Monday, August 10, 2015

"ಮಾಡಿದ್ದುಣ್ಣೋ ಮಹಾರಾಯ"ನಿಗೆ ನೂರು

1915ರಲ್ಲಿ ಪ್ರಕಟವಾದ ಎಂ ಎಸ್ ಪುಟ್ಟಣ್ಣನವರ "ಮಾಡಿದ್ದುಣ್ಣೋ ಮಹಾರಾಯ" ಕಾದಂಬರಿಗೆ ಬರೋಬ್ಬರಿ ನೂರು ವರ್ಷ! ಇದು ಕನ್ನಡದ ಮೊದಲ ಕಾದಂಬರಿಗಳಲ್ಲಿ ಒಂದು ಎನ್ನುವುದಷ್ಟೇ ಇದರ ಹೆಚ್ಚುಗಾರಿಕೆಯಲ್ಲ. ಆರಂಭಿಕ ಕಾದಂಬರಿಗಳಲ್ಲೇ ಭಿನ್ನ ಸೊಲ್ಲೊಂದನ್ನು ನುಡಿದ ನವೋದಯದ ಮಾರ್ಗಪ್ರವರ್ತಕ ಕಾದಂಬರಿ ಎಂಬ ಹೆಗ್ಗಳಿಕೆ ಇದರದ್ದು. ಅದೇ ವರ್ಷ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿದ್ದು ಕೂಡ. ಪುಟ್ಟಣ್ಣ ಪರಿಷತ್ತು ಸ್ಥಾಪನೆಯ ಕಾರ್ಯದಲ್ಲಿ ಭಾಗಿಯಾಗಿದ್ದವರಷ್ಟೇ ಅಲ್ಲ, ಕೆಲವು ವರ್ಷ ಅದರ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದವರು.

ಕನ್ನಡದ ಮೊದಲ ಪ್ರಮುಖ ಕಾದಂಬರಿಗಳಲ್ಲಿ ಎಂ.ಎಸ್.ಪುಟ್ಟಣ್ಣ ಅವರ "ಮಾಡಿದ್ದುಣ್ಣೋ ಮಹಾರಾಯ"ಕ್ಕೆ ವಿಶಿಷ್ಟ ಸ್ಥಾನವಿದೆ. ಕನ್ನಡದ ಬಹುತೇಕ ಎಲ್ಲಾ ಪ್ರಮುಖ ವಿಮರ್ಶಕರೂ ಒಂದಲ್ಲಾ ಒಂದು ಸಂದರ್ಭದಲ್ಲಿ ಈ ಕಾದಂಬರಿಯ ಬಗ್ಗೆ ವಿಸ್ತೃತವಾಗಿಯೇ ಬರೆದಿದ್ದಾರೆ. "ಕನ್ನಡ ಕಥನ ಸಾಹಿತ್ಯ: ಕಾದಂಬರಿ" ಕೃತಿಯಲ್ಲಿ ಜಿ ಎಸ್ ಅಮೂರ ಅವರು ಈ ಕೃತಿ ಕಾದಂಬರಿ ಪ್ರಕಾರದ ಬೆಳವಣಿಗೆಗೆ ಕೊಟ್ಟ ಕೊಡುಗೆಯ ನಿಜವಾದ ಕಲ್ಪನೆಯಿಲ್ಲದ ನಮ್ಮ ವಿಮರ್ಶಕರ ವಿವೇಕದ ಬಗ್ಗೆಯೂ ವಿಮರ್ಶಿಸಿದ್ದಾರೆ! ಶಾಂತಿನಾಥ ದೇಸಾಯಿ, ಕೆ.ವಿ.ನಾರಾಯಣ, ಜಿ.ಎಚ್.ನಾಯಕ, ಶಿವರಾಮ ಪಡಿಕ್ಕಲ್, ಡಿ.ಆರ್. ನಾಗರಾಜ್, ಕೀರ್ತಿನಾಥ ಕುರ್ತಕೋಟಿ, ಟಿ.ಪಿ. ಅಶೋಕ್, ಪುರುಷೋತ್ತಮ ಬಿಳಿಮಲೆ, ಮ.ಶ್ರೀಧರ ಮೂರ್ತಿ - ಹೀಗೆ ಸಾಲು ಸಾಲಾಗಿ ಈ ಕಾದಂಬರಿಯ ಹಿನ್ನೆಲೆಯಲ್ಲಿ ಹಲವು ಹತ್ತು ವಿಚಾರಗಳ ಬಗ್ಗೆ ಚರ್ಚೆ/ಜಿಜ್ಞಾಸೆ ನಡೆಸಿದ್ದಾರೆ. ಪ್ರಧಾನವಾಗಿ ಈ ಎಲ್ಲ ವಿಮರ್ಶೆಗಳಲ್ಲಿ ಚರ್ಚೆಯಾದ ವಿಚಾರಗಳನ್ನು ಈ ರೀತಿಯಾಗಿ ಪಟ್ಟಿ ಮಾಡಬಹುದಾಗಿದೆ:

1. ಸ್ವಾತಂತ್ರ್ಯಪೂರ್ವ ಕನ್ನಡ ಸಾಹಿತ್ಯದ ಒಲವು-ನಿಲುವುಗಳೇನು, ಈ ಕಾದಂಬರಿಯಲ್ಲಿ ಅದರ ಅನುಸಂಧಾನ ಯಾವ ರೀತಿಯಲ್ಲಿ ಆಗಿದೆ.
