Monday, August 10, 2015

ಹೊಸತನದ ‘ಅಮೂರ್ತ ಚಿತ್ತ’

ಅಮೆರಿಕೆಯಲ್ಲಿದ್ದು ಕನ್ನಡದಲ್ಲಿ ಬರೆಯುತ್ತಿರುವ ಪ್ರಕಾಶ್ ನಾಯಕ್, ಡಾ|| ಗುರುಪ್ರಸಾದ್ ಕಾಗಿನೆಲೆಯವರಂತೆಯೇ ಸಾಹಿತ್ಯದ ಬಗ್ಗೆ, ಬರೆಯುವ ಪ್ರಕ್ರಿಯೆಯ ಬಗ್ಗೆ ಗಂಭೀರವಾದ ಆಸಕ್ತಿ ಮತ್ತು ಬದ್ಧತೆಗಳಿರುವ ಬರಹಗಾರ. ಪ್ರಕಾಶ್ ನಾಯಕ್ ಅವರ ಪುಸ್ತಕದ ಬಗ್ಗೆ ಮಾಹಿತಿ ದೊರಕಿದ್ದು ಸ್ನೇಹಿತರ ಮೂಲಕವಷ್ಟೇ. ಹಾಗೆಯೇ ಇವತ್ತು ಒಳ್ಳೆಯ ಪುಸ್ತಕಗಳನ್ನು ನಾವು ಪ್ರಯತ್ನಿಸಿ ಪಡೆದುಕೊಳ್ಳಬೇಕಾಗಿದೆ. ಅನೇಕ ಬಾರಿ ಲೇಖಕರೇ ಅದನ್ನು ಒದಗಿಸುವ ಪರಿಸ್ಥಿತಿ.

ಪ್ರಕಾಶ್ ನಾಯಕ್ ಅವರ ಮೊದಲ ಕಥಾಸಂಕಲನ "ಅಮೂರ್ತ ಚಿತ್ತ"ದಲ್ಲಿ ಒಟ್ಟು ಹದಿನಾಲ್ಕು ಕತೆಗಳಿವೆ. ಉತ್ತರ ಕನ್ನಡದವರಾದರೂ ಸದ್ಯ ಅಮೆರಿಕೆಯಲ್ಲಿ ನೆಲೆಸಿರುವ ಪ್ರಕಾಶ್ ನಾಯಕ್ ಅವರ ಕತೆಗಳಲ್ಲಿ ನಾವು ಕಾಣುವ ಪರಿಸರ ಹೆಚ್ಚೂಕಡಿಮೆ ಅಮೆರಿಕೆಯದೇ. ಹಲವಾರು ಉತ್ತರ ಕನ್ನಡದ ಕತೆಗಾರರನ್ನು ಕಂಡ ನಾವು ಪ್ರಕಾಶ್ ನಾಯಕರ ಕತೆಗಳನ್ನು ಓದುವಾಗ ಸಹಜವಾಗಿಯೇ ಅಲ್ಲಿನ ಪರಿಸರ, ಭಾಷೆ, ಜನ, ಕಥಾನಕಗಳನ್ನು ಅಪೇಕ್ಷಿಸುತ್ತೇವೇನೊ. ಆದರೆ ಪ್ರಕಾಶ್ ನಾಯಕರ ಕತೆಗಳು ನಮ್ಮೆದುರು ತೆರೆದಿಡುವ ಜಗತ್ತು ವಿಭಿನ್ನವಾದುದು.

ಪ್ರಕಾಶ್ ನಾಯಕ್ ಈ ಕತೆಗಳನ್ನು ಮತ್ತೆ ಮತ್ತೆ ತಿದ್ದಿ ತೀಡಿದ್ದಾರೆ. ಬರೆದಿದ್ದು ಅಚ್ಚುಕಟ್ಟಾಗಿರಬೇಕು ಎಂಬ ಆಸ್ಥೆ ಅವರಿಗಿದೆ. ಇವತ್ತು ಹೀಗೆ ಬರೆದಿದ್ದನ್ನು ಹಾಗೆ ಅಚ್ಚು ಹಾಕಿ ಪ್ರಕಟಿಸುವ ಆತುರದ ಕಾಲಮಾನದಲ್ಲಿ ನಾವಿದ್ದರೂ ಇಂಥ ಸಂಯಮದ ಕತೆಗಾರರು ಅಲ್ಲಿ ಇಲ್ಲಿ ಇರುವುದು ಬರೆಯುವ ಕ್ರಿಯೆಯ ಬಗ್ಗೆ ಇವರಿಗಿರುವ ಗಂಭೀರ ಆಸಕ್ತಿ ಮತ್ತು ಗೌರವವನ್ನು ತೋರಿಸುತ್ತದೆ. ಅಂದ ಮಾತ್ರಕ್ಕೆ ಪುಂಖಾನುಪುಂಖ ಬರೆಯುವವರಲ್ಲಿ ಕ್ವಾಲಿಟಿ ಇರುವುದೇ ಇಲ್ಲ ಎಂದೇನೂ ಅಲ್ಲ. ಬರೆದಿದ್ದು ಪರಿಪೂರ್ಣವಾಗಿರಬೇಕು ಎಂಬ ಬಗ್ಗೆ ಅತಿಯಾದ ನಿಷ್ಠೆ ಕೆಲವೊಮ್ಮೆ ಬರವಣಿಗೆಯ ಓಘ ಕುಂಠಿತವಾಗಲೂ ಕಾರಣವಾಗುವುದಿಲ್ಲವೇ ಎಂಬ ಅನುಮಾನ ಕೂಡ ಸಕಾರಣವಾದುದೇ. ಕಥಾಸ್ಪರ್ಧೆಯ ಬಹುಮಾನ ವಿಜೇತರಲ್ಲಿ ಅನೇಕರು ಮುಂದೆ ಕತೆ ಬರೆಯುವುದೇ ಅಪರೂಪವಾಗುವುದು ಇಂಥ ಅನುಮಾನಕ್ಕೆ ಕುಮ್ಮಕ್ಕು ನೀಡುತ್ತದೆ. ಆದರೆ ಬರವಣಿಗೆಯ ಕುರಿತ ಗೌರವ ತನ್ನ ಓದುಗರ ಸಮಯ, ಶ್ರಮ ಮತ್ತು ಹಣದ ಮೇಲಿನ ಗೌರವ ಕೂಡ ಆಗುವುದರಿಂದ ಕೆಲಮಟ್ಟಿಗೆ ಇಂಥ ನಿಧಾನವೂ ಅಪೇಕ್ಷಣೀಯ.

ಸಣ್ಣಕತೆಯ ಒಲವು-ನಿಲುವುಗಳು ಕಾಲಕಾಲಕ್ಕೆ ಭಿನ್ನವಾಗುತ್ತ ಬಂದಿರುವುದನ್ನು ಕಾಣುತ್ತೇವೆ. ಅದು ಕನ್ನಡಿಯಾಗಿದ್ದು ಮತ್ತು ಕ್ರಮೇಣ ಕಿಟಕಿಯೂ ಆಗಿದ್ದೆಲ್ಲ ಹಳೆಯ ಕತೆ. ಕಥಾನಕದ ಹಂಗು-ಆಧಾರ ಒಂದು ಸಣ್ಣಕತೆಯ ಅನಿವಾರ್ಯ ಅಗತ್ಯ ಎಂಬ ಸ್ತರದಿಂದಲೂ ಅದು ಪಲ್ಲಟಗೊಂಡು ಯಶಸ್ವಿಯಾಗಿದ್ದಿದೆ. ಬದುಕಿನ ಒಂದು ಘಟನೆ/ಕುತೂಹಲಕರ ಸಂಗತಿ/ವಿದ್ಯಮಾನ ಕತೆಯಾಗುತ್ತಿದ್ದ ಕಾಲವೊಂದಿತ್ತು. ನಂತರ ಅದು ಬದುಕಿನ ಒಂದು ಕ್ಷಣವನ್ನು ಹಿಡಿದಿಟ್ಟುಕೊಟ್ಟರೆ ಸಾಕಷ್ಟಾಯಿತೆಂಬ ಪರಿವರ್ತನೆಯ ಹಾದಿ ಹಿಡಿಯಿತು. ವರ್ತಮಾನದಲ್ಲಿ ನಿಂತು ಭೂತಕಾಲದ ಏನನ್ನೋ ಹೇಳುವ, ವರದಿ ನೀಡುವ, ಹಿಡಿದುಕೊಡುವ, ಕಾಣಿಸುವ ತಂತ್ರಗಳೆಲ್ಲ ಬಳಕೆಗೆ ಬಂದು-ಹೋಗಿ ಯಾವುದೋ ಒಂದು ಸಂವೇದನೆಯನ್ನು ಓದುಗನಲ್ಲಿ ಉದ್ದೀಪಿಸುವ ಹುನ್ನಾರು ನೇಯುವ ವಿವರಗಳು, ಪಾತ್ರಗಳು, ಘಟನೆಗಳು ಕತೆಯನ್ನು ನಿರ್ದೇಶಿಸುವ ಕಾಲ ಬಂದಿತು. ನಿರೂಪಣೆಯ ಹದ ಮತ್ತು ಭಾಷೆಯ ಕಸು ಇಲ್ಲಿ ಬಹುಮುಖ್ಯ ಎನಿಸಿಕೊಂಡಿತು. ಇವತ್ತು ಹೆಚ್ಚಿನ ಯುವ ಬರಹಗಾರರ ಒಲವು ಕಾದಂಬರಿಯತ್ತ ಹರಿದಿದೆ. ಸಣ್ಣಕತೆಯ ಸ್ವರೂಪವನ್ನು ಬಹುಮಟ್ಟಿಗೆ ನಿರ್ಧರಿಸುವ ಪತ್ರಿಕೆಯ ಸಂಪಾದಕರುಗಳಿಗೆ ಇವತ್ತು ಸಾವಿರ-ಸಾವಿರದೈನೂರು ಪದಗಳಿಗಿಂತ ದೀರ್ಘ ಕತೆಗಳು ಬೇಡ. ಕೆಲವು ಪತ್ರಿಕೆಗಳು ಸಣ್ಣಕತೆಗಳಿಗೆ ಗೇಟ್ ಪಾಸ್ ನೀಡಿಯೂ ಆಗಿದೆ. ದೀಪಾವಳಿ/ಯುಗಾದಿ ಕಥಾಸ್ಪರ್ಧೆಯ ಕತೆಗಳು, ಆಹ್ವಾನಿತ ಕತೆಗಳು ತಿಂಗಳೊಪ್ಪತ್ತಿನಲ್ಲಿ ಸಂಕಲನ ರೂಪದಲ್ಲಿ ಹೊರಬರುವುದರಿಂದ ವಿಭಿನ್ನ ಕತೆಗಾರರ ಈ ಬಗೆಯ "ಶ್ರೇಷ್ಠ" ಕತೆಗಳನ್ನು ಒಂದೇ ಕಡೆ ತೌಲನಿಕವಾಗಿ ಗಮನಿಸುವ ಅವಕಾಶವನ್ನು ಓದುಗರು ಉಳಿಸಿಕೊಂಡಿದ್ದಾರೆಯೇ ಎಂಬುದು ಅನುಮಾನವೇ. ನಾನಂತೂ ಜಾಹೀರಾತು/ಲಾಟರಿ/ಉಚಿತ ಪುಸ್ತಿಕೆ/ಸ್ಯಾಶೆಗಳ ಕಟ್ಟಿನಂತೆ ಬರುವ ವಿಶೇಷಾಂಕಗಳನ್ನು ಕೊಳ್ಳುವ ಮೋಹ ತೊರೆದಿದ್ದೇನೆ. ನಮ್ಮಲ್ಲಿ ಹಲವು ಕತೆಗಾರರ ಕತೆಗಳನ್ನು ಆಗಾಗ ಒಂದೆಡೆ ಸೇರಿಸಿ ತರುವ ಪರಿಪಾಠ ಇಲ್ಲವಾಗಿರುವುದು ಕೂಡ ಗಮನಾರ್ಹವಾದ ಅಂಶ. ಮನೋಹರ ಗ್ರಂಥಮಾಲಾ ಹೊರತಂದ ಹಲವು ಲೇಖಕರು ಜೊತೆಯಾಗಿ ಬರೆದ ಖೋ ಕಾದಂಬರಿ, ಸಂಚಯ ಹೊರತಂದ ಬಹುಮಾನಿತ ಕತೆಗಳ ಅವಧೂತನೊಬ್ಬನ ಅವಸಾನ ಸಂಕಲನ, ಅಂಕಿತ ಹೊರತಂದ ಚೌಕಟ್ಟಿನಿಂದ ಹೊರಬಂದ ಚಿತ್ರಗಳು, ಕರೆ ಮತ್ತು ತಾಜಮಹಲ್ ಕಥಾಸಂಕಲನಗಳು - ಇಂಥ ಕೆಲವೇ ಉದಾಹರಣೆಗಳು ನಮಗೆ ಲಭ್ಯ. ಇಂಥ ಸಂಕಲನಗಳು ಹೊಸ ಕತೆಗಾರರ ಸಣ್ಣಕತೆಗಳನ್ನು ತೌಲನಿಕವಾಗಿ ಗಮನಿಸುವುದಕ್ಕೆ ಒಂದು ಸ್ಥೂಲ ಮಾನದಂಡವನ್ನು ನಿರ್ಮಿಸಿಕೊಡುವ ಕೆಲಸವನ್ನು ಮಾಡುತ್ತವೆ ಎನ್ನುವುದು ಸುಳ್ಳಲ್ಲ. ಇದರ ಹೊರತಾಗಿ ಶತಮಾನದ ಸಣ್ಣಕತೆಗಳು ಎಂದೋ, ಕನ್ನಡ ಸಣ್ಣಕತೆಗಳು ಎಂದೋ ಎಸ್.ದಿವಾಕರ್, ಜಿ ಎಚ್ ನಾಯಕ, ಬೊಳುವಾರು, ಕೃಷ್ಣಮೂರ್ತಿ ಹನೂರು ಮುಂತಾದವರು ಹೊರತಂದ ಸಂಕಲನಗಳು, ಜಿ ಎಸ್ ಅಮೂರರ ಸಣ್ಣಕತೆಗಳ ಕುರಿತೇ ಇರುವ ಗ್ರಂಥ ನಮಗೆ ದಿಕ್ಸೂಚಿಯಾದೀತು.

ಈ ಹಿನ್ನೆಲೆಯಲ್ಲಿ ಪ್ರಕಾಶ್ ನಾಯಕ್ ಅವರ ಈ ಹದಿನಾಲ್ಕು ಕತೆಗಳು ಸರಳವಾಗಿವೆ. ನೇರವಾಗಿ ಹೇಳಬೇಕಾದುದನ್ನು ಹೇಳುತ್ತಿವೆ. ಒಂದರ್ಥದಲ್ಲಿ ಇವುಗಳ ಪ್ರಧಾನ ಆಕರ್ಷಣೆಯೇ ಗೆಳೆಯನೊಂದಿಗೆ ಹಂಚಿಕೊಂಡಷ್ಟೇ ಸರಳವಾಗಿ, ಮುಕ್ತವಾಗಿ ಮತ್ತು ಕಥನ ಕೌಶಲದ ವಿಶೇಷ ಮೆರುಗಿಗೆ ಮರುಳಾಗದೇ ಪ್ರಸ್ತುತಪಡಿಸುವ ರೀತಿ ಎಂದರೂ ತಪ್ಪಾಗಲಾರದು. ಹೀಗೆ ಇವು ಅನುಭವವನ್ನೇ ನೆಚ್ಚಿಕೊಂಡ, ಕಲ್ಪನೆಯನ್ನು ಹದವಾಗಿ ಬಳಸಿಕೊಂಡು ರೂಪುಗೊಂಡ ಕಥಾನಕಗಳು. ಇಲ್ಲಿ ಬಹಳ ಮುಖ್ಯವಾಗಿ ನಾವು ಗಮನಿಸಬೇಕಾದ ಅಂಶವೆಂದರೆ, ಅನುಭವ ನಿಷ್ಠ, ನೇರ-ಸರಳ ನಿರೂಪಣೆಯ ನೆಲೆಯನ್ನೇ ನೆಚ್ಚಿಕೊಂಡೂ ಪ್ರಕಾಶ್ ನಾಯಕ್ ನಡೆಸಿರುವ ಕೆಲವು ಕುತೂಹಲಕರ ಪ್ರಯೋಗಗಳು. ಪ್ರಯೋಗ ಎಂದರೆ ಕೇವಲ ಓದುಗರ ನಿರೀಕ್ಷೆಯನ್ನು ಬುಡಮೇಲು ಮಾಡುವ ಕತೆಗಳೆಂದೋ, ತಾಂತ್ರಿಕವಾಗಿ ದಂಗು ಬಡಿಸುವ ಕತೆಗಳೆಂದೋ, ಇತಿಹಾಸ-ಚರಿತ್ರೆಗಳನ್ನು ಪುನರ್ ವ್ಯಾಖ್ಯಾನಿಸುವ ಕತೆಗಳೆಂದೋ, ಅಮೂರ್ತ/ಅಸಂಗತ ಕತೆಗಳೆಂದೋ ಹೇಳುತ್ತಿಲ್ಲ. ಪ್ರಕಾಶ್ ನಾಯಕ್ ಅವರ ಕತೆಗಳಲ್ಲಿ ಕಂಡೂ ಕಾಣದಂಥ ಒಂದು ಹೊಸತನವಿದೆ. ಈ ಕತೆಗಳು ಸಿದ್ಧಮಾದರಿಯ ಚೌಕಟ್ಟನ್ನು ಬಿಟ್ಟುಕೊಟ್ಟು ಪ್ರಯೋಗದ ಹಾದಿಯಲ್ಲಿರುವುದನ್ನು ತಾಂತ್ರಿಕ ನೆಲೆಯಿಂದ, ಕಥಾನಕದ ನೆಲೆಯಿಂದ ಮತ್ತು ಇದುವರೆಗಿನ ಪಾರಂಪರಿಕೆ ಚೌಕಟ್ಟಿಗೆ ಅದು ನೀಡುವ/ಜೋಡಿಸುವ ಹೊಸತನದ ನೆಲೆಯಿಂದ ಗಮನಿಸಬಹುದಾಗಿದೆ. ಅದನ್ನು ಸ್ವಲ್ಪ ಸರಳವಾಗಿ ಗ್ರಹಿಸಲು ಸಾಧ್ಯವಾಗುವಂತೆ ಹೀಗೆ ಕಾಣಿಸಬಹುದು:

1. ತಾಂತ್ರಿಕ ನೆಲೆಯಿಂದ:

(a) ಸಾಮಾನ್ಯವಾಗಿ ನಾವು ಕತೆಗಾರರ ಮೊದಲ ಸಂಕಲನದಲ್ಲಿ ಕಾಣುವ ಬಾಲ್ಯ, ಹುಟ್ಟೂರು, ಕಳೆದು ಹೋದ ಕಾಲದ ಚಿತ್ರ, ಆ ಕಾಲದ ಕತೆ, ಅನುಭವ, ಪರಿಸರ ಇಲ್ಲಿ ಇದ್ದೂ ಇಲ್ಲದಂತಿವೆಯೇ ಹೊರತು ಅವು ಎದ್ದು ಕಾಣುವಂತಿಲ್ಲ. ಇವೆಲ್ಲವೂ ಕತೆಗಾರ ತನ್ನ ವರ್ತಮಾನದ ಚಿತ್ರ, ಅನುಭವ, ಕತೆ, ಪರಿಸರವನ್ನೇ ನೆಚ್ಚಿಕೊಂಡು ರಚಿಸಿದ ಕತೆಗಳೆಂದೇ ಹೇಳಬಹುದಾದ ರಚನೆಗಳು.

(b) ಈ ಕತೆಗಳ ನಿರೂಪಣಾ ವಿಧಾನದಲ್ಲಿ ಕೃತಕವೆನ್ನಿಸುವಂಥ ರೂಪಕಗಳ ಬಳಕೆ, ಭಾಷೆಯ ಕಾವ್ಯಾತ್ಮಕತೆ/ಕಲಾತ್ಮಕತೆಗೆ ಒತ್ತು ನೀಡುವ ಪ್ರಯತ್ನ, ಸನ್ನಿವೇಶ/ಘಟನೆಗಳ ಪ್ರಯತ್ನಪೂರ್ವಕ ಸಂಯೋಜನೆ, ಕಥಾನಕದ ನಡೆಯನ್ನು ಕತೆಯ ತಾತ್ವಿಕ/ಸಾಮಾಜಿಕ ಆಯಾಮಗಳಿಗನುಗುಣವಾಗಿ ನಿರ್ದೇಶಿಸುವಂಥ ರಾಚನಿಕ ಪ್ರಯತ್ನ ಕಾಣಿಸುವುದಿಲ್ಲ.

(c) ಸಾಮಾನ್ಯವಾಗಿ ಸಣ್ಣಕಥಾ ಪರಂಪರೆಯಲ್ಲಿ ಗಮನಿಸುವ ಅಂತ್ಯದ ಪಂಚ್ ಕತೆಗಾರರಿಗೆ ಅಂಥ ಆಕರ್ಷಣೆಯನ್ನು ಒಡ್ಡಿದಂತಿಲ್ಲ. ಕುತೂಹಲವನ್ನು ಕಾಯ್ದುಕೊಳ್ಳುವ ಮತ್ತು ಆ ಕಾಯುವಿಕೆಯನ್ನು ಸಾರ್ಥಕಗೊಳಿಸುವ ವಿಧಾನದಲ್ಲಿ ಪ್ರಕಾಶ್ ನಾಯಕ್ ತಮ್ಮದೇ ಆದ ಒಂದು ಹದವನ್ನು ಕಂಡುಕೊಂಡಿರುವುದು ಗಮನಾರ್ಹವಾಗಿದೆ.

2. ಕಥಾನಕದ ನೆಲೆಯಿಂದ:

(a) ಈ ಕಥಾಸಂಕಲನದ ಎಲ್ಲಾ ಕತೆಗಳ ವಸ್ತುವೂ ಹೊಸತನದಿಂದ ನಳನಳಿಸುತ್ತಿವೆ. ಮರದ ಕತೆಯನ್ನು ಹೇಳುವ ಮೂಕಮರ್ಮರ ಕತೆಯನ್ನು ಸಂದೀಪ ನಾಯಕರ ಉರುಳಿತೊಂದು ಮರ ಕತೆಯ ಜೊತೆಗೂ, ಅನಾಥರು ಕತೆಯನ್ನು ಪಿ ಲಂಕೇಶರ ಉಲ್ಲಂಘನೆ ಕತೆಯ ಜೊತೆಗೂ ಧೃತರಾಷ್ಟ್ರ ಉವಾಚ ಕತೆಯನ್ನು ಕೆ ಸತ್ಯನಾರಾಯಣರ ವೈಶಂಪಾಯನದಲ್ಲಿ ಪಾಲು, ಶ್ರೀಧರ ಬಳಗಾರರ ಒಂದು ಫೋಟೋದ ನೆಗೆಟಿವ್ ಕತೆಯೊಂದಿಗೂ, ಬಹುರೂಪಿಗಳು ಕತೆಯನ್ನು ಎಂ ಎಸ್ ಶ್ರೀರಾಮ್ ಅವರ ಶಾರದಾ ಮೇಡಂ ಅಬ್ಸೆಂಟು ಕತೆಯೊಂದಿಗೂ ತೌಲನಿಕವಾಗಿ ಗಮನಿಸಲು ಅವಕಾಶವಿರುವುದರಿಂದ ಇವುಗಳನ್ನು ಒಂದರೊಂದಿಗೊಂದನ್ನಿಟ್ಟು ನೋಡಿದರೂ ಈ ಅಂಶ ಇನ್ನಷ್ಟು ಸ್ಪಷ್ಟವಾಗುತ್ತದೆ.

(b) ಹೀಗೆ ಬಾಲ್ಯದ ನೆನಪು/ನಾಸ್ಟಾಲ್ಜಿಕ್ ಸಂವೇದನೆಗಳ ನೆರವು, ಭಾವುಕತೆಯ ಪರವಶತೆ, ವಿವರಗಳ, ಭಾಷೆಯ ಮೋಹಕತೆ ಎಲ್ಲವನ್ನೂ ಬಿಟ್ಟುಕೊಟ್ಟು ಹೊಸತನ್ನೇ ಹೇಳ ಹೊರಟ ಕತೆಗಾರ ತಾನು ಈ ಕತೆಯನ್ನು ಹೇಳುವುದರಿಂದ ಅದು ಓದುಗನನ್ನು ರಂಜಿಸುವ ನೆಲೆ ಯಾವುದು ಎನ್ನುವ ಬಗ್ಗೆ ಇರಿಸಿಕೊಂಡಿರುವ ನಿಲುವು ಏನಿರಬಹುದು ಎನ್ನುವ ಬಗ್ಗೆ ಯೋಚಿಸುತ್ತೇನೆ. ಅದನ್ನು ನಾವು ಊಹಿಸಬಹುದಾದರೆ ಅದರಲ್ಲಿ ನಾವು ಕಾಣುವ ಒಂದು ಹೊಸತನದ ಹಂಬಲವೇನಿದೆ ಅದು ಗಮನಾರ್ಹ. ಇಂಥ ಕಥಾವಸ್ತುವನ್ನಿಟ್ಟುಕೊಂಡು ಒಬ್ಬ ಕತೆಗಾರ ತೊಡಗುವ ಶೋಧವೇನಿದೆ ಅದು ಮನುಷ್ಯನ ಮೂಲಭೂತ ಶೋಧವೇ ಆಗುಳಿದಿದೆ, ಅದರಲ್ಲಿ ಬದಲಾವಣೆಯಿಲ್ಲ ಎನ್ನುವ ಮಾತು ಮಹತ್ವದ್ದು.

3. ಇದುವರೆಗಿನ ಸಣ್ಣಕಥಾ ಪ್ರಕಾರದಲ್ಲಿ ನಡೆದು ಬಂದ ಪ್ರಯೋಗ-ಪ್ರಯತ್ನಗಳ ಒಂದು ಪುಟ್ಟ ಪರಂಪರೆ ರೂಪಿಸಿರುವ ಸಿದ್ಧಮಾದರಿಯ ಚೌಕಟ್ಟೇನಿದೆ, ಅದಕ್ಕೆ ಈ ಕತೆಗಳು ಜೋಡಿಸುವ - ಕೊಡುವ ಹೊಸತನವೇನಿದೆ, ಅದನ್ನು ನಾವಿನ್ನೂ ಪೂರ್ತಿಯಾಗಿ ಗ್ರಹಿಸಲು ಕಾಲಾವಕಾಶ ಅಗತ್ಯವಿದೆಯಾದರೂ, ಈ ಕತೆಗಳು ಹುಟ್ಟಿಸುವ ಭರವಸೆಯ ನೆಲೆಯಿಂದಲೂ ನಾನು ಈ ಕತೆಗಳಲ್ಲಿ ಪ್ರಾಯೋಗಿಕ ಅಂಶಗಳನ್ನು ಗುರುತಿಸಲು ಬಯಸುತ್ತೇನೆ.

ಹೀಗೆ, ಸ್ಪಷ್ಟವಾಗಿಯೇ ಇದು ಮೊದಲ ಕಥಾಸಂಕಲನವಾಗಿದ್ದರೂ ಇಲ್ಲಿನ ಕತೆಗಾರ ಹಲವಾರು ಬಗೆಯಲ್ಲಿ ಎಳೆಯ ಮನಸ್ಸಿನ, ಬೆಳೆಯುತ್ತಿರುವ ಕತೆಗಾರನಲ್ಲ. ಈ ಕತೆಗಳನ್ನು ಕೆಲಕಾಲದಿಂದ ಮತ್ತೆ ಮತ್ತೆ ತಿದ್ದುತ್ತಿದ್ದೆನೆಂದು ಅವರೇ ಹೇಳಿಕೊಂಡಿರುವುದರಿಂದಲೂ, ಇಲ್ಲಿ ನಾವು ಕಾಣುವ ಕಥಾವಸ್ತು ಮತ್ತು ನಿರೂಪಣೆಯ ಲಯಗಳಿಂದಲೂ ಕಂಡುಕೊಳ್ಳಬಹುದಾದ್ದು ಒಬ್ಬ ಪ್ರಬುದ್ಧ ಕತೆಗಾರನನ್ನೇ. ಹೀಗೆ ತುಸು ತಡವಾಗಿ ಕತೆಗಳನ್ನು ಬರೆಯತೊಡಗಿದ್ದರಿಂದಲೇ (ತಡವಾಗಿ ಪ್ರಕಟಿಸುತ್ತಿರುವುದರಿಂದ ಅಲ್ಲ) ಈ ಕತೆಗಳು ಹೀಗಿದ್ದಿರಬಹುದೇ ಎಂಬ ಪ್ರಶ್ನೆಯಿದೆ.

ಕತೆಗಾರನ ಭಾವಕೋಶದ ತುಷ್ಟಿ-ಪುಷ್ಟಿಗಳು ಬಾಲ್ಯದ ನೆನಪು, ಸ್ಮೃತಿಗಳನ್ನೇ ಬಹುವಾಗಿ ನೆಚ್ಚಿಕೊಂಡು ಬಲಿಯುವುದರಿಂದ ಒಬ್ಬ ಕತೆಗಾರ ಯಾವಾಗ ಬರೆಯಲು ತೊಡಗುತ್ತಾನೆ ಎನ್ನುವುದಕ್ಕಿಂತ ಆತ ಬರೆಯ ತೊಡಗಿದಾಗ ತನ್ನ ಕತೆಯ ಪರಿಸರ, ಪಾತ್ರ ಮತ್ತು ಸನ್ನಿವೇಶಗಳನ್ನು ಪುನರ್-ಸೃಷ್ಟಿಸಿಕೊಳ್ಳಲು ಬೇಕಾದ ಪರಿಕರಗಳನ್ನು ಪಡೆಯುವುದಕ್ಕೆ ಸಹಜವಾಗಿಯೇ ಅವನು ಆಶ್ರಯಿಸುವ ನೆನಪು-ಸ್ಮೃತಿಯ ಜಗತ್ತಿನಲ್ಲಿ ಎಷ್ಟರಮಟ್ಟಿಗೆ ಹಿಂದಕ್ಕೆ ಹೋಗಲು ಸಮರ್ಥನಾಗಿರುತ್ತಾನೆ ಎನ್ನುವುದು ಮುಖ್ಯ. ಶ್ರೀನಿವಾಸ ವೈದ್ಯರು ಕತೆ-ಕಾದಂಬರಿಗಳ ರಚನೆಗೆ ತೊಡಗಿದ್ದು ಒಂದರ್ಥದಲ್ಲಿ ತಡವಾಗಿ. ಈ ಬಗ್ಗೆ ಅವರಿಗೆ ತುಸು ಹಳಹಳಿಕೆಯಿದೆ ಎಂದು "ಇನ್ನೊಂದು ಸಂತೆ"ಗೆ ಬರೆದ ಮುನ್ನುಡಿಯಲ್ಲಿ ವಿವೇಕ್ ಶಾನಭಾಗ ಉಲ್ಲೇಖಿಸಿದ್ದಾರೆ. ಆದರೆ ವೈದ್ಯರನ್ನು ಓದಿದ ಯಾರಿಗೂ ಅವರು ಇದನ್ನೆಲ್ಲ ಇಪ್ಪತ್ತು-ಇಪ್ಪತ್ತೈದು ವರ್ಷಗಳ ಹಿಂದೆಯೇ ಬರೆಯಬೇಕೆತ್ತೆಂದು ಅನಿಸಲು ಕಾರಣಗಳಿಲ್ಲ. ಪ್ರಕಾಶ್ ನಾಯಕ್ ಅವರ ಕತೆಗಳಿಗೆ ಈ ಮಾತನ್ನು ಹಾಗೆ ನೇರವಾಗಿ ಅನ್ವಯಿಸುವುದು ತುಸು ಕಷ್ಟ. ಏಕೆಂದರೆ, ನಾಯಕ್ ಅವರ ಕತೆಗಳು ನಮ್ಮ ನಿರೀಕ್ಷೆಗೆ ವಿರುದ್ಧವಾಗಿ ಗತಕಾಲದ ವಸ್ತು, ವ್ಯಕ್ತಿ ಮತ್ತು ಪರಿಸರವನ್ನು ನೆಚ್ಚಿಕೊಂಡಿರದೆ ವರ್ತಮಾನದ ವಸ್ತು, ವ್ಯಕ್ತಿ ಮತ್ತು ಪರಿಸರವನ್ನೇ ಚಿತ್ರಿಸುತ್ತಿವೆ. ಹೀಗಿರುವುದರಿಂದ ಈ ಕತೆಗಳನ್ನು ಅವರು ಹರೆಯದಲ್ಲೇ ಬರೆದಿದ್ದು ಅದನ್ನು ತಿದ್ದುತ್ತ ಬಂದು ತಡವಾಗಿ ಪ್ರಕಟಿಸಿದ್ದಾರೆ ಎನ್ನುವ ಹಾಗೂ ಇಲ್ಲ. ಹಾಗಿದ್ದೂ ಅವರ ಮಾಗಿದ ಮನಸ್ಸು, ಸಮೃದ್ಧ ಜೀವನಾನುಭವ ಮತ್ತು ಪ್ರಬುದ್ಧ ನಿಲುವುಗಳಿಂದಾಗಿ ಅವರ ಮೊದಲ ಸಂಕಲನದ ಕತೆಗಳೇ ಆರಂಭಿಕ ಹಂತದ ಅರೆ-ಕೊರೆಗಳಿಂದ ಮುಕ್ತವಾಗಿ ಹೊರಬರುವುದು ಸಾಧ್ಯವಾಗಿದೆಯಲ್ಲವೆ ಅನಿಸಬಹುದು. ಬಹುಶಃ ಇದೂ ಕೂಡ ಅಷ್ಟು ಗಟ್ಟಿಯಾದ ತಳವಿರುವ ವಾದವಲ್ಲ. ವಿವೇಕ್ ಶಾನಭಾಗ ಅವರ ‘ಅಂಕುರ’ ಸಂಕಲನದ ಕೆಲವು ಕತೆಗಳನ್ನು ಬರೆದಾಗ ಅವರಿಗೆ ಹದಿನಾರು ವರ್ಷ ವಯಸ್ಸೂ ಆಗಿರಲಿಲ್ಲ. ಜಯಂತ್ ಇಪ್ಪತ್ತರ ಪ್ರಾಯ ದಾಟುವ ಮೊದಲೇ ತಮ್ಮ ಕವನ ಸಂಕಲನಕ್ಕಾಗಿ ಅಕಾಡಮಿಯಿಂದ ಪುರಸ್ಕೃತರಾಗಿದ್ದರು.

ಮಸಾರಿ ಕತೆ ಏನನ್ನು ಕುರಿತಾಗಿದೆ ಎನ್ನುವುದಕ್ಕಿಂತಲೂ ಇಲ್ಲಿ ಕತೆಗಾರ ಓದುಗನ ಗಮನವನ್ನು (ಕುತೂಹಲವನ್ನು) ಕಾಯ್ದುಕೊಳ್ಳಲು ಬಳಸುವ ತಂತ್ರವೇ ಒಂದು, ಕತೆ ಹೇಳುತ್ತಿರುವ ಸಂಗತಿಯೇ ಇನ್ನೊಂದು ಹೌದಾದರೂ ಅದರ ಅಂತ್ಯವನ್ನು ಅವರು ನಿರ್ವಹಿಸಿರುವ ಬಗೆ ಮೆಚ್ಚುಗೆಗೆ ಕಾರಣವಾಗುವಂತಿದೆ. ಅಂತ್ಯದ ಪಂಚ್ ಬಗ್ಗೆ ಮೇಲೆ ಹೇಳಿರುವ ಮಾತಿಗೆ ಇದು ಪುಷ್ಟಿಯನ್ನೊದಗಿಸುತ್ತದೆ. ಹಾಗೆಯೇ ಏರಿರೆನ್ನಯ ರಥವಾ ಕತೆಯ ನೈತಿಕ ನೆಲೆಯ ಸಂಘರ್ಷವೇನೇ ಇರಲಿ, ಅದರ ಅಂತ್ಯದ ನಿರ್ವಹಣೆ ಗಮನಾರ್ಹವಾಗಿದೆ. ಹಾಗೆಯೇ ಮೂಕಮರ್ಮರ ಕತೆಯಲ್ಲಿ ಸಾಂತಯ್ಯನ ಪಾತ್ರದ ‘ಹೇಳದುಳಿದ’ ಮಾತುಗಳೇ ಓದುಗನಲ್ಲಿ ಜಾಗೃತವಾಗುವಂತೆ ವಸ್ತುವನ್ನು ನಿರ್ವಹಿಸಿದ ರೀತಿಯೂ ಚೆನ್ನಾಗಿದೆ. ಅನಾಥರು ಕತೆಯನ್ನೂ ಸೇರಿದಂತೆ ಈ ಎಲ್ಲಾ ಕಥಾವಸ್ತುವನ್ನೂ ಬೇರೆ ರೀತಿ, ಹೆಚ್ಚು ವಾಚ್ಯವಾದ ರೀತಿ ನಿರ್ವಹಿಸುವ ಅಪಾಯ ತೆರೆದೇ ಇತ್ತು. ಸಮಾಜಕ್ಕೆ ಸಂದೇಶ ನೀಡುವ, ಕತೆಗೆ ಹೆಚ್ಚು ಸ್ಪಷ್ಟತೆ ನೀಡುವ ವ್ಯಾಮೋಹಕ್ಕೆ ಕತೆಗಾರರು ಸ್ವಲ್ಪವೇ ಸ್ವಲ್ಪ ಮನಸೋತಿದ್ದರೂ ಹಂದರ ಸಡಿಲವಾಗುತ್ತಿತ್ತು ಎನ್ನುವುದನ್ನು ಮರೆಯುವಂತಿಲ್ಲ. ಈ ಎಚ್ಚರ ಹೆಚ್ಚು ಸ್ಪಷ್ಟವಾಗಿ ನಮಗೆ ಗೋಚರಿಸುವುದು ಬಹುಷಃ, ನಾಮಕಾವಸ್ತೆ ಕತೆಯ ಅಡಿಟಿಪ್ಪಣಿಯಲ್ಲಿ. ಅದು ಹೀಗಿದೆ:

"ಇದೊಂದು ನಡೆದ ಘಟನೆಯ ಸುತ್ತ ಹೆಣೆದ ಕತೆ. ಉದ್ದೇಶಪೂರ್ವಕವಾಗಿ ಇಲ್ಲದ ರಂಗನ್ನು ಆರೋಪಿಸುವ ಸಾಹಸ ಮಾಡಿಲ್ಲವಾದರೂ ಸತ್ಯಕ್ಕೆ ದೂರವಾಗಿರುವ ಸಂಗತಿಗಳು ನುಸುಳಿರುವ ಸಾಧ್ಯತೆಗಳನ್ನು ಅಲ್ಲಗಳೆಯುವುದಿಲ್ಲ. ಆದ್ದರಿಂದಲೇ ಇದನ್ನು ಸತ್ಯಕಥೆ ಎಂದು ನಾಮಕರಣ ಮಾಡಲು ಹೋಗುವುದಿಲ್ಲ." - ಈ ಮಾತಿಗೆ ಹೆಚ್ಚು ವಿವರಣೆ ಅಗತ್ಯವಿಲ್ಲ.

ಒಂದು ಸಂಜೆಯ ವೃತ್ತಾಂತ ಕತೆ ಬಹುಷಃ ಕಥಾವಸ್ತುವಿನ ಸಂಯಮದ ನಿರ್ವಹಣೆಗೆ ನಾವು ಕಾಣಬಹುದಾದ ಅತ್ಯುತ್ತಮ ಉದಾಹರಣೆಯಾಗಿ ನಿಲ್ಲಬಲ್ಲ ಒಂದು ಕತೆ. ವಸ್ತು ಭಾವುಕ ಸಂವೇದನೆಗಳ ನೆಲೆಯಲ್ಲೇ ಇದೆ. ಕ್ಷಣಭಂಗುರ ಕತೆಯಲ್ಲಿ ಆಗುವ ಹಾಗೆ ಭಾವುಕ ಸಂವೇದನೆಗಳು ವ್ಯಾವಹಾರಿಕ ತಾರ್ಕಿಕ ನೆಲೆಯೊಂದಿಗೆ ತಳುಕು ಹಾಕಿಕೊಂಡು ನಿಲ್ಲುವಂಥದ್ದೇನೂ ಇಲ್ಲಿಲ್ಲ. ಆದರೆ ಪ್ರಕಾಶ್ ನಾಯಕ್ ಅದನ್ನು ಮದುವೆ ಮನೆಯಲ್ಲಿ ಸೇಸೆ ಎರಚಿದಷ್ಟೇ ಮಿತವಾಗಿ (ಸ್ವಲ್ಪ ಹೆಚ್ಚಾದರೆ ಚೆಲ್ಲಿದಂತೆ, ಸ್ವಲ್ಪ ಕಡಿಮೆಯಾದರೆ ತಲುಪದಂತೆ - ಯುಆರ್‌ಎ) ನಿರ್ವಹಿಸುತ್ತಾರೆ. ಕತೆಯಲ್ಲಿ ಹೇಳದೇ ಉಳಿಸಿರುವುದೆಲ್ಲ ಓದುಗನ ಹೆಗಲೇರಿ ಕೂರುತ್ತದೆ. ಬಕುಳದ ನೆರಳು ಕತೆಯ ಆಕಾಂಕ್ಷೆ ಕೂಡ ಇಂಥದೇ ಆದರೂ ಅದು ಒಂದು ಸಂಜೆಯ ವೃತ್ತಾಂತ ಕತೆಯಷ್ಟು ಯಶಸ್ವಿಯಾಗಿಲ್ಲ ಏಕೆ ಎನ್ನುವುದನ್ನು ಕುರಿತು ಯೋಚಿಸಬೇಕಿದೆ.

ಒಬ್ಬ ಕತೆಗಾರ ತೊಡಗುವ ಶೋಧವೇನಿದೆ ಅದು ಮನುಷ್ಯನ ಮೂಲಭೂತ ಶೋಧವೇ ಆಗುಳಿದಿದೆ ಎನ್ನುವ ಮಾತನ್ನು ಹೇಳಿದೆ. ಸಂಕಲನಕ್ಕೆ ಹೆಸರು ನೀಡಿದ ಅಮೂರ್ತ ಚಿತ್ತ ಕತೆಯಲ್ಲಿ ಇದು ಹೆಚ್ಚು ಸ್ಪಷ್ಟವಾಗುವ ಅಂಶ. ಮನುಷ್ಯ ಎಂಬುದು ದೇಹ, ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ, ಸುಷುಮ್ನಾ ಎಂಬ ಆರು ಅವಸ್ಥೆಗಳಲ್ಲಿದೆ ಎನ್ನುವುದು ಒಂದು ಚಿಂತನೆ. ಇಲ್ಲಿ ಭಾಷೆಯೊಂದೇ ಸಂವಹನ ಮಾಧ್ಯಮವಾಗುಳ್ಳ ಮನುಷ್ಯಮಾತ್ರದವ ತನ್ನ ಬುದ್ಧಿ ಮತ್ತು ಸುಷುಮ್ನಾ ಅವಸ್ಥೆಯ ನಡುವಿನ ಚಿತ್ತದ ಅವಸ್ಥೆಯಲ್ಲಿ ವೇದ್ಯವಾದುದನ್ನು ಇನ್ನೊಬ್ಬ ವ್ಯಕ್ತಿಯ ಗ್ರಹಿಕೆಗೆ ನಿಲುಕುವಂತೆ ವಿವರಿಸಲು ಅಸಮರ್ಥನಿರುವುದರಿಂದಲೇ (ಭಾಷೆಯಲ್ಲಿ ಅನುಭವವನ್ನು ಕಟ್ಟಿಕೊಡುವ ಅಸಾಮರ್ಥ್ಯ ಭಾಷೆಯಿಂದ ಉದ್ಭವಿಸಿದ್ದೋ, ಸಂವೇದನೆಯನ್ನು ಗ್ರಹಿಸಿದ ವಿಧಾನದಲ್ಲಿ ಉಂಟಾಗುವ (ಇರುವ) ಊನ/ನ್ಯೂನತೆ ಕಾರಣವೋ ಅದು ಬೇರೆಯೇ ಪ್ರಶ್ನೆ) ಅತೀಂದ್ರಿಯ ಅನುಭವಗಳನ್ನು ಅವು ನಿಜವಿರಬಹುದಾದಾಗ್ಯೂ ಸಮರ್ಥನೀಯ ನೆಲೆಯಲ್ಲಿ ಸಮಜಾಯಿಸಲು ಅಥವಾ ಸುಳ್ಳೆಂದು ಕಂಡುಕೊಳ್ಳಲು ಸಾಧ್ಯವಾಗಿಲ್ಲ - ಇದು ಒಂದು ತರ್ಕ. ಅಮೂರ್ತ ಚಿತ್ತ ಕತೆ ಒಂದು ವಿಶಿಷ್ಟ ಬಗೆಯಲ್ಲಿ ಈ ಅಪರೂಪದ ವಸ್ತುವಿಗೆ ಕೈಯಿಕ್ಕಿರುವುದರಲ್ಲಿ ಒಂದು ಹೊಳಹು ಇದೆ.

ಮನುಷ್ಯ ಅತ್ಯಂತ ಪ್ರಾಚೀನ ಗ್ರಂಥದಿಂದ ತೊಡಗಿ ಇವತ್ತಿನ ವರೆಗೆ ಸೃಷ್ಟಿಸಿರುವ ಎಲ್ಲಾ ಸಾಹಿತ್ಯದ ಮೂಲಭೂತ ಶೋಧ ಒಂದೇ. ಅದು, ಕೈಯಲ್ಲಿ ಯಾವುದೇ ಸ್ಕ್ರಿಪ್ಟ್ ಹಿಡಿಯದೇ ಬದುಕಿನ ರಂಗಸ್ಥಳಕ್ಕೆ ತಿಳಿದೋ ತಿಳಿಯದೆಯೋ ದಬ್ಬಲ್ಪಟ್ಟ ತಾನು ಇಲ್ಲಿನ ಜೀವಿತಾವಧಿಯಲ್ಲಿ ಬದುಕಬಹುದಾದ ಅತ್ಯಂತ ಶ್ರೇಷ್ಠ ಮಾದರಿಯೊಂದು ಇರುವುದೇ ಆದರೆ ಅದು ಯಾವುದು ಎಂಬ ಶೋಧವೇ ಹೊರತು ಇನ್ನೇನಲ್ಲ. ನಾನು ಯಾರು, ಎಲ್ಲಿಂದ ಬಂದೆ, ಎಲ್ಲಿದ್ದೆ, ಸಾವು ಎಲ್ಲದರ ಅಂತ್ಯವೇ, ಮನಸ್ಸು ದೇಹಾತೀತವಾಗಿರಬಹುದೆ, ನಿದ್ದೆಯಲ್ಲಿ ನಾನು ಎಲ್ಲಿರುತ್ತೇನೆ, ನಾನು ಇಲ್ಲವಾಗುವುದು ಎಂದರೇನು ಮುಂತಾದ ಉತ್ತರವಿಲ್ಲದ ಪ್ರಶ್ನೆಗಳು ಆವತ್ತೂ ಈವತ್ತೂ ಮನುಷ್ಯನನ್ನು ಕಾಡುತ್ತಲೇ ಇವೆ. ಬದುಕಿಗೆ ಬಂದುದಾಗಿದೆ, ಈ ಎಲ್ಲ ಉತ್ತರವಿಲ್ಲದ ಪ್ರಶ್ನೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತ ಕೂರುವ ಬದಲು ಅದನ್ನು ಸಾರ್ಥಕವಾಗಿ ಬದುಕುವುದು ಬುದ್ಧಿವಂತಿಕೆ ಎಂದ ಕಾರಂತರ ಮಾತನ್ನು ಒಪ್ಪಿಕೊಂಡೂ ಪ್ರಶ್ನೆಗಳು ಇವೆ ಎನ್ನುವುದೇ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಇರುವ ಆಕರ್ಷಣೆಯಾಗಿದೆ ಎನ್ನುವ ಸತ್ಯ ಉಳಿಯುತ್ತದೆ! ವಿಶೇಷತಃ ಸಾಹಿತಿಯನ್ನು ಇವು ಸೆಳೆಯಲೇ ಬೇಕು.

ಪ್ರಕಾಶ್ ನಾಯಕ್ ಅವರ ಕತೆಗಾರಿಕೆಯ ಪಟ್ಟು-ಮಟ್ಟುಗಳು ಕುತೂಹಲವನ್ನಂತೂ ಮೂಡಿಸುತ್ತಿವೆ. ಆಕಸ್ಮಿಕವಲ್ಲದ, ಸಾಕಷ್ಟು ಚಿಂತನ-ಮಂಥನದ ತರುವಾಯ ರೂಢಿಸಿಕೊಂಡಿರುವ ಈ ಹದವನ್ನು ಮತ್ತಷ್ಟು ಮುಂದೊತ್ತಿ ಸಾಗುವ ಹೊಸ ಹೊಸ ರಚನೆಗಳೊಂದಿಗೆ ಅವರು ಹೊಸತನ್ನು ಕನ್ನಡ ಸಣ್ಣಕಥಾ ಪರಂಪರೆಗೆ ಜೋಡಿಸಲಿ.

No comments: