Sunday, August 9, 2015

ಕಥನ ಕುತೂಹಲ

ಕೆಲವು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ವಿಚಾರಗೋಷ್ಠಿಯೊಂದರಲ್ಲಿ ಉಪನ್ಯಾಸ ನೀಡುವುದಕ್ಕಾಗಿ ಬಂದಿದ್ದ ಖ್ಯಾತ ಕತೆಗಾರ ಶ್ರೀಧರ ಬಳಗಾರ ಅವರು ಮಾತಿಗೆ ಸಿಕ್ಕಿದ್ದರು. ಆಗ ಅವರು ಒಂದು ಕಾದಂಬರಿಯನ್ನು ಬರೆಯುತ್ತಿರುವ ಬಗ್ಗೆಯೂ ಪತ್ರಿಕೆಯಲ್ಲಿ ಓದಿದ್ದೆ. ಮಾತನಾಡುತ್ತ ಬಳಗಾರ ಅವರು ತಾವು ಇತ್ತೀಚೆಗೆ ಕೊಡಚಾದ್ರಿಗೆ ತಮ್ಮವರೊಂದಿಗೆ ಹೋಗಿದ್ದಾಗ ಅಲ್ಲಿ ಎತ್ತರದಲ್ಲಿ ಮಂಜು ಕವಿದ ವಾತಾವರಣದಲ್ಲಿ ಇದ್ದಕ್ಕಿದ್ದ ಹಾಗೆ ತಮಗಾದ ಒಂದು ಅದ್ಭುತ ಅನುಭವದ ಕುರಿತು ವಿವರಿಸಿ ಅದನ್ನು ಕಾದಂಬರಿಯಲ್ಲಿ ಬಳಸಿಕೊಂಡೇ ಬರೆಯುತ್ತಿರುವುದಾಗಿಯೂ ಕೊನೆಗೂ ಅದು ಹೇಗೆ ರೂಪುಗೊಂಡು ಬರುತ್ತದೆಯೋ ಈಗಲೇ ಹೇಳಲಾಗದು ಎಂದೂ ಹೇಳಿದ್ದರು. ನನಗಂತೂ ಶ್ರೀಧರ ಬಳಗಾರರ ವಿವರಣೆ ಕೇಳಿಯೇ ಆ ಕಾದಂಬರಿ ಯಾವಾಗ ಹೊರಬರುವುದೋ ಎಂಬ ಕುತೂಹಲ ಕೆರಳಿತ್ತು. ಆವತ್ತೇ ಅವರು ತಮ್ಮ ಸೆಮಿನಾರ್ ಪೇಪರ್‌ನ ಕೀನೋಟ್ ಪ್ರತಿಯನ್ನು ಕೂಡ ನನಗೇ ಕೊಟ್ಟು ತಮ್ಮೂರಿಗೆ ಮರಳಿದ್ದರು. ಅದು ಭಾಷೆ ಮತ್ತು ವಿಜ್ಞಾನದ ಕುರಿತ ತಾತ್ವಿಕ ಜಿಜ್ಞಾಸೆಗಳ ಕುರಿತಂತೆ ವೇದಗಳ ಬೆಳಕಿನಲ್ಲಿ ಪ್ರಸ್ತುತ ಪಡಿಸಿದ ಒಂದು ಪ್ರಬಂಧ. ಅದರಲ್ಲಿದ್ದುದು ಪ್ರಧಾನವಾಗಿ ಭರ್ತೃಹರಿಯ ವಾಕ್ಯ-ಪದ ಸಂಬಂಧ ಕುರಿತ ಜಿಜ್ಞಾಸೆ, ಶಬ್ದ (ಪದ), ಸದ್ದು, ಧ್ವನಿಶಕ್ತಿ, ಚಿತ್ರ ಮತ್ತು ಮನಸ್ಸಿನ ಮೇಲೆ ಅದು ಉಂಟು ಮಾಡುವ ಪರಿಣಾಮ ಹಾಗೂ ಭಾಷೆಗೆ ಅತೀತವಾಗಿಯೇ ಉಳಿದಿರುವ ಜ್ಞಾನದ ಎಳೆಗಳೇನಿವೆ, ಪ್ರಧಾನವಾಗಿ ಬೌದ್ಧ ಧರ್ಮದ್ದು, ಆ ಕುರಿತ ಚಿಂತನೆ. ಶ್ರೀಧರ ಬಳಗಾರ ನನಗೆ ಹೇಳಿದ ತಮ್ಮದೇ ಅನುಭವ ಕಥನ ಮತ್ತು ಈ ಎಲ್ಲ ಸಂಗತಿಗಳು ತಳುಕು ಹಾಕಿಕೊಂಡಿದ್ದರಿಂದಲೇ ನಾನು ಅವರ ಬರಲಿರುವ ಕಾದಂಬರಿಯನ್ನು ಅತೀವ ಕುತೂಹಲದಿಂದ ಕಾಯುತ್ತಿದ್ದೆ.

ತೀರ ಈಚೆಗೆ, ವಿವೇಕ್ ಶಾನಭಾಗರ ಊರುಭಂಗ ಕಾದಂಬರಿಯ ಹಿನ್ನೆಲೆಯಲ್ಲಿ ಮತ್ತೆ ಇಂಥವೇ ವಿಚಾರಗಳು ಚರ್ಚೆಗೆ ಬಂದವು. ಬಿಡುಗಡೆಯ ದಿನ ಅವರು ಜಯಂತ್ ಕಾಯ್ಕಿಣಿಯವರೊಂದಿಗೆ ಮಾತನಾಡುತ್ತ ಬರೆದಾದ ಮೇಲೆ ತಾವು ಬರೆದಿದ್ದು ತಮ್ಮ ‘ಸ್ವಂತ’ ಅನುಭವವೇ ಆಗಿ ಬಿಡುತ್ತದೆ ಎನ್ನುವ ಮಹತ್ವದ ಮಾತೊಂದನ್ನು ಆಡಿದರು. ಕಾದಂಬರಿಯ ಹಿನ್ನೆಲೆಯಲ್ಲಿಯೇ ಅವರು ಹಿಂದೊಮ್ಮೆ ಮಾರ್ಕೆಸ್ ಹೇಳಿದ "Life is not what one lived, but what one remembers and how one remembers it in order to recount it" ಎಂಬ ಮಾತನ್ನು ವಿವರಿಸಿದ್ದರು. ನಮ್ಮ ನೆನಪುಗಳನ್ನು ನಾವು ಮರು-ಜೋಡಿಸಿ ಹೇಳುವ ಒಂದು ಕ್ರಮವಿದೆಯಲ್ಲ, ಅದೇ ಅತ್ಯಂತ ಕುತೂಹಲಕರ ಎನ್ನುವ ವಿವೇಕ್ ಈಚೆಗೆ ನಿರೂಪಣೆಯ ವಿಭಿನ್ನ ಮಾದರಿಗಳ ಬಗ್ಗೆ (ಸತ್ಯಕಥೆ-ಆತ್ಮಕಥೆ-ಕಾಲ್ಪನಿಕ ಕಥೆ-ವರದಿಯ ರೂಪದಲ್ಲಿರುವ ಕಥೆ-ಫ್ಯಾಂಟಸಿ) ಎಲ್ಲಿಲ್ಲದ ಕೌತುಕದಿಂದ ಮಾತನಾಡುತ್ತಿರುವುದನ್ನು ಕೇಳಿಯೇ ಅಚ್ಚರಿಗೊಂಡಿದ್ದೆ. ಬಹುಶಃ ಆಗಲೇ ಅವರು ನನಗೆ Jose Saramago ಎಂಬ ಪೋರ್ಚುಗಲ್ ಕಾದಂಬರಿಕಾರನ ಬಗ್ಗೆ ಹೇಳಿದ್ದು. ಈತ ಸುಮಾರು ತನ್ನ ಅರವತ್ತನೇ ವಯಸ್ಸಿನಲ್ಲಿ ಬರವಣಿಗೆ ಆರಂಭಿಸಿದ, ಸಾಹಿತ್ಯದ ನೊಬೆಲ್ ಬಹುಮಾನ ಪಡೆದ ಅಪರೂಪದ ಕಾದಂಬರಿಕಾರ. ಒಂದು ವಯಸ್ಸಿನ ನಂತರ ಒಬ್ಬ ಸಾಹಿತಿಗೆ ‘ಬೇಕಾದ’ ವಿವರಗಳನ್ನು ತನ್ನ ಸ್ಮೃತಿಯಿಂದ ಪಡೆದುಕೊಳ್ಳುವುದು ಕಷ್ಟವಾಗುತ್ತ ಹೋಗುತ್ತದೆ ಮತ್ತು ಹಾಗಾಗಿ ಹೆಚ್ಚಿನ ಲೇಖಕರು ವಯಸ್ಸಾದಂತೆಲ್ಲ ಸೃಜನೇತರ ಬರವಣಿಗೆಗೆ ಹೊರಳಿಕೊಳ್ಳುವುದನ್ನು ಕಾಣುತ್ತೇವೆ ಎಂಬ ತಮ್ಮದೇ ಮಾತಿಗೆ ಅಪವಾದವೆಂಬಂತೆ ಇರುವ ಈತನ ಬಗ್ಗೆ ವಿವೇಕ್ ವಿವರಿಸಿದ್ದರು. ಬಹುಶಃ ನಮ್ಮ ಶ್ರೀನಿವಾಸ ವೈದ್ಯರು ಕೂಡ ತಡವಾಗಿ ಸೃಜನಶೀಲ ಕೃತಿಗಳನ್ನು, ಮುಖ್ಯವಾಗಿ ಗಂಭೀರ ಕಥೆ-ಕಾದಂಬರಿಗಳನ್ನು ಬರೆದಂಥ ಒಬ್ಬ ಅಪೂರ್ವ ಲೇಖಕರೆಂದರೆ ತಪ್ಪಾಗಲಾರದು.

ಮುಂದೆ ಎ.ಕೆ.ರಾಮಾನುಜನ್ ಅವರ ಒಂದು ಪ್ರಬಂಧ, The Ring of Memory ಓದುತ್ತ ಈ ಎಲ್ಲ ಸಂಗತಿಗಳು ಹೇಗೆ ಒಂದರೊಳಗೊಂದು ತಳುಕು ಹಾಕಿಕೊಂಡು ಬರುತ್ತಿವೆ ಎಂಬ ಅಚ್ಚರಿಗೆ ಒಳಗಾದೆ. ಆ ಪ್ರಬಂಧಕ್ಕೆ Remembering and Forgetting in Indian Literatures ಎಂಬ ಅಡಿಬರಹವಿದೆ. ಈ ಪ್ರಬಂಧದಲ್ಲಿ ನಾವು ನೆನಪಿಸಿಕೊಳ್ಳುವ ಮತ್ತು ಮರೆಯುವ ಒಂದು ಪ್ರಕ್ರಿಯೆ ಸಾಹಿತ್ಯದಲ್ಲಿ ಅಭಿವ್ಯಕ್ತಿ ಪಡೆಯುವ ಕುರಿತಾಗಿ ರಾಮಾನುಜನ್ ಬಹುಸೊಗಸಾಗಿ ವಿವರಿಸಿದ್ದಾರೆ.
ಎ.ಕೆ.ರಾಮಾನುಜನ್ ಅವರ ಎಲ್ಲ ಇಂಗ್ಲೀಷ್ ಬರಹಗಳೂ, ಕನ್ನಡ ಬರಹಗಳೂ ಸಮಗ್ರ ಸ್ವರೂಪದ ಗ್ರಂಥಗಳಾಗಿ ಬಂದಿರುವುದು ನಿಮಗೆಲ್ಲ ಗೊತ್ತೇ ಇದೆ. ಅವರ ಕೊನೆ ಕೊನೆಯ ಕೆಲವು ಬಿಡಿ ಬರಹಗಳು ಮತ್ತು ಕವನಗಳು ಸೇರಿ Uncollected Poems and Prose ಹೆಸರಿನಲ್ಲಿ ಪ್ರಕಟವಾಗಿರುವುದು ಕೂಡ ನಿಮಗೆ ಗೊತ್ತಿರಬಹುದು. ಈ ಕೃತಿಯಲ್ಲಿನ ಒಂದು ಪ್ರಬಂಧ The Ring of Memory ತುಂಬ ವಿಶಿಷ್ಟವಾಗಿದೆ.

ಮೇಲ್ನೋಟಕ್ಕೆ ಇಲ್ಲಿ ಶಕುಂತಲೆಯ ಕತೆಯಿದೆ. ಆದರೆ ರಾಮಾನುಜನ್ ವಿವರಿಸುತ್ತಿರುವುದು ಅದಕ್ಕಿಂತ ಗಹನವಾದ ಸಂಸ್ಕೃತಿಯನ್ನು. ಭಾರತೀಯ ಸಂಸ್ಕೃತಿಯಲ್ಲಿ ಒಬ್ಬ ವ್ಯಕ್ತಿಯ ಸಮಗ್ರ ವಿಕಾಸದಲ್ಲಿ ಈ ಸ್ಮೃತಿ, ಜ್ಞಾಪಿಸಿಕೊಳ್ಳುವುದು, ನೆನಪಿಡುವುದು, ಅರಿಯುವುದು, ಗುರುತಿಸುವುದು, ಆತ್ಮಾವಲೋಕನ ಮುಂತಾದ ಪ್ರಕ್ರಿಯೆಯ ಮಹತ್ವವನ್ನು ಕಾಳಿದಾಸನ ಅಭಿಜ್ಞಾನ ಶಾಕುಂತಲಾ, ಮೇಘದೂತ, ರಾಮಾಯಣ, ಮಹಾಭಾರತ, ದಶಾವತಾರದ ಪ್ರಕರಣ, ಬಸವಣ್ಣ - ಅಕ್ಕಮಹಾದೇವಿಯವರ ವಚನಗಳು, ಬುದ್ಧನಿಗಾದ ಜ್ಞಾನೋದಯದ ಪ್ರಕ್ರಿಯೆ, ಶತಾವಧಾನ ಮತ್ತು ಅಷ್ಟಾವಧಾನದ ಪರಂಪರೆ, ಪ್ಲೇಟೋನ ಕೃತಿ, ಕಥಾಸರಿತ್ಸಾಗರದ ಕತೆಗಳ ಸ್ವರೂಪ, Kaw R K, ಬಿಲ್ಹಣ ಮುಂತಾದವರ ಬರಹ - ಹೀಗೆ ಯಾವ್ಯಾವುದೋ ಎಳೆಗಳನ್ನು ಉದ್ಧರಿಸುತ್ತ ಅವರು ವಿವರಿಸಿರುವ ಬಗೆ ಅದ್ಭುತವಾಗಿದೆ. ವಿರಹ ಅಥವಾ ವಿಪ್ರಲಂಭ ಪ್ರಧಾನವಾಗಿರುವ ಕೃತಿಗಳಲ್ಲಿ (ಉದಾಹರಣೆಗೆ ರಾಮಾಯಣದಲ್ಲಿ ಬರುವ ಹಲವು ವಿಯೋಗಗಳು) ನೆನಪಿಸಿಕೊಳ್ಳುವ ಕ್ರಿಯೆಯ ತೀವ್ರತೆಗೆ ಸಾನ್ನಿಧ್ಯ-ಸಾಮೀಪ್ಯ-ಸಾಂಗತ್ಯ ಕಾರಣವಾಗಿರದೇ ಅನುಪಸ್ಥಿತಿ, ಗೈರುಹಾಜರಿ, ವಿಯೋಗ ಅಥವಾ ವಿರಹವೇ ಕಾರಣವಾಗಿರುವುದರ ಮಹತ್ವವನ್ನೂ ಅವರು ವಿವರಿಸುತ್ತಾರೆ. Absence-Presence ಮತ್ತು ನೆನಪಿಗೆ ಕಾರಣೀಭೂತವಾಗುವ ಒಂದು Mark - ಈ ಮೂರರ ಸಂಬಂಧ ಕುರಿತ ಜಿಜ್ಞಾಸೆಯೂ ಇಲ್ಲಿದೆ. ಇದು ಕೇವಲ ಗಂಡು-ಹೆಣ್ಣು ಸಂಬಂಧಕ್ಕಷ್ಟೇ ಅಲ್ಲ, ಮನುಷ್ಯ ಮತ್ತು ದೇವರ ಸಂಬಂಧದಲ್ಲೂ ಎಷ್ಟು ಮಹತ್ವದ್ದು ಎನ್ನುವುದನ್ನೂ ಅವರು ವಿವರಿಸುತ್ತಾರೆ. ರಾಮಾನುಜನ್ ಅವರ ಲೇಖನಕ್ಕೆ Remembering and Forgetting in Indian Literatures ಎಂಬ ಅಡಿಬರಹವೂ ಇದೆ. ಹೀಗೆ ಒಂದು ಪುಟ್ಟ ಲೇಖನದಲ್ಲಿ ನಾವು ಹತ್ತು ಹಲವು ಕೃತಿ, ಚಿಂತನಾ ಕ್ರಮ, ಸಾಹಿತ್ಯ ರಚನೆಯ ಕೌಶಲ ಮುಂತಾದ ವಿಚಾರಗಳಿಗೆ ಓದುಗರು ತೆರೆದುಕೊಳ್ಳುವಂತೆ ಈ ಪ್ರಬಂಧದ ಚೌಕಟ್ಟಿದೆ. ಹಾಗಾಗಿಯೇ ಓದಿ ಮುಗಿಸಿದ ಬಳಿಕವೂ ಇದು ಓದುಗನ ಭಾಗವಹಿಸುವಿಕೆಗೆ ಆಗ್ರಹಿಸುತ್ತಿದೆ.

ವಿವೇಕ್ ಶಾನಭಾಗ ಅವರ ಊರುಭಂಗ ಕಾದಂಬರಿಯ ಸಂದರ್ಭದಲ್ಲಿ ಈ ಪಾಲಿಟಿಕ್ಸ್ ಆಫ್ ಮೆಮೊರಿ ಮತು ತತ್ಸಂಬಂಧಿ ವಿಚಾರಗಳ ಉಲ್ಲೇಖ ಬಂದಿದ್ದು ನಿಮಗೆಲ್ಲ ನೆನಪಿರಬಹುದು. ಒಬ್ಬ ಸಾಹಿತಿ ತನ್ನ ನೆನಪು, ಅನುಭವ ಮತ್ತು ಸ್ಮೃತಿಯಿಂದ ತನ್ನ ಕೃತಿಯನ್ನು ಕಟ್ಟುವಂತೆಯೇ ಒಬ್ಬ ಓದುಗ ಭಾಷೆಯಿಂದ ಪಡೆದಿದ್ದನ್ನು ತನ್ನದೇ ಅನುಭವ, ನೆನಪು ಮತ್ತು ಸ್ಮೃತಿಗಳ ಆಧಾರದ ಮೇಲೆ re-construct ಮಾಡಿಕೊಳ್ಳುತ್ತಾನೆ ಎನ್ನುವುದನ್ನೂ ಊರುಭಂಗದ ಸಂದರ್ಭದಲ್ಲಿಯೇ ಗಮನಿಸಿದ್ದೇವೆ.

ಮಾರ್ಕೆಸ್ ಕೂಡ "Life is not what one lived, but what one remembers and how one remembers it in order to recount it." ಎಂದಿರುವುದನ್ನು ಗಮನಿಸಬಹುದು. ನೆನಪಿಸಿಕೊಳ್ಳುವ ಒಂದು ಪ್ರಕ್ರಿಯೆಗೆ ಸಾಹಿತ್ಯದಲ್ಲಿ ಮಾತ್ರವಲ್ಲ, ಒಟ್ಟಾರೆ ಮನೋವಿಕಾಸದಲ್ಲಿಯೇ ಸಾಕಷ್ಟು ಮಹತ್ವವಿದೆ.

Jose Saramago ತನ್ನ Note Book ಕೃತಿಯಲ್ಲಿ ಹೀಗೆ ಹೇಳುತ್ತಾನೆ:
"In physical terms we inhabit space, but in emotional terms we are inhabited by memory. A memory composed of a space and a time, a memory inside which we live, like an island between two oceans - one the past, the other the future."
.....
.......
ಎಂಟು ಶತಮಾನಗಳ ಕಾಲದ ವಿದ್ಯಮಾನಗಳನ್ನು ವೇಗವಾಗಿ ಸಾಗುವ ಒಂದು ಚಲಚಿತ್ರದ ಹಾಗೆ ನಿಮ್ಮ ಕಣ್ಮುಂದೆ ಪ್ರದರ್ಶಿಸಿದರೆ ಅದು ಹೇಗಿರುತ್ತದೆ ಎನ್ನುತ್ತಾ ಬರೆಯುತ್ತಾನೆ:
"The place was there, the person appeared, then the person left, the place continued, the place having made the persons, the person having transformed the place."

Jose Saramagoನ ಒಂದು ಕೃತಿಯ ಹೆಸರೇ Small Memories.

ನಮಗೂ ಗತವನ್ನು ನೆನೆಯುವುದೆಂದರೆ, ಕಳೆದು ಹೋದ ದಿನಗಳ ಬಗ್ಗೆ ಮಾತನಾಡುವುದು, ಓದುವುದು ಎಂದರೆ ಇಷ್ಟ. ಬಹಳಷ್ಟು ಸಾಹಿತ್ಯ ಕೃತಿಗಳು ಲೇಖಕರ ಬಾಲ್ಯದ ಅನುಭವ, ಊರು-ಕೇರಿಯ ವಿವರಗಳು, ಕಥಾ ಜಗತ್ತಿನಲ್ಲಿ ಆತ ಚಿತ್ರಿಸುವ ಬದುಕಿನ ಕಾಲಘಟ್ಟ ಲೇಖಕನ ಬಾಲ್ಯದ ಕಾಲಕ್ಕೇ ಹೊಂದಿದಂತಿರುವುದನ್ನು ನಾವು ಕಾಣುತ್ತಿರುತ್ತೇವೆ. ನಾವೂ ನಮ್ಮ ಬಾಲ್ಯವನ್ನು, ಬಾಲ್ಯ ಸ್ನೇಹಿತರನ್ನು, ಹುಟ್ಟೂರನ್ನು ಪ್ರೀತಿಸಿದಷ್ಟು ಬೇರೇನನ್ನೂ ಪ್ರೀತಿಸಲಾರೆವೇನೊ ಎನಿಸುತ್ತದೆ. ನೆನಪುಗಳ ಮಾತು ಇಷ್ಟಕ್ಕೇ ಮುಗಿಯುವುದಿಲ್ಲ. ಅದು ತಾಯಿಯ ಗರ್ಭವನ್ನೂ ಹಾದು ಹುಟ್ಟಿಗೂ ಮುನ್ನದ ನೆನಪುಗಳತ್ತ ಚಲಿಸಬಲ್ಲುದು ಎನ್ನುತ್ತಾರೆ ಎ.ಕೆ.ರಾಮಾನುಜನ್. ಜ್ಞಾನೋದಯಕ್ಕೂ ಮುನ್ನ ಬುದ್ಧ ನೆನಪಿಸಿಕೊಂಡಿದ್ದು ಹಾಗಂತೆ.

ವಿಕ್ರಮ್ ಹತ್ವಾರ್ ಅವರು ಪ್ರಜಾವಾಣಿ ಸಾಪ್ತಾಹಿಕದಲ್ಲಿ (15/03/2015) "ಎದೆಗೆ ಬೀಳದ ಮಾತು" ಎಂಬ ಲೇಖನ ಬರೆದಿದ್ದು ಕೂಡ ನೀವು ಓದಿರಬಹುದು. ಸಂವಹನ ಶೂನ್ಯ ಸ್ಥಿತಿ ಈ ಕಾಲದ ಲಕ್ಷಣವೇ ಎಂದು ಅವರು ಪ್ರಶ್ನಿಸುತ್ತ ಎತ್ತಿದ ಕೆಲವೊಂದು ವಿಚಾರಗಳಿಗೂ ಇದೆಲ್ಲಕ್ಕೂ ಸಂಬಂಧವಿದೆ ಅನಿಸುತ್ತದೆ. ಸಾಮಾಜಿಕ ಜಾಲತಾಣಗಳು, ವ್ಯಾಟ್ಸಪ್ ತರದ ಸಂವಹನದ ಸಾಧ್ಯತೆಗಳು, ಒಬ್ಬರೇ ಕೇಳುವ ಸಂಗೀತ, ಒಬ್ಬರೇ ಆಡುವ ಆಟಗಳು, ಟೀವಿ ಕಾರ್ಯಕ್ರಮಗಳು ಎಂದೆಲ್ಲ ಮನುಷ್ಯ ಕಳೆದುಕೊಳ್ಳುತ್ತಿರುವ ಒಂದು ಬಗೆಯ ಮುಕ್ತ ಮಾತುಕತೆಯ ಛಂದ ಒಂದೆಡೆಯಾದರೆ, ನಾಟಕದ ಮಾತು, ಪ್ರದರ್ಶನಕ್ಕೆಂದೇ ಆಡುವ-ಮಾಡುವ ಕ್ರಿಯೆಗಳು ಹೆಚ್ಚುತ್ತಿದೆ ಎನಿಸುತ್ತಿರುವುದು ಸುಳ್ಳಲ್ಲ. ಹಾಗೆಯೇ ನಾವು ನಮ್ಮೊಂದಿಗೇ ಆಡಿಕೊಳ್ಳಬೇಕಾದ್ದು ಕೂಡ ಇದೆಯಲ್ಲವೆ? ನಾವು ಬೇರೆಯವರೊಂದಿಗೆ ಆಡಿದ್ದನ್ನು - ಮಾಡಿದ್ದನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವ ಅಗತ್ಯ ಕೂಡ ಇದೆಯಲ್ಲವೆ? ಬಹುಶಃ ಇಂದಿನ ತಲೆಮಾರು ಇದನ್ನು ಕೂಡಾ ಕಳೆದುಕೊಳ್ಳುತ್ತಿದೆ. ಮಾತು ಎದೆಗೆ ಬೀಳುವುದು ಎಂದರೇನೆಂದೇ ನಾವು ಮರೆಯುತ್ತಿದ್ದೇವೆಯೇ ಎನಿಸುವುದು ಇಲ್ಲಿಯೇ.

ಇಲ್ಲಿ ಕೆಲವೊಂದು ಅಪಾಯ ಕೂಡ ಇವೆ. ಭೂತಕಾಲದಲ್ಲೇ ಬದುಕುವುದು ಒಂದು ಬಗೆಯ ಮನೋರೋಗವೂ ಆಗಬಹುದು; ಅದು ನಮ್ಮನ್ನು ಹೆಚ್ಚು ಹೆಚ್ಚು ಅಂತರ್ಮುಖಿಯನ್ನಾಗಿಯೂ, ಸ್ವಕೇಂದ್ರೀತರನ್ನಾಗಿಯೂ ಮಾಡಬಹುದು ಎನ್ನುವುದು ಮೊದಲನೆಯದು. ಹಾಗೆಯೇ ಯೋಚನೆ - ನೆನಪಿಸಿಕೊಳ್ಳುವುದು ಎಂದರೆ ಗುರುತಿಟ್ಟುಕೊಳ್ಳುವುದು ಕೂಡ ಆಗಿರುವುದರಿಂದ ಗುರುತು - ಸಾಕ್ಷಾತ್ ವ್ಯಕ್ತಿ/ವಸ್ತು/ವಿದ್ಯಮಾನಗಳಿಗಿಂತ ಹೆಚ್ಚು ಮುಖ್ಯವಾಗಿ ಬಿಡುವ ಅಪಾಯವೂ ಇದೆ ಎಂಬುದು ಎರಡನೆಯದು. ನಿಜವಾದ ಉದ್ದೇಶಕ್ಕಿಂತ ರಿಚ್ಯುವಲ್‌ನ ಸಂಭ್ರಮವೇ ಮುಖ್ಯವಾಗುವ ಸ್ಥಿತಿಯಿದು. ಉದಾಹರಣೆಗೆ, ನಮಗೆ ದೇವರು, ಧರ್ಮ, ಧರ್ಮಗ್ರಂಥಗಳು ಮತ್ತು ಪುರಾಣ ಎಲ್ಲವೂ ಇರುವುದು ಅಂತರಂಗದ ಅರಳುವಿಕೆಗೆ, ಆಂತರಿಕವಾದ ಅರಿವು, ಜ್ಞಾನ, ವೈಚಾರಿಕತೆ ಹೆಚ್ಚುವುದಕ್ಕೆ. ಆದರೆ ಜಾತ್ರೆ, ಉತ್ಸವ, ಸಂಭ್ರಮ, ಗದ್ದಲ, ಲೌಡ್ ಸ್ಪೀಕರು, ಚಿನ್ನದ ರಥ, ಪ್ರದರ್ಶನದ ಭರಾಟೆ ಇವುಗಳೇ ಮುಖ್ಯವಾಗಿಬಿಟ್ಟರೆ ನಾವು ಮೂಲ ಉದ್ದೇಶದಿಂದ ದೂರವಾದಂತೆಯೇ. ಎಲ್ಲಕ್ಕಿಂತ ಮುಖ್ಯ ನಮ್ಮ ಈ ಪ್ರಕ್ರಿಯೆ ಭಾಷೆಯ ಹಂಗಿನಲ್ಲಿ ನಡೆಯುತ್ತ ಭಾಷೆ ನಮ್ಮ ಮೇಲೆ ಸವಾರಿ ಮಾಡುವ ಸಾಧ್ಯತೆಯೂ ಇದೆಯೆಂಬ ಎಚ್ಚರ ನಮಗಿರಬೇಕಾಗುತ್ತದೆ ಎನ್ನುವುದು. ಏನಿದ್ದರೂ ಮರೆಯುವ ಮತ್ತು ನೆನಪಿಸಿಕೊಳ್ಳುವ ಸಂಸ್ಕೃತಿಯ ಕುರಿತು ಯೋಚಿಸಬೇಕಾದ ದಿನಗಳಿವು.

ಕೆಲವೇ ದಿನಗಳಲ್ಲಿ ನಾಗರಾಜ ವಸ್ತಾರೆ "ಅನಿಸಿದ್ದಾಗುವ ವರವೂ, ಪೆನ್ಸಿಲ್ ಎಂಬ ಮೂಲಕವೂ..." ಎಂಬ ಒಂದು ಪ್ರಬಂಧವನ್ನು ಬರೆದರು. ಅಲ್ಲಿ ವಸ್ತಾರೆಯವರ ಈ ಮಾತು ಗಮನಿಸಿ:
"..........ನನ್ನ ಮಟ್ಟಿಗೆ ಮುಖ್ಯವಾದದ್ದು- ಅಂದುಕೊಂಡಿದ್ದನ್ನೆಲ್ಲ ಆಗಿಬರಿಸುವುದು’ ಎಂಬ ವಿಚಾರ; ಅನಿಸಿದ್ದನ್ನು ‘ಆಗಿಸಿಕೊಳ್ಳು’ವುದೇ- ಜಗತ್ತಿನ ಎಲ್ಲ ಮತ್ತು ಇಡೀ ವಿನ್ಯಾಸಕಾರಿಕೆಯ ಲಕ್ಷಣವೆಂದು ನನಗೆ ಸದಾ ಅನಿಸುವುದಿದೆ. ಯಾಕೆಂದರೆ ಏನೂ ಅನ್ನಿಸದೆ ವಿನ್ಯಾಸ ಆಗಿಬರದು! ಈ ಕಥೆಯಲ್ಲಿನ ಪೆನ್ಸಿಲು ಒಂದು ‘ಮೂಲಕ’ವಸ್ತು ಮಾತ್ರ. ಅಂದರೆ ಅನಿಸಿದ್ದನ್ನು ಚಿತ್ರಿಸಲಿಕ್ಕೆ ಆಗಿಬರುವ ಉಪಕರಣ ಅಷ್ಟೆ. ಯೋಚಿಸಿ: ಅನಿಸಿದ್ದನ್ನು ಆಗಿಬರಿಸುವ ಈ ವಿಷಯದಲ್ಲಿ ಮೂರು ಅಂಶಗಳಿವೆ. ಮೊದಲು ಅನಿಸುವುದು; ನಂತರ, ಅನಿಸಿದ್ದನ್ನು ಚಿತ್ರಿಸುವುದು; ಮತ್ತು ಕಡೆಯಲ್ಲಿ ಚಿತ್ರಿಸಿದ್ದು ‘ನಿಜಕ್ಕು’ ಆಗುವುದು. ಅಂದರೆ ಮನಸ್ಸಿನೊಳಗೆ ಮೂಡಿದ ಊಹೆ ಅಸಲಿನಲ್ಲಿ ಮೂಡುವ ಮೊದಲು ಮತ್ತು ನಡುವೆ- ಅದರ ಚಿತ್ರಿಕೆಯಾಗಬೇಕು; ಇದು ಜಗತ್ತಿನ ಎಲ್ಲ ವಿನ್ಯಾಸಗಾರಿಕೆಯಲ್ಲೊಂದು ಪರಮೋಚ್ಚ ದಾವೆಯೇ ಸರಿ. ಸರಳವಾಗಿ- ಊಹಾಕೃತಿ ಮತ್ತು ಸಾಕೃತಿಗಳ ನಡುವಿನ ಕ್ರಿಯೆಯೇ ವಿನ್ಯಾಸ."

ಈ ಎಲ್ಲಾ ಲೇಖನ, ಪ್ರಬಂಧ, ಮಾತುಕತೆಗಳ ಮೂಲಸ್ರೋತವಾದ ಎಳೆ, ಬರಹ ಅಥವಾ ಮಾತಿನಲ್ಲಿ ಅನುಭವವೊಂದು ಮೂಡುವ ವಿಸ್ಮಯದ ಕುರಿತಾದ್ದೇ. ಈ ಹಿನ್ನೆಲೆಯಲ್ಲಿಯೇ ಬರೆದಂತೆಲ್ಲ ‘ಸ್ವಂತ’ ಅನುಭವವೇ ಆಗುವ ಮಾತು ಮುಖ್ಯವಾಗುತ್ತದೆ. ಅಂದರೆ ಇಲ್ಲಿ ಸ್ಪಷ್ಟವಾಗಿಯೇ ‘ಆದ’ ಅನುಭವವನ್ನು ಬರೆಯುವ ಬಗ್ಗೆ ಮಾತನಾಡುತ್ತಿಲ್ಲ. ಅದು ಬರೆಯುವುದಕ್ಕೆ ‘ಬೇಕಾದ’ ವಿವರಗಳಿಗೆ ಒದಗಿ ಬರಬಹುದಾದ ಮಾಹಿತಿಯನ್ನು ಪೂರೈಸಬಹುದು, ಅದರ ಮಾತು ಬೇರೆ. ಆದರೆ ಬರೆಯುತ್ತ ಬರೆಯುತ್ತ ತನಗೆ ಇದುವರೆಗೂ ಆಗಿರದ ಒಂದು ಅನುಭವಕ್ಕೆ ಲೇಖಕ ತೆರೆದುಕೊಳ್ಳುವುದು ಮತ್ತು ಆ ಅನುಭವವನ್ನು ಪಡೆಯುವುದು ಇದೆಯಲ್ಲ, ಅದನ್ನು ವಿವರಿಸಲು ಸಾಧ್ಯವೆ?!

ಜಗತ್ತು, ಅನುಭವ, ಚಿಂತನೆ, ಸಂವೇದನೆ, ಭಾವಕೋಶ ಅಥವಾ ಇನ್ನೇನೇ ಅನ್ನಿ, ಅದು ಇಲ್ಲೇ ಹಾಗೆಯೇ ಇರುತ್ತದೆ. ಹರಿಯುವ ನದಿಯ ಪಕ್ಕ ಒಂದು ಕಲ್ಲುಬಂಡೆ ಬಿದ್ದಿರುವಂತೆ. (ಇದು ಕೇಶವ ಮಳಗಿಯವರ ಪರಿಕಲ್ಪನೆ. ಅವರು ನದಿ ಮತ್ತು ದಂಡೆಯ ಬಗ್ಗೆ ಹೇಳುತ್ತ ಒಂದೆಡೆ ಪ್ರಶ್ನಿಸುತ್ತಾರೆ, ಹರಿಯುತ್ತಿರುವುದು ಅದೇ ನೀರೆ? ಅದಕ್ಕೆ ಸತತ ಸಾಂಗತ್ಯವನ್ನೊಡ್ಡುತ್ತಿರುವ ಕಲ್ಲು ಅದೇ ಕಲ್ಲೇ, ಸದಾ ಕಾಲಕ್ಕೂ?) ಕತೆಗಾರ ಬರುತ್ತಾನೆ, ಹೋಗುತ್ತಾನೆ. ಅವನು ನಿಮಿತ್ತ ಮಾತ್ರ. ಭೌತಿಕವಾಗಿ ನಾವು ಒಂದು ಅವಕಾಶ (ದೇಹ)ವನ್ನು ಆವರಿಸಿದ್ದೇವೆ. ಆದರೆ ಭಾವಕೋಶ ಮಾತ್ರ ನೆನಪು (ಸ್ಮೃತಿ)ಗಳನ್ನು ಆವರಿಸಿಕೊಂಡಿರುತ್ತದೆ. ಆ ನೆನಪು ಅಥವಾ ಸ್ಮೃತಿ ಯಾವುದರಿಂದಾಗಿದೆ? ಅದು ದೇಶ ಮತ್ತು ಕಾಲಗಳಿಂದಾಗಿರುವಂಥಾದ್ದು. ಭೂತಕಾಲ ಮತ್ತು ಭವಿಷ್ಯತ್ ಕಾಲ ಎಂಬೆರಡು ಸಾಗರಗಳ ನಡುವಿನ ಪುಟ್ಟ ದ್ವೀಪದಂತೆ ನಾವು ನಮ್ಮ ಅಸ್ತಿತ್ವವನ್ನು ಈ ದೇಶ-ಕಾಲದ ಸಂದರ್ಭದಲ್ಲಿ (ತೀರ ತಾತ್ಕಾಲಿಕವಾಗಿ) ಕಂಡುಕೊಂಡಿರುತ್ತೇವೆ ಎನ್ನುತ್ತಾನೆ ಆತ. ಇದಕ್ಕೆಂದೇ ಎಂಟು ಶತಮಾನಗಳ ಒಂದು ಕಾಲಪ್ರಜ್ಞೆಯನ್ನು ಬಳಸಿಕೊಂಡು ತನ್ನ ಪ್ರಮೇಯವನ್ನು ಪರಂಪರೆ-ಸಂಸ್ಕೃತಿ ಮತ್ತು ಅವು ನಿರ್ಮಿಸುವ ಸ್ಮೃತಿಯನ್ನು ಕುರಿತ ತನ್ನ ಪ್ರಮೇಯವನ್ನು ಮಂಡಿಸುತ್ತಾನೆ. ಹೀಗೆ ನೆನಪು ವೈಯಕ್ತಿಕತೆಯನ್ನು ಕಳೆದುಕೊಂಡು ನಿಲ್ಲುತ್ತದೆ. ಹರಿವ ನದಿಯ ನೀರಿನಂತೆ ಮತ್ತು ಸದಾ ನೀರಿಗೆ ಮೈಯೊಡ್ಡಿ ನಿಂತ ಕಲ್ಲಿನಂತೆ!

ಒಬ್ಬ ಸಾಹಿತಿ ಒಂದು ಕೃತಿಯನ್ನು ಕಟ್ಟುವಾಗ ನಿಜಕ್ಕೂ ಏನು ನಡೆಯುತ್ತದೆ, ಕಟ್ಟುವ ಪ್ರಕ್ರಿಯೆಯನ್ನೇ ಕುರಿತು ಮಾತನಾಡ ತೊಡಗಿದರೆ ಹೇಗಿರುತ್ತದೆ? ನಾಗರಾಜ ವಸ್ತಾರೆಯವರು ‘ಅನಿಸಿದ್ದನ್ನು’ ನಿಜಕ್ಕೂ ‘ಆಗಿಸುವ’ ಕೈಂಕರ್ಯದಲ್ಲಿ ‘ಪೆನ್ಸಿಲ್’ ಎಂಬ ಮೂಲಕ ಮಹಾಶಯನ ಬಗ್ಗೆ ವಿವರಿಸುತ್ತ ಹೋದ ವಿನ್ಯಾಸವೊಂದು ಕೊನೆಗೂ ನಿಜವಾಗುವ ಪ್ರಕ್ರಿಯೆಯ ಆದಿ-ಅಂತ್ಯದ ಜಾತಕ ಹೇಗಿರುತ್ತದೆ?

ಈಚೆಗೆ ಕನ್ನಡದ ಪ್ರಮುಖ ಕತೆಗಾರ ಅಮರೇಶ ನುಗಡೋಣಿಯವರು ಎರಡು ವರ್ಷಗಳ ಅಪಾರ ಶ್ರಮ ಮತ್ತು ಸಹನೆಯಿಂದ "ಕಥೆ ಹುಟ್ಟುವ ಪರಿ" ಎಂಬ ಒಂದು ಮಹತ್ವದ ಕೃತಿಯನ್ನು ಸಂಪಾದಿಸಿ ಅದನ್ನು ಹಂಪಿ ವಿಶ್ವವಿದ್ಯಾಲಯದ ಪ್ರಸಾರಾಂಗದ ಮೂಲಕ ಪ್ರಕಟಿಸಿದ್ದಾರೆ. ಇಲ್ಲಿ ಸುಮಾರು ಅರವತ್ತೆರಡು ಮಂದಿ ಹಿರಿಯ ಕಿರಿಯ ಕಥೆಗಾರರು ತಾವು ಕತೆ ಬರೆಯುವ ಕ್ಷಣದ ಮತ್ತು ಅದರ ಹಿಂದಿನ ಕ್ಷಣಗಳ ಬಗ್ಗೆ "ನೆನಪಿಸಿಕೊಂಡು" ಬರೆಯುವ ಪ್ರಯತ್ನ ಮಾಡಿದ್ದಾರೆ. ತಮ್ಮ ಪ್ರಯತ್ನದಲ್ಲಿ ತಾವು ಪೂರ್ತಿ ಸಫಲರೆಂದಾಗಲೀ, ಹೀಗೆ ತಾವು ವಿವರಿಸಿದ್ದು ಅಂತಿಮ ಸತ್ಯವೆಂದಾಗಲೀ ಸ್ವತಃ ಈ ಕತೆಗಾರರಾಗಲೀ, ಅವರನ್ನು ಓದುವ ನಾವಾಗಲೀ ತಿಳಿದುಕೊಳ್ಳಬೇಕಾದುದಿಲ್ಲ. ಈ ಒಂದು ವೈಫಲ್ಯದ ಭಯದಿಂದಲೇ ಕನ್ನಡದ ಬಹುಮುಖ್ಯ ಕತೆಗಾರರಲ್ಲಿ ಅನೇಕರು ಅಲ್ಲಿ ಕಾಣಿಸಿಕೊಂಡಿಲ್ಲ ಎನಿಸುತ್ತದೆ. ರಾಘವೇಂದ್ರ ಪಾಟೀಲ, ಎಸ್ ದಿವಾಕರ್, ಟಿ ಜಿ ರಾಘವ, ವಿವೇಕ ಶಾನಭಾಗ, ಅಬ್ದುಲ್ ರಶೀದ್, ಕೆ ವಿ ತಿರುಮಲೇಶ್, ನಟರಾಜ್ ಹುಳಿಯಾರ್, ಅಶೋಕ ಹೆಗಡೆ, ಶಾಂತಾರಾಮ ಸೋಮಯಾಜಿ, ಎಸ್ ಸುರೇಂದ್ರನಾಥ್, ಜೋಗಿ, ಸುಮಂಗಲಾ, ಗುರುಪ್ರಸಾದ್ ಕಾಗಿನೆಲೆ, ಸಂದೀಪ ನಾಯಕ, ಅನುಪಮಾ ಪ್ರಸಾದ್, ವಿ ಎಂ ಮಂಜುನಾಥ್, ಟಿ ಕೆ ದಯಾನಂದ್, ಶ್ರೀಕಾಂತ ಇನ್ನೂ ಮುಂತಾದವರು ಅಲ್ಲಿ ಕಾಣಿಸುತ್ತಿಲ್ಲ. ಕಾಣಿಸಿಕೊಂಡವರೂ ಕಾಣಿಸಿಕೊಳ್ಳದವರೂ ಯಾರೆಂಬುದಕ್ಕಿಂತ ಮುಖ್ಯವಾದದ್ದು ಈ ಪ್ರಕ್ರಿಯೆಯನ್ನು ವಿವರಿಸುತ್ತ ಅಥವಾ ವಿವರಿಸದೇ ಕನ್ನಡದ ಎಲ್ಲ ಕತೆಗಾರರು ಒಟ್ಟಾರೆಯಾಗಿ ನಮಗೆ ಕಾಣಿಸುವ ಸತ್ಯ.

ಈ ಸೃಜನ ಪ್ರಕ್ರಿಯೆಯ ಕುರಿತು ಆಡಿದ್ದು, ಆಡಬಹುದಾದ್ದು ಮತ್ತು ಕೊನೆಗೂ ಆಡಲು ಸಾಧ್ಯವಾದದ್ದು - ಒಂದೆಡೆ ಇರುತ್ತ ನಿಜವಾಗಿಯೂ ‘ಆಗುವುದು’ ಇನ್ನೊಂದೆಡೆ ಇರುತ್ತ ಇವೆರಡರ ನಡುವೆ ಇರುವ ಅಂತರವಿದೆಯಲ್ಲ ಅದರ ಬಗ್ಗೆಯೇ ಯೋಚಿಸುವುದು ಈ ಲೇಖನದ ಉದ್ದೇಶ. ಉದಾಹರಣೆಗೆ ಜಯಂತ ಕಾಯ್ಕಿಣಿ ತಮ್ಮ ಲೇಖನದಲ್ಲಿ ತಮ್ಮ ಕತೆಗಾರಿಕೆಯ ಮಟ್ಟು-ಪಟ್ಟುಗಳ ಕುರಿತಾಗಿ ಇರಬಹುದಾದ ‘ಮೂಢನಂಬಿಕೆ’ಗಳನ್ನು ಹೋಗಲಾಡಿಸಿದ್ದಾರೆಯೇ ಹೊರತು ನಿಜಕ್ಕೂ ತಮ್ಮ ಏಕಾಂತದ ಸೃಜನ ಪ್ರಕ್ರಿಯೆಯ ಕ್ಷಣಗಳ ಬಗ್ಗೆ ಮಾತನಾಡಿಲ್ಲ. ಸೇವಂತಿ ಹೂವಿನ ಟ್ರಕ್ಕಿನಲ್ಲಿ ಬಂದ "ನಾಳೆ ತೆಗೆದುಕೊಳ್ಳುತ್ತೇನೆ" ಎಂದಾಕೆ, ಗಾಳಿ ಮರದ ನೆರಳಿನಲ್ಲಿ ಪಾಯಸ ಹಿಡಿದು ಕಾಯುತ್ತಿರುವ ಪತ್ನಿಯಿಂದ ಅಷ್ಟು ದೂರದಲ್ಲಿ ಅಡಗಿದಂತೆ ಕದ್ದು ನಿಂತು ಅವನನ್ನೂ-ಅವಳನ್ನೂ ಒಟ್ಟೊಟ್ಟಿಗೇ ಕಣ್ತುಂಬಿಕೊಂಡ ‘ಅವಳು’, ಬೈಸಿಕಲ್ ವಾಪಾಸು ಕೇಳಲು ಹೋಗಿಯೂ ಬರಿಗೈಯಲ್ಲಿ ಬಂದ ಮಾಸ್ತರರು...ತಮ್ಮ ಕತೆಗಳಲ್ಲಿಯೇ ಮೈತಳೆದವರೇ ಹೊರತು ಅದಕ್ಕೂ ಮೊದಲು ತಮಗೆ ಅವರನ್ನು ಕತೆಯಲ್ಲಿ ಮೈದಾಳಿಸುವ ಪ್ರಜ್ಞಾಪೂರ್ವಕ ಉದ್ದೇಶವೇನೂ ಇದ್ದಿದ್ದಿಲ್ಲ ಎಂಬಂತೆ ಅವರು ಬರೆದಿದ್ದಾರೆ. ಕತೆಯ ಚೌಕಟ್ಟಿನ ಬಗ್ಗೆ, ಪಾತ್ರಗಳ ಬಗ್ಗೆ, ಒಟ್ಟು ಚಿತ್ರಿಸಲು ಹೊರಟ ಹೊಳಹಿನ ಬಗ್ಗೆ ಒಂದು ಪ್ಲ್ಯಾನ್ ಜಯಂತರಲ್ಲಿ ಪೂರ್ವಭಾವಿಯಾಗಿ ಇರುವುದೇ ಇಲ್ಲ ಎನ್ನುವ ಮಾತನ್ನು ನಾವು ಒಪ್ಪಬಹುದು, ಬಿಡಬಹುದು; ಆದರೆ ಒಬ್ಬ ಲೇಖಕ ತನ್ನ ಸೃಜನ ಪ್ರಕ್ರಿಯೆಯನ್ನು ಪೂರ್ತಿಯಾಗಿ ಇದಂಇತ್ಥಂ ಎಂದು ವಿವರಿಸಿ ಮುಗಿಸಬಲ್ಲ ಎನ್ನುವುದಂತೂ ಸುಳ್ಳೇ.

ಜಯಂತ್ ಕಾಯ್ಕಿಣಿಯವರು ಈ ಹಿಂದೆಯೂ ತಾವು ಬರೆಯುವ ಮುನ್ನ ಪ್ಲ್ಯಾನ್ ಮಾಡಿರುವುದಿಲ್ಲ, ಈಗಾಗಲೇ ಗೊತ್ತಿರುವ ಕತೆಯನ್ನು ಏನು ಬರೆಯುವುದು, ಬರೆಯುತ್ತಾ ಬರೆಯುತ್ತಾ ಅದು ತಮಗೆ ಒಂದು ಶೋಧವಾಗಬೇಕು ಎಂದೆಲ್ಲ ಹೇಳಿರುವುದಿದೆ. ಹಾಗೆಯೇ ಕೆಲವರು ತಮಗೆ ಇಡೀ ಪ್ಲಾಟ್ ಸುಸ್ಪಷ್ಟವಾಗಿ ಕಣ್ಣಿಗೆ ಕಟ್ಟಿದಂತಾದ ಬಳಿಕವೇ ತಾವು ಪೆನ್ನು ಕೈಗೆತ್ತಿಕೊಳ್ಳುವವರು ಎಂದಿರುವುದೂ ಇದೆ. ಮನಸ್ಸಿನಲ್ಲಿ ಮೂಡಿದ ಒಂದು ಊಹೆ, ಹೊಳಹು ಅಸಲಿನಲ್ಲಿ ಆವರ್ಭವಿಸುವ ಈ ಎರಡು ಸಾಗರಗಳ ನಡುವಿನ ದ್ವೀಪವೇನಿದೆ, ಅದು ಬಹುಶಃ ವಾಚ್ಯಕ್ಕೆ ದಕ್ಕದ್ದು. ವಾಚ್ಯವಾದುದೆಲ್ಲ ಅಸಲಾಯಿತು. ಅದಕ್ಕೂ ಸ್ವಲ್ಪ ಮುನ್ನ, ಅದು ಹೇಗಿರುತ್ತದೆ!!!

ಎಂದೋ ಕೇಳಿದ ಒಂದು ಹಾಡನ್ನು ಹಾಡಲೇ ಬೇಕೆನಿಸುವಾಗ ಅದರ ಸ್ವರ ಪ್ರಸ್ತಾರ ಸ್ಮೃತಿಗೆ ದಕ್ಕದೇ ಹೋಗುವ, ಹಾಡಲಾಗದ ಭಯಂಕರ ನಿರ್ವಾತದ ಸ್ಥಿತಿಯಿದು! ಮರೆತ ರಾಗ, ಮರೆತ ಚಿತ್ರ, ಮರೆತ ಪರಿಮಳ ನಿಮಗೆ ಗೊತ್ತಾಗುವಂತೆ ವಿವರಿಸೆಂದರೆ ವಿವರಿಸಲಿ ಹೇಗೆ! ನಮ್ಮ ಯಕ್ಷಗಾನದ/ತಾಳಮದ್ದಲೆಯ ಪಾತ್ರಧಾರಿ ಪ್ರತಿಬಾರಿ ಒಪ್ಪಿಸುವ ಅರ್ಥಗಾರಿಕೆ (ವಾಚಿಕ) ಬೇರೆ ಬೇರೆಯೇ ಆಗಿರುವುದಾದರೂ ಅದರ ಚೌಕಟ್ಟನ್ನು ನಿಯಂತ್ರಿಸುವ ಒಂದು ಪುರಾಣ (ಪಠ್ಯ) ಇದ್ದೇ ಇರುತ್ತದೆ. ಶಾಸ್ತ್ರೀಯ ಸಂಗೀತದ ಹಾಡುಗಾರಿಕೆಗೂ ಇದನ್ನು ಅನ್ವಯಿಸಬಹುದು. ಆದರೆ ಒಂದು ಕತೆಗೆ, ಕಾದಂಬರಿಗೆ, ವಿಮರ್ಶೆಗೆ ಹೇಗೆ ಅನ್ವಯಿಸುವುದು? ಆತ್ಮಚರಿತ್ರೆಗೆ ಅನ್ವಯಿಸಿದಂತೆ ಅನ್ವಯಿಸುವುದು ಸಾಧ್ಯವೆ? ಕಳೆದುಕೊಂಡ ಒಂದು ಕತೆಯನ್ನು ಅದೇ ಕತೆಗಾರ ಮರಳಿ ಬರೆಯಬಲ್ಲನೆ? ಬರೆದರೆ ಅದು ಅದೇ ಕತೆಯಾಗಿರುತ್ತದೆಯೆ?

ನಿಮಗೆಲ್ಲ ಗೊತ್ತಿರುವಂತೆ ಆರ್ಹಾನ್ ಪಮುಕ್ ಬರೆದ ಮ್ಯೂಸಿಯಮ್ ಆಫ್ ಇನ್ನೊಸೆನ್ಸ್ ಕಾದಂಬರಿಯಲ್ಲಿಯೂ ನೆನಪು ಮತ್ತು ಕಾಲದ ಸಂಬಂಧಗಳ ಕುರಿತ ಜಿಜ್ಞಾಸೆಯಿದೆ. ಪಮುಕ್‌ಗೆ ಬರವಣಿಗೆ ಹೇಗೋ ಈ ಕಾದಂಬರಿ ಕೂಡ ಕೇವಲ ಮತ್ತೊಂದು ಕೃತಿ ಅಲ್ಲ. ಆತ ಸ್ವತಃ ಈ ಕಾದಂಬರಿಯಲ್ಲಿ ಬರುವಂಥ ಒಂದು ಮ್ಯೂಸಿಯಮ್ ಸ್ಥಾಪಿಸಿರುವುದು ನಿಮಗೆಲ್ಲ ಗೊತ್ತಿರಬಹುದು. ಹಾಗಾಗಿ ಇಲ್ಲಿ ಆತ ಹೇಳುವ ವಿಚಾರಗಳಿಗೆ ಒಂದು ಗುರುತ್ವವಿದೆ, ಮಹತ್ವವಿದೆ. ಕೆಮಾಲ್ ಈ ಕಾದಂಬರಿಯ ನಾಯಕ.

ಸಮಯ ಮತ್ತು ಕ್ಷಣಗಳು ಎಂದು ಕಾಲವನ್ನು ವಿಂಗಡಿಸಿಕೊಂಡು ಫಿಸಿಕ್ಸ್‌ನಲ್ಲಿ ಅರಿಸ್ಟಾಟಲ್ ಮಂಡಿಸುವ ಒಂದು ತತ್ವವನ್ನು ಇಲ್ಲಿ ಕೆಮಾಲ್ ವಿವರಿಸುತ್ತಾನೆ. ಕ್ಷಣಗಳು (Single Moments) ವರ್ತಮಾನವಿದ್ದಂತೆ. ಕ್ಷಣಗಳನ್ನು ಮತ್ತೆ ಸೀಳುವುದು ಸಾಧ್ಯವಿಲ್ಲ. ಆದರೆ ಸಮಯ ಎನ್ನುವುದು ಈ ಅವಿಭಾಜ್ಯ ಕ್ಷಣಗಳನ್ನು ಒಂದರ ಜೊತೆ ಇನ್ನೊಂದನ್ನು ಜೋಡಿಸುವ ತಂತುವಿದ್ದಂತೆ. ಹಾಗೆ ಒಂದು ವರ್ತಮಾನದ ಕ್ಷಣವನ್ನು ವರ್ತಮಾನದ ಇನ್ನೊಂದು ಕ್ಷಣದೊಂದಿಗೆ ಜೋಡಿಸುವ ತಂತು `ಸಮಯ'ವನ್ನು ಯಾರೂ ಅವಗಣಿಸಲು ಸಾಧ್ಯವಿಲ್ಲ. ಆದರೆ ಸಾಮಾನ್ಯವಾಗಿ ನಾವೆಲ್ಲರೂ ಮಾಡುವಂತೆ (ಇಂಡಲ್ಜೆಂಟ್ ಆಗುವ ಮೂಲಕ, ಅದು ಓದು, ಟೀವಿ, ಇಂಟರ್ನೆಟ್, ಮದ್ಯ, ಭಜನೆ ಯಾವುದೇ ಬಗೆಯಲ್ಲಿರಬಹುದು), ಸಮಯವನ್ನೇ ಮರೆತುಬಿಟ್ಟು ಸಂತೋಷದಿಂದಿರಲು ಪ್ರಯತ್ನಿಸುವುದು ಸಾಧ್ಯವಿದೆ. ಆದರೆ ಇದರ ಅರ್ಥ ನಾವು ಸಮಯ ತೋರಿಸುವ ಗಡಿಯಾರಗಳನ್ನು ಮತ್ತು ದಿನ, ವಾರ, ತಿಂಗಳು ವರ್ಷ ಇತ್ಯಾದಿಗಳನ್ನು ತೋರಿಸುವ ಕ್ಯಾಲೆಂಡರುಗಳನ್ನು ಮರೆತು ಇರುತ್ತೇವೆಂದಲ್ಲ. ಅವು ನಮಗೆ ನಮ್ಮ ಸಂಬಂಧಗಳನ್ನು - ಇತರರೊಂದಿಗೆ ಮತ್ತು ಸಮಾಜದೊಂದಿಗೆ - ನಿಭಾಯಿಸಲು ಸಹಾಯ ಮಾಡುತ್ತವೆ. ಹಾಗೆಯೇ ವಸ್ತುಗಳು. ಈ ವಸ್ತುಗಳು ಕ್ಷಣಗಳನ್ನು ತಮ್ಮೊಳಗೆ ಇಟ್ಟುಕೊಂಡಿವೆ ಮತ್ತು ಈ ವಸ್ತುಗಳು ಕೂಡ ಒಂದು ಕ್ಷಣವನ್ನು ಇನ್ನೊಂದು ಕ್ಷಣದೊಂದಿಗೆ ಜೋಡಿಸಲು ಸಹಾಯ ಮಾಡುವಂಥ ಅಪೂರ್ವ ತಂತುಗಳಾಗಿವೆ. ಉದಾಹರಣೆಗೆ ನೀವು ಹಲವಾರು ವರ್ಷಗಳಿಂದ ಬಳಸುತ್ತ ಬಂದಿರುವ ಬಾಚಣಿಗೆಯಿರಬಹುದು, ನಿಮ್ಮ ಪೆನ್ನು ಆದೀತು ಅಥವಾ ನಿಮ್ಮ ಪ್ರೀತಿಯ ಪರ್ಸ್ ಇದ್ದೀತು. ಅದು ಕೇವಲ ವಸ್ತುವಲ್ಲ ಎನ್ನುವುದನ್ನು ನೀವೂ ಒಪ್ಪುತ್ತೀರಿ. ಅವುಗಳ ಮೂಲಕ ನಾವು "ಸಮಯ"ವನ್ನು ಮತ್ತೆ ಅನುಭವಿಸಬಹುದು ಮತ್ತು ಆ ಮೂಲಕ ಆ ಸಮಯದ ಸಂತೋಷವನ್ನು ಕೂಡ ಚಿರಂತನವಾಗಿಸಬಹುದು!

ಈ ಹಿನ್ನೆಲೆಯೊಂದಿಗೇ, ಈಗ Innocence ಬಗ್ಗೆ ಸ್ವಲ್ಪ ಗಮನ ಹರಿಸಬಹುದು. ಸಾಮಾನ್ಯವಾಗಿ ವಸ್ತುಸಂಗ್ರಹಾಲಯದಲ್ಲಿ ನಾವೆಲ್ಲ ನಿರೀಕ್ಷಿಸುವುದು, ಸಂಗ್ರಹಿಸುವುದು ಅಪರೂಪದ ವಸ್ತುಗಳನ್ನು. ಆದರೆ ಇಲ್ಲಿ ಕೆಮಾಲ್ ತನ್ನ ಪ್ರೀತಿಯ ಫ್ಯೂಸನ್ನಳ ಪ್ರೀತಿ, ಅವಳ ದೇಹದ ಸುವಾಸನೆ, ಅವಳ ಸ್ಪರ್ಶ, ಒಂದೊಂದೇ ಘಟನೆ (ಕ್ಷಣ)ಗಳ ನೆನಪುಗಳನ್ನು ಪುನರ್-ಸೃಷ್ಟಿಸಿಕೊಳ್ಳುವುದಕ್ಕಾಗಿಯೇ ಮಾಡಿದ ಸಂಗ್ರಹದಲ್ಲಿ ಇರುವುದೆಲ್ಲ ತೀರ ಸಾಮಾನ್ಯವಾದ ವಸ್ತುಗಳು. ಅವಳು ತುಟಿಯೊತ್ತಿ ಹೀರಿದ, ಪಾನೀಯವಿನ್ನೂ ಒಂದಿಷ್ಟು ಉಳಿದಿರುವ ಗ್ಲಾಸ್, ಅವಳ ಕೂದಲಿನ್ನೂ ಸಿಕ್ಕಿಕೊಂಡಿರುವ ಹೇರ್ ಪಿನ್ನು, ಅವಳ ತುಟಿಗಳ ನಡುವೆ ಕೂತು ಎಂಜಲನ್ನೂ ಸೋಕಿಸಿಕೊಂಡಿರಬಹುದಾದ 4,213 ಸಿಗರೇಟ್ ತುಂಡುಗಳು, ಅವಳು ಕೈಯಾರೆ ಹಿಡಿದು ಕುಲುಕಿಸಿರಬಹುದಾದ ಡೈನಿಂಗ್ ಟೇಬಲ್ ಮೇಲಿನ ಸಾಲ್ಟ್ ಶೇಕರ್ಸ್ ಮತ್ತು ಇಂಥವೇ (ಕ್ಷುದ್ರ)ದೈನಂದಿನವನ್ನು (ತನ್ಮೂಲಕ ಫ್ಯೂಸನ್ನಳನ್ನು) ತೋರಿಸುವ (ನೆನಪಿಸುವ) ವಸ್ತುಗಳು ಇಲ್ಲಿರುವಂಥವು.

ಹಾಗೆಯೇ ಇಂಥ ವಸ್ತುಗಳಲ್ಲಿ ಒಬ್ಬ ವ್ಯಕ್ತಿಯನ್ನು, "ಸಮಯ"ವನ್ನು, ತನ್ಮೂಲಕ ಸಂತೋಷವನ್ನು ಪುನರ್-ಸೃಷ್ಟಿಸಿಕೊಳ್ಳಲು ಮನುಷ್ಯ Innocent ಕೂಡಾ ಆಗಿರಬೇಕಾಗುತ್ತದೆ. ಪ್ರಜ್ಞೆಯ ಮೂಲಕ, ಬುದ್ಧಿಯ ಮೂಲಕ ನೀವು ಈ ಭಾವಕೋಶವನ್ನು ಪ್ರವೇಶಿಸಲು ಸಾಧ್ಯವಿಲ್ಲ. ಅಂಥವರಿಗೆ ಈ 4,213 ಸಿಗರೇಟು ತುಂಡುಗಳು ಕೇವಲ Disposable ಕಸ. ಆದರೆ ಕೆಮಾಲ್ ಈ ಪ್ರತಿತುಂಡಿನ ಹಿಂದಿರುವ ನೆನಪನ್ನು ಕಟ್ಟಿಕೊಳ್ಳಬಲ್ಲ. ಆ ತುಂಡುಗಳನ್ನು ಫುಸನ್ ಹೇಗೆ ಆರಿಸಿದಳು, ಆರಿಸುವಾಗ ಎಷ್ಟು ಒತ್ತಡ ಹಾಕಿದಳು, ತಿರುಚಿದಳೇ, ಸುಮ್ಮನೇ ಒತ್ತಿ ಆರಿಸಿದಳೇ, ಸುರಿಯುತ್ತಿರುವ ನಲ್ಲಿಯ ನೀರಿಗೆ ಹಿಡಿದು ಆರಿಸಿದಳೇ ಎಂಬುದನ್ನು ಹೇಳಬಲ್ಲ. ಅದರ ಬೆನ್ನಿಗೇ ಅವನಿಗೆ ಆ ಕ್ಷಣದ ಫ್ಯೂಸನ್ನಳ ಮೂಡ್, ಆ ಸಂದರ್ಭ, ಆ ದಿನ, ಕ್ಷಣ ಎಲ್ಲವೂ ಮತ್ತೆ ಜೀವಂತವಾಗುತ್ತ ಹೋಗುತ್ತವೆ. ಅಂದರೆ ಅವನು ಫ್ಯೂಸನ್ನಳನ್ನು ಹೀಗೆ ಜೀವಂತಗೊಳಿಸಿಕೊಳ್ಳಬಲ್ಲ, ಅವನ ಸಂತೋಷ - ಅದು ಯಾವತ್ತೂ ಫ್ಯೂಸನ್ನಳೇ ಆಗಿರುವುದರಿಂದ - ವನ್ನು ಮರಳಿ ಬದುಕಬಲ್ಲ! ಅವನಿಗೆ ಮತ್ತು ನಮಗೂ -"ಕೊನೆಗೂ ಜೀವನದಲ್ಲಿ ಸಂತೋಷವಾಗಿರುವುದು ಮುಖ್ಯ".

ನಿಜಕ್ಕೂ ಪಡೆದ ಅನುಭವವನ್ನು ಬಿಟ್ಟುಕೊಟ್ಟು, ಇದುವರೆಗೂ ಆಗದ ಒಂದು ಅನುಭವವನ್ನು ಬರೆಯುವುದರ ಮೂಲಕವೇ ಪಡೆಯಲು ಕೂಡ ಪಡೆದ ಅನುಭವ ಅಗತ್ಯವಾಗುತ್ತದೆ ಮತ್ತು ಅದನ್ನು ಪಡೆಯಬಹುದಾದ ಒಂದು ಮಾರ್ಗ ಸಾಹಿತ್ಯದ ಓದೂ ಆಗಿರುವುದು ಸಾಧ್ಯವಿದೆ. ಆದರೆ ಹಾಗೆ ಬರೆಯುತ್ತ ಅನುಭವವನ್ನು ಆವಾಹಿಸಿಕೊಳ್ಳಲು ಎಂಥಾ ಸಿದ್ಧತೆ ಬೇಕಾಗುವುದೆಂದರೆ ಓದಿದಾಗ ಓದುಗನಿಗೂ ಅದರ ಆವಾಹನೆಯಾಗುವಂತೆ ಬರೆದುದು ಮೂರ್ತೀಭವಿಸಿದರೆ ಮಾತ್ರವೇ ಅಂಥ ಆವಾಹನೆಯ ಸುಖ ಕಥೆಗಾರನಿಗೆ ದಕ್ಕಿರುತ್ತದೆ ಮತ್ತು ದಕ್ಕಿರುವುದರಿಂದಲೇ ಅದು ಓದುಗನಿಗೂ ದಕ್ಕಿರುತ್ತದೆ! ಇಲ್ಲಿ ಪ್ರತ್ಯೇಕ ಕ್ಷಣವನ್ನು ಸಮಯದ ಮೂಲಕ ಜೋಡಿಸಿ ನೆನಪುಗಳಾಗಿಸಬಲ್ಲ ತಂತುಗಳು ಎಷ್ಟು ಅಗತ್ಯವೋ, ಒಂದು ಬಗೆಯ ಇನೊಸೆನ್ಸ್ ಕೂಡ ಅದಕ್ಕೆ ಅಷ್ಟೇ ಅಗತ್ಯ. ಅಂದಹಾಗೆ ಜಯಂತ್ ಕಾಯ್ಕಿಣಿಯವರ ಅನುವಾದಿತ ಕಥಾಸಂಕಲನದ ಹೆಸರು Dots and Lines!
ಶ್ರೀಧರ ಬಳಗಾರರ ಆಡುಕಳದಲ್ಲಿ ಕೊನೆಗೂ ಅವರು ನನಗೆ ವಿವರಿಸಿದ ಭಾಗ ಇರಲೇ ಇಲ್ಲ. ಅವರನ್ನೇ ಕೇಳಿದರೆ, ಅದೇನೊ ಹೇಳಿದ್ದು ಹೌದು, ಆದರೆ ತಿದ್ದುತ್ತಾ ತಿದ್ದುತ್ತಾ ಅದೆಲ್ಲ ಎಲ್ಲಿ ಹೇಗೆ ಬೇಡವಾಯಿತೊ ಗೊತ್ತಿಲ್ಲ ಮಾರಾಯ ಎಂದುಬಿಟ್ಟರು! ನಾನೂ ಅವರು ನನಗೆ ಹೇಳಿದ್ದನ್ನು ಇಲ್ಲಿ ವಿವರಿಸಿಲ್ಲ, ಏಕೆಂದರೆ, ಮುಂದೆಂದಾದರೂ ಅವರು ಇನ್ಯಾವುದಾದರೂ ಕಾದಂಬರಿಯಲ್ಲಿ ಅದು ಸಶಕ್ತ ಬಂದೇ ಬರಬಹುದೆಂಬ ವಿಶ್ವಾಸ ನನಗಂತೂ ಇದೆ!

2 comments:

Shiela Nayak said...

ಓದುತ್ತಾ ಓದುತ್ತಾ ಹಳೆಯ ಕ್ಷಣಗಳೆಲ್ಲ ನೇಯ್ದುಕೊಂಡು ಸಮಯಗಳಾಗಿ ಅವ್ಯಕ್ತ ಸುಖಕೊಟ್ಟವು! ಜೊತೆಗೆ ಈ ಮೂರು ವರ್ಷದ ಬರಹಗಳೂ ಅನುಭವಕೆ ದಕ್ಕಿದ ಸುಖದ ನೆನಪೂ...

ಕೆಲವು ಘಳಿಗೆಗಾದರೂ ಅಂದು ನಾ ಹೋಗುತ್ತಿದ್ದ ಸರಕಾರಿ ಗ್ರಂಥಾಲಯದ ಹಳೆಯ ಕಪಾಟುಗಳ ಎದುರು ಇಲ್ಲಿಂದಲೇ ಮತ್ತೆ ಪುಟಗಳನು ತಿರುಗಿಸುವ ಅವಕಾಶ ಕೊಟ್ರಿ!

ಸಾಹಿತ್ಯ ಹುಟ್ಟುವ ಅಕ್ಷರಕ್ಕಿಳಿಯುವ ಪರಿಯು ಅಚ್ಚರಿಯೇ ಹೌದು! ಕಲ್ಪನೆ ಕಾಗದಕ್ಕಿಳಿಯುತ್ತಾ ಅನುಭೂತಿಗೆ ದಕ್ಕುವ ಅನನ್ಯತೆಯ ವಿವರಣೆ ಶ್ಲಾಘನೀಯ!

ತುಂಬು ಮನದ ಧನ್ಯವಾದ ನರೇಂದ್ರ ಪೈ!

ನರೇಂದ್ರ ಪೈ said...

ಶೀಲಾ ಮೇಡಂ, ಅಂಥಾದ್ದೇನಿಲ್ಲ. ಕನ್ನಡದ ಪತ್ರಿಕೆಯೊಂದರಿಂದ ರಿಜೆಕ್ಟ್ ಆದ ಲೇಖನವಿದು! ತುಂಬಾ ಪುರುಸೊತ್ತಿದ್ದು, ಏನು ಮಾಡಿದರೂ ನಿದ್ದೆ ಬರುತ್ತಿಲ್ಲ ಎಂದಾದಲ್ಲಿ ಓದಬಹುದು ಅಂತಲೇ ಗುಡ್‌ನೈಟ್ ಹೇಳಿ ಸ್ವಸ್ಥ ಮಲಗಿದ ಒಂದು ಮುದ್ದಾದ ಮಗುವಿನ ಚಿತ್ರದೊಂದಿಗೆ ಇಲ್ಲಿ ಹಾಕಿದ್ದೇನೆ. ಇನ್ನಷ್ಟು ತಿರಸ್ಕೃತ ಲೇಖನಗಳು ಒಂದರ ಹಿಂದೊಂದರಂತೆ ಬರಲಿವೆ! (ಭಯೋತ್ಪಾದನೆ ಎಂದುಕೊಳ್ಳಬೇಡಿ!!)