2. ಆರಂಭಿಕ ಕಾದಂಬರಿಗಳಲ್ಲಿ ಎದ್ದು ಕಾಣುವ ಭಾವನಾತ್ಮಕ ಅಂಶಗಳು, ರಾಷ್ಟ್ರೀಯತೆಯ ತುಡಿತಗಳು ಕ್ರಮೇಣ ಬೌದ್ಧಿಕ/ಚಿಂತನಾ ಪ್ರಧಾನ ಧಾರೆಯತ್ತ ಹರಿಯಿತು ಹೇಗೆ ಮತ್ತು ಪುಟ್ಟಣ್ಣನವರ ಈ ಕಾದಂಬರಿಯಲ್ಲಿ ಅದರ ಮೊದಲ ಹೆಜ್ಜೆಗಳನ್ನು ಗುರುತಿಸಬಹುದು ಹೇಗೆ.
3. ಮೊದಲಿಗೆ ಆದರ್ಶದ ಮಾದರಿಯಾಗಿ ಧರ್ಮ-ಪರಂಪರೆ-ಸಂಸ್ಕೃತಿ ಮುಂತಾದ ಹಿಂದೂಪರ ನಿಲುವುಗಳು ವಿಜೃಂಭಿಸಿದ್ದು ಕಾದಂಬರಿಕಾರರಲ್ಲಿ, ಮುಖ್ಯವಾಗಿ ಪುಟ್ಟಣ್ಣನವರ ಕಾದಂಬರಿಯಲ್ಲಿ ಅದರ ಪರ-ವಿರೋಧ ನಿಲುವುಗಳೇನಿವೆ.
4. ನಮ್ಮ ಆರಂಭಿಕ ಕಾದಂಬರಿಕಾರರ ಮೇಲೆ ಪಾಶ್ಚಾತ್ಯ ಸಾಹಿತ್ಯ/ಕಾದಂಬರಿಗಳ ಪ್ರಭಾವ ಎಷ್ಟಿತ್ತು ಮತ್ತು ಪುಟ್ಟಣ್ಣವನರ ಕಾದಂಬರಿಯಲ್ಲಿ ಪಾಶ್ಚಾತ್ಯ ಪ್ರಭಾವವನ್ನು ಗುರುತಿಸಬಹುದೆ?
5. ಈ ಕಾದಂಬರಿಕಾರರಾದಿಯಾಗಿ ಮುಂದೆ ದೇಸೀ ಮಾದರಿಯೊಂದರ ಕಟ್ಟುವಿಕೆಯ ಪ್ರಕ್ರಿಯೆ ಎಷ್ಟರಮಟ್ಟಿಗೆ ಸಾಗಿತ್ತು, ಅದರ ಕೊಂಡಿ ಎಲ್ಲಿ ಕಳಚಿತು.
6. ಈ ಆರಂಭಿಕ ಕಾದಂಬರಿಗಳಲ್ಲಿ ಕಾಣುವ ಸಾಮಾಜಿಕ/ಕೌಟುಂಬಿಕ ಸಮಸ್ಯೆಗಳು ಮತ್ತು ಆ ಕಾಲದ ಪಾಶ್ಚಾತ್ಯಚಿಂತನೆ-ಪ್ರಭಾವಗಳು ಭಾರತೀಯ ಪರಂಪರೆಗೆ ಒಡ್ಡಿದ ಸಂಘರ್ಷಗಳ ಸ್ವರೂಪ ಯಾವುದು, ಪುಟ್ಟಣ್ಣನವರ ಈ ಕಾದಂಬರಿ ಅದನ್ನು ಹೇಗೆ ಪ್ರತಿಬಿಂಬಿಸಿದೆ.
7. ಆ ಕಾಲದ ಬಂಗಾಳೀ, ಮರಾಠಿ ಸಾಹಿತ್ಯದ ಪ್ರಭಾವ ಕನ್ನಡ ಕಾದಂಬರಿಗಳ ಮೇಲೆ, ನಿರ್ದಿಷ್ಟವಾಗಿ ಪುಟ್ಟಣ್ಣನವರ ಕಾದಂಬರಿಯ ಮೇಲೆ ಎಷ್ಟರಮಟ್ಟಿಗಿದೆ.

- ಹೀಗೆ ಅಚ್ಚರಿ ಹುಟ್ಟಿಸುವ ಮಟ್ಟಿಗೆ ಈ ಕಾದಂಬರಿಯೂ ಸೇರಿದಂತೆ ನಡೆದ ಚರ್ಚೆ-ಜಿಜ್ಞಾಸೆಗಳು ಒಂದೆರಡಲ್ಲ. ಎಂ.ಎಸ್.ಪುಟ್ಟಣ್ಣನವರ ಕಾದಂಬರಿ ಸಾಕಷ್ಟು ಸಮಕಾಲೀನ ರಾಜಕೀಯ, ಧಾರ್ಮಿಕ, ಸ್ತ್ರೀಮತದ ಕುರಿತಾದ ಪ್ರಶ್ನೆಗಳನ್ನು ಒಳಗೊಂಡಿರುವುದರಿಂದ ಇಂಥ ಚರ್ಚೆ ಸ್ವಾಭಾವಿಕವೇ. ಅಲ್ಲದೆ ಈ ವಿಮರ್ಶೆಗಳಿಂದ ನಮಗೆ ಸಮಕಾಲೀನ ಸ್ಥಿತಿಗತಿಯ ಬಗ್ಗೆ ಸಾಕಷ್ಟು ಪೂರಕ ಮಾಹಿತಿ ಕೂಡ ಒದಗುವುದರಿಂದ ಈ ಎಲ್ಲ ಚರ್ಚೆ ಕುತೂಹಲಕರವೇ. ಆದರೆ, ಒಂದು ಸಾಹಿತ್ಯ ಕೃತಿಯನ್ನು ಸುಮ್ಮನೇ ಅದನ್ನು ಓದುವ ಖುಶಿಗಾಗಿ ಓದುವುದು ಸಾಧ್ಯವಿಲ್ಲವೆ ಎಂಬ ಪ್ರಶ್ನೆಯೂ ಇದೆ. ಇವತ್ತು, ಕಾದಂಬರಿ ಹುಟ್ಟಿ ನೂರು ವರ್ಷಗಳ ಬಳಿಕ, ಕಳೆದ ಐವತ್ತು ವರ್ಷಗಳಲ್ಲಿ ನಡೆದ ಚರ್ಚೆಯನ್ನು ಒಮ್ಮೆಗೇ ಗಮನಿಸಿದರೆ ಸಾಮಾನ್ಯ ಓದುಗ ಕಂಗಾಲಾದಾನು!

ಪುಟ್ಟಣ್ಣನವರ ಕಾದಂಬರಿ "ಮಾಡಿದ್ದುಣ್ಣೋ ಮಹಾರಾಯ"ವನ್ನು ಇವತ್ತು ಹಿಂದಿರುಗಿ ನೋಡಿದಾಗ, ಅಂದರೆ ಈ ಕಾಲಮಾನದಲ್ಲಿ ನಿಂತು ಓದಿದಾಗ ಏನನಿಸುತ್ತದೆ ಎನ್ನುವುದು ಮುಖ್ಯ. ಹಾಗೆ ಓದುವಾಗ ಒಂದು, ನಾವು ಆ ಕಾಲವನ್ನು ಮನಸ್ಸಿಗೆ ತಂದುಕೊಂಡು ಓದುತ್ತೇವೆ. ಇನ್ನೊಂದು ಅದನ್ನು ಈ ಕಾಲಕ್ಕೆ ಒಗ್ಗಿಸಿಕೊಂಡೂ ಓದುತ್ತೇವೆ. ಇದೊಂದು ಬಗೆಯ ಸಂಘರ್ಷವನ್ನು ಓದುಗನಲ್ಲಿ ಹುಟ್ಟಿಸುವುದು ಖಚಿತ. ಈ ಸಂಘರ್ಷಗಳ ಪರೀಕ್ಷೆಯಲ್ಲಿ ಗೆದ್ದು ನಿಲ್ಲುವ ಕೃತಿ "ಮಾಡಿದ್ದುಣ್ಣೋ ಮಹಾರಾಯ" ಎನ್ನುವುದೇ ಇದರ ವೈಶಿಷ್ಟ್ಯ. ನೂರು ವರ್ಷಗಳ ನಂತರವೂ ಮತ್ತೆ ಕೈಗೆತ್ತಿಕೊಳ್ಳಲು ಆಹ್ವಾನಿಸುವ ಕೃತಿಯಾಗಿ ಅದು ಉಳಿದಿರುವುದೇ ಇಂಥ ಕಾರಣಗಳಿಂದ.

ಮೇಲ್ನೋಟಕ್ಕೇ ಗಮನಕ್ಕೆ ಬರುವ ಸಂಗತಿಯೆಂದರೆ ಪುಟ್ಟಣ್ಣನವರಿಗೆ ತಮ್ಮ ಸಮಾಜದ ಬಗ್ಗೆ ತೀವ್ರ ಅಸಮಾಧಾನವಿತ್ತೆಂಬ ಅಂಶ. ಈ ಕಾದಂಬರಿಯಲ್ಲಿ ಒಬ್ಬ ಉಪಾಧ್ಯಾಯ ಸರಿಯಿಲ್ಲ. ಮಕ್ಕಳಿಗೆ ವಿನಾಕಾರಣ ಬಡಿದು-ಹೊಡೆದು, ಹೆದರಿಸಿ ತನ್ಮೂಲಕವೇ ವಿದ್ಯಾವಂತರನ್ನಾಗಿ ರೂಪಿಸುತ್ತೇನೆಂದು ಬಹ್ವಂಶ ಪ್ರಾಮಾಣಿಕವಾಗಿಯೇ ನಂಬಿದ ವ್ಯಕ್ತಿ. ಈತನ ವ್ಯಕ್ತಿತ್ವದಲ್ಲೇ ದ್ವೇಷ-ಅಸಹನೆ-ಅಸಮಾಧಾನಗಳು ತುಂಬಿ ತುಳುಕುತ್ತಿವೆ. ಇನ್ನೊಬ್ಬ ಅಮೀಲ ದುರಾಸೆಯವ. ದೊರೆಯೆದುರು ಪೆದ್ದನಂತೆಯೂ, ಅಮಾಯಕನಂತೆಯೂ ತೋರಿಸಿಕೊಂಡು ಊರಲ್ಲಿ ಲಂಚ ತಿನ್ನುತ್ತ, ಕಳ್ಳಕಾಕರನ್ನು ಸಲಹಿ ಪೊರೆಯುತ್ತ ಅವರು ಕದ್ದ ಮಾಲಿನಲ್ಲಿ ಪಾಲು ಪಡೆದು ಸುಖ ಪಡುವ ಲೋಲುಪ. ಇನ್ನೊಬ್ಬ ಕೊಲ್ಲಾಪುರದ ಲಕ್ಷ್ಮೀ ದೇವಾಲಯವನ್ನೇ ತನ್ನ ಬಂಡವಾಳ ಮಾಡಿಕೊಂಡು ಭಕ್ತರನ್ನು ವಂಚಿಸಿ, ಅವರನ್ನು ದೋಚಿ ತನ್ನ ಐಷಾರಾಮಿ ಪಡೆದುಕೊಂಡವನು ಮಾತ್ರವಲ್ಲ ಈತನೂ ಕಳ್ಳಕಾಕರನ್ನು ಪೊರೆಯುತ್ತ, ಅವರಿಗೆ ಮಾರ್ಗದರ್ಶನವೀಯುತ್ತ, ಅವರ ಕಳವಿನ ಪಾಲು ಪಡೆಯುವ ದುರುಳ. ಪ್ರಜಾಜನಹಿತ ಕಾಯಬೇಕಾದ ಅಧಿಕಾರಿ, ಬೆಳೆಯುವ ಮಕ್ಕಳನ್ನು ತಿದ್ದಿ ಆದರ್ಶವನ್ನು ಬೋಧಿಸಬೇಕಾದ ಗುರು, ದೈವಭಯ-ಭಕ್ತಿಯನ್ನು ಜನಮನದಲ್ಲಿ ಉದ್ದೀಪಿಸಬೇಕಾದ ಧರ್ಮಾಧಿಪತಿ - ಇವರ ನಡೆನುಡಿ, ಆಚಾರ ವಿಚಾರ ವಿವರಿಸುವಲ್ಲಿ ಪುಟ್ಟಣ್ಣನವರ ಅಪಾರ ಜೀವನಾನುಭವ, ಸಮಕಾಲೀನ ಸಮಾಜದ ಹುಳುಕು-ಹುಣ್ಣುಗಳ ಬಗ್ಗೆ ಅವರಿಗಿದ್ದ ನೋವು ಮತ್ತು ಗ್ರಹಿಕೆ ನಮ್ಮನ್ನು ತಟ್ಟದೇ ಇರಲು ಸಾಧ್ಯವಿಲ್ಲ. ಹಾಗೆಯೇ ಇಲ್ಲಿ ಉಪ್ಪಲಿಗರು ಮತ್ತು ತೊರೆಯರ ಜಾತಿ ಜಗಳ, ವೈಮನಸ್ಯ, ಸಾವು ನೋವಿಗೆ ಕಾರಣವಾಗುವ ಮಟ್ಟದ ಹೊಡೆದಾಟ ಬೇರೆ ಇದೆ. ಇದಕ್ಕೆ ತುಪ್ಪ ಸುರಿಯುವ, ಸಮಾಜದ ಸಾಮರಸ್ಯ ಕಾಯಬೇಕಾದವರೇ ಅದನ್ನು ಕೆಡಿಸಲು ಪ್ರಯತ್ನಿಸುವ ಚಿತ್ರವಿದೆ. ಬಹುಷಃ ಇಲ್ಲಿ ಇದು ನೂರು ವರ್ಷಗಳಷ್ಟು ಹಿಂದಿನ ಒಂದು ಕನ್ನಡ ಕಾದಂಬರಿಯ ಹಂದರ ಎಂಬುದನ್ನು ಒಮ್ಮೆ ನೆನಪಿಸುವುದು ಒಳ್ಳೆಯದು ಅನಿಸುತ್ತದೆ!

ಇದು ಸಮಾಜದ ಮಾತಾಯಿತು. ಮನೆಯೊಳಗಿನ ಕ್ರೌರ್ಯ ಮತ್ತು ಹಿಂಸೆಯನ್ನೂ ಪುಟ್ಟಣ್ಣ ಇಲ್ಲಿ ಚಿತ್ರಿಸುತ್ತಾರೆ. ಅದು ಸೀತೆ-ತಿಮ್ಮಮ್ಮ ಸಂಬಂಧದಲ್ಲಿರಲಿ, ಅಮಾಸೆ ಮತ್ತು ಅವನ ಸಹೋದರಿ ಅನುಭವಿಸುವ ಹಿಂಸೆಯಲ್ಲಾಗಲಿ, ಅಮಾಸೆಯಿಂದ ಕಾಪಾಡಲ್ಪಟ್ಟ ಒಬ್ಬ ಮುತ್ತೈದೆಯ ಕತೆಯಲ್ಲಾಗಲಿ ಕಣ್ಣಿಗೆ ಕಟ್ಟುವಂತಿದೆ. ಪಾಠ ಹೇಳುವ ಗುರುವಿನ ಕೃತಘ್ನ ನಡೆ ಮತ್ತು ದೇವಾಲಯದ ಪೂಜಾರಿಯ ಪರಸ್ತ್ರೀ ವ್ಯಾಮೋಹವೂ ಇಂಥ ವ್ಯಕ್ತಿಗತ ನೆಲೆಯ ನೈತಿಕ ಪತನವನ್ನೇ ಸೂಚಿಸುತ್ತದೆ. ಈ ಬಗೆಯ ಅಸಮಾಧಾನ, ವಾಸ್ತವ ಸಮಾಜ ಮತ್ತು ವ್ಯಕ್ತಿಗಳ ಕುರಿತ ಸಿಟ್ಟು ಈ ಕಾದಂಬರಿಯಲ್ಲಿ ಎದ್ದು ಕಾಣುತ್ತದೆ.

ಈ ಸಿಟ್ಟಿನಲ್ಲೇ ನಮಗೆ ಪುಟ್ಟಣ್ಣನವರ ತರ್ಕಶುದ್ಧ ಮನೋಧರ್ಮದ ಪರಿಚಯವಾಗುವುದು. ಹಾಗಾಗಿ ಆ ಕಾಲದ ಪ್ರಭಾವಗಳು, ಅದು ಪಾರಂಪರಿಕ(ಧಾರ್ಮಿಕ)-ಆಧುನಿಕ ನೆಲೆಯದ್ದಾಗಿರಲಿ, ಪಾಶ್ಚಾತ್ಯ-ದೇಸೀ ನೆಲೆಗಟ್ಟಿನದ್ದಾಗಿರಲಿ, ಭಾವುಕತೆ-ಬೌದ್ಧಿಕತೆಯ ನೆಲೆಗಟ್ಟಿನದ್ದಾಗಿರಲಿ, ಸ್ವಾತಂತ್ರ್ಯಪೂರ್ವ-ಉತ್ತರದ ಸಾಮಾಜಿಕ ಸ್ಥಿತಿಗತಿಗಳು ಮತ್ತು ಸಾಂಸಾರಿಕ ಸ್ಥಿತಿಗತಿಗಳು - ಇವುಗಳಲ್ಲಿ ಕಾದಂಬರಿಕಾರನ ಒತ್ತು ಯಾವುದರ ಕಡೆಗೆ ಎಂಬ ನೆಲೆಗಟ್ಟಿನಲ್ಲೇ ಆಗಿರಲಿ ಪುಟ್ಟಣ್ಣನವರ ಕೃತಿ ಈ ಪ್ರಭಾವ, ಒತ್ತಡಗಳನ್ನು ಹೇಗೆ ಎದುರಿಸಿದೆ ಮತ್ತು ಎದುರಿಸುವಲ್ಲಿ ಎಲ್ಲಿ ನಿಲ್ಲುತ್ತದೆ ಎನ್ನುವ ಪರೀಕ್ಷೆಗೆ ಅದನ್ನೊಡ್ಡುವಲ್ಲಿ ನಿರ್ಣಾಯಕ ಸ್ವರೂಪವನ್ನು ಪಡೆಯುತ್ತದೆ. ಕೆಲವೊಂದು ಸಂಗತಿಗಳಿಗೆ ಪುಟ್ಟಣ್ಣ ಕುರುಡಾಗಿದ್ದರೆ ಆಗ ಅದು ಈ ಕೃತಿಯ ಕೊರತೆಯಾಗುತ್ತಿತ್ತು ಮಾತ್ರವಲ್ಲ ಬಹುಷಃ ಇವತ್ತು ನಾವು ಈ ಕೃತಿಯ ಬಗ್ಗೆ ಹೊರಳಿ ನೋಡುವ ಪ್ರಮೇಯವಿರುತ್ತಿರಲಿಲ್ಲವೇನೊ!

ಇದು ಕಪ್ಪು-ಬಿಳುಪು ಪಾತ್ರಗಳ ಒಂದು ಪ್ಲಾಟ್ ಅಲ್ಲ. ಆದರ್ಶದ ಪ್ರತಿಪಾದನೆಗಾಗಿಯೇ ರೂಪಿಸಿದ ತಂತ್ರವಲ್ಲ. ರಾಮಾಯಣ, ಮಹಾಭಾರತ, ಪುರಾಣಗಳ ಆದರ್ಶ ವ್ಯಕ್ತಿಗಳು ವ್ಯಾಕರಣದ ಸೂತ್ರಗಳಾಗಿದ್ದಾರೆ, ಜನಸಾಮಾನ್ಯರಲ್ಲಿ ಕಾಣಸಿಗುವ ಧೀರರು ಉದಾಹರಣೆಗಳಾಗಿದ್ದಾರೆ ಎಂದೇ ಈ ಕಾದಂಬರಿಯ ಆರಂಭದಲ್ಲಿ ಪುಟ್ಟಣ್ಣನವರು ವಿವರಿಸಿದ್ದರೂ ಓದುಗ ತನ್ನನ್ನು ತಾನು ಕಳೆದುಕೊಳ್ಳುವಷ್ಟು ಸಂಕೀರ್ಣವಾದ ಕಥಾನಕದ ಹಂದರ, ಸುಂದರ ನಿರೂಪಣೆ ಮತ್ತು ಅದರ ವಿನ್ಯಾಸ ಇಲ್ಲಿರುವುದರಿಂದ ಪುಟ್ಟಣ್ಣನವರ ಒಟ್ಟು ಉದ್ದೇಶದ ಹೊರತಾಗಿಯೂ ಕಾದಂಬರಿಯ ತಂತ್ರ, ನಿರೂಪಣೆ ಆಕರ್ಷಕವಾಗಿದೆ. ಕಥಾನಕದ ನಡೆಯಲ್ಲಿ ಒಂದು ವೇಗ, ಕೌತುಕ ಎಲ್ಲ ಇದ್ದೂ ತೀರ ಸಹಜ-ಸ್ವಾಭಾವಿಕ ನಡೆಯ ಚೌಕಟ್ಟು ಇಲ್ಲಿ ಕಂಡುಬರುತ್ತದೆ. ಅನೇಕ ಕಡೆಗಳಲ್ಲಿ ಇದು ಕತೆಯಲ್ಲ, ವಾಸ್ತವದ ನಿರೂಪಣೆ ಎಂದೇ ಅನಿಸುವಷ್ಟು ಸಹಜತೆಗೆ ಒಲಿದಿದೆ.

ಹಾಗೆಯೇ ಇಲ್ಲಿ ಗಮನಿಸಬೇಕಾದ ಬಹುಮುಖ್ಯವಾದ ಸಂಗತಿಯೆಂದರೆ ಇಲ್ಲಿನ ಎಲ್ಲ ಕೆಡುಕು (evil)ಗಳಿಗೆ ಸಂವಾದಿಯಾಗಿ ಪುಟ್ಟಣ್ಣ ಚಿತ್ರಿಸುವ ಆದರ್ಶದ ಪರಿಕಲ್ಪನೆಯಲ್ಲಿ ತುಸು ಮೆಲೊಡ್ರಾಮ ಇದ್ದೂ ಅದು ಸಹ್ಯವಾಗುವುದು. ಮೈಸೂರು ಒಡೆಯರ ಒಳ್ಳೆಯತನ ಮತ್ತು ಅರುಂಧತಿ-ಸೀತೆಯರ ಪಾತಿವ್ರತ್ಯದ ವರ್ಣನೆ-ಚಿತ್ರಣದಲ್ಲಿ ಇದು ಕಣ್ಣಿಗೆ ಹೊಡೆದು ಕಂಡರೆ, ಸಂಜವಾಡಿ ಜೋಯಿಸರು, ಸದಾಶಿವ ದೀಕ್ಷಿತರು, ಮಹಾದೇವ, ಪಶುಪತಿ ಸಾಂಬಶಾಸ್ತ್ರಿ, ಪಾರ್ವತಮ್ಮ, ವೆಂಕಮ್ಮ, ಅಮಾಸೆಯ ಅಕ್ಕನನ್ನು ಐವತ್ತು ವರಹ ಕೊಟ್ಟು ಮದುವೆಯಾಗುವ ವ್ಯಕ್ತಿ, ಅಮಾಸೆಯನ್ನು ಸಾಕಿ ಸಲಹುವ ಮಾದೈಯ್ಯ, ತಲಚೇರಿ ಶೇಷಯ್ಯ, ಹಗಲು ವೇಶದ ಕೃಷ್ಣಯ್ಯ, ಆನಂದ ಭಟಜಿ ಮುಂತಾದ ಹಲವಾರು ಪಾತ್ರಗಳು ಸಾತ್ವಿಕತೆ, ಆದರ್ಶ, ಒಳ್ಳೆಯತನದಲ್ಲಿ ನಂಬಿಕೆ ಮೂಡಿಸುವಂಥವೇ ಆದರೂ ವಿಜೃಂಭಣೆಯ ಚಿತ್ರಣವೇನಿಲ್ಲ. ಹಾಗಾಗಿ ಒಟ್ಟಾರೆಯಾಗಿ ವಾಸ್ತವಿಕತೆಗೆ ಒತ್ತು ಇರುವುದು ಸ್ಪಷ್ಟವಾಗುತ್ತದೆ. ಇಷ್ಟಿದ್ದೂ ಈ ಕಾದಂಬರಿಯಲ್ಲಿ ಪಾಶ್ಚಾತ್ಯ ಚಿಂತನೆಗಳೊಂದಿಗಿನ ಸಂಘರ್ಷವಿಲ್ಲ ಎಂಬ, ಸಹಗಮನವನ್ನು, ಮಂತ್ರ-ತಂತ್ರಗಳಂಥ ಮೌಢ್ಯವನ್ನು ವಿಜೃಂಭಿಸುತ್ತದೆ ಎಂಬ, ವಾಸ್ತವಕ್ಕೆ ದೂರವಾದ ಕೆಲವೊಂದು ತಿರುವುಗಳಿಂದ ಅಥೆಂಟಿಸಿಟಿ ಲುಪ್ತವಾಗಿದೆ ಎಂಬ ಆರೋಪ ಹೊರಿಸುವುದು ಸಾಧ್ಯವಿದೆ. ಇಲ್ಲೆಲ್ಲ ಬಹುಷಃ ನಾವು ಕಾದಂಬರಿಯ ಕಾಲಮಾನದ ಆಶ್ರಯವನ್ನು ಪಡೆಯಬೇಕಾಗುತ್ತದೆ. ಹಾಗಿದ್ದೂ ಅಗ್ನಿಪರೀಕ್ಷೆ, ಸಹಗಮನ ಇವುಗಳನ್ನೆಲ್ಲ ಇವತ್ತು ಆದರ್ಶದ ಪರಿಕಲ್ಪನೆಯಾಗಿ ಕಾಣುವುದಂತೂ ಸಾಧ್ಯವೇ ಇಲ್ಲ ಎನ್ನುವ ಮಾತಂತಿರಲಿ, ನಮ್ಮ ಪುರಾಣದ ಕಾಲಕ್ಕೂ ಅಹಲ್ಯೆ, ದ್ರೌಪದಿ, ತಾರಾ, ಸೀತಾ, ಮಂಡೋದರಿಯರಿಗೆ ದಕ್ಕಿದ ಪತಿವ್ರತಾ ಶಿರೋಮಣಿ ಅವಾರ್ಡನ್ನು ಯಾವುದೇ ಪೊಲಿಟಿಕ್ಸ್ ಇಲ್ಲದೇ ಕೊಟ್ಟಿದ್ದು ಎಂದು ಕೂಡ ನಮ್ಮ ಸ್ತ್ರೀಮತ ಇಂದು ಒಪ್ಪಲಾರದು. ಅಲ್ಲೆಲ್ಲ ಶೋಷಣೆಯನ್ನೋ, ಗಂಡಸಿನ ಭಂಡತನವನ್ನೋ ಆಕೆ ಸಮರ್ಥವಾಗಿ ತೋರಿಸಿಕೊಡುವವಳೇ. ಹಾಗೆಯೇ ಇವತ್ತು ಎಸ್.ಎಲ್.ಭೈರಪ್ಪ ಎದುರಿಸುತ್ತಿರುವ ವಿರೋಧವನ್ನು ಪುಟ್ಟಣ್ಣ ಎದುರಿಸುತ್ತಿದ್ದರೇ ಎಂಬ ಒಂದು ಪ್ರಶ್ನೆಯನ್ನು ಕೇಳಿಕೊಂಡರೆ ಇಲ್ಲ ಎಂದು ಹೇಳಬಹುದು. ಇದೇ ಉತ್ತರದೊಂದಿಗೆ ನಿಲ್ಲುವ ಓದುಗನಿಗೆ ಇಲ್ಲಿ ಜಿಜ್ಞಾಸೆಗಳಿವೆ, ಉಳಿದವರಿಗೆ ಇಲ್ಲ.

ಪುಟ್ಟಣ್ಣನವರದ್ದು ಪರಿಪೂರ್ಣ ಗ್ರಹಿಕೆ, ಸೂಕ್ಷ್ಮವಾದ ಗ್ರಹಿಕೆ. ಅವರ ಚಿತ್ರಣದ ವಿವರಗಳು ರೂಪಿಸಿದ್ದು ಅಚ್ಚುಕಟ್ಟಾದ ಚಿತ್ರ. ಎಲ್ಲಿಯೂ ವಾಸ್ತವ ಬದುಕಿನ ಸಂಕೀರ್ಣತೆಯನ್ನು ಸರಳಗೊಳಿಸುವ ಪ್ರಯತ್ನವಿಲ್ಲ. ಹಾಗಾಗಿ ಪುಟ್ಟಣ್ಣನವರ ಕಾದಂಬರಿಯ ಆದರ್ಶವನ್ನು, ಕಥಾನಕದ ತಿರುವುಗಳನ್ನು, ಅವರ ವಾಸ್ತವದ ಪರಿಕಲ್ಪನೆಯನ್ನು ನಾವು ಒಪ್ಪಬಹುದು ಅಥವಾ ಒಪ್ಪದಿರಬಹುದು, ಆದರೆ ಒಂದು ಪರಿಪೂರ್ಣ ಕಾದಂಬರಿಯಾಗಿ "ಮಾಡಿದ್ದುಣ್ಣೋ ಮಹಾರಾಯ" ಎಂದಿಗೂ ನಿಲ್ಲುವ ಕೃತಿಯೇ ಸರಿ.
(ಕೃತಜ್ಞತೆ: ಶ್ರೀ ರಾಜಶೇಖರ ಜೋಗಿನ್ಮನೆ)
==================================================
ಎಂ.ಎಸ್.ಪುಟ್ಟಣ್ಣ (1854-1930)
ಎಂ.ಎಸ್.ಪುಟ್ಟಣ್ಣನವರ ಪೂರ್ಣ ಹೆಸರು ಮೈಸೂರು ಸೂರ್ಯನಾರಾಯಣ ಭಟ್ಟ ಪುಟ್ಟಣ್ಣ. ಹುಟ್ಟಿದ ಹತ್ತು ದಿನಗಳಲ್ಲೇ ತಾಯಿಯನ್ನು ಕಳೆದುಕೊಂಡು ಅಜ್ಜಿ, ಸೋದರತ್ತೆಯ ದೇಖರೇಕಿಯಲ್ಲಿ ಬೆಳೆದವರು. ಇವರು ಚನ್ನಪಟ್ಟಣದವರು. ಮೈಸೂರು ಇವರ ತಾಯಿಯ ತವರು. ಮೈಸೂರಿನಲಿ ಎಫ್ ಎ (ಈಗಿನ ಪಿಯುಸಿ) ಮುಗಿಸಿ ಮದರಾಸಿನಲ್ಲಿ ಬಿ.ಎ. ತರಗತಿಗೆ ಸೇರಿದರೂ ಕ್ಷಾಮದಿಂದಾಗಿ ಶಿಕ್ಷಣ ಮುಂದುವರಿಸಲಾಗದೆ ಕೆಲಸಕ್ಕೆ ಸೇರಿ ಕೋಲಾರ, ಮೈಸೂರುಗಳಲ್ಲಿ ಅಧ್ಯಾಪನ ನಡೆಸಿದ್ದರು. ತದನಂತರ ಮತ್ತೆ ಪರೀಕ್ಷೆಗೆ ಕೂತು 1885ರಲ್ಲಿ ಬಿ.ಎ. ಪದವಿ ಪಡೆದರು. ಬೆಂಗಳೂರಿನ ಈಗಿನ ಹೈಕೋರ್ಟಿನಲ್ಲಿ ಭಾಷಾಂತರಕಾರರಾಗಿಯೂ ಹತ್ತು ವರ್ಷಗಳ ಕಾಲ ದುಡಿದು ಮುಂದೆ ಅಮಲ್ದಾರರಾಗಿ ಚಿತ್ರದುರ್ಗ, ಚಾಮರಾಜನಗರ, ನೆಲಮಂಗಲ ಮುಂತಾದೆಡೆ ಸೇವೆ ಸಲ್ಲಿಸಿದ್ದರು. ಮುವ್ವತ್ತಮೂರು ಮುದ್ರಣಗಳನ್ನು ಕಂಡು, ಎಸ್.ದಿವಾಕರ್ ಅವರಿಂದ ಪರಿಷ್ಕೃತ ರೂಪದಲ್ಲಿ ಮರುಮುದ್ರಣಗೊಂಡಿರುವ "ನೀತಿ ಚಿಂತಾಮಣಿ(1884)" ಮತ್ತು "ಮಾಡಿದ್ದುಣ್ಣೋ ಮಹಾರಾಯ" ಕೃತಿಗಳಿಂದ ಪುಟ್ಟಣ್ಣ ಖ್ಯಾತರಾಗಿದ್ದರೂ "ಮುಸುಗ ತೆಗೆಯೇ ಮಾಯಾಂಗನೆ", "ಪೇಟೆ ಮಾತೇನಜ್ಜಿ", "ಅವರಿಲ್ಲದೂಟ" ಕಾದಂಬರಿಗಳೂ ಅಲ್ಲದೆ ಹಲವಾರು ಕತೆ, ಜೀವನ ಚರಿತ್ರೆ, ರೂಪಾಂತರ/ಭಾಷಾಂತರ, ಪಠ್ಯಪುಸ್ತಕ ಮುಂತಾಗಿ ಹಲವು ಹತ್ತು ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ ಮಾತ್ರವಲ್ಲ ಸ್ವತಃ ಸಂಶೋಧನೆಯ ಬೆನ್ನು ಹತ್ತಿ ಹಲವಾರು ಚರಿತ್ರೆಯ ಪುಸ್ತಕಗಳನ್ನು ಕೂಡ ಬರೆದಿದ್ದಾರೆ. ಕಾದಂಬರಿ ಕ್ಷೇತ್ರದಲ್ಲಿ ಮಾತ್ರವಲ್ಲ, ಸ್ವತಂತ್ರ ಇತಿಹಾಸ ಗ್ರಂಥಗಳನ್ನು, ಜೀವನ ಚರಿತ್ರೆಗಳನ್ನು ರಚಿಸಿದವರಲ್ಲಿಯೂ ಇವರು ಮೊದಲಿಗರು ಎಂದು ಭಾವಿಸಲಾಗಿದೆ.

No comments: