಲ್ಲ ಬಯಸಿದ ಕತೆಗಾರ ನಾನಾಗಿಬಿಟ್ಟೆ ಎಂದೇನಲ್ಲ. ಕಥನ ಕಲೆ ಎಂಬುದು ಸುಲಭದ ವಸ್ತುವಲ್ಲ, ಬರೆಯಲು ಬಂದವರೆಲ್ಲ ಅದು ಸಿದ್ಧಿಸಿದವರಲ್ಲ ಮತ್ತು ಬರೆದಿದ್ದೆಲ್ಲ ಸಾಹಿತ್ಯವಾಗುವುದಿಲ್ಲ ಎಂಬ ಅರಿವು, ಪ್ರಜ್ಞೆ ಮತ್ತು ಗಂಭೀರತೆಯ ವಿವೇಕವನ್ನು ಈ ಮಹನೀಯರ ಒಡನಾಟದಿಂದ ಕಂಡುಕೊಳ್ಳುವಂತಾಯಿತು. ನಿಶ್ಚಯವಾಗಿಯೂ ನನ್ನ ಬರೆಯುವ ವೇಗ ಸ್ವಲ್ಪ ತಗ್ಗಿತು. ಓದುವ ಹವ್ಯಾಸ ಹೆಚ್ಚಾಯಿತು.

ಈ ನಡುವೆ ಸಾಹಿತಿಗಳೆನಿಸಿಕೊಂಡವರ ನಡುವಿನಿಂದಲೇ ಮನ ಮುದುಡುವಂಥ ಅನೇಕ ವಿದ್ಯಮಾನಗಳೂ ಎದ್ದು ಬಂದಿದ್ದಿದೆ. ಈರ್ಷ್ಯೆ, ಉತ್ಸಾಹ ತಗ್ಗಿಸಲೆಂದೇ ತೂರಿಬಿಟ್ಟ ಮಾತು, ಅನಗತ್ಯವಾಗಿ ಇಲ್ಲದ್ದನ್ನೇ ಎತ್ತಿ ಆಡುವಂತೆ ಪ್ರೇರೇಪಿಸಿದ ಸಣ್ಣತನ ಅಲ್ಲಲ್ಲಿ ಕಾಣಿಸಿಕೊಂಡಿದ್ದಿದೆ. ನೀನು ಇನ್ನೊಂದು ಹತ್ತು ವರ್ಷ ಏನೂ ಬರೆಯದೇ ಬರೇ ಓದಿಕೊಂಡಿದ್ದರೆ ಒಳ್ಳೆಯದು ಎಂದು ಒಬ್ಬರು ಹಿರಿಯ ಸಾಹಿತಿಗಳು ಸಲಹೆ ನೀಡಿದರು. ಇನ್ನೊಬ್ಬ ವಿಮರ್ಶಕರು ನನ್ನನ್ನು ಪರಿಚಯಿಸುತ್ತ ನನಗೆ ಯಾವುದೇ ಜೀವನಾನುಭವವಿಲ್ಲ, ಅವರಿವರು ಬರೆದಿದ್ದನ್ನು ಓದಿಕೊಂಡು ಅದೇ ಜೀವನ ಎಂದು ಭಾವಿಸಿ ನನ್ನದನ್ನು ಬರೆಯುವ ‘ವ್ಯಸನ’ಕ್ಕೆ ಬಲಿಯಾಗಿದ್ದೇನೆಂದು ಬರೆದರು. ಇನ್ನೂ ಕೆಲವು ಕಿರಿಯರು ನನಗೆ ಕನ್ನಡವೇ ಸರಿಯಾಗಿ ಬರುವುದಿಲ್ಲ ಎಂದು ಅಂತರ್ಜಾಲದಲ್ಲೆಲ್ಲ ಬರೆದುಕೊಂಡು ಅದಕ್ಕೆ ಬ್ಲಾಗ್ ಓದುಗರ ಬೆಂಬಲ ಯಾಚಿಸಿ ತಾವು ಹೇಳಿದ್ದು ಸರಿ ಎಂದು ಅಭಿಮತ ಸಂಗ್ರಹಿಸಿದ್ದೂ ಇದೆ. ಹಾಗೆಯೇ ನಾನು ಉಲ್ಲೇಖಿಸುವ ಹೆಸರುಗಳು, ಒಡನಾಟ ಗಮನಿಸಿ ನನ್ನನ್ನು ಅವರ ಇವರ ಗುಂಪಿನೊಂದಿಗೆ ಸಮೀಕರಿಸಿ ದೂರ ಮಾಡಿದವರೂ ಇದ್ದಾರೆ. ಇದೆಲ್ಲ ಬರೆಯುವ ಉತ್ಸಾಹ ಮತ್ತು ಅಂಥ ಮನಸ್ಥಿತಿಗೆ ಅಗತ್ಯವಾದ ಪ್ರೀತಿಯನ್ನು ಕೊಲ್ಲುವ ಬಗೆ. ಆಗೆಲ್ಲ ಏನೀ ಸಾಹಿತ್ಯ ಎಂದರೆ ಹೀಗೇನಾ, ಯಾವ ಪುರುಷಾರ್ಥಕ್ಕೆ ಸಾಹಿತಿ ಅನಿಸಿಕೋ ಬೇಕು ಅನಿಸಿದ್ದಿದೆ. ಒಟ್ಟಾರೆಯಾಗಿ ಏನಾಯಿತೆಂದರೆ ಬರೆಯುವ ಪ್ರಕ್ರಿಯೆಯ ಬಗ್ಗೆ ಮತ್ತು ಸಾಹಿತಿಗಳೊಂದಿಗಿನೆ ಒಡನಾಟದ ಬಗ್ಗೆ ಒಂದು ಬಗೆಯ ‘ಎಚ್ಚರ’ ಮೂಡಿತು. ಅದರ ಗಾಂಭೀರ್ಯದ ಅರಿವು ಮೂಡಿದ ಹಾಗೆಯೇ ಅದರಲ್ಲಿ ತೊಡಗಿದ ಅನೇಕರ ಗಿಮ್ಮಿಕ್ಕುಗಳು, ಸಣ್ಣತನ, ಅಡ್ಡದಾರಿಗಳಲ್ಲಿ ಪ್ರಖ್ಯಾತರಾಗಿ ಕೂತವರ ಚರಿತ್ರೆಗಳೂ ಗೊತ್ತಾಗಿ ಕತೆಗಾರ, ಸಾಹಿತಿ, ದೊಡ್ಡ ಮನುಷ್ಯ ಎಂದೆಲ್ಲ ಅನಿಸಿಕೊಳ್ಳುವುದಕ್ಕಿಂತ ಮೊದಲು ಮನುಷ್ಯ ಅನಿಸಿಕೊಂಡರೇ ಸಾಕು ಅನಿಸಿತು. ಇದೆಲ್ಲ ಒಂದು ಹಂತ, ಜೀರ್ಣಿಸಿಕೊಂಡು ಸಾಗಬೇಕಾದ, ಕಲಿಯಬೇಕಾದ ಪ್ರಮುಖ ಹಂತ.

ಆದರೆ ಬರೆಯುವ ವಿದ್ಯಮಾನ ಈ ‘ಎಚ್ಚರ’ದ ಪ್ರಕ್ರಿಯೆಯೇ ಅಲ್ಲ. ಅದು ಒಂದು ಸುಪ್ತವಾದ ಪ್ರಕ್ರಿಯೆ. ಎಷ್ಟೋ ಬಾರಿ ನಾವು ಇಂಥಾದ್ದನ್ನೇ ಬರೆಯಲು ಹೊರಟಿದ್ದೇವೆ ಎಂದು ಹೇಳಲಾರದ ಸ್ಥಿತಿಯೇ ಕತೆಗಾರನದ್ದು. ಇನ್ನೆಷ್ಟೋ ಬಾರಿ ಬರೆಯಬೇಕೆಂದು ಅಂದುಕೊಂಡಿದ್ದೇ ಒಂದು ಬರೆದಿದ್ದೇ ಇನ್ನೊಂದು ಪರಿಸ್ಥಿತಿ! ಮತ್ತೂ ಕೆಲವೊಮ್ಮೆ ಕನಸಿನಲ್ಲೂ ಕಲ್ಪಿಸಿರದ ಏನೋ ಒಂದನ್ನು ಬರೆದು ಅದು ಬೇರೆ ಅಪಾರ ಮೆಚ್ಚುಗೆಗೆ ಪಾತ್ರವಾದ ಸೋಜಿಗದಲ್ಲಿ ಅದ್ದಿದ ಮುಜುಗರದ ಸ್ಥಿತಿ! ಇದು ಎಂಥೆಂಥ ದೊಡ್ಡ ಕತೆಗಾರರನ್ನು,ಕಾದಂಬರಿಕಾರರನ್ನೂ ಬಿಟ್ಟಿಲ್ಲದ ಸತ್ಯ. ಹಾಗಿದ್ದರೆ ಬರೆಯುವ ಪ್ರಕ್ರಿಯೆಯನ್ನು ಹೀಗೆಯೇ ಎಂದು ವಿವರಿಸಲು ಸಾಧ್ಯವೆ?

ಸರಳವಾಗಿ ಇಷ್ಟು. ಜೀವನದಲ್ಲಿ ಏನೇನೋ ನಡೆಯುತ್ತದೆ. ಬದುಕು ನಮಗೆ ಕೊಡಬಹುದಾದ್ದು ಕೇವಲ ಅನುಭವಗಳನ್ನು ಎಂದು ಅರಿವಾದ ಮೇಲೂ ಒಂದು ವಿದ್ಯಮಾನ ಅನುಭವವಾಗಿ ರಕ್ತಕ್ಕಿಳಿಯಲು ಕೆಲವೊಮ್ಮೆ ಸಮಯ ತಗಲುತ್ತದೆ. ಇನ್ನು ಕೆಲವೊಮ್ಮೆ ತತ್ಕ್ಷಣಕ್ಕೇ ಅದರ ಸೂಕ್ಷ್ಮ ನಮಗೆ ತಟ್ಟಿಬಿಡುತ್ತದೆ. ಅಂತೂ ಒಂದು ಅನುಭವ ಜೀರ್ಣವಾದ ಕಾಲಕ್ಕೆ ಮನಸ್ಸು ಅದರ ಅರ್ಥಪೂರ್ಣತೆಯನ್ನು ಕುರಿತೇ ಧ್ಯಾನಿಸುತ್ತದೆ. ಯಾಕೆ ಹೀಗಾಯಿತು, ನನಗೇ ಯಾಕೆ ಹೀಗಾಗಬೇಕು, ಇದು ಏನು ಮಾಡಿದ್ದರ ಫಲ ಅಥವಾ ಏನಿರಬಹುದು ಇದರ ಮರ್ಮ? ಹೇಗೆ ನಡೆದುಕೊಂಡರೆ ಜಾಣತನವಾದೀತು, ಮುಂದೆ ಅದರಿಂದ ವಿಷಾದಪಡುವುದು ತಪ್ಪೀತು ಎಂದೆಲ್ಲ ಮನಸ್ಸು ನಡೆದು ಹೋದದ್ದಕ್ಕೆ ಅರ್ಥಹಚ್ಚುವ ಕೆಲಸ (ಅದನ್ನು ವ್ಯರ್ಥವೆಂದೇ ಹೇಳುವವರು ಇದ್ದಾಗ್ಯೂ) ಮಾಡುವುದಿದೆ. ಸಾಹಿತಿಗಳಿಗೆ ಬಹುಷಃ ಈ ಚಟ ಹೆಚ್ಚು. ಎಲ್ಲಾ ಸಾಹಿತಿಗಳಿಗೆ ಎಂದೇನೂ ಅಲ್ಲ. ಯಾವತ್ತೂ ತಾವು ತಮ್ಮ ಮನಸ್ಸಿನಲ್ಲೇ ಮಾತನಾಡಿಕೊಳ್ಳದ ಸಾಹಿತಿಗಳೂ ಇದ್ದಾರಂತೆ! ಅಂತೂ ಹೀಗೆ ಭೂತದ ಅನುಭವವನ್ನು ಪ್ರೊಫೆಟಿಕ್ ಆಗಿ ನೋಡುವ, ಅದರ ಅರ್ಥ-ಸಂಕೇತ ಇತ್ಯಾದಿಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಚಟ ಇರುವ ಮಂದಿಗೆ ಒಂದು ಬಗೆಯ ಕತೆಗಳು ಕಾಣತೊಡಗುತ್ತವೆ. ಇದು ಸರಿ, ಇದು ತಪ್ಪು ಎಂದು ಗೆರೆ ಎಳೆದಂತೆ ಹೇಳಲಾಗದ ಅನೇಕ ಸಂಕೀರ್ಣವಾದ ವಿದ್ಯಮಾನಗಳನ್ನು ನಾವು, ಕತೆಗಾರರು ಬೇರೆ ಬೇರೆ ಸಂದರ್ಭದಲ್ಲಿಟ್ಟು ಅದರ ಅರ್ಥ ಶೋಧಿಸಬೇಕಾಗುತ್ತದೆ. ಉದಾಹರಣೆಗೆ, ಕತೆಯೊಂದರಲ್ಲಿ ಒಬ್ಬ ವಿಧುರ ಮತ್ತು ವಿಧವೆ ನಡುವಿನ ನವಿರಾದ ಸಂಬಂಧವೊಂದು ಸುರುವಾಗಿ ಇಬ್ಬರ ಪೂರ್ವದ ದಾಂಪತ್ಯದ ಬಿರುಕುಗಳನ್ನೂ ಎಳೆ ಎಳೆಯಾಗಿ ಬಿಚ್ಚಿಡುತ್ತ ಹೋಗುವುದು ಮಾತ್ರವಲ್ಲ ಈ ಇಬ್ಬರ ನಡುವಿನ ಅಂತರವನ್ನು ಕುಗ್ಗಿಸುತ್ತ ಬಂದು ಕ್ರಮೇಣ ಜೋಡಿಗಳೇ ಎಂಬಂತೆ ಕಾಣಿಸತೊಡಗುತ್ತಾರೆ. ಅಲ್ಲಿಗೆ ಇಬ್ಬರ ಮಕ್ಕಳೂ ಈ ತರದ ಸಂಬಂಧವನ್ನು ವಿರೋಧಿಸುವ ಇತ್ಯಾದಿ ಘಟನಾವಳಿಗಳು ತೊಡಗುತ್ತವೆ. ದೈಹಿಕವಲ್ಲದ ಪ್ರೇಮ ದೈವಿಕವಾದದ್ದು, ದೈಹಿಕವಾದದ್ದು ಕೊಳಕು ಎನ್ನುವಂಥಾ ಒಂದು ಸ್ಥಾಪಿತ ಮೌಲ್ಯದೊಂದಿಗೆ ಕತೆ ಮುಗಿಯುತ್ತದೆ. ಇಲ್ಲಿ ಅವರಿಬ್ಬರೂ ಯಾಕೆ ವಿಧವೆ-ವಿದುರರೇ ಆಗಿರಬೇಕು? ಇದು ಕತೆಗಾರ ಮಾಡಿಕೊಂಡ ಅನುಕೂಲಶಾಸ್ತ್ರ. ಇಬ್ಬರಲ್ಲಿ ಯಾರಾದರೂ ಒಬ್ಬರಿಗೆ ಯಾಕೆ ಪತಿ ಅಥವಾ ಪತ್ನಿ ಇದ್ದಿರಬಾರದು? ಅಥವಾ ಯಾಕೆ ಒಂದು ಪಾತ್ರ ಅವಿವಾಹಿತವಾಗಿರಬಾರದು? ಯಾಕೆ ದೈಹಿಕವಾದದ್ದು ಅಪವಿತ್ರ ಸಂಬಂಧವಾಗಬೇಕು? ಮನಸ್ಸು ಮತ್ತು ದೇಹ ಒಂದೇ ಜೀವದ ಅವಿನಾಭಾವದಿಂದ ವರ್ತಿಸಬೇಕಾದ ಅಂಗಗಳಲ್ಲವೆ? ದೇಹವೇಕೆ ಕೊಳಕು, ಮನಸ್ಸೇಕೆ ಪವಿತ್ರ! ಜಿಜ್ಞಾಸೆಗಳಿಂದ ಕತೆಗಾರ ಹೊಸ ಹೊಸ ದರ್ಶನಗಳತ್ತ ಕತೆಗಳ ದಾರ ಹಿಡಿದು ಶೋಧಿಸುತ್ತಾನೆ. ಈ ಶೋಧ ಓದುಗರದ್ದೂ ಆಗುವುದು ಅದೊಂದು ಸೊಗಸಾದ ಕತೆಯಾಗಿ ಮೂಡಿಬಂದರೆ. ಅದಕ್ಕೆ ಅದೃಷ್ಟವೂ ಕೈ ಹಿಡಿದು ನಡೆಸಬೇಕಾಗುತ್ತದೆ.

ಮತ್ತೆ ನಾವು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ, ಸಣ್ಣಕತೆಯ ಪರಂಪರೆ ಇವತ್ತು ಬಹಳ ಬೆಳೆದುಬಿಟ್ಟಿದೆ. ಮಾಸ್ತಿಯವರ ಕಾಲಕ್ಕೆ, ನಾನು ಇಂಥಾ ಊರಿನ ಕಡೆ ಏನೋ ಕೆಲಸದ ನಿಮಿತ್ತ ಹೋಗಿದ್ದೆ. ಅಲ್ಲಿ ಇಂಥವರು ಸಿಕ್ಕಿದರು. ಅವರು ತಾವು ಎಲ್ಲಿಯೋ ಕೇಳಿದ ಘಟನೆ ಎಂದು ಇಲ್ಲಿರುವುದನ್ನು ಹೇಳಿದರು. ಅದನ್ನು ನಾನು ನಿಮಗೆ ಹೇಳಬಯಸುವೆನು - ಮಾದರಿಯ ಕತೆಗಳಿದ್ದವು. ಮುಂದೆ ನೇರವಾಗಿ ನಾನು ಇಂಥವಳ ಮೊಲೆಗೆ ಕೈ ಹಾಕಿದಾಗ ಅವಳಿಗೆ ಇಂತಿಷ್ಟು ಪ್ರಾಯ ಎನ್ನುವ ಆಘಾತಕಾರಿಯೂ ರೋಮಾಂಚಕವೂ ಆದ ಆರಂಭವುಳ್ಳ ಕತೆಗಳು ಬಂದವು. ಎಂಭತ್ತರ ದಶಕದ ಕೊನೆಯ ತನಕವೂ ನಾವು ಓದುತ್ತಿದ್ದ ಕತೆಗಳಲ್ಲಿ ‘ಕತೆ’ ಇರುತ್ತಿತ್ತು. ಅವುಗಳು ಮನಸ್ಸಿನ ಮೇಲೆ ಉಂಟು ಮಾಡುತ್ತಿದ್ದ ಪರಿಣಾಮ, ಖುಶಿಯಾಗುವುದು, ಆಘಾತವಾಗುವುದು, ಮನಸ್ಸು ಅಲ್ಲಾಡಿಸಿದಂತಾಗುವುದು, ಬದುಕೇ ಬೇರೆ ಬೆಳಕಿನಲ್ಲಿ ಕಂಡಂತಾಗುವುದು ಇತ್ಯಾದಿಗಳ ವಿಚಾರದಲ್ಲಿ ಅವು ಬೇರೆ ಬೇರೆ ತರ ರೂಪುತಳೆಯುತ್ತಿದ್ದರೂ ನವ್ಯವಾಗಲಿ, ಬಂಡಾಯವಾಗಲಿ, ದಲಿತ ಸಾಹಿತ್ಯವೇ ಆಗಲಿ ‘ಕತೆ’ಯನ್ನು ಪೂರ್ತಿಯಾಗಿ ಬಿಟ್ಟುಕೊಟ್ಟು ರೂಪುಗೊಂಡ ಕತೆಗಳಾಗಿರಲಿಲ್ಲ. ಆದರೆ ತೊಂಭತ್ತರ ದಶಕದಿಂದೀಚೆಗೆ ಅವು ಭಾವಗೀತೆಯ ಲಯವನ್ನು ಕಂಡುಕೊಳ್ಳತೊಡಗಿದವು. ಹೇಳುವುದೇ ಒಂದು ಕಾಣಿಸುವುದೇ ಒಂದು ಅನಿಸತೊಡಗಿತು. ಕತೆ ಯಾವಾಗಲೂ ‘ಇಷ್ಟೇ’ ಅಲ್ಲದ ಹರಹು ಪಡೆದುಕೊಳ್ಳತೊಡಗಿತು. ಕತೆಯಲ್ಲಿ ‘ಕತೆ’ ಗೌಣವಾಗಿ ಒಂದು ಭಾವದೀಪ್ತಿಯ ಉದ್ದೀಪನ ಪ್ರಯತ್ನ ಪ್ರಾಮುಖ್ಯ ಪಡೆಯತೊಡಗಿತು. ಅಲ್ಲಿ ನವೋದಯದ ಲಯವಿದ್ದೂ ಗಮ್ಯ ‘ಭಾವ’ವಾಗದೆ ‘ಬುದ್ಧಿ’ಯಾಗುವುದು ಮುಖ್ಯವಾಯಿತು. ಇದು ಸವಾಲಿನ ಕೆಲಸವಾಗಿತ್ತು ಮತ್ತು ಇಂಥ ಸವಾಲನ್ನು ಎದುರಿಸಲು ಕನ್ನಡದಲ್ಲಿ ಸಶಕ್ತ ಕತೆಗಾರರು ಇದ್ದರು ಎನ್ನುವುದು ಗಮನಿಸಬೇಕಾದ ಅಂಶ. ನವ್ಯ ಸಾಹಿತ್ಯ ಪರಂಪರೆಯು ಬಂಡಾಯ, ದಲಿತ ಇತ್ಯಾದಿ ಕವಲುಗಳನ್ನು ಬೆಳೆಸಿದರೂ ತನ್ನ ಗರಿಷ್ಠ ಸಿದ್ಧಿಯನ್ನುಪಡೆಯದೇ ಇಂಥ ಪ್ರಯೋಗಗಳಿಗೆ ಮುಂದಾಗುವುದು ಅನಿವಾರ್ಯವೂ ಅಗಿತ್ತು ಮಾತ್ರವಲ್ಲ ನಮ್ಮ ಅನೇಕ ನವ್ಯ ಕತೆಗಾರರು ಇಂಥ ಬದಲಾವಣೆಗೆ ತೆರೆದುಕೊಂಡರು ಕೂಡಾ. ಹಾಗಾಗಿ ಬದಲಾವಣೆಗೆ ಮುಖಮಾಡಿದ ಲಂಕೇಶ್ ಮತ್ತು ತೇಜಸ್ವಿಯವರಲ್ಲದೆ, ಆಲನಹಳ್ಳಿ, ಖಾಸನೀಸ, ದೇವನೂರು, ರಾಘವೇಂದ್ರ ಪಾಟೀಲ, ಅಮರೇಶ ನುಗಡೋಣಿ, ಜಯಂತ್ ಕಾಯ್ಕಿಣಿ, ವಿವೇಕ ಶಾನಭಾಗ, ಕೇಶವ ಮಳಗಿ, ಅಬ್ದುಲ್ ರಶೀದ್, ಕೆ.ಸತ್ಯನಾರಾಯಣ, ವೈದೇಹಿ, ಮೊಗಳ್ಳಿ ಗಣೇಶ್, ಅಶೋಕ ಹೆಗಡೆ, ಚಿಂತಾಮಣಿ ಕೂಡ್ಲೆಕೆರೆ, ಪ್ರಹ್ಲಾದ ಅಗಸನಕಟ್ಟೆ, ಶ್ರೀಧರ ಬಳಗಾರ, ಶ್ರೀನಿವಾಸ ವೈದ್ಯ, ಸುರೇಂದ್ರನಾಥ್ ಮುಂತಾದವರು ಹೊಸದೇ ಆದ ಸಾಧ್ಯತೆಗಳನ್ನು ಸಣ್ಣಕಥಾ ಪ್ರಕಾರಕ್ಕೆ ಜೋಡಿಸುತ್ತ ಬಂದರು. ಅನುವಾದಗಳು ಮತ್ತು ಇಂಗ್ಲೀಷ್ ಸಾಹಿತ್ಯ ಹೆಚ್ಚು ಸನಿಹವಾಗಿದ್ದು ಬಹಳಷ್ಟನ್ನು ಕಲಿಯುವುದಕ್ಕೆ ಹೊಸ ಹೊಸ ಹಾದಿ ತೆರೆದವು.

ಹೀಗೆ ಜೀವನಾನುಭವದ ಜಿಜ್ಞಾಸೆ, ಕಥಾಪರಂಪರೆಯ ಅಷ್ಟಿಷ್ಟು ಪರಿಚಯ, ಹಿರಿಯ ಸಾಹಿತಿಗಳ ಒಡನಾಟ-ಮಾರ್ಗದರ್ಶನ, ಸುಪ್ತಮನಸ್ಸಿನ ಅಥವಾ ವ್ಯಕ್ತಿಗತ ಛಂದಸ್ಸಿನ ಗುಪ್ತಕೈವಾಡ, ಮೈಮರೆಯದಂತೆ ಕಾಪಾಡುವ ಸದುದ್ದೇಶದ ಮತ್ತು ಕೆಟ್ಟ ಟೀಕೆಗಳು ಎಲ್ಲವೂ ಸೇರಿ ಒಂದು ಕತೆಯೆಂಬುದು ರೂಪು ತಳೆಯಲು ಮೊತ್ತ ಮೊದಲನೆಯದಾಗಿ ಬೇಕಾಗುವುದೇ ಹಂಚಿಕೊಳ್ಳುವ, ಹಂಚಿಕೊಳ್ಳಬೇಕೆಂಬ ಒಂದು ಮನಸ್ಥಿತಿ. ಈ ಮನಸ್ಥಿತಿಗೆ ಯಾರೇ ಆದರೂ ತಲುಪಬೇಕಾದರೆ ಅವರಲ್ಲಿ ಪರಿಶುದ್ಧವಾದ ಪ್ರೀತಿ ತುಂಬಿರಬೇಕಾಗುತ್ತದೆ. ಮಾಸ್ತಿಯವರು ಕತೆ ಹೇಳಲು ತೊಡಗುತ್ತಿದ್ದ ಅದೇ ಪಿಚ್ ನಮಗೆ ಸಿದ್ಧಿಸಲು ಆಗ ಮಾತ್ರ ಸಾಧ್ಯ. ಕತೆ ಬರೆಯಲು, ಕತೆಯೊಂದನ್ನು ಹೇಳಲು ಬೇರೆ ರೀತಿಯ ಉಪಾಯಗಳಿಲ್ಲ. ಇದ್ದರೆ ಅದು ಕಸಬುದಾರಿಕೆ, ಕತೆಗಾರಿಕೆಯಲ್ಲ ಎಂದು ನಾನು ಅಂದುಕೊಂಡಿದ್ದೇನೆ.

ಇಷ್ಟನ್ನು ಹೇಳಿದ ಮೇಲೆ ನನ್ನ ಒಂದು ಕತೆ ‘ರುಕ್ಕುಮಣಿ’ ಹುಟ್ಟಿದ, ಅದರ ಕೆಲವೊಂದು ಪಾತ್ರಗಳು ಹುಟ್ಟಿದ ಬಗೆಯನ್ನು ಹೇಳುತ್ತೇನೆ. ಒಂದಷ್ಟು ಕಾಲ ನಾನು ವಾಸವಾಗಿದ್ದ ಮನೆಯ ಬೀದಿಯಲ್ಲಿ ಬೆಳಿಗ್ಗೆ ಐದು-ಐದೂ ಕಾಲಿಗೆಲ್ಲ ಒಬ್ಬ ಹೆಂಗಸು ಪೇಪರ್ ಹಾಕುವುದನ್ನು ಕಂಡು ನಿಜಕ್ಕೂ ಅಚ್ಚರಿಗೊಂಡೆ. ಆ ಹೆಂಗಸನ್ನು ನಾನು ಆಫೀಸಿಗೆ ಹೋಗುವಾಗ ಬರುವಾಗ ನೋಡಿದ್ದೆ. ಗಟ್ಟಿಮುಟ್ಟಾಗಿದ್ದ, ಎತ್ತರವಾಗಿ ಬೆಳ್ಳಗಿದ್ದ, ನೋಡಿದರೆ ಗೌರವ ಹುಟ್ಟುವಷ್ಟು ಲಕ್ಷಣವಾಗಿದ್ದ, ಚಂದದ ಹೆಂಗಸು. ಸುಮಾರು ಐವತ್ತರ ಹತ್ತಿರ ಎನ್ನಬಹುದಾದ ವಯಸ್ಸು. ಆಕೆ ನಮ್ಮ ಮನೆಯೆದುರಿನ ಬೀದಿ ದೀಪದಡಿ ಸ್ವಲ್ಪ ಹೊತ್ತು ನಿಂತು ತನ್ನ ಚೀಲದಿಂದ ಒಂದು ಪೇಪರನ್ನು ತೆಗೆದು ತಾನು ಓದುತ್ತಿದ್ದಳು. ಆಮೇಲೆ ಮುಂದೆ ಪೇಪರ್ ಹಾಕುತ್ತ ಸಾಗುತ್ತಿದ್ದಳು. ಈ ಹೆಂಗಸೇ ಈ ಕತೆಯ ಮೂಲ ಎಳೆ, ಸ್ಫೂರ್ತಿ ಎನ್ನುವುದು ಅಷ್ಟು ಸರಿಯಲ್ಲ. ಆಮೇಲೆ ನಾನು ಕೆಲಸ ಮಾಡುತ್ತಿದ್ದ ಕಚೇರಿಯಿಂದ ಐವತ್ತು ಮೀಟರಿಗಿಂತ ಕಡಿಮೆ ದೂರದಲ್ಲಿದ್ದ ಒಂದು ಪಬ್ಬಿನಲ್ಲಿ ಹದಿಹರಯದ ಹುಡುಗರು-ಹುಡುಗಿಯರು ಅಶ್ಲೀಲವಾಗಿ ಕುಣಿದಾಡುತ್ತಿದ್ದರು ಎಂಬ ಕಾರಣಕ್ಕೆ ಭಜರಂಗದಳದವರೋ, ಸಂಘಪರಿವಾರದವರೋ ಈ ಶ್ರೀರಾಮಸೇನೆಯವರೋ ಒಂದು ಅಪರಾಹ್ನ ದಾಳಿ ಮಾಡಿ ರಂಪ ಎಬ್ಬಿಸಿದರು. ಅದು ನಮ್ಮ ಟೀವಿ ಚಾನಲ್ಲುಗಳಲ್ಲಿ ವಿವರ ವಿವರವಾಗಿ ವರದಿಯಾಗಿ ಕೆಲವು ಕಾಲ ಸುದ್ದಿಯಲ್ಲಿತ್ತು. ಅದಕ್ಕಿಂತ ಸ್ವಲ್ಪ ಸಮಯದ ಹಿಂದೆ ಸರಕಾರ ನೈಟ್ಕ್ಲಬ್ಬುಗಳಲ್ಲಿ ಹುಡುಗಿಯರು ಕುಣಿಯುವುದನ್ನು ನಿಷೇಧಿಸಿ ಆ ಹುಡುಗಿಯರು ಕೊನೆಗೆ ವೇಶ್ಯಾವಾಟಿಕೆಯಂಥ ಕೆಲಸಗಳಲ್ಲಿ ತೊಡಗುವ ಅನಿವಾರ್ಯ ಒಂದು ಸೃಷ್ಟಿಯಾದ ಬಗ್ಗೆ ಅಲ್ಲಲ್ಲಿ ವರದಿಗಳು ಬಂದಿದ್ದವು. ಜಯಂತ ಕಾಯ್ಕಿಣಿಯವರು ‘ಸುರಾ ಸುಂದರಿಯರ ಮುಡಿಗೆ’ ಎಂದು ಈ ರೀತಿ ನೆಲೆ ಕಳೆದುಕೊಂಡ ಹುಡುಗಿಯರನ್ನು ಕುರಿತೇ ಒಂದು ಕವನ ಬರೆದಿದ್ದು ಅದರ ವಾತಾವರಣ ಸೃಷ್ಟಿಗೆ ಬಳಕೆಯಾದ ವಿವರಗಳಿಂದ ಅದು ನನ್ನನ್ನು ತುಂಬ ಸೆಳೆದಿತ್ತು. ನನ್ನ ಗೆಳೆಯನೊಬ್ಬ ತನ್ನ ತಂಗಿಯ ಮೊಬೈಲನ್ನು ಸಿಟ್ಟಿನಿಂದ ನೆಲಕ್ಕೆ ಬಡಿದು ಚಿಂದಿ ಮಾಡಿದ್ದ ಮತ್ತು ಹಾಗೆ ಮಾಡಿದ ಬಗ್ಗೆ ಆನಂತರ ತುಂಬ ನೊಂದುಕೊಂಡು ಹೊಸ ಮೊಬೈಲ್ ಕೊಡಿಸಿದ್ದ. ಇನ್ನು ದಿನನಿತ್ಯ ನಾವಿಲ್ಲಿ ದಿನಪತ್ರಿಕೆಯಲ್ಲಿ ಅಶ್ಲೀಲ ಕರೆಗಳ ಬಗ್ಗೆ, ಅನಾಮಿಕರ ಮೊಬೈಲ್ ಸಂದೇಶಗಳ ಬಗ್ಗೆ ಓದುತ್ತಲೇ ಇರುತ್ತೇವೆ. ನನ್ನ ಚಿಕ್ಕಂದಿನಲ್ಲಿ ನಾನು ಲಾಡ್ಜ್ಗಳಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಹುಡುಗಿಯರ ಬಗ್ಗೆಯೂ ದಿನಪತ್ರಿಕೆಯಲ್ಲಿ ಓದಿದ್ದೆ. ಈಚೆಗೆ ಇಂಥವು ಸುದ್ದಿಯಾಗುತ್ತಿಲ್ಲವೋ ಅಥವಾ ಇಂಥ ಘಟನೆಗಳ ಸ್ವರೂಪವೇ ಬದಲಾಗಿದೆಯೋ ಗೊತ್ತಿಲ್ಲ. ಇವಿಷ್ಟೂ ಘಟನೆಗಳು ಈ ರುಕ್ಕುಮಣಿ ಕತೆಯನ್ನು ರೂಪಿಸಿದವು. ಈ ಕತೆಯಲ್ಲಿ ಬರುವ ಸೀಮಾ ಕೂಡಾ ನಾನು ದಿನನಿತ್ಯ ನೋಡುತ್ತಿದ್ದ, ತುಂಬ ಆಕರ್ಷಕವಾಗಿದ್ದರೂ ಸೌಂದರ್ಯಪ್ರಜ್ಞೆಯಿಲ್ಲದ ಆಕೆಯ ಬಾಡಿ ಲ್ಯಾಂಗ್ವೇಜ್ನಿಂದ ವಿಚಿತ್ರವಾಗಿ ಕಾಣುತ್ತಿದ್ದ ಹುಡುಗಿ. ಕತೆಯಲ್ಲಿ ಇಡೀ ವಾತಾವರಣದಲ್ಲೇ ಇರುವ ಒಂದು ಬಗೆಯ ಅಸ್ವಸ್ಥ ಛಾಯೆಯನ್ನು ವಿವರಗಳಲ್ಲಿ ಮೂಡಿಸಲು ಈ ಪಾತ್ರ ಬಳಕೆಯಾಗಿದೆ. ಅದೇ ರೀತಿ ರಾಮನ ಟೈಲರ್ ಅಂಗಡಿ ಮತ್ತು ಅಲ್ಲಿ ಸಂಜೆ ಹೊತ್ತು ಗುಂಪು ಸೇರುವ ಪಡ್ಡೆ ಹುಡುಗರ ನಡವಳಿಕೆ ಕೂಡಾ. ಆದರೆ ವಿಚಿತ್ರ ನೋಡಿ, ಇದಿಷ್ಟನ್ನೂ ಹೇಳಿದರೂ ಕತೆಯ ಒಂದು ಸ್ವರೂಪ ಇಲ್ಲಿ ರೂಪುಗೊಳ್ಳುತ್ತಿಲ್ಲ.

ಹಾಗೆಯೇ ನಾನು ಈ ಕತೆಯ ಹೆಸರು ರುಕ್ಕುಮಣಿಯಾದರೂ, ರುಕ್ಕುವೇ ಈ ಕತೆಯ ಕೇಂದ್ರವಾದರೂ ಕತೆಯಲ್ಲಿ ರುಕ್ಕುವಿನ ಬಗ್ಗೆ ನೇರವಾದ ವಿವರಗಳೇ ಇಲ್ಲ. ಇಡೀ ಕತೆ ಅಪ್ಪಿಯಮ್ಮನನ್ನು ಕೇಂದ್ರವಾಗಿಟ್ಟುಕೊಂಡಿದೆ. ನಮ್ಮ ಯುವಜನತೆಯನ್ನು ಇವತ್ತು ಸೆಳೆಯುತ್ತಿರುವ ಮೊಬೈಲ್, ಇಂಟರ್ನೆಟ್, ಶಾಪಿಂಗ್ ಮಾಲ್ ಸಂಸ್ಕೃತಿ, ಹಣವಿದ್ದವರಂತೆ ತೋರಿಸಿಕೊಳ್ಳುವ ಖಯಾಲಿ, ಅದನ್ನು ಪೂರೈಸಲು ತುದಿಗಾಲಲ್ಲಿ ನಿಂತಿರುವ ಸಾಲ ಕೊಡುವ ಬ್ಯಾಂಕು ಮತ್ತಿತರ ಸಂಸ್ಥೆಗಳು, ಕ್ರೆಡಿಟ್ ಕಾರ್ಡ್, ಕೂಪನ್ ಮಾರುವವರು, ಕೊನೆಗೆ ರೋಮಾನ್ಸಿನ, ಮಾತು(ಚಾಟ್)-ಸ್ಪರ್ಶ-ಡ್ಯಾನ್ಸು ಮುಂತಾದ ಹಲವು ಬಗೆಯಲ್ಲಿ ಸಾಗುತ್ತಿರುವ ದೇಹದ ವ್ಯಾಪಾರ. ನನಗೆ ತಿಳಿದಿರುವ ಒಬ್ಬ ಗ್ರಹಸ್ಥ ತಾನು ನಡೆಸುತ್ತಿರುವ ಹುಡುಗಿಯರ ಹಾಸ್ಟೆಲ್ಲಿನ ಹುಡುಗಿಯರಿಗೆ ಏನಾದರೂ ಅಡ್ಡಖರ್ಚಿಗೆ ಬರುತ್ತದಲ್ಲ ಎಂದು ಇಂಥ ಅಡ್ಡದಾರಿಯ ಪಾಠ ಹೇಳಿಕೊಟ್ಟು ತಾನೂ ಕಾಸುಗಳಿಸುತ್ತಿದ್ದ. ಈ ಉತ್ತರಭಾರತದಿಂದ ಇಲ್ಲಿಗೆ ಇಂಜಿನಿಯರಿಂಗ್ ಮೆಡಿಕಲ್ ಎಂದೆಲ್ಲ ಕಲಿಯಲು ಬಂದ ಹುಡುಗಿಯರಿಗೆ ಇದೆಲ್ಲ ಒಗ್ಗಿಬಿಟ್ಟಂತಿರುವುದನ್ನು ಕಂಡು ಆಘಾತಗೊಳ್ಳಬೇಕಾದ ಸರದಿ ನಮ್ಮಂಥ ಸೊ ಕಾಲ್ಡ್ ಕನ್ಸರ್ವೇಟಿವ್ ಹುಡುಗರದ್ದಾಗಿತ್ತು! ಇದರ ನಡುವೆ ನಮ್ಮ ಸಂಘಪರಿವಾರವಿದೆ. ಈ ನಿಟ್ಟಿನಿಂದ ಯೋಚಿಸುವವರು ಹೇಳುವ ಭಾರತೀಯ ಸಂಸ್ಕೃತಿಯಿದೆ! ಆದರೆ ರುಕ್ಕುಮಣಿಯಂಥ ಎಳೆಯ ಜೀವಗಳು ಎದುರಿಸುತ್ತಿರುವ ಬದುಕು-ಭವಿಷ್ಯದ ಸಂಕೀರ್ಣ ಗೊಂದಲ ಮತ್ತು ದುರಂತಗಳಲ್ಲಿ ಜೊತೆ ನಿಂತವರು ಮತ್ತು ನಿಲ್ಲುವವರು ಯಾರೆಂದರೆ ಯಾರೂ ಇಲ್ಲ! ಇದನ್ನು ಕಾಲದ ಮಹಿಮೆ ಎನ್ನಬೇಕೇ ಅಥವಾ ನಮ್ಮಂಥವರಿಗೆ ಸುರುವಾಗಿರುವ ಜನರೇಶನ್ ಗ್ಯಾಪ್ ಅಷ್ಟೇ ಎನ್ನಬೇಕೆ ಎಂಬಂಥ ಒಂದು ಗೊಂದಲದಲ್ಲಿ ರುಕ್ಕುಮಣಿಯಂಥ ಕತೆ ಹುಟ್ಟಿತು. ಇಲ್ಲಿನ ವಿಚಿತ್ರ ನೋಡಿ, ನಾನು ಮೇಲಿನ ಪರಿಚ್ಛೇದದಲ್ಲಿ ಅಷ್ಟೆಲ್ಲ ಹೇಳಿದರೂ ಕಾಣಿಸದಿದ್ದ ಕತೆಯ ಹೊಳಹು ಇಲ್ಲಿ ಕಾಣಿಸಿದಂತಿದೆ!

ಇಲ್ಲಿ ನಾನು ಉಲ್ಲೇಖಿಸದೇ ಉಳಿದು ಹೋದ ಅನೇಕ ಸಂಗತಿಗಳು ಕತೆಯಲ್ಲಿ ಸೇರಿಕೊಂಡಿವೆ ಎನ್ನುವುದು ಯಾರಿಗಾದರೂ ಅರ್ಥವಾಗುತ್ತದೆ. ಅವೆಲ್ಲ ಎಲ್ಲೆಲ್ಲಿಂದಲೋ ಬಂದು ಸೇರಿಕೊಂಡಿರಬೇಕು,ತಿಳಿದು ಮತ್ತು ತಿಳಿಯದೆ! ಅರೆಮಂಪರಿನಲ್ಲಿ ಕಂಡ ಕನಸನ್ನು ನೆನಪುಮಾಡಿಕೊಳ್ಳುವವನ ಸ್ಥಿತಿಯಿದು, ಕತೆಯೊಂದು ಹುಟ್ಟುವುದು ಹೇಗೆ ಎಂಬ ಪ್ರಶ್ನೆಯೆದುರು ನಿಲ್ಲುವುದು! ರುಕ್ಕುಮಣಿ ಕತೆಯನ್ನೇನೋ ಹೀಗೆ ವಿವರಿಸಲು ಸಾಧ್ಯವಿತ್ತು. ಇದೇ ರೀತಿ ಇನ್ನುಳಿದ ಕತೆಗಳ ಹುಟ್ಟು-ಬೆಳವಣಿಗೆಯ ಕತೆಯನ್ನು ವಿವರಿಸುವುದು ಅವುಗಳನ್ನು ಬರೆದ ನನಗೇ ಸಾಧ್ಯ ಎನ್ನುವ ವಿಶ್ವಾಸವಿಲ್ಲ ಎನ್ನುವುದು ನಿಜ ಮತ್ತು ಈ ನಿಜದಲ್ಲೇ ನೀವದರ ವೈಚಿತ್ರ್ಯವನ್ನೂ ಕಾಣಬೇಕಿದೆ. ಹಾಗೆಯೇ ಇದು ನನ್ನ ಮೊದಲ ಕತೆಯಿಂದ ಸುಮಾರು ನಲವತ್ತು ಕತೆಗಳ ವರೆಗೆ ನಡೆದು ಬಂದ ಹಾದಿಯಲ್ಲಿನ ಒಂದು ಕಾಲಾಂತರದಲ್ಲಿ ನಡೆದ ಪ್ರಕ್ರಿಯೆಯೇ ಹೊರತು ಎಕಾಎಕಿ ಆಗಿದ್ದಲ್ಲ ಮತ್ತು ಈ ಪ್ರಕ್ರಿಯೆ ಮುಗಿಯುವಂಥಾದ್ದೂ ಅಲ್ಲ. ಅರಿವು ನಮ್ಮನ್ನು ಬದಲಿಸುವುದಕ್ಕೂ ಸಮಯ ಮತ್ತು ಅದೃಷ್ಟ ಬೇಕು. ಬರೇ ಅರಿವು ನಮ್ಮನ್ನು ರಾತ್ರೋರಾತ್ರಿ ಬದಲಿಸಿಬಿಡುವುದಿಲ್ಲ. ಅದು ನಮ್ಮದಾದಾಗ ನಾವು ಬದಲಾಗಿರುತ್ತೇವೆ. ನನ್ನ ಅರಿವು ನನ್ನ ಕತೆಗಳಲ್ಲಿ ಇಳಿದು ಬಂದಿಲ್ಲ ಎನ್ನುವ ಅರಿವಿನಿಂದಲೇ ಈ ಮಾತುಗಳನ್ನು ಹೇಳುತ್ತಿದ್ದೇನೆ.

(ಎರಡು ವರ್ಷಗಳ ಹಿಂದೆ ಈ ಲೇಖನವನ್ನು ಅಮರೇಶ ನುಗಡೋಣಿಯವರು ಸಂಪಾದಿಸಿದ ಕಥೆ ಹುಟ್ಟುವ ಪರಿ ಸಂಕಲನಕ್ಕಾಗಿ ಬರೆದಿದ್ದು, ಕಾರಣಾಂತರದಿಂದ ಅಲ್ಲಿ ಪ್ರಕಟವಾಗಿಲ್ಲ. ರುಕ್ಕುಮಣಿ ಕತೆ ‘ಭಾಮಿನಿ’ ಮಾಸಪತ್ರಿಕೆಯ ಮೊದಲ ಸಂಚಿಕೆಯಲ್ಲಿ ನವೆಂಬರ್ 2010ರಂದು ಪ್ರಕಟವಾಗಿತ್ತು.).

No comments: